ವಿಭಾಗಗಳು
ಲೇಖನಗಳು

ರಜತೋತ್ಸವ – ಭಾಗ 6

ನನ್ನ ತಾಯಿ ದತ್ತಾತ್ರೇಯ ಸ್ವಾಮಿಯ ಭಕ್ತೆ.  ಸ್ವಾತಂತ್ರ್ಯ ಸೇನಾನಿಯಾಗಿದ್ದ ನನ್ನ ತಂದೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಪಿಂಚಣಿ ಬರುತ್ತಿತ್ತು.  ಅದಲ್ಲದೇ ಅವರಿಗೆ ಟ್ರೈನಿನಲ್ಲಿ ಎಲ್ಲಿಗೆ ಬೇಕಾದರೂ ಓಡಾಡಲು ಮೊದಲ ದರ್ಜೆಯ ಪಾಸನ್ನು ಕೂಡ ನೀಡಿದ್ದರು.  ಈ ಸೌಲಭ್ಯವನ್ನು ಅವರು ಬಳಸಿದ್ದು ಬಹಳ ಬಹಳ ಕಡಿಮೆ.   ಆಗಾಗ್ಯೆ ನನ್ನ ತಂದೆ ತಾಯಿಯರು ಗುಲ್ಬರ್ಗಾ ಜಿಲ್ಲೆಯಲ್ಲಿರುವ ಗಾಣಗಾಪುರಕ್ಕೆ ಹೋಗಿ ದತ್ತಾತ್ರೇಯ ಸ್ವಾಮಿಯ ಸೇವೆಯನ್ನು ಮಾಡಿ ಬರುತ್ತಿದ್ದರು. 

Temple entrance

೧೯೮೫ರ ಡಿಸೆಂಬರ್ ತಿಂಗಳಲ್ಲಿ ಬಹಳ ವಿಜೃಂಭಣೆಯಿಂದ ದತ್ತ ಜಯಂತಿ ಮಹೋತ್ಸವವನ್ನು ನಮ್ಮ ಮನೆಯಲ್ಲಿ ಆಚರಿಸಿದ್ದೆವು.   ನನ್ನಮ್ಮ ಮಾಡುತ್ತಿದ್ದ ದತ್ತ ಜಯಂತಿ ವೈಖರಿ ನೋಡಿ.  ಅದರ ಫಲವೇ ಇರಬೇಕು, ನಾವುಗಳು ಒಂದು ಒಳ್ಳೆಯ ಸ್ಥಿತಿಗೆ ಬಂದಿರುವುದು.  ಮಾರ್ಗಶೀರ್ಷ ಮಾಸದ ಹುಣ್ಣಿಮೆಯ ದಿನ ದತ್ತ ಜಯಂತಿ.   ಅದಕ್ಕೆ ಹತ್ತು ದಿನಗಳ ಮೊದಲು ವ್ರತದ ಆಚರಣೆ ಪ್ರಾರಂಭವಾಗುವುದು.  ಈ ಸಮಯದಲ್ಲಿ ’ಗುರುಚರಿತ್ರೆ’ ಎಂಬ ಗ್ರಂಥದ ಪಾರಾಯಣೆ ಮಾಡುವರು.  ದಿನಕ್ಕೆ ಇಂತಿಷ್ಟೇ ಅಧ್ಯಾಯವನ್ನು ಓದಬೇಕೆಂಬ ನಿಯಮವಿದೆ.  ದಿನ ಪೂರ್ತಿ ಏನನ್ನೂ ತಿನ್ನಬಾರದು.  ಪಾರಾಯಣೆ ಮತ್ತು ದೇವರ ನಾಮ ಸ್ಮರಣೆ ಮಾಡುತ್ತಿರಬೇಕು (ಓಂ ದ್ರಾಂ ಮೋಂ ಗುರು ದತ್ತಾಯ ನಮ:).  ರಾತ್ರಿ ಎರಡು ಬಾಳೆಹಣ್ಣು ಮತ್ತು ಒಂದು ಲೋಟ ಹಾಲು ತೆಗೆದುಕೊಳ್ಳಬಹುದಷ್ಟೆ.  ಮಲಗಲು ಹಾಸುಗೆ ಬಳಸಬಾರದು.  ಅದರ ಬದಲಿಗೆ ಚಾಪೆಯ ಮೇಲೆ ಮಲಗಬೇಕು.  ಹತ್ತನೆಯ ದಿನ ಪಾರಾಯಣ ಮಾಡಿ ನೆಂಟರಿಷ್ಟರಿಗೆ ಮತ್ತು ಬಡವರಿಗೆ ಅನ್ನ ಸಂತರ್ಪಣೆಯನ್ನು ಮಾಡಬೇಕು. 

aShvattha vRukSha

ಆ ವರುಷದಲ್ಲಿ ಬೆಂಗಳೂರಿನಿಂದ ನಾನು ತುಂಬಾ ತರಕಾರಿ ಮತ್ತು ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದೆ.  ಅವುಗಳನ್ನು ನೋಡಿಯೇ ನನ್ನಮ್ಮನಿಗೆ ಬಹಳ ಸಂತೋಷವಾಗಿತ್ತು.  ನಮ್ಮೂರಿನಲ್ಲಿ ಎಲ್ಲ ಬಗೆಯ ತರಕಾರಿಗಳು ಮತ್ತು ಹಣ್ಣುಗಳು ಸಿಗುವುದಿಲ್ಲ.  ನಾನು ಬ್ಯಾಂಕಿಗೆ ಸೇರಿದ ಮೇಲೆ ಮೊದಲ ಬಾರಿಗೆ ಈ ಸಲದ ದತ್ತ ಜಯಂತಿಗೆ ನಾನು ಹೋಗುತ್ತಿದ್ದುದು.  ವ್ರತ ೮ನೆಯ ದಿನ ರಾತ್ರಿ ನಾನು ಊರು ತಲುಪಿದ್ದೆ.  ೯ನೇ ದಿನದ ರಾತ್ರಿ ಪೂರ್ತಿ ಭಜನೆ ಮಾಡುತ್ತಾ ಜಾಗರಣೆ ಮಾಡಬೇಕು.  ನಿಕಟ ಸಂಬಂಧಿಗಳೆಲ್ಲರೂ ಈ ಭಜನೆಯಲ್ಲಿ ಪಾಲ್ಗೊಳ್ಳಲು ಸೇರಿದ್ದರು.  ಹೆಚ್ಚಿನ ಭಜನೆಗಳು ಇರುವುದು ಮರಾಠಿಯಲ್ಲಿ.  ಆಗ ನನಗೆ ಮರಾಠಿ ಸರಿಯಾಗಿ ಅರ್ಥವಾಗುತ್ತಿರಲಿಲ್ಲ.  ನನ್ನ ಅಜ್ಜಿಯೂ ಇದಕ್ಕೆ ಬಂದಿದ್ದರು.  ಅವರಿಗೆ ಮರಾಠಿ ಸ್ವಲ್ಪ ಗೊತ್ತಿದ್ದರಿಂದ, ನಮಗೆಲ್ಲ ಅದರರ್ಥ ತಿಳಿಸಿಕೊಟ್ಟು ಭಜನೆ ಮಾಡಿಸುತ್ತಿದ್ದರು.  ಇದೊಂದು ಅಪೂರ್ವ ಅನುಭವ.  ರಾತ್ರಿ ೧ ಘಂಟೆ ಆಗುವ ವೇಳೆಗ ಎಲ್ಲರಿಗೂ ಕಣ್ಣು ಎಳೆಯುತ್ತಿತ್ತು.  ಕೂತಲ್ಲಿಯೇ ಹಾಗೇ ಕಣ್ಮುಚ್ಚಿ ನಿದ್ರಿಸುತ್ತಿದ್ದರು.  ನನ್ನ ತಾಯಿ ಮಾತ್ರ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದರು.  ನನಗೂ ನಿದ್ರೆ ಬರುವಂತಾದಾಗ, ಬೆಳಗಿನ ಸಂತರ್ಪಣೆಯ ಅಡುಗೆಗೆ ಬೇಕಿದ್ದ ತರಕಾರಿಗಳನ್ನು ಬಿಡಿಸಿ (ಅಡುಗೆಯನ್ನು ನಾವುಗಳೇ ಮಾಡಿದ್ದು), ಹೆಚ್ಚಲು ತಿಳಿಸಿದರು.  ಹಾಗಾಗಿ ಭಜನೆಯೂ ಸಾಂಗವಾಗಿ ಮಾಡಿದೆ ಮತ್ತು ಜಾಗರಣೆಯನ್ನೂ ಮಾಡಿದ್ದೆ. 

svaami’s paaduke

ಅದಾದ ಸ್ವಲ್ಪ ದಿನಗಳಿಗೆ ಮತ್ತೆ ರೆಮಿಟೆನ್ಸ್ ಡ್ಯೂಟಿಯ ಮೇಲೆ ಗುಲ್ಬರ್ಗ ಜಿಲ್ಲೆಯ ಆಲಂದಕ್ಕೆ ಹೋಗಬೇಕಾಗಿತ್ತು.  ಈ ಹಿಂದೆ ಹೋಗಿದ್ದವರು ಆಲಂದದಲ್ಲಿ ಹೊಟೆಲ್‍ಗಳು ಇಲ್ಲವೆಂದೂ ಉಳಿದುಕೊಳ್ಳಲು ಗುಲ್ಬರ್ಗಾದಲ್ಲೇ ವ್ಯವಸ್ಥೆ ಮಾಡಿಕೊಳ್ಳಬೇಕೆಂದೂ ಹೇಳಿದ್ದರು.  ಗುಲ್ಬರ್ಗಾದಲ್ಲಿ ಉಳಿದುಕೊಂಡು ದಿನವೂ ಆಲಂದಕ್ಕೆ ಹೋಗುತ್ತಿದ್ದೆ.  ಗುರುಮಠಕಲ್ಲಿನಂತೆಯೇ ಇಲ್ಲಿಯೂ ರಸ್ತೆ ಬಹಳ ದುಸ್ತರವಾಗಿದೆ.  ೪೫ – ೫೦ ಕಿಲೋಮೀಟರ್ ಗಳ ಪ್ರಯಾಣಕ್ಕೆ ತೆಗೆದುಕೊಳ್ಳುವ ಸಮಯ ೩ ಘಂಟೆಗಳು.  ಊಟಕ್ಕೂ ಕೂಡಾ ಅಲ್ಲಿ ಒಂದು ಸರಿಯಾದ ಹೊಟೆಲ್ ಇಲ್ಲ.  ಅಲ್ಲಿನ ಜನರಾಡುವ ಭಾಷೆಯಲ್ಲಿ ಉರ್ದು ಮತ್ತು ಮರಾಠಿ ಪ್ರಭಾವ ಜಾಸ್ತಿ.  ಇದರ ಬಗ್ಗೆ ನನ್ನದೊಂದು ಅನುಭವವನ್ನು ಹೇಳುವೆ.  ಒಮ್ಮೆ ಆಲಂದದ ಬಸ್ ನಿಲ್ದಾಣದಲ್ಲಿ ನಿಂತಿದ್ದೆ.  ಆಗ ಒಬ್ಬಾತ ಬಂದು ಸಮಯವೆಷ್ಟು ಎಂದು ಕೇಳಿದ (ವೇಳೆ ಏಷ್ಟಾತ್ರೀ ಸಾಯಬ್ರ).  ನಾನು ಗಡಿಯಾರ ನೋಡಿಕೊಂಡು ಒಂದೂವರೆ ಎಂದಿದ್ದೆ.  ಅದಕ್ಕವನು – ಸರಿಯಾ ಬೋಲ್ರೀ ಅರ್ಥ ಆಗೂದಿಲ್ಲ ಎಂದಿದ್ದ.  ಮತ್ತೆ ಒಂದೂವರೆ ಎಂದು ಗಡಿಯಾರವನ್ನು ಅವನ ಮುಖದ ಮುಂದೆ ಹಿಡಿದಿದ್ದೆ.  ಅದಕ್ಕವನ ಪ್ರತಿಕ್ರಿಯೆ – ದೀಡ್ ಬೋಲ್ರೀ.  ಇದೆಂಥಾ ಸೀಮೀ ಕನ್ನಡ ಮಾತಾಡ್ತೀರ್ರೀ ಎನ್ನೋದೇ. 

ಸ್ವಲ್ಪವೇ ದಿನ್ಗಳಲ್ಲಿ (ಒಂದು ವಾರದಲ್ಲಿ) ನನ್ನ ಕೆಲಸ ಮುಗಿಸಿಕೊಂಡು ವಾಪಸ್ಸು ಬೆಂಗಳೂರಿಗೆ ಬಂದಿದ್ದೆ.  ಗುಲ್ಬರ್ಗಾದಲ್ಲಿದ್ದಾಗ ಅಲ್ಲಿಯ ಸೂಫೀ ಸಂತ ಖ್ವಾಝಾ ಬಂದೇ ನವಾಬರ ದರ್ಗಾ ನೋಡಲು ಮಾತ್ರ ಯಾರೂ ಮರೆಯಬಾರದು.  ಜಾತಿ ಮತ ಭೇದಗಳಿಲ್ಲದೇ ಎಲ್ಲರೂ ಹೋಗಿ ಬರುವ ಸ್ಥಳ ಇದು.  ಹಾಗೆಯೇ ಶರಣ ಬಸವೇಶ್ವರರ ದೇವಾಲಯವೂ ಅತಿಪ್ರಸಿದ್ಧ.  ಈಗೀಗ ಗುಲ್ಬರ್ಗ (ಕಲ್ಬುರ್ಗಿ) ವಿದ್ಯಾಕ್ಷೇತ್ರವಾಗಿಯೂ ಹೆಸರು ಮಾಡುತ್ತಿದೆ. 

ಹಾಗೆಯೇ ಅಲ್ಲಿಂದ ೨ ಘಂಟೆಗಳ ಪ್ರಯಾಣ ಮಾಡಿದರೆ ಗಾಣಗಾಪುರ ಶ್ರೀಕ್ಷೇತ್ರ ಸಿಗುವುದು.  ಅಲ್ಲಿ ಮರಾಠಿ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಬರುವರು.  ಸಂಗಮದಲ್ಲಿ ಸ್ನಾನ ಮಾಡಿ ದತ್ತಾತ್ರೇಯ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡುವುದು ರೂಢಿ.   ಭೂತೋಚ್ಛಾಟನೆಗೆ ಬರುವವರು ಬಹಳ ಮಂದಿ.  ದೇಗುಲದ ಅಲ್ಲಲ್ಲಿ ರುದ್ರಾಭಿಷೇಕವನ್ನೂ, ಸತ್ಯನಾರಾಯಣ ಪೂಜೆಯನ್ನೂ ಮಾಡಿಸುತ್ತಿರುತ್ತಾರೆ.   ಊಟಕ್ಕೆ ಮಾತ್ರ ಇಲ್ಲಿ ತೊಂದರೆ ಇಲ್ಲ.  ನೆಂಟರಿಷ್ಟರಂತೆ ತಮ್ಮ ಮನೆಗಳಿಗೆ ಬಂದು ಊಟ ಮಾಡಿ ಹೋಗಲು ಕೇಳಿಕೊಳ್ಳುತ್ತಿರುತ್ತಾರೆ.  ಹಣ ಇಷ್ಟೇ ಕೊಡಿ ಎಂದು ಕೇಳುವುದಿಲ್ಲ.  (ಈಗ ಹಾಗಿದೆಯೋ ಇಲ್ಲವೋ ತಿಳಿಯದು).  ಒಳ್ಳೆಯ ಬಿಸಿ ಬಿಸಿ ಭಕ್ಕರಿಯನ್ನೂ, ಜೊತೆಗೆ ಪಲ್ಯವನ್ನೂ ಮತ್ತು ಅನ್ನ ಮೊಸರನ್ನೂ ನೀಡುವರು.  ಹೊಟೆಲ್‍ನಂತೆ ಅನ್ನಿಸುವುದೇ ಇಲ್ಲ.  ಮನೆಯೊಳಗೇ ಕುಳಿತು ಊಟ ಮಾಡಿ ಬರಬಹುದು. 

ಅದಾದ ಕೆಲವು ತಿಂಗಳುಗಳಿಗೆ ಇನ್ನೊಂದು ಒಳ್ಳೆಯ ಸ್ಥಳಕ್ಕೆ ಹೋಗಿದ್ದೆ.  ಅದು ಬೆಳಗಾವಿ ಜಿಲ್ಲೆಯ ಗೋಕಾಕ.  ಗುಲ್ಬರ್ಗ ಮತ್ತು ವಿಜಾಪುರಕ್ಕೆ ತದ್ವಿರುದ್ಧವಾಗಿರುವುದು ಬೆಳಗಾವಿ ಜಿಲ್ಲೆ.   ಗೋಕಾಕದಲ್ಲಿ ಸಿಗುವ ವಿಶ್ವ ಪ್ರಸಿದ್ಧವಾದ ಸಿಹಿ ತಿನಿಸು ಎಂದರೆ ಕಲಬುರ್ಗಿಯವರ ಕರದಂಟು.  ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ತಿನ್ನಬೇಕಿನಿಸುವ ತಿನಿಸು.  ನೀರಿನ ಸೌಕರ್ಯ ಬಹಳ ಚೆನ್ನಾಗಿರುವ ಸ್ಥಳ ಗೋಕಾಕ ತಾಲ್ಲೂಕು.  ಒಂದೆಡೆ ಘಟಪ್ರಭ ಮತ್ತೊಂದು ಕಡೆ ಮಲಪ್ರಭ ಹರಿಯುವುದು.   ಹತ್ತಿರದಲ್ಲೇ ಹಿಡಕಲ್ ಅಣೆಕಟ್ಟು ಇದೆ.  ಹಾಗೆಯೇ ಗೋಕಾಕ್ ಪಟೇಲ್ ಗಿರಣಿಯ ಎದುರಿಗಿರುವ ಗೋಕಾಕ ಜಲಪಾತವೂ ವಿಶ್ವಪ್ರಸಿದ್ಧ.  ಇಲ್ಲಿ ವಿದ್ಯತ್ತನ್ನೂ ಉತ್ಪಾದಿಸುವರು.  ಸ್ವಲ್ಪ ಆಚೆಗಿರುವ ಹುಕ್ಕೇರಿ ಮತ್ತು ಚಿಕ್ಕೋಡಿ, ಗೋಕಾಕದಷ್ಟು ಬೆಳೆದಿಲ್ಲ.  ಈ ಊರಲ್ಲಿ ಮಾತ್ರ ಎಲ್ಲೆಲ್ಲೀ ನೋಡಲಿ ಕನ್ನಡಮಯ.  ಮರಾಠಿ ಮಾತುಗಳಿಗೆ ಅವಕಾಶವೇ ಇಲ್ಲ.  ರೈಲ್ವೇ ನಿಲ್ದಾಣ ಮಾತ್ರ ಹತ್ತಿರವಿಲ್ಲ.  ಒಂದೆಡೆ ಘಟಪ್ರಭಾ ನಿಲ್ದಾಣ ೧೫-೧೬ ಕಿಲೋಮೀಟರ್ ದೂರವಿದ್ದರೆ ಇನ್ನೊಂದೆಡೆ ಇರುವ ಗೋಕಾಕ ರೋಡ್ ನಿಲ್ದಾಣವೂ ಅಷ್ತೇ ದೂರವಿದೆ.

*********

ಯೂನಿಯನ್ನಿನ ಕೆಲಸಗಳಲ್ಲಿ ಎಷ್ಟು ಸಕ್ರಿಯನಾಗಿದ್ದೆ ಎಂಬುದಕ್ಕೆ ಒಂದೆರಡು ನಿದರ್ಶನಗಳನ್ನು ತಿಳಿಸಬಯಸುವೆ.  ೧೯೮೫ರಲ್ಲಿ ನಬಾರ್ಡ್‍ನ ಆಫೀಸರ್ ಪರೀಕ್ಷೆ ಬರೆದಿದ್ದೆ.   ಆ ಪರೀಕ್ಷೆಯಲ್ಲಿ ಪಾಸಾಗಿ ಇಂಟರ್-ವ್ಯೂಗೆ ಕರೆ ಬಂದಿತ್ತು.  ಸ್ನೇಹಿತರೆಲ್ಲರೂ ಚೆನ್ನಾಗಿ ತಯಾರಾಗಿ ಹೋಗು, ಇಂಟರ್-ವ್ಯೂನಲ್ಲಿ ಕೇಳಿದ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರಿಸು ಎಂದು ಹಿತವಚನಗಳನ್ನು ಹೇಳಿದರೂ, ನಾನು ಮಾತ್ರ ಯಾರ ಮಾತನ್ನೂ ಕೇಳಿರಲಿಲ್ಲ.  ಆಫೀಸರಾದರೆ ಆಡಳಿತದಲ್ಲಿ ಪಾಲುದಾರನಾದಂತೆ, ಕೆಲಸಗಾರರ ಮೇಲೆ ದೌರ್ಜನ್ಯವನ್ನೆಸಗಬೇಕಾಗುವುದು.  ಇದು ನನ್ನಿಂದಾಗುವುದಿಲ್ಲ, ನಾನು ಇಂಟರ್-ವ್ಯೂಗೇ ಹೋಗುವುದಿಲ್ಲ ಎಂದು ಹೇಳುತ್ತಿದ್ದೆ.  ಇಂಟರ್-ವ್ಯೂ ಇದ್ದ ದಿನ ಸ್ನೇಹಿತರುಗಳು ಒತ್ತಾಯದ ಮೇಲೆ, ಸುಮ್ಮನೆ ಹೋಗಿ ಏನನ್ನೂ ಉತ್ತರಿಸದೇ ಬಂದಿದ್ದೆ. 
ಸ್ವಲ್ಪ ದಿನಗಳ ಬಳಿಕ ನಮ್ಮ ಬ್ಯಾಂಕಿನ ಆಫೀಸರ್ ಪರೀಕ್ಷೆಯನ್ನೂ ಬರೆದಿದ್ದೆ.  ಮೊದಲ ಪೇಪರ್ ಬಹಳ ಸುಲಭವಾಗಿತ್ತು.  ಎರಡನೆಯ ಪೇಪರ್ ಮಧ್ಯಾಹ್ನ ಊಟದ ನಂತರ ಇತ್ತು.  ಮೊದಲ ಒಂದು ಘಂಟೆಯಲ್ಲಿ ಏನನ್ನೋ ಗೀಚಿದ್ದೆ.  ಆಗ ಪಕ್ಕದಲ್ಲಿರುವ ಮೈದಾನದಲ್ಲಿ ನಾಯಿಗಳ ಪ್ರದರ್ಶನ ನಡೆಯುತ್ತಿದ್ದುದನ್ನು ನೋಡಿ, ಬರೆಯುತ್ತಿದ್ದ ಪತ್ರಿಕೆಯನ್ನು ಅಷ್ಟಕ್ಕೇ ನಿಲ್ಲಿಸಿ ಕೊಟ್ಟು ಅಲ್ಲಿಗೆ ಹೋಗಿದ್ದೆ.  ಬ್ಯಾಂಕಿನಲ್ಲಿ ಸ್ನೇಹಿತರುಗಳು, ’ನಿನಗೆ ಆಫೀಸರಾಗಲು ಇಷ್ಟವಿಲ್ಲದಿದ್ದರೆ ಪರೀಕ್ಷೆಯನ್ಯಾಕೆ ಬರೆಯುತ್ತೀಯೆ?  ನಿನ್ನ ಸಮಯವೂ ಹಾಳು, ಪರೀಕ್ಷೆ ನಡೆಸುವವರಿಗೂ ಸಮಯ ಹಾಳು’.  ಅದಕ್ಕೆ ನನ್ನ ಪ್ರತಿ ಉತ್ತರ, ಹಾಗಲ್ಲ ನಾನೂ ಬರೆಯಬಹುದು, ಪಾಸಾಗಬಹುದು ಎಂಬುದನ್ನು ತೋರಿಸಲಷ್ಟೇ ಮಾಡಿದ್ದು. 

ಸ್ವಲ್ಪ ದಿನಗಳ ಬಳಿಕ ಮತ್ತೊಮ್ಮೆ ರೆಮಿಟೆನ್ಸ್ ಡ್ಯೂಟಿಯ ಮೇಲೆ ನನ್ನೂರಿನ ಹತ್ತಿರದ ಚಳ್ಳಕೆರೆಗೆ ಹೋಗುವ ಅವಕಾಶ ಒದಗಿ ಬಂದಿತ್ತು.   ಅದೇ ಸಮಯದಲ್ಲಿ ನನ್ನ ತಂಗಿಗೆ ಗಂಡು ಹುಡುಕುತ್ತಿದ್ದರು.  ನನ್ನ ತಂದೆ ಲಕ್ವದಿಂದ ಇನ್ನೂ ಗುಣಮುಖರಾಗುತ್ತಿದ್ದರಷ್ಟೆ.  ನನ್ನ ತಾಯಿ ಊರುರು ಸುತ್ತಲಾಗುತ್ತಿರಲಿಲ್ಲ.  ನನ್ನ ಮೂರನೆಯ ಅಣ್ಣ ಮುಂಬೈನಲ್ಲಿದ್ದ.  ಹಾಗಾಗಿ ಇನ್ನುಳಿದ ನಾವು ಮೂವರು ಅಣ್ಣ ತಮ್ಮಂದಿರೇ ಈ ಕೆಲಸವನ್ನು ಮಾಡಬೇಕಿತ್ತು.  ಮೊದಲಿಬ್ಬರು ಆಗಲೇ ಸಂಸಾರೊಂದಿಗರಾಗಿದ್ದರಿಂದ, ಅವರುಗಳಿಗೆ ಸಮಯ ಸಿಗುವುದು ಸ್ವಲ್ಪ ಕಷ್ಟವಾಗಿತ್ತು.    ಆದರೂ ಅವರುಗಳು ಕೈಮೀರಿ ಮಾಡುತ್ತಿದ್ದರು.  ಇನ್ನುಳಿದ ಗಂಡು ಗೂಳಿ ನಾನೊಬ್ಬನೇ. 

ಆ ಸಮಯದಲ್ಲಿ ಒಂದೆರಡು ಕಡೆ ಗಂಡುಗಳಿದ್ದಾರೆ ಎಂದೂ, ನಾನು ಬಂದು ನೋಡಿ ವಿಚಾರಿಸಬೇಕೆಂದೂ  ನನ್ನ ತಾಯಿ ತಿಳಿಸಿದ್ದರು.  ಚಳ್ಳಕೆರೆಯಲ್ಲಿ ನಮ್ಮ ಸಂಬಂಧಿಗಳು ಬಹಳ ಇದ್ದಾರೆ.  ರೆಮಿಟೆನ್ಸ್ ಡ್ಯೂಟಿಯಲ್ಲಿ ಸ್ವಲ್ಪ ಸಮಯ ಸಿಕ್ಕಿದಾಗ ಅಲ್ಲಿಲ್ಲಿ ಓಡಾಡಿದ್ರೆ ಅದನ್ನೇ ಒಂದು ದೊಡ್ಡ ವಿಷಯವನ್ನಾಗಿ ನಮ್ಮಮ್ಮನ ಹತ್ತಿರ ಬಂದು ವರದಿ ಒಪ್ಪಿಸ್ತಿದ್ರು. 
ಅದಲ್ಲದೇ ನನ್ನನ್ನು ಏನೆಲ್ಲಾ ಕೇಳ್ತಿದ್ರು, ರೆಮಿಟ್ಟೆನ್ಸ್ ಅಂದ್ರೆ ಏನು.  ಎಷ್ಟು ದುಡ್ಡು ತಂದಿದ್ದಿಯಾ?  ಅವುಗಳನ್ನೆಲ್ಲಾ ಎಲ್ಲಿ ಇಟ್ಟಿರ್ತಾರೆ?  ಇಲ್ಲಿ  ನಿನಗೇನು ಕೆಲಸ.  ಹತ್ತು ಹಲವಾರು ಪ್ರಶ್ನೆಗಳು.  ಅವುಗಳಿಗೆಲ್ಲಾ ಸಮಂಜಸ ಉತ್ತರ ಕೊಡೋದೇ ಒಂದು ದೊಡ್ಡ ಕೆಲಸವಾಗಿತ್ತು.  ಇದಲ್ಲದೇ ಅವರುಗಳ ಮನೆಗೇನಾದ್ರೂ ಹೋದರೆ, ಅದ್ಯಾಕೆ ಮಧ್ಯಾಹ್ನ ನೀನು ಅಲ್ಲಿ ಓಡಾಡ್ತಿದ್ದೆ, ಎಂದು ಕೇಳ್ತಿದ್ರು.  ಅವರುಗಳ ಕಣ್ಣು ತಪ್ಪಿಸುವುದೇ ಒಂದು ದೊಡ್ಡ ಕಷ್ಟವಾಗಿತ್ತು.  ಏಕಾದರೂ ಈ ಊರಿಗೆ ಬಂದೆನಪ್ಪಾ ಎಂದೂ ಅನ್ನಿಸಿತ್ತು. 

ಒಂದು ಶನಿವಾರ ದಾವಣಗೆರೆಗೆ ಹೋಗಿಬರೋಣವೆಂದು ನನ್ನಮ್ಮ ತಿಳಿಸಿದ್ದರು.  ದಾವಣಗೆರೆಯಲ್ಲಿದ್ದ ಸಬ್ ಇನ್ಸ್‍ಪೆಕ್ಟರ್ ಚಂದ್ರಶೇಖರಯ್ಯನವರ ಮನೆಗೆ ಹೋಗಿದ್ದೆವು.  ಅವರ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನಮ್ಮ ಮನೆಗೇ ಹೋದಂತಿತ್ತು.  ನಮ್ಮ ಮನೆಯ ವಾತಾವರಣವೇ ಆಗಿದ್ದಿತು.  ಮಧ್ಯಮ ಕೆಳ ದರ್ಜೆಯ ಒಂದು ಕುಟುಂಬ.  ಮಾತನಾಡಲು ಹೆಚ್ಚಿನ ವಿಷಯಗಳೇ ಇರಲಿಲ್ಲ.  ದೂರದಿಂದ ಅವರು ನಮಗೆ ನೆಂಟರೂ ಆಗಿದ್ದರು.  ಹುಡುಗಿಯನ್ನು ಒಮ್ಮೆ ಬಂದು ನೋಡಿ ಎಂದು ಹೇಳಿ ವಾಪಸ್ಸಾಗಿದ್ದೆವು.  ಒಮ್ಮೆ ಅವರೂ ಬಂದು ನನ್ನ ತಂಗಿಯನ್ನು ನೋಡಿಕೊಂಡು ಹೋಗಿ, ಒಮ್ಮೆಗೇ ನಮ್ಮ ಮನೆಯಲ್ಲೇ ಒಪ್ಪಿಗೆ ಸೂಚಿಸಿದ್ದರು. 

ಲಗ್ನ ಪತ್ರಿಕೆಗಾಗಿ ನನ್ನ ಅಣ್ಣ ಮುಂಬೈನಿಂದ ಬಂದಿದ್ದ.  ಅವನನ್ನೊಮ್ಮೆ ದಾವಣಗೆರೆಗೆ ನಾನು ಕರೆದುಕೊಂಡು ಹೋಗಿದ್ದೆ.  ಬೆಳಗ್ಗೆ ನನ್ನೂರಿನಿಂದ ಹೊರಟು ಅವರ ಮನೆ ತಲುಪಿದಾಗ ಮಧ್ಯಾಹ್ನ ೧ ಘಂಟೆ ಆಗಿತ್ತು.  ಅವರ ಮನೆಯವರು ಊಟಕ್ಕೇಳಿ ಎಂದರು.  ನಮ್ಮಮ್ಮ ಮುಂಚೆಯೇ ಹೇಳಿದ್ದರು, ಲಗ್ನಪತ್ರಿಕೆ ಆಗುವವರೆವಿಗೆ ಅವರ ಮನೆಯಲ್ಲಿ ಊಟ ಮಾಡಬಾರದು ಎಂದು.  ಅದೂ ಅಲ್ಲದೇ ನಮ್ಮ ಮನೆಗಳಲ್ಲಿ ಎಲ್ಲರೂ ಬೇರೆಯವರ ಮನೆಗಳಲ್ಲಿ ಊಟ ತಿಂಡಿ ಮಾಡುವುದಿಲ್ಲ.  ಅದೇನೋ ಈ ಹಾಳು ಅಭ್ಯಾಸ ಎಲ್ಲರಿಗೂ ಬಂದುಬಿಟ್ಟಿದೆ.  ಅವರ ಕರೆಗೆ ನೇರವಾಗಿ ತಿರಸ್ಕರಿಸಲಾಗದೇ, ’ಈಗ ತಾನೆ ಇಂತಹವರ ಮನೆಯಲ್ಲಿ ಊಟವಾಯಿತು, ಮನೆಯಿಂದ ಊಟ ಮಾಡಿಕೊಂಡೇ ಬಂದೆವು’ ಎಂದು ಏನೇನೋ ಸಬೂಬು ಹೇಳುವುದು ಸಾಮಾನ್ಯ.  ಅವರ ಮನೆಯವರೂ ಜಾಸ್ತಿ ಒತ್ತಾಯ ಮಾಡದೇ, ಒಂದು ಲೋಟ ಕಾಫಿ ಕೊಟ್ಟಿದ್ದರು.  ಮದುವೆಗಿದ್ದ ಹುಡುಗನೊಂದಿಗೆ ಲೋಕಾಭಿರಾಮವಾಗಿ ಮಾತನಾಡಿಕೊಂಡು, ದಾವಣಗೆರೆಯನ್ನು ಒಂದು ಸುತ್ತು ಹಾಕಿ, ಮಧ್ಯಾಹ್ನ ೪ ರ ಬಸ್ಸಿಗೆ ವಾಪಸ್ಸಾದೆವು.  ಹೊಟ್ಟೆಯೊಳಗೆ ಇಲಿ, ಹಲ್ಲಿ, ಜಿರಳೆ ಎಲ್ಲ ಓಡಾಡ್ತಿದ್ದವು.  ಆದರೂ ಇಬ್ಬರಲ್ಲೂ ಅದೇನೋ ದರಿದ್ರ ಸ್ವಾಭಿಮಾನ, ಹುಚ್ಚುತನ.  ಉಪವಾಸ ಮಾಡುವುದು ನಮ್ಮ ಆಜನ್ಮ ಸಿದ್ಧ ಹಕ್ಕೆಂಬಂತೆ ಏನನ್ನೂ ತಿಂದಿರಲಿಲ್ಲ. 

ಊರು ತಲುಪುವ ವೇಳೆಗೆ ರಾತ್ರಿ ೯ ಆಗಿತ್ತು.  ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನಮ್ಮಮ್ಮ, ’ಊಟ ಆಯ್ತೇನ್ರೋ?  ನಾನಾಗಲೇ ಪಾತ್ರೆ ತೊಳೆದಾಯ್ತು’ ಎನ್ನಬೇಕೆ?  ಇಬ್ಬರುಗಳಿಗೂ ಭಯಂಕರ ಕೋಪ ಬಂದಿತ್ತು.  ಹೇಳಿ ಕೇಳಿ ನಮ್ಮದು ದೂರ್ವಾಸರ ವಂಶ.  ಇಬ್ಬರ ಕೆಂಗಣ್ಣುಗಳನ್ನು ನೋಡಿಯೇ ಪರಿಸ್ಥಿತಿ ಅರಿವಾದ ನಮ್ಮಪ್ಪ, ’ಶಾನೆ ಕಡುಪಾಕ್ಲಿ ಅಯ್ಯಿಂಟುಂದಿ, ವೀಣ್ಳುಕಿ ಏಮನ್ನಾ ವೇಗರ್ನೆ ಚೇಸಿಚ್ಚುಡು (ತುಂಬಾ ಹಸಿವಾಗಿರತ್ತೆ,ಇವರುಗಳಿಗೆ ಏನನ್ನಾದರೂ ಬೇಗನೆ ಮಾಡಿಕೊಡು)’  ಅಂದಿದ್ದರು.   ನಿಜಕ್ಕೂ ನನ್ನ ತಾಯಿ ಅನ್ನಪೂರ್ಣೆಯ ಅಪರಾವತಾರ.   ಅಂದು  ಇದನ್ನು ನಾವುಗಳು ಯೋಚಿಸಿಯೇ ಇರಲಿಲ್ಲ.  ಹತ್ತೇ ನಿಮಿಷಗಳಲ್ಲಿ ಉಪ್ಪಿಟ್ಟು ಮಾಡಿಕೊಟ್ಟಿದ್ದರು.   ಆ ತಾಯಿಯ ಬಗ್ಗೆ ಈಗ ಎಷ್ಟು ಪರಿತಪಿಸದರೇನು ಪ್ರಯೋಜನ?

೧೫ ದಿನಗಳ ನಂತರ ಲಗ್ನ ಪತ್ರಿಕೆಯನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೆವು. ಎಲ್ಲವೂ ಸಾಂಗವಾಗಿ ಮದುವೆ ಡಿಸೆಂಬರ್ ತಿಂಗಳಿನಲ್ಲಿ ಎಂದು ತೀರ್ಮಾನವಾಗಿದ್ದಿತು.  ಇನ್ನುಳಿದದ್ದು ನಮ್ಮಗಳ ತಯಾರಿಯಷ್ಟೇ. 

*********

ಸ್ವಲ್ಪ ದಿನಗಳಲ್ಲಿ ಮದುವೆ ಏರ್ಪಾಟಾಯಿತು.  ೧೯೮೬ ನೆಯ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಚಳ್ಳಕೆರೆಯ ಶ್ರೀರಾಮ ಮಂದಿರದಲ್ಲಿ ಶ್ರೀ ಗಣೇಶ ಮತ್ತು ಶ್ರೀಮತಿ ಮಂಜುಳೆಯರ ಮದುವೆ ನಡೆದಿತ್ತು. 

ಮದುವೆಗೆ ಎರಡು ದಿನಗಳ ಮೊದಲು ನಮ್ಮ ಮನೆಯಲ್ಲಿ ದೇವರ ಸಮಾರಾಧನೆ ಇಟ್ಟುಕೊಂಡಿದ್ದೆವು.  ಅಂದೇ ನಾಂದಿಯನ್ನೂ ಮಾಡಬೇಕೆಂದುಕೊಂಡಿದ್ದೆವು.  ನಾಂದಿ ಇದ್ದ ಹಿಂದಿನ ರಾತ್ರಿ ೯ ಘಂಟೆಯ ಹೊತ್ತಿನಲ್ಲಿ ಮನೆಯವರೆಲ್ಲರೂ, ನೆಂಟರೆಲ್ಲರೂ ಸೇರಿದ್ದರು.  ಇದ್ದಕ್ಕಿದ್ದ ಹಾಗೆ ನನ್ನ ತಂದೆಗೆ ರಕ್ತ ವಾಂತಿಯಾಗತೊಡಗಿತು.  

ಗಾಬರಿಯಾದ ನನ್ನ ಎರಡನೆ ಅಣ್ಣ ತಕ್ಷಣ ಡಾಕ್ಟರನ್ನು ಕರೆತರಲು ಓಡಿದ.  ಮೊದಲೇ ನಮ್ಮೂರು ಒಂದು ಸಣ್ಣ ಹಳ್ಳಿ.  ಡಾಕ್ಟರು ಪಕ್ಕದೂರಿನಿಂದ ಪ್ರತಿನಿತ್ಯ ಬೆಳಗ್ಗೆ ಬಂದು ಸಂಜೆಗೆ ವಾಪಸ್ಸಾಗುತ್ತಿದ್ದರು.  ಅಲ್ಲಿಯೇ ಇದ್ದ ನಮ್ಮ ಚಿಕ್ಕಪ್ಪನವರೂ ಸರಕಾರೀ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದರು.   ಅವರು ನನ್ನ ತಂದೆಯ ಪರಿಸ್ಥಿತಿ ನೋಡಿ, ತಕ್ಷಣ ಕಾರು ಮಾಡಿಕೊಂಡು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಾತಿ ಮಾಡುವುದು ಲೇಸೆಂದು ತಿಳಿಸಿದರು.  ಕಾರು ಮಾಡಲು, ಆ ಊರಲ್ಲಿ ಸೌಲಭ್ಯವಿರಲಿಲ್ಲ.  ನಾನು ಮತ್ತು ನನ್ನ ಮೂರನೆಯ ಅಣ್ಣ ಪಂಚೆ ಬನಿಯನ್ನಿನಲ್ಲೇ ರಸ್ತೆಯಲ್ಲಿ ಬರುತ್ತಿದ್ದ ಲಾರಿಯೊಂದರಲ್ಲಿ ಕುಳಿತು ಹತ್ತಿರದ ಚಳ್ಳಕೆರೆಗೆ ಹೋದೆವು.  ಅಷ್ಟು ಹೊತ್ತಿಗೆ ನಮ್ಮ ಚಿಕ್ಕಪ್ಪನವರೂ ಅಲ್ಲಿಗೆ ಬಂದು, ಕಾರು ಮಾಡಿಕೊಟ್ಟರು. ಅದರಲ್ಲಿ ಕುಳಿತು ನಮ್ಮೂರಿಗೆ ಬಂದು ತಂದೆಯವರನ್ನು ಕರೆದುಕೊಂಡು ಚಿತ್ರದುರ್ಗದ ಸರಕಾರ್‍ಈ ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಾತ್ರಿ ೧೨ ಘಾಂಟೆ.  ಡ್ಯೂಟಿಯ ಮೇಲಿದ್ದ ಡಾಕ್ಟರು ತಕ್ಷಣ  ರಕ್ತ ಕೊಡಬೇಕೆಂದೂ, ಎರಡು ಅಥವಾ ಮೂರು ಬಾಟಲಿನಷ್ಟು ರಕ್ತ ತರಲು ತಿಳಿಸಿದರು. ಆಸ್ಪತ್ರೆಗೆ ಸೇರುವವರೆವಿಗೂ ರಕ್ತದ ವಾಂತಿ ನಿರಂತರವಾಗಿ ಆಗುತ್ತಲೇ ಇತ್ತು.   ರಕ್ತವು ಗೆಡ್ಡೆಗಳಾಗಿ ಹೊರ ಬರುತ್ತಿತ್ತು.  ಆಗ ಅವರಿಗೆ ರಕ್ತದ ಕ್ಯಾನ್ಸರ್ ಆಗಿರಬಹುದೆಂದು ಅವರ ಅಭಿಪ್ರಾಯವಾಗಿತ್ತು. 

 ನಮಗ್ಯಾರಿಗೂ ಆ ಊರಿನ ಪರಿಚಯವಿಲ್ಲ.  ಎಲ್ಲಿಂದ ರಕ್ತವನ್ನು ತರುವುದು.  ಅಷ್ಟು ಹೊತ್ತಿಗೆ ಅಲ್ಲಿಯೇ ಇದ್ದ ನರ್ಸ್ ಒಬ್ಬರು ಆಸ್ಪತ್ರೆಯ ಆವರಣದಲ್ಲಿ ಮಲಗಿರುವ ಒಂದಿಬ್ಬರು ಕೂಲಿಯವರ ರಕ್ತದ ಗುಂಪು ನಮ್ಮ ತಂದೆಯವರ ರಕ್ತದ ಗುಂಪಿಗೆ ಹೋದುವುದೆಂದೂ – ಪ್ರತಿ ಬಾಟಲಿಗೆ ರೂ ೨೦೦ ಕೊಟ್ಟರೆ ಸಿಗುವುದೆಂದೂ ತಿಳಿಸಿದರು.  ಆ ತಕ್ಷಣಕ್ಕೆ ಜೀವ ಉಳಿದರೆ ಸಾಕಾಗಿತ್ತು.  ಹೇಗಾದರೂ ಮದುವೆ ನಿಲ್ಲದೇ ನಡೆದರೆ ಸಾಕಾಗಿತ್ತು.  ದುಡ್ಡಿನ ಕಡೆ ಗಮನವಿರಲಿಲ್ಲ.  ಕೂಲಿಯವರು ರಕ್ತವನ್ನು ಕೊಟ್ಟಿದ್ದರು, ಅದನ್ನೇ ನನ್ನ ತಂದೆಯ ಮೈಗೆ ಏರಿಸಿದ್ದರು.    ಆಗ ಅವರಿಗೆ ಶುಶ್ರೂಷೆ ಮಾಡಿದ್ದ ವೈದ್ಯರು, ಆಗ ಕೊಟ್ಟಿದ್ದ ರಕ್ತ ಇವರಿಗೆ ಸರಿ ಹೊಂದಿದೆಯೋ ಇಲ್ಲವೋ ಎಂದು ಹೇಳಲು ಇನ್ನು ಮೂರು ತಿಂಗಳು ಕಾಯಬೇಕೆಂದಿದ್ದರು.  ಮರು ದಿನ ಬೆಳಗ್ಗೆ ಮೂರನೆಯ ಅಣ್ಣನೊಬ್ಬನನ್ನು ಆಸ್ಪತ್ರೆಯಲ್ಲಿ ಬಿಟ್ಟು ನಾನು ಮತ್ತು ಎರಡನೆಯ ಅಣ್ಣ ಮದುವೆಯ ಕಾರ್ಯದ ಕಡೆ ಗಮನ ಕೊಡಲು ಊರಿಗೆ ಬಂದಿದ್ದೆವು.  ಮದುವೆಯಲ್ಲಿ ಎಲ್ಲರ ಮನಸ್ಸೂ ನನ್ನ ತಂದೆಯ ಆರೋಗ್ಯದ ಕಡೆಗೇ ಇದ್ದಿತ್ತು.  ನನ್ನಮ್ಮ ಗಟ್ಟಿಗಿತ್ತಿ.  ಆಗ ಎದೆಗುಂದಲಿಲ್ಲ.  ಎಲ್ಲ ಕೆಲಸಗಳಲ್ಲೂ ನಮಗೆ ಸೂಕ್ತ ಮಾರ್ಗದರ್ಶನ ಕೊಡುತ್ತಾ ಮದುವೆಯಲ್ಲಿ ಏನೂ ಕುಂದು ಬರದಂತೆ ನೋಡಿಕೊಂಡಿದ್ದರು.  ನಮ್ಮ ನೆಂಟರಿಷ್ಟರೆಲ್ಲರೂ ನಮಗೆ ಧೈರ್ಯಕೊಟ್ಟಿದ್ದರು.  ನಮ್ಮ ಚಿಕ್ಕಪ್ಪನಂತೂ ಎಲ್ಲವನ್ನೂ ಸಾಂಗವಾಗಿ ಏರ್ಪಾಡು ಮಾಡಿದ್ದರು.  ಮಧ್ಯೆ ಮದುವೆಗೆಂದು ಬಂದವರೆಲ್ಲರೂ ಒಮ್ಮೆ ಚಿತ್ರದುರ್ಗದ ಆಸ್ಪತ್ರೆಗೆ ಹೋಗಿ ನಮ್ಮ ತಂದೆಯನ್ನು ನೋಡಿಕೊಂಡು ಬರುತ್ತಿದ್ದರು.  ಇನ್ನೂ ಒಂದು ತಿಂಗಳು ಆಸ್ಪತ್ರೆಯಲ್ಲೇ ಇರಬೇಕೆಂದೂ, ಏನಾಗಿದೆಯೆಂದೂ ಖಚಿತವಾಗಿ ಹೇಳಲಾಗುವುದಿಲ್ಲವೆಂದೂ ತಿಳಿಸಿದ್ದರು.  ಮದುವೆಯ ಕಾರ್ಯಗಳೆಲ್ಲಾ ಮುಗಿದು, ನನ್ನ ತಂಗಿ ಗಂಡನೊಂದಿಗೆ ದಾವಣಗೆರೆ ಹೊರಟಳು.  ಅದೇ ಸಮಯಕ್ಕೆ ನಾವುಗಳು ಮೊದಲು ನಮ್ಮ ತಂದೆಯನ್ನು ನೋಡಿಬಂದು ನಂತರ ಛತ್ರವನ್ನು ಖಾಲಿ ಮಾಡುವುದೆಂದು ಯೋಚಿಸಿ, ನಾನು ಮತ್ತು ನನ್ನ ಎರಡನೆಯ ಅಣ್ಣ ಚಿತ್ರದುರ್ಗದ ಆಸ್ಪತ್ರೆಗೆ ಹೋದೆವು.  ನೇರವಾಗಿ ನನ್ನ ತಂದೆಯನ್ನು ಸೇರಿಸಿದ್ದ ವಾರ್ಡಿಗೆ ಹೋದರೆ ಅಲ್ಲಿ ಆಸಾಮಿ ಪತ್ತೆಯೇ ಇಲ್ಲ.  ಪಕ್ಕದ ಹಾಸಿಗೆಯಲ್ಲಿದ್ದ ರೋಗಿಯೊಬ್ಬರು, ಆ ಮುದುಕಪ್ಪನನ್ನು ಡಿಸ್ಚಾರ್ಜ್ ಮಾಡಿದರೆಂದರು.  ಹಾಗಿದ್ರೆ ಇವರೆಲ್ಲಿಗೆ ಹೋದರು.  ಏನೇ ಆಗಲಿ, ಹತ್ತಿರದಲ್ಲೇ ಇದ್ದ ನಮ್ಮ ಚಿಕ್ಕಮ್ಮನ (ತಾಯಿಯ ತಂಗಿ) ಮನೆಗೆ ಹೋದರೆ ವಿಷಯ ತಿಳಿಯಬಹುದೆಂದು ನಾವು ಅವರ ಮನೆಗೆ ಹೋದರೆ, ಯಜಮಾನರು ಅಲ್ಲಿ ಆರಾಮವಾಗಿ ಕುಳಿತು ಮಾತನಾಡುತ್ತಿದ್ದಾರೆ.  ಆರೋಗ್ಯ ತಪ್ಪಿ ಎಲ್ಲರ ಧೃತಿ ಕೆಡಿಸಿದ ಮನುಷ್ಯ ಇವರೇನಾ ಎಂದು ಸಂಶಯಿಸುವಂತಾಗಿತ್ತು. 
 ಆಗ ನನ್ನ ಚಿಕ್ಕಮ್ಮ ಹೇಳಿದ ಮಾತುಗಳು ಈಗಲೂ ಕಿವಿಯಲ್ಲಿಯೇ ಇದೆ.  ’ನಿಮ್ಮಪ್ಪನಿಗೆ ಒಬ್ಬಳೇ ಮಗಳ ಮದುವೆ ಮಾಡುವ ಯೋಗವಿಲ್ಲ.  ದೇವರು ಅವರ ಹಣೆಯಲ್ಲಿ ಬರೆದಿರುವುದೇ ಹಾಗೆ’.  ನಾವು ಆ ಮಾತುಗಳನ್ನು ಆ ಕ್ಷಣದಲ್ಲಿ ನಂಬಿರಲಿಲ್ಲ.  ಸ್ವಲ್ಪ ಹೊತ್ತಿಗೆ, ನನ್ನ ತಂದೆಗೆ ಚಿಕಿತ್ಸೆ ಮಾಡಿದ ವೈದ್ಯರಲ್ಲಿಗೆ ಹೋಗಿ ’ಏನಾಗಿತ್ತು?’ ಎಂದು ಕೇಳಲು, ಅವರೂ ಹೀಗೆಯೇ ಹೇಳುವುದೇ?  (ಅವರು ಮುಸ್ಲಿಮರು) – ನೋಡ್ರಪ್ಪ, ನನ್ನ ಮತ್ತು ನಿಮ್ಮಗಳ ದೇವರು ಬೇರೆಯೆಂದು ನಾವುಗಳು ಭಾವಿಸಿದ್ದೇವೆ.  ಆದರೆ ಎಲ್ಲರ ದೇವರೂ ಒಬ್ಬನೇ.  ಹೀಗೇ ಆಗಬೇಕೂಂತಿದ್ದರೆ ಯಾರಿಂದಲೂ ಅದನ್ನು ತಪ್ಪಿಸಲಾಗುವುದಿಲ್ಲ.  ನಿಮ್ಮ ಭಗವದ್ಗೀತೆಯಲ್ಲಿ ಇದನ್ನೇ ಅಲ್ವೇ ಹೇಳಿರುವುದು.  ನಾನು ವೈದ್ಯನಾಗಿದ್ದು ನನ್ನ ಕೈನಲ್ಲಿ ಏನೂ ಇಲ್ಲ.  ಅವರಿಗೇನಾಗಿತ್ತೆಂದು ಈಗಲೂ ಹೇಳಲಶಕ್ಯನಾಗಿರುವೆ, ಎಂದಿದ್ದರು.  (ಅವರು ಪ್ರಸಿದ್ಧ ವೈದ್ಯರು). 

ಜೀವನದಲ್ಲಿ ಹೀಗೆಯೇ ಆಗುವುದು ಎಂದು ಹೇಳಲಾಗುವುದೇ?