ವಿಭಾಗಗಳು
ಲೇಖನಗಳು

ಗೋಕುಲಧಾಮದಲ್ಲಿ ರಾತ್ರಿಯ ಶಿಬಿರ

ಸ್ವಲ್ಪ ಕಾಲದ ಹಿಂದೆ ಬರೆದ ಲೇಖನವನ್ನು – ಈಗ ಇಲ್ಲಿರಿಸುತ್ತಿರುವೆ 

 

ಒಂದನೇಯ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆವಿಗೆ ಪ್ರಾಥಮಿಕ ಶಾಲೆ ಎಂದು ಹೆಸರಿಸುವರು. ಮಕ್ಕಳು ಮೊದಲು ಪ್ರಾಥಮಿಕ ಶಾಲೆಯ ಮೆಟ್ಟಿಲನ್ನು ಹತ್ತುವರು.  ಆಗ ಅವರು ಎಲ್ಲಕ್ಕೂ ಹಿರಿಯರನ್ನು ಅವಲಂಬಿಸುವರು.   ನಂತರ ಹೋಗುವುದೇ ಮಾಧ್ಯಮಿಕ ಶಾಲೆಗೆ.  ಪ್ರಾಥಮಿಕದಿಂದ ಮಾಧ್ಯಮಿಕಕ್ಕೆ ಹೋಗುವ ಸನ್ನಿವೇಶವೊಂದು ಆಯಾಮ, ಎಂದು ತಿಳಿಯಬಹುದು.  ಆಗ ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಸ್ವಾವಲಂಬನೆ ಬರುವುದು.  ಇಂತಹ ಸನ್ನಿವೇಶದಲ್ಲಿ ಮಕ್ಕಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮುಂಬೈನ ಗೋಕುಲಧಾಮ ಶಾಲೆಯವರು ಪ್ರತಿವರ್ಷವೂ ನಾಲ್ಕನೆಯ ತರಗತಿಗೆ ಮಕ್ಕಳಿಗೆ ಒಂದು ರಾತ್ರಿಯ ಶಿಬಿರವನ್ನು ( ನೈಟ್ ಕ್ಯಾಂಪ್ ) ಏರ್ಪಡಿಸುತ್ತಾರೆ.

 

ಈ ಬಾರಿಯ ಶಿಬಿರಕ್ಕೆ ನನ್ನ ಮಗನು ಹೋಗಿದ್ದ.  ಅದರ ಬಗ್ಗೆ ನನ್ನ ಒಂದೆರಡು ಮಾತುಗಳನ್ನು ನಿಮ್ಮ ಮುಂದಿಡುತ್ತಿರುವೆ.

 

ನಾಲ್ಕನೆ ಇಯತ್ತೆಯವರೆಗಿನ ಮಕ್ಕಳಿಗೆ ಮಧ್ಯಾಹ್ನದ ಶಾಲೆ.  ಮಾಧ್ಯಮಿಕ, ಪ್ರೌಢ ಶಾಲೆಗಳು ಬೆಳಗ್ಗೆ ೭ ಘಂಟೆಗೆ ಪ್ರಾರಂಭವಾಗುವುವು.  ಶುಕ್ರವಾರ ರಾತ್ರಿ ಶಿಬಿರ ಇದ್ದುದರಿಂದ ಅಂದು ಶಾಲೆಗೆ ರಜೆ ಘೋಷಿಸಿದ್ದರು.  ಈ ಮಕ್ಕಳಿಗೆ ಹೊದ್ದಿಕೆ ಮತ್ತು ಕುಡಿಯುವ ನೀರಿನ ಬಾಟಲು ಮಾತ್ರ ತರಬೇಕೆಂದು ತಿಳಿಸಿದ್ದರು.  ರಾತ್ರಿಯ ಉಡುಪಿನಲ್ಲಿ ಬರಬೇಕೆಂದೂ ತಿಳಿಸಿದ್ದರು.  ಅಂದಿನ ದಿನವೆಲ್ಲಾ ನನ್ನ ಮಗನಿಗೆ ಶಿಬಿರದ್ದೇ ಧ್ಯಾನ.  ಊಟ ತಿಂಡಿಯನ್ನೂ ಸರಿಯಾಗಿ ತಿಂದಿರಲಿಲ್ಲ. ಶಿಬಿರದ್ದೇ ಯೋಚನೆ.  ಅಲ್ಲಿ ಯಾರ್‍ಯಾರ ಜೊತೆ ಆಡಬೇಕು, ಯಾರು ಪಕ್ಕದಲ್ಲಿ ಮಲಗಬೇಕು, ಯಾರೊಂದಿಗೆ ದ್ವೇಷವಿದ್ದು ರಾತ್ರಿ ಹೊಡೆದಾಡಬಹುದು (ನಮ್ಮವನು ಸ್ವಲ್ಪ ಧಡೂತಿ ಹುಡುಗ), ಇವುಗಳದ್ದೇ ಆಲೋಚನೆ.

 

ಸಂಜೆ ೫.೩೦ಕ್ಕೆ ಅವರು ಶಾಲೆಗೆ ಹೋಗಬೇಕಿತ್ತು.  ನಮ್ಮ ಕ್ವಾರ್ಟರ್ಸಿನಿಂದ ಕಲ್ಲೆಸೆತದ ದೂರದಲ್ಲೇ ಶಾಲೆ.  ಇವನು ೪.೩೦ಕ್ಕೇ ಅವರಮ್ಮನಿಗೆ ಶಾಲೆಗೆ ಕರೆದೊಯ್ಯಿ ಎಂದು ದುಂಬಾಲು ಬಿದ್ದಿದ್ದ.  ಯಾವ ಮಕ್ಕಳೂ ಬಂದಿರುವುದಿಲ್ಲವೆಂದೂ ಈಗಲೇ ಒಳಗೆ ಬಿಡುವುದಿಲ್ಲವೆಂದು ಹೇಳಿದರೂ ಮಾತನ್ನು ಕೇಳಿರಲಿಲ್ಲ.  ಕಾಟ ತಡೆಯಲಾರದೇ ಕಡೆಗೆ ೫ ಘಂಟೆಗೆ ಅವನನ್ನು ಶಾಲೆಗೆ ಕರೆದೊಯ್ಯಲೇಬೇಕಾಯ್ತು.  ಒಳಗೆ ಬಿಡದ ಕಾರಣ ೧೫ ನಿಮಿಷಗಳ ಕಾಲ ಗೇಟಿನ ಮುಂಭಾಗದಲ್ಲೇ ನಿಲ್ಲಬೇಕಾಯ್ತು.  ಇವನಂತೆಯೇ ಇನ್ನೂ ಬಹಳ ಮಕ್ಕಳು ಬಂದಿದ್ದರು. 

 schoolcamp.jpg

ಅಂದು ಶಾಲೆಯಲ್ಲಿ ಮಕ್ಕಳನ್ನು ನೋಡುವುದೇ ಒಂದು ಚಂದ.  ಪ್ರತಿ ದಿನವೂ ಒಂದೇ ತರಹದ ಸಮವಸ್ತ್ರ ಧರಿಸಿರುತ್ತಿದ್ದ ಚಿಣ್ಣರು ಅಂದು ಬಣ್ಣ ಬಣ್ಣದ ತರಹಾವರಿ ಬಟ್ಟೆಗಳನ್ನು ಹಾಕಿ ಕೂಗಿ ಚೀರಾಡುತ್ತಿದ್ದರು. ಮಾಸ್ತರರು ಅಂದೇನೂ ನಿರ್ಬಂಧ ಹಾಕುವುದಿಲ್ಲವೆಂದು ತಿಳಿಸಿದ್ದರಿಂದಲೋ ಏನೋ ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕ ಅನುಭವ.  ಮನೆಗೆ ವಾಪಸ್ಸು ಬಂದ ನನ್ನ ಪತ್ನಿಗೆ ಅವನದ್ದೇ ಚಿಂತೆ.  ಅವನು ಏನಾದರೋ ತಿಂದನೋ ಇಲ್ಲವೋ, ಯಾರ ಜೊತೆ ಹೊಡೆದಾಡಿ ಮಾಸ್ತರರಿಂದ ಏಟು ತಿಂದಿರಬಹುದು, ಎಲ್ಲಿಯಾದರೂ ಬಿದ್ದು ಅಳುತ್ತಿದ್ದಾನೋ – ಹೀಗೆ ಹತ್ತು ಹಲವಾರು ಚಿಂತೆಗಳು ಅವಳಿಗೆ. 

 

ಸಂಜೆ ೭.೩೦ಕ್ಕೆ ನಾನು ಮನೆಗೆ ಬರುತ್ತಿದ್ದ ಹಾಗೆಯೇ ಶಾಲೆಗೆ ಹೋಗಿ ಅವನ ಯೋಗಕ್ಷೇಮ ವಿಚಾರಿಸುವ ಡ್ಯೂಟಿ ಬಿದ್ದಿತು.  ನಾನು ಶಾಲೆಯ ಗೇಟಿನ ಬಳಿಗೆ ಹೋಗಲು ಸೆಕ್ಯುರಿಟಿಯವರು ತಡೆದರು.  ಶಾಲೆಯ ಬದಿಯಲ್ಲಿ ದೊಡ್ಡದಾದ ಆಟದ ಮೈದಾನ.  ಅದರ ಹಿಂದೆ ಈಜುಕೊಳ.  ಮಕ್ಕಳೆಲ್ಲರೂ ಅಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಕೆಲವರು ಕ್ರಿಕೆಟ್ ಆಡುತ್ತಿದ್ದರೆ, ಇನ್ನೂ ಕೆಲವರು ಬುಗುರಿ ಆಡುತ್ತಿದ್ದಾರೆ (ನನ್ನ ಮಗನಿಗೆ ಬೇಬ್ಲೇಡ್ ಇಷ್ಟ).  ಮತ್ತೂ ಕೆಲವರು ಜೂಟಾಟ. ಆ ದೃಶ್ಯ ನೋಡುತ್ತಿದ್ದರೆ ನಾನೂ ಚಿಕ್ಕವನಾಗಿ ಅವರೊಂದಿಗೆ ಆಟವಾಡಬೇಕು ಎನ್ನಿಸುತ್ತಿತ್ತು. ಗೇಟಿನಿಂದಲೇ ನನ್ನ ಮಗನನ್ನು ಕರೆಯಲು ಪ್ರಯತ್ನಿಸಿದೆ.  ಸ್ಕೂಲಿನ ಎಲ್ಲ ಮಾಸ್ತರು ಮಾಸ್ತರಿಣಿಯರೂ ಅಲ್ಲಿ ಭದ್ರ ಕೋಟೆಯಂತೆ ನಿಂತಿದ್ದರು.  ಗೇಟಿನಿಂದಲೇ ನನ್ನ ಮಗನನ್ನು ಕರೆದೆ.  ನನ್ನ ಮಗನೊಬ್ಬನನ್ನು ಬಿಟ್ಟು ಮಿಕ್ಕವರೆಲ್ಲರೂ ನನ್ನೆಡೆಗೆ ನೋಡಿದರು.  ಮಗನ ಒಬ್ಬ ಸ್ನೇಹಿತ ನಾನು ಬಂದಿರುವುದರ ಬಗ್ಗೆ ಅವನಿಗೆ ತಿಳಿಸಿದ.  ಇವನು ನೋಡಲು ವ್ಯವಧಾನವೇ ಇಲ್ಲ.  ಅವನ ತುಂಟಾಟಗಳಿಗೆ ನಾನಿನ್ನೆಲ್ಲಿ ಕಡಿವಾಣ ಹಾಕುವೆನೋ ಎಂದು ನನ್ನನ್ನು ನಿರ್ಲಕ್ಷಿಸಿದ್ದ.  ಆದರೂ ಬಿಡದೇ ಅಲ್ಲಿಯೇ ಇದ್ದ ಒಬ್ಬ ಮಾಸ್ತರಿಣಿಗೆ ಮಗನಿಗೆ ಏನೋ ಹೇಳಬೇಕೆಂದು ತಿಳಿಸಿದಾಗ ಅವರು ಅವನನ್ನು ಗೇಟಿನ ಬಳಿಗೆ ಕಳುಹಿಸಿದ್ದರು.  ಬರುವಾಗಲೇ ದುರುಗುಟ್ಟಿಕೊಂಡು ಬಂದಿದ್ದ ಮಗರಾಯ.  ಊಟಕ್ಕೆ ಏನೇನು ಕೊಡ್ತಾರೆ ಅಂತ ಅಷ್ಟೇ ಕೇಳಿ ಅವನನ್ನು ವಾಪಸ್ಸು ಕಳುಹಿಸಿದ್ದೆ.  ಅವನನ್ನು ಮಾತನಾಡಿಸಲು ನನಗಿದ್ದ ಉದ್ದೇಶವಿಷ್ಟೇ, ಮರುದಿನ ಮನೆಗೆ ಬಂದ ನಂತರ ನನ್ನ ಪತ್ನಿಗೆ ಅವನು ಅಪ್ಪ ಬಂದಿದ್ರು, ಮಾತನಾಡಿಸಿದ್ರು ಅಂತ ಹೇಳಿದ್ರೆ ಸಾಕು.  ಅಂದು ರಾತ್ರಿಯೆಲ್ಲ ಮನೆಯಲ್ಲಿ ನನ್ನ ಪತ್ನಿ ಮತ್ತು ಮಗಳಿಗೆ ನಿದ್ರೆಯೇ ಇಲ್ಲ.  ನನ್ನ ಮಗನದ್ದೇ ಚಿಂತೆ.  ನಾನೊಬ್ಬನೇ ನಿಶ್ಚಿಂತೆಯಾಗಿ ನಿದ್ರಿಸಿದವನು.  ಹುಟ್ಟಿಸಿದಾತ ಕಾಪಾಡುವುದಿಲ್ಲವೇ ಎಂಬುದೇ ನನ್ನ ಪಾಲಿಸಿ.

 

 

ಸಂಜೆ ೫.೩೦ ರಿಂದ ೭ ರವರೆವಿಗೆ ಅವರಿಗೇ ಆಟ ಆಡಲು ಬಿಟ್ಟಿದ್ದರಂತೆ. ನಂತರ ಬಿಸ್ಕಿಟ್ ಮತ್ತು ಹಣ್ಣಿನ ರಸ ಕೊಟ್ಟು ಮೈದಾನದಲ್ಲಿ ಆಟ ಆಡಿಸಿ ಹಾಡುಗಳನ್ನು ಹಾಡಿಸಿದರಂತೆ.  ನಂತರ ಪುಷ್ಕಳವಾದ ಉತ್ತರ ಭಾರತೀಯ ಊಟ ಕೊಟ್ಟಿದ್ದಾರೆ.  ರಾತ್ರಿ ೯.೩೦ ಕ್ಕೆ ಮೈದಾನದ ಮಧ್ಯ ಭಾಗದಲ್ಲಿ ದೊಡ್ಡ ಬೆಂಕಿ ಹಾಕಿದ್ದಾರೆ – ಇದನ್ನು ಬಾನ್ ಫೈರ್ ಎನ್ನುವರಂತೆ.  ಕಾಮನ ದಹನ ಮಾಡಿದಂತೆ.  ಆ ನಂತರ ೧೦ ಘಂಟೆಗೆ ಶಾಲೆಯ ಹಿಂದಿನ ರಸ್ತೆಯ ಕಡೆಯಿಂದ ಒಂದು ದೊಡ್ಡ ಸುತ್ತು ಹೋಗಿ ಬರಲು ತಿಳಿಸಿದರಂತೆ.  ಮಾಸ್ತರರು, ಮಾಸ್ತರಿಣಿಯರು ಇವರ ಕಣ್ಣಿಗೆ ಕಾಣದಂತಿದ್ದು ರಾತ್ರಿಯಲ್ಲಿ ಹೆದರದೇ ಓಡಾಡಲು ಅಭ್ಯಾಸವಾಗುವಂತೆ ಮಾಡಿದ್ದಾರೆ.  ರಾತ್ರಿ ೧೧.೩೦ಕ್ಕೆ ಮಲಗಲು ಕಳುಹಿಸಿದ್ದಾರೆ. ಮಲಗಲು ಅನುಕೂಲವಾಗುವಂತೆ ತರಗತಿಗಳಲ್ಲಿ ಹಾಸುಗೆಗಳನ್ನು ಹಾಸಿ ಹೊದ್ದಿಕೆ ಸಿದ್ಧ ಪಡಿಸಿದ್ದರು.  ರಾತ್ರಿಯಲ್ಲಿ ಇವರು ಎದ್ದು ಗಲಾಟೆ ಮಾಡಿಯಾರೆಂದು ಮಾಸ್ತರು, ಮಾಸ್ತರಿಣಿಯರ ಕಾವಲು. ಮತ್ತೆ ಬೆಳಗ್ಗೆ ೫ಕ್ಕೆ ವಿಶಲ್ ಊದಿ ಎಲ್ಲರನ್ನೂ ಎಬ್ಬಿಸಿ ಬೆಳಗಿನ ಓಟದ ಅಭ್ಯಾಸ ಮಾಡಿಸಿದ್ದಾರೆ. 

ಆರು ಘಂಟೆಗೆ ಬಂದು ಮಕ್ಕಳನ್ನು ಕರೆದೊಯ್ಯಲು ತಿಳಿಸಿದ್ದರು.  ನಾನು ೫.೪೫ಕ್ಕೇ ಅಲ್ಲಿಗೆ ಹೋಗಿದ್ದೆ.  ನೋಡಿದರೆ ಮಕ್ಕಳೆಲ್ಲಾ ಆಗಲೇ ತಯಾರಾಗಿ ಶಾಲೆಯ ಅಂಗಳದಲ್ಲಿ ಕುಳಿತಿದ್ದಾರೆ.  ನನ್ನ ಮಗ ನನ್ನನ್ನು ನೋಡಿದಂತೆಯೇ ಏನೋ ವಿಜಯ ಸಾಧಿಸಿದವನ ಹಾಗೆ ನಗೆ ಬೀರಿದ.  ಮಾಸ್ತರರು ನನ್ನನ್ನು ನೋಡಿ ಅವನಿಗೆ ನನ್ನೊಡನೆ ಹೋಗಲು ತಿಳಿಸಿದರು. 

 

ನನ್ನ ಹತ್ತಿರ ಬರುತ್ತಿದ್ದ ಹಾಗೆ ನನ್ನ ಮಗ ಮೊದಲು ಹೇಳಿದ್ದು, ಇನ್ಮೇಲೆ ನನಗೆ ನಾನೇ ಸ್ಕೂಲಿಗೆ ಬರ್ತೀನಿ, ಯಾರೂ ನನ್ಜೊತೆ ಬರ್ಬೇಕಾಗಿಲ್ಲ, ನಾನೀಗ ದೊಡ್ಡವನಾಗಿದ್ದೀನಿ, ರಾತ್ರಿ ಕೂಡಾ ನಾನೊಬ್ನೇ ಎಲ್ಲೂ ಹೋಗಬಹುದು.  ಅಷ್ಟು ಧೈರ್ಯ ಬಂದಿದೆ. ಇಷ್ಟು ಹೇಳಿದ ಭೂಪ ಮನೆಗೆ ಬಂದು ಅವನಮ್ಮನ ಮುಖ ನೋಡಿದ ಕೂಡಲೇ ಅದೆಲ್ಲಿಯದೋ ದು:ಖ ಉಮ್ಮಳಿಸಿ ಬಂದು ಗೊಳೋ ಎಂದು ಅಳೋದೇ!  ಎಷ್ಟೇ ಆಗಲಿ, ಮಕ್ಕಳ ಮನಸ್ಸೇ ಹಾಗೆ.

 

ಇಂತಹ ತರಬೇತಿಗಳನ್ನೇ ಅಲ್ಲವೇ ಮಕ್ಕಳಿಗೆ ನಾವು ಕೊಡಬೇಕಿರುವುದು.  ಜೀವನದ ಪಾಠವ ಅನುಭವಸಿದ್ಧವಾಗಿ ತಿಳಿಸಿಕೊಟ್ಟರೆ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವ ಶಕ್ತಿ ಬಂದೀತು.

 

ಶಾಲೆಯವರ ಇಂತಹ ಕಾರ್ಯಗಳು ಪ್ರಶಂಸನೀಯವಲ್ಲದೇ ಮತ್ತಿನ್ನೇನು?  ಇಂತಹ ಶಾಲೆಗಳು ಇನ್ನೂ ಹೆಚ್ಚು ಹೆಚ್ಚು ಬರಬೇಕು.  ಈ ಶಾಲೆಯ ಇನ್ನೊಂದು ವೈಶಿಷ್ಟ್ಯತೆ ಎಂದರೆ ಈಜು, ಕರಾಟೆ, ಸಂಗೀತ, ಆಟಗಳು ಇತ್ಯಾದಿಗಳಲ್ಲಿ ಒಂದನ್ನು ಮಕ್ಕಳು ಅವಶ್ಯಕವಾಗಿ ಕಲಿಯಬೇಕು.  ನನ್ನ ಮಗನನ್ನು ಈಜುವಿಕೆಗೆ ಕಳುಹಿಸುತ್ತಿರುವೆ.  ನೀರಿನಲ್ಲಿ ಈಜಲು ಕಲಿತವನು ಜೀವನದಲ್ಲೂ ಈಜಬಹುದೆಂಬ ಅನಿಸಿಕೆಯಲ್ಲಿ.