ವಿಭಾಗಗಳು
ಕವನಗಳು

ಹೇಳಿ ಮಾಡಿಸಿದ ಜೋಡಿ

whitecanecouple1.JPG

ಆ ಜೋಡಿ ಕಿಟಕಿಯ ಪಕ್ಕದ ಸೀಟಿನಲಿ ಬಿದ್ದು ಬಿದ್ದು ನಗುತಿಹರು
ಒಬ್ಬರ ಕೈಯನ್ನೊಬ್ಬರು ಬಿಡಲಾರದಂತೆ ಹಿಡಿದಿಹರು
ಮುದುಕ ತರುಣ ಕೂಸು ಎಲ್ಲರ ಕಣ್ಣೂ ಅವರ ಮೇಲೇ
ನಾನೂ ಕುತೂಹಲದಿ ನೋಡಿದೆ ಏನಿವರ ಲೀಲೆ

ಬೆನ್ನ ಮೇಲೆ ಹರಡಿಹ ನೀಳ ಗಾಢ ಕಪ್ಪು ಕೇಶ
ನೋಡುಗರೆಲ್ಲರನೂ ಹಿಡಿದಿಡುವಂತಹ ಪಾಶ
ಮಲ್ಲಿಗೆಯ ಚಿಗುರೆಲೆಯಂತಹ ಮೋಹಕ ಮುಂಗುರುಳು
ಅಗಲವಾದ ಹಣೆಯ ಮೇಲೆ ಮುತ್ತಿಕ್ಕುತಿರಲು

ನಾಸಿಕವಂತೂ ಕೆಂಪನೆಯ ಗೇರು ಹಣ್ಣು
ನೋಡಿದರೆ ಮತ್ತೆ ನೋಡಬಯಸುವ ಅವಳನ್ನು
ಒಪ್ಪವಾಗಿ ಉಟ್ಟಿಹಳು ನೀಳ ನೆರಿಗೆಯ ಸೀರೆ
ದೃಷ್ಟಿ ತಟ್ಟದಂತೆ ಸುಲೋಚನ ಏರಿಸಿಹ ನೀರೆ

ಅವನಾದರೋ ಮನ್ಮಥನಪರಾವತಾರ
ದಷ್ಟ ಪುಷ್ಟ ಬಾಹುಗಳ ಎತ್ತರದ ವೀರ
ತಲೆಯ ತುಂಬಾ ದಟ್ಟನೆಯ ಕಪ್ಪು ಕುರುಳು
ಘಮ್ಮೆನುವ ಸುಗಂಧ ಸೂಸುತಿಹುದು ಹತ್ತಿರ ಬರಲು

ಅವಳಿಗೆ ಹೇಳಿ ಮಾಡಿಸಿದಂತಹ ಅವನ ಜೋಡಿ
ಎಲ್ಲ ತರುಣಿಯರಿಗೂ ಮಾಡುವನೇನೋ ಮೋಡಿ
ಆದರೂ ಅವನಾರನ್ನೂ ನೋಡದೇ ದಿಟ್ಟಿಸುತಿಹ ದಿಗಂತ
ಕಣ್ಣಿಗೆ ಏರಿಸಿಹ ಕಪ್ಪು ಸುಲೋಚನವ ಈ ಮನ್ಮಥ

ಇವರ ನೋಡುತಿಹ ಎಲ್ಲರ ಮನದಲೂ ಹತ್ತಿಹುದು ಕಿಚ್ಚು
ನಿಲ್ದಾಣ ಬಂದೊಡೆ ಅವರುಗಳಿಳಿದಾಗ ಆದರಿವರು ಪೆಚ್ಚು
ಒಬ್ಬರ ಕೈಯನ್ನೊಬ್ಬರು ಬಿಡಲಾರದಂತೆ ಹಿಡಿದಿರಲು
ಅವರಿಬ್ಬರ ಕೈಯಲ್ಲೂ ಇತ್ತು ಬಿಳಿ ಕೋಲು