ಅಂದು ಕಂಡುದು ಇಂದು ಕಾಣೆಯಾಗಿರುವುದು
ಮೊದಲ ದಿನದ ಶಾಲೆಯಲಿ ಕಂಡುದು
’ಕಳೆದುದು ಸಿಕ್ಕಿದೆ’ ಸೂಚನಾ ಫಲಕ
ಕಾಣದುದ ಈಗ ಕಂಡರೆ ಮೈಯೆಲ್ಲ ಪುಳಕ
ರವಿಗರ್ಪಿಸುತ್ತಿದ್ದ ಪ್ರಾರ್ಥನೆ
ಸ್ವಾಮಿ ದೇವನೇ ಲೋಕ ಪಾಲನೆ
ಕರ ಮುಗಿದು ಮನದಿ ಅವ್ಯಕ್ತ ಭಾವನೆ
ಬುರುಡೆ ಕಾಯಿಸುತ್ತಿದ್ದ ಮಾಸ್ತರ ರೂಲು ದೊಣ್ಣೆ
ಮನೆ ಹಿಂದಿನ ನೀರು ಕಾಣದ ನೆಲಬಾವಿ
ಮುಂದಿರುವ ಗಡಗಡ ರಾಟೆಯ ಸಿಹಿನೀರ ಬಾವಿ
ಊರ ಮುಂದಿಹ ಸಾಬಣ್ಣನ ಸೈಕಲ್ ಶಾಪು
ಸಿಂಬಳ ಸುರಿಸುತ ಚಡ್ಡಿ ಕಾಣದ ಮಣ್ಣಲಾಡುವ ಪಾಪು
ಈಗೆಲ್ಲಿ ಕಾಣುವುದು ಆ ಬುಗುರಿಯಾಟ
ಮಗ ಕೈನಲಿ ಹಿಡಿದಿಹ ಬೇಬ್ಲೇಡ್ ಕಾಟ
ಅಜ್ಜಿಯ ಕೆನೆಮೊಸರನ್ನದ ಕೈ ತುತ್ತು
ಅಮ್ಮನು ತಲೆ ನೇವರಿಸಿ ಇತ್ತ ಸಿಹಿಮುತ್ತು
ಅಕ್ಕಿ ಆರಿಸಲು ಸಿಗುತ್ತಿದ್ದ ಹುಲ್ಲುಬೀಜ
ಟೆಂಟಿನ ಹಿಂಬದಿಯಲಿ ನೋಡಲು
ಸಿಗುತ್ತಿದ್ದ ಪರದೆಯ ಮೇಲಿನ ಅಣ್ಣ ರಾಜಣ್ಣ
ಎಲ್ಲಿ ಕಾಣುವುದು ಅಂದಿದ್ದ ಗುಬ್ಬಚ್ಚಿ
ಸಗಣಿ ಹತ್ತಿದ ಮೋಟು ಗೋಡೆ
ಬೆರಣಿ ತಟ್ಟುತ್ತಿದ್ದ ಗಾಜಿನ ಹಸಿರು ಬಳೆ
ಎಡಗಡೆ ಕೈ ತೋರಿಸಿ ಬಲಕ್ಕೆ ತಿರುಗಿಸುವ ಸೈಕಲ್ ಸವಾರ
ಹೆಣ್ಣು ಮಕ್ಕಳ ಕೊರಳಲಿ ನಲಿವ ಕಾಸಿನ ಸರ
ನಾ ಕಳೆದುದು ನೀವು ಕಂಡಿರಾ?
ಕಂಡಿರಲು, ಎಲ್ಲಿಹುದು ಅರುಹುವಿರಾ?
One reply on “ಕಳೆದುಹೋಗಿದೆ”
Very nicely written poem..such meaningful thoughts here