ವಿಭಾಗಗಳು
ಕವನಗಳು

ನೆನಪಿನಾಳದಿಂದ ಅಮ್ಮ

ಅಮ್ಮ ಒಬ್ಬಳೇ ಎಲ್ಲರಿಗೂ – ಹಾಗೇ ನನಗೂ

ಅವಳ ನೆನೆಯಲು ಸುಖ ಮಿಶ್ರಿತ ದು:ಖ

ಅವಳು ಹತ್ತಿರ ಸುಳಿಯೇ ಮನಕಾನಂದ

ಜಗದಲಿ ನನಗವಳೇ ಸ್ಫುರದ್ರೂಪಿ

                    amma1.jpg

 

ಅಂದದ ದುಂಡು ಮುಖಕೆ ಅಂಟಿನ ಕುಂಕುಮ

ಕೆನ್ನೆಗೆ ಸುವಾಸಿತ ಅರಿಶಿನದ ಲೇಪನ

ಕೊರಳೆಂದೂ ಕಾಣಲಿಲ್ಲ ಒಂದಪರಂಜಿ ಚಿನ್ನ

ಎಂದಿಗೂ ಬಿಟ್ಟುಕೊಡಲಿಲ್ಲ ತನ್ನತನವನ್ನ

 

ಓಂನಾಮ ಕಲಿಸಿದವಳೇ ನೀನಲ್ಲವೇನಮ್ಮ

ಕೃಶಕಾಯನಿಗೆ ಹೆಚ್ಚಿನ ಆರೈಕೆ ನೀಡಿದೆಯಮ್ಮ

ಕೈತುತ್ತ ನೀಡಿ ಅಮೃತ ಉಣಿಸಿದವಳು

ನನ್ನ ಪುಂಡಾಟಿಕೆಯ ಸಹಿಸಿದವಳು

 

ಪೂಜೆಗೆ ಪಾರಿಜಾತ ಹೆಕ್ಕಿ ತರಿಸಿದವಳು

ಅದರಲಿ ಹಾರ ಮಾಡಲು ಕಲಿಸಿದವಳು

ಎಂದೂ ಕೈ ಚಾಚದಂತಹ ಪಾಠ ಕಲಿಸಿದವಳು

ಇತರರ ನೋವು ನನ್ನದೆಂದು ತೋರಿಸಿದವಳು

 

ಜೀವನದ ಮರ್ಮ ಅರುಹಿದ ಮಹಾತಾಯಿ

ಪೂಜೆ ಪುನಸ್ಕಾರದ ಪರಿ ಕಲಿಸಿದವಳು

ಇಲ್ಲದಿದ್ದರೂ ಕೊಡುಗೈ ಆಗಿಸಿದವಳು

ನಾನೆಂತು ತೀರಿಸಬಲ್ಲೆ ಆ ನಿನ್ನ ಮಾತೃ ಋಣ

 

ಅಪ್ಪನ ನೊಗಕೆ ಸಾಟಿಯಾಗಿ ಹೆಗಲು ಕೊಟ್ಟವಳು

ಎಂದಿಗೂ ಮಕ್ಕಳಿಂದ ನಿರೀಕ್ಷಿಸದವಳು

ಕಡುಬಡತನದಲೂ ಬಿಡಲಿಲ್ಲ ಸ್ವಾಭಿಮಾನ

ಲೋಕದಿಂದ ನಮಗೆ ತಂದಿತ್ತ ದೊಡ್ಡ ಬಹುಮಾನ

 

ನೀನಂದು ನನ್ನ ಬಿಟ್ಟು ಹೋದೆಯಲ್ಲ

ನೀ ಹೀಗೆ ಮೋಸಿಸುವೆಯೆಂದು ನಾ ತಿಳಿದಿರಲಿಲ್ಲ

ಒಂದು ಕ್ಷಣದ ನನ್ನ ಅಚಾತುರ್ಯ

ನೀ ತೀರಿಸಿದೆ ಇಹಲೋಕದ ಕಾರ್ಯ

 

ಮತ್ತೆ ಹೇಗೆ ನಾ ಸರಿಪಡಿಸಲಿ ನನ್ನ ತಪ್ಪು

ನಾ ನೀಡಲಾರೆನೆ ನಿನಗೊಂದು ಹಿಡಿ ಉಪ್ಪು

ಎಲ್ಲರ ಮನಗಳಲಿ ನಿನ್ನ ಕಾಣುತಿಹೆ

ಎಲ್ಲರಲಿ ನಿನ ಕಂಡು ಋಣ ತೀರಿಸುವೆ

 

 

ಶ್ರೀಗುರುದೇವದತ್ತಾಯ ನಮ: