ವಿಭಾಗಗಳು
ಲೇಖನಗಳು

ರಜತೋತ್ಸವ – ಭಾಗ 7

ತಂಗಿಯ ಮದುವೆಯಾಗಿ ಅವಳು ಗಂಡನ ಮನೆಗೆ ಹೋದ ಮೇಲೆ ನಮ್ಮ ಜವಾಬ್ದಾರಿ ಸ್ವಲ್ಪ ಕಡಿಮೆ ಆಗಿದ್ದಿತು.  ಆಗ ನನ್ನ ತಾಯಿ ನನ್ನನ್ನು ಮದುವೆಯಾಗು ಎಂದು ದುಂಬಾಲು ಬಿದ್ದಿದ್ದರು.   ಇಲ್ಲಿಯವರೆವಿಗೆ ನಾನು ಸ್ವಲ್ಪ ಹಿಡಿತದಲ್ಲಿದ್ದವನು ಈಗಲಾದರೂ ಸ್ವಲ್ಪ ದಿನಗಳು ಪುರುಸೊತ್ತಾಗಿರೋಣವೆಂದು ಸದ್ಯಕ್ಕೆ ಬೇಡವೆಂದಿದ್ದೆ. 

 

ಪ್ರತಿದಿನ ಟೇಬಲ್ ಟೆನ್ನಿಸ್ ಆಡಲು ನಮ್ಮ ಬ್ಯಾಂಕಿನ ರಿಕ್ರಿಯೇಷನ್ ಕ್ಲಬ್ಬಿಗೆ ಹೋಗ್ತಿದ್ದೆ.  ನಮ್ಮ ಕಾಲೇಜಿನಲ್ಲಿ ಇಬ್ಬರು ಹೆಸರಾಂತ ಆಟಗರರಿದ್ದೂ (ಸಿ.ಆರ್.ರಮೇಶ್ ಬಾಬು ಮತ್ತು ಲಕ್ಷ್ಮೀ ಕಾರಂತ್)  ನನಗೆ ಈ ಆಟದ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ.   ಬ್ಯಾಂಕಿನಲ್ಲಿ ನನ್ನ ಜೊತೆಗಾರನಾಗಿದ್ದ ಸಿ.ಆರ್.ಲಕ್ಷ್ಮೀನಾರಾಯಣ ಒಳ್ಳೆಯ ಆಟಗಾರನೆಂದು ಹೆಸರುವಾಸಿ ಆಗಿದ್ದ.  ಯಾವುದೇ  ಟೂರ್ನಮೆಂಟಿಗೆ ಹೋದರೂ ಪ್ರಶಸ್ತಿ ಗಳಿಸಿಯೇ ಬರುತ್ತಿದ್ದ.  ಅಂತಹವನ ಸಹವಾಸದಿಂದ ರ್‍ಯಾಕೆಟ್ ಹಿಡಿಯುವುದು ಹೇಗೆ ಎಂಬುದು ಸ್ವಲ್ಪ ತಿಳಿದಿತ್ತು.  ನಮ್ಮ ಬ್ಯಾಂಕಿನ ತಂಡ ಯಾವುದೇ ಪಂದ್ಯಗಳಿಗೆ ಹೋದರೂ ನಾನು ಪಂದ್ಯ ನೋಡಲು ಹೋಗುತ್ತಿದ್ದೆ.  ಆಗ ನನಗೆ ಪರಿಚಯವಾದದ್ದು ನನ್ನ ಸೀನಿಯರ್ ಎನ್.ಕೆ.ಶ್ರೀಕಂಠಯ್ಯ.  ಮೊದಲಿ ಅವನ ಮುಖ ಚರ್ಯೆ ನೋಡಿ ತಮಿಳರವನಿರಬೇಕೆಂದು ತಿಳಿದಿದ್ದೆ.  ಅದೂ ಅಲ್ಲದೇ ಅವನು ತಮಿಳನ್ನು ಬಹಳ ಚೆನ್ನಾಗಿಯೇ ಮಾತನಾಡುತ್ತಿದ್ದ. 

 

ಅಂದೊಂದು ದಿನ ಸಂಜೆ ಆಟವಾಡಲೆಂದು ನಾನು ಹೋದಾಗ, ನನ್ನನ್ನು ಮತ್ತು ನನ್ನ ಸ್ನೇಹಿತ ಲಕ್ಷ್ಮೀನಾರಾಯಣನನ್ನು ತಮ್ಮ ಮನೆಗೆ ಬರುವಂತೆ ಶ್ರೀಕಂಠಯ್ಯ ಹೇಳಿದ.  ಹೇಗಿದ್ದರೂ ನೇರವಾಗಿ ಮನೆಗೆ ಹೋಗದ ನನಗೆ ಸರಿ ಎಂದೆನಿಸಿತು.  ಅಂದು ಆಟವಾಡದೇ ಅವರ ಮನೆಗೆ ಹೋಗಿದ್ದೆವು.  ಅವರ ಮನೆಗೆ ಹೋಗುತ್ತಿದ್ದಂತೆಯೇ ಅವರ ಚಿಕ್ಕಪ್ಪ (ವೃತ್ತಿಯಲ್ಲಿ ವೈದ್ಯರಾಗಿದ್ದರು), ಒಳಗೆ ಬನ್ನಿ ಎಂದು ತೆಲುಗುವಿನಲ್ಲಿ ಹೇಳಿದರು.  ನನಗೋ ಬಹಳ ಆಶ್ಚರ್ಯವಾಯಿತು.  ಅಲ್ಲ, ಇವನು ನೋಡಿದರೆ ತಮಿಳರಂತಿದ್ದಾನೆ, ಮನೆಯಲ್ಲಿರುವ ಅವನ ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ ಇವರೆಲ್ಲರೂ ನಮ್ಮ ಮನೆಯವರಂತೆಯೇ ಇದ್ದಾರೆ.  ಮುಖ್ಯವಾಗಿ ತೆಲುಗುವಿನಲ್ಲೇ ಮಾತನಾಡುತ್ತಿದ್ದಾರೆ. 

 

ನನ್ನ ಮನೆಯ ಬಗ್ಗೆ ಕೇಳಿದ ಅವರ ಚಿಕ್ಕಪ್ಪ, ನನ್ನ ದೊಡ್ಡಪ್ಪನವರು ಅವರಿಗೆ ಸಂಬಂಧವಾಗಬೇಕೆಂದು ತಿಳಿಸಿದರು.  ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತನಾಡಿದ ಮೇಲೆ, ತಮ್ಮ ಮಗಳು ಮದುವೆಗಿರುವಳೆಂದೂ ಒಪ್ಪಿಗೆ ಇತ್ತರೆ ನಮ್ಮ ಮನೆಗೆ ಹೋಗಿ ಬರುವೆನೆಂದಿದ್ದರು.  ಈ ಆಘತಕ್ಕೆ ತಯಾರಾಗಿ ಬಂದಿರದ ನಾನು, ನನ್ನದೇನೂ ಇಲ್ಲ, ಎಲ್ಲ ನನ್ನ ತಾಯಿ ಹೇಳಿದ ಹಾಗೆ, ಎಂದು ನುಣುಚಿಕೊಂಡು ಹೊರಬಿದ್ದಿದ್ದೆ. 

 

ಸ್ವಲ್ಪ ದಿನಗಳ ತರುವಾಯ ನನ್ನ ತಾಯಿಯೇ ಬೆಂಗಳೂರಿಗೆ ಬಂದಿದ್ದರು.  ಹುಡುಗಿಯ ಕಡೆಯವರು ಊರಿಗೆ ಬಂದಿದ್ದರೆಂದೂ, ಜಾತಕ ಕೊಟ್ಟಿರುವರೆಂದೂ, ಅದು ಕೂಡಿ ಬಂದಿದೆಯೆಂದೂ, ನನ್ನ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದರು.  ನನಗೆ ತಿಳಿಯದೇ ಇಷ್ಟೆಲ್ಲಾ ಮುಂದುವರೆದದ್ದು ನನಗೆ ಸ್ವಲ್ಪ ಬೇಸರ ತಂದಿತ್ತು.  ಆದರೂ ನನ್ನ ತಾಯಿಯ ಮುಖ ನೋಡಿ ಸುಮ್ಮನಾಗಿದ್ದೆ.  ಅವರಾಗಲೇ ಒಪ್ಪಿಯೂ ಬಿಟ್ಟಿದ್ದರು.  ಹುಡುಗಿ ನಮ್ಮ ಮನೆಗೆ ತಕ್ಕವಳಿದ್ದಾಳೆ ಎಂದಿದ್ದರು. 

 

ಒಂದು ತಿಂಗಳುಗಳಲ್ಲಿ ನಿಶ್ಚಿತಾರ್ಥವೂ ನಡೆದು ಹೋಗಿತ್ತು.  ಕನಸಿನಲ್ಲಿ ನಡೆದಂತೆ ಬಹಳ ಬೇಗ ಮದುವೆಯೂ ನಡೆದು ಹೋಗಿತ್ತು.  ಮದುವೆಗೆ ಒಂದು ತಿಂಗಳ ಮುಂಚೆ ಬಸವೇಶ್ವರನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಹಿಡಿದಿದ್ದೆ.  ಮದುವೆಯಾದ ೩-೪ ತಿಂಗಳುಗಳಲ್ಲಿ ನನ್ನ ಅಣ್ಣ ಮುಂಬೈನಿಂದ (ಮುಂಬೈ ಟೆಲಿಫೋನ್ ಎಂ.ಟಿ.ಎನ್.ಎಲ್. ಆದ ಕಾರಣ) ವರ್ಗವಾಗಿ ಬೆಂಗಳೂರಿಗೆ ಬಂದಿದ್ದ.

 

 

********

 

ಮದುವೆಯಾದ ಮೇಲೆ ನನ್ನ ಪತ್ನಿಯ ಮನೆಯ ಕಡೆಯವರು ನನ್ನನ್ನು ಇತರರಿಗೆ ಪರಿಚಯಿಸುವಾಗ ನಾನು ಬ್ಯಾಂಕಿನಲ್ಲಿ ಆಫೀಸರ್ ಆಗಿದ್ದೇನೆಂದು ಹೇಳುತ್ತಿದ್ದರು.  ಅದೇ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬದವರುಗಳೂ, ಆಫೀಸರ್ ಆದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಒಳ್ಳೆಯ ಸ್ಥಿತಿ ಬರುವುದೆಂದು ಬುದ್ಧಿಮಾತು ಹೇಳಿದ್ದರು.  ಆಗ ನನಗೂ ಅನ್ನಿಸಿದ್ದೇನೆಂದರೆ, ಇಲ್ಲಿಯವರೆವಿಗೆ ನಾನು ಸಾಧಿಸಿದ್ದಾದರೂ ಏನಿದೆ, ಈಗಲಾದರೂ ಏನನ್ನಾದರೂ ಮಾಡಿ ತೋರಿಸಬೇಕೆಂಬ ಛಲ ಉಂಟಾಯಿತು.  ಆಗಲೇ ಬ್ಯಾಂಕಿನಲ್ಲಿ ಆಫಿಸರಾಗಲು ಮೆರಿಟ್ ಪರೀಕ್ಷೆ ತೆಗೆದುಕೊಳ್ಳಲು ಕನಿಷ್ಟ ಸೇವಾಗತ್ಯವನ್ನು ೯ ವರ್ಷಗಳಿಂದ ೫ ವರ್ಷಗಳಿಗೆ ಇಳಿಸಿದ್ದರು.  ಒಂದು ತಿಂಗಳು ರಜೆ ಹಾಕಿ ಮನೆಯಲ್ಲಿ ಕುಳಿತು ಚೆನ್ನಾಗಿ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದೆ.  ಪರೀಕ್ಷೆ ಚೆನ್ನಾಗಿಯೇ ಬರೆದಿದ್ದೆ. 

 

ಆಗಿನ್ನೂ ಮದುವೆಯಾಗಿ ಒಂದು ತಿಂಗಳು ಕಳೆದಿತ್ತಷ್ಟೆ.   ಅಂದು ಬ್ಯಾಂಕಿನಲ್ಲಿ ಮಧ್ಯಾಹ್ನದ ಊಟದ ಸಮಯ ಹೆಚ್ಚಿಗೆ ಸಿಕ್ಕಿತ್ತು.  ಹಾಗಾಗಿ ಮನೆಗೆ ಹೋಗಿ ಊಟ ಮಾಡಿ ಬರೋಣವೆಂದು ಹೋಗಿದ್ದೆ.  ನಮ್ಮ ಮನೆ ಒಂದು ಔಟ್ ಹೌಸ್.  ಪಕ್ಕದಲ್ಲಿ ಇನ್ನೊಂದು ಮನೆ ಕಟ್ಟುತ್ತಿದ್ದರು.  ಅಷ್ಟು ದೂರದಿಂದ ಮನೆ ಕಡೆಗೆ ಹೋಗುತ್ತಿದ್ದಾಗ ಮನೆಯ ಬಾಗಿಲಲ್ಲಿ ಪತ್ನಿ ನಿಂತಿದ್ದು ಕಾಣಿಸಿತು.  ಬಾಗಿಲ ಹತ್ತಿರಕ್ಕೆ ನಾನು ಹೋಗುವವರೆವಿಗೂ ಅವಳು ಅಲ್ಲೇ ನಿಂತಿದ್ದು ನನ್ನ ಮುಖವನ್ನೇ ದುರುಗುಟ್ಟಿ ನೋಡುತ್ತಿದ್ದಳು.  ನಾನು ಒಳ ಹೋಗುತ್ತಿದ್ದಂತೆಯೇ, ‘ಅಯ್ಯೋ ನೀವೇನಾ?  ಯಾರೋ ನಮ್ಮ ಮನೆ ಕಡೆ ಬರ್ತಿದ್ದಾರೆ.  ಇವರ ಮುಖ ಎಲ್ಲೋ ನೋಡಿದಂತಿದೆಯಲ್ಲ ಅಂತ ಯೋಚಿಸ್ತಿದ್ದೆ.   ಸಾರಿ ಎಂದಿದ್ದಳು. 

 

ಅದಾದ ಸ್ವಲ್ಪ ದಿನಗಳಿಗೆ ಸಾಗರಕ್ಕೆ ಬ್ಯಾಂಕಿನ ಕೆಲಸದ ಮೇಲೆ ಹೋಗಿದ್ದೆ.  ಹುಟ್ಟಿನಿಂದ ೬ ವರುಷಗಳವರೆವಿಗೆ ಲಿಂಗನಮಕ್ಕಿಯಲ್ಲಿ ಇದ್ದವನಾಗಿದ್ದರೂ ಸಾಗರವನ್ನು ನೋಡಿರಲಿಲ್ಲ.  ಅತ್ತ ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಎರಡರ ಸಮ್ಮಿಶ್ರಣ.  ಸುಂದರ ನಿಸರ್ಗ ಸೌಂದರ್ಯ.  ಮಾರಮ್ಮನ ದೇವಸ್ಥಾನದ ಪಕ್ಕದಲ್ಲಿದ್ದ ಹೊಟೆಲ್‍ನಲ್ಲಿ ತಂಗಿದ್ದೆ.  ಪ್ರತಿದಿನ ಬೆಳಗ್ಗೆ ಮತ್ತು ಸಂಜೆ (ಒಂದು ವಾರದ ಮಟ್ಟಿಗೆ ಅಲ್ಲಿದ್ದದ್ದು), ಜೋಗದ ರಸ್ತೆ ಕಡೆ ನಡೆದು ಹೋಗುತ್ತಿದ್ದೆ.  ನಿಸರ್ಗ ಮನ ಆಹ್ಲಾದವಾಗಿಸುತ್ತಿತ್ತು.  ಇಂತಹ ಪರಿಸರ ಬೆಂಗಳೂರಿನಲ್ಲಿ ಒಮ್ಮೆಯೂ ಕಂಡಿರಲಿಲ್ಲ.  ಅಲ್ಲಿಯೇ ಹತ್ತಿರವಿದ ಕಾಮತ್ ಹೊಟೆಲ್‍ನಲ್ಲಿ (ಈಗ ಇದೆಯೋ ಇಲ್ಲವೋ ತಿಳಿಯದು), ಫ್ರೂಟ್ ಸಲಾಡ್ ಮತ್ತು ಐಸ್ ಕ್ರೀಂ (ಅದಕ್ಕೆ ಗಡ್ಬಡ್ ಎನ್ನುತ್ತಿದ್ದರು) ಅನ್ನು ಮೂರು ರೂಪಾಯಿಗಳಿಗೆ ಕೊಡ್ತಿದ್ದರು ಎಂದರೆ ನೀವು ನಂಬ್ತೀರಾ?  ಅದೆಷ್ಟು ರುಚಿಯಾಗಿರುತ್ತಿತ್ತೆಂದರೆ ಪ್ರತಿದಿನವೂ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ತಿನ್ನುತ್ತಿದ್ದೆ.  ಎರಡನೆಯ ದಿನ ಹೊಟ್ಟೆಯಲ್ಲಿ ತೊಂದರೆ ಕಾಣಿಸಿಕೊಂಡಾಗ ಅದರ ಹೆಸರು ಗಡ್‍ಬಡ್ ಎನ್ನುವುದು ಅನ್ವರ್ಥ ಎಂದು ತಿಳಿದಿತ್ತು. 

 

ಸಾಗರದಲ್ಲಿ ಒಂದು ವಾರ ಕಳೆಯುತ್ತಿದ್ದಂತೆಯೇ ಆಫೀಸರ್ ಪರೀಕ್ಷೆ ಪಾಸಾಗಿದೆಯೆಂಬ ವಿಷಯ ತಿಳಿಯಿತು.  ಹಾಗಾಗಿ ತಕ್ಷಣ ಬೆಂಗಳೂರಿಗೆ ಹೊರಟು ಬಂದಿದ್ದೆ.  ಮುಂಬೈಗೆ ಪೋಸ್ಟಿಂಗ್ ಆಗಿದೆಯೆಂದೂ ಇನ್ನು ಒಂದು ತಿಂಗಳಲ್ಲಿ ಬೆಂಗಳೂರು ಬಿಡಬೇಕೆಂದೂ ವಿಷಯ ತಿಳಿದಿತ್ತು.  ಒಂದೆಡೆ ಆಫೀಸರಾದ  ಖುಷಿಯಾದರೆ ಇನ್ನೊಂದೆಡೆ ನನ್ನ ನೆಂಟರಿಷ್ಟರೆಲ್ಲರನ್ನೂ ಬಿಟ್ಟು ದೂರ ಹೋಗಬೇಕಲ್ಲ ಎಂಬ ದು:ಖ.  ನಿವೃತ್ತಿ ಆಗುವವರೆವಿಗೂ ಬೆಂಗಳೂರಿನಲ್ಲಿ ಖಾಯಂ ಆಗಿ ನೆಲಸಲಾಗುವುದಿಲ್ಲವೆಂಬ ಕೊರಗೂ ಹಿಂದೆಯೇ ಇತ್ತು. 

 

ಬೆಂಗಳೂರಿನಲ್ಲಿ ಆಗಬೇಕಿದ್ದ ಎಲ್ಲ ಕೆಲಸಗಳನ್ನೂ, ಮುಂಬಯಿಗೆ ಹೊರಡುವ ತಯಾರಿಯನ್ನೂ ಮಾಡಿದ್ದೆ.  ಮುಂದಿನ ಭಾಗ ಮುಂಬೈ ಅನುಭವದ ಬಗ್ಗೆ ಬರಲಿದೆ.

 

*******

 

ಬೆಂಗಳೂರಿನಿಂದ ಮುಂಬೈಗೆ ಉದ್ಯಾನ್ ಎಕ್ಸ್‍ಪ್ರೆಸ್‍ನಲ್ಲಿ ನಾನು, ದತ್ತಾತ್ರೇಯ, ಮಹದೇವಸ್ವಾಮಿ ಮತ್ತು ಕೊಡಿಯಾಲಮಠ ಹೊರಟು ಬಂದಿದ್ದೆವು.  ಈ ಮುಂಚೆ ಮುಂಬೈ ನೋಡಿದ್ದವನು ನಾನೊಬ್ಬನೇ.  ಬರುವ ಮುಂಚೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡೇ ಬಂದಿದ್ದೆವು.  ಟ್ರೈನ್ ಸರಿಯಾಗಿ ರಾತ್ರಿ ೮ ಘಂಟೆಗೆ ದಾದರ್ ಸ್ಟೇಷನ್ನಿಗೆ ಬಂದು ಸೇರಿತ್ತು.  ಇಳಿದ ಕೂಡಲೇ ಟ್ಯಾಕ್ಸಿ ಮಾಡಿಕೊಂಡು ನಾವು ಉಳಿದುಕೊಳ್ಳುವ ಕಡೆ ಹೊರಟೆವು.  ನಮ್ಮೆಲ್ಲರಲ್ಲಿ ನನಗೊಬ್ಬನಿಗೇ ಅಲ್ಪ ಸ್ವಲ್ಪ ಹಿಂದಿ ಬರುತ್ತಿದ್ದದ್ದು.  ಟ್ಯಾಕ್ಸಿಯವನಿಗೆ ಸರಿಯಾಗಿ ಎಲ್ಲಿಗೆ ಹೋಗಬೇಕೆಂದು ತಿಳಿಸಿದದ್ದರೆ ಮೋಸ ಮಾಡಿಯಾನು ಎಂದುಕೊಂಡು, ಹೇಳಬೇಕಿದ್ದ ಸೂಚನೆಗಳನ್ನು ಒಂದು ಚೀಟಿಯಲ್ಲಿ ಬರೆದಿಟ್ಟುಕೊಂಡಿದ್ದೆ.  ಟ್ಯಾಕ್ಸಿಯವನು ಮೋಸ ಮಾಡದೆಯೇ ಸರಿಯಾದ ಜಾಗ ತಲುಪಿಸಿದ್ದನು.  ಅಂದು ರಾತ್ರಿ ಆ ಜಾಗದಲ್ಲಿ ಉಳಿದಿದ್ದು ಮಾರನೆಯ ದಿನ ಬ್ಯಾಂಕಿಗೆ ಹೋಗಿ ರಿಪೋರ್ಟ್ ಮಾಡಿಕೊಂಡಿದ್ದೆವು.  ತಕ್ಷಣ ನಮ್ಮಗಳಿಗೆ ಫ್ಲಾಟ್ ಕೊಟ್ಟಿದ್ದರು.  ಅದು ಇದ್ದದ್ದು ೩೫ ಕಿಲೋಮೀಟರ್ ದೂರದ ಮಲಾಡ್‍ನಲ್ಲಿ.  ಅಂದು ಅಲಾಟ್ಮೆಂಟ್ ಲೆಟರ್ ತೆಗೆದುಕೊಂಡು ಸಂಜೆಗೆ ಕ್ವಾರ್ಟರ್ಸಿಗೆ ಹೋಗಿದ್ದೆವು.  ಅಲ್ಲಿ ಫ್ಲಾಟ್‍ನ ಬೀಗದ ಕೈ ಕೊಡಲು ಕೇರ್ ಟೇಕರ್ ಇರಲಿಲ್ಲ.  ಮರುದಿನದ ಬೆಳಗ್ಗೆ ಬರುವನೆಂದು ತಿಳಿಯಿತು.   ಅಂದು ರಾತ್ರಿ ಉಳಿಯಲು, ಅಲ್ಲಿಯೇ ಇದ್ದ ನಮ್ಮ ಬೆಂಗಳೂರಿನ ಒಬ್ಬ ಸ್ನೇಹಿತನ ಮನೆಗೆ ಹೋದೆವು.  ಬಾಗಿಲ ಕರೆಗಂಟೆ ಒತ್ತಿದಾಕ್ಷಣ ಬಾಗಿಲಕಿಂಡಿಯಿಂದ ಯಾರೋ ಇಣುಕಿ ನೋಡಿ, ಎರಡು ನಿಮಿಷಗಳ ತರುವಾಯ ಅವರಿಲ್ಲ, ನಾಳೆ ಬನ್ನಿ ಎಂದಿದ್ದರು.  ನಮ್ಮ ಸ್ನೇಹಿತ ಒಳಗೇ ಇದ್ದು ಇಲ್ಲ ಎಂದು ಹೇಳಿದ್ದುದು ಕಿವಿಗೆ ಬಿದ್ದು ನಮಗೆ ಬಹಳ ಬೇಸರ ತಂದಿತ್ತು.  ಹತ್ತಿರದಲ್ಲೇ ಯಾವುದಾದರೂ ಒಂದು ಹೊಟೆಲ್ ಇದ್ದರೆ ಅಲ್ಲೇ ಉಳಿದರಾಯ್ತೆಂದು ಹೊರಟೇವು. 

 

ಅಷ್ಟು ಹೊತ್ತಿಗೆ ಒಬ್ಬ ಹಿರಿಯರು ಬಂದು, ನಾವು ಎಲ್ಲಿಂದ ಬಂದಿದ್ದೇವೆ, ಏನು ಬೆಕಾಗಿತ್ತು ಎಂದು ಕೇಳಿದರು.  ನಮ್ಮಗಳ ಪರಿಚಯ ಮಾಡಿಕೊಟ್ಟೆವು.  ಅವರು ತಾವು ಅಬ್ದುಲ್ ಸಲೀಂ ಎಂದೂ, ಆ ಕ್ವಾರ್ಟರ್ಸಿನ ಸೆಕ್ರೆಟರಿಯೆಂದೂ ತಿಳಿಸಿ, ನಾವುಗಳು ಬೇರೆಯಲ್ಲಿಯೂ ಹೋಗಕೂಡದೆಂದೂ, ಅಲ್ಲಿಯೇ ಇದ್ದ ಕಮ್ಯುನಿಟಿ ಹಾಲ್‍ನಲ್ಲಿ ನಾವು ಇರಲು ಏರ್ಪಾಡು ಮಾಡಿಕೊಡುವೆನೆಂದಿದ್ದರು.  ಯಾವ ಜನ್ಮದಲ್ಲಿ ಅವರು ನಮ್ಮ ಬಂಧುವಾಗಿದ್ದರೋ ಏನೋ?    ನಾವು ನಾಲ್ವರೂ ಕಮ್ಯುನಿಟಿ ಹಾಲ್‍ಗೆ ಹೋಗುವಷ್ಟರಲ್ಲಿ ಅಬ್ದುಲ್ ಸಲೀಂ ಅವರು ಮತ್ತೆ ಬಂದು ಇಬ್ಬರು ಮೂವರು  ಬ್ರಹ್ಮಚಾರಿಗಳು ಇರುವರೆಂದು ನಾವು ಇಷ್ಟ ಪಟ್ಟರೆ ಅಂದಿನ ರಾತ್ರಿ ಅಲ್ಲಿಯೇ ಉಳಿಯಬಹುದೆಂದರು.  ಹಾಗೆಯೇ ಮರುದಿನ ನಮ್ಮ ಫ್ಲಾಟ್‍ಗಳನ್ನು ಸ್ವಚ್ಛಗೊಳಿಸಲೂ ಅನುಕೂಲಮಾಡಿಕೊಟ್ಟಿದ್ದರು.   ಅಂತಹವರ ಸಂತತಿ ಇನ್ನೂ ಹೆಚ್ಚಿದರೆ ನಮ್ಮ ಸಮಾಜ ಉನ್ನತಿಯಾಗುವುದರಲ್ಲಿ ಸಂಶಯವೇ ಇಲ್ಲ. 

 

ಮೊದಲ ದಿನ ಬ್ಯಾಂಕಿನ ಲೌಂಜ್‍ಗೆ ಊಟಕ್ಕೆಂದು ಹೋಗಿದ್ದೆವು.  ಅಲ್ಲಿಯವರೆವಿಗೆ ಕ್ಯಾಂಟೀನಿನಲ್ಲಿ ಊಟ ಮಾಡಿದ್ದ ನಮ್ಮಗಳಿಗೆ ಅಧಿಕಾರಿ ಊಟದ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದು ತಿಳಿದಿರಲಿಲ್ಲ.  ಮೊದಲ ಬಾರಿ ಊಟಕ್ಕೆ ಕುಳಿತಾಗ ಅಲ್ಲಿದ್ದ ಸರಬರಾಜು ಮಾಡುವವರಿಗೆ ನಾವು ಹೊಸಬರೆಂದು ಗೊತ್ತಾಗಿತ್ತು.  ನಾನು ನನ್ನ ಬಲಭಾಗದಲ್ಲಿಟ್ಟಿದ್ದ ನೀರಿನ ಗ್ಲಾಸನ್ನು ತೆಗೆದುಕೊಂಡು ಕುಡಿದಾಗ, ಒಬ್ಬ ನನ್ನನ್ನು ದುರುಗುಟ್ಟಿಕೊಂಡು ನೋಡಿ ಮರಾಠಿಯಲ್ಲಿ ಏನೋ ಹೇಳಿದನು.  ಅದೇನೆಂದು ನನಗರ್ಥವಾಗಿರಲಿಲ್ಲ.  ಪಕ್ಕದಲ್ಲೇ ಕುಳಿತಿದ್ದ ಇನ್ನೊಬ್ಬ ಅಧಿಕಾರಿಗಳು ಅವನಿಗೆ ನಾವು ಹೊಸಬರೆಂದು ಸಮಜಾಯಿಷಿ ಹೇಳಿದ್ದರು.  ನಂತರ ಅವರಿಂದ ತಿಳಿದದ್ದೇನೆಂದರೆ ನಮ್ಮ ಎಡಭಾಗದಲ್ಲಿಟ್ಟಿರುವ ನೀರನ್ನು ಮಾತ್ರ ನಾವು ಕುಡಿಯಬೇಕಂತೆ.  ಅಂದೇ ಕೊನೆಯಾಯಿತು, ನಾನು ಮುಂದೆ ಊಟಕ್ಕಾಗಿ ಲೌಂಜಿಗೆ ಹೋಗುವುದನ್ನೇ ಕಡಿಮೆ ಮಾಡಿದೆ.  ಹೊಸದಾಗಿ ಹೊಸ ಜಾಗಕ್ಕೆ ಹೋದಾಗ ನಮ್ಮ ಗಲಿಬಿಲಿಯನ್ನು ನೋಡಿ ತಮಾಷೆ ಮಾಡಿ ಸಂತೋಷಿಸುವವರೇ ಹೆಚ್ಚಲ್ಲವೇ?

 

ಮರುದಿನ ನಮ್ಮ ನಮ್ಮ ಫ್ಲಾಟ್‍ಗಳನ್ನು ನಮ್ಮ ಸುಪರ್ದಿಗೆ ತೆಗೆದುಕೊಂಡು, ಬೆಂಗಳೂರಿನಿಂದ ನಮ್ಮ ಸಾಮಾನು ಸರಂಜಾಮುಗಳೆಲ್ಲವನ್ನೂ ತಂದುಕೊಂಡಿದ್ದೆವು.   ದತ್ತಾತ್ರೇಯ ಆಗಿನ್ನೂ ಮದುವೆಯಾಗಿರಲಿಲ್ಲ.  ಕೊಡಿಯಾಲಮಠ ಮತ್ತು ಮಹದೇವಸ್ವಾಮಿಯರು ಮದುವೆ ಆಗಿದ್ದರು.  ಕುಟುಂಬವನ್ನು ಮಾತ್ರ ಕರೆತಂದಿರಲಿಲ್ಲ.  ಪ್ರತಿ ಶನಿವಾರ ಭಾನುವಾರಗಳಂದು ಮುಂಬೈನ ಎಲ್ಲ ಜಾಗಗಳನ್ನೂ ಕಾಲ್ನಡಿಗೆಯಲ್ಲಿ ಸುತ್ತುತ್ತಿದ್ದೆವು. 

 

ಒಂದೇ ತಿಂಗಳಿನಲ್ಲಿ ನಮ್ಮನ್ನು ಪ್ರಪ್ರಥಮವಾದ ಟ್ರೈನಿಂಗ್‍ಗಾಗಿ ಚೆನ್ನೈಗೆ ಕಳುಹಿಸಿದ್ದರು.  ಅದೇ ಸಮಯದಲ್ಲಿ ನನ್ನ ಮಗಳು (೧೯೮೯ರ ನವಂಬರ್ ೧೯ನೇ ತಾರೀಖು) ಹುಟ್ಟಿದ್ದುದು.  ಜನವರಿಯ ಮೊದಲ ವಾರದಲ್ಲಿ ಮತ್ತೆ ಮುಂಬೈಗೆ ವಾಪಸ್ಸಾಗಿದ್ದೆವು.  ನಾನು ಮತ್ತು ದತ್ತಾತ್ರೇಯ ಇಬ್ಬರೂ ಒಟ್ಟಿಗೇ ಅಡುಗೆ ಮಾಡಿಕೊಳ್ಳುತ್ತಿದ್ದೆವು. 

 

ಚೆನ್ನೈ‍ನಲ್ಲಿ ೮ ವಾರಗಳ ಟ್ರೈನಿಂಗ್ ಇದ್ದಿತ್ತು.  ನಾವೆಲ್ಲರೂ ಈ ಮೊದಲೇ ಚೆನ್ನೈ ನೋಡಿದ್ದುದರಿಂದ ಏನೂ ತೊಂದರೆ ಆಗಿರಲಿಲ್ಲ. 

 

******

 

ಮುಂಬೈನಲ್ಲಿ ನನಗೆ ಸಿಕ್ಕಿದ್ದ ಇನ್ನೊಬ್ಬ ಸ್ನೇಹಿತನೆಂದರೆ ಬಂಗಾಳಿ ಶಂಕರನಾಥ ಮಿತ್ರ.  ಅವನು ವಯಸ್ಸಿನಲ್ಲಿ ನನಗಿಂತಾ ೭-೮ ವರುಷಗಳಷ್ಟು ದೊಡ್ಡವನು.  ನನ್ನೊಂದಿಗೇ ಆಫೀಸರಾಗಿ ಕೊಲ್ಕತ್ತೆಯಿಂದ ಮುಂಬೈಗೆ ಬಂದಿದ್ದನು.  ನಮ್ಮದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು.   ಇನ್ನೂ ಮದುವೆಯಾಗಿರದ ಮಿತ್ರನಿಗೆ ಹೊಟ್ಟೆಯಲ್ಲಿ ಏನೋ ತೊಂದರೆ ಇತ್ತಂತೆ.   ಅದು ಗುಣವಾಗುವುದಿಲ್ಲವೆಂದು ಅವನು ಮದುವೆ ಆಗೋದಿಲ್ಲವೆಂದು ತೀರ್ಮಾನಿಸಿದ್ದನು.  ಕೃಶಕಾಯ ಮಿತ್ರ ಪ್ರತಿದಿನ ಒಮ್ಮೆ ಮಾತ್ರ ಊಟ ಮಾಡುತ್ತಿದ್ದನು.  ಅದೂ ಸಪ್ಪೆ ಊಟ.  ರಾತ್ರಿಯ ಹೊತ್ತು ಒಂದು ಲೋಟ ಹಾಲು ಕುಡಿದು ಒಂದು ಬಾಳೆಹಣ್ಣು ಮಾತ್ರ ಸೇವಿಸುತ್ತಿದ್ದ.   ಪ್ರತಿ ದಿನ ಸಂಜೆ ನಾವಿಬ್ಬರೂ ಒಟ್ಟಿಗೇ ಮನೆಗೆ ಹೋಗುತ್ತಿದ್ದೆವು.  ಆಗ ಚರ್ಚ್‍ಗೇಟ್ ಸ್ಟೇಷನ್ನಿನಲ್ಲಿ ಅವನು ಆನಂದ್ ಬಜಾರ್ ಪತ್ರಿಕೆಯನ್ನು ಕೊಳ್ಳುತ್ತಿದ್ದ.  ನನಗು ಬಂಗಾಳೀ ಭಾಷೆಯನ್ನು ಓದಲು ಕಲಿಸಿದ್ದ.  ದೇವನಾಗರೀ ಅಕ್ಷರಗಳನ್ನು ಬಲ್ಲವರು ಬಂಗ್ಲಾವನ್ನು ಕಲಿಯುವುದು ಬಹಳ ಸುಲಭ.

 

ಒಂದು ಭಾನುವಾರ ಅವನು ಬೀಚಿಗೆ ಹೋಗೋಣವೆಂದನು.  ಅವನಿಗೆ ಮುಂಬೈನಲ್ಲಿ ಎಲ್ಲಿ ಹೇಗೆ ಹೋಗಬೆಕೆಂಬುದು ತಿಳಿದಿರಲಿಲ್ಲ.  ನಡೆದು ಹೋದರೆ ಊರು ಚೆನ್ನಾಗಿ ನೋಡಬಹುದೆಂದು ನಾನು ತಿಳಿಸಿದುದಕ್ಕೆ ಒಪ್ಪಿದ್ದನು.  ಮೊದಲು ನಾವು ಬೆಳಗಿನ ಟ್ರೈನಿನಲ್ಲಿ ಮಲಾಡದಿಂದ ಚರ್ಚ್‍ಗೇಟಿಗೆ ಹೋಗಿ ಅಲ್ಲಿಯ ನಾರಿಮನ್ ಪಾಯಿಂಟಿಗೆ ನಡೆದು ಹೋಗಿದ್ದೆವು.  ಅಲ್ಲಿಂದ ಕಾಲ್ನಡಿಗೆಯಲ್ಲಿ ಮರೀನ್ ಡ್ರೈವ್ ಮುಖೇನ ಚೌಪಾಟಿ ತಲುಪಿದ್ದೆವು.  ಅಲ್ಲಿ ಸ್ವಲ್ಪ ಹೊತ್ತು ಇದ್ದು, ನಂತರ ಹ್ಯಾಂಗಿಂಗ್ ಗಾರ್ಡನ್ ನೋಡಿಕೊಂಡು ಮುಂದೆ ಹತ್ತಿರದ ಗ್ರಾಂಟ್ ರೋಡ್ ಸ್ಟೇಷನ್ನಿಗೆಂದು ಹೊರಟೆವು.  ಇಲ್ಲಿ ರಸ್ತೆಗಳು ಯಾವುದು ಎಲ್ಲಿಗೆ ತಲುಪಿಸುತ್ತವೆ ಎಂಬುದು ಚೆನ್ನಾಗಿ ತಿಳಿದಿರಬೇಕು.  ಇಲ್ಲದಿದ್ದರೆ ನಾವು ಸೇರಬೇಕಿದ್ದ ಸ್ಥಳ ಸೇರದೇ ಇನ್ನೆಲ್ಲೋ ಹೋಗಿಬಿಡುವೆವು.  ಗ್ರಾಂಟ್ ರೋಡ್ ಸ್ಟೇಷನ್ನಿಗೆ ಹೋಗುವ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಹೋದ ನಾವುಗಳು ಮಹಾಲಕ್ಷ್ಮಿ ದೇವಸ್ಥಾನವನ್ನು ತಲುಪಿದ್ದೆವು.  ಯಾರನ್ನಾದರೂ ಕೇಳೋಣವೆಂದರೆ ಹಾಳು ಸ್ವಾಭಿಮಾನ ಮಧ್ಯೆ ಬರುತ್ತಿತ್ತು.  ನಾನು ಎಲ್ಲರಿಗೂ, ನನಗೆ  ಮುಂಬೈ ಚೆನ್ನಾಗಿ ಗೊತ್ತು ಎಂದು ಹೇಳಿಕೊಳ್ಳುತ್ತಿದ್ದೆ.  ಅದು ಸುಳ್ಳು ಎಂಬುದು ಈಗ ಅರ್ಥವಾಗುತ್ತಿತ್ತು.  ಪಾಪದ ಶಂಕರಮಿತ್ರ ಎಲ್ಲವನ್ನೂ ಸಹಿಸಿಕೊಂಡು ನನ್ನೊಡನೆ ಬರುತ್ತಿದ್ದ.  ಅದೂ ಅಲ್ಲದೇ ಇಬ್ಬರಿಗೂ ನಡಿಗೆ ಅಭ್ಯಾಸವಾಗಿತ್ತು.  ಆದ್ದರಿಂದ ನಡೆದು ಹೋಗುವುದು ಆಗೇನು ಕಷ್ಟವೆನಿಸಿರಲಿಲ್ಲ.

 

ಮಹಾಲಕ್ಷ್ಮಿ ದೇವಸ್ಥಾನದಿಂದ ನೇರ ರಸ್ತೆಯಲ್ಲಿ ಸ್ಟೇಷನ್ನಿಗೆ ಬರಬೇಕು.  ಅದರ ಬದಲಿಗೆ ಬಲಭಾಗದ ರಸ್ತೆಯಲ್ಲಿ ನಾವು ಸಾಗಿದೆವು.  ಪ್ಲಾನೆಟೇರಿಯಂ, ವೊರ್ಲಿ ಮೂಲಕ ಸಿದ್ಧಿವಿನಾಯಕ ದೇವಸ್ಥಾನ ತಲುಪಿದ್ದೆವು.  ಅಲ್ಲಿಯ ಗಣಪತಿ ದರ್ಶನ ಮಾಡಿಕೊಂಡು ನಂತರ ಹಾಗೆಯೇ ಮುಂದೆ ನಡೆದುಕೊಂಡು ದಾದರಿನ ಬೀಚನ್ನು ತಲುಪಿದ್ದೆವು.  ಅಲ್ಲಿ ಸ್ವಲ್ಪ ಹೊತ್ತು ಸುತ್ತಾಡಿ, ಜುಹು ಬೀಚಿನವರೆವಿಗೂ ನಡೆದೇ ಹೋಗಿದ್ದೆವು.  ಅಷ್ಟು ಹೊತ್ತಿಗೆ ನನ್ನ ಸ್ನೇಹಿತನ ಪಾಡಿ ಹೇಳ ತೀರದಾಗಿತ್ತು.  ಕಾಲೆತ್ತಿಡಲೂ ಅಶಕ್ಯನಾಗಿದ್ದ.  ಇನ್ನು ಮುಂದೆ ನಡೆಯುವುದು ಬೇಡ ಟ್ಯಾಕ್ಸಿ ಸಿಕ್ಕರೆ ಮನೆಗೆ ಹೋಗೋಣವೆಂದಿದ್ದ.  ನಾನಿನ್ನೂ ನಡೆಯಲು ತಯಾರಾಗಿದ್ದೆ.  ಅವನ ಒತ್ತಾಯದ ಮೇರೆಗೆ ಹತ್ತಿರದಲ್ಲೇ ಇದ್ದ ಒಂದು ಬಸ್ಸನ್ನು ಹಿಡಿದು ಮಲಾಡಿಗೆ ಹೋಗಿ ಸೇರಿದ್ದೆವು.

 

ಮಾರನೆಯ ದಿನ ಬ್ಯಾಂಕಿಗೆ ಅವನು ಬರಲೇ ಇಲ್ಲ.  ಕಾಲು ನೋವಿದೆಯೆಂದು ರಜೆ ಹಾಕಿದ್ದ.  ಅಂದೇ ಕಡೆಯಾಯಿತು.  ನಾನು ಅವನನ್ನು ಎಲ್ಲಿಗಾದರೂ ಕರೆದರೆ, ನಿನ್ನ ಜೊತೆ ಮಾತ್ರ ಬರಲೊಲ್ಲೆ ಎನ್ನುತ್ತಿದ್ದ.  ಅವನ ಕನಸಿನಲ್ಲೂ ನಾನು ಕಾಡಿದ್ದೆನೋ ಏನೋ?