ವಿಭಾಗಗಳು
ಕವನಗಳು

ಗೂಬೆ

ಗೂಬೆ

northern_spotted_owlusfws-thumb.jpg

ಯಾವುದೇ ನಾಡಿನಲಿ ನೋಡಲೂ ನಾನು ನಾನೇಯೇ
ವರ್ಣ, ಜಾತಿ ಮತ ಭೇದಗಳು ನಮ್ಮಲ್ಲಿಲ್ಲ
ಕಾಣುವಿರಿ ಕೆಕ್ಕರುಗಣ್ಣು ಮೊಂಡು ಮೂತಿ
ಚೂಪಿನ ಕೊಕ್ಕು ಭದ್ರವಾದ ಪಂಜ
ಎಲ್ಲವನ್ನೂ ಹಿಡಿಯಬಲ್ಲೆ ಎಲ್ಲರನ್ನೂ ಹೆದರಿಸಬಲ್ಲೆ
ಗಿಡುಗನಂತೆ ನಾ ಬೇಟೆಯಾಡಬಲ್ಲೆ
ನಿಮ್ಮೊಡನಾಟ ಮಾತ್ರ ಒಲ್ಲೆ

ಎನಗಿರುವುದು ಕುಶಾಗ್ರಮತಿ ನಯನದ್ವಯ
ಎಂದಿಗೂ ಎನಗಿಲ್ಲ ಯಾರದೂ ಭಯ
ನಾ ಎನ್ನ ಮಿತ್ರರ ಕರೆಯುವುದುಂಟಂತೆ
ಇವರಿಗೆ ಅದು ಕೆಡುಕಾಗುವುದಂತೆ

ಮಾನವರ ಬದುಕಿನ ಒಳಿತಿಗಾಗಿ ಹಿಡಿಯುವೆ
ಇಲಿ, ಹಾವು, ಹುಳು ಹುಪ್ಪಟೆಗಳು
ಇವನೇನು ನೀಡುವ ಬಳುವಳಿಗಳು
ಅವರಲಿ ಎನಗೆ ಸಮಾನ ಕೆಡುಕರುಗಳು

ರಾಷ್ಟ್ರ ರಕ್ಷಕರಿಗೆ ನಾನಲ್ಲವೇ ಲಾಂಛನ
ಆದರೂ ನಾನಂತೆ ಅನಿಷ್ಟ ಸೂಚಕ
ನೋಡಿ ನನ್ನಲಿ ಎಲ್ಲಿಲ್ಲದ ಠೀವಿ
ಗಾಂಭೀರ್ಯತೆಯೇ ನನ್ನ ಉಸಿರು

ಮೂದಲಿಕೆ ಮಾತಿಗೆ ನಾನೇ ಸರಕೇ?
ಇನ್ನೆಷ್ಟು ಒಳಿತು ಇವಗೆ ಮಾಡಬೇಕೇ?
ಎನಗಿನ್ನು ಬೇಡ ಈ ಕೆಟ್ಟ ಹೆಸರು
ಬದಲಿಸುವಿರಾ ನೀವೇ ನನ್ನ ದೇವರು