ವಿಭಾಗಗಳು
ಕವನಗಳು

ನಾರಿಮನ್ ಪಾಯಿಂಟ

point.jpg
ನಾರಿಮನ್ ಪಾಯಿಂಟಿನ ಮಗ್ಗುಲಲ್ಲಿರುವ ಅರಬ್ಬೀ ಸಮುದ್ರ
ನಿಮಿಷಕೊಮ್ಮೆ ಆವರ್ತಿಸುವ ಅಲೆಗಳು ರಮಣೀಯ
ಅರೆ ನಿಮಿಷ ಬರಲು ಅರೆ ನಿಮಿಷ ಹೋಗಲು
ಚಣಕಾಲವೂ ವಿಶ್ರಮಸಲೇ ಬಾರದೇ ಈ ನಿಸರ್ಗ
ನಿರೀಕ್ಷಿಸುತಿರುವೆ ಎಂದಾದರೂ ಸುಸ್ತಾಗಿ ನಿಲ್ಲುವುದೇ

ಇತ್ತ ಚರ್ಚ್‍ಗೇಟಿನ ರೈಲ್ವೇ ಸ್ಟೇಷನ್ನಿನಾಚೆ
ಕೆಂಪು, ಕಪ್ಪು, ಬಿಳಿ, ತಲೆಗಳ ಸಮೂಹ
ಅರ್ಧ ನಿಮಷಕ್ಕೊಮ್ಮೆ ಬರುವ ಮಂದಿಯ ದಂಡು
ಅವ್ಯಾಹತವಾಗಿ ಒಳನುಗ್ಗುತ್ತಿರುವ ಜನರ ಸಾಲು ಸಾಲು
ಒಂದು ಚಣವೂ ಈ ಸ್ಟೇಷನ್ನಿನ ನೆಲಕೆ ವಿಶ್ರಾಮವಿಲ್ಲವೇ?

ಮದುವೆ ಮನೆಯಲಿ ನೋಡುವ ಈ ಜನಸಾಗರ
ವರಪೂಜೆಯಲಿ ಮೊದಲಾಗಿ ಜಂಗುಳಿ ಉಳಿಯುವುದೊಂದೇ ದಿನ
ಆರತಕ್ಷತೆಯಾಗಲು ಇನ್ನೆಲ್ಲಿ ಉಳಿದಾರು ಆ ಮಂದಿ
ಅವರಿಗಾಗಿ ಹುಡುಕಬೇಕಾದೀತು ಸಂದಿಗೊಂದಿ
ಕೆಲಸ ಮುಗಿಯಲು ಎಲ್ಲರಿಗೂ ಬೇಕು ಸುದೀರ್ಘ ವಿಶ್ರಾಂತಿ

ಎಂಟು ತಾಸುಗಳ ದಣಿವಿಗೆ ಪುನಶ್ಚೇತನಗೊಳಲು
ಮಂದಿಗೆ ಮಾತ್ರ ವಿಶ್ರಾಮದ ಅಗತ್ಯವಿರಲು
ಕೋಟ್ಯಂತರರಿಗೆ ದಾರಿಯಾಗಿರುವ ನಿಸರ್ಗ
ಎಡಬಿಡದೆ ಸೇವಿಸುತಿಹ ಇದಕೆ ವಿಶ್ರಾಮ ಅನಗತ್ಯ

ಸಾಬೀತಾಯಿತೇ ನಿಸರ್ಗ ಅದಮ್ಯ ನಿತ್ಯ ಚೇತನ
ಮಾನವ ಚಣ ಕಾಲ ನೀರಿನಿಂದ ಉರಿವ ದೀಪ
ತಲೆಬಗ್ಗಿ ಶರಣಾಗಬೇಕು ಈ ನಿಸರ್ಗ ದೈವಕೆ
ತಿಳಿಯಬೇಕು ನಾನು ಹುಲು ಮಾನವ ಅನಿತ್ಯ
ಇದು ಮಾತ್ರ ಸರ್ವ ಕಾಲಕೂ ಸತ್ಯ