40ವರ್ಷಗಳ ಹಿಂದೆ ರಾಮಣ್ಣನಿಗೆ 1000 ರೂಪಾಯಿ ಸಂಬಳ ಇದ್ದು, ಅದರಲ್ಲಿ 400 ರೂಪಾಯಿಯನ್ನು ಬಾಡಿಗೆ ಕೊಟ್ಟು, ತಿಂಗಳಿಗೆ ಬೇಕಾದ ವಸ್ತುಗಳನ್ನು ಖರೀದಿಸಿ, ದಿನನಿತ್ಯದ ಹಾಲು, ತರಕಾರಿ, ಬಸ್ ಛಾರ್ಜ್ ಎಲ್ಲ ಖರ್ಚು ಮಾಡಿಯೂ 200 ರೂಪಾಯಿ ಉಳಿಸುತ್ತಿದ್ದ. ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ಅರ್ಧದಷ್ಟಿತ್ತು. ಅದೇ ಈಗ ರಾಮಣ್ಣನಿಗೆ ಒಂದು ಲಕ್ಷ ರೂಪಾಯಿ ಸಂಬಳ ಬಂದರೂ ಆಗಿನ ನೆಮ್ಮದಿ ಜೀವನ ಈಗಿಲ್ಲ. ಅದೂ ಅಲ್ಲದೇ, ಸಮಾಜದಲ್ಲಿ ನೆರೆಹೊರೆಯವರಂತೆ ಬದುಕುವುದು ಅನಿವಾರ್ಯ. ತನಗಲ್ಲದಿದ್ದರೂ ಮನೆಯವರ ಒತ್ತಾಯದ ಮೇರೆಗೆ. 40 ವರ್ಷಗಳ ಯಾವ ವಸ್ತು ಐಷಾರಾಮಿ ಎನ್ನುವಂತಿತ್ತೋ, (ಉದಾಹರಣೆಗೆ, ಟಿವಿ, ಫ್ರಿಜ್, ಕಾರು, ಸ್ವಂತ ಮನೆ ಇತ್ಯಾದಿ) ಅವೆಲ್ಲವೂ ಈಗ ಅತ್ಯಾವಶ್ಯಕ ಎನ್ನುವಂತಾಗಿದೆ.
ಡೀಸೆಲ್ ಬೆಲೆ ಪೆಟ್ರೋಲ್ನಷ್ಟೇ ಆಗಿದೆ. ಆಗ ಇದ್ದ ಬೆಲೆ ಇಂದಿರುವ ಬೆಲೆಗೆ, ಊಹಿಸಲೂ ನಿಲುಕದು. ಅದೂ ಅಲ್ಲದೇ ಅಂದಿನ ಐಶಾರಾಮಿ ಎನ್ನುವ ವಸ್ತುಗಳು ಇಂದು ಅವಶ್ಯಕ ಎನ್ನುವಂತಾಗಿದೆ. ಅಂದು ಎಷ್ಟು ಜನಗಳ ಬಳಿಯಲ್ಲಿ ಕಾರು ಇತ್ತು ಈಗೆಷ್ಟು ಜನರಲ್ಲಿ ಇದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯೂ ಆಗಬೇಕು. ಇಲ್ಲದಿದ್ದರೆ ಆ ವಸ್ತುವಿನ ಬೆಲೆ ಹೆಚ್ಚಾಗುವುದು.
ಈಗೀಗ ಪೆಟ್ರೋಲ್ ಬೆಲೆ ಏರಿಕೆ, ಟೊಮೆಟೊ ಬೆಲೆ ಏರಿಕೆ, ಬಸ್ ದರ ಏರಿಕೆ, ಇತ್ಯಾದಿ ಬೆಲೆ ಏರಿಕೆ ಸುದ್ದಿಗಳು ಮಾಮೂಲಾಗಿದೆ. ಇದರ ಹಿಂದೆಯೇ, ವೇತನ ಏರಿಕೆ ಬಗ್ಗೆ ಕೂಗಾಟ, ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸುದ್ದಿಗಳೂ ಮಾಮೂಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆಯೂ ಕುಸಿಯುತ್ತಿದೆ. ಬೆಲೆ ಏರಿಕೆ ಏಕಾಗುತ್ತಿದೆ? ಬೆಲೆ ಏರಿಕೆ ನೀಗಿಸಲು, ರಿಸರ್ವ್ ಬ್ಯಾಂಕ್ ಹೆಚ್ಚು ಹೆಚ್ಚು ನೋಟುಗಳ ಮುದ್ರಣ ಯಾಕೆ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಪ್ರಶ್ನೆ. ಹೌದೋ ಅಲ್ವೋ!?
ಬೆಲೆ ಏರಿಕೆ ಏಕಾಗುತ್ತಿದೆ? ಬೇಡಿಕೆ ಜಾಸ್ತಿ ಆಗಿ, ಪೂರೈಕೆ ಸ್ಥಿತವಾಗಿದ್ದರೆ ಅಥವಾ ಕಡಿಮೆ ಆದರೆ, ಬೆಲೆ ಏರಿಕೆ ಆಗುವುದು. ಕೆಲವೊಮ್ಮೆ ಬೇಡಿಕೆ ಅಷ್ಟೇ ಇದ್ದರೂ, ಪೂರೈಕೆ ಸಮನಾಗಿದ್ದರೂ, ವಿದೇಶೀ ಮಾರುಕಟ್ಟೆಯ ದರಗಳು ಸಮನಾಗಿದ್ದರೂ, ಅದೆಷ್ಟೇ ದರ ಹೆಚ್ಚಿಸಿದರೂ, ಜನಗಳು ಕೊಂಡುಕೊಳ್ಳುವಂತಿದ್ದರೆ (ಉದಾಹರಣೆಗೆ ಸಿಗರೇಟ್, ಗುಟ್ಕಾ, ಮದ್ಯ ಇತ್ಯಾದಿ ಅವಶ್ಯಕವಲ್ಲದ ವಸ್ತುಗಳು) ಸರಕಾರದ ಬೊಕ್ಕಸ ತೂಗಿಸಲು, ಅದರ ಬೆಲೆಯನ್ನು ಏರಿಸುವುದು.
ಭಾರತೀಯ ರಿಸರ್ವ್ ಬ್ಯಾಂಕಿನ ತಾಳೆಪಟ್ಟಿ (ಬ್ಯಾಲೆನ್ಸ್ ಶೀಟ್) ನೋಡಿದರೆ, ದೇಶದ ಸ್ಥಿತಿಗತಿ ಗೊತ್ತಾಗುತ್ತದೆ. ದೇಶದ ಬಜೆಟ್ ಪ್ರಕಟಿಸುವ ಮುನ್ನಾ ದಿನ ಎಕಾನಮಿಕ್ ಸರ್ವೆ ಪ್ರಕಟವಾಗುತ್ತದೆ. ಅದರಲ್ಲಿ ಹಿಂದಿನ ವರ್ಷದ ಆರ್ಥಿಕ ಆಗುಹೋಗುಗಳ ಬಗ್ಗೆ ವಿಶ್ಲೇಷಿಸಿರುತ್ತಾರೆ. ನಂತರದ ದಿನ ಬಜೆಟ್ನಲ್ಲಿ ಬರುವ ವರ್ಷದ ಆರ್ಥಿಕ ಆಗುಹೋಗುಗಳ ಬಗ್ಗೆ ತಿಳಿಸುತ್ತಾರೆ. ರಿಸರ್ವ್ ಬ್ಯಾಂಕಿನ ತಾಳೆಪಟ್ಟಿಯ ಹೊಣೆಗಾರಿಕೆಯಾಗಿ (ಲಯಾಬಿಲಿಟೀಸ್) ಹೆಚ್ಚಿನ ಹಣ ಚಾಲ್ತಿಯಲ್ಲಿರುವ ನೋಟುಗಳಿದ್ದರೆ (ನೋಟ್ಸ್ ಇನ್ ಸರ್ಕುಲೇಶನ್), ಹೆಚ್ಚಿನದಾಗಿ ಸ್ವತ್ತುಗಳಾಗಿ ಸರಕಾರೀ ಸೆಕ್ಯುರಿಟೀಸ್/ ಬಾಂಡ್ ಮತ್ತು ವಿದೇಶೀ ಹೂಡಿಕೆಯಾಗಿರುತ್ತದೆ. ಹೂಡಿಕೆ ಜಾಸ್ತಿ ಮಾಡಿದರೆ, ನೋಟುಗಳನ್ನು ಹೆಚ್ಚಿನದಾಗಿ ಚಾಲ್ತಿಯಲ್ಲಿ ಬಿಡಬಹುದು. ಅದಕ್ಕೆ ತಕ್ಕ ಹಾಗೆ ಉತ್ಪಾದನೆ ಇಲ್ಲದಿದ್ದರೆ (ಕೃಷಿ, ಕೈಗಾರಿಕೆ ಇತ್ಯಾದಿ), ವಿದೇಶೀ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆ ಕಡಿಮೆ ಆಗಬಹುದು ಮತ್ತು ಹಣದುಬ್ಬರ ಹೆಚ್ಚಾಗುವುದು. ಇದು ದೇಶದ ಪ್ರಗತಿಗೆ ಒಳಿತಲ್ಲ. ರಿಸರ್ವ್ ಬ್ಯಾಂಕ್ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯತೆಯಲ್ಲಿದೆ. ಪ್ರತಿ ವರ್ಷದ ಹೆಚ್ಚುವರಿ ಆದಾಯವನ್ನು (ಲಾಭ ಎನ್ನುವಂತಿಲ್ಲ) ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಗುವುದು. ಹೆಚ್ಚು ಆದಾಯವನ್ನು ವರ್ಗಾಯಿಸುವುದು, ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬುದರ ಸಂಕೇತ.
1985ರಿಂದ 1991ರವರೆಗಿನ ನಮ್ಮ ದೇಶದ ಆರ್ಥಿಕ ನೀತಿ ಮತ್ತು ಗಲ್ಫ್ ಯುದ್ಧದ ಕಾರಣಗಳಿಂದ ನಮ್ಮ ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಆ ಸಮಯದಲ್ಲಿ ನಮ್ಮ ದೇಶದ ವಿದೇಶೀ ವಿನಿಮಯ ರಿಸರ್ವ್ (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಮೂರು ವಾರಗಳ ಆಮದಿಗೆ ಮಾತ್ರ ಸಾಕಾಗುವಂತಾಗಿತ್ತು. ಈ ಕಷ್ಟಕಾಲದಿಂದ ಹೊರಬರಲು ದೇಶದಲ್ಲಿದ್ದ ಸ್ವಲ್ಪ ಭಾಗವಾದ 47 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೇಂಡ್ನಲ್ಲಿ ಮತ್ತು 20 ಟನ್ ಚಿನ್ನವನ್ನು ಯೂನಿಯನ್ ಬ್ಯಾಂಕ್ ಆಫ್ ಸ್ವಿಟ್ಜರ್ಲೇಂಡ್ನಲ್ಲಿ ಅಡವಿಡಬೇಕಾಯಿತು. ಅದರ ಬದಲಿಗೆ 600 ಮಿಲಿಯನ್ ಡಾಲರನ್ನು ಐ.ಎಂ.ಎಫ್.ನಿಂದ ಸಾಲ ಪಡೆಯಿತು.
ಆದರೆ ಈಗ ಆ ಪರಿಸ್ಥಿತಿ ಇಲ್ಲ. ನಮ್ಮ ದೇಶದ ಹೆಚ್ಚಿನ ಹೂಡಿಕೆ ವಿದೇಶಿ ಬಾಂಡ್ ಮತ್ತು ಸೆಕ್ಯುರಿಟೀಸ್ಗಳಲ್ಲೇ ಇದೆ.
ಆದರೂ ಒಂದು ಸಮಾಧಾನದ ವಿಷಯವಿದೆ. ಈ ದೇಶದ ಎಲ್ಲ ಜನತೆಯೂ ಮನಸ್ಸು ಮಾಡಿದರೆ, ಯಾವ ದೇಶಕ್ಕೂ ಕಡಿಮೆ ಇಲ್ಲದಂತೆ ಉತ್ತುಂಗಕ್ಕೆ ಏರಬಲ್ಲದು. ಮೊದಲನೆಯದಾಗಿ, ಯುವ ಜನತೆಯ ಸಂಖ್ಯೆ ಎಲ್ಲ ದೇಶಗಳಿಗಿಂತಲೂ ಹೆಚ್ಚಾಗಿದೆ. ಯುವ ಶಕ್ತಿ ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಲ್ಲದು. ಎರಡನೆಯದಾಗಿ, ವಿದೇಶೀ ಮಾರುಕಟ್ಟೆಯಲ್ಲಿ ವಿನಿಮಯಕ್ಕಾಗಿ ರೂಪಾಯಿ ಬದಲಿಗೆ ಚಿನ್ನವನ್ನು ಬದಲಿಸುವಂತಾದರೆ ನಮ್ಮ ದೇಶ ಇತರ್ರ ಎಲ್ಲ ದೇಶಗಳಿಗಿಂತಲೂ ಮೇಲ್ಪಂಕ್ತಿಯಲ್ಲಿ ಇರಬಹುದು. ದೇಶದಲಿ ಮೀಸಲಿಟ್ಟಿರುವ ಚಿನ್ನ 642 ಟನ್ ಆದರೆ, ದೇಗುಲಗಳಲ್ಲಿ, ಮನೆ ಮನೆಗಳಲ್ಲಿ ಇರುವ ಚಿನ್ನ ಊಹೆಗೂ ಮೀರಿದ್ದು. ನಮ್ಮದು ಬಡ ದೇಶವಲ್ಲ, ಅತಿಯಾದ ಶ್ರೀಮಂತರೂ, ಅತಿಯಾದ ಬಡವರೂ ಇರುವ ದೇಶ. ದೇಶ ಆಳುವವರು ಮನಸ್ಸು ಮಾಡಿದರೆ, ಎಂದಿಗೂ ಭಾರತ ಒಂದನೇ ಶ್ರೇಣಿಯಲ್ಲಿ ನಿಲ್ಲಬಹುದು.
One reply on “ಹಣದುಬ್ಬರಕ್ಕೆ ನೋಟು ಮುದ್ರಣ ಮದ್ದೇ?”
Like my posts