ಕೆಂಡಸಂಪಿಗೆಯ ರಶೀದರು ನಾಡಿಗೆಲ್ಲಾ ಸಾಹಿತ್ಯದ ವಿವಿಧ ಮಜಲಿನ ಕಂಪನ್ನೀಯುತ್ತಿದ್ದರೆ, ನನಗೆ ಹಳೆಯ ಸ್ನೇಹಿತನ ಸುಗಂಧವನ್ನು ಒದಗಿಸಿಕೊಟ್ಟಿದ್ದಾರೆ. ಇವರಿಗೆ ನಾನು ಹೇಗೆ ಆಭಾರಿಯಾಗಿರಲಿ ನೀವೇ ಹೇಳಿ!ಮಂಜುವಿನ ಭಾವಚಿತ್ರವನ್ನು ಕೆಂಡಸಂಪಿಗೆಯಲ್ಲಿ ನೋಡಿದೆ. ಅಲ್ಲಿ ಪ್ರಕಟಿಸಿದ್ದ ಅವನ ಮೂರು ಕವನಗಳನ್ನೂ ಓದಿದೆ. ನಿಸ್ಸಂದೇಹ! ಇದು ನನ್ನ ಹಳೆಯ ಸ್ನೇಹಿತ ಮಂಜುವೇ! ಮೊದಲ ಪಿಯುಸಿಯಲ್ಲಿ ಓದುತ್ತಿದ್ದಾಗ ಮೈಸೂರಿನ ಹೊಯ್ಸಳ ಕರ್ನಾಟಕ ವಿದ್ಯಾರ್ಥಿನಿಲಯದಲ್ಲಿ ನಮ್ಮಿಬ್ಬರ ವಸತಿ. ಆತ ವಿಜ್ಞಾನದ ವಿದ್ಯಾರ್ಥಿಯಾಗಿ ಶಾರದಾವಿಲಾಸ ಕಾಲೇಜಿನಲ್ಲಿ ಓದುತ್ತಿದ್ದರೆ, ವಾಣಿಜ್ಯದ ವಿದ್ಯಾರ್ಥಿಯಾಗಿ ಶಿವರಾತ್ರೇಶ್ವರ ಕಾಲೇಜಿನಲ್ಲಿ ನಾನು ಓದುತ್ತಿದ್ದೆ. ಪರೀಕ್ಷೆಯ ಸಮಯದಲ್ಲಿ ಪುಸ್ತಕಕ್ಕೇ ಅಂಟಿಕೊಂಡಿರುತ್ತಿದ್ದವನು ನಾನಾಗಿದ್ದರೆ, ಆತ ಭಾರತೀಪುರ, ಸಂಸ್ಕಾರದಂತಹ ಕಾದಂಬರಿಗಳು, ಏ.ಕೆ.ರಾಮಾನುಜರ ಕವನದ ಬಗ್ಗೆ (ಉಂಗುರ ಉಂಗುರ ಉಂಗುರ … ಅಂತೇನೋ ಇದೆ) ವಿಶ್ಲೇಷಿಸಿ ಹೇಳುತ್ತಿದ್ದ. ಪರೀಕ್ಷೆಯ ಹೆದರಿಕೆಯೇ ಇರುತ್ತಿರಲಿಲ್ಲ. ಮಂಕುಬುದ್ಧಿ, ಪುಸ್ತಕ ಹುಳುವಾಗಿದ್ದ ನನಗೆ ಅದೇನೂ ತಿಳಿಯುತ್ತಿರಲಿಲ್ಲ.
ಇಂದು ರಾತ್ರಿ ೮.೩೦ಕ್ಕೆ ಮನೆಗೆ ಬಂದೊಡನೆಯೇ, ಎಂದಿನ ಅಭ್ಯಾಸದಂತೆ ಗೂಗಲ್ ಅಂಚೆಯನ್ನು ತೆರೆದಿದ್ದೆ. ನನ್ನ ಕೋರಿಕೆಯ ಮೇರೆಗೆ, ರಶೀದರು ನನಗೆ ಮಂಜುವಿನ ದೂರವಾಣಿ ಸಂಖ್ಯೆಯನ್ನು ಅಂಚೆಯ ಮೂಲಕ ತಿಳಿಸಿದ್ದರು. ನನ್ನ ಸ್ನೇಹಿತ ಮಂಜುವೇ ಹೌದೋ ಅಲ್ಲವೋ ಎಂಬ ಅಳುಕು ಮನದ ಮೂಲೆಯಲ್ಲಿ ಇಣುಕುತ್ತಿತ್ತು. ಅಲ್ಲದೇ ಈತನಾದರೋ ಮೂರು ನಾಲ್ಕು ಕವನ ಸಂಗ್ರಹ ಪುಸ್ತಕಗಳನ್ನು ಪ್ರಕಟಿಸಿದ, ಈ ಕಾಲದ ಕವಿ ಎಂದು ಹೆಸರು ಮಾಡಿರುವನು. ಇಂತಹ ಹೆಸರಾಂತ ವ್ಯಕ್ತಿಯೊಡನೆ ಹೇಗೆ ಮಾತನಾಡಲಿ, ಈತ ನನ್ನ ಸ್ನೇಹಿತನಲ್ಲದಿದ್ದರೆ, ಮನಕೆ ವಿಪರೀತ ನಿರಾಶೆಯಾಗುವುದಲ್ಲ ಎಂದೆನಿಸಿತ್ತು. ಎರಡು ಮೂರು ಬಾರಿ ರಿಂಗಾಯಿಸಿ, ಟಪಕ್ಕನೆ ತುಂಡರಿಸಿದ್ದೆ. ಕಡೆಗೆ ನಾಲ್ಕನೆಯ ಬಾರಿ ಧೈರ್ಯ ಮಾಡಿ, ರಿಂಗಾಯಿಸಿ, ’ಹಲೋ, ಮಂಜುನಾಥ ಅವರಾ?’ ಎಂದಿದ್ದೆ. ಆ ಕಡೆಯಿಂದ ’ಹೌದು ನೀವು?’, ಎನ್ನಲು, ’ನಾನು ಶ್ರೀನಿವಾಸ ಅಂತ, ನೀವು ಮೈಸೂರಿನಲ್ಲಿ ಓದಿದ್ದು ಅಲ್ವಾ? ಹೊಯ್ಸಳ ಕರ್ನಾಟಕ ಹಾಸ್ಟೆಲಿನಲ್ಲಿ ವಾಸಿಸ್ತಿದ್ರಿ ಅಲ್ವಾ?’ ಎನ್ನಲು, ’ಹೌದು ಕಣೋ ಮಾರಾಯ. ನೀನು ತಳುಕಿನ ವೆಂಕಣ್ಣಯ್ಯನವರ ಸಂಬಂಧಿ ಅಲ್ವಾ? ನನಗೆ ಚೆನ್ನಾಗಿ ನೆನಪಿದ್ದೀಯೆ ಕಣೋ’ ಎಂದಿದ್ದ. ಈ ಮಧ್ಯೆ ನನ್ನ ಸಂಬಂಧಿ ಒಬ್ಬರು ಈತನು ಕೆ.ಆರ್.ನಗರದಲ್ಲಿ ಇರುವನೆಂದೂ, ಪೋಸ್ಟಲ್ ಇಲಾಖೆಯಲ್ಲಿ ಇರುವನೆಂದೂ, ನನ್ನ ಬಗ್ಗೆ ಆಗಾಗ್ಯೆ ಕೇಳುತ್ತಿರುತ್ತಾನೆಂದು ತಿಳಿಸಿದ್ದರು. ಆ ವಿಷಯವನ್ನು ಪ್ರಸ್ತಾಪಿಸಿದಾಗ, ಅಲ್ಲ, ನಾನು ಬಿಎಸ್ಎನ್ಎಲ್ ನಲ್ಲಿ ಕೆಲಸ ಮಾಡುತ್ತಿರುವೆ ಎಂದಿದ್ದ. ಅವನೊಡನೆ ಮಾತನಾಡುವಾಗ ಮನಸ್ಸಿಗೆ ಬಂದದ್ದು ಮತ್ತೊಂದು ವಿಷಯ ಅಂದರೆ – ಆತ ನನ್ನನ್ನೊಮ್ಮೆ ಶ್ರೀ ಯು.ಆರ್. ಅನಂತಮೂರ್ತಿಗಳ ಮನೆಗೆ ಕರೆದೊಯ್ದಿದ್ದ. ಅವರ ಮನೆಯ ಎದುರು ಬಾಗಿಲಿಗೇ ಕಾಣುತ್ತಿದ್ದ, ಕ್ರಿಸ್ತ ಮತ್ತು ವೆಂಕಟೇಶ್ವರನ ಚಿತ್ರ. ಅವರ ಬಗ್ಗೆ ಬಹಳವಾಗಿ ಹೇಳಿದ್ದ. ಅಷ್ಟೇ ಅಲ್ಲದೇ, ರಾಮಕೃಷ್ಣ ವಿದ್ಯಾಲಯದಲ್ಲಿ ಓದುತ್ತಿದ್ದಾಗ, ಕುವೆಂಪು ಅವರೊಡನೆ ಸಾಹಿತ್ಯಕ ವಿಷಯವನ್ನು ಚರ್ಚಿಸಿದ್ದೂ ನೆನಪಿಗೆ ಬಂದಿತ್ತು. ಆದರೆ ಅವನ್ನೆಲ್ಲಾ ಹೇಳಲು ಬಾಯಲ್ಲಿ ಪದಗಳೇ ಹೊರಡುತ್ತಿರಲಿಲ್ಲ. ಆತನಾದರೋ, ನಿರ್ವಿಕಾರ ಸ್ವರೂಪಿ. ಮೊದಲ ನುಡಿಯಲ್ಲಿಯೇ ಏಕವಚನದಲ್ಲಿ ಸಂಬೋಧಿಸಿದ. ನಂತರ, ’ಏ, ನೀನು ಹೇಳ್ತಿದ್ದ ಜೋಕೆಲ್ಲಾ ನೆನಪಿದೆಯೋ’. ಇನ್ನೂ ಏನೇನೋ ಮಾತನಾಡುತ್ತಿದ್ದ. ನನಗೆ ಯಾವುದನ್ನೂ ಕೇಳಿಸಿಕೊಳ್ಳುವ ವ್ಯವಧಾನವೇ ಇಲ್ಲ. ನಮ್ಮಿಬ್ಬರಿಗೂ ಹಿರಿಯರಾಗಿ ವಿದ್ಯಾರ್ಥಿನಿಲಯದಲ್ಲಿ ಮಾರ್ಗದರ್ಶಕರಾಗಿದ್ದ ಶ್ರೀಯುತ ಸೋಮಶೇಖರ್ (ಈಗ ನ್ಯಾಯಾಧೀಶರಾಗಿದ್ದಾರೆ), ನನ್ನ ಪತ್ನಿಯ ಅಣ್ಣನೆಂದೂ ತಿಳಿಸಿ, ನಿಧಾನವಾಗಿ ಮತ್ತೊಮ್ಮೆ ಫೋನಾಯಿಸುವೆ ಎಂದು ಹೇಳಿ ಮಾತನ್ನು ತುಂಡರಿಸಿದ್ದೆ. ಈ ನಿರ್ವಿಕಾರ ಸ್ವರೂಪವೇ, ಮಹಾನ್ ಕವಿಯಾಗಲುಬೇಕಿರುವ ಕಚ್ಚಾ ವಸ್ತು ಅಲ್ವೇ? ಆತನೊಂದಿಗೆ ಮಾತನಾಡಬೇಕೆಂದು ಅನ್ನಿಸಿದಾಗ ಆರಕ್ಕೇರಿದವನು, ಆ ತುದಿಯಿಂದ ಧ್ವನಿ ಆಲಿಸಿದಾಗ ಮೂರಕ್ಕಿಳಿಯೋದು ನನ್ನಂತಹ ಕ್ಷುಲ್ಲಕನ ಸರಕಲ್ಲವೇ!
ಅಲ್ಲ, ಬಹಳವಾಗಿ ಯೋಚಿಸಿ, ಇಂತಹವರೊಡನೆ ಮಾತನಾಡಬೇಕೆಂದು, ಹೀಗೀಗೇ ಇಂತಹದ್ದೇ ವಿಷಯಗಳನ್ನು ಪ್ರಸ್ತಾಪಿಸಬೇಕೆಂದುಕೊಂಡು ಯೋಚಿಸಿದವನಿಗೆ, ಅದ್ಯಾಕೆ ಮನಸ್ಸು ಖಾಲಿಯಾಗಿತ್ತು, ಬಾಯೊಣಗಿತ್ತು, ನಾಲಗೆಗೆ ಪದಗಳೇ ಸಿಗದಾಗಿತ್ತು. ಹೀಗೆ ನಿಮಗೆ ಯಾವಾಗಲಾದರು ಆಗಿದ್ದಿದೆಯೇ?
One reply on “ಮರುಗಳಿಕೆ”
ಸರಿಯಾಗಿ ಹೇಳಿದ್ದೀರಿ. ನನಗೂ ಹೀಗೆಯೇ ಆಗುತ್ತದೆ. ” ಅವರು ಸಿಕ್ಕಾಗ ಹೀಗೆ ಮಾತನಾಡಬೇಕು, ಹಾಗೆ ಮಾತನಾಡಬೇಕು” ಎಂದೆಲ್ಲಾ ಲೆಕ್ಕಾಚಾರ ಹಾಕಿಕೊಂಡಿರುತ್ತೇನೆ. ಎದುರು ಸಿಕ್ಕಾಗ, ಏನು ಮಾತನಾಡಬೇಕೆಂಬುದು ಹೊಳೆಯುವುದೇ ಇಲ್ಲ. ಮತ್ತೆ ಪೋನ್ ಇಟ್ಟ ಮೇಲೆ ” ಅಯ್ಯೋ ಹೀಗಲ್ಲವೇ ನಾನು ಮಾತನಾಡಬೇಕಿದ್ದುದ್ದು” ಎಂದು ಕೊಂಡು ಸುಮ್ಮನಾಗುತ್ತೇನೆ. ಇನ್ನೊಮ್ಮೆ ಸಿಕ್ಕಾಗ ಸರಿಯಾಗಿ ಮಾತನಾಡಬೇಕು ಅಂದು ಕೊಂಡು ಸುಮ್ಮನಾಗುತ್ತೇನೆ, ಇನ್ನೊಮ್ಮೆ ಏನು ಮತ್ತೊಮ್ಮೆ, ಮಗದೊಮ್ಮೆ ಸಿಕ್ಕರೂ ನನ್ನದು ಇದೇ ಪಾಡು 🙂