ವಿಭಾಗಗಳು
ಲೇಖನಗಳು

ಸವಿ ನೆನಪುಗಳು ಬೇಕು …

ಸವಿ ನೆನಪುಗಳು ಬೇಕು

ಸವಿಯಲೀ ಬದುಕು

 

ಕವಿಯ ಈ ಮಾತುಗಳು ಎಲ್ಲರಿಗೂ ಹಿತವಾದುದು.

 

ಸಿಹಿ ಎಂದರೇನು? ಅದರ ಅನುಭವ ಆಗುವುದಾದರೂ ಹೇಗೆ?  ಸಿಹಿ ಎಲ್ಲರಿಗೂ ಒಂದೇ ತೆರನಾದ ರುಚಿಯನ್ನು ಇತ್ತೀತೇ?

ಆದರೆ ಕಹಿಯ ರುಚಿಯನ್ನು ಅರಿತ ನಂತರವೇ ಸಿಹಿಯ ರುಚಿಯನ್ನು ಅರಿತರೆ ಆಗ ಆಗುವ ಆನಂದವೇ ವಿಶೇಷ. 

 newyr_sunrise.jpg

ನಾನು ನೋಡಿದಂತೆ 1993ರಿಂದ ಈಚೆಗೆ ಮುಂಬಯಿಯಲ್ಲಿ ಪ್ರತಿ ವರ್ಷವೂ ಒಂದಲ್ಲ ಒಂದು ಅವಘಢಗಳು ಸಂಭವಿಸುತ್ತಲೇ ಇವೆ.   ೧೯೯೩ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಗೆಗಿನ ವಿಚಾರಣೆ 13-14 ವರ್ಷಗಳು ನಡೆದು, ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ.  ವಿಚಾರಣೆ ಹೇಗೇ ನಡೆದರೂ ಈ ಮಹಾನಗರಿಯಲ್ಲಿ, ಬಿದ್ದ ಪೆಟ್ಟಿನ ನೋವು ಬಹಳ ಬೇಗ ಮಾಸಿ ಹೋಗುವುದು ಒಂದು ವಿಶೇಷದ ಸಂಗತಿ.  ಕಳೆದ ವರ್ಷ ಒಂದು ದಿನದಲ್ಲಿ ಎಂದೂ ಕಂಡರಿಯದ, ಕೇಳರಿಯದ ಆದ ವಿಪರೀತ ಮಳೆ, ಅದರಿಂದಾಗಿ ಇಡೀ ಮಹಾನಗರಿಯೇ ತತ್ತರಿಸಿದ್ದು, ಅದರಿಂದಾದ ಅಸ್ತವ್ಯಸ್ತ ಜೀವನ,  ಮರಳಿ ಚಿಮ್ಮಿದ ಸಾಮಾನ್ಯಕರ ಜನಜೀವನವನ್ನು ಮತ್ತು ಅನತಿ ಕಾಲದಲ್ಲಿಯೇ ಅದನ್ನು ಮರೆತದ್ದು ಇನ್ನೊಂದು ವಿಶೇಷದ ಸಂಗತಿ.  ಇಂತಹ ಸ್ಥಿತಿಯನ್ನು ಎದುರಿಸಿ ಮುಂದಿನ ಒಂದು ವರ್ಷ ಏನೂ ಕೆಡುಕಾಗದಂತೆ ಇದ್ದರೆ ಸವಿಯನ್ನು ಮೆದ್ದಂತೆಯೇ ಅಲ್ವೇ?  ಅದೇ ನನ್ನ ಆಶಯ. 

 

ಇದೇ ರೀತಿಯಲ್ಲಿ, ಈ ವರ್ಷ ಅಂದರೆ, 2006ನೆಯ ಇಸವಿಯ ಜುಲಾಯಿ ಹನ್ನೊಂದರಂದು ಮುಂಬಯಿಯ ಲೋಕಲ್ ಟ್ರೈನುಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿಂದಾದ ಸಾವು ನೋವುಗಳನ್ನು ಅಷ್ಟು ಸುಲಭದಲ್ಲಿ ಮರೆಯಲಾದೀತೇ?  ಅದರಲ್ಲೂ ಆ ದೃಶ್ಯವನ್ನು ನನ್ನ ಕಣ್ಣುಗಳಿಂದಲೇ ನೋಡಿದ ಮೇಲೂ?  ವಿಶೇಷವೆಂದರೆ, ಆ ಗಾಯ ಮುಂಬಯಿಕರರ ಮನಸ್ಸುಗಳಿಂದ ಬಹುಬೇಗ ಮಾಗಿ ಮಾಯವಾಯಿತು.  ಇದಕ್ಕೆ ಕಾರಣ ನೊಂದವರಿಗೆ ಇತರರು ನೀಡಿದ ಸಾಂತ್ವನ ಮತ್ತು ಸಹಾಯ ಹಸ್ತ.    ಅದೂ ಅಲ್ಲದೇ ಈ ಘಾಸಿಯಿಂದ ನೊಂದವರಿಗೆ ಮತ್ತು ನೋಡುಗರಿಗೆ ಜೀವನವೆಂದರೇನು, ಜೀವನದಲ್ಲಿ ಸಹಬಾಳ್ವೆಯ ಮಹತ್ವವೇನು ಎಂಬುದರ ಅರಿಯುವಂತಾಯಿತು.  ಈಗೀಗ ಪ್ರತಿ ವರ್ಷವೂ ಒಂದಲ್ಲ ಒಂದು ಕಾರಣಗಳಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದೆ.  ಆದರೂ ಹಿಂದೆಯೇ ಮಾನವೀಯತೆಯ ಮೆರೆತದಿಂದ ಎಲ್ಲವನ್ನೂ ಮರೆಯುವಂತಾಗುತ್ತಿದೆ.  ಈ ಘಟನೆಯಾದ ಸ್ವಲ್ಪ ದಿನಗಳಲ್ಲಿಯೇ, ಈ ವರ್ಷವೂ ಕಳೆದ ವರ್ಷದಂತೆ ಮಳೆಯ ಆರ್ಭಟದಿಂದ ಒಂದು ದಿನ ಲೋಕಲ್ ಟ್ರೈನ್‌ಗಳು ಸಾಮಾನ್ಯದ ಸಂಚಾರ ಮಾಡಲಾಗದೇ ಜನಜೀವನ ಅಸ್ತವ್ಯಸ್ತವಾಗಿದ್ದಿತು.  ನಂತರ ಎಲ್ಲವೂ ಸಹತ ಸ್ಥಿತಿಗೆ ಬಂದಿತು.  ಇಂತಹ ಕಹಿಯ ರುಚಿಯನ್ನು ಉಂಡು ಬಹು ಬೇಗ ಮರೆಯುವುದು ಸಿಹಿಯನ್ನು ಮೆದ್ದಂತೆಯೇ ಅಲ್ಲವೇ?

 

2007ರಲ್ಲಿ ಇಂತಹ ಯಾವುದೂ ಅಹಿತಕರ ಘಟನೆಗಳು ನಡೆಯಲಿರಲೆಂದು ಆಶಿಸುವೆ.  ಹಾಗೆ ನಡೆದರೂ ಅದನ್ನು ಸಂಭಾಳಿಸುವ ಶಕ್ತಿಯನ್ನು ಆ ಸರ್ವಶಕ್ತನು ಕರುಣಿಸಲಿ, ಎಂದು ಬೇಡುವೆ.  ಹಾಗೆ ನಡೆಯದಿದ್ದಲ್ಲಿ, ಜನಜೀವನ ಇನ್ನೂ ಉತ್ತಮಕರವಾಗಿರುವುದರಲ್ಲಿ ಸಂಶಯವೇ ಇಲ್ಲ.  ಹೊಡೆದಾಟ, ದಳ್ಳುರಿ, ವೈಮನಸ್ಯ, ಜಾತಿ, ಮತ, ಧರ್ಮ, ವರ್ಣ ದ್ವೇಷಗಳಿಲ್ಲದ ಮತ್ತು ಕೋಮು ಸೌಹಾರ್ದಯುತ ಮಿಳಿತ ಜೀವನವನ್ನು ನಿರೀಕ್ಷಿಸುವೆ.  ಇಷ್ಟಲ್ಲದೇ ಜಗತ್ತಿನಲ್ಲಿರುವ ಎಲ್ಲ ಮಕ್ಕಳಿಗೂ (ಹೆಚ್ಚಿನದಾಗಿ ಹಿಂದುಳಿದ ದೇಶಗಳು),  ಮೂಲಭೂತ ಕಲಿಕೆ ದೊರೆಯುವ ಅವಕಾಶ ಸಿಗಲಿ.  ಇದರಿಂದಾಗಿ, ಎಲ್ಲರೂ ವಿದ್ಯಾವಂತರಾಗಿ, ಜಗತ್ತಿನ ಆಗು ಹೋಗುಗಳನ್ನು ತಿಳಿಯಬಲ್ಲರು.  ಜೀವನದಲ್ಲಿ ಎಲ್ಲಿ ಎಡವುತ್ತಿರುವೆವೆಂಬ ಅರಿವಾಗಿ  ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬಹುದು.  ವಿದ್ಯಾವಂತರಾಗಿ ಉತ್ತಮ ಉದ್ಯೋಗಿಗಳಾಗುವರು. ನಿರುದ್ಯೋಗ ಸಮಸ್ಯೆ ನಿರ್ಮೂಲನವಾಗುವುದರಿಂದ ಬಡತನ ನಿರ್ಮೂಲನವಾಗುವುದು.  ಬಾಳ್ವೆಯ ಮಟ್ಟ ಹಿರಿದಾಗುವುದು.  ಹೆಣ್ಣುಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗುವಂತಾದರೆ, ನಿಯೋಜಿತ ಕುಟುಂಬಗಳ ಫಲದ ಅನುಭವವಾಗಿ ಸಮಾಜ ಉತ್ತಮ್ಮ ಸ್ಥಿತಿಗೇರುವುದು.  ಇದರಿಂದ ದೇಶಗಳ ಉನ್ನತಿಯಾಗುವುದರಲ್ಲಿ ಸಂಶಯವಿಲ್ಲ. ಆರ್ಥಿಕ ಸ್ವಾವಲಂಬನೆ ದೊರೆಯುವುದು. ಎಲ್ಲ ದೇಶಗಳೂ ಒಂದೇ ಮಟ್ಟದಲ್ಲಿ ಇರುವಂತಾದರೆ, ದೇಶೀಯ ಮಟ್ಟದಲ್ಲಿ ವೈಮನಸ್ಯ ಕಡಿಮೆಯಾಗುವುದು.  ಎಲ್ಲ ದೇಶಗಳೂ ಒಂದಾಗುವ ಸಾಧ್ಯತೆ ಇರುವುದು.   ಹಿರಿಯರು ಕಂಡ ವಿಶ್ವವೆಲ್ಲ ಒಂದೇ, ಎಲ್ಲರೂ ವಿಶ್ವಮಾನವರುಎಂಬ ಕನಸು ನನಸಾಗುವುದು. ಈ ದಿಸೆಯಲ್ಲಿ ಒಂದು ಹೆಜ್ಜೆಯನ್ನಾದರೂ ಮುಂದೆ ಹಾಕಲು 2007ನೆಯ ಇಸವಿ ನಾಂದಿಯಾಗಲಿ ಎಂದು ಆಶಿಸುವೆನು.  ಈ ಶುಭಸಂದರ್ಭದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಒಂದು ಸಣ್ಣ ಕವನವನ್ನು ನಿಮ್ಮ ಮುಂದೆ ಇರಿಸಬಯಸುವೆನು. 

 

ಕಾಲ ಉರುಳಿ ಉರುಳಿ ಸಾಗುತಿದೆ

ತಡೆಯಲ್ಯಾರಿಂದಲೂ ಆಗದೇ?

ಆಗದು, ಏನೇ ಮಾಡಬಲ್ಲ, ಏನನೂ ತಡೆಯಬಲ್ಲ

ಹುಲುಮಾನವನಿಂದಂತೂ ಅದಾಗದು!

 

ಜಗಮೊಂಡನಂತೆ ನಿಂತಿಹೆನು ನಾನಿಲ್ಲೇ

ನನ್ನಲಾಗುತಿಹ ಬದಲಾವಣೆಯೇ ಹೇಗೆ ತಡೆಯಬಲ್ಲೆ

ಈಗಿಹುದು, ಕ್ಷಣದಲ್ಲಿಲ್ಲ

ಕಣ್ಮುಚ್ಚಿ ತೆರೆಯಲು ಏನೇನೋ ಬಂದಿವೆಯಲ್ಲ!

 

ಐದರಂತಾಗಿರಲಿಲ್ಲ ಆರು

ಆರರಂತಾಗುವುದಿಲ್ಲ ಏಳು

ಎಲ್ಲ ವರುಷಗಳಲ್ಲೂ ಏಳು ಬೀಳು

ಬರುವ ವರುಷದಲಿ ಹಾಗಾಗದಿರಲೆಂದು ಕೇಳು

 

ಬಲ್ಲವರು ನುಡಿದುದು

ಬದಲಾವಣೆಯೇ ಜಗದ ನಿಯಮ

ಮೋಡದಿ ಕಾಲೂರಿ ನಡೆಯುವುದೂ

ಇನ್ನೊಂದು ಆಯಾಮ

 

ಹರಿದು ಹಂಚಿ ಹೋಗಿಹುದು ಈ ದಿರಿಸು

ತೇಪೆ ಹಚ್ಚಿ ಒಟ್ಟು ಮಾಡಿದರೆ ನೋಡಲು ಸೊಗಸು

ಏರಲಿ ಮೈ ಮೇಲೆ ಹೊಸ ವರುಷದ ಹೊಸ ಬಟ್ಟೆ

ಹಳೆಯ ನೆನಪು ಮಾಸದಿರುವಂತೆ ಮೂಲೆಯಲಿರಲಿ ಹಳೆ ಬಟ್ಟೆ

 

ಹೊಸ ವರುಷದಾಗಮನದಿ ಮನಗಳಲಿ ಹರುಷ

ಇದೇ ಎಲ್ಲರ ನಿರೀಕ್ಷೆ

ಕಳೆದುದ ಮತ್ತೆ ನಿರೀಕ್ಷಿಸುವುದು ಬೇಡ

ಹರುಷಕಾಗಿ ಎದುರಿಸಬಲ್ಲೆವು ಎಲ್ಲ ತೆರದ ಪರೀಕ್ಷೆ

 

ಎಲ್ಲರಿಗೂ ಒಳ್ಳೆಯದಾಗಲಿ.

 new-year.jpg

 

ವಿಭಾಗಗಳು
ಕವನಗಳು

ವಿಭಿನ್ನ ಚಿಂತನೆ

ಎಲ್ಲಿಂದಲೋ ಬಂದ ಈ ಚೇತನಕೆ ಆತ್ಮ ಎನಲೇ

ಎಲ್ಲಿಂದಲೋ ಹುಟ್ಟಿ ಬಂದ ಈ ದೇಹಕೆ ನಾನು ಎನಲೇ

 

ಜೀವನ ಎಂಬೋ ಈ ಬಸ್ಸಿನಲ್ಲಿ ಎಲ್ಲೋ ಹತ್ತಿದೆ ನಾನು

ಹಾಲುಣಿಸಿ ಪಾಲಿಸಿದವಳ ಅಮ್ಮನೆಂದೆ

ಅವಳು ತೋರಿದವನ ಅಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮನೆಂದೆ

ಅವಳು ಕಲಿಸಿದ ಮಾತನೇ ನಾ ನಂಬಿದೆ

 

ಈ ಬಸ್ಸಿನಲಿ ಎಲ್ಲೋ ಹತ್ತಿ ಎಲ್ಲೋ ಇಳಿವ ಸಹ ಪ್ರಯಾಣಿಕರಿಂದ

ಮಮತೆ ವಾತ್ಸಲ್ಯ ಪ್ರೇಮ ಪ್ರೀತಿ ಕರುಣೆ ಕ್ರೋಧ ಹಾಸ್ಯವ ಕಲಿತೆ

ಮಣ್ಣಿನ ವಾಸನೆತೆ ಮನದ ಕಾಮನೆಗಳಿಗೆ ದಾಸನಾದೆ

ಯಾವುದೋ ಹೆಣ್ಣಿನ ನಂಬಿದೆ, ಕೆಲ ಬಾರಿ ಮೋಸ ಹೋದೆ

 

ಸಹವರ್ತಿಗಳೊಡನೆ ನಕ್ಕೆ, ನಗಿಸಿದೆ, ಅತ್ತೆ, ಅಳಿಸಿದೆ

ಅವರನೇ ನಂಬಿ ಗೋಂದಿನಂತೆ ಅಂಟಿದೆ

ಅವರ ಸ್ಥಾನಕದಿ ಅವರಿಳಿಯೇ ಗೋಳಾಡಿ ಹೊರಳಾಡಿದೆ

ಆಸ್ತಿಕ ನಾಸ್ತಿಕನಂತೆ ನಾಟಕವಾಡಿ ದಿಕ್ಕಾಪಾಲಾಗಿ ಓಡಿದೆ

 

ಸಹವರ್ತಿ ತೋರಿದ ಕೂಸುಗಳ ಮಕ್ಕಳೆಂದೆ

ಅವರನೇ ನಂಬಿ ಆಶಾಗೋಪುರ ಕಟ್ಟಿದೆ

ಅವರು ಕೈ ಚೆಲ್ಲಿದಾಗ ಹುಚ್ಚನಾದೆ, ಎಲ್ಲರ ಶಪಿಸಿದೆ

ಕೊನೆಗೊಂದು ದಿನ ಬಂದಲ್ಲಿಗೇ ಇಳಿದು ಹೋದೆ

ವಿಭಾಗಗಳು
ಕವನಗಳು

ಪಾಪು ಹು.ಹ.ಕ್ಕೊಂದು ಉಡುಗೊರೆ

vinaysb.JPG

ಇವನೊಬ್ಬ ಪಡಪೋಶಿ ಗುಂಡ

ಮನೆಯವರ ಆಡಿಸುವ ಪುಂಡ

ಕೆಲವೊಮ್ಮೆ ಇವನ ತುಂಟಾಟದಿ ನಾ ತೆರಬೇಕು ದಂಡ

ಆದರೂ ಕೂಳಿಗೇ, ಮನೆಗೆ ಅಲ್ಲ ದಂಡ

 

ಅಮ್ಮನಿಗೆ ಮುದ್ದಿನ ಕಣ್ಮಣಿ

ಅಕ್ಕನಿಗೆ ಆಟಕೆ ಇರುವ ಮೊದ್ದುಮಣಿ

ಗಂಡಸಾಗಿ ನನಗೆ ಸಡ್ಡು ಹೊಡೆಯುವಲು ಹವಣಿಸುವ

ಪತ್ನಿ ಹೇಳುವಳು ನೀವು ಸುಮ್ನಿರಿಅದಿನ್ನೂ ಮಗು

 

ಕೈ ಮಾಡಲು ಹಾಕುವ ಕರಾಟೆ ಪಟ್ಟು

ವಿಸ್ಮಯ ಮೂಡಿಸುವ ಇವನೇನಾ ನನ್ನ ಪುಟ್ಟು

ನೀರಿಗಿಳಿಯಲು ಮೇಲೇರಲು ಬಾರದವ ನಾನು

ಮೀನಿನಂತೆ ಈಸಿ ಎನ್ನ ಛೇಡಿಸುವ ಇವನು

rose8.jpg

ತುಂಟಾಟದಲಿ ಇವನದೇ ಎತ್ತಿದ ಕೈ

ಇವನ ಹೊಡೆತಕೆ ತುರಿಸಿಕೊಳ್ಳಬೇಕು ನಾ ಮೈ

ಓದು ಬರಹದಲಿ ಅಮ್ಮನಿಗೆ ಹೆದರುವ

ಆಗಲಾದರೂ ನನ್ನಿಂದ ದೂರವಿರುವ

 

ಆದರಿನ್ನೂ ಇವ ಸಣ್ಣ ಮಗು

ಮಲಗಿರಲು ಇವನದಿಲ್ಲ ಕೂಗು

ಕಾಣುವನಾಗ ದೇವನಪರಾವತಾರ

ನನಗೂ ಮುದ್ದಾಗಿಹ ಈ ಕುವರ

 

ಇವನಿಗಿಂದು ಹುಟ್ಟಿದ ದಿನ

ಇವನ ಒಳಿತಿಗಾಗಿ ಹಾರೈಸೋಣ

ಸರ್ವಶಕ್ತನಲಿ ನಾ ಸಲ್ಲಿಸುವೆ ವಿಶೇಷ ಪ್ರಾರ್ಥನೆ

ಸಮಾಜದಲಿ ಇವನಿಗೆ ಸಿಗಲಿ ಮನ್ನಣೆ

 

ವಿಭಾಗಗಳು
ಕಥೆಗಳು

ಗ್ರಹಚಾರ

ಬಹಳ ಹಿಂದೆ ಬರೆದಿದ್ದ ಕಥೆಯೊಂದಿದು. ಇಲ್ಲಿ ಇರಿಸುತ್ತಿರುವೆ.

 

ರಮಾಕಾಂತ ಬಿ.ಎಸ್.ಸಿ ಮುಗಿಸಿದ ನಂತರ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಪ್ರಯತ್ನಿಸುತ್ತಿದ್ದ. ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಆಗ ಅವನ ಸೋದರಮಾವ ವಿಶ್ವನಾಥ ಅವನಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರುವ ಬದಲು ಎಲ್.ಎಲ್.ಬಿ.ಯನ್ನಾದರೂ ಮಾಡು ಎಂದು ಹೇಳಿದರು. ರಮಾಕಾಂತ ಹಾಗೇ ಮಾಡಿದ. ಆದರೆ ಈ ಮಧ್ಯೆ ಅವನಿಗೆಲ್ಲೂ ಕೆಲಸ ಸಿಗಲಿಲ್ಲ. ವಿಶ್ವನಾಥರೇ ತಮ್ಮ ಸ್ನೇಹಿತ ಮಾರ್ಕಂಡೇಯ ಎಂಬ ಒಬ್ಬ ಪ್ರಸಿದ್ಧ ಲಾಯರಿನ ಹತ್ತಿರ ಅಸಿಸ್ಟೆಂಟ್ ಆಗಿ ಕೆಲಸ ಮಾಡಲು ಸೇರಿಸಿದರು. ಅದಕ್ಕೆ ಪ್ರತಿಯಾಗಿ ತನ್ನ ಮಗಳು ಮನೋರಮೆಯನ್ನು ಮದುವೆಯಾಗಲು ಕೇಳಿಕೊಂಡರು. ಈ ಪ್ರಸ್ತಾಪಕ್ಕೆ ರಮಾಕಾಂತ ಇಲ್ಲ ಎನ್ನಲಾಗಲಿಲ್ಲ.

ಮನೋರಮೆಯ ಬಗ್ಗೆ ಒಂದೆರಡು ಮಾತುಗಳು ಹೇಳುವುದು ಸೂಕ್ತ. ಮನೋರಮೆ ನೋಡಲು ಅಂದವಾಗಿಲ್ಲದಿದ್ದರೂ ಕಣ್ಣು ಮೂಗು ಎಲ್ಲಿರಬೇಕೋ ಅಲ್ಲಲ್ಲಿಯೇ ಇದ್ದವು. ಹಾಗೂ ತಮ್ಮ ಪಾಡಿಗೆ ಸರಿಯಾಗಿ ಕೆಲಸ ಮಾಡಿಕೊಂಡಿದ್ದವು. ಓದು ಮುಗಿದ ಕೂಡಲೇ ರಿಸರ್ವ್ ಬ್ಯಾಂಕಿನಲ್ಲಿ ಗುಮಾಸ್ತೆಯ ಹುದ್ದೆ ದೊರಕಿತ್ತು. ಕೈನಲ್ಲಿ ಕೆಲಸ ಮತ್ತು ಹದಕ್ಕೆ ಬಂದಿದ್ದ ಹೆಣ್ಣಾಗಿದ್ದರಿಂದಲೇನೋ ಅವಳನ್ನು ಮದುವೆಯಾಗಲು ಗಂಡುಗಳ ದಂಡೇ ಕಾಯುತ್ತಿತ್ತು. ಆದರೂ ಯಾರೆಂದರೆ ಅವರಿಗೆ ಕೊಟ್ಟು ಮದುವೆ ಮಾಡಲು ವಿಶ್ವನಾಥರು ತಯಾರಿರಲಿಲ್ಲ. ಈಗ ಎದುರಿಗೇ ಅಕ್ಕನ ಮಗ ಇದ್ದಾನೆ. ಹೇಗಿದ್ದರೂ ತಾನು ಹೇಳಿದ ಹಾಗೇ ಕೇಳಿಕೊಂಡಿದ್ದಾನೆ. ತನಗೆ ಗಂಡು ಮಕ್ಕಳೂ ಇಲ್ಲ. ಮನೆ ಅಳಿಯ ಆಗಿರೋಕ್ಕೆ ಎಲ್ಲ ರೀತಿಯಲ್ಲೂ ಸರಿಯಾಗಿದ್ದಾನೆ. ಅದೂ ಅಲ್ಲದೇ ಸತ್ತು ಸ್ವರ್ಗ ಸೇರಿದ ಅಕ್ಕನ ಆತ್ಮಕ್ಕೆ ಶಾಂತಿ ದೊರೆತಂತೆಯೂ ಆಗುವುದು ಎಂದು ಯೋಚಿಸಿ ಮನೋರಮೆಯನ್ನು ರಮಾಕಾಂತನಿಗೇ ಕೊಟ್ಟು ಮದುವೆ ಮಾಡಲು ನಿರ್ಧರಿಸಿದರು.

ಸರಿ ಒಂದೇ ತಿಂಗಳಲ್ಲಿ ರಮಾಕಾಂತ ಮತ್ತು ಮನೋರಮೆಯರ ಮದುವೆ ಆಗಿಯೇ ಹೋಯ್ತು. ಹಾಂ! ಇಲ್ಲಿ ಮನೋರಮೆಯ ಇಷ್ಟ ಅನಿಷ್ಟಗಳ ಬಗ್ಗೆ ವಿಶ್ವನಾಥರು ಯೋಚಿಸಲೂ ಇಲ್ಲ, ಅವಳನ್ನು ಕೇಳಲೂ ಇಲ್ಲ. ಪಾಪ ಅಪ್ಪನ ಮಾತು ಮೀರದಂತಹ ಮಗಳು, ಅಪ್ಪ ಮಾಡಿದ್ದೆಲ್ಲಾ ಸರಿಯೇ ಎಂದು ತಿಳಿದಿದ್ದಳು. ವಿಶ್ವನಾಥರು ನಿರ್ಧರಿಸಿದಂತೆಯೇ ಸರಳವಾಗಿ ಮನೆಯೊಳಗೇ ಮದುವೆ ನಡೆದು ಹೋಗಿತ್ತು.

ಮದುವೆಯಾದ ಮರುದಿನದಿಂದಲೇ ರಮಾಕಾಂತನಿಗೆ ಕೀಳರಿಮೆ ಉಂಟಾಗತೊಡಗಿತ್ತು. ತನಗೆ ಸರಿಯಾದ ಕೆಲಸವಿಲ್ಲ ಹಾಗೂ ತಿಂಗಳು ತಿಂಗಳಿಗೆ ನಿಖರವಾದ ವರಮಾನವಿಲ್ಲ. ಆದರೆ ತನ್ನ ಹೆಂಡತಿಗೆ ತಿಂಗಳ ಕೊನೆಗೆ ಸರಿಯಾಗಿ ಕೈ ತುಂಬಾ ಸಂಬಳ ಬರ್ತಿರೋದೇ ಇದಕ್ಕೆ ಕಾರಣ. ಮನೋರಮೆಗೆ ಇದರ ಬಗ್ಗೆ ಯೋಚನೆಯೇ ಬಂದಿರಲಿಲ್ಲ. ಅವಳ ಸ್ವಭಾವದಲ್ಲಿ ಹಣಕ್ಕೆ ಪ್ರಾಮುಖ್ಯತೆಯೇ ಇರಲಿಲ್ಲ. ಜೀವನದಲ್ಲಿ ಎಂದೂ ಸಂತೋಷದಿಂದಿರಬೇಕೆಂಬುದೊಂದೇ ಹಂಬಲ.

ರಮಾಕಾಂತನಿಗೆ ಲಾಯರಗಿರಿಯಲ್ಲಿ ಅವನ ಸೀನಿಯರ್ ಎಷ್ಟು ಕೊಟ್ಟರೆ ಅಷ್ಟು ಅಷ್ಟೇ. ಅದಕ್ಕೇನು ಇತಿ ಮಿತಿಯೇ ಇಲ್ಲ. ಒಮ್ಮೆಮ್ಮೆ ದಿನಕ್ಕೆ ೫೦ ಕೆಲವೊಮ್ಮೆ ೫೦೦. ಸೀನಿಯರ್ ಅವರಿಗೆ ಎಷ್ಟು ವರಮಾನ ಬರುತ್ತಿತ್ತೋ ಅದರಲ್ಲಿ ಕೆಲವಂಶ ಮಾತ್ರ ಇವನಿಗೆ ಕೊಡುತ್ತಿದ್ದರು. ಲೀವ್ ಅಪ್ಲಿಕೇಶನ್ ನಲ್ಲಿ ಬರುತ್ತಿದ್ದ ೫-೧೦ ರೂಪಾಯಿಗಳಲ್ಲೂ ಅವರಿಗೆ ಹೆಚ್ಚಿನ ಪಾಲು ಸಂದಾಯವಾಗಬೇಕಿತ್ತು. ತನಗೆ ಸ್ವಂತ ಪ್ರಾಕ್ಟೀಸ್ ಮಾಡಲು ಧೈರ್ಯ ಕೂಡಾ ಇಲ್ಲ.

ಹೆಂಡತಿಯೊಡನೆ ಪಿಕ್ಚರ್ ನೋಡಲು ಹೋದಾಗ ಅವಳು ಬಾಲ್ಕನಿಗೆ ಹೋಗೋಣವೆಂದರೆ, ಇವನು ಜೇಬು ತಡಕಾಡಿ, ‘ಬೇಡ ಮಿಡಲ್ ಕ್ಲಾಸಿಗೇ ಹೋಗೋಣ, ಬಾಲ್ಕನಿಯಲ್ಲಿ ತಿಗಣೆ ಕಾಟಅಂತ ಏನೋ ಸಬೂಬು ಹೇಳಿಬಿಡುತ್ತಿದ್ದ. ಮನೋರಮೆಗೆ ಇವನ ಪರಿಸ್ಥಿತಿಯ ಅರಿವಾಗಿತ್ತು. ಅವಳೇ ಅವನ ಕೈಗೆ ಹಣವನ್ನಿತ್ತು ಬಾಲ್ಕನಿಗೆ ತಿಕೀಟು ತೆಗೆಸುತ್ತಿದ್ದಳು. ರಮಾಕಾಂತ ಮನೆ ಅಳಿಯನಾಗಿದ್ದರಿಂದಲೇನೋ ಅವನಿಗೆ ಹಣದಡಚಣೆಯ ಬಿಸಿ ಅಷ್ಟಾಗಿ ತಟ್ಟಿರಲಿಲ್ಲ.

ಮುಂದೊಂದು ದಿನ ಸಕ್ಕರೆ ಕಾಯಿಲೆ ಉಲ್ಬಣವಾಗಿ ವಿಶ್ವನಾಥರು ಹಾಸಿಗೆ ಹಿಡಿದವರು ಮತ್ತೆ ಮೇಲೇಳಲೇ ಇಲ್ಲ. ಅಷ್ಟು ದೊಡ್ಡ ಮನೆಗೆ ರಮಾಕಾಂತನೊಬ್ಬನೇ ಗಂಡಸು. ಅವನಿಗೆ ಇದು ಹೆಮ್ಮೆಯ ವಿಷಯವಾಗಿತ್ತು.

ಈಗೀಗ ಹೆಂಡತಿಯೊಡನೆ ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಜಗಳ ತೆಗೆಯುತ್ತಿದ್ದನು. ಹೆಂಡತಿ ಬ್ಯಾಂಕಿಗೆ ಹೋಗುವಾಗ ಅವಳಿಗರಿವಿಲ್ಲದಂತೆ ಹಿಂಬಾಲಿಸಿ, ಅವಳು ಬಸ್ಸಿಗಾಗಿ ಕ್ಯೂನಲ್ಲಿ ಗಂಡಸರ ಹಿಂದೆ ನಿಂತರೂ ಅದರ ಬಗ್ಗೆ ಅಂದು ಸಂಜೆ ಮನೆಯಲ್ಲಿ ದೊಡ್ಡ ಜಗಳವೇ ಆಗುತ್ತಿತ್ತು. ಒಮ್ಮೊಮ್ಮೆ ಈ ಜಗಳ ತಾರಕಕ್ಕೇರಿದಾಗ ರಮಾಕಾಂತ ಮನೋರಮೆಯನ್ನು ಹೊಡೆದದ್ದೂ ಉಂಟು. ಮದುವೆಯಾದಂದಿನಿಂದ ಮನೋರಮೆಗೆ ಮನೆಯಲ್ಲಿ ಮನಶ್ಶಾಂತಿಯೇ ಸಿಗುತ್ತಿರಲಿಲ್ಲ. ಬ್ಯಾಂಕಿನಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ಸಿಗುತ್ತಿದ್ದುದರಿಂದ, ಅವಳು ಯಾವ ಕಾರಣಕ್ಕೂ ಬ್ಯಾಂಕಿಗೆ ಮಾತ್ರ ರಜೆ ಹಾಕುತ್ತಿರಲಿಲ್ಲ. ಅಲ್ಲಿ ಅವಳ ಸ್ನೇಹಿತೆಯರೊಡನೆ ತನ್ನ ಕಷ್ಟ ಸುಖಗಳನ್ನು ಹೇಳಿಕೊಂಡರೆ ಎಲ್ಲಿಲ್ಲದ ಸಮಾಧಾನ ಸಿಗುತ್ತಿತ್ತು. ಈಗ ವರ್ಗವಾಗಿ ಬಂದಿದ್ದ ಅವಳ ಬಾಸ್ ತೇಲಂಗ್ ಇವಳಿಗೆ ಎಲ್ಲ ರೀತಿಯ ಉತ್ತೇಜನ ನೀಡುತ್ತಿದ್ದ. ಪ್ರಮೋಶನ್ ಪರೀಕ್ಷೆ ಬರೆಯಲೂ ತಿಳಿಸಿದ್ದ.

ಈಗೀಗ ರಮಾಕಾಂತ ಲಾಯರಿ ಕೆಲಸದ ಜೊತೆ ಗೂಢಚಾರಿ ಕೆಲಸವನ್ನೂ ಮಾಡುತ್ತಿದ್ದ. ಅದ್ಯಾಕೆ ಅವನಿಗೆ ತನ್ನ ಹೆಂಡತಿಯ ಬಗ್ಗೆ ಹೀಗೆ ಅನುಮಾನ ಬಂದಿತ್ತೋ? ಹೀಗೇ ಸ್ವಲ್ಪ ದಿನ ಕಳೆಯಲು ಮನೋರಮೆ ಗರ್ಭಿಣಿ ಆದಳು. ಒಮ್ಮೆ ಅವಳು ಡಾಕ್ಟರ್ ಹತ್ತಿರ ಹೋಗಬೇಕಾಗಿ ಬ್ಯಾಂಕಿಗೆ ರಜೆ ಹಾಕಿದ್ದಳು. ಗಂಡನಿಗೆ ತನ್ನ ಜೊತೆ ಡಾಕ್ಟರ್ ಬಳಿ ಬರಲು ಕೇಳಿಕೊಂಡಳು. ಅವನು ತನಗೇನೋ ಕೆಲಸ ಇದೆ = ನೀನೇ ನಿನ್ನಮ್ಮನನ್ನು ಕರೆದುಕೊಂಡು ಹೋಗು ಎಂದು ಸಬೂಬು ಹೇಳಿದ್ದ. ಹಾಗೆ ಹೇಳಿ ತನ್ನ ಕೆಲಸಕ್ಕೆ ಹೋಗುವ ಬದಲು ಮತ್ತೆ ಗೂಢಚಾರಿ ಕೆಲಸ ಮಾಡಲು ಬ್ಯಾಂಕಿಗೆ ಹೋಗಿದ್ದ. ಅಲ್ಲಿ ಅವರಿವರನ್ನು ಮನೋರಮೆಯ ಬಗ್ಗೆ ವಿಚಾರಿಸಲು ಮಿಶ್ರ ಪ್ರತಿಕ್ರಿಯೆಗಳು ಬಂದವು. ಕೆಲವರು ತೇಲಂಗ್ ಮತ್ತು ಮನೋರಮೆಯ ಸಂಬಂಧವನ್ನೂ ಕಲ್ಪಿಸಿದ್ದರು. ಈ ವಿಷಯವನ್ನು ಅವನು ತನ್ನಲ್ಲಿಯೇ ಇಟ್ಟುಕೊಂಡು ಮನೋರಮೆಯಲ್ಲಿ ವಿಚಾರಿಸಿರಲಿಲ್ಲ. ಅಂದು ಸಂಜೆ ಸಾರಿಗೆ ಉಪ್ಪು ಹೆಚ್ಚಾಗಿದೆಯೆಂದು ಜಗಳ ತೆಗೆದವನು ಹೆಂಡತಿಗೆ ಹೊಡೆದು ಅವಳು ಪ್ರಜ್ಞೆ ತಪ್ಪಿ ಬೀಳುವಲ್ಲಿಗೆ ಕೊನೆಗೊಂಡಿತ್ತು. ಮನೋರಮೆ ಮತ್ತು ಅವಳಮ್ಮನಿಗೆ ಮನ ರೋಸಿ ಹೋಗಿತ್ತು. ಹೋಗಿ ಹೋಗಿ ಇಂತಹ ಕ್ರೂರ ಪ್ರಾಣಿ ನಮಗೆ ಗಂಟು ಬಿದ್ದಿದೆಯಲ್ಲ ಎಂದು ಮಮ್ಮಲ ಮರುಗಿದರು.

ರಮಾಕಾಂತನ ಕೈನಲ್ಲಿ ಕಾಸಿಲ್ಲದೇ ಇದ್ದಾಗ್ಯೂ ಕುಡಿತದ ಚಟ ಬೇರೆ ಅಂಟಿಸಿಕೊಂಡಿದ್ದ. ಹೆಂಡತಿಗೆ ಹೊಡೆದು ಬಡಿದು ಅವಳಿಂದ ದುಡ್ಡು ಕಸಿಯುತ್ತಿದ್ದನು. ಅವಳಾದರೋ ಹಸುವಿನಂತಹವಳು. ಇವನಿಗೆ ಸರಿಯಾದ ವರಮಾನ ವಿಲ್ಲದೇ ಇರೋದೇ ಅವಳೊಂದಿಗೆ ಹೀಗೆ ವರ್ತಿಸುತ್ತಿರುವುದಕ್ಕೆ ಕಾರಣ, ಎಂಬ ಅಂಶವನ್ನು ಅರಿತಿದ್ದು ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದಳು.

ಮುಂದೆ ಒಂದು ದಿನ ಮನೋರಮೆ ಗಂಡು ಮಗುವಿನ ತಾಯಿಯಾದಳು. ಅಂದು ಮನೆಯಲ್ಲಿ ಹಣದ ಅವಶ್ಯಕತೆ ಹೆಚ್ಚಾಗಿ ಒಂದೊಪ್ಪತ್ತು ಬ್ಯಾಂಕಿಗೆ ಹೋಗಿ ಬರಬೇಕಾಯ್ತು. ಅವಳು ಆ ಕಡೆ ಹೋಗುತ್ತಿದ್ದ ಹಾಗೆಯೇ ಈ ಕಡೆ ರಮಾಕಾಂತನ ಗೂಡಚರ್ಯೆ ಪ್ರಾರಂಭವಾಗಿತ್ತು. ಮನೋರಮೆ ಬ್ಯಾಂಕಿನಲ್ಲಿ ಹಣ ತೆಗೆದು ಅವಳ ಬಾಸ್‍ನನ್ನು ಒಮ್ಮೆ ಮಾತನಾಡಿಸಿ ಬರೋಣವೆಂದು ಹೋಗಿದ್ದಳು. ಅದನ್ನು ನೋಡಿಯೇ ಅಂದು ಸಂಜೆ ಮನೆಯಲ್ಲಿ ಕುರುಕ್ಷೇತ್ರ ನಿರ್ಮಾಣವಾಗಿತ್ತು.

ಅಂದು ಸಂಜೆ ರಮಾಕಾಂತ ಚೆನ್ನಾಗಿ ಕುಡಿದು ಬಂದು ಮನೆಯಲ್ಲಿ ದೊಡ್ಡ ಗಲಾಟೆ ಆರಂಭಿಸಿದ. ಇಷ್ಟು ದಿನಗಳೂ ಸುಮ್ಮನೆ ಇದ್ದ ಮನೋರಮೆಯ ಮನ ರೋಸಿಹೋಗಿತ್ತು. ಎಷ್ಟು ದಿನ ಅಂತ ಅವಳೂ ಸುಮ್ಮನಿದ್ದಾಳು. ಅವಳು ಮತ್ತು ಅವಳಮ್ಮನೂ ರಮಾಕಾಂತನ ಮೇಲೆ ತಿರುಗಿಬಿದ್ದರು. ಕುಡಿತದ ಅಮಲಿನಲ್ಲಿ ರಮಾಕಾಂತ ಹೆಂಡತಿಯನ್ನೂ ಮತ್ತು ಅವಳಮ್ಮನನ್ನೂ ಮಡಿಕೋಲಿನಿಂದ ಚೆನ್ನಾಗಿ ಹೊಡೆದಿದ್ದನು. ಆ ಹೊಡೆತದಲ್ಲಿ ಅವಳಮ್ಮನ ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಳು. ಅದನ್ನು ನೋಡಿದ ರಮಾಕಾಂತ ಹೆದರಿಕೆಯಿಂದ ಓಡಿ ಹೋಗಿದ್ದನು.

ಮನೋರಮೆ ತಾಯಿಯನ್ನು ಹತ್ತಿರದ ನರ್ಸಿಂಗ್ ಹೋಂಗೆ ಸೇರಿಸುವಷ್ಟರಲ್ಲೇ ದೊಡ್ಡ ಜೀವ ಇಹಲೋಕ ಯಾತ್ರೆ ಮುಗಿಸಿಯಾಗಿತ್ತು. ದಿಕ್ಕೇ ತೋಚದಂತಾಗಿದ್ದ ಮನೋರಮೆ ತಾಯ ಶವವನ್ನು ಮನೆಗೆ ತರಲು ಅಲ್ಲಿ ಇನ್ನೊಂದು ಆಘಾತ ಕಾದಿತ್ತು. ಆತುರದಲ್ಲಿ ಮನೆ ಬಾಗಿಲಿಗೆ ಬೀಗ ಹಾಕದೇ ಹೋಗಿದ್ದಳು, ಮನೋರಮೆ. ಮನೆಯಲ್ಲಿ ಮಲಗಿದ್ದ ಮಗು ಈಗ ಕಾಣೆಯಾಗಿದೆ. ದಿಕ್ಕೇ ತೋಚದಂತೆ ಕಂಗೆಟ್ಟು ಕೂತಿದ್ದಾಗ ನೆರೆ ಹೊರೆಯವರು ಮತ್ತು ಅವಳ ಸ್ನೇಹಿತೆಯರೂ ಹಾಗೂ ಅವಳ ಬಾಸ್ ತೇಲಂಗ್ ಮನೆಗೆ ಬಂದಿದ್ದರು.

ಇಲ್ಲಿ ತೇಲಂಗ್ ಬಗ್ಗೆ ಒಂದೆರಡು ಮಾತುಗಳು. ಈತ ಮೂಲತ: ಮುಂಬಯಿಯವನು. ವರ್ಗವಾಗಿ ಬೆಂಗಳೂರಿಗೆ ಬಂದಿದ್ದ. ೪೫ ವರ್ಷ ವಯಸ್ಸಿನ ಈತನ ಮಕ್ಕಳು ಸ್ಕೂಲು ಕಾಲೇಜುಗಳಲ್ಲಿ ಓದುತ್ತಿದ್ದು, ಅವನ ಹೆಂಡತಿಯ ಮುಂಬಯಿ ಟೆಲಿಫೋನ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಮಕ್ಕಳ ಓದಿಗೆ ತೊಂದರೆ ಆಗಿದಿರಲೆಂದೂ, ಪತ್ನಿಯನ್ನು ಬೆಂಗಳೂರಿಗೆ ವರ್ಗ ಮಾಡಿಸುವುದು ಕಷ್ಟವೆಂದು ತಿಳಿದು ಅವನೊಬ್ಬನೇ ಇಲ್ಲಿದ್ದ. ಹೇಗೂ ೩-೪ ವರ್ಷಗಳ ತರುವಾಯ ಮರಳಿ ಮುಂಬಯಿಗೆ ಹೋಗಬಹುದೆಂಬುದು ಅವನ ಲೆಕ್ಕಾಚಾರ್‍ಅ. ಬ್ಯಾಂಕಿನ ಕೆಲಸದಲ್ಲಿ ತುಂಬಾ ಜಾಗರೂಕತೆ ಮತ್ತು ಚಾಣಾಕ್ಷತೆ ಇದ್ದುದರಿಂದ ಇವನಿಗೆ ಹಿರಿಯ ಸ್ಥಾನ ಲಭಿಸಿತ್ತು.

ತೇಲಂಗ್ ಅವರೇ ಮುಂದೆ ನಿಂತು ಶವ ಸಂಸ್ಕಾರವನ್ನು ಮಾಡಿದ್ದ. ನಂತರ ಮನೋರಮೆಯನ್ನು ಕರೆದೊಯ್ದು ಮಗು ಕಾಣೆಯಾದುದರ ಬಗ್ಗೆ ಮತ್ತು ಕೊಲೆಯ ಆಪಾದನೆ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಿಸಿದ್ದರು. ದೂರು ದಾಖಲಾತಿ ಮಾಡಲು ಅದೇಕೊ ಪೊಲೀಸರು ಅಷ್ಟು ಮುತುವರ್ಜಿ ತೋರಿಸಲಿಲ್ಲ. ಈಗ ಮನೋರಮೆಯ ಮುಂದೆ ಭೂತಾಕಾರವಾಗಿ ಬಂದು ನಿಂತ ಪ್ರಶ್ನೆ – ಮುಂದೇನು ಮಾಡುವುದು? ತನ್ನವರು ಎನ್ನಲು ಯಾರಿದ್ದಾರೆ? ಮಗುವಿಲ್ಲದೇ ಇರಲಾಗುವುದೇ?

ಇದೇ ಪರಿಯಲ್ಲಿ ಯೋಚಿಸುತ್ತಿದ್ದಂತೆ ಪ್ರಜ್ಞಾಹೀನಳಾಗಿ ಬಿದ್ದಳು. ಸುತ್ತಲಿದ್ದವರೆಲ್ಲರೂ ಅವಳನ್ನು ಮನೆಗೆ ಕರೆದೊಯ್ದು ತಲೆಗೆ ನೀರು ತಟ್ಟಿ ಡಾಕ್ಟರನ್ನು ಕರೆಸಿ ಔಷೋಧೋಪಚಾರ ಮಾಡಿಸಿದ್ದರು. ಇನ್ನೂ ಹಸಿ ಬಾಣಂತಿಗೆ ಈಗ ಶಾಕ್ ಆಗಿದೆಯೆಂದೂ ಅವಳು ಅಪಸ್ಮಾರ ರೊಗಕ್ಕೆ ತುತ್ತಾಗಿದ್ದಾಳೆಂದೂ, ಅವಳನ್ನು ಈಗ ಮಗುವಿನಂತೆ ನೋಡಿಕೊಳ್ಳಬೇಕೆಂದೂ ಡಾಕ್ಟರು ತಿಳಿಸಿದ್ದರು.

ಎಲ್ಲರಿಗೂ ಅವರದ್ದೇ ತರಲೆ ತಾಪತ್ರಯಗಳು. ಇದನ್ನೆಲ್ಲಾ ಹೊತ್ತುಕೊಳ್ಳಲು ಯಾರೂ ತಯಾರಿರಲಿಲ್ಲ. ಕೊನೆಗೆ ವಿಧಿಯಿಲ್ಲದೇ ಸಿಕ್ಕಿ ಬಿದ್ದವ ತೇಲಂಗ್. ಅಂದು ರಾತ್ರಿಯಾದರೂ ಅವಳೊಂದಿಗಿರೋಣವೆಂದುಕೊಂಡು ಅಲ್ಲಿಯೇ ಉಳಿಯಲು ನಿರ್ಧರಿಸಿದ.

ಮಧ್ಯರಾತ್ರಿಯಲ್ಲಿ ಮನೋರಮೆಗೆ ಪ್ರಜ್ಞೆ ಬಂದು ನೀರು ಕೇಳಿದಳು. ತೇಲಂಗ್ ನೀರನ್ನು ಕೊಡುವಾಗ ಅವಳಿಗೆ ಹಿಂದಿನದ್ದೆಲ್ಲಾ ನೆನಪಿಗೆ ಬಂದಿತು. ಹಾಗೇ ತೇಲಂಗ್ ಯಾವ ಜನ್ಮದ ಸಂಬಂಧಿಯೋ ಎಂದು ನೆನೆಸಿಕೊಂಡಾಗ ಅವಳಿಗರಿವಿಲ್ಲದೆಯೇ ಕಣ್ತುಂಬಿ ಬಂದಿತು. ಅವಳ ಕಣ್ಣಲ್ಲಿನ ದೈನ್ಯ ನೋಟವನ್ನು ಎದುರಿಸಲಾರದಾದ ತೇಲಂಗ. ಅವಳ ಕಣ್ಣುಗಳು ಹೃದಯ ವಿದ್ರಾವಕವಾಗಿ ಅವನಲ್ಲಿ ಬದುಕಿನ ಭಿಕ್ಷೆಯನ್ನು ಬೇಡುತ್ತಿದ್ದವು. ತೇಲಂಗ ಅವಳ ಈ ಯಾಚನಾ ದೃಷ್ಟಿಯನ್ನು ನೋಡಲಶಕ್ಯನಾದ. ಆ ಕ್ಷಣದಲ್ಲಿ ಅವನ ಕಣ್ಣಿಗೆ ಅವಳು ಬಲಹೀನವಾದ ಮಗುವಿನಂತೆ ಕಂಡಿದ್ದಳು. ಅವಳಿಗೆ ನೀರು ಕೊಟ್ಟು ಮುಂದೇನು ಮಾಡುವೆ ಎಂದು ಕೇಳಿದ.

ಅದಕ್ಕವಳು ಏನನ್ನೂ ನಿರ್ಧರಿಸಿಲ್ಲ, ತನಗೇನೂ ತೋಚುತ್ತಲೇ ಇಲ್ಲ, ಮಗು ಮಗು, ಅಮ್ಮ ಅಮ್ಮ ಎಂದು ಹಾಗೇ ಮತ್ತೆ ಮೂರ್ಛೆ ಹೋದಳು. ಅವಳಿಗೇನಾಯಿತೆಂದು ತಿಳಿಯದೇ ತೇಲಂಗನಿಗೆ ತುಂಬಾ ಘಾಬರಿಯಾಯಿತು. ತಾನು ಅವಳೊಂದಿಗೆ ಈ ವಿಷಯದ ಬಗ್ಗೆ ಈಗ ಮಾತನಾಡುವುದು ಥರವಲ್ಲ, ಸ್ವಲ್ಪ ದಿನ ಕಳೆಯಲಿ ಎಂದು ನಿರ್ಧರಿಸಿದ.

ಮರುದಿನ ಬೆಳಗ್ಗೆ ಡಾಕ್ಟರೊಡನೆ ಈ ವಿಷಯವಾಗಿ ಚರ್ಚಿಸಿದ. ಅವರು ಹೇಳಿದ್ದೇನೆಂದರೆ ಸ್ವಲ್ಪ ದಿನಗಳ ಮಟ್ಟಿಗೆ ಮನೋರಮೆ ಈ ಮನೆಯಲ್ಲಿರುವುದು ಬೇಡ, ಜಾಗ ಬದಲಾದರೆ ಅವಳ ಮೇಲಾಗಿರುವ ಈ ಮನೋಗಾಯ ಗುಣವಾಗಬಹುದು, ಅಂತ. ಹಾಗಾದರೆ ಇವಳನ್ನು ಎಲ್ಲಿಗೆ ತಲುಪಿಸುವುದು ಎನ್ನುವ ಯೋಚನೆ ಆಯಿತು. ಅವಳ ನಿಕಟ ಸ್ನೇಹಿತೆಯರೊಡನೆ ವಿಚಾರವನ್ನೂ ಮಾಡಿದ. ಎಲ್ಲರ ಒಮ್ಮತ ಅಭಿಪ್ರಾಯವೆಂದರೆ ಸ್ವಲ್ಪ ದಿನಗಳ ಮಟ್ಟಿಗೆ ಅವಳು ತೇಲಂಗನ ಕ್ವಾರ್ಟರ್ಸಿನಲ್ಲಿ ಇರಲಿ ಮುಂದೇ ಏನಾಗುವುದೋ ನೋಡೋಣವೆಂದು. ಅಷ್ಟು ಹೊತ್ತಿಗೆ ತೇಲಂಗನಿಗೆ ಮೇಲಿನ ಸ್ಥಾನಕ್ಕೆ ಬಡ್ತಿಯಾಗಿ ಹೈದರಾಬಾದಿಗೆ ವರ್ಗವಾಗಿತ್ತು. ಮನೋರಮೆಯೂ ಹೈದರಾಬಾದಿಗೆ ಹೋದರೆ ಇನ್ನೂ ಒಳಿತೆಂದು ಎಲ್ಲರೂ ನಿರ್ಧರಿಸಿದರು. ಸ್ವಲ್ಪವೇ ದಿನಗಳಲ್ಲಿ ಇಬ್ಬರೂ ಹೈದರಾಬಾದಿಗೆ ಹೋದರು.

ಮೊದಲ ಎರಡು ವರ್ಷಗಳು ಮನೋರಮೆಗೆ ಯಾತನೆಯಲ್ಲಿಯೇ ಜೀವನ ಕಳೆಯಬೇಕಾಯಿತು. ಬ್ಯಾಂಕಿನಲ್ಲಿರುವ ಸಮಯ ಬಿಟ್ಟರೆ ಮಿಕ್ಕೆಲ್ಲ ಸಮಯವೂ ಅವಳಿಗೆ ತನ್ನ ಮಗುವಿನ ಬಗೆಗೇ ಯೋಚನೆ. ಈ ಮಧ್ಯೆ ಆಗಾಗ್ಯೆ ತೇಲಂಗ್ ಬೆಂಗಳೂರಿನ ಸ್ನೇಹಿತರುಗಳನ್ನು ಸಂಪರ್ಕಿಸಿ ಇವಳ ಗಂಡ, ಮಗು ಮತ್ತು ತಾವು ನೀಡಿದ್ದ ಪೊಲೀಸ್ ಕಂಪ್ಲೇಂಟ್ ಬಗ್ಗೆ ವಿಚಾರಿಸುತ್ತಿದ್ದ. ಹೆಚ್ಚಿನ ಮಾಹಿತಿಯೇನೂ ದೊರಕಿರಲಿಲ್ಲ. ಅಷ್ಟರಲ್ಲೇ ಮನೋರಮೆ ತನ್ನ ಸುಖವನ್ನೆಲ್ಲಾ ತೇಲಂಗನಲ್ಲೇ ಕಾಣ ತೊಡಗಿದ್ದಳು. ಆದರೇನು ಅವಳೆಂದೂ ಸುಖದಿಂದಿರಬಾರದೆಂಬ ಶಾಪವೋ ಏನೋ, ತೇಲಂಗನಿಗೆ ಮರಳಿ ಮುಂಬೈಗೆ ವರ್ಗವಾಗಿತ್ತು. ಮುಂದೆ ತಿಳಿದುಬಂದ ವಿಷಯವೇನೆಂದರೆ, ಬೆಂಗಳೂರಿಗೆ ಬಂದಂದಿನಿಂದ ತೇಲಂಗ್ ತನ್ನ ಸಂಸಾರದೊಂದಿಗೆ ಅಷ್ಟು ಸಂಪರ್ಕವನ್ನಿಟ್ಟಿರಲಿಲ್ಲ ಮತ್ತು ಕಳೆದ ಎರಡೂವರೆ ವರ್ಷಗಳಿಂದ ಮುಂಬೈಗೆ ಹೋಗೇ ಇರಲಿಲ್ಲ. ಇದರ ಬಗ್ಗೆ ಅವನ ಪತ್ನಿಗೆ ಅನುಮಾನ ಬಂದು ಅವಳೇ ಬ್ಯಾಂಕಿನ ಹಿರಿಯ ಅಧಿಕಾರಿಗಳಲ್ಲಿ ದೂರನ್ನಿತ್ತಿದ್ದಳು. ತದಕಾರಣ ಹಿರಿಯ ಅಧಿಕಾರಿಗಳು ಇವನಿಗೆ ತಿಳಿಯದಂತೆ ವಿಚಾರಣೆ ಮಾಡಿ ಇವನನ್ನು ಮುಂಬೈಗೆ ವರ್ಗಾಯಿಸಿದ್ದರು.

ವಿಧಿಯಿಲ್ಲದೇ ಈಗ ತೇಲಂಗ್ ಮನೋರಮೆಯನ್ನು ಬಿಟ್ಟು ತಾನೊಬ್ಬನೇ ಮುಂಬಯಿಗೆ ಮರಳಬೇಕಾಯ್ತು. ಇಷ್ಟು ದಿನಗಳು ತೇಲಂಗನ ಆರೈಕೆಯಲ್ಲಿ ಮನೆಯ ಕಡೆಯ ಗಮನ ಸ್ವಲ್ಪ ಕಡಿಮೆ ಆಗಿದ್ದ ಮನೋರಮೆಗೆ ಮತ್ತೆ ತೇಲಂಗನ ಯೋಚನೆಯಲ್ಲಿ ಮೂರ್ಛಾರೋಗ ಬರಹತ್ತಿತ್ತು. ಅಷ್ಟು ಹೊತ್ತಿಗೆ ಮುಂಬೈನಿಂದಲೇ ಬಂದಿದ್ದ ಒಬ್ಬ ಹೊಸ ಅಧಿಕಾರಿ ಶ್ರೀನಿವಾಸನ್ ಇವಳ ಬಗ್ಗೆ ಕಾಳಜಿ ವಹಿಸ ಹತ್ತಿದ್ದ. ಅವನೂ ಮತ್ತು ತೇಲಂಗ್ ಮೊದಲಿನಿಂದ ಒಬ್ಬರಿಗೊಬ್ಬರು ಬಲ್ಲವರಾಗಿದ್ದರು. ಹಾಗಾಗಿ ತೇಲಂಗ್ ಶ್ರೀನಿವಾಸನ್‍ನಿಗೆ ಮನೋರಮೆಯ ವಿಷಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಲು ತಿಳಿಸಿದ್ದ. ಶ್ರೀನಿವಾಸನ್‍ನಿಗೆ ಇನ್ನೇನು ೩ ವರ್ಷದ ಸರ್ವಿಸ್ ಬಾಕಿ ಇತ್ತು. ಮಕ್ಕಳೆಲ್ಲರೂ ಕೈಗೆ ಬಂದಿದ್ದರು. ಆತನ ಪತ್ನಿ ಸತ್ತುಹೋಗಿ ೫ ವರ್ಷಗಳಾಗಿದ್ದುವು. ಒಂಟಿ ಪಿಶಾಚಿ. ಅವನಿಗೂ ಮನೆಯಲ್ಲಿ ಕೂಳು ಬೇಯಿಸಿಹಾಕಲು ಒಬ್ಬರು ಬೇಕಿತ್ತು. ಇವಳಿಗೂ ಗಂಡಸಿನ ಆಶ್ರಯ ಬೇಕಿತ್ತು. ಇಲ್ಲದಿದ್ದರೆ ಕಾಣದ ಆ ಊರಿನಲ್ಲಿ ಕಿತ್ತು ತಿನ್ನುವ ಹದ್ದುಗಳೇ ಜಾಸ್ತಿ.

ಅದೇನೇ ಆದರೂ ಮನೋರಮೆಗೆ ಮನೋರೋಗ ಎಂಬುದು ಶಾಶ್ವತವೇನೋ ಎನ್ನುವಂತಾಗಿತ್ತು. ಆಗಾಗ್ಯೆ ಬ್ಯಾಂಕಿನಲ್ಲೇ ಆಗಲಿ ಅಥವಾ ಮನೆಯಲ್ಲೇ ಆಗಲಿ ಮೂರ್ಛಾರೋಗ ಕಾಣಿಸಿಕೊಳ್ಳುತ್ತಿತ್ತು. ನಿರಂತರವಾಗಿ ವೈದ್ಯಕೀಯ ತಪಾಸಣೆಯ ಅಗತ್ಯವಿತ್ತು. ಮೊದಲ ಒಂದು ವರ್ಷ ಶ್ರೀನಿವಾಸನ್ ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದನು. ನಂತರ ಅದೇನಾಯಿತೋ ಏನೋ ಅವನಿಗೆ ಅವಳ ಬಗ್ಗೆ ಅಷ್ಟು ಮುತುವರ್ಜಿ ಇರಲಿಲ್ಲ. ಮನೋರಮೆ ಔಷಧಿ ತೆಗೆದುಕೊಂಡಳೋ ಇಲ್ಲವೋ ಕೇಳುತ್ತಿರಲಿಲ್ಲ. ಅವಳೊಂದಿಗೆ ಅಷ್ಟಾಗಿ ಮಾತನ್ನೂ ಆಡುತ್ತಿರಲಿಲ್ಲ. ಈ ರೀತಿಯ ವರ್ತನೆಯಿಂದ ಮನೋರಮೆಯ ಮನೋರೋಗ ಇನ್ನೂ ಉಲ್ಬಣಗೊಳ್ಳುತ್ತಿತ್ತು. ಅವಳು ಎಲ್ಲೇ ಯಾವಾಗಲೇ ಮೂರ್ಛೆ ಬಿದ್ದರೂ ಸುತ್ತ ಮುತ್ತಲಿದ್ದವರು ( ಬ್ಯಾಂಕಿನಲ್ಲಿ ಅಥವಾ ಮನೆಯಲ್ಲಿ ) ಶ್ರೀನಿವಾಸನ್‍ನಿಗೆ ಸುದ್ದಿ ತಲುಪಿಸುತ್ತಿದ್ದರು. ಅವನು ಅಲ್ಲಿಗೆ ಬಂದು, ಎಲ್ಲರೆದುರಿಗೆ ಬಹಳ ಕಾಳಜಿ ಇರುವವನಂತೆ ನಾಟಕವಾಡಿ ಜನ ಕಡಿಮೆ ಆಗಲು ಅವಳ ಪರ್ಸಿನಿಂದ ಹಣವನ್ನು ಲಪಟಾಯಿಸಿ ಓಡಿ ಹೋಗುತ್ತಿದ್ದನು. ಇದೇ ರೀತಿ ಮುಂದೆ ಇನ್ನೂ ಒಂದೂವರೆ ವರ್ಷಗಳು ನಡೆಯಿತು. ನಂತರ ಸುತ್ತಮುತ್ತಲಿನ ಜನಗಳಿಗೆ ಇವನ ಕಳ್ಳಾಟ ತಿಳಿದು ಅವನ ಬಗ್ಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ದೂರನ್ನಿತ್ತರು. ಅದೇ ಕಾರಣದ ಮೇಲೆ ಅವನನ್ನು ಮತ್ತೆ ಮುಂಬಯಿಗೆ ವರ್ಗ ಮಾಡಿದ್ದರು.

ಮನೋರಮೆಗೆ ಈಗೀಗ ಒಂಟಿತನ ಕಾಡಹತ್ತಿ, ತನ್ನ ಗಂಡ ಮಗುವಿನ ಯೋಚನೆ ಬಹಳವಾಗಿತ್ತು. ಗಂಡ ಹೇಗೇ ಇದ್ದರೂ ಪರವಾಗಿಲ್ಲ ಅವನೊಂದಿಗೆ ಹೊಂದಿಕೊಂಡು ಬಾಳ್ವೆ ನಡೆಸುವೆನೆಂದು ನಿರ್ಧರಿಸಿದಳು. ಹೇಗೋ ಅವರಿವರಿಂದ ಗಂಡನ ಬಗ್ಗೆ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಅವಳಿಗೆ ತಿಳಿದುಬಂದ ವರ್ತಮಾನದ ಪ್ರಕಾರ ಅವಳು ಈ ಕಡೆ ಬಂದಂದಿನಿಂದ ಅವನ ಆರೋಗ್ಯ ಹದಗೆಟ್ಟು ಬಹಳ ಕಷ್ಟ ಪಟ್ಟನು. ಜೊತೆಗೇ ಹೇಗೋ ಮಗುವನ್ನೂ ಸಾಕುತ್ತಿದ್ದನು. ಅವನ ಸೀನಿಯರೊಂದಿಗೆ ಸ್ವಲ್ಪ ವಾಗ್ವಾದವಾಗಿ ಕೆಲಸವನ್ನೂ ಕಳೆದುಕೊಂಡಿದ್ದನು. ನಂತರ ಯಾವುದೋ ಒಂದು ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಲೀಗಲ್ ಅಡ್ವೈಸರ್ ಆಗಿ ಕೆಲಸ ಮಾಡಹತ್ತಿದನು. ಸ್ವಲ್ಪ ಶ್ರದ್ಧೆವಹಿಸಿ ಕೆಲಸ ಮಾಡಿದ್ದರಿಂದ ಒಳ್ಳೆಯ ಹೆಸರನ್ನು ಗಳಿಸಿದ್ದನು. ಮುಂದಿನ ೫ ವರ್ಷಗಳಲ್ಲಿ ಅದೇ ಬ್ಯಾಂಕಿನಲ್ಲಿ ದೊಡ್ಡ ಹುದ್ದೆಗೇರಿದ್ದನು. ಈಗ ಮಗನು ಶಾಲೆಗೆ ಸೇರಿದ್ದನು. ಇವಳು ಅವನನ್ನು ದೂರವಾಣಿಯ ಮೂಲಕ ಸಂಪರ್ಕಿಸಿದಾಗ ಅವನಿಗೂ ತನ್ನ ತಪ್ಪಿನ ಅರಿವಾಗಿ ಅವಳಿಗೆ ಬಂದು ಸೇರಲೆಂದು ಒತ್ತಾಯ ಮಾಡಹತ್ತಿದನು.

ವೈದ್ಯ ಹೇಳಿದ್ದೂ ಹಾಲೂ ಅನ್ನ ರೋಗಿ ಬಯಸಿದ್ದೂ ಹಾಲೂ ಅನ್ನ ಅನ್ನುವ ಹಾಗೆ ಇಬ್ಬರಿಗೂ ಒಬ್ಬರೊಬ್ಬರ ಸಹಾಯದ ಅವಶ್ಯಕತೆ ಇತ್ತು. ಸ್ವಲ್ಪ ದಿನಗಳಲ್ಲೇ ಮನೋರಮೆ ಅರೋಗ್ಯದ ದೃಷ್ಟಿ‍ಯಿಂದ ಬೆಂಗಳೂರಿಗೆ ವರ್ಗ ಕೇಳಿ ಸಫಲಳಾಗಿದ್ದಳು.

ಬಹಳ ಬೇಗ ಅವರಿಬ್ಬರೂ ಸೇರುವ ಕಾಲ ಬಂದೇ ಬಿಟ್ಟಿತು. ಮೊದಲ ಬಾರಿ ಅವರಿಬ್ಬರೂ ರೈಲ್ವೇ ಸ್ಟೇಷನ್ನಿನಲ್ಲಿ ಮಿಲನವಾದಾಗ ನೋಡಬೇಕಿತ್ತು, ಛೇ! ಮನುಷ್ಯನಲ್ಲಿ ಇಷ್ಟೊಂದು ಪ್ರೇಮ, ವಾತ್ಸಲ್ಯ ಇರತ್ತಾ – ಹಾಗಿದ್ದರೂ ಹೇಗೆ ಬೇರೆ ಬೇರೆಯಾಗಿರಬಯಸುವರು ಎನ್ನುವುದು ತಿಳಿಯುತ್ತಿತ್ತು. ಆ ಬಾಂಧವ್ಯದ ಬಿರುಕಿನಿಂದಲೇ ಇಬ್ಬರೂ ದೈಹಿಕವಾಗಿ ಬಹಳ ಕ್ಷೀಣವಾಗಿದ್ದರು. ಒಬ್ಬರನೊಬ್ಬರು ನೋಡಿದ ಕೂಡಲೇ ಕಣ್ಣುಗಳಿಂದ ಆನಂದ ಬಾಷ್ಪ ಅನವರತ ಸುರಿಯಹತ್ತಿತ್ತು. ಇವರಿಬ್ಬರ ಮಧ್ಯೆ ನಿಂತಿದ್ದ ಆ ಮಗುವಿಗೆ ಏನು ನಡೆಯುತ್ತಿದೆ ಎಂಬುದರ ಪರಿವೆಯೇ ಇರಲಿಲ್ಲ. ಅಂತೂ ಇಂತೂ ಇಬ್ಬರೂ ಇದುವರೆವಿಗೂ ಸುಖವಾಗಿದ್ದಾರೆ, ಇತರರಿಗೆಲ್ಲರಿಗೂ ಮಾದರಿ ದಂಪತಿಗಳಾಗಿದ್ದಾರೆ.

ಇವರುಗಳಿಗೇನಾಗಿತ್ತು ಅಂತ ಕೇಳ್ತೀರಾ? ಏಳೂವರೆ ವರ್ಷಗಳ ಕಾಲದ ಶನಿಕಾಟ. ಮೊದಲ ಎರಡೂವರೆ ವರ್ಷ ಉಚ್ಛ್ರಾಯ ಸ್ಥಿತಿಯಲ್ಲೂ ಮಧ್ಯದ ಎರಡೂವರೆ ವರ್ಷ ಮಧ್ಯಮವಾಗಿಯೂ ಮತ್ತು ಕಡೆಯ ಎರಡೂವರೆ ವರ್ಷಗಳು ಇಳಿಮುಖದಲ್ಲೂ ಇದ್ದಿತು. ಶನಿದೇವ ಎಂತಹವರನ್ನೂ ಬಿಡದೆ ಕಾಡುವ ಎನ್ನುವುದಕ್ಕೆ ಈ ಕಥೆಗಿಂದ ಉತ್ತಮ ನಿದರ್ಶನ ಬೇಕೇ? ಎಲ್ಲರೂ ಒಳ್ಳೆಯವರೇ – ಯಾರೂ ಕೆಟ್ಟವರಲ್ಲ. ಹಾಗೆ ಆಡಿಸುವುದು ಈ ಗ್ರಹಗಳು – ಇದನ್ನೇ ಗ್ರಹಚಾರ ಎನ್ನುವರು.

ವಿಭಾಗಗಳು
ಕವನಗಳು

ಕಲಾಸಿಪಾಳ್ಯ

ಕಲಾಸಿಪಾಳ್ಯದ ಖಾಸಗೀ ಬಸ್ ನಿಲ್ದಾಣ ನೀವೆಲ್ಲರೂ ನೋಡಿದ್ದೀರಲ್ಲವೇ? ಅಲ್ಲಿ ಸುಲಭವಾಗಿ ಓಡಾಡಬಲ್ಲವರು ಒಲಂಪಿಕ್ ಸ್ಪರ್ಧೆಗಳಲ್ಲಿ ಹೈಜಂಪ್, ಲಾಂಗ್‍ಜಂಪ್, ಟ್ರಿಪಲ್ ಜಂಪುಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ. ಅಲ್ಲಿ ಮೋರಿಗಳೇ ಇಲ್ಲ! ಹಾ ಹಾ ಹಾ – ಇಡೀ ಬಸ್ ನಿಲ್ದಾಣವೇ ಒಂದು ದೊಡ್ಡ ಮೋರಿ ಇದ್ದ ಹಾಗಿರುವಾಗ ಪ್ರತ್ಯೇಕ ಮೋರಿ ಮಾಡುವುದಕ್ಕೆ ಖರ್ಚಿನ್ಯಾಕೆ ಅಂತ ನಗರ ಪಾಲಿಕರ ಚಿಂತನೆ. ಎಲ್ಲ ಕಡೆಯೂ ಗಂಗೆ, ಕಾವೇರಿ, ಜಮುನೆಯರು ಹರಿಯುತ್ತಿರುವರು, ಅದೂ ಜೀವನದಿಗಳಂತೆ. ಕಿವಿಗಡಚಿಕ್ಕುವ ವಾಹನಗಳ ಹಾರನ್ನುಗಳು. ಹೊಸದಾಗಿ ಬರುವವರಿಗೆ ಹುಚ್ಚು ಹಿಡಿಯದಿದ್ದರೆ, ಅವರು ಕಿವುಡರೆಂಬುದು ಖಾತ್ರಿ. ಮತ್ತು ಇಲ್ಲಿಯೇ ಹುಟ್ಟಿ ಬೆಳೆದವರಿಗೆ ಇದು ಮಾಮೂಲು. ಒಂದು ಕ್ಷಣ ಹಾರನ್ನಿನ ಶಬ್ದ ಕೇಳಿಸದಿದ್ದರೆ ಅವರಿಗೆ ಹುಚ್ಚು ಹಿಡಿಯುವುದಂತೆ. ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಅರ್ಧ ಕಿಲೋಮೀಟರ್ ದೂರ ಕೂಡ ಇಲ್ಲ. ಅದನ್ನು ದಾಟಲು ಗಂಟೆಗಟ್ಟಲೆ ಹಾದಿ ಸವೆಸಬೇಕು. ಅದು ಹಾಗಿರಲಿ, ನಾನು ಹೇಳ ಹೊರಟಿರುವುದು, ನಮ್ಮೂರಿನ ಕೈಲಾಸಪಾಳ್ಯದ ಬಗ್ಗೆ ಅಲ್ಲ. ನಮ್ಮ ಕಲಾಸಿಪಾಳ್ಯದ ಬಗ್ಗೆ ಈ ಹಿಂದೆ ಬರೆದಿದ್ದ ಒಂದು ಕವನ ಹೀಗಿದೆ.

ನೋಡಬನ್ನೀ ಅಣ್ಣೋರೇ ಅಕ್ಕೋರೇ

ಎಲ್ಲೂ ನೋಡಲಾಗದ ನೋಡಿರದ

ಕೈಲಾಸ ವೈಕುಂಠ ದೇವ ಲೋಕ

ಮೂರು ಲೋಕಗಳನ್ನೆಲಾ ಒಂದೇ ಕಡೆ ಒಮ್ಮೆಲೇ

ನೋಡುವ ಸೌಭಾಗ್ಯ ನಿಮ್ಮದಾಗಲಿ

ಬನ್ನಿ ನಮ್ಮ ಕೈಲಾಸಪಾಳ್ಯಕ್ಕೆ

 

ಇದಿರುವುದು ನನ್ನೂರ ಹೃದಯದಲಿ

ಎಲ್ಲ ಖಾಸಗೀ ಬಸ್ಸುಗಳ ಸೌಲಭ್ಯದ ತಾಣ

ಮೂಗಿರದವರಿಗೂ ಮೂಗು ಮುಚ್ಚಿಸುವ ದುರ್ಗಂಧದ ನಾಡು

ಸೊಳ್ಳೆ ಹಂದಿ ನಾಯಿ ಕತ್ತೆ ಕೋತಿಗಳ ನೆಲೆವೀಡು

 

ಮೊದಲಿಗೇ ನಿಮ್ಮ ಮೂಗಿಗೆ ಬಡಿವುದು

ಘೌಸಿಯಾ ಹೊಟೆಲ್ಲಿನ ಅಮಲೇರಿಸುವ ವಾಸನೆ

ಪ್ರದೀಪ ಸಿನೆಮಾದಲ್ಲಿನ ಅಶ್ಲೀಲ ಭಿತ್ತಿಪತ್ರ

ಹಾದಿಯುದ್ದಕ್ಕೂ ಕಾಣುವ ಸ್ನಾನದ ಮನೆಗಳು

 

೨೪ ತಾಸುಗಳು ಸೇವೆಯನೀಯುವ ಪಿಕ್‍ಪಾಕೆಟಿಗರು

ದನಿ ಏರಿಸಿದರೆ ಸೇವೆಗೆ ಬಂದಾರು ದಾಂಡಿಗರು

ರಸ್ತೆಯ ಬದಿಯಲ್ಲೇ ಹವಾನಿಯಂತ್ರಿತ

ಛಾವಣಿ, ಗೋಡೆ ರಹಿತ, ಕಡಿಮೆ ಖರ್ಚಿನ ಸಲೂನು

 

ಸುಲಭ ಖರ್ಚಿನಲಿ ಆಗುವುದು ನಿಮ್ಮ ವಾಚಿನ ರಿಪೇರಿ, ಬಫ್ಫಿಂಗ್

ಒಂದೆಡೆ ಕೈ ತೋರಿಸಿ ಇನ್ನೊಂದೆಡೆ ಓಡಿಸುವ ಸೈಕಲಿಗರು

ಸುಂಡಿಲಿಯಂತೆ ಮಧ್ಯೆ ತೂರಿ ಬರುವ ಮುಗ್ಗಾಲಿಗಳು

ಎಲ್ಲೆಂದರಲಿ ನಿಂತಿರುವ ಖಾಸಗೀ ಬಸ್ಸುಗಳು

 

ರಸ್ತೆ ಬದಿಯಲೇ ಅಡುಗೆ ಮಾಡುತಿರುವ

ಮಸಾಲೆ ಅರೆಯುತಿರುವ ಅತ್ತೆ-ಸೊಸೆ, ಅಮ್ಮ-ಮಗಳು

ಚಡ್ಡಿಯಿರದೆ ಸದಾ ಆರೋಗ್ಯದ ಮಕ್ಕಳು ನೂರಾರು

ಕುಕ್ಕರಗಾಲಿನಲಿ ಕೂತು ಬೀಡಿ ಎಳೆಯುತಿಹ ಯಜಮಾನರು

ಕಣ್‍ಸನ್ನೆಯಲೇ ಚಕ್ಕಂದ ಆಡುವ ಯುವಕ-ಯುವತಿಯರು

 

ಬನ್ನಿ ಅಣ್ಣೋರೇ ಅಕ್ಕೋರೇ ನೋಡಿ ಬನ್ನಿ ನಮ್ಮ ಕೈಲಾಸಪಾಳ್ಯ

ಹುಡುಕಾಟ
 
ಕೈಲಾಸಪಾಳ್ಯದ ಅಂದ್ರೆ ನಿಮಗೆ ಗೊತ್ತೇ ಇರತ್ತೆ. ಗೊತ್ತಿಲ್ದೇ ಇರತ್ಯೇ! ಅದೂ ಅಷ್ಟು ಪ್ರಸಿದ್ಧವಾದ ಜಾಗ ಮತ್ತು ಅಲ್ಲಿಂದ ಆನಂದ ಅನುಭವಿಸದೇ ಇರುವವರು ಅದಾರು ಈ ಬೆಂಗಳೂರಿನಲ್ಲಿ ಇದ್ದಾರೆ. ವಿಶ್ವೇಶ್ವರಪುರದಿಂದ ಪ್ರಾರಂಭವಾಗುವುದು ಆ ಮಸಾಲೆ ಮಾಂಸದ ವಾಸನೆ ಆ ಕಡೆಯ ಮಾರುಕಟ್ಟೆತವರೆವಿಗೂ ಮೂಗುಗಳಿಗೆ ಬಡಿವುದು. ಅಲ್ಲಿಯ ಸ್ನಾನದ ಮನೆಗಳು, ಸ್ವಚ್ಛಂದವಾಗಿ ವಿಹರಿಸುವ ಹಂದಿಗಳು, ೨೪ ತಾಸು ಇರುವ ಜನಜಂಗುಳಿ, ಪಿಕ್‌ಪಾಕೆಟ್ ಮಹಾಶಯರ ಸ್ವರ್ಗ, ಪ್ರದೀಪ್ ಚಿತ್ರಮಂದಿರದ ಅಶ್ಲೀಲ ಭಿತ್ತಿಪತ್ರ, ಪುಟ್‌ಪಾತೇ ತಮ್ಮದೆನ್ನುವ ವಾಚ್ ಬಫ್ಫಿಂಗ್ ರಿಪೇರಿಗರು, ಅಲ್ಲೇ ಪಕ್ಕದಲ್ಲಿ ನುಣ್ಣಗೆ ಬೋಳಿಸುವ ಹಜಾಮರು, ಮುಂದೆ ಲೌಡ್ ಸ್ಪೀಕರಿನಲ್ಲಿ ಕೇಳಿಸುವ ಮಸೀದಿಯ ನಮಾಜು, ಘಜನೀ ಮಹಮ್ಮದನನ್ನು ನೆನಪಿಸುವ ಘೌಸಿಯಾ ಹೋಟೆಲ್, ಮಧ್ಯೆ ಮಧ್ಯೆ ಅಲ್ಲಲ್ಲಿ ತಪ್ಪಿಸಿಕೊಂಡು ಬಂದಂತಹ ಹಸು ಎಮ್ಮೆಗಳು, ಎಲ್ಲೆಲ್ಲಿಯೋ ತೂರಿಬರುವ ಸೈಕಲ್ ಸವಾರಿಗಳು, ಎಲ್ಲೆಲ್ಲಿಯೂ ಜಾತ್ರೆಯ ಸಂಭ್ರಮದ ಜನಜಂಗುಳಿ, ಇದರ ಮಧ್ಯೆ ಭುರ್ರೆಂದು ಓಡಿಸುವ ಸುಂಡಿಲಿಯಂತಿರುವ ಮೂರ್ಗಾಲಿಗಳು. ಇದೆಲ್ಲದರ ಮುಂದೆ ರಾಜನಂತೆ ಬರುವ ಖಾಸಗೀ ಬಸ್ಸಿನ ಚಾಲಕ ಕೈಯಲ್ಲಿ ಮೋಟುಬೀಡಿ, ಕುರುಚಲು ಗಡ್ಡ, ಇನ್ನೊಂದು ಕೈಯಲ್ಲಿ ಹಲ್ಲಿನ ಸಂದಿಯಿಂದ ಸಿಕ್ಕಿಹಾಕಿಕೊಂಡ ಅಡಕೆಯ ಚೂರನ್ನು ತೆಗೆಯಲು ಸೇಫ್ಟೀ ಪಿನ್ನು. ಎಲ್ಲೆಂದರಲ್ಲಿ ನಿಂತಿರುವ ಬಸ್ಸುಗಳ ನೆರಳಿನಲ್ಲೇ ಮಲಗಿ, ಕೂತು, ಮಲ ವಿಸರ್ಜಿಸುತ್ತಿರುವ ಮಕ್ಕಳು, ಲೋಕದ ಪರಿವೆಯಿಲ್ಲದೇ ಹರಟೆ ಹೊಡೆಯುತ್ತಿರುವ ಹಿರಿಯರು, ಚಕ್ಕಂದ ಆಡುತ್ತಿರುವ ಯುವಕ ಯುವತಿಯರು, ಅರಚುತ್ತಿರುವ ಬಸ್ ಏಜೆಂಟರು. ಷೋಕೀಲಾಲುಗಳು ಪಾನ್‌ಪರಾಗ್ ಜಗಿದು ಎಲ್ಲೆಂದೆರಲ್ಲಿ ಉಗಿಯುವರು.
 
ಇನ್ನು ಇನ್ನೊಂದು ಕಡೆ ರೋಗಿಯಲ್ಲದವರನ್ನೂ ರೋಗಿಯನ್ನಾಗಿ ಮಾಡಿ ರೋಗ ನಿವಾರಣೆಯೇ ಪರಮ ಧ್ಯೇಯವಾದ ವಿಕ್ಟೋರಿಯಾ ಆಸ್ಪತ್ರೆ, ಅದರೆದುರಿಗಿರುವ ಸರ್ಕಾರೀ ವೈದ್ಯಕೀಯ ಕಾಲೇಜು. ಇನ್ನೊಂದೆಡೆ ಇರುವ ಅವೆನ್ಯೂ ರಸ್ತೆಯ ಬಗ್ಗೆ ಹೇಳೋದೇ ಬೇಕಿಲ್ಲ. ಮಾರುಕಟ್ಟೆಯಿಂದ ಮೆಜೆಸ್ಟಿಕ್‌ಗೆ ಹೋಗಲು ತುಂಬಾ ಹತ್ತಿರದ ಹಾದಿ ಅಂದರೆ ಅದು ಅವೆನ್ಯೂ ರಸ್ತೆಯೇ. ಅಲ್ಲಿ ನೀವೇನಾದರೂ ಒಂದೆಡೆಯಿಂದ ಇನ್ನೊಂದೆಡೆಗೆ ವಾಹನ ಚಾಲನೆ ಮಾಡಿದ್ದೇಯಾದರೆ ನಿಮಗೆ ಉತ್ತಮ ಚಾಲಕನೆಂಬ ಬಿರುದು ಕೊಡಬಹುದು. ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ವಾಹನವನ್ನು ಚಲಿಸುವ ಜಾಣ್ಮೆ ಮತ್ತು ಚಾಕಚಕ್ಯತೆ ನಿಮ್ಮಲ್ಲಿದೆ ಎಂದು ಗುರುತಿಸಬಹುದು.
 
ನಿಮಗೆ ತಿಳಿದ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಬರೆಯುವಿರೆಂದು ನಂಬಿರುವೆ.