ವಿಭಾಗಗಳು
ಲೇಖನಗಳು

ಮರುಬರಹ

ನಾಲ್ಕೈದು ತಿಂಗಳುಗಳಿಂದ ಬರಹವನ್ನು ನಿಲ್ಲಿಸಿ, ಈಗ ಬರೆಯಲು ಮರುಪ್ರಾರಂಭಿಸುತ್ತಿರುವೆ.  ಕೀಲಿಮಣೆಯ ಕೀಲಿಗಳೆಲ್ಲವೂ ಹೊಸದರಂತೆ ಕಾಣುತ್ತಿವೆ.   ಇತ್ತೀಚೆಗೆ ಕಛೇರಿಯಲ್ಲಿ ಕೆಲಸ ಬಹಳವಾಗಿ ನಿದ್ರೆಯಲ್ಲಿಯೂ, ಕಣ್ಣುಮುಚ್ಚಿದಾಗಲೆಲ್ಲ ಬರೀ ಅಂಕಿಗಳೇ ಕಾಣಿಸುತ್ತಿವೆ, ಬಜೆಟ್ಟಿನ ಬಗ್ಗೆಯೇ ಮನದಲ್ಲಿ ಚಿಂತನೆ ಮೂಡುತ್ತಿದೆ.   ಇನ್ನಾದರೂ ಮನಸ್ಸಿಗೆ ಸ್ವಲ್ಪ ಸಮಾಧಾನ ಕೊಡಲು ಬರಹವೇ ಸೂಕ್ತವೆಂದು ಈಗ ಅದರ ಮೊರೆ ಹೊಕ್ಕಿರುವೆ.

ಮಾಯಾನಗರಿ, ಚಿತ್ರನಗರಿ, ರಾಷ್ಟ್ರದ ವಾಣಿಜ್ಯ ರಾಜಧಾನಿ ಎಂದು ಹೆಸರಾಗಿರುವ ಈ ಮುಂಬಯಿಗೆ ಕಾಲಿಟ್ಟು, ಇಲ್ಲಿ ಅಂಡೂರಿ ೨೦ ವರ್ಷಗಳು ಕಳೆಯುತ್ತಾ ಬಂದುವು.   ಆದರೂ ಹೊಸಪ್ರದೇಶಕ್ಕೆ ಇದೀಗ ಬಂದೆನೇನೋ ಎಂಬ ಅನಿಸಿಕೆ ಉಂಟಾಗುತ್ತಿದೆ.  ಇದಕ್ಕೆ ಇನ್ನೊಂದು ಕಾರಣವಿರಬಹುದು – ಬ್ಯಾಂಕು – ಮನೆ ಬಿಟ್ಟರೆ ಲೋಕಲ್ ರೈಲ್ವೆ ನಿಲ್ದಾಣ ಮತ್ತು ಬೆಂಗಳೂರಿಗೆ ಹೋಗಲು ರೈಲ್ವೇ ನಿಲ್ದಾಣ ಯಾ ವಿಮಾನ ನಿಲ್ದಾಣಗಳಲ್ಲಿ ಮಾತ್ರವೇ ಕಾಲೂರಿರುವುದು.  ಮನೆಯಿಂದ ಲಿಫ್ಟಿನಲ್ಲಿ ಕೆಳಗಿಳಿದರೆ ೩೩೦ ಹೆಜ್ಜೆಯ ಅಂತರಕ್ಕೆ ಬಸ್ಸು ದೊರೆಯುವುದು.  ಅದು ನಿಲ್ಲುವ ಕೊನೆಯ ತಾಣದಿಂದ ೫೨೦ ಹೆಜ್ಜೆಗಳಿಗೆ ಲೋಕಲ್ ಟ್ರೈನ್ ಸಿಗುವುದು.   ಕುಳಿತುಕೊಳ್ಳಲು ಸ್ಥಳವಿರಲಿ, ಇಲ್ಲದೇ ಇರಲಿ, ಬಂದ ಗಾಡಿಯನ್ನೇರುವುದು ಅಭ್ಯಾಸವಾಗಿದೆ.  ಲೋಕಲ್ ಟ್ರೈನ್ ಕೊನೆಯ ಸ್ಥಾನಕದಲ್ಲಿ ನಿಲ್ಲುತ್ತಿದ್ದಂತೆ ಅಲ್ಲಿಂದ ೨೦೦ ಹೆಜ್ಜೆಗಳ ಅಂತರದಲ್ಲಿ ಟ್ಯಾಕ್ಸಿಯನ್ನೇರಿದರೆ ಕೊನೆಯ ನಿಲ್ದಾಣವಾದ ವರ್ಲ್ಡ್ ಟ್ರೇಡ್ ಸೆಂಟರ್‍ನಲ್ಲಿ ನನ್ನನ್ನು ಹೊತ್ತೊಯ್ಯಲು ಲಿಫ್ಟ್ ಕಾಯುತ್ತಿರುತ್ತದೆ.   ಬೆಳಗ್ಗೆ ೮ರಿಂದ ಸಂಜೆ ೭ ರವರೆವಿಗೆ ಬಾಸುಗಳ ಕರೆಗೆ ನಾಯಿ ಮರಿಯಂತೆ ಅತ್ತಿಂದಿತ್ತ ಓಡುವುದೇ ಕೆಲಸ ಆಗುವುದು.  ಸಂಜೆ ಮತ್ತೆ ಮನೆಗೆ ಬಂದು ತಲುಪುವ ವೇಳೆಗೆ ರಾತ್ರಿ ೮.೩೦ ಆಗಿರುತ್ತದೆ.  ಮಲಗಿದ್ದಲ್ಲಿ ಪ್ರಜ್ಞೆ ತಪ್ಪುವಂತೆ ನಿದ್ರೆ ಬರುವವನಿಗೆ, ಇಪ್ಪತ್ತೇನು ಮೂವತ್ತು ನಲವತ್ತು ವರ್ಷಗಳಾದರೂ ತಾನಿರುವ ಊರಿನ ಪರಿಚಯ ಆಗುವುದೇ ಇಲ್ಲ.  ಲೋಕಲ್‍ನಲ್ಲಿ ಪ್ರಯಾಣಿಸುವಾಗ ಮಾತ್ರ ಸ್ವಲ್ಪ ಸಮಯ ನನ್ನ ತಲೆಯಲ್ಲಿ ಏನೇನೋ ಆಲೋಚನೆಗಳು ಹುಟ್ಟಿ ಸಾಯುವುವು – ಈ ಮೊದಲು ಅವುಗಳನ್ನು ಬರಹ ರೂಪಕ್ಕಿಳಿಸುತ್ತಿದ್ದೆ, ಈಗೀಗ ಬರೆಯುತ್ತಿಲ್ಲ.   ಇವತ್ಯಾಕೋ, ಇನ್ಮೇಲೆ ಸುಮ್ಮನಿರೋದು ಬೇಡ, ಬ್ಲಾಗಿನ ಪುಟವನ್ನು ತುಂಬಲಾದರೂ ಬರೆಯೋಣ ಅಂತ ಕೀಲಿಮಣೆಯ ಕಡೆಗೆ ಕಣ್ಣೋಡಿಸುತ್ತಿರುವೆ.

ಮೊದಲಿಗೆ ಏನು ಬರೆಯೋದು?  ಇದ್ದೇ ಇದೆಯಲ್ಲ ನನ್ನ ಗೋಳು ಅಂತ ಈ ಒಂದೆರಡು ಸಾಲು ಇಲ್ಲಿ ಗೀಚುತ್ತಿರುವೆ.

ಇಷ್ಟು ದಿನಗಳಲ್ಲಿ ನಾನು ಕಲಿತ ಪಾಠವೆಂದರೆ, (ಇತರರಲ್ಲಿ ಅರುಹಿದಾಗ ಕಲಿಯೋದರಲ್ಲಿ ನೀನು ಬಹಳ ನಿಧಾನ ಎಂದರು, ಆ ಮಾತು ಈಗ್ಯಾಕೆ ಬಿಡಿ), ನನ್ನೊಂದಿಗೆ ಅಂತರ್ಜಾಲದಲ್ಲಿ ಸಂವೇದಿಸಿದವರೆಲ್ಲರೂ ನನ್ನವರೆಂದು ತಿಳಿಯುತ್ತಿದ್ದದ್ದು.   ಹಲವಾರು ವಲಯಗಳಿಂದ ಪೆಟ್ಟು ಬಿದ್ದಾಗಲೇ ತಿಳಿದದ್ದು – ಇದೊಂದು ದೊಡ್ಡ ತಪ್ಪೆಂದು.   ಇನ್ನು ಮುಂದೆ ಯಾರೇ ನನ್ನೊಂದಿಗೆ ಸಂವೇದಿಸಿದರೂ, ಅವರ ಮಾತುಗಳಿಗೆ ಸ್ವಲ್ಪ ಉಪ್ಪು ಬೆರೆಸಿ ರುಚಿಸಬೇಕು.  ಈ ರೀತಿಯ ಅನುಭವದ ಪಾಠವನ್ನು ಎಲ್ಲರೂ ಕಲಿಯುವರು – ನಾನು ಬಡ ಬಡ ಎಂದು ಹೇಳಿಕೊಳ್ಳುವೆ, ಹೆಚ್ಚಿನವರು ಅದನ್ನು ಹೇಳಿಕೊಳ್ಳದೇ, ಮನದಲ್ಲಿಯೇ ನೊಂದು, ನೋವನ್ನು ಮರೆಯುವರು, ಜೀವನ ಸವೆಸುವರು.

ಇನ್ನು ಹೆಚ್ಚಿನ ಮನದ ಇಂಗಿತಗಳನ್ನು ಸದ್ಯದಲ್ಲಿಯೇ ಬ್ಲಾಗಿನಲ್ಲಿ ವಾಂತಿ ಮಾಡಿಕೊಳ್ಳುವೆ.

‍ತಳುಕು ಶ್ರೀನಿವಾಸ ಮೂಲಕ

ನಾನೊಬ್ಬ ಸಾಹಿತ್ಯಾಭಿಲಾಷಿ

3 replies on “ಮರುಬರಹ”

ದೈನಂದಿನ ಕೆಲಸಗಳಲ್ಲಿ ಮುಳುಗಿ ಹೋದರೆ, ಸುತ್ತಲ ಪ್ರಪಂಚದಲ್ಲಿ ಏನಾಗುತ್ತಿದೆಯೋ ಒಂದೂ ಗೊತ್ತಾಗುವುದಿಲ್ಲ. ಹಣೆಗೆ ಪಟ್ಟಿ ಕಟ್ಟಿಸಿಕೊಂಡ ಕುದುರೆಯಂತೆ ಅತ್ತ ಇತ್ತ ನೋಡದೆ ಮುಂದೆ ಓಡುತ್ತಲೇ ಇರುತ್ತೇವೆ.

ಜನರೇ ಹೀಗೆ ಅಲ್ಲವೇ ಸಾರ್. ಇರುವುದಕ್ಕೆ ರೆಕ್ಕೆ, ಪುಕ್ಕ ಕಟ್ಟಿ, ಸ್ವಲ್ಪ ಒಗ್ಗರಣೆ ಹಾಕಿ ಮಾತನಾಡಬೇಕು. ನೇರ ಮಾತಿನ ನಿಮ್ಮಂತಹವರಿಗೆ ಸ್ವಲ್ಪ ಬೇಸರವಾಗುವುದು ಸಹಜ. ಬೆಣ್ಣೆಯಲ್ಲಿ ಕೂದಲೆಳೆಯುವ ಜಾಣ್ಮೆ ಕೆಲವರಿಗೆ ಮಾತ್ರ ಕರಗತವೇನೋ?!

ಬರೆಯುತ್ತಾ ಇರಿ, ನಾನು ಓದುತ್ತಾ ಇರುತ್ತೇನೆ.

ನಿಮ್ಮ ಪ್ರೀತಿಯ ಸೋದರಿ,

nilgiri.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s