ವಿಭಾಗಗಳು
ಕವನಗಳು

+1-1=0

ಇದೊಂದು ನಿಜವಾಗಿ ನಡೆದ ಘಟನೆ. ಜೀವನ ಅಂದ್ರೆ +೧ – ೧ = ೦ ಎಂಬುದನ್ನು ಈ ಘಟನೆ ಸಾಬೀತು ಪಡಿಸುತ್ತದೆ.

ಪೂರ್ಣವಾಗಿ ಓದಿದ ಮೇಲೆ ನೀವು ಈ ಸ್ಥಿತಿಯಲ್ಲಿದ್ದರೆ ( ಅಂತಹ ಪರಿಸ್ಥಿತಿ ಬರುವುದು ಬೇಡ ಎಂದು ನನ್ನ ಆಶಯ – ಆದರೆ ವಿಧಿಯ ಮುಂದೆ ನಾವೆಲ್ಲಿಯವರು ) ನಿಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿ.

೧೯೪೪ ರಲ್ಲಿ ಮದುವೆಯಾದ ವಿಶ್ವನಾಥರಾಯರ ಸಂಸಾರದಲಿ ೧೯೫೭ರವರೆವಿಗೆ ೫ ಗಂಡು ಮಕ್ಕಳ ಸರತಿ. ಅಂದು ಹೆಣ್ಣು ಮಗುವಿನ ಜನನದಿಂದ ಮನೆಯ ಬೆಳಕು ಬೆಳಗಿತ್ತು. ರಾಯರಿಗೆ ಮೊದಲಿನಿಂದಲೂ ಹೆಣ್ಣು ಮಕ್ಕಳೆಂದರೆ ಪಂಚ ಪ್ರಾಣ. ತನ್ನದೇ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ ಮೇಲೆ ಅವರನ್ನು ಹಿಡಿಯುವವಯಾರು? ಮಗು ಅತ್ತರೆ ಎಲ್ಲಿ ಉಸಿರು ಹಿಡಿಯಬಹುದೆಂದು ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡಂತೆ ಬಹಳ ಸೂಕ್ಷ್ಮದಿಂದ ಸಾಕುತ್ತಿದ್ದರು. ಮಗು ಶುಕ್ಲ ಪಕ್ಷದ ಚಂದ್ರಮನಂತೆ ಬಹಳ ಮುದ್ದಾಗಿ, ಚೆನ್ನಾಗಿ ಬೆಳೆಯುತ್ತಿತ್ತು.

ರಾಯರು ಸಂಜೆ ಕೆಲಸದಿಂದ ಬಂದೊಡನೆ ಮಗುವಿನೊಡನೆ ಆಡುವುದರಲ್ಲಿ ದಿನದ ಕಷ್ಟಗಳೆಲ್ಲವನ್ನೂ ಮರೆಯುತ್ತಿದ್ದರು. ಮಗಳು ಇಂದಿರೆ ಮನೆಯಲ್ಲಿರುವವರೆಲ್ಲರಿಗೂ ಚೈತನ್ಯದ ಚಿಲುಮೆಯಾಗಿದ್ದಳೆಂದರೆ ಅತಿಶಯೋಕ್ತಿಯಲ್ಲ. ತಾಯಿಯ ಕೈಗಂತೂ ಮಗು ಸಿಗುತ್ತಲೇ ಇರಲಿಲ್ಲ. ಅಣ್ಣಂದಿರು ಅವಳನ್ನು ಕೆಳಗೆ ಬಿಡದೇ ಒಬ್ಬರಲ್ಲದೇ ಒಬ್ಬರು ಸದಾ ಕಾಲವೂ ಅವಳನ್ನು ಎತ್ತಿಕೊಂಡೇ ಇರುತ್ತಿದ್ದರು. ಹೀಗೆ ಯಾರಾದರೂ ಎತ್ತಿಕೊಂಡಿರುವಾಗಲೇ ಮಗುವಿಗೆ ಅವರಮ್ಮ ಊಟ ಮಾಡಿಸುತ್ತಿದ್ದರು. ಸಂಜೆ ರಾಯರು ಮನೆಗೆ ಬಂದೊಡನೆ ಅವಳನ್ನು ಯಾರೂ ಮುಟ್ಟಗೊಡುತ್ತಿರಲಿಲ್ಲ. ಮಗುವಿಗೂ ಅಪ್ಪ ಎಂದರೆ ಬಲು ಪ್ರಾಣ. ಅವರ ಹೆಗಲ ಮೇಲೆಯೇ ನಿದ್ರೆ ಮಾಡಿಬಿಡುತ್ತಿದ್ದಳು. ನಿದ್ರೆಯಲ್ಲಿಯೂ ಅವಳಿಗೆ ಅಪ್ಪನ ವಾಸನೆ ಇರಬೇಕಿತ್ತೇನೋ ಅದಕ್ಕೇ ನಿದ್ರೆಯಲ್ಲಿರುವ ಮಗುವಿನ ಕೈನಲ್ಲಿ ಎಂದಿಗೂ ಅವರಪ್ಪನ ಒಂದು ಷರ್ಟಿನ ತುಂಡು ಇದ್ದೇ ಇರುತ್ತಿತ್ತು. ಅದಿಲ್ಲದಿದ್ದರೆ ಅರ್ಧ ನಿದ್ರೆಯಲ್ಲಿಯೇ ಮಗು ಎದ್ದು, ಗಲಾಟೆ ಮಾಡುತ್ತಿತ್ತು.

ಹೀಗೆಯೇ ಮಗು ಮೂರು ವರುಷ ಕಳೆಯುವವರೆವಿಗೆ ಏನೂ ತೊಂದರೆ ಇರಲಿಲ್ಲ. ಅಂದೊಂದು ದಿನ ( ೧೯೬೦ರ ಮೇ ೧ನೇ ತಾರೀಖು ) ಮಗುವಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತು. ಆಗ ರಾಯರ ಪತ್ನಿ ಗಂಗಮ್ಮ ತುಂಬಿದ ಬಸುರಿ. ಈ ಮಗುವಿನೆಡೆಗೆ ಸಾಕಷ್ಟು ಗಮನ ಕೊಡಲಾಗುತ್ತಿರಲಿಲ್ಲ. ಮನೆಯಲ್ಲಿರುವ ಗಂಡು ಮಕ್ಕಳಿಗೆ ಜ್ವರ ತಪ್ತ ಮಗುವಿಗೆ ಏನು ಮಾಡಬೇಕೆಂಬುದು ತಿಳಿಯದು. ರಾಯರು ಮನೆಗೆ ಬಂದ ಕೂಡಲೇ ಮಗುವಿಗೆ ಜ್ವರ ಬಂದಿರುವ ವಿಷಯ ತಿಳಿಸಿದರು. ಇವರಿದ್ದ ಹಳ್ಳಿ ಕೊಂಪೆಯಲ್ಲಿ ವೈದ್ಯರೇ ಇರಲಿಲ್ಲ. ಹತ್ತಿರದ ಜೋಗದ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿದ್ದ ಅಂತೋಣಿಯೇ ಈ ಊರಿನವರಿಗೆ ವೈದ್ಯನಂತೆ ತೋರುತ್ತಿದ್ದ. ರಾಯರು ಸಂಜೆ ಕೆಲಸದಿಂದ ಬಂದೊಡನೆ ಮಗುವಿಗೆ ಜ್ವರ ಬಂದಿರುವ ವಿಷಯ ತಿಳಿದು ನಿಂತಲ್ಲಿ ನಿಲಲಾರದೇ ಅಂತೋಣಿಯೆಡೆಗೆ ಓಡಿದರು. ಅವನ್ಯಾವುದೋ ಮಾತ್ರೆಯನ್ನು ಕೊಟ್ಟು ಜೇನುತುಪ್ಪದೊಡನೆ ಸೇರಿಸಿ ಮಗುವಿಗೆ ನೆಕ್ಕಿಸಿ ಎಂದು ಹೇಳಿದ. ಸರಿ ಹಾಗೇ ಮಾಡಿದರು. ಅಂತಹ ಸಮಯದಲ್ಲಿ ಯಾರು ಏನೇ ಸಲಹೆ ಕೊಟ್ಟರೂ ನಾವು ಸ್ವೀಕರಿಸುತ್ತೇವೆ. ನಮ್ಮ ಪರಿಸ್ಥಿತಿ ಹಾಗಿರತ್ತೆ. ಮಗುವಿನ ಜ್ವರ ಮಾತ್ರ ಕಡಿಮೆಯಾಗದೇ ಇನ್ನೂ ಹೆಚ್ಚುತ್ತಲೇ ಹೋಯಿತು. ರಾಯರು ಪಕ್ಕದಲ್ಲೇ ವಾಸವಿದ್ದ ಜೀಪಿನ ಪಿಡಬ್ಲ್ಯುಡಿ ಡ್ರೈವರ್ ರಾಮಣ್ಣನ ಮೊರೆ ಹೊಕ್ಕರು. ರಾಮಣ್ಣನ ಹೆಂಡತಿ ವಿಶಾಲಾಕ್ಷಮ್ಮ ಮಗುವಿಗೆ ವಿಷಮಸೀತ ಜ್ವರ ಬಂದಿರಬಹುದೆಂದೂ ತಕ್ಷಣ ಜೋಗದ ಆಸ್ಪತ್ರೆ ಕರೆದೊಯ್ಯಿರೆಂದೂ ತಿಳಿಸಿದರು. ರಾಮಣ್ಣನೊಂದಿಗೆ ಜೀಪಿನಲ್ಲಿ ರಾಯರು ಮಗುವನ್ನು ಕರೆದುಕೊಂಡು ಜೋಗಕ್ಕೆ ಹೊರಟರು. ಆಗ ಸಮಯ ರಾತ್ರಿಯ ೧೧ ಘಂಟೆ. ರಸ್ತೆಯೇ ಸರಿ ಇಲ್ಲದ ಆ ಊರಿನಿಂದ ಜೋಗ ಸುಮಾರು ೩ ತಾಸುಗಳ ಪ್ರಯಾಣ. ಸರಿರಾತ್ರಿಯ ೧ ಘಂಟೆಗೆ ಮಗು ’ಕಾಫಿ ಕೊಡಿಸಪ್ಪ’ ಎಂದು ಕೇಳಿತು. ಆ ಕಾಡಿನಲ್ಲಿ ಕಾಫಿ ಎಲ್ಲಿ ಸಿಗಬೇಕು. ರಾಯರು, ’ಆಗ್ಲಮ್ಮ, ಇನ್ನೇನು ಊರು ಬಂದೇ ಬಿಡ್ತು. ಕೊಡಿಸ್ತೀನಿ ಅಂದ್ರು’. ಅಷ್ಟೇ ಅದೇ ಕಡೆಯ ಮಾತಾಗಿತ್ತು. ಮಗು ತನ್ನ ಕತ್ತನ್ನು ಹೊರಳಿಸಿತು. ಮೈಯೆಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು. ಇದನ್ನು ಅಷ್ಟಾಗಿ ರಾಯರು ಗಮನಿಸಿಲಿಲ್ಲ. ಆದರೆ ಅಪ್ಪ ಮಗಳ ಸಂಭಾಷಣೆಯನ್ನು ಗಮನಿಸುತ್ತಿದ್ದ ರಾಮಣ್ಣನಿಗೆ ವಿಷಯ ತಕ್ಷಣ ತಿಳಿದುಹೋಯಿತು. ಜೀಪನ್ನು ವಾಪಸ್ಸು ಊರಿನೆಡೆಗೆ ಓಡಿಸಿದ್ದ. ವಿಷಯವನರಿತ ರಾಯರನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಮನೆಯವರಿಗೊಮ್ಮೆ ಶವವನ್ನು ತೋರಿಸಿ ನಂತರ ಅಂತ್ಯಕ್ರಿಯೆ ಮುಗಿಸಲು ನಿರ್ಧರಿಸಿ ಮನೆಗೆ ಹೊರಟರು.

ಇನ್ನೇನು ಮನೆಯ ಹೊಸ್ತಿಲು ದಾಟಬೇಕೆನ್ನುವಷ್ಟರಲ್ಲಿ, ಆಚೆ ಮನೆಯ ಮೃಣಾಲಿನಿಯವರು ಸಂತೋಷದಿಂದ ಮನೆಯ ಒಳಗಿನಿಂದ ಬರುತ್ತಿದ್ದವರು ರಾಯರನ್ನು ಕಂಡು ಒಳಗೆ ಗಂಡು ಮಗು ಹುಟ್ಟಿದೆ ಎಂದರು. ರಾಯರ ಬಾಯಿಯಿಂದ ಬಂದದ್ದು ಹ್ಹುಹ್! ಎನ್ನುವ ಉದ್ಗಾರ ಮಾತ್ರ. ಮನೆಯ ಲಕ್ಷ್ಮಿ ಆಚೆಗೆ ಹೋಗಿ ಇನ್ನೊಬ್ಬ ಕೃಷ್ಣ ಮನೆ ಒಳ ಸೇರಿದ್ದ.