ವಿಭಾಗಗಳು
ಲೇಖನಗಳು

ಸಿಂಹಾವಲೋಕನ

ಕೆಲಸ ಬಾಹುಳ್ಯದಿಂದ ಬಹಳ ದಿನಗಳ ತರುವಾಯ ಬರಹಕ್ಕೆ ಕೈ ಇಟ್ಟಿರುವೆ. ಬ್ಯಾಂಕಿನ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಬರೆಯುವ ಸ್ವಾತಂತ್ರ್ಯ ಸಿಕ್ಕಿದೆ.

ಇದೇ ಮೇ ತಿಂಗಳ ೩೧ನೇ ತಾರೀಕು, ಬ್ಯಾಂಕಿನ ಸಕ್ರಿಯ ಸೇವೆಯಿಂದ ನಿವೃತ್ತನಾದೆನು. ಕೊನೆಯ ದಿನದಂದು (ಮೇ ೨೯), ಒಂದು ಸಣ್ಣ ಕೂಟದಲ್ಲಿ ನನ್ನ ಇಲ್ಲಿಯವರಿಗಿನ ಜೀವನ ಬಗ್ಗೆ ಎರಡು ಮಾತನಾಡಲು ಅವಕಾಶ ದೊರೆಯಿತು. ಆ ಸಂದರ್ಭದಲ್ಲಿ ಇಲ್ಲಿಯವರೆಗಿನೆ ವೃತ್ತಿ ಜೀವನದ ಹಿನ್ನೋಟವನ್ನು ಹೀಗೆ ಪದಗಳಲ್ಲಿ ಬಿತ್ತರಿಸಿದೆ (ಬರಹ ರೂಪದಲ್ಲಿ ದೀರ್ಘ ಸ್ವರೂಪವನ್ನು ಕೊಟ್ಟಿರುವೆ).

ನಾನು ಹುಟ್ಟಿ ಬೆಳೆದದ್ದು ಕಡು ಬಡತನದ ಕುಟುಂಬದಲ್ಲಿ. ಏಳನೆಯ ಇಯತ್ತೆಯವರೆವಿಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಆಯಿತು. ಆಂಗ್ಲದ ಗಂಧ ಹತ್ತಿದ್ದೇ ಎಂಟನೆಯ ತರಗತಿಯ ನಂತರ.
ಹತ್ತನೆಯ ತರಗತಿಯಿಂದ ಮೊದಲ್ಗೊಂಡು ಪದವಿ ಪಡೆಯುವವರೆವಿಗೆ ಪರೀಕ್ಷೆಯಲ್ಲಿ ದೊರಕಿದ ಅಂಕಗಳು ಏರಿಕೆ ಕ್ರಮದಲ್ಲಿಯೇ ಇತ್ತು. ಹತ್ತನೆಯ ತರಗತಿಯಲ್ಲಿ ಶೇಕಡಾ 60 ಬಂದಿದ್ದರೆ, ಪದವಿಯ ಕೊನೆಯ ಪರೀಕ್ಷೆಯಲ್ಲಿ ಶೇಕಡಾ 70 ಬಂದಿತ್ತು. ಕೀಳರಿಮೆ ಇದ್ದ ನನಗೆ ಸಮಾಜದಲ್ಲಿ ತಲೆ ಎತ್ತಿ ನಡೆಯುವ ಶಕ್ತಿ ಬಂದಿತ್ತು. ಇದರಲ್ಲಿ ಹಲವು ಹಿರಿಯರ ಕೊಡುಗೆ ಇದ್ದರೆ, ಅನುಕೂಲಕರ ಅವಕಾಶಗಳೂ ಹಾಗೆಯೇ ಬಂದಿದ್ದವು. ’ಎಂದುರೋ ಮಹಾನುಭಾವುಲು’ ಎನ್ನುವ ಹಾಗೆ ನನ್ನ ಉನ್ನತಿಯಲ್ಲಿ ಹಲವು ಹಿರಿಯರ ಕೊಡುಗೆ ಇದೆ.
ಹತ್ತನೆಯ ತರಗತಿ ಮುಗಿಯುವ ವೇಳೆಗೆ ನನ್ನ ತಂದೆ ವೃತ್ತಿಯಿಂದ ನಿವೃತ್ತರಾಗಿದ್ದರು. ಅವರಿಗೆ ಪಿಂಚಣಿ ಬರುವ ಅವಕಾಶವಿರಲಿಲ್ಲ. ಆದರೆ ಅವರ ಸೋದರಮಾವನವರಾಗಿದ್ದ ಪ್ರೊ. ಕೆ ವೆಂಕಟರಾಮಪ್ಪನವರ ಸಹಾಯದಿಂದ (1942ರಲ್ಲಿ ಅವರು ಸ್ವಾತಂತ್ರ್ಯ ಸಂಗ್ರಾಮದ ಪರಿಸ್ಥಿತಿಯಲ್ಲಿ ಜೇಲುವಾಸ ಅನುಭವಿಸಿದ್ದರು), ಅವರಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ದೊರೆಯುವ ಪಿಂಚಣಿ ಮತ್ತು ಇತರೇ ಸವಲತ್ತು ದೊರೆತುವು. ಅದೇ ಕಾರಣಕ್ಕಾಗಿ ನನಗೆ ಪದವಿ ಪೂರ್ವ ಮತ್ತು ಪದವಿ ಓದುವ ಸಮಯದಲ್ಲಿ ಸರಕಾರದಿಂದ ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ನಿಲಯದ ವೆಚ್ಚಗಳೂ ದೊರೆತುವು. ಶಂಕರ ಮಠದ ಸ್ವಾಮಿಗಳ ಸನ್ನಿಧಿಯಲ್ಲಿ ವೇದ ಪಾಠವೂ ಆಗಿತ್ತು.

ಪದವಿ ವ್ಯಾಸಂಗ ಮುಗಿದ ಮೇಲೆ ಮುಂದೆ ಓದಲು ಸಶಕ್ತನಾಗಿರಲಿಲ್ಲ. ಮನೆಯ ಕಡೆಯಿಂದಲೂ ಸಹಾಯ ದೊರೆಯುವ ಶಕ್ತಿ ಇರಲಿಲ್ಲ. ಹಾಗಾಗಿ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ. ಮೊದಲ ದರ್ಜೆಯಲ್ಲಿ ಪದವಿ ಪಡೆದಿದ್ದರೂ, ಒಳ್ಳೆಯ ಯಾ ಸರಕಾರೀ ನೌಕರಿ ದೊರೆತಿರಲಿಲ್ಲ. ಎಲ್ಲೆಲ್ಲಿ ಅರ್ಜಿ ಗುಜರಾಯಿಸಿದರೂ ಉತ್ತರ ದೊರೆತಿರಲಿಲ್ಲ. ಒಂದು ದಿನ ನನ್ನ ಸ್ನೇಹಿತನಾದ ಪ್ರಕಾಶ ನಾನಿದ್ದ ಹಾಸ್ಟೆಲ್‍ಗೆ ಬಂದು, ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ಉದ್ಯೋಗ ಅವಕಾಶಕ್ಕಾಗಿ ಅರ್ಜಿಯನ್ನು ತಂದಿತ್ತನು. ಆತನ ಅಣ್ಣ ಅದಾಗಲೇ ಅಲ್ಲಿ ನೌಕರಿ ಮಾಡುತ್ತಿದ್ದು, ಇವನಿಗೆ ಹೇಳಿದ್ದರಂತೆ. ’ಹೇಗಿದ್ದರೂ ನಿನ್ನ ಸ್ನೇಹಿತ ಅಂದರೆ ನಾನು, ಮೊದಲ ದರ್ಜೆಯಲ್ಲಿ ಪದವಿ ಪಡೆದಿದ್ದಾನೆ, ನಮ್ಮ ಬ್ಯಾಂಕಿನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಗುಜರಾಯಿಸಲಿ’. ಅದರ ಶುಲ್ಕ ಒಂದು ರೂಪಾಯಿಯನ್ನೂ ಅವರೇ ಕೊಟ್ಟಿದ್ದರು. ಇದುವರೆಗೂ ನಾನು ಅವರಿಗೆ ಪ್ರತಿ ಕೊಟ್ಟಿಲ್ಲ. ತದನಂತರ ಪರೀಕ್ಷೆಯೂ ಆಯಿತು. ಫಲಿತಾಂಶ ಮಾತ್ರ ಬಂದಿರಲಿಲ್ಲ.
ಹತ್ತು ತಿಂಗಳು ಹೀಗೆ ಹಾಗೆ ಜೀವನ ಸಾಗಿಸುತ್ತಿದ್ದವನಿಗೆ, ಅಕೌಂಟೆಂಟ್ ಜನರಲ್ ಕಛೇರಿಯಿಂದ ಆಡಿಟರ್ ನೌಕರಿಗಾಗಿ ಕರೆ ಬಂದಿತ್ತು. ಇಷ್ಟು ದಿನಗಳ ನೊಂದಿದ್ದವನಿಗೆ ಬಹಳ ಸಂತೋಷವಾಗಿತ್ತು. ಅಷ್ಟೊತ್ತಿಗಾಗಲೇ, ರಿಜರ್ವ್ ಬ್ಯಾಂಕಿನ ಪರೀಕ್ಷೆ ಫಲಿತಾಂಶ ಬಂದಿದ್ದು, ಉತ್ತೀರ್ಣವೂ ಆಗಿದ್ದೆ. ಅದೇ ಸಮಯದಲ್ಲಿ ಕಾರ್ಪೋರೇಷನ್ ಬ್ಯಾಂಕಿನಲ್ಲೂ ನೌಕರಿಗಾಗಿ ಕರೆ ಬಂದಿತ್ತು, ಹಾಗೆಯೇ ಕರ್ನಾಟಕ ರಾಜ್ಯ ಸರ್ಕಾರದಲ್ಲಿಯೂ ನೌಕರಿ ದೊರೆತಿದೆ ಎಂಬ ಮಾಹಿತಿ ಸಿಕ್ಕಿತ್ತು. ಇಷ್ಟು ದಿನಗಳ ಕಾಲ ನಾನು ನೌಕರಿಗಾಗಿ ಹಪಹಪಿಸುತ್ತಿದ್ದೆ, ಈಗ ನೋಡಿದರೆ, ನೌಕರಿಗಳು ನನ್ನ ಕರೆಯುತ್ತಿವೆ. ಅಕೌಂಟಂಟ್ ಜನರಲ್ ಕಛೇರಿಯಲ್ಲಿ ಮೊದಲ ಸಂಬಳ ತೆಗೆದುಕೊಳ್ಳುತ್ತಿದ್ದಂತೆಯೇ, ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ನೌಕರಿಗಾಗಿ ಸೆಲೆಕ್ಟ್ ಲಿಸ್ಟನಲ್ಲಿ ಇದೆಯೆಂದು ತಿಳಿದು ಬಂದಿತ್ತು. ತಕ್ಷಣವೇ ಏಜೀಸ್ ಕಛೇರಿಯ ನೌಕರಿಗೆ ರಾಜೀನಾಮೆ ಇತ್ತೆನು. 15 ದಿನಗಳ ಒಳಗಾಗಿ ಬ್ಯಾಂಕಿನಲ್ಲಿ ಸೇರಿದೆನು. ಕೆಲಸ ಸಿಕ್ಕದೇ ಇದ್ದಾಗ ದಲ್ಲಾಳಿ ಒಬ್ಬರ ಕೋರಿಕೆಯಂತೆ ಒಮ್ಮೆ ಬ್ಯಾಂಕಿಗೆ ಬಂದು ತುಂಡಾದ ನೋಟನ್ನು ಬದಲಿಸಲು ಬಂದಿದ್ದೆನೆಂಬುದು ನೆನಪಾಯಿತು. ಇಲ್ಲೇ ಬಂದು ಉದ್ಯೋಗ ಮಾಡುವೆನೆಂದು ಕನಸು ಮನಸಿನಲ್ಲೂ ನೆನೆದಿರಲಿಲ್ಲ.
1982ರ ಜನವರಿ 27ರಂದು ಬ್ಯಾಂಕಿಗೆ ಸೇರಿದೆನು. ಆಗೆಲ್ಲಾ ಪದೋನ್ನತಿಯ ಪರೀಕ್ಷೆ ತೆಗೆದುಕೊಳ್ಳಲು 15 ರಿಂದ 20ವರ್ಷಗಳ ಕಾಲ ಕಾಯಬೇಕಿತ್ತು. 1987-88ರ ಸಮಯಕ್ಕೆ ಬ್ಯಾಂಕಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೆರಿಟ್ ಪರೀಕ್ಷೆ ಪ್ರಾರಂಭವಾಯಿತು ಮತ್ತು ನಮಗೆ ಸೂಕ್ತ ಸಮಯವೂ ಆಗಿತ್ತು. ಹೇಗಿದ್ದರೂ ಬ್ಯಾಂಕಿನಲ್ಲಿ ವಸತಿ ಕೂಡ ಸಿಗದೇ ಬಾಡಿಗೆ ಮನೆ ಹಿಡಿದಿದ್ದೆ ಮತ್ತು ಅದಾಗ ತಾನೇ ಮದುವೆ ಆಗಿತ್ತು. ಪರೀಕ್ಷೆ ಬರೆದು ಉತ್ತಮ ಅಂಕ ಮತ್ತು ರಾಂಕಿಂಗ್ ಗಳಿಸಿ ಅಧಿಕಾರಿ ಹುದ್ದೆ ದೊರೆತು, ದೂರದ ಮುಂಬಯಿಗೆ ವರ್ಗವಾಗಿ ಹೋದೆ.
ಅಲ್ಲಿ ಸೆಕ್ಯುರಿಟೀಸ್ ಸ್ಕ್ಯಾಮ್ ಅನ್ವೇಷಣೆಗಾಗಿ ನಿಯಮಿಸಿದ್ದ ಜಾನಕೀರಾಮನ್ ಕಮಿಟಿಗಾಗಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದು, ಬಹಳ ವಿಷಯಗಳನ್ನು ತಿಳಿಸಿಕೊಟ್ಟಿತ್ತು. ಹಾಗೆಯೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಗ್ಗೆಯೂ ಕಲಿಯುವ ಅವಕಾಶ ದೊರಕಿತ್ತು.
ಆ ಸಮಯದಲ್ಲಿ ವಹಿವಾಟುಗಳನ್ನು ದಲ್ಲಾಳಿ-ಬ್ಯಾಂಕುಗಳ ವ್ಯವಹಾರಗಳ ಆಧಾರದ ಮೇಲೆ ಕೋಡೀಕರಿಸುವ ಕೆಲಸವನ್ನು ನಾನು ಮತ್ತು ನನ್ನ ಸ್ನೇಹಿತ ಮಾಡಿದ್ದೆವು. ಶೇರು ಮಾರುಕಟ್ಟೆ, ದಲ್ಲಾಳಿಗಳ ಹೆಸರುಗಳು ಇತ್ಯಾದಿ ಏನನ್ನೂ ತಿಳಿಯದ ನಾವು, ನಮ್ಮದೇ ರೀತಿಯಲ್ಲಿ ಕೋಡೀಕರಿಸಿದ್ದೆವು. ಅದರ ಆಧಾರದ ಮೇಲೆ ತೆಗೆದ ವರದಿಯನ್ನು ಕೇಂದ್ರ ಸರಕಾರ ನಿಯಮಿಸಿದ್ದ ಜೆಪಿಸಿಗೆ ಕಳುಹಿಸಿದ್ದೆವು. (ಅವುಗಳ ಆಧಾರದ ಮೇಲೆ ಬ್ಯಾಂಕುಗಳ ಅಧಿಕಾರಿಗಳನ್ನು ಮತ್ತು ದಲ್ಲಾಳಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು). ನಾವು ವರದಿಯನ್ನು ಕಳುಹಿಸಿವಾಗ ದಲ್ಲಾಳಿಗಳ-ಬ್ಯಾಂಕುಗಳ ವರ್ಗೀಕರಣ ಸ್ವಲ್ಪ ಏರುಪೇರಾಗಿತ್ತು, ಕಾರಣ, ದಲ್ಲಾಳಿಗಳ ಹೆಸರುಗಳೇ ನಮಗೆ ಸರಿಯಾಗಿ ಗೊತ್ತಿರಲಿಲ್ಲ. ಎಲ್ಲ ಮೆಹ್ತಾಗಳನ್ನೂ ಹರ್ಷದ್ ಮೆಹ್ತಾ ಅಂತ ಕೋಡೀಕರಿಸಿದ್ದೆವು. ಇದರ ಬಗ್ಗೆ ಜೆಪಿಸಿಯಿಂದ ವಿವರಗಳನ್ನು ನಮ್ಮ ಬ್ಯಾಂಕಿನ ಮೇಲಧಿಕಾರಿಗಳಿಂದ ಕೇಳಿದ್ದರು. ನಮ್ಮ ಮೇಲಧಿಕಾರಿಗಳು ನಮ್ಮಿಂದ (ನಾನು ಮತ್ತು ನನ್ನ ಸ್ನೇಹಿತ) ವರದಿ ಯಾಕೆ ಸರಿ ಇಲ್ಲ, ಮತ್ತು ಸರಿಯಾದ ವರದಿ ಯಾವುದು, ಇನ್ನು ಒಂದು ತಾಸಿನಲ್ಲಿ ಸಮರ್ಪಕವಾದ ವರದಿ ಕೊಡಬೇಕೆಂದು ಎಂದು ಕೇಳಿದ್ದರು. ನಮ್ಮಲ್ಲಿದ್ದ ಡೇಟಾಬೇಸನ್ನು ಪರೀಕ್ಷಿಸಿ ಸರಿಯಾದ ವರದಿಯನ್ನು ಕಂಪ್ಯೂಟರಿನ ಸಹಾಯವಿಲ್ಲದೆಯೇ ಸಿದ್ಧಪಡಿಸಿ, ಕೊಟ್ಟೆವು. ಆ ವರದಿ ಸರಿಯಾದ ಮಾಹಿತಿಯನ್ನು ಕೊಡುತ್ತಿತ್ತು. ಒಂದು ತಾಸಿನಲ್ಲಿ ಸರಿಯಾದ ಮಾಹಿತಿ ಕೊಡುವುದು ಅಸಾಧ್ಯವಾಗಿದ್ದರೂ, ಅದು ಹೇಗೋ ದೇವರ ದಯೆಯಿಂದ ಸರಿಯಾದ ಮಾಹಿತಿ ಕೊಡಲಾಗಿತ್ತು. ಜೆಪಿಸಿ ಅದನ್ನು ಒಪ್ಪಿಕೊಂಡಿದ್ದರಿಂದ ನಾವು ಅಪಾಯದಿಂದ ಪಾರಾಗಿದ್ದೆವು. ಇಲ್ಲದಿದ್ದರೆ ಕೆಲಸವನ್ನೇ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಇದೊಂದು ಮರೆಯಲಾರದ ಘಟನೆ.
1993ರ ಮುಂಬೈ ಸರಣಿ ಸ್ಫೋಟದ ಸಮಯದಲ್ಲಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೆ. ಏರ್ ಇಂಡಿಯಾ ಕಟ್ಟಡದಲ್ಲಿದ್ದ ಓಮನ್ ಇಂಟರನ್ಯಾಷನಲ್ ಬ್ಯಾಂಕಿನಲ್ಲಿ ಸ್ನೇಹಿತರಾದ ಘೋಷ್ ಇನ್‍ಸ್ಪೆಕ್ಷನ್ ಮಾಡುತ್ತಿದ್ದರು. ಮಧ್ಯಾಹ್ನದ ಒಂದರ ಸಮಯಕ್ಕೆ ನಮ್ಮಲ್ಲಿಗೆ ಊಟಕ್ಕೆ ಎಂದು ಬಂದಿದ್ದರು. ಅಂದೇನೋ ಬಹಳ ಉಲ್ಲಸಿತರಾಗಿದ್ದರು. ಊಟ ಮುಗಿಸಿದ ಮೇಲೆ, ಬಸ್‍ನಲ್ಲಿ ಹೋಗಿ ಎಂದು ಹೇಳಿದರೂ ಕೇಳದೇ, ಬೇಗ ಹೋಗಬೇಕು ಎಂದು ಟ್ಯಾಕ್ಸಿಯಲ್ಲಿ ಹೋಗಿದ್ದರು. ಏರ್ ಇಂಡಿಯಾ ಕಟ್ಟಡವನ್ನು ಒಳಹೊಗುತ್ತಿದ್ದಲೇ, ಢಮಾರ್ ಎಂದು ಬಾಂಬ್ ಬ್ಲಾಸ್ಟ್ ಆಗಿ ತೀರಿ ಹೋಗಿದ್ದರು. ಅದೇ ಸಮಯಕ್ಕೆ ಮುಂಬಯಿಯಲ್ಲಿ 12 ಕಡೆ ಸರಣಿ ಬಾಂಬ್ ಬ್ಲಾಸ್ಟ್ ಆಗಿ 317 ಜನ ಸಾವನ್ನಪ್ಪಿದ್ದರು. ಏರ್ ಇಂಡಿಯಾ ಕಟ್ಟಡದಲ್ಲಿ ಆದ ಬಾಂಬ್ ಸ್ಫೋಟದ ಶಬ್ದ ದೂರದ ವರ್ಲ್ಡ್ ಟ್ರೇಡ್ ಸೆಂಟರಿನಲ್ಲಿದ್ದ ನಮಗೂ ಕೇಳಿಸಿತ್ತು. ಮರುದಿನದಿಂದ ಮತ್ತೆ ಮುಂಬಯಿ ಜನಜೀವನ ಎಂದಿನಂತೆ ನಡೆದಿತ್ತು.

ನಂತರ 1997ರ ಸಮಯಕ್ಕೆ ಬೆಂಗಳೂರಿಗೆ ವರ್ಗವಾಗಿ ಬಂದೆ. ಎಲೆಕ್ಟ್ರಾನಿಕ್ ಕ್ಲಿಯರಿಂಗ್ (ಡೆಬಿಟ್), ಸರಕಾರೀ ಲೆಕ್ಕಪತ್ರಗಳ ಕಂಪ್ಯೂಟರೀಕರಣ ಮತ್ತು ಹಲವು ಹೊಸ ಪದ್ಧತಿಗಳನ್ನು ಚಾಲ್ತಿ ಮಾಡುವ ಕಾರ್ಯದಲ್ಲಿ ಸಹಭಾಗಿಯಾಗಿದ್ದೆ. ಆಗಲೇ ಮ್ಯಾನೇಜರ್ ಹುದ್ದೆಗೆ ಬಡ್ತಿ ದೊರೆತಿತ್ತು. ಆಗೊಮ್ಮೆ ಒಂದು ಸ್ಮರಣೀಯ ಘಟನೆ ನಡೆದಿತ್ತು. ಪ್ರತಿ ದಿನವೂ ಕೆಲವು ಬ್ಯಾಂಕುಗಳು, ಏಟಿಎಮ್ ಗೆ ಹಣ ಹಾಕಲು ನಮ್ಮಿಂದ ನಗದು ಡ್ರಾ ಮಾಡುತ್ತಿದ್ದರು. ಆ ವಹಿವಾಟನ್ನು ನಾನು ನೋಡಿಕೊಳ್ಳುತ್ತಿದ್ದೆ. ಒಮ್ಮೆ ಒಂದು ಬ್ಯಾಂಕಿನವರು 50 ಲಕ್ಷ ಡ್ರಾ ಮಾಡಲು ಚೆಕ್ ಕೊಟ್ಟದ್ದನ್ನು ನಾನು ಪಾಸು ಮಾಡಿದ್ದೆ. ಸ್ವಲ್ಪ ಹೊತ್ತಿನಲ್ಲಿ ಯಾಕೋ ಅನುಮಾನ ಬಂದು, ಎಷ್ಟು ನಗದನ್ನು ಕೊಟ್ಟಿದ್ದಾರೆಂದು ನಮ್ಮಲ್ಲಿ ಕೇಳಲು, 75 ಲಕ್ಷ ಎಂದು ತಿಳಿಯಿತು. ತಕ್ಷಣ ಟೆಲ್ಲರ್ ಅವರನ್ನು ಕರೆಸಿ, 25 ಲಕ್ಷ ಹೇಗೆ ಜಾಸ್ತಿ ಕೊಟ್ಟಿದ್ದೀರೆಂದೂ, ಅದನ್ನು ಹೇಗೆ ಸರಿಪಡಿಸುವಿರೆಂದು ಕೇಳಿದ್ದೆ. ಆ ತಪ್ಪಿನಿಂದ ಎರಡು ಮೂರು ತಲೆಗಳು ಉರುಳುತ್ತಿದ್ದವು. ಅವರೆಲ್ಲರೂ ನಿವೃತ್ತಿಯ ಅಂಚಿನಲ್ಲಿ ಇದ್ದವರು. ಹಾಗಾಗಿ, ನಾನೇ ಆ ಬ್ಯಾಂಕಿನವರನ್ನು ಸಂಪರ್ಕಿಸಿ, ಹೆಚ್ಚಿನ ಹಣಕ್ಕಾಗಿ ಇನ್ನೊಂದು ಚೆಕ್ ಕೊಡುವಂತೆ ಹೇಳಿ, ವಿಷಯವನ್ನು ಸರಿಪಡಿಸಿದ್ದೆ.
2002ರಲ್ಲಿ ನನಗೆ ಮತ್ತೆ ಮುಂಬಯಿಗೆ ವರ್ಗವಾಯಿತು. 2005ರಲ್ಲಿ ಅತಿಯಾದ ಮಳೆ ಮತ್ತು ಸಮುದ್ರ ಉಬ್ಬರದಿಂದ ಮುಂಬಯಿ ಜೀವನ ಅಸ್ತವ್ಯಸ್ತವಾಗಿದ್ದು ಸ್ಮರಣೀಯ ಘಟನೆ. ಬೆಳಗಿನಿಂದ ಒಂದೇ ಸಮನೆ ಮಳೆ ಸುರಿದು ಸಂಜೆ ಇಡಿಯ ಮುಂಬಯಿ ನೀರಿನಲ್ಲಿ ಮುಳುಗಿತ್ತು. ತರಾತುರಿಯ ಕೆಲಸವಿದೆಯೆಂದು ಬ್ಯಾಂಕಿಗೆ ಬಂದವನು ಸಂಜೆ ಮನೆಗೆ ಹೊರಟಾಗ ತಿಳಿದದ್ದು, ಲೋಕಲ್ ಟ್ರೈನ್ ಸೇವೆ ಸ್ತಬ್ಧವಾಗಿದೆಯೆಂದು ತಿಳಿಯಿತು. ರಾತ್ರಿಯೆಲ್ಲಾ ಎಲ್ಲಿ ಕಳೆಯೋದು ಎಂಬುದೇ ಸಮಸ್ಯೆ, ಮತ್ತು ಯಾವಾಗ ಟ್ರೈನ್ ಸೇವೆ ಆರಂಭ ಆಗುವುದೋ ತಿಳಿಯದು, ಎಲ್ಲೆಲ್ಲಿ ನೋಡಿದರೂ ನೀರು ತುಂಬಿದೆ. ರಸ್ತೆಯಲ್ಲಿ ಹೋಗೋಣವೆಂದರೆ ಮ್ಯಾನ್‍ಹೋಲ್‍ಗಳು ಎಲ್ಲಿ ತೆರೆದಿರುತ್ತದೋ, ಏನೋ. ಅದಾಗಲೇ ಮ್ಯಾನ್‍ಹೋಲ್ ಒಳಗೆ ಬಿದ್ದು, ಒಂದಿಬ್ಬರ ಸಾವು ಆಗಿದೆ ಎಂದು ತಿಳಿಯಿತು. ಹಲವಾರು ಹೆಣುಮಕ್ಕಳು ಪುಟ್ಟ ಪುಟ್ಟ ಕಂದಗಳನ್ನು ಹೊತ್ತು, ರೈಲ್ವೇ ಹಳಿಗುಂಟ ನಡೆದು ಸಾಗುತ್ತಿದ್ದುದು ನೋಡಿ, ನನಗೂ ನಡೆದು ಮನೆ ತಲುಪಬೇಕೆನಿಸಿತ್ತು. 40 ಕಿಲೋಮೀಟರ್ ದೂರದ ಮನೆಯನ್ನು ರೈಲ್ವೆ ಹಳಿ ಮುಖೇನ 16ಘಂಟೆಗಳ ನಡಿಗೆಯಲ್ಲಿ ತಲುಪಿದ್ದು, ಇನ್ನೊಂದು ಅವಿಸ್ಮರಣೀಯ ಘಟನೆ. ಅದೇ ಸಮಯದಲ್ಲಿ ನನಗೆ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಹುದ್ದೆಗೆ ಪದೋನ್ನತಿ ಆಗಿತ್ತು.
2006ರಲ್ಲಿ ಮತ್ತೊಮ್ಮೆ ಮುಂಬಯಿಯ ಲೋಕಲ್ ಟ್ರೈನ್‍ಗಳಲ್ಲಿ ಸೀರಿಯಲ್ ಸ್ಫೋಟವಾಗಿತ್ತು. ಆ ಸಮಯದಲ್ಲಿ ಮಧ್ಯ ದಾರಿಯಲ್ಲಿ ಟ್ರೈನ್‍ ಒಳಗೆ ಸಿಕ್ಕಿ ಹಾಕಿಕೊಂಡಿದ್ದೆ. ಹೇಗೋ, ಹತ್ತಿರದ ದಾದರ್ ನಿಲ್ದಾಣ ತಲುಪಿ, ಅಲ್ಲಿಂದ ರಸ್ತೆ ಮುಖೇನ ಮನೆ ಸೇರಿದ್ದೆ. ಮುಂಬಯಿ ಜನರಿಗೆ ಜೀವನದ ಪಾಠವನ್ನು ಹೇಳಿಕೊಡುತ್ತದೆ. ಆಫೀಸಿನಲ್ಲಿ ನಾನು ಮೂರ್ನಾಲ್ಕು ಟಿಪ್ಪಣಿಗಳನ್ನು ಸಲ್ಲಿಸಿದ ಪ್ರಕಾರ ಪಾಲಿಸಿಯನ್ನು ಬದಲಿಸಿದ್ದರು. ವೃತ್ತಿಯಲ್ಲಿ ಇದೊಂದು ಹೆಮ್ಮೆಯ ವಿಷಯ.
2012-13ರಲ್ಲಿ ಚೆನ್ನೈಗೆ ವರ್ಗವಾಗಿ ಬಂದಾಗಲೇ, ಡಿಜಿಎಮ್ ಪದವಿಗೆ ಪದೋನ್ನತಿಯಾಗಿತ್ತು. ಅಲ್ಲಿ ನಾಲ್ಕು ವರ್ಷಗಳು ಕಳೆದೆ. ಕೇಂದ್ರ ಕಛೇರಿ ಮುಂಬಯಿ ಮತ್ತು ಪ್ರಾದೇಶಿಕ ಕಛೇರಿ ಚೆನ್ನೈಗಳಲ್ಲಿ ಕೆಲಸದಲ್ಲಿ ಬಹಳ ವ್ಯತ್ಯಾಸವಿದೆ. ಅಲ್ಲಿ ಕೋರ್ ಬ್ಯಾಂಕಿಂಗ್ ಸಲ್ಯೂಶನ್‍ ಅನುಷ್ಠಾನಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಮುಂಬಯಿಯ ಕೆಲಸದ ಒತ್ತಡ ಚೆನ್ನೈನಲ್ಲಿರಲಿಲ್ಲ. ದೇಗುಲಗಳಿಗೆ ಪ್ರಸಿದ್ಧವಾದ ತಮಿಳುನಾಡಿನ ಹೆಚ್ಚಿನ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೆವು.
4 ವರುಷಗಳ ತರುವಾಯ ಅಲ್ಲಿಂದ ತಿರುವನಂತಪುರಕ್ಕೆ ವರ್ಗವಾಗಿತ್ತು. ಆಗಲೇ ಜನರಲ್ ಮ್ಯಾನೇಜರ್ ಹುದ್ದೆಗೆ ಪದೋನ್ನತಿಯಾಗಿತ್ತು. ತಿರುವನಂತಪುರ ಚಿಕ್ಕದಿದ್ದು, ಊರೆಲ್ಲಾ ಕಾಲ್ನಡಿಗೆಯಲ್ಲಿಯೇ ಸುತ್ತಿದ್ದೆ. ದಿನಂಪ್ರತಿ ಕಛೇರಿಗೆ ನಡಿಗೆಯಲ್ಲಿಯೇ ಹೋಗಿ ಬರುತ್ತಿದ್ದೆ. ಮೂರು ವರ್ಷಗಳು ಅಲ್ಲಿ ಕಳೆದು, ಸೇವೆಯ ಕೊನೆಯ ವರ್ಷ ಬೆಂಗಳೂರಿಗೆ ವರ್ಗವಾಗಿ ಬಂದೆ.

ಇಲ್ಲಿಯವರೆವಿಗೆ ಸವೆಸಿದ ಬಂದ ಹಾದಿಯನ್ನೊಮ್ಮೆ ಹಿಂತಿರುಗಿ ನೋಡಿದಾಗ ಅನಿಸುವುದೇನೆಂದರೆ, ಎಲ್ಲಿಯೋ ಇದ್ದ ಹಳ್ಳಿಮುಕ್ಕ ಇಷ್ಟೆತ್ತರಕ್ಕೆ ಏರಿದ್ದೇನೆಂದರೆ, ಅದು ದೈವ ಕೃಪೆ ಮತ್ತು ಹಿರಿಯರ ಆಶೀರ್ವಾದದಿಂದ ಮಾತ್ರ ಸಾಧ್ಯ. ಇರಲು ಒಂದು ಮನೆ ಇದೆ, ಮಕ್ಕಳು ಒಂದು ಹಂತಕ್ಕೆ ಬಂದಿದ್ದಾರೆ. ಇಲ್ಲಿಯವರೆವಿಗೆ ಸಮಾಜ ನನ್ನನ್ನು ಪಾಲಿಸಿದೆ. ಇನ್ನು ಮುಂದೆ ನಾನು ಸಮಾಜಕ್ಕೆ ಯಾವುದಾದರೂ ರೀತಿಯಲ್ಲಿ ಪ್ರತಿ ನೀಡಬೇಕು.
ನಾನು ಉಸುಕಿನಲ್ಲಿ ಇಟ್ಟ ಹೆಜ್ಜೆ ಅಳಿಸಿ ಹೋಗುವ ಮುನ್ನ ಯಾರಾದರೊಮ್ಮೆ ನೋಡಿದರೆ, ಅದೇ ನನಗೆ ಸಂತೃಪ್ತಿ ಕೊಡುವುದು.
ನನ್ನ ಜೀವನ ಈ ಪಯಣದಲ್ಲಿ ಬಂದು ಹೋಗಿರುವ ಎಲ್ಲರಿಗೂ ವಂದನೆಗಳು.

‍ತಳುಕು ಶ್ರೀನಿವಾಸ ಮೂಲಕ

ನಾನೊಬ್ಬ ಸಾಹಿತ್ಯಾಭಿಲಾಷಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s