ವಿಭಾಗಗಳು
ಲೇಖನಗಳು

ಹೇಡಿ?!

ಈತನನ್ನು ಹೇಡಿ ಎನಲೇ?

ನಮ್ಮ ಅಧಿಕಾರಿಯೊಬ್ಬ (ನಮ್ಮದೇ ಬ್ಲಾಕಿನಲ್ಲಿ ವಾಸವಿದ್ದರೂ, ಆತನ ಮನೆಯವರೆಲ್ಲರೂ ನನ್ನ ಮನೆಯವರಿಗೆ ಚಿರಪರಿಚಿತರಾದವರಾಗಿದ್ದರೂ, ನನಗೆ ಅವನು ಅಷ್ಟೇನೂ ಹತ್ತಿರದವನಾಗಿರಲಿಲ್ಲ), ಎಸ್ ಕೆ ಪಟ್ನಾಯಕ್. ಆದರೆ ಅವನ ಕುಟುಂಬ, ನನ್ನ ಕುಟುಂಬಕ್ಕೆ ಬಹಳ ಪರಿಚಿತರು. ಅವರ ಮನೆಯ ಆಗು ಹೋಗುಗಳ ಬಗ್ಗೆ ಆಗಾಗ್ಯೆ ಹೇಳುತ್ತಿರುತ್ತಾಳೆ. ಅವನ ಮಗ ಎಂಜಿನಿಯರಿಂಗ್ ಸೀಟನ್ನು ಉತ್ತಮ ದರ್ಜೆಯಲ್ಲಿ ಪಡೆದದ್ದು, ಕ್ಯಾಂಪಸ್ ಇಂಟರ್ವ್ಯೂನಲ್ಲಿ ಇನ್ಫೋಸಿಸ್‍ನಲ್ಲಿ ಕೆಲಸ ದೊರಕಿದ್ದು, ಇತ್ಯಾದಿ ಹೇಳುತ್ತಲೇ ಇರುತ್ತಾಳೆ.

ಸುಶಾಂತ ಪಟ್ನಾಯಕ್ ಮತ್ತು ರೀಟಾ ಅವರುಗಳಿಗೆ ಆದಿತ್ಯ ಮತ್ತು ಅಂಶುಮಾನ್ ಎಂಬಿಬ್ಬರು ಮಕ್ಕಳು. ನಾವುಗಳು ಮುಂಬಯಿಗೆ ಬರುವಾಗಾಗಲೇ ಅವನು ಮುಂಬಯಿಗೆ ವರ್ಗವಾಗಿ ಬಂದಿದ್ದನು. ಅವನಿಗಾಗಲೇ ಮದುವೆಯಾಗಿ ಒಬ್ಬ ಮಗನಿದ್ದನು (ಆದಿತ್ಯ). ಆ ಮಗ ನರ್ಸರಿ ಶಾಲೆಗೆ ಹೋಗುತ್ತಿದ್ದನು. ನಮ್ಮಿಬ್ಬರ ಕುಟುಂಬಗಳು ಒಂದೇ ವಸಾಹತು ಸಂಕೀರ್ಣದಲ್ಲಿ ವಾಸಿಸುತ್ತಿದ್ದೆವು. ೧೯೯೭ರಲ್ಲಿ ನಾವು ಬೆಂಗಳೂರಿಗೆ ವರ್ಗವಾಗಿ ಹೋದಾಗಲೂ ಅವರಿನ್ನೂ ಮುಂಬಯಿಯಲ್ಲಿಯೇ ಇದ್ದರು. ಪಟ್ನಾಯಕನಿಗೆ ವರ್ಗವಾಗಿ ಹೋಗಲೇ ಬೇಕೆಂಬ ಸಮಯ ಬಂದಾಗ, ಮಕ್ಕಳ ಓದಿಗೆ ತೊಂದರೆ ಆಗಬಾರದೆಂದು, ಗುವಾಹತಿಗೆ ವರ್ಗ ತೆಗೆದುಕೊಂಡು ಹೋಗಿದ್ದನು. ಹಾಗೆ ಗುವಾಹತಿಗೆ ವರ್ಗವಾಗಿ ಹೋಗುವವರಿಗೆ, ಹಿಂದಿನ ಸ್ಥಳದಲ್ಲಿ ವಸಾಹತು ಉಳಿಸಿಕೊಳ್ಳಲು ಅವಕಾಶವನ್ನೀಯುವರು. ಮತ್ತೆ ನಾವು ಮುಂಬಯಿಗೆ ಬಂದೆವು. ಮತ್ತೆ ಅವರ ಸ್ನೇಹ ಬೆಳೆಯಿತು.

ಹೀಗೊಮ್ಮೆ ಗುವಾಹತಿಯಲ್ಲಿರುವಾಗ ಒಂದು ಚಿಕ್ಕ ಆಕ್ಸಿಡೆಂಟಿನಲ್ಲಿ ಪಟ್ನಾಯಕನಿಗೆ ಕಾಲಿಗೆ ಪೆಟ್ಟು ಬಿದ್ದಿತ್ತಂತೆ. ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದವನಿಗೆ ಗುಣವಾಗಲು ತಡವಾಗುವುದೆಂದು ಗಾಯಕ್ಕೆ ಹೊಲಿಗೆ ಹಾಕಿದ್ದರಂತೆ. ಹಾಗೆ ಹಾಕಿದ ಹೊಲಿಗೆಯ ಗಾಯ ಮಾಯಲೇ ಇಲ್ಲ. ಸ್ವಲ್ಪ ಸಮಯದ ಕಾಲಕ್ಕೆ ಡೆಪ್ಯೂಟಿ ಜನರಲ್ ಮ್ಯಾನೇಜರಾಗಿ ಬಡ್ತಿ ಹೊಂಡಿದವನು, ಮುಂಬಯಿಗ ಬಂದಿದ್ದನು. ಮರಳಿ ಮುಂಬಯಿಗೆ ಬಂದ ಮೇಲೂ ಗಾಯ ವಿಪರೀತಕ್ಕೆ ತಿರುಗಿಕೊಂಡು, ಗ್ಯಾಂಗ್ರೀನ್ ಆಗಿತ್ತು. ಒಂದು ವರ್ಷಗಳ ಕಾಲ ಬ್ಯಾಂಕಿಗೆ ಹೋಗುವುದೇ ದುಸ್ತರವಾಗಿತ್ತು. ರಜೆಯೂ ಖಾಲಿಯಾಗಿ ಸಂಬಳ ಬರುವುದು ಕಷ್ಟವಾಗುವ ಪರಿಸ್ಥಿತಿಗೆ ಬಂದಿತ್ತು. ಆದರೆ ಈ ವಿಷಯಗಳನ್ನೆಲ್ಲಾ ಅವರುಗಳು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ತಾವೇ ಅನುಭವಿಸುತ್ತಿದ್ದರು. ಇದೇ ವೇಳೆಗೆ, ಮೊದಲನೆಯ ಮಗನಿಗೆ ಇನ್ಫೋಸಿಸ್‍ನಲ್ಲಿ ಕೆಲಸ ದೊರಕಿತು. ಅವನಿನ್ನೂ ಕೊನೆಯ ವರ್ಷದ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಎರಡನೆಯ ಹುಡುಗ ೯ನೆಯ ತರಗತಿಯಲ್ಲಿ ಓದುತ್ತಿರುವನು. ಮುಖ್ಯ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಓಡಾಡಲು ಕಷ್ಟವಾಗುವುದೆಂದು ಹತ್ತಿರದಲ್ಲಿರುವ (೧೪-೧೫ ಕಿ.ಮೀ.ದೂರ) ಬಾಂದ್ರಾದ ಕಛೇರಿಗೆ ವರ್ಗ ಮಾಡಿದ್ದರು. ಅವನ ಕೆಲಸ ಮಾಡುವ ಸ್ಥಳ ೮ನೆಯ ಮಹಡಿಯಲ್ಲಿ ಇತ್ತು. ನಿನ್ನೆ ಬುಧವಾರದಂದು ಕಛೇರಿಗೆ ಹೋದವನಿಗೆ ಕಾಲಿನ ನೋವು ತಡೆಯಲಾಗಲಿಲ್ಲ. ಮನಸ್ಸಿನಲ್ಲಿ ಅದೇನು ಹೊಳೆಯಿತೋ ಏನೋ, ಮೂತ್ರಾಲಯದ ಕಿಟಕಿಯಿಂದ ಹಾರಿ ಕೆಳಗೆ ಬಿದ್ದವನಿಗೆ ಕ್ಷಣದಲ್ಲಿಯೇ ಪ್ರಾಣ ಹೋಗಿತ್ತು. ಆತ್ಮಹತ್ಯೆಯಂತೆ ತೋರಿದ್ದರಿಂದ ಪೋಲೀಸರು ಬಂದು ಕೇಸನ್ನು ದರ್ಜಿಸಿ, ಹತ್ತಿರದ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಿಸಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿರುವ ಇತರರು ಮೃತ ಶರೀರವನ್ನು ಕಾಲೋನಿಗೆ ತಂದಿದ್ದರು. ಅವರ ಹತ್ತಿರದ ನೆಂಟರಿಷ್ಟರೆಲ್ಲರೂ ಸೇರಿ ಮೃತ ದೇಹಕ್ಕೆ ಅಂತ್ಯ ಕ್ರಿಯೆಯನ್ನು ಮಾಡಿದ್ದಾಯಿತು.

ಛೇ! ಪಡಬಾರದ ಕಷ್ಟಗಳನ್ನೆಲ್ಲಾ ಜೀವನದಲ್ಲಿ ಪಟ್ಟು, ಜೀವನದ ಏರಿನ ತುದಿಯನ್ನೇರಿ, ಇಳಿಜಾರಿನ ಮುಂದೆ ನಿಂತವನು, ಹಾಯಾಗಿ ಇಳಿದು ಹೋಗೋದು ಬಿಟ್ಟು, ಇದ್ದಕ್ಕಿದ್ದಂತೆ ತನ್ನ ನಂಬಿದವರನು ಮರೆತು ಕಾಣೆಯಾಗಿ ಹೋಗಿಬಿಡೋದಾ? ಅಲ್ಲ ಅದ್ಯಾಕೆ ಹೀಗೆ ಮಾಡಿದನಿವನು? ನಂಬಿದವರು ಕಂಗಾಲಾಗುವರೆಂಬ ಚಿಂತೆ ಕೂಡ ಬರ್ಲಿಲ್ವೇ?

ಅಲ್ಲ – ಇವರುಗಳ ಮನಸ್ಸಿನಲ್ಲಿ ಅದೇನು ಯೋಚನೆ ಇರತ್ತೇ ಅಂತ. ಇದೇ ತರಹ ೧೯೯೦ರಲ್ಲಿ ಗುರುಸಿದ್ದಪ್ಪ ಕೊಡಿಯಾಲಮಠ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ, ಅವನು ನಮ್ಮೊಂದಿಗೆ ಯಾವ ತೊಂದರೆಯನ್ನು ತೋಡಿಕೊಳ್ತಿದ್ನೋ ಅದು ತೊಂದರೆಯೇ ಅಲ್ಲವೆಂದು ಈಗ ತಿಳಿಯುತ್ತಿದೆ. ಹುಂ! ವಿಧಿ ಬರಹ ಹೀಗೆ ಎಂದೆನಿಸುತ್ತದೆ. ಹಗ್ಗವೂ ಕೂಡಾ ಕೆಲವೊಮ್ಮೆ ಹಾವಿನಂತೆ ತೋರಬಹುದೇನೋ. ಕೆಲವೊಮ್ಮೆ ನನ್ನ ಮಗಳಿಗೆ ಹೊಳೆಯುವ ಚಿಂತನೆ ನನಗದೇಕೋ ಹೊಳೆಯುವುದೇ ಇಲ್ಲ. ಇವಳೆಂತಹ ಜೀನಿಯಸ್ ಅಂತ ಆ ತಕ್ಷಣಕ್ಕೆ ಅನ್ನಿಸಿದರೂ, ನಂತರ ನಾನೆಂತಹ ಪೆದ್ದ – ಅವಳು ನಾರ್ಮಲ್ ಎಂದು ತಿಳಿಯುವುದು.

ಕೊಡಿಯಾಲಮಠನ ಬಗ್ಗೆ ಮತ್ತೊಮ್ಮೆ ಬರೆಯುವೆ.

‍ತಳುಕು ಶ್ರೀನಿವಾಸ ಮೂಲಕ

ನಾನೊಬ್ಬ ಸಾಹಿತ್ಯಾಭಿಲಾಷಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s