ವಿಭಾಗಗಳು
ಕವನಗಳು

ಕಲಾಸಿಪಾಳ್ಯ

ಕಲಾಸಿಪಾಳ್ಯದ ಖಾಸಗೀ ಬಸ್ ನಿಲ್ದಾಣ ನೀವೆಲ್ಲರೂ ನೋಡಿದ್ದೀರಲ್ಲವೇ? ಅಲ್ಲಿ ಸುಲಭವಾಗಿ ಓಡಾಡಬಲ್ಲವರು ಒಲಂಪಿಕ್ ಸ್ಪರ್ಧೆಗಳಲ್ಲಿ ಹೈಜಂಪ್, ಲಾಂಗ್‍ಜಂಪ್, ಟ್ರಿಪಲ್ ಜಂಪುಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ. ಅಲ್ಲಿ ಮೋರಿಗಳೇ ಇಲ್ಲ! ಹಾ ಹಾ ಹಾ – ಇಡೀ ಬಸ್ ನಿಲ್ದಾಣವೇ ಒಂದು ದೊಡ್ಡ ಮೋರಿ ಇದ್ದ ಹಾಗಿರುವಾಗ ಪ್ರತ್ಯೇಕ ಮೋರಿ ಮಾಡುವುದಕ್ಕೆ ಖರ್ಚಿನ್ಯಾಕೆ ಅಂತ ನಗರ ಪಾಲಿಕರ ಚಿಂತನೆ. ಎಲ್ಲ ಕಡೆಯೂ ಗಂಗೆ, ಕಾವೇರಿ, ಜಮುನೆಯರು ಹರಿಯುತ್ತಿರುವರು, ಅದೂ ಜೀವನದಿಗಳಂತೆ. ಕಿವಿಗಡಚಿಕ್ಕುವ ವಾಹನಗಳ ಹಾರನ್ನುಗಳು. ಹೊಸದಾಗಿ ಬರುವವರಿಗೆ ಹುಚ್ಚು ಹಿಡಿಯದಿದ್ದರೆ, ಅವರು ಕಿವುಡರೆಂಬುದು ಖಾತ್ರಿ. ಮತ್ತು ಇಲ್ಲಿಯೇ ಹುಟ್ಟಿ ಬೆಳೆದವರಿಗೆ ಇದು ಮಾಮೂಲು. ಒಂದು ಕ್ಷಣ ಹಾರನ್ನಿನ ಶಬ್ದ ಕೇಳಿಸದಿದ್ದರೆ ಅವರಿಗೆ ಹುಚ್ಚು ಹಿಡಿಯುವುದಂತೆ. ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಅರ್ಧ ಕಿಲೋಮೀಟರ್ ದೂರ ಕೂಡ ಇಲ್ಲ. ಅದನ್ನು ದಾಟಲು ಗಂಟೆಗಟ್ಟಲೆ ಹಾದಿ ಸವೆಸಬೇಕು. ಅದು ಹಾಗಿರಲಿ, ನಾನು ಹೇಳ ಹೊರಟಿರುವುದು, ನಮ್ಮೂರಿನ ಕೈಲಾಸಪಾಳ್ಯದ ಬಗ್ಗೆ ಅಲ್ಲ. ನಮ್ಮ ಕಲಾಸಿಪಾಳ್ಯದ ಬಗ್ಗೆ ಈ ಹಿಂದೆ ಬರೆದಿದ್ದ ಒಂದು ಕವನ ಹೀಗಿದೆ.

ನೋಡಬನ್ನೀ ಅಣ್ಣೋರೇ ಅಕ್ಕೋರೇ

ಎಲ್ಲೂ ನೋಡಲಾಗದ ನೋಡಿರದ

ಕೈಲಾಸ ವೈಕುಂಠ ದೇವ ಲೋಕ

ಮೂರು ಲೋಕಗಳನ್ನೆಲಾ ಒಂದೇ ಕಡೆ ಒಮ್ಮೆಲೇ

ನೋಡುವ ಸೌಭಾಗ್ಯ ನಿಮ್ಮದಾಗಲಿ

ಬನ್ನಿ ನಮ್ಮ ಕೈಲಾಸಪಾಳ್ಯಕ್ಕೆ

 

ಇದಿರುವುದು ನನ್ನೂರ ಹೃದಯದಲಿ

ಎಲ್ಲ ಖಾಸಗೀ ಬಸ್ಸುಗಳ ಸೌಲಭ್ಯದ ತಾಣ

ಮೂಗಿರದವರಿಗೂ ಮೂಗು ಮುಚ್ಚಿಸುವ ದುರ್ಗಂಧದ ನಾಡು

ಸೊಳ್ಳೆ ಹಂದಿ ನಾಯಿ ಕತ್ತೆ ಕೋತಿಗಳ ನೆಲೆವೀಡು

 

ಮೊದಲಿಗೇ ನಿಮ್ಮ ಮೂಗಿಗೆ ಬಡಿವುದು

ಘೌಸಿಯಾ ಹೊಟೆಲ್ಲಿನ ಅಮಲೇರಿಸುವ ವಾಸನೆ

ಪ್ರದೀಪ ಸಿನೆಮಾದಲ್ಲಿನ ಅಶ್ಲೀಲ ಭಿತ್ತಿಪತ್ರ

ಹಾದಿಯುದ್ದಕ್ಕೂ ಕಾಣುವ ಸ್ನಾನದ ಮನೆಗಳು

 

೨೪ ತಾಸುಗಳು ಸೇವೆಯನೀಯುವ ಪಿಕ್‍ಪಾಕೆಟಿಗರು

ದನಿ ಏರಿಸಿದರೆ ಸೇವೆಗೆ ಬಂದಾರು ದಾಂಡಿಗರು

ರಸ್ತೆಯ ಬದಿಯಲ್ಲೇ ಹವಾನಿಯಂತ್ರಿತ

ಛಾವಣಿ, ಗೋಡೆ ರಹಿತ, ಕಡಿಮೆ ಖರ್ಚಿನ ಸಲೂನು

 

ಸುಲಭ ಖರ್ಚಿನಲಿ ಆಗುವುದು ನಿಮ್ಮ ವಾಚಿನ ರಿಪೇರಿ, ಬಫ್ಫಿಂಗ್

ಒಂದೆಡೆ ಕೈ ತೋರಿಸಿ ಇನ್ನೊಂದೆಡೆ ಓಡಿಸುವ ಸೈಕಲಿಗರು

ಸುಂಡಿಲಿಯಂತೆ ಮಧ್ಯೆ ತೂರಿ ಬರುವ ಮುಗ್ಗಾಲಿಗಳು

ಎಲ್ಲೆಂದರಲಿ ನಿಂತಿರುವ ಖಾಸಗೀ ಬಸ್ಸುಗಳು

 

ರಸ್ತೆ ಬದಿಯಲೇ ಅಡುಗೆ ಮಾಡುತಿರುವ

ಮಸಾಲೆ ಅರೆಯುತಿರುವ ಅತ್ತೆ-ಸೊಸೆ, ಅಮ್ಮ-ಮಗಳು

ಚಡ್ಡಿಯಿರದೆ ಸದಾ ಆರೋಗ್ಯದ ಮಕ್ಕಳು ನೂರಾರು

ಕುಕ್ಕರಗಾಲಿನಲಿ ಕೂತು ಬೀಡಿ ಎಳೆಯುತಿಹ ಯಜಮಾನರು

ಕಣ್‍ಸನ್ನೆಯಲೇ ಚಕ್ಕಂದ ಆಡುವ ಯುವಕ-ಯುವತಿಯರು

 

ಬನ್ನಿ ಅಣ್ಣೋರೇ ಅಕ್ಕೋರೇ ನೋಡಿ ಬನ್ನಿ ನಮ್ಮ ಕೈಲಾಸಪಾಳ್ಯ

ಹುಡುಕಾಟ
 
ಕೈಲಾಸಪಾಳ್ಯದ ಅಂದ್ರೆ ನಿಮಗೆ ಗೊತ್ತೇ ಇರತ್ತೆ. ಗೊತ್ತಿಲ್ದೇ ಇರತ್ಯೇ! ಅದೂ ಅಷ್ಟು ಪ್ರಸಿದ್ಧವಾದ ಜಾಗ ಮತ್ತು ಅಲ್ಲಿಂದ ಆನಂದ ಅನುಭವಿಸದೇ ಇರುವವರು ಅದಾರು ಈ ಬೆಂಗಳೂರಿನಲ್ಲಿ ಇದ್ದಾರೆ. ವಿಶ್ವೇಶ್ವರಪುರದಿಂದ ಪ್ರಾರಂಭವಾಗುವುದು ಆ ಮಸಾಲೆ ಮಾಂಸದ ವಾಸನೆ ಆ ಕಡೆಯ ಮಾರುಕಟ್ಟೆತವರೆವಿಗೂ ಮೂಗುಗಳಿಗೆ ಬಡಿವುದು. ಅಲ್ಲಿಯ ಸ್ನಾನದ ಮನೆಗಳು, ಸ್ವಚ್ಛಂದವಾಗಿ ವಿಹರಿಸುವ ಹಂದಿಗಳು, ೨೪ ತಾಸು ಇರುವ ಜನಜಂಗುಳಿ, ಪಿಕ್‌ಪಾಕೆಟ್ ಮಹಾಶಯರ ಸ್ವರ್ಗ, ಪ್ರದೀಪ್ ಚಿತ್ರಮಂದಿರದ ಅಶ್ಲೀಲ ಭಿತ್ತಿಪತ್ರ, ಪುಟ್‌ಪಾತೇ ತಮ್ಮದೆನ್ನುವ ವಾಚ್ ಬಫ್ಫಿಂಗ್ ರಿಪೇರಿಗರು, ಅಲ್ಲೇ ಪಕ್ಕದಲ್ಲಿ ನುಣ್ಣಗೆ ಬೋಳಿಸುವ ಹಜಾಮರು, ಮುಂದೆ ಲೌಡ್ ಸ್ಪೀಕರಿನಲ್ಲಿ ಕೇಳಿಸುವ ಮಸೀದಿಯ ನಮಾಜು, ಘಜನೀ ಮಹಮ್ಮದನನ್ನು ನೆನಪಿಸುವ ಘೌಸಿಯಾ ಹೋಟೆಲ್, ಮಧ್ಯೆ ಮಧ್ಯೆ ಅಲ್ಲಲ್ಲಿ ತಪ್ಪಿಸಿಕೊಂಡು ಬಂದಂತಹ ಹಸು ಎಮ್ಮೆಗಳು, ಎಲ್ಲೆಲ್ಲಿಯೋ ತೂರಿಬರುವ ಸೈಕಲ್ ಸವಾರಿಗಳು, ಎಲ್ಲೆಲ್ಲಿಯೂ ಜಾತ್ರೆಯ ಸಂಭ್ರಮದ ಜನಜಂಗುಳಿ, ಇದರ ಮಧ್ಯೆ ಭುರ್ರೆಂದು ಓಡಿಸುವ ಸುಂಡಿಲಿಯಂತಿರುವ ಮೂರ್ಗಾಲಿಗಳು. ಇದೆಲ್ಲದರ ಮುಂದೆ ರಾಜನಂತೆ ಬರುವ ಖಾಸಗೀ ಬಸ್ಸಿನ ಚಾಲಕ ಕೈಯಲ್ಲಿ ಮೋಟುಬೀಡಿ, ಕುರುಚಲು ಗಡ್ಡ, ಇನ್ನೊಂದು ಕೈಯಲ್ಲಿ ಹಲ್ಲಿನ ಸಂದಿಯಿಂದ ಸಿಕ್ಕಿಹಾಕಿಕೊಂಡ ಅಡಕೆಯ ಚೂರನ್ನು ತೆಗೆಯಲು ಸೇಫ್ಟೀ ಪಿನ್ನು. ಎಲ್ಲೆಂದರಲ್ಲಿ ನಿಂತಿರುವ ಬಸ್ಸುಗಳ ನೆರಳಿನಲ್ಲೇ ಮಲಗಿ, ಕೂತು, ಮಲ ವಿಸರ್ಜಿಸುತ್ತಿರುವ ಮಕ್ಕಳು, ಲೋಕದ ಪರಿವೆಯಿಲ್ಲದೇ ಹರಟೆ ಹೊಡೆಯುತ್ತಿರುವ ಹಿರಿಯರು, ಚಕ್ಕಂದ ಆಡುತ್ತಿರುವ ಯುವಕ ಯುವತಿಯರು, ಅರಚುತ್ತಿರುವ ಬಸ್ ಏಜೆಂಟರು. ಷೋಕೀಲಾಲುಗಳು ಪಾನ್‌ಪರಾಗ್ ಜಗಿದು ಎಲ್ಲೆಂದೆರಲ್ಲಿ ಉಗಿಯುವರು.
 
ಇನ್ನು ಇನ್ನೊಂದು ಕಡೆ ರೋಗಿಯಲ್ಲದವರನ್ನೂ ರೋಗಿಯನ್ನಾಗಿ ಮಾಡಿ ರೋಗ ನಿವಾರಣೆಯೇ ಪರಮ ಧ್ಯೇಯವಾದ ವಿಕ್ಟೋರಿಯಾ ಆಸ್ಪತ್ರೆ, ಅದರೆದುರಿಗಿರುವ ಸರ್ಕಾರೀ ವೈದ್ಯಕೀಯ ಕಾಲೇಜು. ಇನ್ನೊಂದೆಡೆ ಇರುವ ಅವೆನ್ಯೂ ರಸ್ತೆಯ ಬಗ್ಗೆ ಹೇಳೋದೇ ಬೇಕಿಲ್ಲ. ಮಾರುಕಟ್ಟೆಯಿಂದ ಮೆಜೆಸ್ಟಿಕ್‌ಗೆ ಹೋಗಲು ತುಂಬಾ ಹತ್ತಿರದ ಹಾದಿ ಅಂದರೆ ಅದು ಅವೆನ್ಯೂ ರಸ್ತೆಯೇ. ಅಲ್ಲಿ ನೀವೇನಾದರೂ ಒಂದೆಡೆಯಿಂದ ಇನ್ನೊಂದೆಡೆಗೆ ವಾಹನ ಚಾಲನೆ ಮಾಡಿದ್ದೇಯಾದರೆ ನಿಮಗೆ ಉತ್ತಮ ಚಾಲಕನೆಂಬ ಬಿರುದು ಕೊಡಬಹುದು. ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ವಾಹನವನ್ನು ಚಲಿಸುವ ಜಾಣ್ಮೆ ಮತ್ತು ಚಾಕಚಕ್ಯತೆ ನಿಮ್ಮಲ್ಲಿದೆ ಎಂದು ಗುರುತಿಸಬಹುದು.
 
ನಿಮಗೆ ತಿಳಿದ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಬರೆಯುವಿರೆಂದು ನಂಬಿರುವೆ.