ವಿಭಾಗಗಳು
ಕವನಗಳು

ನೆಟ್ ನೆಂಟಸ್ತಿಕೆ

net1.GIF

ಒಬ್ಬರಿಗೊಬ್ಬರು ಚಾಚುವವರು ಹಸ್ತ ಸ್ನೇಹಕೆ
ಅನುಭವ ವೇದ್ಯವಿದು ಇ-ನೆಂಟಸ್ಥಿಕೆ
ಮೊದ ಮೊದಲು ದೊಡ್ಡಸ್ತಿಕೆಯ ತೋರಿಕೆ
ಹಿಂದೆಯೇ ಕರಗಿ ಹರಿಯುವುದು ಹೃದಯವಂತಿಕೆ

ಕೇಳಿ ತಿಳಿಯದ ನೋಡಿ ಅರಿಯದ
ಯಾರದೋ ವಿಷಯಕೆ ಮೂಗು ತೂರಿಸಿ
ಮನ ಮುದುಡಿ ಮೂಲೆ ಸೇರಿದವರೂ ಉಂಟು
ಜೀವನದ ಅರಿವನು ಮೂಡಿಸುವವರೂ ಇಲ್ಲುಂಟು

ಸುಲಭದಿ ಖರ್ಚಿಲ್ಲದ ಲಿಂಗ ಬದಲಾವಣೆ
ಹೆಸರ ನೋಡಿ ಮನದಲಿ ಏನೇನೋ ಕಲ್ಪನೆ
ನೈಜವರಿಯಲು ಮನದಲಿ ಬೇಗೆ, ನಾಲಗೆಯಲಿ ಬೈಗುಳ
ಏನೂ ಮಾಡಲಾಗದಾಗ ಸುರಿವುದು ಕಣ್ಣಿನಲಿ ಬಳಬಳ
net2.jpg
ಇಲ್ಲಿದೆ ಸಂಗಾತಿಗಳನು ಸೃಷ್ಟಿಸುವ ಶಕ್ತತೆ
ಒಮ್ಮೊಮ್ಮೆ ಮನೆಯೊಡೆಯುವ ವಾತಾವರಣದ ಪ್ರಖರತೆ
ಬಹುತೇಕರಿಗೆ ಕಾಲಹರಣಕ್ಕೆ ಮೀಸಲು ಜಾಲ
ಪಡ್ಡೆಗಳೇ ಇಲ್ಲಿಯ ಅಸಲು ಬಂಡವಾಳ

ಜಾಲದಲ್ಲಿ ಹುಟ್ಟುವವರು ಅಗಣಿತ
ತನ್ನತನ ಅರಿವಾಗಲು ಮುಂದೆ ಅಪ್ರಕಟಿತ
ಬುದ್ಧಿವಾದದ ಮಾತುಗಳು ಕೆಲವರದು
ಸೋಟೆ ತಿರುಗಿಸುವ ಸರದಿ ಹಲವರದು

ಮರುಗುವರು ಇನ್ನೊಬ್ಬರ ದು:ಖಕೆ
ಆಗುವರು ಕಷ್ಟ ಸುಖಗಳಲಿ ಪಾಲು
ಜಾಲದಲಿ ಸಿಲುಕುವವರೆವಿಗೆ ಅಪರಿಚಿತ
ಕ್ಷಣ ಕ್ಷಣಗಳ ಸ್ಪಂದನದಿ ಚಿರಪರಿಚಿತ

ಕಂಡರಿಯ ಅನುಸಂಧಾನ ಮಾಡುವವರು
ಪಾತಾಳದಾಳದ ವಿಷಯಗಳ ಬೆನ್ನಟ್ಟುವವರು
ನೆಲೆ ಕಂಡ ಕೂಡಲೇ ಮಾಯವಾಗುವವರು
ಎಲ್ಲವನ್ನೂ ತೋರಿಸುವ ಕಾಣದೀ ಇ-ಪ್ರಪಂಚ

ಎದುರಾಗಲು ಮುಖ ಪರಿಚಯ
ಜಾಲದಲ್ಲಿ ಎದುರಾಗಲ ಮನಗಳ ಪರಿಚಯ
ಯಾವುದರಿಂದ ಒಬ್ಬರಿಗೊಬ್ಬರು
ಪರಿಚಿತರಾಗಿ ಹತ್ತಿರವಾಗುವರು?