ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 4

೧೯೮೫ರಲ್ಲಿ ಕ್ಯಾಷ್ ಡಿಪಾರ್ಟ್‍ಮೆಂಟಿನಿಂದ ಜನರಲ್ ಸೈಡ್‍ಗೆ ಪೋಸ್ಟ್ ಮಾಡಿದ್ದರು.  ಅಲ್ಲಿ ಪಬ್ಲಿಕ್ ಡೆಟ್ ಆಫೀಸ್ ಎನ್ನುವಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ.  ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಲವನ್ನು ತೆಗೆದುಕೊಳ್ಳಲು ಮತ್ತು ಅದರ ಲೆಕ್ಕಾಚಾರದ ಬಗ್ಗೆ ಕೆಲಸ ಮಾಡುವ ವಿಭಾಗ ಇದು.  ನನಗೇನೂ ಅಂತಹ ಘನಂದಾರಿ ಕೆಲಸ ಕೊಟ್ಟಿರಲಿಲ್ಲ.  ನಾನು ಮಾಡುತ್ತಿದ್ದುದು ಕ್ಲರಿಕಲ್ ಕೆಲಸ.  ಮೊದಲಿಗೆ ವಿಭಾಗದ ಬಗ್ಗೆ ತಿಳಿದುಕೊಳ್ಳಲು ತರಬೇತಿ ಕೊಡುವರು.  ಇದಕ್ಕಾಗಿ ಚೆನ್ನೈಗೆ ಕಳುಹಿಸಿದ್ದರು.  ಅದೇ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದು.  ಸ್ವಲ್ಪ ಕಾಲದ ಮೊದಲು ಹೋಗಿದ್ದ ಮುಂಬೈನಲ್ಲಿ ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಹಿಂದಿಯಲ್ಲಿ ಹೇಗೋ ನನ್ನ ಬೇಳೆ ಬೇಯಿಸಿಕೊಂಡಿದ್ದೆ.  ಆದರೆ ಈ ಚೆನ್ನೈನಲ್ಲಿ ಹಿಂದಿ ನಡೆಯುವುದಿಲ್ಲ ಎಂದು ತಿಳಿದಿತ್ತು.  ಇಲ್ಲಿ ಹಿಂದಿ ಮಾತನಾಡಿದರೆ ಏಟು ಬೀಳುವುದು ಗ್ಯಾರಂಟಿ.  ಕನ್ನಡದವರಿಗೆ ತಮಿಳು ಕಲಿಯುವುದು ಸುಲಭ. 

 

ಈ ಟ್ರೈನಿಂಗ್ ೨ ವಾರಗಳದ್ದಾಗಿದ್ದಿತು.  ಬೆಂಗಳೂರಿನಿಂದ ಮೊದಲ ಬಾರಿಗೆ ರಾತ್ರಿಯ ಟ್ರೈನಿನ ಹವಾನಿಯಂತ್ರಿತ ಬೋಗಿಯಲ್ಲಿ ೪ ಸಹಕರ್ಮಚಾರಿಗಳೊಂದಿಗೆ ಚೆನ್ನೈಗೆ ಹೊರಟೆ.  ಭಾನುವಾರ ಮಧ್ಯಾನ್ಹದ ಟ್ರೈನ್ ರಾತ್ರಿ ೯ಕ್ಕೆ ಚೆನ್ನೈ ತಲುಪಿತ್ತು.  ಆಗ ಅಲ್ಲಿಯ ನಗರ ಬಸ್ ಸಂಚಾರ ವ್ಯವಸ್ಥೆ ಬಹಳ ಚೆನ್ನಾಗಿತ್ತು.  ಪೂನಮಲೈ ಹೈ ರಸ್ತೆಯಲ್ಲಿರುವ ನಮ್ಮ ಕ್ವಾರ್ಟರ್ಸಿನಲ್ಲಿ ನಮಗೆ ಇರಲು ಅವಕಾಶ ಮಾಡಿಕೊಟ್ಟಿದ್ದರು.  ಬೆಳಗ್ಗಿನ ತಿಂಡಿಗೆ ಬ್ಯಾಂಕಿನ ಕ್ಯಾಂಟೀನಿಗೆ ಹೋಗುತ್ತಿದ್ದೆವು.  ಅಲ್ಲಿಯೋ ಪ್ರತಿದಿನವೂ ಪೊಂಗಲ್ (ಹುಗ್ಗಿ) ಮಾಡುತ್ತಿದ್ದರು.  ಬೆಂಗಳೂರಿನ ಬ್ಯಾಂಕಿನ ಕ್ಯಾಂಟೀನಿನಂತೆ ದೋಸೆ, ಇಡ್ಲಿ, ವಡೆ ಇತ್ಯಾದಿಗಳನ್ನು ಮಾಡ್ತಿರಲಿಲ್ಲ.  ಮಧ್ಯಾಹ್ನದ ಊಟವೋ ದೇವರಿಗೇ ಪ್ರೀತಿ.  ಮಾಂಸಾಹಾರ ಮತ್ತು ಸಸ್ಯಾಹಾರ ಎರಡನ್ನೂ ಒಟ್ಟಿಗೇ ಕೊಡುತ್ತಿದ್ದದ್ದನ್ನು ಅಲ್ಲಿಯೇ ಮೊದಲ ಬಾರಿಗೆ ನಾನು ನೋಡಿದ್ದು.  ಸಂಜೆ ೫ ಘಂಟೆಗೆ ಬ್ಯಾಂಕಿನಿಂದ ಆಚೆ ಬಂದ ಕೂಡಲೇ ನಾನು ಊರು ಸುತ್ತಲು ಹೋಗುತ್ತಿದ್ದೆ.  ಇನ್ನುಳಿದ ಸ್ನೇಹಿತರುಗಳಿಗೆ ಅವರುಗಳದ್ದೇ ಆದ ಲೋಕಗಳಿದ್ದವು.  ನಾನೊಬ್ಬನೇ ಅವರೆಲ್ಲರಿಗಿಂತ ವಿಭಿನ್ನ.  ಅವರೆಲ್ಲರೂ ಜೀವನವನ್ನು ಸವಿಯಲೇ ಹುಟ್ಟಿದವರಂತಿದ್ದರು. 

 

ದಿನವೂ ಸಂಜೆ ಯಾವುದಾದರೊಂದು ಬಸ್ಸನ್ನು ಹತ್ತಿ ಕೊನೆಯ ನಿಲ್ದಾಣಕ್ಕೆ ಹೋಗಿ, ಅಲ್ಲಿ ಇಲ್ಲಿ ಸುತ್ತಾಡಿ ಮತ್ತೆ ಬಸ್ ಹತ್ತಿ ಪ್ಯಾರಿಸ್ ಕಾರ್ನರ್ ಗೆ ಬರ್ತಿದ್ದೆ.  ಅಲ್ಲಿರುವ ಹರಿನಿವಾಸ ಎಂಬ ಹೊಟೆಲ್‍ನಲ್ಲಿ ಪ್ರತಿ ರಾತ್ರಿ ಊಟ.   ಅಲ್ಲಿ ದೊಡ್ಡದಾದ ಬಾಳೆ ಎಲೆ ಹಾಕಿ, ಮೊರದಲ್ಲಿ ಅನ್ನವನ್ನು ತಳ್ಳುತ್ತಿದ್ದರು.  ಅದನ್ನು ನೋಡುವುದೇ ಚಂದ.  ಅಷ್ಟನ್ನೂ ಅದು ಹೇಗೆ ತಿನ್ನುತ್ತಿದ್ದೆನೋ ಏನೋ.  ಹೊಟ್ಟೆಯೊಳಗೆ ಬೆಂಕಿ ಇದ್ದಿತ್ತು ಅನ್ಸತ್ತೆ, ಎಷ್ಟೇ ತಿಂದರೂ ಜೀರ್ಣವಾಗುತ್ತಿತ್ತು.  ಈ ಹದಿನಾಲ್ಕು ದಿನಗಳಲ್ಲಿ ಚೆನ್ನೈನ ಪ್ರತಿ ಜಾಗವನ್ನೂ ನೋಡಿದ್ದೆ.  ಹಾಗೂ ತಮಿಳನ್ನು ಮಾತನಾಡಲೂ ಕಲಿತಿದ್ದೆ. 

 

ನನ್ನ ಕಣ್ಣಿಗೆ ಕಂಡ ಚೆನ್ನೈ ಅಂದರೆ – ಎಲ್ಲೆಲ್ಲಿ ನೋಡಿದರೂ ಗಲೀಜು.   ಕ್ರೋಮ್‍ಪೇಟೆಯಂತೂ ಬೆಂಗಳೂರಿನ ಕಲಾಸಿಪಾಳ್ಯಕ್ಕಿಂತ ಗಲೀಜು.   ಮುದ ಕೊಡುವ ಸ್ಥಳಗಳು ಅಂದರೆ, ತ್ಯಾಗರಾಯನಗರ, ಅಡ್ಯಾರ್, ಬೆಸೆಂಟ್‍ನಗರ್.  ಬಹುಶ: ಈ ಜಾಗಗಳಲ್ಲಿ ವಾಸಿಸುವ ಜನರ ಪ್ರಭಾವದಿಂದ ಈ ಸ್ಥಳಗಳು ಹೀಗಿರಬಹುದು ಅನ್ಸತ್ತೆ. 

 

 

 

ಅದೇ ಮೊದಲ ಬಾರಿಗೆ ಐ.ಐ.ಟಿ.ಯನ್ನು ಪ್ರವೇಶಿಸುವ ಅವಕಾಶವೂ ಸಿಕ್ಕಿತ್ತು.  ನನ್ನ ಗೆಳೆಯ ಕೇಶವಕುಮಾರ ಅಲ್ಲಿ ಎಂ.ಟೆಕ್ ಮಾಡ್ತಿದ್ದ.   ಒಂದು ದಿನಕ್ಕಾದ್ರೂ ಅವನ ಹಾಸ್ಟೆಲ್ಲಿನಲ್ಲಿ ತಂಗುವಂತೆ ಕೇಳಿಕೊಂಡಿದ್ದ.  ಒಂದು ಸಂಜೆ ಬ್ಯಾಂಕಿನಿಂದ ನೇರವಾಗಿ ಅಲ್ಲಿಗೆ ಹೋದವನು ಒಂದಲ್ಲ ಮೂರು ದಿನಗಳು ಅಲ್ಲಿಯೇ ಇದ್ದೆ.  ಎಂತಹ ಪ್ರಶಾಂತ ಮತ್ತು ಆನಂದದಾಯಕ ಕ್ಯಾಂಪಸ್.  ಆ ಸ್ಥಳ ಚೆನ್ನೈನಲ್ಲಿ ಇದೆ ಅಂದ್ರೆ ಈಗಲೂ ನಂಬುವುದಕ್ಕೆ ಆಗುವುದಿಲ್ಲ.  ಅಲ್ಲಿಯ ಹಾಸ್ಟೆಲ್ಲುಗಳಿಗೆ ನದಿಯ ಹೆಸರುಗಳನ್ನೂ ಮತ್ತು ಒಳಗೆ ಓಡಾಡುವ ಕ್ಯಾಂಪಸ್ಸಿನ ಬಸ್ಸುಗಳಿಗೆ ಪರ್ವತಗಳ ಹೆಸರನ್ನೂ ಇಟ್ಟಿದ್ದಾರೆ.   ಇದು ಏಕೆ ಎಂದು ನನ್ನ ಸ್ನೇಹಿತನನ್ನು ಕೇಳಿದ್ದಕ್ಕೆ, ಅವನ ಪ್ರೊಫೆಸರ್ ಒಬ್ಬರು ಹೇಳಿದ್ದ ಮಾತುಗಳನ್ನು ಅವನು ನನಗೆ ಹೇಳಿದ್ದ, ‘ ನಮ್ಮಲ್ಲಿ ಕಲಿತ ಹುಡುಗ / ಹುಡುಗಿಯರು ಪರ್ವತಗಳನ್ನು ಚಲಿಸುವಂತೆ ಮಾಡುವರು ಮತ್ತು ನದಿಗಳನ್ನು ತಟಸ್ಥ ಆಗುವಂತೆ ಮಾಡುವರುಎಂದು.  ಎಂತಹ ಆದರ್ಶವನ್ನು ಮುಂದಿಟ್ಟುಕೊಂಡು ನಡೆಯುತ್ತಿದ್ದಾರೆ.  ಈಗಲೂ ಚೆನ್ನೈನ ಐ.ಐ.ಟಿ.ಗೆ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನವಿದೆ.  ಬೆಳಗ್ಗೆ ಮತ್ತು ಸಂಜೆ ಕ್ಯಾಂಪಸ್ ಸುತ್ತು ಹಾಕುವವರಿಗೆ ಕಿವಿಗೆ ಕೇಳುವುದು ವೇದಘೊಷ.  ಅಲ್ಲಿಯ ಕೆಲವು ಪ್ರೊಫೆಸರ್ ಗಳು ವೇದವಿದ್ಯಾ ಪಾರಂಗತರಾಗಿದ್ದರು.  ಬಿಡುವಿನ ವೇಳೆಯಲ್ಲಿ ಕ್ಯಾಂಪಸ್ಸಿನಲ್ಲಿರುವ ಉತ್ಸುಕರಿಗೆ ವೇಡ ಪಾಠ ಕಲಿಸುತ್ತಿದ್ದರು.  ಈ ಸ್ಥಳವನ್ನು ಸ್ವರ್ಗವನ್ನದೇ ಮತ್ತೇನನ್ನಬೇಕು ಅಲ್ಲವೇ?

 

ಇದೇ ಸಮಯದಲ್ಲಿ ನಮ್ಮ ಮನೆಯಲ್ಲೊಂದು ಅವಘಡ ಸಂಭವಿಸಿತ್ತು.  ಒಂದು ದಿನ ಮಧ್ಯಾಹ್ನ ನನ್ನ ದೊಡ್ಡಣ್ಣ ಫೋನ್ ಮಾಡಿದ್ದ.  ಅವನು ಬೆಂಗಳೂರಿನ ಕಾರ್ಪೋರೇಶನ್ ಆಫೀಸಿನ ಆವರಣದಲ್ಲಿರುವ ಅಂಚೆ ಕಛೇರಿಯಲ್ಲಿ ಸಬ್ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ.  ನಮ್ಮ ತಂದೆಗೆ ಬಹಳ ಆರೋಗ್ಯ ಕೆಟ್ಟಿದೆಯೆಂದೂ, ತನಗೆ ಕೆಲಸ ಜಾಸ್ತಿಯಾಗಿ ಊರಿಗೆ ಹೋಗಲಾಗುವುದಿಲ್ಲ, ನಾನು ಹೋಗಬೇಕೆಂದು ಮಧ್ಯಾಹ್ನ ೩ ಘಂಟೆಗೆ ತಿಳಿಸಿದ್ದ.  ತಂದೆಗೆ ಏನಾಗಿದೆ?  ನಾನೇಕೆ ತಕ್ಷಣ ಊರಿಗೆ ಹೋಗಬೇಕು ಎನ್ನುವುದು ತಿಳಿಯಲಿಲ್ಲ.  ಅಷ್ಟಲ್ಲದೇ ಎಷ್ಟು ಹಣವನ್ನು ತೆಗೆದುಕೊಂಡು ಊರಿಗೆ ಹೋಗಬೇಕೆಂದೂ ತಿಳಿದಿರಲಿಲ್ಲ.  

 

ಆಗೆಲ್ಲಾ ನಾನು ಯುನಿಯನ್ ಕೆಲಸದಲ್ಲಿ ಬಹಳ ಸಕ್ರಿಯನಾಗಿದ್ದೆ.  ಅಂದೂ ಸಂಜೆ ಯೂನಿಯನ್ ಆಫೀಸಿಗೆ ಹೋರಟಿದ್ದೆ.   ದಾರಿಯಲ್ಲಿ ಹೋಗುವಾಗ ಈ ವಿಷಯವನ್ನು ನಮ್ಮ ಯೂನಿಯನ್ನಿನ ಅಧ್ಯಕ್ಷರಾಗಿದ್ದ ಶ್ರೀ ಪುತ್ತೂರಾಯರಿಗೆ ತಿಳಿಸಿದ್ದೆ.  ಅವರು ನಮಗೆಲ್ಲರಿಗಿಂತಲೂ ಹಿರಿಯರು, ಮಾರ್ಗದರ್ಶಕರು, ನಮ್ಮೆಲ್ಲರ ಹಿತಚಿಂತಕರಾಗಿದ್ದರು.  ನಾನು ತಿಳಿಸಿದ ವಿಷಯಕ್ಕೆ ಅವರು – ನಿಮ್ಮ ತಂದೆಯ ಆರೋಗ್ಯದಲ್ಲಿ ಏನೋ ಹೆಚ್ಚಿನ ತೊಂದರೆ ಆಗಿರಬೇಕು, ಈ ತಕ್ಷಣವೇ ನೀವು ಊರಿಗೆ ಹೊರಡಿ, ಸದ್ಯಕ್ಕೆ ಈ ಹಣ ನಿಮ್ಮಲ್ಲಿರಲಿ ಎಂದು ರೂ ೧೦೦೦ ವನ್ನು ಕೈನಲ್ಲಿಟ್ಟಿದ್ದರು.  ಅಲ್ಲಿಂದ ಹಾಗೆಯೇ ಊರಿಗೆ ಹೋಗಿದ್ದೆ. 

 

********************

 

ಊರಿಗೆ ಹೋದ ತಕ್ಷಣ ತಿಳಿದ ವಿಷಯವೇನೆಂದರೆ – ೨-೩ ದಿನಗಳ ಹಿಂದೆ ನನ್ನ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.  ೨೦ ವರ್ಷಗಳ ಹಿಂದೆ ಅಂದರೆ ೧೯೬೪ರಲ್ಲಿ ನನಗಿನ್ನೂ ೪ ವರ್ಷವಾಗಿದ್ದಾಗ ಹೀಗೊಮ್ಮೆ ಆಗಿತ್ತಂತೆ.  ಆಗ ಎಡಭಾಗಕ್ಕೆ ಪಾರ್ಶ್ವವಾಯುವಾಗಿ ಅಂಕೋಲಕ್ಕೆ ಹೋಗಿ ನಾಟಿ ವೈದ್ಯರಿಂದ ಔಷೋಧೋಪಚಾರ ಮಾಡಿಸಿ ಸರಿ ಹೋಗಿದ್ದರಂತೆ.  ಈಗ ಮತ್ತೆ ಹೀಗಾಗಿದ್ದಾಗ (ಈ ಸಲ ಶರೀರದ ಬಲಭಾಗಕ್ಕೆ ಅಟ್ಯಾಕ್ ಆಗಿತ್ತು), ತಮ್ಮನ್ನು ಅಂಕೋಲಕ್ಕೆ ಕರೆದೊಯ್ಯು ಎಂದು ನನಗೆ ಹೇಳಿದ್ದರು.  ಆಸ್ಪತ್ರೆಗೆ ಕರೆದೊಯ್ಯುವುದಾಗಿ ನಾನು ಹೇಳಲು, ನನ್ನ ತಾಯಿಯೂ ತಂದೆಯವರು ಹೇಳಿದಂತೆಯೇ ಕೇಳಲು ಹೇಳಿದ್ದರು.  ಮಾರನೆಯ ದಿನ ಬೆಳಗ್ಗೆ ಶಿವಮೊಗ್ಗ ಮುಖಾಂತರ ಅಂಕೋಲಕ್ಕೆ ಪ್ರಯಾಣ ಬೆಳೆಸಿದೆವು.  ರಾತ್ರಿ ೮.೩೦ರ ಹೊತ್ತಿಗೆ ಅಂಕೋಲಾ ತಲುಪಿ ಬಸ್ ನಿಲ್ದಾಣದ ಹತ್ತಿರವಿರುವ ಒಂದು ಹೊಟೆಲ್‍ಗೆ ಊಟಕ್ಕೆಂದೆ ಹೋದರೆ, ಇನ್ನೇನು ಹೊಟೆಲ್ ಮುಚ್ಚುವ ವೇಳೆ ಆಗಿದೆಯೆಂದೂ ತಿನ್ನಲು ಅವಲಕ್ಕಿ ಮಾತ್ರವಿದೆಯೆಂದೂ ಅದರ ಮಾಲಿಕ ಹೇಳಿದ್ದರು.  ಅದನ್ನೇ ತಿಂದು ಉಳಿಯಲು ಹತ್ತಿರದಲ್ಲೇ ಇದ್ದ ಒಂದು ಲಾಡ್ಜ್‍ನಲ್ಲಿ ಕೋಣೆಯನ್ನು ಹಿಡಿದಿದ್ದೆವು.  

 

ಅಂಕೋಲಾಕ್ಕೆ ಈ ಔಷಧಿಗಾಗಿಯೇ ಬರುವ ಜನರು ಬಹಳ.  ಆ ಊರಿನಲ್ಲಿ ಬಸ್ ನಿಲ್ದಾಣದ ಹತ್ತಿರ ಔಷಧದ ಅಂಗಡಿಗಳು ಬಹಳವಾಗಿವೆ.  ಹಾಗೂ ಊರಿಗೆ ಬರುವ ಹೊಸಬರನ್ನು ತಮ್ಮಲ್ಲಿಗೆ ಔಷಧಕ್ಕಾಗಿ ಮತ್ತು ಮಾಲೀಷ್‍ಗಾಗಿ ಬರಲು ಕರೆಯುತ್ತಾರೆ.  ಇವರೆಲ್ಲರು ಔಷಧ ಅಷ್ಟು ಪರಿಣಾಮಕಾರಿಯಲ್ಲವಂತೆ.  ಇದನ್ನು ನನ್ನ ತಂದೆಯೇ ತಿಳಿಸಿದ್ದರು.   ಬೆಳಗಿನ ಜಾವ ೬ ಘಂಟೆಗೇ ಎದ್ದು ಸ್ನಾನ ಮಾಡದೆಯೇ ಔಷಧಿಗಾಗಿ ಹೊರಟೆವು.  ಎಲ್ಲಿಗೆ ಹೋಗಬೇಕೆಂದು ನನ್ನ ತಂದೆಗೆ ತಿಳಿದಿತ್ತು.  ಒಂದು ಆಟೋ ಚಾಲಕನಿಗೆ ಪೊಕ್ಕ ಮಾನು ಗೌಡನ ಮನೆಗೆ ಹೋಗಲು ತಿಳಿಸಿದರು.  ಆಟೋ ಚಾಲಕನು ಅವರ್ಯಾರೋ ಗೊತ್ತಿಲ್ಲ ಎನ್ನಲು, ಸಮುದ್ರದ ಹತ್ತಿರಕ್ಕೆ ಹೋಗಲು ತಿಳಿಸಿ, ಅಲ್ಲಿ ಎಲ್ಲಿ ಹೋಗಬೇಕೆಂದು ಹೇಳುವೆನೆಂದರು.  ಆಟೋದವನಿಗೆ, ಇವರಿಗೆ ಈ ಔಷಧದ ಬಗ್ಗೆ ತಿಳಿದಿದೆ ಎಂದು ಖಾತ್ರಿಯಾಗಿ, ರಸ್ತೆ ಸರಿಯಿಲ್ಲ, ವಾಪಸ್ಸು ಬರಲು ಜನ ಸಿಗುವುದು ಕಷ್ಟ, ಹತ್ತು ರೂಪಾಯಿ ಜಾಸ್ತಿ ಕೊಡುವಿರೆಂದರೆ ಬರುವೆನೆಂದನು.   ಅದಕ್ಕೇ ನಾನು ಒಪ್ಪಿದ್ದೆ.  ದಾರಿಯಲ್ಲಿ ಹೋಗುವಾಗ ಆಟೋದವನು, ಈಗ ಪೊಕ್ಕ ಮಾನು ಗೌಡ ಇಲ್ಲ, ಆತ ಸತ್ತು ಹೋಗಿ ೧೦-೧೨ ವರ್ಷಗಳೇ ಆದುವು, ಆತನ ಮಗ ಈ ವೈದ್ಯ ವೃತ್ತಿಯನ್ನು ನಡೆಸುತ್ತಿದ್ದಾನೆ ಎಂದು ತಿಳಿಸಿದ್ದನು.  

 

ಈ ನಾಟಿ ವೈದ್ಯ ಪೊಕ್ಕ ಮಾನು ಗೌಡ ಅಥವಾ ಈಗಿನ ಆತನ ಮಗ ಬೆಳಗಿನ ಜಾವ ೩ ಘಂಟೆಗೇ ಎದ್ದು ಕಾಡಿಗೆ ಹೋಗಿ ಮೂಲಿಕೆಗಳನ್ನೂ ಯಾವುದೋ ಗಿಡದ ಸೊಪ್ಪನ್ನೂ ತರುವನಂತೆ.  ಅದರೊಂದಿಗೆ ತಾನೇ ತಯಾರಿಸಿದ ಎಣ್ಣೆಯನ್ನು ಬಹಳ ಕಡಿಮೆ ಹಣಕ್ಕೆ ಕೊಡುತ್ತಿದ್ದನು.  ಅಲ್ಲೆಗೆ ಬರುವ ಬಹುತೇಕ ರೋಗಿಗಳು ನಿತ್ರಾಣರಾಗಿದ್ದು, ಮಾಲೀಷು ಮಾಡಿಸಿಕೊಳ್ಳಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಿದ್ದಾನೆ.  ಅದಕ್ಕೂ ಬಹಳ ಕಡಿಮೆ ದರವನ್ನು ತೆಗೆದುಕೊಳ್ಳುವನು.  ರೋಗಿಗಳು ತಾವೇ ಮಾಲೀಷು ಮಾಡಿಕೊಳ್ಳಬೇಕಂತೆ.  ಕೈಲಾಗದವರಿಗೆ ಮಾಲೀಷು ಮಾಡಲು ಪೈಲ್ವಾನರನ್ನೂ ನೇಮಿಸಿಕೊಡುವನು.  

 

ನನ್ನ ತಂದೆ ಆ ಗೌಡನ ಬಳಿಗೆ ಹೋಗಿ, ಇಪ್ಪತ್ತು ವರುಷಗಳ ಹಿಂದೆ ಪೊಕ್ಕ ಗೌಡನಿಂದ ಔಷಧವನ್ನು ತೆಗೆದುಕೊಂಡಿದ್ದರೆಂದೂ ಈಗ ಮತ್ತೆ ಪಾರ್ಶ್ವವಾಯು ಆಗಿದೆಯೆಂದೂ ತಿಳಿಸಿದ್ದರು.  ಅದಕ್ಕೆ ಆತ ಇಲ್ಲಿಯೇ ಉಳಿದುಕೊಂಡು ಔಷಧೋಪಚಾರ ಮಾಡಿಕೊಳ್ಳುವಿರೋ ಅಥವಾ ಔಷಧವನ್ನು ತೆಗೆದುಕೊಂಡು ಊರಿಗೆ ಹೋಗುವಿರೋ ಎಂದು ಕೇಳಿದ್ದನು.  ಊರಿಗೆ ಹೋಗುವೆವೆಂದು ಹೇಳಿದ್ದಕ್ಕೆ, ೨ ಬಾಟಲಿನಲ್ಲಿ ಎಣ್ಣೆಯನ್ನೂ, ಒಂದು ದೊಡ್ಡ ಹೊರೆ ಹಸಿರು ಬಣ್ಣದ ಸೊಪ್ಪನ್ನು ಕೊಟ್ಟು, ಅದನ್ನು ಹೇಗೆ ಹಚ್ಚಿಕೊಂಡು ಮಾಲಿಷು ಮಾಡಿಕೊಳ್ಳಬೇಕೆಂದು ತಿಳಿಸಿದ್ದನು.  ಮುಖ್ಯವಾಗಿ ಆ ಔಷಧವನ್ನು ರೋಗಿಯಲ್ಲದ ಇನ್ಯಾರೂ ಮುಟ್ಟಬಾರದೆಂದೂ ತಿಳಿಸಿದ್ದನು.  ಅಂದೇ ಸಂಜೆಗೆ ಹುಬ್ಬಳ್ಳಿಗೆ ಬಂದು ಅಲ್ಲಿ ರಾತ್ರಿಯೂಟ ಮಾಡಿ, ರಾತ್ರಿಯ ಬಸ್ಸಿನಲ್ಲಿ ಊರಿಗೆ ಹೊರಟು ಬಂದಿದ್ದೆವು.   

 

ಔಷಧಿಯನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಒಂದೆರಡು ಮಾತುಗಳಲ್ಲಿ ಹೇಳುವೆ.  ಬೆಳಗ್ಗೆ ಸ್ನಾನ ಮಾಡಿ  ಮೈಯಿಗೆ ಎಣ್ಣೆಯನ್ನು ಹಚ್ಚಿಕೊಂಡು, ಚೆನ್ನಾಗಿ ಮಾಲೀಷು ಮಾಡಿಕೊಳ್ಳಬೇಕು.   ಬಿಸಿಲಿಗೆ ಮೈಯನ್ನು ಒಡ್ಡಿ ಒಣಗಿಸಿಕೊಳ್ಳಬೇಕು.  ೧ ಘಂಟೆಗಳ ತರುವಾಯ ಮೈ ಒಣಗಿದ ನಂತರ ಸೊಪ್ಪನ್ನು ಅರಿಶಿನದೊಂದಿಗೆ ಬೆರೆಸಿ ಚೆನ್ನಾಗಿ ಅರೆದು ಅದರ ರಸವನ್ನು ಮೈಯ್ಯಿಗೆ ಹಚ್ಚಿಕೊಳ್ಳಬೇಕು.  ಅರೆಯುವುದು ಮತ್ತು ಹಚ್ಚಿಕೊಳ್ಳುವುದನ್ನು ರೋಗಿಗಳೇ ಮಾಡಿಕೊಳ್ಳಬೇಕು.  ಇತರರು ಇದನ್ನು ಮುಟ್ಟಲೂಬಾರದು.   ಮತ್ತೆ ಬಿಸಿಲಿಗೆ ಮೈಯೊಡ್ಡಿ ಒಣಗಿಸಿಕೊಳ್ಳಬೇಕು.   ಮೈ ಚೆನ್ನಾಗಿ ಒಣಗಿದ ನಂತರ ಹೆಪ್ಪಳಿಕೆಗಳು ಕೆಳಗೆ ಬೀಳುವುದು.  ನಂತರ ಸ್ನಾನ ಮಾಡಬಾರದು.  ಮರುದಿನ ಮತ್ತೆ ಹೀಗೆಯೇ ಉಪಚಾರವನ್ನು ಮಾಡಿಕೊಳ್ಳಬೇಕು.  ಹೀಗೆ ಹದಿನೈದು ದಿನಗಳ ಕಾಲ ಮಾಡಿಕೊಳ್ಳಬೇಕು.  ಆಗ ಪೂರ್ಣವಾಗಿ ಗುಣವಾಗುವರು.  ಇದಕ್ಕೆ ನನ್ನ ತಂದೆ ಗುಣ ಹೊಂದಿದ್ದೇ ನಿದರ್ಶನ.

 

*******************

 

ಈ ಭಾಗದಲ್ಲಿ ನನ್ನ ಮಾನವೀಯತೆಯನ್ನು ರೂಪಿಸಿದ ಪುತ್ತೂರಾಯರು, ಬಾಬುರವಿಶಂಕರರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವೆ.  ಹಾಗೆಯೇ ಒಂದು ರಸ್ತೆ ಆಕಸ್ಮಿಕದಲ್ಲಿ ಒಂದು ಪುಟ್ಟ ಕಂದ ದಾರುಣವಾಗಿ ಸಾವಿಗೀಡಾದ ಸಂದರ್ಭವನ್ನೂ ತಿಳಿಸುವೆ. 

 

ಸೀತಾರಾಮ ಪುತ್ತೂರಾಯರು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಆರ್ಥಿಕ ಸಹಾಯಕರಾಗಿ ಕೆಲಸ ಮಾದುತ್ತಿದ್ದರು.  ೧೯೬೪-೬೫ ರ ಸುಮಾರಿನಲ್ಲಿ ಪದವೀಧರರಾಗಿ ಬ್ಯಾಂಕಿಗೆ ಸೇರಿದ್ದರು.  ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಪದವೀಧರರಾಗಿದ್ದವರೆಲ್ಲರೂ ಅಧಿಕಾರಿಗಳಾಗಿ ಸೇರುತ್ತಿದ್ದರು.  ಇವರು ಆಗಲೇ ಭಾರತೀಯ ಮಝ್ದೂರ್ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು.  ಭಾರತೀಯ ಮಝ್ದೂರ್ ಸಂಘವು ಪ್ರಾರಂಭವಾಗಿದ್ದು ೧೯೬೫ ರಲ್ಲಿ.  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಮಿಕರ ಒಳಿತಿಗಾಗಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿನ ಕೆಲಸಗಾರರನ್ನು ಸಂಘಟಿಸಲು ಪುತ್ತೂರಾಯರು ಮುಂದಳತ್ವ್ಸ್ ವಹಿಸಿದರು. ಬ್ಯಾಂಕಿನಲ್ಲಿ ಅಧಿಕಾರಿಯಾದರೆ, ವರ್ಗಾವಣೆ ನೋಡಬೇಕೆಂದೂ ಮತ್ತು ಯೂನಿಯನ್ನಿನ ಕೆಲಸ ಮಾಡಲಾಗುವುದಿಲ್ಲವೆಂದೂ ಅವರು ಬಡ್ತಿಯನ್ನು ತೆಗೆದುಕೊಳ್ಳಲಿಲ್ಲ.  ೧೯೭೨ರ ಹೊತ್ತಿಗೆ ಇವರ ಕೈ ಜೋಡಿಸಿದವರು ಶ್ರೀಯುತ ಬಾಬು ರವಿಶಂಕರ ಅವರು.  ಇವರಿಬ್ಬರಲ್ಲಿ ನಾನು ಕಂಡ ಒಂದು ಒಳ್ಳೆಯ ಅಂಶವೆಂದರೆ, ಯೂನಿಯನ್ ಸದಸ್ಯರಲ್ಲದೇ ಇತರ ಸಹೋದ್ಯೋಗಿಗಳನ್ನು ತಮ್ಮ ಕುಟುಂಬದ ಸದಸ್ಯರೆಂದೇ ಭಾವಿಸುತ್ತಿದ್ದರು.  ಹಬ್ಬ ಹರಿದಿನಗಳಲ್ಲಿ ಮನೆ ಮನೆಗಳಿಗೆ ಹೋಗಿ ಕಷ್ಟ ಸುಖ ವಿಚಾರಿಸುವುದು, ಬೇಕಾದ ಮಾರ್ಗದರ್ಶನವೀಯುವುದೂ ಮಾಡುತ್ತಿದ್ದರು.  ಇವರಿಬ್ಬರೂ ತಮ್ಮ ಹೆಚ್ಚಿನ ಕಾಲಾವಧಿಯನ್ನು ಸ್ನೇಹಿತರಿಗಾಗಿಯೇ ಮುಡುಪಾಗಿಟ್ಟಿದ್ದರೆಂದರೆ ಅತಿಶಯೋಕ್ತಿಯಲ್ಲ.  ೧೯೮೫ರ ಸುಮಾರಿನಲ್ಲಿ ಹೌಸಿಂಗ ಸೊಸೈಟಿಯವರು ಹೊಸ ಸದಸ್ಯರನ್ನು ನೋದಾಯಿಸಿಕೊಳ್ಳಲು ಪುತ್ತೂರಾಯರೂ ಕಾರಣೀಭೂತರಾಗಿದ್ದರು.  ಅದಲ್ಲದೇ ನಮಗೆಲ್ಲರಿಗೂ ನಿವೇಶನವನ್ನು ಹೊಂದಲು ಸಲಹೆ ಕೊಟ್ಟರು.  ನಾನಂತೂ, ‘ನನಗ್ಯಾಕೆ ಸಾರ್, ಈಗಲೇ ಸೈಟು.  ಮುಂದೆ ನೋಡೋಣ.  ಅದೂ ಅಲ್ಲದೇ ಈ ಹೌಸಿಂಗ್ ಸೊಸೈಟಿಯಲ್ಲಿ ಯಾವಾಗಲೂ ಜಗಳ ಕದನಗಳನ್ನು ನೋಡ್ತಿದ್ದೀನಿ, ನನಗೆ ಸೇರಲು ಮನಸ್ಸಿಲ್ಲಎಂದಿದ್ದೆ.  ಅದಕ್ಕೆ ಪುತ್ತೂರಾಯರು, ‘ನೀವೇನೂ ಮಾಡಬೇಕಿಲ್ಲ.  ಈ ಅಪ್ಲಿಕೇಷನ್ ಫಾರ್ಂ ತುಂಬಿ ನನ್ನ ಕೈಗೆ ಕೊಡಿ ಮತ್ತು ಕೋ ಆಪರೇಟಿವ್ ಬ್ಯಾಂಕಿನಲ್ಲಿ ನಿಮಗೆ ಹತ್ತು ಸಾವಿರ ರೂಪಾಯಿಗಳ ಸಾಲ ತೆಗೆದುಕೊಂಡು, ಮೂಲಧನವನ್ನಾಗಿ ಕೊಡಿ.  ನಿಮಗೆ ತಿಳಿಯದೆಯೇ ಆ ಸಾಲ ತೀರಿ ಹೋಗುವುದು‘, ಎಂದಿದ್ದರು.   ಅವರ ಹಿತ ನುಡಿಗಳನ್ನು ನಾವೆಲ್ಲರೂ ಪಾಲಿಸಿದ ಕಾರಣವೇ – ನಾವುಗಳಿಂದು ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಮನೆಯನ್ನು ಮಾಡಿಕೊಂಡಿರುವುದು.  ತಂಪಾದ ಸಮಯದಲ್ಲಿ ಅವರನ್ನು ನೆನೆಯದಿದ್ದರೆ ಅದು ದ್ರೋಹ ಬಗೆದಂತೆಯೇ.

 

ಇಷ್ಟೇ ಅಲ್ಲ, ಪುತ್ತೂರಾಯರು ಇನ್ನೊಂದು ಮಾತನ್ನೂ ನಮಗೆಲ್ಲರಿಗೂ ಹೇಳಿದ್ದರು.  ಎಂದಿಗೂ ನಿಮ್ಮ ಬ್ಯಾಂಕಿನ ಅಕೌಂಟಿನಲ್ಲಿ ಕಡಿಮೆಯೆಂದರೆ ಹತ್ತು ಸಾವಿರ ರೂಪಾಯಿಗಳನ್ನು ಇಟ್ಟುಕೊಂಡಿರಿ.  ಹಣವಿಲ್ಲದವನು ಹೆಣದಂತೆ.  ದುಶ್ಚಟಗಳಿಂದ ದೂರವಾಗಿರಿ.  ಹೆಚ್ಚಿನ ಹಣ ಕೈನಲ್ಲಿದ್ದರೆ ಇಲ್ಲದವರಿಗೆ ನೀಡಿ. ಇದು ಒಳ್ಳೆಯತನ. ಮುಂದೆ ನಿಮ್ಮ ಮಕ್ಕಳನ್ನು ಇದೇ ಒಳ್ಳೆಯತನ ಕಾಪಾಡುವುದು.  ಪುತ್ತೂರಾಯರು ಈ ಮಾತುಗಳನ್ನು ಹೆಳುತ್ತಿದ್ದುದಲ್ಲದೇ ಪಾಲಿಸುತ್ತಿದ್ದರು ಕೂಡಾ.  ನಾನು ೧೯೮೯ರಲ್ಲಿ ಮುಂಬೈಗೆ ಬಂದ ಕೆಲವು ವರ್ಷಗಳಲ್ಲಿ ಪುತ್ತೂರಾಯರು ಅಕಾಲಿಕ ಮರಣಕ್ಕೆ ತುತ್ತಾಗಿದ್ದರು.  ಅವರಿಗಿದ್ದ ಇಬ್ಬರೂ ಗಂಡು ಮಕ್ಕಳು ವೈದ್ಯ ವೃತ್ತಿ ಹಿಡಿದು ಬಹಳ ಹೆಸರುವಾಸಿಯಾಗಿದ್ದಾರಂತೆ. 

 

ಇದೇ ಸಮಯದಲ್ಲಿ ನನ್ನ ಅಣ್ಣನ ಎರಡನೆಯ ಮಗ – ೨ ವರುಷದ ಕಂದಮ್ಮ ರಸ್ತೆಯಪಘಾತಕ್ಕೆ ಈಡಾಗಿ ದುರ್ಮರಣವನ್ನು ಹೊಂದಿದ್ದ. 

 

**************

 

ಈ ಭಾಗದಲ್ಲಿ ೧೯೮೫-೮೬ ರಲ್ಲಿ ಹೈದರಾಬಾದಿನಲ್ಲಿ ನಡೆದ ಭಾರತೀಯ ಮಜ್ದೂರ್ ಸಂಘದ ಅಧಿವೇಶನ ಮತ್ತು ನಮ್ಮ ಬ್ಯಾಂಕಿನ ಯೂನಿಯನ್ನಿನ ವತಿಯಿಂದ ಬೆಂಗಳೂರಿನಲ್ಲಿ ನಡೆದ ಅಧಿವೇಶನದ ಬಗ್ಗೆ ಒಂದೆರಡು ಮಾತುಗಳು.

 

೧೯೮೫ರಲ್ಲಿ ಹೈದರಾಬಾದಿನಲ್ಲಿ ಭಾರತೀಯ ಮಜ್ದೂರ್ ಸಂಘದ ಅಧಿವೇಶನ ನಡೆಯಿತು.  ಅದಕ್ಕಾಗಿ ನಮ್ಮ ಯೂನಿಯನ್ನಿನಿಂದ ೮-೧೦ ಜನ ಸದಸ್ಯರು ಹೊರಟಿದ್ದೆವು.  ಹೋಗುವ ಮುನ್ನ ನಮಗೆ ಅಷ್ಟೇನೂ ಇಚ್ಛೆ ಇರಲಿಲ್ಲ.  ಪುತ್ತೂರಾಯರ ಸಕ್ರಿಯ ಚಟುವಟಿಕೆಗಳಿಗೆ ಮಾರು ಹೋಗಿ ಅವರಂತೆಯೇ ನಾವೂ ಕೆಲಸ ಮಾಡಹತ್ತಿದೆವು.    ನಮಗೆಲ್ಲರಿಗೂ ಸ್ಫೂರ್ತಿ ಶ್ರೀಯುತ ಪುತ್ತೂರಾಯರು.   ಅವರಿಗಾಗ ೫೦ ವರ್ಷ ವಯಸ್ಸಾಗಿತ್ತು.  ಆದರೂ ಯೂನಿಯನ್ನಿನ ಎಲ್ಲ ಕೆಲಸಗಳಲ್ಲಿಯೂ ಅವರದ್ದೇ ಮುಂದಾಳತ್ವ.  ಎದುರಾಳಿ ಯೂನಿಯನ್ನಿನವರು ಕೂಡಾ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರು.  ಯಾರೇ ಸಹಾಯ ಯಾಚಿಸಿದರೂ ಮಾನವೀಯತೆಯನ್ನು ಪ್ರದರ್ಶಿಸಿ ಕೈಲಾದದ್ದನ್ನು ಮಾಡುತ್ತಿದ್ದರೇ ಹೊರತು ತಮ್ಮವರಲ್ಲವೆಂದು ದೂರ ತಳ್ಳುತ್ತಿರಲಿಲ್ಲ.  ಯೂನಿಯನ್ನಿನ ವತಿಯಿಂದ ಟ್ರೈನಿನಲ್ಲಿ ಹೈದರಾಬಾದಿಗೆ ಟಿಕೆಟ್ ಬುಕ್ ಮಾಡಿಸಲಾಗಿತ್ತು.  ನಾವು ಸ್ನೇಹಿತರನೇಕರು ಬ್ರಹ್ಮಚಾರಿಗಳು.  ಪ್ರಯಾಣದಲ್ಲಿ ಹರಟೆ ಹೊಡೆದುಕೊಂಡು ತಮಾಷೆ ಮಾಡಿಕೊಂಡು ಹೋಗೋನ ಎಂದು ಅಂದುಕೊಂಡಿದ್ದೆವು.  ಆದರೆ ಪುತ್ತೂರಾಯರು ಇದರ ಬದಲಿಗೆ ಕಾರ್ಮಿಕರ ಒಕ್ಕೂಟದ ಕೆಲವು ಕ್ರಾಂತಿಕಾರಿ ಗೀತೆಗಳನ್ನು ಹೇಳಿಕೊಟ್ಟರು.  ಅಂದು ಹೇಳಿದ ಹಾಡು ಯಾವುದು ಗೊತ್ತೇ – ಈಗಲೂ ನನಗೆ ನೆನಪಿದೆ

 

 thengadiji.jpg

ಮನುಕುಲದೇಳಿಗೆ ಸಾಧಿಸೆ ಹೊರಟೆವು

ಪ್ರಭಾತ ಕಿರಣವನರಳಿಸುತ

ಶೋಷಿತ ಪೀಡಿತ ದಲಿತೋದ್ಧಾರದ

ಭಾಗ್ಯೋದಯವನು ನಿರ್ಮಿಸುತ

 

ಆಗ ನಮಗನ್ನಿಸಿದ್ದು, ನಾವುಗಳು ಈ ಪೊಳ್ಳು ಸಂತಸಕ್ಕೆ ನಮ್ಮ ಅಮೂಲ್ಯ ಸಮಯವನ್ನು ಹೇಗೆ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಬಿಡುವಿನ ಸಮಯದಲ್ಲಿ ಅಮಾಯಕ ಕಾರ್ಮಿಕರ ಒಳಿತಿಗಾಗಿ ಏನೆಲ್ಲಾ ಮಾಡಬಹುದೆಂಬುದರ ಚಿಂತಿಸಬಹುದು.   ಪುತ್ತೂರಾಯರು ನಮಗೆ ಮೊದಲು ಕಲಿಸಿದ್ದು, ನಮ್ಮ ನಮ್ಮ ಕೆಲಸದ ಜಾಗದಲ್ಲಿ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ನಂತರ ಯೂನಿಯನ್ನಿನ ಕೆಲಸ ಮಾಡುವುದು.  ಇಂತಹ ನಾಯಕರುಗಳು ಇರುವುದರಿಂದಲೇ ಅಲ್ವೇ ನಮ್ಮ ಯೂನಿಯನ್ ಲೀಡರುಗಳಲ್ಲಿ ಹೆಚ್ಚಿನವರುಗಳ್ಯಾರಿಗೂ ತೊಂದರೆ ಬರದೇ ಇರುವುದು. 

 

ಹೈದರಾಬಾದಿನಲ್ಲಿ ಭಾರತೀಯ ಮಝ್ದೂರ್ ಸಂಘದ ಸಂಸ್ಥಾಪಕರಾದ ದತ್ತೋಪಂತ್ ಠೇಂಗಡೀಜಿ ಯವರು ಬಂದಿದ್ದರು.  ಅವರ ಹಿತನುಡಿಗಳು ಕಾರ್ಮಿಕರ ಹಿತಕ್ಕಾಗಿ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹೆಚ್ಚು ಪ್ರೇರೇಪಿಸಿತು.  ಠೇಂಗಡೀಜೀಯವರು ರಾಷ್ಟ್ರ್‍ಈಯ ಸ್ವಯಂಸೇವಕ ಸಂಘದ ಹಿರಿಯ ಸದಸ್ಯರಾಗಿದ್ದರು.  ಅವರು ಬರೀ ಬಾಯ್ಮಾತಿನಲ್ಲಿ ಹೇಳುವವರಲ್ಲ ಕೆಲಸ ಮಾಡಿ ತೋರಿಸುತ್ತಿದ್ದವರು.  ಹಾಗಾಗಿ ಅವರ ನುಡಿಗಳು ಎಂತಹವರನ್ನೂ ಪ್ರೇರೇಪಿಸುತ್ತಿತ್ತು.  ನಮಗೆ ಉಳಿದುಕೊಳ್ಳಲು ನಾಂಪಲ್ಲಿಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅವಕಾಶ ಮಾಡಿಕೊಟ್ಟಿದ್ದರು.  ಮೊದಲ ಎರಡು ದಿನಗಳು ಅಧಿವೇಶನ.  ಮೂರನೆಯ ದಿನ ನಮಗೆ ಊರು ಸುತ್ತಲು ಅನುಮತಿ ಕೊಟ್ಟಿದ್ದರು.  ಆಗ ಹೈದರಾಬಾದಿನಲ್ಲಿ ಬಸ್ ವ್ಯವಸ್ಥೆ ಅವ್ಯವಸ್ಥೆ ಆಗಿದ್ದಿತ್ತು.  ಅಂದು ಬೆಳಗ್ಗೆ ಸಿಕಂದರಾಬಾದ್ ಸ್ಟೇಶನ್ನಿನವರೆವಿಗೆ ನಡೆದುಕೊಂಡು ಹೋದೆವು.  ಅಲ್ಲಿಂದ ೧ನೇ ನಂಬರ್ ಬಸ್ಸಿನಲ್ಲಿ (ಅಲ್ಲಿಂದಲೇ ಪ್ರಾರಂಭವಾಗ್ತಿದ್ದದ್ದು) ಕೊನೆಯ ನಿಲ್ದಾಣವಾದ ಸಲಾರ್ ಜಂಗ್ ಮ್ಯೂಸಿಯಂ‍ಗೆ ಹೋಗಿದ್ದೆವು.  ನಂತರ ಅಲ್ಲಿಯೇ ಹತ್ತಿರವಿದ್ದ ನ್ಯಾಷನಲ್ ಪಾರ್ಕ್ ನೋಡಿ, ವಾಪಸ್ಸಾಗಿದ್ದೆವು. 

 

ಅದಾದ ಕೆಲವು ತಿಂಗಳುಗಳಿಗೆ ನಮ್ಮ ಯೂನಿಯನ್ನಿನ ರಾಷ್ಟ್ರೀಯ ಮಟ್ಟದ ಅಧಿವೇಶನವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದೆವು.  ಅದಕ್ಕಾಗಿ ಬಹಳ ಕೆಲಸ ಮಾಡಿದ್ದೆವು.  ಒಂದು ತಿಂಗಲು ಮೊದಲಿನಿಂದಲೇ ಕೆಲಸ ಶುರುವಾಗಿತ್ತು.  ದೂರದೂರಿಗಳಿಂದ ಬರುವ ಅತಿಥಿಗಳ ಟ್ರೈನ್ ವೇಳಾಪಟ್ಟಿ, ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆ, ಊಟ ತಿಂಡಿ ವ್ಯವಸ್ಥೆ, ಸ್ಥಳೀಯ ಪ್ರೇಕ್ಷಣೆಗೆ ಸಿದ್ಧತೆ, ಮರಳಿ ಅವರೂರನ್ನು ಸುಖವಾಗಿ ತಲುಪಿಸುವ ಬಗ್ಗೆ, ಬ್ಯಾಂಕಿನ ಮುಂದೆ ಮತ್ತು ಅಧಿವೇಶನ ಸ್ಥಳದಲ್ಲಿ ಪೋಸ್ಟರುಗಳ ಅಂಟಿಸುವಿಕೆ, ಬಂಟೀಂಗ್ಸ್ ಕಟ್ಟುವಿಕೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದೆವು.  ಇದಕ್ಕಾಗಿ ನಮ್ಮಲ್ಲಿದ್ದ ಸದಸ್ಯರು ಬೆರಳೆಣಿಕೆಯಷ್ಟು.  ನಾವು ಕೆಲವು ಸ್ನೇಹಿತರುಗಳು ನಮ್ಮ ಯೂನಿಯನ್ ಆಫೀಸಿನಲ್ಲೇ ಕೆಲವು ರಾತ್ರಿಗಳು ಮಲಗಿದ್ದೆವು.  ಈ ಸಮಯದಲ್ಲಿ ನಮಗೆ ಹೆಚ್ಚಿನ ಮಾರ್ಗದರ್ಶನ ಮತ್ತು ಹೆಗಲಿಗೆ ಹೆಗಲು ಕೊಟ್ಟವರೆಂದರೆ, ಪುತ್ತೂರಾಯರು, ಬಾಬು ರವಿಶಂಕರ ಮತ್ತು ಜಯರಾಮ್.