ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 5

೧೯೮೫ರ ಕೊನೆಯ ಭಾಗದಲ್ಲಿ ಒಂದು ಸಣ್ಣ ಮನೆ ಮಾಡಿದ್ದೆನು.  ತ್ಯಾಗರಾಜನಗರದ ಆಟೋ ಮಾಲೀಕ ಗಂಗಣ್ಣನವರ ಎರಡು ಮಹಡಿ ಕಟ್ಟಡದಲ್ಲಿ ಒಂದು ಭಾಗದಲ್ಲಿ ನಾನಿದ್ದೆ. ಒಟ್ಟು ೬ ಮನೆಗಳಿದ್ದವು.  ಗಂಗಣ್ಣನವರಿಗೆ ಸರಿಯಾಗಿ ಓದಲು ಬರೆಯಲು ಬರುತ್ತಿರಲಿಲ್ಲ.  ಏನೇ ಪತ್ರ ವ್ಯವಹಾರ ಅಗ್ರೀಮೆಂಟ್ ಮಾಡಬೇಕಿದ್ದರೂ ನನ್ನ ಬಳಿಗೇ ಬರುತ್ತಿದ್ದರು.  ಆದರೆ ವ್ಯವಹಾರದಲ್ಲಿ ಮಾತ್ರ ಎತ್ತಿದ ಕೈ.  ಮೊದಲು ಅವರಿಗಿದ್ದದ್ದು ಒಂದು ಆಟೊ.  ಅದನ್ನು ಓಡಿಸುತ್ತಾ ಸ್ವಲ್ಪ ಹಣ ಮಾಡಿ ಇನ್ನೊಂದು ಆಟೊವನ್ನು ಕೊಂಡು ತ್ಯಾಗರಾಜನಗರದ ದತ್ತಾತ್ರೇಯ ದೇವಸ್ಥಾನದ ಹಿಂಭಾಗದಲ್ಲಿ ಒಂದು ನಿವೇಶನ ಕೊಂಡರು.  ಏನೂ ದುರಭ್ಯಾಸವಿರದ ಆತ ರಾತ್ರಿಯಲ್ಲಿ ಸ್ವಲ್ಪ ಹೊತ್ತು ಆಟೋ ಓಡಿಸಿ, ಬೆಳಗಿನ ಹೊತ್ತಿನಲ್ಲಿ ತನ್ನ ತಾಯಿ ಮತ್ತು ಪತ್ನಿಯ ಸಹಾಯದಿಂದ ಮತ್ತು ನಾಲ್ಕೈದು ಕೆಲಸಗಾರರ ಸಹಾಯದಿಂದ ಎರಡು ಮಹಡಿಯ ಕಟ್ಟಡ ಕಟ್ಟಿಯೇ ಬಿಟ್ಟಿದ್ದರು.  ಅದರಲ್ಲಿ ಒಟ್ಟು ೬ ಮನೆಗಳಿದ್ದವು.  ಒಂದು ಮನೆಯಲ್ಲಿ ತಾವಿದ್ದುಕೊಂಡು ಇನ್ನೈದನ್ನು ಬಾಡಿಗೆಗೆ ಕೊಟ್ಟಿದ್ದರು.  ಅವರ ಮನೆಗೆ ಬಂದ ಮೊದಲ ಗಿರಾಕಿಯೇ ನಾನು.   ಮನೆಗೆ ಮೊದಲ ಅಗ್ರೀಮೆಂಟು ನನ್ನದೇ.  ಅದನ್ನು ಬರೆದವನೂ ನಾನೇ!  ಆ ಕರಾರು ೧೧ ತಿಂಗಳದ್ದೆಂದೂ ಮರು ಕರಾರಿನ ಸಮಯದಲ್ಲಿ ಬಾಡಿಗೆಯನ್ನು ಶೇಕಡಾ ೫ ರಷ್ಟು ಹೆಚ್ಚಿಸುವುದಾಗಿಯೂ ಬರೆಯುವಂತೆ ಕೇಳಿಕೊಂಡಿದ್ದರು.   ಆಗ ನನ್ನ ಮನೆಗೆ ನಿಗದಿಪಡಿಸಿದ್ದ ತಿಂಗಳ ಬಾಡಿಗೆ ರೂ. ೨೦೦/-.   ಇದು ಬಹು ಕಡಿಮೆಯಾದ್ದರಿಂದ ಅವರು ಹೇಳಿದ್ದಕ್ಕೆಲ್ಲಾ ನಾನು ಒಪ್ಪಿದ್ದೆ.  ಆದರೆ ಮುಂದೆ ಮನೆಗೆ ಬಂದ ಬಾಡಿಗೆದಾರರಿಗೆ ಗಂಗಣ್ಣನವರ ಕರಾಮತ್ತಿನ ಅರಿವಾಗಿ ನನ್ನ ಮೇಲೆ ತಿರುಗಿ ಬಿದ್ದಿದ್ದರು.  ಅವರ ಎಲ್ಲ ಪ್ರತಿಕ್ರಿಯೆಗಳಿಗೂ ಗಂಗಣ್ಣನವರ ಕಡೆ ಕೈ ತೋರಿಸುತ್ತಿದ್ದೆ.  ಅಂತಹ ಸಂದರ್ಭದಲ್ಲಿ ಗಂಗಣ್ಣ ಬಹು ಸುಲಭವಾಗಿ ನುಣುಚಿಕೊಳ್ತಿದ್ದರು. 

 

ಈ ಗಂಗಣ್ಣನವರ ಮನೆಯಲ್ಲಿ ತನ್ನ ತಾಯಿ, ಪತ್ನಿ ಮತ್ತು ಎರಡು ಗಂದು ಮತ್ತು ಒಂದು ಹೆಣ್ಣು ಮಗುವಿದ್ದಿತು.  ಮೊದಲ ಮಗನಿಗೆ ೮ ವರ್ಷವಾಗಿದ್ದರೂ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ.   ಸ್ವಲ್ಪ ಪುಂಡಾಡಿಟಿಕೆ ಮಾಡುತ್ತಿದ್ದ ಹುಡುಗ.  ಅಪ್ಪ ಅಮ್ಮನನ್ನು ಸುಲಭವಾಗಿ ಮೋಸಗೊಳಿಸುತ್ತಿದ್ದ.  ಅವನ ಬಗ್ಗೆ ನಾನಷ್ಟು ಗಮನಿಸಿರಲಿಲ್ಲ.  ಅಂದು ರಾತ್ರಿ ಸ್ವಲ್ಪ ತಡವಾಗಿ ಮನೆಗೆ ಬಂದೆ.  ಕೆಳಗೆ ಗೇಟಿನ ಹತ್ತಿರ ಎರಡೂ ಆಟೋಗಳು ನಿಂತಿದ್ದವು.  ಒಂದು ಆಟೋವಿನಲ್ಲಿ ಈ ಹುಡುಗ ಕುಳಿತು ಏನನ್ನೋ ಮಾಡುತ್ತಿದ್ದಂತೆ ಕಂಡಿತು.  ಇಷ್ಟು ಹೊತ್ತಿನಲ್ಲಿ ಈ ಹುಡುಗ ಏನು ಮಾಡುತ್ತಿದ್ದಾನೆ ನೋಡೋಣ ಎಂದು ನಾನು ಆಟೋವಿನ ಒಳಗೆ ಬಗ್ಗಿ ನೋಡಲು, ಕಂಡದ್ದೇನು?  ಆ ಹುಡುಗ ಆಟೋದಲ್ಲಿನ ಪೆಟ್ರೋಲ್ ಟ್ಯಂಕ್ ಮುಚ್ಚಳ ತೆಗೆದು ವಾಸನೆ ಹೀರುತ್ತಿದ್ದ.  ನನ್ನನ್ನು ನೋಡುತ್ತಿದ್ದಂತೆಯೇ ಮನೆಯೊಳಗೆ ಓಡಿ ಹೋದ.  ಅಂದಿನಿಂದ ಆ ಹುಡುಗನ ಮೇಲೆ ನಿಗಾ ಇಡಲಾರಂಭಿಸಿದೆ.  ಪ್ರತಿ ದಿನ ಯಾರೂ ಇಲ್ಲದ ಸಮಯದಲ್ಲಿ ಈ ಹುಡುಗ ಯಾವುದಾದರೂ ಆಟೋ ನಿಂತಿದ್ದರೆ ಅದರ ಪೆಟ್ರೋಲ್ ಟ್ಯಾಂಕಿನ ಮುಚ್ಚಳ ತೆಗೆದು ವಾಸನೆ ಹೀರುತ್ತಿದ್ದ.  ಈ ವಿಷಯವನ್ನು ಗಂಗಣ್ಣನವರಿಗೆ ತಿಳಿಸಿದೆ.  ಅವರು ಹೇಳಿದಂತೆ ಈ ಹುಡುಗ ಮನೆಯೊಳಗೆ ಬರುತ್ತಿದ್ದಂತೆ ಮತ್ತು ಬಂದವನಂತೆ ಮಲಗಿಬಿಡುತ್ತಿದ್ದನಂತೆ.  ಆಗ ನಮ್ಮಿಬ್ಬರಿಗೆ ತಿಳಿದದ್ದು ಏನೆಂದರೆ, ಪೆಟ್ರೋಲ್ ವಾಸನೆ ಆ ಹುಡುಗನಿಗೆ ಮತ್ತು ಬರಿಸುತ್ತಿತ್ತು ಮತ್ತು ಅವನು ಅದರ ಚಟಕ್ಕೆ ಬಲಿಯಾಗುತ್ತಿದ್ದನು.  ಹುಡುಗನ ಮೇಲೆ ಹೆಚ್ಚಿನ ನಿಗಾ ಇಡಲು ಮತ್ತು ಅವನನ್ನು ಪ್ರತಿದಿನ ಸಂಜೆ ಒಂದು ಘಂಟೆಗಳ ಕಾಲ ನನ್ನ ಹತ್ತಿರ ಪಾಠಕ್ಕೆ ಕಳುಹಿಸಲು ಹೇಳಿದೆ.  ಹಾಗೆಯೇ ಒಮ್ಮೆ ಶಾಲೆಯ ಮಾಸ್ತರರನ್ನೂ ಭೇಟಿಯಾಗಿ, ಈ ಹುಡುಗನ ಬಗ್ಗೆ ಹೆಚ್ಚಿನ ನಿಗಾ ಇಡುವಂತೆ ಕೇಳಿಕೊಳ್ಳಲೂ ಗಂಗಣ್ಣನವರಿಗೆ ತಿಳಿಸಿದ್ದೆ. 

 

*****************

 

ಅದೇ (೧೯೮೫-೮೬) ಸಮಯದಲ್ಲಿ ಫುಟ್‍ಬಾಲ್ ವಿಶ್ವಕಪ್ ಪಂದ್ಯಗಳು ಪ್ರಾರಂಭವಾಗುತ್ತಿದ್ದವು.   ಅಲ್ಲಿಯವರೆವಿಗೆ ನನಗೆ ಕ್ರಿಕೆಟ್ ಬಿಟ್ಟು ಮತ್ತಿನ್ಯಾವ ಆಟಗಳಲ್ಲೂ ಅಭಿರುಚಿ ಇರಲಿಲ್ಲ.  ನನ್ನ ಸ್ನೇಹಿತ ಲಕ್ಷ್ಮೀನಾರಾಯಣ ಆ ಸಮಯದಲ್ಲಿ ಟಿವಿ ತೆಗೆದುಕೊಳ್ಳಲು ಹೇಳಿದ್ದ.  ಅಲ್ಲಿಯವರೆವಿಗೆ ನನ್ನ ಮನೆಯಲ್ಲಿ ಇದ್ದ ವಸ್ತುಗಳೆಂದರೆ ೩-೪ ಪಾತ್ರೆಗಳು, ಗ್ಯಾಸ್, ಒಂದು ಕುರ್ಚಿ, ಒಂದು ಚಾಪೆ, ಹೊದ್ದಿಕೆ, ಎರಡು ಬಕೆಟ್‍ಗಳಷ್ಟೇ. 

 

ಟಿವಿ ಎಲ್ಲಿ ತೆಗೆದುಕೊಳ್ಳಬೇಕು, ಯಾವುದು ಚೆನ್ನಾಗಿರುತ್ತದೆ ಏನೂ ತಿಳಿದಿರಲಿಲ್ಲ.  ಕಡೆಗೆ ಲಕ್ಷ್ಮೀನಾರಾಯಣನೇ ಒಂದು ಚಿಕ್ಕ ಡಯನೋರಾ ಟಿವಿ ಕೊಡಿಸಿದ್ದ.  ಟಿವಿ ಮನೆಗೆ ಬಂದ ಕೂಡಲೇ ದಿನವಹೀ ಸಂಜೆಗೆ ಏನೇ ಕಾರ್ಯಕ್ರಮ ಬರಲಿ,  ಸುತ್ತ ಮುತ್ತಲಿದ್ದ ಎಲ್ಲ ಮಕ್ಕಳೂ ಮನೆಯ ಬಾಗಿಲ ಹತ್ತಿರ ಬಂದು ಕುಳಿತುಬಿಡುತ್ತಿದ್ದರು.  ಏನೇ ಕಾರ್ಯಕ್ರಮ ಬಂದರೂ ನೋಡ್ತಿದ್ದ ನಾನು ಫುಟ್‍ಬಾಲ್ ಮ್ಯಾಚ್ ಇದ್ದಾಗ ರಾತ್ರಿಯೆಲ್ಲ ಜಾಗರಣೆ ಮಾಡ್ತಿದ್ದೆ.  ಹೀಗೆಯೇ ಒಮ್ಮೆ ಬೆಳಗಿನ ಜಾವ ೩ ಘಂಟೆಯವರೆವಿಗೂ ಮ್ಯಾಚ್ ನೋಡಿದವನು ಬೆಳಗ್ಗೆ ೭ ಘಂಟೆಗೆ ಎದ್ದಾಗ ಕಣ್ಣುರಿ.  ಸ್ನಾನ ಇತ್ಯಾದಿ ಮುಗಿಸಿ, ೮ ಘಂಟೆಯ ಹೊತ್ತಿಗೆ ಹೇಗೂ ಬ್ಯಾಂಕಿಗೆ ಹೊರಡಲು ಇನ್ನೂ ೧ ಘಂಟೆ ಇರುವುದೆಂದು, ಹಾಗೆಯೇ ಚಾಪೆಯ ಮೇಲೆ ಮಲಗಿದ್ದೆ.  ಯಾವಾಗ ನಿದ್ರೆ ಬಂದಿತೋ ತಿಳಿಯದು – ಮುಂದುಗಡೆಯ ಬಾಗಿಲನ್ನೂ ಹಾಕಿರಲಿಲ್ಲ.  ನನ್ನ ಸ್ನೇಹಿತ ಸೀದಾ ಮನೆಯೊಳಗೆ ಬಂದು ಮೈ ಮುಟ್ಟಿ ಎಬ್ಬಿಸಿದಾಗಲೇ ತಿಳಿದದ್ದು ಸಮಯ ೯.೩೦ ಆಗಿದೆ ಎಂದು.  ಹಾಗೆಯೇ ದಡ ಬಡಾಂತ ಬ್ಯಾಂಕಿಗೆ ಓಡಿದ್ದೆ.  ಮನೆಯಲ್ಲಿ ಏನನ್ನೂ ತಿನ್ನಲಾಗಿರಲಿಲ್ಲ ಮತ್ತು ಕ್ಯಾಂಟಿನಿಗೂ ಹೋಗಲು ಸಮಯ ಆಗಲಿಲ್ಲ. ರಾತ್ರಿ ಜಾಗರಣೆ ಆಗಿತ್ತು, ಬೆಳಗ್ಗೆ ಉಪವಾಸ. 

 

ಒಂದು ಭಾನುವಾರ ನಾವು ಸ್ನೇಹಿತರೆಲ್ಲರೂ ನಮ್ಮ ಸೈಟುಗಳಿದ್ದ ಜಾಗಕ್ಕೆ ಹೋಗೋಣ ಎಂದು ತೀರ್ಮಾನಿಸಿದ್ದೆವು.  ಜಯನಗರ ಕಾಂಪ್ಲೆಕ್ಸಿನ್ನಿಂದ ಮುಂದಕ್ಕೆ ಬಟಾಬಯಲು ಇದ್ದಿತ್ತು.  ಎಲ್ಲೋ ಅಲ್ಲಲ್ಲಿ ಒಂದೊಂದು ಮನೆಗಳ್ಳಿದ್ದಿತ್ತು ಅಷ್ಟೆ.  ಜೆ.ಪಿ.ನಗರಕ್ಕೆ ಬಸ್ಸುಗಳು ಸಹಿತ ಇರಲಿಲ್ಲ.  ನಡೆದೇ ಹೋಗಿದ್ದೆವು.  ಜೆಪಿ ನಗರದ ೧೫ನೇ ಕ್ರಾಸಿನಿಂದ ಮುಂದಕ್ಕೆ ರಸ್ತೆಯೂ ಸರಿಯಾಗಿರಲಿಲ್ಲ.  ಗದ್ದೆಯೆ ಮಧ್ಯದಿಂದ, ಕೆರೆಯ ಏರಿಯ ಮೇಲೆ ಹೋದಾಗ ಮುಂದೆ ಕಂಡದ್ದು ಒಂದು ದೊಡ್ಡ ಮಾವಿನ ತೋಪು.  ಅಲ್ಲಿ ಬೋರ್ಡ್ ಇರಲಿಲ್ಲ. ದೊಡ್ಡದಾದ ತೋಟದಲ್ಲಿ ಮೊದಲಿಗೆ ಕಾಣಿಸಿದ್ದೇ ಕಪ್ಪು ದ್ರಾಕ್ಷಿಗಳ ಬಳ್ಳಿಗಳು.  ಇದೇ ನಮ್ಮ ಸೊಸೈಟಿಯೆಂದು ತಿಳಿದೆವು.   ಸಣ್ಣ ಗೇಟ್ ಇದ್ದಿತ್ತು.  ಅದನ್ನು ತಳ್ಳಿಕೊಂಡು ಒಳ ಹೋದ ಕೂಡಲೇ ಅಲ್ಲಿದ್ದ ಮಾಲಿ ಬಂದು ಯಾರು ನೀವು, ನಿಮಗೇನು ಬೇಕು?’ ಎಂದು ಕೇಳಿದ.  ಅದಕ್ಕೆ ನಾವು ಇಲ್ಲಿ ಮುಂದೆ ಮನೆ ಕಟ್ಟುವವರು, ನಮ್ಮಗಳ ಸೈಟ್ ನೋಡಲು ಬಂದಿದ್ದೇವೆ‘, ಎಂದು ಹೇಳಿದೆವು.  ಅದಕ್ಕವನು, ‘ಈಗ ಇಲ್ಯಾವ ಸೈಟನ್ನೂ ಮಾಡಿಲ್ಲ, ಮಾಡಿದ ಮೇಲೆ ಬನ್ನಿ, ಈಗ ಒಳಗೆ ಬರೋ ಹಾಗಿಲ್ಲಎಂದ.   ಆಗ ನಮಗೆ ಬಲು ಕೋಪ ಬಂದಿತ್ತು, ‘ನಮ್ಮ ನೆಲಕ್ಕೆ ಕಾಲಿಟ್ಟ ನಮ್ಮನ್ನೇ ಯಾರು ಅಂತ ಕೇಳೋ ಇವನ್ಯಾವನು, ಅಂತ ಅಂದುಕೊಂಡು, ಪಕ್ಕದಲ್ಲೇ ಇದ್ದ ತೆಂಗಿನ ಮರ ನೋಡಿ ಸರಿ ಎರಡು ಎಳನೀರು ಕಿತ್ತುಕೊಡುಎಂದು ಹೇಳಿದೆವು.  ಅವನಂತೂ ನಮ್ಮ ಮೇಲೆ ಜಗಳ ಕಾಯಲು ಬಂದೇಬಿಟ್ಟ.  ಒಂದು ಸಲ ಹೇಳಿದರೆ, ನಿಮಗರ್ಥ ಆಗೋಲ್ವೇ?  ನಡೀರಿ ಆಚೆಗೆ‘.  ಅಷ್ಟು ಹೊತ್ತಿಗೆ ಸೊಸೈಟಿಯ ಡೈರೆಕ್ಟರುಗಳಲ್ಲೊಬ್ಬರಾದ ಈಶ್ವರಮೂರ್ತಿಗಳು ಬರುತ್ತಿರುವುದು ಕಾಣಿಸಿತು.  ಅವರಿಗೆ ನಮಸ್ಕಾರ ಹೇಳಿದೆವು.  ಅದಕ್ಕವರು, ‘ಇದೇನು ನೀವೆಲ್ಲಾ ಇಲ್ಲಿ?  ಇವತ್ತು ಪೂಜೆ ಇದೆ, ನಿಮಗೆಲ್ಲಾ ಹೇಳುವಂತೆ ಪುತ್ತೂರಾಯರಿಗೆ ಹೇಳಿದ್ದೆವು (ನಂತರ ಇದು ಸುಳ್ಳಿನ ಮಾತೆಂದು ತಿಳಿಯಿತು).  ಬಂದದ್ದು ಒಳ್ಳೆಯದೇ ಆಯ್ತು.  ನಡೀರಿ ಒಳಗೆ, ಅಲ್ಲಿ ಪೂಜೆ ಶುರು ಆಗತ್ತೆ‘, ಅಂದರು.  ಅಲ್ಲಿ ನೋಡಿದ್ರೆ ಬರಿ ಅವರುಗಳೇ (ಡೈರಕ್ಟರುಗಳು ಮತ್ತು ಅವರುಗಳ ಮನೆಯವರು) ತುಂಬಿದ್ದಾರೆ.  ಸಾಮಾನ್ಯ ಸದಸ್ಯರುಗಳ್ಯಾರೂ ಇಲ್ಲ.  ತೋಟವನ್ನು ಸುತ್ತಿ ಬರುವೆವು ಎಂದು ತಿಳಿಸಿದ್ದಕ್ಕೆ, ‘ಬನ್ನಿ ಜಾಗ ಪೂರ್ತಿಯಾಗಿ ತೋರಿಸುವೆ, ಲೇ! ನಾಯರ್ ಇವರುಗಳಿಗೆಲ್ಲಾ ಪರಮಾಯಿಷಿ ಎರಡೆರಡು ಎಳನೀರು ಕಿಟ್ಟು ಕೊಡೋಎಂದರು.  ನಮಗೆಲ್ಲಾ ಅತೀವ ಸಂತೋಷವಾಗಿತ್ತು.  ಈ ಸಲ ಚುನಾವಣೆ ಆದ್ರೆ ಇವರುಗಳಿಗೆ ಮತ ನೀಡಬೇಕೆಂದು ಮನಸ್ಸು ಮಾಡಿದ್ದೆವು.

 

ಅಲ್ಲಿದ್ದ ದ್ರಾಕ್ಷಿ ತೋಟ, ಸಪೋಟ ತೋಟ, ತೆಂಗಿನ ತೋಟ, ಮಾವಿನ ತೋಪು, ದಾಳಿಂಬೆ ತೋಟ ಇತ್ಯಾದಿ ಎಲ್ಲವನ್ನೂ ನೋಡಿ, ಸ್ವಲ್ಪ ಸರಕನ್ನು ಕಿತ್ತುಕೊಂಡಿದ್ದೆವು.  ಪೂಜೆ ಇದ್ದ ಸ್ಥಳಕ್ಕೆ ಮರುಳುವ ಸಮಯಕ್ಕೆ ಸರಿಯಾಗಿ ಎಲ್ಲರೂ ಊಟಕ್ಕೆ ಕಾಯ್ತಿದ್ದರು.  ಸಕ್ಕರೆ ಪೊಂಗಲ್ ಮತ್ತು ಪುಳಿಯೋಗರೆಗಳನ್ನು ಒಳಗೊಂಡಿದ್ದ ಸುಗ್ರಾಸ ಭೋಜವನಕ್ಕೆ ಮನ ಸೋತಿದ್ದೆವು.  ವಾಪಸ್ಸು ಬರುವಾಗ ಮತ್ತೆ ಆ ಮಾಲಿ ನೋಡುತ್ತಿದ್ದಂತೆಯೇ ಒಂದಷ್ಟು ದ್ರಾಕ್ಷಿಗಳನ್ನು ಕಿತ್ತು ನಮ್ಮ ನಮ್ಮ ಚೀಲಗಳಿಗೆ ತುಂಬಿಸಿಕೊಂಡು ಅವನೆಡೆಗೆ ಕುಹಕ ನಗೆ ಬೀರಿದ್ದೆವು.  ಅಂದು ಮಾಡಿದ್ದು ಸರಿಯಲ್ಲವೆಂದು ಇಂದು ಅನ್ನಿಸುತ್ತಿದೆ.  ಆದರೇನು ಇವೆಲ್ಲಾ ಜೀವನದ ಒಂದೊಂದು ಆಯಾಮಗಳು.  ಮತ್ತೆ ಮತ್ತೆ ಮೆಲುಕು ಹಾಕಲು ಸರಕುಗಳು.

 

 

**************

 

ಬ್ಯಾಂಕಿನ ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಮಾಡುವವರಿಗೆ ಹೊಸ ನೋಟುಗಳನ್ನು ತಾಲ್ಲೂಕುಗಳಲ್ಲಿರುವ ಕರೆನ್ಸಿ ಚೆಸ್ಟ್‍ಗಳಿಗೆ ತೆಗೆದುಕೊಂಡು ಹೋಗುವ ಅವಕಾಶ ಸಿಗುತ್ತದೆ.  ಅದನ್ನು ರೆಮಿಟೆನ್ಸ್ ಡ್ಯೂಟಿ ಎಂದು ಕರೆಯುವರು.  ಮೊದಲ ಬಾರಿಗೆ ಗುಲ್ಬರ್ಗಾ ಜಿಲ್ಲೆಯ ಗುರುಮಠಕಲ್ಲಿಗೆ ಹೋಗಿದ್ದೆ.  ಅಲ್ಲಿಯ ಸಂಚಾರ ವ್ಯವಸ್ಥೆ, ರಸ್ತೆಗಳು ಮತ್ತು ಬಿಸಿಲಿನ ಬಗ್ಗೆ ಹೇಳುವುದಕ್ಕಿಂತ ಅನುಭವಿಸಿದರೇ ತಿಳಿಯುವುದು. 

 

ಬೆಂಗಳೂರಿನಿಂದ ಟ್ರೈನ್‍ನಲ್ಲಿ ಯಾದಗಿರಿಗೆ ಹೋಗಿ ಅಲ್ಲಿಂದ ಮುಂದಕ್ಕೆ ರಸ್ತೆಯ ಮೂಲಕ ಗುರುಮಠಕಲ್ಲಿಗೆ ಹೋಗಿದ್ದೆ.   ೫೦ ಕಿಲೋಮೀಟರ್ ಗಳ ರಸ್ತೆಯ ದೂರವನ್ನು ಕ್ರಮಿಸಲು ತೆಗೆದುಕೊಂಡ ವೇಳೆ ಮೂರು ಘಂಟೆಗಳು.  ಗುರುಮಠಕಲ್ ಇರುವುದು ಆಂಧ್ರಪ್ರದೇಶದ ಗಡಿಯಲ್ಲಿ.  ಇದೊಂದು ಸಣ್ಣ ಊರು.  ವ್ಯಾಪಾರಕ್ಕಾಗಿ ಆಂಧ್ರದಿಂದ ಇಲ್ಲಿಗೆ ಬರುವವರು ಬಹಳ ಮಂದಿ.  ಹತ್ತಿರದಲ್ಲೇ ಇರುವ ಆಂಧ್ರದ ನಾರಾಯಣಪೇಟೆಗೆ ಕನ್ನಡಿಗರು ವ್ಯಾಪಾರಕ್ಕಾಗಿ ಹೋಗುವರು.  ಈ ಊರಿನಲ್ಲಿ ೩-೪ ರಸ್ತೆಗಳಲ್ಲಷ್ಟೇ ಜನಸಂದಣಿ.  ಬಸ್ ನಿಲ್ದಾಣದ ಹತ್ತಿರ ಇರುವುದೊಂದೇ ಹೊಟೆಲ್.  ಒಂದೆರಡು ಖಾನಾವಳಿಗಳಿವೆಯಷ್ಟೆ.   ಊರು ಬಸ್ ನಿಲ್ದಾಣದಿಂದ ಪ್ರಾರಂಭವಾಗುವುದು.  ಅನತಿ ದೂರಿದಲ್ಲಿ ಟ್ರಾವಲರ್ಸ್ ಬಂಗಲೆ ಇದೆ.  ಅಲ್ಲಿಂದ ಸ್ವಲ್ಪ ದೂರ ಹೋಗಲು ಗಡಿ ಭಾಗ ಬರುವುದು.  ಇಲ್ಲಿ ಜನಗಳಾಡುವ ಭಾಷೆಯಲ್ಲಿ ಉರ್ದು, ತೆಲುಗು ಮಿಶ್ರಿತವಾದ ಕನ್ನಡ. 

 

ರಸ್ತೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ  ನಡೆದಾಡುವುದು ಬಲು ಕಷ್ಟ.  ತಲೆಯ ಮೇಲೆ ಉರಿ ಬಿಸಿಲು.  ಕೆಳಗೆ ಕಾದ ನೆಲ.  ಅನೇಕ ಹಳ್ಳಿಗರು ಬರಿಗಾಲಿನಲ್ಲಿ ಅದು ಹೇಗೆ ನಡೆಯುತ್ತಾರೋ ಏನೋ?  ಹಲವರ ಚಪ್ಪಲಿಗಳನ್ನು ಟೈರುಗಳಿಂದ ಮಾಡಿರುತ್ತಾರೆ.  ಎಲ್ಲೆಲ್ಲಿಯೂ ಉಷ್ಣವಿರುದುರಿಂದ ಇಲ್ಲಿಯ ಜನಗಳು ಹಸಿಮೆಣಸಿನಕಾಯಿಯನ್ನು ಹಾಗೆಯೇ ತಿಂದರೂ ಜೀರ್ಣಿಸಿಕೊಳ್ಳಬಲ್ಲರು – ಅವರಿಗೆ ಅದು ಹೆಚ್ಚಿನ ಖಾರವೆನಿಸುವುದಿಲ್ಲ.    ನಾನು ಅಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದಿಗೆ ಹೋಗಿದ್ದೆ.  ಅಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಒಬ್ಬರು ಬೆಂಗಳೂರಿನವರಿದ್ದರು.  ಈಗ ಅವರ ಹೆಸರು ನೆನಪಿಲ್ಲ.  ಬಹುಶ: ಮುರಳಿ ಅಂತ ಇರಬೇಕು.    ಆ ಊರಿನಲ್ಲಿ ಹೊಟೆಲ್ ಇಲ್ಲದಿರುವುದರಿಂದ, ಉಳಿದುಕೊಳ್ಳಲು ಕಷ್ಟವಾಗುವುದೆಂದು ತಮ್ಮ ಕೋಣೆಗೆ ಬರಲು ಹೇಳಿದ್ದರು.  ಊಟಕ್ಕೆ ವಸತಿಗೆ ಎಲ್ಲಿ ಹೋಗಬೇಕೆಂದು ಯೋಚಿಸುತ್ತಿದ್ದ ನನಗೂ ಅದೇ ಬೇಕಿತ್ತು.  ನಾನಲ್ಲಿದ್ದದ್ದು ೧೦ ದಿನಗಳ ಕಾಲ.  ಬೆಳಗ್ಗೆ ಸ್ನಾನ ಮಾಡಲು ಅವಕಾಶವಿರಲಿಲ್ಲ.   ಕುಡಿಯುವ ನೀರಿಗೆ ಮಾತ್ರ ಬಹಳ ತೊಂದರೆ ಇದೆ.  ಇದೊಂದು ಬರಪೀಡಿತ ಪ್ರದೇಶ.  ಇವರಿದ್ದ ಬೀದಿಯಲ್ಲಿ, ಪ್ರತಿ ದಿನ ಮಧ್ಯಾಹ್ನ ೧ ಘಂಟೆಗೆ ಒಂದು ಘಂಟೆಗಳ ಕಾಲ ಬೀದಿ ನಲ್ಲಿಯಲ್ಲಿ ನೀರು ಬರುತ್ತಿತ್ತು.  (ಆದರೆ ಬ್ಯಾಂಕಿಗೆ ಮಾತ್ರ ನೀರಿನ ಬೇರೆ ವ್ಯವಸ್ಥೆ ಇತ್ತು).  ನೀರು ಬರುವ ಸಮಯದಲ್ಲಿ ಸಾರ್ವಜನಿಕರೆಲ್ಲರೂ ಮನೆಯ ಹತ್ತಿರದ ನಲ್ಲಿಗಳ ಮುಂದೆ ಸರತಿಯ ಸಾಲಿನಲ್ಲಿ ನಿಂತಿರುವುದನ್ನು ನೋಡುವುದು ಒಂದು ಸಾಮಾನ್ಯ ದೃಶ್ಯ.  ಇದರ ಬಗ್ಗೆ ನನಗೆ ತಿಳಿಯದ ನಾನು ಮೊದಲನೆಯ ದಿನ ಮಧ್ಯಾಹ್ನ ಕ್ಯಾಷಿಯರ್ ಎಲ್ಲಿ ಎಂದು ಕೇಳಿದ್ದಕ್ಕೆ, ಅಲ್ಲಿದ್ದವರೊಬ್ಬರು ಜಳಕ ಮಾಡ್ಲಿಕ್ ಹೋಗ್ಯಾರ್ರೀಎಂದಾಗ ಅವಾಕ್ಕಾಗಿದ್ದೆ.  ಮಾರನೆಯ ದಿನ ಬೆಳಗ್ಗೆ (ಅಲ್ಲಿ ಅದು ನನ್ನ ಮೊದಲ ಬೆಳಗ್ಗೆ), ನನ್ನ ಸ್ನೇಹಿತರು ಶೌಚ ಕರ್ಮಗಳಿಗೆ ಬ್ಯಾಂಕಿಗೆ ಹೋಗಿಬರೋಣ, ನಿಮ್ಮಿಂದಾಗಿ ನಮಗೂ ಬ್ಯಾಂಕಿನ ನೀರು ಉಪಯೋಗಿಸುವ ಅವಕಾಶವನ್ನು ಮ್ಯಾನೇಜರ್ ಮಾಡಿಕೊಟ್ಟಿದ್ದಾರೆ ಎಂದು ಸಂತೋಷದಿಂದ ಹೇಳಿದ್ದರು.   ಅಂದಿನಿಂದ ನಾನಿರುವವರೆವಿಗೂ ಅವರಿಗೂ ಬ್ಯಾಂಕಿನಲ್ಲೇ ಬೆಳಗಿನ ಸ್ನಾನದ ಅವಕಾಶವೂ ಸಿಕ್ಕಿತ್ತು.  ನನಗೆ ಪ್ರತಿದಿನ ಅನ್ನ ಸಾರು ಮೊಸರಿನ ಊಟದ ಸಿಗುತ್ತಿತ್ತು.  ನನ್ನಿಂದ ಅವರೂ ಒಂದೆರಡು ಸುಲಭದ ಅಡುಗೆ ವಿಧಾನವನ್ನು ಕಲಿತಿದ್ದರು.

 

ಈ ಮಧ್ಯೆ ಎರಡು ದಿನಗಳ ರಜೆ ಸಿಕ್ಕಿದುದರಿಂದ, ಹತ್ತಿರವಿರುವ ಊರುಗಳನ್ನು ನೋಡಿ ಬರಲು ನನ್ನ ಇನ್ನೊಬ್ಬ ಸ್ನೇಹಿತರಾದ ಡಿ.ಎಮ್.ಪಾಟೀಲರು ಕರೆದಿದ್ದರು.  ಅವರು ಹೋಗಿದ್ದುದು ಹುನಗುಂದಕ್ಕೆ.  ನಾನು ಗುರುಮಠಕಲ್ಲಿನಿಂದ ಹುನಗುಂದಕ್ಕೆ ಹೋಗಬೇಕಿತ್ತು.  ಯಾದಗಿರಿಗೆ ಬಂದು ಅಲ್ಲಿಂದ ನಾರಾಯಣಪುರ ಅಣೆಕಟ್ಟು ದಾಟಿ ಹುನಗುಂದ ಬಂದು ಸೇರಲು ತೆಗೆದುಕೊಂಡ ಸಮಯ ೫ ಘಂಟೆಗಳು.  ಅಂದು ರಾತ್ರಿ ಅವರೊಂದಿಗೆ ಇದ್ದು ಮಾರನೆಯ ದಿನ ಬೆಳಗ್ಗೆ ವಿಜಾಪುರಕ್ಕೆ ಹೋಗಿದ್ದೆವು.  ನೋಡಲು ವಿಜಾಪುರವು ಒಂದು ಉತ್ತಮ ಪ್ರೇಕ್ಷಣೀಯ ಸ್ಥಳ.  ಗೋಲಗುಂಬಝ್ ಬಹಳ ದೊಡ್ಡದಾದ ಗೋಲಾಕಾರದ ಕಟ್ಟಡ.  ಗೋಡೆಯ ಒಂದು ಭಾಗದಲ್ಲಿ ಪಿಸು ಮಾತನಾಡಿದರೂ ಇನ್ನೊಂದು ಭಾಗದ ಗೋಡೆಗೆ ಕಿವಿಗಾನಿಸಿಕೊಳ್ಳಲು ಅದು ಕೇಳಿಸುವುದು.  ಯಾವ ತಾಂತ್ರಿಕತೆ ಉಪಯೋಗಿಸಿ ಇದನ್ನು ಕಟ್ಟಿದ್ದಾರೋ ತಿಳಿಯದು.  ತಾಜ ಮಹಲಿಗಿಂತ ಯಾವ ದೃಷ್ಟಿಯಲ್ಲೂ ಕಡಿಮೆ ಇಲ್ಲದ ಕಟ್ಟಡ.  ಈ ಗೋಲಾಕೃತಿಯನ್ನು ರೋಮ್ ನಲ್ಲಿರುವ ಸೈಂಟ್ ಬಸಿಲಿಕಾ ಮಾದರಿಯಲ್ಲಿ ಕಟ್ಟಿದ್ದಾರಂತೆ.   ಹಾಗೇ ಅಲ್ಲಿರುವ ಬಾರಾಕಮಾನು (ಹನ್ನೆರಡು ಕಮಾನುಗಳು) ಬೇಲೂರಿನ ನಾಟ್ಯಗೃಹವನ್ನು ನೆನಪಿಸುತ್ತದೆ.  ಹಾಗೆಯೇ ಕೋಟೆ ಮತ್ತು ಅಲ್ಲಿರುವ ಉಪಯೋಗಿಸಿದೇ ಬಿದ್ದಿರುವ ತೋಪುಗಳನ್ನೂ ಕಾಣಬಹುದು.  ಇನ್ನುಳಿದ ನೋಡುವ ತಾಣಗಳೆಂದರೆ ಇಬ್ರಾಹಿಮ್ ರೌಝಾ, ಮಲಿಕ್ ಕೇ ಮೈದಾನ್, ಜುಮ್ಮಾ ಮಸೀದಿ, ಮೆಹ್ತರ್ ಮಹಲ್, ತಾಜ್ ಬಾವಡಿ, ಅಸಾರ್ ಮಹಲ್ ಮತ್ತು ಗಗನ ಮಹಲ್.  ಇಷ್ಟೆಲ್ಲಾ ನೋಡುವಂತಹ ಸ್ಥಳಗಳಿದ್ದರೂ ಪ್ರವಾಸಿಗಳಿಗೆ ಹೆಚ್ಚಿನ ಅನುಕೂಲತೆಗಳು ಇಲ್ಲದಿರುವುದು ಖೇದದ ವಿಷಯ.  ಇಷ್ಟೇಲ್ಲವನ್ನೂ ಒಂದು ದಿನಗಳಲ್ಲಿ ನೋಡುವುದು ಕಷ್ಟ.  ಆದರೂ ಅಲ್ಲಿರುವ ಕುದುರೆಗಾಡಿಯವರ ಹತ್ತಿರ ಚೌಕಾಶಿ ಮಾಡಿ ೨೦ ರೂಪಾಯಿಗಳಿಗೆ ನಾವು ನೋಡಿದ್ದೆವು.  ಮತ್ತೆ ಅಲ್ಲಿಂದ ನೇರವಾಗಿ ಗುರುಮಠಕಲ್ಲಿಗೆ ಬಂದಿದ್ದೆ. 

 

ಮರಳಿ ಬೆಂಗಳೂರಿಗೆ ಬರಲು ಭಾನುವಾರಕ್ಕೆ ಟ್ರೈನ್‍ನಲ್ಲಿ ಅವಕಾಶ ಸಿಕ್ಕಿತ್ತು.  ಅದಕ್ಕಾಗಿ ಯಾದಗಿರಿಗೆ ಶನಿವಾರವೇ ಬಂದು ಅಲ್ಲಿದ್ದ ಇನ್ನೊಬ್ಬ ಸ್ನೇಹಿತನ ಕೋಣೆಯಲ್ಲಿ ಇದ್ದೆ.   ಆ ಸ್ನೇಹಿತನೂ ನನ್ನ ಹಾಗೆಯೇ ಯಾದಗಿರಿಗೆ ಬಂದಿದ್ದನು.  ಅಲ್ಲಿ ಲಾಡ್ಜ್ ಇದ್ದುದರಿಂದ ಅವನಿಗೆ ಪ್ರತ್ಯೇಕವಾಗಿ ಇರಲು ಅವಕಾಶ ಸಿಕ್ಕಿತ್ತು.  ಅಲ್ಲಿ ಪ್ರತಿ ದಿನದ ಊಟ ಖಾನಾವಳಿಯಲ್ಲಿ.  ಖಾನಾವಳಿ ಎಂದರೆ ಹೊಟೆಲ್ ಇದ್ದಂತೆಯೇ, ಆದರೆ ಮನೆಗಳಲ್ಲಿ ಅಡುಗೆ ಮಾಡಿ ಊಟ ಬಡಿಸುವರು.  ಆದರಲ್ಲಿ ಖಾರ ತಿನ್ನುವುದು ಬಹಳ.  ಅಲ್ಲದೇ ರೊಟ್ಟಿ (ಒಣ ಚಪಾತಿ) ಜೊತೆಗೆ ಅನ್ನ ಕೊಡುವುದು ಕಡಿಮೆ.  ಸಾಂಬಾರ್, ಸಾರಿನ ಸುದ್ದಿಯೇ ಇಲ್ಲ.  ಒಳ್ಳೆಯ ಮೊಸರೊಂದು ಸಿಗುವುದಷ್ಟೆ.  ದಕ್ಷಿಣ ಕರ್ನಾಟಕದಿಂದ ಬಂದಿದ್ದಾರೆ ಅಂದ್ರೆ, ಅನ್ನ ಮೊಸರು ಕೊಡುವರು.  ಯಾದಗಿರಿಯಲ್ಲಿ ಭಾನುವಾರದಂದು ಬೆಳಗ್ಗೆ ರೈಲ್ವೇ ಸ್ಟೇಷನ್ನಿನ ಹತ್ತಿರವಿದ್ದ ಒಂದು ಹೊಟೆಲ್‍ಗೆ ಉಪಹಾರಕ್ಕಾಗಿ (ಉತ್ತರ ಕರ್ನಾಟಕದಲ್ಲಿ ತಿಂಡಿ ಎಂದರೆ ಕೆರೆತ ಎಂಬರ್ಥ) ಹೋಗಿದ್ದೆವು.  ಅದರಲ್ಲಿಯ ಮಾಲಿಕ ಉಡುಪಿಯ ಕಡೆಯವರೆಂದು ತಿಳಿಯಿತು.  ನನ್ನ ಸ್ನೇಹಿತ ಕೋಟದವನಾದ್ದರಿಂದ, ಅವರನ್ನು ಯಾವ ಊರಿನವರೆಂದು ಕೇಳಿದ್ದ.  ಅವರು ಶಂಕರನಾರ್‍ಆಯಣ ಎನ್ನಲು, ಇವನು ತನ್ನ ಪ್ರವರ ಹೇಳಿದನು.  ಅದಕ್ಕವರು ಓಹ್ ನಿಮ್ಮ ತಂದೆ ನನಗೆ ಶಾಲೆಯಲ್ಲಿ ಮಾಸ್ತರರಾಗಿದ್ದರು ಎಂದಿದ್ದರು.  ಈ ಮಾತುಗಳು ಅವನಿಗೆ ಬಹಳ ಸಂತಸ ತಂದಿತ್ತು.  ಅವನಿನ್ನೂ ಕೆಲ ಕಾಲ ಅಲ್ಲಿರಬೇಕಿದ್ದರಿಂದ ನಾನು ಅಂದಿನ ಟ್ರೈನಿನಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದೆ.