ನನ್ನ ಈ ಚಿಂತನೆ ಇಲ್ಲಿ ಪ್ರಕಟವಾಗಿದೆ
ಹಿಂದೊಬ್ಬನಿದ್ದ ಚಕ್ರವರ್ತಿ – ನೂರಾರು ಸಾಮಂತ ರಾಜರುಗಳು
ಇಂದಿಹರು ನೂರಾರು ಚಕ್ರವರ್ತಿಗಳು – ಸಹಸ್ರಾರು ಸಾಮಂತರು
ಇವ ಆಳಿದರೇನು ಅವ ಆಳಿದರೇನು
ಅಳುವುದು ನಮ್ಮದೇ ಕರ್ಮ
ನಾವೆಂದೂ ಯಾರನೂ ಆಳೆವು
ಎಲ್ಲರೂ ನಮ್ಮಂತೆಂದು ತಿಳಿವೆವು
ಎಲ್ಲ ಕಾಲಕೂ ಅಳುತ್ತಲೇ ಇರುವೆವು
ತೋಚಿದಂತೆ ಇರಲು ಆಗುವುದುಂಟೇ?
ಮುಕ್ತ ಸ್ವಾತಂತ್ರ್ಯ ಎಂದರೇನು?
ಅದೆಂದಿತ್ತು? ಎಂದು ಇದೆ – ಇರುವುದು?
ಕೈ ಕಾಲು ಕಟ್ಟಿ ಸದೆಬಡಿವುದು ಅಂದೂ ಇತ್ತು
ಇಂದಿಗೂ ಇದೆ
ಅನ್ನದಾತನ ಎದುರಿಗೆ
ದನಿ ಎತ್ತರಿಸುವುದುಂಟೇ?
ದನಿ ಎತ್ತರಿಸಿವುದುಂಟೇ!
ಎತ್ತರಿಸಿದವ ತತ್ತರಿಸಿದೇ ಇರುವುದುಂಟೇ?
ಮನ ಬಂದಂತೆ ಮಾಡುವುದು ಸ್ವಾತಂತ್ರ್ಯವೇ?
ಚೌಕಟ್ಟಿನಲೇ ನಡೆದಾಡುವುದು ಮುಕ್ತವೇ?
ಎಂದಿತ್ತು ನಮಗನ್ನಿಸುವುದ ಮಾಡುವ ಸ್ವಾತಂತ್ರ್ಯ
ಮನ ಬಂದಂತೆ ಮಾಡಲು ಬಿಡುವುದೇ ಸಮಾಜ
ಹಾಗೆ ಮಾಡಿದರೂ
ಸಮಾಜವ ತೊರೆದರೂ
ಇರಬಹುದೇ ಜೀವಿತವೆಲ್ಲವೂ?
ಮನದ ಚಿಂತನೆಯ ಸ್ವಾತಂತ್ರ್ಯ ಕಸಿವುದುಂಟೇ?
ಅದು ಅಂದೂ ಇತ್ತು
ಇಂದೂ ಇಹುದು
ನಾಳೆಯೂ ಇರಬಹುದು
ಅದೇ ಸ್ವಾತಂತ್ರ್ಯವೇ?
ಹಾಗಿದ್ದರದನು ಮತ್ತೆ ಪಡೆದೆವೇ?