ವಿಭಾಗಗಳು
ಲೇಖನಗಳು

ಕೊಲೆಗಡುಕ – ಹೇಗೆ?

 ಈ ಲೇಖನ ಇಲ್ಲಿ ಪ್ರಕಟವಾಗಿದೆ

ಇತ್ತೀಚೆಗೆ ದಕ್ಷಿಣ ಮುಂಬಯಿಯ ಜನಗಳನ್ನು ತಲ್ಲಣಗೊಳಿಸಿದ ಒಬ್ಬ ಮನುಷ್ಯನ ಬಗ್ಗೆ ಎಲ್ಲರೂ ಪತ್ರಿಕೆಗಳಲ್ಲಿ ಓದಿರಬಹುದು.  ಬೀರ್ ಮ್ಯಾನ್‘ – ದಿ ಸೀರಿಯಲ್ ಕಿಲ್ಲರ್ ಆಫ್ ಸೌತ್ ಮುಂಬಯಿ ಎಂದೇ ಈತ ಕೆಲವೇ ದಿನಗಳಲ್ಲಿ ಪ್ರಸಿದ್ಧನಾದನು.  ಈ ಮನುಷ್ಯ ವಿನಾಕಾರಣ ಅಮಾಯಕರನ್ನು ಅಮಾನುಷವಾಗಿ ಕೊಲೆ ಮಾಡುತ್ತಿದ್ದನು.  ಅವನೇನು ಕಳ್ಳತನಕ್ಕಾಗಿ ಕೊಲೆ ಮಾಡುತ್ತಿರಲಿಲ್ಲ.  ವಿಕೃತ ಮನುಷ್ಯನಂತೆ ತೋರುತ್ತಿದ್ದ.  ಅವನನ್ನು ಸೆರೆ ಹಿಡಿದು, ವೈದ್ಯಕೀಯ ತಪಾಸಣೆ ಮಾಡುತ್ತಿದ್ದಾರೆ. 

                                   serial_killer.jpg

ಇದೇ ರೀತಿಯಲ್ಲಿ ಉತ್ತರ ಮುಂಬಯಿಯ ಬೊರಿವಿಲಿಯ ಸುತ್ತಮುತ್ತಣ ಪ್ರದೇಶಗಳಲ್ಲಿ ಇನ್ನೊಬ್ಬ ವಿಕೃತ ವ್ಯಕ್ತಿ, ಇಳಿ ಸಂಜೆಯ ಕತ್ತಲಿನಲ್ಲಿ ಆಟೋ ಹತ್ತುವ ಮಹಿಳೆಯರನ್ನು ಮಚ್ಚಿನಿಂದ ಹೊಡೆದು ಘಾಸಿಗೊಳಿಸುತ್ತಿದ್ದನು.  ಆದರೆ ಅವನು ಆ ಮಹಿಳೆಯರು ಧರಿಸಿರುವ ಆಭರಣಗಳನ್ನು ಕಸಿಯಲು ಪ್ರಯತ್ನಿಸುತ್ತಿದ್ದನು. 

 

ಈ ಇಬ್ಬರೂ ೧೦ ರಿಂದ ೧೨ ದಿನಗಳವರೆವಿಗೆ ಪೊಲೀಸರ ಕೈಗೆ ಸಿಕ್ಕದಂತೆ ಅಮಾನುಷ್ಯ ಕೃತ್ಯಗಳಲ್ಲಿ ತೊಡಗಿ ಕೊನೆಗೆ ಸಿಕ್ಕಿಬಿದ್ದರು.  ಇಲ್ಲಿ ನಾನು ಈ ಕೃತ್ಯಗಳ ಬಗ್ಗೆ ವರದಿಯನ್ನು ನೀಡುತ್ತಿಲ್ಲ.  ಹೀಗೇಕೆ ಆಗುತ್ತಿದೆ, ಆಗುತ್ತದೆ, ಈ ಜನಗಳು ಹೀಗೆ ಮಾಡಲು ಕಾರಣವೇನು, ಇವರು ಹೀಗೆ ಮಾಡದಿರುವಂತೆ ಮಾಡಲು ಮುಂಜಾಗ್ರತೆಯಾಗಿ ಏನು ಮಾಡಬಹುದು, ಮಾಡಬೇಕು, ಮಾಡುತ್ತಿದ್ದೇವೆ, ಈ ವಿಷಯಗಳ ಬಗ್ಗೆ ನನ್ನ ಮನದಲ್ಲಿ ಮೂಡುತ್ತಿರುವ ನಾಲ್ಕಾರು ಅಂಶಗಳನ್ನು ಇಲ್ಲಿ ಬರಹದ ಮೂಲಕ ಪ್ರಸ್ತುತ ಪಡಿಸುತ್ತಿರುವೆ. 

 

ನಮ್ಮ ದೇಶದಲ್ಲಿ ಮೊತ್ತ ಮೊದಲಿಗೆ ಕಂಡು ಬರುವ ಅಂಶವೆಂದರೆ ಬಡತನ.  ಅದರ ಜೊತೆಗೆ ಅವಿದ್ಯಾವಂತಿಕೆ ಮತ್ತು ನಿರುದ್ಯೋಗವೂ ಅಂಟಿಕೊಂಡಿರುವುದು.     ಹೆಚ್ಚಿನ ಜನಗಳಿಗೆ ಹೊಟ್ಟೆಗೆ ಸರಿಯಾಗಿ ಎರಡು ಹೊತ್ತಿನ ಕೂಳು ಸಿಕ್ಕುವುದು ಕಷ್ಟಕರವಾದುದರಿಂದ, ಸುಲಭವಾಗಿ ಹೊಟ್ಟೆ ಹೊರೆದುಕೊಳ್ಳಲು, ಕಳ್ಳತನ, ಕೊಲೆ, ಸುಲಿಗೆ, ದರೋಡೆ ಮುಂತಾದ ದುಷ್ಕೃತ್ಯಗಳಿಗೆ ಮೊರೆ ಹೋಗುವರು.  ಹಾಗೆಯೇ ಸುಲಭದಿ ಕೈಗೆ ದುಡ್ಡು ಸಿಗುವುದರಿಂದ, ನಾಳಿನ ಬಗ್ಗೆ ಚಿಂತೆ ಇರುವುದಿಲ್ಲದ ಕಾರಣ,  ಹಣ ಗಳಿಕೆಯ ಮಹತ್ವವವನ್ನರಿಯದವರು ದುಂದುಗಾರಿಕೆ ಮಾಡುವರು.  ಇದರಿಂದ ದುಶ್ಚಟಗಳಿಗೆ ದಾಸರಾಗುವರು.  ಯಾವಾಗ ನಾಳಿನ ಚಿಂತೆ ಇಲ್ಲದೇ, ಇಂದಿನ ಜೀವಿತವನ್ನು ಮಾತ್ರ ಕಾಣುತ್ತಿರುವರೋ, ಆ ಸಮಯದಲ್ಲಿ ಮರುದಿನ ಎಲ್ಲಿಯೂ ಹಣ ದೊರೆಯದಿದ್ದರೆ, ದುಷ್ಕೃತ್ಯ ಮಾಡಲಾಗದಿದ್ದರೆ, ಭಿಕ್ಷೆ ಬೇಡುವರು.  ಕೆಲವೊಮ್ಮೆ ಪೊಲೀಸರ ಕೈಗೂ ಸಿಕ್ಕು, ಸೆರೆವಾಸ ಅನುಭವಿಸುವರು.  ನಮ್ಮ ದೇಶದಲ್ಲಿ ನ್ಯಾಯಾಂಗ ಕಠಿಣ ಶಿಕ್ಷೆಯನ್ನು ವಿಧಿಸದಿದುರಿಂದ, ಮತ್ತು ದುಷ್ಕೃತ್ಯವನ್ನು ನಿಖರವಾಗಿ ಸಾಬೀತು ಪಡಿಸದೇ ಶಿಕ್ಷೆಯನ್ನು ವಿಧಿಸದಿರುವುದರಿಂದ ಇಂತಹ ಸಮಾಜ ಘಾತುಕರು ಬಹಳ ಸುಲಭವಾಗಿ ಮರಳಿ ತಮ್ಮ ಕೆಲಸಗಳಿಗೆ ಮರಳುವರು. ಆ ವೇಳೆಗಾಗಲೇ ಪೊಲೀಸರ ಬೆತ್ತದ ರುಚಿಯನ್ನು ಕಂಡು, ಘಾಸಿಗೊಂಡ ಹುಲಿಯಂತಾದವರು, ಇನ್ನೂ ಹೆಚ್ಚಿನ ಗತಿಯಲ್ಲಿ ಅಮಾನುಷ ಕೃತ್ಯಗಳನ್ನು ಎಸಗುವರು.  ಇಂತಹವರುಗಳನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ರಾಜಕಾರಣಿಗಳು ಪೋಷಿಸುವುದೂ ಕಂಡು ಬರುತ್ತಿದೆ.  ಇಂತಹವರ ಕುಟುಂಬಗಳು ಗುಡಿಸಲುಗಳಲ್ಲಿ  ಇಲ್ಲದಿದ್ದರೆ ರಸ್ತೆ ಬದಿಯಲ್ಲಿ  ವಾಸಿಸುವರು.  ಇಂತಹವರು ವಿದ್ಯೆಯ ಮಹತ್ವವನ್ನರಿಯದಿದ್ದುದರಿಂದ ಮತ್ತು ಇವರುಗಳಿಗೆ ತಿಳಿಹೇಳುವವರೂ ಯಾರೂ ಹೆಚ್ಚಿನ ಸಂಖ್ಯೆಯಲ್ಲಿಲ್ಲದಿರುವುದರಿಂದ, ಇವರುಗಳ ಸಂತತಿಯೂ ಇದೇ ಕಾಯಕದಲ್ಲಿ ನಿರತರಾಗುವರು.  ಇದೊಂದು ವಿಷವರ್ತುಲ.    ಸಮಾಜದ ಒಳಿತಿನ ಹೊಣೆಯನ್ನು ನಾಗರಿಕರಾದ ನಾವೆಲ್ಲರೂ ಹೊರಲೇಬೇಕು.  ಈ ದಿಸೆಯಲ್ಲಿ ಮೊದಲಿಗೆ ಸುಲಭದಲ್ಲಿ ವಿದ್ಯೆಯನ್ನು ಕೊಡಿಸಿ, ಈ ವಿಷವರ್ತುಲದಿಂದ ಭೇದಿಸಿ, ಸಮಾಜ ಶಕ್ತಿಯಾಗಲು ಇಂತಹವರನ್ನು ಪೋಷಿಸಲು

ಮುಂದಾಗೋಣವೇ?

 

ಇನ್ನು ಈ ಬೀರ್‌ಮ್ಯಾನ್ ಬಗ್ಗೆ ತಿಳಿದುಬಂದ ಒಂದೆರಡು ಅಂಶಗಳನ್ನು ತಿಳಿಸಲಿಚ್ಛಿಸುವೆ.    ಸ್ವಲ್ಪ ಧೈರ್ಯ ತೋರಿಸಿ, ತನಗಾಗುವ ಘಾಸಿಯ ಕಡೆಗೆ ಗಮನ ಕೊಡದೇ ಮುನ್ನುಗ್ಗಿದರೆ, ಯಾರೂ ಎದುರು ನಿಲ್ಲುವುದಿಲ್ಲ.  ಎಷ್ಟೋ ಬಾರಿ ಸಣ್ಣಗಿದ್ದು, ಮೈನಲ್ಲಿ ಸರಿಯಾಗಿ ಶಕ್ತಿ ಇಲ್ಲದವರು ಹೆಚ್ಚಿನ ಶಕ್ತಿಯುತರನ್ನು ಹೆದರಿಸಿರುವ ಸಂದರ್ಭವನ್ನು ಎಲ್ಲರೂ ನೋಡಿರುವುದೇ ತಾನೆ!  ಈ ಮನುಷ್ಯನ (ಬೀರ್‌ಮ್ಯಾನ್), ಹೆಸರು ಕೆಲವೊಮ್ಮೆ ರವೀಂದ್ರ ಆದರೆ, ಇನ್ನು ಕೆಲವೊಮ್ಮೆ ರಹೀಮ್.  ಈತ ತನ್ನ ಕುಟುಂಬದೊಂದಿಗೆ ಮರೀನ್ ಲೈನ್ಸ್ ಹತ್ತಿರದ ರಸ್ತೆ ಬದಿಯಲ್ಲಿ ವಾಸವಾಗಿದ್ದನಂತೆ.  ಪೊಲೀಸರ ಕೈಗೆ ಸಿಕ್ಕಿ ಬಿದ್ದ ಮೇಲೆ ಈತನ ಕುಟುಂಬ ಈಗಲೂ ರಸ್ತೆ ಬದಿಯಲ್ಲಿಯೆ ವಾಸ ಇದೆಯಂತೆ.  ಪೊಲೀಸರು ಮಂಪರು ಪರೀಕ್ಷೆಗೆ ಗುರಿಪಡಿಸಿ, ಸತ್ಯಾಂಶ ಹೊರಹಾಕಿಸಿದಾಗ ತಿಳಿದ ಸುದ್ಧಿಯಂತೆ,  ವಸ್ತುತಃ ಈತ ಮುಸ್ಲಿಮನಾಗಿದ್ದು, ಮುಸ್ಲಿಮರಲ್ಲಿ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದವರ ಮೇಲೆ ಎರಗುತ್ತಿದ್ದನಂತೆ.  ಅದಲ್ಲದೇ ಇವನನ್ನು ಹಿಡಿದಿರುವ ಪೊಲೀಸರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದೂ, ತಾನು ಮುಕ್ತನಾಗಿ ಹೊರಗೆ ಬಂದ ಕೂಡಲೇ ಅವರ ಮೇಲೆ ಎರಗುವುದು ಖಂಡಿತವೆಂದೂ ತಿಳಿಸಿದ್ದಾನಂತೆ.  ಇದರಿಂದ ಪೊಲೀಸರ ಬೆನ್ನು ಹುರಿಯಲ್ಲಿ ಛಳಿ ಕಾಣಿಸಿಕೊಂಡಿದೆಯಂತೆ.  ಇಂತಹ ಸಮಾಜ ಘಾತುಕರನ್ನು ನ್ಯಾಯಾಲಯ ಸರಿಯಾಗಿ ಶಿಕ್ಷಿಸುವುದಿಲ್ಲವೆಂದು ಆತನೂ ಅರಿತಿರುವನು.  ಇಲ್ಲದಿದ್ದರೆ ಹೀಗೆ ಹೇಳುತ್ತಿದ್ದನೇ?  ಇಂತಹವರನ್ನು ಹೆಚ್ಚು ಹೆಚ್ಚಾಗಿ ಈ ಸಮಾಜದಲ್ಲಿ ಕಾಣದಿರುವಂತೆ ಮಾಡಲು ಏನು ಮಾಡಬೇಕು?  ನನ್ನ ಮನಸ್ಸಿನಲ್ಲಿ ಬರುವ ಚಿಂತನೆಯಂತೆ, ಮೊದಲು ನ್ಯಾಯಾಲಯ  ಕಡಿಮೆ ಕಾಲಾವಧಿಯಲ್ಲಿ ವಿಚಾರಣೆ ಮಾಡಿ ಸೂಕ್ತ ಶಿಕ್ಷೆಯನ್ನು ಕೊಟ್ಟು, ಮತ್ತೆ ಸಮಾಜದಲ್ಲಿ ಇತರರು ಇಂತಹ ಕೃತ್ಯಗಳನ್ನು ಎಸಗಲು ಧೈರ್ಯ ತೋರದಂತೆ ನೋಡಿಕೊಳ್ಳಬೇಕು.  ಎರಡನೆಯದಾಗಿ, ರಸ್ತೆ ಬದಿಯಲ್ಲಿರುವ ಮಕ್ಕಳಿಗೆ ಸೂಕ್ತವಾದ ಪುಕ್ಕಟೆ ಓದು ಬರಹಾನ್ನು ಕೊಟ್ಟು ಸಮಾಜವನ್ನು ಉದ್ಧರಿಸುವಂತೆ ಮಾಡಬೇಕು.  ಈ ಕೆಲಸವನ್ನು ನಾವು ನೀವು ಮಾಡಬೇಕಲ್ಲವೇ?  ಅದಕ್ಕೆ ಸೂಕ್ತವಾದ ಸರ್ಕಾರವನ್ನೂ ತಯಾರು ಮಾಡಬೇಕಲ್ಲವೇ?