೧೯೯೦ರ ಮೇ ತಿಂಗಳಿನಲ್ಲಿ ನನ್ನ ಪತ್ನಿ ೬ ತಿಂಗಳ ಮಗಳನ್ನು ಕರೆದುಕೊಂಡು ನನ್ನ ಅತ್ತೆಯವರೊಂದಿಗೆ ಮುಂಬೈಗೆ ಬಂದಿದ್ದಳು. ಪುಟ್ಟ ಮಗು ರಾತ್ರಿಯೆಲ್ಲಾ ಆಟವಾಡುತ್ತಿತ್ತು. ಬೆಳಗೆಲ್ಲಾ ಮಲಗಿ ನಿದ್ರಿಸುತ್ತಿತ್ತು. ಹೀಗಾಗಿ ಮನೆಯವಳಿಗೆ ನಿದ್ರೆಯೇ ಇರುತ್ತಿರಲಿಲ್ಲ. ಮೊದ ಮೊದಲು ಸ್ವಲ್ಪ ದಿನಗಳು ನಾನು ಮಗಳ ಆಟಗಳನ್ನು ನೋಡುವುದರಲ್ಲೇ ಕಾಲ ಕಳೆಯುತ್ತಿದ್ದೆ. ಹೇಗೆ ಒಂದು ವರ್ಷಗಳು ಕಳೆದು ಹೋದವೋ ತಿಳಿಯಲೇ ಇಲ್ಲ.
ಈ ಮಧ್ಯೆ ನನ್ನ ಕುಟುಂಬ ಬರುವ ಮುಂಚೆ, ದಿನ ಮಧ್ಯಾಹ್ನ ಎಲೆ ಅಡಿಕೆ ಹಾಕುವ ಅಭ್ಯಾಸವನ್ನು ಮಾಡಿಕೊಂಡಿದ್ದೆ. ಎಲೆ ಅಡಿಕೆ ಎಂದೂ ಮುಟ್ಟದವನು ಮುಂಬೈಗೆ ಬಂದಾದ ಮೇಲೆ ಸ್ನೇಹಿತರುಗಳ ಒತ್ತಾಯದ ಮೇರೆಗೆ ಇಲ್ಲಿಯ ಭೈಯ್ಯಾ ಕೊಡುವ ಪಾನ್ ಚಟ ಹತ್ತಿಕೊಂಡಿತ್ತು. ಆ ಭೈಯ್ಯ ಕೊಡುವ ಬಿಳಿ ಅಡಿಕೆ ನನಗೆ ತುಂಬಾ ರುಚಿಯೆನಿಸಿತ್ತು. ಅದನ್ನು ಸ್ವಲ್ಪ ಜಾಸ್ತಿಯಾಗಿಯೇ ಸೇವಿಸುತ್ತಿದ್ದೆ. ಪತ್ನಿ ಮುಂಬೈಗೆ ಬಂದಾದ ಮೇಲೆ ಒಮ್ಮೆ ನನ್ನ ಬೆರಳನ್ನು ನೋಡಿ, ಇದ್ಯಾಕೆ ಹೀಗೆ ಬಿಳಿಯಾಗಿದೆ ಎಂದು ಕೇಳಿದಳು. ನನಗೂ ಅದರ ಬಗ್ಗೆ ತಿಳಿಯದೇ ವೈದ್ಯರ ಬಳಿಗೆ ಓಡಿದ್ದೆ. ಅವರು ಚರ್ಮ ತಜ್ಞರ ಬಳಿಗೆ ಹೋಗಲು ತಿಳಿಸಿದರು. ಚರ್ಮ ತಜ್ಞರಿಗೆ ದೂರವಾಣಿಯ ಮೂಲಕ ಅಪಾಯಿಂಟ್ಮೆಂಟ್ ಕೇಳಿದಾಗ ಒಂದು ಭಾನುವಾರ ಸಂಜೆ ೫ಕ್ಕೆ ಬರಲು ತಿಳಿಸಿದ್ದರು.
ಅಂದು ಭಾನುವಾರ. ಅಂದು ನನ್ನ ಮಾವ ಮತ್ತು ಅತ್ತಿಗೆ ಬೆಂಗಳೂರಿನಿಂದ ನಮ್ಮ ಮನೆಗೆ ಬರುವವರಿದ್ದರು. ಅವರನ್ನು ಕರೆತರಲು ನಾನು ದಾದರ ಸ್ಟೇಷನ್ನಿಗೆ ಹೋಗಬೇಕಿತ್ತು. ಆಗಿನ್ನೂ ನನ್ನ ಅತ್ತೆಯವರು ನಮ್ಮಲ್ಲಿಯೇ ಇದ್ದು ಮತ್ತೆ ಅವರೊಂದಿಗೆ ವಾಪಸ್ಸಾಗುವವರಿದ್ದರು. ಸಂಜೆ ೫ ಘಂಟೆಗೆ ವೈದ್ಯರ ಬಳಿ ಹೋಗಿ ಅಲ್ಲಿಂದ ೮ಕ್ಕೆ ದಾದರ ಸ್ಟೇಷನ್ನಿಗೆ ಹೋಗಬೇಕೆಂದು ಹೊರಟೆ. ವೈದ್ಯರು ನನ್ನ ಬೆರಳನ್ನು ಪರೀಕ್ಷಿಸಿ, ಇದನ್ನು ವಿಟಿಲಿಗೋ ಎನ್ನುವರು. ಚರ್ಮದಲ್ಲಿ ಬಣ್ಣ ಒದಗಿಸುವ ಅಂಶ ಕಡಿಮೆಯಾದರೆ ಹೀಗಾಗುವುದು. ಇದಕ್ಕೆ ಅಲ್ಟ್ರಾ ರೇಸ್ ಎಂಬ ಕಿರಣವನ್ನು ಹಾಯಿಸಬೇಕು ಮತ್ತು ಬೆಳಗಿನ ಹೊತ್ತು ಬೆರಳಿಗೆ ಎಣ್ಣೆ ಹಚ್ಚಿ ಸೂರ್ಯನ ಕಿರಣಕ್ಕೆ ಒಡ್ಡಬೇಕು ಎಂದು ತಿಳಿಸಿ ಔಷಧವನ್ನು ಬರೆದುಕೊಟ್ಟಿದ್ದರು. ಹಾಗೆಯೇ ಬೆರಳಿಗೊಂದು ಚುಚ್ಚುಮದ್ದನ್ನು ಚುಚ್ಚಿದ್ದರು. ಮೊದಲೇ ಚುಚ್ಚುಮದ್ದಿಗೆ ಹೆದರುತ್ತಿದ್ದ ನನಗೆ ವಿಪರೀತ ನೋವುಂಟಾಗಿ ತಲೆ ಸುತ್ತು ಬರುವಂತಾಗಿತ್ತು. ಹತ್ತಿರದ ಮಲಾಡ್ ಸ್ಟೇಷನ್ನಿನಲ್ಲಿ ಒಂದು ಬಿಸ್ಕತ್ ಪ್ಯಾಕೆಟ್ ತೆಗೆದುಕೊಂಡು ಪೂರ್ತಿಯಾಗಿ ತಿಂದ ಮೇಲೆ ಸ್ವಲ್ಪ ಸಮಾಧಾನವಾಗಿತ್ತು. ಅದೇ ನೋವಿನಲ್ಲೇ ದಾದರ ಸ್ಟೇಷನ್ನಿಗೆ ಹೋಗಿದ್ದೆ. ಸರಿಯಾಗಿ ಎಂಟಕ್ಕೆ ಉದ್ಯಾನ್ ಎಕ್ಸ್ಪ್ರೇಸ್ ದಾದರಿಗೆ ಬಂದು ತಲುಪಿತ್ತು. ನನ್ನ ಮಾವ ಮತ್ತು ಅತ್ತಿಗೆಯರು ಬಂದಿದ್ದರು. ಅವರನ್ನು ಟ್ಯಾಕ್ಸಿಯಲ್ಲಿ ಮಲಾಡಿಗೆ ಕರೆತಂದಿದ್ದೆ. ಈ ಸಮಯದಲ್ಲಿ ಯಾರಿಗೂ ತಿಳಿಯಬಾರದೆಂದು ಆ ಬೆರಳನ್ನು ಹಿಂದಕ್ಕೆ ಇಟ್ಟುಕೊಂಡು ಮುಚ್ಚಿಕೊಂಡಿದ್ದೆ. ಮನೆಗೆ ಬಂದ ಕೂಡಲೇ ನನ್ನ ಮಾವನವರು ಬೆರಳಿಗೇನಾಗಿದೆ ಎಂದರು. ಕ್ಷಮಿಸಿ, ಅವರ ಬಗ್ಗೆ ಹೇಳುವುದನ್ನೇ ಮರೆತಿದ್ದೆ.
ಅವರು ನನ್ನ ಚಿಕ್ಕ ಮಾವನವರು. ಬೆಂಗಳೂರಿನಲ್ಲೇ ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದರು. ಅವರ ಕ್ಲಿನಿಕ್ ಇದ್ದುದು ಚಾಮರಾಜಪೇಟೆಯ ನಾಲ್ಕನೆಯ ರಸ್ತೆಯಲ್ಲಿ. ಅವರ ಹೆಸರು ಡಾ| ಎನ್.ಎಸ್. ಸುಂದರೇಶ್ ಎಂದು. ನನ್ನ ಪತ್ನಿಯ ಚಿಕ್ಕಪ್ಪನವರು. ಆಗಲೇ ಅವರಿಗೆ ೭೦ರ ಹತ್ತಿರದ ವಯಸ್ಸು. ನನ್ನ ಬೆರಳನ್ನು ಪರೀಕ್ಷಿಸಿ, ‘ಅಯ್ಯೋ ಇದೇನಿದು ಅಂಗೈ ಹುಣ್ಣಾಗಿದೆ ಎಂದು ಅದನ್ನೇ ಕತ್ತರಿಸಿಕೊಳ್ತಾರಾ? ಇದ್ಯಾರು ನಿಮಗೆ ಇಂಜಕ್ಷನ್ ತೆಗೆದುಕೊಳ್ಳಲು ಹೇಳಿದ್ದು. ನಮ್ಮ ದೇಹದಲ್ಲಿ ಎಲ್ಲ ಬಗೆಯ ರಸಾಯನಗಳಿರುತ್ತವೆ. ಅದರಲ್ಲಿ ಯಾವುದಾದರೊಂದು ಕಡಿಮೆ ಆದರೆ ಈ ರೀತಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತದಷ್ಟೆ. ನಿಮ್ಮ ದೇಹದಲ್ಲಿ ಪಾದರಸ ಮತ್ತು ಗಂಧಕದ ಅಂಶ ಕಡಿಮೆಯಾಗಿದೆ. ಅವುಗಳು ಚರ್ಮಕ್ಕೆ ಬಣ್ಣ ಒದಗಿಸಲು ಸಹಾಯಿಸುವುವು. ಅದು ಕಡಿಮೆಯಾರಿವುದರಿಂದ ಬೆರಳು ಬಿಳಿಚಿಕೊಂಡಿದೆಯಷ್ಟೆ. ನಿಮಗೆ ನಾನು ಔಷಧಿ ಕಳುಹಿಸಿಕೊಡುವೆ. ಇದೇನೂ ದೊಡ್ಡ ಕಾಯಿಲೆಯಲ್ಲ ಎಂದು ಹೇಳಿದಾಗ ನನಗೆ ಅತೀವ ಸಂತೋಷವಾಗಿತ್ತು. ಅಂದಿನವರೆವಿಗೂ ಅವರನ್ನು ವೈದ್ಯರೆಂಬ ದೃಷ್ಟಿಯಿಂದ ನೋಡದಿದ್ದವನು ಅಂದಿನಿಂದ ಧನ್ವಂತರಿಯ ಸ್ವರೂಪವೆಂದು ಪರಿಗಣಿಸಿದ್ದೆ.
ಒಂದು ವಾರದ ಬಳಿಕ ನನ್ನ ಮಾವನವರು, ಅತ್ತಿಗೆ ಮತ್ತು ಅತ್ತೆಯವರು ಬೆಂಗಳೂರಿಗೆ ವಾಪಸ್ಸಾಗಿದ್ದರು. ಸ್ವಲ್ಲ್ಪ ದಿನಗಳ ಬಳಿಕ ಅಂಚೆಯ ಮೂಲಕ ನನಗೆ ಬೇಕಿದ್ದ ಔಷಧಿ ಬಂದು ತಲುಪಿತ್ತು. ಅದೊಂದು ಲೇಹ್ಯ. ಅದರ ಹೆಸರು ರಸಗಂಧಿ ಮೆಷುಗು. ಪಾದರಸ ಮತ್ತು ಗಂಧಕದ ಮಿಶ್ರಣ. ಯಾವುದೇ ಆಯುರ್ವೇದ ಔಷಧಿಯನ್ನು ಸೇವಿಸದರೂ ರಕ್ತ ಕೆಡುವುದು. ಅದಕ್ಕಾಗಿ ಜೊತೆಗೆ ರಕ್ತಶೋಧಕವಾದ ರಕ್ತಶೋಧನಂ ಎಂಬ ಮಾತ್ರೆಯನ್ನೂ ಕಳುಹಿಸಿದ್ದರು. ಮೂರು ತಿಂಗಳುಗಳ ಕಾಲ ಈ ಔಷಧಿಯನ್ನು ಸೇವಿಸುತ್ತಿದ್ದಂತೆಯೇ ನನ್ನ ಬೆರಳು ಮಾಮೂಲಿನಂತಾಗಿತ್ತು. ಇದು ಏಕಾಗಿತ್ತು ಎಂಬ ಕುತೂಹಲ ಹೆಚ್ಚಾಗಿತ್ತು. ನನ್ನ ಮಾವನವರು ಹೇಳಿದ ಪ್ರಕಾರ ಆಹಾರ ವ್ಯತ್ಯಾಸದಿಂದ ಅಥವಾ ಹವಾಮಾನ ವ್ಯತ್ಯಯದಿಂದ ಹೀಗಾಗಿರಬಹುದೆಂದು ತಿಳಿಸಿದ್ದರು.
ಈ ವಿಷಯವನ್ನು ನನ್ನ ಇನ್ನೊಬ್ಬ ಸ್ನೇಹಿತರಾಗಿದ್ದ ಹಿಂದಿ ಅಧಿಕಾರಿ (ನಮ್ಮಲ್ಲಿ ಹಿಂದಿ ಉಪಯುಕ್ತತೆ ಹೆಚ್ಚು ಮಾಡಲು ಒಂದು ವಿಭಾಗವಿದೆ), ಪ್ರಕಾಶ ಚಂದ್ರ ಅವರಿಗೆ ತಿಳಿಸಿದ್ದೆ. ಅವರು ಹೇಳಿದ್ದೇನೆಂದರೆ, ತತ್ಕ್ಷಣ ಅಡಿಕೆ ತಿನ್ನುವುದನ್ನು ಬಿಡಬೇಕು. ಇದರಿಂದಲೇ ಹೀಗೆ ಆಗುತ್ತಿದೆ ಎಂದಿದ್ದರು. ಅವರೂ ಮೊದಲು ಬಹಳವಾಗಿ ಅಡಿಕೆ ತಿನ್ನುತ್ತಿದ್ದರಂತೆ – ಇದರಿಂದ ಶ್ವಾಸಕೋಶದ ತೊಂದರೆ ಉಂಟಾಗುತ್ತಿತ್ತಂತೆ. ಅವರ ಹೇಳಿಕೆಯಂತೆ ಸ್ವಲ್ಪ ದಿನಗಳ ಕಾಲ ಅಡಿಕೆ ತಿನ್ನುವುದನ್ನು ಬಿಟ್ಟಿದ್ದೆ. ಕೆಲವು ತಿಂಗಳುಗಳ ನಂತರ ಮತ್ತೆ ಪರೀಕ್ಷಿಸಲು ಅಡಿಕೆಯನ್ನು ಸೇವಿಸುತ್ತಿದ್ದೆ. ಒಂದೇ ವಾರದಲ್ಲಿ ಬೆರಳಿನ ಮೇಲೆ ಬಿಳಿಯ ಮಚ್ಚೆ ಕಣಿಸಿಕೊಂಡಿತು. ಅದೇ ಸಮಯಕ್ಕೆ ನಾನು ಚೆನ್ನೈಗೆ ಯಾವುದೋ ಟ್ರೈನಿಂಗಿಗೆ ಹೋಗಿದ್ದೆ. ಮೇಲೆ ತಿಳಿಸಿದ ಔಷಧ ಚೆನ್ನೈನಿಂದಲೇ ಸರಬರಾಜು ಆಗುತ್ತಿದ್ದರಿಂದ ಅಲ್ಲಿಂದ ತೆಗೆದುಕೊಂಡು ಬಂದು ಸೇವಿಸಿದ್ದೆ. ಮತ್ತೆ ಕೆಲವು ದಿನಗಳಲ್ಲಿ ಗುಣವಾಗಿತ್ತು. ಅಂದಿನಿಂದ ಇಂದಿನವರೆವಿಗೆ ಅಡಿಕೆ ಮುಟ್ಟಿಲ್ಲ.
*****
ನಾವು ಅಂದ್ರೆ ನಾನು ಮತ್ತು ನನ್ನ ಪತ್ನಿ ೧೯೯೦ರ ದೀಪಾವಳಿಯ ಸಮಯದಲ್ಲೊಂದು ಪಾಠವನ್ನು ಜೀವನದಲ್ಲಿ ಕಲಿತೆವು. ಅದರ ಬಗ್ಗೆ ಒಂದೆರಡು ಮಾತುಗಳಲ್ಲಿ ತಿಳಿಸುವ ಪ್ರಯತ್ನ ಮಾಡುವೆ.
ಎಳೆಯ ಮಕ್ಕಳಿರುವ ಮನೆಯಲ್ಲಿ ಸ್ವಲ್ಪವೂ ಗಲೀಜಿರದಂತೆ ನೋಡಿಕೊಳ್ಳಬೇಕು. ಎಳೆಯ ಮಕ್ಕಳಿಗೆ ದೃಷ್ಟಿ ಬಲು ಚುರುಕು. ಆಗ ಅವರಿಗೆ ಹಲ್ಲು ಬರುವ ಸಮಯವೂ ಆದ್ದರಿಂದ ಒಸಡಿನಲ್ಲಿ ನವೆ ಇರುತ್ತದೆಯಂತೆ. ಅದಕ್ಕಾಗಿ ಏನನ್ನಾದರೂ ಕಚ್ಚಲು ಪ್ರಯತ್ನಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಮನೆಯಲ್ಲಿ ಹಿರಿಯರಿದ್ದರೆ ಒಳ್ಳೆಯದು. ಅವರಿಗೆ ಮಕ್ಕಳನ್ನು ನೋಡಿಕೊಳ್ಳುವ ಹೆಚ್ಚಿನ ತಾಳ್ಮೆಯೂ ಇರುತ್ತದೆ. ಅಲ್ಲದೇ ಈ ವಿಷಯದಲ್ಲಿ ಅವರಿಗೆ ಹೆಚ್ಚಿನ ಪರಿಣತಿಯೂ ಇರುತ್ತದೆ.
ಆಗ ನನ್ನ ಮಗಳು ಹತ್ತು ತಿಂಗಳುಗಳ ಮಗು. ಸೆಪ್ಟೆಂಬರ್ ತಿಂಗಳ ಸಮಯ. ಒಮ್ಮೆ ರಾತ್ರಿ ಇದ್ದಕ್ಕಿದ್ದಂತೆ ಮಗುವಿಗೆ ವಾಂತಿ ಮತ್ತು ಭೇದಿ ಶುರುವಾಯಿತು. ನನ್ನ ಪತ್ನಿಗೆ ವಿಪರೀತ ಹೆದರಿಕೆ ಆಗಿತ್ತು. ಮಗುವಿಗೆ ಏನು ಆಗುತ್ತದೋ ಏನೋ, ತಕ್ಷಣ ವೈದ್ಯರಿಗೆ ದೂರವಾಣಿ ಮಾಡಿ ಎಂದಳು. ನಾನು ಸಾಮಾನ್ಯವಾಗಿ ಉಡಾಫೆ ಮನುಷ್ಯ. ಏನೂ ಆಗೋಲ್ಲ, ಮಗುವಿಗೆ ಅಜೀರ್ಣವಾಗಿರಬೇಕು, ಬೆಳಗ್ಗೆ ಅಷ್ಟು ಹೊತ್ತಿಗೆ ಸರಿ ಹೋಗ್ತಾಳೆ ಎಂದು ಮಲಗಿಬಿಟ್ಟೆ. ರಾತ್ರಿಯೆಲ್ಲ ಮಗು ವಾಂತಿ ಮತ್ತು ಭೇದಿ ಮಾಡಿಕೋಳ್ತಿತ್ತು – ಪತ್ನಿ ಅವಳಿಗೆ ಎಲೆಕ್ಟ್ರಾಲ್ ನೀರು ಕುಡಿಸುತ್ತಿದ್ದಳು. ಮಗಳು ಸ್ವಲ್ಪ ಮೊಂಡು. ತಕ್ಷಣದಲ್ಲಿ ಎಲೆಕ್ಟ್ರಾಲ್ ನೀರನ್ನು ಕುಡಿಯುತ್ತಿರಲಿಲ್ಲ. ಏನೇನೋ ಪುಸಲಾಯಿಸಿ ಕುಡಿಸಬೇಕಿತ್ತು. ರಾತ್ರಿಯೆಲ್ಲಾ ಮಗುವನ್ನು ಎತ್ತಿಕೊಂಡು ಓಡಾಡ್ತಿದ್ದಳು. ಬೆಳಗ್ಗೆ ಎದ್ದ ಕೂಡಲೇ ಮಗುವಿಗೆ ತುಂಬಾ ಆನಾರೋಗ್ಯ, ಈಗಲಾದರೂ ವೈದ್ಯರಿಗೆ ತಿಳಿಸಿ ಎಂದಿದ್ದಳು. ಆಗಲೂ ನನಗೆ ಅಷ್ಟಾಗಿ ಏನೂ ಗೊತ್ತಾಗಲಿಲ್ಲ. ಆಗ ಅವಳೇ ಹೇಳಿದ್ದು, ಮಗುವಿನ ಕಣ್ಣಿನ ಕೆಳಗೆ ಕಪ್ಪು ಗುರುತಾಗಿದೆ ಮತ್ತು ಮೈಯೆಲ್ಲಾ ನೀಲಿ ಬಣ್ಣಕ್ಕಾಗ್ತಿದೆ ಎಂದು. ಆಗ ನನಗೆ ಸ್ವಲ್ಪ ಮನವರಿಕೆ ಆಗಿತ್ತು. ಪಕ್ಕದ ಫ್ಲಾಟ್ನಲ್ಲಿದ್ದ ಬ್ಯಾಂಕಿನ ಇಂಜಿನಿಯರ್ ಅವರ ಪತ್ನಿ ಶಿಶುವೈದ್ಯ ಪರಿಣಿತೆ. ಅವರಿಗೂ ೩-೪ ತಿಂಗಳುಗಳ ಮಗುವಿತ್ತು. ಅವರಿಗೆ ಹೋಗಿ ವಿಷಯ ತಿಳಿಸಿದೆ. ಅವರು ಮಗುವಿಗೆ ಎಲೆಕ್ಟ್ರಾಲ್ ನೀರನ್ನು ಸಾಕಷ್ಟು ಕುಡಿಸಲು ತಿಳಿಸಿ, ಏನೋ ಔಷದಿಯನ್ನು ಬರೆದುಕೊಟ್ಟಿದ್ದರು. ಹಾಗೆಯೇ ಇನ್ನೂ ಕಡಿಮೆ ಆಗದಿದ್ದರೆ ತಮ್ಮ ಬಳಿ ಕರೆತರಲು ತಿಳಿಸಿದ್ದರು. ಮನೆಯಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಮಗು ಎಲೆಕ್ಟ್ರಾಲ್ ನೀರನ್ನು ಕುಡಿಯುತ್ತಲೇ ಇರಲಿಲ್ಲ. ಬದಲಾಗಿ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಹೆದರಿದ ನಾವು ವೈದ್ಯೆಯ ಮನೆಗೆ ಹೋದೆವು. ಅವರೆದುರಿಗೆ ಕಮಕ್ ಕಿಮಕ್ ಅನ್ನದೇ ಎಲೆಕ್ಟ್ರಾಲ್ ನೀರನ್ನು ಕುಡಿದಿದ್ದಳು. ಆದರೂ ಆರೈಕೆ ಮಾಡಲು ಆ ವೈದ್ಯೆಯನ್ನು ಕೇಳಿಕೊಂಡೆವು. ಆಗ ಅವರು ಹತ್ತಿರದಲ್ಲೇ ಇದ್ದ ಒಂದು ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗುವಂತೆಯೂ, ಸ್ವಲ್ಪ ಹೊತ್ತಿನ ಬಳಿಕ ತಾವೇ ಬಂದು ಔಷಧೋಪಚಾರ ಮಾಡುವುದಾಗಿ ತಿಳಿಸಿದ್ದರು.
ನರ್ಸಿಂಗ್ ಹೋಂಗೆ ಅಡ್ಮಿಟ್ ಮಾಡಿದ ನಂತರ ಆ ವೈದ್ಯೆ ಬಂದು ಗ್ಲೂಕೋಸ್ ಡ್ರಿಪ್ಸ್ ಕೊಟ್ಟರು. ರಾತ್ರಿಯೆಲ್ಲಾ ಡ್ರಿಪ್ಸ್ ಏರುತ್ತಲೇ ಇತ್ತು. ಅಂದು ದೀಪಾವಳಿ ಅಮಾವಾಸ್ಯೆಯ ರಾತ್ರಿ. ರಾತ್ರಿಯೆಲ್ಲಾ ಪಟಾಕಿಗಳ ಆರ್ಭಟ. ಮಗುವಿಗೆ ಹೇಗೋ ನಿದ್ರೆ ಬಂದಿತ್ತು. ಆದರೆ ನನಗೆ ಮತ್ತು ನನ್ನ ಪತ್ನಿಗೆ ನಿದ್ರೆಯೇ ಇಲ್ಲ. ಬೆಳಗ್ಗೆ ಅಷ್ಟು ಹೊತ್ತಿಗೆ ಮಗುವಿನ ಆರೋಗ್ಯ ಸುಧಾರಿಸಿತ್ತು. ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದಿದ್ದೆವು. ಇನ್ನೂ ಒಂದೆರಡು ದಿನಗಳು ಇಂಜಕ್ಷಣ್ ಕೊಡಬೇಕೆಂದು ಡ್ರಿಪ್ಸ್ಗೆಂದು ಚುಚ್ಚಿದ್ದ ಸೂಜಿಯನ್ನು ಹಾಗೆಯೇ ಬಿಟ್ಟಿದ್ದರು. ಮನೆಗೆ ಕರೆತರುತ್ತಿದ್ದಂತೆಯೇ ಮಗುವಿಗೆ ಅದೆಲ್ಲಿಂದ ಶಕ್ತಿ ಬಂದಿತ್ತೋ ಏನೋ – ಮೊದಲು ಅವಳು ಮಾಡಿದ ಕೆಲಸವೆಂದರೆ ಮಂಚವನ್ನು ಹತ್ತಿದ್ದು. ಅದರ ಭಾವಚಿತ್ರವನ್ನು ಇಲ್ಲಿ ಹಾಕಿರುವೆ. ನೋಡಿ. ಇದಕ್ಕೇ ಅಲ್ವೇ ಮಕ್ಕಳಿಗೆ ಕೋತಿ ಅನ್ನೋದು.
ನಂತರ ವೈದ್ಯರು ಹೇಳಿದ್ದು ಏನೆಂದರೆ, ಮಕ್ಕಳಿಗೆ ಕಣ್ಣು ಬಹಳ ಚುರುಕಾಗಿರುತ್ತದೆ, ಎಲ್ಲೇ ಪೇಪರ್ ಚೂರು, ಕಸ ಬಿದ್ದಿದ್ದರೂ ಕಾಣುವುದು. ಅದನ್ನು ತಕ್ಷಣ ಬಾಯಿಗೆ ಹಾಕಿಕೊಳ್ಳುತ್ತಾರೆ. ಆಗ ಇಂತಹ ಸನ್ನಿವೇಶವನ್ನು ನಾವು ಎದುರಿಸಬೇಕಾಗುತ್ತದೆ. ಅದಕ್ಕೇ ಎಳೆಯ ಮಕ್ಕಳಿರುವ ಮನೆಯನ್ನು ಯಾವಾಗಲೂ ಶುಚಿಯಾಗಿ ಇಟ್ಟಿರಬೇಕು.
*******
ನನ್ನ ಮಗಳಿಗೆ ಒಂದು ವರುಷ ತುಂಬುವ ವೇಳೆಗೆ ನನ್ನ ಪತ್ನಿಯ ಅಣ್ಣನ ಮದುವೆ ನಿಶ್ಚಯವಾಗಿತ್ತು. ಅದಕ್ಕಾಗಿ ನಾವು ಬೆಂಗಳೂರಿಗೆ ಹೋಗಿದ್ದೆವು. ಮದುವೆ ಇದ್ದದ್ದು ಹನುಮಂತನಗರದಲ್ಲಿ ಮತ್ತು ನನ್ನ ಮಾವನವರ ಮನೆ ಇರುವುದು ರಾಜಾಜಿನಗರದಲ್ಲಿ. ಹಾಗಾಗಿ ಅಂದು ಸಂಜೆ ಎಲ್ಲರೂ ವರಪೂಜೆಗೆ ಎಲ್ಲ್ರನ್ನೂ ಕರೆತರಲು ಬಸ್ ಬರುವುದಿತ್ತು. ಅದರ ಹಿಂದಿನ ದಿನ ಬಾಬರಿ ಮಸೀದಿ ಉರುಳಿಸಿದ ಸುದ್ದಿ ಟಿವಿಯಲ್ಲಿ, ಪತ್ರಿಕೆಯಲ್ಲಿ ಬಂದಿತ್ತು. ಸಂಜೆ ನಾಲಕ್ಕಾದರೂ ನಮ್ಮವರನ್ನೆಲ್ಲಾ ಕರೆದೊಯ್ಯಲು ಬಸ್ಸು ಬಂದಿರಲಿಲ್ಲ. ಆಗ ವಧುವಿನ ಕಡೆಯವರು ‘ಮಸೀದಿ ಒಡೆದ ಗಲಾಟೆ ಇರೋದ್ರಿಂದ ಬಸ್ಸು ಸಿಗೋದು ಕಷ್ಟ ಆಗಿದೆ, ಸ್ವಲ್ಪ ತಡವಾಗಬಹುದು‘, ಎಂದು ಫೋನಾಯಿಸಿದ್ದರು.
ಅಷ್ಟು ಹೊತ್ತಿಗೆ ನನ್ನ ಮೂರನೆಯ ಭಾವಮೈದುನ ಗುರು (ಹೆಸರು ಸೂರ್ಯನಾರಾಯಣ – ಸಾಹಸಿ), ‘ನಾವಿಬ್ಬರೇ ಸ್ಕೂಟರ್ನಲ್ಲಿ ಹೋಗೋಣ್ವಾ?’ ಎಂದ. ನಾನು ಎಲ್ಲರಿಗೂ ಎಲ್ಲ ಸಮಯಗಳಲ್ಲೂ ಹೂಂ ಅನ್ನೋನೇ! ಅಂದರಿಕಿ ಮಂಚಿವಾಡು ಅನಂತಯ್ಯ ಅನ್ನುವ ಹಾಗೆ. ಹೊರಟ ಕೂಡಲೇ ಅವನು, ‘ಕೇಶವ ಕೃಪ ಕಡೆ ಹೋದರೆ ಫಸ್ಟ್ ಹ್ಯಾಂಡ್ ವಿಷಯ ತಿಳಿಯತ್ತಲ್ವಾ?’ ಎಂದ. ಅವನು ಹೇಳ್ತಿರೋದು ಬಾಬ್ರಿ ಮಸೀದಿ ಬಗ್ಗೆ ಅಂತ ನನಗೆ ಗೊತ್ತಿತ್ತು. ಆದರೂ ‘ಯಾವ ವಿಷಯ, ಅಲ್ಲಿ ಯಾರು ಗೊತ್ತಿದ್ದಾರೆ‘ ಎಂದು ಕೇಳಿದೆ. ‘ಆಹಾಹ! ನಿಮಗೆ ಅಲ್ಲಿರುವವರೆಲ್ಲರೂ ಗೊತ್ತು, ಅಲ್ವಾ?’ ಎಂದಿದ್ದ. ಸರಿ ನಡೆ ಹೋಗೋಣ, ಎಂದಿದ್ದೆ. ಹೋಗುವ ಹಾದಿಯಲ್ಲೆಲ್ಲೂ ಗಲಾಟೆ ಕಾಣಬರಲಿಲ್ಲ. ಶಂಕರಪುರದಲ್ಲಿರುವ ಕೇಶವ ಕೃಪ ಒಳಗೆ ಹೋದರೆ ಅಲ್ಲಿ ಯಾರೂ ಸಿಕ್ಕಲಿಲ್ಲ. ನಾಗಭೂಷಣ ಒಬ್ಬರೇ ಕುಳಿತಿದ್ದರು. ನನ್ನ ಬಹಳ ವರುಷಗಳ ನಂತರ ಕಂಡರೂ ಆಪ್ಯಾಯತೆಯಿಂದ ಮಾತನಾಡಿಸಿದ್ದರು. ಗುರುವಿಗೆ ಬೇಕಿದ್ದ ಮಾಹಿತಿ ಯಾವುದನ್ನೂ ನಾನು ಕೇಳಲಿಲ್ಲ. ಅಲ್ಲಿ ಜಾಸ್ತಿ ಹೊತ್ತು ನಿಲ್ಲದೇ ನಾನೇ ಗುರುವನ್ನು ಮದುವೆ ಮನೆಗೆ ಹೊರಡುವಂತೆ ಹೇಳಿದ್ದೆ.
ಒಂದೆಡೆ ಗಲಾಟೆ ಆದರೆ, ಎಲ್ಲ ಕಡೆಯಲ್ಲೂ ಎಲ್ಲರ ಮೇಲೂ ಅನುಮಾನ ಪಡೋದು ಸ್ವಾಭಾವಿಕವೇ. ಆದರೆ ಎಲ್ಲಿ ನಿರ್ಲಕ್ಷ್ಯತನ ಇರತ್ತೋ ಅಲ್ಲೇ ಮತ್ತೆ ಅವಘಡ ಸಂಭವಿಸುವುದು. ಇದನ್ನು ತಪ್ಪಿಸಲು ಮಾಡಬೇಕಾದ್ದೇನು? ಪೊಲೀಸರಿಂದ ಅಥವಾ ಮಿಲಿಟರಿಯವರಿಂದ ಇದನ್ನು ತಪ್ಪಿಸಲಾಗುವುದಿಲ್ಲ. ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಬೇಕಷ್ಟೆ. ಇದಕ್ಕಾಗಿ ಅವಶ್ಯಕವಾಗಿರುವುದು ವಿದ್ಯೆ ಮತ್ತು ದೇಶಾಭಿಮಾನ. ಇದನ್ನು ಹೇಗೆ ಹುಟ್ಟು ಹಾಕುವುದು? ಇದನ್ನು ಅನಾದಿಕಾಲದಿಂದಲೂ ಹುಡುಕುತ್ತಲೇ ಇದ್ದೇವೆ, ಬಹುಶ: ಹುಡುಕುತ್ತಲೇ ಇರುತ್ತೇವೆ. ಇದು ನೈಸರ್ಗಿಕ. ಸಾವು, ನೋವು, ನಲಿವು, ಸಂತೋಷ, ಏಕತೆ, ವೈಮನಸ್ಯ, ಹೊಡೆದಾಟ ಇತ್ಯಾದಿ ಎಲ್ಲವೂ ಒಂದೇ ನಾಣ್ಯದ ಎರಡು ಮುಖಗಳು. ಒಂದಿಲ್ಲದೇ ಇನ್ನೊಂದಾಗದು. ಜೀವನ ಹೇಗೆ ಬರುವುದೋ ಹಾಗೆಯೇ ಸ್ವೀಕರಿಸುತ್ತಾ ಹೋಗುವುದೇ ಸರಿಯಾದ ಮಾರ್ಗ ಎಂದು ನನ್ನ ಅನಿಸಿಕೆ. ಯಾರು ಯಾವುದನ್ನು ತಪ್ಪಿಸಲಾದೀತು. ನಾನು ಇಂತಹದ್ದನ್ನು ತಪ್ಪಿಸಿದೆ ಎಂದು ತಿಳಿದುಕೊಂಡರೆ ಅದು ಮೂರ್ಖತನದ ಪರಮಾವಧಿ, ಅಲ್ಲವೇ?
ಮದುವೆ ಮುಗಿದು ನಾವು ಮತ್ತೆ ಮುಂಬೈಗೆ ವಾಪಸ್ಸಾಗಿದ್ದೆವು. ನನ್ನ ಮಗಳಿಗೆ ಒಂದು ವರ್ಷ ತುಂಬಿದ ಸಂದರ್ಭ. ಮೊದಲ ಹುಟ್ಟಿದ ಹಬ್ಬಕ್ಕೆ ನನ್ನ ತಂದೆ, ತಾಯಿ, ನನ್ನ ಮೂರನೆಯ ಅಣ್ಣ, ಮಾವ, ಅತ್ತೆಯರು ಬಂದಿದ್ದರು. ಸಾಧಾರಣವಾಗಿ ಹುಟ್ಟಿದ ಹಬ್ಬವನ್ನು ಆಚರಿಸಿದ್ದೆವು. ಒಂದೆರಡು ದಿನಗಳ ಬಳಿಕ ನನ್ನ ಮಾವ ಮತ್ತು ಅತ್ತೆಯರು ವಾಪಸ್ಸು ಬೆಂಗಳೂರಿಗೆ ಹೊರಟರು. ನನ್ನ ತಂದೆ ತಾಯಿ ಮತ್ತು ಅಣ್ಣ ಸ್ವಲ್ಪ ದಿನಗಳ ಮಟ್ಟಿಗೆ ಮುಂಬೈನಲ್ಲಿಯೇ ಇದ್ದರು. ಆಗ ಮುಂಬೈ ತೋರಿಸುವಂತೆ ನನ್ನ ತಂದೆ ಕೇಳಿದರು. ನಾನು ಅದಕ್ಕೆ, ಅಯ್ಯೋ, ಇಲ್ಲೇನಿದೆ ನೋಡಕ್ಕೆ, ಎಲ್ಲಿ ನೋಡಿದ್ರೂ, ಜನ, ಬಿಲ್ಡಿಂಗು, ನೂಕುನುಗ್ಗಲು, ನಿಮಗೆ ಅದೆಲ್ಲಾ ಸರಿ ಹೋಗಲ್ಲ ಎಂದು ಸುಮ್ಮನಾಗಿಸಿದ್ದೆ. ಆದರೆ ನನ್ನಣ್ಣ (ಮೊದಲು ಮುಂಬೈನಲ್ಲಿಯೇ ಇದ್ದವನು), ನಾವಿದ್ದ ಮಲಾಡಿಗೆ ಹತ್ತಿರವೇ ಆದ ಮಾರ್ವೇ ಬೀಚನ್ನು ತೋರಿಸೋಣ ಎಂದಿದ್ದ.
ಒಂದು ಭಾನುವಾರ ಸಂಜೆ ನಾನು, ಅಪ್ಪ, ಅಮ್ಮ, ಮತ್ತು ನನ್ನಣ್ಣ, ನನ್ನ ಒಂದು ವರುಷದ ಮಗಳನ್ನು ಎತ್ತಿಕೊಂಡು ಸ್ಟೇಷನ್ನಿನವರೆವಿಗೆ ಆಟೋವಿನಲ್ಲಿ ಹೋಗಿ, ಅಲ್ಲಿಂದ ಬಸ್ಸಿನಲ್ಲಿ ಮಾರ್ವೆಗೆ ಹೋದೆವು. (ಮನೆಯಲ್ಲಿ ಕೆಲಸವಿದೆ ಎಂದು ಪತ್ನಿ ಮಾತ್ರ ಬಂದಿರಲಿಲ್ಲ). ಮನೆಯಿಂದ ಹೊರಟಾಗಲಿಂದ ನನ್ನ ಮಗಳನ್ನು ನನ್ನಣ್ಣ ಎತ್ತಿಕೊಂಡಿದ್ದ. ಬೀಚಿನ ಹತ್ತಿರ ಹೋಗುವಷ್ಟರಲ್ಲಿ (ಮುಕ್ಕಾಲು ಘಂಟೆಯಾಗಿರಬೇಕು), ಮಗು ಅಳಲು ಪ್ರಾರಂಭಿಸಿತು. ನನ್ನ ತಾಯಿ ಅವಳನ್ನು ಕೆಳಗೆ ಬಿಡಲು ತಿಳಿಸಿದರು. ಆದರೂ ನಾನು ತಯಾರಿರಲಿಲ್ಲ. ಹಾಲಿನ ಬಾಟಲು ಕೊಟ್ರೆ ಅದೂ ಅವಳಿಗೆ ಬೇಡ. ಬಿಸ್ಕತ್ ಚೂರು ಕೊಟ್ರೆ ಅದು ಬೇಡ. ಬೇರೆಯವರು ಎತ್ತಿಕೊಂಡರೂ ಸುಮ್ಮನಾಗ್ತಿಲ್ಲ. ಏನೆಲ್ಲಾ ರಮಿಸಿದರೂ ಅವಳು ಕೇಳಲೊಲ್ಲಳು. ನನ್ನಣ್ಣನಿಗಂತೂ ಬಹಳ ಕೋಪ ಬಂದಿತ್ತು. ಬೀಚು ತೋರಿಸೋಣ ಅಂತ ಕರೆದುಕೊಂಡು ಬಂದ್ರೆ ಇವಳ ಅಳುವಿನಲ್ಲಿ ನಮ್ಮ ಸಮಯವೆಲ್ಲಾ ಹಾಳು ಅಂತ ಅವನು. ಅಷ್ಟು ಹೊತ್ತಿಗೆ ನಮ್ಮ ತಾಯಿ, ತಮ್ಮ ಅನುಭವದಂತೆ ಮಗುವಿಗೆ ಎಲ್ಲಿಯಾದರೂ ಇರುವೆ ಅಥವಾ ಇನ್ನೇನಾದರೂ ಕಚ್ಚಿರಬಹುದು ನೋಡು ಅಂತ ನನಗೆ ಹೇಳಿದರು. ನೋಡಿದರೆ ಮಗುವಿನ ಕೆಳಗೆ ಕೆಂಪಗಾಗಿದೆ. ಅಮ್ಮನಿಗೆ ಆ ವಿಷಯ ಹೇಳಿದೆ. ಅದಕ್ಕವರು, ಒಂದೇ ಸಮನೆ ಎತ್ತಿಕೊಂಡಿರುವುದರಿಂದ ಹಾಗೆ ಆಗಿದೆ. ಸ್ವಲ್ಪ ಹೊತ್ತು ಕೆಳಗೆ ಬಿಡು, ಸರಿ ಹೋಗ್ತಾಳೆ ಅಂದ್ರು. ಅವಳನ್ನು ಕೆಳಗೆ ಬಿಟ್ಟ ಕೂಡಲೇ ಮರಳಿನಲ್ಲಿ ಓಡಿ, ಆಡಲು ಪ್ರಾರಂಭಿಸಿದಳು. ಮತ್ತೆ ಮನೆಗೆ ಬರುವವರೆವಿಗೂ ಏನೂ ಗಲಾಟೆ ಇರಲಿಲ್ಲ. ಇದಕ್ಕೇ ಅಲ್ವೇ ಮನೆಯಲ್ಲಿ ಒಬ್ಬರು ಹಿರಿಯರು ಇರಬೇಕು ಅನ್ನುವುದು.