ವಿಭಾಗಗಳು
ಲೇಖನಗಳು

ರಜತೋತ್ಸವ – ಭಾಗ 9

ಆಗ ಸೆಕ್ಯುರಿಟೀಸ್ ಸ್ಕ್ಯಾಮ್ (ಹರ್ಷದ್ ಮೆಹತಾ) ಆಗಿ ವಾಣಿಜ್ಯ ಕ್ಷೆತ್ರದಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು.  ನಮಗೆ ಕೆಲಸ ಬಹಳವಾಗಿ ಪ್ರತಿದಿನವೂ ಸಂಜೆ ತಡವಾಗಿ ಮನೆಗೆ ಬರುತ್ತಿದ್ದೆ.  ಇಂತಹ ಒಂದು ದಿನ –

 

೧೯೯೩ರ ಮಾರ್ಚ್ ತಿಂಗಳ ೧೨ನೆಯ ತಾರೀಖು.  ಮಧ್ಯಾಹ್ನದ ೨ ಘಂಟೆಯ ಸಮಯ, ಪಟಾಕಿ ಹೊಡೆದಂತೆ ಜೋರಿನ ಸದ್ದು ಕೇಳಿಸಿತು.   ನಾನು ಬ್ಯಾಂಕಿನಲ್ಲಿಯೇ ಇದ್ದೆ. ಸ್ವಲ್ಪ ಹೊತ್ತಿನಲ್ಲಿಯೇ ವಿಷಯ ತಿಳಿಯಿತು.  ಮುಂಬೈ ಸ್ಟಾಕ್ ಎಕ್ಸ್‍ಚೇಂಜಿನ ಬಳಿ  ಭಾರೀ ಬಾಂಬ್ ಸ್ಫೋಟಗೊಂಡಿದೆ ಎಂದು.  ಹಿಂದೆಯೇ ಬಂದ ಸುದ್ದಿಯ ಪ್ರಕಾರ, ಏರ್ ಇಂಡಿಯಾ ಕಟ್ಟಡದಲ್ಲಿಯೂ ಸ್ಫೋಟಗೊಂಡಿದೆ ಎಂದು.  ನಂತರ ಪಾಸ್‍ಪೋರ್ಟ್ ಆಫೀಸಿನ ಬಳಿ, ಏರ್‍‍ಪೋರ್ಟ್ ಬಳಿ, ಗೇಟ್‍ವೇ ಬಳಿ ಹೀಗೆ ಒಟ್ಟು ೧೫ ಕಡೆಗಳಲ್ಲಿ ಸ್ಫೋಟಗೊಂಡಿವೆ ಎಂದು ತಿಳಿಯಿತು.  ಹೆಚ್ಚಿನ ಸಾವು ನೋವುಗಳಾಗಿಲ್ಲವೆಂಬ ಸುದ್ದಿ ಸರಕಾರದ ವತಿಯಿಂದ ಬರುತ್ತಿತ್ತು.  ಆದರೆ ಕೆಲವರು ಹೇಳುತ್ತಿದ್ದುದು, ೩೦೦ ರಿಂದ ೪೦೦ ಜನ ಸತ್ತಿದ್ದಾರೆ ಎಂದು.   ಸಂಜೆ ಸ್ವಲ್ಪ ಬೇಗನೆ ಹೊರಟಾಗ ಬಸ್ಸು ನಿಯತದ ಹಾದಿ ಬಿಟ್ಟು (ಸಾಮಾನ್ಯವಾಗಿ ಮಂತ್ರಾಲಯದ ಕಡೆಯಿಂದ ಚರ್ಚ್‍ಗೇಟಿಗೆ ಹೋಗುವುದು) ನಾರಿಮನ್ ಪಾಯಿಂಟ್ ಕಡೆಯಿಂದ ಏರ್ ಇಂಡಿಯಾ ಕಟ್ಟಡದ ಮುಂಭಾಗದಿಂದ ಹೋಗಿತ್ತು.  ಆಗ ಕಂಡದ್ದು ಏರ್ ಇಂಡಿಯಾ ಕಟ್ಟಡದ ಒಂದು ಭಾಗಕ್ಕೆ ಜಖಂ ಆಗಿತ್ತು.  ಅಲ್ಲಿದ್ದ ಒಮನ್ ಇಂಟರ್‍ನಾಷನಲ್ ಬ್ಯಾಂಕಿನ ಸಂಪೂರ್ಣ ಭಾಗ ಹಾಳಾಗಿತ್ತು.  ಹಾಗೆಯೇ ಹೆಚ್ಚಿನ ಸಾವು ನೋವು ಸ್ಟಾಕ್ ಎಕ್ಸ್‍ಚೇಂಜಿನ ಬಳಿ ಆಗಿತ್ತು.   ಮಧ್ಯಾಹ್ನದ ಊಟ ಮುಗಿಸಿದ ಜನರೆಲ್ಲರೂ ಕಟ್ಟದ ಹೊರಗೆ ಬಂದಾಗ ಈ ಸ್ಫೋಟ ಸಂಭವಿಸಿತು.   ಅಲ್ಲಿ ಹತ್ತಿರದಲ್ಲಿದ್ದ ಟ್ಯಾಕ್ಸಿ ಚಾಲಕರು, ಪಾನ್ ಮಾರುವವರು, ದಿನ ಪತ್ರಿಕೆ ಮಾರುವವರು, ಹತ್ತಿರದ ಕಛೇರಿಗಳಲ್ಲಿ ಕೆಲಸ ಮಾಡುವವರು ಹೀಗೆ ನೂರಾರು ಜನರು ಸಾವಿಗೀಡಾಗಿದ್ದರು.  ಟೆಲಿಫೋನ್‍ಗಳು ನಿರಂತರವಾಗಿ ಟ್ರಿಂಗಿಸುತ್ತಿದ್ದವು.  ಆಸ್ಪತ್ರೆಗಳಲ್ಲಿ  ಗಾಯಾಳುಗಳು, ಅವರುಗಳ ಸಂಬಂಧಿಕರು ತುಂಬುತ್ತಿದ್ದರು.  ಎಲ್ಲರ ಮನೆಗಳಲ್ಲೂ ಮನಗಳಲ್ಲೂ ಆತಂಕ.  ಮನೆಯವರೆಲ್ಲರೂ ಮನೆ ತಲುಪಿದ ನಂತರ ನೆಮ್ಮದಿಯ ಕ್ಷಣಗಳು.  ಇಷ್ಟೆಲ್ಲಾ ಆದರೂ ಮತ್ತೆ ಮಾರನೆಯ ದಿನ ಹೆಚ್ಚಿನ ಜನರಲ್ಲಿ ಮಾಮೂಲಿ ಜೀವನ.  ಇಮ್ತಹ ದೃಶ್ಯವನ್ನು ನಾನು ಈ ನಗರದಲ್ಲಿ ಮಾತ್ರವೇ ಕಂಡಿದ್ದು. 

 

ಈ ಘಟನೆಯಾದ ಸ್ವಲ್ಪ ದಿನಗಳಲ್ಲಿ, ನಾನು ಮಾಮೂಲಿನಂತೆ ಲೋಕಲ್ ಹತ್ತುವ ಮಲಾಡ್ ಸ್ಟೇಷನ್ನಿನಲ್ಲಿಯೂ ಸ್ಫೋಟವಾಗಿತ್ತು.  ನಾನು ಪ್ರತಿ ದಿನ ಬೆಳಗಿನ ೮.೨೮ ಬೊರಿವಿಲಿ ಲೋಕಲ್ ಹತ್ತಿ ಮತ್ತೆ ಅದರಲ್ಲಿಯೇ ಚರ್ಚ್‍ಗೇಟಿಗೆ ಬರುತ್ತಿದ್ದೆ.  ಅಂದು ಮಾಮೂಲಿನಂತೆ ಲೋಕಲ್ ಹತ್ತಿದೆ.  ವಾಪಸ್ ಬರುವಾಗ ಇದರ ಹಿಂದೆಯೇ ಬರುವ ೮.೩೨ ರ ಲೋಕಲ್ ಬೊರಿವಿಲಿ ಸ್ಟೇಷನ್ನಿಗೆ ಬರಲಿಲ್ಲ.  ಮುಂದಿನ ಸ್ಟೇಷನ್ನಾದ ಕಾಂದಿವಿಲಿಯಲ್ಲಿಯೂ ಯಾವ ಲೋಕಲ್ ಇರಲಿಲ್ಲ.  ಎಲ್ಲರೂ ಕತ್ತನ್ನು ಆಚೆಗೆ ಹಾಕಿ ನೋಡುತ್ತಿದ್ದರು.  ಕಾಂದಿವಿಲಿ ಸ್ಟೇಷನ್ನಿನಲ್ಲಿ ಜನಗಳ ಸಾಗರ ತುಂಬಿತ್ತು.  ಕೆಲವರು ಹೇಳುತ್ತಿದ್ದು, ಮಲಾಡದಲ್ಲಿ ಬಾಂಬ್ ಸ್ಫೋಟವಾಗಿದೆ ಎಂದು.  ತಕ್ಷಣಕ್ಕೆ ಯಾರೂ ನಂಬಲು ತಯಾರಿರಲಿಲ್ಲ.  

 

ನಮ್ಮ ಲೋಕಲ್ ಟ್ರೈನ್ ಮಲಾಡ ಸ್ಟೇಷನ್ನಿನ ಹತ್ತಿರ ಬರುತ್ತಿದ್ದಂತೆಯೇ ಪಕ್ಕದ ಹಳಿಯಲ್ಲಿ ನಿಂತಿದ್ದ ಟ್ರೈನ್ ಅನ್ನು ನೋಡಿದ್ದೆ.  ಅದರ ಒಂದು ಕಂಪಾರ್ಟ್‍ಮೆಂಟ್ ಜಖಂಗೊಂಡಿತ್ತು. ಅದು ಲಗೇಜು ಕಂಪಾರ್ಟ್‍ಮೆಂಟು ಮತ್ತು ಅದರಲ್ಲಿ ಬಲವಾದ ಬಾಂಬ್ ಸ್ಫೋಟಗೊಂಡಿತ್ತು.  ಆ ಸಮಯದಲ್ಲಿ ೨-೩ ಜನಗಳು ಮಾತ್ರ ಅದರಲ್ಲಿದ್ದರಂತೆ.  ಇನ್ನೇನೂ ಹೆಚ್ಚಿನ ಹಾನಿಯಾಗಿರಲಿಲ್ಲ.  ನಾನು ಚರ್ಚ್‍ಗೇಟ್ ತಲುಪಿದ ಹತ್ತು ನಿಮಿಷಗಳಲ್ಲಿ ಇತರ ಟ್ರೈನ್‍ಗಳು ಮಾಮೂಲಿನಂತೆ ಬರತೊಡಗಿದ್ದವು.  ಸಂಜೆಗೆ ಏನೂ ಆಗಿಲ್ಲವೇನೋ ಎಂಬಂತೆ ಜನಜೀವನ ಮಾಮೂಲಿನಂತಾಗಿತ್ತು. 

 

ಇದೇ ತರಹ ಇನ್ನೊಮ್ಮೆ ಶಿವಸೇನೆಯವರು ಸ್ಟ್ರೈಕ್ ಮಾಡಲು ಕರೆ ಇತ್ತಿದ್ದರು.  ಸಾಮಾನ್ಯವಾಗಿ ಈ ಸ್ಟ್ರೈಕ್‍ಗಳು ಶುರುವಾಗುವುದು ಬೆಳಗ್ಗೆ ೮ ರ ನಂತರ.  ಅಲ್ಲಿಯವರೆವಿಗೆ ಜನಜೀವನ ಸಾಮಾನ್ಯವಾಗಿರುತ್ತದೆ.  ಅದೇ ಸಮಯದಲ್ಲಿ ನಾನು ಬ್ಯಾಂಕಿಗೆ ಹೊರಟು ಹೋಗಿದ್ದೆ.  ಮಧ್ಯಾಹ್ನ ೧ ಘಂಟೆಗೆ ನಾವಿದ್ದ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಿದ್ದರು.  ಈ ವಿಷಯ ನಾನು ಮನೆಗೆ ಬರುವಾಗ ತಿಳಿದಿತ್ತು.  ನನ್ನ ಸ್ನೇಹಿತರೆಲ್ಲರೂ ಹತ್ತಿರದ ಸ್ನೇಹಿತರುಗಳ ಮನೆಗಳಿಗೆ ಹೋಗಿದ್ದರು.  ನಾನು ಮಾತ್ರ ಹೇಗಾದರೂ ಮಾಡಿ ಮನೆಗೆ ಹೋಗಬೇಕು ಎಂದು ಹೊರಟು ಬಂದಿದ್ದೆ. ಟ್ರೈನಿನಲ್ಲಿ ಜನಗಳೇ ಇರಲಿಲ್ಲ.   ಸ್ಟೇಷನ್ನಿನಿಂದ ಆಚೆಗೆ ಬರುತ್ತಿದ್ದಂತೆಯೇ ಪೊಲೀಸರು ನನ್ನನ್ನು ಮುಂದೆ ಹೋಗದಂತೆ ತಡೆದರು.  ನಾನು ಹೇಗಾದರೂ ಮಾಡಿ ಮನೆಗೆ ಹೋಗಬೇಕೆಂದು ಕೇಳಿಕೊಂಡೆ.  ಅದೇ ಹೊತ್ತಿಗೆ ಒಂದು ಪೊಲೀಸು ವ್ಯಾನ್ ಬಂದಿತು.  ಅದರಲ್ಲಿ ಪೊಲೀಸರು ತುಂಬಿದ್ದರು.  ನನ್ನನ್ನು ನೋಡಿ ಅವರಿಗೇನನ್ನಿಸಿತೋ ಏನೋ, ನಡೆಯಿರಿ ನಿಮ್ಮ ಮನೆ ತಲುಪಿಸುವೆವು ಎಂದು ನಮ್ಮ ಕ್ವಾರ್ಟರ್ಸಿಗೆ ಕರೆದು ತಂದು ಬಿಟ್ಟಿದ್ದರು.  ಹೀಗೂ ನಾನೊಮ್ಮೆ ಪೊಲೀಸರಿಗೆ ಅತಿಥಿಯಾಗಿದ್ದೆ. 

 

*****

 

ನನ್ನ ತಂದೆ ೧೯೪೨ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಸಿದ್ದರೆಂದು ಅವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವತಿಯಿಂದ ಪಿಂಚಣಿ ಬರುತ್ತಿತ್ತು.  ಹಾಗೆಯೇ ರೈಲಿನಲ್ಲಿ ಪ್ರಯಾಣಿಸಲು ಮೊದಲ ದರ್ಜೆಯ ಪಾಸನ್ನೂ ಕೊಟ್ಟಿದ್ದರು.  ೧೯೯೧ರಲ್ಲಿ ನನ್ನ ತಂದೆ ತಾಯಿಯರು ಟ್ರೈನಿನಲ್ಲಿ ಗಾಣಗಾಪುರಕ್ಕೆ ಹೋಗಿ ದತ್ತಾತ್ರೇಯನ ದರ್ಶನ ಮಾಡಿಕೊಂಡು ಹಾಗೆಯೇ ಮುಂಬೈಗೆ ಬಂದಿದ್ದರು.  ಮುಂಬೈನ ಯಾಂತ್ರಿಕ ಜೀವನ ಅವರಿಗೆ ಸ್ವಲ್ಪವೂ ಹಿಡಿಸಿರಲಿಲ್ಲ.  ನಮ್ಮೂರು ಒಂದು ಸಣ್ಣ ಹಳ್ಳಿ.  ಅಲ್ಲಿ ಅವರಿಗೆ ಬೇಕಾದ ಕಡೆ ಹೋಗಿ ಬರುಲು ಅವಕಾಶವಿತ್ತು.   ಮನೆಯ ಪಕ್ಕದಲ್ಲಿ ಒಂದು ಸಣ್ಣ ಕೈದೋಟವನ್ನು ಮಾಡಿಕೊಂಡಿದ್ದರು.  ಹೂಗಿಡಗಳು, ಸೀಬೇಹಣ್ಣಿನ ಗಿಡ, ತೊಗರಿ ಗಿಡ, ಕರಿಬೇವಿನ ಸೊಪಿನ ಮರ, ರಾಮಫಲದ ಗಿಡ, ತೆಂಗಿನ ಗಿಡ, ಮಾವು ಮತ್ತು ಹಲಸಿನ ಗಿಡಗಳನ್ನು ನೆಟ್ಟು ಪ್ರತಿದಿನವೂ ಅವುಗಳ ಆರೈಕೆ ಮಾಡುತ್ತಿದ್ದರು.   ಆದರೆ ಮುಂಬೈನಲ್ಲಿ ಹಾಗಿರಲಿಲ್ಲ.  ನಾವಿದ್ದ ಕ್ವಾರ್ಟರ್ಸಿನ ಗೇಟು ದಾಟುತ್ತಿದ್ದಂತೆಯೇ ಬಸ್ ಸ್ಟಾಪ್ ಇತ್ತು.  ವಾಹನಗಳ ಭರಾಟೆ ಬಹಳವಾಗಿ ಎಲ್ಲಿಗೂ ಹೋಗಲಾಗುತ್ತಿರಲಿಲ್ಲ.  ಇನ್ನು ಕ್ವಾರ್ಟರ್ಸಿನ ಒಳಗೆ ಓಡಾಡಲು ಮಾತ್ರ ಜಾಗವಿತ್ತು.  ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬೃಂದಾವನವನ್ನು ಸುತ್ತುವರಿದಂತೆ ಕ್ವಾರ್ಟರ್ಸನ್ನು ಸುತ್ತುತ್ತಿದ್ದರು.  ನನ್ನ ತಾಯಿಗಾದರೋ ನನ್ನ ಪತ್ನಿ ಮತ್ತು ಮಗುವಿನ ಜೊತೆ ಇತ್ತು.  ನನ್ನ ತಂದೆಗೆ ಬಹಳ ಬೇಜಾರಾಗುತ್ತಿತ್ತು.  ಇನ್ನು ನಾನು ಸಂಜೆಗೆ ಮನೆಗೆ ಸುಸ್ತಾಗಿ ಬರುತ್ತಿದ್ದೆ.  ಎಲ್ಲಿಗಾದರೂ ಕರೆದುಕೊಂಡು ಹೋಗು ಎಂದು ಹೇಳಲಾಗುತ್ತಿರಲಿಲ್ಲ.  ಆದರೂ ಊಟವಾದ ಬಳಿಕ ಅಲ್ಲಿಯೇ ಹತ್ತಿರದಲ್ಲಿ ಒಂದು ಸುತ್ತು ಸುತ್ತಾಡುತ್ತಿದ್ದೆವು.  ನನ್ನ ಬಾಲ್ಯದಿಂದ ನನ್ನ ತಂದೆಯ ಜೊತೆಗೆ ನನಗೆ ಸಲುಗೆ ಇರಲಿಲ್ಲ.  ಈಗ ನನ್ನ ಜೊತೆ ಹಳೆಯದನ್ನೆಲ್ಲಾ ಮನ ಬಿಚ್ಚಿ ಮಾತನಾಡುತ್ತಿದ್ದರು.  ಅವರ ಎಷ್ಟೊ ತಿಳಿಯದ ವಿಷಯಗಳೆಲ್ಲವನ್ನೂ ತಿಳಿಸಿದ್ದರು. 

 

೨-೩ ದಿನಗಳಿಗೊಮ್ಮೆ ಅವರುಗಳಿಗೆಂದು ನಾನು ಹಣ್ಣುಗಳನ್ನು ತರುತ್ತಿದ್ದೆ.  ಮಹಾರಾಷ್ಟ್ರದ ಮಾವೈನ ಹಣ್ಣು ಮತ್ತು ದ್ರಾಕ್ಷಿ ಬಹಳ ಪ್ರಸಿದ್ಧ.  ೨ ಕಿಲೋಗ್ರಾಂಗಳ ದ್ರಾಕ್ಷಿಯ ಡಬ್ಬವನ್ನು ಆಗಾಗ ತಂದು ಕೊಡುತ್ತಿದ್ದೆ.  ಮೊದಲನೆಯ ಸಲ ತಂದಾಗ ನನ್ನ ಪತ್ನಿ ರಾತ್ರಿ ತಿನ್ನಲೆಂದು ಅವರುಗಳಿಗೆ ಪೂರ್ಣ ಡಬ್ಬವನ್ನು ಕೊಟ್ಟಿದ್ದಳು.  ಅವರಿಬ್ಬರೂ ಎಷ್ಟು ಮುಗ್ಧರೆಂದರೆ ಇಡೀ ಡಬ್ಬವನ್ನೇ ಖಾಲಿ ಮಾಡಿದ್ದರು.  ಆ ಸಮಯದಲ್ಲಿ ನಾನು ಅವರುಗಳ ಮೇಲೆ ರೇಗಿದ್ದೆ.  ಕೊಟ್ಟಾಗ ಅಷ್ಟನ್ನೂ ತಿನ್ನಬೇಕೆಂದು ಅವರು ತಿಳಿದದ್ದು ಅವರ ತಪ್ಪಲ್ಲ, ನಾವೇ ಅವರಿಗೆ ಸರಿಯಾಗಿ ಹೇಳಿರಲಿಲ್ಲ.    ಅಂದಿನ ನನ್ನ ಕೋಪದ ಬಗ್ಗೆ ಈಗೆಷ್ಟು ಪರಿತಪಿಸಿದರೇನು?

 

ನನ್ನ ತಂದೆ ದೈವಾಧೀನರಾದ ಒಂದು ವರುಷಗಳ ತರುವಾಯ ನನ್ನ ತಾಯಿ ಒಂದು ವರುಷಗಳ ಮಟ್ಟಿಗೆ ನಮ್ಮ ಮನೆಗೆ ಬಂದಿದ್ದರು.  ಆಗ ಇವರಿಗೆ ನನ್ನ ಸ್ನೇಹಿತರಾದ ರಂಗರಾವ್ ಅವರ ತಾಯಿ ಸುಮಿತ್ರಮ್ಮನವರು ಜೊತೆ ಸಿಕ್ಕಿದ್ದರು.  ಅವರೂ ಕನ್ನಡದವರೇ.  ಇಬ್ಬರೂ ಅಕ್ಕ ತಂಗಿಯರೇನೋ ಎನ್ನುವಷ್ಟು ಅನ್ಯೋನ್ಯತೆಯಿಂದ ಇದ್ದರು.  ಪ್ರತಿ ದಿನ ಬೆಳಗ್ಗೆ ೧೦ ಘಂಟೆಗೆ ಮಾತಿಗೆ ಕುಳಿತರೆ ಸಂಜೆ ೮ ರವರೆವಿಗೆ ಒಟ್ಟಿಗೆ ಮಾತನಾಡುತ್ತ್ತಿದ್ದುದೇ.  ಇವರಲ್ಲದೇ ಕೆಲವು ಬಾರಿ ನನ್ನ ಬಂಗಾಳೀ ಸ್ನೇಹಿತನೊಬ್ಬನ ತಾಯಿಯೂ ಇವರುಗಳೊಂದಿಗೆ ಸಂಜೆಯ ಮಾತಿಗೆ ಕುಳಿತುಕೊಳ್ಳುತ್ತಿದರು.  ಅವರಿಗೆ ಇವರಿಬ್ಬರ ಭಾಷೆ ಬರದಿದ್ದರೂ, ಇವರುಗಳಿಗೆ ಅವರ ಭಾಷೆ ಬರದಿದ್ದರೂ ಅದು ಹೇಗೋ ಒಬ್ಬರಿಗೊಬ್ಬರು ಅರಿತುಕೊಂಡು ಮಾತನಾಡುತ್ತಿದ್ದರು.  ಅಂತೂ ಒಂದು ವರುಷ ನನ್ನ ಮಗಳಿಗೆ ಅಜ್ಜಿಯ ಸಖ್ಯ ಸಿಕ್ಕಿದ್ದುದೇ ಒಂದು ಪುಣ್ಯ. 

 

*****

 

೧೯೯೩ರ ಮೇ ತಿಂಗಳಲ್ಲಿ ಬೆಂಗಳೂರಿಗೆ ಹೋಗಿದ್ದೆವು.  ಆಗಲೇ ನನಗೆ ನಮ್ಮ ಲೇಔಟ್‍ನಲ್ಲಿ ಸೈಟ್ ಅಲಾಟ್ ಆಗಿತ್ತು.  ಅದನ್ನು ನೋಡಲು ಹೋಗೋಣವೆಂದು ನನ್ನ ಷಡ್ಡಕ ಶ್ರೀ ಪುರುಷೋತ್ತಮ ಅವರು ಹೇಳಿದರು.   ಆಗ ಆ ಸ್ಥಳ ಒಂದು ಕಾಡಿನಂತೆ ಇತ್ತು.  ಜೆ.ಪಿ.ನಗರದ ೧೭ನೇ ಕ್ರಾಸಿನವರೆವಿಗೆ ಮಾತ್ರವೇ ಬಸ್‍ಗಳ ಓಡಾಟ ಇದ್ದದ್ದು.  ಒಂದು ಬಸ್ (೨೭೫ ಸಿ) ಮಾತ್ರವೇ ನಮ್ಮ ಲೇಔಟ್ ಹಾದು ಮುಂದಕ್ಕೆ ಜಂಬೂಸವಾರಿ ದಿಣ್ಣೆಗೆ ಹೋಗುತ್ತಿದ್ದುದು.  ಅದು ಎರಡು ಘಂಟೆಗಳಿಗೆ ಒಂದು ಬಸ್ ಬರುತ್ತಿತ್ತು ಮತ್ತು ಯಾವಾಗಲೂ ತುಂಬಿರುತ್ತಿತ್ತು.  ಮಕ್ಕಳೊಂದಿಗೆ ಹೋಗಲು ಅಸಾಧ್ಯವಾಗುತ್ತಿತ್ತು.  ಲೇಔಟಿಗೆ ಹೋಗುವಾಗ ಹೇಗೋ ಅದೇ ಬಸ್ಸಿನಲ್ಲಿ ಹೋಗಿದ್ದೆವು. 

 

ಸೈಟ್ ಯಾವುದೆಂದು ಗುರುತಿಸುವುದೇ ಕಷ್ಟವಾಗಿತ್ತು.  ಎಲ್ಲೆಲ್ಲಿ ನೋಡಿದರೂ ಹುಲುಸಾಗಿ ಮುಳ್ಳಿನ ಗಿಡಗಂಟಿಗಳು ಬೆಳೆದುಕೊಂಡದ್ದವು.  ಮತ್ತು ಸೈಟ್ ಎಂದು ಮಾಡಿರುವ ಕಡೆಗಳಲ್ಲಿ ಹುತ್ತಗಳೂ ಇದ್ದುವು.  ಇಲ್ಲಿ ಮನೆ ಕಟ್ಟುವುದಾ?  ಎಂದು ಮನೆಯವರು ಮೂಗಿನ ಮೇಲೆ ಕೈ ಇರಿಸಿದ್ದರು.  ಅಲ್ಲಿ ನಾವಿದ್ದದ್ದು ಒಂದೈದು ನಿಮಿಷಗಳಷ್ಟೇ.  ಮತ್ತೆ ವಾಪಸು ಹೊರಟೆವು.   ಬಸ್ ಬರಲು ಎರಡು ತಾಸಾಗುವುದೆಂದು ತಿಳಿಯಿತು.  ಇನ್ನು ಅಲ್ಲಿ ನಿಂತು ಏನು ಮಾಡುವುದು.  ಪುಟ್ಟೆನಹಳ್ಳಿಯವರೆವಿಗೆ ನಡೆದು ಬಂದೆವು.  ಅಷ್ಟು ಹೊತ್ತಿಗೆ ಅಲ್ಲೊಂದು ಲಗೇಜು ಆಟೋ ಬರುತ್ತಿತ್ತು.  ಅದನ್ನು ನಡೆಸುವಾತನನ್ನು ೧೭ನೇ ಕ್ರಾಸಿನವರೆವಿಗೆ ಕರೆದೊಯ್ಯಲು ಕೇಳಿಕೊಂಡೆವು.  ಅವನು ಹತ್ತು ರೂಪಾಯಿ ಕೊಡಬೇಂದು ತಿಳಿಸಿದನು.  ಸರಿ ಎಂದು ಹತ್ತಿದೆವು.  ಹಿಂದುಗಡೆಯ ಭಾಗದಲ್ಲಿ ದೊಡ್ಡ ಕಲ್ಲನ್ನು ಹಾಕಿದ್ದನ್ನು, ಅದರ ಮೇಲೆ ನಿಂತುಕೊಂಡು ಆಟೋವಿನ ಕಂಬಿ ಹಿಡಿದುಕೊಂಡು ನಿಂತೆವು.  ಮಕ್ಕಳು ಅಲ್ಲಿಯೇ ಕಲ್ಲಿನ ಮೇಲೆ ಕುಳಿತರು.  ಚಂದ್ರನ ಮೇಲೆ ಮೊದಲ ಬಾರಿಗೆ ನಡೆದ ಮಾನವನಿಗೂ ಅಂತಹ ಅನುಭವವಾಗಿರಲಿಕ್ಕಿಲ್ಲ.  ೧೭ನೇ ಕ್ರಾಸ್ ಬರುವ ವೇಳೆಗೆ ನಮ್ಮ ಹೊಟ್ಟೆಯಲ್ಲಿ ಇದ್ದದ್ದೆಲ್ಲವೂ ಬಾಯಿಗೆ ಬಂದಹಾಗಿತ್ತು.  ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ನನ್ನ ಪತ್ನಿ ಹೇಳಿದ ಮಾತು – ನಾವಲ್ಲಿ ಮನೆ ಕಟ್ಟುವುದು ಬೇಡ ಎಂದು.  ಈಗ ಆ ಜಾಗ ನೀವು ನೋಡಿದ್ದೀರಾ?  ಜಯನಗರ ೪ನೇ ಬ್ಲಾಕ್ ಇದ್ದ ಹಾಗಿದೆ (ಸ್ವಲ್ಪ ಉತ್ಪ್ರೇಕ್ಷೆ ಇದೆಯಷ್ಟೆ).

 

ವಾಪಸ್ಸು ಮುಂಬೈಗೆ ಬರುತ್ತಿದ್ದಂತೆಯೇ ನನ್ನ ಮಗಳನ್ನು ಶಾಲೆಗೆ ಸೇರಿಸಿದ್ದೆವು.  ಅದೊಂದು ನರ್ಸರಿ ಶಾಲೆ.  ಅದರ ಹೆಸರು ಕ್ಯಾಸ್ಪರ್ ಪ್ರೈಮರಿ ಶಾಲೆ ಎಂದು.  ನಮ್ಮ ಕ್ವಾರ್ಟರ್ಸಿನ ಹಿಂಭಾದಗ ಕಟ್ಟಾಡದಲ್ಲಿಯೇ ಇದ್ದದ್ದು.  ಮೊದಲ ದಿನದಿಂದಲೇ ಶಾಲೆಗೆ ಹೋಗಲು ಅಳುತ್ತಿರಲಿಲ್ಲ.  ಅದಲ್ಲದೇ ಶನಿವಾರ ಭಾನುವಾರ ಶಾಲೆ ಯಾಕೆ ಇರೋದಿಲ್ಲ, ನಾನು ಹೋಗಬೇಕೆನ್ನುತ್ತಿದ್ದಳು.   ಮೊದಲ ಒಂದು ತಿಂಗಳು ಅವಳು ಹೇಳುತ್ತಿದ್ದುದು ಅವಳ ಟೀಚರ್‍ಗೆ ಅರ್ಥ ಆಗ್ತಿರಲಿಲ್ಲ, ಅವಳ ಟೀಚರ್ ಹೇಳ್ತಿದ್ದದ್ದು ಇವಳಿಗೆ ಅರ್ಥ ಆಗ್ತಿರಲಿಲ್ಲ. 

 

ಒಂದು ದಿನ ಮನೆಗೆ ಬಂದವಳೇ ಚಪ್ಪಾಳೆ ತಟ್ಟಿಕೊಂಡು ಪಾಲಿಂಗ್ ಡೌನ್ ಅಂತ ಕೂಗಕ್ಕೆ ಶುರು ಮಾಡಿದಳು. ಇದೇನು ಹೇಳ್ತಿದ್ದಾಳೆ ಅಂತ ಗೊತ್ತಾಗ್ಲಿಲ್ಲ.  ಏನಮ್ಮಾ ಏನಾದ್ರೂ ಹೊಸ ಪದ್ಯ ಹೇಳಿಕೊಟ್ರಾ ಅಂದ್ರೆ ಇಲ್ಲ ಅಂತಿದ್ದಳು.  ೨-೩ ದಿನಗಳು ಹೀಗೆಯೇ ನಡೆಯುತ್ತಿತ್ತು.  ನನ್ನ ಪತ್ನಿಯೂ ಶಾಲೆಯಲ್ಲಿ ಹೋಗಿ ವಿಚಾರಿಸಿರಲಿಲ್ಲ.  ಒಂದು ದಿನ ಶಾಲೆಯಲ್ಲಿ ಆ ಪದ್ಯವನ್ನು ಪೂರ್ಣವಾಗಿ ಹೇಳಿಕೊಟ್ಟರೆಂದೂ ಅದರ ಮೊದಲ ಸಾಲು ಮಾತ್ರ ಬರುವುದೆಂದೂ ತಿಳಿಸಿದ್ದಳು.  ಅದ್ಯಾವುದೆಂದ್ರೆ ಲಂಡನ್ ಬ್ರಿಡ್ಜ್ ಇಶ್ ಫಾಲಿಂಗ್ ಡೌನ್.