ವಿಭಾಗಗಳು
ಲೇಖನಗಳು

ಬ್ಯಾಂಕಿನಲಿ ರಜತೋತ್ಸವ

ಬ್ಯಾಂಕಿನಲ್ಲಿ ರಜತೋತ್ಸವ

 

ಮೊದಲು ಶಾಲೆಗೆ ಹೋದ ನೆನಪು, ಕಾಲೇಜಿಗೆ ಹೋದ ನೆನಪು, ಕೆಲಸಕ್ಕೆ ಹೋದ ನೆನಪು, ವಾಸ್ತವ್ಯಕೆ ಹೊಸ ಊರು ಹೊಸ ಭಾಷಿಗರ, ನಡುವಿನ ಹೊಂದಾಣಿಕೆಯ ನೆನಪು, ಹೀಗೆ ಒಂದರ ಹಿಂದೊಂದರಂತೆ ಮೊದಲ ನೆನಪುಗಳ ಸರಮಾಲೆ ಸಾಗುತ್ತಲೇ ಇರುತ್ತದೆ.   ತಮಾಷೆಯೆಂದರೆ ಹೊಂದಿಕೊಂಡೆ ಎಂದುಕೊಳ್ಳುವ ಸಮಯಕ್ಕೆ ಸರಿಯಾಗಿ ಕಾಲವನ್ನು ಮತ್ತೆ ಹೊಸ ಸ್ಥಿತಿಯ ಬದಲಾವಣೆಗೆ ಸರಿಪಡಿಸಿಕೊಳ್ಳಬೇಕಾಗುವುದು. 

 

 bangalore.jpg

ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಸೇರಿ ೨೫ ವರ್ಷಗಳು ಕಳೆದುವು.  ೨೬ನೆಯ ವರ್ಷಕ್ಕೆ ಕಾಲಿಟ್ಟ ಸಮಯದಲ್ಲಿ, ಈ ವರ್ಷ ಪೂರ್ತಿ ರಜತೋತ್ಸವ ಆಚರಿಸುವ ಅಭಿಲಾಷೆ ನನಗಿದೆ.  ಅಂದರೆ ೨೫ ವರ್ಷಗಳ ಹಳೆಯ ನೆನಪುಗಳನ್ನು ಒಂದೆಡೆ ಬರೆದಿಡುವ ಆಸೆ ಆಗಿದೆ.  ಅದರ ಪ್ರಯತ್ನವೇ ಈ ಲೇಖನ.

 

ಬ್ಯಾಂಕು ಸೇರಿದ್ದು ೧೯೮೨ರ ಜನವರಿ ೨೭ರಂದು. ಇದಕ್ಕೆ ಮುಂಚೆ ನವಂಬರ್ ತಿಂಗಳಲ್ಲಿ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಆಡಿಟರ್ ಆಗಿ ಕೆಲಸಕ್ಕೆ ಸೇರಿದ್ದೆ.  ಐ.ಸಿ.ಡಬ್ಲ್ಯು.ಎ. ಪರೀಕ್ಷೆ ಇದ್ದುದರಿಂದ ಆಡಿಟ್‍ಗಾಗಿ ಹೋಗಿರಲಿಲ್ಲ. ಆಗಲೇ ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕಿನಿಂದ ಮೆಡಿಕಲ್ ಎಕ್ಸಾಮಿನೇಷನ್ನಿಗಾಗಿ ಪತ್ರ ಬಂದಿತ್ತು.  ಆಗ ಬ್ಯಾಂಕಿನ ವೈದ್ಯರ ಬಳಿ ಹೋಗಿದ್ದಾಗ ತಿಳಿದ ವಿಷಯವೆಂದರೆ ಸದ್ಯದಲ್ಲೇ ಕೆಲಸದ ಆರ್ಡರ್ ಬರಲಿದೆ – ಸೇರಲು ತಯಾರಿರಬೇಕು ಎಂದು.  ಆಡಿಟರ್ ಜನರಲ್ ಆಫೀಸಿನಲ್ಲಿ ಮೊದಲ ಸಂಬಳ ಬಂದದ್ದು ಡಿಸೆಂಬರ್ ೩೧ರಂದು.  ಆಗ ಸಂಬಳ ತೆಗೆದುಕೊಂಡರೆ ಮುಂದೆ ಹಿಂದಿರುಗಿಸಬೇಕು ಎಂಬುದು ತಿಳಿದಿರಲ್ಲಿಲ್ಲ.  (ಕೆಲಸದಲ್ಲಿ ಖಾಯಂ ಆಗುವವರೆವಿಗೆ ರಿಸೈನ್ ಮಾಡುವಂತ್ತಿದ್ದರೆ, ೩ ತಿಂಗಳ ಗಡುವು ನೀಡಬೇಕು ಇಲ್ಲದಿದ್ದರೆ ೩ ತಿಂಗಳ ಸಂಬಳವನ್ನು ಕಟ್ಟಬೇಕು). 

 

ಎಂದು ಕೆಲಸಕ್ಕೆ ಆರ್ಡರ್ ಬರಬಹುದು ಎಂಬುದರ ಬಗ್ಗೆ ಬ್ಯಾಂಕಿಗೆ ಹೋಗಿ ಕೇಳಲೂ ಹೊಳೆದಿರಲಿಲ್ಲ.  ೨೩ನೆಯ ತಾರೀಖು, ಶನಿವಾರ.  ಅಂದು ಬೆಳಗ್ಗೆ ೯ಕ್ಕೆ ಆಫೀಸಿಗೆ ಹೊರಟಿದ್ದೆ.  ಹೊರಡುವ ಹೊತ್ತಿಗೆ ನನ್ನ ಸ್ನೇಹಿತ ರಾಘವೇಂದ್ರ ಸಿಕ್ಕಿ, ಇನ್ನೊಬ್ಬ ಸ್ನೇಹಿತ ಪಾಂಡುರಂಗನಿಗೆ ಆರ್ಡರ್ ಬಂದಿದೆಯೆಂದೂ, ನಮ್ಮಿಬ್ಬರಿಗೂ ಒಂದೇ ದಿನ ಮೆಡಿಕಲ್ ಎಕ್ಸಾಮಿನೇಷನ್ ಆಗಿದ್ದುದರಿಂದ ನನಗೂ ಆರ್ಡರ್ ಬರಬಹುದೆಂದೂ ತಿಳಿಸಿದ.  ತಕ್ಷಣ ಹತ್ತಿರದಲ್ಲೇ ಇದ್ದ ಗವಿಪುರಂ ಗುಟ್ಟಹಳ್ಳಿ ಪೋಸ್ಟ್ ಆಫೀಸಿಗೆ ಹೋಗಿ, ನನಗೆ ಯಾವುದಾದರೂ ರಿಜಿಸ್ಟರ್ ಪೋಸ್ಟ್ ಬಂದಿದೆಯಾ ಎಂದು ಕೇಳಿದಾಗ, ನಮ್ಮ ಏರಿಯಾಗೆ ಬರುವ ಪೋಸ್ಟ್‌ಮನ್ ಬ್ಯಾಂಕಿನಿಂದ ಬಂದಿದ್ದ ಆರ್ಡರ್ ಕೊಟ್ಟಿದ್ದ.  ಅದರ ಪ್ರಕಾರ ೨೫ರಂದು ಬ್ಯಾಂಕಿಗೆ ಹೋಗಿ ಸಂಬಂಧಪಟ್ಟ ಕಾಗದಗಳಿಗೆ ಸಹಿ ಹಾಕಿದ ನಂತರ ೨೭ರಂದು ಟ್ರೈನಿಂಗ್ ಪ್ರಾರಂಭವೆಂದೂ ಅಂದು ಬೆಳಗ್ಗೆ ೯ ಘಂಟೆಗೇ ಬರಬೇಕೆಂದೂ ತಿಳಿಸಿದ್ದರು. ಅಂದು ಶನಿವಾರ.  ಮಾರನೆಯ ದಿನ ರಜೆಯ ದಿನ.  ನಂತರದ ಸೋಮವಾರ ಬ್ಯಾಂಕಿಗೆ ಹೋಗಿ ಕೆಲಸಕ್ಕೆ ಸೇರುವ ಮುಂಚಿನ ಪೂರ್ವಕ್ರಿಯೆಗಳೆಲ್ಲವನ್ನೂ ಮುಗಿಸಬೇಕಿತ್ತು.  ನೇರವಾಗಿ ಆಫೀಸಿಗೆ ಹೋಗಿ ಮೊದಲು ಮಾಡಿದ ಕೆಲಸವೆಂದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟದ್ದು.  ಮೊದಲ ಸಂಬಳವನ್ನು ವಾಪಸ್ಸು ಕಟ್ಟಿ ಮಿಕ್ಕ ಎಲ್ಲ ಕಡೆಗಳಿಂದ ಅಂದರೆ ಲೈಬ್ರರಿ, ರಿಕ್ರಿಯೇಷನ್ ಕ್ಲಬ್ ಇತ್ಯಾದಿಗಳಿಂದ ನೋ ಡ್ಯೂ ಸರ್ಟಿಫಿಕೇಟ್ ತೆಗೆದುಕೊಂಡು ಅಡ್ಮಿನಿಸ್ಟ್ರೇಷನ್ನಿನವರಿಗೆ ಕೊಟ್ಟದ್ದು.  ಮಧ್ಯಾಹ್ನ ಮೂರು ಘಂಟೆಗೆ ಎಲ್ಲ ಕೆಲಸಗಳೂ ಮುಗಿಯಿತೆನ್ನುವ ಹೊತ್ತಿಗೆ ಸೀನಿಯರ್ ಅಕೌಂಟ್ಸ್ ಆಫೀಸರ್ ನನ್ನನ್ನು ತಮ್ಮ ಕ್ಯಾಬಿನ್ನಿಗೆ ಕರೆಸಿದರು.  ನಿವೃತ್ತಿಗೆ ಹತ್ತಿರದ ವಯಸ್ಸಿನ ಗೌರವ ಮೂಡಿಸುವಂತಹ ವ್ಯಕ್ತಿತ್ವ ಅವರದ್ದು.  ಅವರು ಮೊದಲು ಕೇಳಿದ ಪ್ರಶ್ನೆ. 

ಯಾಕಪ್ಪಾ ಮರಿ ಕೆಲಸಕ್ಕೆ ಸೇರಿ ಇನ್ನೂ ಎರಡು ತಿಂಗಳಾಗಿಲ್ಲ,  ಆಗಲೇ ರಾಜೀನಾಮೆ ಕೊಡ್ತಿದ್ದೀಯೆ.  ಎಲ್ಲಾದರೂ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತಾ?’

ಇಲ್ಲ ಸಾರ್, ಹಾಗೇನಿಲ್ಲ.  ಮನೆ ಕಡೆ ಸ್ವಲ್ಪ ತಾಪತ್ರಯವಿದೆ, ಜಮೀನು ನೋಡಿಕೊಳ್ಳಬೇಕು – ಅಂದಿದ್ದೆ (ಹೀಗೇ ಹೇಳಲು ನನ್ನ ಹಿರಿಯ ಸ್ನೇಹಿತರು ಹೇಳಿದ್ದರು.  ಇಲ್ಲದಿದ್ದರೆ ಸುಲಭವಾಗಿ ರಿಲೀವ್ ಮಾಡುವುದಿಲ್ಲವೆಂದೂ – ಹೀಗೇ ಹೇಳಿದರೆ ಮಾತ್ರವೇ ಅಂದೇ ಕೆಲಸದಿಂದ ಮುಕ್ತಿ ಸಿಗುವುದು, ಎಂದು ತಿಳಿಸಿದ್ದರು.  ಅದಕ್ಕೇ ನಾನು ಹಾಗೆ ಹೇಳಿದ್ದು).

ಮುಖ ನೋಡಿ ನನ್ನನ್ನು ಪೂರ್ಣವಾಗಿ ಅಳೆದಿದ್ದ ಅವರು, ‘ಯಾಕೋ ಮರಿ ಸುಳ್ಳು ಹೇಳ್ತೀಯೆ?  ಬಿ.ಕಾಂ.ನಲ್ಲಿ ಫಸ್ಟ್ ಕ್ಲಾಸ್ ಬರುವುದು ಕಷ್ಟ.  ಅದರಲ್ಲೂ ಸರ್ಕಾರೀ ನೌಕರಿ ಸಿಗೋದು ಇನ್ನೂ ಕಷ್ಟ.  ಅದನ್ನು ಕಳೆದುಕೊಳ್ಳುವುದು

ಬಲು ಸುಲಭ.  ನನ್ನ ಹತ್ರ ನೀನೇನನ್ನೂ ಮರೆಮಾಚಬೇಡ.  ಇಲ್ಲಿಯದಕ್ಕಿಂತ ಒಳ್ಳೆಯ ಕೆಲಸ ಸಿಕ್ಕರೆ ಬಿಟ್ಟು ಹೋಗುವುದೇ ಒಳ್ಳೆಯದು.  ಈಗ ಬ್ಯಾಂಕಿನಲ್ಲಿ ಮೊದಲ ಸಂಬಳ ಎಷ್ಟು ಬರುವುದೋ ಅಷ್ಟನ್ನು ನಾನು ೩೦ ವರ್ಷಗಳ ಸರ್ವೀಸ್ ಮಾಡಿ ಪಡೆಯುತ್ತಿರುವೆ.  ನಮ್ಮಲ್ಲಿ ಬಡ್ತಿಯ ಅವಕಾಶವೂ ಬಹಳ ಕಡಿಮೆ.  ಸುಳ್ಳು ಹೇಳಬೇಡ.  ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದ್ದರೆ ಎಲ್ಲಿ ಅಂತ ಹೇಳು ಅಷ್ಟೆ.  ನಾನೇನೂ ನಿನ್ನ ಹಾದಿಗೆ ಅಡ್ಡ ಬರೋಲ್ಲ.  ಇನ್ನೂ ನಿನಗೆ ಒಳ್ಳೆಯದಾಗಲೆಂದು ಹಾರೈಸುವೆಎಂದಿದ್ದರು. 

ಮೃದು ಮಾತಿನಲ್ಲಿ ಅವರಾಡಿದ ಮಾತುಗಳನ್ನು ಕೇಳಿ ನನಗೆ ಅಳುವೇ ಬಂದಂತಾಗಿತ್ತು.  ನಮ್ಮ ಮನೆಯಲ್ಲೂ ಯಾರೂ ಹೀಗೆ ಹೇಳಿರಲಿಲ್ಲ.  ತಕ್ಷಣ ವಿಷಯವನ್ನೆಲ್ಲಾ ಅರುಹಿದೆ.  ಅವರು ತಕ್ಷಣ ಅಲ್ಲಿಯೇ ಇದ್ದ ರಿಲೀವಿಂಗ್ ಆರ್ಡರ್ ಗೆ ಸಹಿ ಹಾಕಿ, ಒಳ್ಳೆಯದಾಗಲೆಂದು ಹಾರೈಸಿದ್ದರು.  ನನಗೆ ಅದೇನನ್ನಿಸಿತೋ ಏನೋ, ಅವರಿಗೆ ಸಾಷ್ಟಾಂಗ ನಮಸ್ಕರಿಸಿದ್ದೆ.  ಆ ಸಮಯದಲ್ಲಿ ಅವರು ನನ್ನ ತಂದೆಯಂತೆಯೇ ಕಂಡಿದ್ದರು. 

 

ಮುಂದೆ ಸೋಮವಾರದ ದಿನ, ರಿಸರ್ವ್ ಬ್ಯಾಂಕಿಗೆ ಮೊದಲ ಹೆಜ್ಜೆ ಇಟ್ಟಿದ್ದೆ.  ಒಳಗೆ ಹೋಗಲು ಬಲು ಭಯ.  ರಿಸರ್ವ್ ಪದ ಕೇಳಿಯೇ ರೋಮಾಂಚನವಾಗಿತ್ತು. ಮೊದಲು ನಾನು ಕಂಡದ್ದು ಕ್ಯಾಷ್ ಕೌಂಟರ್ ಗಳನ್ನು. ಅಲ್ಲಿ ಎಲ್ಲ ಕಡೆಯೂ ಬಂದೂಕುಧಾರಿ ಪೊಲೀಸ್ ನಿಂತಿದ್ದರು.  ಸಾರ್ವಜನಿಕರ ದೊಡ್ಡ ದಂಡು ನೋಟುಗಳನ್ನು ಬದಲಿಸಲು, ಚಿಲ್ಲರೆ ಹಣವನ್ನು ತೆಗೆದುಕೊಳ್ಳಲು ಸರತಿಯಲ್ಲಿ ನಿಂತಿದ್ದರು.  ಇನ್ನು ಮೇಲೆ ನಾನು ಅಲ್ಲಿ ಕೆಲಸ ಮಾಡ್ತೀನಿ ಅಂದ್ರೆ ಎಷ್ಟು ಗರ್ವ ಬಂದಿರಬೇಕು.  ಹಾಗೆಯೇ ಅಲ್ಲಿಲ್ಲಿ ಓಡಾಡುತ್ತಿದ್ದ ಸೀನಿಯರ್ ಗಳ ಗುಂಪು, ನನ್ನನ್ನು ನೋಡಿ, ನೋಡ್ರೋ ಯಾವುದೋ ಬಕರಾ ಬಂದಿದೆ, ನಾಳೆಯಿಂದ ಸ್ವಲ್ಪ ದಿನ ಮಜಾ ತಗೋಬಹುದು, ಎಂದಾಗ ಸ್ವಲ್ಪ ಅಳುವೂ ಬಂದಿತ್ತು. 

ಅಡ್ಮಿನಿಸ್ಟ್ರೇಷನ್ ಸೆಕ್ಷನ್ನಿಗೆ ಹೋಗಿ,  ಪತ್ರಗಳಿಗೆಲ್ಲ ಸಹಿ ಹಾಕಿ, ನನ್ನಂತೆಯೇ ಬಂದಿದ್ದ ಇತರರೊಂದಿಗೆ, ಆಫೀಸರ್ ಹೇಳಿದಂತೆ ಪೋಸ್ಟ್ ಆಫೀಸಿನಲ್ಲಿ ಠೇವಣಿ ಹಣ ಜಮೆ ಮಾಡಲು ಹೋಗಿದ್ದೆವು.  ಆಗಲೇ ಪೋಸ್ಟ್ ಆಫೀಸು ಮುಚ್ಚುವ ವೇಳೆ ಆಗಿತ್ತು.  ಎಲ್ಲರಿಂದಲೂ ಹಣ ತೆಗೆದುಕೊಂಡು ಅಕೌಂಟ್ ತೆಗೆಯುವುದು ಕಷ್ಟವಾಗಿದ್ದರೂ, ಅಂದೇ ಆ ಕೆಲಸ ಮುಗಿಸಬೇಕೆಂದು ಬ್ಯಾಂಕಿನವರು ಹೇಳಿದ್ದರಿಂದ ಅಲ್ಲಿಯ ಆಫೀಸರನ್ನು ಅಡ್ಜಸ್ಟ್ ಮಾಡಿಕೊಳ್ಳುವಂತೆ ಕೇಳಿದ್ದೆವು.  ಅಂತೂ ಇಂತೂ ೩.೩೦ರ ವೇಳೆಗೆ ಅಲ್ಲಿಯ ಕೆಲಸ ಮುಗಿದಿತ್ತು.  ಈ ಮಧ್ಯೆ ಶ್ರೀಮತಿ ಧೀಮತಿ ಎನ್ನುವವರ ಹೆಸರನ್ನು ಶ್ರೀಮತಿ ಶ್ರೀಮತಿ ಎಂದು ನೋಂದಾಯಿಸಿಕೊಂಡಿದ್ದರು.  ಅದಕ್ಕೆ ಅವರ ಗಲಾಟೆ – ಪೋಸ್ಟ್ ಆಫೀಸಿನವರಿಗೆ ಅವರ ಹೆಸರು ಗೊತ್ತಾಗಲು ಸುಮಾರು ಸಮಯವೇ ತೆಗೆದುಕೊಂಡಿತ್ತು. 

 

ಈ ಕೆಲಸ ಮುಗಿದ ಕೂಡಲೇ, ಮತ್ತೆ ಬ್ಯಾಂಕಿಗೆ ಓಡಿ ಬಂದಿದ್ದೆವು.  ಪೋಸ್ಟ್ ಆಫೀಸಿನವರು ಕೊಟ್ಟಿದ್ದ ಪಾಸ್ ಬುಕ್ ಅನ್ನು ಬ್ಯಾಂಕಿನ ಸುಪರ್ದಿಯಲ್ಲಿಡಬೇಕಿತ್ತು.  ಮತ್ತು ಇನ್ನೂ ಹಲವಾರು ಫಾರಂ‍ಗಳನ್ನು ತುಂಬಿಸಬೇಕಿತ್ತು.  ಅದೆಲ್ಲಾ ಮುಗಿಯುವ ಹೊತ್ತಿಗೆ ಸಂಜೆಯ ೬.೩೦ ಆಗಿದ್ದಿತು.  ಬೆಳಗ್ಗೆಯಿಂದ ಏನನ್ನೂ ತಿನ್ನಲು ಅವಕಾಶ ಸಿಕ್ಕಿರಲಿಲ್ಲ. 

 

ಟ್ರೈನಿಂಗಿನ ಬಗೆಗಿನ ನೆನಪುಗಳು ಮತ್ತು ಹೆಚ್ಚಿನ ವಿಷಯಗಳನ್ನು ಮುಂದಿನ ಕಂತಿನಲ್ಲಿ ತಿಳಿಸುವೆ.