ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ದೇಶದಲ್ಲೆಲ್ಲಾ ದೀಪಾವಳಿ


ಭವಿಷ್ಯೋತ್ತರ ಪುರಾಣದಲ್ಲಿ (೧೪೦-೭೧) ಹೇಳಿರುವ ಉಕ್ತಿ ಹೀಗಿದೆ

ಉಪಶಮಿತ ಮೇಘನಾದಂ
ಪ್ರಜ್ವಲಿತ ದಶಾನನಂ ರಮಿತರಾಮಂ|
ರಾಮಾಯಣಮಿದಂ ಸುಭಗಂ
ದೀಪದಿನಂ ಹರತು ವೋ ದುರಿತಂ||

devi1.JPG
ರಾಮಾಯಣದಲ್ಲಿ ಮೇಘನಾಥನು (ಇಂದ್ರಜಿತು) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವ ದಿನವು ನಮ್ಮ ಹಾಗೂ ನಿಮ್ಮ ಪಾಪಗಳನ್ನು ಹೋಗಲಾಡಿಸಲಿ.

ನಮ್ಮ ದೇಶದಲ್ಲಿ ಅಲ್ಲದೇ ಅಕ್ಕ ಪಕ್ಕದ ದೇಶಗಳಲ್ಲೆಲ್ಲಾ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಕೆಲವೇ ಹಬ್ಬಗಳಲ್ಲಿ, ದೀಪಾವಳಿಯೂ ಮುಖ್ಯವಾದುದು. ಇದನ್ನು ನಾಡಹಬ್ಬವಾಗಿಯೂ ಆಚರಿಸುವ ಸಂಪ್ರದಾಯವುಂಟು.

ದೀಪಗಳ ಆವಳಿ – ಸರಮಾಲೆ – ದೀಪಗಳ ಸಾಲು ಎಂದರ್ಥ. ಕಾರ್ತಿಕ ಮಾಸದ ಕಡೆಯಲ್ಲಿ ಮನೆ ಮಂದಿರಗಳಲ್ಲಿ ಕಾರ್ತೀಕ ದೀಪೋತ್ಸವ, ಶಿವ ದೀಪೋತ್ಸವ ಮತ್ತು ವಿಷ್ಣು ದೀಪೋತ್ಸವಗಳೆಂದು ಕರೆದು ಎಲ್ಲೆಡೆ ದೀಪಗಳನ್ನು ಸಾಲು ಸಾಲಾಗಿ ಹಚ್ಚಿಡುವರು. ಮುಂದೆ ಕಾರ್ತೀಕ ದೀಪೋತ್ಸವದಲ್ಲಿ ದೀಪಗಳನ್ನು ಬೆಳಗಿಸುವ ಸಮಾರಂಭಕ್ಕೆ ದೀಪಾವಳಿಯು ನಾಂದಿಯಾಗಿರುತ್ತದೆ. ದೀಪಾವಳಿ ಉತ್ಸವದಲ್ಲಿ ಮಹಾವಿಷ್ಣುವಿನ ಪೂಜೆ, ನರಕಾಸುರನ ವಧೆ, ಬಲೀಂದ್ರ ವಿಜಯದ ಪೂಜೆ, ಮಹಾಲಕ್ಷ್ಮಿಯ ಪೂಜೆ, ಮಹಾದೇವನ ಪೂಜೆ, ಮಹಾರಾತ್ರಿಯ ಪೂಜೆ, ಕುಬೇರನ ಪೂಜೆ, ಯಮಧರ್ಮರಾಜನ ಪೂಜೆ, ಗೋವಿನ ಪೂಜೆ ಮತ್ತು ಗೋವರ್ಧನ ಪೂಜೆಗಳನ್ನೂ ಮಾಡುವರು. ಈ ಸಮಯದಲ್ಲಿ ಪಶು ಪ್ರಾಣಿಗಳಿಗೂ ಪೂಜೆಯಲ್ಲಿ ಆದ್ಯತೆ ನೀಡಲಾಗುವುದು. ಇಷ್ಟಲ್ಲದೇ ಇದೇ ಸಮಯದಲ್ಲಿ ದೀಪದಾನವನ್ನೂ ನಡೆಸುವರು. ಇಷ್ಟಲ್ಲದೇ ವಿಶೇಷ ದಿನಗಳಲ್ಲಿ ಆಯಾ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿರುವ ಕೌಮುದೀ ಮಹೋತ್ಸವ, ನರಕ ಚತುರ್ದಶೀ, ಬಲಿಪಾಡ್ಯಮಿ, ವೀರಪ್ರತಿಪದಾ, ಭಗಿನೀ ದ್ವಿತೀಯಾ (ಬಿಹಾರ ಉತ್ತರ ಪ್ರದೇಶಗಳಲ್ಲಿ ಭಾವುದೂಜ್), ಸೋದರ ಬಿದಿಗೆ (ಮಹಾರಾಷ್ಟ್ರದಲ್ಲಿ ಭಾವುಬೀಜ್) ಇತ್ಯಾದಿ ಹಬ್ಬಗಳನ್ನು ಆಚರಿಸುವರು.

deepa1.JPG
ಆಶ್ವಯುಜ ಮಾಸ ಕೃಷ್ಣ ಪಕ್ಷದ ತ್ರಯೋದಶಿಯ ಸಂಜೆ ಶುದ್ಧವಾದ ನೀರನ್ನು ಮನೆಯ ಎಲ್ಲ ಪಾತ್ರೆಗಳಿಗೂ ಸ್ನಾನಕ್ಕಾಗಿಯೂ ತುಂಬಿಟ್ಟು, ರಾತ್ರಿ ಸಮಯದಲ್ಲಿ ಅಪಮೃತ್ಯ ನಿವಾರಣೆಗಾಗಿ ಯಮಧರ್ಮರಾಜನನ್ನು ಸಂತೋಷಪಡಿಸಲು ಮನೆಯ ಹೊರಗಡೆ ದೀಪವನ್ನು ಹೊತ್ತಿಸಿಡುವರು. ಇದಕ್ಕೆ ಯಮದೀಪ ಎಂದು ಹೆಸರಿಸುವರು. ಮೃತ್ಯುವಿನಿಂದಲೂ, ಪಾಶದಂಡಗಳಿಂದಲೂ, ಕಾಲಪುರುಷನಿಂದಲೂ ಮತ್ತು ಶ್ಯಾಮಾದೇವಿಯಿಂದಲೂ ಕೂಡಿದ ಸೂರ್ಯಪುತ್ರ ಯಮಧರ್ಮರಾಜನು ತ್ರಯೋದಶಿಯ ಈ ದೀಪದಾನದಿಂದ ಸಂತುಷ್ಟನಾಗುವನು. ಅಂದಿನ ದಿನವನ್ನು ನೀರು ತುಂಬುವ ಹಬ್ಬವೆಂದೂ ಕರೆವರು. ದಕ್ಷಿಣ ಭಾರತದಲ್ಲಿ ನೀರು ಕಾಯಿಸುವ ಒಲೆಯನ್ನು ಚೆನ್ನಾಗಿ ತೊಳೆದು ಅದಕ್ಕೆ ಅರಿಶಿನ, ಕುಂಕುಮಗಳೊಂದಿಗೆ ರಂಗೋಲಿಯನ್ನಿಟ್ಟು ಮಾರನೆಯ ದಿನದ ಅಭ್ಯಂಜನ ಸ್ನಾನಕ್ಕೆ ಅಣಿಗೊಳಿಸುವರು.
ಮಾರನೆಯದಿನ ಚತುರ್ದಶಿಯಂದು ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಜನ ಸ್ನಾನ ಮಾಡಿ, ಹೊಸದಾಗಿ ಮದುವೆಯಾದ ಅಳಿಯ ಮತ್ತು ಅವನ ಬಂಧುಬಳಗವನ್ನು ಕರೆಸಿ ಸುಖ ಸಂತೋಷಪಡಿಸುವುದೂ ಪದ್ಧತಿಯಲ್ಲಿದೆ. ಅಭ್ಯಂಜನ ಸ್ನಾನದಿಂದ ನರಕಾಂತಕನಾದ ನಾರಾಯಣನಿಗೆ ಸಂತೋಷ ಉಂಟಾಗುತ್ತದೆ ಮತ್ತು ನರಕಭೀತಿ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಭ್ಯಂಜನಕ್ಕೆ ಉಪಯೋಗಿಸುವ ಎಣ್ಣೆ ಮತ್ತು ಪುಡಿಗಳಿಗೆ ವಿಶೇಷವಾದ ಶಕ್ತಿ ಇದ್ದು ನರ ದೌರ್ಬಲ್ಯವನ್ನು ತಡೆಗಟ್ಟುವುದು. ಅಂದು ಯಮಧರ್ಮರಾಜನಿಗೆ ಹದಿನಾಲ್ಕು ಹೆಸರುಗಳಿಂದ ತಿಲತರ್ಪಣವನ್ನು ಕೊಡುವ ವಿಧಿಯೂ ಇದೆ. ಅಂದು ಬೈಗಿನಲ್ಲೂ ಮತ್ತು ರಾತ್ರಿಯಲ್ಲಿಯೂ ಮಕ್ಕಳಾದಿಯಾಗಿ ದೊಡ್ಡವರೂ ಸೇರಿ ಪಟಾಕಿ, ಬಾಣ ಬಿರುಸುಗಳನ್ನು ಸುಟ್ಟು ನಲಿಯುವರು. ನರಕಪರಿಹಾರಕ್ಕೋಸ್ಕರವಾಗಿ ದೇವಾಲಯಗಳಲ್ಲಿ, ಮಠ, ಬೃಂದಾವನ ಮತ್ತು ಮನೆಗಳ ಅಂಗಳಗಳಲ್ಲಿ, ನದಿ, ಬಾವಿ ಮತ್ತು ಮುಖ್ಯ ಬೀದಿಗಳಲ್ಲಿಯೂ ನಾಲ್ಕು ಬತ್ತಿಗಳುಳ್ಳ ದೀಪಗಳನ್ನು ಹಚ್ಚಿಡುವರು.

untitled1.JPG
ಮಾರನೆಯ ದಿನ ಅಮಾವಾಸ್ಯೆಯಂದು ಅಭ್ಯಂಜನ ಸ್ನಾನ ಮಾಡಿ ಲಕ್ಷ್ಮೀದೇವಿಯನ್ನು ಪೂಜಿಸಬೇಕು. ಸ್ನಾನ ಮಾಡುವ ನೀರಿನಲ್ಲಿ ಅರಳಿ, ಅತ್ತಿ, ಮಾವು, ಆಲ ಮತ್ತು ಪ್ಲಕ್ಷ ಎಂಬ ಮರಗಳ ತೊಗಟೆಗಳನ್ನು ಸೇರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ದೇವತಾ ಪೂಜೆಯ ನಂತರ ಪಿತೃ ದೇವತೆಗಳಿಗೆ ತರ್ಪಣ ಕೊಡುವ ಪದ್ಧತಿಯೂ ಇದೆ. ಹೆಚ್ಚಿನದಾಗಿ ಉತ್ತರ ಭಾರತದಲ್ಲಿ ಮತ್ತು ಇತರೆಡೆಗಳಲ್ಲಿ ರಾತ್ರಿ ಪೂರ್ತಿ ಜಾಗರಣೆ ಮಾಡಿ ಸಂಪತ್ತಿನ ಒಡತಿ ಲಕ್ಷ್ಮಿಯನ್ನು ಪೂಜಿಸುವರು. ವರ್ತಕರು ಲೆಕ್ಕಾಚಾರಕ್ಕಾಗಿ ಹೊಸ ಪುಸ್ತಕಗಳನ್ನು ತೆರೆಯುವರು. ಅದನ್ನು ಪೂಜಿಸಿ, ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಸಿಹಿತಿಂಡಿಗಳನ್ನು ಮತ್ತು ತಾಂಬೂಲವನ್ನು ನೀಡುವರು. ಅಂದು ಅವರುಗಳಿಗೆ ಇದು ಹೊಸವರ್ಷದ ಮೊದಲ ದಿನ. ಲಕ್ಷ್ಮೀದೇವಿಯ ಜೊತೆಗೆ ಧನಾಧಿಪತಿಯಾದ ಕುಬೇರನನ್ನೂ ಆರಾಧಿಸುವ ವಾಡಿಕೆ ಇದೆ. ಅಂದು ಮುಂಬಯಿಯ ಶೇರು ಮಾರುಕಟ್ಟೆಯಲ್ಲಿ (ಇತರೆ ಮಾರುಕಟ್ಟೆಗಳಲ್ಲಿಯೂ ಸಹ) ಮೂರತ್ ಟ್ರೇಡಿಂಗ್ ಅಥವಾ ಮುಹೂರ್ತ ವ್ಯಾಪಾರವೆಂದು ಎಲ್ಲರೂ ಪಾಲ್ಗೊಳ್ಳುವರು. ಪ್ರತಿ ಮನೆ ಮನೆಗಳಲ್ಲಿಯೂ ಅತಿ ಕಡಿಮೆ ಎಂದರೆ ಒಂದು ಗ್ರಾಮಿನಷ್ಟು ಚಿನ್ನ ಅಥವಾ ಬೆಳ್ಳಿಯನ್ನು ಕೊಳ್ಳುವುದೂ ವಾಡಿಕೆ. ಅಂದು ಚಿನಿವಾರರ ಅಂಗಡಿಗಳಲ್ಲಿ ಬಹಳ ಜೋರಿನಿಂದ ವ್ಯಾಪಾರವಾಗುವುದು. ಅಂದು ಅಕ್ಕ ಪಕ್ಕದ ಮನೆಯವರುಗಳಿಗೆ ಮತ್ತು ನೆಂಟರಿಷ್ಟರುಗಳಿಗೆ ಬಾಗಿನ ಕೊಡುವುದೂ ರೂಢಿಯಲ್ಲಿದೆ. ಸಿಹಿತಿಂಡಿಗಳನ್ನು ಎಲ್ಲರೂ ನೀಡುವರೆಂದು ಈಗೀಗ ಒಣಹಣ್ಣುಗಳನ್ನು (ಡ್ರೈಫ್ರೂಟ್) ಕೊಡುವ ಅಭ್ಯಾಸ ಚಾಲ್ತಿಯಲ್ಲಿದೆ. ಅಂಗಡಿಗಳಲ್ಲಿ ಇದನ್ನೇ ಪ್ರತ್ಯೇಕವಾಗಿ ಪ್ಯಾಕ್ ಮಾಡಿಟ್ಟಿರುತ್ತಾರೆ. ಇದಲ್ಲದೇ ಉಡುಗೊರೆಯಾಗಿ ಬೆಳ್ಳಿ ಅಥವಾ ಚಿನ್ನದ ನಾಣ್ಯವನ್ನೂ ನೀಡುವರು. ಕೆಲಸಗಾರರಿಗೆ ಮಾಲೀಕರು ಬೋನಸ್, ಉಡುಗೊರೆಯನ್ನಿತ್ತರೆ, ದೈನಂದಿನ ಸೇವೆಗಳನ್ನು ನೀಡುವ ಹಾಲಿನವರು, ದಿನಪತ್ರಿಕೆ ಸರಬರಾಜು ಮಾಡುವವರು, ಕಟ್ಟಡಗಳನ್ನು ಕಾಯುವ ರಕ್ಷಣಾ ಪಡೆಯವರು, ಕ್ಯಾಂಟೀನಿನಲ್ಲಿ ಕೆಲಸ ಮಾಡುವವರು, ಮಹಾನಗರಪಾಲಿಕೆಯ ಕೆಲಸಗಾರರು, ವಿದ್ಯುತ್ ಮತ್ತು ದೂರವಾಣಿ ಇಲಾಖೆಯವರು, ಮತ್ತಿತರೇ ಮಂದಿಗಳಿಗೂ ಉಡುಗೊರೆಯಾಗಿ ಹಣವನ್ನು ಕೊಡುವ ಪರಿಪಾಠವಿದೆ. ಒಮ್ಮೊಮ್ಮೆ ಇದು ಅತಿರೇಕಕ್ಕೆ ಹೋಗಿ, ಹಣ ನೀಡದವರನ್ನು ಒತ್ತಾಯ ಮಾಡಿ ಹಣ ನೀಡುವಂತೆ ಮಾಡುವರು ಅಥವಾ ಅವರುಗಳೊಂದಿಗೆ ಜಗಳಕ್ಕಿಳಿಯುವರು.

ಕಾರ್ತಿಕ ಶುದ್ಧ ಪ್ರಥಮಾ ತಿಥಿಯಂದು ಬಲಿಪಾಡ್ಯಮಿ. ಅಂದು ಸ್ವಾತಿ ನಕ್ಷತ್ರವಿದ್ದರೆ ಇನ್ನೂ ತುಂಬಾ ಶ್ರೇಷ್ಠವಾದ ದಿನ. ಅಂದಿನ ಮುಖ್ಯ ವಿಧಿಗಳಲ್ಲಿ ಬಲೀಂದ್ರ ಪೂಜೆಯೂ ಒಂದು. ಬಲೀಂದ್ರನ ಚಿತ್ರವನ್ನು ಐದು ಬಣ್ಣದ ಪುಡಿಗಳಿಂದ ರಚಿಸಬೇಕು ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಆತನೊಡನೆ ಆತನ ಪತ್ನಿ ವಿಂಧ್ಯಾವಳೀ ಮತ್ತು ಪರಿವಾರದ ರಾಕ್ಷಸರಾದ ಬಾಣ, ಕೂಷ್ಮಾಂಡ ಮತ್ತು ಮುರರನ್ನು ಚಿತ್ರಿಸಬೇಕು. ಬಲೀಂದ್ರನನ್ನು ಕರ್ಣಕುಂಡಲ, ಕಿರೀಟ ಮುಂತಾದ ಆಭರಣಗಳಿಂದ ಅಲಂಕಾರಗೊಳಿಸಬೇಕು. ಕಮಲದ ಹೂ, ಸುವರ್ಣ ಪುಷ್ಪ, ಗಂಧ, ಧೂಪ, ದೀಪ ಮತ್ತು ನೈವೇದ್ಯಗಳಿಂದ ಆತನನ್ನು ಪೂಜಿಸಬೇಕು. ನಮ್ಮಲ್ಲಿ ಬಲೀಂದ್ರನ ವಿಗ್ರಹವನ್ನು ಹಸುವಿನ ಸಗಣಿಯಿಂದ ಮಾಡುವರು. ಬಲಿ ಚಕ್ರವರ್ತಿಯ ನೆನಪಿನಲ್ಲಿ ದಾನವನ್ನು ಮಾಡುವುದರಿಂದ ದಾನವು ಅಕ್ಷಯವಾಗುವುದು ಮತ್ತು ನಾರಾಯಣನು ಪ್ರಸನ್ನನಾಗುವನು ಎಂಬ ಪ್ರತೀತಿ ಇದೆ. ಅಂದಿನ ದಿನದಲ್ಲಿ ಶಿವನು ಪಾರ್ವತಿಯೊಡನೆ ಪಗಡೆಯಾಡಿದಂತೆ, ಹಳ್ಳಿಗಳಲ್ಲಿ ಪಗಡೆ ಮತ್ತು ಜೂಜುಗಳನ್ನಾಡುವರು. ಅಂದು ಜಯ ಹೊಂದಿದವರು ವರ್ಷಪೂರ್ತಿ ಜಯ ಹೊಂದುವರು ಎಂಬ ನಂಬಿಕೆ ಇದೆ. ಅಂದು ಹಸುಗಳಿಗೆ ಮತ್ತು ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿಯನ್ನು ಕೊಡಬೇಕು. ಅವುಗಳಿಗೆ ಸ್ನಾನ ಮಾಡಿಸಿ ಅಲಂಕರಿಸಿ, ಒಳ್ಳೆಯ ಆಹಾರವನ್ನು ಕೊಟ್ಟು ಪೂಜಿಸಬೇಕು. ಗೋವರ್ಧನ ಪರ್ವತವನ್ನು ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಪೂಜಿಸಬೇಕು. ಗೋವರ್ಧನ ಗಿರಿಗೆ ಹೋಗಲಾಗದವರು ಆ ಪರ್ವತದ ಚಿತ್ರವನ್ನು ರಚಿಸಿ ಪೂಜಿಸಬೇಕು. ರಾತ್ರಿಯ ವೇಳೆಯಲ್ಲಿ ಹಸು ಕರು ಎತ್ತುಗಳನ್ನು ಬೆಂಕಿಯ ಮೇಲೆ ಓಡಿಸುವರು. ಇದಕ್ಕೆ ಕಿಚ್ಚು ಹಾಯಿಸುವ

om.JPG
ುದು ಎಂದು ಕರೆವರು. ಇದರಿಂದ ಪಶುಗಳ ಮೇಲೆ ದುಷ್ಟ ಶಕ್ತಿಗಳ ಆಕ್ರಮಣವಾಗುವುದಿಲ್ಲ ಎಂಬ ನಂಬಿಕೆ ಇದೆ.

ಕಾರ್ತಿಕ ಶುದ್ಧ ದ್ವಿತೀಯಾ ತಿಥಿಯಂದು ಉತ್ತರ ಭಾರತದಲ್ಲಿ ಭಾವು ದೂಜ್ ಎಂದೂ, ಮಹಾರಾಷ್ಟ್ರದಲ್ಲಿ ಭಾವುಬೀದ್ ಎಂದೂ, ಇತರೆ ಕಡೆಗಳಲ್ಲಿ, ಭ್ರಾತೃದ್ವಿತೀಯಾ, ಯಮದ್ವಿತೀಯಾ, ಭಗಿನೀದ್ವಿತೀಯಾ ಅಥವಾ ಸೋದರಿ ಬಿದಿಗೆ ಎಂದು ಹಬ್ಬವನ್ನಾಚರಿಸುವರು. ಆ ದಿನದಂದು ಯಮಧರ್ಮರಾಜನು ತನ್ನ ಸೋದರಿಯಾದ ಯಮುನಾದೇವಿಯ ಮನೆಗೆ ತೆರಳಿ ಆಕೆಯ ಆತಿಥ್ಯವನ್ನು ಗೌರವಿಸಿದನೆಂದು ಪ್ರತೀತಿ ಇದೆ. ಅಂದು ಮಧ್ಯಾಹ್ನ ಪುರುಷರು ತಮ್ಮ ಮನೆಗಳಲ್ಲಿ ಊಟ ಮಾಡದೇ, ಸೋದರಿಯ ಮನೆಗೆ ಔತಣಕ್ಕೆ ಹೋಗಬೇಕು. ಆಕೆಗೆ ಯಥಾಶಕ್ತಿ ಉಡುಗೊರೆಯನ್ನು ಇತ್ತು ಗೌರವಿಸಬೇಕು. ಅಂದು ಯಮನಿಗೂ, ಯಮುನಾದೇವಿಗೂ ಮತ್ತು ಚಿತ್ರಗುಪ್ತನಿಗೂ ಅರ್ಘ್ಯವನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಬೇಕು. ಅಲ್ಲದೇ ಚಿರಂಜೀವಿಗಳಾದ ಮಾರ್ಕಂಡೇಯ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ ಮತ್ತು ಅಶ್ವತ್ಥಾಮ ಇವರುಗಳಿಗೆ ಪೂಜೆ ಸಲ್ಲಿಸಬೇಕು.

ಛಠ್ ಪೂಜೆಯ ಬಗ್ಗೆ ಒಂದೆರಡು ಮಾತುಗಳು. ಈ ವ್ರತದ ಬಗ್ಗೆ ಒಂದೆರಡು ಮಾತುಗಳು. ಈ ಒಂದು ರಾತ್ರಿ ಮತ್ತು ಒಂದು ದಿನ ವ್ರತಾರ್ಥಿಗಳು ಗಂಗಾ ನದಿಯ ದಡದಲ್ಲೇ ಇರುವರು. ಅಂದು ಕಟ್ಟುಪವಾಸ ಮಾಡುವರು. ಅಂದು ಬೆಳಗಿನಲ್ಲೇ ಭಕ್ತರು ಗಂಗೆಯಲ್ಲಿ ಮಿಂದು ಮನೆಯಲ್ಲಿ ನೈವೇದ್ಯ ಅರ್ಪಿಸಲು ಗಂಗೆಯ ನೀರನ್ನು ಮನೆಗೆ ತರುವರು. ನೈವೇದ್ಯಕ್ಕೆಂದು ಅರ್ಪಿಸಲು ಖೀರು ( ಪಾಯಸ ), ಪೂರಿ ಮತ್ತು ಬಾಳೆಹಣ್ಣುಗಳನ್ನು ಇಡುವರು. ಬೆಳಗ್ಗೆ ನೈವೇದ್ಯವನ್ನು ತಯಾರಿಸಿ ಸಂಜೆಗೆ ಸೂರ್ಯ ಮುಳುಗುವ ವೇಳೆಯಲ್ಲಿ ನದಿಯ ದಡದಲ್ಲಿ ಸೂರ್ಯದೇವರಿಗೆ ನೈವೇದ್ಯವನ್ನು ಅರ್ಪಿಸುವರು. ರಾತ್ರಿಯಾದೊಡನೆ ಮನೆಗೆ ಬಂದು ಕಬ್ಬಿನ ಜಲ್ಲೆಯಲ್ಲಿ ಚಪ್ಪರವನ್ನು ನಿರ್ಮಿಸಿ ಅದರಲ್ಲಿ ಮಣ್ಣಿನ ಆನೆಯನ್ನು ಮಾಡಿಟ್ಟು ಹಣತೆಗಳಲ್ಲಿ ದೀಪವನ್ನು ಹಚ್ಚಿಟ್ಟು ನೈವೇದ್ಯವನ್ನು ಅರ್ಪಿಸುವರು. ನಂತರ ಅಗ್ನಿ ದೇವನನ್ನು ಆರಾಧಿಸುವರು. ನಸುಕಿನ ಸೂರ್ಯೋದಯಕ್ಕೆ ಮುನ್ನ ನದೀ ದಡಕ್ಕೆ ಹೋಗಿ ಸೂರ್ಯನಿಗೆ ನೈವೇದ್ಯವನ್ನು ಅರ್ಪಿಸಿ, ನಂತರ ತಾವು ಅದನ್ನು ಪ್ರಸಾದವೆಂದು ಸ್ವೀಕರಿಸುವರು.

ಹೊಸದಾಗಿ ಮದುವೆಯಾದ ಹೆಣ್ಣುಮಗಳನ್ನು ಮನೆಗೆ ಕರೆಸಿ, ದೀಪಾವಳಿಯ ನಂತರ ಈ ಛಠ್ ಪೂಜೆಯನ್ನು ಮಾಡಿಸಿ ಮಗಳಿಗೆ ಮತ್ತು ಅಳಿಯನಿಗೆ ಉಡುಗೊರೆಯನ್ನು ನೀಡುವರು.

deepa.JPG
ಈ ಹಬ್ಬಗಳ ಸಮೂಹದಲ್ಲಿ ಉಪಯೋಗಿಸುವ ಸಗಣಿಯಲ್ಲಿ ಕ್ರಿಮಿನಾಶಕ ಅಂಶವಿದೆ. ಅಂದು ಸಿಡಿಸುವ ಪಟಾಕಿ ಸುಡುಮದ್ದುಗಳಿಂದ ಹುಳು ಹುಪ್ಪಟೆಗಳು ನಾಶವಾಗಿ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗುವುದು.

ಎಲ್ಲ ಓದುಗರಿಗೂ ಮತ್ತು ಅವರುಗಳ ಬಂಧು ಬಾಂಧವರಿಗೂ ದೀಪಾವಳಿಯ ಶುಭಾಶಯಗಳು.

ಸಕಲಂ ಸನ್ಮಂಗಳಾನಿ ಭವತು.