ಅತಿಯಾಸೆ ಗತಿ ಕೇಡು
ನಮ್ಮ ಕಥಾ ನಾಯಕ ಭಾಸ್ಕರ ಮತ್ತು ಖಳ ನಾಯಕ ವಿಕ್ಟರ್ ರೇಗೊ. ಇದು 1980 ಮತ್ತು 1990 ದಶಕದಲ್ಲಿನ ಸಮಯ. ಇಬ್ಬರೂ ಶೇರ್ ಮಾರುಕಟ್ಟೆಯಲ್ಲಿ ಈಜಾಡುತ್ತಿದ್ದವರು. ರೇಗೊ ಇದರಲ್ಲಿ ಶೇರ್ (ಸಿಂಹ) ಆಗಿದ್ದರೆ, ಭಾಸ್ಕರ ಈಗಿನ್ನೂ ಕಣ್ಣು ಬಿಡುತ್ತಿರುವ ಕಬ್(ಮರಿ ಸಿಂಹ). ಇಬ್ಬರಿಗೂ ಬಹಳ ಬೇಗ ಶ್ರೀಮಂತರಾಗುವ ಬಯಕೆ. ಇವರಿಬ್ಬರೂ ಮುಂಬಯಿಯಲ್ಲಿ ಪ್ರತಿಷ್ಟಿತ ಬ್ಯಾಂಕಿನಲ್ಲಿ ಗುಮಾಸ್ತೆಗಳಾಗಿ ಕೆಲಸ ಮಾಡುತ್ತಿದ್ದರು.
ಮೊದಲೊಂದು ಸಣ್ಣ ಪೀಠಿಕೆ. ಸೆಕ್ಯುರಿಟೀಸ್ ಸ್ಕ್ಯಾಮ್ ಅರ್ಥಾತ್ ಹರ್ಷದ್ ಮೆಹ್ತಾ ಹೆಸರನ್ನು ಕೇಳದವರಿಲ್ಲ. ಅದರ ಬಗ್ಗೆ ಸಣ್ಣ ಮಾಹಿತಿ ಕೊಡುವೆ. ಮೋಸ ಮಾಡುವವರೆಲ್ಲರೂ ಜಾಣರಾಗಿರುತ್ತಾರೆ. ಆದರೆಲ್ಲೋ ಒಮ್ಮೆ ಎಡವಿಬಿಡುವರು. ಎಡವಿಬಿದ್ದರೆ ಮತ್ತೆ ಏಳಲಾಗದಂತೆ ಆಗುವುದು. ಹೆಚ್ಚಿನ ಬ್ಯಾಂಕುಗಳಿಗೆಲ್ಲಾ ಸರಕಾರೀ ಸೆಕ್ಯುರಿಟೀಸ್ ಮಾರುವ ಇಲ್ಲವೇ ಕೊಳ್ಳುವ ಕೆಲಸವನ್ನು ಆತ ಮಾಡಿಕೊಡುತ್ತಿದ್ದ ಅರ್ಥಾತ್ ಬ್ಯಾಂಕುಗಳಿಗೆ ದಲ್ಲಾಳಿ ಕೆಲಸ ಮಾಡುತ್ತಿದ್ದ. ಬ್ಯಾಂಕುಗಳು ತಮ್ಮಲ್ಲಿರುವ ಠೇವಣಿಗಳಿಗೆ ಅನುಗುಣವಾಗಿ ಎರಡು ವಾರಗಳಿಗೊಮ್ಮೆ ಶುಕ್ರವಾರದಂದು ಸರಕಾರೀ ಸೆಕ್ಯುರಿಟೀಸ್ಗಳಲ್ಲಿ ಹೂಡಿಕೆ ಮಾಡಬೇಕಿತ್ತು. ಯಾರಲ್ಲಿ ಹೆಚ್ಚಿನ ಸೆಕ್ಯುರಿಟೀಸ್ ಇದ್ದು ಯಾರಿಗೆ ಬೇಕಿದೆ ಎಂಬ ಮಾಹಿತಿಗಳನ್ನು ಕೆಲವೇ ಘಂಟೆಗಳಲ್ಲಿ ತಿಳಿದು ಮಾರುವ ಅಥವಾ ಕೊಳ್ಳುವ ಕೆಲಸವನ್ನು ಮಾಡುವುದು ಸ್ವಲ್ಪ ಕಷ್ಟದ ಕೆಲಸ. ಅದಕ್ಕಾಗಿ ದಲ್ಲಾಳಿಗಳ ಮೊರೆ ಹೋಗುತ್ತಿದ್ದರು. ಹರ್ಷದ್ ಮೆಹ್ತಾ ಬಹಳ ಚಾಣಾಕ್ಷ. ಹೆಚ್ಚಿನ ಬ್ಯಾಂಕುಗಳಿಗೆ ದಲ್ಲಾಳಿಯಾಗಿದ್ದ. ಇದರಿಂದಾಗಿ ಬ್ಯಾಂಕುಗಳೆಲ್ಲವುಗಳ ಕ್ಷಮತೆ ಇವನಿಗೆ ಗೊತ್ತಿತ್ತು. ಯಾವ ಯಾವ ಬ್ಯಾಂಕುಗಳಿಗೆ ಎಷ್ಟೆಷ್ಟು ಸೆಕ್ಯುರಿಟೀಸ್ ಬೇಕು, ಯಾರಿಂದ ಯಾರಿಗೆ ಮಾರಬಹುದು ಎಂಬುದನ್ನು ತಿಳಿದು, ಅವುಗಳಿಗೆ ಸಲಹೆ ಕೊಡುತ್ತಿದ್ದ. ಹೀಗೆ ಮಾಡುವಾಗ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಷ್ಟು ಹೆಚ್ಚಿನ ಹಣ ಇರುವುದೆಂದು ತಿಳಿದು, ತನ್ನ ಖಾತೆಗೆ ಹಾಕಿಕೊಳ್ಳುತ್ತಿದ್ದ ಅರ್ಥಾತ್ ಹೆಚ್ಚಿನ ಸೆಕ್ಯುರಿಟೀಸ್ಗಳನ್ನು ತನ್ನ ಖಾತೆಗೆ ಕೊಂಡುಕೊಳ್ಳುತ್ತಿದ್ದ. ಅದನ್ನೇ ಶೇರು ಮಾರುಕಟ್ಟೆಯಲ್ಲಿ ತೊಡಗಿಸಿ ತನಗೆ ಬೇಕಾದ, ತನಗೆ ಹತ್ತಿರವಾದ ಕಂಪನಿಗಳ ಶೇರುಗಳನ್ನು ಖರೀದಿಸಿ, ಆ ಶೇರುಗಳನ್ನು ದರವನ್ನು ಹೆಚ್ಚಿಸುತ್ತಿದ್ದ. ಆ ಕಂಪನಿಗಳು ನಷ್ಟವನ್ನೇ ಅನುಭವಿಸುತ್ತಿದ್ದರೂ ಶೇರು ಮಾರುಕಟ್ಟೆಯಲ್ಲಿ ಜೋರಿನ ದಂಧೆ ನಡೆಸುತ್ತಿದ್ದವು. ಈ ವಿಷಯ ಜನ ಸಾಮಾನ್ಯರಿಗೆ ಅರ್ಥ ಆಗುತ್ತಿರಲಿಲ್ಲ.
ಇನ್ನು ನಮ್ಮ ಕಥೆಯ ಕಡೆ ನೋಡೋಣ. ರೇಗೊಗೆ ಶೇರು ದಲ್ಲಾಳಿಗಳ ಪರಿಚಯವಿತ್ತು. ಮರುದಿನ ಯಾವ ಶೇರು ಎಷ್ಟು ಬೆಲೆಗೆ ಮಾರಾಟ ಆಗುವುದೆಂದು ಮೊದಲೇ ತಿಳಿದು ಮುನ್ನಾದಿನವೇ ಖರೀದಿಸಿಕೊಳ್ಳುತ್ತಿದ್ದ. ಹಣ ಕಡಿಮೆ ಆದರೆ, ತನ್ನ ಸ್ನೇಹಿತರುಗಳಿಂದ ಎರವಲು ಪಡೆಯುತ್ತಿದ್ದ. ತನ್ನ ಮನೆಯ ಕಡೆ ಅವನಿಗೆ ಗಮನವೇ ಇರುತ್ತಿರಲಿಲ್ಲ. ಸಂಬಳ ಬಂದ ತಕ್ಷಣ ಅದನ್ನು ಮನೆಗೂ ತೆಗೆದುಕೊಂಡು ಹೋಗದೇ, ಎಲ್ಲವನ್ನೂ ಶೇರುಗಳಿಗೆ ತೊಡಗಿಸುತ್ತಿದ್ದ. ಪತ್ನಿ ಮನೆಯ ಹತ್ತಿರವೇ ಒಂದು ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಳು. ಪತಿ ಬಹಳ ಬೇಗ ಶ್ರೀಮಂತನಾಗಲೆಂದು ಅವಳೂ ಅವನ ಕೃತ್ಯಕ್ಕೆ ಅಡ್ಡಿ ಬರುತ್ತಿರಲಿಲ್ಲ. ತನಗೆ ಬಂದ ಸಂಬಳದಿಂದಲೇ ಸಂಸಾರವನ್ನು ತೂಗಿಸುತ್ತಿದ್ದಳು.
ರೇಗೋ ಕೈನಲ್ಲಿ ಯಾವ ಕ್ಷಣದಲ್ಲಾದರೂ ಲಕ್ಷ ರೂಪಾಯಿ ಹೊಂದಿಸುವಂತಹ ಶಕ್ತಿ ಇತ್ತು. ಇದನ್ನು ಗಮನಿಸಿದ್ದ ಭಾಸ್ಕರನಿಗೂ ತಾನೂ ಅವನಂತಯೇ ಆಗಬೇಕೆಂಬ ಹಂಬಲ ಉಂಟಾಗಿತ್ತು. ಇತ್ತ ಹತ್ತು ರೂಪಾಯಿನ ಶೇರುಗಳು ಹತ್ತು ಸಾವಿರಕ್ಕಿಂತ ಹೆಚ್ಚು ಬೆಲೆಯಲ್ಲಿ ವ್ಯಾಪಾರವಾಗುತ್ತಿತ್ತು. ರೇಗೋಗೆ ಆಸೆ ಹೆಚ್ಚಾಗಿ ಎಲ್ಲರ ಕಡೆಯಿಂದಲೂ ಸಾಲ ಪಡೆದು ಶೇರುಗಳನ್ನು ಖರೀದಿಸುತ್ತಿದ್ದ. ಹಾಗೆಯೇ ಭಾಸ್ಕರನನ್ನೂ ತನ್ನ ಜೊತೆಗೆ ಸೇರುವಂತೆ ಪ್ರೇರೇಪಿಸಿದ್ದ. ಅತ್ತ ಭಾಸ್ಕರ ತನ್ನ ಊರಾದ ನಾಗರಕೋಯಿಲ್ನಲ್ಲಿದ್ದ ಮನೆ, ಜಮೀನುಗಳನ್ನು ಮಾರಿ ಬಂದ ಹಣವನ್ನು ಶೇರುಗಳಲ್ಲಿ ತೊಡಗಿಸಿದ್ದ.
1992ರಲ್ಲಿ ಸೆಕ್ಯುರಿಟೀಸ್ ಸ್ಕ್ಯಾಮ್ ಬೆಳಕಿಗೆ ಬಂದದ್ದೇ ತಡ, ಎಲ್ಲ ಶೇರುಗಳ ಬೆಲೆಗಳೂ ನೆಲ ಕಚ್ಚಿದ್ದವು. ಕಂಪನಿಗಳು ತಮ್ಮ ನಿಜ ರೂಪವನ್ನು ಶೇರುಗಳ ಬೆಲೆಯಲ್ಲಿ ತೋರಿಸಿದ್ದವು. ಮೆಹ್ತಾನ ಮೇಲೆ ವಿಚಾರಣೆ ಶುರು ಆಗಿತ್ತು. ತಲೆ ಎತ್ತಲಾಗದ ರೇಗೋ ಬ್ಯಾಂಕಿನ ಕೆಲಸಕ್ಕೆ ರಾಜೀನಾಮೆ ಇತ್ತು, ಬಂದ ಹಣದಲ್ಲಿ ಸಾಲವನ್ನು ಅರ್ಧ ಭಾಗ ತೀರಿಸಿ, ಇನ್ನರ್ಧ ಭಾಗ ತೀರಿಸಲೋಸುಗ ಮಾರವಾಡಿಯ ಹತ್ತಿರ ಕೆಲಸಕ್ಕೆ ಸೇರಿದ್ದ. ಅವನ ಪತ್ನಿಯ ಮೇಲೆ ವಿಪರೀತ ಸಾಲದ ಹೊರೆ. ಆಕೆಯೂ ತನ್ನ ಮನೆಯವರ ಕಡೆಯಿಂದ ಕಡವನ್ನು ಪಡೆದು, ದಿನ ದೂಡುವಂತೆ ಮಾಡಿಕೊಂಡಿದ್ದಳು. ಇತ್ತ ಭಾಸ್ಕರನು ತನ್ನ ಕೆಲಸಕ್ಕೆ ರಾಜೀನಾಮೆ ಇತ್ತರೂ ಬಂದ ಹಣದಲ್ಲಿ ಸಾಲ ತೀರಿಸಲಾಗದೇ, ಕುಟುಂಬದವರ ಹೀಗಳಿಕೆ ಮಾತುಗಳನ್ನು ಕೇಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದ.
ಓಹ್! ಇದೊಂದು ನಿಜವಾದ ಘಟನೆ. ಅದಕ್ಕೇ ಅಲ್ವೇ! ದೊಡ್ಡವರು ಹೇಳೋದು, ಹಾಸಿಗೆ ಇದ್ದಷ್ಟು ಕಾಲ ಚಾಚು ಅಂತ.