ಖಾಸಗೀ ಕ್ಷೇತ್ರದಲ್ಲಿ ಉತ್ಪನ್ನ ಹೆಚ್ಚು, ನೌಕರರು ಕೆಲಸವನ್ನು ಶ್ರದ್ಧೆಯಿಂದ ಮಾಡುವರು, ತಮ್ಮ ಅನ್ನದಾತರ ನೌಕರರ ಧ್ಯೇಯ ಎಂದೆಲ್ಲ, ಸಾಮಾನ್ಯವಾಗಿ ತಿಳಿದಿರುವ ಅಂಶ. ಅದೇ ಸರಕಾರೀ ಕ್ಷೇತ್ರದಲ್ಲಿ ಉತ್ಪನ್ನ ಕಡಿಮೆ, ನೌಕರರು ಸರಿಯಾಗಿ ಕೆಲಸ ಮಾಡುವುದಿಲ್ಲ, ಸಮಯ ಪೋಲು ಮಾಡುವರು ಎಂಬೆಲ್ಲ ಅನಿಸಿಕೆ ಕಂಡು ಬರುವುದು. ಈ ಅನಿಸಿಕೆಗಳು ಬರಲು ಕಾರಣವೇನು? ಖಾಸಗೀ ಮತ್ತು ಸರಕಾರೀ ಕ್ಷೇತ್ರಗಳಲ್ಲಿ ಕಂಡು ಬರುವ ಒಂದು ಮುಖ್ಯ ಅಂಶವೆಂದರೆ, ನೌಕರಿಯ ಭದ್ರತೆ. ಸರಕಾರೀ ಕ್ಷೇತ್ರದಲ್ಲಿ ನೌಕರಿಗೆ ಸೇರುವುದು ಸುಲಭವಾದರೂ, ಅಧಿಕಾರಿಗಳು ನೌಕರರನ್ನು ಕಿತ್ತೊಗೆಯುವುದು ಅಷ್ಟು ಸುಲಭವಲ್ಲ. ನೌಕರರು ಕಟ್ಟಿಕೊಂಡಿರುವ ಸಂಘ, ಒಕ್ಕೂಟ, ರಾಜಕೀಯ ಪಕ್ಷಗಳ ಬೆಂಬಲ ಇತ್ಯಾದಿ ಮತ್ತು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ನೌಕರರ ಕ್ಷೇಮಾಭಿವೃದ್ಧಿ ಕಾನೂನು ಕಟ್ಟಳೆಗಳು ಇತ್ಯಾದಿ, ನೌಕರರನ್ನು ಸುಭದ್ರವನ್ನಾಗಿ ಮಾಡಿವೆ. ಈ ಶಕ್ತಿಗಳ ಧ್ಯೇಯವೆಂದರೆ ಸರಕಾರವು / ಉದ್ಯೋಗಪತಿಗಳು ನೌಕರರನ್ನು ದುರುಪಯೋಗ ಮಾಡಕೊಳ್ಳದೆಯೇ, ಅವರ ಮನೋ ಬಲವನ್ನು ಹೆಚ್ಚಿಸಿ, ಹೆಚ್ಚಿನ ಉತ್ಪನ್ನ ಮಾಡುವುದು ಮತ್ತು ಸರಕಾರದ ಜೊತೆ ಜೊತೆಗೆ ನೌಕರರೂ ಬೆಳೆಯುವಂತೆ ಆಗಬೇಕೆನ್ನುವುದು. ಆದರೆ ವಸ್ತುತಃ ಇದು ಸಂಪೂರ್ಣವಾಗಿ ಉಪಕರಿಸಲು ಆಗುತ್ತಿಲ್ಲ. ಈ ವಿಷಯದ ಬಗ್ಗೆ ನನ್ನೆದುರಿಗೆ ನಡೆದ ಒಂದು ಘಟನೆಯನ್ನು ನಿಮ್ಮ ಮುಂದಿಡುತ್ತಿರುವೆ.
ಹಾಸುಗೆ ಇದ್ದಷ್ಟು ಕಾಲು ಚಾಚು ಎಂಬುದೊಂದು ನಾಣ್ನುಡಿ (ಇಲ್ಲಿ ಹಾಸುಗೆ ಎಂದರೆ ಹತ್ತಿ ಅಥವಾ ಮತ್ತಿತರೇ ಮೆತ್ತನೆಯ ವಸ್ತುವಿನಿಂದ ಮಾಡಿರುವ ಹಾಸು ಎಂದರ್ಥ) – ಹಾಸುಗೆಯೇ ಇಲ್ಲದವನಿಗೆ? ದಿಂಬೇ ಹಾಸುಗೆ. ಅದೂ ಇಲ್ಲದಿದ್ದರೆ, ಚಾಪೆಯೇ ಹಾಸುಗೆ. ಅದೂ ಇಲ್ಲದಿರೆ ಭೂತಾಯಿಯೇ ಹಾಸುಗೆ. ಅಲ್ಲ, ಯಾಕೆ ಹೇಳ್ತಿದ್ದೀನಿ ಅಂದ್ರೆ, ಎಷ್ಟು ವರಮಾನ ಇದ್ದರೂ ಜೀವಿಸಬಹುದು, ಎಷ್ಟೇ ಇದ್ದರೂ ಗೊಣಗಾಟ ತಪ್ಪಿದ್ದೇ ಇಲ್ಲ. ಇದ್ದುದರಲ್ಲಿಯೇ ತೃಪ್ತಿ ಹೊಂದುವುದು ಸಂತೋಷಜನಕವಾದದ್ದು.
ಆತನ ಹೆಸರು ರವಿಕಾಂತ ದೇವರೆ. ದೇವರೆ ಎನ್ನುವುದೊಂದು ಕುಟುಂಬದ ಹೆಸರು. ಈ ತುಟ್ಟಿ ಮುಂಬಯಿಯಲ್ಲಿ, ಇಷ್ಟು ಕಡಿಮೆ ಗಳಿಕೆಯಲ್ಲಿ ಮೂರು ಮಂದಿಯ ಸಂಸಾರವನ್ನು ಅದು ಹೇಗೆ ಜೀವಿಸುತ್ತಿದ್ದಾನೋ ಅದೊಂದು ಚಿದಂಬರ ರಹಸ್ಯ. ಯಾರೀತ? ನೀವೇನು ಹೇಳ ಹೊರಟಿದ್ದೀರಿ? ಒಂದು ನಿಮಿಷ – ಸ್ವಲ್ಪ ಹಿನ್ನೆಲೆಯನ್ನು ಕೊಡುವೆ. ವೃತ್ತಿಯಲ್ಲಿ ಈತ ಪೇಂಟರ್ ಮತ್ತು ಕಟ್ಟಡ ನಿರ್ಮಾಣದ ಮೇಲುಸ್ತುವಾರಿಗಾರ. ನಮ್ಮ ಕಛೇರಿಯಲ್ಲಿ ಕೆಲವು ಕ್ಯಾಬಿನ ನಿರ್ಮಾಣದ ಕೆಲಸವನ್ನು ಆ ಗುತ್ತಿಗೆದಾರರಿಗೆ ನೀಡಿದಾಗ, ಈತನನ್ನು ಉಸ್ತುವಾರಿಗೆ ನೇಮಿಸಲಾಗಿತ್ತು. ಆತನೊಂದಿಗೆ ಮಾತನಾಡಿದಾಗ ನನಗೆ ತಿಳಿದ ವಿಷಯವೆಂದರೆ, ಗುತ್ತಿಗೆದಾರರೊಂದಿಗೆ ಕೆಲಸ ಮಾಡುತ್ತಿದ್ದು, ಮಾಹೆಯಾನ ೪೦೦೦ ರೂಪಾಯಿಗಳ ವೇತನವನ್ನು ಪಡೆಯುತ್ತಿರುವನು.
ನೀವೇನೇ ಹೇಳಿ, ನಮ್ಮದು ಸರಕಾರೀ ಕಛೇರಿಯಿದ್ದ ಹಾಗೆ. ಕಮಾಯಿ ಮಾಡಲು ಮುಂದೆ, ಕೆಲಸ ಮಾಡಲು ಹಿಂದೆ. ನಮ್ಮಲ್ಲಿ ಕೆಲಸ ಮಾಡುವ ನಾಲ್ಕನೆಯ ದರ್ಜೆಯ ನೌಕರರು ಬೆಳಗ್ಗೆ ಸಹಿ ಹಾಕುವಾಗ ಕಂಡರೆ, ಮತ್ತೆ ಸಂಜೆಯಷ್ಟೇ ಮುಖ ತೋರಿಸುವುದು. ಈ ಮಧ್ಯೆ ಅವರಿಗೆ ಕ್ಯಾಂಟೀನ್, ರಿಕ್ರಿಯೇಷನ್ ಕ್ಲಬ್, ಟೂರ್ನ್ಮೆಂಟುಗಳು, ಟಿವಿಯಲ್ಲಿ ಪ್ರಸಾರ ಆಗುವ ಎಲ್ಲ ಆಟಗಳು, ಇವುಗಳದ್ದೇ ಚಿಂತೆ.
ಅಕಸ್ಮಾತ್ ತರಾತುರಿಯಲ್ಲಿ ಏನಾದರೂ ಕೆಲಸ ಆಗಬೇಕಿದ್ದರೆ, ಹೊರಗಿನವರನ್ನು ನೇಮಿಸಿಕೊಂಡರೆ, ಆಗ ಅವರಿಗೆ ಎಲ್ಲಿಲ್ಲದ ಕಾನೂನು, ಕಟ್ಟಳೆ ನೆನಪಾಗುವುದು. ಕ್ಯಾಬಿನ್ ನಿರ್ಮಿಸುವ ಸಂದರ್ಭದಲ್ಲಿ ೫ ದೊಡ್ಡ ದೊಡ್ಡ ಕಪಾಟುಗಳನ್ನು ಮತ್ತು ೨ ಮೇಜುಗಳನ್ನು ಬೇರೆಡೆಗೆ ಸಾಗಿಸಬೇಕಿತ್ತು. ಮೊದಲ ದಿನ ನಮ್ಮವರೇ ಮಾಡುತ್ತೇವೆಂದು ಒಂದು ಕಪಾಟನ್ನು ೨೫ ಮೀಟರು ಸಾಗಿಸುವುದಕ್ಕೆ ೩೦೦ ರೂಪಾಯಿಗಳನ್ನು ಕೊಡಬೇಕೆಂದರು. ಇದಕ್ಕೆ ನೌಕರರಲ್ಲದ ಬೇರೆ ಇನ್ಯಾರದ್ದೋ ಹೆಸರಿನಲ್ಲಿ ಬಿಲ್ಲನ್ನು ತಯಾರಿಸುವರು.
ಇದೇ ದೇವರೆಗೆ ೪ ಕಪಾಟುಗಳನ್ನು ಮತ್ತು ೨ ಮೇಜುಗಳನ್ನು ಬೇರೆಡೆಗೆ ಸಾಗಿಸಲು ತಿಳಿಸಿದಾಗ, ಆತ ಕೇಳಿದ್ದೇನು ಗೊತ್ತೇ? ಸಾಬ್, ಚಾಯ್ ದಿಲಾಯಿಯೇ ಬಸ್, ಆಪ್ ಕಾಮ್ ಹೋ ಜಾಯೆಗಾ. ಜೋ ಆಪ್ ಪೀತೇ ವೋ ಚಾಯ್ – ಅಫ್ಸರ್ಸ್ ಕಾ ಚಾಯ್ (ಸಾರ್, ಚಹಾ ಕುಡಿಸಿ ಸಾಕಷ್ಟೇ, ನಿಮ್ಮ ಕೆಲಸ ಆಗಿ ಹೋಗುವುದು – ಅದೂ ನೀವುಗಳು ಕುಡಿಯುವ ಚಹಾ, ಅಧಿಕಾರಿಗಳ ಚಹಾ). ಅಧಿಕಾರಿಗಳ ಚಹಾ ಎಂದರೆ, ಒಂದು ಕೆಟಲ್ನಲ್ಲಿ ಕಡು ಚಹಾ, ಸಕ್ಕರೆಯ ಕುಡಿಕೆ, ಹಾಲಿನ ಕುಡಿಕೆಗಳನ್ನು ಒಂದು ಟ್ರೇನಲ್ಲಿ ಇಟ್ಟಿರುವುದು. ಈ ಚಹಾವನ್ನು ಕುಡಿದೂ ಕುಡಿದೂ, ನಮಗೆ ಬೇಜಾರಾಗಿ ಹೋಗಿದೆ. ಆತನಿಗೆ ಇದರಲ್ಲಿ ಅದೇನೋ ಆಕರ್ಷಣೆ ಕಂಡಿರಬೇಕು. ಹಲ್ಲಿದ್ದವರಿಗೆ ಕಡಲೆಯಿಲ್ಲ, ಕಡಲೆಯಿದ್ದವರಿಗೆ ಹಲ್ಲಿಲ್ಲ ಎಂದ ಹಾಗೆ. ಅಂದಿನ ಚಹಾ ಟ್ರೇಯನ್ನು ಆತನ ಮುಂದಿಟ್ಟೆ. ಅದೇನು ಸಂತೋಷವೋ ಏನೋ. ಮುಖದಲ್ಲಿ ಅರಳಿದ ಕಾಂತಿಯನ್ನು ಕಂಡೆ. ಅರ್ಧ ಬಟ್ಟಲು ಸಕ್ಕರೆಯನ್ನು ಚಹಾ ಬಟ್ಟಲಿಗೆ ಹಾಕಿ, ಬಟ್ಟಲ ತುಂಬಾ ಚಹಾ ಮಾಡಿಕೊಂಡು ತನ್ನ ಮಿತ್ರನಿಗೆ ಬಸಿಯಲ್ಲಿ ಅರ್ಧ ಚಹಾ ಸುರಿದುಕೊಟ್ಟು ಮಿಕ್ಕದ್ದನ್ನು ತಾನು ಕುಡಿದನು. ಚಹಾ ಕುಡಿದ ಕೂಡಲೇ, ಪ್ರತಿಯಾಗಿ ನಮಸ್ಕರಿಸಿ ತನ್ನ ಮಿತ್ರನೊಂದಿಗೆ ೧೦ ನಿಮಿಷಗಳಲ್ಲಿ ಕಪಾಟುಗಳನ್ನು ಮತ್ತು ಮೇಜುಗಳನ್ನು ನಾನು ತಿಳಿಸಿದೆಡೆಗೆ ಸಾಗಿಸಿದನು.
ಅಲ್ಲಿಯವರೆವಿಗೆ ಸುಮ್ಮನಿದ್ದ ನಮ್ಮ ನೌಕರರು, ಕಾನೂನು ಕಟ್ಟಳೆಗಳ ಬಗ್ಗೆ ನನ್ನ ಮುಂದೆ ಭಾಷಣ ಬಿಗಿದರು. ಈಗ ಕೆಲಸ ಆಗಿ ಹೋಯಿತು, ಮುಂದೊಮ್ಮೆ ನಿಮಗೇ ತಿಳಿಸುವೆ ಎಂದಿದ್ದೆ. ಅಷ್ಟೆಕ್ಕೆ ಸುಮ್ಮನಿರದ ಅವರುಗಳು, ಕೆಲಸ ನಾವು ಮಾಡದಿದ್ದರೇನಂತೆ, ಕೊಡಬೇಕಿದ್ದ ಹಣವನ್ನು ನಮಗೆ ಕೊಡಿ ಎಂದಿದ್ದರು. ಅವರಲ್ಲಿ ಮುಂದಾಳತ್ವ ವಹಿಸಿದ್ದವರೊಬ್ಬರನ್ನು, ಬಳಿಗೆ ಕರೆದು ಸಾಮಾಜಿಕ ವ್ಯವಸ್ಥೆಯ ಬಗ್ಗೆ ದೊಡ್ಡ ಭಾಷಣ ಬಿಗಿದೆ. ಕೊಡಬೇಕಿದ್ದ ಹಣವನ್ನು ಕೊಡುವೆ, ಆದರೆ ಅದರಲ್ಲಿಯ ಅರ್ಧ ಪಾಲನ್ನು ರವಿಕಾಂತ ದೇವರೆಗೆ ಕೊಡಲು ತಿಳಿಸಿದೆ. ಅದಕ್ಕೆ ಒಪ್ಪಿದನಾತ. ಆಗ ರವಿಕಾಂತನ ಅರಳಿದ ಮುಖ… ಹ್ಹ! ನೋಡಿದವರಿಗೇ ಗೊತ್ತಾಗುವುದು. ಎಂತಹ ಸಂತೃಪ್ತಿ ಹೊಂದಿದ್ದ ಮುಖ. ಅಂತಹ ದೃಶ್ಯ ಹಿಂದೆಂದೂ ನಾನು ಕಂಡಿರಲಿಲ್ಲ.
ಈ ಸರಕಾರೀ ವ್ಯವಸ್ಥೆ ಮನೋಭಾವವನ್ನು ಸುಲಭವಾಗಿ ಖಾಸಗೀ ಕ್ಷೇತ್ರಕ್ಕೆ ಬದಲಾಯಿಸಲಾದೀತೇ?
One reply on “ಸಂತೃಪ್ತಿ”
ತುಂಬಾ ಒಳ್ಳೆ ಲೇಖನ.
ವೇತನ ಎಷ್ಟೇ ಇರಲಿ ಜೀವನ ನಡೆಸ ಬಹುದು.
ಉದಾಹರಣೆಗೆ, ರೂ. ೩೫ ಗಳನ್ನು ಕೊಟ್ಟು ಹೊಟೆಲ್ನಲ್ಲಿ Full Meals ಮಾಡಬಹುದು. ಅದೇ ರೀತಿ, ರೂ ೧೦೦೦ ಕೊಟ್ಟು, ಪಂಚ ತಾರ ಹೊಟೆಲ್ನಲ್ಲೂ ಮಾಡಬಹುದು. ಆಯ್ಕೆ ನಮಗೆ ಬಿಟ್ಟಿದ್ದು.
ಸಂತೃಪ್ತಿ ಜೀವನ ನಡೆಸೋದು ನಮ್ಮ ಕೈಲಿ ಇರುತ್ತದೆ.