ವಿಭಾಗಗಳು
ಲೇಖನಗಳು

ಕೊಲೆಗಡುಕ – ಹೇಗೆ?

 ಈ ಲೇಖನ ಇಲ್ಲಿ ಪ್ರಕಟವಾಗಿದೆ

ಇತ್ತೀಚೆಗೆ ದಕ್ಷಿಣ ಮುಂಬಯಿಯ ಜನಗಳನ್ನು ತಲ್ಲಣಗೊಳಿಸಿದ ಒಬ್ಬ ಮನುಷ್ಯನ ಬಗ್ಗೆ ಎಲ್ಲರೂ ಪತ್ರಿಕೆಗಳಲ್ಲಿ ಓದಿರಬಹುದು.  ಬೀರ್ ಮ್ಯಾನ್‘ – ದಿ ಸೀರಿಯಲ್ ಕಿಲ್ಲರ್ ಆಫ್ ಸೌತ್ ಮುಂಬಯಿ ಎಂದೇ ಈತ ಕೆಲವೇ ದಿನಗಳಲ್ಲಿ ಪ್ರಸಿದ್ಧನಾದನು.  ಈ ಮನುಷ್ಯ ವಿನಾಕಾರಣ ಅಮಾಯಕರನ್ನು ಅಮಾನುಷವಾಗಿ ಕೊಲೆ ಮಾಡುತ್ತಿದ್ದನು.  ಅವನೇನು ಕಳ್ಳತನಕ್ಕಾಗಿ ಕೊಲೆ ಮಾಡುತ್ತಿರಲಿಲ್ಲ.  ವಿಕೃತ ಮನುಷ್ಯನಂತೆ ತೋರುತ್ತಿದ್ದ.  ಅವನನ್ನು ಸೆರೆ ಹಿಡಿದು, ವೈದ್ಯಕೀಯ ತಪಾಸಣೆ ಮಾಡುತ್ತಿದ್ದಾರೆ. 

                                   serial_killer.jpg

ಇದೇ ರೀತಿಯಲ್ಲಿ ಉತ್ತರ ಮುಂಬಯಿಯ ಬೊರಿವಿಲಿಯ ಸುತ್ತಮುತ್ತಣ ಪ್ರದೇಶಗಳಲ್ಲಿ ಇನ್ನೊಬ್ಬ ವಿಕೃತ ವ್ಯಕ್ತಿ, ಇಳಿ ಸಂಜೆಯ ಕತ್ತಲಿನಲ್ಲಿ ಆಟೋ ಹತ್ತುವ ಮಹಿಳೆಯರನ್ನು ಮಚ್ಚಿನಿಂದ ಹೊಡೆದು ಘಾಸಿಗೊಳಿಸುತ್ತಿದ್ದನು.  ಆದರೆ ಅವನು ಆ ಮಹಿಳೆಯರು ಧರಿಸಿರುವ ಆಭರಣಗಳನ್ನು ಕಸಿಯಲು ಪ್ರಯತ್ನಿಸುತ್ತಿದ್ದನು. 

 

ಈ ಇಬ್ಬರೂ ೧೦ ರಿಂದ ೧೨ ದಿನಗಳವರೆವಿಗೆ ಪೊಲೀಸರ ಕೈಗೆ ಸಿಕ್ಕದಂತೆ ಅಮಾನುಷ್ಯ ಕೃತ್ಯಗಳಲ್ಲಿ ತೊಡಗಿ ಕೊನೆಗೆ ಸಿಕ್ಕಿಬಿದ್ದರು.  ಇಲ್ಲಿ ನಾನು ಈ ಕೃತ್ಯಗಳ ಬಗ್ಗೆ ವರದಿಯನ್ನು ನೀಡುತ್ತಿಲ್ಲ.  ಹೀಗೇಕೆ ಆಗುತ್ತಿದೆ, ಆಗುತ್ತದೆ, ಈ ಜನಗಳು ಹೀಗೆ ಮಾಡಲು ಕಾರಣವೇನು, ಇವರು ಹೀಗೆ ಮಾಡದಿರುವಂತೆ ಮಾಡಲು ಮುಂಜಾಗ್ರತೆಯಾಗಿ ಏನು ಮಾಡಬಹುದು, ಮಾಡಬೇಕು, ಮಾಡುತ್ತಿದ್ದೇವೆ, ಈ ವಿಷಯಗಳ ಬಗ್ಗೆ ನನ್ನ ಮನದಲ್ಲಿ ಮೂಡುತ್ತಿರುವ ನಾಲ್ಕಾರು ಅಂಶಗಳನ್ನು ಇಲ್ಲಿ ಬರಹದ ಮೂಲಕ ಪ್ರಸ್ತುತ ಪಡಿಸುತ್ತಿರುವೆ. 

 

ನಮ್ಮ ದೇಶದಲ್ಲಿ ಮೊತ್ತ ಮೊದಲಿಗೆ ಕಂಡು ಬರುವ ಅಂಶವೆಂದರೆ ಬಡತನ.  ಅದರ ಜೊತೆಗೆ ಅವಿದ್ಯಾವಂತಿಕೆ ಮತ್ತು ನಿರುದ್ಯೋಗವೂ ಅಂಟಿಕೊಂಡಿರುವುದು.     ಹೆಚ್ಚಿನ ಜನಗಳಿಗೆ ಹೊಟ್ಟೆಗೆ ಸರಿಯಾಗಿ ಎರಡು ಹೊತ್ತಿನ ಕೂಳು ಸಿಕ್ಕುವುದು ಕಷ್ಟಕರವಾದುದರಿಂದ, ಸುಲಭವಾಗಿ ಹೊಟ್ಟೆ ಹೊರೆದುಕೊಳ್ಳಲು, ಕಳ್ಳತನ, ಕೊಲೆ, ಸುಲಿಗೆ, ದರೋಡೆ ಮುಂತಾದ ದುಷ್ಕೃತ್ಯಗಳಿಗೆ ಮೊರೆ ಹೋಗುವರು.  ಹಾಗೆಯೇ ಸುಲಭದಿ ಕೈಗೆ ದುಡ್ಡು ಸಿಗುವುದರಿಂದ, ನಾಳಿನ ಬಗ್ಗೆ ಚಿಂತೆ ಇರುವುದಿಲ್ಲದ ಕಾರಣ,  ಹಣ ಗಳಿಕೆಯ ಮಹತ್ವವವನ್ನರಿಯದವರು ದುಂದುಗಾರಿಕೆ ಮಾಡುವರು.  ಇದರಿಂದ ದುಶ್ಚಟಗಳಿಗೆ ದಾಸರಾಗುವರು.  ಯಾವಾಗ ನಾಳಿನ ಚಿಂತೆ ಇಲ್ಲದೇ, ಇಂದಿನ ಜೀವಿತವನ್ನು ಮಾತ್ರ ಕಾಣುತ್ತಿರುವರೋ, ಆ ಸಮಯದಲ್ಲಿ ಮರುದಿನ ಎಲ್ಲಿಯೂ ಹಣ ದೊರೆಯದಿದ್ದರೆ, ದುಷ್ಕೃತ್ಯ ಮಾಡಲಾಗದಿದ್ದರೆ, ಭಿಕ್ಷೆ ಬೇಡುವರು.  ಕೆಲವೊಮ್ಮೆ ಪೊಲೀಸರ ಕೈಗೂ ಸಿಕ್ಕು, ಸೆರೆವಾಸ ಅನುಭವಿಸುವರು.  ನಮ್ಮ ದೇಶದಲ್ಲಿ ನ್ಯಾಯಾಂಗ ಕಠಿಣ ಶಿಕ್ಷೆಯನ್ನು ವಿಧಿಸದಿದುರಿಂದ, ಮತ್ತು ದುಷ್ಕೃತ್ಯವನ್ನು ನಿಖರವಾಗಿ ಸಾಬೀತು ಪಡಿಸದೇ ಶಿಕ್ಷೆಯನ್ನು ವಿಧಿಸದಿರುವುದರಿಂದ ಇಂತಹ ಸಮಾಜ ಘಾತುಕರು ಬಹಳ ಸುಲಭವಾಗಿ ಮರಳಿ ತಮ್ಮ ಕೆಲಸಗಳಿಗೆ ಮರಳುವರು. ಆ ವೇಳೆಗಾಗಲೇ ಪೊಲೀಸರ ಬೆತ್ತದ ರುಚಿಯನ್ನು ಕಂಡು, ಘಾಸಿಗೊಂಡ ಹುಲಿಯಂತಾದವರು, ಇನ್ನೂ ಹೆಚ್ಚಿನ ಗತಿಯಲ್ಲಿ ಅಮಾನುಷ ಕೃತ್ಯಗಳನ್ನು ಎಸಗುವರು.  ಇಂತಹವರುಗಳನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ರಾಜಕಾರಣಿಗಳು ಪೋಷಿಸುವುದೂ ಕಂಡು ಬರುತ್ತಿದೆ.  ಇಂತಹವರ ಕುಟುಂಬಗಳು ಗುಡಿಸಲುಗಳಲ್ಲಿ  ಇಲ್ಲದಿದ್ದರೆ ರಸ್ತೆ ಬದಿಯಲ್ಲಿ  ವಾಸಿಸುವರು.  ಇಂತಹವರು ವಿದ್ಯೆಯ ಮಹತ್ವವನ್ನರಿಯದಿದ್ದುದರಿಂದ ಮತ್ತು ಇವರುಗಳಿಗೆ ತಿಳಿಹೇಳುವವರೂ ಯಾರೂ ಹೆಚ್ಚಿನ ಸಂಖ್ಯೆಯಲ್ಲಿಲ್ಲದಿರುವುದರಿಂದ, ಇವರುಗಳ ಸಂತತಿಯೂ ಇದೇ ಕಾಯಕದಲ್ಲಿ ನಿರತರಾಗುವರು.  ಇದೊಂದು ವಿಷವರ್ತುಲ.    ಸಮಾಜದ ಒಳಿತಿನ ಹೊಣೆಯನ್ನು ನಾಗರಿಕರಾದ ನಾವೆಲ್ಲರೂ ಹೊರಲೇಬೇಕು.  ಈ ದಿಸೆಯಲ್ಲಿ ಮೊದಲಿಗೆ ಸುಲಭದಲ್ಲಿ ವಿದ್ಯೆಯನ್ನು ಕೊಡಿಸಿ, ಈ ವಿಷವರ್ತುಲದಿಂದ ಭೇದಿಸಿ, ಸಮಾಜ ಶಕ್ತಿಯಾಗಲು ಇಂತಹವರನ್ನು ಪೋಷಿಸಲು

ಮುಂದಾಗೋಣವೇ?

 

ಇನ್ನು ಈ ಬೀರ್‌ಮ್ಯಾನ್ ಬಗ್ಗೆ ತಿಳಿದುಬಂದ ಒಂದೆರಡು ಅಂಶಗಳನ್ನು ತಿಳಿಸಲಿಚ್ಛಿಸುವೆ.    ಸ್ವಲ್ಪ ಧೈರ್ಯ ತೋರಿಸಿ, ತನಗಾಗುವ ಘಾಸಿಯ ಕಡೆಗೆ ಗಮನ ಕೊಡದೇ ಮುನ್ನುಗ್ಗಿದರೆ, ಯಾರೂ ಎದುರು ನಿಲ್ಲುವುದಿಲ್ಲ.  ಎಷ್ಟೋ ಬಾರಿ ಸಣ್ಣಗಿದ್ದು, ಮೈನಲ್ಲಿ ಸರಿಯಾಗಿ ಶಕ್ತಿ ಇಲ್ಲದವರು ಹೆಚ್ಚಿನ ಶಕ್ತಿಯುತರನ್ನು ಹೆದರಿಸಿರುವ ಸಂದರ್ಭವನ್ನು ಎಲ್ಲರೂ ನೋಡಿರುವುದೇ ತಾನೆ!  ಈ ಮನುಷ್ಯನ (ಬೀರ್‌ಮ್ಯಾನ್), ಹೆಸರು ಕೆಲವೊಮ್ಮೆ ರವೀಂದ್ರ ಆದರೆ, ಇನ್ನು ಕೆಲವೊಮ್ಮೆ ರಹೀಮ್.  ಈತ ತನ್ನ ಕುಟುಂಬದೊಂದಿಗೆ ಮರೀನ್ ಲೈನ್ಸ್ ಹತ್ತಿರದ ರಸ್ತೆ ಬದಿಯಲ್ಲಿ ವಾಸವಾಗಿದ್ದನಂತೆ.  ಪೊಲೀಸರ ಕೈಗೆ ಸಿಕ್ಕಿ ಬಿದ್ದ ಮೇಲೆ ಈತನ ಕುಟುಂಬ ಈಗಲೂ ರಸ್ತೆ ಬದಿಯಲ್ಲಿಯೆ ವಾಸ ಇದೆಯಂತೆ.  ಪೊಲೀಸರು ಮಂಪರು ಪರೀಕ್ಷೆಗೆ ಗುರಿಪಡಿಸಿ, ಸತ್ಯಾಂಶ ಹೊರಹಾಕಿಸಿದಾಗ ತಿಳಿದ ಸುದ್ಧಿಯಂತೆ,  ವಸ್ತುತಃ ಈತ ಮುಸ್ಲಿಮನಾಗಿದ್ದು, ಮುಸ್ಲಿಮರಲ್ಲಿ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದವರ ಮೇಲೆ ಎರಗುತ್ತಿದ್ದನಂತೆ.  ಅದಲ್ಲದೇ ಇವನನ್ನು ಹಿಡಿದಿರುವ ಪೊಲೀಸರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದೂ, ತಾನು ಮುಕ್ತನಾಗಿ ಹೊರಗೆ ಬಂದ ಕೂಡಲೇ ಅವರ ಮೇಲೆ ಎರಗುವುದು ಖಂಡಿತವೆಂದೂ ತಿಳಿಸಿದ್ದಾನಂತೆ.  ಇದರಿಂದ ಪೊಲೀಸರ ಬೆನ್ನು ಹುರಿಯಲ್ಲಿ ಛಳಿ ಕಾಣಿಸಿಕೊಂಡಿದೆಯಂತೆ.  ಇಂತಹ ಸಮಾಜ ಘಾತುಕರನ್ನು ನ್ಯಾಯಾಲಯ ಸರಿಯಾಗಿ ಶಿಕ್ಷಿಸುವುದಿಲ್ಲವೆಂದು ಆತನೂ ಅರಿತಿರುವನು.  ಇಲ್ಲದಿದ್ದರೆ ಹೀಗೆ ಹೇಳುತ್ತಿದ್ದನೇ?  ಇಂತಹವರನ್ನು ಹೆಚ್ಚು ಹೆಚ್ಚಾಗಿ ಈ ಸಮಾಜದಲ್ಲಿ ಕಾಣದಿರುವಂತೆ ಮಾಡಲು ಏನು ಮಾಡಬೇಕು?  ನನ್ನ ಮನಸ್ಸಿನಲ್ಲಿ ಬರುವ ಚಿಂತನೆಯಂತೆ, ಮೊದಲು ನ್ಯಾಯಾಲಯ  ಕಡಿಮೆ ಕಾಲಾವಧಿಯಲ್ಲಿ ವಿಚಾರಣೆ ಮಾಡಿ ಸೂಕ್ತ ಶಿಕ್ಷೆಯನ್ನು ಕೊಟ್ಟು, ಮತ್ತೆ ಸಮಾಜದಲ್ಲಿ ಇತರರು ಇಂತಹ ಕೃತ್ಯಗಳನ್ನು ಎಸಗಲು ಧೈರ್ಯ ತೋರದಂತೆ ನೋಡಿಕೊಳ್ಳಬೇಕು.  ಎರಡನೆಯದಾಗಿ, ರಸ್ತೆ ಬದಿಯಲ್ಲಿರುವ ಮಕ್ಕಳಿಗೆ ಸೂಕ್ತವಾದ ಪುಕ್ಕಟೆ ಓದು ಬರಹಾನ್ನು ಕೊಟ್ಟು ಸಮಾಜವನ್ನು ಉದ್ಧರಿಸುವಂತೆ ಮಾಡಬೇಕು.  ಈ ಕೆಲಸವನ್ನು ನಾವು ನೀವು ಮಾಡಬೇಕಲ್ಲವೇ?  ಅದಕ್ಕೆ ಸೂಕ್ತವಾದ ಸರ್ಕಾರವನ್ನೂ ತಯಾರು ಮಾಡಬೇಕಲ್ಲವೇ?

 

 

 

ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 5

೧೯೮೫ರ ಕೊನೆಯ ಭಾಗದಲ್ಲಿ ಒಂದು ಸಣ್ಣ ಮನೆ ಮಾಡಿದ್ದೆನು.  ತ್ಯಾಗರಾಜನಗರದ ಆಟೋ ಮಾಲೀಕ ಗಂಗಣ್ಣನವರ ಎರಡು ಮಹಡಿ ಕಟ್ಟಡದಲ್ಲಿ ಒಂದು ಭಾಗದಲ್ಲಿ ನಾನಿದ್ದೆ. ಒಟ್ಟು ೬ ಮನೆಗಳಿದ್ದವು.  ಗಂಗಣ್ಣನವರಿಗೆ ಸರಿಯಾಗಿ ಓದಲು ಬರೆಯಲು ಬರುತ್ತಿರಲಿಲ್ಲ.  ಏನೇ ಪತ್ರ ವ್ಯವಹಾರ ಅಗ್ರೀಮೆಂಟ್ ಮಾಡಬೇಕಿದ್ದರೂ ನನ್ನ ಬಳಿಗೇ ಬರುತ್ತಿದ್ದರು.  ಆದರೆ ವ್ಯವಹಾರದಲ್ಲಿ ಮಾತ್ರ ಎತ್ತಿದ ಕೈ.  ಮೊದಲು ಅವರಿಗಿದ್ದದ್ದು ಒಂದು ಆಟೊ.  ಅದನ್ನು ಓಡಿಸುತ್ತಾ ಸ್ವಲ್ಪ ಹಣ ಮಾಡಿ ಇನ್ನೊಂದು ಆಟೊವನ್ನು ಕೊಂಡು ತ್ಯಾಗರಾಜನಗರದ ದತ್ತಾತ್ರೇಯ ದೇವಸ್ಥಾನದ ಹಿಂಭಾಗದಲ್ಲಿ ಒಂದು ನಿವೇಶನ ಕೊಂಡರು.  ಏನೂ ದುರಭ್ಯಾಸವಿರದ ಆತ ರಾತ್ರಿಯಲ್ಲಿ ಸ್ವಲ್ಪ ಹೊತ್ತು ಆಟೋ ಓಡಿಸಿ, ಬೆಳಗಿನ ಹೊತ್ತಿನಲ್ಲಿ ತನ್ನ ತಾಯಿ ಮತ್ತು ಪತ್ನಿಯ ಸಹಾಯದಿಂದ ಮತ್ತು ನಾಲ್ಕೈದು ಕೆಲಸಗಾರರ ಸಹಾಯದಿಂದ ಎರಡು ಮಹಡಿಯ ಕಟ್ಟಡ ಕಟ್ಟಿಯೇ ಬಿಟ್ಟಿದ್ದರು.  ಅದರಲ್ಲಿ ಒಟ್ಟು ೬ ಮನೆಗಳಿದ್ದವು.  ಒಂದು ಮನೆಯಲ್ಲಿ ತಾವಿದ್ದುಕೊಂಡು ಇನ್ನೈದನ್ನು ಬಾಡಿಗೆಗೆ ಕೊಟ್ಟಿದ್ದರು.  ಅವರ ಮನೆಗೆ ಬಂದ ಮೊದಲ ಗಿರಾಕಿಯೇ ನಾನು.   ಮನೆಗೆ ಮೊದಲ ಅಗ್ರೀಮೆಂಟು ನನ್ನದೇ.  ಅದನ್ನು ಬರೆದವನೂ ನಾನೇ!  ಆ ಕರಾರು ೧೧ ತಿಂಗಳದ್ದೆಂದೂ ಮರು ಕರಾರಿನ ಸಮಯದಲ್ಲಿ ಬಾಡಿಗೆಯನ್ನು ಶೇಕಡಾ ೫ ರಷ್ಟು ಹೆಚ್ಚಿಸುವುದಾಗಿಯೂ ಬರೆಯುವಂತೆ ಕೇಳಿಕೊಂಡಿದ್ದರು.   ಆಗ ನನ್ನ ಮನೆಗೆ ನಿಗದಿಪಡಿಸಿದ್ದ ತಿಂಗಳ ಬಾಡಿಗೆ ರೂ. ೨೦೦/-.   ಇದು ಬಹು ಕಡಿಮೆಯಾದ್ದರಿಂದ ಅವರು ಹೇಳಿದ್ದಕ್ಕೆಲ್ಲಾ ನಾನು ಒಪ್ಪಿದ್ದೆ.  ಆದರೆ ಮುಂದೆ ಮನೆಗೆ ಬಂದ ಬಾಡಿಗೆದಾರರಿಗೆ ಗಂಗಣ್ಣನವರ ಕರಾಮತ್ತಿನ ಅರಿವಾಗಿ ನನ್ನ ಮೇಲೆ ತಿರುಗಿ ಬಿದ್ದಿದ್ದರು.  ಅವರ ಎಲ್ಲ ಪ್ರತಿಕ್ರಿಯೆಗಳಿಗೂ ಗಂಗಣ್ಣನವರ ಕಡೆ ಕೈ ತೋರಿಸುತ್ತಿದ್ದೆ.  ಅಂತಹ ಸಂದರ್ಭದಲ್ಲಿ ಗಂಗಣ್ಣ ಬಹು ಸುಲಭವಾಗಿ ನುಣುಚಿಕೊಳ್ತಿದ್ದರು. 

 

ಈ ಗಂಗಣ್ಣನವರ ಮನೆಯಲ್ಲಿ ತನ್ನ ತಾಯಿ, ಪತ್ನಿ ಮತ್ತು ಎರಡು ಗಂದು ಮತ್ತು ಒಂದು ಹೆಣ್ಣು ಮಗುವಿದ್ದಿತು.  ಮೊದಲ ಮಗನಿಗೆ ೮ ವರ್ಷವಾಗಿದ್ದರೂ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ.   ಸ್ವಲ್ಪ ಪುಂಡಾಡಿಟಿಕೆ ಮಾಡುತ್ತಿದ್ದ ಹುಡುಗ.  ಅಪ್ಪ ಅಮ್ಮನನ್ನು ಸುಲಭವಾಗಿ ಮೋಸಗೊಳಿಸುತ್ತಿದ್ದ.  ಅವನ ಬಗ್ಗೆ ನಾನಷ್ಟು ಗಮನಿಸಿರಲಿಲ್ಲ.  ಅಂದು ರಾತ್ರಿ ಸ್ವಲ್ಪ ತಡವಾಗಿ ಮನೆಗೆ ಬಂದೆ.  ಕೆಳಗೆ ಗೇಟಿನ ಹತ್ತಿರ ಎರಡೂ ಆಟೋಗಳು ನಿಂತಿದ್ದವು.  ಒಂದು ಆಟೋವಿನಲ್ಲಿ ಈ ಹುಡುಗ ಕುಳಿತು ಏನನ್ನೋ ಮಾಡುತ್ತಿದ್ದಂತೆ ಕಂಡಿತು.  ಇಷ್ಟು ಹೊತ್ತಿನಲ್ಲಿ ಈ ಹುಡುಗ ಏನು ಮಾಡುತ್ತಿದ್ದಾನೆ ನೋಡೋಣ ಎಂದು ನಾನು ಆಟೋವಿನ ಒಳಗೆ ಬಗ್ಗಿ ನೋಡಲು, ಕಂಡದ್ದೇನು?  ಆ ಹುಡುಗ ಆಟೋದಲ್ಲಿನ ಪೆಟ್ರೋಲ್ ಟ್ಯಂಕ್ ಮುಚ್ಚಳ ತೆಗೆದು ವಾಸನೆ ಹೀರುತ್ತಿದ್ದ.  ನನ್ನನ್ನು ನೋಡುತ್ತಿದ್ದಂತೆಯೇ ಮನೆಯೊಳಗೆ ಓಡಿ ಹೋದ.  ಅಂದಿನಿಂದ ಆ ಹುಡುಗನ ಮೇಲೆ ನಿಗಾ ಇಡಲಾರಂಭಿಸಿದೆ.  ಪ್ರತಿ ದಿನ ಯಾರೂ ಇಲ್ಲದ ಸಮಯದಲ್ಲಿ ಈ ಹುಡುಗ ಯಾವುದಾದರೂ ಆಟೋ ನಿಂತಿದ್ದರೆ ಅದರ ಪೆಟ್ರೋಲ್ ಟ್ಯಾಂಕಿನ ಮುಚ್ಚಳ ತೆಗೆದು ವಾಸನೆ ಹೀರುತ್ತಿದ್ದ.  ಈ ವಿಷಯವನ್ನು ಗಂಗಣ್ಣನವರಿಗೆ ತಿಳಿಸಿದೆ.  ಅವರು ಹೇಳಿದಂತೆ ಈ ಹುಡುಗ ಮನೆಯೊಳಗೆ ಬರುತ್ತಿದ್ದಂತೆ ಮತ್ತು ಬಂದವನಂತೆ ಮಲಗಿಬಿಡುತ್ತಿದ್ದನಂತೆ.  ಆಗ ನಮ್ಮಿಬ್ಬರಿಗೆ ತಿಳಿದದ್ದು ಏನೆಂದರೆ, ಪೆಟ್ರೋಲ್ ವಾಸನೆ ಆ ಹುಡುಗನಿಗೆ ಮತ್ತು ಬರಿಸುತ್ತಿತ್ತು ಮತ್ತು ಅವನು ಅದರ ಚಟಕ್ಕೆ ಬಲಿಯಾಗುತ್ತಿದ್ದನು.  ಹುಡುಗನ ಮೇಲೆ ಹೆಚ್ಚಿನ ನಿಗಾ ಇಡಲು ಮತ್ತು ಅವನನ್ನು ಪ್ರತಿದಿನ ಸಂಜೆ ಒಂದು ಘಂಟೆಗಳ ಕಾಲ ನನ್ನ ಹತ್ತಿರ ಪಾಠಕ್ಕೆ ಕಳುಹಿಸಲು ಹೇಳಿದೆ.  ಹಾಗೆಯೇ ಒಮ್ಮೆ ಶಾಲೆಯ ಮಾಸ್ತರರನ್ನೂ ಭೇಟಿಯಾಗಿ, ಈ ಹುಡುಗನ ಬಗ್ಗೆ ಹೆಚ್ಚಿನ ನಿಗಾ ಇಡುವಂತೆ ಕೇಳಿಕೊಳ್ಳಲೂ ಗಂಗಣ್ಣನವರಿಗೆ ತಿಳಿಸಿದ್ದೆ. 

 

*****************

 

ಅದೇ (೧೯೮೫-೮೬) ಸಮಯದಲ್ಲಿ ಫುಟ್‍ಬಾಲ್ ವಿಶ್ವಕಪ್ ಪಂದ್ಯಗಳು ಪ್ರಾರಂಭವಾಗುತ್ತಿದ್ದವು.   ಅಲ್ಲಿಯವರೆವಿಗೆ ನನಗೆ ಕ್ರಿಕೆಟ್ ಬಿಟ್ಟು ಮತ್ತಿನ್ಯಾವ ಆಟಗಳಲ್ಲೂ ಅಭಿರುಚಿ ಇರಲಿಲ್ಲ.  ನನ್ನ ಸ್ನೇಹಿತ ಲಕ್ಷ್ಮೀನಾರಾಯಣ ಆ ಸಮಯದಲ್ಲಿ ಟಿವಿ ತೆಗೆದುಕೊಳ್ಳಲು ಹೇಳಿದ್ದ.  ಅಲ್ಲಿಯವರೆವಿಗೆ ನನ್ನ ಮನೆಯಲ್ಲಿ ಇದ್ದ ವಸ್ತುಗಳೆಂದರೆ ೩-೪ ಪಾತ್ರೆಗಳು, ಗ್ಯಾಸ್, ಒಂದು ಕುರ್ಚಿ, ಒಂದು ಚಾಪೆ, ಹೊದ್ದಿಕೆ, ಎರಡು ಬಕೆಟ್‍ಗಳಷ್ಟೇ. 

 

ಟಿವಿ ಎಲ್ಲಿ ತೆಗೆದುಕೊಳ್ಳಬೇಕು, ಯಾವುದು ಚೆನ್ನಾಗಿರುತ್ತದೆ ಏನೂ ತಿಳಿದಿರಲಿಲ್ಲ.  ಕಡೆಗೆ ಲಕ್ಷ್ಮೀನಾರಾಯಣನೇ ಒಂದು ಚಿಕ್ಕ ಡಯನೋರಾ ಟಿವಿ ಕೊಡಿಸಿದ್ದ.  ಟಿವಿ ಮನೆಗೆ ಬಂದ ಕೂಡಲೇ ದಿನವಹೀ ಸಂಜೆಗೆ ಏನೇ ಕಾರ್ಯಕ್ರಮ ಬರಲಿ,  ಸುತ್ತ ಮುತ್ತಲಿದ್ದ ಎಲ್ಲ ಮಕ್ಕಳೂ ಮನೆಯ ಬಾಗಿಲ ಹತ್ತಿರ ಬಂದು ಕುಳಿತುಬಿಡುತ್ತಿದ್ದರು.  ಏನೇ ಕಾರ್ಯಕ್ರಮ ಬಂದರೂ ನೋಡ್ತಿದ್ದ ನಾನು ಫುಟ್‍ಬಾಲ್ ಮ್ಯಾಚ್ ಇದ್ದಾಗ ರಾತ್ರಿಯೆಲ್ಲ ಜಾಗರಣೆ ಮಾಡ್ತಿದ್ದೆ.  ಹೀಗೆಯೇ ಒಮ್ಮೆ ಬೆಳಗಿನ ಜಾವ ೩ ಘಂಟೆಯವರೆವಿಗೂ ಮ್ಯಾಚ್ ನೋಡಿದವನು ಬೆಳಗ್ಗೆ ೭ ಘಂಟೆಗೆ ಎದ್ದಾಗ ಕಣ್ಣುರಿ.  ಸ್ನಾನ ಇತ್ಯಾದಿ ಮುಗಿಸಿ, ೮ ಘಂಟೆಯ ಹೊತ್ತಿಗೆ ಹೇಗೂ ಬ್ಯಾಂಕಿಗೆ ಹೊರಡಲು ಇನ್ನೂ ೧ ಘಂಟೆ ಇರುವುದೆಂದು, ಹಾಗೆಯೇ ಚಾಪೆಯ ಮೇಲೆ ಮಲಗಿದ್ದೆ.  ಯಾವಾಗ ನಿದ್ರೆ ಬಂದಿತೋ ತಿಳಿಯದು – ಮುಂದುಗಡೆಯ ಬಾಗಿಲನ್ನೂ ಹಾಕಿರಲಿಲ್ಲ.  ನನ್ನ ಸ್ನೇಹಿತ ಸೀದಾ ಮನೆಯೊಳಗೆ ಬಂದು ಮೈ ಮುಟ್ಟಿ ಎಬ್ಬಿಸಿದಾಗಲೇ ತಿಳಿದದ್ದು ಸಮಯ ೯.೩೦ ಆಗಿದೆ ಎಂದು.  ಹಾಗೆಯೇ ದಡ ಬಡಾಂತ ಬ್ಯಾಂಕಿಗೆ ಓಡಿದ್ದೆ.  ಮನೆಯಲ್ಲಿ ಏನನ್ನೂ ತಿನ್ನಲಾಗಿರಲಿಲ್ಲ ಮತ್ತು ಕ್ಯಾಂಟಿನಿಗೂ ಹೋಗಲು ಸಮಯ ಆಗಲಿಲ್ಲ. ರಾತ್ರಿ ಜಾಗರಣೆ ಆಗಿತ್ತು, ಬೆಳಗ್ಗೆ ಉಪವಾಸ. 

 

ಒಂದು ಭಾನುವಾರ ನಾವು ಸ್ನೇಹಿತರೆಲ್ಲರೂ ನಮ್ಮ ಸೈಟುಗಳಿದ್ದ ಜಾಗಕ್ಕೆ ಹೋಗೋಣ ಎಂದು ತೀರ್ಮಾನಿಸಿದ್ದೆವು.  ಜಯನಗರ ಕಾಂಪ್ಲೆಕ್ಸಿನ್ನಿಂದ ಮುಂದಕ್ಕೆ ಬಟಾಬಯಲು ಇದ್ದಿತ್ತು.  ಎಲ್ಲೋ ಅಲ್ಲಲ್ಲಿ ಒಂದೊಂದು ಮನೆಗಳ್ಳಿದ್ದಿತ್ತು ಅಷ್ಟೆ.  ಜೆ.ಪಿ.ನಗರಕ್ಕೆ ಬಸ್ಸುಗಳು ಸಹಿತ ಇರಲಿಲ್ಲ.  ನಡೆದೇ ಹೋಗಿದ್ದೆವು.  ಜೆಪಿ ನಗರದ ೧೫ನೇ ಕ್ರಾಸಿನಿಂದ ಮುಂದಕ್ಕೆ ರಸ್ತೆಯೂ ಸರಿಯಾಗಿರಲಿಲ್ಲ.  ಗದ್ದೆಯೆ ಮಧ್ಯದಿಂದ, ಕೆರೆಯ ಏರಿಯ ಮೇಲೆ ಹೋದಾಗ ಮುಂದೆ ಕಂಡದ್ದು ಒಂದು ದೊಡ್ಡ ಮಾವಿನ ತೋಪು.  ಅಲ್ಲಿ ಬೋರ್ಡ್ ಇರಲಿಲ್ಲ. ದೊಡ್ಡದಾದ ತೋಟದಲ್ಲಿ ಮೊದಲಿಗೆ ಕಾಣಿಸಿದ್ದೇ ಕಪ್ಪು ದ್ರಾಕ್ಷಿಗಳ ಬಳ್ಳಿಗಳು.  ಇದೇ ನಮ್ಮ ಸೊಸೈಟಿಯೆಂದು ತಿಳಿದೆವು.   ಸಣ್ಣ ಗೇಟ್ ಇದ್ದಿತ್ತು.  ಅದನ್ನು ತಳ್ಳಿಕೊಂಡು ಒಳ ಹೋದ ಕೂಡಲೇ ಅಲ್ಲಿದ್ದ ಮಾಲಿ ಬಂದು ಯಾರು ನೀವು, ನಿಮಗೇನು ಬೇಕು?’ ಎಂದು ಕೇಳಿದ.  ಅದಕ್ಕೆ ನಾವು ಇಲ್ಲಿ ಮುಂದೆ ಮನೆ ಕಟ್ಟುವವರು, ನಮ್ಮಗಳ ಸೈಟ್ ನೋಡಲು ಬಂದಿದ್ದೇವೆ‘, ಎಂದು ಹೇಳಿದೆವು.  ಅದಕ್ಕವನು, ‘ಈಗ ಇಲ್ಯಾವ ಸೈಟನ್ನೂ ಮಾಡಿಲ್ಲ, ಮಾಡಿದ ಮೇಲೆ ಬನ್ನಿ, ಈಗ ಒಳಗೆ ಬರೋ ಹಾಗಿಲ್ಲಎಂದ.   ಆಗ ನಮಗೆ ಬಲು ಕೋಪ ಬಂದಿತ್ತು, ‘ನಮ್ಮ ನೆಲಕ್ಕೆ ಕಾಲಿಟ್ಟ ನಮ್ಮನ್ನೇ ಯಾರು ಅಂತ ಕೇಳೋ ಇವನ್ಯಾವನು, ಅಂತ ಅಂದುಕೊಂಡು, ಪಕ್ಕದಲ್ಲೇ ಇದ್ದ ತೆಂಗಿನ ಮರ ನೋಡಿ ಸರಿ ಎರಡು ಎಳನೀರು ಕಿತ್ತುಕೊಡುಎಂದು ಹೇಳಿದೆವು.  ಅವನಂತೂ ನಮ್ಮ ಮೇಲೆ ಜಗಳ ಕಾಯಲು ಬಂದೇಬಿಟ್ಟ.  ಒಂದು ಸಲ ಹೇಳಿದರೆ, ನಿಮಗರ್ಥ ಆಗೋಲ್ವೇ?  ನಡೀರಿ ಆಚೆಗೆ‘.  ಅಷ್ಟು ಹೊತ್ತಿಗೆ ಸೊಸೈಟಿಯ ಡೈರೆಕ್ಟರುಗಳಲ್ಲೊಬ್ಬರಾದ ಈಶ್ವರಮೂರ್ತಿಗಳು ಬರುತ್ತಿರುವುದು ಕಾಣಿಸಿತು.  ಅವರಿಗೆ ನಮಸ್ಕಾರ ಹೇಳಿದೆವು.  ಅದಕ್ಕವರು, ‘ಇದೇನು ನೀವೆಲ್ಲಾ ಇಲ್ಲಿ?  ಇವತ್ತು ಪೂಜೆ ಇದೆ, ನಿಮಗೆಲ್ಲಾ ಹೇಳುವಂತೆ ಪುತ್ತೂರಾಯರಿಗೆ ಹೇಳಿದ್ದೆವು (ನಂತರ ಇದು ಸುಳ್ಳಿನ ಮಾತೆಂದು ತಿಳಿಯಿತು).  ಬಂದದ್ದು ಒಳ್ಳೆಯದೇ ಆಯ್ತು.  ನಡೀರಿ ಒಳಗೆ, ಅಲ್ಲಿ ಪೂಜೆ ಶುರು ಆಗತ್ತೆ‘, ಅಂದರು.  ಅಲ್ಲಿ ನೋಡಿದ್ರೆ ಬರಿ ಅವರುಗಳೇ (ಡೈರಕ್ಟರುಗಳು ಮತ್ತು ಅವರುಗಳ ಮನೆಯವರು) ತುಂಬಿದ್ದಾರೆ.  ಸಾಮಾನ್ಯ ಸದಸ್ಯರುಗಳ್ಯಾರೂ ಇಲ್ಲ.  ತೋಟವನ್ನು ಸುತ್ತಿ ಬರುವೆವು ಎಂದು ತಿಳಿಸಿದ್ದಕ್ಕೆ, ‘ಬನ್ನಿ ಜಾಗ ಪೂರ್ತಿಯಾಗಿ ತೋರಿಸುವೆ, ಲೇ! ನಾಯರ್ ಇವರುಗಳಿಗೆಲ್ಲಾ ಪರಮಾಯಿಷಿ ಎರಡೆರಡು ಎಳನೀರು ಕಿಟ್ಟು ಕೊಡೋಎಂದರು.  ನಮಗೆಲ್ಲಾ ಅತೀವ ಸಂತೋಷವಾಗಿತ್ತು.  ಈ ಸಲ ಚುನಾವಣೆ ಆದ್ರೆ ಇವರುಗಳಿಗೆ ಮತ ನೀಡಬೇಕೆಂದು ಮನಸ್ಸು ಮಾಡಿದ್ದೆವು.

 

ಅಲ್ಲಿದ್ದ ದ್ರಾಕ್ಷಿ ತೋಟ, ಸಪೋಟ ತೋಟ, ತೆಂಗಿನ ತೋಟ, ಮಾವಿನ ತೋಪು, ದಾಳಿಂಬೆ ತೋಟ ಇತ್ಯಾದಿ ಎಲ್ಲವನ್ನೂ ನೋಡಿ, ಸ್ವಲ್ಪ ಸರಕನ್ನು ಕಿತ್ತುಕೊಂಡಿದ್ದೆವು.  ಪೂಜೆ ಇದ್ದ ಸ್ಥಳಕ್ಕೆ ಮರುಳುವ ಸಮಯಕ್ಕೆ ಸರಿಯಾಗಿ ಎಲ್ಲರೂ ಊಟಕ್ಕೆ ಕಾಯ್ತಿದ್ದರು.  ಸಕ್ಕರೆ ಪೊಂಗಲ್ ಮತ್ತು ಪುಳಿಯೋಗರೆಗಳನ್ನು ಒಳಗೊಂಡಿದ್ದ ಸುಗ್ರಾಸ ಭೋಜವನಕ್ಕೆ ಮನ ಸೋತಿದ್ದೆವು.  ವಾಪಸ್ಸು ಬರುವಾಗ ಮತ್ತೆ ಆ ಮಾಲಿ ನೋಡುತ್ತಿದ್ದಂತೆಯೇ ಒಂದಷ್ಟು ದ್ರಾಕ್ಷಿಗಳನ್ನು ಕಿತ್ತು ನಮ್ಮ ನಮ್ಮ ಚೀಲಗಳಿಗೆ ತುಂಬಿಸಿಕೊಂಡು ಅವನೆಡೆಗೆ ಕುಹಕ ನಗೆ ಬೀರಿದ್ದೆವು.  ಅಂದು ಮಾಡಿದ್ದು ಸರಿಯಲ್ಲವೆಂದು ಇಂದು ಅನ್ನಿಸುತ್ತಿದೆ.  ಆದರೇನು ಇವೆಲ್ಲಾ ಜೀವನದ ಒಂದೊಂದು ಆಯಾಮಗಳು.  ಮತ್ತೆ ಮತ್ತೆ ಮೆಲುಕು ಹಾಕಲು ಸರಕುಗಳು.

 

 

**************

 

ಬ್ಯಾಂಕಿನ ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಮಾಡುವವರಿಗೆ ಹೊಸ ನೋಟುಗಳನ್ನು ತಾಲ್ಲೂಕುಗಳಲ್ಲಿರುವ ಕರೆನ್ಸಿ ಚೆಸ್ಟ್‍ಗಳಿಗೆ ತೆಗೆದುಕೊಂಡು ಹೋಗುವ ಅವಕಾಶ ಸಿಗುತ್ತದೆ.  ಅದನ್ನು ರೆಮಿಟೆನ್ಸ್ ಡ್ಯೂಟಿ ಎಂದು ಕರೆಯುವರು.  ಮೊದಲ ಬಾರಿಗೆ ಗುಲ್ಬರ್ಗಾ ಜಿಲ್ಲೆಯ ಗುರುಮಠಕಲ್ಲಿಗೆ ಹೋಗಿದ್ದೆ.  ಅಲ್ಲಿಯ ಸಂಚಾರ ವ್ಯವಸ್ಥೆ, ರಸ್ತೆಗಳು ಮತ್ತು ಬಿಸಿಲಿನ ಬಗ್ಗೆ ಹೇಳುವುದಕ್ಕಿಂತ ಅನುಭವಿಸಿದರೇ ತಿಳಿಯುವುದು. 

 

ಬೆಂಗಳೂರಿನಿಂದ ಟ್ರೈನ್‍ನಲ್ಲಿ ಯಾದಗಿರಿಗೆ ಹೋಗಿ ಅಲ್ಲಿಂದ ಮುಂದಕ್ಕೆ ರಸ್ತೆಯ ಮೂಲಕ ಗುರುಮಠಕಲ್ಲಿಗೆ ಹೋಗಿದ್ದೆ.   ೫೦ ಕಿಲೋಮೀಟರ್ ಗಳ ರಸ್ತೆಯ ದೂರವನ್ನು ಕ್ರಮಿಸಲು ತೆಗೆದುಕೊಂಡ ವೇಳೆ ಮೂರು ಘಂಟೆಗಳು.  ಗುರುಮಠಕಲ್ ಇರುವುದು ಆಂಧ್ರಪ್ರದೇಶದ ಗಡಿಯಲ್ಲಿ.  ಇದೊಂದು ಸಣ್ಣ ಊರು.  ವ್ಯಾಪಾರಕ್ಕಾಗಿ ಆಂಧ್ರದಿಂದ ಇಲ್ಲಿಗೆ ಬರುವವರು ಬಹಳ ಮಂದಿ.  ಹತ್ತಿರದಲ್ಲೇ ಇರುವ ಆಂಧ್ರದ ನಾರಾಯಣಪೇಟೆಗೆ ಕನ್ನಡಿಗರು ವ್ಯಾಪಾರಕ್ಕಾಗಿ ಹೋಗುವರು.  ಈ ಊರಿನಲ್ಲಿ ೩-೪ ರಸ್ತೆಗಳಲ್ಲಷ್ಟೇ ಜನಸಂದಣಿ.  ಬಸ್ ನಿಲ್ದಾಣದ ಹತ್ತಿರ ಇರುವುದೊಂದೇ ಹೊಟೆಲ್.  ಒಂದೆರಡು ಖಾನಾವಳಿಗಳಿವೆಯಷ್ಟೆ.   ಊರು ಬಸ್ ನಿಲ್ದಾಣದಿಂದ ಪ್ರಾರಂಭವಾಗುವುದು.  ಅನತಿ ದೂರಿದಲ್ಲಿ ಟ್ರಾವಲರ್ಸ್ ಬಂಗಲೆ ಇದೆ.  ಅಲ್ಲಿಂದ ಸ್ವಲ್ಪ ದೂರ ಹೋಗಲು ಗಡಿ ಭಾಗ ಬರುವುದು.  ಇಲ್ಲಿ ಜನಗಳಾಡುವ ಭಾಷೆಯಲ್ಲಿ ಉರ್ದು, ತೆಲುಗು ಮಿಶ್ರಿತವಾದ ಕನ್ನಡ. 

 

ರಸ್ತೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ  ನಡೆದಾಡುವುದು ಬಲು ಕಷ್ಟ.  ತಲೆಯ ಮೇಲೆ ಉರಿ ಬಿಸಿಲು.  ಕೆಳಗೆ ಕಾದ ನೆಲ.  ಅನೇಕ ಹಳ್ಳಿಗರು ಬರಿಗಾಲಿನಲ್ಲಿ ಅದು ಹೇಗೆ ನಡೆಯುತ್ತಾರೋ ಏನೋ?  ಹಲವರ ಚಪ್ಪಲಿಗಳನ್ನು ಟೈರುಗಳಿಂದ ಮಾಡಿರುತ್ತಾರೆ.  ಎಲ್ಲೆಲ್ಲಿಯೂ ಉಷ್ಣವಿರುದುರಿಂದ ಇಲ್ಲಿಯ ಜನಗಳು ಹಸಿಮೆಣಸಿನಕಾಯಿಯನ್ನು ಹಾಗೆಯೇ ತಿಂದರೂ ಜೀರ್ಣಿಸಿಕೊಳ್ಳಬಲ್ಲರು – ಅವರಿಗೆ ಅದು ಹೆಚ್ಚಿನ ಖಾರವೆನಿಸುವುದಿಲ್ಲ.    ನಾನು ಅಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದಿಗೆ ಹೋಗಿದ್ದೆ.  ಅಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಒಬ್ಬರು ಬೆಂಗಳೂರಿನವರಿದ್ದರು.  ಈಗ ಅವರ ಹೆಸರು ನೆನಪಿಲ್ಲ.  ಬಹುಶ: ಮುರಳಿ ಅಂತ ಇರಬೇಕು.    ಆ ಊರಿನಲ್ಲಿ ಹೊಟೆಲ್ ಇಲ್ಲದಿರುವುದರಿಂದ, ಉಳಿದುಕೊಳ್ಳಲು ಕಷ್ಟವಾಗುವುದೆಂದು ತಮ್ಮ ಕೋಣೆಗೆ ಬರಲು ಹೇಳಿದ್ದರು.  ಊಟಕ್ಕೆ ವಸತಿಗೆ ಎಲ್ಲಿ ಹೋಗಬೇಕೆಂದು ಯೋಚಿಸುತ್ತಿದ್ದ ನನಗೂ ಅದೇ ಬೇಕಿತ್ತು.  ನಾನಲ್ಲಿದ್ದದ್ದು ೧೦ ದಿನಗಳ ಕಾಲ.  ಬೆಳಗ್ಗೆ ಸ್ನಾನ ಮಾಡಲು ಅವಕಾಶವಿರಲಿಲ್ಲ.   ಕುಡಿಯುವ ನೀರಿಗೆ ಮಾತ್ರ ಬಹಳ ತೊಂದರೆ ಇದೆ.  ಇದೊಂದು ಬರಪೀಡಿತ ಪ್ರದೇಶ.  ಇವರಿದ್ದ ಬೀದಿಯಲ್ಲಿ, ಪ್ರತಿ ದಿನ ಮಧ್ಯಾಹ್ನ ೧ ಘಂಟೆಗೆ ಒಂದು ಘಂಟೆಗಳ ಕಾಲ ಬೀದಿ ನಲ್ಲಿಯಲ್ಲಿ ನೀರು ಬರುತ್ತಿತ್ತು.  (ಆದರೆ ಬ್ಯಾಂಕಿಗೆ ಮಾತ್ರ ನೀರಿನ ಬೇರೆ ವ್ಯವಸ್ಥೆ ಇತ್ತು).  ನೀರು ಬರುವ ಸಮಯದಲ್ಲಿ ಸಾರ್ವಜನಿಕರೆಲ್ಲರೂ ಮನೆಯ ಹತ್ತಿರದ ನಲ್ಲಿಗಳ ಮುಂದೆ ಸರತಿಯ ಸಾಲಿನಲ್ಲಿ ನಿಂತಿರುವುದನ್ನು ನೋಡುವುದು ಒಂದು ಸಾಮಾನ್ಯ ದೃಶ್ಯ.  ಇದರ ಬಗ್ಗೆ ನನಗೆ ತಿಳಿಯದ ನಾನು ಮೊದಲನೆಯ ದಿನ ಮಧ್ಯಾಹ್ನ ಕ್ಯಾಷಿಯರ್ ಎಲ್ಲಿ ಎಂದು ಕೇಳಿದ್ದಕ್ಕೆ, ಅಲ್ಲಿದ್ದವರೊಬ್ಬರು ಜಳಕ ಮಾಡ್ಲಿಕ್ ಹೋಗ್ಯಾರ್ರೀಎಂದಾಗ ಅವಾಕ್ಕಾಗಿದ್ದೆ.  ಮಾರನೆಯ ದಿನ ಬೆಳಗ್ಗೆ (ಅಲ್ಲಿ ಅದು ನನ್ನ ಮೊದಲ ಬೆಳಗ್ಗೆ), ನನ್ನ ಸ್ನೇಹಿತರು ಶೌಚ ಕರ್ಮಗಳಿಗೆ ಬ್ಯಾಂಕಿಗೆ ಹೋಗಿಬರೋಣ, ನಿಮ್ಮಿಂದಾಗಿ ನಮಗೂ ಬ್ಯಾಂಕಿನ ನೀರು ಉಪಯೋಗಿಸುವ ಅವಕಾಶವನ್ನು ಮ್ಯಾನೇಜರ್ ಮಾಡಿಕೊಟ್ಟಿದ್ದಾರೆ ಎಂದು ಸಂತೋಷದಿಂದ ಹೇಳಿದ್ದರು.   ಅಂದಿನಿಂದ ನಾನಿರುವವರೆವಿಗೂ ಅವರಿಗೂ ಬ್ಯಾಂಕಿನಲ್ಲೇ ಬೆಳಗಿನ ಸ್ನಾನದ ಅವಕಾಶವೂ ಸಿಕ್ಕಿತ್ತು.  ನನಗೆ ಪ್ರತಿದಿನ ಅನ್ನ ಸಾರು ಮೊಸರಿನ ಊಟದ ಸಿಗುತ್ತಿತ್ತು.  ನನ್ನಿಂದ ಅವರೂ ಒಂದೆರಡು ಸುಲಭದ ಅಡುಗೆ ವಿಧಾನವನ್ನು ಕಲಿತಿದ್ದರು.

 

ಈ ಮಧ್ಯೆ ಎರಡು ದಿನಗಳ ರಜೆ ಸಿಕ್ಕಿದುದರಿಂದ, ಹತ್ತಿರವಿರುವ ಊರುಗಳನ್ನು ನೋಡಿ ಬರಲು ನನ್ನ ಇನ್ನೊಬ್ಬ ಸ್ನೇಹಿತರಾದ ಡಿ.ಎಮ್.ಪಾಟೀಲರು ಕರೆದಿದ್ದರು.  ಅವರು ಹೋಗಿದ್ದುದು ಹುನಗುಂದಕ್ಕೆ.  ನಾನು ಗುರುಮಠಕಲ್ಲಿನಿಂದ ಹುನಗುಂದಕ್ಕೆ ಹೋಗಬೇಕಿತ್ತು.  ಯಾದಗಿರಿಗೆ ಬಂದು ಅಲ್ಲಿಂದ ನಾರಾಯಣಪುರ ಅಣೆಕಟ್ಟು ದಾಟಿ ಹುನಗುಂದ ಬಂದು ಸೇರಲು ತೆಗೆದುಕೊಂಡ ಸಮಯ ೫ ಘಂಟೆಗಳು.  ಅಂದು ರಾತ್ರಿ ಅವರೊಂದಿಗೆ ಇದ್ದು ಮಾರನೆಯ ದಿನ ಬೆಳಗ್ಗೆ ವಿಜಾಪುರಕ್ಕೆ ಹೋಗಿದ್ದೆವು.  ನೋಡಲು ವಿಜಾಪುರವು ಒಂದು ಉತ್ತಮ ಪ್ರೇಕ್ಷಣೀಯ ಸ್ಥಳ.  ಗೋಲಗುಂಬಝ್ ಬಹಳ ದೊಡ್ಡದಾದ ಗೋಲಾಕಾರದ ಕಟ್ಟಡ.  ಗೋಡೆಯ ಒಂದು ಭಾಗದಲ್ಲಿ ಪಿಸು ಮಾತನಾಡಿದರೂ ಇನ್ನೊಂದು ಭಾಗದ ಗೋಡೆಗೆ ಕಿವಿಗಾನಿಸಿಕೊಳ್ಳಲು ಅದು ಕೇಳಿಸುವುದು.  ಯಾವ ತಾಂತ್ರಿಕತೆ ಉಪಯೋಗಿಸಿ ಇದನ್ನು ಕಟ್ಟಿದ್ದಾರೋ ತಿಳಿಯದು.  ತಾಜ ಮಹಲಿಗಿಂತ ಯಾವ ದೃಷ್ಟಿಯಲ್ಲೂ ಕಡಿಮೆ ಇಲ್ಲದ ಕಟ್ಟಡ.  ಈ ಗೋಲಾಕೃತಿಯನ್ನು ರೋಮ್ ನಲ್ಲಿರುವ ಸೈಂಟ್ ಬಸಿಲಿಕಾ ಮಾದರಿಯಲ್ಲಿ ಕಟ್ಟಿದ್ದಾರಂತೆ.   ಹಾಗೇ ಅಲ್ಲಿರುವ ಬಾರಾಕಮಾನು (ಹನ್ನೆರಡು ಕಮಾನುಗಳು) ಬೇಲೂರಿನ ನಾಟ್ಯಗೃಹವನ್ನು ನೆನಪಿಸುತ್ತದೆ.  ಹಾಗೆಯೇ ಕೋಟೆ ಮತ್ತು ಅಲ್ಲಿರುವ ಉಪಯೋಗಿಸಿದೇ ಬಿದ್ದಿರುವ ತೋಪುಗಳನ್ನೂ ಕಾಣಬಹುದು.  ಇನ್ನುಳಿದ ನೋಡುವ ತಾಣಗಳೆಂದರೆ ಇಬ್ರಾಹಿಮ್ ರೌಝಾ, ಮಲಿಕ್ ಕೇ ಮೈದಾನ್, ಜುಮ್ಮಾ ಮಸೀದಿ, ಮೆಹ್ತರ್ ಮಹಲ್, ತಾಜ್ ಬಾವಡಿ, ಅಸಾರ್ ಮಹಲ್ ಮತ್ತು ಗಗನ ಮಹಲ್.  ಇಷ್ಟೆಲ್ಲಾ ನೋಡುವಂತಹ ಸ್ಥಳಗಳಿದ್ದರೂ ಪ್ರವಾಸಿಗಳಿಗೆ ಹೆಚ್ಚಿನ ಅನುಕೂಲತೆಗಳು ಇಲ್ಲದಿರುವುದು ಖೇದದ ವಿಷಯ.  ಇಷ್ಟೇಲ್ಲವನ್ನೂ ಒಂದು ದಿನಗಳಲ್ಲಿ ನೋಡುವುದು ಕಷ್ಟ.  ಆದರೂ ಅಲ್ಲಿರುವ ಕುದುರೆಗಾಡಿಯವರ ಹತ್ತಿರ ಚೌಕಾಶಿ ಮಾಡಿ ೨೦ ರೂಪಾಯಿಗಳಿಗೆ ನಾವು ನೋಡಿದ್ದೆವು.  ಮತ್ತೆ ಅಲ್ಲಿಂದ ನೇರವಾಗಿ ಗುರುಮಠಕಲ್ಲಿಗೆ ಬಂದಿದ್ದೆ. 

 

ಮರಳಿ ಬೆಂಗಳೂರಿಗೆ ಬರಲು ಭಾನುವಾರಕ್ಕೆ ಟ್ರೈನ್‍ನಲ್ಲಿ ಅವಕಾಶ ಸಿಕ್ಕಿತ್ತು.  ಅದಕ್ಕಾಗಿ ಯಾದಗಿರಿಗೆ ಶನಿವಾರವೇ ಬಂದು ಅಲ್ಲಿದ್ದ ಇನ್ನೊಬ್ಬ ಸ್ನೇಹಿತನ ಕೋಣೆಯಲ್ಲಿ ಇದ್ದೆ.   ಆ ಸ್ನೇಹಿತನೂ ನನ್ನ ಹಾಗೆಯೇ ಯಾದಗಿರಿಗೆ ಬಂದಿದ್ದನು.  ಅಲ್ಲಿ ಲಾಡ್ಜ್ ಇದ್ದುದರಿಂದ ಅವನಿಗೆ ಪ್ರತ್ಯೇಕವಾಗಿ ಇರಲು ಅವಕಾಶ ಸಿಕ್ಕಿತ್ತು.  ಅಲ್ಲಿ ಪ್ರತಿ ದಿನದ ಊಟ ಖಾನಾವಳಿಯಲ್ಲಿ.  ಖಾನಾವಳಿ ಎಂದರೆ ಹೊಟೆಲ್ ಇದ್ದಂತೆಯೇ, ಆದರೆ ಮನೆಗಳಲ್ಲಿ ಅಡುಗೆ ಮಾಡಿ ಊಟ ಬಡಿಸುವರು.  ಆದರಲ್ಲಿ ಖಾರ ತಿನ್ನುವುದು ಬಹಳ.  ಅಲ್ಲದೇ ರೊಟ್ಟಿ (ಒಣ ಚಪಾತಿ) ಜೊತೆಗೆ ಅನ್ನ ಕೊಡುವುದು ಕಡಿಮೆ.  ಸಾಂಬಾರ್, ಸಾರಿನ ಸುದ್ದಿಯೇ ಇಲ್ಲ.  ಒಳ್ಳೆಯ ಮೊಸರೊಂದು ಸಿಗುವುದಷ್ಟೆ.  ದಕ್ಷಿಣ ಕರ್ನಾಟಕದಿಂದ ಬಂದಿದ್ದಾರೆ ಅಂದ್ರೆ, ಅನ್ನ ಮೊಸರು ಕೊಡುವರು.  ಯಾದಗಿರಿಯಲ್ಲಿ ಭಾನುವಾರದಂದು ಬೆಳಗ್ಗೆ ರೈಲ್ವೇ ಸ್ಟೇಷನ್ನಿನ ಹತ್ತಿರವಿದ್ದ ಒಂದು ಹೊಟೆಲ್‍ಗೆ ಉಪಹಾರಕ್ಕಾಗಿ (ಉತ್ತರ ಕರ್ನಾಟಕದಲ್ಲಿ ತಿಂಡಿ ಎಂದರೆ ಕೆರೆತ ಎಂಬರ್ಥ) ಹೋಗಿದ್ದೆವು.  ಅದರಲ್ಲಿಯ ಮಾಲಿಕ ಉಡುಪಿಯ ಕಡೆಯವರೆಂದು ತಿಳಿಯಿತು.  ನನ್ನ ಸ್ನೇಹಿತ ಕೋಟದವನಾದ್ದರಿಂದ, ಅವರನ್ನು ಯಾವ ಊರಿನವರೆಂದು ಕೇಳಿದ್ದ.  ಅವರು ಶಂಕರನಾರ್‍ಆಯಣ ಎನ್ನಲು, ಇವನು ತನ್ನ ಪ್ರವರ ಹೇಳಿದನು.  ಅದಕ್ಕವರು ಓಹ್ ನಿಮ್ಮ ತಂದೆ ನನಗೆ ಶಾಲೆಯಲ್ಲಿ ಮಾಸ್ತರರಾಗಿದ್ದರು ಎಂದಿದ್ದರು.  ಈ ಮಾತುಗಳು ಅವನಿಗೆ ಬಹಳ ಸಂತಸ ತಂದಿತ್ತು.  ಅವನಿನ್ನೂ ಕೆಲ ಕಾಲ ಅಲ್ಲಿರಬೇಕಿದ್ದರಿಂದ ನಾನು ಅಂದಿನ ಟ್ರೈನಿನಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದೆ. 

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಮಹಾ ಶಿವರಾತ್ರಿ

                                          linga.jpg

ಓಂ ನಮ: ಶಿವಾಯ

 

ಮಹಾ ಶಿವರಾತ್ರಿಯ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

 

ವೇದ ಮಂತ್ರ : 

 

ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆಯ ವೈಶ್ವದೇವ ಕಾಂಡದಲ್ಲಿ ಉಕ್ತವಾಗಿರುವ ಶ್ರೀ ರುದ್ರ ಪ್ರಶ್ನದ  ಚಮಕದ ಮೂರನೆಯ ಅನುವಾಕ

 

ಓಂ ನಮೋ ಭಗವತೇ ರುದ್ರಾಯ

 

ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇನುಕಾಮಶ್ಚ ಮೇ ಕಾಮಶ್ಚ ಮೇ ಸೌಮನಸಶ್ಚ ಮೇ ಭದ್ರಂ ಚ ಮೇ ಶ್ರೇಯಶ್ಚ ಮೇ ವಸ್ಯಶ್ಚ ಮೇ ಯಶಶ್ಚ ಮೇ ಭಗಶ್ಚ ಮೇ ದ್ರವಿಣಂ ಚ ಮೇ ಯಂತಾ ಚ ಮೇ ಧರ್ತಾ ಚ ಮೇ ಕ್ಷೇಮಶ್ಚ ಮೇ ಧೃತಿಶ್ಚ ಮೇ ವಿಶ್ವಂಚ ಮೇ ವಿಶ್ವಂ ಚ ಮೇ ಮಹಶ್ಚ ಮೇ ಸಂವಿಚ್ಚ ಮೇ ಜ್ಞಾತ್ರಂ ಚ ಮೇ ಸೂಶ್ಚ ಮೇ ಪ್ರಸೂಶ್ಚ ಮೇ ಸೀರಂ ಚ ಮೇ ಲಯಶ್ಚ ಮ ಋತಂ ಚ ಮೇಮೃತಂ ಚ ಮೇಯಕ್ಷ್ಮಂಚ ಮೇನಾಮಯಚ್ಚ ಮೇ ಜೀವಾತುಶ್ಚ ಮೇ ದೀರ್ಘಾಯುತ್ವಂ ಚ ಮೇನಮಿತ್ರಂ ಚ ಮೇಭಯಂಅ ಚ ಮೇ ಸುಗಂ ಚ ಮೇ ಶಯನಂ ಚ ಮೇ ಸೂಷಾ ಚ ಮೇ ಸುದಿನಂ ಚ ಮೇ||

 

ನಮಕದ ಮೊದಲನೆಯ ಅನುವಾಕದ ಒಂದು ಸಣ್ಣ ಭಾಗ

 

ಓಂ ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮ:|  ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾ ಮುತ ತೇ ನಮ:|  ಯಾ ತ ಇಷು: ಶಿವತಮಾ ಶಿವಂ ಬಭೂವ ತೇ ಧನು:|  ಶಿವಾ ಶರ್ವ್ಯಾ ಯಾ ತವ ತಯಾ ನೋ ರುದ್ರ ಮೃಡಯ|  ಯಾ ತೇ ರುದ್ರ ಶಿವಾ ತನೂರಘೋರಾ: ಪಾಪಕಶಿನೀ|  ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ||

 

ಶಿವರಾತ್ರಿಯ ಅರ್ಥ

 

ಶಿವ ಅಂದ್ರೆ ಕಲ್ಯಾಣ ಎಂದು ಅರ್ಥ.  ಲೋಕ ಕಲ್ಯಾಣಕ್ಕಾಗಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ರಾತ್ರಿ ಇಡೀ ಆ ಪರಶಿವನ ಧ್ಯಾನ ಮಾಡುವುದು.  ಇದು ಮಾಘ ಮಾಸದ ಬಹುಳ ಚತುರ್ದಶಿಯಂದು ಬರುವುದು.    ಇದರ ಬಗ್ಗೆ ಒಂದು ಸಣ್ಣ ಕಥೆ ಇದೆ.  ಶಿವಪುರಾಣದಲ್ಲಿ ಹೇಳಿರುವಂತೆ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರುಗಳಲ್ಲಿ ಯಾರು ಶ್ರೇಷ್ಠರು ಎಂಬ ಬಗ್ಗೆ ಜಗಳವಾಯಿತು.  ಇವರಿಬ್ಬರ ಜಗಳದಿಂದ ಬೇಸತ್ತ ಇತರ ದೇವರುಗಳು, ಮಧ್ಯಸ್ಥಿಕೆ ವಹಿಸಲು ಶಿವನನ್ನು ಕೇಳಿಕೊಂಡರು.  ಆಗ ಶಿವನು ಉದ್ದನೆಯ ಬೆಂಕಿಯ ಕಂಬದಂತೆ ಇವರಿಬ್ಬರ ಮಧ್ಯೆ ನಿಂತನು.  ಬೆಂಕಿಯ ತೀಕ್ಷಣತೆಯನ್ನು ಕಂಡು ಇವರಿಬ್ಬರೂ ಇದರ ಮೂಲವನ್ನು ಹುಡುಕಲು ಹೊರಟರು.  ಬ್ರಹ್ಮನು ಹಂಸದ ರೂಪವಾಗಿ ಆಕಾಶಕ್ಕೂ, ವಿಷ್ಣುವು ವರಾಹ ರೂಪದಲ್ಲಿ ಭೂಮಿಯೊಳಗೂ ಹೊರಟರು.  ಸಾವಿರಾರು ಮೈಲುಗಳನ್ನು ಕ್ರಮಿಸಿದರೂ ಇದರ ಮೂಲ ತಿಳಿಯದಾಯಿತು.  ಇವರಿಬ್ಬರ ಪರದಾಟವನ್ನು ಕಂಡು ಶಿವನು ಮುಗುಳ್ನಕ್ಕನು.  ಆತನ ನಗುವಿನಿಂದ ಅಲ್ಲಿಯೇ ಇದ್ದ ಕೇತಕಿ ಪುಷ್ಪವು ಕೆಳಗಿಳಿದು ಬೀಳಹತ್ತಿತು.  ಅಲ್ಲಿಯೇ ಬರುತ್ತಿದ್ದ  ಬ್ರಹ್ಮನಿಗೆ ಇದು ಗೋಚರವಾಯಿತು.  ಆತನು ಆ ಪುಷ್ಪವನ್ನು ಎಲ್ಲಿಂದ ಬಂದೆಯೆಂದು ಕೇಳಲು, ಅದು ಈ ಬೆಂಕಿಯ ಕಂಬದ ಮೇಲ್ಭಾಗದಿಂದ ಕೆಳಗಿಳಿದು ಬರುತ್ತಿದ್ದೇನೆಂದು ತಿಳಿಸಿತು.  ಅಲ್ಲಿಯವರೆವಿಗೆ ಬೆಂಕಿಯ ಮೂಲವನ್ನು ತಿಳಿಯದ ಬ್ರಹ್ಮನು ಪುಷ್ಪವನ್ನೇ ಸಾಕ್ಷಿಯನ್ನಾಗಿ ತೆಗೆದುಕೊಂಡನು.  ಆಗ ಕುಪಿತಗೊಂಡ ಶಿವನು ತನ್ನ ಮೂಲ ಸ್ವರೂಪವನ್ನು ತೋರಿದನು.  ಮತ್ತು ಬ್ರಹ್ಮನನ್ನು ಯಾರೂ ಪೂಜಿಸಬಾರದೆಂದೂ, ಕಪಟತನ ತೋರಿದ ಕೇತಕಿ ಪುಷ್ಪವನ್ನು ಯಾರೂ ಪೂಜೆಗೆ ಬಳಸಬಾರದೆಂದೂ ಶಾಪವನ್ನಿತ್ತನು.  ಅಂದು ಅಂದರೆ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ೧೪ನೆಯ ದಿನ, ಶಿವನು ಲಿಂಗರೂಪವನ್ನು ಧರಿಸಿದನು.  ಅವನನ್ನು ತೃಪ್ತಿಗೊಳಿಸಿ, ಸಂಪತ್ತು, ಸುಖ ಮತ್ತು ಸಮೃದ್ಧಿಯನ್ನು ಹೊಂದಲು ಪೂಜಿಸುವರು.  

                  sivasfamily.jpg

ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ

 

ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ.  ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ.  ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು.  ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು  ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು.  ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು.  ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ.  ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ.  ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ.  ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು.  ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ.  ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ.   ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ.  

 

ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ.  ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು.  ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲಾ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ.  ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ. 

 

ವೇದೋಕ್ತ ಪೂಜೆ ಮತ್ತು ಆಚರಣೆ

 

ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ.  ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ.    ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ.  ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ. 

 

ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ.

 

ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ.

 

ಆ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ.  ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ.  ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು. 

 

ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು.  ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ.  ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು.  ಅಭಿಷೇಕ್ಕಾಗಿಯೇ ಪ್ರತ್ಯೇಕವಾದ  ಪಾತ್ರೆ ಇರುವುದು.  ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು.  ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು.  ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ.  ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು.  ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು.  ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು.  ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು.  ಇದಕ್ಕೆ ಒಂದು ರುದ್ರವೆಂದು ಕರೆಯುವರು.      ಬೆಳಗ್ಗೆ, ಸಂಜೆ ಮತ್ತು ರಾತ್ರೆ  ಹೀಗೆ ೨೪ ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ.  ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು.

 

೧೨ ಜ್ಯೋತಿರ್ಲಿಂಗಗಳು 

                            jyotirlinga.jpg

ನಮ್ಮ ದೇಶದಲ್ಲಿ ಒಟ್ಟು ೧೨ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.  ಆ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳೆಂದು ಪ್ರಸಿದ್ಧವಾಗಿ ಶಿವರಾತ್ರಿಯಂದು ವಿಶೇಷ ಪೂಜೆಯನ್ನು ಅಲ್ಲಿ ನಡೆಸುವರು.  ಆ ಸ್ಥಳಗಳು  ಯಾವುವೆಂದರೆ:

                      jyotirlinga-map.jpg

ಗುಜರಾತಿನ ಕಾಠಿಯಾವಾಡದಲ್ಲಿರುವ ಸೋಮನಾಥ

ಆಂಧ್ರಪ್ರದೇಶದ ಶ್ರಿ ಶೈಲದಲ್ಲಿರುವ ಮಲ್ಲಿಕಾರ್ಜುನ

ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ

ಮಹಾರಾಷ್ಟ್ರದ ಪಾರ್ಲಿ ವೈಜನಾಥ

ಮಹಾರಾಷ್ಟ್ರದ ಭೀಮಾಶಂಕರ

ಮಹಾರಾಷ್ಟ್ರದ ನಾಗನಾಥ

ಮಹಾರಾಷ್ಟ್ರದ ನಾಶಿಕದ ತ್ರ್ಯಂಬಕೇಶ್ವರ

ತಮಿಳುನಾಡಿನ ರಾಮೇಶ್ವರ

ಉತ್ತರಪ್ರದೇಶದ ಘೃಶ್ನೇಶ್ವರ

ಉತ್ತರಪ್ರದೇಶದ ಕಾಶಿ ವಿಶ್ವೇಶ್ವರ

ಉತ್ತರಪ್ರದೇಶದ ಓಂಕಾರನಾಥ

ಉತ್ತರಪ್ರದೇಶದ ಕೇದಾರನಾಥ

 

ಇದೆಲ್ಲವೂ ಲೌಕಿಕವಾಗಿ ಕಣ್ಣಿಗೆ ಕಾಣುವಂತೆ ಮಾಡುವ ಪೂಜೆಗಳಾದರೆ, ಅಧ್ಯಾತ್ಮಿಕವಾಗಿ ಈ ದೇಹವೇ ಒಂದು ದೇವಾಲಯ ಎಂದು ತಿಳಿದು ಆ ಪರ ಶಿವನನ್ನು ನಮ್ಮೊಳಗೇ ಕಾಣುವ ಪ್ರಯತ್ನ ಮಾಡೋಣ.  ನಮ್ಮ ಹೃದಯವನ್ನೇ ಆತ್ಮಲಿಂಗವನ್ನಾಗಿ ಮಾಡಿ, ಲೋಕೋದ್ಧಾರಕ್ಕಾಗಿ ಒಳ್ಳೆಯ ಚಿಂತನೆಗೆಳೆಂಬ ನೀರ ಹನಿಗಳಿಂದ ಅಭಿಷೇಕ ಮಾಡೋಣ.    ಎಲ್ಲರಿಗೂ ಈ ಲೋಕಕ್ಕೂ ಕಲ್ಯಾಣವಾಗಲೆಂದು ಬಯಸೋಣ.

                        shiva.jpg
 

ಓಂ ನಮ: ಶಿವಾಯ

ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 4

೧೯೮೫ರಲ್ಲಿ ಕ್ಯಾಷ್ ಡಿಪಾರ್ಟ್‍ಮೆಂಟಿನಿಂದ ಜನರಲ್ ಸೈಡ್‍ಗೆ ಪೋಸ್ಟ್ ಮಾಡಿದ್ದರು.  ಅಲ್ಲಿ ಪಬ್ಲಿಕ್ ಡೆಟ್ ಆಫೀಸ್ ಎನ್ನುವಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ.  ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಲವನ್ನು ತೆಗೆದುಕೊಳ್ಳಲು ಮತ್ತು ಅದರ ಲೆಕ್ಕಾಚಾರದ ಬಗ್ಗೆ ಕೆಲಸ ಮಾಡುವ ವಿಭಾಗ ಇದು.  ನನಗೇನೂ ಅಂತಹ ಘನಂದಾರಿ ಕೆಲಸ ಕೊಟ್ಟಿರಲಿಲ್ಲ.  ನಾನು ಮಾಡುತ್ತಿದ್ದುದು ಕ್ಲರಿಕಲ್ ಕೆಲಸ.  ಮೊದಲಿಗೆ ವಿಭಾಗದ ಬಗ್ಗೆ ತಿಳಿದುಕೊಳ್ಳಲು ತರಬೇತಿ ಕೊಡುವರು.  ಇದಕ್ಕಾಗಿ ಚೆನ್ನೈಗೆ ಕಳುಹಿಸಿದ್ದರು.  ಅದೇ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದು.  ಸ್ವಲ್ಪ ಕಾಲದ ಮೊದಲು ಹೋಗಿದ್ದ ಮುಂಬೈನಲ್ಲಿ ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಹಿಂದಿಯಲ್ಲಿ ಹೇಗೋ ನನ್ನ ಬೇಳೆ ಬೇಯಿಸಿಕೊಂಡಿದ್ದೆ.  ಆದರೆ ಈ ಚೆನ್ನೈನಲ್ಲಿ ಹಿಂದಿ ನಡೆಯುವುದಿಲ್ಲ ಎಂದು ತಿಳಿದಿತ್ತು.  ಇಲ್ಲಿ ಹಿಂದಿ ಮಾತನಾಡಿದರೆ ಏಟು ಬೀಳುವುದು ಗ್ಯಾರಂಟಿ.  ಕನ್ನಡದವರಿಗೆ ತಮಿಳು ಕಲಿಯುವುದು ಸುಲಭ. 

 

ಈ ಟ್ರೈನಿಂಗ್ ೨ ವಾರಗಳದ್ದಾಗಿದ್ದಿತು.  ಬೆಂಗಳೂರಿನಿಂದ ಮೊದಲ ಬಾರಿಗೆ ರಾತ್ರಿಯ ಟ್ರೈನಿನ ಹವಾನಿಯಂತ್ರಿತ ಬೋಗಿಯಲ್ಲಿ ೪ ಸಹಕರ್ಮಚಾರಿಗಳೊಂದಿಗೆ ಚೆನ್ನೈಗೆ ಹೊರಟೆ.  ಭಾನುವಾರ ಮಧ್ಯಾನ್ಹದ ಟ್ರೈನ್ ರಾತ್ರಿ ೯ಕ್ಕೆ ಚೆನ್ನೈ ತಲುಪಿತ್ತು.  ಆಗ ಅಲ್ಲಿಯ ನಗರ ಬಸ್ ಸಂಚಾರ ವ್ಯವಸ್ಥೆ ಬಹಳ ಚೆನ್ನಾಗಿತ್ತು.  ಪೂನಮಲೈ ಹೈ ರಸ್ತೆಯಲ್ಲಿರುವ ನಮ್ಮ ಕ್ವಾರ್ಟರ್ಸಿನಲ್ಲಿ ನಮಗೆ ಇರಲು ಅವಕಾಶ ಮಾಡಿಕೊಟ್ಟಿದ್ದರು.  ಬೆಳಗ್ಗಿನ ತಿಂಡಿಗೆ ಬ್ಯಾಂಕಿನ ಕ್ಯಾಂಟೀನಿಗೆ ಹೋಗುತ್ತಿದ್ದೆವು.  ಅಲ್ಲಿಯೋ ಪ್ರತಿದಿನವೂ ಪೊಂಗಲ್ (ಹುಗ್ಗಿ) ಮಾಡುತ್ತಿದ್ದರು.  ಬೆಂಗಳೂರಿನ ಬ್ಯಾಂಕಿನ ಕ್ಯಾಂಟೀನಿನಂತೆ ದೋಸೆ, ಇಡ್ಲಿ, ವಡೆ ಇತ್ಯಾದಿಗಳನ್ನು ಮಾಡ್ತಿರಲಿಲ್ಲ.  ಮಧ್ಯಾಹ್ನದ ಊಟವೋ ದೇವರಿಗೇ ಪ್ರೀತಿ.  ಮಾಂಸಾಹಾರ ಮತ್ತು ಸಸ್ಯಾಹಾರ ಎರಡನ್ನೂ ಒಟ್ಟಿಗೇ ಕೊಡುತ್ತಿದ್ದದ್ದನ್ನು ಅಲ್ಲಿಯೇ ಮೊದಲ ಬಾರಿಗೆ ನಾನು ನೋಡಿದ್ದು.  ಸಂಜೆ ೫ ಘಂಟೆಗೆ ಬ್ಯಾಂಕಿನಿಂದ ಆಚೆ ಬಂದ ಕೂಡಲೇ ನಾನು ಊರು ಸುತ್ತಲು ಹೋಗುತ್ತಿದ್ದೆ.  ಇನ್ನುಳಿದ ಸ್ನೇಹಿತರುಗಳಿಗೆ ಅವರುಗಳದ್ದೇ ಆದ ಲೋಕಗಳಿದ್ದವು.  ನಾನೊಬ್ಬನೇ ಅವರೆಲ್ಲರಿಗಿಂತ ವಿಭಿನ್ನ.  ಅವರೆಲ್ಲರೂ ಜೀವನವನ್ನು ಸವಿಯಲೇ ಹುಟ್ಟಿದವರಂತಿದ್ದರು. 

 

ದಿನವೂ ಸಂಜೆ ಯಾವುದಾದರೊಂದು ಬಸ್ಸನ್ನು ಹತ್ತಿ ಕೊನೆಯ ನಿಲ್ದಾಣಕ್ಕೆ ಹೋಗಿ, ಅಲ್ಲಿ ಇಲ್ಲಿ ಸುತ್ತಾಡಿ ಮತ್ತೆ ಬಸ್ ಹತ್ತಿ ಪ್ಯಾರಿಸ್ ಕಾರ್ನರ್ ಗೆ ಬರ್ತಿದ್ದೆ.  ಅಲ್ಲಿರುವ ಹರಿನಿವಾಸ ಎಂಬ ಹೊಟೆಲ್‍ನಲ್ಲಿ ಪ್ರತಿ ರಾತ್ರಿ ಊಟ.   ಅಲ್ಲಿ ದೊಡ್ಡದಾದ ಬಾಳೆ ಎಲೆ ಹಾಕಿ, ಮೊರದಲ್ಲಿ ಅನ್ನವನ್ನು ತಳ್ಳುತ್ತಿದ್ದರು.  ಅದನ್ನು ನೋಡುವುದೇ ಚಂದ.  ಅಷ್ಟನ್ನೂ ಅದು ಹೇಗೆ ತಿನ್ನುತ್ತಿದ್ದೆನೋ ಏನೋ.  ಹೊಟ್ಟೆಯೊಳಗೆ ಬೆಂಕಿ ಇದ್ದಿತ್ತು ಅನ್ಸತ್ತೆ, ಎಷ್ಟೇ ತಿಂದರೂ ಜೀರ್ಣವಾಗುತ್ತಿತ್ತು.  ಈ ಹದಿನಾಲ್ಕು ದಿನಗಳಲ್ಲಿ ಚೆನ್ನೈನ ಪ್ರತಿ ಜಾಗವನ್ನೂ ನೋಡಿದ್ದೆ.  ಹಾಗೂ ತಮಿಳನ್ನು ಮಾತನಾಡಲೂ ಕಲಿತಿದ್ದೆ. 

 

ನನ್ನ ಕಣ್ಣಿಗೆ ಕಂಡ ಚೆನ್ನೈ ಅಂದರೆ – ಎಲ್ಲೆಲ್ಲಿ ನೋಡಿದರೂ ಗಲೀಜು.   ಕ್ರೋಮ್‍ಪೇಟೆಯಂತೂ ಬೆಂಗಳೂರಿನ ಕಲಾಸಿಪಾಳ್ಯಕ್ಕಿಂತ ಗಲೀಜು.   ಮುದ ಕೊಡುವ ಸ್ಥಳಗಳು ಅಂದರೆ, ತ್ಯಾಗರಾಯನಗರ, ಅಡ್ಯಾರ್, ಬೆಸೆಂಟ್‍ನಗರ್.  ಬಹುಶ: ಈ ಜಾಗಗಳಲ್ಲಿ ವಾಸಿಸುವ ಜನರ ಪ್ರಭಾವದಿಂದ ಈ ಸ್ಥಳಗಳು ಹೀಗಿರಬಹುದು ಅನ್ಸತ್ತೆ. 

 

 

 

ಅದೇ ಮೊದಲ ಬಾರಿಗೆ ಐ.ಐ.ಟಿ.ಯನ್ನು ಪ್ರವೇಶಿಸುವ ಅವಕಾಶವೂ ಸಿಕ್ಕಿತ್ತು.  ನನ್ನ ಗೆಳೆಯ ಕೇಶವಕುಮಾರ ಅಲ್ಲಿ ಎಂ.ಟೆಕ್ ಮಾಡ್ತಿದ್ದ.   ಒಂದು ದಿನಕ್ಕಾದ್ರೂ ಅವನ ಹಾಸ್ಟೆಲ್ಲಿನಲ್ಲಿ ತಂಗುವಂತೆ ಕೇಳಿಕೊಂಡಿದ್ದ.  ಒಂದು ಸಂಜೆ ಬ್ಯಾಂಕಿನಿಂದ ನೇರವಾಗಿ ಅಲ್ಲಿಗೆ ಹೋದವನು ಒಂದಲ್ಲ ಮೂರು ದಿನಗಳು ಅಲ್ಲಿಯೇ ಇದ್ದೆ.  ಎಂತಹ ಪ್ರಶಾಂತ ಮತ್ತು ಆನಂದದಾಯಕ ಕ್ಯಾಂಪಸ್.  ಆ ಸ್ಥಳ ಚೆನ್ನೈನಲ್ಲಿ ಇದೆ ಅಂದ್ರೆ ಈಗಲೂ ನಂಬುವುದಕ್ಕೆ ಆಗುವುದಿಲ್ಲ.  ಅಲ್ಲಿಯ ಹಾಸ್ಟೆಲ್ಲುಗಳಿಗೆ ನದಿಯ ಹೆಸರುಗಳನ್ನೂ ಮತ್ತು ಒಳಗೆ ಓಡಾಡುವ ಕ್ಯಾಂಪಸ್ಸಿನ ಬಸ್ಸುಗಳಿಗೆ ಪರ್ವತಗಳ ಹೆಸರನ್ನೂ ಇಟ್ಟಿದ್ದಾರೆ.   ಇದು ಏಕೆ ಎಂದು ನನ್ನ ಸ್ನೇಹಿತನನ್ನು ಕೇಳಿದ್ದಕ್ಕೆ, ಅವನ ಪ್ರೊಫೆಸರ್ ಒಬ್ಬರು ಹೇಳಿದ್ದ ಮಾತುಗಳನ್ನು ಅವನು ನನಗೆ ಹೇಳಿದ್ದ, ‘ ನಮ್ಮಲ್ಲಿ ಕಲಿತ ಹುಡುಗ / ಹುಡುಗಿಯರು ಪರ್ವತಗಳನ್ನು ಚಲಿಸುವಂತೆ ಮಾಡುವರು ಮತ್ತು ನದಿಗಳನ್ನು ತಟಸ್ಥ ಆಗುವಂತೆ ಮಾಡುವರುಎಂದು.  ಎಂತಹ ಆದರ್ಶವನ್ನು ಮುಂದಿಟ್ಟುಕೊಂಡು ನಡೆಯುತ್ತಿದ್ದಾರೆ.  ಈಗಲೂ ಚೆನ್ನೈನ ಐ.ಐ.ಟಿ.ಗೆ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನವಿದೆ.  ಬೆಳಗ್ಗೆ ಮತ್ತು ಸಂಜೆ ಕ್ಯಾಂಪಸ್ ಸುತ್ತು ಹಾಕುವವರಿಗೆ ಕಿವಿಗೆ ಕೇಳುವುದು ವೇದಘೊಷ.  ಅಲ್ಲಿಯ ಕೆಲವು ಪ್ರೊಫೆಸರ್ ಗಳು ವೇದವಿದ್ಯಾ ಪಾರಂಗತರಾಗಿದ್ದರು.  ಬಿಡುವಿನ ವೇಳೆಯಲ್ಲಿ ಕ್ಯಾಂಪಸ್ಸಿನಲ್ಲಿರುವ ಉತ್ಸುಕರಿಗೆ ವೇಡ ಪಾಠ ಕಲಿಸುತ್ತಿದ್ದರು.  ಈ ಸ್ಥಳವನ್ನು ಸ್ವರ್ಗವನ್ನದೇ ಮತ್ತೇನನ್ನಬೇಕು ಅಲ್ಲವೇ?

 

ಇದೇ ಸಮಯದಲ್ಲಿ ನಮ್ಮ ಮನೆಯಲ್ಲೊಂದು ಅವಘಡ ಸಂಭವಿಸಿತ್ತು.  ಒಂದು ದಿನ ಮಧ್ಯಾಹ್ನ ನನ್ನ ದೊಡ್ಡಣ್ಣ ಫೋನ್ ಮಾಡಿದ್ದ.  ಅವನು ಬೆಂಗಳೂರಿನ ಕಾರ್ಪೋರೇಶನ್ ಆಫೀಸಿನ ಆವರಣದಲ್ಲಿರುವ ಅಂಚೆ ಕಛೇರಿಯಲ್ಲಿ ಸಬ್ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ.  ನಮ್ಮ ತಂದೆಗೆ ಬಹಳ ಆರೋಗ್ಯ ಕೆಟ್ಟಿದೆಯೆಂದೂ, ತನಗೆ ಕೆಲಸ ಜಾಸ್ತಿಯಾಗಿ ಊರಿಗೆ ಹೋಗಲಾಗುವುದಿಲ್ಲ, ನಾನು ಹೋಗಬೇಕೆಂದು ಮಧ್ಯಾಹ್ನ ೩ ಘಂಟೆಗೆ ತಿಳಿಸಿದ್ದ.  ತಂದೆಗೆ ಏನಾಗಿದೆ?  ನಾನೇಕೆ ತಕ್ಷಣ ಊರಿಗೆ ಹೋಗಬೇಕು ಎನ್ನುವುದು ತಿಳಿಯಲಿಲ್ಲ.  ಅಷ್ಟಲ್ಲದೇ ಎಷ್ಟು ಹಣವನ್ನು ತೆಗೆದುಕೊಂಡು ಊರಿಗೆ ಹೋಗಬೇಕೆಂದೂ ತಿಳಿದಿರಲಿಲ್ಲ.  

 

ಆಗೆಲ್ಲಾ ನಾನು ಯುನಿಯನ್ ಕೆಲಸದಲ್ಲಿ ಬಹಳ ಸಕ್ರಿಯನಾಗಿದ್ದೆ.  ಅಂದೂ ಸಂಜೆ ಯೂನಿಯನ್ ಆಫೀಸಿಗೆ ಹೋರಟಿದ್ದೆ.   ದಾರಿಯಲ್ಲಿ ಹೋಗುವಾಗ ಈ ವಿಷಯವನ್ನು ನಮ್ಮ ಯೂನಿಯನ್ನಿನ ಅಧ್ಯಕ್ಷರಾಗಿದ್ದ ಶ್ರೀ ಪುತ್ತೂರಾಯರಿಗೆ ತಿಳಿಸಿದ್ದೆ.  ಅವರು ನಮಗೆಲ್ಲರಿಗಿಂತಲೂ ಹಿರಿಯರು, ಮಾರ್ಗದರ್ಶಕರು, ನಮ್ಮೆಲ್ಲರ ಹಿತಚಿಂತಕರಾಗಿದ್ದರು.  ನಾನು ತಿಳಿಸಿದ ವಿಷಯಕ್ಕೆ ಅವರು – ನಿಮ್ಮ ತಂದೆಯ ಆರೋಗ್ಯದಲ್ಲಿ ಏನೋ ಹೆಚ್ಚಿನ ತೊಂದರೆ ಆಗಿರಬೇಕು, ಈ ತಕ್ಷಣವೇ ನೀವು ಊರಿಗೆ ಹೊರಡಿ, ಸದ್ಯಕ್ಕೆ ಈ ಹಣ ನಿಮ್ಮಲ್ಲಿರಲಿ ಎಂದು ರೂ ೧೦೦೦ ವನ್ನು ಕೈನಲ್ಲಿಟ್ಟಿದ್ದರು.  ಅಲ್ಲಿಂದ ಹಾಗೆಯೇ ಊರಿಗೆ ಹೋಗಿದ್ದೆ. 

 

********************

 

ಊರಿಗೆ ಹೋದ ತಕ್ಷಣ ತಿಳಿದ ವಿಷಯವೇನೆಂದರೆ – ೨-೩ ದಿನಗಳ ಹಿಂದೆ ನನ್ನ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.  ೨೦ ವರ್ಷಗಳ ಹಿಂದೆ ಅಂದರೆ ೧೯೬೪ರಲ್ಲಿ ನನಗಿನ್ನೂ ೪ ವರ್ಷವಾಗಿದ್ದಾಗ ಹೀಗೊಮ್ಮೆ ಆಗಿತ್ತಂತೆ.  ಆಗ ಎಡಭಾಗಕ್ಕೆ ಪಾರ್ಶ್ವವಾಯುವಾಗಿ ಅಂಕೋಲಕ್ಕೆ ಹೋಗಿ ನಾಟಿ ವೈದ್ಯರಿಂದ ಔಷೋಧೋಪಚಾರ ಮಾಡಿಸಿ ಸರಿ ಹೋಗಿದ್ದರಂತೆ.  ಈಗ ಮತ್ತೆ ಹೀಗಾಗಿದ್ದಾಗ (ಈ ಸಲ ಶರೀರದ ಬಲಭಾಗಕ್ಕೆ ಅಟ್ಯಾಕ್ ಆಗಿತ್ತು), ತಮ್ಮನ್ನು ಅಂಕೋಲಕ್ಕೆ ಕರೆದೊಯ್ಯು ಎಂದು ನನಗೆ ಹೇಳಿದ್ದರು.  ಆಸ್ಪತ್ರೆಗೆ ಕರೆದೊಯ್ಯುವುದಾಗಿ ನಾನು ಹೇಳಲು, ನನ್ನ ತಾಯಿಯೂ ತಂದೆಯವರು ಹೇಳಿದಂತೆಯೇ ಕೇಳಲು ಹೇಳಿದ್ದರು.  ಮಾರನೆಯ ದಿನ ಬೆಳಗ್ಗೆ ಶಿವಮೊಗ್ಗ ಮುಖಾಂತರ ಅಂಕೋಲಕ್ಕೆ ಪ್ರಯಾಣ ಬೆಳೆಸಿದೆವು.  ರಾತ್ರಿ ೮.೩೦ರ ಹೊತ್ತಿಗೆ ಅಂಕೋಲಾ ತಲುಪಿ ಬಸ್ ನಿಲ್ದಾಣದ ಹತ್ತಿರವಿರುವ ಒಂದು ಹೊಟೆಲ್‍ಗೆ ಊಟಕ್ಕೆಂದೆ ಹೋದರೆ, ಇನ್ನೇನು ಹೊಟೆಲ್ ಮುಚ್ಚುವ ವೇಳೆ ಆಗಿದೆಯೆಂದೂ ತಿನ್ನಲು ಅವಲಕ್ಕಿ ಮಾತ್ರವಿದೆಯೆಂದೂ ಅದರ ಮಾಲಿಕ ಹೇಳಿದ್ದರು.  ಅದನ್ನೇ ತಿಂದು ಉಳಿಯಲು ಹತ್ತಿರದಲ್ಲೇ ಇದ್ದ ಒಂದು ಲಾಡ್ಜ್‍ನಲ್ಲಿ ಕೋಣೆಯನ್ನು ಹಿಡಿದಿದ್ದೆವು.  

 

ಅಂಕೋಲಾಕ್ಕೆ ಈ ಔಷಧಿಗಾಗಿಯೇ ಬರುವ ಜನರು ಬಹಳ.  ಆ ಊರಿನಲ್ಲಿ ಬಸ್ ನಿಲ್ದಾಣದ ಹತ್ತಿರ ಔಷಧದ ಅಂಗಡಿಗಳು ಬಹಳವಾಗಿವೆ.  ಹಾಗೂ ಊರಿಗೆ ಬರುವ ಹೊಸಬರನ್ನು ತಮ್ಮಲ್ಲಿಗೆ ಔಷಧಕ್ಕಾಗಿ ಮತ್ತು ಮಾಲೀಷ್‍ಗಾಗಿ ಬರಲು ಕರೆಯುತ್ತಾರೆ.  ಇವರೆಲ್ಲರು ಔಷಧ ಅಷ್ಟು ಪರಿಣಾಮಕಾರಿಯಲ್ಲವಂತೆ.  ಇದನ್ನು ನನ್ನ ತಂದೆಯೇ ತಿಳಿಸಿದ್ದರು.   ಬೆಳಗಿನ ಜಾವ ೬ ಘಂಟೆಗೇ ಎದ್ದು ಸ್ನಾನ ಮಾಡದೆಯೇ ಔಷಧಿಗಾಗಿ ಹೊರಟೆವು.  ಎಲ್ಲಿಗೆ ಹೋಗಬೇಕೆಂದು ನನ್ನ ತಂದೆಗೆ ತಿಳಿದಿತ್ತು.  ಒಂದು ಆಟೋ ಚಾಲಕನಿಗೆ ಪೊಕ್ಕ ಮಾನು ಗೌಡನ ಮನೆಗೆ ಹೋಗಲು ತಿಳಿಸಿದರು.  ಆಟೋ ಚಾಲಕನು ಅವರ್ಯಾರೋ ಗೊತ್ತಿಲ್ಲ ಎನ್ನಲು, ಸಮುದ್ರದ ಹತ್ತಿರಕ್ಕೆ ಹೋಗಲು ತಿಳಿಸಿ, ಅಲ್ಲಿ ಎಲ್ಲಿ ಹೋಗಬೇಕೆಂದು ಹೇಳುವೆನೆಂದರು.  ಆಟೋದವನಿಗೆ, ಇವರಿಗೆ ಈ ಔಷಧದ ಬಗ್ಗೆ ತಿಳಿದಿದೆ ಎಂದು ಖಾತ್ರಿಯಾಗಿ, ರಸ್ತೆ ಸರಿಯಿಲ್ಲ, ವಾಪಸ್ಸು ಬರಲು ಜನ ಸಿಗುವುದು ಕಷ್ಟ, ಹತ್ತು ರೂಪಾಯಿ ಜಾಸ್ತಿ ಕೊಡುವಿರೆಂದರೆ ಬರುವೆನೆಂದನು.   ಅದಕ್ಕೇ ನಾನು ಒಪ್ಪಿದ್ದೆ.  ದಾರಿಯಲ್ಲಿ ಹೋಗುವಾಗ ಆಟೋದವನು, ಈಗ ಪೊಕ್ಕ ಮಾನು ಗೌಡ ಇಲ್ಲ, ಆತ ಸತ್ತು ಹೋಗಿ ೧೦-೧೨ ವರ್ಷಗಳೇ ಆದುವು, ಆತನ ಮಗ ಈ ವೈದ್ಯ ವೃತ್ತಿಯನ್ನು ನಡೆಸುತ್ತಿದ್ದಾನೆ ಎಂದು ತಿಳಿಸಿದ್ದನು.  

 

ಈ ನಾಟಿ ವೈದ್ಯ ಪೊಕ್ಕ ಮಾನು ಗೌಡ ಅಥವಾ ಈಗಿನ ಆತನ ಮಗ ಬೆಳಗಿನ ಜಾವ ೩ ಘಂಟೆಗೇ ಎದ್ದು ಕಾಡಿಗೆ ಹೋಗಿ ಮೂಲಿಕೆಗಳನ್ನೂ ಯಾವುದೋ ಗಿಡದ ಸೊಪ್ಪನ್ನೂ ತರುವನಂತೆ.  ಅದರೊಂದಿಗೆ ತಾನೇ ತಯಾರಿಸಿದ ಎಣ್ಣೆಯನ್ನು ಬಹಳ ಕಡಿಮೆ ಹಣಕ್ಕೆ ಕೊಡುತ್ತಿದ್ದನು.  ಅಲ್ಲೆಗೆ ಬರುವ ಬಹುತೇಕ ರೋಗಿಗಳು ನಿತ್ರಾಣರಾಗಿದ್ದು, ಮಾಲೀಷು ಮಾಡಿಸಿಕೊಳ್ಳಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಿದ್ದಾನೆ.  ಅದಕ್ಕೂ ಬಹಳ ಕಡಿಮೆ ದರವನ್ನು ತೆಗೆದುಕೊಳ್ಳುವನು.  ರೋಗಿಗಳು ತಾವೇ ಮಾಲೀಷು ಮಾಡಿಕೊಳ್ಳಬೇಕಂತೆ.  ಕೈಲಾಗದವರಿಗೆ ಮಾಲೀಷು ಮಾಡಲು ಪೈಲ್ವಾನರನ್ನೂ ನೇಮಿಸಿಕೊಡುವನು.  

 

ನನ್ನ ತಂದೆ ಆ ಗೌಡನ ಬಳಿಗೆ ಹೋಗಿ, ಇಪ್ಪತ್ತು ವರುಷಗಳ ಹಿಂದೆ ಪೊಕ್ಕ ಗೌಡನಿಂದ ಔಷಧವನ್ನು ತೆಗೆದುಕೊಂಡಿದ್ದರೆಂದೂ ಈಗ ಮತ್ತೆ ಪಾರ್ಶ್ವವಾಯು ಆಗಿದೆಯೆಂದೂ ತಿಳಿಸಿದ್ದರು.  ಅದಕ್ಕೆ ಆತ ಇಲ್ಲಿಯೇ ಉಳಿದುಕೊಂಡು ಔಷಧೋಪಚಾರ ಮಾಡಿಕೊಳ್ಳುವಿರೋ ಅಥವಾ ಔಷಧವನ್ನು ತೆಗೆದುಕೊಂಡು ಊರಿಗೆ ಹೋಗುವಿರೋ ಎಂದು ಕೇಳಿದ್ದನು.  ಊರಿಗೆ ಹೋಗುವೆವೆಂದು ಹೇಳಿದ್ದಕ್ಕೆ, ೨ ಬಾಟಲಿನಲ್ಲಿ ಎಣ್ಣೆಯನ್ನೂ, ಒಂದು ದೊಡ್ಡ ಹೊರೆ ಹಸಿರು ಬಣ್ಣದ ಸೊಪ್ಪನ್ನು ಕೊಟ್ಟು, ಅದನ್ನು ಹೇಗೆ ಹಚ್ಚಿಕೊಂಡು ಮಾಲಿಷು ಮಾಡಿಕೊಳ್ಳಬೇಕೆಂದು ತಿಳಿಸಿದ್ದನು.  ಮುಖ್ಯವಾಗಿ ಆ ಔಷಧವನ್ನು ರೋಗಿಯಲ್ಲದ ಇನ್ಯಾರೂ ಮುಟ್ಟಬಾರದೆಂದೂ ತಿಳಿಸಿದ್ದನು.  ಅಂದೇ ಸಂಜೆಗೆ ಹುಬ್ಬಳ್ಳಿಗೆ ಬಂದು ಅಲ್ಲಿ ರಾತ್ರಿಯೂಟ ಮಾಡಿ, ರಾತ್ರಿಯ ಬಸ್ಸಿನಲ್ಲಿ ಊರಿಗೆ ಹೊರಟು ಬಂದಿದ್ದೆವು.   

 

ಔಷಧಿಯನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಒಂದೆರಡು ಮಾತುಗಳಲ್ಲಿ ಹೇಳುವೆ.  ಬೆಳಗ್ಗೆ ಸ್ನಾನ ಮಾಡಿ  ಮೈಯಿಗೆ ಎಣ್ಣೆಯನ್ನು ಹಚ್ಚಿಕೊಂಡು, ಚೆನ್ನಾಗಿ ಮಾಲೀಷು ಮಾಡಿಕೊಳ್ಳಬೇಕು.   ಬಿಸಿಲಿಗೆ ಮೈಯನ್ನು ಒಡ್ಡಿ ಒಣಗಿಸಿಕೊಳ್ಳಬೇಕು.  ೧ ಘಂಟೆಗಳ ತರುವಾಯ ಮೈ ಒಣಗಿದ ನಂತರ ಸೊಪ್ಪನ್ನು ಅರಿಶಿನದೊಂದಿಗೆ ಬೆರೆಸಿ ಚೆನ್ನಾಗಿ ಅರೆದು ಅದರ ರಸವನ್ನು ಮೈಯ್ಯಿಗೆ ಹಚ್ಚಿಕೊಳ್ಳಬೇಕು.  ಅರೆಯುವುದು ಮತ್ತು ಹಚ್ಚಿಕೊಳ್ಳುವುದನ್ನು ರೋಗಿಗಳೇ ಮಾಡಿಕೊಳ್ಳಬೇಕು.  ಇತರರು ಇದನ್ನು ಮುಟ್ಟಲೂಬಾರದು.   ಮತ್ತೆ ಬಿಸಿಲಿಗೆ ಮೈಯೊಡ್ಡಿ ಒಣಗಿಸಿಕೊಳ್ಳಬೇಕು.   ಮೈ ಚೆನ್ನಾಗಿ ಒಣಗಿದ ನಂತರ ಹೆಪ್ಪಳಿಕೆಗಳು ಕೆಳಗೆ ಬೀಳುವುದು.  ನಂತರ ಸ್ನಾನ ಮಾಡಬಾರದು.  ಮರುದಿನ ಮತ್ತೆ ಹೀಗೆಯೇ ಉಪಚಾರವನ್ನು ಮಾಡಿಕೊಳ್ಳಬೇಕು.  ಹೀಗೆ ಹದಿನೈದು ದಿನಗಳ ಕಾಲ ಮಾಡಿಕೊಳ್ಳಬೇಕು.  ಆಗ ಪೂರ್ಣವಾಗಿ ಗುಣವಾಗುವರು.  ಇದಕ್ಕೆ ನನ್ನ ತಂದೆ ಗುಣ ಹೊಂದಿದ್ದೇ ನಿದರ್ಶನ.

 

*******************

 

ಈ ಭಾಗದಲ್ಲಿ ನನ್ನ ಮಾನವೀಯತೆಯನ್ನು ರೂಪಿಸಿದ ಪುತ್ತೂರಾಯರು, ಬಾಬುರವಿಶಂಕರರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವೆ.  ಹಾಗೆಯೇ ಒಂದು ರಸ್ತೆ ಆಕಸ್ಮಿಕದಲ್ಲಿ ಒಂದು ಪುಟ್ಟ ಕಂದ ದಾರುಣವಾಗಿ ಸಾವಿಗೀಡಾದ ಸಂದರ್ಭವನ್ನೂ ತಿಳಿಸುವೆ. 

 

ಸೀತಾರಾಮ ಪುತ್ತೂರಾಯರು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಆರ್ಥಿಕ ಸಹಾಯಕರಾಗಿ ಕೆಲಸ ಮಾದುತ್ತಿದ್ದರು.  ೧೯೬೪-೬೫ ರ ಸುಮಾರಿನಲ್ಲಿ ಪದವೀಧರರಾಗಿ ಬ್ಯಾಂಕಿಗೆ ಸೇರಿದ್ದರು.  ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಪದವೀಧರರಾಗಿದ್ದವರೆಲ್ಲರೂ ಅಧಿಕಾರಿಗಳಾಗಿ ಸೇರುತ್ತಿದ್ದರು.  ಇವರು ಆಗಲೇ ಭಾರತೀಯ ಮಝ್ದೂರ್ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು.  ಭಾರತೀಯ ಮಝ್ದೂರ್ ಸಂಘವು ಪ್ರಾರಂಭವಾಗಿದ್ದು ೧೯೬೫ ರಲ್ಲಿ.  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಮಿಕರ ಒಳಿತಿಗಾಗಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿನ ಕೆಲಸಗಾರರನ್ನು ಸಂಘಟಿಸಲು ಪುತ್ತೂರಾಯರು ಮುಂದಳತ್ವ್ಸ್ ವಹಿಸಿದರು. ಬ್ಯಾಂಕಿನಲ್ಲಿ ಅಧಿಕಾರಿಯಾದರೆ, ವರ್ಗಾವಣೆ ನೋಡಬೇಕೆಂದೂ ಮತ್ತು ಯೂನಿಯನ್ನಿನ ಕೆಲಸ ಮಾಡಲಾಗುವುದಿಲ್ಲವೆಂದೂ ಅವರು ಬಡ್ತಿಯನ್ನು ತೆಗೆದುಕೊಳ್ಳಲಿಲ್ಲ.  ೧೯೭೨ರ ಹೊತ್ತಿಗೆ ಇವರ ಕೈ ಜೋಡಿಸಿದವರು ಶ್ರೀಯುತ ಬಾಬು ರವಿಶಂಕರ ಅವರು.  ಇವರಿಬ್ಬರಲ್ಲಿ ನಾನು ಕಂಡ ಒಂದು ಒಳ್ಳೆಯ ಅಂಶವೆಂದರೆ, ಯೂನಿಯನ್ ಸದಸ್ಯರಲ್ಲದೇ ಇತರ ಸಹೋದ್ಯೋಗಿಗಳನ್ನು ತಮ್ಮ ಕುಟುಂಬದ ಸದಸ್ಯರೆಂದೇ ಭಾವಿಸುತ್ತಿದ್ದರು.  ಹಬ್ಬ ಹರಿದಿನಗಳಲ್ಲಿ ಮನೆ ಮನೆಗಳಿಗೆ ಹೋಗಿ ಕಷ್ಟ ಸುಖ ವಿಚಾರಿಸುವುದು, ಬೇಕಾದ ಮಾರ್ಗದರ್ಶನವೀಯುವುದೂ ಮಾಡುತ್ತಿದ್ದರು.  ಇವರಿಬ್ಬರೂ ತಮ್ಮ ಹೆಚ್ಚಿನ ಕಾಲಾವಧಿಯನ್ನು ಸ್ನೇಹಿತರಿಗಾಗಿಯೇ ಮುಡುಪಾಗಿಟ್ಟಿದ್ದರೆಂದರೆ ಅತಿಶಯೋಕ್ತಿಯಲ್ಲ.  ೧೯೮೫ರ ಸುಮಾರಿನಲ್ಲಿ ಹೌಸಿಂಗ ಸೊಸೈಟಿಯವರು ಹೊಸ ಸದಸ್ಯರನ್ನು ನೋದಾಯಿಸಿಕೊಳ್ಳಲು ಪುತ್ತೂರಾಯರೂ ಕಾರಣೀಭೂತರಾಗಿದ್ದರು.  ಅದಲ್ಲದೇ ನಮಗೆಲ್ಲರಿಗೂ ನಿವೇಶನವನ್ನು ಹೊಂದಲು ಸಲಹೆ ಕೊಟ್ಟರು.  ನಾನಂತೂ, ‘ನನಗ್ಯಾಕೆ ಸಾರ್, ಈಗಲೇ ಸೈಟು.  ಮುಂದೆ ನೋಡೋಣ.  ಅದೂ ಅಲ್ಲದೇ ಈ ಹೌಸಿಂಗ್ ಸೊಸೈಟಿಯಲ್ಲಿ ಯಾವಾಗಲೂ ಜಗಳ ಕದನಗಳನ್ನು ನೋಡ್ತಿದ್ದೀನಿ, ನನಗೆ ಸೇರಲು ಮನಸ್ಸಿಲ್ಲಎಂದಿದ್ದೆ.  ಅದಕ್ಕೆ ಪುತ್ತೂರಾಯರು, ‘ನೀವೇನೂ ಮಾಡಬೇಕಿಲ್ಲ.  ಈ ಅಪ್ಲಿಕೇಷನ್ ಫಾರ್ಂ ತುಂಬಿ ನನ್ನ ಕೈಗೆ ಕೊಡಿ ಮತ್ತು ಕೋ ಆಪರೇಟಿವ್ ಬ್ಯಾಂಕಿನಲ್ಲಿ ನಿಮಗೆ ಹತ್ತು ಸಾವಿರ ರೂಪಾಯಿಗಳ ಸಾಲ ತೆಗೆದುಕೊಂಡು, ಮೂಲಧನವನ್ನಾಗಿ ಕೊಡಿ.  ನಿಮಗೆ ತಿಳಿಯದೆಯೇ ಆ ಸಾಲ ತೀರಿ ಹೋಗುವುದು‘, ಎಂದಿದ್ದರು.   ಅವರ ಹಿತ ನುಡಿಗಳನ್ನು ನಾವೆಲ್ಲರೂ ಪಾಲಿಸಿದ ಕಾರಣವೇ – ನಾವುಗಳಿಂದು ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಮನೆಯನ್ನು ಮಾಡಿಕೊಂಡಿರುವುದು.  ತಂಪಾದ ಸಮಯದಲ್ಲಿ ಅವರನ್ನು ನೆನೆಯದಿದ್ದರೆ ಅದು ದ್ರೋಹ ಬಗೆದಂತೆಯೇ.

 

ಇಷ್ಟೇ ಅಲ್ಲ, ಪುತ್ತೂರಾಯರು ಇನ್ನೊಂದು ಮಾತನ್ನೂ ನಮಗೆಲ್ಲರಿಗೂ ಹೇಳಿದ್ದರು.  ಎಂದಿಗೂ ನಿಮ್ಮ ಬ್ಯಾಂಕಿನ ಅಕೌಂಟಿನಲ್ಲಿ ಕಡಿಮೆಯೆಂದರೆ ಹತ್ತು ಸಾವಿರ ರೂಪಾಯಿಗಳನ್ನು ಇಟ್ಟುಕೊಂಡಿರಿ.  ಹಣವಿಲ್ಲದವನು ಹೆಣದಂತೆ.  ದುಶ್ಚಟಗಳಿಂದ ದೂರವಾಗಿರಿ.  ಹೆಚ್ಚಿನ ಹಣ ಕೈನಲ್ಲಿದ್ದರೆ ಇಲ್ಲದವರಿಗೆ ನೀಡಿ. ಇದು ಒಳ್ಳೆಯತನ. ಮುಂದೆ ನಿಮ್ಮ ಮಕ್ಕಳನ್ನು ಇದೇ ಒಳ್ಳೆಯತನ ಕಾಪಾಡುವುದು.  ಪುತ್ತೂರಾಯರು ಈ ಮಾತುಗಳನ್ನು ಹೆಳುತ್ತಿದ್ದುದಲ್ಲದೇ ಪಾಲಿಸುತ್ತಿದ್ದರು ಕೂಡಾ.  ನಾನು ೧೯೮೯ರಲ್ಲಿ ಮುಂಬೈಗೆ ಬಂದ ಕೆಲವು ವರ್ಷಗಳಲ್ಲಿ ಪುತ್ತೂರಾಯರು ಅಕಾಲಿಕ ಮರಣಕ್ಕೆ ತುತ್ತಾಗಿದ್ದರು.  ಅವರಿಗಿದ್ದ ಇಬ್ಬರೂ ಗಂಡು ಮಕ್ಕಳು ವೈದ್ಯ ವೃತ್ತಿ ಹಿಡಿದು ಬಹಳ ಹೆಸರುವಾಸಿಯಾಗಿದ್ದಾರಂತೆ. 

 

ಇದೇ ಸಮಯದಲ್ಲಿ ನನ್ನ ಅಣ್ಣನ ಎರಡನೆಯ ಮಗ – ೨ ವರುಷದ ಕಂದಮ್ಮ ರಸ್ತೆಯಪಘಾತಕ್ಕೆ ಈಡಾಗಿ ದುರ್ಮರಣವನ್ನು ಹೊಂದಿದ್ದ. 

 

**************

 

ಈ ಭಾಗದಲ್ಲಿ ೧೯೮೫-೮೬ ರಲ್ಲಿ ಹೈದರಾಬಾದಿನಲ್ಲಿ ನಡೆದ ಭಾರತೀಯ ಮಜ್ದೂರ್ ಸಂಘದ ಅಧಿವೇಶನ ಮತ್ತು ನಮ್ಮ ಬ್ಯಾಂಕಿನ ಯೂನಿಯನ್ನಿನ ವತಿಯಿಂದ ಬೆಂಗಳೂರಿನಲ್ಲಿ ನಡೆದ ಅಧಿವೇಶನದ ಬಗ್ಗೆ ಒಂದೆರಡು ಮಾತುಗಳು.

 

೧೯೮೫ರಲ್ಲಿ ಹೈದರಾಬಾದಿನಲ್ಲಿ ಭಾರತೀಯ ಮಜ್ದೂರ್ ಸಂಘದ ಅಧಿವೇಶನ ನಡೆಯಿತು.  ಅದಕ್ಕಾಗಿ ನಮ್ಮ ಯೂನಿಯನ್ನಿನಿಂದ ೮-೧೦ ಜನ ಸದಸ್ಯರು ಹೊರಟಿದ್ದೆವು.  ಹೋಗುವ ಮುನ್ನ ನಮಗೆ ಅಷ್ಟೇನೂ ಇಚ್ಛೆ ಇರಲಿಲ್ಲ.  ಪುತ್ತೂರಾಯರ ಸಕ್ರಿಯ ಚಟುವಟಿಕೆಗಳಿಗೆ ಮಾರು ಹೋಗಿ ಅವರಂತೆಯೇ ನಾವೂ ಕೆಲಸ ಮಾಡಹತ್ತಿದೆವು.    ನಮಗೆಲ್ಲರಿಗೂ ಸ್ಫೂರ್ತಿ ಶ್ರೀಯುತ ಪುತ್ತೂರಾಯರು.   ಅವರಿಗಾಗ ೫೦ ವರ್ಷ ವಯಸ್ಸಾಗಿತ್ತು.  ಆದರೂ ಯೂನಿಯನ್ನಿನ ಎಲ್ಲ ಕೆಲಸಗಳಲ್ಲಿಯೂ ಅವರದ್ದೇ ಮುಂದಾಳತ್ವ.  ಎದುರಾಳಿ ಯೂನಿಯನ್ನಿನವರು ಕೂಡಾ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರು.  ಯಾರೇ ಸಹಾಯ ಯಾಚಿಸಿದರೂ ಮಾನವೀಯತೆಯನ್ನು ಪ್ರದರ್ಶಿಸಿ ಕೈಲಾದದ್ದನ್ನು ಮಾಡುತ್ತಿದ್ದರೇ ಹೊರತು ತಮ್ಮವರಲ್ಲವೆಂದು ದೂರ ತಳ್ಳುತ್ತಿರಲಿಲ್ಲ.  ಯೂನಿಯನ್ನಿನ ವತಿಯಿಂದ ಟ್ರೈನಿನಲ್ಲಿ ಹೈದರಾಬಾದಿಗೆ ಟಿಕೆಟ್ ಬುಕ್ ಮಾಡಿಸಲಾಗಿತ್ತು.  ನಾವು ಸ್ನೇಹಿತರನೇಕರು ಬ್ರಹ್ಮಚಾರಿಗಳು.  ಪ್ರಯಾಣದಲ್ಲಿ ಹರಟೆ ಹೊಡೆದುಕೊಂಡು ತಮಾಷೆ ಮಾಡಿಕೊಂಡು ಹೋಗೋನ ಎಂದು ಅಂದುಕೊಂಡಿದ್ದೆವು.  ಆದರೆ ಪುತ್ತೂರಾಯರು ಇದರ ಬದಲಿಗೆ ಕಾರ್ಮಿಕರ ಒಕ್ಕೂಟದ ಕೆಲವು ಕ್ರಾಂತಿಕಾರಿ ಗೀತೆಗಳನ್ನು ಹೇಳಿಕೊಟ್ಟರು.  ಅಂದು ಹೇಳಿದ ಹಾಡು ಯಾವುದು ಗೊತ್ತೇ – ಈಗಲೂ ನನಗೆ ನೆನಪಿದೆ

 

 thengadiji.jpg

ಮನುಕುಲದೇಳಿಗೆ ಸಾಧಿಸೆ ಹೊರಟೆವು

ಪ್ರಭಾತ ಕಿರಣವನರಳಿಸುತ

ಶೋಷಿತ ಪೀಡಿತ ದಲಿತೋದ್ಧಾರದ

ಭಾಗ್ಯೋದಯವನು ನಿರ್ಮಿಸುತ

 

ಆಗ ನಮಗನ್ನಿಸಿದ್ದು, ನಾವುಗಳು ಈ ಪೊಳ್ಳು ಸಂತಸಕ್ಕೆ ನಮ್ಮ ಅಮೂಲ್ಯ ಸಮಯವನ್ನು ಹೇಗೆ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಬಿಡುವಿನ ಸಮಯದಲ್ಲಿ ಅಮಾಯಕ ಕಾರ್ಮಿಕರ ಒಳಿತಿಗಾಗಿ ಏನೆಲ್ಲಾ ಮಾಡಬಹುದೆಂಬುದರ ಚಿಂತಿಸಬಹುದು.   ಪುತ್ತೂರಾಯರು ನಮಗೆ ಮೊದಲು ಕಲಿಸಿದ್ದು, ನಮ್ಮ ನಮ್ಮ ಕೆಲಸದ ಜಾಗದಲ್ಲಿ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ನಂತರ ಯೂನಿಯನ್ನಿನ ಕೆಲಸ ಮಾಡುವುದು.  ಇಂತಹ ನಾಯಕರುಗಳು ಇರುವುದರಿಂದಲೇ ಅಲ್ವೇ ನಮ್ಮ ಯೂನಿಯನ್ ಲೀಡರುಗಳಲ್ಲಿ ಹೆಚ್ಚಿನವರುಗಳ್ಯಾರಿಗೂ ತೊಂದರೆ ಬರದೇ ಇರುವುದು. 

 

ಹೈದರಾಬಾದಿನಲ್ಲಿ ಭಾರತೀಯ ಮಝ್ದೂರ್ ಸಂಘದ ಸಂಸ್ಥಾಪಕರಾದ ದತ್ತೋಪಂತ್ ಠೇಂಗಡೀಜಿ ಯವರು ಬಂದಿದ್ದರು.  ಅವರ ಹಿತನುಡಿಗಳು ಕಾರ್ಮಿಕರ ಹಿತಕ್ಕಾಗಿ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹೆಚ್ಚು ಪ್ರೇರೇಪಿಸಿತು.  ಠೇಂಗಡೀಜೀಯವರು ರಾಷ್ಟ್ರ್‍ಈಯ ಸ್ವಯಂಸೇವಕ ಸಂಘದ ಹಿರಿಯ ಸದಸ್ಯರಾಗಿದ್ದರು.  ಅವರು ಬರೀ ಬಾಯ್ಮಾತಿನಲ್ಲಿ ಹೇಳುವವರಲ್ಲ ಕೆಲಸ ಮಾಡಿ ತೋರಿಸುತ್ತಿದ್ದವರು.  ಹಾಗಾಗಿ ಅವರ ನುಡಿಗಳು ಎಂತಹವರನ್ನೂ ಪ್ರೇರೇಪಿಸುತ್ತಿತ್ತು.  ನಮಗೆ ಉಳಿದುಕೊಳ್ಳಲು ನಾಂಪಲ್ಲಿಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅವಕಾಶ ಮಾಡಿಕೊಟ್ಟಿದ್ದರು.  ಮೊದಲ ಎರಡು ದಿನಗಳು ಅಧಿವೇಶನ.  ಮೂರನೆಯ ದಿನ ನಮಗೆ ಊರು ಸುತ್ತಲು ಅನುಮತಿ ಕೊಟ್ಟಿದ್ದರು.  ಆಗ ಹೈದರಾಬಾದಿನಲ್ಲಿ ಬಸ್ ವ್ಯವಸ್ಥೆ ಅವ್ಯವಸ್ಥೆ ಆಗಿದ್ದಿತ್ತು.  ಅಂದು ಬೆಳಗ್ಗೆ ಸಿಕಂದರಾಬಾದ್ ಸ್ಟೇಶನ್ನಿನವರೆವಿಗೆ ನಡೆದುಕೊಂಡು ಹೋದೆವು.  ಅಲ್ಲಿಂದ ೧ನೇ ನಂಬರ್ ಬಸ್ಸಿನಲ್ಲಿ (ಅಲ್ಲಿಂದಲೇ ಪ್ರಾರಂಭವಾಗ್ತಿದ್ದದ್ದು) ಕೊನೆಯ ನಿಲ್ದಾಣವಾದ ಸಲಾರ್ ಜಂಗ್ ಮ್ಯೂಸಿಯಂ‍ಗೆ ಹೋಗಿದ್ದೆವು.  ನಂತರ ಅಲ್ಲಿಯೇ ಹತ್ತಿರವಿದ್ದ ನ್ಯಾಷನಲ್ ಪಾರ್ಕ್ ನೋಡಿ, ವಾಪಸ್ಸಾಗಿದ್ದೆವು. 

 

ಅದಾದ ಕೆಲವು ತಿಂಗಳುಗಳಿಗೆ ನಮ್ಮ ಯೂನಿಯನ್ನಿನ ರಾಷ್ಟ್ರೀಯ ಮಟ್ಟದ ಅಧಿವೇಶನವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದೆವು.  ಅದಕ್ಕಾಗಿ ಬಹಳ ಕೆಲಸ ಮಾಡಿದ್ದೆವು.  ಒಂದು ತಿಂಗಲು ಮೊದಲಿನಿಂದಲೇ ಕೆಲಸ ಶುರುವಾಗಿತ್ತು.  ದೂರದೂರಿಗಳಿಂದ ಬರುವ ಅತಿಥಿಗಳ ಟ್ರೈನ್ ವೇಳಾಪಟ್ಟಿ, ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆ, ಊಟ ತಿಂಡಿ ವ್ಯವಸ್ಥೆ, ಸ್ಥಳೀಯ ಪ್ರೇಕ್ಷಣೆಗೆ ಸಿದ್ಧತೆ, ಮರಳಿ ಅವರೂರನ್ನು ಸುಖವಾಗಿ ತಲುಪಿಸುವ ಬಗ್ಗೆ, ಬ್ಯಾಂಕಿನ ಮುಂದೆ ಮತ್ತು ಅಧಿವೇಶನ ಸ್ಥಳದಲ್ಲಿ ಪೋಸ್ಟರುಗಳ ಅಂಟಿಸುವಿಕೆ, ಬಂಟೀಂಗ್ಸ್ ಕಟ್ಟುವಿಕೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದೆವು.  ಇದಕ್ಕಾಗಿ ನಮ್ಮಲ್ಲಿದ್ದ ಸದಸ್ಯರು ಬೆರಳೆಣಿಕೆಯಷ್ಟು.  ನಾವು ಕೆಲವು ಸ್ನೇಹಿತರುಗಳು ನಮ್ಮ ಯೂನಿಯನ್ ಆಫೀಸಿನಲ್ಲೇ ಕೆಲವು ರಾತ್ರಿಗಳು ಮಲಗಿದ್ದೆವು.  ಈ ಸಮಯದಲ್ಲಿ ನಮಗೆ ಹೆಚ್ಚಿನ ಮಾರ್ಗದರ್ಶನ ಮತ್ತು ಹೆಗಲಿಗೆ ಹೆಗಲು ಕೊಟ್ಟವರೆಂದರೆ, ಪುತ್ತೂರಾಯರು, ಬಾಬು ರವಿಶಂಕರ ಮತ್ತು ಜಯರಾಮ್. 

ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 3

ಮರು ದಿನ ಅಂದರೆ ಎರಡನೆಯ ದಿನ ಕೆಲಸ ಸ್ವಲ್ಪ ಸುಲಭವಾಗಿತ್ತು.   ಅಂದು ಸಮಯಕ್ಕೆ ಸರಿಯಾಗಿ ಊಟಕ್ಕೆ ಹೋಗಿದ್ದೆವು ಮತ್ತು ಸಂಜೆ ೫ ಘಂಟೆಗೆ ಸರಿಯಾಗಿ ಕೆಲಸವೂ ಮುಗಿದಿತ್ತು. 

 

ಫೆಬ್ರವರಿ ತಿಂಗಳ ೨೬ಕ್ಕೆ ನಮಗೆ ಮೊದಲ ಸಂಬಳ ದೊರಕಿತು.  ಆ ಸಮಯದಲ್ಲಿ ನಮಗೆ ಪೇ ಸ್ಲಿಪ್ ಎಂದು ಸಂಬಳದ ವಿವರವಿರುವ ಒಂದು ಪತ್ರ ಕೊಡುವರು.  ಅಂದು ನಮ್ಮ ನಮ್ಮ ವಿಭಾಗಗಳಲ್ಲಿ  ಪೇ ಸ್ಲಿಪ್ ಅನ್ನು ಕೊಟ್ಟಿದ್ದರು.   ಆಗ ನನ್ನ ಸ್ನೇಹಿತ ಗಣೇಶ ಹೇಳಿದ ಮಾತುಗಳು ನನಗಿನ್ನೂ ನೆನಪಿದೆ. ಈ ಪೇ ಸ್ಲಿಪ್ ಅನ್ನು ಭದ್ರವಾಗಿಟ್ಟುಕೊಳ್ರಪ್ಪ – ಇನ್ನು ನಮ್ಮ ಸರ್ವೀಸ್‍ನಲ್ಲಿ ಇಂತಹ ಪೇ ಸ್ಲಿಪ್ ಸಿಗೋದಿಲ್ಲ‘, ಎಂದು.  ಏಕೆ ಹೇಳಿದ್ದ ಗೊತ್ತೇ?  ಅದರಲ್ಲಿ ಏನೊಂದೂ ಕಡಿತವಿರಲಿಲ್ಲ.  ಎರಡನೆಯ ತಿಂಗಳಿಂದ ಪ್ರಾವಿಡೆಂಟ್ ಫಂಡ್ ಕಡಿತ ಪ್ರಾರಂಭವಾಗಿತ್ತು.  ಇದು ಸೇವೆಯಲ್ಲಿರುವವರೆವಿಗೆ ಇದ್ದೇ ಇರುತ್ತದೆ.  ಗಣೇಶನ ಮಾತುಗಳು ಇಂದಿಗೂ ಕಿವಿಯಲ್ಲಿ ಧ್ವನಿಗುಡುತ್ತಲೇ ಇರುತ್ತದೆ. 

 

ಸ್ವಲ್ಪ ದಿನಗಳಲ್ಲೇ ನಾವುಗಳು ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಕಲಿತು ಹಳಬರಾಗಿದ್ದೆವು.  ೫-೬ ತಿಂಗಳುಗಳು ಕಳೆಯುವುದರೊಳಗೆ ನಮಗೆ ಕೆಲಸ ಚೆನ್ನಾಗಿ ಮಾಡಲು ಬರುತ್ತಿದ್ದು ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡುವುದು ಸ್ವಲ್ಪ ಬೋರ್ ಎನ್ನಿಸುತ್ತಿತ್ತು.  ಆದರೆ ೩ ತಿಂಗಳಿಗೊಮ್ಮೆ ಬೇರೆ ಬೇರೆ ಸೆಕ್ಷನ್ನುಗಳಿಗೆ ಬದಲಿಸುತ್ತಿದ್ದುದರಿಂದ ಹಿರಿಯರೊಂದಿಗೆ ಬೆರೆತು ಹೆಚ್ಚಿನ ವಿಷಯಗಳನ್ನು ಕಲಿಯುವಂತಾಗಿತ್ತು. 

 

ಮೊದಲ ತಿಂಗಳ ಸಂಬಳ ಬಂದ ಮೇಲೆ ಹಾಸ್ಟೆಲ್‍ನಲ್ಲಿ ಇರುವುದು ಸರಿ ಇರುವುದಿಲ್ಲವೆಂದು ಮಲ್ಲೇಶ್ವರದ ೧೮ನೇ ಕ್ರಾಸಿನಲ್ಲಿರುವ ಗಣೇಶ ಭವನದಲ್ಲಿ ರೂಮು ಮಾಡಿದ್ದೆ.   ಆದರೂ ಪ್ರತಿ ಶನಿವಾರ ಹಾಸ್ಟೆಲ್‍ಗೆ ಹೋಗ್ತಿದ್ದೆ.  ಅಷ್ಟು ವರ್ಷಗಳು ಅಲ್ಲಿದ್ದು ಇದ್ದಕ್ಕಿದ್ದಂತೆ ಅಲ್ಲಿಗೆ ಹೋಗದಿರಲು ಮನಸ್ಸಾಗುತ್ತಿರಲಿಲ್ಲ.  ಮತ್ತು ಅಲ್ಲಿನ ಸ್ನೇಹಿತರುಗಳಿಗೆ ಸ್ವಲ್ಪ ಮೋಜು ಮಾಡುವ ಮನಸ್ಸಾಗುತ್ತಿದ್ದು (ಯಾವಾಗಲೂ ಸ್ಟ್ರಿಕ್ಟ್ ಆಗಿ ಇರುತ್ತಿದ್ದ ಹಾಸ್ಟೆಲ್), ನಾನು ಹೋದಾಗಲೆಲ್ಲ ಸಿನೆಮಾಗೆ ಹೋಗೋಣ ಹೊಟೆಲ್‍ಗೆ ಹೋಗೋಣ ಎನ್ನುತ್ತಿದ್ದರು.  ಹೇಗಿದ್ದರೂ ನನ್ನಲ್ಲಿ ಹಣವಿದ್ದು, ಅವರುಗಳೊಂದಿಗೆ ಖರ್ಚು ಮಾಡುವುದು ಅವರಿಗೆ ಸಂತಸದ ವಿಷಯವಾಗಿತ್ತು.  ಅಲ್ಲಿನ ಸ್ನೇಹಿತರುಗಳು ಯಾರು ಎಂದರೆ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದ ಗಿರಿಶೇಖರ ಕಲ್ಕೂರ, ಬದರೀನಾಥ, ಡೆಂಟಲ್ ಓದುತ್ತಿದ್ದ ಬದರಿಯ ತಮ್ಮ (ಹೆಸರು ನೆನಪಿಗೆ ಬರ್ತಿಲ್ಲ), ಬಿಎಸ್‍ಸಿ ಓದುತ್ತಿದ್ದ ಪುಟ್ಟ (ಅವನ ನಿಜವಾದ ಹೆಸರು ಮರೆತಿರುವೆ), ಐ.ಸಿ.ಡಬ್ಲ್ಯು.ಏ ಓದುತ್ತಿದ್ದ ಪೂರ್ಣಚಂದ್ರ ಭಟ್ಟ, ರಾಜಾರಾಮ ಹೆಗಡೆ, ಸಿಎ ಮಾಡುತ್ತಿದ್ದ ಮಂಜುನಾಥ ಹೆಗಡೆ.  ಪ್ರತಿ ಶನಿವಾರ ರಾತ್ರಿ ಷೋಗೆ ಸಿನೆಮಾಗೆ ಹೋಗ್ತಿದ್ದೆವು.  ಆಗಾಗ ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತಿಂಡಿ ತಿನ್ನಲು ಹೋಗುತ್ತಿದ್ದೆವು.  ಸ್ವಲ್ಪ ಸಮಯಗಳ ನಂತರ ಏನೋ ಗಲಾಟೆ ಆಗಿ ಹಾಸ್ಟೆಲ್ ಅನ್ನು ಮುಚ್ಚಿಬಿಟ್ಟರು.  ಈಗ ಹಾಸ್ಟೆಲ್ ಇಲ್ಲ.  ಒಮ್ಮೆಯಂತೂ ಹಿಂದಿ ಚಲನಚಿತ್ರ ಪಡೋಸನ್ ಅನ್ನು ಒಂದೇ ವಾರದಲ್ಲಿ ನಾಲ್ಕು ಬಾರಿ ನೋಡಿದ್ದೆವು.  ಹಾಗೇ ಮಧುಮತಿ ಚಿತ್ರಕ್ಕೆ ಒಬ್ಬೊಬ್ಬರು ಒಂದೊಂದು ಸಲ ನನ್ನ ಜೊತೆ ಬಂದಿದ್ದು ಅದನ್ನೂ ೫ ಬಾರಿ ನೋಡಿದ್ದೆ.

 

ಮಲ್ಲೇಶ್ವರದ ಗಣೇಶ ಭವನದಲ್ಲಿ ವಾಸವಿದ್ದರೂ, ಹೆಚ್ಚಿನ ಸಮಯವೆಲ್ಲಾ ಬಸವನಗುಡಿಯಲ್ಲೇ ಕಳೆಯುತ್ತಿದ್ದೆ.  ಆಗ ನನ್ನೊಡನೆ ಐ.ಸಿ.ಡಬ್ಲ್ಯು.ಏ ಮಾಡುತ್ತಿದ್ದ ಕೆನರಾ ಬ್ಯಾಂಕ್ ಉದ್ಯೋಗಿ ಎಸ್.ಆರ್. ಹೆಗಡೆ, ಅವನೊಡನೆ ಅವನ ಮನೆಗೆ ಬಂದಿರಲು ಹೇಳಿದ.  ಅವನ ಮನೆ ಇದ್ದದ್ದು ಎನ್.ಆರ್.ಕಾಲೋನಿಯಲ್ಲಿ.  ಅವನೊಡನಿದ್ದ ಅವನ ಇನ್ನೊಬ್ಬ ಸ್ನೇಹಿತ (ಇಂಡಿಯನ್ ಆಯಿಲ್‍ನಲ್ಲಿ ಎಂಜಿನಿಯರ್) ವರ್ಗವಾಗಿ ಬೇರೆಯ ಊರಿಗೆ ಹೊರಟಿದ್ದ.    ಅಲ್ಲಿ ಸ್ವಲ್ಪ ದಿನಗಳಿದ್ದೆ. 

 

ಒಂದೆರಡು ತಿಂಗಳುಗಳಲ್ಲಿ ನನ್ನ ಕಾಲೇಜಿನ ಸಹಪಾಠಿ ಮತ್ತು ನಿಕಟ ಸ್ನೇಹಿತನಾಗಿದ್ದ ಮನೋಹರ ಶರ್ಮನಿಗೆ ಬಹಳ ಕಡಿಮೆ ಬಾಡಿಗೆಗೆ (ತಿಂಗಳಿಗೆ ರೂ. ೧೨೦/-) ಒಂದು ಮನೆ ಸಿಕ್ಕಿತ್ತು.  ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಅಷ್ಟು ಹಣ ಕೊಡಲು ಸಾಧ್ಯವಿರಲಿಲ್ಲ.  ನನಗೆ ಆ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಹೇಳಿದ.  ವಿಶ್ವೇಶ್ವರಪುರದ ಜೈನ್ ದೇವಸ್ಥಾನದ ಬೀದಿಯಲ್ಲಿ ಆ ಮನೆಗೆ ಹೋಗಿದ್ದೆ.    ಆಗಲೇ ಹೊಸ ಕುಕ್ಕರ್ ಮತ್ತು ಗ್ಯಾಸ್ ಕನೆಕ್ಷನ್ ತೆಗೆದುಕೊಂಡಿದ್ದೆ.   ರೇಷನ್ ಕಾರ್ಡ್ ಕೂಡಾ ಮಾಡಿಸಿದ್ದು ಆಗಲೇ.  ಒಂದು ರೀತಿಯಲ್ಲಿ ಸಂಸಾರ ಹೂಡಲು ಸಂಪೂರ್ಣವಾಗಿ ಸಜ್ಜಾಗಿದ್ದೆ.  ನಾನು ಮತ್ತು ನನ್ನ ಸ್ನೇಹಿತ ಪ್ರತಿದಿನವೂ ಬೆಳಗ್ಗೆ ಸಂಜೆ ಅಡುಗೆ ಮಾಡುತ್ತಿದ್ದೆವು. 

 

ಒಂದು ದಿನ ಊಟ ಮಾಡುತ್ತಿದ್ದಾಗ ಮೆದುಳಿಗೆ ಷಾಕ್ ತಗುಲಿದ ಹಾಗಾಯಿತು.  ಸಾವರಿಸಿಕೊಳ್ಳಲು ಎರಡು ನಿಮಿಷಗಳೇ ಬೇಕಾಯಿತು.  ಮುಂದೆ ಅನ್ನವನ್ನು ಬಾಯೊಳಗೆ ಇಡಲಾಗುತ್ತಿರಲಿಲ್ಲ.  ದವಡೆಯಲ್ಲಿ ಬಹಳ ನೋವು ಕಾಣಿಸಿಕೊಂಡಿತು.  ಹಾಗೆಯೇ ದವಡೆ ಬುರ್ರನೆ ಪೂರಿಯಂತೆ ಉಬ್ಬತೊಡಗಿತು.  ನನ್ನ ಸ್ನೇಹಿತ ಶರ್ಮನಿಗೆ ತಿಳಿಸಿದೆ.  ಊಟವನ್ನು ಅಷ್ಟಕ್ಕೇ ಬಿಟ್ಟು ತಕ್ಷಣ ಹತ್ತಿರದ ಹಲ್ಲಿನ ವೈದ್ಯರ ಹತ್ತಿರಕ್ಕೆ ಓಡಿದ್ದೆವು.  ವೈದ್ಯರು ಹೇಳಿದ್ದು, ಒಂದು ದವಡೆ ಹಲ್ಲು ಹುಳುಕಾಗಿದೆಯೆಂದೂ ತಕ್ಷಣ ಸಿಮೆಂಟ್ ತುಂಬಬೇಕೆಂದೂ. ತಕ್ಷಣವೇ ಅದಾಗಬೇಕೆಂದಿದ್ದರು.  ಸರಿ ಎಂದು ಅವರಿಂದಲೇ ಅಲ್ಲೇ ಸಿಮೆಂಟು ತುಂಬಿಸಿದೆ.  ಸ್ವಲ್ಪ ದಿನಗಳು ಏನೂ ತೊಂದರೆ ಇರಲಿಲ್ಲ.

 

ಅಂದೊಂದು ಭಾನುವಾರ ಬೂದುಗುಂಬಳಕಾಯಿ ಕಡಲೆಕಾಳು ಹಾಕಿ ಹುಳಿ ಮಾಡಿದ್ದೆವು.    ಮಧ್ಯಾಹ್ನ ಬಹಳ ಖುಷಿಯಾಗಿ ಊಟ ಮಾಡ್ತಿದ್ದಾಗ ಹಲ್ಲಿಗೆ ದಪ್ಪದಾದ ಕಲ್ಲು ಸಿಕ್ಕಿ ಕೊಂಡಂತಾಯ್ತು.   ಏನೂ ಅಂತ ನೋಡಿದರೆ, ಅದು ಹಲ್ಲಿಗೆ ತುಂಬಿದ್ದ ಸಿಮೆಂಟು.  ತಕ್ಷಣ ವೈದ್ಯರ ಬಳಿಗೆ ಮತ್ತೆ ಓಡಿದ್ದೆ.   ಆಗ ಅವರು ಸಿಮೆಂಟು ಸರಿಯಾಗಿ ಹೊಂದಿಕೆ ಆಗ್ತಿಲ್ಲ ಎಂದು ಸಿಲ್ವರ್ ಫಿಲ್ಲಿಂಗ್ ಮಾಡಿದ್ದರು. 

 

**************

 

೧೯೮೩ರ ಸೆಪ್ಟೆಂಬರ್ ಮಾಹೆ ೫ನೇ ತಾರೀಕಿನಂದು ನನ್ನ ತಾತ (ತಾಯಿಯ ತಂದೆ) ಕೂಡಾ ದೈವಾಧೀನರಾದದ್ದು.  ಅವರ ಬಗ್ಗೆ ಒಂದೆರಡು ಮಾತುಗಳು.  ನನ್ನ ತಾಯಿ ನನ್ನ ತಾತ ಅಜ್ಜಿಯರಿಗೆ ಮೊದಲನೆಯ ಮಗಳು.  ನನ್ನ ತಾತ ಆರೋಗ್ಯ ಇಲಾಖೆಯಲ್ಲಿ ಆರೋಗ್ಯಾಧಿಕಾರಿಯಾಗಿ ನಿವೃತ್ತರಾದವರು.  ನಾಟಕಗಳಲ್ಲಿ ಪಾತ್ರವಹಿಸಿ ಬಹಳ ಹೆಸರು ಮಾಡಿದ್ದರು.  ಟೈಗರ್ ವರದಾಚಾರ್ಯರ ಜೊತೆ ನಾಟಕ ಮಾಡಿದ್ದರಂತೆ.  ಅಯ್ಯೋ! ಅವರ ಹೆಸರೇ ಹೇಳಲಿಲ್ಲ ಅಲ್ವೇ.  ಸಿ.ಕೆ.ಸೂರ್ಯನಾರಾಯಣ ರಾವ್.  ಚಿಕ್ಕ ವಯಸ್ಸಿನಿಂದಲೂ ಬಹಳ ಕಷ್ಟಪಟ್ಟು ಮೇಲೆ ಬಂದವರು.  ಅವರು ನನ್ನ ತಾತ ಎಂದು ಹೇಳಿಕೊಳ್ಳಲು ಒಂದು ಬಗೆಯ ಹೆಮ್ಮೆ ಆಗುತ್ತದೆ.  ಮಲೇರಿಯಾಲಜಿಯಲ್ಲಿ ಉನ್ನತ ತರಬೇತಿಗಾಗಿ ಇಂಡೋನೇಷಿಯಾಗೆ ಹೋಗಿ ಬಂದಿದ್ದರು.  ಆಗ ಇಂಡೋನೇಷಿಯಾ ಜನ ಜೀವನದ ಬಗ್ಗೆ ಒಂದು ಸಣ್ಣ ಹೊತ್ತಿಗೆಯನ್ನು ಬರೆದು ಪ್ರಕಟಿಸಿದ್ದರು.  ಇದಷ್ಟೇ ಅಲ್ಲ ವೃತ್ತಿಯಲ್ಲಿ ಆರೋಗ್ಯ ಅಧಿಕಾರಿಯಾಗಿ ಉತ್ತಮ ಹೆಸರನ್ನು ಪಡೆದಿದ್ದವರು, ನಾಟಕ ರಂಗದ ಜೀವನದ ಒಳ ಹೊರಗನ್ನು ತಿಳಿಸುವ ಲೇಖನವನ್ನು ಧಾರಾವಾಹಿಯಾಗಿ ಸುಧಾ ವಾರಪತ್ರಿಕೆಯಲ್ಲಿ ಬರೆದು ಪ್ರಕಟಿಸಿದ್ದರು.  ದೂರ್ವಾಸ ಮುನಿಯ ಅಪರಾವತಾರವಾಗಿದ್ದ ಅವರನ್ನು ಕಂಡು ಎಂದಿಗೂ ದೂರವಿರುತ್ತಿದ್ದೆ.  ಕೆಲಸ ಸಿಕ್ಕ ಮೇಲೆಯೇ ನಾನು ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದು.  ನಾನು ಬಿ.ಕಾಂ. ಮೊದಲನೆಯ ದರ್ಜೆಯಲ್ಲಿ ಪಾಸಾಗಿದ್ದರೂ ಒಂದು ವರ್ಷದ ಕಾಲ ಸರಕಾರೀ ನೌಕರಿ ಸಿಕ್ಕದೇ ಒದ್ದಾಡಿತ್ತಿದ್ದು, ನಂತರ ಎ.ಜೀಸ್ ಆಫೀಸಿನಲ್ಲಿ ಕೆಲಸ ಸಿಕ್ಕಿದ ಹಿಂದೆಯೇ ರಿಸರ್ವ್ ಬ್ಯಾಂಕಿನಲ್ಲಿ ಮೆಡಿಕಲ್ ಎಕ್ಸಾಮಿನೇಷನ್ ಆದಾಗಲೇ, ಕಾರ್ಪೋರೇಷನ್ ಬ್ಯಾಂಕಿನಿಂದ ಕೆಲಸಕ್ಕೆ ಆರ್ಡರ್ ಬಂದು, ಆಗಲೇ ಕರ್ನಾಟಕ ಸರಕಾರದ ನೌಕರಿಯ ಆರ್ಡರ್ ಬಂದದ್ದು, ಕೇಳಿದ ಅವರು ಮೊದಲ ಬಾರಿಗೆ ಮನೆಯ ಅಂಗಳದ ಕಲ್ಲು ಹಾಸಿನ ಮೇಲೆ ಜೊತೆಗೆ ಕುಳ್ಳಿರಿಸಿಕೊಂಡು ಬಹಳ ಆಪ್ಯಾಯತೆಯಿಂದ ಮಾತನಾಡಿಸಿದ್ದು ಮರೆಯಲಾರದ ಘಟನೆ.   ಅವರಾಡಿದ ಮಾತುಗಳು ಈಗಲೂ ಕಿವಿಯಲ್ಲಿ ಗುಂಯ್‍ಗುಡುತ್ತಿವೆ.

 

ಇಷ್ಟು ದಿನಗಳು ನಿಮ್ಮೆಲ್ಲರನ್ನೂ ಬಹಳ ಸ್ಟ್ರಿಕ್ಟ್ ಆಗಿ ನೋಡಿದ್ದು ನಿನಗೆ ವ್ಯಥೆ ತಂದಿದೆಯೇನಯ್ಯಾ.  ಐ ಯಾಮ್ ಪ್ರೌಡ್ ಆಫ್ ಯು ಮೈ ಬಾಯ್.  ಕೇಳು ಇವತ್ತು ಹೇಳ್ತಿದ್ದೀನಿ, ನೀವೆಲ್ಲರೂ ನಿಮ್ಮ ನಿಮ್ಮ ಕಾಲ ಮೇಲೆ ನಿಲ್ಲಲಿ, ಜೀವನದ ಅರಿವಾಗಿ, ಇತರರಿಗೆ ಭಾರವಾಗದೇ ಇತರರ ಭಾರವನ್ನು ಹೊರುವಂತಹ ಶಕ್ತಿಯನ್ನೂ ಬುದ್ಧಿಯನ್ನೂ ಹೊಂದಲಿ ಅಂತ ಅಷ್ಟೇ ನಾನು ನಿಮ್ಮಗಳನ್ನು ಸ್ವಲ್ಪ ನಿಕೃಷ್ಟವಾಗಿ ನೋಡುತ್ತಿದ್ದೆ.  ನಿನಗೆ ಗೊತ್ತೇನಯ್ಯಾ, ನಾನೂ ವಾರಾನ್ನ ಮಾಡಿಯೇ ಬೆಳೆದವನು.  ಎಲ್ಲೋ ಮೂಲೆಯಲ್ಲಿ ಬೆಳೆದವನು ವಿಲಾಯತಿಗೆ ಹೋಗಿ ಬರುವುದು ಎಂದರೇನು ಸುಲಭದ ವಿಷಯವೇ.  ನನ್ನ ಹಾಗೆಯೇ ಜೀವನವನ್ನು ನೀನೂ ಅರಿಯುತ್ತಿರುವೆ.  ನಿನಗೆ ಒಳ್ಳೆಯದಾಗಲಿ.  ಇನ್ಮೇಲೆ ನೀನು ನನ್ನ ಸ್ನೇಹಿತನಿದ್ದ ಹಾಗೆ.  ಆಗಾಗ ಬರ್ತಿರಯ್ಯ‘.

 

ಏನೇ ಆಗಲಿ ಆ ತಾತನನ್ನು ಮರೆಯಲಾದೀತೇ?  ಇಂದು ಈ ಮಟ್ಟಕ್ಕೆ ಬರಲು ಮನದಲ್ಲಿ ಛಲ ಬಂದಿದ್ದರೆ ಅದು ಅಂದು ಅವರು ಹೇಳಿದ ಮಾತುಗಳೇ ಕಾರಣ.  ಅವರ ಆ ಮಾತುಗಳು ಆಪ್ಯಾಯತೆ ನನ್ನಲ್ಲಿ ಮಾನವೀಯತೆಯನ್ನು ಮೂಡಿಸಿತು.  ನನ್ನ ದುರಾದೃಷ್ಟ, ನಾನು ಅವರೊಂದಿಗೆ ಹೆಚ್ಚಿನ ಕಾಲ ಕಳೆಯಲಾಗಲಿಲ್ಲ.  ಅವರು ಸಾಯುವ ಮೊದಲು ಸ್ವಲ್ಪ ಕಾಲ ಆಸ್ಪತ್ರೆಯಲ್ಲಿ ಇದ್ದರು.  ಆಗ ಕೆಲವು ದಿನಗಳ ಕಾಲ ಅವರೊಂದಿಗಿರುವ ಅವಕಾಶ ಸಿಕ್ಕಿತ್ತು.  ಆಗಲೂ ಅವರು ಹೆಚ್ಚು ಮಾತನಾಡಲಿಲ್ಲ.  ಅವರ ಕರಾರುವಾಕ್ಕಾದ ಜೀವನಕ್ರಮ, ಮಿತ ಆಹಾರ ಸೇವನೆಗಳು ನನಗೆ ಪಾಠ ಕಲಿಸಿದವು.

 

೧೯೮೪ ರ ಅಕ್ಟೋಬರ್ ೩೧ನೇ ತಾರ್‍ಈಖು, ಸಿ.ಎ.ಐ.ಐ.ಬಿ ಪರೀಕ್ಷೆಯಿದ್ದಿತು.  ಮನೆಯ ಎದುರೇ ಇದ್ದ ನಾಷ್ಯನಲ್ ಕಾಲೇಜಿಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಿತ್ತು.  ನಾಲ್ಕೈದು ದಿನಗಳ ಹಿಂದೆಯಷ್ಟೇ ಹಲ್ಲಿಗೆ ಸಿಲ್ವರ್ ತುಂಬಿಸಿದ್ದ ಸಮಯ.  ಆಗ ನನಗೆ ಸ್ವಲ್ಪ ಜ್ವರವಿದ್ದಿತ್ತು.  ಅಂದು ಪರೀಕ್ಷೆ ಇದ್ದುದರಿಂದ ಹೋಗಲೇ ಬೇಕಿತ್ತು.  ಏನನ್ನೂ ತಿನ್ನಲು ಮನಸ್ಸಿರಲಿಲ್ಲ.  ಅಷ್ಟು ಹೊತ್ತಿಗೆ ಸ್ನೇಹಿತ ರಾಘವೇಂದ್ರ (ಕಾಲೇಜಿನಿಂದ ಸ್ನೇಹಿತನಾಗಿದ್ದು ಒಟ್ಟಿಗೇ ಬ್ಯಾಂಕು ಸೇರಿದವನು), ಅವರ ತಾಯಿ ಕಳುಹಿಸಿದರೆಂದು ರವೆ ಗಂಜಿಯನ್ನು ತಂದಿದ್ದ.  ಬೇರೆಯ ದಿನಗಳಲ್ಲಿ ಗಂಜಿಯನ್ನು ನೋಡಲೂ ಅಸಹ್ಯ ಪಡುತ್ತಿದ್ದವನು ಅಂದು ಚಪ್ಪರಿಸಿಕೊಂಡು ತಿಂದಿದ್ದೆ.  ಅವನೊಡನೆ ನಾನು ಪರೀಕ್ಷೆಗೆ ಹೊರಟೆ.  ಸರಿಯಾಗಿ ಓದಿರಲಿಲ್ಲ.  ಏನು ಬರೆಯುವುದು ಎಂದು ಯೋಚಿಸುತ್ತಿರುವಷ್ಟರಲ್ಲೇ ಅಂದಿನ ಪರೀಕ್ಷೆ ಮುಂದೆ ಹೋಗಿದೆಯೆಂದೂ ತಿಳಿದಿತ್ತು.  ಅಬ್ಬಾ! ಕೊನೆಗೂ ಓದಲು ಸಮಯ ಸಿಕ್ಕಿತು ಎಂದು ಸಂತಸ ಪಟ್ಟಿದ್ದೆ.  ಏಕೆ ಪರೀಕ್ಷೆ ಮುಂದೆ ಹೋಗಿದೆ ಎಂದು ತಿಳಿಯಲೂ ವ್ಯವಧಾನವಿರಲಿಲ್ಲ.

ಎಂತಹ ವಿಪರ್ಯಾಸ ನಾಯಕಿಯನ್ನು ಕಳೆದುಕೊಂಡು ಇಡೀ ದೇಶವೇ ಶೋಕದಲ್ಲಿ ಮುಳುಗಿದ್ದಾಗ ನಾನು ಪರೀಕ್ಷೆ ಮುಂದಕ್ಕೆ ಹೋಗಿರುವುದರ ಬಗ್ಗೆ ಸಂತೋಷ ಪಡ್ತಿದ್ದೆ.  ಮರುದಿನ ದಿನ ಪತ್ರಿಕೆಯನ್ನು ನೋಡಿದ ಮೇಲೆಯೇ ಇಂದಿರಾ ಗಾಂಧಿಯವರ ಕೊಲೆಯ ಬಗ್ಗೆ ತಿಳಿದದ್ದು.

 

**************

 

೧೯೮೪ರ ಡಿಸೆಂಬರ್ ವೇಳೆಗೆ ನನಗೆ ಎಲ್.ಎಫ್.ಸಿ. (ಲೀವ್ ಫೇರ್ ಕನ್ಸೆಷನ್) ತೆಗೆದುಕೊಳ್ಳುವ ಅವಕಾಶ ಸಿಕ್ಕಿತ್ತು.  ಅಂದರೆ ಎಲ್.ಎಫ್.ಸಿ ಯಲ್ಲಿ ಬ್ಯಾಂಕಿನ ಹಣದಲ್ಲಿ ರಜೆಯ ಮೇಲೆ ಬೇರೆ ಊರಿಗೆ ರೈಲಿನಲ್ಲಿ ಹವಾನಿಯಂತ್ರಿತ ಅಥವಾ ಮೊದಲ ದರ್ಜೆಯಲ್ಲಿ ಬೇರೆ ಊರಿಗೆ ಹೋಗಿ ಬರಬಹುದು.  ಮೊದಲ ಅವಕಾಶ ಸಿಕ್ಕಿದಾಗ ದೂರದೂರಿಗೆ ಹೋಗುವುದೆಂದರೆ, ನನಗೆ ಮೊದಲು ತೋಚಿದ್ದು ಮುಂಬೈಗೆ ಹೋಗೋಣ ಅಂತ.  ಏಕೆಂದರೆ ಅಲ್ಲಿ ಆಗ ನನ್ನಣ್ಣ ಕೆಲಸ ಮಾಡುತ್ತಿದ್ದ.  ಅಲ್ಲಿಯವರೆವಿಗೆ ನಾನು ಕರ್ನಾಟಕ ಬಿಟ್ಟು ಆಚೆ ಹೋಗಿದ್ದವನಲ್ಲ. 

 

ಮುಂಬೈಗೆ ಹೋಗಲು ಹವಾನಿಯಂತ್ರಿತ ತರಗತಿಯಲ್ಲಿ ಮುಂಗಡ ಟಿಕೆಟ್ ಮಾಡಿಸಿದೆ.   ಅಣ್ಣನಿಗಾಗಿ ಬೆಂಗಳೂರಿನಲ್ಲಿ ಸಿಗುವ ವಿಶೇಷ ತಿನಿಸುಗಳನ್ನು ಕೊಂಡಿದ್ದೆ.  ಆಗಿನ್ನೂ ಹೊಸದಾಗಿ ಉದ್ಯಾನ್ ಎಕ್ಸ್ಪ್ರೆಸ್ ದಿನವಹೀ ಬೆಂಗಳೂರಿನಿಂದ ರಾತ್ರಿ ೮ಕ್ಕೆ ಹೊರಟು ಮರುದಿನ ರಾತ್ರಿ ೮ಕ್ಕೆ ಮುಂಬೈ ತಲುಪುತ್ತಿತ್ತು.    ಅದೇ ಮೊದಲ ಬಾರಿಗೆ ಹವಾನಿಯಂತ್ರಿತ ಬೋಗಿಯೊಳಗೆ ಕಾಲಿಡುತ್ತಿದ್ದೆ.  ಅಲ್ಲಿ ಬರುವವರೆಲ್ಲರೂ ಆಗರ್ಭ ಶ್ರೀಮಂತರಿರಬೇಕೆಂದು ಎಣಿಸಿದ್ದೆ.  ಅವರೊಂದಿಗೆ ನಗೆಪಾಟಲಾಗಬಾರದೆಂದು ಪ್ರಯಾಣಕ್ಕಾಗಿಯೆ ಹೊಸ ಬಟ್ಟೆಯನ್ನು ಧರಿಸಿದ್ದೆ.   ನನ್ನಲ್ಲೂ ಅಂತಸ್ತಿದೆ ಎಂದು ತೋರ್ಪಡಿಸಿಕೊಳ್ಳುವ ಸಲುವಾಗಿ ಒಂದು ಒಳ್ಳೆಯ ಲೇಖನಿ ಮತ್ತು ಡೈರಿಯನ್ನು ಕೈನಲ್ಲಿ ಹಿಡಿದಿದ್ದೆ.  ಟ್ರೈನ್ ಬೆಂಗಳೂರು ಬಿಡುತ್ತಿದ್ದಂತೆಯೇ ಒಂದೇ ಸಮನೆ ಡೈರಿಯಲ್ಲಿ ಬರೆಯುತ್ತಿದ್ದೆ.  ಮಧ್ಯೆ ಮಧ್ಯೆ ಆಚೀಚೆ ನೋಡುತ್ತಿದ್ದೆ.  ನಂತರ ತಿಳಿದು ಬಂದ ವಿಷಯವೆಂದರೆ ಹೆಚ್ಚಿನ ಜನ ನನ್ನಂತೆಯೇ ಎಲ್.ಎಫ್.ಸಿ, ಎಲ್.ಟಿ.ಸಿ ತೆಗೆದುಕೊಂಡು ಬರ್ತಿದ್ದಾರೆ ಅಂತ.  ನಾನು ಡೈರಿಯಲ್ಲಿ ಬರೆಯುತ್ತಿದ್ದುದು ಏನೆಂದರೆ ಟ್ರೈನಿನಲ್ಲಿ ಹೋಗುವಾಗ ಬರುತ್ತಿದ್ದ ಸ್ಟೇಷನ್ನುಗಳ ಹೆಸರುಗಳನ್ನು.   ಟ್ರೈನ್ ನಿಲ್ಲುತ್ತಿದ್ದ ಪ್ರತಿಯೊಂದು ಸ್ಟೇಷನ್ನಿನಲ್ಲೂ ನಾನಿಳಿದು ಅಕ್ಕ ಪಕ್ಕದ ಬೋಗಿಗಳ ಕಡೆ ಹೋಗಿ ಬರ್ತಿದ್ದೆ.  ಮಾರನೆಯ ದಿನ ರಾತ್ರಿ ೭ಕ್ಕೆ ಸರಿಯಾಗಿ ಕಲ್ಯಾಣ ಸ್ಟೇಷನ್ ತಲುಪಿದ್ದೆ.  ಬಾಗಿಲಿನಿಂದ ಇಳಿಯುತ್ತಿರುವಂತೆಯೇ ನನ್ನಣ್ಣ ಎದುರಾಗಿದ್ದ. 

 

ಅಣ್ಣನೊಂದಿಗೆ ಅವನ ಕೊಠಡಿಗೆ ಹೋದಾಗ ಇಲ್ಲಿಯ ವಸತಿಯ ತೊಂದರೆ ಎಷ್ಟಿದೆ ಮತ್ತು ಬದುಕು ಎಷ್ಟು ದುಸ್ಸರವಾಗಿದೆ ಎಂದು ತಿಳಿಯಿತು.  ನನ್ನಣ್ಣ ಇದ್ದದ್ದು ಮುಂಬೈನ ಕೇಂದ್ರ ಪ್ರದೇಶದಿಂದ ೬೦ ಕೊಲೋಮೀಟರ್ ದೂರದ ಉಲ್ಹಾಸ ನಗರದಲ್ಲಿ.  ಅದೊಂದು ಚಾಲ್ ಅಂದರೆ ವಠಾರ.  ಒಂದು ಮನೆಯನ್ನು ಇನ್ನೊಂದು ಮನೆಯೊಂದಿಗೆ ಬೇರ್ಪಡಿಸಲು ಒಂದೇ ಗೋಡೆ.  ಆ ಮನೆಗಳಲ್ಲಿ ಮುಂಭಾಗದಲ್ಲಿ ಸಣ್ಣ ಕೊಠಡಿ – ಅಲ್ಲೇ ಒಂದು ಮೂಲೆಯಲ್ಲಿ ಅಡುಗೆ ಮಾಡುವ ಜಾಗ, ಕೊನೆಯಲ್ಲಿ ಒಂದು ಬಚ್ಚಲು.   ಶೌಚಕ್ರಿಯೆಗೆ ಹಿಂದುಗಡೆ ಇರುವ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸಬೇಕು.  ಬೆಳಗ್ಗೆ ಆರು ಘಂಟೆಗೆ ಅಲ್ಲಿ ದೊಡ್ಡ ಕ್ಯೂ ಇರುತ್ತದೆ.  ಅದಕ್ಕಾಗಿ ನನ್ನಣ್ಣ ಪ್ರತಿದಿನವೂ ೫ ಘಂಟೆಗೇ ಎದ್ದು ಶೌಚಕಾರ್ಯ ಮುಗಿಸಿ ಬರುತ್ತಿದ್ದ.   ಮರುದಿನದಿಂದ ಮುಂಬೈ ಸುತ್ತುವುದರ ಬಗ್ಗೆ, ಎಲ್ಲೆಲ್ಲಿ ಏನೇನು ನೋಡುವುದಿದೆ, ಹೇಗೆ ಹೋಗಬೇಕು, ಲೋಕಲ್ ಟ್ರೈನಿನಲ್ಲಿ ಹೇಗೆ ಹತ್ತಬೇಕು, ಜೇಬುಗಳ್ಳರಿಂದ ಹೇಗೆ ಹುಷಾರಾಗಿರಬೇಕು ಎಂದೆಲ್ಲಾ ಹೇಳಿದ್ದ.  ಮುಂಬೈನಲ್ಲಿ ದೊಡ್ಡ ಬಂಗಲೆಗಳು, ಐಷಾರಾಮೀ ಜೀವನ, ಕಾರುಗಳಲ್ಲಿ ಓಡಾಟ ಇತ್ಯಾದಿ ಬಗ್ಗೆ ಏನೇನೋ ಕನಸು ಕಂಡಿದ್ದೆ.  ಎಲ್ಲವೂ ಒಂದೇ ದಿನದಲ್ಲಿ ಠುಸ್ ಎಂದು ಹೋಯಿತು.  ೧೫ ದಿನಗಳು ಇರುವುದೆಂದು ಲೆಕ್ಕ ಹಾಕಿ ಬಂದಿದ್ದ ನಾನು ಮರುದಿನವೇ ಲೋಕಲ್ ಟ್ರೈನಿನಲ್ಲಿ ಓಡಾಡಲು ಪಾಸನ್ನು ಮಾಡಿಸಿದ್ದೆ.   

 

ಶಾಲೆಯಲ್ಲಿದ್ದಾಗ ಹಿಂದಿ ಪರೀಕ್ಷೆಯನ್ನು ಪಾಸು ಮಾಡಿದ್ದ ನಾನು, ಹಿಂದಿ ಚೆನ್ನಾಗಿ ಅರ್ಥ ಆಗುತ್ತದೆ, ಮಾತನಾಡಲೂ ಬರುತ್ತದೆ ಎಂದೆಣಿಸಿದ್ದೆ.  ಆದರಿಲ್ಲಿ ಮಾತನಾಡುವ ಹಿಂದಿಯೇ ಬೇರೆ.  ನನಗೆ ಎಷ್ಟೋ ಪದಗಳು ಅರ್ಥವೇ ಆಗ್ತಿರ್ಲಿಲ್ಲ. ಮರಾಠಿ ಹಿಂದಿ ಮಿಶ್ರಣವಾಗಿ ಸ್ವಲ್ಪ ಒಡ್ಡು ಒಡ್ಡಾಗಿ ಮಾತನಾಡುವ ಭಾಷೆ ಇಲ್ಲಿಯದ್ದಾಗಿದೆ.  ಪ್ರತಿದಿನ ಬೆಳಗ್ಗೆ ೮ ಘಂಟೆಗೆ ಉಲ್ಹಾಸನಗರ ಸ್ಟೇಷನ್ನಿನ ಮೊದಲನೆಯ ಪ್ಲಾಟ್‍ಫಾರಂನಲ್ಲಿ ಬರುವ ಅಂಬರನಾಥದ ಗಾಡಿಯನ್ನು ಹಿಡಿಯುತ್ತಿದ್ದೆವು.  ಅದರಲ್ಲಿ ಒಳಗೆ ನುಸುಳಲು ಸ್ವಲ್ಪ ಅವಕಾಶ ಸಿಗುತ್ತಿತ್ತು.  ಬದಲಾಪುರ ಅಥವಾ ಕರ್ಜತ್ ಗಾಡಿಗಳಲ್ಲಿ ಒಳಗೆ ಹೋಗಲಾಗುತ್ತಿರಲಿಲ್ಲ.  ಪ್ರತಿ ದಿನವೂ ಹೀಗೆಯೇ ಲೋಕಲ್ ಟ್ರೈನಿನಲ್ಲಿ ಹತ್ತಿ ಇಳಿದು ಮುಂಬೈ ದರ್ಶನವನ್ನು ಮಾಡಿದ್ದಾಗಿತ್ತು.  ವಾಪಸ್ಸು ಬರುವಾಗ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಬಂದು ಅಲ್ಲಿಂದ ನನ್ನೂರಾದ ತಳುಕಿಗೆ ಹೋಗಿದ್ದೆ.  ಅಲ್ಲೊಂದೆರಡು ದಿನಗಳಿದ್ದೆ.  ಇನ್ನೂ ೧೦ ದಿನಗಳ ರಜೆ ಇದ್ದುದರಿಂದ ಏನು ಮಾಡಲಿ, ಎಲ್ಲಿಗೆ ಹೋಗಲಿ ಅಂತ ಯೋಚಿಸ್ತಿದ್ದಾಗ, ನನ್ನ ತಂದೆ ತಿರುಪತಿಗೆ ಹೋಗಿ ಬಾ, ಎಂದಿದ್ದರು.  ಅದೇ ಮೊದಲ ಬಾರಿಗೆ ತಿರುಪತಿಗೆ ನಾನು ಹೋಗುತ್ತಿದ್ದುದು.  ನನ್ನೂರಿನಿಂದ ೧೫ ಕಿಲೋಮೀಟರ್ ದೂರದ ಚಳ್ಳಕೆರೆಯಿಂದ ಬೆಳಗ್ಗೆ ೭ ಘಂಟೆಗೆ ತಿರುಪತಿಗೆ ಹೋಗಲು ನೇರ ಬಸ್ಸು ಇದ್ದಿತ್ತು.  ಅದರಲ್ಲಿ ಹೊರಟು ಸಂಜೆ ೭ಕ್ಕೆ ತಿರುಪತಿಗೆ ಹೋಗಿ ಸೇರಿದ್ದೆ.  ಅದೇ ಮೊದಲ ಬಾರಿಗೆ ಹೋಗುತ್ತಿದ್ದುದರಿಂದ ಎಲ್ಲಿ ಹೋಗುವುದು, ಏನು ಮಾಡುವುದು ಎಂದು ಏನೂ ತಿಳಿದಿರಲಿಲ್ಲ.  ನೇರವಾಗಿ ಹತ್ತಿರದ ಪೋಲಿಸ್ ಸ್ಟೇಷನ್ನಿಗೆ ಹೋದೆ.  ತಿರುಮಲ ಬೇರೆ ತಿರುಪತಿ ಬೇರೆ ಎಂಬುದು ತಿಳಿದದ್ದೇ ಆಗ.  ಅಲ್ಲಿಯವರೆವಿಗೆ ಇವೆರಡರ ವ್ಯತ್ಯಾಸ ತಿಳಿದೇ ಇರಲಿಲ್ಲ.  ಅಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ತಕ್ಷಣವೇ ಬಸ್ಸನ್ನೇರಿ ತಿರುಮಲಕ್ಕೆ ಹೋಗಿದ್ದೆ.  ಅಲ್ಲಿ ರಾತ್ರಿ ಕಳೆಯಲು ರೂಮು ಮಾಡಲು ಹೋದಾಗ ರೂ ೧೦ ಕ್ಕೆ ಕಾಟೇಜ್ ಸಿಗುವುದೆಂದು ತಿಳಿಯಿತು.  ಹತ್ತಿರದಲ್ಲೇ ಇದ್ದ ಹೊಟೇಲ್ ಒಂದರಲ್ಲಿ ರಾತ್ರಿಯೂಟ ಮಾಡಿ ಕಾಟೇಜಿನಲ್ಲಿ ಮಲಗಿದೆ.  ಬೆಳಗ್ಗೆ ಬೇಗನೆ ದೇವರ ದರ್ಶನ ಮಾಡಬೇಕೆಂಬ ಕಾತರದಲ್ಲಿ ರಾತ್ರಿ ನಿದ್ರೆಯೇ ಬಂದಿರಲಿಲ್ಲ.  ನನಗೆ ಗಡಿಯಾರ ಕಟ್ಟುವ ಅಭ್ಯಾಸವಿಲ್ಲವಾಗಿ ಸಮಯ ಎಷ್ಟಾಗಿದೆ ಎಂದು ತಿಳಿಯುತ್ತಿರಲಿಲ್ಲ.  ಸಾಮಾನ್ಯವಾಗಿ ಹೋದಲ್ಲೆಲ್ಲಾ ಗಡಿಯಾರು ಇರುತ್ತಿತ್ತು.  ಮಲಗಿದ್ದವನಿಗೆ, ಹೊರಗಡೆ ಬೆಳಕು ಹರಿದಂತೆ ಅನ್ನಿಸಿತು.  ತಕ್ಷಣ ಎದ್ದು ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋಗೋಣ ಎಂದು ಸ್ನಾನದ ಮನೆಗೆ ಹೊರಟೆ.  ನಲ್ಲಿ ತಿರುಗಿಸಿ ಕೆಳಗೆ ಕುಳಿತೆ.  ಒಂದು ಕ್ಷಣ ಎಲ್ಲಿದ್ದೇನೆ ಎಂಬುದೇ ನೆನಪಿರಲಿಲ್ಲ.  ಮೈಯೆಲ್ಲಾ ಮರತಟ್ಟಿ ಹೋಗಿತ್ತು.  ಮಾಘ ಮಾಸದ ಛಳಿಗಾಲ.  ಬೆಳಗ್ಗೆ ೩ ಘಂಟೆ ಸಮಯದಲ್ಲಿ ನೀರು ಎಷ್ಟು ತಣ್ಣಗಿದ್ದೀತು – ನೀವೇ ಊಹಿಸಿ.  ನೀರು  ಮಂಜಿನ ಗಡ್ಡೆಯಾಗಿರಲಿಲ್ಲ ಅಷ್ಟೆ.  ಜನಸಂದಣಿ ಇಲ್ಲದ ಕಾರಣ ಮತ್ತು ಬೆಳಗಿನ ನಾಲ್ಕು ಘಂಟೆಯಾದ ಕಾರಣ ದೇವರ ದರ್ಶನ ಬಹಳ ಸುಲಭವಾಗಿ ಆಗಿತ್ತು.  ಪ್ರಸಾದ ವಿತರಣೆ ಇನ್ನೂ ಆರಂಭಿಸಿರಲಿಲ್ಲ.  ಹಾಗಾಗಿ ದೇಗುಲದ ಒಳಗೆಲ್ಲಾ ಸುತ್ತಾಡಿ ಬಂದೆ.  ಪ್ರಸಾದ ಕೊಡುವಾಗ ಹೆಚ್ಚಿಗೆ ಖಾರದ ಪೊಂಗಲ್ ಸಿಹಿ ಪೊಂಗಲ್ ಬೇಕೆಂದು ಎರಡು ರೂಪಾಯಿಗಳನ್ನು ಕೌಂಟರಿನಲ್ಲಿ ಕೊಡಲು, ದೊಡ್ಡ ದೊಡ್ಡ ಎಲೆಯಲ್ಲಿ ತುಂಬಿ ಕೊಟ್ಟರು.  ಅಷ್ಟೊಂದು ಹೇಗೆ ತಿನ್ನಲಿ.  ಅಂದಿನ ರಾತ್ರಿಯವರೆವಿಗೂ ಅದನ್ನೇ ತಿಂದಿದ್ದೆ.  ರಾತ್ರಿಯ ೯ ಘಂಟೆ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟೆ. 

 

ಬೆಳಗಿನ ಜಾವ ೫ಕ್ಕೆ ಬೆಂಗಳೂರು ತಲುಪಿದ್ದೆ.  ಎಲ್.ಎಫ್.ಸಿಗಾಗಿ ತೆಗೆದುಕೊಂಡಿದ್ದ ಇನ್ನೂ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಿತ್ತು.  ಅದನ್ನು ಖರ್ಚು ಮಾಡಲೆಂದೇ ಬಸ್ ಸ್ಟ್ಯಾಂಡಿನಿಂದ ನೇರವಾಗಿ ರೈಲ್ವೇ ನಿಲ್ದಾಣಕ್ಕೆ ಹೋಗಿ, ಫಸ್ಟ್ ಕ್ಲಾಸಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದೆ.  ಅಲ್ಲಿಯೂ ನಾನು ಕಂಪಾರ್ಟ್‍ಮೆಂಟಿನಲ್ಲಿ ಕುಳಿತುಕೊಳ್ಳದೇ ಬಾಗಿಲಿನಲ್ಲೇ ನಿಂತಿದ್ದೆ.  ಅದರಲ್ಲಿದ್ದ ಅಟೆಂಡೆಂಟ್‍ಗಳಿಗೆ ನನ್ನ ವರ್ತನೆ ನೋಡಿ ಆಶ್ಚರ್ಯವೆನಿಸಿತ್ತು.  ಯಾರೂ ಏನೂ ಕೇಳಲಿಲ್ಲ, ಮತ್ತು ನಾನೂ ಏನೂ ಹೇಳಲಿಲ್ಲ.  ಮೈಸೂರಿನ ರೈಲ್ವೇ ಸ್ಟೇಷನ್ ತಲುಪುತ್ತಲೇ ರಿಟರ್ನ್ ಟಿಕೆಟ್ ತೆಗೆದುಕೊಂಡು, ಚಾಮುಂಡಿ ಬೆಟ್ಟಕ್ಕೆ ಹೋಗಿಬಂದು ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದೆ.  ಎರಡು ದಿನಗಳಿಂದ ಸ್ನಾನವಿಲ್ಲದೇ ಅದು ಹೇಗೆ ಇದ್ದೆನೋ ಈಗಲೂ ನೆನೆಸಿಕೊಳ್ಳಲಾಗುವುದಿಲ್ಲ.