ಜನವರಿ ೨೭ರಿಂದ ಎರಡು ವಾರಗಳ ಟ್ರೈನಿಂಗ್ ಅನ್ನು ಬೆಂಗಳೂರಿನ ಕಛೇರಿಯಲ್ಲೇ ಕೊಟ್ಟಿದ್ದರು. ಅಲ್ಲಿಯವರೆವಿಗೆ ಟ್ರೈನಿಂಗ್ಗಾಗಿ ಚೆನ್ನೈ ಅಥವಾ ಮುಂಬೈಗಳಿಗೆ ಕಳುಹಿಸುತ್ತಿದರು. ಇದೇ ಮೊದಲ ಬಾರಿಗೆ, ಕಛೇರಿಯ ಮೂರನೆಯ ಮಹಡಿಯಲ್ಲಿರುವ ಒಂದು ದೊಡ್ಡ ಕೊಠಡಿಯಲ್ಲಿ ೧೯೮೨ರ ಮೊದಲ ಬ್ಯಾಚ್ನ ೩೩ ಜನರಿಗೆ ಟ್ರೈನಿಂಗ್. ಆಗ, ೨೦೦ ಜನರ ಸೇರಿಕೆಯಲ್ಲಿ ನಮ್ಮದೇ ಮೊದಲ ಬ್ಯಾಚ್ ಎಂಬ ಹೆಗ್ಗಳಿಕೆ ನಮಗೆ. ಟ್ರೈನಿಂಗ್ ಕೊಡಲೆಂದೇ ಇಬ್ಬರು ಅಧ್ಯಾಪಕ ಆಫೀಸರುಗಳು ಮುಂಬೈನಿಂದ ಬಂದಿದ್ದರು. ಒಬ್ಬರು ಶ್ರೀ ಎಂ.ಕೆ. ಪ್ರಭು ಮತ್ತು ಇನ್ನೊಬ್ಬರು ಕುಮಾರಿ ರಾಜೇಶ್ವರಿ.
ಅಂದು ಬೆಳಗ್ಗೆ ೯ ಘಂಟೆಗೆ ಸರಿಯಾಗಿ ಬ್ಯಾಂಕಿನ ಒಳಗೆ ಠೀವಿಯಿಂದ ಹೋದೆ. ಬಾಗಿಲು ದಾಟುವಾಗ ಸುತ್ತ ಮುತ್ತ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ – ನಾನೊಬ್ಬ ಮಹರಾಜನಂತೆ ಸಾರೋಟಿನಲ್ಲಿ ಬರುತ್ತಿದ್ದೇನೆ ಎನ್ನುವ ಎಲ್ಲಿಲ್ಲದ ಬಿಗುಮಾನ ಬಂದಿತ್ತು. ಮೊದಲನೆಯ ದಿನ ನಮಗೆಲ್ಲ ಒಂದೊಂದು ನೋಟ್ ಪುಸ್ತಕ, ಪೆನ್ನು ಮತ್ತು ಒಂದೆರಡು ಹ್ಯಾಂಡ್ಔಟ್ ಕೊಟ್ಟಿದ್ದರು. ಅಂದು ಮೊದಲ ಕ್ಲಾಸಿನಲ್ಲಿ ಹಿರಿಯ ಅಧಿಕಾರಿಗಳೊಬ್ಬರು ಬಂದು ಎಲ್ಲರನ್ನೂ ಪರಿಚಯ ಮಾಡಿಕೊಂಡು ಹೋಗಿದ್ದರು. ಆಗ ತಿಳಿದು ಬಂದ ವಿಷಯವೆಂದರೆ ನಮ್ಮಲ್ಲಿ ಹೆಚ್ಚಿನವರುಗಳು ರ್ಯಾಂಕ್ ಪಡೆದಿದ್ದವರು ಮತ್ತು ಸ್ನಾತಕೋತ್ತರ ಪದವೀಧರರು. ಎರಡು ಪೀರಿಯಡ್ಗಳಾದ ನಂತರ ಯೂನಿಯನ್ ನಾಯಕರುಗಳು ಬಂದು ತಮ್ಮ ಯೂನಿಯನ್ ಸೇರುವಂತೆ ಅರ್ಜಿಗಳನ್ನು ಕೊಟ್ಟು ಹೋಗಿದ್ದರು.
ಮಧ್ಯಾಹ್ನ ೧ ಘಂಟೆಗೆ ಊಟಕ್ಕೆಂದು ಕ್ಯಾಂಟೀನಿಗೆ ಹೋಗಿದ್ದೆವು. ಒಂದು ತಮಾಷೆಯ ವಿಷಯವೆಂದರೆ ಟ್ರೈನಿಂಗ್ ಮುಗಿಯುವವರೆವಿಗೆ ಎಲ್ಲಿಗೇ ಹೋಗಲಿ ಎಲ್ಲರೂ ಒಟ್ಟಿಗೇ ಹೋಗುತ್ತಿದ್ದೆವು. ಅಂದು ಕ್ಯಾಂಟೀನಿನಲ್ಲಿ ಮೊದಲ ಊಟದ ರುಚಿ. ಅದೇನು ಮಾಡಿದ್ದರೋ ಏನೋ, ನನಗಂತೂ ತುಂಬಾ ರುಚಿಯಾಗಿ ಕಂಡಿತ್ತು. ಅದೇ ಮೊದಲ ದಿನ ಆಚೆ ಕಡೆ ಊಟ ಮಾಡಿದ್ದು. ಅಂದು ಸಂಜೆ ಹಾಸ್ಟೆಲ್ಲಿಗೆ ಹೊರಡುವಾಗ (ಆಗಿನ್ನೂ ಹಾಸ್ಟೆಲ್ನಲ್ಲೇ ಇದ್ದೆ. ಮೊದಲ ಸಂಬಳ ಬಂದ ನಂತರ ರೂಮ್ ಮಾಡಿದ್ದು), ಬೆಂಗಳೂರಿಗೆ ಮೊದಲು ಬಂದ, ಊರು ಕಂಡರಿಯದ ಕೆಲವು ಮಿತ್ರರುಗಳಿಗೆ ನಾನೇ ಲೀಡರ್ ಆಗಿ ಅವರವರ ನೆಂಟರಿಷ್ಟರ ಮನೆಗಳಿಗೆ ತಲುಪಿಸಿದ್ದೆ. ಆಗ ನನಗಾದ, ಮುಂದೆ ಪರಮ ಆಪ್ತನಾದ ಸ್ನೇಹಿತನೆಂದರೆ ಧಾರವಾಡದಿಂದ ಬಂದಿದ್ದ ವಿಜಯ ನರೇಂದ್ರ. ಇಂದಿಗೂ ಇವನು ನನಗೆ ಪರಮ ಆಪ್ತ ಸ್ನೇಹಿತ. ವಿಜಯ್ ಅವರ ಚಿಕ್ಕಪ್ಪ ನರೇಂದ್ರ ಅವರು ಸಂಯುಕ್ತ ಕರ್ನಾಟಕದಲ್ಲಿ ಕಾರ್ಟೂನ್ ಬರೆಯುತ್ತಿದ್ದರು. ಬಹಳ ಹೆಸರುವಾಸಿಯಾದ ಮನುಷ್ಯ. ಮೊದಲ ದಿನ ವಿಜಯನನ್ನು ಅವರ ಮನೆಗೆ ಬಿಡುವ ಸಂದರ್ಭದಲ್ಲಿ, ಅವನ ಚಿಕ್ಕಪ್ಪ ಅವರ ಮನೆಗೆ ಹೋಗಿ ಅವರೊಡನೆ ಮಾತನಾಡಿ ಬಂದಿದ್ದೆ.
ಎರಡನೆಯ ದಿನ ಬ್ಯಾಂಕಿಗೆ ಹೋಗುವಾಗ ಎಲ್ಲರಿಗೂ ಕಾಣುವಂತೆ ನೋಟ್ಬುಕ್ ಕೈಯಲ್ಲಿ ಹಿಡಿದಿದ್ದೆ. ಯಾಕೆ ಅಂದ್ರೆ ಪುಸ್ತಕದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂತ ಅಚ್ಚಾಗಿತ್ತು. ಎಲ್ಲರೂ ನೋಡಲಿ, ನೀವು ಅಲ್ಲಿ ಕೆಲಸ ಮಾಡ್ತಿದ್ದೀರಾ? ಅಂತ ಕೇಳಲಿ ಎಂಬಾಸೆ. ಗಾಂಧಿಬಜಾರಿನ ೩೦ನೇ ನಂಬರ್ ಬಸ್ ಸ್ಟಾಪಿಗೆ ಬಂದೆ. ಈಗ ಆ ಬಸ್ ಇಲ್ಲ. ೩೦ ನೇ ನಂಬರ್ ಬಸ್ಸು – ರೋಡ್ ಟ್ರೈನ್ ಆಗಿದ್ದಿತು. ಗಾಂಧಿ ಬಜಾರಿನಿಂದ ಮೇಖ್ರಿ ಸರ್ಕಲ್ಗೆ ಹೋಗುತ್ತಿತ್ತು. ನಮ್ಮ ಬ್ಯಾಂಕಿನ ಹತ್ತಿರದ ಮಾರ್ಥಾಸ್ ಆಸ್ಪತ್ರೆ ಸ್ಟಾಪಿಗೆ ೩೦ ಪೈಸೆ ದರವಿದ್ದಿತ್ತು. ನಾನು ಬಸ್ ಸ್ಟಾಪ್ ತಲುಪುವ ವೇಳೆಗೆ ಬಸ್ ಹೊರಟಿತ್ತು. ಓಡೋಡಿ ಬಂದು ಬಸ್ ಹತ್ತಲು ಹೋಗಿ, ಆಯತಪ್ಪಿ ಬಸ್ಸಿನ ಬಾಗಿಲು ಹಿಡಿಯಲು ಅಸಮರ್ಥನಾಗಿ ಕೆಳಗೆ ಬಿದ್ದಿದ್ದೆ. ಮೈ ಕೈ ಎಲ್ಲಾ ತರಚಿ ಗಾಯವಾಗಿತ್ತು. ಅಂದು ತೊಟ್ಟಿದ್ದ ಹೊಸ ಷರ್ಟು ಸ್ವಲ್ಪ ಹರಿದಿತ್ತು. ಹಾಗೆಯೇ ಪ್ಯಾಂತು ಕೂಡಾ ಮೊಣಕಾಲಿನ ಹತ್ತಿರ ಹರಿದಿತ್ತು. ಹಾಗೆಯೇ ಮುಂದಿನ ಬಸ್ಸಿನಲ್ಲಿ ಬ್ಯಾಂಕಿಗೆ ಹೋಗಿದ್ದೆ. ಹಿಂದಿನ ಬಸ್ ತಪ್ಪಿದುದರಿಂದ ಕ್ಯಾಂಟೀನಿಗೆ ಹೋಗಲಾಗಿರಲಿಲ್ಲ. ಯಥಾಪ್ರಕಾರ ಅಂದು ಬೆಳಗ್ಗೆ ಮತ್ತೆ ಉಪವಾಸ.
ಟ್ರೈನಿಂಗಿನಲ್ಲಿ ಪ್ರತಿಯೊಂದು ವಿಭಾಗಗಳ ಕೆಲಸ ಕಾರ್ಯಗಳ ಬಗ್ಗೆ ಚೆನ್ನಾಗಿ ವಿವರಿಸಿಕೊಟ್ಟಿದ್ದರು. ಕಾಲೇಜು ಹುಡುಗರಂತೆ ಅವರು ಹೇಳಿದುದೆಲ್ಲವನ್ನೂ (ಅರ್ಥ ಆಗದಿದ್ದರೂ ಕೂಡಾ) ನಾವು ಎಲ್ಲವನ್ನೂ ಚಾಚೂ ತಪ್ಪದಂತೆ ಬರೆದುಕೊಳ್ಳುತ್ತಿದ್ದೆವು. ಆ ನೋಟ್ ಪುಸ್ತಕ ಈಗಲೂ ನನ್ನ ಬಳಿ ಇದೆ. ಅದರ ಪುಟಗಳನ್ನು ತೆಗೆದು ನೋಡಿದರೆ ಆ ಹಿಂದಿನ ನೆನಪುಗಳಲ್ಲಿ ಮುಳುಗಿಹೋಗುವೆ.
ಸಹೋದ್ಯೋಗಿ ಗಣೇಶ ಐತಾಳ ಸಿ ಏ ಐ ಐ ಬಿ ಫಾರ್ಮ್ ಅನ್ನು ತಂದು, ಊಟದ ಸಮಯದಲ್ಲಿ ಎಲ್ಲರಿಗೂ ಕೊಟ್ಟು ತಕ್ಷಣ ತುಂಬಿಕೊಡುವಂತೆ ಹೇಳಿದ್ದ. ಅವನು ಅಂದು ಮಾಡಿದ ಒಳ್ಳೆಯ ಕೆಲಸ, ಆ ತಕ್ಷಣ ಯಾರಿಗೂ ಗೊತ್ತಾಗದಿದ್ದರೂ ಈಗ ಎಲ್ಲರೂ ಸಂತೋಷ ಪಡುವಂತಾಗಿದೆ. ಏಕೆ ಗೊತ್ತೇ? ಆಗಿನ್ನೂ ಓದು ಮುಗಿಸಿ ಬಂದಿದ್ದ ನಮ್ಮಗಳಿಗೆ ಸಿ ಏ ಐ ಐ ಬಿ ಪರೀಕ್ಷೆ ಬರೆಯಲು ಕಷ್ಟ ಆಗಲಿಲ್ಲ. ಆ ಪರೀಕ್ಷೆಯನ್ನು ಪಾಸು ಮಾಡಿದುದರಿಂದ ಎಕ್ಸ್ಟ್ರಾ ಇನ್ಕ್ರಿಮೆಂಟ್ ಬಂದಿತು ಮತ್ತು ಮುಂದೆ ಪ್ರಮೋಷನ್ ಪರೀಕ್ಷೆ ಬರೆಯಲೂ ಅನುಕೂಲವಾಯಿತು.
ಗಣೇಶ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಓದಿದವನಾಗಿದ್ದು ಬಿ.ಕಾಂ ಪರೀಕ್ಷೆಯಲ್ಲಿ ೫ನೇ ರ್ಯಾಂಕ್ ಪಡೆದವನಾಗಿದ್ದ. ಇಲ್ಲಿ ಸೇರುವ ಮೊದಲು ಕರ್ನಾಟಕ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದ. ಇಲ್ಲಿಗೆ ಸೇರುವ ಹೊತ್ತಿಗಾಗಲೇ ಸಿ.ಏ.ಐ.ಐ.ಬಿ ಪರೀಕ್ಷೆಯ ಮೊದಲನೆಯ ಪಾರ್ಟ್ ಆಗಲೇ ಪಾಸು ಮಾಡಿದ್ದ. ಹಾಗಾಗಿ ಈ ಪರೀಕ್ಷೆ ಮತ್ತು ಅದರಿಂದ ಆಗುವ ಒಳಿತಿನ ಬಗ್ಗೆ ಅವನಿಗಾಗಲೇ ತಿಳಿದಿತ್ತು. ಈಗ ಗಣೇಶ ಐತಾಳ ನನ್ನೊಂದಿಗೇ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಮುಂಬೈನಲ್ಲಿ ಕೆಲಸ ಮಾಡುತ್ತಿರುವನು.
ಇನ್ನೊಬ್ಬ ಸ್ನೇಹಿತ ಮುನಿಸ್ವಾಮಿ ಎಂ.ಬಿ.ಎ. ಮಾಡಿದವನಾಗಿದ್ದ. ಸ್ವಲ್ಪ ಕಾಲ ನಮ್ಮೊಡನಿದ್ದು ನಂತರ ಕರ್ನಾಟಕ ಸರ್ಕಾರದ ಕೆಲಸಕ್ಕೆ ಸೇರಿದ್ದ. ಹಾಗೆಯೇ ಜಯಶೀಲ ಸ್ವಲ್ಪ ಕಾಲದ ನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇರಿದ್ದ. ಅಂದು ನನ್ನೊಡನೆ ಬ್ಯಾಂಕು ಸೇರಿದ ಬಹಳಷ್ಟು ಜನ ಸ್ನೇಹಿತರು ಈಗ ಆಫೀಸರುಗಳಾಗಿದ್ದಾರೆ.
ಟ್ರೈನಿಂಗಿನಲ್ಲಿ ಪ್ರತಿಯೊಂದು ವಿಭಾಗಗಳ ಕೆಲಸ ಕಾರ್ಯಗಳ ರೂಪುರೇಷೆಯನ್ನು ತಿಳಿಸಿಕೊಟ್ಟಿದ್ದರು. ಹಾಗೆಯೇ ನಮಗೆ ಬಹಳ ಮುಖ್ಯವಾಗಿ ತಿಳಿಯಬೇಕಿದ್ದ ಸಂಬಳ, ಭತ್ಯೆ ಇನ್ನಿತರೇ ಸವಲತ್ತುಗಳ ವಿಷಯಗಳನ್ನೂ ತಿಳಿಸಿಕೊಟ್ಟಿದ್ದರು. ಕಡೆಯ ದಿನ ಎಲ್ಲರೂ ಸೇರಿ ಒಂದು ಫೋಟೋವನ್ನು ಕೂಡಾ ತೆಗೆಸಿಕೊಂಡಿದ್ದೆವು.
ಟ್ರೈನಿಂಗ್ನ ಕೊನೆಯ ದಿನದಂದು ಬೀಳ್ಕೊಡುವ ಸಮಾರಂಭವನ್ನು ಇಟ್ಟುಕೊಂಡಿದ್ದೆವು. ಆಗ ಬೋರ್ಡ್ ಮೇಲೆ ಮ್ಯಾನೇಜರ್ ಆಗಿದ್ದ ಎಸ್ ಎನ್ ಬಗಾಯಿ ಅವರಿಗೆ ಸ್ವಾಗತವೆಂದು ಬರೆದಿದ್ದೆ. ಬಗಾಯಿ ಅವರದ್ದು ಯಾವಾಗಲು ಮುಖ ಗಂಟಿಕ್ಕಿರುವ ಸ್ವರೂಪ. ಅವರು ಬಂದ ಕೂಡಲೇ ಯಾರಿದು ಬರೆದವರು ಎಂದು ಕೇಳಿದ್ದರು – ಒಂದು ನಿಮಿಷ ಯಾರಿಂದಲೂ ಉತ್ತರ ಬಾರದೇ ಮೌನ. ಏನೋ ತಪ್ಪಾಗಿದೆ ಎಂದು ನಾನು ಹೆದರಿಬಿಟ್ಟಿದ್ದೆ. ಚೆನ್ನಾಗಿ ಬರೆದಿದ್ದೀರಿ – ಯಾರು ಬರೆದದ್ದು ಎಂದು ಕೇಳಿದ ಮೇಲೆ ನನ್ನ ಪಕ್ಕದಲ್ಲಿದ್ದ ನರೇಂದ್ರ – ಇವನೇ ಸಾರ್, ಎಂದು ನನ್ನ ಕಡೆಗೆ ಬೆರಳು ತೋರಿದ್ದ. ಬರವಣಿಗೆ ಚೆನ್ನಾಗಿದೆ ಎಂದು ಅವರು ನನ್ನನ್ನು ಪ್ರಶಂಸಿಸಿದ್ದರು. ಹೆದರಿದ್ದ ನಾನು ಸ್ವಲ್ಪ ಬೆವತಿದ್ದೆ ಕೂಡ. ಟ್ರೈನಿಂಗ್ನ ಕಡೆಯಲ್ಲಿ ತರಬೇತಿ ಕೊಟ್ಟವರು, ಅಂದರೆ ಶ್ರೀಯುತ ಪ್ರಭುಗಳು ಮತ್ತು ರಾಜೇಶ್ವರಿಯವರು ಎಲ್ಲರಿಗೂ ಒಳ್ಳೆಯದಾಗಲೆಂದು ಹರಸಿದರು. ಆಗ ನಾವೆಲ್ಲರೂ ಬ್ಯಾಂಕಿನ ಬಗ್ಗೆ ಕೂಲಂಕಷವಾಗಿ ಬಹಳ ಕಡಿಮೆ ಸಮಯದಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆವು. ನಮ್ಮಲ್ಲಿ ಒಬ್ಬರಂತೂ ಅವರಿಗೆ ಅಡ್ಡಬಿದ್ದು ಸಾಷ್ಟಾಂಗ ವಂದಿಸಿದರು.
ಟ್ರೈನಿಂಗ್ ಪ್ರಾರಂಭವಾದ ಮೊದಲನೆಯ ದಿನದಿಂದಲೇ ದೂರದ ಊರುಗಳಿಂದ ಬಂದವರುಗಳು ವಾಸಕ್ಕಾಗಿ ಮನೆ ಅಥವಾ ಕೊಠಡಿಗಳನ್ನು ಹುಡುಕುತ್ತಿದ್ದರು. ಬೆಂಗಳೂರಿನವರುಗಳಿಗೆ ಸ್ವಂತ ಮನೆ ಇದ್ದಿತ್ತು. ನಾನೊಬ್ಬನೇ ಹಾಸ್ಟೆಲ್ನಲ್ಲಿದ್ದು, ಕೆಲಸ ಸಿಕ್ಕಿದ್ದುದರಿಂದ ಅಲ್ಲಿಂದ ಹೊರ ಬರಬೇಕಾಗಿತ್ತು. ಇದರ ಬಗ್ಗೆ ಒಂದೆರಡು ಮಾತುಗಳು.
ನಾನು ಇದ್ದದ್ದು ಶಂಕರಮಠದ ವಿದ್ಯಾರ್ಥಿ ಗೃಹ. ಬಿ.ಕಾಂ ಓದುವಾಗ ನಾನು ಅಲ್ಲಿಗೆ ಸೇರಿದ್ದೆ. ಅಲ್ಲಿ ಎಲ್ಲರಿಗೂ ಸೇರಲು ಮುಕ್ತ ಅವಕಾಶವಿರಲಿಲ್ಲ. ವೇದಾಭ್ಯಾಸ ಮಾಡುವವರಿಗೆ ಮಾತ್ರ ಇರಲು ಅವಕಾಶ. ವಸತಿ ಪುಕ್ಕಟೆಯಾಗಿತ್ತು. ಆದರೆ ಊಟ ತಿಂಡಿಗೆ ತಗಲುವ ವೆಚ್ಚವನ್ನು ನಾವೇ ಭರಿಸಬೇಕಿತ್ತು. ಅದಕ್ಕೊಬ್ಬರು ವಾರ್ಡನ್ ಮತ್ತು ಅಲ್ಲೇ ವಾಸವಾಗಿದ್ದ ಕೇರ್ ಟೇಕರ್ ಇದ್ದರು. ೩ ಕೊಠಡಿಗಳಲ್ಲಿ ಒಟ್ಟು ೯ ಜನ ಹುಡುಗರಿದ್ದು, ಹೆಚ್ಚಿನ ಒಂದು ರೂಮನ್ನು ಸಂಧ್ಯಾವಂದನೆಗೆಂದೂ, ಒಂದನ್ನು ಕೇರ್ ಟೇಕರಿಗೆಂದೂ, ಪ್ರವಚನಗಳಿಗಾಗಿ ಒಂದು ದೊಡ್ಡ ಹಾಲನ್ನೂ ಮತ್ತು ವೇದಾಭ್ಯಾಸಕ್ಕೆ ಒಂದು ಕೊಠಡಿಯನ್ನೂ ಪ್ರತ್ಯೇಕವಾಗಿರಿಸಿದ್ದರು. ನಾನು ಬಿ.ಕಾಂ ಮುಗಿದ ಕೂಡಲೇ ಒಂದು ಖಾಸಗೀ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆಗ ಹಾಸ್ಟಲ್ ಬಿಡುವ ಸಂದರ್ಭ ಬಂದಿತ್ತು. ಆಗ ಐ.ಸಿ.ಡಬ್ಲ್ಯು.ಏ ಪರೀಕ್ಷೆಗಾಗಿ ಓದು ಪ್ರಾರಂಭಿಸಿದ್ದೆ. ಹಾಸ್ಟಲ್ನ ಆಡಳಿತದಲ್ಲಿ ಸ್ವಲ್ಪ ತೊಂದರೆ ಬಂದಿದ್ದು, ನನ್ನನ್ನು ಆಗ ಅಸಿಸ್ಟೆಂಟ್ ವಾರ್ಡನ್ ಮಾಡಿದ್ದರು. ಬ್ಯಾಂಕಿನಲ್ಲಿ ಕೆಲಸ ಸಿಕ್ಕ ಮೇಲೇ ನನಗೇ ಅಲ್ಲಿರಲು ಮನಸ್ಸಾಗಲಿಲ್ಲ. ಪ್ರತ್ಯೇಕವಾಗಿ ಒಂದು ಕೊಠಡಿಯನ್ನು ಹುಡುಕಲು ಪ್ರಾರಂಭಿಸಿದೆ.
ಬ್ಯಾಂಕಿನಲ್ಲಿ ನನ್ನೊಡನಿದ್ದ ಸ್ನೇಹಿತರುಗಳಿಗೂ ಕೊಠಡಿಗಳು ಬೇಕಿದ್ದು ಮತ್ತು ಅವರುಗಳು ಬೆಂಗಳೂರಿಗೆ ಹೊಸಬರಾಗಿದ್ದುದರಿಂದ ನಾನೇ ಊರಿನ ಗಲ್ಲಿ ಗಲ್ಲಿಗಳಲ್ಲಿ ಕೊಠಡಿ ಹುಡುಕಲು ಅವರಿಗೆ ಸಹಾಯಿಸುತ್ತಿದ್ದೆ. ಟ್ರೈನಿಂಗ್ ಮುಗಿಯುವ ಮೊದಲೇ ನನ್ನ ಇನ್ನೊಬ್ಬ ಸ್ನೇಹಿತ ಲಕ್ಷ್ಮೀನಾರಾಯಣನಿಂದ ನನಗಾಗ ಮಲ್ಲೇಶ್ವರದ ೧೮ನೇ ಕ್ರಾಸಿನಲ್ಲಿದ್ದ ಗಣೇಶ ಭವನದಲ್ಲಿ ಒಂದು ಕೊಠಡಿ ದೊರಕಿತ್ತು. ಅದಕ್ಕೆ ಬಾಡಿಗೆಯಾಗಿ ರೂ. ೮೦ ಕೊಡುತ್ತಿದ್ದೆ. ಅಲ್ಲಿ ಅಡುಗೆ ಮಾಡಲು ಅವಕಾಶವಿಲ್ಲ ಎಂದು ಆಡಳಿತ ಮಂಡಳಿಯವರು ನಿರ್ದೇಶಿಸಿದ್ದರೂ ಅಲ್ಲಿನ ಇತರೇ ವಾಸಿಗಳು ಅಡುಗೆ ಮಾಡುತ್ತಿದ್ದರು. ನಾನೂ ಅವರಂತೆಯೇ ಪ್ರತಿನಿತ್ಯವೂ ರಾತ್ರಿಯ ಹೊತ್ತು ಅಡುಗೆ ಮಾಡುತ್ತಿದ್ದೆ. ಆ ಕೊಠಡಿಯಲ್ಲಿ ಒಂದು ಮೇಜು, ಖುರ್ಚಿ ಮತ್ತು ಮಂಚವಿತ್ತು. ಸ್ನಾನ ಮಾಡಲು ಬಿಸಿನೀರಿನ ಸೌಲಭ್ಯವಿದ್ದಿತ್ತು.
ಲಕ್ಷ್ಮೀನಾರಾಯಣನ ಬಗ್ಗೆ ಒಂದು ಮಾತು. ಅವನು ನನಗಿಂತ ೧೦ ವರುಷಗಳಷ್ಟು ದೊಡ್ಡವನು. ಇದಕ್ಕೆ ಮುಂಚೆ ಸೆಂಟ್ರಲ್ ಎಕ್ಸೈಸ್ ನಲ್ಲಿ ಕೆಲಸ ಮಾಡುತ್ತಿದ್ದನು. ಕಾಲು ಸ್ವಲ್ಪ ಊನವಾಗಿದ್ದರೂ ಬಹಳ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡುತ್ತಿದ್ದನು. ಬ್ಯಾಂಕ್ ಸೇರಿದ ಮೊದಲ ದಿನದಿಂದಲೇ ಬ್ಯಾಂಕಿನಲ್ಲಿ ಛಾಂಪಿಯನ್ ಆಗಿದ್ದನು. ಹಾಗೆಯೇ ಇಂಟರ್ ಬ್ಯಾಂಕ್ ಟೂರ್ನಮೆಂಟಿನಲ್ಲಿ ಕೂಡಾ ಅವನು ಛಾಂಪಿಯನ್ ಆಗಿದ್ದನು. ಈಗಲೂ ಅವನು ಹಿರಿಯರ ವರ್ಗದಲ್ಲಿ ಟೇಬಲ್ ಟೆನ್ನಿಸ್ ಪಂದ್ಯಗಳಲ್ಲಿ ಗೆದ್ದು ಪತ್ರಿಕೆಯಲ್ಲಿ ಸುದ್ದಿಯಾಗುತ್ತಿರುತ್ತಾನೆ.
ಮೊದಲ ದಿನದ ಕಾರ್ಯ ವೈಖರಿಯ ಬಗ್ಗೆ ಒಂದೆರಡು ಮಾತುಗಳನ್ನು ತಿಳಿಸಲಿಚ್ಛಿಸುವೆ.
ಮೊದಲ ದಿನ ಅಂದರೆ ಜನವರಿ ೨೭ನೇ ತಾರೀಖು ಸಮಯಕ್ಕೆ ಸ್ವಲ್ಪ ಮುಂಚಿತವಾಗಿಯೇ ಬ್ಯಾಂಕಿಗೆ ಹೋಗಿದ್ದೆ. ನಾವು ಒಟ್ಟು ೩೩ ಜನ ಉದ್ಯೋಗಿಗಳು. ನಮ್ಮಲ್ಲಿ ಒಬ್ಬರಿಗೆ ದೃಷ್ಟಿ ದೋಷವಿದ್ದುದರಿಂದ ಕ್ಯಾಷ್ ಡಿಪಾರ್ಟ್ಮೆಂಟಿಗೆ ಅವರನ್ನು ಪೋಸ್ಟ್ ಮಾಡಿರಲಿಲ್ಲ. ಇನ್ನುಳಿದ ೩೨ ಜನರು ಕ್ಯಾಷ್ ಡಿಪಾರ್ಟ್ಮೆಂಟಿನಲ್ಲಿದ್ದ ‘ಎಫ್‘ ಸೆಕ್ಷನ್ಗೆ ಪೋಸ್ಟ್ ಮಾಡಿದ್ದರು. ಆ ಸೆಕ್ಷನ್ನ ಅಧಿಕಾರಿ ಶ್ರೀ ಮೆಂಡೋಂಝಾ. ಯಾವಾಗಲೂ ಗಂಟಿಕ್ಕಿರುವ ಮುಖದವರು. ಅವರ ಮುಂದೆ ತಮಾಷೆ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಮೊದಲ ದಿನದಿಂದಲೇ ನಾವು ಎಲ್ಲಿ ಎಲ್ಲಿ ಕುಳಿತು ಕೆಲಸ ಮಾಡಬೇಕೆಂದು ನಿರಧರಿಸಿದ್ದರು.
ಮೊದಲ ದಿನ ಹಳೆಯ ನೋಟುಗಳ ಪ್ಯಾಕೆಟ್ಟನ್ನು ಪರೀಕ್ಷೆಗಾಗಿ ಕೊಟ್ಟಿದ್ದರು. ಹೇಗೆ ಪರೀಕ್ಷಿಸಬೇಕು, ಯಾವ ಯಾವ ನೋಟುಗಳನ್ನು ತಿರಸ್ಕರಿಸಬೇಕು ಇತ್ಯಾದಿಗಳನ್ನೂ, ಹರಿದ ನೋಟುಗಳನ್ನು ಹೇಗೆ ಅಂಟಿಸಬೇಕು ಎಂಬುದನ್ನೂ ಚೆನ್ನಾಗಿ ತಿಳಿಸಿಕೊಟ್ಟಿದ್ದರು. ಅಂದು ಎಲ್ಲರಿಗೂ ಎಲ್ಲ ನೋಟುಗಳೂ ಸಂದೇಹ ತೋರುತ್ತಿದ್ದವು. ಹೀಗಾಗಿ ಮೆಂಡೋಂಝಾ ಅವರಿಗೆ ತಲೆಕೆಡುವಂತಾಗಿತ್ತು. ಮೊದಲಿಗೆ ನಾವು ಒಂದು ಪ್ಯಾಕೆಟ್ಟಿನಲ್ಲಿ ೧೦೦ ನೋಟುಗಳಿವೆಯೇ ಎಂದು ಎಣಿಸಬೇಕು. ಎಲ್ಲೆಲ್ಲಿ ಓಡಿಯಾಡಿ ಬಂದ ನೋಟುಗಳೋ. ಎಲ್ಲ ನೋಟುಗಳು ಒಂದೇ ಕುಟುಂಬದವರಂತೆ, ಪತಿ ಪತ್ನಿಯರಂತೆ ‘ಏಕ್ ದೂಜೇ ಕೆ ಲಿಯೇ‘ ಯಂತಾಗಿದ್ದವು. ಅಂದರೆ ಎಲ್ಲ ನೋಟುಗಳು ಒಂದಕ್ಕೊಂದು ಬೆಸೆದುಕೊಂಡಿದ್ದವು. ಆ ಬೆಸುಗೆ ಬಿಡಿಸಿ ಎಣಿಸಿ, ಒಂದು ಪ್ಯಾಕೆಟ್ಟಿನಲ್ಲಿ ೧೦೦ ನೋಟುಗಳಿವೆ ಎಂದು ಖಾತ್ರಿ ಪಡಿಸಿಕೊಳ್ಳುವುದು ಬಹು ಕಷ್ಟವಾಗಿತ್ತು. ನನಗೆ ಒಂದು ಪ್ಯಾಕೆಟ್ಟಿನಲ್ಲಿ ಒಮ್ಮೆ ೯೯ ಬಂದರೆ ಮರು ಎಣಿಕೆಯಲ್ಲಿ ೧೦೧ ಬರ್ತಿತ್ತು. ಮತ್ತೆ ಮತ್ತೆ ಎಣಿಸಿ ಎಣಿಗಿ ಕೈ ನೋಯುತ್ತಿತ್ತು. ಅದಲ್ಲದೇ ಕೈಯೆಲ್ಲಾ ಗಲೀಜಾಗಿತ್ತು. ಅದಕ್ಕೆಂದೇ ಕೈ ತೊಳೆದುಕೊಳ್ಳಲು ಸಾಬೂನನ್ನು ಇಟ್ಟಿರುತ್ತಾರೆ. ಇನ್ನು ಆ ನೋಟಿನ ಧೂಳಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.
ಒಂದು ತಮಾಷೆಯ ವಿಷಯವೆಂದರೆ ಅಂದಿನಿಂದ ಸ್ವಲ್ಪ ಕಾಲ ಎಲ್ಲೇ ಪುಸ್ತಕಗಳು, ನೋಟುಗಳನ್ನು ಕಂಡರೂ ಅಭ್ಯಾಸವಾಗಲೆಂದು ಅವುಗಳನ್ನು ಎಣಿಸುತ್ತಿದ್ದೆ. ಕೆಲವರು ಬಹಳ ಬೇಗ ವೇಗವಾಗಿ ಎಣಿಸಿ ಪರೀಕ್ಷಿಸುತ್ತಿದ್ದರು. ಅವರೊಂದಿಗೆ ಪೈಪೋಟಿಯೂ ನಡೆಯುತ್ತಿತ್ತು. ನಾನು ಯಾವಾಗಲೂ ಅವರೆಲ್ಲರಿಗಿಂದ ಹಿಂದೆ ಬೀಳುತ್ತಿದ್ದೆ. ಅಂದು ಮೊದಲ ದಿನವಾಗಿದ್ದು ಅರ್ಧ ಕೆಲಸವನ್ನು ಮಾತ್ರ ಕೊಟ್ಟಿದ್ದರು. ಆದರೂ ಬೆಳಗಿನ ಕೆಲಸ ಮುಗಿಸುವ ಹೊತ್ತಿಗೆ ಮಧ್ಯಾಹ್ನದ ೨ ಘಂಟೆಯಾಗಿತ್ತು.
ಮತ್ತೆ ಇನ್ನೂ ಅರ್ಧ ಕೆಲಸ ಬಾಕಿ ಇದ್ದುದರಿಂದ ಅರ್ಧ ಘಂಟೆಯೊಳಗೆ ಊಟ ಮುಗಿಸಿ ಬರಬೇಕೆಂದು ನಮ್ಮ ಆಫೀಸರು ಹೇಳಿದ್ದರು. ಸಾಮನ್ಯವಾಗಿ ಮುಕ್ಕಾಲು ಘಂಟೆಯ ಸಮಯವನ್ನು ಊಟಕ್ಕಾಗಿ ಕೊಡಬೇಕಿತ್ತು. ಅವರ ಮಾತಿಗೆ ಎದುರಾಡುವ ಧೈರ್ಯ ಯಾರಿಗೂ ಇರಲಿಲ್ಲ. ಮೇಲಾಗಿ ಆಗಿನ್ನೂ ಬ್ಯಾಂಕಿನೊಳಗೆ ಕಾಲಿಡುತ್ತಿದ್ದೆವು. ಅಷ್ಟು ಹೊತ್ತಿಗಾಗಲೇ ಬ್ಯಾಂಕಿನ ಕ್ಯಾಂಟೀನ್ ಮುಚ್ಚಿತ್ತು. ಎದುರಿಗಿದ್ದ ಕಾಮತ್ ಹೊಟೆಲ್ಗೆ ಹೋಗಿ ಬೇಗ ಬೇಗ ಸಿಕ್ಕಿದ್ದನ್ನು ತಿಂದು ಬಂದಿದ್ದೆವು. ಮಧ್ಯಾಹ್ನದ ಕೆಲಸವೂ ಹಾಗೆಯೇ ನಿಧಾನವಾಗಿ ಸಾಗಿತ್ತು. ಅಂದಿನ ಕೆಲಸ ಮುಗಿಯ ಹೊತ್ತಿಗೆ ಸಂಜೆಯ ೭ ಘಂಟೆಯಾಗಿತ್ತು. ಇದೊಂದು ಮರೆಯಲಾರದ ದಿನ.
ಮುಂದಿನ ಭಾಗಕ್ಕೆ ನಿರೀಕ್ಷಿಸಿ …
One reply on “ಬ್ಯಾಂಕಿನಲಿ ರಜತೋತ್ಸವ – 2”
“ಮ್ಯಾನೇಜರ್ ಆಗಿದ್ದ ಎಸ್ ಎನ್ ಬಗಾಯಿ ಅವರಿಗೆ ಸ್ವಾಗತವೆಂದು ಬರೆದಿದ್ದೆ. ಬಗಾಯಿ ಅವರದ್ದು ಯಾವಾಗಲು ಮುಖ ಗಂಟಿಕ್ಕಿರುವ ಸ್ವರೂಪ.”
ಓಹೋ, ನೀವು ಆಗಲೇ ಮುನ್ನಾಭಾಯಿ ಎಂಬಿಬಿಎಸ್ ಚಿತ್ರದ ಗಾಂಧಿ ತತ್ವವನ್ನು ಅನುಸರಿಸಿಸ್ತಾ ಇದ್ರಾ? 🙂
ರಜತ ಮಹೋತ್ಸವ ಆಚರಣೆಗೆ ಶುಭಾಶಯಗಳು.