ವಿಭಾಗಗಳು
ಕವನಗಳು

ಕಕ್ಕುಲತೆ

ಮುಡಿಯಲಿ ನಗುತಿಹೆ ಮಲ್ಲಿಗೆ ಹೂವು

ಮುತ್ತನು ಸುರಿಸುತಿದೆ ನಲ್ಮೆಯ ನುಡಿಯು

ನಾಸಿಕದಿ ಮಿಂಚುತಿಹ ಮುತ್ತಿನ ನತ್ತು

ಸತಿತನವ ಸೂಚಿಸುತಿಹ ಗತ್ತಿನ ಕತ್ತು

 

ಕಂಕುಳಲಿ ತುಳುಕುತಿದೆ ತುಂಬಿದ ಕೊಡ

ಘಲಿಸುವ ಹೆಜ್ಜೆಯು ಛಾಪಿಸುತಿದೆ ಗಾಢ

ಅತ್ತಿತ್ತ ನೋಡುತಿಹ ಚಂಚಲ ಕಂಗಳು

ಮೊಗದಲಿ ಮುದದಲಿ ಅರಳಿದ ಮುಗುಳು

 

ಕಾಲಿಗೆ ಸಿಲುಕುತಿಹ ಅಂಬೆಗಾಲ ಕಂದ

ಜೋಡಿ ಹಲ್ಲಿನ ನಗುವು ಎಂತಹ ಚಂದ

ತಂಟೆಕೋರಗೆ ಅಮ್ಮನ ಮುದ್ದಿನ ಗುದ್ದು

ಕೇಕೆ ಹಾಕಿ ನಗುವುದೇ ಅಂಗಳದಿ ಸದ್ದು

               magu-taayi.jpg
 

 

ಕಂಡುದು ತುಂಟನ ನಗುವಿನ ಹಿಂದೆ

ಕಟ್ಟಿದೆ ಮಗುವು ಚೇಷ್ಟೆಯ ಕೈಗಳ ಹಿಂದೆ

ಬಾಯಲಿ ಕಂಡುದು ಮಣ್ಣಿನ ಹೆಂಟೆ

ಕೈಯೊಳು ತುಂಬಿದೆ ಅದರ ಬೊಂತೆ ಬೊಂತೆ

 

ನಗುವಿನ ಹಿಂದೆಯೇ ಮಗುವಿನ ಅಳುವು

ನರಳುತಿದೆ ಮೊಗವು, ನುಲಿಯುತಿದೆ ಕರುಳು

ಮಂಕಾಗಿಹುದು ಅಮ್ಮನ ಅಳಲಿನ ಮೊಗವು

ಕಂಡಿಲ್ಲವೇ ಮನೆ ಮನೆಗಳಲ್ಲೂ ನಾವು ನೀವು

 

ಇದು ಸಾಮಾನ್ಯವಾಗಿ ಪ್ರತಿ ಮನೆಗಳಲ್ಲು

ಕಂಡು ಬರುವ ಅಮ್ಮ ಮಕ್ಕಳ ದಿನದಾಟ

 

 

ಟಿಪ್ಪಣಿ : ಹಳ್ಳಿಯ ಹೆಣ್ಣು ಮಗಳು ಊರಿನ ಬಾವಿಯಲ್ಲಿ ನೀರನ್ನು ಎಳೆದುಕೊಂಡು ಮನೆಗೆ ಹೋಗುತ್ತಿರುವ ದೃಶ್ಯ.  ಆಕೆಯ ಮಗು, ಅಂಬೆಗಾಲಿಕ್ಕಿ ಹಿಂಬಾಲಿಸುತ್ತಿದೆ.  ಇಲ್ಲಿಯವರೆವಿಗೆ ಎಲ್ಲವೂ ಸರಿಯಾಗಿದೆ, ಆ ಇಬ್ಬರೂ ಮಂದಹಾಸ ಬೀರುತ್ತಿರುವರು.   ಇದ್ದಕ್ಕಿದ್ದಂತೆ, ಮಗುವು ಜೋರಾಗಿ ಅಳಲು ತೊಡಗುವುದು, ತಾಯಿ ನೋಡಿದಾಗ, ಮಗುವಿನ ಬಾಯಲ್ಲಿ ಮತ್ತು ಕೈಯಲ್ಲಿ ಮಣ್ಣು ಇರುವುದು ಕಂಡು ಬಂದಿತು.  ಅಲ್ಲಿಯವರೆವಿಗೆ ಮಂದಹಾಸದಿ ಅರಳಿದ ಆಕೆಯ ಮೊಗವು ತಟಕ್ಕನೆ ಸಂಕುಚಿತವಾಯಿತು.  ಇಂತಹ ದೃಶ್ಯಗಳು ಹಳ್ಳಿಗಳಲ್ಲಿ ಕಂಡು ಬರುವುದು ಸಾಮಾನ್ಯ, ಅಲ್ವೇ?