ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 3

ಮರು ದಿನ ಅಂದರೆ ಎರಡನೆಯ ದಿನ ಕೆಲಸ ಸ್ವಲ್ಪ ಸುಲಭವಾಗಿತ್ತು.   ಅಂದು ಸಮಯಕ್ಕೆ ಸರಿಯಾಗಿ ಊಟಕ್ಕೆ ಹೋಗಿದ್ದೆವು ಮತ್ತು ಸಂಜೆ ೫ ಘಂಟೆಗೆ ಸರಿಯಾಗಿ ಕೆಲಸವೂ ಮುಗಿದಿತ್ತು. 

 

ಫೆಬ್ರವರಿ ತಿಂಗಳ ೨೬ಕ್ಕೆ ನಮಗೆ ಮೊದಲ ಸಂಬಳ ದೊರಕಿತು.  ಆ ಸಮಯದಲ್ಲಿ ನಮಗೆ ಪೇ ಸ್ಲಿಪ್ ಎಂದು ಸಂಬಳದ ವಿವರವಿರುವ ಒಂದು ಪತ್ರ ಕೊಡುವರು.  ಅಂದು ನಮ್ಮ ನಮ್ಮ ವಿಭಾಗಗಳಲ್ಲಿ  ಪೇ ಸ್ಲಿಪ್ ಅನ್ನು ಕೊಟ್ಟಿದ್ದರು.   ಆಗ ನನ್ನ ಸ್ನೇಹಿತ ಗಣೇಶ ಹೇಳಿದ ಮಾತುಗಳು ನನಗಿನ್ನೂ ನೆನಪಿದೆ. ಈ ಪೇ ಸ್ಲಿಪ್ ಅನ್ನು ಭದ್ರವಾಗಿಟ್ಟುಕೊಳ್ರಪ್ಪ – ಇನ್ನು ನಮ್ಮ ಸರ್ವೀಸ್‍ನಲ್ಲಿ ಇಂತಹ ಪೇ ಸ್ಲಿಪ್ ಸಿಗೋದಿಲ್ಲ‘, ಎಂದು.  ಏಕೆ ಹೇಳಿದ್ದ ಗೊತ್ತೇ?  ಅದರಲ್ಲಿ ಏನೊಂದೂ ಕಡಿತವಿರಲಿಲ್ಲ.  ಎರಡನೆಯ ತಿಂಗಳಿಂದ ಪ್ರಾವಿಡೆಂಟ್ ಫಂಡ್ ಕಡಿತ ಪ್ರಾರಂಭವಾಗಿತ್ತು.  ಇದು ಸೇವೆಯಲ್ಲಿರುವವರೆವಿಗೆ ಇದ್ದೇ ಇರುತ್ತದೆ.  ಗಣೇಶನ ಮಾತುಗಳು ಇಂದಿಗೂ ಕಿವಿಯಲ್ಲಿ ಧ್ವನಿಗುಡುತ್ತಲೇ ಇರುತ್ತದೆ. 

 

ಸ್ವಲ್ಪ ದಿನಗಳಲ್ಲೇ ನಾವುಗಳು ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಕಲಿತು ಹಳಬರಾಗಿದ್ದೆವು.  ೫-೬ ತಿಂಗಳುಗಳು ಕಳೆಯುವುದರೊಳಗೆ ನಮಗೆ ಕೆಲಸ ಚೆನ್ನಾಗಿ ಮಾಡಲು ಬರುತ್ತಿದ್ದು ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡುವುದು ಸ್ವಲ್ಪ ಬೋರ್ ಎನ್ನಿಸುತ್ತಿತ್ತು.  ಆದರೆ ೩ ತಿಂಗಳಿಗೊಮ್ಮೆ ಬೇರೆ ಬೇರೆ ಸೆಕ್ಷನ್ನುಗಳಿಗೆ ಬದಲಿಸುತ್ತಿದ್ದುದರಿಂದ ಹಿರಿಯರೊಂದಿಗೆ ಬೆರೆತು ಹೆಚ್ಚಿನ ವಿಷಯಗಳನ್ನು ಕಲಿಯುವಂತಾಗಿತ್ತು. 

 

ಮೊದಲ ತಿಂಗಳ ಸಂಬಳ ಬಂದ ಮೇಲೆ ಹಾಸ್ಟೆಲ್‍ನಲ್ಲಿ ಇರುವುದು ಸರಿ ಇರುವುದಿಲ್ಲವೆಂದು ಮಲ್ಲೇಶ್ವರದ ೧೮ನೇ ಕ್ರಾಸಿನಲ್ಲಿರುವ ಗಣೇಶ ಭವನದಲ್ಲಿ ರೂಮು ಮಾಡಿದ್ದೆ.   ಆದರೂ ಪ್ರತಿ ಶನಿವಾರ ಹಾಸ್ಟೆಲ್‍ಗೆ ಹೋಗ್ತಿದ್ದೆ.  ಅಷ್ಟು ವರ್ಷಗಳು ಅಲ್ಲಿದ್ದು ಇದ್ದಕ್ಕಿದ್ದಂತೆ ಅಲ್ಲಿಗೆ ಹೋಗದಿರಲು ಮನಸ್ಸಾಗುತ್ತಿರಲಿಲ್ಲ.  ಮತ್ತು ಅಲ್ಲಿನ ಸ್ನೇಹಿತರುಗಳಿಗೆ ಸ್ವಲ್ಪ ಮೋಜು ಮಾಡುವ ಮನಸ್ಸಾಗುತ್ತಿದ್ದು (ಯಾವಾಗಲೂ ಸ್ಟ್ರಿಕ್ಟ್ ಆಗಿ ಇರುತ್ತಿದ್ದ ಹಾಸ್ಟೆಲ್), ನಾನು ಹೋದಾಗಲೆಲ್ಲ ಸಿನೆಮಾಗೆ ಹೋಗೋಣ ಹೊಟೆಲ್‍ಗೆ ಹೋಗೋಣ ಎನ್ನುತ್ತಿದ್ದರು.  ಹೇಗಿದ್ದರೂ ನನ್ನಲ್ಲಿ ಹಣವಿದ್ದು, ಅವರುಗಳೊಂದಿಗೆ ಖರ್ಚು ಮಾಡುವುದು ಅವರಿಗೆ ಸಂತಸದ ವಿಷಯವಾಗಿತ್ತು.  ಅಲ್ಲಿನ ಸ್ನೇಹಿತರುಗಳು ಯಾರು ಎಂದರೆ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದ ಗಿರಿಶೇಖರ ಕಲ್ಕೂರ, ಬದರೀನಾಥ, ಡೆಂಟಲ್ ಓದುತ್ತಿದ್ದ ಬದರಿಯ ತಮ್ಮ (ಹೆಸರು ನೆನಪಿಗೆ ಬರ್ತಿಲ್ಲ), ಬಿಎಸ್‍ಸಿ ಓದುತ್ತಿದ್ದ ಪುಟ್ಟ (ಅವನ ನಿಜವಾದ ಹೆಸರು ಮರೆತಿರುವೆ), ಐ.ಸಿ.ಡಬ್ಲ್ಯು.ಏ ಓದುತ್ತಿದ್ದ ಪೂರ್ಣಚಂದ್ರ ಭಟ್ಟ, ರಾಜಾರಾಮ ಹೆಗಡೆ, ಸಿಎ ಮಾಡುತ್ತಿದ್ದ ಮಂಜುನಾಥ ಹೆಗಡೆ.  ಪ್ರತಿ ಶನಿವಾರ ರಾತ್ರಿ ಷೋಗೆ ಸಿನೆಮಾಗೆ ಹೋಗ್ತಿದ್ದೆವು.  ಆಗಾಗ ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತಿಂಡಿ ತಿನ್ನಲು ಹೋಗುತ್ತಿದ್ದೆವು.  ಸ್ವಲ್ಪ ಸಮಯಗಳ ನಂತರ ಏನೋ ಗಲಾಟೆ ಆಗಿ ಹಾಸ್ಟೆಲ್ ಅನ್ನು ಮುಚ್ಚಿಬಿಟ್ಟರು.  ಈಗ ಹಾಸ್ಟೆಲ್ ಇಲ್ಲ.  ಒಮ್ಮೆಯಂತೂ ಹಿಂದಿ ಚಲನಚಿತ್ರ ಪಡೋಸನ್ ಅನ್ನು ಒಂದೇ ವಾರದಲ್ಲಿ ನಾಲ್ಕು ಬಾರಿ ನೋಡಿದ್ದೆವು.  ಹಾಗೇ ಮಧುಮತಿ ಚಿತ್ರಕ್ಕೆ ಒಬ್ಬೊಬ್ಬರು ಒಂದೊಂದು ಸಲ ನನ್ನ ಜೊತೆ ಬಂದಿದ್ದು ಅದನ್ನೂ ೫ ಬಾರಿ ನೋಡಿದ್ದೆ.

 

ಮಲ್ಲೇಶ್ವರದ ಗಣೇಶ ಭವನದಲ್ಲಿ ವಾಸವಿದ್ದರೂ, ಹೆಚ್ಚಿನ ಸಮಯವೆಲ್ಲಾ ಬಸವನಗುಡಿಯಲ್ಲೇ ಕಳೆಯುತ್ತಿದ್ದೆ.  ಆಗ ನನ್ನೊಡನೆ ಐ.ಸಿ.ಡಬ್ಲ್ಯು.ಏ ಮಾಡುತ್ತಿದ್ದ ಕೆನರಾ ಬ್ಯಾಂಕ್ ಉದ್ಯೋಗಿ ಎಸ್.ಆರ್. ಹೆಗಡೆ, ಅವನೊಡನೆ ಅವನ ಮನೆಗೆ ಬಂದಿರಲು ಹೇಳಿದ.  ಅವನ ಮನೆ ಇದ್ದದ್ದು ಎನ್.ಆರ್.ಕಾಲೋನಿಯಲ್ಲಿ.  ಅವನೊಡನಿದ್ದ ಅವನ ಇನ್ನೊಬ್ಬ ಸ್ನೇಹಿತ (ಇಂಡಿಯನ್ ಆಯಿಲ್‍ನಲ್ಲಿ ಎಂಜಿನಿಯರ್) ವರ್ಗವಾಗಿ ಬೇರೆಯ ಊರಿಗೆ ಹೊರಟಿದ್ದ.    ಅಲ್ಲಿ ಸ್ವಲ್ಪ ದಿನಗಳಿದ್ದೆ. 

 

ಒಂದೆರಡು ತಿಂಗಳುಗಳಲ್ಲಿ ನನ್ನ ಕಾಲೇಜಿನ ಸಹಪಾಠಿ ಮತ್ತು ನಿಕಟ ಸ್ನೇಹಿತನಾಗಿದ್ದ ಮನೋಹರ ಶರ್ಮನಿಗೆ ಬಹಳ ಕಡಿಮೆ ಬಾಡಿಗೆಗೆ (ತಿಂಗಳಿಗೆ ರೂ. ೧೨೦/-) ಒಂದು ಮನೆ ಸಿಕ್ಕಿತ್ತು.  ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಅಷ್ಟು ಹಣ ಕೊಡಲು ಸಾಧ್ಯವಿರಲಿಲ್ಲ.  ನನಗೆ ಆ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಹೇಳಿದ.  ವಿಶ್ವೇಶ್ವರಪುರದ ಜೈನ್ ದೇವಸ್ಥಾನದ ಬೀದಿಯಲ್ಲಿ ಆ ಮನೆಗೆ ಹೋಗಿದ್ದೆ.    ಆಗಲೇ ಹೊಸ ಕುಕ್ಕರ್ ಮತ್ತು ಗ್ಯಾಸ್ ಕನೆಕ್ಷನ್ ತೆಗೆದುಕೊಂಡಿದ್ದೆ.   ರೇಷನ್ ಕಾರ್ಡ್ ಕೂಡಾ ಮಾಡಿಸಿದ್ದು ಆಗಲೇ.  ಒಂದು ರೀತಿಯಲ್ಲಿ ಸಂಸಾರ ಹೂಡಲು ಸಂಪೂರ್ಣವಾಗಿ ಸಜ್ಜಾಗಿದ್ದೆ.  ನಾನು ಮತ್ತು ನನ್ನ ಸ್ನೇಹಿತ ಪ್ರತಿದಿನವೂ ಬೆಳಗ್ಗೆ ಸಂಜೆ ಅಡುಗೆ ಮಾಡುತ್ತಿದ್ದೆವು. 

 

ಒಂದು ದಿನ ಊಟ ಮಾಡುತ್ತಿದ್ದಾಗ ಮೆದುಳಿಗೆ ಷಾಕ್ ತಗುಲಿದ ಹಾಗಾಯಿತು.  ಸಾವರಿಸಿಕೊಳ್ಳಲು ಎರಡು ನಿಮಿಷಗಳೇ ಬೇಕಾಯಿತು.  ಮುಂದೆ ಅನ್ನವನ್ನು ಬಾಯೊಳಗೆ ಇಡಲಾಗುತ್ತಿರಲಿಲ್ಲ.  ದವಡೆಯಲ್ಲಿ ಬಹಳ ನೋವು ಕಾಣಿಸಿಕೊಂಡಿತು.  ಹಾಗೆಯೇ ದವಡೆ ಬುರ್ರನೆ ಪೂರಿಯಂತೆ ಉಬ್ಬತೊಡಗಿತು.  ನನ್ನ ಸ್ನೇಹಿತ ಶರ್ಮನಿಗೆ ತಿಳಿಸಿದೆ.  ಊಟವನ್ನು ಅಷ್ಟಕ್ಕೇ ಬಿಟ್ಟು ತಕ್ಷಣ ಹತ್ತಿರದ ಹಲ್ಲಿನ ವೈದ್ಯರ ಹತ್ತಿರಕ್ಕೆ ಓಡಿದ್ದೆವು.  ವೈದ್ಯರು ಹೇಳಿದ್ದು, ಒಂದು ದವಡೆ ಹಲ್ಲು ಹುಳುಕಾಗಿದೆಯೆಂದೂ ತಕ್ಷಣ ಸಿಮೆಂಟ್ ತುಂಬಬೇಕೆಂದೂ. ತಕ್ಷಣವೇ ಅದಾಗಬೇಕೆಂದಿದ್ದರು.  ಸರಿ ಎಂದು ಅವರಿಂದಲೇ ಅಲ್ಲೇ ಸಿಮೆಂಟು ತುಂಬಿಸಿದೆ.  ಸ್ವಲ್ಪ ದಿನಗಳು ಏನೂ ತೊಂದರೆ ಇರಲಿಲ್ಲ.

 

ಅಂದೊಂದು ಭಾನುವಾರ ಬೂದುಗುಂಬಳಕಾಯಿ ಕಡಲೆಕಾಳು ಹಾಕಿ ಹುಳಿ ಮಾಡಿದ್ದೆವು.    ಮಧ್ಯಾಹ್ನ ಬಹಳ ಖುಷಿಯಾಗಿ ಊಟ ಮಾಡ್ತಿದ್ದಾಗ ಹಲ್ಲಿಗೆ ದಪ್ಪದಾದ ಕಲ್ಲು ಸಿಕ್ಕಿ ಕೊಂಡಂತಾಯ್ತು.   ಏನೂ ಅಂತ ನೋಡಿದರೆ, ಅದು ಹಲ್ಲಿಗೆ ತುಂಬಿದ್ದ ಸಿಮೆಂಟು.  ತಕ್ಷಣ ವೈದ್ಯರ ಬಳಿಗೆ ಮತ್ತೆ ಓಡಿದ್ದೆ.   ಆಗ ಅವರು ಸಿಮೆಂಟು ಸರಿಯಾಗಿ ಹೊಂದಿಕೆ ಆಗ್ತಿಲ್ಲ ಎಂದು ಸಿಲ್ವರ್ ಫಿಲ್ಲಿಂಗ್ ಮಾಡಿದ್ದರು. 

 

**************

 

೧೯೮೩ರ ಸೆಪ್ಟೆಂಬರ್ ಮಾಹೆ ೫ನೇ ತಾರೀಕಿನಂದು ನನ್ನ ತಾತ (ತಾಯಿಯ ತಂದೆ) ಕೂಡಾ ದೈವಾಧೀನರಾದದ್ದು.  ಅವರ ಬಗ್ಗೆ ಒಂದೆರಡು ಮಾತುಗಳು.  ನನ್ನ ತಾಯಿ ನನ್ನ ತಾತ ಅಜ್ಜಿಯರಿಗೆ ಮೊದಲನೆಯ ಮಗಳು.  ನನ್ನ ತಾತ ಆರೋಗ್ಯ ಇಲಾಖೆಯಲ್ಲಿ ಆರೋಗ್ಯಾಧಿಕಾರಿಯಾಗಿ ನಿವೃತ್ತರಾದವರು.  ನಾಟಕಗಳಲ್ಲಿ ಪಾತ್ರವಹಿಸಿ ಬಹಳ ಹೆಸರು ಮಾಡಿದ್ದರು.  ಟೈಗರ್ ವರದಾಚಾರ್ಯರ ಜೊತೆ ನಾಟಕ ಮಾಡಿದ್ದರಂತೆ.  ಅಯ್ಯೋ! ಅವರ ಹೆಸರೇ ಹೇಳಲಿಲ್ಲ ಅಲ್ವೇ.  ಸಿ.ಕೆ.ಸೂರ್ಯನಾರಾಯಣ ರಾವ್.  ಚಿಕ್ಕ ವಯಸ್ಸಿನಿಂದಲೂ ಬಹಳ ಕಷ್ಟಪಟ್ಟು ಮೇಲೆ ಬಂದವರು.  ಅವರು ನನ್ನ ತಾತ ಎಂದು ಹೇಳಿಕೊಳ್ಳಲು ಒಂದು ಬಗೆಯ ಹೆಮ್ಮೆ ಆಗುತ್ತದೆ.  ಮಲೇರಿಯಾಲಜಿಯಲ್ಲಿ ಉನ್ನತ ತರಬೇತಿಗಾಗಿ ಇಂಡೋನೇಷಿಯಾಗೆ ಹೋಗಿ ಬಂದಿದ್ದರು.  ಆಗ ಇಂಡೋನೇಷಿಯಾ ಜನ ಜೀವನದ ಬಗ್ಗೆ ಒಂದು ಸಣ್ಣ ಹೊತ್ತಿಗೆಯನ್ನು ಬರೆದು ಪ್ರಕಟಿಸಿದ್ದರು.  ಇದಷ್ಟೇ ಅಲ್ಲ ವೃತ್ತಿಯಲ್ಲಿ ಆರೋಗ್ಯ ಅಧಿಕಾರಿಯಾಗಿ ಉತ್ತಮ ಹೆಸರನ್ನು ಪಡೆದಿದ್ದವರು, ನಾಟಕ ರಂಗದ ಜೀವನದ ಒಳ ಹೊರಗನ್ನು ತಿಳಿಸುವ ಲೇಖನವನ್ನು ಧಾರಾವಾಹಿಯಾಗಿ ಸುಧಾ ವಾರಪತ್ರಿಕೆಯಲ್ಲಿ ಬರೆದು ಪ್ರಕಟಿಸಿದ್ದರು.  ದೂರ್ವಾಸ ಮುನಿಯ ಅಪರಾವತಾರವಾಗಿದ್ದ ಅವರನ್ನು ಕಂಡು ಎಂದಿಗೂ ದೂರವಿರುತ್ತಿದ್ದೆ.  ಕೆಲಸ ಸಿಕ್ಕ ಮೇಲೆಯೇ ನಾನು ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದು.  ನಾನು ಬಿ.ಕಾಂ. ಮೊದಲನೆಯ ದರ್ಜೆಯಲ್ಲಿ ಪಾಸಾಗಿದ್ದರೂ ಒಂದು ವರ್ಷದ ಕಾಲ ಸರಕಾರೀ ನೌಕರಿ ಸಿಕ್ಕದೇ ಒದ್ದಾಡಿತ್ತಿದ್ದು, ನಂತರ ಎ.ಜೀಸ್ ಆಫೀಸಿನಲ್ಲಿ ಕೆಲಸ ಸಿಕ್ಕಿದ ಹಿಂದೆಯೇ ರಿಸರ್ವ್ ಬ್ಯಾಂಕಿನಲ್ಲಿ ಮೆಡಿಕಲ್ ಎಕ್ಸಾಮಿನೇಷನ್ ಆದಾಗಲೇ, ಕಾರ್ಪೋರೇಷನ್ ಬ್ಯಾಂಕಿನಿಂದ ಕೆಲಸಕ್ಕೆ ಆರ್ಡರ್ ಬಂದು, ಆಗಲೇ ಕರ್ನಾಟಕ ಸರಕಾರದ ನೌಕರಿಯ ಆರ್ಡರ್ ಬಂದದ್ದು, ಕೇಳಿದ ಅವರು ಮೊದಲ ಬಾರಿಗೆ ಮನೆಯ ಅಂಗಳದ ಕಲ್ಲು ಹಾಸಿನ ಮೇಲೆ ಜೊತೆಗೆ ಕುಳ್ಳಿರಿಸಿಕೊಂಡು ಬಹಳ ಆಪ್ಯಾಯತೆಯಿಂದ ಮಾತನಾಡಿಸಿದ್ದು ಮರೆಯಲಾರದ ಘಟನೆ.   ಅವರಾಡಿದ ಮಾತುಗಳು ಈಗಲೂ ಕಿವಿಯಲ್ಲಿ ಗುಂಯ್‍ಗುಡುತ್ತಿವೆ.

 

ಇಷ್ಟು ದಿನಗಳು ನಿಮ್ಮೆಲ್ಲರನ್ನೂ ಬಹಳ ಸ್ಟ್ರಿಕ್ಟ್ ಆಗಿ ನೋಡಿದ್ದು ನಿನಗೆ ವ್ಯಥೆ ತಂದಿದೆಯೇನಯ್ಯಾ.  ಐ ಯಾಮ್ ಪ್ರೌಡ್ ಆಫ್ ಯು ಮೈ ಬಾಯ್.  ಕೇಳು ಇವತ್ತು ಹೇಳ್ತಿದ್ದೀನಿ, ನೀವೆಲ್ಲರೂ ನಿಮ್ಮ ನಿಮ್ಮ ಕಾಲ ಮೇಲೆ ನಿಲ್ಲಲಿ, ಜೀವನದ ಅರಿವಾಗಿ, ಇತರರಿಗೆ ಭಾರವಾಗದೇ ಇತರರ ಭಾರವನ್ನು ಹೊರುವಂತಹ ಶಕ್ತಿಯನ್ನೂ ಬುದ್ಧಿಯನ್ನೂ ಹೊಂದಲಿ ಅಂತ ಅಷ್ಟೇ ನಾನು ನಿಮ್ಮಗಳನ್ನು ಸ್ವಲ್ಪ ನಿಕೃಷ್ಟವಾಗಿ ನೋಡುತ್ತಿದ್ದೆ.  ನಿನಗೆ ಗೊತ್ತೇನಯ್ಯಾ, ನಾನೂ ವಾರಾನ್ನ ಮಾಡಿಯೇ ಬೆಳೆದವನು.  ಎಲ್ಲೋ ಮೂಲೆಯಲ್ಲಿ ಬೆಳೆದವನು ವಿಲಾಯತಿಗೆ ಹೋಗಿ ಬರುವುದು ಎಂದರೇನು ಸುಲಭದ ವಿಷಯವೇ.  ನನ್ನ ಹಾಗೆಯೇ ಜೀವನವನ್ನು ನೀನೂ ಅರಿಯುತ್ತಿರುವೆ.  ನಿನಗೆ ಒಳ್ಳೆಯದಾಗಲಿ.  ಇನ್ಮೇಲೆ ನೀನು ನನ್ನ ಸ್ನೇಹಿತನಿದ್ದ ಹಾಗೆ.  ಆಗಾಗ ಬರ್ತಿರಯ್ಯ‘.

 

ಏನೇ ಆಗಲಿ ಆ ತಾತನನ್ನು ಮರೆಯಲಾದೀತೇ?  ಇಂದು ಈ ಮಟ್ಟಕ್ಕೆ ಬರಲು ಮನದಲ್ಲಿ ಛಲ ಬಂದಿದ್ದರೆ ಅದು ಅಂದು ಅವರು ಹೇಳಿದ ಮಾತುಗಳೇ ಕಾರಣ.  ಅವರ ಆ ಮಾತುಗಳು ಆಪ್ಯಾಯತೆ ನನ್ನಲ್ಲಿ ಮಾನವೀಯತೆಯನ್ನು ಮೂಡಿಸಿತು.  ನನ್ನ ದುರಾದೃಷ್ಟ, ನಾನು ಅವರೊಂದಿಗೆ ಹೆಚ್ಚಿನ ಕಾಲ ಕಳೆಯಲಾಗಲಿಲ್ಲ.  ಅವರು ಸಾಯುವ ಮೊದಲು ಸ್ವಲ್ಪ ಕಾಲ ಆಸ್ಪತ್ರೆಯಲ್ಲಿ ಇದ್ದರು.  ಆಗ ಕೆಲವು ದಿನಗಳ ಕಾಲ ಅವರೊಂದಿಗಿರುವ ಅವಕಾಶ ಸಿಕ್ಕಿತ್ತು.  ಆಗಲೂ ಅವರು ಹೆಚ್ಚು ಮಾತನಾಡಲಿಲ್ಲ.  ಅವರ ಕರಾರುವಾಕ್ಕಾದ ಜೀವನಕ್ರಮ, ಮಿತ ಆಹಾರ ಸೇವನೆಗಳು ನನಗೆ ಪಾಠ ಕಲಿಸಿದವು.

 

೧೯೮೪ ರ ಅಕ್ಟೋಬರ್ ೩೧ನೇ ತಾರ್‍ಈಖು, ಸಿ.ಎ.ಐ.ಐ.ಬಿ ಪರೀಕ್ಷೆಯಿದ್ದಿತು.  ಮನೆಯ ಎದುರೇ ಇದ್ದ ನಾಷ್ಯನಲ್ ಕಾಲೇಜಿಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಿತ್ತು.  ನಾಲ್ಕೈದು ದಿನಗಳ ಹಿಂದೆಯಷ್ಟೇ ಹಲ್ಲಿಗೆ ಸಿಲ್ವರ್ ತುಂಬಿಸಿದ್ದ ಸಮಯ.  ಆಗ ನನಗೆ ಸ್ವಲ್ಪ ಜ್ವರವಿದ್ದಿತ್ತು.  ಅಂದು ಪರೀಕ್ಷೆ ಇದ್ದುದರಿಂದ ಹೋಗಲೇ ಬೇಕಿತ್ತು.  ಏನನ್ನೂ ತಿನ್ನಲು ಮನಸ್ಸಿರಲಿಲ್ಲ.  ಅಷ್ಟು ಹೊತ್ತಿಗೆ ಸ್ನೇಹಿತ ರಾಘವೇಂದ್ರ (ಕಾಲೇಜಿನಿಂದ ಸ್ನೇಹಿತನಾಗಿದ್ದು ಒಟ್ಟಿಗೇ ಬ್ಯಾಂಕು ಸೇರಿದವನು), ಅವರ ತಾಯಿ ಕಳುಹಿಸಿದರೆಂದು ರವೆ ಗಂಜಿಯನ್ನು ತಂದಿದ್ದ.  ಬೇರೆಯ ದಿನಗಳಲ್ಲಿ ಗಂಜಿಯನ್ನು ನೋಡಲೂ ಅಸಹ್ಯ ಪಡುತ್ತಿದ್ದವನು ಅಂದು ಚಪ್ಪರಿಸಿಕೊಂಡು ತಿಂದಿದ್ದೆ.  ಅವನೊಡನೆ ನಾನು ಪರೀಕ್ಷೆಗೆ ಹೊರಟೆ.  ಸರಿಯಾಗಿ ಓದಿರಲಿಲ್ಲ.  ಏನು ಬರೆಯುವುದು ಎಂದು ಯೋಚಿಸುತ್ತಿರುವಷ್ಟರಲ್ಲೇ ಅಂದಿನ ಪರೀಕ್ಷೆ ಮುಂದೆ ಹೋಗಿದೆಯೆಂದೂ ತಿಳಿದಿತ್ತು.  ಅಬ್ಬಾ! ಕೊನೆಗೂ ಓದಲು ಸಮಯ ಸಿಕ್ಕಿತು ಎಂದು ಸಂತಸ ಪಟ್ಟಿದ್ದೆ.  ಏಕೆ ಪರೀಕ್ಷೆ ಮುಂದೆ ಹೋಗಿದೆ ಎಂದು ತಿಳಿಯಲೂ ವ್ಯವಧಾನವಿರಲಿಲ್ಲ.

ಎಂತಹ ವಿಪರ್ಯಾಸ ನಾಯಕಿಯನ್ನು ಕಳೆದುಕೊಂಡು ಇಡೀ ದೇಶವೇ ಶೋಕದಲ್ಲಿ ಮುಳುಗಿದ್ದಾಗ ನಾನು ಪರೀಕ್ಷೆ ಮುಂದಕ್ಕೆ ಹೋಗಿರುವುದರ ಬಗ್ಗೆ ಸಂತೋಷ ಪಡ್ತಿದ್ದೆ.  ಮರುದಿನ ದಿನ ಪತ್ರಿಕೆಯನ್ನು ನೋಡಿದ ಮೇಲೆಯೇ ಇಂದಿರಾ ಗಾಂಧಿಯವರ ಕೊಲೆಯ ಬಗ್ಗೆ ತಿಳಿದದ್ದು.

 

**************

 

೧೯೮೪ರ ಡಿಸೆಂಬರ್ ವೇಳೆಗೆ ನನಗೆ ಎಲ್.ಎಫ್.ಸಿ. (ಲೀವ್ ಫೇರ್ ಕನ್ಸೆಷನ್) ತೆಗೆದುಕೊಳ್ಳುವ ಅವಕಾಶ ಸಿಕ್ಕಿತ್ತು.  ಅಂದರೆ ಎಲ್.ಎಫ್.ಸಿ ಯಲ್ಲಿ ಬ್ಯಾಂಕಿನ ಹಣದಲ್ಲಿ ರಜೆಯ ಮೇಲೆ ಬೇರೆ ಊರಿಗೆ ರೈಲಿನಲ್ಲಿ ಹವಾನಿಯಂತ್ರಿತ ಅಥವಾ ಮೊದಲ ದರ್ಜೆಯಲ್ಲಿ ಬೇರೆ ಊರಿಗೆ ಹೋಗಿ ಬರಬಹುದು.  ಮೊದಲ ಅವಕಾಶ ಸಿಕ್ಕಿದಾಗ ದೂರದೂರಿಗೆ ಹೋಗುವುದೆಂದರೆ, ನನಗೆ ಮೊದಲು ತೋಚಿದ್ದು ಮುಂಬೈಗೆ ಹೋಗೋಣ ಅಂತ.  ಏಕೆಂದರೆ ಅಲ್ಲಿ ಆಗ ನನ್ನಣ್ಣ ಕೆಲಸ ಮಾಡುತ್ತಿದ್ದ.  ಅಲ್ಲಿಯವರೆವಿಗೆ ನಾನು ಕರ್ನಾಟಕ ಬಿಟ್ಟು ಆಚೆ ಹೋಗಿದ್ದವನಲ್ಲ. 

 

ಮುಂಬೈಗೆ ಹೋಗಲು ಹವಾನಿಯಂತ್ರಿತ ತರಗತಿಯಲ್ಲಿ ಮುಂಗಡ ಟಿಕೆಟ್ ಮಾಡಿಸಿದೆ.   ಅಣ್ಣನಿಗಾಗಿ ಬೆಂಗಳೂರಿನಲ್ಲಿ ಸಿಗುವ ವಿಶೇಷ ತಿನಿಸುಗಳನ್ನು ಕೊಂಡಿದ್ದೆ.  ಆಗಿನ್ನೂ ಹೊಸದಾಗಿ ಉದ್ಯಾನ್ ಎಕ್ಸ್ಪ್ರೆಸ್ ದಿನವಹೀ ಬೆಂಗಳೂರಿನಿಂದ ರಾತ್ರಿ ೮ಕ್ಕೆ ಹೊರಟು ಮರುದಿನ ರಾತ್ರಿ ೮ಕ್ಕೆ ಮುಂಬೈ ತಲುಪುತ್ತಿತ್ತು.    ಅದೇ ಮೊದಲ ಬಾರಿಗೆ ಹವಾನಿಯಂತ್ರಿತ ಬೋಗಿಯೊಳಗೆ ಕಾಲಿಡುತ್ತಿದ್ದೆ.  ಅಲ್ಲಿ ಬರುವವರೆಲ್ಲರೂ ಆಗರ್ಭ ಶ್ರೀಮಂತರಿರಬೇಕೆಂದು ಎಣಿಸಿದ್ದೆ.  ಅವರೊಂದಿಗೆ ನಗೆಪಾಟಲಾಗಬಾರದೆಂದು ಪ್ರಯಾಣಕ್ಕಾಗಿಯೆ ಹೊಸ ಬಟ್ಟೆಯನ್ನು ಧರಿಸಿದ್ದೆ.   ನನ್ನಲ್ಲೂ ಅಂತಸ್ತಿದೆ ಎಂದು ತೋರ್ಪಡಿಸಿಕೊಳ್ಳುವ ಸಲುವಾಗಿ ಒಂದು ಒಳ್ಳೆಯ ಲೇಖನಿ ಮತ್ತು ಡೈರಿಯನ್ನು ಕೈನಲ್ಲಿ ಹಿಡಿದಿದ್ದೆ.  ಟ್ರೈನ್ ಬೆಂಗಳೂರು ಬಿಡುತ್ತಿದ್ದಂತೆಯೇ ಒಂದೇ ಸಮನೆ ಡೈರಿಯಲ್ಲಿ ಬರೆಯುತ್ತಿದ್ದೆ.  ಮಧ್ಯೆ ಮಧ್ಯೆ ಆಚೀಚೆ ನೋಡುತ್ತಿದ್ದೆ.  ನಂತರ ತಿಳಿದು ಬಂದ ವಿಷಯವೆಂದರೆ ಹೆಚ್ಚಿನ ಜನ ನನ್ನಂತೆಯೇ ಎಲ್.ಎಫ್.ಸಿ, ಎಲ್.ಟಿ.ಸಿ ತೆಗೆದುಕೊಂಡು ಬರ್ತಿದ್ದಾರೆ ಅಂತ.  ನಾನು ಡೈರಿಯಲ್ಲಿ ಬರೆಯುತ್ತಿದ್ದುದು ಏನೆಂದರೆ ಟ್ರೈನಿನಲ್ಲಿ ಹೋಗುವಾಗ ಬರುತ್ತಿದ್ದ ಸ್ಟೇಷನ್ನುಗಳ ಹೆಸರುಗಳನ್ನು.   ಟ್ರೈನ್ ನಿಲ್ಲುತ್ತಿದ್ದ ಪ್ರತಿಯೊಂದು ಸ್ಟೇಷನ್ನಿನಲ್ಲೂ ನಾನಿಳಿದು ಅಕ್ಕ ಪಕ್ಕದ ಬೋಗಿಗಳ ಕಡೆ ಹೋಗಿ ಬರ್ತಿದ್ದೆ.  ಮಾರನೆಯ ದಿನ ರಾತ್ರಿ ೭ಕ್ಕೆ ಸರಿಯಾಗಿ ಕಲ್ಯಾಣ ಸ್ಟೇಷನ್ ತಲುಪಿದ್ದೆ.  ಬಾಗಿಲಿನಿಂದ ಇಳಿಯುತ್ತಿರುವಂತೆಯೇ ನನ್ನಣ್ಣ ಎದುರಾಗಿದ್ದ. 

 

ಅಣ್ಣನೊಂದಿಗೆ ಅವನ ಕೊಠಡಿಗೆ ಹೋದಾಗ ಇಲ್ಲಿಯ ವಸತಿಯ ತೊಂದರೆ ಎಷ್ಟಿದೆ ಮತ್ತು ಬದುಕು ಎಷ್ಟು ದುಸ್ಸರವಾಗಿದೆ ಎಂದು ತಿಳಿಯಿತು.  ನನ್ನಣ್ಣ ಇದ್ದದ್ದು ಮುಂಬೈನ ಕೇಂದ್ರ ಪ್ರದೇಶದಿಂದ ೬೦ ಕೊಲೋಮೀಟರ್ ದೂರದ ಉಲ್ಹಾಸ ನಗರದಲ್ಲಿ.  ಅದೊಂದು ಚಾಲ್ ಅಂದರೆ ವಠಾರ.  ಒಂದು ಮನೆಯನ್ನು ಇನ್ನೊಂದು ಮನೆಯೊಂದಿಗೆ ಬೇರ್ಪಡಿಸಲು ಒಂದೇ ಗೋಡೆ.  ಆ ಮನೆಗಳಲ್ಲಿ ಮುಂಭಾಗದಲ್ಲಿ ಸಣ್ಣ ಕೊಠಡಿ – ಅಲ್ಲೇ ಒಂದು ಮೂಲೆಯಲ್ಲಿ ಅಡುಗೆ ಮಾಡುವ ಜಾಗ, ಕೊನೆಯಲ್ಲಿ ಒಂದು ಬಚ್ಚಲು.   ಶೌಚಕ್ರಿಯೆಗೆ ಹಿಂದುಗಡೆ ಇರುವ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸಬೇಕು.  ಬೆಳಗ್ಗೆ ಆರು ಘಂಟೆಗೆ ಅಲ್ಲಿ ದೊಡ್ಡ ಕ್ಯೂ ಇರುತ್ತದೆ.  ಅದಕ್ಕಾಗಿ ನನ್ನಣ್ಣ ಪ್ರತಿದಿನವೂ ೫ ಘಂಟೆಗೇ ಎದ್ದು ಶೌಚಕಾರ್ಯ ಮುಗಿಸಿ ಬರುತ್ತಿದ್ದ.   ಮರುದಿನದಿಂದ ಮುಂಬೈ ಸುತ್ತುವುದರ ಬಗ್ಗೆ, ಎಲ್ಲೆಲ್ಲಿ ಏನೇನು ನೋಡುವುದಿದೆ, ಹೇಗೆ ಹೋಗಬೇಕು, ಲೋಕಲ್ ಟ್ರೈನಿನಲ್ಲಿ ಹೇಗೆ ಹತ್ತಬೇಕು, ಜೇಬುಗಳ್ಳರಿಂದ ಹೇಗೆ ಹುಷಾರಾಗಿರಬೇಕು ಎಂದೆಲ್ಲಾ ಹೇಳಿದ್ದ.  ಮುಂಬೈನಲ್ಲಿ ದೊಡ್ಡ ಬಂಗಲೆಗಳು, ಐಷಾರಾಮೀ ಜೀವನ, ಕಾರುಗಳಲ್ಲಿ ಓಡಾಟ ಇತ್ಯಾದಿ ಬಗ್ಗೆ ಏನೇನೋ ಕನಸು ಕಂಡಿದ್ದೆ.  ಎಲ್ಲವೂ ಒಂದೇ ದಿನದಲ್ಲಿ ಠುಸ್ ಎಂದು ಹೋಯಿತು.  ೧೫ ದಿನಗಳು ಇರುವುದೆಂದು ಲೆಕ್ಕ ಹಾಕಿ ಬಂದಿದ್ದ ನಾನು ಮರುದಿನವೇ ಲೋಕಲ್ ಟ್ರೈನಿನಲ್ಲಿ ಓಡಾಡಲು ಪಾಸನ್ನು ಮಾಡಿಸಿದ್ದೆ.   

 

ಶಾಲೆಯಲ್ಲಿದ್ದಾಗ ಹಿಂದಿ ಪರೀಕ್ಷೆಯನ್ನು ಪಾಸು ಮಾಡಿದ್ದ ನಾನು, ಹಿಂದಿ ಚೆನ್ನಾಗಿ ಅರ್ಥ ಆಗುತ್ತದೆ, ಮಾತನಾಡಲೂ ಬರುತ್ತದೆ ಎಂದೆಣಿಸಿದ್ದೆ.  ಆದರಿಲ್ಲಿ ಮಾತನಾಡುವ ಹಿಂದಿಯೇ ಬೇರೆ.  ನನಗೆ ಎಷ್ಟೋ ಪದಗಳು ಅರ್ಥವೇ ಆಗ್ತಿರ್ಲಿಲ್ಲ. ಮರಾಠಿ ಹಿಂದಿ ಮಿಶ್ರಣವಾಗಿ ಸ್ವಲ್ಪ ಒಡ್ಡು ಒಡ್ಡಾಗಿ ಮಾತನಾಡುವ ಭಾಷೆ ಇಲ್ಲಿಯದ್ದಾಗಿದೆ.  ಪ್ರತಿದಿನ ಬೆಳಗ್ಗೆ ೮ ಘಂಟೆಗೆ ಉಲ್ಹಾಸನಗರ ಸ್ಟೇಷನ್ನಿನ ಮೊದಲನೆಯ ಪ್ಲಾಟ್‍ಫಾರಂನಲ್ಲಿ ಬರುವ ಅಂಬರನಾಥದ ಗಾಡಿಯನ್ನು ಹಿಡಿಯುತ್ತಿದ್ದೆವು.  ಅದರಲ್ಲಿ ಒಳಗೆ ನುಸುಳಲು ಸ್ವಲ್ಪ ಅವಕಾಶ ಸಿಗುತ್ತಿತ್ತು.  ಬದಲಾಪುರ ಅಥವಾ ಕರ್ಜತ್ ಗಾಡಿಗಳಲ್ಲಿ ಒಳಗೆ ಹೋಗಲಾಗುತ್ತಿರಲಿಲ್ಲ.  ಪ್ರತಿ ದಿನವೂ ಹೀಗೆಯೇ ಲೋಕಲ್ ಟ್ರೈನಿನಲ್ಲಿ ಹತ್ತಿ ಇಳಿದು ಮುಂಬೈ ದರ್ಶನವನ್ನು ಮಾಡಿದ್ದಾಗಿತ್ತು.  ವಾಪಸ್ಸು ಬರುವಾಗ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಬಂದು ಅಲ್ಲಿಂದ ನನ್ನೂರಾದ ತಳುಕಿಗೆ ಹೋಗಿದ್ದೆ.  ಅಲ್ಲೊಂದೆರಡು ದಿನಗಳಿದ್ದೆ.  ಇನ್ನೂ ೧೦ ದಿನಗಳ ರಜೆ ಇದ್ದುದರಿಂದ ಏನು ಮಾಡಲಿ, ಎಲ್ಲಿಗೆ ಹೋಗಲಿ ಅಂತ ಯೋಚಿಸ್ತಿದ್ದಾಗ, ನನ್ನ ತಂದೆ ತಿರುಪತಿಗೆ ಹೋಗಿ ಬಾ, ಎಂದಿದ್ದರು.  ಅದೇ ಮೊದಲ ಬಾರಿಗೆ ತಿರುಪತಿಗೆ ನಾನು ಹೋಗುತ್ತಿದ್ದುದು.  ನನ್ನೂರಿನಿಂದ ೧೫ ಕಿಲೋಮೀಟರ್ ದೂರದ ಚಳ್ಳಕೆರೆಯಿಂದ ಬೆಳಗ್ಗೆ ೭ ಘಂಟೆಗೆ ತಿರುಪತಿಗೆ ಹೋಗಲು ನೇರ ಬಸ್ಸು ಇದ್ದಿತ್ತು.  ಅದರಲ್ಲಿ ಹೊರಟು ಸಂಜೆ ೭ಕ್ಕೆ ತಿರುಪತಿಗೆ ಹೋಗಿ ಸೇರಿದ್ದೆ.  ಅದೇ ಮೊದಲ ಬಾರಿಗೆ ಹೋಗುತ್ತಿದ್ದುದರಿಂದ ಎಲ್ಲಿ ಹೋಗುವುದು, ಏನು ಮಾಡುವುದು ಎಂದು ಏನೂ ತಿಳಿದಿರಲಿಲ್ಲ.  ನೇರವಾಗಿ ಹತ್ತಿರದ ಪೋಲಿಸ್ ಸ್ಟೇಷನ್ನಿಗೆ ಹೋದೆ.  ತಿರುಮಲ ಬೇರೆ ತಿರುಪತಿ ಬೇರೆ ಎಂಬುದು ತಿಳಿದದ್ದೇ ಆಗ.  ಅಲ್ಲಿಯವರೆವಿಗೆ ಇವೆರಡರ ವ್ಯತ್ಯಾಸ ತಿಳಿದೇ ಇರಲಿಲ್ಲ.  ಅಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ತಕ್ಷಣವೇ ಬಸ್ಸನ್ನೇರಿ ತಿರುಮಲಕ್ಕೆ ಹೋಗಿದ್ದೆ.  ಅಲ್ಲಿ ರಾತ್ರಿ ಕಳೆಯಲು ರೂಮು ಮಾಡಲು ಹೋದಾಗ ರೂ ೧೦ ಕ್ಕೆ ಕಾಟೇಜ್ ಸಿಗುವುದೆಂದು ತಿಳಿಯಿತು.  ಹತ್ತಿರದಲ್ಲೇ ಇದ್ದ ಹೊಟೇಲ್ ಒಂದರಲ್ಲಿ ರಾತ್ರಿಯೂಟ ಮಾಡಿ ಕಾಟೇಜಿನಲ್ಲಿ ಮಲಗಿದೆ.  ಬೆಳಗ್ಗೆ ಬೇಗನೆ ದೇವರ ದರ್ಶನ ಮಾಡಬೇಕೆಂಬ ಕಾತರದಲ್ಲಿ ರಾತ್ರಿ ನಿದ್ರೆಯೇ ಬಂದಿರಲಿಲ್ಲ.  ನನಗೆ ಗಡಿಯಾರ ಕಟ್ಟುವ ಅಭ್ಯಾಸವಿಲ್ಲವಾಗಿ ಸಮಯ ಎಷ್ಟಾಗಿದೆ ಎಂದು ತಿಳಿಯುತ್ತಿರಲಿಲ್ಲ.  ಸಾಮಾನ್ಯವಾಗಿ ಹೋದಲ್ಲೆಲ್ಲಾ ಗಡಿಯಾರು ಇರುತ್ತಿತ್ತು.  ಮಲಗಿದ್ದವನಿಗೆ, ಹೊರಗಡೆ ಬೆಳಕು ಹರಿದಂತೆ ಅನ್ನಿಸಿತು.  ತಕ್ಷಣ ಎದ್ದು ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋಗೋಣ ಎಂದು ಸ್ನಾನದ ಮನೆಗೆ ಹೊರಟೆ.  ನಲ್ಲಿ ತಿರುಗಿಸಿ ಕೆಳಗೆ ಕುಳಿತೆ.  ಒಂದು ಕ್ಷಣ ಎಲ್ಲಿದ್ದೇನೆ ಎಂಬುದೇ ನೆನಪಿರಲಿಲ್ಲ.  ಮೈಯೆಲ್ಲಾ ಮರತಟ್ಟಿ ಹೋಗಿತ್ತು.  ಮಾಘ ಮಾಸದ ಛಳಿಗಾಲ.  ಬೆಳಗ್ಗೆ ೩ ಘಂಟೆ ಸಮಯದಲ್ಲಿ ನೀರು ಎಷ್ಟು ತಣ್ಣಗಿದ್ದೀತು – ನೀವೇ ಊಹಿಸಿ.  ನೀರು  ಮಂಜಿನ ಗಡ್ಡೆಯಾಗಿರಲಿಲ್ಲ ಅಷ್ಟೆ.  ಜನಸಂದಣಿ ಇಲ್ಲದ ಕಾರಣ ಮತ್ತು ಬೆಳಗಿನ ನಾಲ್ಕು ಘಂಟೆಯಾದ ಕಾರಣ ದೇವರ ದರ್ಶನ ಬಹಳ ಸುಲಭವಾಗಿ ಆಗಿತ್ತು.  ಪ್ರಸಾದ ವಿತರಣೆ ಇನ್ನೂ ಆರಂಭಿಸಿರಲಿಲ್ಲ.  ಹಾಗಾಗಿ ದೇಗುಲದ ಒಳಗೆಲ್ಲಾ ಸುತ್ತಾಡಿ ಬಂದೆ.  ಪ್ರಸಾದ ಕೊಡುವಾಗ ಹೆಚ್ಚಿಗೆ ಖಾರದ ಪೊಂಗಲ್ ಸಿಹಿ ಪೊಂಗಲ್ ಬೇಕೆಂದು ಎರಡು ರೂಪಾಯಿಗಳನ್ನು ಕೌಂಟರಿನಲ್ಲಿ ಕೊಡಲು, ದೊಡ್ಡ ದೊಡ್ಡ ಎಲೆಯಲ್ಲಿ ತುಂಬಿ ಕೊಟ್ಟರು.  ಅಷ್ಟೊಂದು ಹೇಗೆ ತಿನ್ನಲಿ.  ಅಂದಿನ ರಾತ್ರಿಯವರೆವಿಗೂ ಅದನ್ನೇ ತಿಂದಿದ್ದೆ.  ರಾತ್ರಿಯ ೯ ಘಂಟೆ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟೆ. 

 

ಬೆಳಗಿನ ಜಾವ ೫ಕ್ಕೆ ಬೆಂಗಳೂರು ತಲುಪಿದ್ದೆ.  ಎಲ್.ಎಫ್.ಸಿಗಾಗಿ ತೆಗೆದುಕೊಂಡಿದ್ದ ಇನ್ನೂ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಿತ್ತು.  ಅದನ್ನು ಖರ್ಚು ಮಾಡಲೆಂದೇ ಬಸ್ ಸ್ಟ್ಯಾಂಡಿನಿಂದ ನೇರವಾಗಿ ರೈಲ್ವೇ ನಿಲ್ದಾಣಕ್ಕೆ ಹೋಗಿ, ಫಸ್ಟ್ ಕ್ಲಾಸಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದೆ.  ಅಲ್ಲಿಯೂ ನಾನು ಕಂಪಾರ್ಟ್‍ಮೆಂಟಿನಲ್ಲಿ ಕುಳಿತುಕೊಳ್ಳದೇ ಬಾಗಿಲಿನಲ್ಲೇ ನಿಂತಿದ್ದೆ.  ಅದರಲ್ಲಿದ್ದ ಅಟೆಂಡೆಂಟ್‍ಗಳಿಗೆ ನನ್ನ ವರ್ತನೆ ನೋಡಿ ಆಶ್ಚರ್ಯವೆನಿಸಿತ್ತು.  ಯಾರೂ ಏನೂ ಕೇಳಲಿಲ್ಲ, ಮತ್ತು ನಾನೂ ಏನೂ ಹೇಳಲಿಲ್ಲ.  ಮೈಸೂರಿನ ರೈಲ್ವೇ ಸ್ಟೇಷನ್ ತಲುಪುತ್ತಲೇ ರಿಟರ್ನ್ ಟಿಕೆಟ್ ತೆಗೆದುಕೊಂಡು, ಚಾಮುಂಡಿ ಬೆಟ್ಟಕ್ಕೆ ಹೋಗಿಬಂದು ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದೆ.  ಎರಡು ದಿನಗಳಿಂದ ಸ್ನಾನವಿಲ್ಲದೇ ಅದು ಹೇಗೆ ಇದ್ದೆನೋ ಈಗಲೂ ನೆನೆಸಿಕೊಳ್ಳಲಾಗುವುದಿಲ್ಲ. 

‍ತಳುಕು ಶ್ರೀನಿವಾಸ ಮೂಲಕ

ನಾನೊಬ್ಬ ಸಾಹಿತ್ಯಾಭಿಲಾಷಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s