ವಿಭಾಗಗಳು
ಕವನಗಳು

ನಾ ಹೆಚ್ಚೋ ಇವ ಹೆಚ್ಚೋ?!

ಆಗಸ ತೂತಾಗಿದೆ
ಜಾಲರಿಯಿಂದ ನೀರು ತೊಟ್ಟಿಕ್ಕುತ್ತಿದೆ
ಕೈ ತುಂಬಾ ಕೆಲಸ ಕಾಯುತ್ತಿದೆ
ಆಗಬೇಕಿದೆ
ಸಮಯಕೆ ಸರಿಯಾಗಿ ಉತ್ತು ಬಿತ್ತುವಿಕೆ
ನಾನಲ್ಲ ಕೆಲಸಗಳ್ಳ
ಮೈ ಮುರಿದು ಕಾಯಕ ಮಾಡುವೆ
ಉಣಿಸಿ ತಣಿಸಿ ಭೂತಾಯಿಯ ಕಾಪಾಡುವೆ
ಕೈತುಂಬ ಅನ್ನ ಉಣುವೆ
ನಂಬಿದವರ ಕಾಪಾಡುವೆ
ಮುಂಬರುವ ಬಿತ್ತನೆಗೆ
ಬೀಜ ಗೊಬ್ಬರ ಅಣಿ ಮಾಡುವೆ
ಹೆಚ್ಚಾದುದ ಮಂಡಿಗೆ ಹಾಕುವೆ
ಉಣ್ಣಲು ಉಡಲು ಕೈ ಬಿಚ್ಚುವೆ
ಎನ್ನ ಜೇಬು ಮಾತ್ರ ಖಾಲಿ ಖಾಲಿ
ತಲೆಯಿಟ್ಟಲ್ಲಿ ಹೊಡೆಯುವೆ ಜೋಲಿ

ಮಂಡಿಯವ ಹೆಚ್ಚಿನ ಹಣಕೆ ಮಾರುವ
ಕುಂಡಿ ಎತ್ತದೇ ಒಂದೆಡೆ ಕುಳಿತಿರುವವ
ಒಂದೂ ಹನಿ ಬೆವರು ಸುರಿಸಿದವ
ಬೊಕ್ಕಸ ಮೇಲೆ ಮೇಲೆ ಏರಿಸುತಿಹ
ಎನ್ನ ಹೆಚ್ಚಿನ ಖರ್ಚಿಗೆ ಹಣ ಕೊಡುವ
ಚಕ್ರಬಡ್ಡಿ ಸುಸ್ತಿಬಡ್ಡಿ ಹೇರಿ ಸುಸ್ತಾಗಿಸುವ
ದುಡಿದು ಬೆಳೆದ ಸಿರಿಯ
ಹೀನಾಯ ಬೆಲೆಗೆ ಸೆಳೆವ
ಮನ ಬಂದ ಬೆಲೆಗೆ ಮಾರಿ ದೊಡ್ಡವನಾಗುವ
ಕಾಣದ ದೇವನ ಕೃಪೆ ಪಡೆಯುವ
ಮತದಾರನ ಒಡೆಯನ ಸಲಹುವ
ತನ್ನ ಸಂತತಿಯ ತನ್ನಂತೆ ಇರಿಸುವ
ನನ್ನ ಸಂತತಿಯ ನನ್ನಂತೆ ಇಳಿಸುವ

ನಾ ಹೆಚ್ಚೋ ಇವ ಹೆಚ್ಚೋ?!

ವಿಭಾಗಗಳು
ಕವನಗಳು

ಅಂತರಾಳದ ಅನಿಸಿಕೆ

ನಾ ಬಿರಿದ ಹೂ
ನೀ ಹಸಿದ ದುಂಬಿ
ಎಮ್ಮದೆಲ್ಲಿಗೆಲ್ಲಿಯ ನಂಟು?
ನಮ್ಮಿಬ್ಬರಲಿರುವುದು ವೈರತ್ವವೋ?
ಸ್ನೇಹವೋ?
ಎನ್ನ ರಸವ ಹೀರುವುದು ನಿನ್ನ ಕರ್ಮ
ನಿನ್ನ ಪಾದ ಸ್ಪರ್ಶಕೆ ಹಾತೊರೆವುದು ನನ್ನ ಧರ್ಮ
ಜಗಕೆ ಬೇಕಿಹುದು
ನಾವಿಬ್ಬರು ಕೂಡಿಡುವ ಗಂಟು

ಕಷ್ಟಕಾಲಕೆ ಕೂಡಿಡುವುದು
ನಮ್ಮ ಧರ್ಮ
ಸುಲಭದಲಿ ಅದ ಕಳೆದುಕೊಳ್ಳುವುದೂ
ನಮ್ಮ ಕರ್ಮ
ಪ್ರತಿ ಸಲವೂ ನನ್ನ ನಿನ್ನ
ಸಮುದಾಯವ ಮೋಸಿಸುವರೇ
ಈ ಮಹಾಜನರು
ನಮ್ಮ ಕುಡಿಕೆಯು ಅವರದೇ ಆಸ್ತಿ
ಎಂದು ತಿಳಿದವರು

ಎನ್ನ ಮಕರಂದವೇ ನಿನಗೆ ಆಸರೆ
ನೀ ಮಾಡುವ ಪರಾಗ ಸಂಚಲನೆಗೇ ಎನ್ನ ಕಾತರ
ಎನ್ನ ಸಂತತಿಯ ಬೆಳವಣಿಗೆಯ ನಿನ್ನ ಧರ್ಮ
ಜಗಕೆ ಆಸರೆಯ ನೀಡುವುದೇ ನಮ್ಮೀರ್ವರ ಕರ್ಮ

ಕಾಣದ ದೇವನ ಮುಡಿಗೆ ಎನ್ನದೇ ಅಲಂಕಾರ
ಅಭಿಷೇಕಕೆ ನಿನ್ನದೇ ಮಧುವಿನ ಪರಿಕಾರ
ನಾವಿಬ್ಬರೂ ಕೂಡಿ ಸಾರಬಹುದೇ ಸಮರ
ಆಗಲಿ ಸರಿಯೇ ನಮ್ಮೀರ್ವರ ಹೆಸರು ಅಮರ

ಕೊಡು ನಿನ್ನ ಸಮ್ಮತಿ!
ಮಾಡುವೆ ಮಧುವ ವಿಷದ ಬಟ್ಟಲು
ಮೊನಚು ಕೊಂಡಿಯಿಂದ ಆತನಲಿ ಜಾರಲು
ಕಾಣುವನು ಹಂತಕನು ಕೊನೆ ಗತಿ

ವಿಭಾಗಗಳು
ಲೇಖನಗಳು

ಮಂತ್ರಕ್ಕೆ ಮಾವಿನಕಾಯಿ ಉದುರುವುದೇ?!

೨೪ವರ್ಷಗಳಿಂದ ನಮ್ಮ ಕಾಲೋನಿಯಲ್ಲಿ ೧೦ ದಿನಗಳ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಈಗ್ಯೆ ೫-೬ ವರ್ಷಗಳಿಂದ ಆ ಪೂಜೆಯಲ್ಲಿ ನಾನೂ ಭಾಗಿಯಾಗುತ್ತಿರುವೆ. ಅದೇ ರೀತಿ ಬಂಗಾಳೀ ಮಿತ್ರರು ಒಂದು ದಿನದ ದುರ್ಗಾ ಪೂಜೆಯನ್ನೂ ಮತ್ತು ೩ ದಿನಗಳ ಸರಸ್ವತೀ ಪೂಜೆಯನ್ನೂ (ಜನವರಿ – ಫೆಬ್ರವರಿ ತಿಂಗಳಿನಲ್ಲಿ) ಅದ್ದೂರಿಯಾಗಿ ನಡೆಸುವರು. ಉತ್ಸವದ ಉಲ್ಲಾಸ ಏನೆಂದರೆ, ಹಿರಿಯರಿಗೆ ಭಕ್ತಿಯನ್ನು ತೋರ್ಪಡಿಸುವ ಸಂಭ್ರಮ, ಹೆಂಗಸರಿಗೆ ತಮ್ಮ ಅಡುಗೆಯ ಕೈ ಚಳಕವನ್ನು ತೋರಿಸುವ ಅವಕಾಶ ಮತ್ತು ಮಕ್ಕಳಿಗೆ ಮನೋರಂಜನೆ ಮತ್ತು ರುಚಿಯಾದ ಪ್ರಸಾದವನ್ನು ಸವಿಯುವ ಕ್ಷಣ. ಆದರೆ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಮಿತ್ರರು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ, ಅವರಿಗೆ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಮನೋಭಾವ ಬಾರದೇ ಇಲ್ಲ. ಹಾಗಾಗಿ ನಾವು ಕೆಲವು ಮಿತ್ರರು, ಅವರುಗಳಿಗೂ ತಮ್ಮ ತಮ್ಮ ಹಬ್ಬ ಉತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸುವಂತೆ ಕೋರುತ್ತಿದ್ದೇವೆ. ಅದಕ್ಕಾಗಿ ಬೇಕಾದ ಎಲ್ಲ ಸಹಾಯವನ್ನೂ ನಾವುಗಳೇ ಮುಂದೆ ನಿಂತು ಮಾಡಿಕೊಡುವೆವು ಎಂದು ಹೇಳಿದರೂ ಅವರಿನ್ನು ಮುಂದೆ ಬಂದಿಲ್ಲ. ಅವರ ಮನಸ್ಸಿನಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆ ಬಾರದಿರಲೆಂಬ, ಈ ದಿಸೆಯಿಂದಾಗಿ ಗಣಪತಿ ಉತ್ಸವ ಒಂದನ್ನು ಬಿಟ್ಟು ಮಿಕ್ಕಾವುದರಲ್ಲೂ ನಾನು ಪಾಲ್ಗೊಳ್ಳುತ್ತಿಲ್ಲ (ಇದು ಕೇವಲ ನನ್ನ ಅನಿಸಿಕೆಯಷ್ಟೆ – ಮುಕ್ತವಾಗಿ ಇದರ ಬಗ್ಗೆ ಯಾರೊಂದಿಗೂ ಹೇಳಿಕೊಂಡಿಲ್ಲ). ಆದರೂ ಅವರುಗಳ ಮನದಲ್ಲಿ ಅಳುಕು ಇದ್ದೇ ಇದೆ. ಅದೆಂದು ಹೋಗುವುದೋ ಏನೋ? ಅದೇ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ದಿನಗಳಂದು ಆ ಮಿತ್ರರುಗಳೂ ಮುಕ್ತವಾಗಿ ನಮ್ಮೊಡನೆ ಬೆರೆತು ಸಂಭ್ರಮದಲ್ಲಿ ಪಾಲ್ಗೊಳ್ಳುವರು.

ಗಣೇಶೋತ್ಸವದಲ್ಲಿ ೧೦ ದಿನಗಳ ಕಾಲ ಸಸ್ವರಯುಕ್ತ ಏಕವಾರ ಶ್ರೀ ರುದ್ರ ಅಭಿಷೇಕ ಮತ್ತು ಉಪನಿಷತ್ ಪಠಣ ಮಾಡುವೆವು. ಈ ಉತ್ಸವದ ರೂವಾರಿ ಎಂದರೆ ೨೦೦೧ರಲ್ಲಿ ಬ್ಯಾಂಕ್ ಸೇವೆಯಿಂದ ನಿವೃತ್ತರಾದ ಶ್ರೀ ಜಿಎಸ್ ಅಯ್ಯರ್ – ಅವರೊಂದಿಗೆ ಸಾಥಿ ನೀಡಲು ಕಾಲೋನಿಯಲ್ಲಿರುವ ಅಧಿಕಾರಿಯೊಬ್ಬರ ಮಾವ (ಪತ್ನಿಯ ತಂದೆ) ಶ್ರೀ ವೆಂಕಟರಾಮನ್ ಸರ್ ಮತ್ತು ಹತ್ತಿರದ ಗೋಕುಲಧಾಮ ದೇಗುಲದಿಂದ ಬರುವ ೩-೪ ವೃದ್ಧರುಗಳು. ೨೦೦೩ರಿಂದ ನಾನು ಇವರುಗಳೊಂದಿಗೆ ಸೇರಿರುವೆ. ಅಯ್ಯರ್ ಸರ್ ಒಬ್ಬರಿಗೆ ವೇದ ಪಾಠ ಚೆನ್ನಾಗಿ ಅಭ್ಯಾಸ ಆಗಿದೆಯೇ ಹೊರತು ಮಿಕ್ಕವರಿಗೆ ಅಷ್ಟಾಗಿ ಸ್ವರ ಜ್ಞಾನವಿಲ್ಲ. ಈ ಸಂದರ್ಭದಲ್ಲಿ ನಾನೇ ಅಯ್ಯರ್ ಅವರಿಗೆ ಸರಿಯಾದ ಜೋಡಿ – ಇದು ಅತಿಶಯೋಕ್ತಿಯಲ್ಲ, ವಸ್ತುಸ್ಥಿತಿಯಷ್ಟೇ. ಆದರೆ ಅವರುಗಳಲ್ಲಿ ಮಡಿವಂತಿಕೆ ತೋರುವುದರಲ್ಲಿ ಮತ್ತು ತಾವುಗಳು ಇತರ ಎಲ್ಲರಿಗಿಂತ ಹೆಚ್ಚಿನವರೆಂಬ ಭಾವನೆ ಮೂಡಿಬಿಟ್ಟಿದೆ.

ಗಣೇಶ ಉತ್ಸವವನ್ನು ಕಾಲೋನಿಯ ಮಧ್ಯ ಭಾಗದಲ್ಲಿರುವ ದೊಡ್ಡ ಅಂಗಳದಲ್ಲಿ ನಡೆಸುವೆವು. ಅದೇ ಸ್ಥಳದಲ್ಲಿಯೇ ಮಕ್ಕಳು ಸಂಜೆಯ ಹೊತ್ತು ವರ್ಷ ಪೂರ್ತಿ ಆಟ ಆಡಿಕೊಳ್ಳುವುದು. ಈ ಉತ್ಸವದ ದೇವರ ಪೂಜೆ ನಡೆಯುತ್ತಿದ್ದಾಗ ಸಂಜೆಯ ಹೊತ್ತಿನಲ್ಲಿ ಗಲಾಟೆ ಮಾಡುತ್ತಾ ಆಟ ಆಡಿಕೊಳ್ಳುತ್ತಿರುವ ಮಕ್ಕಳನ್ನು ಗದರುವರು, ’ಇವರಪ್ಪ ಅಮ್ಮ ಏನು ನಿದ್ದ್ರೆ ಮಾಡ್ತಿದ್ದಾರಾ? ಸ್ವಲ್ಪ ನೋಡಿಕೊಳ್ಳಬಾರದಾ?’ ಎಲ್ಲಿದ್ದಾನೆ ಸ್ವಾಮಿ ದೇವ – ಆ ಮಕ್ಕಳ ಮುಖವನ್ನೊಮ್ಮೆ ನೋಡಿ – ಖಾಲಿ ಸ್ಲೇಟಿದ್ದ ಹಾಗಿದೆ – ಯಾವ ಭಾಷೆಯ ಯಾವ ಅಕ್ಷರವನ್ನು ಬರೆದರೂ ಮೂಡುವುದು – ಗದರಿದರೆ, ಕೇಳ್ತಾರಾ – ಸ್ವಲ್ಪ ಕಾಲ ನಿಮ್ಮ ಮಾತನ್ನು ಕೇಳಬಹುದೇನೋ – ನಂತರ ನಿಮ್ಮ ವಿರುದ್ಧ ರೊಚ್ಚಿಗೇಳೋಲ್ವಾ? ದ್ವೇಷಿಸೋಲ್ವಾ? ಅಷ್ಟಕ್ಕೂ ನಿಮ್ಮ ಮಂತ್ರ, ವಟ ವಟ ಪಠಣ ಅವರಿಗೇನು ಅರ್ಥ ಆಗ್ಬೇಕು. ಒಳ್ಳೆಯ ಮಾತಿನಿಂದ ಹೇಳಿದ್ರೆ ಕೇಳೋದಿಲ್ವೇ?

ಈಗ ನವರಾತ್ರಿಯ ಉತ್ಸವದ ಅಂಗವಾಗಿ (ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು) ಚಂಡೀ ಹೋಮವನ್ನು ನಮ್ಮ ಕಾಲೋನಿಯಲ್ಲಿ ಮಾಡಬೇಕೆಂಬ ಪ್ರಸ್ತಾಪ ಬಂದಿತು. ಈ ವಿಷಯವಾಗಿ ವೆಂಕಟ್ರಾಮನ್ ಸರ್ ಅವರು, ’ನೀವೂ ನಮ್ಮ ಜೊತೆ ಸೇರಿ, ಅಯ್ಯರ್ ಸರ್ ಅವರು ಟ್ರಿವೆಂಡ್ರಮ್‍ಗೆ ಹೋಗಿದ್ದಾರೆ, ಬೇರೆ ಇನ್ಯಾರೂ ಬರ್ತಿಲ್ಲ, ಹೋಮಕ್ಕೆ ಶ್ರೋತ್ರಿಯರು ಒಂದಿಬ್ಬರು ಬರ್ತಿದ್ದಾರೆ, ಆದರೆ ಬಹಳ ಕಾಸ್ಟ್ಲಿ. ಇದೇ ರೀತಿ ಇನ್ನೂ ಹೆಚ್ಚಿನ ಹಬ್ಬ ಉತ್ಸವಗಳನ್ನು ಮಾಡೋಣ. ಅದೂ ಅಲ್ಲದೇ, ಈಗೀಗ ಕಾಲೋನಿಯ ವಾಸ ಇರುವವರ ಮನೆಗಳಲ್ಲಿ ಅವಘಢಗಳು ಜಾಸ್ತಿಯಾಗ್ತಿವೆ (ಮೊನ್ನೆ ತಾನೆ ಪಟ್ನಾಯಕ್ ಅವರು ಆತ್ಮಹತ್ಯೆ ಮಾಡಿಕೊಂಡದ್ದು ನಿಮಗೆಲ್ಲಾ ತಿಳಿದಿರಲೇಬೇಕು). ದೇವರನ್ನೂ ತೃಪ್ತಿಪಡಿಸಿದಂತಾಗುವುದು’, ಎಂದಿದ್ದರು. ನನಗೋ ರಜೆ ಬಂದರೆ ಸಾಕು, ಮನೆಯಲ್ಲಿ ಮಲಗೋಣ ಅಂತ ಅನ್ನಿಸಿಬಿಟ್ಟಿರುತ್ತದೆ. ಈಗೀಗ ವಿಪರೀತ ಜನಸಂದಣಿಯಾಗಿರುವ ಲೋಕಲ್ ಟ್ರೈನ್‍ನಲ್ಲಿ ಹೋಗಿ ಬರೋದು, ಆಫೀಸಿನಲ್ಲಿ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡೋದು, ಸುಸ್ತು ತರಿಸುತ್ತಿದೆ. (ಇನ್ನೂ ಚಿಕ್ಕವರಾ, ಹೇಳಿ ಕೇಳಿ ಮೂರನೆಯ ಕತ್ತೆಯ ವಯಸ್ಸೂ ಕಳೆಯುತ್ತಾ ಬಂತು, ಅಂತೀರಾ!). ಅದೂ ಅಲ್ಲದೇ, ಈ ಕಾಲೋನಿಯಲ್ಲಿ ದಕ್ಷಿಣ ಭಾರತದವರು ಕಾಲುಭಾಗವಾಗಿದ್ದರೆ, ಅಷ್ಟೇ ಸಂಖ್ಯೆಯ ಬಂಗಾಳಿಗಳೂ, ಮತ್ತು ಇತರರೂ ಇದ್ದು, ಅವರಿಗೆ ಅವರ ಉತ್ಸವವನ್ನು ಮಾಡಲು ಅನುಕೂಲ ಮಾಡಿಕೊಡಬೇಕಾದ್ದು ನಮ್ಮ ಕರ್ತವ್ಯವಲ್ಲವೇ? ನಮ್ಮಗಳದ್ದೇ ಕಾರುಬಾರಾದ್ದರೆ, ಅವರಿಗೆ ಮುಖ ಚಿಕ್ಕದಾಗುವುದು, ತಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ಭಾವನೆ ಬರುವುದು, ಸರ್ವೇ ಸಾಮಾನ್ಯದ ವಿಷಯ. ಈ ರೀತಿಯ ಚಿಂತನೆಯ ದಿಕ್ಕಿನಲ್ಲಿ, ವೆಂಕಟ್ರಾಮನ್ ಅವರ ಉತ್ಸುಕತೆಗೆ ಸ್ವಲ್ಪ ತಣ್ಣೀರೆರೆಚಿ, ’ಬಿಡಿ ಸಾರ್, ೧೦ ದಿನಗಳ ಗಣಪತಿ ಉತ್ಸವ ಆಚರಿಸ್ತೀವಲ್ಲ, ಅದೊಂದೇ ಸಾಕು’, ಎಂದಿದ್ದೆ. ಮುಂದೆ ಅವರನ್ನು ನನ್ನನ್ನು ಕೇಳದೆಯೇ ಈ ಚಂಡೀ ಹೋಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಷ್ಟಕ್ಕೂ ಈ ಹವನ ಹೋಮ ನಡೆಸುವುದರಿಂದ ಇನ್ಯಾರೂ ಸಾಯೋಲ್ವಾ? ಅವಘಢಗಳು ಆಗೋದೇ ಇಲ್ವಾ?

ನನ್ನನ್ನು ಹತ್ತಿರದಿಂದ ಬಲ್ಲವರು ಕೇಳುವ ಪ್ರಶ್ನೆ: ’ಅದ್ಸರ್ಯಲೇ ಭಾಡ್‍ಕೋವ್, ನೀನ್ಯಾಕೆ ಅವರೊಡನೆ ಮಂತ್ರ ಹೇಳ್ತಾ ಕುಳ್ತಿರ್ತೀಯಾ? ನೀನೇನ್ ದೇವ್ರನ್ ಕಂಡೀಯೇನಲೇ? ನೀನೇನ್ ಅವನೇಜೆಂಟಾ?’ 🙂 – ಅದಕ್ಕೆ ನನ್ನ ಉತ್ತರವೆಂದರೆ, ’ಯಾರಿಗಾದರೂ ಮನಸ್ಸಮಾಧಾನ ಆಗೋ ಹಾಗಿದ್ರೆ ಆ ಕೆಲಸ ಮಾಡೋದು ಉಚಿತ, ಸಸ್ವರವಾಗಿ ಮಂತ್ರ ಹೇಳುತ್ತಿರುವಾಗ ಕೇಳುಗರ ಮನಕ್ಕೆ ಆನಂದ ಉಂಟಾಗುವುದು, ಅದು ಕರ್ಣಾನಂದ ಸಂಗೀತದಂತೆ ತೋರುವುದು’ – ಅಲ್ವಾ? ಅದಕ್ಕವರು, ’ಅಲ್ಲಲೇ ಬದ್ಮಾಷ್, ನಂಗಿಷ್ಟ ಆತತೆ, ನೀ ಸಾಯಿ ಅಂದ್ರೆ ಸಾಯ್ತೀಯೇನಲೇ?’ – ’ಹೆ ಹೆ ಹೆ! ಹಾಗೇನಾದ್ರೂ ಯಾರಾದ್ರೂ ಸೀರಿಯಸ್ಸಾಗಿ ಹೇಳ್ತಾರಾ? ನನ್ನ ನಂಬಿದವರು ಸುಮ್ನೆ ಕುಳಿತಿರ್ತಾರಾ? ಹಾಗೇನಾದ್ರೂ ಸಮಾಜಕ್ಕೆ ಒಳಿತಾಗುವಂತಿದ್ರೆ ಹಾಗೆಯೂ ಮಾಡುವೆ. 🙂 ಹಾಗೆ ಸಾಯುವಂತಿದ್ದರೆ, ನಿಮ್ಮದೂ ಸಜೆಷನ್ ಕೇಳುವೆ – ಗೊತ್ತಾಯ್ತಾ’ – ಕ್ಷಮಿಸಿ ಎಲ್ಲಿಂದ ಎಲ್ಲಿಗೋ ಹೋಗ್ಬಿಟ್ಟೆ.

ನಾನು ಕಲಿತದ್ದು ನಾಲ್ಕಕ್ಷರ ವೇದ ಮಂತ್ರ. ಅದನ್ನು ಸಸ್ವರವಾಗಿ ಹೇಳಬಲ್ಲೆನೆಂಬ ನಂಬಿಕೆ ನನ್ನಲ್ಲಿದೆ. ನನ್ನ ವೇದಘೋಷವನ್ನು ಕೇಳಿದವರು, ಮತ್ತೆ ಮತ್ತೆ ಕೇಳಬೇಕೆನ್ನುವರು. ವೇದಘೋಷ ಮಾಡುವಾಗ, ನನಗರಿವಿಲ್ಲದಂತೆಯೇ ಅನಿರ್ವಚನೀಯ ಅನುಭವ ಆಗುವುದು. ಆ ಕೆಲವು ಸಮಯ ನಾನೀ ಲೋಕದಲ್ಲೇ ಇರುವುದಿಲ್ಲ. ಮನಸ್ಸಿನಲ್ಲಿ ಯಾವ ಯೋಚನೆಗಳೂ ಮೂಡುವುದಿಲ್ಲ. ಹಾಗೆಯೇ ಕೆಲವೊಮ್ಮೆ ಆ ಮಂತ್ರಗಳ ಅರ್ಥವನ್ನೂ ತಿಳಿಯಲು ಪ್ರಯತ್ನಿಸಿರುವೆ. ವೇದ ಮಂತ್ರದಲ್ಲಿ ಯಾವ ಮಾಯ ಮಾಟವೂ ಇಲ್ಲ. ಹಿರಿಯರು ಜೀವನದ ಪರಿಯನ್ನು ಅನುಭವಿಸಿ, ಅರಿತು, ಅದನ್ನೇ ಮುಂದಿನ ಪೀಳಿಗೆಗೆ ತಿಳಿಯಪಡಿಸಲು ಯತ್ನಿಸಿರುವರಷ್ಟೆ. ಆದರೆ ಈಗ ಹೆಚ್ಚಿನ ಜನಗಳು ಅದರರ್ಥವನ್ನು ತಿಳಿಯುವ ಗೊಡವೆಗೇ ಹೋಗಿಲ್ಲ. ಅದರಲ್ಲಿ ಮಡಿವಂತಿಕೆಯನ್ನು ತುಂಬಿ, ಜನಗಳಲ್ಲಿ ಭಯ ಭಕ್ತಿಯನ್ನು ಮೂಡಿಸಲು ಹೊರಟಿರುವರು. ಕೆಲವರಂತೂ ಅದರಿಂದ ಹಣ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಲೂ ಇರುವರು. ಇದನ್ನೆಲ್ಲಾ ನೋಡಿದರೆ, ಬದುಕು ಅಸಹ್ಯವೆನಿಸುವುದು, ಹೊಟ್ಟೆ ತೊಳಸಿದಂತಾಗುವುದು. ಮುಗ್ಧ ಜನಗಳ ಮನದ ಮೇಲೆ ಮೋಡಿ ಮಾಡಿ, ನಾವು ಮೆರೆಯುವುದು ಥರವಲ್ಲ.

ಮಂತ್ರ, ಮಾಯ, ಪೂಜೆ, ಹವನ, ಹೋಮ, ಇತ್ಯಾದಿ ನಡೆಸಿ ಮಳೆಯನ್ನು ಬರಿಸೋಕ್ಕಾಗತ್ತಾ? ಸಾವೇ ಇಲ್ಲದಿರುವಂತೆ ಮಾಡಲಾದೀತೇ? ಸಾವಿಲ್ಲದ ಮನೆಯಿಂದ ಸಾಸುವೆ ತರಲಾದೀತೇ? ಎಲ್ಲ ಹುಚ್ಚು ಕಲ್ಪನೆಗಳು. ನಮಗೆ ಮನಸ್ಸಂತೋಷ ಆಗುವಂತಿದ್ದರೆ, ನಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ನಮಗನ್ನಿಸಿದಂತೆ ಪೂಜೆ ಪುನಸ್ಕಾರ ನಡೆಸಿ, ಇಹಲೋಕದ ಋಣ ತೀರಿದ ನಂತರ, ಯಾರಿಗೂ ಹೇಳದೇ ಕಾಣದಂತಹ ಸ್ಥಾನಕಕ್ಕೆ ಹೋಗಿಬಿಡೋದು – ಅದನ್ಯಾರೂ ತಡೆಯಲಾಗೋಲ್ಲ. ಏನಂತೀರಿ?

ವಿಭಾಗಗಳು
ಲೇಖನಗಳು

ಹೇಡಿ?!

ಈತನನ್ನು ಹೇಡಿ ಎನಲೇ?

ನಮ್ಮ ಅಧಿಕಾರಿಯೊಬ್ಬ (ನಮ್ಮದೇ ಬ್ಲಾಕಿನಲ್ಲಿ ವಾಸವಿದ್ದರೂ, ಆತನ ಮನೆಯವರೆಲ್ಲರೂ ನನ್ನ ಮನೆಯವರಿಗೆ ಚಿರಪರಿಚಿತರಾದವರಾಗಿದ್ದರೂ, ನನಗೆ ಅವನು ಅಷ್ಟೇನೂ ಹತ್ತಿರದವನಾಗಿರಲಿಲ್ಲ), ಎಸ್ ಕೆ ಪಟ್ನಾಯಕ್. ಆದರೆ ಅವನ ಕುಟುಂಬ, ನನ್ನ ಕುಟುಂಬಕ್ಕೆ ಬಹಳ ಪರಿಚಿತರು. ಅವರ ಮನೆಯ ಆಗು ಹೋಗುಗಳ ಬಗ್ಗೆ ಆಗಾಗ್ಯೆ ಹೇಳುತ್ತಿರುತ್ತಾಳೆ. ಅವನ ಮಗ ಎಂಜಿನಿಯರಿಂಗ್ ಸೀಟನ್ನು ಉತ್ತಮ ದರ್ಜೆಯಲ್ಲಿ ಪಡೆದದ್ದು, ಕ್ಯಾಂಪಸ್ ಇಂಟರ್ವ್ಯೂನಲ್ಲಿ ಇನ್ಫೋಸಿಸ್‍ನಲ್ಲಿ ಕೆಲಸ ದೊರಕಿದ್ದು, ಇತ್ಯಾದಿ ಹೇಳುತ್ತಲೇ ಇರುತ್ತಾಳೆ.

ಸುಶಾಂತ ಪಟ್ನಾಯಕ್ ಮತ್ತು ರೀಟಾ ಅವರುಗಳಿಗೆ ಆದಿತ್ಯ ಮತ್ತು ಅಂಶುಮಾನ್ ಎಂಬಿಬ್ಬರು ಮಕ್ಕಳು. ನಾವುಗಳು ಮುಂಬಯಿಗೆ ಬರುವಾಗಾಗಲೇ ಅವನು ಮುಂಬಯಿಗೆ ವರ್ಗವಾಗಿ ಬಂದಿದ್ದನು. ಅವನಿಗಾಗಲೇ ಮದುವೆಯಾಗಿ ಒಬ್ಬ ಮಗನಿದ್ದನು (ಆದಿತ್ಯ). ಆ ಮಗ ನರ್ಸರಿ ಶಾಲೆಗೆ ಹೋಗುತ್ತಿದ್ದನು. ನಮ್ಮಿಬ್ಬರ ಕುಟುಂಬಗಳು ಒಂದೇ ವಸಾಹತು ಸಂಕೀರ್ಣದಲ್ಲಿ ವಾಸಿಸುತ್ತಿದ್ದೆವು. ೧೯೯೭ರಲ್ಲಿ ನಾವು ಬೆಂಗಳೂರಿಗೆ ವರ್ಗವಾಗಿ ಹೋದಾಗಲೂ ಅವರಿನ್ನೂ ಮುಂಬಯಿಯಲ್ಲಿಯೇ ಇದ್ದರು. ಪಟ್ನಾಯಕನಿಗೆ ವರ್ಗವಾಗಿ ಹೋಗಲೇ ಬೇಕೆಂಬ ಸಮಯ ಬಂದಾಗ, ಮಕ್ಕಳ ಓದಿಗೆ ತೊಂದರೆ ಆಗಬಾರದೆಂದು, ಗುವಾಹತಿಗೆ ವರ್ಗ ತೆಗೆದುಕೊಂಡು ಹೋಗಿದ್ದನು. ಹಾಗೆ ಗುವಾಹತಿಗೆ ವರ್ಗವಾಗಿ ಹೋಗುವವರಿಗೆ, ಹಿಂದಿನ ಸ್ಥಳದಲ್ಲಿ ವಸಾಹತು ಉಳಿಸಿಕೊಳ್ಳಲು ಅವಕಾಶವನ್ನೀಯುವರು. ಮತ್ತೆ ನಾವು ಮುಂಬಯಿಗೆ ಬಂದೆವು. ಮತ್ತೆ ಅವರ ಸ್ನೇಹ ಬೆಳೆಯಿತು.

ಹೀಗೊಮ್ಮೆ ಗುವಾಹತಿಯಲ್ಲಿರುವಾಗ ಒಂದು ಚಿಕ್ಕ ಆಕ್ಸಿಡೆಂಟಿನಲ್ಲಿ ಪಟ್ನಾಯಕನಿಗೆ ಕಾಲಿಗೆ ಪೆಟ್ಟು ಬಿದ್ದಿತ್ತಂತೆ. ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದವನಿಗೆ ಗುಣವಾಗಲು ತಡವಾಗುವುದೆಂದು ಗಾಯಕ್ಕೆ ಹೊಲಿಗೆ ಹಾಕಿದ್ದರಂತೆ. ಹಾಗೆ ಹಾಕಿದ ಹೊಲಿಗೆಯ ಗಾಯ ಮಾಯಲೇ ಇಲ್ಲ. ಸ್ವಲ್ಪ ಸಮಯದ ಕಾಲಕ್ಕೆ ಡೆಪ್ಯೂಟಿ ಜನರಲ್ ಮ್ಯಾನೇಜರಾಗಿ ಬಡ್ತಿ ಹೊಂಡಿದವನು, ಮುಂಬಯಿಗ ಬಂದಿದ್ದನು. ಮರಳಿ ಮುಂಬಯಿಗೆ ಬಂದ ಮೇಲೂ ಗಾಯ ವಿಪರೀತಕ್ಕೆ ತಿರುಗಿಕೊಂಡು, ಗ್ಯಾಂಗ್ರೀನ್ ಆಗಿತ್ತು. ಒಂದು ವರ್ಷಗಳ ಕಾಲ ಬ್ಯಾಂಕಿಗೆ ಹೋಗುವುದೇ ದುಸ್ತರವಾಗಿತ್ತು. ರಜೆಯೂ ಖಾಲಿಯಾಗಿ ಸಂಬಳ ಬರುವುದು ಕಷ್ಟವಾಗುವ ಪರಿಸ್ಥಿತಿಗೆ ಬಂದಿತ್ತು. ಆದರೆ ಈ ವಿಷಯಗಳನ್ನೆಲ್ಲಾ ಅವರುಗಳು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ತಾವೇ ಅನುಭವಿಸುತ್ತಿದ್ದರು. ಇದೇ ವೇಳೆಗೆ, ಮೊದಲನೆಯ ಮಗನಿಗೆ ಇನ್ಫೋಸಿಸ್‍ನಲ್ಲಿ ಕೆಲಸ ದೊರಕಿತು. ಅವನಿನ್ನೂ ಕೊನೆಯ ವರ್ಷದ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಎರಡನೆಯ ಹುಡುಗ ೯ನೆಯ ತರಗತಿಯಲ್ಲಿ ಓದುತ್ತಿರುವನು. ಮುಖ್ಯ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಓಡಾಡಲು ಕಷ್ಟವಾಗುವುದೆಂದು ಹತ್ತಿರದಲ್ಲಿರುವ (೧೪-೧೫ ಕಿ.ಮೀ.ದೂರ) ಬಾಂದ್ರಾದ ಕಛೇರಿಗೆ ವರ್ಗ ಮಾಡಿದ್ದರು. ಅವನ ಕೆಲಸ ಮಾಡುವ ಸ್ಥಳ ೮ನೆಯ ಮಹಡಿಯಲ್ಲಿ ಇತ್ತು. ನಿನ್ನೆ ಬುಧವಾರದಂದು ಕಛೇರಿಗೆ ಹೋದವನಿಗೆ ಕಾಲಿನ ನೋವು ತಡೆಯಲಾಗಲಿಲ್ಲ. ಮನಸ್ಸಿನಲ್ಲಿ ಅದೇನು ಹೊಳೆಯಿತೋ ಏನೋ, ಮೂತ್ರಾಲಯದ ಕಿಟಕಿಯಿಂದ ಹಾರಿ ಕೆಳಗೆ ಬಿದ್ದವನಿಗೆ ಕ್ಷಣದಲ್ಲಿಯೇ ಪ್ರಾಣ ಹೋಗಿತ್ತು. ಆತ್ಮಹತ್ಯೆಯಂತೆ ತೋರಿದ್ದರಿಂದ ಪೋಲೀಸರು ಬಂದು ಕೇಸನ್ನು ದರ್ಜಿಸಿ, ಹತ್ತಿರದ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಿಸಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿರುವ ಇತರರು ಮೃತ ಶರೀರವನ್ನು ಕಾಲೋನಿಗೆ ತಂದಿದ್ದರು. ಅವರ ಹತ್ತಿರದ ನೆಂಟರಿಷ್ಟರೆಲ್ಲರೂ ಸೇರಿ ಮೃತ ದೇಹಕ್ಕೆ ಅಂತ್ಯ ಕ್ರಿಯೆಯನ್ನು ಮಾಡಿದ್ದಾಯಿತು.

ಛೇ! ಪಡಬಾರದ ಕಷ್ಟಗಳನ್ನೆಲ್ಲಾ ಜೀವನದಲ್ಲಿ ಪಟ್ಟು, ಜೀವನದ ಏರಿನ ತುದಿಯನ್ನೇರಿ, ಇಳಿಜಾರಿನ ಮುಂದೆ ನಿಂತವನು, ಹಾಯಾಗಿ ಇಳಿದು ಹೋಗೋದು ಬಿಟ್ಟು, ಇದ್ದಕ್ಕಿದ್ದಂತೆ ತನ್ನ ನಂಬಿದವರನು ಮರೆತು ಕಾಣೆಯಾಗಿ ಹೋಗಿಬಿಡೋದಾ? ಅಲ್ಲ ಅದ್ಯಾಕೆ ಹೀಗೆ ಮಾಡಿದನಿವನು? ನಂಬಿದವರು ಕಂಗಾಲಾಗುವರೆಂಬ ಚಿಂತೆ ಕೂಡ ಬರ್ಲಿಲ್ವೇ?

ಅಲ್ಲ – ಇವರುಗಳ ಮನಸ್ಸಿನಲ್ಲಿ ಅದೇನು ಯೋಚನೆ ಇರತ್ತೇ ಅಂತ. ಇದೇ ತರಹ ೧೯೯೦ರಲ್ಲಿ ಗುರುಸಿದ್ದಪ್ಪ ಕೊಡಿಯಾಲಮಠ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ, ಅವನು ನಮ್ಮೊಂದಿಗೆ ಯಾವ ತೊಂದರೆಯನ್ನು ತೋಡಿಕೊಳ್ತಿದ್ನೋ ಅದು ತೊಂದರೆಯೇ ಅಲ್ಲವೆಂದು ಈಗ ತಿಳಿಯುತ್ತಿದೆ. ಹುಂ! ವಿಧಿ ಬರಹ ಹೀಗೆ ಎಂದೆನಿಸುತ್ತದೆ. ಹಗ್ಗವೂ ಕೂಡಾ ಕೆಲವೊಮ್ಮೆ ಹಾವಿನಂತೆ ತೋರಬಹುದೇನೋ. ಕೆಲವೊಮ್ಮೆ ನನ್ನ ಮಗಳಿಗೆ ಹೊಳೆಯುವ ಚಿಂತನೆ ನನಗದೇಕೋ ಹೊಳೆಯುವುದೇ ಇಲ್ಲ. ಇವಳೆಂತಹ ಜೀನಿಯಸ್ ಅಂತ ಆ ತಕ್ಷಣಕ್ಕೆ ಅನ್ನಿಸಿದರೂ, ನಂತರ ನಾನೆಂತಹ ಪೆದ್ದ – ಅವಳು ನಾರ್ಮಲ್ ಎಂದು ತಿಳಿಯುವುದು.

ಕೊಡಿಯಾಲಮಠನ ಬಗ್ಗೆ ಮತ್ತೊಮ್ಮೆ ಬರೆಯುವೆ.