ವಿಭಾಗಗಳು
ಲೇಖನಗಳು

ರಜತೋತ್ಸವ ಭಾಗ – 8

೧೯೯೦ರ ಮೇ ತಿಂಗಳಿನಲ್ಲಿ ನನ್ನ ಪತ್ನಿ ೬ ತಿಂಗಳ ಮಗಳನ್ನು ಕರೆದುಕೊಂಡು ನನ್ನ ಅತ್ತೆಯವರೊಂದಿಗೆ ಮುಂಬೈಗೆ ಬಂದಿದ್ದಳು.   ಪುಟ್ಟ ಮಗು ರಾತ್ರಿಯೆಲ್ಲಾ ಆಟವಾಡುತ್ತಿತ್ತು.  ಬೆಳಗೆಲ್ಲಾ ಮಲಗಿ ನಿದ್ರಿಸುತ್ತಿತ್ತು.  ಹೀಗಾಗಿ ಮನೆಯವಳಿಗೆ ನಿದ್ರೆಯೇ ಇರುತ್ತಿರಲಿಲ್ಲ.  ಮೊದ ಮೊದಲು ಸ್ವಲ್ಪ ದಿನಗಳು ನಾನು ಮಗಳ ಆಟಗಳನ್ನು ನೋಡುವುದರಲ್ಲೇ ಕಾಲ ಕಳೆಯುತ್ತಿದ್ದೆ.  ಹೇಗೆ ಒಂದು ವರ್ಷಗಳು ಕಳೆದು ಹೋದವೋ ತಿಳಿಯಲೇ ಇಲ್ಲ.

 

ಈ ಮಧ್ಯೆ ನನ್ನ ಕುಟುಂಬ ಬರುವ ಮುಂಚೆ, ದಿನ ಮಧ್ಯಾಹ್ನ ಎಲೆ ಅಡಿಕೆ ಹಾಕುವ ಅಭ್ಯಾಸವನ್ನು ಮಾಡಿಕೊಂಡಿದ್ದೆ.  ಎಲೆ ಅಡಿಕೆ ಎಂದೂ ಮುಟ್ಟದವನು ಮುಂಬೈಗೆ ಬಂದಾದ ಮೇಲೆ ಸ್ನೇಹಿತರುಗಳ ಒತ್ತಾಯದ ಮೇರೆಗೆ ಇಲ್ಲಿಯ ಭೈಯ್ಯಾ ಕೊಡುವ ಪಾನ್ ಚಟ ಹತ್ತಿಕೊಂಡಿತ್ತು.  ಆ ಭೈಯ್ಯ ಕೊಡುವ ಬಿಳಿ ಅಡಿಕೆ ನನಗೆ ತುಂಬಾ ರುಚಿಯೆನಿಸಿತ್ತು.  ಅದನ್ನು ಸ್ವಲ್ಪ ಜಾಸ್ತಿಯಾಗಿಯೇ ಸೇವಿಸುತ್ತಿದ್ದೆ.  ಪತ್ನಿ ಮುಂಬೈಗೆ ಬಂದಾದ ಮೇಲೆ ಒಮ್ಮೆ ನನ್ನ ಬೆರಳನ್ನು ನೋಡಿ, ಇದ್ಯಾಕೆ ಹೀಗೆ ಬಿಳಿಯಾಗಿದೆ ಎಂದು ಕೇಳಿದಳು.  ನನಗೂ ಅದರ ಬಗ್ಗೆ ತಿಳಿಯದೇ ವೈದ್ಯರ ಬಳಿಗೆ ಓಡಿದ್ದೆ.  ಅವರು ಚರ್ಮ ತಜ್ಞರ ಬಳಿಗೆ ಹೋಗಲು ತಿಳಿಸಿದರು.  ಚರ್ಮ ತಜ್ಞರಿಗೆ ದೂರವಾಣಿಯ ಮೂಲಕ ಅಪಾಯಿಂಟ್‍ಮೆಂಟ್ ಕೇಳಿದಾಗ ಒಂದು ಭಾನುವಾರ ಸಂಜೆ ೫ಕ್ಕೆ ಬರಲು ತಿಳಿಸಿದ್ದರು.

 

ಅಂದು ಭಾನುವಾರ.  ಅಂದು ನನ್ನ ಮಾವ ಮತ್ತು ಅತ್ತಿಗೆ ಬೆಂಗಳೂರಿನಿಂದ ನಮ್ಮ ಮನೆಗೆ ಬರುವವರಿದ್ದರು.  ಅವರನ್ನು ಕರೆತರಲು ನಾನು ದಾದರ ಸ್ಟೇಷನ್ನಿಗೆ ಹೋಗಬೇಕಿತ್ತು.  ಆಗಿನ್ನೂ ನನ್ನ ಅತ್ತೆಯವರು ನಮ್ಮಲ್ಲಿಯೇ ಇದ್ದು ಮತ್ತೆ ಅವರೊಂದಿಗೆ ವಾಪಸ್ಸಾಗುವವರಿದ್ದರು.  ಸಂಜೆ ೫ ಘಂಟೆಗೆ ವೈದ್ಯರ ಬಳಿ ಹೋಗಿ ಅಲ್ಲಿಂದ ೮ಕ್ಕೆ ದಾದರ ಸ್ಟೇಷನ್ನಿಗೆ ಹೋಗಬೇಕೆಂದು ಹೊರಟೆ.  ವೈದ್ಯರು ನನ್ನ ಬೆರಳನ್ನು ಪರೀಕ್ಷಿಸಿ, ಇದನ್ನು ವಿಟಿಲಿಗೋ ಎನ್ನುವರು.  ಚರ್ಮದಲ್ಲಿ ಬಣ್ಣ ಒದಗಿಸುವ ಅಂಶ ಕಡಿಮೆಯಾದರೆ ಹೀಗಾಗುವುದು.  ಇದಕ್ಕೆ ಅಲ್ಟ್ರಾ ರೇಸ್ ಎಂಬ ಕಿರಣವನ್ನು ಹಾಯಿಸಬೇಕು ಮತ್ತು ಬೆಳಗಿನ ಹೊತ್ತು ಬೆರಳಿಗೆ ಎಣ್ಣೆ ಹಚ್ಚಿ ಸೂರ್ಯನ ಕಿರಣಕ್ಕೆ ಒಡ್ಡಬೇಕು ಎಂದು ತಿಳಿಸಿ ಔಷಧವನ್ನು ಬರೆದುಕೊಟ್ಟಿದ್ದರು.  ಹಾಗೆಯೇ ಬೆರಳಿಗೊಂದು ಚುಚ್ಚುಮದ್ದನ್ನು ಚುಚ್ಚಿದ್ದರು.  ಮೊದಲೇ ಚುಚ್ಚುಮದ್ದಿಗೆ ಹೆದರುತ್ತಿದ್ದ ನನಗೆ ವಿಪರೀತ ನೋವುಂಟಾಗಿ ತಲೆ ಸುತ್ತು ಬರುವಂತಾಗಿತ್ತು.  ಹತ್ತಿರದ ಮಲಾಡ್ ಸ್ಟೇಷನ್ನಿನಲ್ಲಿ ಒಂದು ಬಿಸ್ಕತ್ ಪ್ಯಾಕೆಟ್ ತೆಗೆದುಕೊಂಡು ಪೂರ್ತಿಯಾಗಿ ತಿಂದ ಮೇಲೆ ಸ್ವಲ್ಪ ಸಮಾಧಾನವಾಗಿತ್ತು.  ಅದೇ ನೋವಿನಲ್ಲೇ ದಾದರ ಸ್ಟೇಷನ್ನಿಗೆ ಹೋಗಿದ್ದೆ.  ಸರಿಯಾಗಿ ಎಂಟಕ್ಕೆ ಉದ್ಯಾನ್ ಎಕ್ಸ್‍ಪ್ರೇಸ್ ದಾದರಿಗೆ ಬಂದು ತಲುಪಿತ್ತು.  ನನ್ನ ಮಾವ ಮತ್ತು ಅತ್ತಿಗೆಯರು ಬಂದಿದ್ದರು.  ಅವರನ್ನು ಟ್ಯಾಕ್ಸಿಯಲ್ಲಿ ಮಲಾಡಿಗೆ ಕರೆತಂದಿದ್ದೆ.  ಈ ಸಮಯದಲ್ಲಿ ಯಾರಿಗೂ ತಿಳಿಯಬಾರದೆಂದು ಆ ಬೆರಳನ್ನು ಹಿಂದಕ್ಕೆ ಇಟ್ಟುಕೊಂಡು ಮುಚ್ಚಿಕೊಂಡಿದ್ದೆ.  ಮನೆಗೆ ಬಂದ ಕೂಡಲೇ ನನ್ನ ಮಾವನವರು ಬೆರಳಿಗೇನಾಗಿದೆ ಎಂದರು.  ಕ್ಷಮಿಸಿ, ಅವರ ಬಗ್ಗೆ ಹೇಳುವುದನ್ನೇ ಮರೆತಿದ್ದೆ.

 

ಅವರು ನನ್ನ ಚಿಕ್ಕ ಮಾವನವರು.  ಬೆಂಗಳೂರಿನಲ್ಲೇ ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದರು.  ಅವರ ಕ್ಲಿನಿಕ್ ಇದ್ದುದು ಚಾಮರಾಜಪೇಟೆಯ ನಾಲ್ಕನೆಯ ರಸ್ತೆಯಲ್ಲಿ.  ಅವರ ಹೆಸರು ಡಾ| ಎನ್.ಎಸ್. ಸುಂದರೇಶ್ ಎಂದು.   ನನ್ನ ಪತ್ನಿಯ ಚಿಕ್ಕಪ್ಪನವರು.  ಆಗಲೇ ಅವರಿಗೆ ೭೦ರ ಹತ್ತಿರದ ವಯಸ್ಸು.  ನನ್ನ ಬೆರಳನ್ನು ಪರೀಕ್ಷಿಸಿ, ‘ಅಯ್ಯೋ ಇದೇನಿದು ಅಂಗೈ ಹುಣ್ಣಾಗಿದೆ ಎಂದು ಅದನ್ನೇ ಕತ್ತರಿಸಿಕೊಳ್ತಾರಾ?  ಇದ್ಯಾರು ನಿಮಗೆ ಇಂಜಕ್ಷನ್ ತೆಗೆದುಕೊಳ್ಳಲು ಹೇಳಿದ್ದು.  ನಮ್ಮ ದೇಹದಲ್ಲಿ ಎಲ್ಲ ಬಗೆಯ ರಸಾಯನಗಳಿರುತ್ತವೆ.  ಅದರಲ್ಲಿ ಯಾವುದಾದರೊಂದು ಕಡಿಮೆ ಆದರೆ ಈ ರೀತಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತದಷ್ಟೆ.  ನಿಮ್ಮ ದೇಹದಲ್ಲಿ ಪಾದರಸ ಮತ್ತು ಗಂಧಕದ ಅಂಶ ಕಡಿಮೆಯಾಗಿದೆ.  ಅವುಗಳು ಚರ್ಮಕ್ಕೆ ಬಣ್ಣ ಒದಗಿಸಲು ಸಹಾಯಿಸುವುವು.  ಅದು ಕಡಿಮೆಯಾರಿವುದರಿಂದ ಬೆರಳು ಬಿಳಿಚಿಕೊಂಡಿದೆಯಷ್ಟೆ.  ನಿಮಗೆ ನಾನು ಔಷಧಿ ಕಳುಹಿಸಿಕೊಡುವೆ.  ಇದೇನೂ ದೊಡ್ಡ ಕಾಯಿಲೆಯಲ್ಲ ಎಂದು ಹೇಳಿದಾಗ ನನಗೆ ಅತೀವ ಸಂತೋಷವಾಗಿತ್ತು.  ಅಂದಿನವರೆವಿಗೂ ಅವರನ್ನು ವೈದ್ಯರೆಂಬ ದೃಷ್ಟಿಯಿಂದ ನೋಡದಿದ್ದವನು ಅಂದಿನಿಂದ ಧನ್ವಂತರಿಯ ಸ್ವರೂಪವೆಂದು ಪರಿಗಣಿಸಿದ್ದೆ. 

 

ಒಂದು ವಾರದ ಬಳಿಕ ನನ್ನ ಮಾವನವರು, ಅತ್ತಿಗೆ ಮತ್ತು ಅತ್ತೆಯವರು ಬೆಂಗಳೂರಿಗೆ ವಾಪಸ್ಸಾಗಿದ್ದರು.  ಸ್ವಲ್ಲ್ಪ ದಿನಗಳ ಬಳಿಕ ಅಂಚೆಯ ಮೂಲಕ ನನಗೆ ಬೇಕಿದ್ದ ಔಷಧಿ ಬಂದು ತಲುಪಿತ್ತು.  ಅದೊಂದು ಲೇಹ್ಯ.  ಅದರ ಹೆಸರು ರಸಗಂಧಿ ಮೆಷುಗು.  ಪಾದರಸ ಮತ್ತು ಗಂಧಕದ ಮಿಶ್ರಣ.  ಯಾವುದೇ ಆಯುರ್ವೇದ ಔಷಧಿಯನ್ನು ಸೇವಿಸದರೂ ರಕ್ತ ಕೆಡುವುದು.  ಅದಕ್ಕಾಗಿ ಜೊತೆಗೆ ರಕ್ತಶೋಧಕವಾದ ರಕ್ತಶೋಧನಂ ಎಂಬ  ಮಾತ್ರೆಯನ್ನೂ ಕಳುಹಿಸಿದ್ದರು.  ಮೂರು ತಿಂಗಳುಗಳ ಕಾಲ ಈ ಔಷಧಿಯನ್ನು ಸೇವಿಸುತ್ತಿದ್ದಂತೆಯೇ ನನ್ನ ಬೆರಳು ಮಾಮೂಲಿನಂತಾಗಿತ್ತು.  ಇದು ಏಕಾಗಿತ್ತು ಎಂಬ ಕುತೂಹಲ ಹೆಚ್ಚಾಗಿತ್ತು.  ನನ್ನ ಮಾವನವರು ಹೇಳಿದ ಪ್ರಕಾರ ಆಹಾರ ವ್ಯತ್ಯಾಸದಿಂದ ಅಥವಾ ಹವಾಮಾನ ವ್ಯತ್ಯಯದಿಂದ ಹೀಗಾಗಿರಬಹುದೆಂದು ತಿಳಿಸಿದ್ದರು.  

 

ಈ ವಿಷಯವನ್ನು ನನ್ನ ಇನ್ನೊಬ್ಬ ಸ್ನೇಹಿತರಾಗಿದ್ದ ಹಿಂದಿ ಅಧಿಕಾರಿ (ನಮ್ಮಲ್ಲಿ ಹಿಂದಿ ಉಪಯುಕ್ತತೆ ಹೆಚ್ಚು ಮಾಡಲು ಒಂದು ವಿಭಾಗವಿದೆ), ಪ್ರಕಾಶ ಚಂದ್ರ ಅವರಿಗೆ ತಿಳಿಸಿದ್ದೆ.  ಅವರು ಹೇಳಿದ್ದೇನೆಂದರೆ, ತತ್‍ಕ್ಷಣ ಅಡಿಕೆ ತಿನ್ನುವುದನ್ನು ಬಿಡಬೇಕು.  ಇದರಿಂದಲೇ ಹೀಗೆ ಆಗುತ್ತಿದೆ ಎಂದಿದ್ದರು.  ಅವರೂ ಮೊದಲು ಬಹಳವಾಗಿ ಅಡಿಕೆ ತಿನ್ನುತ್ತಿದ್ದರಂತೆ – ಇದರಿಂದ ಶ್ವಾಸಕೋಶದ ತೊಂದರೆ ಉಂಟಾಗುತ್ತಿತ್ತಂತೆ.  ಅವರ ಹೇಳಿಕೆಯಂತೆ ಸ್ವಲ್ಪ ದಿನಗಳ ಕಾಲ ಅಡಿಕೆ ತಿನ್ನುವುದನ್ನು ಬಿಟ್ಟಿದ್ದೆ.  ಕೆಲವು ತಿಂಗಳುಗಳ ನಂತರ ಮತ್ತೆ ಪರೀಕ್ಷಿಸಲು ಅಡಿಕೆಯನ್ನು ಸೇವಿಸುತ್ತಿದ್ದೆ.  ಒಂದೇ ವಾರದಲ್ಲಿ ಬೆರಳಿನ ಮೇಲೆ ಬಿಳಿಯ ಮಚ್ಚೆ ಕಣಿಸಿಕೊಂಡಿತು.  ಅದೇ ಸಮಯಕ್ಕೆ ನಾನು ಚೆನ್ನೈಗೆ ಯಾವುದೋ ಟ್ರೈನಿಂಗಿಗೆ ಹೋಗಿದ್ದೆ.  ಮೇಲೆ ತಿಳಿಸಿದ ಔಷಧ ಚೆನ್ನೈನಿಂದಲೇ ಸರಬರಾಜು ಆಗುತ್ತಿದ್ದರಿಂದ ಅಲ್ಲಿಂದ ತೆಗೆದುಕೊಂಡು ಬಂದು ಸೇವಿಸಿದ್ದೆ.  ಮತ್ತೆ ಕೆಲವು ದಿನಗಳಲ್ಲಿ ಗುಣವಾಗಿತ್ತು.  ಅಂದಿನಿಂದ ಇಂದಿನವರೆವಿಗೆ ಅಡಿಕೆ ಮುಟ್ಟಿಲ್ಲ. 

 

*****

 

ನಾವು ಅಂದ್ರೆ ನಾನು ಮತ್ತು ನನ್ನ ಪತ್ನಿ ೧೯೯೦ರ ದೀಪಾವಳಿಯ ಸಮಯದಲ್ಲೊಂದು ಪಾಠವನ್ನು ಜೀವನದಲ್ಲಿ ಕಲಿತೆವು.  ಅದರ ಬಗ್ಗೆ ಒಂದೆರಡು ಮಾತುಗಳಲ್ಲಿ ತಿಳಿಸುವ ಪ್ರಯತ್ನ ಮಾಡುವೆ. 

 

ಎಳೆಯ ಮಕ್ಕಳಿರುವ ಮನೆಯಲ್ಲಿ ಸ್ವಲ್ಪವೂ ಗಲೀಜಿರದಂತೆ ನೋಡಿಕೊಳ್ಳಬೇಕು.  ಎಳೆಯ ಮಕ್ಕಳಿಗೆ ದೃಷ್ಟಿ ಬಲು ಚುರುಕು.  ಆಗ ಅವರಿಗೆ ಹಲ್ಲು ಬರುವ ಸಮಯವೂ ಆದ್ದರಿಂದ ಒಸಡಿನಲ್ಲಿ ನವೆ ಇರುತ್ತದೆಯಂತೆ.  ಅದಕ್ಕಾಗಿ ಏನನ್ನಾದರೂ ಕಚ್ಚಲು ಪ್ರಯತ್ನಿಸುತ್ತಿರುತ್ತಾರೆ.  ಇಂತಹ ಸಮಯದಲ್ಲಿ ಮನೆಯಲ್ಲಿ ಹಿರಿಯರಿದ್ದರೆ ಒಳ್ಳೆಯದು.  ಅವರಿಗೆ ಮಕ್ಕಳನ್ನು ನೋಡಿಕೊಳ್ಳುವ ಹೆಚ್ಚಿನ ತಾಳ್ಮೆಯೂ ಇರುತ್ತದೆ.  ಅಲ್ಲದೇ ಈ ವಿಷಯದಲ್ಲಿ ಅವರಿಗೆ ಹೆಚ್ಚಿನ ಪರಿಣತಿಯೂ ಇರುತ್ತದೆ.

 

ಆಗ ನನ್ನ ಮಗಳು ಹತ್ತು ತಿಂಗಳುಗಳ ಮಗು.  ಸೆಪ್ಟೆಂಬರ್ ತಿಂಗಳ ಸಮಯ.   ಒಮ್ಮೆ ರಾತ್ರಿ ಇದ್ದಕ್ಕಿದ್ದಂತೆ ಮಗುವಿಗೆ ವಾಂತಿ ಮತ್ತು ಭೇದಿ ಶುರುವಾಯಿತು.    ನನ್ನ ಪತ್ನಿಗೆ ವಿಪರೀತ ಹೆದರಿಕೆ ಆಗಿತ್ತು.  ಮಗುವಿಗೆ ಏನು ಆಗುತ್ತದೋ ಏನೋ, ತಕ್ಷಣ ವೈದ್ಯರಿಗೆ ದೂರವಾಣಿ ಮಾಡಿ ಎಂದಳು.  ನಾನು ಸಾಮಾನ್ಯವಾಗಿ ಉಡಾಫೆ ಮನುಷ್ಯ.  ಏನೂ ಆಗೋಲ್ಲ, ಮಗುವಿಗೆ ಅಜೀರ್ಣವಾಗಿರಬೇಕು, ಬೆಳಗ್ಗೆ ಅಷ್ಟು ಹೊತ್ತಿಗೆ ಸರಿ ಹೋಗ್ತಾಳೆ ಎಂದು ಮಲಗಿಬಿಟ್ಟೆ.  ರಾತ್ರಿಯೆಲ್ಲ ಮಗು ವಾಂತಿ ಮತ್ತು ಭೇದಿ ಮಾಡಿಕೋಳ್ತಿತ್ತು – ಪತ್ನಿ ಅವಳಿಗೆ ಎಲೆಕ್ಟ್ರಾಲ್ ನೀರು ಕುಡಿಸುತ್ತಿದ್ದಳು.  ಮಗಳು ಸ್ವಲ್ಪ ಮೊಂಡು.  ತಕ್ಷಣದಲ್ಲಿ ಎಲೆಕ್ಟ್ರಾಲ್ ನೀರನ್ನು ಕುಡಿಯುತ್ತಿರಲಿಲ್ಲ.  ಏನೇನೋ ಪುಸಲಾಯಿಸಿ ಕುಡಿಸಬೇಕಿತ್ತು.  ರಾತ್ರಿಯೆಲ್ಲಾ ಮಗುವನ್ನು ಎತ್ತಿಕೊಂಡು ಓಡಾಡ್ತಿದ್ದಳು.  ಬೆಳಗ್ಗೆ ಎದ್ದ ಕೂಡಲೇ ಮಗುವಿಗೆ ತುಂಬಾ ಆನಾರೋಗ್ಯ, ಈಗಲಾದರೂ ವೈದ್ಯರಿಗೆ ತಿಳಿಸಿ ಎಂದಿದ್ದಳು.  ಆಗಲೂ ನನಗೆ ಅಷ್ಟಾಗಿ ಏನೂ ಗೊತ್ತಾಗಲಿಲ್ಲ.  ಆಗ ಅವಳೇ ಹೇಳಿದ್ದು, ಮಗುವಿನ ಕಣ್ಣಿನ ಕೆಳಗೆ ಕಪ್ಪು ಗುರುತಾಗಿದೆ ಮತ್ತು ಮೈಯೆಲ್ಲಾ ನೀಲಿ ಬಣ್ಣಕ್ಕಾಗ್ತಿದೆ ಎಂದು.  ಆಗ ನನಗೆ ಸ್ವಲ್ಪ ಮನವರಿಕೆ ಆಗಿತ್ತು.  ಪಕ್ಕದ ಫ್ಲಾಟ್‍ನಲ್ಲಿದ್ದ ಬ್ಯಾಂಕಿನ ಇಂಜಿನಿಯರ್ ಅವರ ಪತ್ನಿ ಶಿಶುವೈದ್ಯ ಪರಿಣಿತೆ.  ಅವರಿಗೂ ೩-೪ ತಿಂಗಳುಗಳ ಮಗುವಿತ್ತು.  ಅವರಿಗೆ ಹೋಗಿ ವಿಷಯ ತಿಳಿಸಿದೆ.  ಅವರು ಮಗುವಿಗೆ ಎಲೆಕ್ಟ್ರಾಲ್ ನೀರನ್ನು ಸಾಕಷ್ಟು ಕುಡಿಸಲು ತಿಳಿಸಿ, ಏನೋ ಔಷದಿಯನ್ನು ಬರೆದುಕೊಟ್ಟಿದ್ದರು.  ಹಾಗೆಯೇ ಇನ್ನೂ ಕಡಿಮೆ ಆಗದಿದ್ದರೆ ತಮ್ಮ ಬಳಿ ಕರೆತರಲು ತಿಳಿಸಿದ್ದರು.  ಮನೆಯಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಮಗು ಎಲೆಕ್ಟ್ರಾಲ್ ನೀರನ್ನು ಕುಡಿಯುತ್ತಲೇ ಇರಲಿಲ್ಲ.  ಬದಲಾಗಿ ಆರೋಗ್ಯ ಕ್ಷೀಣಿಸುತ್ತಲೇ ಇತ್ತು.  ಹೆದರಿದ ನಾವು ವೈದ್ಯೆಯ ಮನೆಗೆ ಹೋದೆವು.  ಅವರೆದುರಿಗೆ ಕಮಕ್ ಕಿಮಕ್ ಅನ್ನದೇ ಎಲೆಕ್ಟ್ರಾಲ್ ನೀರನ್ನು ಕುಡಿದಿದ್ದಳು.  ಆದರೂ ಆರೈಕೆ ಮಾಡಲು ಆ ವೈದ್ಯೆಯನ್ನು ಕೇಳಿಕೊಂಡೆವು.  ಆಗ ಅವರು ಹತ್ತಿರದಲ್ಲೇ ಇದ್ದ ಒಂದು ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗುವಂತೆಯೂ, ಸ್ವಲ್ಪ ಹೊತ್ತಿನ ಬಳಿಕ ತಾವೇ ಬಂದು ಔಷಧೋಪಚಾರ ಮಾಡುವುದಾಗಿ ತಿಳಿಸಿದ್ದರು.  

 

ನರ್ಸಿಂಗ್ ಹೋಂಗೆ ಅಡ್ಮಿಟ್ ಮಾಡಿದ ನಂತರ ಆ ವೈದ್ಯೆ ಬಂದು ಗ್ಲೂಕೋಸ್ ಡ್ರಿಪ್ಸ್ ಕೊಟ್ಟರು.  ರಾತ್ರಿಯೆಲ್ಲಾ ಡ್ರಿಪ್ಸ್ ಏರುತ್ತಲೇ ಇತ್ತು.  ಅಂದು ದೀಪಾವಳಿ ಅಮಾವಾಸ್ಯೆಯ ರಾತ್ರಿ.  ರಾತ್ರಿಯೆಲ್ಲಾ ಪಟಾಕಿಗಳ ಆರ್ಭಟ.  ಮಗುವಿಗೆ ಹೇಗೋ ನಿದ್ರೆ ಬಂದಿತ್ತು.  ಆದರೆ ನನಗೆ ಮತ್ತು ನನ್ನ ಪತ್ನಿಗೆ ನಿದ್ರೆಯೇ ಇಲ್ಲ.  ಬೆಳಗ್ಗೆ ಅಷ್ಟು ಹೊತ್ತಿಗೆ ಮಗುವಿನ ಆರೋಗ್ಯ ಸುಧಾರಿಸಿತ್ತು.  ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದಿದ್ದೆವು.  ಇನ್ನೂ ಒಂದೆರಡು ದಿನಗಳು ಇಂಜಕ್ಷಣ್ ಕೊಡಬೇಕೆಂದು ಡ್ರಿಪ್ಸ್‍ಗೆಂದು ಚುಚ್ಚಿದ್ದ ಸೂಜಿಯನ್ನು ಹಾಗೆಯೇ ಬಿಟ್ಟಿದ್ದರು.  ಮನೆಗೆ ಕರೆತರುತ್ತಿದ್ದಂತೆಯೇ ಮಗುವಿಗೆ ಅದೆಲ್ಲಿಂದ ಶಕ್ತಿ ಬಂದಿತ್ತೋ ಏನೋ – ಮೊದಲು ಅವಳು ಮಾಡಿದ ಕೆಲಸವೆಂದರೆ ಮಂಚವನ್ನು ಹತ್ತಿದ್ದು.  ಅದರ ಭಾವಚಿತ್ರವನ್ನು ಇಲ್ಲಿ ಹಾಕಿರುವೆ.  ನೋಡಿ.  ಇದಕ್ಕೇ ಅಲ್ವೇ ಮಕ್ಕಳಿಗೆ ಕೋತಿ ಅನ್ನೋದು.

 

ನಂತರ ವೈದ್ಯರು ಹೇಳಿದ್ದು ಏನೆಂದರೆ, ಮಕ್ಕಳಿಗೆ ಕಣ್ಣು ಬಹಳ ಚುರುಕಾಗಿರುತ್ತದೆ, ಎಲ್ಲೇ ಪೇಪರ್ ಚೂರು, ಕಸ ಬಿದ್ದಿದ್ದರೂ ಕಾಣುವುದು.  ಅದನ್ನು ತಕ್ಷಣ ಬಾಯಿಗೆ ಹಾಕಿಕೊಳ್ಳುತ್ತಾರೆ.  ಆಗ ಇಂತಹ ಸನ್ನಿವೇಶವನ್ನು ನಾವು ಎದುರಿಸಬೇಕಾಗುತ್ತದೆ.  ಅದಕ್ಕೇ ಎಳೆಯ ಮಕ್ಕಳಿರುವ ಮನೆಯನ್ನು ಯಾವಾಗಲೂ ಶುಚಿಯಾಗಿ ಇಟ್ಟಿರಬೇಕು.

 

*******

 

ನನ್ನ ಮಗಳಿಗೆ ಒಂದು ವರುಷ ತುಂಬುವ ವೇಳೆಗೆ ನನ್ನ ಪತ್ನಿಯ ಅಣ್ಣನ ಮದುವೆ ನಿಶ್ಚಯವಾಗಿತ್ತು.  ಅದಕ್ಕಾಗಿ ನಾವು ಬೆಂಗಳೂರಿಗೆ ಹೋಗಿದ್ದೆವು.   ಮದುವೆ ಇದ್ದದ್ದು ಹನುಮಂತನಗರದಲ್ಲಿ ಮತ್ತು ನನ್ನ ಮಾವನವರ ಮನೆ ಇರುವುದು ರಾಜಾಜಿನಗರದಲ್ಲಿ.  ಹಾಗಾಗಿ ಅಂದು ಸಂಜೆ ಎಲ್ಲರೂ ವರಪೂಜೆಗೆ ಎಲ್ಲ್ರನ್ನೂ ಕರೆತರಲು ಬಸ್ ಬರುವುದಿತ್ತು.  ಅದರ ಹಿಂದಿನ ದಿನ ಬಾಬರಿ ಮಸೀದಿ ಉರುಳಿಸಿದ ಸುದ್ದಿ ಟಿವಿಯಲ್ಲಿ, ಪತ್ರಿಕೆಯಲ್ಲಿ ಬಂದಿತ್ತು.  ಸಂಜೆ ನಾಲಕ್ಕಾದರೂ ನಮ್ಮವರನ್ನೆಲ್ಲಾ ಕರೆದೊಯ್ಯಲು ಬಸ್ಸು ಬಂದಿರಲಿಲ್ಲ.   ಆಗ ವಧುವಿನ ಕಡೆಯವರು ಮಸೀದಿ ಒಡೆದ ಗಲಾಟೆ ಇರೋದ್ರಿಂದ ಬಸ್ಸು ಸಿಗೋದು ಕಷ್ಟ ಆಗಿದೆ, ಸ್ವಲ್ಪ ತಡವಾಗಬಹುದು‘, ಎಂದು ಫೋನಾಯಿಸಿದ್ದರು. 

 

ಅಷ್ಟು ಹೊತ್ತಿಗೆ ನನ್ನ ಮೂರನೆಯ ಭಾವಮೈದುನ ಗುರು (ಹೆಸರು ಸೂರ್ಯನಾರಾಯಣ – ಸಾಹಸಿ), ‘ನಾವಿಬ್ಬರೇ ಸ್ಕೂಟರ್‍ನಲ್ಲಿ ಹೋಗೋಣ್ವಾ?’ ಎಂದ.  ನಾನು ಎಲ್ಲರಿಗೂ ಎಲ್ಲ ಸಮಯಗಳಲ್ಲೂ ಹೂಂ ಅನ್ನೋನೇ!  ಅಂದರಿಕಿ ಮಂಚಿವಾಡು ಅನಂತಯ್ಯ ಅನ್ನುವ ಹಾಗೆ.  ಹೊರಟ ಕೂಡಲೇ ಅವನು, ‘ಕೇಶವ ಕೃಪ ಕಡೆ ಹೋದರೆ ಫಸ್ಟ್ ಹ್ಯಾಂಡ್ ವಿಷಯ ತಿಳಿಯತ್ತಲ್ವಾ?’  ಎಂದ.   ಅವನು ಹೇಳ್ತಿರೋದು ಬಾಬ್ರಿ ಮಸೀದಿ ಬಗ್ಗೆ ಅಂತ ನನಗೆ ಗೊತ್ತಿತ್ತು.  ಆದರೂ ಯಾವ ವಿಷಯ, ಅಲ್ಲಿ ಯಾರು ಗೊತ್ತಿದ್ದಾರೆಎಂದು ಕೇಳಿದೆ.   ಆಹಾಹ!  ನಿಮಗೆ ಅಲ್ಲಿರುವವರೆಲ್ಲರೂ ಗೊತ್ತು, ಅಲ್ವಾ?’  ಎಂದಿದ್ದ.  ಸರಿ ನಡೆ ಹೋಗೋಣ, ಎಂದಿದ್ದೆ.  ಹೋಗುವ ಹಾದಿಯಲ್ಲೆಲ್ಲೂ ಗಲಾಟೆ ಕಾಣಬರಲಿಲ್ಲ. ಶಂಕರಪುರದಲ್ಲಿರುವ ಕೇಶವ ಕೃಪ ಒಳಗೆ ಹೋದರೆ ಅಲ್ಲಿ ಯಾರೂ ಸಿಕ್ಕಲಿಲ್ಲ.  ನಾಗಭೂಷಣ ಒಬ್ಬರೇ ಕುಳಿತಿದ್ದರು.  ನನ್ನ ಬಹಳ ವರುಷಗಳ ನಂತರ ಕಂಡರೂ ಆಪ್ಯಾಯತೆಯಿಂದ ಮಾತನಾಡಿಸಿದ್ದರು.  ಗುರುವಿಗೆ ಬೇಕಿದ್ದ ಮಾಹಿತಿ ಯಾವುದನ್ನೂ ನಾನು ಕೇಳಲಿಲ್ಲ.   ಅಲ್ಲಿ ಜಾಸ್ತಿ ಹೊತ್ತು ನಿಲ್ಲದೇ ನಾನೇ ಗುರುವನ್ನು ಮದುವೆ ಮನೆಗೆ ಹೊರಡುವಂತೆ ಹೇಳಿದ್ದೆ.   

 

ಒಂದೆಡೆ ಗಲಾಟೆ ಆದರೆ, ಎಲ್ಲ ಕಡೆಯಲ್ಲೂ ಎಲ್ಲರ ಮೇಲೂ ಅನುಮಾನ ಪಡೋದು ಸ್ವಾಭಾವಿಕವೇ.  ಆದರೆ ಎಲ್ಲಿ ನಿರ್ಲಕ್ಷ್ಯತನ ಇರತ್ತೋ ಅಲ್ಲೇ ಮತ್ತೆ ಅವಘಡ ಸಂಭವಿಸುವುದು.  ಇದನ್ನು ತಪ್ಪಿಸಲು ಮಾಡಬೇಕಾದ್ದೇನು?  ಪೊಲೀಸರಿಂದ ಅಥವಾ ಮಿಲಿಟರಿಯವರಿಂದ ಇದನ್ನು ತಪ್ಪಿಸಲಾಗುವುದಿಲ್ಲ.   ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಬೇಕಷ್ಟೆ.  ಇದಕ್ಕಾಗಿ ಅವಶ್ಯಕವಾಗಿರುವುದು ವಿದ್ಯೆ ಮತ್ತು ದೇಶಾಭಿಮಾನ.  ಇದನ್ನು ಹೇಗೆ ಹುಟ್ಟು ಹಾಕುವುದು?  ಇದನ್ನು ಅನಾದಿಕಾಲದಿಂದಲೂ ಹುಡುಕುತ್ತಲೇ ಇದ್ದೇವೆ, ಬಹುಶ: ಹುಡುಕುತ್ತಲೇ ಇರುತ್ತೇವೆ.  ಇದು ನೈಸರ್ಗಿಕ.  ಸಾವು, ನೋವು, ನಲಿವು, ಸಂತೋಷ, ಏಕತೆ, ವೈಮನಸ್ಯ, ಹೊಡೆದಾಟ ಇತ್ಯಾದಿ ಎಲ್ಲವೂ ಒಂದೇ ನಾಣ್ಯದ ಎರಡು ಮುಖಗಳು.  ಒಂದಿಲ್ಲದೇ ಇನ್ನೊಂದಾಗದು.  ಜೀವನ ಹೇಗೆ ಬರುವುದೋ ಹಾಗೆಯೇ ಸ್ವೀಕರಿಸುತ್ತಾ ಹೋಗುವುದೇ ಸರಿಯಾದ ಮಾರ್ಗ ಎಂದು ನನ್ನ ಅನಿಸಿಕೆ.  ಯಾರು ಯಾವುದನ್ನು ತಪ್ಪಿಸಲಾದೀತು.  ನಾನು ಇಂತಹದ್ದನ್ನು ತಪ್ಪಿಸಿದೆ ಎಂದು ತಿಳಿದುಕೊಂಡರೆ ಅದು ಮೂರ್ಖತನದ ಪರಮಾವಧಿ, ಅಲ್ಲವೇ?

 

 

ಮದುವೆ ಮುಗಿದು ನಾವು ಮತ್ತೆ ಮುಂಬೈಗೆ ವಾಪಸ್ಸಾಗಿದ್ದೆವು.  ನನ್ನ ಮಗಳಿಗೆ ಒಂದು ವರ್ಷ ತುಂಬಿದ ಸಂದರ್ಭ.  ಮೊದಲ ಹುಟ್ಟಿದ ಹಬ್ಬಕ್ಕೆ ನನ್ನ ತಂದೆ, ತಾಯಿ, ನನ್ನ ಮೂರನೆಯ ಅಣ್ಣ, ಮಾವ, ಅತ್ತೆಯರು ಬಂದಿದ್ದರು.  ಸಾಧಾರಣವಾಗಿ ಹುಟ್ಟಿದ ಹಬ್ಬವನ್ನು ಆಚರಿಸಿದ್ದೆವು.  ಒಂದೆರಡು ದಿನಗಳ ಬಳಿಕ ನನ್ನ ಮಾವ ಮತ್ತು ಅತ್ತೆಯರು ವಾಪಸ್ಸು ಬೆಂಗಳೂರಿಗೆ ಹೊರಟರು.  ನನ್ನ ತಂದೆ ತಾಯಿ ಮತ್ತು ಅಣ್ಣ ಸ್ವಲ್ಪ ದಿನಗಳ ಮಟ್ಟಿಗೆ ಮುಂಬೈನಲ್ಲಿಯೇ ಇದ್ದರು.  ಆಗ ಮುಂಬೈ ತೋರಿಸುವಂತೆ ನನ್ನ ತಂದೆ ಕೇಳಿದರು.  ನಾನು ಅದಕ್ಕೆ, ಅಯ್ಯೋ, ಇಲ್ಲೇನಿದೆ ನೋಡಕ್ಕೆ, ಎಲ್ಲಿ ನೋಡಿದ್ರೂ, ಜನ, ಬಿಲ್ಡಿಂಗು, ನೂಕುನುಗ್ಗಲು, ನಿಮಗೆ ಅದೆಲ್ಲಾ ಸರಿ ಹೋಗಲ್ಲ ಎಂದು ಸುಮ್ಮನಾಗಿಸಿದ್ದೆ.  ಆದರೆ ನನ್ನಣ್ಣ (ಮೊದಲು ಮುಂಬೈನಲ್ಲಿಯೇ ಇದ್ದವನು), ನಾವಿದ್ದ ಮಲಾಡಿಗೆ ಹತ್ತಿರವೇ ಆದ ಮಾರ್ವೇ ಬೀಚನ್ನು ತೋರಿಸೋಣ ಎಂದಿದ್ದ. 

 

ಒಂದು ಭಾನುವಾರ ಸಂಜೆ ನಾನು, ಅಪ್ಪ, ಅಮ್ಮ, ಮತ್ತು ನನ್ನಣ್ಣ, ನನ್ನ ಒಂದು ವರುಷದ ಮಗಳನ್ನು ಎತ್ತಿಕೊಂಡು ಸ್ಟೇಷನ್ನಿನವರೆವಿಗೆ ಆಟೋವಿನಲ್ಲಿ ಹೋಗಿ, ಅಲ್ಲಿಂದ ಬಸ್ಸಿನಲ್ಲಿ ಮಾರ್ವೆಗೆ ಹೋದೆವು.  (ಮನೆಯಲ್ಲಿ ಕೆಲಸವಿದೆ ಎಂದು ಪತ್ನಿ ಮಾತ್ರ ಬಂದಿರಲಿಲ್ಲ).  ಮನೆಯಿಂದ ಹೊರಟಾಗಲಿಂದ ನನ್ನ ಮಗಳನ್ನು ನನ್ನಣ್ಣ ಎತ್ತಿಕೊಂಡಿದ್ದ.  ಬೀಚಿನ ಹತ್ತಿರ ಹೋಗುವಷ್ಟರಲ್ಲಿ (ಮುಕ್ಕಾಲು ಘಂಟೆಯಾಗಿರಬೇಕು), ಮಗು ಅಳಲು ಪ್ರಾರಂಭಿಸಿತು.  ನನ್ನ ತಾಯಿ ಅವಳನ್ನು ಕೆಳಗೆ ಬಿಡಲು ತಿಳಿಸಿದರು.  ಆದರೂ ನಾನು ತಯಾರಿರಲಿಲ್ಲ.  ಹಾಲಿನ ಬಾಟಲು ಕೊಟ್ರೆ ಅದೂ ಅವಳಿಗೆ ಬೇಡ.  ಬಿಸ್ಕತ್ ಚೂರು ಕೊಟ್ರೆ ಅದು ಬೇಡ.  ಬೇರೆಯವರು ಎತ್ತಿಕೊಂಡರೂ ಸುಮ್ಮನಾಗ್ತಿಲ್ಲ.   ಏನೆಲ್ಲಾ ರಮಿಸಿದರೂ ಅವಳು ಕೇಳಲೊಲ್ಲಳು.  ನನ್ನಣ್ಣನಿಗಂತೂ ಬಹಳ ಕೋಪ ಬಂದಿತ್ತು.  ಬೀಚು ತೋರಿಸೋಣ ಅಂತ ಕರೆದುಕೊಂಡು ಬಂದ್ರೆ ಇವಳ ಅಳುವಿನಲ್ಲಿ ನಮ್ಮ ಸಮಯವೆಲ್ಲಾ ಹಾಳು ಅಂತ ಅವನು.  ಅಷ್ಟು ಹೊತ್ತಿಗೆ ನಮ್ಮ ತಾಯಿ, ತಮ್ಮ ಅನುಭವದಂತೆ ಮಗುವಿಗೆ ಎಲ್ಲಿಯಾದರೂ ಇರುವೆ ಅಥವಾ ಇನ್ನೇನಾದರೂ ಕಚ್ಚಿರಬಹುದು ನೋಡು ಅಂತ ನನಗೆ ಹೇಳಿದರು.  ನೋಡಿದರೆ ಮಗುವಿನ ಕೆಳಗೆ ಕೆಂಪಗಾಗಿದೆ.  ಅಮ್ಮನಿಗೆ ಆ ವಿಷಯ ಹೇಳಿದೆ.  ಅದಕ್ಕವರು, ಒಂದೇ ಸಮನೆ ಎತ್ತಿಕೊಂಡಿರುವುದರಿಂದ ಹಾಗೆ ಆಗಿದೆ.   ಸ್ವಲ್ಪ ಹೊತ್ತು ಕೆಳಗೆ ಬಿಡು, ಸರಿ ಹೋಗ್ತಾಳೆ ಅಂದ್ರು. ಅವಳನ್ನು ಕೆಳಗೆ ಬಿಟ್ಟ ಕೂಡಲೇ ಮರಳಿನಲ್ಲಿ ಓಡಿ, ಆಡಲು ಪ್ರಾರಂಭಿಸಿದಳು.  ಮತ್ತೆ ಮನೆಗೆ ಬರುವವರೆವಿಗೂ ಏನೂ ಗಲಾಟೆ ಇರಲಿಲ್ಲ.  ಇದಕ್ಕೇ ಅಲ್ವೇ ಮನೆಯಲ್ಲಿ ಒಬ್ಬರು ಹಿರಿಯರು ಇರಬೇಕು ಅನ್ನುವುದು. 

ವಿಭಾಗಗಳು
ಲೇಖನಗಳು

can veda mantra be chanted by anybody?

i tried to collect some info on this subject

There are four types of mantras. They are veda mantras (mantras
chanted with shruthies which are taken from vedas).   purana mantras
(mantras which do not have any shruthi and taken from 18 puranas or 18 upapuranas), itihaasa mantras (mantras which are taken from epics – either Mahabharata or Ramayana) and karma mantras (which are literal explanation of what we are doing i.e., karmas / it can also be a prayer). There is a belief that
veda manthras should not be chanted by everyone. This belief sprouted
only because, veda mantra chanting has ten difficult sruthies (udaattha, anudaattha, swaritha,  repha, hraswa, pracheya, anunaasika, kampa, deergha kampa and plutha ). It takes years together for anyone to learn the veda mantras with shruti . Learning should be started from very young age itself, like 5 / 6 year old. Learning veda with shruthi is not that easy and veda mantra should be chanted with shruthi, because the shruthi is as important as the message of vedas. Hence, vedas are also known as shruthies. If one is chanting without shruthi, it is not good. It may be compared like taking five saridon tablets when we do not have a headache. It can cause more negative effect than giving positive effect. Hence it is instructed that everyone should not chant veda mantra .  Anyone including Hindu , Christian, Muslim or following any religion and even ladies can chant veda mantra provided, they can chant with shruthi. I am specifically explaining the above statement because, veda mantras are not written by brahmins, they were composed by kashatriyas, veda mantras are divided by a non Brahmin, into four classes from fishermen (vyaasa kula) family, veda vyasa, The aacharass were not written by brahmins but maheedaasa aitareya who is from chandaala family.  Many of our great rishies both modern and ancient are not Brahmins. This is true even in the case of  avataaras.  Lord Krishna and Rama did not belong to brahmin class. Thus one  need not worry too much about the caste / religion /place of origin etc., for learning the vedas. They should only ascertain , whether they have the endurance power to sit and learn the vedas for about five years, uninterrupted. Remember, if the shruthi has gone wrong, even the meaning and the message changes and even becomes negative. Example: in gaayatri manthra ‘..dhiyo yo na: prachodayaath’.   Here, the word /letter ‘na:’ if not properly chanted will give the meaning NO instead of US. i.e., ‘Oh lord Sun do NOT enlighten with dhaarmic wisdom’ instead of ‘Oh
Lord Sun enlighten us with dharmic wisdom’. I would like to inform you that every instruction given by our Rishies has a specific logic in that. Unfortunately due to our ignorance and biased approach we think they are all superstition. Remember that none is compelling us (including a Brahmin) to learn the vedas. If we are learning follow the instructions. This is what they said, but we misinterpret their instruction and say, it is savarna aadhipatya and superstition, etc. Detailed studies have been carried out by professors of music from

Cleveland
University on the vedic shruthies. Even today lot of research work is going on in this subject. The shruti of all the four vedas vary and that of Saama Veda is completely different. Veda trayee means vedas have been written partly as poems (padya style), prose (gadya style) and Music (geetha/gaana). This is the actual meaning of veda thrayee. (Some people think that veda thrayee means Rig veda, yajurveda and saama veda. They wrongly say atharva veda is not to be included . This is a superstition or mistake.

ವಿಭಾಗಗಳು
ಲೇಖನಗಳು

ರಜತೋತ್ಸವ – ಭಾಗ 7

ತಂಗಿಯ ಮದುವೆಯಾಗಿ ಅವಳು ಗಂಡನ ಮನೆಗೆ ಹೋದ ಮೇಲೆ ನಮ್ಮ ಜವಾಬ್ದಾರಿ ಸ್ವಲ್ಪ ಕಡಿಮೆ ಆಗಿದ್ದಿತು.  ಆಗ ನನ್ನ ತಾಯಿ ನನ್ನನ್ನು ಮದುವೆಯಾಗು ಎಂದು ದುಂಬಾಲು ಬಿದ್ದಿದ್ದರು.   ಇಲ್ಲಿಯವರೆವಿಗೆ ನಾನು ಸ್ವಲ್ಪ ಹಿಡಿತದಲ್ಲಿದ್ದವನು ಈಗಲಾದರೂ ಸ್ವಲ್ಪ ದಿನಗಳು ಪುರುಸೊತ್ತಾಗಿರೋಣವೆಂದು ಸದ್ಯಕ್ಕೆ ಬೇಡವೆಂದಿದ್ದೆ. 

 

ಪ್ರತಿದಿನ ಟೇಬಲ್ ಟೆನ್ನಿಸ್ ಆಡಲು ನಮ್ಮ ಬ್ಯಾಂಕಿನ ರಿಕ್ರಿಯೇಷನ್ ಕ್ಲಬ್ಬಿಗೆ ಹೋಗ್ತಿದ್ದೆ.  ನಮ್ಮ ಕಾಲೇಜಿನಲ್ಲಿ ಇಬ್ಬರು ಹೆಸರಾಂತ ಆಟಗರರಿದ್ದೂ (ಸಿ.ಆರ್.ರಮೇಶ್ ಬಾಬು ಮತ್ತು ಲಕ್ಷ್ಮೀ ಕಾರಂತ್)  ನನಗೆ ಈ ಆಟದ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ.   ಬ್ಯಾಂಕಿನಲ್ಲಿ ನನ್ನ ಜೊತೆಗಾರನಾಗಿದ್ದ ಸಿ.ಆರ್.ಲಕ್ಷ್ಮೀನಾರಾಯಣ ಒಳ್ಳೆಯ ಆಟಗಾರನೆಂದು ಹೆಸರುವಾಸಿ ಆಗಿದ್ದ.  ಯಾವುದೇ  ಟೂರ್ನಮೆಂಟಿಗೆ ಹೋದರೂ ಪ್ರಶಸ್ತಿ ಗಳಿಸಿಯೇ ಬರುತ್ತಿದ್ದ.  ಅಂತಹವನ ಸಹವಾಸದಿಂದ ರ್‍ಯಾಕೆಟ್ ಹಿಡಿಯುವುದು ಹೇಗೆ ಎಂಬುದು ಸ್ವಲ್ಪ ತಿಳಿದಿತ್ತು.  ನಮ್ಮ ಬ್ಯಾಂಕಿನ ತಂಡ ಯಾವುದೇ ಪಂದ್ಯಗಳಿಗೆ ಹೋದರೂ ನಾನು ಪಂದ್ಯ ನೋಡಲು ಹೋಗುತ್ತಿದ್ದೆ.  ಆಗ ನನಗೆ ಪರಿಚಯವಾದದ್ದು ನನ್ನ ಸೀನಿಯರ್ ಎನ್.ಕೆ.ಶ್ರೀಕಂಠಯ್ಯ.  ಮೊದಲಿ ಅವನ ಮುಖ ಚರ್ಯೆ ನೋಡಿ ತಮಿಳರವನಿರಬೇಕೆಂದು ತಿಳಿದಿದ್ದೆ.  ಅದೂ ಅಲ್ಲದೇ ಅವನು ತಮಿಳನ್ನು ಬಹಳ ಚೆನ್ನಾಗಿಯೇ ಮಾತನಾಡುತ್ತಿದ್ದ. 

 

ಅಂದೊಂದು ದಿನ ಸಂಜೆ ಆಟವಾಡಲೆಂದು ನಾನು ಹೋದಾಗ, ನನ್ನನ್ನು ಮತ್ತು ನನ್ನ ಸ್ನೇಹಿತ ಲಕ್ಷ್ಮೀನಾರಾಯಣನನ್ನು ತಮ್ಮ ಮನೆಗೆ ಬರುವಂತೆ ಶ್ರೀಕಂಠಯ್ಯ ಹೇಳಿದ.  ಹೇಗಿದ್ದರೂ ನೇರವಾಗಿ ಮನೆಗೆ ಹೋಗದ ನನಗೆ ಸರಿ ಎಂದೆನಿಸಿತು.  ಅಂದು ಆಟವಾಡದೇ ಅವರ ಮನೆಗೆ ಹೋಗಿದ್ದೆವು.  ಅವರ ಮನೆಗೆ ಹೋಗುತ್ತಿದ್ದಂತೆಯೇ ಅವರ ಚಿಕ್ಕಪ್ಪ (ವೃತ್ತಿಯಲ್ಲಿ ವೈದ್ಯರಾಗಿದ್ದರು), ಒಳಗೆ ಬನ್ನಿ ಎಂದು ತೆಲುಗುವಿನಲ್ಲಿ ಹೇಳಿದರು.  ನನಗೋ ಬಹಳ ಆಶ್ಚರ್ಯವಾಯಿತು.  ಅಲ್ಲ, ಇವನು ನೋಡಿದರೆ ತಮಿಳರಂತಿದ್ದಾನೆ, ಮನೆಯಲ್ಲಿರುವ ಅವನ ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ ಇವರೆಲ್ಲರೂ ನಮ್ಮ ಮನೆಯವರಂತೆಯೇ ಇದ್ದಾರೆ.  ಮುಖ್ಯವಾಗಿ ತೆಲುಗುವಿನಲ್ಲೇ ಮಾತನಾಡುತ್ತಿದ್ದಾರೆ. 

 

ನನ್ನ ಮನೆಯ ಬಗ್ಗೆ ಕೇಳಿದ ಅವರ ಚಿಕ್ಕಪ್ಪ, ನನ್ನ ದೊಡ್ಡಪ್ಪನವರು ಅವರಿಗೆ ಸಂಬಂಧವಾಗಬೇಕೆಂದು ತಿಳಿಸಿದರು.  ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತನಾಡಿದ ಮೇಲೆ, ತಮ್ಮ ಮಗಳು ಮದುವೆಗಿರುವಳೆಂದೂ ಒಪ್ಪಿಗೆ ಇತ್ತರೆ ನಮ್ಮ ಮನೆಗೆ ಹೋಗಿ ಬರುವೆನೆಂದಿದ್ದರು.  ಈ ಆಘತಕ್ಕೆ ತಯಾರಾಗಿ ಬಂದಿರದ ನಾನು, ನನ್ನದೇನೂ ಇಲ್ಲ, ಎಲ್ಲ ನನ್ನ ತಾಯಿ ಹೇಳಿದ ಹಾಗೆ, ಎಂದು ನುಣುಚಿಕೊಂಡು ಹೊರಬಿದ್ದಿದ್ದೆ. 

 

ಸ್ವಲ್ಪ ದಿನಗಳ ತರುವಾಯ ನನ್ನ ತಾಯಿಯೇ ಬೆಂಗಳೂರಿಗೆ ಬಂದಿದ್ದರು.  ಹುಡುಗಿಯ ಕಡೆಯವರು ಊರಿಗೆ ಬಂದಿದ್ದರೆಂದೂ, ಜಾತಕ ಕೊಟ್ಟಿರುವರೆಂದೂ, ಅದು ಕೂಡಿ ಬಂದಿದೆಯೆಂದೂ, ನನ್ನ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದರು.  ನನಗೆ ತಿಳಿಯದೇ ಇಷ್ಟೆಲ್ಲಾ ಮುಂದುವರೆದದ್ದು ನನಗೆ ಸ್ವಲ್ಪ ಬೇಸರ ತಂದಿತ್ತು.  ಆದರೂ ನನ್ನ ತಾಯಿಯ ಮುಖ ನೋಡಿ ಸುಮ್ಮನಾಗಿದ್ದೆ.  ಅವರಾಗಲೇ ಒಪ್ಪಿಯೂ ಬಿಟ್ಟಿದ್ದರು.  ಹುಡುಗಿ ನಮ್ಮ ಮನೆಗೆ ತಕ್ಕವಳಿದ್ದಾಳೆ ಎಂದಿದ್ದರು. 

 

ಒಂದು ತಿಂಗಳುಗಳಲ್ಲಿ ನಿಶ್ಚಿತಾರ್ಥವೂ ನಡೆದು ಹೋಗಿತ್ತು.  ಕನಸಿನಲ್ಲಿ ನಡೆದಂತೆ ಬಹಳ ಬೇಗ ಮದುವೆಯೂ ನಡೆದು ಹೋಗಿತ್ತು.  ಮದುವೆಗೆ ಒಂದು ತಿಂಗಳ ಮುಂಚೆ ಬಸವೇಶ್ವರನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಹಿಡಿದಿದ್ದೆ.  ಮದುವೆಯಾದ ೩-೪ ತಿಂಗಳುಗಳಲ್ಲಿ ನನ್ನ ಅಣ್ಣ ಮುಂಬೈನಿಂದ (ಮುಂಬೈ ಟೆಲಿಫೋನ್ ಎಂ.ಟಿ.ಎನ್.ಎಲ್. ಆದ ಕಾರಣ) ವರ್ಗವಾಗಿ ಬೆಂಗಳೂರಿಗೆ ಬಂದಿದ್ದ.

 

 

********

 

ಮದುವೆಯಾದ ಮೇಲೆ ನನ್ನ ಪತ್ನಿಯ ಮನೆಯ ಕಡೆಯವರು ನನ್ನನ್ನು ಇತರರಿಗೆ ಪರಿಚಯಿಸುವಾಗ ನಾನು ಬ್ಯಾಂಕಿನಲ್ಲಿ ಆಫೀಸರ್ ಆಗಿದ್ದೇನೆಂದು ಹೇಳುತ್ತಿದ್ದರು.  ಅದೇ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬದವರುಗಳೂ, ಆಫೀಸರ್ ಆದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಒಳ್ಳೆಯ ಸ್ಥಿತಿ ಬರುವುದೆಂದು ಬುದ್ಧಿಮಾತು ಹೇಳಿದ್ದರು.  ಆಗ ನನಗೂ ಅನ್ನಿಸಿದ್ದೇನೆಂದರೆ, ಇಲ್ಲಿಯವರೆವಿಗೆ ನಾನು ಸಾಧಿಸಿದ್ದಾದರೂ ಏನಿದೆ, ಈಗಲಾದರೂ ಏನನ್ನಾದರೂ ಮಾಡಿ ತೋರಿಸಬೇಕೆಂಬ ಛಲ ಉಂಟಾಯಿತು.  ಆಗಲೇ ಬ್ಯಾಂಕಿನಲ್ಲಿ ಆಫಿಸರಾಗಲು ಮೆರಿಟ್ ಪರೀಕ್ಷೆ ತೆಗೆದುಕೊಳ್ಳಲು ಕನಿಷ್ಟ ಸೇವಾಗತ್ಯವನ್ನು ೯ ವರ್ಷಗಳಿಂದ ೫ ವರ್ಷಗಳಿಗೆ ಇಳಿಸಿದ್ದರು.  ಒಂದು ತಿಂಗಳು ರಜೆ ಹಾಕಿ ಮನೆಯಲ್ಲಿ ಕುಳಿತು ಚೆನ್ನಾಗಿ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದೆ.  ಪರೀಕ್ಷೆ ಚೆನ್ನಾಗಿಯೇ ಬರೆದಿದ್ದೆ. 

 

ಆಗಿನ್ನೂ ಮದುವೆಯಾಗಿ ಒಂದು ತಿಂಗಳು ಕಳೆದಿತ್ತಷ್ಟೆ.   ಅಂದು ಬ್ಯಾಂಕಿನಲ್ಲಿ ಮಧ್ಯಾಹ್ನದ ಊಟದ ಸಮಯ ಹೆಚ್ಚಿಗೆ ಸಿಕ್ಕಿತ್ತು.  ಹಾಗಾಗಿ ಮನೆಗೆ ಹೋಗಿ ಊಟ ಮಾಡಿ ಬರೋಣವೆಂದು ಹೋಗಿದ್ದೆ.  ನಮ್ಮ ಮನೆ ಒಂದು ಔಟ್ ಹೌಸ್.  ಪಕ್ಕದಲ್ಲಿ ಇನ್ನೊಂದು ಮನೆ ಕಟ್ಟುತ್ತಿದ್ದರು.  ಅಷ್ಟು ದೂರದಿಂದ ಮನೆ ಕಡೆಗೆ ಹೋಗುತ್ತಿದ್ದಾಗ ಮನೆಯ ಬಾಗಿಲಲ್ಲಿ ಪತ್ನಿ ನಿಂತಿದ್ದು ಕಾಣಿಸಿತು.  ಬಾಗಿಲ ಹತ್ತಿರಕ್ಕೆ ನಾನು ಹೋಗುವವರೆವಿಗೂ ಅವಳು ಅಲ್ಲೇ ನಿಂತಿದ್ದು ನನ್ನ ಮುಖವನ್ನೇ ದುರುಗುಟ್ಟಿ ನೋಡುತ್ತಿದ್ದಳು.  ನಾನು ಒಳ ಹೋಗುತ್ತಿದ್ದಂತೆಯೇ, ‘ಅಯ್ಯೋ ನೀವೇನಾ?  ಯಾರೋ ನಮ್ಮ ಮನೆ ಕಡೆ ಬರ್ತಿದ್ದಾರೆ.  ಇವರ ಮುಖ ಎಲ್ಲೋ ನೋಡಿದಂತಿದೆಯಲ್ಲ ಅಂತ ಯೋಚಿಸ್ತಿದ್ದೆ.   ಸಾರಿ ಎಂದಿದ್ದಳು. 

 

ಅದಾದ ಸ್ವಲ್ಪ ದಿನಗಳಿಗೆ ಸಾಗರಕ್ಕೆ ಬ್ಯಾಂಕಿನ ಕೆಲಸದ ಮೇಲೆ ಹೋಗಿದ್ದೆ.  ಹುಟ್ಟಿನಿಂದ ೬ ವರುಷಗಳವರೆವಿಗೆ ಲಿಂಗನಮಕ್ಕಿಯಲ್ಲಿ ಇದ್ದವನಾಗಿದ್ದರೂ ಸಾಗರವನ್ನು ನೋಡಿರಲಿಲ್ಲ.  ಅತ್ತ ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಎರಡರ ಸಮ್ಮಿಶ್ರಣ.  ಸುಂದರ ನಿಸರ್ಗ ಸೌಂದರ್ಯ.  ಮಾರಮ್ಮನ ದೇವಸ್ಥಾನದ ಪಕ್ಕದಲ್ಲಿದ್ದ ಹೊಟೆಲ್‍ನಲ್ಲಿ ತಂಗಿದ್ದೆ.  ಪ್ರತಿದಿನ ಬೆಳಗ್ಗೆ ಮತ್ತು ಸಂಜೆ (ಒಂದು ವಾರದ ಮಟ್ಟಿಗೆ ಅಲ್ಲಿದ್ದದ್ದು), ಜೋಗದ ರಸ್ತೆ ಕಡೆ ನಡೆದು ಹೋಗುತ್ತಿದ್ದೆ.  ನಿಸರ್ಗ ಮನ ಆಹ್ಲಾದವಾಗಿಸುತ್ತಿತ್ತು.  ಇಂತಹ ಪರಿಸರ ಬೆಂಗಳೂರಿನಲ್ಲಿ ಒಮ್ಮೆಯೂ ಕಂಡಿರಲಿಲ್ಲ.  ಅಲ್ಲಿಯೇ ಹತ್ತಿರವಿದ ಕಾಮತ್ ಹೊಟೆಲ್‍ನಲ್ಲಿ (ಈಗ ಇದೆಯೋ ಇಲ್ಲವೋ ತಿಳಿಯದು), ಫ್ರೂಟ್ ಸಲಾಡ್ ಮತ್ತು ಐಸ್ ಕ್ರೀಂ (ಅದಕ್ಕೆ ಗಡ್ಬಡ್ ಎನ್ನುತ್ತಿದ್ದರು) ಅನ್ನು ಮೂರು ರೂಪಾಯಿಗಳಿಗೆ ಕೊಡ್ತಿದ್ದರು ಎಂದರೆ ನೀವು ನಂಬ್ತೀರಾ?  ಅದೆಷ್ಟು ರುಚಿಯಾಗಿರುತ್ತಿತ್ತೆಂದರೆ ಪ್ರತಿದಿನವೂ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ತಿನ್ನುತ್ತಿದ್ದೆ.  ಎರಡನೆಯ ದಿನ ಹೊಟ್ಟೆಯಲ್ಲಿ ತೊಂದರೆ ಕಾಣಿಸಿಕೊಂಡಾಗ ಅದರ ಹೆಸರು ಗಡ್‍ಬಡ್ ಎನ್ನುವುದು ಅನ್ವರ್ಥ ಎಂದು ತಿಳಿದಿತ್ತು. 

 

ಸಾಗರದಲ್ಲಿ ಒಂದು ವಾರ ಕಳೆಯುತ್ತಿದ್ದಂತೆಯೇ ಆಫೀಸರ್ ಪರೀಕ್ಷೆ ಪಾಸಾಗಿದೆಯೆಂಬ ವಿಷಯ ತಿಳಿಯಿತು.  ಹಾಗಾಗಿ ತಕ್ಷಣ ಬೆಂಗಳೂರಿಗೆ ಹೊರಟು ಬಂದಿದ್ದೆ.  ಮುಂಬೈಗೆ ಪೋಸ್ಟಿಂಗ್ ಆಗಿದೆಯೆಂದೂ ಇನ್ನು ಒಂದು ತಿಂಗಳಲ್ಲಿ ಬೆಂಗಳೂರು ಬಿಡಬೇಕೆಂದೂ ವಿಷಯ ತಿಳಿದಿತ್ತು.  ಒಂದೆಡೆ ಆಫೀಸರಾದ  ಖುಷಿಯಾದರೆ ಇನ್ನೊಂದೆಡೆ ನನ್ನ ನೆಂಟರಿಷ್ಟರೆಲ್ಲರನ್ನೂ ಬಿಟ್ಟು ದೂರ ಹೋಗಬೇಕಲ್ಲ ಎಂಬ ದು:ಖ.  ನಿವೃತ್ತಿ ಆಗುವವರೆವಿಗೂ ಬೆಂಗಳೂರಿನಲ್ಲಿ ಖಾಯಂ ಆಗಿ ನೆಲಸಲಾಗುವುದಿಲ್ಲವೆಂಬ ಕೊರಗೂ ಹಿಂದೆಯೇ ಇತ್ತು. 

 

ಬೆಂಗಳೂರಿನಲ್ಲಿ ಆಗಬೇಕಿದ್ದ ಎಲ್ಲ ಕೆಲಸಗಳನ್ನೂ, ಮುಂಬಯಿಗೆ ಹೊರಡುವ ತಯಾರಿಯನ್ನೂ ಮಾಡಿದ್ದೆ.  ಮುಂದಿನ ಭಾಗ ಮುಂಬೈ ಅನುಭವದ ಬಗ್ಗೆ ಬರಲಿದೆ.

 

*******

 

ಬೆಂಗಳೂರಿನಿಂದ ಮುಂಬೈಗೆ ಉದ್ಯಾನ್ ಎಕ್ಸ್‍ಪ್ರೆಸ್‍ನಲ್ಲಿ ನಾನು, ದತ್ತಾತ್ರೇಯ, ಮಹದೇವಸ್ವಾಮಿ ಮತ್ತು ಕೊಡಿಯಾಲಮಠ ಹೊರಟು ಬಂದಿದ್ದೆವು.  ಈ ಮುಂಚೆ ಮುಂಬೈ ನೋಡಿದ್ದವನು ನಾನೊಬ್ಬನೇ.  ಬರುವ ಮುಂಚೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡೇ ಬಂದಿದ್ದೆವು.  ಟ್ರೈನ್ ಸರಿಯಾಗಿ ರಾತ್ರಿ ೮ ಘಂಟೆಗೆ ದಾದರ್ ಸ್ಟೇಷನ್ನಿಗೆ ಬಂದು ಸೇರಿತ್ತು.  ಇಳಿದ ಕೂಡಲೇ ಟ್ಯಾಕ್ಸಿ ಮಾಡಿಕೊಂಡು ನಾವು ಉಳಿದುಕೊಳ್ಳುವ ಕಡೆ ಹೊರಟೆವು.  ನಮ್ಮೆಲ್ಲರಲ್ಲಿ ನನಗೊಬ್ಬನಿಗೇ ಅಲ್ಪ ಸ್ವಲ್ಪ ಹಿಂದಿ ಬರುತ್ತಿದ್ದದ್ದು.  ಟ್ಯಾಕ್ಸಿಯವನಿಗೆ ಸರಿಯಾಗಿ ಎಲ್ಲಿಗೆ ಹೋಗಬೇಕೆಂದು ತಿಳಿಸಿದದ್ದರೆ ಮೋಸ ಮಾಡಿಯಾನು ಎಂದುಕೊಂಡು, ಹೇಳಬೇಕಿದ್ದ ಸೂಚನೆಗಳನ್ನು ಒಂದು ಚೀಟಿಯಲ್ಲಿ ಬರೆದಿಟ್ಟುಕೊಂಡಿದ್ದೆ.  ಟ್ಯಾಕ್ಸಿಯವನು ಮೋಸ ಮಾಡದೆಯೇ ಸರಿಯಾದ ಜಾಗ ತಲುಪಿಸಿದ್ದನು.  ಅಂದು ರಾತ್ರಿ ಆ ಜಾಗದಲ್ಲಿ ಉಳಿದಿದ್ದು ಮಾರನೆಯ ದಿನ ಬ್ಯಾಂಕಿಗೆ ಹೋಗಿ ರಿಪೋರ್ಟ್ ಮಾಡಿಕೊಂಡಿದ್ದೆವು.  ತಕ್ಷಣ ನಮ್ಮಗಳಿಗೆ ಫ್ಲಾಟ್ ಕೊಟ್ಟಿದ್ದರು.  ಅದು ಇದ್ದದ್ದು ೩೫ ಕಿಲೋಮೀಟರ್ ದೂರದ ಮಲಾಡ್‍ನಲ್ಲಿ.  ಅಂದು ಅಲಾಟ್ಮೆಂಟ್ ಲೆಟರ್ ತೆಗೆದುಕೊಂಡು ಸಂಜೆಗೆ ಕ್ವಾರ್ಟರ್ಸಿಗೆ ಹೋಗಿದ್ದೆವು.  ಅಲ್ಲಿ ಫ್ಲಾಟ್‍ನ ಬೀಗದ ಕೈ ಕೊಡಲು ಕೇರ್ ಟೇಕರ್ ಇರಲಿಲ್ಲ.  ಮರುದಿನದ ಬೆಳಗ್ಗೆ ಬರುವನೆಂದು ತಿಳಿಯಿತು.   ಅಂದು ರಾತ್ರಿ ಉಳಿಯಲು, ಅಲ್ಲಿಯೇ ಇದ್ದ ನಮ್ಮ ಬೆಂಗಳೂರಿನ ಒಬ್ಬ ಸ್ನೇಹಿತನ ಮನೆಗೆ ಹೋದೆವು.  ಬಾಗಿಲ ಕರೆಗಂಟೆ ಒತ್ತಿದಾಕ್ಷಣ ಬಾಗಿಲಕಿಂಡಿಯಿಂದ ಯಾರೋ ಇಣುಕಿ ನೋಡಿ, ಎರಡು ನಿಮಿಷಗಳ ತರುವಾಯ ಅವರಿಲ್ಲ, ನಾಳೆ ಬನ್ನಿ ಎಂದಿದ್ದರು.  ನಮ್ಮ ಸ್ನೇಹಿತ ಒಳಗೇ ಇದ್ದು ಇಲ್ಲ ಎಂದು ಹೇಳಿದ್ದುದು ಕಿವಿಗೆ ಬಿದ್ದು ನಮಗೆ ಬಹಳ ಬೇಸರ ತಂದಿತ್ತು.  ಹತ್ತಿರದಲ್ಲೇ ಯಾವುದಾದರೂ ಒಂದು ಹೊಟೆಲ್ ಇದ್ದರೆ ಅಲ್ಲೇ ಉಳಿದರಾಯ್ತೆಂದು ಹೊರಟೇವು. 

 

ಅಷ್ಟು ಹೊತ್ತಿಗೆ ಒಬ್ಬ ಹಿರಿಯರು ಬಂದು, ನಾವು ಎಲ್ಲಿಂದ ಬಂದಿದ್ದೇವೆ, ಏನು ಬೆಕಾಗಿತ್ತು ಎಂದು ಕೇಳಿದರು.  ನಮ್ಮಗಳ ಪರಿಚಯ ಮಾಡಿಕೊಟ್ಟೆವು.  ಅವರು ತಾವು ಅಬ್ದುಲ್ ಸಲೀಂ ಎಂದೂ, ಆ ಕ್ವಾರ್ಟರ್ಸಿನ ಸೆಕ್ರೆಟರಿಯೆಂದೂ ತಿಳಿಸಿ, ನಾವುಗಳು ಬೇರೆಯಲ್ಲಿಯೂ ಹೋಗಕೂಡದೆಂದೂ, ಅಲ್ಲಿಯೇ ಇದ್ದ ಕಮ್ಯುನಿಟಿ ಹಾಲ್‍ನಲ್ಲಿ ನಾವು ಇರಲು ಏರ್ಪಾಡು ಮಾಡಿಕೊಡುವೆನೆಂದಿದ್ದರು.  ಯಾವ ಜನ್ಮದಲ್ಲಿ ಅವರು ನಮ್ಮ ಬಂಧುವಾಗಿದ್ದರೋ ಏನೋ?    ನಾವು ನಾಲ್ವರೂ ಕಮ್ಯುನಿಟಿ ಹಾಲ್‍ಗೆ ಹೋಗುವಷ್ಟರಲ್ಲಿ ಅಬ್ದುಲ್ ಸಲೀಂ ಅವರು ಮತ್ತೆ ಬಂದು ಇಬ್ಬರು ಮೂವರು  ಬ್ರಹ್ಮಚಾರಿಗಳು ಇರುವರೆಂದು ನಾವು ಇಷ್ಟ ಪಟ್ಟರೆ ಅಂದಿನ ರಾತ್ರಿ ಅಲ್ಲಿಯೇ ಉಳಿಯಬಹುದೆಂದರು.  ಹಾಗೆಯೇ ಮರುದಿನ ನಮ್ಮ ಫ್ಲಾಟ್‍ಗಳನ್ನು ಸ್ವಚ್ಛಗೊಳಿಸಲೂ ಅನುಕೂಲಮಾಡಿಕೊಟ್ಟಿದ್ದರು.   ಅಂತಹವರ ಸಂತತಿ ಇನ್ನೂ ಹೆಚ್ಚಿದರೆ ನಮ್ಮ ಸಮಾಜ ಉನ್ನತಿಯಾಗುವುದರಲ್ಲಿ ಸಂಶಯವೇ ಇಲ್ಲ. 

 

ಮೊದಲ ದಿನ ಬ್ಯಾಂಕಿನ ಲೌಂಜ್‍ಗೆ ಊಟಕ್ಕೆಂದು ಹೋಗಿದ್ದೆವು.  ಅಲ್ಲಿಯವರೆವಿಗೆ ಕ್ಯಾಂಟೀನಿನಲ್ಲಿ ಊಟ ಮಾಡಿದ್ದ ನಮ್ಮಗಳಿಗೆ ಅಧಿಕಾರಿ ಊಟದ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದು ತಿಳಿದಿರಲಿಲ್ಲ.  ಮೊದಲ ಬಾರಿ ಊಟಕ್ಕೆ ಕುಳಿತಾಗ ಅಲ್ಲಿದ್ದ ಸರಬರಾಜು ಮಾಡುವವರಿಗೆ ನಾವು ಹೊಸಬರೆಂದು ಗೊತ್ತಾಗಿತ್ತು.  ನಾನು ನನ್ನ ಬಲಭಾಗದಲ್ಲಿಟ್ಟಿದ್ದ ನೀರಿನ ಗ್ಲಾಸನ್ನು ತೆಗೆದುಕೊಂಡು ಕುಡಿದಾಗ, ಒಬ್ಬ ನನ್ನನ್ನು ದುರುಗುಟ್ಟಿಕೊಂಡು ನೋಡಿ ಮರಾಠಿಯಲ್ಲಿ ಏನೋ ಹೇಳಿದನು.  ಅದೇನೆಂದು ನನಗರ್ಥವಾಗಿರಲಿಲ್ಲ.  ಪಕ್ಕದಲ್ಲೇ ಕುಳಿತಿದ್ದ ಇನ್ನೊಬ್ಬ ಅಧಿಕಾರಿಗಳು ಅವನಿಗೆ ನಾವು ಹೊಸಬರೆಂದು ಸಮಜಾಯಿಷಿ ಹೇಳಿದ್ದರು.  ನಂತರ ಅವರಿಂದ ತಿಳಿದದ್ದೇನೆಂದರೆ ನಮ್ಮ ಎಡಭಾಗದಲ್ಲಿಟ್ಟಿರುವ ನೀರನ್ನು ಮಾತ್ರ ನಾವು ಕುಡಿಯಬೇಕಂತೆ.  ಅಂದೇ ಕೊನೆಯಾಯಿತು, ನಾನು ಮುಂದೆ ಊಟಕ್ಕಾಗಿ ಲೌಂಜಿಗೆ ಹೋಗುವುದನ್ನೇ ಕಡಿಮೆ ಮಾಡಿದೆ.  ಹೊಸದಾಗಿ ಹೊಸ ಜಾಗಕ್ಕೆ ಹೋದಾಗ ನಮ್ಮ ಗಲಿಬಿಲಿಯನ್ನು ನೋಡಿ ತಮಾಷೆ ಮಾಡಿ ಸಂತೋಷಿಸುವವರೇ ಹೆಚ್ಚಲ್ಲವೇ?

 

ಮರುದಿನ ನಮ್ಮ ನಮ್ಮ ಫ್ಲಾಟ್‍ಗಳನ್ನು ನಮ್ಮ ಸುಪರ್ದಿಗೆ ತೆಗೆದುಕೊಂಡು, ಬೆಂಗಳೂರಿನಿಂದ ನಮ್ಮ ಸಾಮಾನು ಸರಂಜಾಮುಗಳೆಲ್ಲವನ್ನೂ ತಂದುಕೊಂಡಿದ್ದೆವು.   ದತ್ತಾತ್ರೇಯ ಆಗಿನ್ನೂ ಮದುವೆಯಾಗಿರಲಿಲ್ಲ.  ಕೊಡಿಯಾಲಮಠ ಮತ್ತು ಮಹದೇವಸ್ವಾಮಿಯರು ಮದುವೆ ಆಗಿದ್ದರು.  ಕುಟುಂಬವನ್ನು ಮಾತ್ರ ಕರೆತಂದಿರಲಿಲ್ಲ.  ಪ್ರತಿ ಶನಿವಾರ ಭಾನುವಾರಗಳಂದು ಮುಂಬೈನ ಎಲ್ಲ ಜಾಗಗಳನ್ನೂ ಕಾಲ್ನಡಿಗೆಯಲ್ಲಿ ಸುತ್ತುತ್ತಿದ್ದೆವು. 

 

ಒಂದೇ ತಿಂಗಳಿನಲ್ಲಿ ನಮ್ಮನ್ನು ಪ್ರಪ್ರಥಮವಾದ ಟ್ರೈನಿಂಗ್‍ಗಾಗಿ ಚೆನ್ನೈಗೆ ಕಳುಹಿಸಿದ್ದರು.  ಅದೇ ಸಮಯದಲ್ಲಿ ನನ್ನ ಮಗಳು (೧೯೮೯ರ ನವಂಬರ್ ೧೯ನೇ ತಾರೀಖು) ಹುಟ್ಟಿದ್ದುದು.  ಜನವರಿಯ ಮೊದಲ ವಾರದಲ್ಲಿ ಮತ್ತೆ ಮುಂಬೈಗೆ ವಾಪಸ್ಸಾಗಿದ್ದೆವು.  ನಾನು ಮತ್ತು ದತ್ತಾತ್ರೇಯ ಇಬ್ಬರೂ ಒಟ್ಟಿಗೇ ಅಡುಗೆ ಮಾಡಿಕೊಳ್ಳುತ್ತಿದ್ದೆವು. 

 

ಚೆನ್ನೈ‍ನಲ್ಲಿ ೮ ವಾರಗಳ ಟ್ರೈನಿಂಗ್ ಇದ್ದಿತ್ತು.  ನಾವೆಲ್ಲರೂ ಈ ಮೊದಲೇ ಚೆನ್ನೈ ನೋಡಿದ್ದುದರಿಂದ ಏನೂ ತೊಂದರೆ ಆಗಿರಲಿಲ್ಲ. 

 

******

 

ಮುಂಬೈನಲ್ಲಿ ನನಗೆ ಸಿಕ್ಕಿದ್ದ ಇನ್ನೊಬ್ಬ ಸ್ನೇಹಿತನೆಂದರೆ ಬಂಗಾಳಿ ಶಂಕರನಾಥ ಮಿತ್ರ.  ಅವನು ವಯಸ್ಸಿನಲ್ಲಿ ನನಗಿಂತಾ ೭-೮ ವರುಷಗಳಷ್ಟು ದೊಡ್ಡವನು.  ನನ್ನೊಂದಿಗೇ ಆಫೀಸರಾಗಿ ಕೊಲ್ಕತ್ತೆಯಿಂದ ಮುಂಬೈಗೆ ಬಂದಿದ್ದನು.  ನಮ್ಮದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು.   ಇನ್ನೂ ಮದುವೆಯಾಗಿರದ ಮಿತ್ರನಿಗೆ ಹೊಟ್ಟೆಯಲ್ಲಿ ಏನೋ ತೊಂದರೆ ಇತ್ತಂತೆ.   ಅದು ಗುಣವಾಗುವುದಿಲ್ಲವೆಂದು ಅವನು ಮದುವೆ ಆಗೋದಿಲ್ಲವೆಂದು ತೀರ್ಮಾನಿಸಿದ್ದನು.  ಕೃಶಕಾಯ ಮಿತ್ರ ಪ್ರತಿದಿನ ಒಮ್ಮೆ ಮಾತ್ರ ಊಟ ಮಾಡುತ್ತಿದ್ದನು.  ಅದೂ ಸಪ್ಪೆ ಊಟ.  ರಾತ್ರಿಯ ಹೊತ್ತು ಒಂದು ಲೋಟ ಹಾಲು ಕುಡಿದು ಒಂದು ಬಾಳೆಹಣ್ಣು ಮಾತ್ರ ಸೇವಿಸುತ್ತಿದ್ದ.   ಪ್ರತಿ ದಿನ ಸಂಜೆ ನಾವಿಬ್ಬರೂ ಒಟ್ಟಿಗೇ ಮನೆಗೆ ಹೋಗುತ್ತಿದ್ದೆವು.  ಆಗ ಚರ್ಚ್‍ಗೇಟ್ ಸ್ಟೇಷನ್ನಿನಲ್ಲಿ ಅವನು ಆನಂದ್ ಬಜಾರ್ ಪತ್ರಿಕೆಯನ್ನು ಕೊಳ್ಳುತ್ತಿದ್ದ.  ನನಗು ಬಂಗಾಳೀ ಭಾಷೆಯನ್ನು ಓದಲು ಕಲಿಸಿದ್ದ.  ದೇವನಾಗರೀ ಅಕ್ಷರಗಳನ್ನು ಬಲ್ಲವರು ಬಂಗ್ಲಾವನ್ನು ಕಲಿಯುವುದು ಬಹಳ ಸುಲಭ.

 

ಒಂದು ಭಾನುವಾರ ಅವನು ಬೀಚಿಗೆ ಹೋಗೋಣವೆಂದನು.  ಅವನಿಗೆ ಮುಂಬೈನಲ್ಲಿ ಎಲ್ಲಿ ಹೇಗೆ ಹೋಗಬೆಕೆಂಬುದು ತಿಳಿದಿರಲಿಲ್ಲ.  ನಡೆದು ಹೋದರೆ ಊರು ಚೆನ್ನಾಗಿ ನೋಡಬಹುದೆಂದು ನಾನು ತಿಳಿಸಿದುದಕ್ಕೆ ಒಪ್ಪಿದ್ದನು.  ಮೊದಲು ನಾವು ಬೆಳಗಿನ ಟ್ರೈನಿನಲ್ಲಿ ಮಲಾಡದಿಂದ ಚರ್ಚ್‍ಗೇಟಿಗೆ ಹೋಗಿ ಅಲ್ಲಿಯ ನಾರಿಮನ್ ಪಾಯಿಂಟಿಗೆ ನಡೆದು ಹೋಗಿದ್ದೆವು.  ಅಲ್ಲಿಂದ ಕಾಲ್ನಡಿಗೆಯಲ್ಲಿ ಮರೀನ್ ಡ್ರೈವ್ ಮುಖೇನ ಚೌಪಾಟಿ ತಲುಪಿದ್ದೆವು.  ಅಲ್ಲಿ ಸ್ವಲ್ಪ ಹೊತ್ತು ಇದ್ದು, ನಂತರ ಹ್ಯಾಂಗಿಂಗ್ ಗಾರ್ಡನ್ ನೋಡಿಕೊಂಡು ಮುಂದೆ ಹತ್ತಿರದ ಗ್ರಾಂಟ್ ರೋಡ್ ಸ್ಟೇಷನ್ನಿಗೆಂದು ಹೊರಟೆವು.  ಇಲ್ಲಿ ರಸ್ತೆಗಳು ಯಾವುದು ಎಲ್ಲಿಗೆ ತಲುಪಿಸುತ್ತವೆ ಎಂಬುದು ಚೆನ್ನಾಗಿ ತಿಳಿದಿರಬೇಕು.  ಇಲ್ಲದಿದ್ದರೆ ನಾವು ಸೇರಬೇಕಿದ್ದ ಸ್ಥಳ ಸೇರದೇ ಇನ್ನೆಲ್ಲೋ ಹೋಗಿಬಿಡುವೆವು.  ಗ್ರಾಂಟ್ ರೋಡ್ ಸ್ಟೇಷನ್ನಿಗೆ ಹೋಗುವ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಹೋದ ನಾವುಗಳು ಮಹಾಲಕ್ಷ್ಮಿ ದೇವಸ್ಥಾನವನ್ನು ತಲುಪಿದ್ದೆವು.  ಯಾರನ್ನಾದರೂ ಕೇಳೋಣವೆಂದರೆ ಹಾಳು ಸ್ವಾಭಿಮಾನ ಮಧ್ಯೆ ಬರುತ್ತಿತ್ತು.  ನಾನು ಎಲ್ಲರಿಗೂ, ನನಗೆ  ಮುಂಬೈ ಚೆನ್ನಾಗಿ ಗೊತ್ತು ಎಂದು ಹೇಳಿಕೊಳ್ಳುತ್ತಿದ್ದೆ.  ಅದು ಸುಳ್ಳು ಎಂಬುದು ಈಗ ಅರ್ಥವಾಗುತ್ತಿತ್ತು.  ಪಾಪದ ಶಂಕರಮಿತ್ರ ಎಲ್ಲವನ್ನೂ ಸಹಿಸಿಕೊಂಡು ನನ್ನೊಡನೆ ಬರುತ್ತಿದ್ದ.  ಅದೂ ಅಲ್ಲದೇ ಇಬ್ಬರಿಗೂ ನಡಿಗೆ ಅಭ್ಯಾಸವಾಗಿತ್ತು.  ಆದ್ದರಿಂದ ನಡೆದು ಹೋಗುವುದು ಆಗೇನು ಕಷ್ಟವೆನಿಸಿರಲಿಲ್ಲ.

 

ಮಹಾಲಕ್ಷ್ಮಿ ದೇವಸ್ಥಾನದಿಂದ ನೇರ ರಸ್ತೆಯಲ್ಲಿ ಸ್ಟೇಷನ್ನಿಗೆ ಬರಬೇಕು.  ಅದರ ಬದಲಿಗೆ ಬಲಭಾಗದ ರಸ್ತೆಯಲ್ಲಿ ನಾವು ಸಾಗಿದೆವು.  ಪ್ಲಾನೆಟೇರಿಯಂ, ವೊರ್ಲಿ ಮೂಲಕ ಸಿದ್ಧಿವಿನಾಯಕ ದೇವಸ್ಥಾನ ತಲುಪಿದ್ದೆವು.  ಅಲ್ಲಿಯ ಗಣಪತಿ ದರ್ಶನ ಮಾಡಿಕೊಂಡು ನಂತರ ಹಾಗೆಯೇ ಮುಂದೆ ನಡೆದುಕೊಂಡು ದಾದರಿನ ಬೀಚನ್ನು ತಲುಪಿದ್ದೆವು.  ಅಲ್ಲಿ ಸ್ವಲ್ಪ ಹೊತ್ತು ಸುತ್ತಾಡಿ, ಜುಹು ಬೀಚಿನವರೆವಿಗೂ ನಡೆದೇ ಹೋಗಿದ್ದೆವು.  ಅಷ್ಟು ಹೊತ್ತಿಗೆ ನನ್ನ ಸ್ನೇಹಿತನ ಪಾಡಿ ಹೇಳ ತೀರದಾಗಿತ್ತು.  ಕಾಲೆತ್ತಿಡಲೂ ಅಶಕ್ಯನಾಗಿದ್ದ.  ಇನ್ನು ಮುಂದೆ ನಡೆಯುವುದು ಬೇಡ ಟ್ಯಾಕ್ಸಿ ಸಿಕ್ಕರೆ ಮನೆಗೆ ಹೋಗೋಣವೆಂದಿದ್ದ.  ನಾನಿನ್ನೂ ನಡೆಯಲು ತಯಾರಾಗಿದ್ದೆ.  ಅವನ ಒತ್ತಾಯದ ಮೇರೆಗೆ ಹತ್ತಿರದಲ್ಲೇ ಇದ್ದ ಒಂದು ಬಸ್ಸನ್ನು ಹಿಡಿದು ಮಲಾಡಿಗೆ ಹೋಗಿ ಸೇರಿದ್ದೆವು.

 

ಮಾರನೆಯ ದಿನ ಬ್ಯಾಂಕಿಗೆ ಅವನು ಬರಲೇ ಇಲ್ಲ.  ಕಾಲು ನೋವಿದೆಯೆಂದು ರಜೆ ಹಾಕಿದ್ದ.  ಅಂದೇ ಕಡೆಯಾಯಿತು.  ನಾನು ಅವನನ್ನು ಎಲ್ಲಿಗಾದರೂ ಕರೆದರೆ, ನಿನ್ನ ಜೊತೆ ಮಾತ್ರ ಬರಲೊಲ್ಲೆ ಎನ್ನುತ್ತಿದ್ದ.  ಅವನ ಕನಸಿನಲ್ಲೂ ನಾನು ಕಾಡಿದ್ದೆನೋ ಏನೋ?

ವಿಭಾಗಗಳು
ಲೇಖನಗಳು

ರಜತೋತ್ಸವ – ಭಾಗ 6

ನನ್ನ ತಾಯಿ ದತ್ತಾತ್ರೇಯ ಸ್ವಾಮಿಯ ಭಕ್ತೆ.  ಸ್ವಾತಂತ್ರ್ಯ ಸೇನಾನಿಯಾಗಿದ್ದ ನನ್ನ ತಂದೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಪಿಂಚಣಿ ಬರುತ್ತಿತ್ತು.  ಅದಲ್ಲದೇ ಅವರಿಗೆ ಟ್ರೈನಿನಲ್ಲಿ ಎಲ್ಲಿಗೆ ಬೇಕಾದರೂ ಓಡಾಡಲು ಮೊದಲ ದರ್ಜೆಯ ಪಾಸನ್ನು ಕೂಡ ನೀಡಿದ್ದರು.  ಈ ಸೌಲಭ್ಯವನ್ನು ಅವರು ಬಳಸಿದ್ದು ಬಹಳ ಬಹಳ ಕಡಿಮೆ.   ಆಗಾಗ್ಯೆ ನನ್ನ ತಂದೆ ತಾಯಿಯರು ಗುಲ್ಬರ್ಗಾ ಜಿಲ್ಲೆಯಲ್ಲಿರುವ ಗಾಣಗಾಪುರಕ್ಕೆ ಹೋಗಿ ದತ್ತಾತ್ರೇಯ ಸ್ವಾಮಿಯ ಸೇವೆಯನ್ನು ಮಾಡಿ ಬರುತ್ತಿದ್ದರು. 

Temple entrance

೧೯೮೫ರ ಡಿಸೆಂಬರ್ ತಿಂಗಳಲ್ಲಿ ಬಹಳ ವಿಜೃಂಭಣೆಯಿಂದ ದತ್ತ ಜಯಂತಿ ಮಹೋತ್ಸವವನ್ನು ನಮ್ಮ ಮನೆಯಲ್ಲಿ ಆಚರಿಸಿದ್ದೆವು.   ನನ್ನಮ್ಮ ಮಾಡುತ್ತಿದ್ದ ದತ್ತ ಜಯಂತಿ ವೈಖರಿ ನೋಡಿ.  ಅದರ ಫಲವೇ ಇರಬೇಕು, ನಾವುಗಳು ಒಂದು ಒಳ್ಳೆಯ ಸ್ಥಿತಿಗೆ ಬಂದಿರುವುದು.  ಮಾರ್ಗಶೀರ್ಷ ಮಾಸದ ಹುಣ್ಣಿಮೆಯ ದಿನ ದತ್ತ ಜಯಂತಿ.   ಅದಕ್ಕೆ ಹತ್ತು ದಿನಗಳ ಮೊದಲು ವ್ರತದ ಆಚರಣೆ ಪ್ರಾರಂಭವಾಗುವುದು.  ಈ ಸಮಯದಲ್ಲಿ ’ಗುರುಚರಿತ್ರೆ’ ಎಂಬ ಗ್ರಂಥದ ಪಾರಾಯಣೆ ಮಾಡುವರು.  ದಿನಕ್ಕೆ ಇಂತಿಷ್ಟೇ ಅಧ್ಯಾಯವನ್ನು ಓದಬೇಕೆಂಬ ನಿಯಮವಿದೆ.  ದಿನ ಪೂರ್ತಿ ಏನನ್ನೂ ತಿನ್ನಬಾರದು.  ಪಾರಾಯಣೆ ಮತ್ತು ದೇವರ ನಾಮ ಸ್ಮರಣೆ ಮಾಡುತ್ತಿರಬೇಕು (ಓಂ ದ್ರಾಂ ಮೋಂ ಗುರು ದತ್ತಾಯ ನಮ:).  ರಾತ್ರಿ ಎರಡು ಬಾಳೆಹಣ್ಣು ಮತ್ತು ಒಂದು ಲೋಟ ಹಾಲು ತೆಗೆದುಕೊಳ್ಳಬಹುದಷ್ಟೆ.  ಮಲಗಲು ಹಾಸುಗೆ ಬಳಸಬಾರದು.  ಅದರ ಬದಲಿಗೆ ಚಾಪೆಯ ಮೇಲೆ ಮಲಗಬೇಕು.  ಹತ್ತನೆಯ ದಿನ ಪಾರಾಯಣ ಮಾಡಿ ನೆಂಟರಿಷ್ಟರಿಗೆ ಮತ್ತು ಬಡವರಿಗೆ ಅನ್ನ ಸಂತರ್ಪಣೆಯನ್ನು ಮಾಡಬೇಕು. 

aShvattha vRukSha

ಆ ವರುಷದಲ್ಲಿ ಬೆಂಗಳೂರಿನಿಂದ ನಾನು ತುಂಬಾ ತರಕಾರಿ ಮತ್ತು ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದೆ.  ಅವುಗಳನ್ನು ನೋಡಿಯೇ ನನ್ನಮ್ಮನಿಗೆ ಬಹಳ ಸಂತೋಷವಾಗಿತ್ತು.  ನಮ್ಮೂರಿನಲ್ಲಿ ಎಲ್ಲ ಬಗೆಯ ತರಕಾರಿಗಳು ಮತ್ತು ಹಣ್ಣುಗಳು ಸಿಗುವುದಿಲ್ಲ.  ನಾನು ಬ್ಯಾಂಕಿಗೆ ಸೇರಿದ ಮೇಲೆ ಮೊದಲ ಬಾರಿಗೆ ಈ ಸಲದ ದತ್ತ ಜಯಂತಿಗೆ ನಾನು ಹೋಗುತ್ತಿದ್ದುದು.  ವ್ರತ ೮ನೆಯ ದಿನ ರಾತ್ರಿ ನಾನು ಊರು ತಲುಪಿದ್ದೆ.  ೯ನೇ ದಿನದ ರಾತ್ರಿ ಪೂರ್ತಿ ಭಜನೆ ಮಾಡುತ್ತಾ ಜಾಗರಣೆ ಮಾಡಬೇಕು.  ನಿಕಟ ಸಂಬಂಧಿಗಳೆಲ್ಲರೂ ಈ ಭಜನೆಯಲ್ಲಿ ಪಾಲ್ಗೊಳ್ಳಲು ಸೇರಿದ್ದರು.  ಹೆಚ್ಚಿನ ಭಜನೆಗಳು ಇರುವುದು ಮರಾಠಿಯಲ್ಲಿ.  ಆಗ ನನಗೆ ಮರಾಠಿ ಸರಿಯಾಗಿ ಅರ್ಥವಾಗುತ್ತಿರಲಿಲ್ಲ.  ನನ್ನ ಅಜ್ಜಿಯೂ ಇದಕ್ಕೆ ಬಂದಿದ್ದರು.  ಅವರಿಗೆ ಮರಾಠಿ ಸ್ವಲ್ಪ ಗೊತ್ತಿದ್ದರಿಂದ, ನಮಗೆಲ್ಲ ಅದರರ್ಥ ತಿಳಿಸಿಕೊಟ್ಟು ಭಜನೆ ಮಾಡಿಸುತ್ತಿದ್ದರು.  ಇದೊಂದು ಅಪೂರ್ವ ಅನುಭವ.  ರಾತ್ರಿ ೧ ಘಂಟೆ ಆಗುವ ವೇಳೆಗ ಎಲ್ಲರಿಗೂ ಕಣ್ಣು ಎಳೆಯುತ್ತಿತ್ತು.  ಕೂತಲ್ಲಿಯೇ ಹಾಗೇ ಕಣ್ಮುಚ್ಚಿ ನಿದ್ರಿಸುತ್ತಿದ್ದರು.  ನನ್ನ ತಾಯಿ ಮಾತ್ರ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದರು.  ನನಗೂ ನಿದ್ರೆ ಬರುವಂತಾದಾಗ, ಬೆಳಗಿನ ಸಂತರ್ಪಣೆಯ ಅಡುಗೆಗೆ ಬೇಕಿದ್ದ ತರಕಾರಿಗಳನ್ನು ಬಿಡಿಸಿ (ಅಡುಗೆಯನ್ನು ನಾವುಗಳೇ ಮಾಡಿದ್ದು), ಹೆಚ್ಚಲು ತಿಳಿಸಿದರು.  ಹಾಗಾಗಿ ಭಜನೆಯೂ ಸಾಂಗವಾಗಿ ಮಾಡಿದೆ ಮತ್ತು ಜಾಗರಣೆಯನ್ನೂ ಮಾಡಿದ್ದೆ. 

svaami’s paaduke

ಅದಾದ ಸ್ವಲ್ಪ ದಿನಗಳಿಗೆ ಮತ್ತೆ ರೆಮಿಟೆನ್ಸ್ ಡ್ಯೂಟಿಯ ಮೇಲೆ ಗುಲ್ಬರ್ಗ ಜಿಲ್ಲೆಯ ಆಲಂದಕ್ಕೆ ಹೋಗಬೇಕಾಗಿತ್ತು.  ಈ ಹಿಂದೆ ಹೋಗಿದ್ದವರು ಆಲಂದದಲ್ಲಿ ಹೊಟೆಲ್‍ಗಳು ಇಲ್ಲವೆಂದೂ ಉಳಿದುಕೊಳ್ಳಲು ಗುಲ್ಬರ್ಗಾದಲ್ಲೇ ವ್ಯವಸ್ಥೆ ಮಾಡಿಕೊಳ್ಳಬೇಕೆಂದೂ ಹೇಳಿದ್ದರು.  ಗುಲ್ಬರ್ಗಾದಲ್ಲಿ ಉಳಿದುಕೊಂಡು ದಿನವೂ ಆಲಂದಕ್ಕೆ ಹೋಗುತ್ತಿದ್ದೆ.  ಗುರುಮಠಕಲ್ಲಿನಂತೆಯೇ ಇಲ್ಲಿಯೂ ರಸ್ತೆ ಬಹಳ ದುಸ್ತರವಾಗಿದೆ.  ೪೫ – ೫೦ ಕಿಲೋಮೀಟರ್ ಗಳ ಪ್ರಯಾಣಕ್ಕೆ ತೆಗೆದುಕೊಳ್ಳುವ ಸಮಯ ೩ ಘಂಟೆಗಳು.  ಊಟಕ್ಕೂ ಕೂಡಾ ಅಲ್ಲಿ ಒಂದು ಸರಿಯಾದ ಹೊಟೆಲ್ ಇಲ್ಲ.  ಅಲ್ಲಿನ ಜನರಾಡುವ ಭಾಷೆಯಲ್ಲಿ ಉರ್ದು ಮತ್ತು ಮರಾಠಿ ಪ್ರಭಾವ ಜಾಸ್ತಿ.  ಇದರ ಬಗ್ಗೆ ನನ್ನದೊಂದು ಅನುಭವವನ್ನು ಹೇಳುವೆ.  ಒಮ್ಮೆ ಆಲಂದದ ಬಸ್ ನಿಲ್ದಾಣದಲ್ಲಿ ನಿಂತಿದ್ದೆ.  ಆಗ ಒಬ್ಬಾತ ಬಂದು ಸಮಯವೆಷ್ಟು ಎಂದು ಕೇಳಿದ (ವೇಳೆ ಏಷ್ಟಾತ್ರೀ ಸಾಯಬ್ರ).  ನಾನು ಗಡಿಯಾರ ನೋಡಿಕೊಂಡು ಒಂದೂವರೆ ಎಂದಿದ್ದೆ.  ಅದಕ್ಕವನು – ಸರಿಯಾ ಬೋಲ್ರೀ ಅರ್ಥ ಆಗೂದಿಲ್ಲ ಎಂದಿದ್ದ.  ಮತ್ತೆ ಒಂದೂವರೆ ಎಂದು ಗಡಿಯಾರವನ್ನು ಅವನ ಮುಖದ ಮುಂದೆ ಹಿಡಿದಿದ್ದೆ.  ಅದಕ್ಕವನ ಪ್ರತಿಕ್ರಿಯೆ – ದೀಡ್ ಬೋಲ್ರೀ.  ಇದೆಂಥಾ ಸೀಮೀ ಕನ್ನಡ ಮಾತಾಡ್ತೀರ್ರೀ ಎನ್ನೋದೇ. 

ಸ್ವಲ್ಪವೇ ದಿನ್ಗಳಲ್ಲಿ (ಒಂದು ವಾರದಲ್ಲಿ) ನನ್ನ ಕೆಲಸ ಮುಗಿಸಿಕೊಂಡು ವಾಪಸ್ಸು ಬೆಂಗಳೂರಿಗೆ ಬಂದಿದ್ದೆ.  ಗುಲ್ಬರ್ಗಾದಲ್ಲಿದ್ದಾಗ ಅಲ್ಲಿಯ ಸೂಫೀ ಸಂತ ಖ್ವಾಝಾ ಬಂದೇ ನವಾಬರ ದರ್ಗಾ ನೋಡಲು ಮಾತ್ರ ಯಾರೂ ಮರೆಯಬಾರದು.  ಜಾತಿ ಮತ ಭೇದಗಳಿಲ್ಲದೇ ಎಲ್ಲರೂ ಹೋಗಿ ಬರುವ ಸ್ಥಳ ಇದು.  ಹಾಗೆಯೇ ಶರಣ ಬಸವೇಶ್ವರರ ದೇವಾಲಯವೂ ಅತಿಪ್ರಸಿದ್ಧ.  ಈಗೀಗ ಗುಲ್ಬರ್ಗ (ಕಲ್ಬುರ್ಗಿ) ವಿದ್ಯಾಕ್ಷೇತ್ರವಾಗಿಯೂ ಹೆಸರು ಮಾಡುತ್ತಿದೆ. 

ಹಾಗೆಯೇ ಅಲ್ಲಿಂದ ೨ ಘಂಟೆಗಳ ಪ್ರಯಾಣ ಮಾಡಿದರೆ ಗಾಣಗಾಪುರ ಶ್ರೀಕ್ಷೇತ್ರ ಸಿಗುವುದು.  ಅಲ್ಲಿ ಮರಾಠಿ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಬರುವರು.  ಸಂಗಮದಲ್ಲಿ ಸ್ನಾನ ಮಾಡಿ ದತ್ತಾತ್ರೇಯ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡುವುದು ರೂಢಿ.   ಭೂತೋಚ್ಛಾಟನೆಗೆ ಬರುವವರು ಬಹಳ ಮಂದಿ.  ದೇಗುಲದ ಅಲ್ಲಲ್ಲಿ ರುದ್ರಾಭಿಷೇಕವನ್ನೂ, ಸತ್ಯನಾರಾಯಣ ಪೂಜೆಯನ್ನೂ ಮಾಡಿಸುತ್ತಿರುತ್ತಾರೆ.   ಊಟಕ್ಕೆ ಮಾತ್ರ ಇಲ್ಲಿ ತೊಂದರೆ ಇಲ್ಲ.  ನೆಂಟರಿಷ್ಟರಂತೆ ತಮ್ಮ ಮನೆಗಳಿಗೆ ಬಂದು ಊಟ ಮಾಡಿ ಹೋಗಲು ಕೇಳಿಕೊಳ್ಳುತ್ತಿರುತ್ತಾರೆ.  ಹಣ ಇಷ್ಟೇ ಕೊಡಿ ಎಂದು ಕೇಳುವುದಿಲ್ಲ.  (ಈಗ ಹಾಗಿದೆಯೋ ಇಲ್ಲವೋ ತಿಳಿಯದು).  ಒಳ್ಳೆಯ ಬಿಸಿ ಬಿಸಿ ಭಕ್ಕರಿಯನ್ನೂ, ಜೊತೆಗೆ ಪಲ್ಯವನ್ನೂ ಮತ್ತು ಅನ್ನ ಮೊಸರನ್ನೂ ನೀಡುವರು.  ಹೊಟೆಲ್‍ನಂತೆ ಅನ್ನಿಸುವುದೇ ಇಲ್ಲ.  ಮನೆಯೊಳಗೇ ಕುಳಿತು ಊಟ ಮಾಡಿ ಬರಬಹುದು. 

ಅದಾದ ಕೆಲವು ತಿಂಗಳುಗಳಿಗೆ ಇನ್ನೊಂದು ಒಳ್ಳೆಯ ಸ್ಥಳಕ್ಕೆ ಹೋಗಿದ್ದೆ.  ಅದು ಬೆಳಗಾವಿ ಜಿಲ್ಲೆಯ ಗೋಕಾಕ.  ಗುಲ್ಬರ್ಗ ಮತ್ತು ವಿಜಾಪುರಕ್ಕೆ ತದ್ವಿರುದ್ಧವಾಗಿರುವುದು ಬೆಳಗಾವಿ ಜಿಲ್ಲೆ.   ಗೋಕಾಕದಲ್ಲಿ ಸಿಗುವ ವಿಶ್ವ ಪ್ರಸಿದ್ಧವಾದ ಸಿಹಿ ತಿನಿಸು ಎಂದರೆ ಕಲಬುರ್ಗಿಯವರ ಕರದಂಟು.  ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ತಿನ್ನಬೇಕಿನಿಸುವ ತಿನಿಸು.  ನೀರಿನ ಸೌಕರ್ಯ ಬಹಳ ಚೆನ್ನಾಗಿರುವ ಸ್ಥಳ ಗೋಕಾಕ ತಾಲ್ಲೂಕು.  ಒಂದೆಡೆ ಘಟಪ್ರಭ ಮತ್ತೊಂದು ಕಡೆ ಮಲಪ್ರಭ ಹರಿಯುವುದು.   ಹತ್ತಿರದಲ್ಲೇ ಹಿಡಕಲ್ ಅಣೆಕಟ್ಟು ಇದೆ.  ಹಾಗೆಯೇ ಗೋಕಾಕ್ ಪಟೇಲ್ ಗಿರಣಿಯ ಎದುರಿಗಿರುವ ಗೋಕಾಕ ಜಲಪಾತವೂ ವಿಶ್ವಪ್ರಸಿದ್ಧ.  ಇಲ್ಲಿ ವಿದ್ಯತ್ತನ್ನೂ ಉತ್ಪಾದಿಸುವರು.  ಸ್ವಲ್ಪ ಆಚೆಗಿರುವ ಹುಕ್ಕೇರಿ ಮತ್ತು ಚಿಕ್ಕೋಡಿ, ಗೋಕಾಕದಷ್ಟು ಬೆಳೆದಿಲ್ಲ.  ಈ ಊರಲ್ಲಿ ಮಾತ್ರ ಎಲ್ಲೆಲ್ಲೀ ನೋಡಲಿ ಕನ್ನಡಮಯ.  ಮರಾಠಿ ಮಾತುಗಳಿಗೆ ಅವಕಾಶವೇ ಇಲ್ಲ.  ರೈಲ್ವೇ ನಿಲ್ದಾಣ ಮಾತ್ರ ಹತ್ತಿರವಿಲ್ಲ.  ಒಂದೆಡೆ ಘಟಪ್ರಭಾ ನಿಲ್ದಾಣ ೧೫-೧೬ ಕಿಲೋಮೀಟರ್ ದೂರವಿದ್ದರೆ ಇನ್ನೊಂದೆಡೆ ಇರುವ ಗೋಕಾಕ ರೋಡ್ ನಿಲ್ದಾಣವೂ ಅಷ್ತೇ ದೂರವಿದೆ.

*********

ಯೂನಿಯನ್ನಿನ ಕೆಲಸಗಳಲ್ಲಿ ಎಷ್ಟು ಸಕ್ರಿಯನಾಗಿದ್ದೆ ಎಂಬುದಕ್ಕೆ ಒಂದೆರಡು ನಿದರ್ಶನಗಳನ್ನು ತಿಳಿಸಬಯಸುವೆ.  ೧೯೮೫ರಲ್ಲಿ ನಬಾರ್ಡ್‍ನ ಆಫೀಸರ್ ಪರೀಕ್ಷೆ ಬರೆದಿದ್ದೆ.   ಆ ಪರೀಕ್ಷೆಯಲ್ಲಿ ಪಾಸಾಗಿ ಇಂಟರ್-ವ್ಯೂಗೆ ಕರೆ ಬಂದಿತ್ತು.  ಸ್ನೇಹಿತರೆಲ್ಲರೂ ಚೆನ್ನಾಗಿ ತಯಾರಾಗಿ ಹೋಗು, ಇಂಟರ್-ವ್ಯೂನಲ್ಲಿ ಕೇಳಿದ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರಿಸು ಎಂದು ಹಿತವಚನಗಳನ್ನು ಹೇಳಿದರೂ, ನಾನು ಮಾತ್ರ ಯಾರ ಮಾತನ್ನೂ ಕೇಳಿರಲಿಲ್ಲ.  ಆಫೀಸರಾದರೆ ಆಡಳಿತದಲ್ಲಿ ಪಾಲುದಾರನಾದಂತೆ, ಕೆಲಸಗಾರರ ಮೇಲೆ ದೌರ್ಜನ್ಯವನ್ನೆಸಗಬೇಕಾಗುವುದು.  ಇದು ನನ್ನಿಂದಾಗುವುದಿಲ್ಲ, ನಾನು ಇಂಟರ್-ವ್ಯೂಗೇ ಹೋಗುವುದಿಲ್ಲ ಎಂದು ಹೇಳುತ್ತಿದ್ದೆ.  ಇಂಟರ್-ವ್ಯೂ ಇದ್ದ ದಿನ ಸ್ನೇಹಿತರುಗಳು ಒತ್ತಾಯದ ಮೇಲೆ, ಸುಮ್ಮನೆ ಹೋಗಿ ಏನನ್ನೂ ಉತ್ತರಿಸದೇ ಬಂದಿದ್ದೆ. 
ಸ್ವಲ್ಪ ದಿನಗಳ ಬಳಿಕ ನಮ್ಮ ಬ್ಯಾಂಕಿನ ಆಫೀಸರ್ ಪರೀಕ್ಷೆಯನ್ನೂ ಬರೆದಿದ್ದೆ.  ಮೊದಲ ಪೇಪರ್ ಬಹಳ ಸುಲಭವಾಗಿತ್ತು.  ಎರಡನೆಯ ಪೇಪರ್ ಮಧ್ಯಾಹ್ನ ಊಟದ ನಂತರ ಇತ್ತು.  ಮೊದಲ ಒಂದು ಘಂಟೆಯಲ್ಲಿ ಏನನ್ನೋ ಗೀಚಿದ್ದೆ.  ಆಗ ಪಕ್ಕದಲ್ಲಿರುವ ಮೈದಾನದಲ್ಲಿ ನಾಯಿಗಳ ಪ್ರದರ್ಶನ ನಡೆಯುತ್ತಿದ್ದುದನ್ನು ನೋಡಿ, ಬರೆಯುತ್ತಿದ್ದ ಪತ್ರಿಕೆಯನ್ನು ಅಷ್ಟಕ್ಕೇ ನಿಲ್ಲಿಸಿ ಕೊಟ್ಟು ಅಲ್ಲಿಗೆ ಹೋಗಿದ್ದೆ.  ಬ್ಯಾಂಕಿನಲ್ಲಿ ಸ್ನೇಹಿತರುಗಳು, ’ನಿನಗೆ ಆಫೀಸರಾಗಲು ಇಷ್ಟವಿಲ್ಲದಿದ್ದರೆ ಪರೀಕ್ಷೆಯನ್ಯಾಕೆ ಬರೆಯುತ್ತೀಯೆ?  ನಿನ್ನ ಸಮಯವೂ ಹಾಳು, ಪರೀಕ್ಷೆ ನಡೆಸುವವರಿಗೂ ಸಮಯ ಹಾಳು’.  ಅದಕ್ಕೆ ನನ್ನ ಪ್ರತಿ ಉತ್ತರ, ಹಾಗಲ್ಲ ನಾನೂ ಬರೆಯಬಹುದು, ಪಾಸಾಗಬಹುದು ಎಂಬುದನ್ನು ತೋರಿಸಲಷ್ಟೇ ಮಾಡಿದ್ದು. 

ಸ್ವಲ್ಪ ದಿನಗಳ ಬಳಿಕ ಮತ್ತೊಮ್ಮೆ ರೆಮಿಟೆನ್ಸ್ ಡ್ಯೂಟಿಯ ಮೇಲೆ ನನ್ನೂರಿನ ಹತ್ತಿರದ ಚಳ್ಳಕೆರೆಗೆ ಹೋಗುವ ಅವಕಾಶ ಒದಗಿ ಬಂದಿತ್ತು.   ಅದೇ ಸಮಯದಲ್ಲಿ ನನ್ನ ತಂಗಿಗೆ ಗಂಡು ಹುಡುಕುತ್ತಿದ್ದರು.  ನನ್ನ ತಂದೆ ಲಕ್ವದಿಂದ ಇನ್ನೂ ಗುಣಮುಖರಾಗುತ್ತಿದ್ದರಷ್ಟೆ.  ನನ್ನ ತಾಯಿ ಊರುರು ಸುತ್ತಲಾಗುತ್ತಿರಲಿಲ್ಲ.  ನನ್ನ ಮೂರನೆಯ ಅಣ್ಣ ಮುಂಬೈನಲ್ಲಿದ್ದ.  ಹಾಗಾಗಿ ಇನ್ನುಳಿದ ನಾವು ಮೂವರು ಅಣ್ಣ ತಮ್ಮಂದಿರೇ ಈ ಕೆಲಸವನ್ನು ಮಾಡಬೇಕಿತ್ತು.  ಮೊದಲಿಬ್ಬರು ಆಗಲೇ ಸಂಸಾರೊಂದಿಗರಾಗಿದ್ದರಿಂದ, ಅವರುಗಳಿಗೆ ಸಮಯ ಸಿಗುವುದು ಸ್ವಲ್ಪ ಕಷ್ಟವಾಗಿತ್ತು.    ಆದರೂ ಅವರುಗಳು ಕೈಮೀರಿ ಮಾಡುತ್ತಿದ್ದರು.  ಇನ್ನುಳಿದ ಗಂಡು ಗೂಳಿ ನಾನೊಬ್ಬನೇ. 

ಆ ಸಮಯದಲ್ಲಿ ಒಂದೆರಡು ಕಡೆ ಗಂಡುಗಳಿದ್ದಾರೆ ಎಂದೂ, ನಾನು ಬಂದು ನೋಡಿ ವಿಚಾರಿಸಬೇಕೆಂದೂ  ನನ್ನ ತಾಯಿ ತಿಳಿಸಿದ್ದರು.  ಚಳ್ಳಕೆರೆಯಲ್ಲಿ ನಮ್ಮ ಸಂಬಂಧಿಗಳು ಬಹಳ ಇದ್ದಾರೆ.  ರೆಮಿಟೆನ್ಸ್ ಡ್ಯೂಟಿಯಲ್ಲಿ ಸ್ವಲ್ಪ ಸಮಯ ಸಿಕ್ಕಿದಾಗ ಅಲ್ಲಿಲ್ಲಿ ಓಡಾಡಿದ್ರೆ ಅದನ್ನೇ ಒಂದು ದೊಡ್ಡ ವಿಷಯವನ್ನಾಗಿ ನಮ್ಮಮ್ಮನ ಹತ್ತಿರ ಬಂದು ವರದಿ ಒಪ್ಪಿಸ್ತಿದ್ರು. 
ಅದಲ್ಲದೇ ನನ್ನನ್ನು ಏನೆಲ್ಲಾ ಕೇಳ್ತಿದ್ರು, ರೆಮಿಟ್ಟೆನ್ಸ್ ಅಂದ್ರೆ ಏನು.  ಎಷ್ಟು ದುಡ್ಡು ತಂದಿದ್ದಿಯಾ?  ಅವುಗಳನ್ನೆಲ್ಲಾ ಎಲ್ಲಿ ಇಟ್ಟಿರ್ತಾರೆ?  ಇಲ್ಲಿ  ನಿನಗೇನು ಕೆಲಸ.  ಹತ್ತು ಹಲವಾರು ಪ್ರಶ್ನೆಗಳು.  ಅವುಗಳಿಗೆಲ್ಲಾ ಸಮಂಜಸ ಉತ್ತರ ಕೊಡೋದೇ ಒಂದು ದೊಡ್ಡ ಕೆಲಸವಾಗಿತ್ತು.  ಇದಲ್ಲದೇ ಅವರುಗಳ ಮನೆಗೇನಾದ್ರೂ ಹೋದರೆ, ಅದ್ಯಾಕೆ ಮಧ್ಯಾಹ್ನ ನೀನು ಅಲ್ಲಿ ಓಡಾಡ್ತಿದ್ದೆ, ಎಂದು ಕೇಳ್ತಿದ್ರು.  ಅವರುಗಳ ಕಣ್ಣು ತಪ್ಪಿಸುವುದೇ ಒಂದು ದೊಡ್ಡ ಕಷ್ಟವಾಗಿತ್ತು.  ಏಕಾದರೂ ಈ ಊರಿಗೆ ಬಂದೆನಪ್ಪಾ ಎಂದೂ ಅನ್ನಿಸಿತ್ತು. 

ಒಂದು ಶನಿವಾರ ದಾವಣಗೆರೆಗೆ ಹೋಗಿಬರೋಣವೆಂದು ನನ್ನಮ್ಮ ತಿಳಿಸಿದ್ದರು.  ದಾವಣಗೆರೆಯಲ್ಲಿದ್ದ ಸಬ್ ಇನ್ಸ್‍ಪೆಕ್ಟರ್ ಚಂದ್ರಶೇಖರಯ್ಯನವರ ಮನೆಗೆ ಹೋಗಿದ್ದೆವು.  ಅವರ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನಮ್ಮ ಮನೆಗೇ ಹೋದಂತಿತ್ತು.  ನಮ್ಮ ಮನೆಯ ವಾತಾವರಣವೇ ಆಗಿದ್ದಿತು.  ಮಧ್ಯಮ ಕೆಳ ದರ್ಜೆಯ ಒಂದು ಕುಟುಂಬ.  ಮಾತನಾಡಲು ಹೆಚ್ಚಿನ ವಿಷಯಗಳೇ ಇರಲಿಲ್ಲ.  ದೂರದಿಂದ ಅವರು ನಮಗೆ ನೆಂಟರೂ ಆಗಿದ್ದರು.  ಹುಡುಗಿಯನ್ನು ಒಮ್ಮೆ ಬಂದು ನೋಡಿ ಎಂದು ಹೇಳಿ ವಾಪಸ್ಸಾಗಿದ್ದೆವು.  ಒಮ್ಮೆ ಅವರೂ ಬಂದು ನನ್ನ ತಂಗಿಯನ್ನು ನೋಡಿಕೊಂಡು ಹೋಗಿ, ಒಮ್ಮೆಗೇ ನಮ್ಮ ಮನೆಯಲ್ಲೇ ಒಪ್ಪಿಗೆ ಸೂಚಿಸಿದ್ದರು. 

ಲಗ್ನ ಪತ್ರಿಕೆಗಾಗಿ ನನ್ನ ಅಣ್ಣ ಮುಂಬೈನಿಂದ ಬಂದಿದ್ದ.  ಅವನನ್ನೊಮ್ಮೆ ದಾವಣಗೆರೆಗೆ ನಾನು ಕರೆದುಕೊಂಡು ಹೋಗಿದ್ದೆ.  ಬೆಳಗ್ಗೆ ನನ್ನೂರಿನಿಂದ ಹೊರಟು ಅವರ ಮನೆ ತಲುಪಿದಾಗ ಮಧ್ಯಾಹ್ನ ೧ ಘಂಟೆ ಆಗಿತ್ತು.  ಅವರ ಮನೆಯವರು ಊಟಕ್ಕೇಳಿ ಎಂದರು.  ನಮ್ಮಮ್ಮ ಮುಂಚೆಯೇ ಹೇಳಿದ್ದರು, ಲಗ್ನಪತ್ರಿಕೆ ಆಗುವವರೆವಿಗೆ ಅವರ ಮನೆಯಲ್ಲಿ ಊಟ ಮಾಡಬಾರದು ಎಂದು.  ಅದೂ ಅಲ್ಲದೇ ನಮ್ಮ ಮನೆಗಳಲ್ಲಿ ಎಲ್ಲರೂ ಬೇರೆಯವರ ಮನೆಗಳಲ್ಲಿ ಊಟ ತಿಂಡಿ ಮಾಡುವುದಿಲ್ಲ.  ಅದೇನೋ ಈ ಹಾಳು ಅಭ್ಯಾಸ ಎಲ್ಲರಿಗೂ ಬಂದುಬಿಟ್ಟಿದೆ.  ಅವರ ಕರೆಗೆ ನೇರವಾಗಿ ತಿರಸ್ಕರಿಸಲಾಗದೇ, ’ಈಗ ತಾನೆ ಇಂತಹವರ ಮನೆಯಲ್ಲಿ ಊಟವಾಯಿತು, ಮನೆಯಿಂದ ಊಟ ಮಾಡಿಕೊಂಡೇ ಬಂದೆವು’ ಎಂದು ಏನೇನೋ ಸಬೂಬು ಹೇಳುವುದು ಸಾಮಾನ್ಯ.  ಅವರ ಮನೆಯವರೂ ಜಾಸ್ತಿ ಒತ್ತಾಯ ಮಾಡದೇ, ಒಂದು ಲೋಟ ಕಾಫಿ ಕೊಟ್ಟಿದ್ದರು.  ಮದುವೆಗಿದ್ದ ಹುಡುಗನೊಂದಿಗೆ ಲೋಕಾಭಿರಾಮವಾಗಿ ಮಾತನಾಡಿಕೊಂಡು, ದಾವಣಗೆರೆಯನ್ನು ಒಂದು ಸುತ್ತು ಹಾಕಿ, ಮಧ್ಯಾಹ್ನ ೪ ರ ಬಸ್ಸಿಗೆ ವಾಪಸ್ಸಾದೆವು.  ಹೊಟ್ಟೆಯೊಳಗೆ ಇಲಿ, ಹಲ್ಲಿ, ಜಿರಳೆ ಎಲ್ಲ ಓಡಾಡ್ತಿದ್ದವು.  ಆದರೂ ಇಬ್ಬರಲ್ಲೂ ಅದೇನೋ ದರಿದ್ರ ಸ್ವಾಭಿಮಾನ, ಹುಚ್ಚುತನ.  ಉಪವಾಸ ಮಾಡುವುದು ನಮ್ಮ ಆಜನ್ಮ ಸಿದ್ಧ ಹಕ್ಕೆಂಬಂತೆ ಏನನ್ನೂ ತಿಂದಿರಲಿಲ್ಲ. 

ಊರು ತಲುಪುವ ವೇಳೆಗೆ ರಾತ್ರಿ ೯ ಆಗಿತ್ತು.  ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನಮ್ಮಮ್ಮ, ’ಊಟ ಆಯ್ತೇನ್ರೋ?  ನಾನಾಗಲೇ ಪಾತ್ರೆ ತೊಳೆದಾಯ್ತು’ ಎನ್ನಬೇಕೆ?  ಇಬ್ಬರುಗಳಿಗೂ ಭಯಂಕರ ಕೋಪ ಬಂದಿತ್ತು.  ಹೇಳಿ ಕೇಳಿ ನಮ್ಮದು ದೂರ್ವಾಸರ ವಂಶ.  ಇಬ್ಬರ ಕೆಂಗಣ್ಣುಗಳನ್ನು ನೋಡಿಯೇ ಪರಿಸ್ಥಿತಿ ಅರಿವಾದ ನಮ್ಮಪ್ಪ, ’ಶಾನೆ ಕಡುಪಾಕ್ಲಿ ಅಯ್ಯಿಂಟುಂದಿ, ವೀಣ್ಳುಕಿ ಏಮನ್ನಾ ವೇಗರ್ನೆ ಚೇಸಿಚ್ಚುಡು (ತುಂಬಾ ಹಸಿವಾಗಿರತ್ತೆ,ಇವರುಗಳಿಗೆ ಏನನ್ನಾದರೂ ಬೇಗನೆ ಮಾಡಿಕೊಡು)’  ಅಂದಿದ್ದರು.   ನಿಜಕ್ಕೂ ನನ್ನ ತಾಯಿ ಅನ್ನಪೂರ್ಣೆಯ ಅಪರಾವತಾರ.   ಅಂದು  ಇದನ್ನು ನಾವುಗಳು ಯೋಚಿಸಿಯೇ ಇರಲಿಲ್ಲ.  ಹತ್ತೇ ನಿಮಿಷಗಳಲ್ಲಿ ಉಪ್ಪಿಟ್ಟು ಮಾಡಿಕೊಟ್ಟಿದ್ದರು.   ಆ ತಾಯಿಯ ಬಗ್ಗೆ ಈಗ ಎಷ್ಟು ಪರಿತಪಿಸದರೇನು ಪ್ರಯೋಜನ?

೧೫ ದಿನಗಳ ನಂತರ ಲಗ್ನ ಪತ್ರಿಕೆಯನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೆವು. ಎಲ್ಲವೂ ಸಾಂಗವಾಗಿ ಮದುವೆ ಡಿಸೆಂಬರ್ ತಿಂಗಳಿನಲ್ಲಿ ಎಂದು ತೀರ್ಮಾನವಾಗಿದ್ದಿತು.  ಇನ್ನುಳಿದದ್ದು ನಮ್ಮಗಳ ತಯಾರಿಯಷ್ಟೇ. 

*********

ಸ್ವಲ್ಪ ದಿನಗಳಲ್ಲಿ ಮದುವೆ ಏರ್ಪಾಟಾಯಿತು.  ೧೯೮೬ ನೆಯ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಚಳ್ಳಕೆರೆಯ ಶ್ರೀರಾಮ ಮಂದಿರದಲ್ಲಿ ಶ್ರೀ ಗಣೇಶ ಮತ್ತು ಶ್ರೀಮತಿ ಮಂಜುಳೆಯರ ಮದುವೆ ನಡೆದಿತ್ತು. 

ಮದುವೆಗೆ ಎರಡು ದಿನಗಳ ಮೊದಲು ನಮ್ಮ ಮನೆಯಲ್ಲಿ ದೇವರ ಸಮಾರಾಧನೆ ಇಟ್ಟುಕೊಂಡಿದ್ದೆವು.  ಅಂದೇ ನಾಂದಿಯನ್ನೂ ಮಾಡಬೇಕೆಂದುಕೊಂಡಿದ್ದೆವು.  ನಾಂದಿ ಇದ್ದ ಹಿಂದಿನ ರಾತ್ರಿ ೯ ಘಂಟೆಯ ಹೊತ್ತಿನಲ್ಲಿ ಮನೆಯವರೆಲ್ಲರೂ, ನೆಂಟರೆಲ್ಲರೂ ಸೇರಿದ್ದರು.  ಇದ್ದಕ್ಕಿದ್ದ ಹಾಗೆ ನನ್ನ ತಂದೆಗೆ ರಕ್ತ ವಾಂತಿಯಾಗತೊಡಗಿತು.  

ಗಾಬರಿಯಾದ ನನ್ನ ಎರಡನೆ ಅಣ್ಣ ತಕ್ಷಣ ಡಾಕ್ಟರನ್ನು ಕರೆತರಲು ಓಡಿದ.  ಮೊದಲೇ ನಮ್ಮೂರು ಒಂದು ಸಣ್ಣ ಹಳ್ಳಿ.  ಡಾಕ್ಟರು ಪಕ್ಕದೂರಿನಿಂದ ಪ್ರತಿನಿತ್ಯ ಬೆಳಗ್ಗೆ ಬಂದು ಸಂಜೆಗೆ ವಾಪಸ್ಸಾಗುತ್ತಿದ್ದರು.  ಅಲ್ಲಿಯೇ ಇದ್ದ ನಮ್ಮ ಚಿಕ್ಕಪ್ಪನವರೂ ಸರಕಾರೀ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದರು.   ಅವರು ನನ್ನ ತಂದೆಯ ಪರಿಸ್ಥಿತಿ ನೋಡಿ, ತಕ್ಷಣ ಕಾರು ಮಾಡಿಕೊಂಡು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಾತಿ ಮಾಡುವುದು ಲೇಸೆಂದು ತಿಳಿಸಿದರು.  ಕಾರು ಮಾಡಲು, ಆ ಊರಲ್ಲಿ ಸೌಲಭ್ಯವಿರಲಿಲ್ಲ.  ನಾನು ಮತ್ತು ನನ್ನ ಮೂರನೆಯ ಅಣ್ಣ ಪಂಚೆ ಬನಿಯನ್ನಿನಲ್ಲೇ ರಸ್ತೆಯಲ್ಲಿ ಬರುತ್ತಿದ್ದ ಲಾರಿಯೊಂದರಲ್ಲಿ ಕುಳಿತು ಹತ್ತಿರದ ಚಳ್ಳಕೆರೆಗೆ ಹೋದೆವು.  ಅಷ್ಟು ಹೊತ್ತಿಗೆ ನಮ್ಮ ಚಿಕ್ಕಪ್ಪನವರೂ ಅಲ್ಲಿಗೆ ಬಂದು, ಕಾರು ಮಾಡಿಕೊಟ್ಟರು. ಅದರಲ್ಲಿ ಕುಳಿತು ನಮ್ಮೂರಿಗೆ ಬಂದು ತಂದೆಯವರನ್ನು ಕರೆದುಕೊಂಡು ಚಿತ್ರದುರ್ಗದ ಸರಕಾರ್‍ಈ ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಾತ್ರಿ ೧೨ ಘಾಂಟೆ.  ಡ್ಯೂಟಿಯ ಮೇಲಿದ್ದ ಡಾಕ್ಟರು ತಕ್ಷಣ  ರಕ್ತ ಕೊಡಬೇಕೆಂದೂ, ಎರಡು ಅಥವಾ ಮೂರು ಬಾಟಲಿನಷ್ಟು ರಕ್ತ ತರಲು ತಿಳಿಸಿದರು. ಆಸ್ಪತ್ರೆಗೆ ಸೇರುವವರೆವಿಗೂ ರಕ್ತದ ವಾಂತಿ ನಿರಂತರವಾಗಿ ಆಗುತ್ತಲೇ ಇತ್ತು.   ರಕ್ತವು ಗೆಡ್ಡೆಗಳಾಗಿ ಹೊರ ಬರುತ್ತಿತ್ತು.  ಆಗ ಅವರಿಗೆ ರಕ್ತದ ಕ್ಯಾನ್ಸರ್ ಆಗಿರಬಹುದೆಂದು ಅವರ ಅಭಿಪ್ರಾಯವಾಗಿತ್ತು. 

 ನಮಗ್ಯಾರಿಗೂ ಆ ಊರಿನ ಪರಿಚಯವಿಲ್ಲ.  ಎಲ್ಲಿಂದ ರಕ್ತವನ್ನು ತರುವುದು.  ಅಷ್ಟು ಹೊತ್ತಿಗೆ ಅಲ್ಲಿಯೇ ಇದ್ದ ನರ್ಸ್ ಒಬ್ಬರು ಆಸ್ಪತ್ರೆಯ ಆವರಣದಲ್ಲಿ ಮಲಗಿರುವ ಒಂದಿಬ್ಬರು ಕೂಲಿಯವರ ರಕ್ತದ ಗುಂಪು ನಮ್ಮ ತಂದೆಯವರ ರಕ್ತದ ಗುಂಪಿಗೆ ಹೋದುವುದೆಂದೂ – ಪ್ರತಿ ಬಾಟಲಿಗೆ ರೂ ೨೦೦ ಕೊಟ್ಟರೆ ಸಿಗುವುದೆಂದೂ ತಿಳಿಸಿದರು.  ಆ ತಕ್ಷಣಕ್ಕೆ ಜೀವ ಉಳಿದರೆ ಸಾಕಾಗಿತ್ತು.  ಹೇಗಾದರೂ ಮದುವೆ ನಿಲ್ಲದೇ ನಡೆದರೆ ಸಾಕಾಗಿತ್ತು.  ದುಡ್ಡಿನ ಕಡೆ ಗಮನವಿರಲಿಲ್ಲ.  ಕೂಲಿಯವರು ರಕ್ತವನ್ನು ಕೊಟ್ಟಿದ್ದರು, ಅದನ್ನೇ ನನ್ನ ತಂದೆಯ ಮೈಗೆ ಏರಿಸಿದ್ದರು.    ಆಗ ಅವರಿಗೆ ಶುಶ್ರೂಷೆ ಮಾಡಿದ್ದ ವೈದ್ಯರು, ಆಗ ಕೊಟ್ಟಿದ್ದ ರಕ್ತ ಇವರಿಗೆ ಸರಿ ಹೊಂದಿದೆಯೋ ಇಲ್ಲವೋ ಎಂದು ಹೇಳಲು ಇನ್ನು ಮೂರು ತಿಂಗಳು ಕಾಯಬೇಕೆಂದಿದ್ದರು.  ಮರು ದಿನ ಬೆಳಗ್ಗೆ ಮೂರನೆಯ ಅಣ್ಣನೊಬ್ಬನನ್ನು ಆಸ್ಪತ್ರೆಯಲ್ಲಿ ಬಿಟ್ಟು ನಾನು ಮತ್ತು ಎರಡನೆಯ ಅಣ್ಣ ಮದುವೆಯ ಕಾರ್ಯದ ಕಡೆ ಗಮನ ಕೊಡಲು ಊರಿಗೆ ಬಂದಿದ್ದೆವು.  ಮದುವೆಯಲ್ಲಿ ಎಲ್ಲರ ಮನಸ್ಸೂ ನನ್ನ ತಂದೆಯ ಆರೋಗ್ಯದ ಕಡೆಗೇ ಇದ್ದಿತ್ತು.  ನನ್ನಮ್ಮ ಗಟ್ಟಿಗಿತ್ತಿ.  ಆಗ ಎದೆಗುಂದಲಿಲ್ಲ.  ಎಲ್ಲ ಕೆಲಸಗಳಲ್ಲೂ ನಮಗೆ ಸೂಕ್ತ ಮಾರ್ಗದರ್ಶನ ಕೊಡುತ್ತಾ ಮದುವೆಯಲ್ಲಿ ಏನೂ ಕುಂದು ಬರದಂತೆ ನೋಡಿಕೊಂಡಿದ್ದರು.  ನಮ್ಮ ನೆಂಟರಿಷ್ಟರೆಲ್ಲರೂ ನಮಗೆ ಧೈರ್ಯಕೊಟ್ಟಿದ್ದರು.  ನಮ್ಮ ಚಿಕ್ಕಪ್ಪನಂತೂ ಎಲ್ಲವನ್ನೂ ಸಾಂಗವಾಗಿ ಏರ್ಪಾಡು ಮಾಡಿದ್ದರು.  ಮಧ್ಯೆ ಮದುವೆಗೆಂದು ಬಂದವರೆಲ್ಲರೂ ಒಮ್ಮೆ ಚಿತ್ರದುರ್ಗದ ಆಸ್ಪತ್ರೆಗೆ ಹೋಗಿ ನಮ್ಮ ತಂದೆಯನ್ನು ನೋಡಿಕೊಂಡು ಬರುತ್ತಿದ್ದರು.  ಇನ್ನೂ ಒಂದು ತಿಂಗಳು ಆಸ್ಪತ್ರೆಯಲ್ಲೇ ಇರಬೇಕೆಂದೂ, ಏನಾಗಿದೆಯೆಂದೂ ಖಚಿತವಾಗಿ ಹೇಳಲಾಗುವುದಿಲ್ಲವೆಂದೂ ತಿಳಿಸಿದ್ದರು.  ಮದುವೆಯ ಕಾರ್ಯಗಳೆಲ್ಲಾ ಮುಗಿದು, ನನ್ನ ತಂಗಿ ಗಂಡನೊಂದಿಗೆ ದಾವಣಗೆರೆ ಹೊರಟಳು.  ಅದೇ ಸಮಯಕ್ಕೆ ನಾವುಗಳು ಮೊದಲು ನಮ್ಮ ತಂದೆಯನ್ನು ನೋಡಿಬಂದು ನಂತರ ಛತ್ರವನ್ನು ಖಾಲಿ ಮಾಡುವುದೆಂದು ಯೋಚಿಸಿ, ನಾನು ಮತ್ತು ನನ್ನ ಎರಡನೆಯ ಅಣ್ಣ ಚಿತ್ರದುರ್ಗದ ಆಸ್ಪತ್ರೆಗೆ ಹೋದೆವು.  ನೇರವಾಗಿ ನನ್ನ ತಂದೆಯನ್ನು ಸೇರಿಸಿದ್ದ ವಾರ್ಡಿಗೆ ಹೋದರೆ ಅಲ್ಲಿ ಆಸಾಮಿ ಪತ್ತೆಯೇ ಇಲ್ಲ.  ಪಕ್ಕದ ಹಾಸಿಗೆಯಲ್ಲಿದ್ದ ರೋಗಿಯೊಬ್ಬರು, ಆ ಮುದುಕಪ್ಪನನ್ನು ಡಿಸ್ಚಾರ್ಜ್ ಮಾಡಿದರೆಂದರು.  ಹಾಗಿದ್ರೆ ಇವರೆಲ್ಲಿಗೆ ಹೋದರು.  ಏನೇ ಆಗಲಿ, ಹತ್ತಿರದಲ್ಲೇ ಇದ್ದ ನಮ್ಮ ಚಿಕ್ಕಮ್ಮನ (ತಾಯಿಯ ತಂಗಿ) ಮನೆಗೆ ಹೋದರೆ ವಿಷಯ ತಿಳಿಯಬಹುದೆಂದು ನಾವು ಅವರ ಮನೆಗೆ ಹೋದರೆ, ಯಜಮಾನರು ಅಲ್ಲಿ ಆರಾಮವಾಗಿ ಕುಳಿತು ಮಾತನಾಡುತ್ತಿದ್ದಾರೆ.  ಆರೋಗ್ಯ ತಪ್ಪಿ ಎಲ್ಲರ ಧೃತಿ ಕೆಡಿಸಿದ ಮನುಷ್ಯ ಇವರೇನಾ ಎಂದು ಸಂಶಯಿಸುವಂತಾಗಿತ್ತು. 
 ಆಗ ನನ್ನ ಚಿಕ್ಕಮ್ಮ ಹೇಳಿದ ಮಾತುಗಳು ಈಗಲೂ ಕಿವಿಯಲ್ಲಿಯೇ ಇದೆ.  ’ನಿಮ್ಮಪ್ಪನಿಗೆ ಒಬ್ಬಳೇ ಮಗಳ ಮದುವೆ ಮಾಡುವ ಯೋಗವಿಲ್ಲ.  ದೇವರು ಅವರ ಹಣೆಯಲ್ಲಿ ಬರೆದಿರುವುದೇ ಹಾಗೆ’.  ನಾವು ಆ ಮಾತುಗಳನ್ನು ಆ ಕ್ಷಣದಲ್ಲಿ ನಂಬಿರಲಿಲ್ಲ.  ಸ್ವಲ್ಪ ಹೊತ್ತಿಗೆ, ನನ್ನ ತಂದೆಗೆ ಚಿಕಿತ್ಸೆ ಮಾಡಿದ ವೈದ್ಯರಲ್ಲಿಗೆ ಹೋಗಿ ’ಏನಾಗಿತ್ತು?’ ಎಂದು ಕೇಳಲು, ಅವರೂ ಹೀಗೆಯೇ ಹೇಳುವುದೇ?  (ಅವರು ಮುಸ್ಲಿಮರು) – ನೋಡ್ರಪ್ಪ, ನನ್ನ ಮತ್ತು ನಿಮ್ಮಗಳ ದೇವರು ಬೇರೆಯೆಂದು ನಾವುಗಳು ಭಾವಿಸಿದ್ದೇವೆ.  ಆದರೆ ಎಲ್ಲರ ದೇವರೂ ಒಬ್ಬನೇ.  ಹೀಗೇ ಆಗಬೇಕೂಂತಿದ್ದರೆ ಯಾರಿಂದಲೂ ಅದನ್ನು ತಪ್ಪಿಸಲಾಗುವುದಿಲ್ಲ.  ನಿಮ್ಮ ಭಗವದ್ಗೀತೆಯಲ್ಲಿ ಇದನ್ನೇ ಅಲ್ವೇ ಹೇಳಿರುವುದು.  ನಾನು ವೈದ್ಯನಾಗಿದ್ದು ನನ್ನ ಕೈನಲ್ಲಿ ಏನೂ ಇಲ್ಲ.  ಅವರಿಗೇನಾಗಿತ್ತೆಂದು ಈಗಲೂ ಹೇಳಲಶಕ್ಯನಾಗಿರುವೆ, ಎಂದಿದ್ದರು.  (ಅವರು ಪ್ರಸಿದ್ಧ ವೈದ್ಯರು). 

ಜೀವನದಲ್ಲಿ ಹೀಗೆಯೇ ಆಗುವುದು ಎಂದು ಹೇಳಲಾಗುವುದೇ?
 

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಜೀವನ ಬೇವು ಬೆಲ್ಲ

http://thatskannada.oneindia.in/chowchow/festivals/ugadi/140307concept1.html

ಜೀವನವೆಲ್ಲಾ ಬೇವು ಬೆಲ್ಲ

ಅರಿತು ಬಾಳುವನೇ ಕಲಿಗಳ ಮಲ್ಲ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷದಿ ಹೊಸ ಹರುಷವ ಹೊಸತು ಹೊಸತು ತರುತಿದೆ

ಪ್ರತಿ ವರುಷ ಯುಗಾದಿ ಹಬ್ಬದ ದಿನ ರೇಡಿಯೋ ಮತ್ತು ಟಿವಿಗಳಲ್ಲಿ ಈ ಹಾಡು ಪ್ರಸಾರವಾಗುತ್ತದೆ. ಎಷ್ಟೇ ಬಾರಿ ಕೇಳಿದರೂ ತೃಪ್ತಿಯಾಗದೇ ಮತ್ತೆ ಮತ್ತೆ ಕೇಳಬೇಕೆನಿಸುವ ಸಾಹಿತ್ಯ. ದ.ರಾ.ಬೇಂದ್ರೆಯವರು ಬರೆದ ಈ ಗೀತೆಯನ್ನು ಕುಲವಧು ಚಲನಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ. ಹಾಡಿರುವವರು ಎಸ್. ಜಾನಕಿ.

ಮಾರ್ಗಶೀರ್ಷ ಮಾಸದ ಹೋಳಿ ಹುಣ್ಣಿಮೆಯಾದ ೧೫ ದಿನಗಳಿಗೆ ಬರುವುದು ಯುಗಾದಿ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ, ಕೃತಯುಗ, ದ್ವಾಪರಯುಗ, ಕಲಿಯುಗಗಳಿಗೆ ಯುಇಗವೆಂದರೆ ೫೦೦೦ಕ್ಕೂ ಹೆಚ್ಚಿನ ವರುಷಗಳಂತೆ. ಆದರೆ ಇಲ್ಲಿ ಹಾಗಲ್ಲ. ಕಾಲದ ಒಂದು ಭಾಗ ಮತ್ತೆ ಪ್ರಾರಂಭವಾಗುತ್ತಿದೆ ಎಂಬುದರ ಸೂಚನೆಯಷ್ಟೆ. ವಸಂತ ಋತುವಿನಿಂದ ಪ್ರಾರಂಭಗೊಂಡ ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುತ್ತಿರುವುದರ ಸೂಚನೆ. ಇಂತಹ ಯುಗದ ಅಂದರೆ ವರುಷದ ಮೊದಲನೆಯ ದಿನವನ್ನು ಯುಗಾದಿ ಎಂದು ಗುರುತಿಸಿ ಹಬ್ಬವನ್ನಾಗಿ ಆಚರಿಸುವರು. ಈ ದಿವಸದಲ್ಲಿ ಒಳ್ಳೆಯ ಅಥವಾ ಕೆಟ್ಟ ಘಟನೆ ಯಾವುದೇ ಆದರೂ ಮುಂದೆ ಇಡೀ ಒಂದು ವರ್ಷದಲ್ಲಿ ಅದರ ಪರಂಪರೆ ಮುಂದುವರಿಯುತ್ತದೆ ಎಂಬುದು ಕೆಲವರ ಅಭಿಪ್ರಾಯ. ಈ ದಿನದಂದು ಯಾವ ವಾರ ಇರುತ್ತದೆಯೋ ಅದನ್ನೇ ವರ್ಷದ ಅಧಿಪತಿ ಎಂದು ಕರೆಯುವರು. ಉದಾಹರಣೆಗೆ – ಈ ವರ್ಷದ ಯುಗಾದಿ ಹಬ್ಬವು ಸೋಮವಾರ ಬರುವುದರಿಂದ ಇಡೀ ವರ್ಷಕ್ಕ ಸೋಮನೇ (ಚಂದ್ರ) ಅಧಿಪತಿ ಎನುವರು.

ಚಾಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇವೆಲ್ಲವೂ ಇಂದು ನಂಬಲಶಕ್ಯ. ಆದರೂ ಮುಂದಿನ ಪೀಳಿಗೆಗೆ ಇದರ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿ ಎಂದು ಹೇಳಬೇಕಿದೆ. ಇಂದಿನ ದಿನದಿಂದ ವಸಂತ ಮಾಸ ಪ್ರಾರಂಭವಾಗಿ ತರು ಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು:ಖಗಳನ್ನು ಮರೆತು ಹೊಸ ಬಾಳನ್ನು ನೋಟ್‍ಬುಕ್ಕಿನ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.

ಇಂದಿನ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ. ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದರೆಂದೂ ಚರಿತ್ರೆಯಲ್ಲಿ ನಮೂದಿಸಿರುವರು.

ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್‌ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ಗುಡಿಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಅಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ತಮಿಳುನಾಡಿನಲ್ಲಿ ಯುಗಾದಿ ಪರ್ವವನ್ನು ಚಿತ್ರವಿಷು ಎಂದು ಕರೆಯುವರು. ಆದರೆ ಅಲ್ಲಿ ಸೌರಮಾನ ಲೆಕ್ಕದ ಪಂಚಾಂಗವನ್ನು ಕಾಲಗಣನೆಗೆ ಉಪಯೋಗಿಸುವರು. ಆದ್ದರಿಂದ ಅಲ್ಲಿನ ಯುಗಾದಿ ಹಬ್ಬ ಬೇರೆಯೇ ದಿನ ಬರುವುದು.

ಅಂದು ಬೆಳಗ್ಗೆ ಎಳ್ಳೆಣ್ಣೆಯಿಂದ ಅಭ್ಯಂಗ ಸ್ನಾನವನ್ನು ಮಾಡುವರು. ನಂತರ ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.

ಅಂದು ವಿಷ್ಣುವು ಮತ್ಸ್ಯಾವತಾರವನ್ನು ತಳೆದ ದಿನ ಮತ್ತು ಶ್ರೀರಾಮನು ವನವಾಸದಿಂದ ಮರಳಿದ ದಿನ. ಅಂದು ಯವಿಷ್ಠಎಂಬ ಅಗ್ನಿಯನ್ನು ಆವಾಹನೆ ಮಾಡಬೇಕು. ಗುರುಗಳಿಗೂ ಮತ್ತು ಅವರ ಕುಟುಂಬದವರಿಗೆ ವಸ್ತ್ರ ಅಲಂಕಾರ ಸಾಮಗ್ರಿಗಳನ್ನು ದಾನ ಮಾಡಬೇಕು. ಯೋಗ್ಯರಾದ ಜೋಯಿಸರಿಂದ ಹೊಸ ವರ್ಷದ ನಾಯಕರು ಮತ್ತು ಅವರ ಫಲಗಳನ್ನು ಪಂಚಾಂಗದ ಮೂಲಕ ತಿಳಿದು, ಅವರಿಗೆ ದಾನ ಮಾಡಬೇಕು. ಅಂದಿನ ದಾನದಲ್ಲಿನ ವಿಶೇಷ ವಸ್ತುಗಳೆಂದರೆ ಪಂಚಾಂಗ ಮತ್ತು ನೀರಿನ ಪಾತ್ರೆ. ಅದಲ್ಲದೇ ಬಡಬಗ್ಗರಿಗೆ ಯಥೋಚಿತವಾದ ದಾನವನ್ನು ಮಾಡಬೇಕು.

(ಪ್ರಾಪ್ತೇ ನೂತನ ಸಂವತ್ಸರೇ ಪ್ರತಿಗೃಹ್ಯಂ ಕುರ್ಯಾದ್ವಜಾರೋಪಣಂ

ಸ್ನಾನ ಮಂಗಲಮಾಚರೇದ್ ದ್ವಿಜವರೈಃ ಸಾಕಂ ಸುಪೂಜ್ಯೋತ್ಸವೈಃ|

ದೇವಾನಾಂ ಗುರುಯೋಷಿತಾಂ ಚ ಶಿಸವೋಲಂಕಾರವಸ್ತ್ರಾದಿಭಿಃ

ಸಂಪೂಜ್ಯಾ ಗಣಕಃ ಫಲಂ ಚ ಶೃಣುಯಾತ್ತಸ್ಮಾಚ್ಚ ಲಾಭಪ್ರದಂ||)

ಈ ಹಬ್ಬ ಬರುವುದು ವಸಂತ ಋತುವಿನಲ್ಲಿ. ವಸಂತ ಎಲ್ಲ ದೇವತೆಗಳಿಗೂ ಮತ್ತಿತರಿಗೂ ಪ್ರಿಯವಾದ ಋತು. ಆ ಸಮಯದಲ್ಲಿ ನಿಸರ್ಗವು ಹೊಸ ಚಿಗುರು ಮತ್ತು ಹೂಗಳಿಂದ ನಳನಳಿಸುವುದು. ಈ ಋತುವಿನ ಸಮಶೀತೋಷ್ಣವಾದ ವಾತಾವರಣವು ದೇವತಾಪೂಜೆಗೆ ಮತ್ತು ಇನ್ನೆಲ್ಲಾ ಶುಭಕಾರ್ಯಗಳಿಗೆ ಹಿತಕರವಾಗಿದೆ. ಬ್ರಹ್ಮಪುರಾಣದಲ್ಲಿ ಹೀಗಿ ಹೇಳಿದೆ

ಅಹಮಗ್ನಿರ್ಮಹಾತೇಜಾಃ ಸೋಮಶ್ಚೈಷಾ ಮಮಾಂಬಿಕಾ|

ಅಹಮಗ್ನಿಶ್ಚ ಸೋಮಶ್ಚ ಪ್ರಕೃತ್ಯಾ ಪುರುಷಃ ಸ್ವಯಂ||”

ಈ ಶೈತ್ಯ ಉಷ್ಣತೆಗಳ ಸಂಗಮ ಕಾಲವನ್ನು ಸೃಷ್ಟಿಕರ್ತನು ಸೃಷ್ಟಿಯನ್ನು ಪ್ರಾರಂಭಿಸಿದ ದಿನ ಎಂದು ಭಾವಿಸಿರುವುದು ಸರ್ವಥಾ ಉಚಿತವಾಗಿದೆ. ಈ ಶಿವಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ, ಒಳಮುಖವಾಗಿ ಸೇರಿದರೆ ಸಮಾಧ್. ಅಂತಹ ಸಮಾಧಿಯೋಗಕ್ಕೂ ಅದಕ್ಕನುಗುಣವಾದ ಲೋಕಯಾತ್ರೆಯ ಸಂವಿಧಾನಕ್ಕೂ ಸ್ಫೂರ್ತಿ ನೀಡುವ ಸಂಧಿಸಮಯ ಇದು. ತನ್ನ ಸೃಷ್ಟಿರಹಸ್ಯವಾದ ವೇದವಿದ್ಯೆಯನ್ನು ಸೃಷ್ಟಿಯ ಆದಿಯಲ್ಲಿ ಉಪದೇಶ ಮಾಡಿದ ಭಗವಂತನ ಮತ್ಸ್ಯಾವತಾರದ ಜಯಂತಿ ಎನಿಸುಕೊಳ್ಳುವ ಸುದಿವಸವಿದು.

ಅಂದಿನ ಹಬ್ಬದಾಚರಣೆಯ ಕ್ರಮ ಹೀಗಿದೆ :

1. ಮೊದಲು ಅಭ್ಯಂಜನ – ತೈಲ ಉಪಯೋಗದಿಂದ ಭೌತಿಕವಾಗಿ ತಲೆಯಿಂದ ಪಾದದವರೆವಿಗೆ ಸ್ನಾನ ಮಾಡುವುದರಿಂದ ಆಯಾಸ, ವಾತದ ದೋಷಗಳ ನಿವಾರಣೆಯಾಗುವುದು. ಪ್ರಸನ್ನತೆ, ಪುಷ್ಟಿ, ಆಯುರ್ವರ್ಧನೆ, ಸುಖ ನಿದ್ರೆಗಳು ಲಭಿಸುವುವು. ಅಲ್ಲದೇ ಚರ್ಮದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಯೂ ಆಗುವುದು.

2. ಗೃಹಾಲಂಕಾರ – ತಳಿರು ತೋರಣಗಳು, ಪತಾಕೆಗಳೂ ಮತ್ತು ರಂಗವಲ್ಲಿಯ ಸಹಾಯದಿಂದ ಮನೆಯ ಒಳಗೆ ಮತ್ತು ಹೊರಗೆ ಸಿಂಗಾರ

3. ಸಂಕಲ್ಪ – ಇಷ್ಟ ದೇವತಾ ಪೂಜೆ

4. ಹೋಮ – ಈ ಹಬ್ಬದಲ್ಲಿ ಹೋಮ ಮಾಡುವ ಅಗ್ನಿಗೆ ಯವಿಷ್ಠಎಂದು ಹೆಸರಿಸಿರುವರು. ಯವಿಷ್ಠಎಂದರೆ ಅತ್ಯಂತ ಕಿರಿಯವನು ಎಂದರ್ಥ. ಸೃಷ್ಟಿಯ ಪ್ರಾರಂಭದಲ್ಲಿ ಶಕ್ತಿಯು ಅತ್ಯಂತ ಸೂಕ್ಷ್ಮವೆಂದು ಉಪಾಸನೆ ಮಾಡಲ್ಪಡುತ್ತದೆ. ಅದರ ಪ್ರತೀಕವಾಗಿರುವ ಅಗ್ನಿಗೆ ಅತ್ಯಂತ ಕಿರಿಯವರು ಎಂದು ಸೂಚಿಸುವರು.

5. ಪಂಚಾಂಗ ಶ್ರವಣ

6. ದಾನ

7. ವಿಶೇಷ ನೈವೇದ್ಯ – ಸಾಮಾನ್ಯವಾಗಿ ಬೇವು ಬೆಲ್ಲವನ್ನು ವಿಶೇಷವಾಗಿ ನೈವೇದ್ಯ ಮಾಡುವುದರ ಜೊತೆಗೆ ಹೋಳಿಗೆ ಅಥವಾ ಒಬ್ಬಟ್ಟನ್ನೂ ನೈವೇದ್ಯ ಮಾಡುವರು. ಕೆಲವು ಕಡೆ ಬೇವಿನೊಡನೆ ಕಲ್ಲು ಸಕ್ಕರೆ ಮತ್ತು ಮೆಣಸನ್ನೂ ಸೇರಿಸಿ, ಆ ಮಿಶ್ರಣವನ್ನು ನೈವೇದ್ಯ ಮಾಡಿ ಸೇವಿಸುವರು.

ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಅಂದಿನ ವಿಶೆಷ ತಿನಿಸು – ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಈಗೀಗ ಟಿವಿಯಲ್ಲಿ ಕವಿಗೋಷ್ಠಿಯೂ ಪ್ರಸಾರ ಮಾಡುವರು.

ಇನ್ನೊಂದು ವಿಶೇಷವೆಂದರೆ ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದಲ್ಲಾದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿಬರುವುದು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.

ಎಲ್ಲರ ಬಾಳಲ್ಲೂ ಸುಖ-ದುಃಖ, ಒಳ್ಳೆಯದು-ಕೆಟ್ಟದ್ದು, ಕರ್ಮ-ಫಲ ಇದ್ದೇ ಇರುವುದು. ಇದೊಂದು ಬ್ಯಾಲೆನ್ಸ್ ಶೀಟು ಇದ್ದ ಹಾಗೆ. ಎಷ್ಟು ಸ್ವೀಕರಿಸುವರೋ ಅಷ್ಟನ್ನೇ ಮರಳಿ ಕೊಡಬೇಕು, ಬರುವಾಗ ಏನೂ ತರದೆ ಬಂದಂತೆ ಕೊನೆಯಲ್ಲಿ ಹೋಗುವುದು. ಅದಕ್ಕೇ ಇಂದಿನ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ಬೇವಿನಲ್ಲಿ ಇರುವ ಶಕ್ತಿ ನಿಜವಾಗಿಯೂ ಬೆಲ್ಲದಲ್ಲಿಲ್ಲ. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿ ಅಥವಾ ಶಾಖವನ್ನು ಉಂಟು ಮಾಡಿದರೆ, ಅದೇ ನಾಲಗೆಗೆ ಕಹಿಯಾದ ಬೇವು ಆ ಉರಿಯನ್ನು ಶಮಿಸುವುದು.

ಬೇವು ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:

ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|

ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||

ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯೆ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.

ವಿಭಾಗಗಳು
ಲೇಖನಗಳು

ಕೊಲೆಗಡುಕ – ಹೇಗೆ?

 ಈ ಲೇಖನ ಇಲ್ಲಿ ಪ್ರಕಟವಾಗಿದೆ

ಇತ್ತೀಚೆಗೆ ದಕ್ಷಿಣ ಮುಂಬಯಿಯ ಜನಗಳನ್ನು ತಲ್ಲಣಗೊಳಿಸಿದ ಒಬ್ಬ ಮನುಷ್ಯನ ಬಗ್ಗೆ ಎಲ್ಲರೂ ಪತ್ರಿಕೆಗಳಲ್ಲಿ ಓದಿರಬಹುದು.  ಬೀರ್ ಮ್ಯಾನ್‘ – ದಿ ಸೀರಿಯಲ್ ಕಿಲ್ಲರ್ ಆಫ್ ಸೌತ್ ಮುಂಬಯಿ ಎಂದೇ ಈತ ಕೆಲವೇ ದಿನಗಳಲ್ಲಿ ಪ್ರಸಿದ್ಧನಾದನು.  ಈ ಮನುಷ್ಯ ವಿನಾಕಾರಣ ಅಮಾಯಕರನ್ನು ಅಮಾನುಷವಾಗಿ ಕೊಲೆ ಮಾಡುತ್ತಿದ್ದನು.  ಅವನೇನು ಕಳ್ಳತನಕ್ಕಾಗಿ ಕೊಲೆ ಮಾಡುತ್ತಿರಲಿಲ್ಲ.  ವಿಕೃತ ಮನುಷ್ಯನಂತೆ ತೋರುತ್ತಿದ್ದ.  ಅವನನ್ನು ಸೆರೆ ಹಿಡಿದು, ವೈದ್ಯಕೀಯ ತಪಾಸಣೆ ಮಾಡುತ್ತಿದ್ದಾರೆ. 

                                   serial_killer.jpg

ಇದೇ ರೀತಿಯಲ್ಲಿ ಉತ್ತರ ಮುಂಬಯಿಯ ಬೊರಿವಿಲಿಯ ಸುತ್ತಮುತ್ತಣ ಪ್ರದೇಶಗಳಲ್ಲಿ ಇನ್ನೊಬ್ಬ ವಿಕೃತ ವ್ಯಕ್ತಿ, ಇಳಿ ಸಂಜೆಯ ಕತ್ತಲಿನಲ್ಲಿ ಆಟೋ ಹತ್ತುವ ಮಹಿಳೆಯರನ್ನು ಮಚ್ಚಿನಿಂದ ಹೊಡೆದು ಘಾಸಿಗೊಳಿಸುತ್ತಿದ್ದನು.  ಆದರೆ ಅವನು ಆ ಮಹಿಳೆಯರು ಧರಿಸಿರುವ ಆಭರಣಗಳನ್ನು ಕಸಿಯಲು ಪ್ರಯತ್ನಿಸುತ್ತಿದ್ದನು. 

 

ಈ ಇಬ್ಬರೂ ೧೦ ರಿಂದ ೧೨ ದಿನಗಳವರೆವಿಗೆ ಪೊಲೀಸರ ಕೈಗೆ ಸಿಕ್ಕದಂತೆ ಅಮಾನುಷ್ಯ ಕೃತ್ಯಗಳಲ್ಲಿ ತೊಡಗಿ ಕೊನೆಗೆ ಸಿಕ್ಕಿಬಿದ್ದರು.  ಇಲ್ಲಿ ನಾನು ಈ ಕೃತ್ಯಗಳ ಬಗ್ಗೆ ವರದಿಯನ್ನು ನೀಡುತ್ತಿಲ್ಲ.  ಹೀಗೇಕೆ ಆಗುತ್ತಿದೆ, ಆಗುತ್ತದೆ, ಈ ಜನಗಳು ಹೀಗೆ ಮಾಡಲು ಕಾರಣವೇನು, ಇವರು ಹೀಗೆ ಮಾಡದಿರುವಂತೆ ಮಾಡಲು ಮುಂಜಾಗ್ರತೆಯಾಗಿ ಏನು ಮಾಡಬಹುದು, ಮಾಡಬೇಕು, ಮಾಡುತ್ತಿದ್ದೇವೆ, ಈ ವಿಷಯಗಳ ಬಗ್ಗೆ ನನ್ನ ಮನದಲ್ಲಿ ಮೂಡುತ್ತಿರುವ ನಾಲ್ಕಾರು ಅಂಶಗಳನ್ನು ಇಲ್ಲಿ ಬರಹದ ಮೂಲಕ ಪ್ರಸ್ತುತ ಪಡಿಸುತ್ತಿರುವೆ. 

 

ನಮ್ಮ ದೇಶದಲ್ಲಿ ಮೊತ್ತ ಮೊದಲಿಗೆ ಕಂಡು ಬರುವ ಅಂಶವೆಂದರೆ ಬಡತನ.  ಅದರ ಜೊತೆಗೆ ಅವಿದ್ಯಾವಂತಿಕೆ ಮತ್ತು ನಿರುದ್ಯೋಗವೂ ಅಂಟಿಕೊಂಡಿರುವುದು.     ಹೆಚ್ಚಿನ ಜನಗಳಿಗೆ ಹೊಟ್ಟೆಗೆ ಸರಿಯಾಗಿ ಎರಡು ಹೊತ್ತಿನ ಕೂಳು ಸಿಕ್ಕುವುದು ಕಷ್ಟಕರವಾದುದರಿಂದ, ಸುಲಭವಾಗಿ ಹೊಟ್ಟೆ ಹೊರೆದುಕೊಳ್ಳಲು, ಕಳ್ಳತನ, ಕೊಲೆ, ಸುಲಿಗೆ, ದರೋಡೆ ಮುಂತಾದ ದುಷ್ಕೃತ್ಯಗಳಿಗೆ ಮೊರೆ ಹೋಗುವರು.  ಹಾಗೆಯೇ ಸುಲಭದಿ ಕೈಗೆ ದುಡ್ಡು ಸಿಗುವುದರಿಂದ, ನಾಳಿನ ಬಗ್ಗೆ ಚಿಂತೆ ಇರುವುದಿಲ್ಲದ ಕಾರಣ,  ಹಣ ಗಳಿಕೆಯ ಮಹತ್ವವವನ್ನರಿಯದವರು ದುಂದುಗಾರಿಕೆ ಮಾಡುವರು.  ಇದರಿಂದ ದುಶ್ಚಟಗಳಿಗೆ ದಾಸರಾಗುವರು.  ಯಾವಾಗ ನಾಳಿನ ಚಿಂತೆ ಇಲ್ಲದೇ, ಇಂದಿನ ಜೀವಿತವನ್ನು ಮಾತ್ರ ಕಾಣುತ್ತಿರುವರೋ, ಆ ಸಮಯದಲ್ಲಿ ಮರುದಿನ ಎಲ್ಲಿಯೂ ಹಣ ದೊರೆಯದಿದ್ದರೆ, ದುಷ್ಕೃತ್ಯ ಮಾಡಲಾಗದಿದ್ದರೆ, ಭಿಕ್ಷೆ ಬೇಡುವರು.  ಕೆಲವೊಮ್ಮೆ ಪೊಲೀಸರ ಕೈಗೂ ಸಿಕ್ಕು, ಸೆರೆವಾಸ ಅನುಭವಿಸುವರು.  ನಮ್ಮ ದೇಶದಲ್ಲಿ ನ್ಯಾಯಾಂಗ ಕಠಿಣ ಶಿಕ್ಷೆಯನ್ನು ವಿಧಿಸದಿದುರಿಂದ, ಮತ್ತು ದುಷ್ಕೃತ್ಯವನ್ನು ನಿಖರವಾಗಿ ಸಾಬೀತು ಪಡಿಸದೇ ಶಿಕ್ಷೆಯನ್ನು ವಿಧಿಸದಿರುವುದರಿಂದ ಇಂತಹ ಸಮಾಜ ಘಾತುಕರು ಬಹಳ ಸುಲಭವಾಗಿ ಮರಳಿ ತಮ್ಮ ಕೆಲಸಗಳಿಗೆ ಮರಳುವರು. ಆ ವೇಳೆಗಾಗಲೇ ಪೊಲೀಸರ ಬೆತ್ತದ ರುಚಿಯನ್ನು ಕಂಡು, ಘಾಸಿಗೊಂಡ ಹುಲಿಯಂತಾದವರು, ಇನ್ನೂ ಹೆಚ್ಚಿನ ಗತಿಯಲ್ಲಿ ಅಮಾನುಷ ಕೃತ್ಯಗಳನ್ನು ಎಸಗುವರು.  ಇಂತಹವರುಗಳನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ರಾಜಕಾರಣಿಗಳು ಪೋಷಿಸುವುದೂ ಕಂಡು ಬರುತ್ತಿದೆ.  ಇಂತಹವರ ಕುಟುಂಬಗಳು ಗುಡಿಸಲುಗಳಲ್ಲಿ  ಇಲ್ಲದಿದ್ದರೆ ರಸ್ತೆ ಬದಿಯಲ್ಲಿ  ವಾಸಿಸುವರು.  ಇಂತಹವರು ವಿದ್ಯೆಯ ಮಹತ್ವವನ್ನರಿಯದಿದ್ದುದರಿಂದ ಮತ್ತು ಇವರುಗಳಿಗೆ ತಿಳಿಹೇಳುವವರೂ ಯಾರೂ ಹೆಚ್ಚಿನ ಸಂಖ್ಯೆಯಲ್ಲಿಲ್ಲದಿರುವುದರಿಂದ, ಇವರುಗಳ ಸಂತತಿಯೂ ಇದೇ ಕಾಯಕದಲ್ಲಿ ನಿರತರಾಗುವರು.  ಇದೊಂದು ವಿಷವರ್ತುಲ.    ಸಮಾಜದ ಒಳಿತಿನ ಹೊಣೆಯನ್ನು ನಾಗರಿಕರಾದ ನಾವೆಲ್ಲರೂ ಹೊರಲೇಬೇಕು.  ಈ ದಿಸೆಯಲ್ಲಿ ಮೊದಲಿಗೆ ಸುಲಭದಲ್ಲಿ ವಿದ್ಯೆಯನ್ನು ಕೊಡಿಸಿ, ಈ ವಿಷವರ್ತುಲದಿಂದ ಭೇದಿಸಿ, ಸಮಾಜ ಶಕ್ತಿಯಾಗಲು ಇಂತಹವರನ್ನು ಪೋಷಿಸಲು

ಮುಂದಾಗೋಣವೇ?

 

ಇನ್ನು ಈ ಬೀರ್‌ಮ್ಯಾನ್ ಬಗ್ಗೆ ತಿಳಿದುಬಂದ ಒಂದೆರಡು ಅಂಶಗಳನ್ನು ತಿಳಿಸಲಿಚ್ಛಿಸುವೆ.    ಸ್ವಲ್ಪ ಧೈರ್ಯ ತೋರಿಸಿ, ತನಗಾಗುವ ಘಾಸಿಯ ಕಡೆಗೆ ಗಮನ ಕೊಡದೇ ಮುನ್ನುಗ್ಗಿದರೆ, ಯಾರೂ ಎದುರು ನಿಲ್ಲುವುದಿಲ್ಲ.  ಎಷ್ಟೋ ಬಾರಿ ಸಣ್ಣಗಿದ್ದು, ಮೈನಲ್ಲಿ ಸರಿಯಾಗಿ ಶಕ್ತಿ ಇಲ್ಲದವರು ಹೆಚ್ಚಿನ ಶಕ್ತಿಯುತರನ್ನು ಹೆದರಿಸಿರುವ ಸಂದರ್ಭವನ್ನು ಎಲ್ಲರೂ ನೋಡಿರುವುದೇ ತಾನೆ!  ಈ ಮನುಷ್ಯನ (ಬೀರ್‌ಮ್ಯಾನ್), ಹೆಸರು ಕೆಲವೊಮ್ಮೆ ರವೀಂದ್ರ ಆದರೆ, ಇನ್ನು ಕೆಲವೊಮ್ಮೆ ರಹೀಮ್.  ಈತ ತನ್ನ ಕುಟುಂಬದೊಂದಿಗೆ ಮರೀನ್ ಲೈನ್ಸ್ ಹತ್ತಿರದ ರಸ್ತೆ ಬದಿಯಲ್ಲಿ ವಾಸವಾಗಿದ್ದನಂತೆ.  ಪೊಲೀಸರ ಕೈಗೆ ಸಿಕ್ಕಿ ಬಿದ್ದ ಮೇಲೆ ಈತನ ಕುಟುಂಬ ಈಗಲೂ ರಸ್ತೆ ಬದಿಯಲ್ಲಿಯೆ ವಾಸ ಇದೆಯಂತೆ.  ಪೊಲೀಸರು ಮಂಪರು ಪರೀಕ್ಷೆಗೆ ಗುರಿಪಡಿಸಿ, ಸತ್ಯಾಂಶ ಹೊರಹಾಕಿಸಿದಾಗ ತಿಳಿದ ಸುದ್ಧಿಯಂತೆ,  ವಸ್ತುತಃ ಈತ ಮುಸ್ಲಿಮನಾಗಿದ್ದು, ಮುಸ್ಲಿಮರಲ್ಲಿ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದವರ ಮೇಲೆ ಎರಗುತ್ತಿದ್ದನಂತೆ.  ಅದಲ್ಲದೇ ಇವನನ್ನು ಹಿಡಿದಿರುವ ಪೊಲೀಸರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದೂ, ತಾನು ಮುಕ್ತನಾಗಿ ಹೊರಗೆ ಬಂದ ಕೂಡಲೇ ಅವರ ಮೇಲೆ ಎರಗುವುದು ಖಂಡಿತವೆಂದೂ ತಿಳಿಸಿದ್ದಾನಂತೆ.  ಇದರಿಂದ ಪೊಲೀಸರ ಬೆನ್ನು ಹುರಿಯಲ್ಲಿ ಛಳಿ ಕಾಣಿಸಿಕೊಂಡಿದೆಯಂತೆ.  ಇಂತಹ ಸಮಾಜ ಘಾತುಕರನ್ನು ನ್ಯಾಯಾಲಯ ಸರಿಯಾಗಿ ಶಿಕ್ಷಿಸುವುದಿಲ್ಲವೆಂದು ಆತನೂ ಅರಿತಿರುವನು.  ಇಲ್ಲದಿದ್ದರೆ ಹೀಗೆ ಹೇಳುತ್ತಿದ್ದನೇ?  ಇಂತಹವರನ್ನು ಹೆಚ್ಚು ಹೆಚ್ಚಾಗಿ ಈ ಸಮಾಜದಲ್ಲಿ ಕಾಣದಿರುವಂತೆ ಮಾಡಲು ಏನು ಮಾಡಬೇಕು?  ನನ್ನ ಮನಸ್ಸಿನಲ್ಲಿ ಬರುವ ಚಿಂತನೆಯಂತೆ, ಮೊದಲು ನ್ಯಾಯಾಲಯ  ಕಡಿಮೆ ಕಾಲಾವಧಿಯಲ್ಲಿ ವಿಚಾರಣೆ ಮಾಡಿ ಸೂಕ್ತ ಶಿಕ್ಷೆಯನ್ನು ಕೊಟ್ಟು, ಮತ್ತೆ ಸಮಾಜದಲ್ಲಿ ಇತರರು ಇಂತಹ ಕೃತ್ಯಗಳನ್ನು ಎಸಗಲು ಧೈರ್ಯ ತೋರದಂತೆ ನೋಡಿಕೊಳ್ಳಬೇಕು.  ಎರಡನೆಯದಾಗಿ, ರಸ್ತೆ ಬದಿಯಲ್ಲಿರುವ ಮಕ್ಕಳಿಗೆ ಸೂಕ್ತವಾದ ಪುಕ್ಕಟೆ ಓದು ಬರಹಾನ್ನು ಕೊಟ್ಟು ಸಮಾಜವನ್ನು ಉದ್ಧರಿಸುವಂತೆ ಮಾಡಬೇಕು.  ಈ ಕೆಲಸವನ್ನು ನಾವು ನೀವು ಮಾಡಬೇಕಲ್ಲವೇ?  ಅದಕ್ಕೆ ಸೂಕ್ತವಾದ ಸರ್ಕಾರವನ್ನೂ ತಯಾರು ಮಾಡಬೇಕಲ್ಲವೇ?

 

 

 

ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 5

೧೯೮೫ರ ಕೊನೆಯ ಭಾಗದಲ್ಲಿ ಒಂದು ಸಣ್ಣ ಮನೆ ಮಾಡಿದ್ದೆನು.  ತ್ಯಾಗರಾಜನಗರದ ಆಟೋ ಮಾಲೀಕ ಗಂಗಣ್ಣನವರ ಎರಡು ಮಹಡಿ ಕಟ್ಟಡದಲ್ಲಿ ಒಂದು ಭಾಗದಲ್ಲಿ ನಾನಿದ್ದೆ. ಒಟ್ಟು ೬ ಮನೆಗಳಿದ್ದವು.  ಗಂಗಣ್ಣನವರಿಗೆ ಸರಿಯಾಗಿ ಓದಲು ಬರೆಯಲು ಬರುತ್ತಿರಲಿಲ್ಲ.  ಏನೇ ಪತ್ರ ವ್ಯವಹಾರ ಅಗ್ರೀಮೆಂಟ್ ಮಾಡಬೇಕಿದ್ದರೂ ನನ್ನ ಬಳಿಗೇ ಬರುತ್ತಿದ್ದರು.  ಆದರೆ ವ್ಯವಹಾರದಲ್ಲಿ ಮಾತ್ರ ಎತ್ತಿದ ಕೈ.  ಮೊದಲು ಅವರಿಗಿದ್ದದ್ದು ಒಂದು ಆಟೊ.  ಅದನ್ನು ಓಡಿಸುತ್ತಾ ಸ್ವಲ್ಪ ಹಣ ಮಾಡಿ ಇನ್ನೊಂದು ಆಟೊವನ್ನು ಕೊಂಡು ತ್ಯಾಗರಾಜನಗರದ ದತ್ತಾತ್ರೇಯ ದೇವಸ್ಥಾನದ ಹಿಂಭಾಗದಲ್ಲಿ ಒಂದು ನಿವೇಶನ ಕೊಂಡರು.  ಏನೂ ದುರಭ್ಯಾಸವಿರದ ಆತ ರಾತ್ರಿಯಲ್ಲಿ ಸ್ವಲ್ಪ ಹೊತ್ತು ಆಟೋ ಓಡಿಸಿ, ಬೆಳಗಿನ ಹೊತ್ತಿನಲ್ಲಿ ತನ್ನ ತಾಯಿ ಮತ್ತು ಪತ್ನಿಯ ಸಹಾಯದಿಂದ ಮತ್ತು ನಾಲ್ಕೈದು ಕೆಲಸಗಾರರ ಸಹಾಯದಿಂದ ಎರಡು ಮಹಡಿಯ ಕಟ್ಟಡ ಕಟ್ಟಿಯೇ ಬಿಟ್ಟಿದ್ದರು.  ಅದರಲ್ಲಿ ಒಟ್ಟು ೬ ಮನೆಗಳಿದ್ದವು.  ಒಂದು ಮನೆಯಲ್ಲಿ ತಾವಿದ್ದುಕೊಂಡು ಇನ್ನೈದನ್ನು ಬಾಡಿಗೆಗೆ ಕೊಟ್ಟಿದ್ದರು.  ಅವರ ಮನೆಗೆ ಬಂದ ಮೊದಲ ಗಿರಾಕಿಯೇ ನಾನು.   ಮನೆಗೆ ಮೊದಲ ಅಗ್ರೀಮೆಂಟು ನನ್ನದೇ.  ಅದನ್ನು ಬರೆದವನೂ ನಾನೇ!  ಆ ಕರಾರು ೧೧ ತಿಂಗಳದ್ದೆಂದೂ ಮರು ಕರಾರಿನ ಸಮಯದಲ್ಲಿ ಬಾಡಿಗೆಯನ್ನು ಶೇಕಡಾ ೫ ರಷ್ಟು ಹೆಚ್ಚಿಸುವುದಾಗಿಯೂ ಬರೆಯುವಂತೆ ಕೇಳಿಕೊಂಡಿದ್ದರು.   ಆಗ ನನ್ನ ಮನೆಗೆ ನಿಗದಿಪಡಿಸಿದ್ದ ತಿಂಗಳ ಬಾಡಿಗೆ ರೂ. ೨೦೦/-.   ಇದು ಬಹು ಕಡಿಮೆಯಾದ್ದರಿಂದ ಅವರು ಹೇಳಿದ್ದಕ್ಕೆಲ್ಲಾ ನಾನು ಒಪ್ಪಿದ್ದೆ.  ಆದರೆ ಮುಂದೆ ಮನೆಗೆ ಬಂದ ಬಾಡಿಗೆದಾರರಿಗೆ ಗಂಗಣ್ಣನವರ ಕರಾಮತ್ತಿನ ಅರಿವಾಗಿ ನನ್ನ ಮೇಲೆ ತಿರುಗಿ ಬಿದ್ದಿದ್ದರು.  ಅವರ ಎಲ್ಲ ಪ್ರತಿಕ್ರಿಯೆಗಳಿಗೂ ಗಂಗಣ್ಣನವರ ಕಡೆ ಕೈ ತೋರಿಸುತ್ತಿದ್ದೆ.  ಅಂತಹ ಸಂದರ್ಭದಲ್ಲಿ ಗಂಗಣ್ಣ ಬಹು ಸುಲಭವಾಗಿ ನುಣುಚಿಕೊಳ್ತಿದ್ದರು. 

 

ಈ ಗಂಗಣ್ಣನವರ ಮನೆಯಲ್ಲಿ ತನ್ನ ತಾಯಿ, ಪತ್ನಿ ಮತ್ತು ಎರಡು ಗಂದು ಮತ್ತು ಒಂದು ಹೆಣ್ಣು ಮಗುವಿದ್ದಿತು.  ಮೊದಲ ಮಗನಿಗೆ ೮ ವರ್ಷವಾಗಿದ್ದರೂ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ.   ಸ್ವಲ್ಪ ಪುಂಡಾಡಿಟಿಕೆ ಮಾಡುತ್ತಿದ್ದ ಹುಡುಗ.  ಅಪ್ಪ ಅಮ್ಮನನ್ನು ಸುಲಭವಾಗಿ ಮೋಸಗೊಳಿಸುತ್ತಿದ್ದ.  ಅವನ ಬಗ್ಗೆ ನಾನಷ್ಟು ಗಮನಿಸಿರಲಿಲ್ಲ.  ಅಂದು ರಾತ್ರಿ ಸ್ವಲ್ಪ ತಡವಾಗಿ ಮನೆಗೆ ಬಂದೆ.  ಕೆಳಗೆ ಗೇಟಿನ ಹತ್ತಿರ ಎರಡೂ ಆಟೋಗಳು ನಿಂತಿದ್ದವು.  ಒಂದು ಆಟೋವಿನಲ್ಲಿ ಈ ಹುಡುಗ ಕುಳಿತು ಏನನ್ನೋ ಮಾಡುತ್ತಿದ್ದಂತೆ ಕಂಡಿತು.  ಇಷ್ಟು ಹೊತ್ತಿನಲ್ಲಿ ಈ ಹುಡುಗ ಏನು ಮಾಡುತ್ತಿದ್ದಾನೆ ನೋಡೋಣ ಎಂದು ನಾನು ಆಟೋವಿನ ಒಳಗೆ ಬಗ್ಗಿ ನೋಡಲು, ಕಂಡದ್ದೇನು?  ಆ ಹುಡುಗ ಆಟೋದಲ್ಲಿನ ಪೆಟ್ರೋಲ್ ಟ್ಯಂಕ್ ಮುಚ್ಚಳ ತೆಗೆದು ವಾಸನೆ ಹೀರುತ್ತಿದ್ದ.  ನನ್ನನ್ನು ನೋಡುತ್ತಿದ್ದಂತೆಯೇ ಮನೆಯೊಳಗೆ ಓಡಿ ಹೋದ.  ಅಂದಿನಿಂದ ಆ ಹುಡುಗನ ಮೇಲೆ ನಿಗಾ ಇಡಲಾರಂಭಿಸಿದೆ.  ಪ್ರತಿ ದಿನ ಯಾರೂ ಇಲ್ಲದ ಸಮಯದಲ್ಲಿ ಈ ಹುಡುಗ ಯಾವುದಾದರೂ ಆಟೋ ನಿಂತಿದ್ದರೆ ಅದರ ಪೆಟ್ರೋಲ್ ಟ್ಯಾಂಕಿನ ಮುಚ್ಚಳ ತೆಗೆದು ವಾಸನೆ ಹೀರುತ್ತಿದ್ದ.  ಈ ವಿಷಯವನ್ನು ಗಂಗಣ್ಣನವರಿಗೆ ತಿಳಿಸಿದೆ.  ಅವರು ಹೇಳಿದಂತೆ ಈ ಹುಡುಗ ಮನೆಯೊಳಗೆ ಬರುತ್ತಿದ್ದಂತೆ ಮತ್ತು ಬಂದವನಂತೆ ಮಲಗಿಬಿಡುತ್ತಿದ್ದನಂತೆ.  ಆಗ ನಮ್ಮಿಬ್ಬರಿಗೆ ತಿಳಿದದ್ದು ಏನೆಂದರೆ, ಪೆಟ್ರೋಲ್ ವಾಸನೆ ಆ ಹುಡುಗನಿಗೆ ಮತ್ತು ಬರಿಸುತ್ತಿತ್ತು ಮತ್ತು ಅವನು ಅದರ ಚಟಕ್ಕೆ ಬಲಿಯಾಗುತ್ತಿದ್ದನು.  ಹುಡುಗನ ಮೇಲೆ ಹೆಚ್ಚಿನ ನಿಗಾ ಇಡಲು ಮತ್ತು ಅವನನ್ನು ಪ್ರತಿದಿನ ಸಂಜೆ ಒಂದು ಘಂಟೆಗಳ ಕಾಲ ನನ್ನ ಹತ್ತಿರ ಪಾಠಕ್ಕೆ ಕಳುಹಿಸಲು ಹೇಳಿದೆ.  ಹಾಗೆಯೇ ಒಮ್ಮೆ ಶಾಲೆಯ ಮಾಸ್ತರರನ್ನೂ ಭೇಟಿಯಾಗಿ, ಈ ಹುಡುಗನ ಬಗ್ಗೆ ಹೆಚ್ಚಿನ ನಿಗಾ ಇಡುವಂತೆ ಕೇಳಿಕೊಳ್ಳಲೂ ಗಂಗಣ್ಣನವರಿಗೆ ತಿಳಿಸಿದ್ದೆ. 

 

*****************

 

ಅದೇ (೧೯೮೫-೮೬) ಸಮಯದಲ್ಲಿ ಫುಟ್‍ಬಾಲ್ ವಿಶ್ವಕಪ್ ಪಂದ್ಯಗಳು ಪ್ರಾರಂಭವಾಗುತ್ತಿದ್ದವು.   ಅಲ್ಲಿಯವರೆವಿಗೆ ನನಗೆ ಕ್ರಿಕೆಟ್ ಬಿಟ್ಟು ಮತ್ತಿನ್ಯಾವ ಆಟಗಳಲ್ಲೂ ಅಭಿರುಚಿ ಇರಲಿಲ್ಲ.  ನನ್ನ ಸ್ನೇಹಿತ ಲಕ್ಷ್ಮೀನಾರಾಯಣ ಆ ಸಮಯದಲ್ಲಿ ಟಿವಿ ತೆಗೆದುಕೊಳ್ಳಲು ಹೇಳಿದ್ದ.  ಅಲ್ಲಿಯವರೆವಿಗೆ ನನ್ನ ಮನೆಯಲ್ಲಿ ಇದ್ದ ವಸ್ತುಗಳೆಂದರೆ ೩-೪ ಪಾತ್ರೆಗಳು, ಗ್ಯಾಸ್, ಒಂದು ಕುರ್ಚಿ, ಒಂದು ಚಾಪೆ, ಹೊದ್ದಿಕೆ, ಎರಡು ಬಕೆಟ್‍ಗಳಷ್ಟೇ. 

 

ಟಿವಿ ಎಲ್ಲಿ ತೆಗೆದುಕೊಳ್ಳಬೇಕು, ಯಾವುದು ಚೆನ್ನಾಗಿರುತ್ತದೆ ಏನೂ ತಿಳಿದಿರಲಿಲ್ಲ.  ಕಡೆಗೆ ಲಕ್ಷ್ಮೀನಾರಾಯಣನೇ ಒಂದು ಚಿಕ್ಕ ಡಯನೋರಾ ಟಿವಿ ಕೊಡಿಸಿದ್ದ.  ಟಿವಿ ಮನೆಗೆ ಬಂದ ಕೂಡಲೇ ದಿನವಹೀ ಸಂಜೆಗೆ ಏನೇ ಕಾರ್ಯಕ್ರಮ ಬರಲಿ,  ಸುತ್ತ ಮುತ್ತಲಿದ್ದ ಎಲ್ಲ ಮಕ್ಕಳೂ ಮನೆಯ ಬಾಗಿಲ ಹತ್ತಿರ ಬಂದು ಕುಳಿತುಬಿಡುತ್ತಿದ್ದರು.  ಏನೇ ಕಾರ್ಯಕ್ರಮ ಬಂದರೂ ನೋಡ್ತಿದ್ದ ನಾನು ಫುಟ್‍ಬಾಲ್ ಮ್ಯಾಚ್ ಇದ್ದಾಗ ರಾತ್ರಿಯೆಲ್ಲ ಜಾಗರಣೆ ಮಾಡ್ತಿದ್ದೆ.  ಹೀಗೆಯೇ ಒಮ್ಮೆ ಬೆಳಗಿನ ಜಾವ ೩ ಘಂಟೆಯವರೆವಿಗೂ ಮ್ಯಾಚ್ ನೋಡಿದವನು ಬೆಳಗ್ಗೆ ೭ ಘಂಟೆಗೆ ಎದ್ದಾಗ ಕಣ್ಣುರಿ.  ಸ್ನಾನ ಇತ್ಯಾದಿ ಮುಗಿಸಿ, ೮ ಘಂಟೆಯ ಹೊತ್ತಿಗೆ ಹೇಗೂ ಬ್ಯಾಂಕಿಗೆ ಹೊರಡಲು ಇನ್ನೂ ೧ ಘಂಟೆ ಇರುವುದೆಂದು, ಹಾಗೆಯೇ ಚಾಪೆಯ ಮೇಲೆ ಮಲಗಿದ್ದೆ.  ಯಾವಾಗ ನಿದ್ರೆ ಬಂದಿತೋ ತಿಳಿಯದು – ಮುಂದುಗಡೆಯ ಬಾಗಿಲನ್ನೂ ಹಾಕಿರಲಿಲ್ಲ.  ನನ್ನ ಸ್ನೇಹಿತ ಸೀದಾ ಮನೆಯೊಳಗೆ ಬಂದು ಮೈ ಮುಟ್ಟಿ ಎಬ್ಬಿಸಿದಾಗಲೇ ತಿಳಿದದ್ದು ಸಮಯ ೯.೩೦ ಆಗಿದೆ ಎಂದು.  ಹಾಗೆಯೇ ದಡ ಬಡಾಂತ ಬ್ಯಾಂಕಿಗೆ ಓಡಿದ್ದೆ.  ಮನೆಯಲ್ಲಿ ಏನನ್ನೂ ತಿನ್ನಲಾಗಿರಲಿಲ್ಲ ಮತ್ತು ಕ್ಯಾಂಟಿನಿಗೂ ಹೋಗಲು ಸಮಯ ಆಗಲಿಲ್ಲ. ರಾತ್ರಿ ಜಾಗರಣೆ ಆಗಿತ್ತು, ಬೆಳಗ್ಗೆ ಉಪವಾಸ. 

 

ಒಂದು ಭಾನುವಾರ ನಾವು ಸ್ನೇಹಿತರೆಲ್ಲರೂ ನಮ್ಮ ಸೈಟುಗಳಿದ್ದ ಜಾಗಕ್ಕೆ ಹೋಗೋಣ ಎಂದು ತೀರ್ಮಾನಿಸಿದ್ದೆವು.  ಜಯನಗರ ಕಾಂಪ್ಲೆಕ್ಸಿನ್ನಿಂದ ಮುಂದಕ್ಕೆ ಬಟಾಬಯಲು ಇದ್ದಿತ್ತು.  ಎಲ್ಲೋ ಅಲ್ಲಲ್ಲಿ ಒಂದೊಂದು ಮನೆಗಳ್ಳಿದ್ದಿತ್ತು ಅಷ್ಟೆ.  ಜೆ.ಪಿ.ನಗರಕ್ಕೆ ಬಸ್ಸುಗಳು ಸಹಿತ ಇರಲಿಲ್ಲ.  ನಡೆದೇ ಹೋಗಿದ್ದೆವು.  ಜೆಪಿ ನಗರದ ೧೫ನೇ ಕ್ರಾಸಿನಿಂದ ಮುಂದಕ್ಕೆ ರಸ್ತೆಯೂ ಸರಿಯಾಗಿರಲಿಲ್ಲ.  ಗದ್ದೆಯೆ ಮಧ್ಯದಿಂದ, ಕೆರೆಯ ಏರಿಯ ಮೇಲೆ ಹೋದಾಗ ಮುಂದೆ ಕಂಡದ್ದು ಒಂದು ದೊಡ್ಡ ಮಾವಿನ ತೋಪು.  ಅಲ್ಲಿ ಬೋರ್ಡ್ ಇರಲಿಲ್ಲ. ದೊಡ್ಡದಾದ ತೋಟದಲ್ಲಿ ಮೊದಲಿಗೆ ಕಾಣಿಸಿದ್ದೇ ಕಪ್ಪು ದ್ರಾಕ್ಷಿಗಳ ಬಳ್ಳಿಗಳು.  ಇದೇ ನಮ್ಮ ಸೊಸೈಟಿಯೆಂದು ತಿಳಿದೆವು.   ಸಣ್ಣ ಗೇಟ್ ಇದ್ದಿತ್ತು.  ಅದನ್ನು ತಳ್ಳಿಕೊಂಡು ಒಳ ಹೋದ ಕೂಡಲೇ ಅಲ್ಲಿದ್ದ ಮಾಲಿ ಬಂದು ಯಾರು ನೀವು, ನಿಮಗೇನು ಬೇಕು?’ ಎಂದು ಕೇಳಿದ.  ಅದಕ್ಕೆ ನಾವು ಇಲ್ಲಿ ಮುಂದೆ ಮನೆ ಕಟ್ಟುವವರು, ನಮ್ಮಗಳ ಸೈಟ್ ನೋಡಲು ಬಂದಿದ್ದೇವೆ‘, ಎಂದು ಹೇಳಿದೆವು.  ಅದಕ್ಕವನು, ‘ಈಗ ಇಲ್ಯಾವ ಸೈಟನ್ನೂ ಮಾಡಿಲ್ಲ, ಮಾಡಿದ ಮೇಲೆ ಬನ್ನಿ, ಈಗ ಒಳಗೆ ಬರೋ ಹಾಗಿಲ್ಲಎಂದ.   ಆಗ ನಮಗೆ ಬಲು ಕೋಪ ಬಂದಿತ್ತು, ‘ನಮ್ಮ ನೆಲಕ್ಕೆ ಕಾಲಿಟ್ಟ ನಮ್ಮನ್ನೇ ಯಾರು ಅಂತ ಕೇಳೋ ಇವನ್ಯಾವನು, ಅಂತ ಅಂದುಕೊಂಡು, ಪಕ್ಕದಲ್ಲೇ ಇದ್ದ ತೆಂಗಿನ ಮರ ನೋಡಿ ಸರಿ ಎರಡು ಎಳನೀರು ಕಿತ್ತುಕೊಡುಎಂದು ಹೇಳಿದೆವು.  ಅವನಂತೂ ನಮ್ಮ ಮೇಲೆ ಜಗಳ ಕಾಯಲು ಬಂದೇಬಿಟ್ಟ.  ಒಂದು ಸಲ ಹೇಳಿದರೆ, ನಿಮಗರ್ಥ ಆಗೋಲ್ವೇ?  ನಡೀರಿ ಆಚೆಗೆ‘.  ಅಷ್ಟು ಹೊತ್ತಿಗೆ ಸೊಸೈಟಿಯ ಡೈರೆಕ್ಟರುಗಳಲ್ಲೊಬ್ಬರಾದ ಈಶ್ವರಮೂರ್ತಿಗಳು ಬರುತ್ತಿರುವುದು ಕಾಣಿಸಿತು.  ಅವರಿಗೆ ನಮಸ್ಕಾರ ಹೇಳಿದೆವು.  ಅದಕ್ಕವರು, ‘ಇದೇನು ನೀವೆಲ್ಲಾ ಇಲ್ಲಿ?  ಇವತ್ತು ಪೂಜೆ ಇದೆ, ನಿಮಗೆಲ್ಲಾ ಹೇಳುವಂತೆ ಪುತ್ತೂರಾಯರಿಗೆ ಹೇಳಿದ್ದೆವು (ನಂತರ ಇದು ಸುಳ್ಳಿನ ಮಾತೆಂದು ತಿಳಿಯಿತು).  ಬಂದದ್ದು ಒಳ್ಳೆಯದೇ ಆಯ್ತು.  ನಡೀರಿ ಒಳಗೆ, ಅಲ್ಲಿ ಪೂಜೆ ಶುರು ಆಗತ್ತೆ‘, ಅಂದರು.  ಅಲ್ಲಿ ನೋಡಿದ್ರೆ ಬರಿ ಅವರುಗಳೇ (ಡೈರಕ್ಟರುಗಳು ಮತ್ತು ಅವರುಗಳ ಮನೆಯವರು) ತುಂಬಿದ್ದಾರೆ.  ಸಾಮಾನ್ಯ ಸದಸ್ಯರುಗಳ್ಯಾರೂ ಇಲ್ಲ.  ತೋಟವನ್ನು ಸುತ್ತಿ ಬರುವೆವು ಎಂದು ತಿಳಿಸಿದ್ದಕ್ಕೆ, ‘ಬನ್ನಿ ಜಾಗ ಪೂರ್ತಿಯಾಗಿ ತೋರಿಸುವೆ, ಲೇ! ನಾಯರ್ ಇವರುಗಳಿಗೆಲ್ಲಾ ಪರಮಾಯಿಷಿ ಎರಡೆರಡು ಎಳನೀರು ಕಿಟ್ಟು ಕೊಡೋಎಂದರು.  ನಮಗೆಲ್ಲಾ ಅತೀವ ಸಂತೋಷವಾಗಿತ್ತು.  ಈ ಸಲ ಚುನಾವಣೆ ಆದ್ರೆ ಇವರುಗಳಿಗೆ ಮತ ನೀಡಬೇಕೆಂದು ಮನಸ್ಸು ಮಾಡಿದ್ದೆವು.

 

ಅಲ್ಲಿದ್ದ ದ್ರಾಕ್ಷಿ ತೋಟ, ಸಪೋಟ ತೋಟ, ತೆಂಗಿನ ತೋಟ, ಮಾವಿನ ತೋಪು, ದಾಳಿಂಬೆ ತೋಟ ಇತ್ಯಾದಿ ಎಲ್ಲವನ್ನೂ ನೋಡಿ, ಸ್ವಲ್ಪ ಸರಕನ್ನು ಕಿತ್ತುಕೊಂಡಿದ್ದೆವು.  ಪೂಜೆ ಇದ್ದ ಸ್ಥಳಕ್ಕೆ ಮರುಳುವ ಸಮಯಕ್ಕೆ ಸರಿಯಾಗಿ ಎಲ್ಲರೂ ಊಟಕ್ಕೆ ಕಾಯ್ತಿದ್ದರು.  ಸಕ್ಕರೆ ಪೊಂಗಲ್ ಮತ್ತು ಪುಳಿಯೋಗರೆಗಳನ್ನು ಒಳಗೊಂಡಿದ್ದ ಸುಗ್ರಾಸ ಭೋಜವನಕ್ಕೆ ಮನ ಸೋತಿದ್ದೆವು.  ವಾಪಸ್ಸು ಬರುವಾಗ ಮತ್ತೆ ಆ ಮಾಲಿ ನೋಡುತ್ತಿದ್ದಂತೆಯೇ ಒಂದಷ್ಟು ದ್ರಾಕ್ಷಿಗಳನ್ನು ಕಿತ್ತು ನಮ್ಮ ನಮ್ಮ ಚೀಲಗಳಿಗೆ ತುಂಬಿಸಿಕೊಂಡು ಅವನೆಡೆಗೆ ಕುಹಕ ನಗೆ ಬೀರಿದ್ದೆವು.  ಅಂದು ಮಾಡಿದ್ದು ಸರಿಯಲ್ಲವೆಂದು ಇಂದು ಅನ್ನಿಸುತ್ತಿದೆ.  ಆದರೇನು ಇವೆಲ್ಲಾ ಜೀವನದ ಒಂದೊಂದು ಆಯಾಮಗಳು.  ಮತ್ತೆ ಮತ್ತೆ ಮೆಲುಕು ಹಾಕಲು ಸರಕುಗಳು.

 

 

**************

 

ಬ್ಯಾಂಕಿನ ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಮಾಡುವವರಿಗೆ ಹೊಸ ನೋಟುಗಳನ್ನು ತಾಲ್ಲೂಕುಗಳಲ್ಲಿರುವ ಕರೆನ್ಸಿ ಚೆಸ್ಟ್‍ಗಳಿಗೆ ತೆಗೆದುಕೊಂಡು ಹೋಗುವ ಅವಕಾಶ ಸಿಗುತ್ತದೆ.  ಅದನ್ನು ರೆಮಿಟೆನ್ಸ್ ಡ್ಯೂಟಿ ಎಂದು ಕರೆಯುವರು.  ಮೊದಲ ಬಾರಿಗೆ ಗುಲ್ಬರ್ಗಾ ಜಿಲ್ಲೆಯ ಗುರುಮಠಕಲ್ಲಿಗೆ ಹೋಗಿದ್ದೆ.  ಅಲ್ಲಿಯ ಸಂಚಾರ ವ್ಯವಸ್ಥೆ, ರಸ್ತೆಗಳು ಮತ್ತು ಬಿಸಿಲಿನ ಬಗ್ಗೆ ಹೇಳುವುದಕ್ಕಿಂತ ಅನುಭವಿಸಿದರೇ ತಿಳಿಯುವುದು. 

 

ಬೆಂಗಳೂರಿನಿಂದ ಟ್ರೈನ್‍ನಲ್ಲಿ ಯಾದಗಿರಿಗೆ ಹೋಗಿ ಅಲ್ಲಿಂದ ಮುಂದಕ್ಕೆ ರಸ್ತೆಯ ಮೂಲಕ ಗುರುಮಠಕಲ್ಲಿಗೆ ಹೋಗಿದ್ದೆ.   ೫೦ ಕಿಲೋಮೀಟರ್ ಗಳ ರಸ್ತೆಯ ದೂರವನ್ನು ಕ್ರಮಿಸಲು ತೆಗೆದುಕೊಂಡ ವೇಳೆ ಮೂರು ಘಂಟೆಗಳು.  ಗುರುಮಠಕಲ್ ಇರುವುದು ಆಂಧ್ರಪ್ರದೇಶದ ಗಡಿಯಲ್ಲಿ.  ಇದೊಂದು ಸಣ್ಣ ಊರು.  ವ್ಯಾಪಾರಕ್ಕಾಗಿ ಆಂಧ್ರದಿಂದ ಇಲ್ಲಿಗೆ ಬರುವವರು ಬಹಳ ಮಂದಿ.  ಹತ್ತಿರದಲ್ಲೇ ಇರುವ ಆಂಧ್ರದ ನಾರಾಯಣಪೇಟೆಗೆ ಕನ್ನಡಿಗರು ವ್ಯಾಪಾರಕ್ಕಾಗಿ ಹೋಗುವರು.  ಈ ಊರಿನಲ್ಲಿ ೩-೪ ರಸ್ತೆಗಳಲ್ಲಷ್ಟೇ ಜನಸಂದಣಿ.  ಬಸ್ ನಿಲ್ದಾಣದ ಹತ್ತಿರ ಇರುವುದೊಂದೇ ಹೊಟೆಲ್.  ಒಂದೆರಡು ಖಾನಾವಳಿಗಳಿವೆಯಷ್ಟೆ.   ಊರು ಬಸ್ ನಿಲ್ದಾಣದಿಂದ ಪ್ರಾರಂಭವಾಗುವುದು.  ಅನತಿ ದೂರಿದಲ್ಲಿ ಟ್ರಾವಲರ್ಸ್ ಬಂಗಲೆ ಇದೆ.  ಅಲ್ಲಿಂದ ಸ್ವಲ್ಪ ದೂರ ಹೋಗಲು ಗಡಿ ಭಾಗ ಬರುವುದು.  ಇಲ್ಲಿ ಜನಗಳಾಡುವ ಭಾಷೆಯಲ್ಲಿ ಉರ್ದು, ತೆಲುಗು ಮಿಶ್ರಿತವಾದ ಕನ್ನಡ. 

 

ರಸ್ತೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ  ನಡೆದಾಡುವುದು ಬಲು ಕಷ್ಟ.  ತಲೆಯ ಮೇಲೆ ಉರಿ ಬಿಸಿಲು.  ಕೆಳಗೆ ಕಾದ ನೆಲ.  ಅನೇಕ ಹಳ್ಳಿಗರು ಬರಿಗಾಲಿನಲ್ಲಿ ಅದು ಹೇಗೆ ನಡೆಯುತ್ತಾರೋ ಏನೋ?  ಹಲವರ ಚಪ್ಪಲಿಗಳನ್ನು ಟೈರುಗಳಿಂದ ಮಾಡಿರುತ್ತಾರೆ.  ಎಲ್ಲೆಲ್ಲಿಯೂ ಉಷ್ಣವಿರುದುರಿಂದ ಇಲ್ಲಿಯ ಜನಗಳು ಹಸಿಮೆಣಸಿನಕಾಯಿಯನ್ನು ಹಾಗೆಯೇ ತಿಂದರೂ ಜೀರ್ಣಿಸಿಕೊಳ್ಳಬಲ್ಲರು – ಅವರಿಗೆ ಅದು ಹೆಚ್ಚಿನ ಖಾರವೆನಿಸುವುದಿಲ್ಲ.    ನಾನು ಅಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದಿಗೆ ಹೋಗಿದ್ದೆ.  ಅಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಒಬ್ಬರು ಬೆಂಗಳೂರಿನವರಿದ್ದರು.  ಈಗ ಅವರ ಹೆಸರು ನೆನಪಿಲ್ಲ.  ಬಹುಶ: ಮುರಳಿ ಅಂತ ಇರಬೇಕು.    ಆ ಊರಿನಲ್ಲಿ ಹೊಟೆಲ್ ಇಲ್ಲದಿರುವುದರಿಂದ, ಉಳಿದುಕೊಳ್ಳಲು ಕಷ್ಟವಾಗುವುದೆಂದು ತಮ್ಮ ಕೋಣೆಗೆ ಬರಲು ಹೇಳಿದ್ದರು.  ಊಟಕ್ಕೆ ವಸತಿಗೆ ಎಲ್ಲಿ ಹೋಗಬೇಕೆಂದು ಯೋಚಿಸುತ್ತಿದ್ದ ನನಗೂ ಅದೇ ಬೇಕಿತ್ತು.  ನಾನಲ್ಲಿದ್ದದ್ದು ೧೦ ದಿನಗಳ ಕಾಲ.  ಬೆಳಗ್ಗೆ ಸ್ನಾನ ಮಾಡಲು ಅವಕಾಶವಿರಲಿಲ್ಲ.   ಕುಡಿಯುವ ನೀರಿಗೆ ಮಾತ್ರ ಬಹಳ ತೊಂದರೆ ಇದೆ.  ಇದೊಂದು ಬರಪೀಡಿತ ಪ್ರದೇಶ.  ಇವರಿದ್ದ ಬೀದಿಯಲ್ಲಿ, ಪ್ರತಿ ದಿನ ಮಧ್ಯಾಹ್ನ ೧ ಘಂಟೆಗೆ ಒಂದು ಘಂಟೆಗಳ ಕಾಲ ಬೀದಿ ನಲ್ಲಿಯಲ್ಲಿ ನೀರು ಬರುತ್ತಿತ್ತು.  (ಆದರೆ ಬ್ಯಾಂಕಿಗೆ ಮಾತ್ರ ನೀರಿನ ಬೇರೆ ವ್ಯವಸ್ಥೆ ಇತ್ತು).  ನೀರು ಬರುವ ಸಮಯದಲ್ಲಿ ಸಾರ್ವಜನಿಕರೆಲ್ಲರೂ ಮನೆಯ ಹತ್ತಿರದ ನಲ್ಲಿಗಳ ಮುಂದೆ ಸರತಿಯ ಸಾಲಿನಲ್ಲಿ ನಿಂತಿರುವುದನ್ನು ನೋಡುವುದು ಒಂದು ಸಾಮಾನ್ಯ ದೃಶ್ಯ.  ಇದರ ಬಗ್ಗೆ ನನಗೆ ತಿಳಿಯದ ನಾನು ಮೊದಲನೆಯ ದಿನ ಮಧ್ಯಾಹ್ನ ಕ್ಯಾಷಿಯರ್ ಎಲ್ಲಿ ಎಂದು ಕೇಳಿದ್ದಕ್ಕೆ, ಅಲ್ಲಿದ್ದವರೊಬ್ಬರು ಜಳಕ ಮಾಡ್ಲಿಕ್ ಹೋಗ್ಯಾರ್ರೀಎಂದಾಗ ಅವಾಕ್ಕಾಗಿದ್ದೆ.  ಮಾರನೆಯ ದಿನ ಬೆಳಗ್ಗೆ (ಅಲ್ಲಿ ಅದು ನನ್ನ ಮೊದಲ ಬೆಳಗ್ಗೆ), ನನ್ನ ಸ್ನೇಹಿತರು ಶೌಚ ಕರ್ಮಗಳಿಗೆ ಬ್ಯಾಂಕಿಗೆ ಹೋಗಿಬರೋಣ, ನಿಮ್ಮಿಂದಾಗಿ ನಮಗೂ ಬ್ಯಾಂಕಿನ ನೀರು ಉಪಯೋಗಿಸುವ ಅವಕಾಶವನ್ನು ಮ್ಯಾನೇಜರ್ ಮಾಡಿಕೊಟ್ಟಿದ್ದಾರೆ ಎಂದು ಸಂತೋಷದಿಂದ ಹೇಳಿದ್ದರು.   ಅಂದಿನಿಂದ ನಾನಿರುವವರೆವಿಗೂ ಅವರಿಗೂ ಬ್ಯಾಂಕಿನಲ್ಲೇ ಬೆಳಗಿನ ಸ್ನಾನದ ಅವಕಾಶವೂ ಸಿಕ್ಕಿತ್ತು.  ನನಗೆ ಪ್ರತಿದಿನ ಅನ್ನ ಸಾರು ಮೊಸರಿನ ಊಟದ ಸಿಗುತ್ತಿತ್ತು.  ನನ್ನಿಂದ ಅವರೂ ಒಂದೆರಡು ಸುಲಭದ ಅಡುಗೆ ವಿಧಾನವನ್ನು ಕಲಿತಿದ್ದರು.

 

ಈ ಮಧ್ಯೆ ಎರಡು ದಿನಗಳ ರಜೆ ಸಿಕ್ಕಿದುದರಿಂದ, ಹತ್ತಿರವಿರುವ ಊರುಗಳನ್ನು ನೋಡಿ ಬರಲು ನನ್ನ ಇನ್ನೊಬ್ಬ ಸ್ನೇಹಿತರಾದ ಡಿ.ಎಮ್.ಪಾಟೀಲರು ಕರೆದಿದ್ದರು.  ಅವರು ಹೋಗಿದ್ದುದು ಹುನಗುಂದಕ್ಕೆ.  ನಾನು ಗುರುಮಠಕಲ್ಲಿನಿಂದ ಹುನಗುಂದಕ್ಕೆ ಹೋಗಬೇಕಿತ್ತು.  ಯಾದಗಿರಿಗೆ ಬಂದು ಅಲ್ಲಿಂದ ನಾರಾಯಣಪುರ ಅಣೆಕಟ್ಟು ದಾಟಿ ಹುನಗುಂದ ಬಂದು ಸೇರಲು ತೆಗೆದುಕೊಂಡ ಸಮಯ ೫ ಘಂಟೆಗಳು.  ಅಂದು ರಾತ್ರಿ ಅವರೊಂದಿಗೆ ಇದ್ದು ಮಾರನೆಯ ದಿನ ಬೆಳಗ್ಗೆ ವಿಜಾಪುರಕ್ಕೆ ಹೋಗಿದ್ದೆವು.  ನೋಡಲು ವಿಜಾಪುರವು ಒಂದು ಉತ್ತಮ ಪ್ರೇಕ್ಷಣೀಯ ಸ್ಥಳ.  ಗೋಲಗುಂಬಝ್ ಬಹಳ ದೊಡ್ಡದಾದ ಗೋಲಾಕಾರದ ಕಟ್ಟಡ.  ಗೋಡೆಯ ಒಂದು ಭಾಗದಲ್ಲಿ ಪಿಸು ಮಾತನಾಡಿದರೂ ಇನ್ನೊಂದು ಭಾಗದ ಗೋಡೆಗೆ ಕಿವಿಗಾನಿಸಿಕೊಳ್ಳಲು ಅದು ಕೇಳಿಸುವುದು.  ಯಾವ ತಾಂತ್ರಿಕತೆ ಉಪಯೋಗಿಸಿ ಇದನ್ನು ಕಟ್ಟಿದ್ದಾರೋ ತಿಳಿಯದು.  ತಾಜ ಮಹಲಿಗಿಂತ ಯಾವ ದೃಷ್ಟಿಯಲ್ಲೂ ಕಡಿಮೆ ಇಲ್ಲದ ಕಟ್ಟಡ.  ಈ ಗೋಲಾಕೃತಿಯನ್ನು ರೋಮ್ ನಲ್ಲಿರುವ ಸೈಂಟ್ ಬಸಿಲಿಕಾ ಮಾದರಿಯಲ್ಲಿ ಕಟ್ಟಿದ್ದಾರಂತೆ.   ಹಾಗೇ ಅಲ್ಲಿರುವ ಬಾರಾಕಮಾನು (ಹನ್ನೆರಡು ಕಮಾನುಗಳು) ಬೇಲೂರಿನ ನಾಟ್ಯಗೃಹವನ್ನು ನೆನಪಿಸುತ್ತದೆ.  ಹಾಗೆಯೇ ಕೋಟೆ ಮತ್ತು ಅಲ್ಲಿರುವ ಉಪಯೋಗಿಸಿದೇ ಬಿದ್ದಿರುವ ತೋಪುಗಳನ್ನೂ ಕಾಣಬಹುದು.  ಇನ್ನುಳಿದ ನೋಡುವ ತಾಣಗಳೆಂದರೆ ಇಬ್ರಾಹಿಮ್ ರೌಝಾ, ಮಲಿಕ್ ಕೇ ಮೈದಾನ್, ಜುಮ್ಮಾ ಮಸೀದಿ, ಮೆಹ್ತರ್ ಮಹಲ್, ತಾಜ್ ಬಾವಡಿ, ಅಸಾರ್ ಮಹಲ್ ಮತ್ತು ಗಗನ ಮಹಲ್.  ಇಷ್ಟೆಲ್ಲಾ ನೋಡುವಂತಹ ಸ್ಥಳಗಳಿದ್ದರೂ ಪ್ರವಾಸಿಗಳಿಗೆ ಹೆಚ್ಚಿನ ಅನುಕೂಲತೆಗಳು ಇಲ್ಲದಿರುವುದು ಖೇದದ ವಿಷಯ.  ಇಷ್ಟೇಲ್ಲವನ್ನೂ ಒಂದು ದಿನಗಳಲ್ಲಿ ನೋಡುವುದು ಕಷ್ಟ.  ಆದರೂ ಅಲ್ಲಿರುವ ಕುದುರೆಗಾಡಿಯವರ ಹತ್ತಿರ ಚೌಕಾಶಿ ಮಾಡಿ ೨೦ ರೂಪಾಯಿಗಳಿಗೆ ನಾವು ನೋಡಿದ್ದೆವು.  ಮತ್ತೆ ಅಲ್ಲಿಂದ ನೇರವಾಗಿ ಗುರುಮಠಕಲ್ಲಿಗೆ ಬಂದಿದ್ದೆ. 

 

ಮರಳಿ ಬೆಂಗಳೂರಿಗೆ ಬರಲು ಭಾನುವಾರಕ್ಕೆ ಟ್ರೈನ್‍ನಲ್ಲಿ ಅವಕಾಶ ಸಿಕ್ಕಿತ್ತು.  ಅದಕ್ಕಾಗಿ ಯಾದಗಿರಿಗೆ ಶನಿವಾರವೇ ಬಂದು ಅಲ್ಲಿದ್ದ ಇನ್ನೊಬ್ಬ ಸ್ನೇಹಿತನ ಕೋಣೆಯಲ್ಲಿ ಇದ್ದೆ.   ಆ ಸ್ನೇಹಿತನೂ ನನ್ನ ಹಾಗೆಯೇ ಯಾದಗಿರಿಗೆ ಬಂದಿದ್ದನು.  ಅಲ್ಲಿ ಲಾಡ್ಜ್ ಇದ್ದುದರಿಂದ ಅವನಿಗೆ ಪ್ರತ್ಯೇಕವಾಗಿ ಇರಲು ಅವಕಾಶ ಸಿಕ್ಕಿತ್ತು.  ಅಲ್ಲಿ ಪ್ರತಿ ದಿನದ ಊಟ ಖಾನಾವಳಿಯಲ್ಲಿ.  ಖಾನಾವಳಿ ಎಂದರೆ ಹೊಟೆಲ್ ಇದ್ದಂತೆಯೇ, ಆದರೆ ಮನೆಗಳಲ್ಲಿ ಅಡುಗೆ ಮಾಡಿ ಊಟ ಬಡಿಸುವರು.  ಆದರಲ್ಲಿ ಖಾರ ತಿನ್ನುವುದು ಬಹಳ.  ಅಲ್ಲದೇ ರೊಟ್ಟಿ (ಒಣ ಚಪಾತಿ) ಜೊತೆಗೆ ಅನ್ನ ಕೊಡುವುದು ಕಡಿಮೆ.  ಸಾಂಬಾರ್, ಸಾರಿನ ಸುದ್ದಿಯೇ ಇಲ್ಲ.  ಒಳ್ಳೆಯ ಮೊಸರೊಂದು ಸಿಗುವುದಷ್ಟೆ.  ದಕ್ಷಿಣ ಕರ್ನಾಟಕದಿಂದ ಬಂದಿದ್ದಾರೆ ಅಂದ್ರೆ, ಅನ್ನ ಮೊಸರು ಕೊಡುವರು.  ಯಾದಗಿರಿಯಲ್ಲಿ ಭಾನುವಾರದಂದು ಬೆಳಗ್ಗೆ ರೈಲ್ವೇ ಸ್ಟೇಷನ್ನಿನ ಹತ್ತಿರವಿದ್ದ ಒಂದು ಹೊಟೆಲ್‍ಗೆ ಉಪಹಾರಕ್ಕಾಗಿ (ಉತ್ತರ ಕರ್ನಾಟಕದಲ್ಲಿ ತಿಂಡಿ ಎಂದರೆ ಕೆರೆತ ಎಂಬರ್ಥ) ಹೋಗಿದ್ದೆವು.  ಅದರಲ್ಲಿಯ ಮಾಲಿಕ ಉಡುಪಿಯ ಕಡೆಯವರೆಂದು ತಿಳಿಯಿತು.  ನನ್ನ ಸ್ನೇಹಿತ ಕೋಟದವನಾದ್ದರಿಂದ, ಅವರನ್ನು ಯಾವ ಊರಿನವರೆಂದು ಕೇಳಿದ್ದ.  ಅವರು ಶಂಕರನಾರ್‍ಆಯಣ ಎನ್ನಲು, ಇವನು ತನ್ನ ಪ್ರವರ ಹೇಳಿದನು.  ಅದಕ್ಕವರು ಓಹ್ ನಿಮ್ಮ ತಂದೆ ನನಗೆ ಶಾಲೆಯಲ್ಲಿ ಮಾಸ್ತರರಾಗಿದ್ದರು ಎಂದಿದ್ದರು.  ಈ ಮಾತುಗಳು ಅವನಿಗೆ ಬಹಳ ಸಂತಸ ತಂದಿತ್ತು.  ಅವನಿನ್ನೂ ಕೆಲ ಕಾಲ ಅಲ್ಲಿರಬೇಕಿದ್ದರಿಂದ ನಾನು ಅಂದಿನ ಟ್ರೈನಿನಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದೆ. 

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಮಹಾ ಶಿವರಾತ್ರಿ

                                          linga.jpg

ಓಂ ನಮ: ಶಿವಾಯ

 

ಮಹಾ ಶಿವರಾತ್ರಿಯ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

 

ವೇದ ಮಂತ್ರ : 

 

ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆಯ ವೈಶ್ವದೇವ ಕಾಂಡದಲ್ಲಿ ಉಕ್ತವಾಗಿರುವ ಶ್ರೀ ರುದ್ರ ಪ್ರಶ್ನದ  ಚಮಕದ ಮೂರನೆಯ ಅನುವಾಕ

 

ಓಂ ನಮೋ ಭಗವತೇ ರುದ್ರಾಯ

 

ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇನುಕಾಮಶ್ಚ ಮೇ ಕಾಮಶ್ಚ ಮೇ ಸೌಮನಸಶ್ಚ ಮೇ ಭದ್ರಂ ಚ ಮೇ ಶ್ರೇಯಶ್ಚ ಮೇ ವಸ್ಯಶ್ಚ ಮೇ ಯಶಶ್ಚ ಮೇ ಭಗಶ್ಚ ಮೇ ದ್ರವಿಣಂ ಚ ಮೇ ಯಂತಾ ಚ ಮೇ ಧರ್ತಾ ಚ ಮೇ ಕ್ಷೇಮಶ್ಚ ಮೇ ಧೃತಿಶ್ಚ ಮೇ ವಿಶ್ವಂಚ ಮೇ ವಿಶ್ವಂ ಚ ಮೇ ಮಹಶ್ಚ ಮೇ ಸಂವಿಚ್ಚ ಮೇ ಜ್ಞಾತ್ರಂ ಚ ಮೇ ಸೂಶ್ಚ ಮೇ ಪ್ರಸೂಶ್ಚ ಮೇ ಸೀರಂ ಚ ಮೇ ಲಯಶ್ಚ ಮ ಋತಂ ಚ ಮೇಮೃತಂ ಚ ಮೇಯಕ್ಷ್ಮಂಚ ಮೇನಾಮಯಚ್ಚ ಮೇ ಜೀವಾತುಶ್ಚ ಮೇ ದೀರ್ಘಾಯುತ್ವಂ ಚ ಮೇನಮಿತ್ರಂ ಚ ಮೇಭಯಂಅ ಚ ಮೇ ಸುಗಂ ಚ ಮೇ ಶಯನಂ ಚ ಮೇ ಸೂಷಾ ಚ ಮೇ ಸುದಿನಂ ಚ ಮೇ||

 

ನಮಕದ ಮೊದಲನೆಯ ಅನುವಾಕದ ಒಂದು ಸಣ್ಣ ಭಾಗ

 

ಓಂ ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮ:|  ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾ ಮುತ ತೇ ನಮ:|  ಯಾ ತ ಇಷು: ಶಿವತಮಾ ಶಿವಂ ಬಭೂವ ತೇ ಧನು:|  ಶಿವಾ ಶರ್ವ್ಯಾ ಯಾ ತವ ತಯಾ ನೋ ರುದ್ರ ಮೃಡಯ|  ಯಾ ತೇ ರುದ್ರ ಶಿವಾ ತನೂರಘೋರಾ: ಪಾಪಕಶಿನೀ|  ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ||

 

ಶಿವರಾತ್ರಿಯ ಅರ್ಥ

 

ಶಿವ ಅಂದ್ರೆ ಕಲ್ಯಾಣ ಎಂದು ಅರ್ಥ.  ಲೋಕ ಕಲ್ಯಾಣಕ್ಕಾಗಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ರಾತ್ರಿ ಇಡೀ ಆ ಪರಶಿವನ ಧ್ಯಾನ ಮಾಡುವುದು.  ಇದು ಮಾಘ ಮಾಸದ ಬಹುಳ ಚತುರ್ದಶಿಯಂದು ಬರುವುದು.    ಇದರ ಬಗ್ಗೆ ಒಂದು ಸಣ್ಣ ಕಥೆ ಇದೆ.  ಶಿವಪುರಾಣದಲ್ಲಿ ಹೇಳಿರುವಂತೆ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರುಗಳಲ್ಲಿ ಯಾರು ಶ್ರೇಷ್ಠರು ಎಂಬ ಬಗ್ಗೆ ಜಗಳವಾಯಿತು.  ಇವರಿಬ್ಬರ ಜಗಳದಿಂದ ಬೇಸತ್ತ ಇತರ ದೇವರುಗಳು, ಮಧ್ಯಸ್ಥಿಕೆ ವಹಿಸಲು ಶಿವನನ್ನು ಕೇಳಿಕೊಂಡರು.  ಆಗ ಶಿವನು ಉದ್ದನೆಯ ಬೆಂಕಿಯ ಕಂಬದಂತೆ ಇವರಿಬ್ಬರ ಮಧ್ಯೆ ನಿಂತನು.  ಬೆಂಕಿಯ ತೀಕ್ಷಣತೆಯನ್ನು ಕಂಡು ಇವರಿಬ್ಬರೂ ಇದರ ಮೂಲವನ್ನು ಹುಡುಕಲು ಹೊರಟರು.  ಬ್ರಹ್ಮನು ಹಂಸದ ರೂಪವಾಗಿ ಆಕಾಶಕ್ಕೂ, ವಿಷ್ಣುವು ವರಾಹ ರೂಪದಲ್ಲಿ ಭೂಮಿಯೊಳಗೂ ಹೊರಟರು.  ಸಾವಿರಾರು ಮೈಲುಗಳನ್ನು ಕ್ರಮಿಸಿದರೂ ಇದರ ಮೂಲ ತಿಳಿಯದಾಯಿತು.  ಇವರಿಬ್ಬರ ಪರದಾಟವನ್ನು ಕಂಡು ಶಿವನು ಮುಗುಳ್ನಕ್ಕನು.  ಆತನ ನಗುವಿನಿಂದ ಅಲ್ಲಿಯೇ ಇದ್ದ ಕೇತಕಿ ಪುಷ್ಪವು ಕೆಳಗಿಳಿದು ಬೀಳಹತ್ತಿತು.  ಅಲ್ಲಿಯೇ ಬರುತ್ತಿದ್ದ  ಬ್ರಹ್ಮನಿಗೆ ಇದು ಗೋಚರವಾಯಿತು.  ಆತನು ಆ ಪುಷ್ಪವನ್ನು ಎಲ್ಲಿಂದ ಬಂದೆಯೆಂದು ಕೇಳಲು, ಅದು ಈ ಬೆಂಕಿಯ ಕಂಬದ ಮೇಲ್ಭಾಗದಿಂದ ಕೆಳಗಿಳಿದು ಬರುತ್ತಿದ್ದೇನೆಂದು ತಿಳಿಸಿತು.  ಅಲ್ಲಿಯವರೆವಿಗೆ ಬೆಂಕಿಯ ಮೂಲವನ್ನು ತಿಳಿಯದ ಬ್ರಹ್ಮನು ಪುಷ್ಪವನ್ನೇ ಸಾಕ್ಷಿಯನ್ನಾಗಿ ತೆಗೆದುಕೊಂಡನು.  ಆಗ ಕುಪಿತಗೊಂಡ ಶಿವನು ತನ್ನ ಮೂಲ ಸ್ವರೂಪವನ್ನು ತೋರಿದನು.  ಮತ್ತು ಬ್ರಹ್ಮನನ್ನು ಯಾರೂ ಪೂಜಿಸಬಾರದೆಂದೂ, ಕಪಟತನ ತೋರಿದ ಕೇತಕಿ ಪುಷ್ಪವನ್ನು ಯಾರೂ ಪೂಜೆಗೆ ಬಳಸಬಾರದೆಂದೂ ಶಾಪವನ್ನಿತ್ತನು.  ಅಂದು ಅಂದರೆ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ೧೪ನೆಯ ದಿನ, ಶಿವನು ಲಿಂಗರೂಪವನ್ನು ಧರಿಸಿದನು.  ಅವನನ್ನು ತೃಪ್ತಿಗೊಳಿಸಿ, ಸಂಪತ್ತು, ಸುಖ ಮತ್ತು ಸಮೃದ್ಧಿಯನ್ನು ಹೊಂದಲು ಪೂಜಿಸುವರು.  

                  sivasfamily.jpg

ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ

 

ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ.  ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ.  ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು.  ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು  ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು.  ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು.  ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ.  ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ.  ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ.  ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು.  ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ.  ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ.   ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ.  

 

ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ.  ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು.  ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲಾ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ.  ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ. 

 

ವೇದೋಕ್ತ ಪೂಜೆ ಮತ್ತು ಆಚರಣೆ

 

ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ.  ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ.    ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ.  ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ. 

 

ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ.

 

ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ.

 

ಆ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ.  ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ.  ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು. 

 

ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು.  ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ.  ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು.  ಅಭಿಷೇಕ್ಕಾಗಿಯೇ ಪ್ರತ್ಯೇಕವಾದ  ಪಾತ್ರೆ ಇರುವುದು.  ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು.  ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು.  ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ.  ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು.  ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು.  ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು.  ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು.  ಇದಕ್ಕೆ ಒಂದು ರುದ್ರವೆಂದು ಕರೆಯುವರು.      ಬೆಳಗ್ಗೆ, ಸಂಜೆ ಮತ್ತು ರಾತ್ರೆ  ಹೀಗೆ ೨೪ ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ.  ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು.

 

೧೨ ಜ್ಯೋತಿರ್ಲಿಂಗಗಳು 

                            jyotirlinga.jpg

ನಮ್ಮ ದೇಶದಲ್ಲಿ ಒಟ್ಟು ೧೨ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.  ಆ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳೆಂದು ಪ್ರಸಿದ್ಧವಾಗಿ ಶಿವರಾತ್ರಿಯಂದು ವಿಶೇಷ ಪೂಜೆಯನ್ನು ಅಲ್ಲಿ ನಡೆಸುವರು.  ಆ ಸ್ಥಳಗಳು  ಯಾವುವೆಂದರೆ:

                      jyotirlinga-map.jpg

ಗುಜರಾತಿನ ಕಾಠಿಯಾವಾಡದಲ್ಲಿರುವ ಸೋಮನಾಥ

ಆಂಧ್ರಪ್ರದೇಶದ ಶ್ರಿ ಶೈಲದಲ್ಲಿರುವ ಮಲ್ಲಿಕಾರ್ಜುನ

ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ

ಮಹಾರಾಷ್ಟ್ರದ ಪಾರ್ಲಿ ವೈಜನಾಥ

ಮಹಾರಾಷ್ಟ್ರದ ಭೀಮಾಶಂಕರ

ಮಹಾರಾಷ್ಟ್ರದ ನಾಗನಾಥ

ಮಹಾರಾಷ್ಟ್ರದ ನಾಶಿಕದ ತ್ರ್ಯಂಬಕೇಶ್ವರ

ತಮಿಳುನಾಡಿನ ರಾಮೇಶ್ವರ

ಉತ್ತರಪ್ರದೇಶದ ಘೃಶ್ನೇಶ್ವರ

ಉತ್ತರಪ್ರದೇಶದ ಕಾಶಿ ವಿಶ್ವೇಶ್ವರ

ಉತ್ತರಪ್ರದೇಶದ ಓಂಕಾರನಾಥ

ಉತ್ತರಪ್ರದೇಶದ ಕೇದಾರನಾಥ

 

ಇದೆಲ್ಲವೂ ಲೌಕಿಕವಾಗಿ ಕಣ್ಣಿಗೆ ಕಾಣುವಂತೆ ಮಾಡುವ ಪೂಜೆಗಳಾದರೆ, ಅಧ್ಯಾತ್ಮಿಕವಾಗಿ ಈ ದೇಹವೇ ಒಂದು ದೇವಾಲಯ ಎಂದು ತಿಳಿದು ಆ ಪರ ಶಿವನನ್ನು ನಮ್ಮೊಳಗೇ ಕಾಣುವ ಪ್ರಯತ್ನ ಮಾಡೋಣ.  ನಮ್ಮ ಹೃದಯವನ್ನೇ ಆತ್ಮಲಿಂಗವನ್ನಾಗಿ ಮಾಡಿ, ಲೋಕೋದ್ಧಾರಕ್ಕಾಗಿ ಒಳ್ಳೆಯ ಚಿಂತನೆಗೆಳೆಂಬ ನೀರ ಹನಿಗಳಿಂದ ಅಭಿಷೇಕ ಮಾಡೋಣ.    ಎಲ್ಲರಿಗೂ ಈ ಲೋಕಕ್ಕೂ ಕಲ್ಯಾಣವಾಗಲೆಂದು ಬಯಸೋಣ.

                        shiva.jpg
 

ಓಂ ನಮ: ಶಿವಾಯ

ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 4

೧೯೮೫ರಲ್ಲಿ ಕ್ಯಾಷ್ ಡಿಪಾರ್ಟ್‍ಮೆಂಟಿನಿಂದ ಜನರಲ್ ಸೈಡ್‍ಗೆ ಪೋಸ್ಟ್ ಮಾಡಿದ್ದರು.  ಅಲ್ಲಿ ಪಬ್ಲಿಕ್ ಡೆಟ್ ಆಫೀಸ್ ಎನ್ನುವಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ.  ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಲವನ್ನು ತೆಗೆದುಕೊಳ್ಳಲು ಮತ್ತು ಅದರ ಲೆಕ್ಕಾಚಾರದ ಬಗ್ಗೆ ಕೆಲಸ ಮಾಡುವ ವಿಭಾಗ ಇದು.  ನನಗೇನೂ ಅಂತಹ ಘನಂದಾರಿ ಕೆಲಸ ಕೊಟ್ಟಿರಲಿಲ್ಲ.  ನಾನು ಮಾಡುತ್ತಿದ್ದುದು ಕ್ಲರಿಕಲ್ ಕೆಲಸ.  ಮೊದಲಿಗೆ ವಿಭಾಗದ ಬಗ್ಗೆ ತಿಳಿದುಕೊಳ್ಳಲು ತರಬೇತಿ ಕೊಡುವರು.  ಇದಕ್ಕಾಗಿ ಚೆನ್ನೈಗೆ ಕಳುಹಿಸಿದ್ದರು.  ಅದೇ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದು.  ಸ್ವಲ್ಪ ಕಾಲದ ಮೊದಲು ಹೋಗಿದ್ದ ಮುಂಬೈನಲ್ಲಿ ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಹಿಂದಿಯಲ್ಲಿ ಹೇಗೋ ನನ್ನ ಬೇಳೆ ಬೇಯಿಸಿಕೊಂಡಿದ್ದೆ.  ಆದರೆ ಈ ಚೆನ್ನೈನಲ್ಲಿ ಹಿಂದಿ ನಡೆಯುವುದಿಲ್ಲ ಎಂದು ತಿಳಿದಿತ್ತು.  ಇಲ್ಲಿ ಹಿಂದಿ ಮಾತನಾಡಿದರೆ ಏಟು ಬೀಳುವುದು ಗ್ಯಾರಂಟಿ.  ಕನ್ನಡದವರಿಗೆ ತಮಿಳು ಕಲಿಯುವುದು ಸುಲಭ. 

 

ಈ ಟ್ರೈನಿಂಗ್ ೨ ವಾರಗಳದ್ದಾಗಿದ್ದಿತು.  ಬೆಂಗಳೂರಿನಿಂದ ಮೊದಲ ಬಾರಿಗೆ ರಾತ್ರಿಯ ಟ್ರೈನಿನ ಹವಾನಿಯಂತ್ರಿತ ಬೋಗಿಯಲ್ಲಿ ೪ ಸಹಕರ್ಮಚಾರಿಗಳೊಂದಿಗೆ ಚೆನ್ನೈಗೆ ಹೊರಟೆ.  ಭಾನುವಾರ ಮಧ್ಯಾನ್ಹದ ಟ್ರೈನ್ ರಾತ್ರಿ ೯ಕ್ಕೆ ಚೆನ್ನೈ ತಲುಪಿತ್ತು.  ಆಗ ಅಲ್ಲಿಯ ನಗರ ಬಸ್ ಸಂಚಾರ ವ್ಯವಸ್ಥೆ ಬಹಳ ಚೆನ್ನಾಗಿತ್ತು.  ಪೂನಮಲೈ ಹೈ ರಸ್ತೆಯಲ್ಲಿರುವ ನಮ್ಮ ಕ್ವಾರ್ಟರ್ಸಿನಲ್ಲಿ ನಮಗೆ ಇರಲು ಅವಕಾಶ ಮಾಡಿಕೊಟ್ಟಿದ್ದರು.  ಬೆಳಗ್ಗಿನ ತಿಂಡಿಗೆ ಬ್ಯಾಂಕಿನ ಕ್ಯಾಂಟೀನಿಗೆ ಹೋಗುತ್ತಿದ್ದೆವು.  ಅಲ್ಲಿಯೋ ಪ್ರತಿದಿನವೂ ಪೊಂಗಲ್ (ಹುಗ್ಗಿ) ಮಾಡುತ್ತಿದ್ದರು.  ಬೆಂಗಳೂರಿನ ಬ್ಯಾಂಕಿನ ಕ್ಯಾಂಟೀನಿನಂತೆ ದೋಸೆ, ಇಡ್ಲಿ, ವಡೆ ಇತ್ಯಾದಿಗಳನ್ನು ಮಾಡ್ತಿರಲಿಲ್ಲ.  ಮಧ್ಯಾಹ್ನದ ಊಟವೋ ದೇವರಿಗೇ ಪ್ರೀತಿ.  ಮಾಂಸಾಹಾರ ಮತ್ತು ಸಸ್ಯಾಹಾರ ಎರಡನ್ನೂ ಒಟ್ಟಿಗೇ ಕೊಡುತ್ತಿದ್ದದ್ದನ್ನು ಅಲ್ಲಿಯೇ ಮೊದಲ ಬಾರಿಗೆ ನಾನು ನೋಡಿದ್ದು.  ಸಂಜೆ ೫ ಘಂಟೆಗೆ ಬ್ಯಾಂಕಿನಿಂದ ಆಚೆ ಬಂದ ಕೂಡಲೇ ನಾನು ಊರು ಸುತ್ತಲು ಹೋಗುತ್ತಿದ್ದೆ.  ಇನ್ನುಳಿದ ಸ್ನೇಹಿತರುಗಳಿಗೆ ಅವರುಗಳದ್ದೇ ಆದ ಲೋಕಗಳಿದ್ದವು.  ನಾನೊಬ್ಬನೇ ಅವರೆಲ್ಲರಿಗಿಂತ ವಿಭಿನ್ನ.  ಅವರೆಲ್ಲರೂ ಜೀವನವನ್ನು ಸವಿಯಲೇ ಹುಟ್ಟಿದವರಂತಿದ್ದರು. 

 

ದಿನವೂ ಸಂಜೆ ಯಾವುದಾದರೊಂದು ಬಸ್ಸನ್ನು ಹತ್ತಿ ಕೊನೆಯ ನಿಲ್ದಾಣಕ್ಕೆ ಹೋಗಿ, ಅಲ್ಲಿ ಇಲ್ಲಿ ಸುತ್ತಾಡಿ ಮತ್ತೆ ಬಸ್ ಹತ್ತಿ ಪ್ಯಾರಿಸ್ ಕಾರ್ನರ್ ಗೆ ಬರ್ತಿದ್ದೆ.  ಅಲ್ಲಿರುವ ಹರಿನಿವಾಸ ಎಂಬ ಹೊಟೆಲ್‍ನಲ್ಲಿ ಪ್ರತಿ ರಾತ್ರಿ ಊಟ.   ಅಲ್ಲಿ ದೊಡ್ಡದಾದ ಬಾಳೆ ಎಲೆ ಹಾಕಿ, ಮೊರದಲ್ಲಿ ಅನ್ನವನ್ನು ತಳ್ಳುತ್ತಿದ್ದರು.  ಅದನ್ನು ನೋಡುವುದೇ ಚಂದ.  ಅಷ್ಟನ್ನೂ ಅದು ಹೇಗೆ ತಿನ್ನುತ್ತಿದ್ದೆನೋ ಏನೋ.  ಹೊಟ್ಟೆಯೊಳಗೆ ಬೆಂಕಿ ಇದ್ದಿತ್ತು ಅನ್ಸತ್ತೆ, ಎಷ್ಟೇ ತಿಂದರೂ ಜೀರ್ಣವಾಗುತ್ತಿತ್ತು.  ಈ ಹದಿನಾಲ್ಕು ದಿನಗಳಲ್ಲಿ ಚೆನ್ನೈನ ಪ್ರತಿ ಜಾಗವನ್ನೂ ನೋಡಿದ್ದೆ.  ಹಾಗೂ ತಮಿಳನ್ನು ಮಾತನಾಡಲೂ ಕಲಿತಿದ್ದೆ. 

 

ನನ್ನ ಕಣ್ಣಿಗೆ ಕಂಡ ಚೆನ್ನೈ ಅಂದರೆ – ಎಲ್ಲೆಲ್ಲಿ ನೋಡಿದರೂ ಗಲೀಜು.   ಕ್ರೋಮ್‍ಪೇಟೆಯಂತೂ ಬೆಂಗಳೂರಿನ ಕಲಾಸಿಪಾಳ್ಯಕ್ಕಿಂತ ಗಲೀಜು.   ಮುದ ಕೊಡುವ ಸ್ಥಳಗಳು ಅಂದರೆ, ತ್ಯಾಗರಾಯನಗರ, ಅಡ್ಯಾರ್, ಬೆಸೆಂಟ್‍ನಗರ್.  ಬಹುಶ: ಈ ಜಾಗಗಳಲ್ಲಿ ವಾಸಿಸುವ ಜನರ ಪ್ರಭಾವದಿಂದ ಈ ಸ್ಥಳಗಳು ಹೀಗಿರಬಹುದು ಅನ್ಸತ್ತೆ. 

 

 

 

ಅದೇ ಮೊದಲ ಬಾರಿಗೆ ಐ.ಐ.ಟಿ.ಯನ್ನು ಪ್ರವೇಶಿಸುವ ಅವಕಾಶವೂ ಸಿಕ್ಕಿತ್ತು.  ನನ್ನ ಗೆಳೆಯ ಕೇಶವಕುಮಾರ ಅಲ್ಲಿ ಎಂ.ಟೆಕ್ ಮಾಡ್ತಿದ್ದ.   ಒಂದು ದಿನಕ್ಕಾದ್ರೂ ಅವನ ಹಾಸ್ಟೆಲ್ಲಿನಲ್ಲಿ ತಂಗುವಂತೆ ಕೇಳಿಕೊಂಡಿದ್ದ.  ಒಂದು ಸಂಜೆ ಬ್ಯಾಂಕಿನಿಂದ ನೇರವಾಗಿ ಅಲ್ಲಿಗೆ ಹೋದವನು ಒಂದಲ್ಲ ಮೂರು ದಿನಗಳು ಅಲ್ಲಿಯೇ ಇದ್ದೆ.  ಎಂತಹ ಪ್ರಶಾಂತ ಮತ್ತು ಆನಂದದಾಯಕ ಕ್ಯಾಂಪಸ್.  ಆ ಸ್ಥಳ ಚೆನ್ನೈನಲ್ಲಿ ಇದೆ ಅಂದ್ರೆ ಈಗಲೂ ನಂಬುವುದಕ್ಕೆ ಆಗುವುದಿಲ್ಲ.  ಅಲ್ಲಿಯ ಹಾಸ್ಟೆಲ್ಲುಗಳಿಗೆ ನದಿಯ ಹೆಸರುಗಳನ್ನೂ ಮತ್ತು ಒಳಗೆ ಓಡಾಡುವ ಕ್ಯಾಂಪಸ್ಸಿನ ಬಸ್ಸುಗಳಿಗೆ ಪರ್ವತಗಳ ಹೆಸರನ್ನೂ ಇಟ್ಟಿದ್ದಾರೆ.   ಇದು ಏಕೆ ಎಂದು ನನ್ನ ಸ್ನೇಹಿತನನ್ನು ಕೇಳಿದ್ದಕ್ಕೆ, ಅವನ ಪ್ರೊಫೆಸರ್ ಒಬ್ಬರು ಹೇಳಿದ್ದ ಮಾತುಗಳನ್ನು ಅವನು ನನಗೆ ಹೇಳಿದ್ದ, ‘ ನಮ್ಮಲ್ಲಿ ಕಲಿತ ಹುಡುಗ / ಹುಡುಗಿಯರು ಪರ್ವತಗಳನ್ನು ಚಲಿಸುವಂತೆ ಮಾಡುವರು ಮತ್ತು ನದಿಗಳನ್ನು ತಟಸ್ಥ ಆಗುವಂತೆ ಮಾಡುವರುಎಂದು.  ಎಂತಹ ಆದರ್ಶವನ್ನು ಮುಂದಿಟ್ಟುಕೊಂಡು ನಡೆಯುತ್ತಿದ್ದಾರೆ.  ಈಗಲೂ ಚೆನ್ನೈನ ಐ.ಐ.ಟಿ.ಗೆ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನವಿದೆ.  ಬೆಳಗ್ಗೆ ಮತ್ತು ಸಂಜೆ ಕ್ಯಾಂಪಸ್ ಸುತ್ತು ಹಾಕುವವರಿಗೆ ಕಿವಿಗೆ ಕೇಳುವುದು ವೇದಘೊಷ.  ಅಲ್ಲಿಯ ಕೆಲವು ಪ್ರೊಫೆಸರ್ ಗಳು ವೇದವಿದ್ಯಾ ಪಾರಂಗತರಾಗಿದ್ದರು.  ಬಿಡುವಿನ ವೇಳೆಯಲ್ಲಿ ಕ್ಯಾಂಪಸ್ಸಿನಲ್ಲಿರುವ ಉತ್ಸುಕರಿಗೆ ವೇಡ ಪಾಠ ಕಲಿಸುತ್ತಿದ್ದರು.  ಈ ಸ್ಥಳವನ್ನು ಸ್ವರ್ಗವನ್ನದೇ ಮತ್ತೇನನ್ನಬೇಕು ಅಲ್ಲವೇ?

 

ಇದೇ ಸಮಯದಲ್ಲಿ ನಮ್ಮ ಮನೆಯಲ್ಲೊಂದು ಅವಘಡ ಸಂಭವಿಸಿತ್ತು.  ಒಂದು ದಿನ ಮಧ್ಯಾಹ್ನ ನನ್ನ ದೊಡ್ಡಣ್ಣ ಫೋನ್ ಮಾಡಿದ್ದ.  ಅವನು ಬೆಂಗಳೂರಿನ ಕಾರ್ಪೋರೇಶನ್ ಆಫೀಸಿನ ಆವರಣದಲ್ಲಿರುವ ಅಂಚೆ ಕಛೇರಿಯಲ್ಲಿ ಸಬ್ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ.  ನಮ್ಮ ತಂದೆಗೆ ಬಹಳ ಆರೋಗ್ಯ ಕೆಟ್ಟಿದೆಯೆಂದೂ, ತನಗೆ ಕೆಲಸ ಜಾಸ್ತಿಯಾಗಿ ಊರಿಗೆ ಹೋಗಲಾಗುವುದಿಲ್ಲ, ನಾನು ಹೋಗಬೇಕೆಂದು ಮಧ್ಯಾಹ್ನ ೩ ಘಂಟೆಗೆ ತಿಳಿಸಿದ್ದ.  ತಂದೆಗೆ ಏನಾಗಿದೆ?  ನಾನೇಕೆ ತಕ್ಷಣ ಊರಿಗೆ ಹೋಗಬೇಕು ಎನ್ನುವುದು ತಿಳಿಯಲಿಲ್ಲ.  ಅಷ್ಟಲ್ಲದೇ ಎಷ್ಟು ಹಣವನ್ನು ತೆಗೆದುಕೊಂಡು ಊರಿಗೆ ಹೋಗಬೇಕೆಂದೂ ತಿಳಿದಿರಲಿಲ್ಲ.  

 

ಆಗೆಲ್ಲಾ ನಾನು ಯುನಿಯನ್ ಕೆಲಸದಲ್ಲಿ ಬಹಳ ಸಕ್ರಿಯನಾಗಿದ್ದೆ.  ಅಂದೂ ಸಂಜೆ ಯೂನಿಯನ್ ಆಫೀಸಿಗೆ ಹೋರಟಿದ್ದೆ.   ದಾರಿಯಲ್ಲಿ ಹೋಗುವಾಗ ಈ ವಿಷಯವನ್ನು ನಮ್ಮ ಯೂನಿಯನ್ನಿನ ಅಧ್ಯಕ್ಷರಾಗಿದ್ದ ಶ್ರೀ ಪುತ್ತೂರಾಯರಿಗೆ ತಿಳಿಸಿದ್ದೆ.  ಅವರು ನಮಗೆಲ್ಲರಿಗಿಂತಲೂ ಹಿರಿಯರು, ಮಾರ್ಗದರ್ಶಕರು, ನಮ್ಮೆಲ್ಲರ ಹಿತಚಿಂತಕರಾಗಿದ್ದರು.  ನಾನು ತಿಳಿಸಿದ ವಿಷಯಕ್ಕೆ ಅವರು – ನಿಮ್ಮ ತಂದೆಯ ಆರೋಗ್ಯದಲ್ಲಿ ಏನೋ ಹೆಚ್ಚಿನ ತೊಂದರೆ ಆಗಿರಬೇಕು, ಈ ತಕ್ಷಣವೇ ನೀವು ಊರಿಗೆ ಹೊರಡಿ, ಸದ್ಯಕ್ಕೆ ಈ ಹಣ ನಿಮ್ಮಲ್ಲಿರಲಿ ಎಂದು ರೂ ೧೦೦೦ ವನ್ನು ಕೈನಲ್ಲಿಟ್ಟಿದ್ದರು.  ಅಲ್ಲಿಂದ ಹಾಗೆಯೇ ಊರಿಗೆ ಹೋಗಿದ್ದೆ. 

 

********************

 

ಊರಿಗೆ ಹೋದ ತಕ್ಷಣ ತಿಳಿದ ವಿಷಯವೇನೆಂದರೆ – ೨-೩ ದಿನಗಳ ಹಿಂದೆ ನನ್ನ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.  ೨೦ ವರ್ಷಗಳ ಹಿಂದೆ ಅಂದರೆ ೧೯೬೪ರಲ್ಲಿ ನನಗಿನ್ನೂ ೪ ವರ್ಷವಾಗಿದ್ದಾಗ ಹೀಗೊಮ್ಮೆ ಆಗಿತ್ತಂತೆ.  ಆಗ ಎಡಭಾಗಕ್ಕೆ ಪಾರ್ಶ್ವವಾಯುವಾಗಿ ಅಂಕೋಲಕ್ಕೆ ಹೋಗಿ ನಾಟಿ ವೈದ್ಯರಿಂದ ಔಷೋಧೋಪಚಾರ ಮಾಡಿಸಿ ಸರಿ ಹೋಗಿದ್ದರಂತೆ.  ಈಗ ಮತ್ತೆ ಹೀಗಾಗಿದ್ದಾಗ (ಈ ಸಲ ಶರೀರದ ಬಲಭಾಗಕ್ಕೆ ಅಟ್ಯಾಕ್ ಆಗಿತ್ತು), ತಮ್ಮನ್ನು ಅಂಕೋಲಕ್ಕೆ ಕರೆದೊಯ್ಯು ಎಂದು ನನಗೆ ಹೇಳಿದ್ದರು.  ಆಸ್ಪತ್ರೆಗೆ ಕರೆದೊಯ್ಯುವುದಾಗಿ ನಾನು ಹೇಳಲು, ನನ್ನ ತಾಯಿಯೂ ತಂದೆಯವರು ಹೇಳಿದಂತೆಯೇ ಕೇಳಲು ಹೇಳಿದ್ದರು.  ಮಾರನೆಯ ದಿನ ಬೆಳಗ್ಗೆ ಶಿವಮೊಗ್ಗ ಮುಖಾಂತರ ಅಂಕೋಲಕ್ಕೆ ಪ್ರಯಾಣ ಬೆಳೆಸಿದೆವು.  ರಾತ್ರಿ ೮.೩೦ರ ಹೊತ್ತಿಗೆ ಅಂಕೋಲಾ ತಲುಪಿ ಬಸ್ ನಿಲ್ದಾಣದ ಹತ್ತಿರವಿರುವ ಒಂದು ಹೊಟೆಲ್‍ಗೆ ಊಟಕ್ಕೆಂದೆ ಹೋದರೆ, ಇನ್ನೇನು ಹೊಟೆಲ್ ಮುಚ್ಚುವ ವೇಳೆ ಆಗಿದೆಯೆಂದೂ ತಿನ್ನಲು ಅವಲಕ್ಕಿ ಮಾತ್ರವಿದೆಯೆಂದೂ ಅದರ ಮಾಲಿಕ ಹೇಳಿದ್ದರು.  ಅದನ್ನೇ ತಿಂದು ಉಳಿಯಲು ಹತ್ತಿರದಲ್ಲೇ ಇದ್ದ ಒಂದು ಲಾಡ್ಜ್‍ನಲ್ಲಿ ಕೋಣೆಯನ್ನು ಹಿಡಿದಿದ್ದೆವು.  

 

ಅಂಕೋಲಾಕ್ಕೆ ಈ ಔಷಧಿಗಾಗಿಯೇ ಬರುವ ಜನರು ಬಹಳ.  ಆ ಊರಿನಲ್ಲಿ ಬಸ್ ನಿಲ್ದಾಣದ ಹತ್ತಿರ ಔಷಧದ ಅಂಗಡಿಗಳು ಬಹಳವಾಗಿವೆ.  ಹಾಗೂ ಊರಿಗೆ ಬರುವ ಹೊಸಬರನ್ನು ತಮ್ಮಲ್ಲಿಗೆ ಔಷಧಕ್ಕಾಗಿ ಮತ್ತು ಮಾಲೀಷ್‍ಗಾಗಿ ಬರಲು ಕರೆಯುತ್ತಾರೆ.  ಇವರೆಲ್ಲರು ಔಷಧ ಅಷ್ಟು ಪರಿಣಾಮಕಾರಿಯಲ್ಲವಂತೆ.  ಇದನ್ನು ನನ್ನ ತಂದೆಯೇ ತಿಳಿಸಿದ್ದರು.   ಬೆಳಗಿನ ಜಾವ ೬ ಘಂಟೆಗೇ ಎದ್ದು ಸ್ನಾನ ಮಾಡದೆಯೇ ಔಷಧಿಗಾಗಿ ಹೊರಟೆವು.  ಎಲ್ಲಿಗೆ ಹೋಗಬೇಕೆಂದು ನನ್ನ ತಂದೆಗೆ ತಿಳಿದಿತ್ತು.  ಒಂದು ಆಟೋ ಚಾಲಕನಿಗೆ ಪೊಕ್ಕ ಮಾನು ಗೌಡನ ಮನೆಗೆ ಹೋಗಲು ತಿಳಿಸಿದರು.  ಆಟೋ ಚಾಲಕನು ಅವರ್ಯಾರೋ ಗೊತ್ತಿಲ್ಲ ಎನ್ನಲು, ಸಮುದ್ರದ ಹತ್ತಿರಕ್ಕೆ ಹೋಗಲು ತಿಳಿಸಿ, ಅಲ್ಲಿ ಎಲ್ಲಿ ಹೋಗಬೇಕೆಂದು ಹೇಳುವೆನೆಂದರು.  ಆಟೋದವನಿಗೆ, ಇವರಿಗೆ ಈ ಔಷಧದ ಬಗ್ಗೆ ತಿಳಿದಿದೆ ಎಂದು ಖಾತ್ರಿಯಾಗಿ, ರಸ್ತೆ ಸರಿಯಿಲ್ಲ, ವಾಪಸ್ಸು ಬರಲು ಜನ ಸಿಗುವುದು ಕಷ್ಟ, ಹತ್ತು ರೂಪಾಯಿ ಜಾಸ್ತಿ ಕೊಡುವಿರೆಂದರೆ ಬರುವೆನೆಂದನು.   ಅದಕ್ಕೇ ನಾನು ಒಪ್ಪಿದ್ದೆ.  ದಾರಿಯಲ್ಲಿ ಹೋಗುವಾಗ ಆಟೋದವನು, ಈಗ ಪೊಕ್ಕ ಮಾನು ಗೌಡ ಇಲ್ಲ, ಆತ ಸತ್ತು ಹೋಗಿ ೧೦-೧೨ ವರ್ಷಗಳೇ ಆದುವು, ಆತನ ಮಗ ಈ ವೈದ್ಯ ವೃತ್ತಿಯನ್ನು ನಡೆಸುತ್ತಿದ್ದಾನೆ ಎಂದು ತಿಳಿಸಿದ್ದನು.  

 

ಈ ನಾಟಿ ವೈದ್ಯ ಪೊಕ್ಕ ಮಾನು ಗೌಡ ಅಥವಾ ಈಗಿನ ಆತನ ಮಗ ಬೆಳಗಿನ ಜಾವ ೩ ಘಂಟೆಗೇ ಎದ್ದು ಕಾಡಿಗೆ ಹೋಗಿ ಮೂಲಿಕೆಗಳನ್ನೂ ಯಾವುದೋ ಗಿಡದ ಸೊಪ್ಪನ್ನೂ ತರುವನಂತೆ.  ಅದರೊಂದಿಗೆ ತಾನೇ ತಯಾರಿಸಿದ ಎಣ್ಣೆಯನ್ನು ಬಹಳ ಕಡಿಮೆ ಹಣಕ್ಕೆ ಕೊಡುತ್ತಿದ್ದನು.  ಅಲ್ಲೆಗೆ ಬರುವ ಬಹುತೇಕ ರೋಗಿಗಳು ನಿತ್ರಾಣರಾಗಿದ್ದು, ಮಾಲೀಷು ಮಾಡಿಸಿಕೊಳ್ಳಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಿದ್ದಾನೆ.  ಅದಕ್ಕೂ ಬಹಳ ಕಡಿಮೆ ದರವನ್ನು ತೆಗೆದುಕೊಳ್ಳುವನು.  ರೋಗಿಗಳು ತಾವೇ ಮಾಲೀಷು ಮಾಡಿಕೊಳ್ಳಬೇಕಂತೆ.  ಕೈಲಾಗದವರಿಗೆ ಮಾಲೀಷು ಮಾಡಲು ಪೈಲ್ವಾನರನ್ನೂ ನೇಮಿಸಿಕೊಡುವನು.  

 

ನನ್ನ ತಂದೆ ಆ ಗೌಡನ ಬಳಿಗೆ ಹೋಗಿ, ಇಪ್ಪತ್ತು ವರುಷಗಳ ಹಿಂದೆ ಪೊಕ್ಕ ಗೌಡನಿಂದ ಔಷಧವನ್ನು ತೆಗೆದುಕೊಂಡಿದ್ದರೆಂದೂ ಈಗ ಮತ್ತೆ ಪಾರ್ಶ್ವವಾಯು ಆಗಿದೆಯೆಂದೂ ತಿಳಿಸಿದ್ದರು.  ಅದಕ್ಕೆ ಆತ ಇಲ್ಲಿಯೇ ಉಳಿದುಕೊಂಡು ಔಷಧೋಪಚಾರ ಮಾಡಿಕೊಳ್ಳುವಿರೋ ಅಥವಾ ಔಷಧವನ್ನು ತೆಗೆದುಕೊಂಡು ಊರಿಗೆ ಹೋಗುವಿರೋ ಎಂದು ಕೇಳಿದ್ದನು.  ಊರಿಗೆ ಹೋಗುವೆವೆಂದು ಹೇಳಿದ್ದಕ್ಕೆ, ೨ ಬಾಟಲಿನಲ್ಲಿ ಎಣ್ಣೆಯನ್ನೂ, ಒಂದು ದೊಡ್ಡ ಹೊರೆ ಹಸಿರು ಬಣ್ಣದ ಸೊಪ್ಪನ್ನು ಕೊಟ್ಟು, ಅದನ್ನು ಹೇಗೆ ಹಚ್ಚಿಕೊಂಡು ಮಾಲಿಷು ಮಾಡಿಕೊಳ್ಳಬೇಕೆಂದು ತಿಳಿಸಿದ್ದನು.  ಮುಖ್ಯವಾಗಿ ಆ ಔಷಧವನ್ನು ರೋಗಿಯಲ್ಲದ ಇನ್ಯಾರೂ ಮುಟ್ಟಬಾರದೆಂದೂ ತಿಳಿಸಿದ್ದನು.  ಅಂದೇ ಸಂಜೆಗೆ ಹುಬ್ಬಳ್ಳಿಗೆ ಬಂದು ಅಲ್ಲಿ ರಾತ್ರಿಯೂಟ ಮಾಡಿ, ರಾತ್ರಿಯ ಬಸ್ಸಿನಲ್ಲಿ ಊರಿಗೆ ಹೊರಟು ಬಂದಿದ್ದೆವು.   

 

ಔಷಧಿಯನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಒಂದೆರಡು ಮಾತುಗಳಲ್ಲಿ ಹೇಳುವೆ.  ಬೆಳಗ್ಗೆ ಸ್ನಾನ ಮಾಡಿ  ಮೈಯಿಗೆ ಎಣ್ಣೆಯನ್ನು ಹಚ್ಚಿಕೊಂಡು, ಚೆನ್ನಾಗಿ ಮಾಲೀಷು ಮಾಡಿಕೊಳ್ಳಬೇಕು.   ಬಿಸಿಲಿಗೆ ಮೈಯನ್ನು ಒಡ್ಡಿ ಒಣಗಿಸಿಕೊಳ್ಳಬೇಕು.  ೧ ಘಂಟೆಗಳ ತರುವಾಯ ಮೈ ಒಣಗಿದ ನಂತರ ಸೊಪ್ಪನ್ನು ಅರಿಶಿನದೊಂದಿಗೆ ಬೆರೆಸಿ ಚೆನ್ನಾಗಿ ಅರೆದು ಅದರ ರಸವನ್ನು ಮೈಯ್ಯಿಗೆ ಹಚ್ಚಿಕೊಳ್ಳಬೇಕು.  ಅರೆಯುವುದು ಮತ್ತು ಹಚ್ಚಿಕೊಳ್ಳುವುದನ್ನು ರೋಗಿಗಳೇ ಮಾಡಿಕೊಳ್ಳಬೇಕು.  ಇತರರು ಇದನ್ನು ಮುಟ್ಟಲೂಬಾರದು.   ಮತ್ತೆ ಬಿಸಿಲಿಗೆ ಮೈಯೊಡ್ಡಿ ಒಣಗಿಸಿಕೊಳ್ಳಬೇಕು.   ಮೈ ಚೆನ್ನಾಗಿ ಒಣಗಿದ ನಂತರ ಹೆಪ್ಪಳಿಕೆಗಳು ಕೆಳಗೆ ಬೀಳುವುದು.  ನಂತರ ಸ್ನಾನ ಮಾಡಬಾರದು.  ಮರುದಿನ ಮತ್ತೆ ಹೀಗೆಯೇ ಉಪಚಾರವನ್ನು ಮಾಡಿಕೊಳ್ಳಬೇಕು.  ಹೀಗೆ ಹದಿನೈದು ದಿನಗಳ ಕಾಲ ಮಾಡಿಕೊಳ್ಳಬೇಕು.  ಆಗ ಪೂರ್ಣವಾಗಿ ಗುಣವಾಗುವರು.  ಇದಕ್ಕೆ ನನ್ನ ತಂದೆ ಗುಣ ಹೊಂದಿದ್ದೇ ನಿದರ್ಶನ.

 

*******************

 

ಈ ಭಾಗದಲ್ಲಿ ನನ್ನ ಮಾನವೀಯತೆಯನ್ನು ರೂಪಿಸಿದ ಪುತ್ತೂರಾಯರು, ಬಾಬುರವಿಶಂಕರರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವೆ.  ಹಾಗೆಯೇ ಒಂದು ರಸ್ತೆ ಆಕಸ್ಮಿಕದಲ್ಲಿ ಒಂದು ಪುಟ್ಟ ಕಂದ ದಾರುಣವಾಗಿ ಸಾವಿಗೀಡಾದ ಸಂದರ್ಭವನ್ನೂ ತಿಳಿಸುವೆ. 

 

ಸೀತಾರಾಮ ಪುತ್ತೂರಾಯರು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಆರ್ಥಿಕ ಸಹಾಯಕರಾಗಿ ಕೆಲಸ ಮಾದುತ್ತಿದ್ದರು.  ೧೯೬೪-೬೫ ರ ಸುಮಾರಿನಲ್ಲಿ ಪದವೀಧರರಾಗಿ ಬ್ಯಾಂಕಿಗೆ ಸೇರಿದ್ದರು.  ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಪದವೀಧರರಾಗಿದ್ದವರೆಲ್ಲರೂ ಅಧಿಕಾರಿಗಳಾಗಿ ಸೇರುತ್ತಿದ್ದರು.  ಇವರು ಆಗಲೇ ಭಾರತೀಯ ಮಝ್ದೂರ್ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು.  ಭಾರತೀಯ ಮಝ್ದೂರ್ ಸಂಘವು ಪ್ರಾರಂಭವಾಗಿದ್ದು ೧೯೬೫ ರಲ್ಲಿ.  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಮಿಕರ ಒಳಿತಿಗಾಗಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿನ ಕೆಲಸಗಾರರನ್ನು ಸಂಘಟಿಸಲು ಪುತ್ತೂರಾಯರು ಮುಂದಳತ್ವ್ಸ್ ವಹಿಸಿದರು. ಬ್ಯಾಂಕಿನಲ್ಲಿ ಅಧಿಕಾರಿಯಾದರೆ, ವರ್ಗಾವಣೆ ನೋಡಬೇಕೆಂದೂ ಮತ್ತು ಯೂನಿಯನ್ನಿನ ಕೆಲಸ ಮಾಡಲಾಗುವುದಿಲ್ಲವೆಂದೂ ಅವರು ಬಡ್ತಿಯನ್ನು ತೆಗೆದುಕೊಳ್ಳಲಿಲ್ಲ.  ೧೯೭೨ರ ಹೊತ್ತಿಗೆ ಇವರ ಕೈ ಜೋಡಿಸಿದವರು ಶ್ರೀಯುತ ಬಾಬು ರವಿಶಂಕರ ಅವರು.  ಇವರಿಬ್ಬರಲ್ಲಿ ನಾನು ಕಂಡ ಒಂದು ಒಳ್ಳೆಯ ಅಂಶವೆಂದರೆ, ಯೂನಿಯನ್ ಸದಸ್ಯರಲ್ಲದೇ ಇತರ ಸಹೋದ್ಯೋಗಿಗಳನ್ನು ತಮ್ಮ ಕುಟುಂಬದ ಸದಸ್ಯರೆಂದೇ ಭಾವಿಸುತ್ತಿದ್ದರು.  ಹಬ್ಬ ಹರಿದಿನಗಳಲ್ಲಿ ಮನೆ ಮನೆಗಳಿಗೆ ಹೋಗಿ ಕಷ್ಟ ಸುಖ ವಿಚಾರಿಸುವುದು, ಬೇಕಾದ ಮಾರ್ಗದರ್ಶನವೀಯುವುದೂ ಮಾಡುತ್ತಿದ್ದರು.  ಇವರಿಬ್ಬರೂ ತಮ್ಮ ಹೆಚ್ಚಿನ ಕಾಲಾವಧಿಯನ್ನು ಸ್ನೇಹಿತರಿಗಾಗಿಯೇ ಮುಡುಪಾಗಿಟ್ಟಿದ್ದರೆಂದರೆ ಅತಿಶಯೋಕ್ತಿಯಲ್ಲ.  ೧೯೮೫ರ ಸುಮಾರಿನಲ್ಲಿ ಹೌಸಿಂಗ ಸೊಸೈಟಿಯವರು ಹೊಸ ಸದಸ್ಯರನ್ನು ನೋದಾಯಿಸಿಕೊಳ್ಳಲು ಪುತ್ತೂರಾಯರೂ ಕಾರಣೀಭೂತರಾಗಿದ್ದರು.  ಅದಲ್ಲದೇ ನಮಗೆಲ್ಲರಿಗೂ ನಿವೇಶನವನ್ನು ಹೊಂದಲು ಸಲಹೆ ಕೊಟ್ಟರು.  ನಾನಂತೂ, ‘ನನಗ್ಯಾಕೆ ಸಾರ್, ಈಗಲೇ ಸೈಟು.  ಮುಂದೆ ನೋಡೋಣ.  ಅದೂ ಅಲ್ಲದೇ ಈ ಹೌಸಿಂಗ್ ಸೊಸೈಟಿಯಲ್ಲಿ ಯಾವಾಗಲೂ ಜಗಳ ಕದನಗಳನ್ನು ನೋಡ್ತಿದ್ದೀನಿ, ನನಗೆ ಸೇರಲು ಮನಸ್ಸಿಲ್ಲಎಂದಿದ್ದೆ.  ಅದಕ್ಕೆ ಪುತ್ತೂರಾಯರು, ‘ನೀವೇನೂ ಮಾಡಬೇಕಿಲ್ಲ.  ಈ ಅಪ್ಲಿಕೇಷನ್ ಫಾರ್ಂ ತುಂಬಿ ನನ್ನ ಕೈಗೆ ಕೊಡಿ ಮತ್ತು ಕೋ ಆಪರೇಟಿವ್ ಬ್ಯಾಂಕಿನಲ್ಲಿ ನಿಮಗೆ ಹತ್ತು ಸಾವಿರ ರೂಪಾಯಿಗಳ ಸಾಲ ತೆಗೆದುಕೊಂಡು, ಮೂಲಧನವನ್ನಾಗಿ ಕೊಡಿ.  ನಿಮಗೆ ತಿಳಿಯದೆಯೇ ಆ ಸಾಲ ತೀರಿ ಹೋಗುವುದು‘, ಎಂದಿದ್ದರು.   ಅವರ ಹಿತ ನುಡಿಗಳನ್ನು ನಾವೆಲ್ಲರೂ ಪಾಲಿಸಿದ ಕಾರಣವೇ – ನಾವುಗಳಿಂದು ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಮನೆಯನ್ನು ಮಾಡಿಕೊಂಡಿರುವುದು.  ತಂಪಾದ ಸಮಯದಲ್ಲಿ ಅವರನ್ನು ನೆನೆಯದಿದ್ದರೆ ಅದು ದ್ರೋಹ ಬಗೆದಂತೆಯೇ.

 

ಇಷ್ಟೇ ಅಲ್ಲ, ಪುತ್ತೂರಾಯರು ಇನ್ನೊಂದು ಮಾತನ್ನೂ ನಮಗೆಲ್ಲರಿಗೂ ಹೇಳಿದ್ದರು.  ಎಂದಿಗೂ ನಿಮ್ಮ ಬ್ಯಾಂಕಿನ ಅಕೌಂಟಿನಲ್ಲಿ ಕಡಿಮೆಯೆಂದರೆ ಹತ್ತು ಸಾವಿರ ರೂಪಾಯಿಗಳನ್ನು ಇಟ್ಟುಕೊಂಡಿರಿ.  ಹಣವಿಲ್ಲದವನು ಹೆಣದಂತೆ.  ದುಶ್ಚಟಗಳಿಂದ ದೂರವಾಗಿರಿ.  ಹೆಚ್ಚಿನ ಹಣ ಕೈನಲ್ಲಿದ್ದರೆ ಇಲ್ಲದವರಿಗೆ ನೀಡಿ. ಇದು ಒಳ್ಳೆಯತನ. ಮುಂದೆ ನಿಮ್ಮ ಮಕ್ಕಳನ್ನು ಇದೇ ಒಳ್ಳೆಯತನ ಕಾಪಾಡುವುದು.  ಪುತ್ತೂರಾಯರು ಈ ಮಾತುಗಳನ್ನು ಹೆಳುತ್ತಿದ್ದುದಲ್ಲದೇ ಪಾಲಿಸುತ್ತಿದ್ದರು ಕೂಡಾ.  ನಾನು ೧೯೮೯ರಲ್ಲಿ ಮುಂಬೈಗೆ ಬಂದ ಕೆಲವು ವರ್ಷಗಳಲ್ಲಿ ಪುತ್ತೂರಾಯರು ಅಕಾಲಿಕ ಮರಣಕ್ಕೆ ತುತ್ತಾಗಿದ್ದರು.  ಅವರಿಗಿದ್ದ ಇಬ್ಬರೂ ಗಂಡು ಮಕ್ಕಳು ವೈದ್ಯ ವೃತ್ತಿ ಹಿಡಿದು ಬಹಳ ಹೆಸರುವಾಸಿಯಾಗಿದ್ದಾರಂತೆ. 

 

ಇದೇ ಸಮಯದಲ್ಲಿ ನನ್ನ ಅಣ್ಣನ ಎರಡನೆಯ ಮಗ – ೨ ವರುಷದ ಕಂದಮ್ಮ ರಸ್ತೆಯಪಘಾತಕ್ಕೆ ಈಡಾಗಿ ದುರ್ಮರಣವನ್ನು ಹೊಂದಿದ್ದ. 

 

**************

 

ಈ ಭಾಗದಲ್ಲಿ ೧೯೮೫-೮೬ ರಲ್ಲಿ ಹೈದರಾಬಾದಿನಲ್ಲಿ ನಡೆದ ಭಾರತೀಯ ಮಜ್ದೂರ್ ಸಂಘದ ಅಧಿವೇಶನ ಮತ್ತು ನಮ್ಮ ಬ್ಯಾಂಕಿನ ಯೂನಿಯನ್ನಿನ ವತಿಯಿಂದ ಬೆಂಗಳೂರಿನಲ್ಲಿ ನಡೆದ ಅಧಿವೇಶನದ ಬಗ್ಗೆ ಒಂದೆರಡು ಮಾತುಗಳು.

 

೧೯೮೫ರಲ್ಲಿ ಹೈದರಾಬಾದಿನಲ್ಲಿ ಭಾರತೀಯ ಮಜ್ದೂರ್ ಸಂಘದ ಅಧಿವೇಶನ ನಡೆಯಿತು.  ಅದಕ್ಕಾಗಿ ನಮ್ಮ ಯೂನಿಯನ್ನಿನಿಂದ ೮-೧೦ ಜನ ಸದಸ್ಯರು ಹೊರಟಿದ್ದೆವು.  ಹೋಗುವ ಮುನ್ನ ನಮಗೆ ಅಷ್ಟೇನೂ ಇಚ್ಛೆ ಇರಲಿಲ್ಲ.  ಪುತ್ತೂರಾಯರ ಸಕ್ರಿಯ ಚಟುವಟಿಕೆಗಳಿಗೆ ಮಾರು ಹೋಗಿ ಅವರಂತೆಯೇ ನಾವೂ ಕೆಲಸ ಮಾಡಹತ್ತಿದೆವು.    ನಮಗೆಲ್ಲರಿಗೂ ಸ್ಫೂರ್ತಿ ಶ್ರೀಯುತ ಪುತ್ತೂರಾಯರು.   ಅವರಿಗಾಗ ೫೦ ವರ್ಷ ವಯಸ್ಸಾಗಿತ್ತು.  ಆದರೂ ಯೂನಿಯನ್ನಿನ ಎಲ್ಲ ಕೆಲಸಗಳಲ್ಲಿಯೂ ಅವರದ್ದೇ ಮುಂದಾಳತ್ವ.  ಎದುರಾಳಿ ಯೂನಿಯನ್ನಿನವರು ಕೂಡಾ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರು.  ಯಾರೇ ಸಹಾಯ ಯಾಚಿಸಿದರೂ ಮಾನವೀಯತೆಯನ್ನು ಪ್ರದರ್ಶಿಸಿ ಕೈಲಾದದ್ದನ್ನು ಮಾಡುತ್ತಿದ್ದರೇ ಹೊರತು ತಮ್ಮವರಲ್ಲವೆಂದು ದೂರ ತಳ್ಳುತ್ತಿರಲಿಲ್ಲ.  ಯೂನಿಯನ್ನಿನ ವತಿಯಿಂದ ಟ್ರೈನಿನಲ್ಲಿ ಹೈದರಾಬಾದಿಗೆ ಟಿಕೆಟ್ ಬುಕ್ ಮಾಡಿಸಲಾಗಿತ್ತು.  ನಾವು ಸ್ನೇಹಿತರನೇಕರು ಬ್ರಹ್ಮಚಾರಿಗಳು.  ಪ್ರಯಾಣದಲ್ಲಿ ಹರಟೆ ಹೊಡೆದುಕೊಂಡು ತಮಾಷೆ ಮಾಡಿಕೊಂಡು ಹೋಗೋನ ಎಂದು ಅಂದುಕೊಂಡಿದ್ದೆವು.  ಆದರೆ ಪುತ್ತೂರಾಯರು ಇದರ ಬದಲಿಗೆ ಕಾರ್ಮಿಕರ ಒಕ್ಕೂಟದ ಕೆಲವು ಕ್ರಾಂತಿಕಾರಿ ಗೀತೆಗಳನ್ನು ಹೇಳಿಕೊಟ್ಟರು.  ಅಂದು ಹೇಳಿದ ಹಾಡು ಯಾವುದು ಗೊತ್ತೇ – ಈಗಲೂ ನನಗೆ ನೆನಪಿದೆ

 

 thengadiji.jpg

ಮನುಕುಲದೇಳಿಗೆ ಸಾಧಿಸೆ ಹೊರಟೆವು

ಪ್ರಭಾತ ಕಿರಣವನರಳಿಸುತ

ಶೋಷಿತ ಪೀಡಿತ ದಲಿತೋದ್ಧಾರದ

ಭಾಗ್ಯೋದಯವನು ನಿರ್ಮಿಸುತ

 

ಆಗ ನಮಗನ್ನಿಸಿದ್ದು, ನಾವುಗಳು ಈ ಪೊಳ್ಳು ಸಂತಸಕ್ಕೆ ನಮ್ಮ ಅಮೂಲ್ಯ ಸಮಯವನ್ನು ಹೇಗೆ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಬಿಡುವಿನ ಸಮಯದಲ್ಲಿ ಅಮಾಯಕ ಕಾರ್ಮಿಕರ ಒಳಿತಿಗಾಗಿ ಏನೆಲ್ಲಾ ಮಾಡಬಹುದೆಂಬುದರ ಚಿಂತಿಸಬಹುದು.   ಪುತ್ತೂರಾಯರು ನಮಗೆ ಮೊದಲು ಕಲಿಸಿದ್ದು, ನಮ್ಮ ನಮ್ಮ ಕೆಲಸದ ಜಾಗದಲ್ಲಿ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ನಂತರ ಯೂನಿಯನ್ನಿನ ಕೆಲಸ ಮಾಡುವುದು.  ಇಂತಹ ನಾಯಕರುಗಳು ಇರುವುದರಿಂದಲೇ ಅಲ್ವೇ ನಮ್ಮ ಯೂನಿಯನ್ ಲೀಡರುಗಳಲ್ಲಿ ಹೆಚ್ಚಿನವರುಗಳ್ಯಾರಿಗೂ ತೊಂದರೆ ಬರದೇ ಇರುವುದು. 

 

ಹೈದರಾಬಾದಿನಲ್ಲಿ ಭಾರತೀಯ ಮಝ್ದೂರ್ ಸಂಘದ ಸಂಸ್ಥಾಪಕರಾದ ದತ್ತೋಪಂತ್ ಠೇಂಗಡೀಜಿ ಯವರು ಬಂದಿದ್ದರು.  ಅವರ ಹಿತನುಡಿಗಳು ಕಾರ್ಮಿಕರ ಹಿತಕ್ಕಾಗಿ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹೆಚ್ಚು ಪ್ರೇರೇಪಿಸಿತು.  ಠೇಂಗಡೀಜೀಯವರು ರಾಷ್ಟ್ರ್‍ಈಯ ಸ್ವಯಂಸೇವಕ ಸಂಘದ ಹಿರಿಯ ಸದಸ್ಯರಾಗಿದ್ದರು.  ಅವರು ಬರೀ ಬಾಯ್ಮಾತಿನಲ್ಲಿ ಹೇಳುವವರಲ್ಲ ಕೆಲಸ ಮಾಡಿ ತೋರಿಸುತ್ತಿದ್ದವರು.  ಹಾಗಾಗಿ ಅವರ ನುಡಿಗಳು ಎಂತಹವರನ್ನೂ ಪ್ರೇರೇಪಿಸುತ್ತಿತ್ತು.  ನಮಗೆ ಉಳಿದುಕೊಳ್ಳಲು ನಾಂಪಲ್ಲಿಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅವಕಾಶ ಮಾಡಿಕೊಟ್ಟಿದ್ದರು.  ಮೊದಲ ಎರಡು ದಿನಗಳು ಅಧಿವೇಶನ.  ಮೂರನೆಯ ದಿನ ನಮಗೆ ಊರು ಸುತ್ತಲು ಅನುಮತಿ ಕೊಟ್ಟಿದ್ದರು.  ಆಗ ಹೈದರಾಬಾದಿನಲ್ಲಿ ಬಸ್ ವ್ಯವಸ್ಥೆ ಅವ್ಯವಸ್ಥೆ ಆಗಿದ್ದಿತ್ತು.  ಅಂದು ಬೆಳಗ್ಗೆ ಸಿಕಂದರಾಬಾದ್ ಸ್ಟೇಶನ್ನಿನವರೆವಿಗೆ ನಡೆದುಕೊಂಡು ಹೋದೆವು.  ಅಲ್ಲಿಂದ ೧ನೇ ನಂಬರ್ ಬಸ್ಸಿನಲ್ಲಿ (ಅಲ್ಲಿಂದಲೇ ಪ್ರಾರಂಭವಾಗ್ತಿದ್ದದ್ದು) ಕೊನೆಯ ನಿಲ್ದಾಣವಾದ ಸಲಾರ್ ಜಂಗ್ ಮ್ಯೂಸಿಯಂ‍ಗೆ ಹೋಗಿದ್ದೆವು.  ನಂತರ ಅಲ್ಲಿಯೇ ಹತ್ತಿರವಿದ್ದ ನ್ಯಾಷನಲ್ ಪಾರ್ಕ್ ನೋಡಿ, ವಾಪಸ್ಸಾಗಿದ್ದೆವು. 

 

ಅದಾದ ಕೆಲವು ತಿಂಗಳುಗಳಿಗೆ ನಮ್ಮ ಯೂನಿಯನ್ನಿನ ರಾಷ್ಟ್ರೀಯ ಮಟ್ಟದ ಅಧಿವೇಶನವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದೆವು.  ಅದಕ್ಕಾಗಿ ಬಹಳ ಕೆಲಸ ಮಾಡಿದ್ದೆವು.  ಒಂದು ತಿಂಗಲು ಮೊದಲಿನಿಂದಲೇ ಕೆಲಸ ಶುರುವಾಗಿತ್ತು.  ದೂರದೂರಿಗಳಿಂದ ಬರುವ ಅತಿಥಿಗಳ ಟ್ರೈನ್ ವೇಳಾಪಟ್ಟಿ, ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆ, ಊಟ ತಿಂಡಿ ವ್ಯವಸ್ಥೆ, ಸ್ಥಳೀಯ ಪ್ರೇಕ್ಷಣೆಗೆ ಸಿದ್ಧತೆ, ಮರಳಿ ಅವರೂರನ್ನು ಸುಖವಾಗಿ ತಲುಪಿಸುವ ಬಗ್ಗೆ, ಬ್ಯಾಂಕಿನ ಮುಂದೆ ಮತ್ತು ಅಧಿವೇಶನ ಸ್ಥಳದಲ್ಲಿ ಪೋಸ್ಟರುಗಳ ಅಂಟಿಸುವಿಕೆ, ಬಂಟೀಂಗ್ಸ್ ಕಟ್ಟುವಿಕೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದೆವು.  ಇದಕ್ಕಾಗಿ ನಮ್ಮಲ್ಲಿದ್ದ ಸದಸ್ಯರು ಬೆರಳೆಣಿಕೆಯಷ್ಟು.  ನಾವು ಕೆಲವು ಸ್ನೇಹಿತರುಗಳು ನಮ್ಮ ಯೂನಿಯನ್ ಆಫೀಸಿನಲ್ಲೇ ಕೆಲವು ರಾತ್ರಿಗಳು ಮಲಗಿದ್ದೆವು.  ಈ ಸಮಯದಲ್ಲಿ ನಮಗೆ ಹೆಚ್ಚಿನ ಮಾರ್ಗದರ್ಶನ ಮತ್ತು ಹೆಗಲಿಗೆ ಹೆಗಲು ಕೊಟ್ಟವರೆಂದರೆ, ಪುತ್ತೂರಾಯರು, ಬಾಬು ರವಿಶಂಕರ ಮತ್ತು ಜಯರಾಮ್. 

ವಿಭಾಗಗಳು
ಲೇಖನಗಳು

ಬ್ಯಾಂಕಿನಲ್ಲಿ ರಜತೋತ್ಸವ – 3

ಮರು ದಿನ ಅಂದರೆ ಎರಡನೆಯ ದಿನ ಕೆಲಸ ಸ್ವಲ್ಪ ಸುಲಭವಾಗಿತ್ತು.   ಅಂದು ಸಮಯಕ್ಕೆ ಸರಿಯಾಗಿ ಊಟಕ್ಕೆ ಹೋಗಿದ್ದೆವು ಮತ್ತು ಸಂಜೆ ೫ ಘಂಟೆಗೆ ಸರಿಯಾಗಿ ಕೆಲಸವೂ ಮುಗಿದಿತ್ತು. 

 

ಫೆಬ್ರವರಿ ತಿಂಗಳ ೨೬ಕ್ಕೆ ನಮಗೆ ಮೊದಲ ಸಂಬಳ ದೊರಕಿತು.  ಆ ಸಮಯದಲ್ಲಿ ನಮಗೆ ಪೇ ಸ್ಲಿಪ್ ಎಂದು ಸಂಬಳದ ವಿವರವಿರುವ ಒಂದು ಪತ್ರ ಕೊಡುವರು.  ಅಂದು ನಮ್ಮ ನಮ್ಮ ವಿಭಾಗಗಳಲ್ಲಿ  ಪೇ ಸ್ಲಿಪ್ ಅನ್ನು ಕೊಟ್ಟಿದ್ದರು.   ಆಗ ನನ್ನ ಸ್ನೇಹಿತ ಗಣೇಶ ಹೇಳಿದ ಮಾತುಗಳು ನನಗಿನ್ನೂ ನೆನಪಿದೆ. ಈ ಪೇ ಸ್ಲಿಪ್ ಅನ್ನು ಭದ್ರವಾಗಿಟ್ಟುಕೊಳ್ರಪ್ಪ – ಇನ್ನು ನಮ್ಮ ಸರ್ವೀಸ್‍ನಲ್ಲಿ ಇಂತಹ ಪೇ ಸ್ಲಿಪ್ ಸಿಗೋದಿಲ್ಲ‘, ಎಂದು.  ಏಕೆ ಹೇಳಿದ್ದ ಗೊತ್ತೇ?  ಅದರಲ್ಲಿ ಏನೊಂದೂ ಕಡಿತವಿರಲಿಲ್ಲ.  ಎರಡನೆಯ ತಿಂಗಳಿಂದ ಪ್ರಾವಿಡೆಂಟ್ ಫಂಡ್ ಕಡಿತ ಪ್ರಾರಂಭವಾಗಿತ್ತು.  ಇದು ಸೇವೆಯಲ್ಲಿರುವವರೆವಿಗೆ ಇದ್ದೇ ಇರುತ್ತದೆ.  ಗಣೇಶನ ಮಾತುಗಳು ಇಂದಿಗೂ ಕಿವಿಯಲ್ಲಿ ಧ್ವನಿಗುಡುತ್ತಲೇ ಇರುತ್ತದೆ. 

 

ಸ್ವಲ್ಪ ದಿನಗಳಲ್ಲೇ ನಾವುಗಳು ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಕಲಿತು ಹಳಬರಾಗಿದ್ದೆವು.  ೫-೬ ತಿಂಗಳುಗಳು ಕಳೆಯುವುದರೊಳಗೆ ನಮಗೆ ಕೆಲಸ ಚೆನ್ನಾಗಿ ಮಾಡಲು ಬರುತ್ತಿದ್ದು ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡುವುದು ಸ್ವಲ್ಪ ಬೋರ್ ಎನ್ನಿಸುತ್ತಿತ್ತು.  ಆದರೆ ೩ ತಿಂಗಳಿಗೊಮ್ಮೆ ಬೇರೆ ಬೇರೆ ಸೆಕ್ಷನ್ನುಗಳಿಗೆ ಬದಲಿಸುತ್ತಿದ್ದುದರಿಂದ ಹಿರಿಯರೊಂದಿಗೆ ಬೆರೆತು ಹೆಚ್ಚಿನ ವಿಷಯಗಳನ್ನು ಕಲಿಯುವಂತಾಗಿತ್ತು. 

 

ಮೊದಲ ತಿಂಗಳ ಸಂಬಳ ಬಂದ ಮೇಲೆ ಹಾಸ್ಟೆಲ್‍ನಲ್ಲಿ ಇರುವುದು ಸರಿ ಇರುವುದಿಲ್ಲವೆಂದು ಮಲ್ಲೇಶ್ವರದ ೧೮ನೇ ಕ್ರಾಸಿನಲ್ಲಿರುವ ಗಣೇಶ ಭವನದಲ್ಲಿ ರೂಮು ಮಾಡಿದ್ದೆ.   ಆದರೂ ಪ್ರತಿ ಶನಿವಾರ ಹಾಸ್ಟೆಲ್‍ಗೆ ಹೋಗ್ತಿದ್ದೆ.  ಅಷ್ಟು ವರ್ಷಗಳು ಅಲ್ಲಿದ್ದು ಇದ್ದಕ್ಕಿದ್ದಂತೆ ಅಲ್ಲಿಗೆ ಹೋಗದಿರಲು ಮನಸ್ಸಾಗುತ್ತಿರಲಿಲ್ಲ.  ಮತ್ತು ಅಲ್ಲಿನ ಸ್ನೇಹಿತರುಗಳಿಗೆ ಸ್ವಲ್ಪ ಮೋಜು ಮಾಡುವ ಮನಸ್ಸಾಗುತ್ತಿದ್ದು (ಯಾವಾಗಲೂ ಸ್ಟ್ರಿಕ್ಟ್ ಆಗಿ ಇರುತ್ತಿದ್ದ ಹಾಸ್ಟೆಲ್), ನಾನು ಹೋದಾಗಲೆಲ್ಲ ಸಿನೆಮಾಗೆ ಹೋಗೋಣ ಹೊಟೆಲ್‍ಗೆ ಹೋಗೋಣ ಎನ್ನುತ್ತಿದ್ದರು.  ಹೇಗಿದ್ದರೂ ನನ್ನಲ್ಲಿ ಹಣವಿದ್ದು, ಅವರುಗಳೊಂದಿಗೆ ಖರ್ಚು ಮಾಡುವುದು ಅವರಿಗೆ ಸಂತಸದ ವಿಷಯವಾಗಿತ್ತು.  ಅಲ್ಲಿನ ಸ್ನೇಹಿತರುಗಳು ಯಾರು ಎಂದರೆ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದ ಗಿರಿಶೇಖರ ಕಲ್ಕೂರ, ಬದರೀನಾಥ, ಡೆಂಟಲ್ ಓದುತ್ತಿದ್ದ ಬದರಿಯ ತಮ್ಮ (ಹೆಸರು ನೆನಪಿಗೆ ಬರ್ತಿಲ್ಲ), ಬಿಎಸ್‍ಸಿ ಓದುತ್ತಿದ್ದ ಪುಟ್ಟ (ಅವನ ನಿಜವಾದ ಹೆಸರು ಮರೆತಿರುವೆ), ಐ.ಸಿ.ಡಬ್ಲ್ಯು.ಏ ಓದುತ್ತಿದ್ದ ಪೂರ್ಣಚಂದ್ರ ಭಟ್ಟ, ರಾಜಾರಾಮ ಹೆಗಡೆ, ಸಿಎ ಮಾಡುತ್ತಿದ್ದ ಮಂಜುನಾಥ ಹೆಗಡೆ.  ಪ್ರತಿ ಶನಿವಾರ ರಾತ್ರಿ ಷೋಗೆ ಸಿನೆಮಾಗೆ ಹೋಗ್ತಿದ್ದೆವು.  ಆಗಾಗ ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತಿಂಡಿ ತಿನ್ನಲು ಹೋಗುತ್ತಿದ್ದೆವು.  ಸ್ವಲ್ಪ ಸಮಯಗಳ ನಂತರ ಏನೋ ಗಲಾಟೆ ಆಗಿ ಹಾಸ್ಟೆಲ್ ಅನ್ನು ಮುಚ್ಚಿಬಿಟ್ಟರು.  ಈಗ ಹಾಸ್ಟೆಲ್ ಇಲ್ಲ.  ಒಮ್ಮೆಯಂತೂ ಹಿಂದಿ ಚಲನಚಿತ್ರ ಪಡೋಸನ್ ಅನ್ನು ಒಂದೇ ವಾರದಲ್ಲಿ ನಾಲ್ಕು ಬಾರಿ ನೋಡಿದ್ದೆವು.  ಹಾಗೇ ಮಧುಮತಿ ಚಿತ್ರಕ್ಕೆ ಒಬ್ಬೊಬ್ಬರು ಒಂದೊಂದು ಸಲ ನನ್ನ ಜೊತೆ ಬಂದಿದ್ದು ಅದನ್ನೂ ೫ ಬಾರಿ ನೋಡಿದ್ದೆ.

 

ಮಲ್ಲೇಶ್ವರದ ಗಣೇಶ ಭವನದಲ್ಲಿ ವಾಸವಿದ್ದರೂ, ಹೆಚ್ಚಿನ ಸಮಯವೆಲ್ಲಾ ಬಸವನಗುಡಿಯಲ್ಲೇ ಕಳೆಯುತ್ತಿದ್ದೆ.  ಆಗ ನನ್ನೊಡನೆ ಐ.ಸಿ.ಡಬ್ಲ್ಯು.ಏ ಮಾಡುತ್ತಿದ್ದ ಕೆನರಾ ಬ್ಯಾಂಕ್ ಉದ್ಯೋಗಿ ಎಸ್.ಆರ್. ಹೆಗಡೆ, ಅವನೊಡನೆ ಅವನ ಮನೆಗೆ ಬಂದಿರಲು ಹೇಳಿದ.  ಅವನ ಮನೆ ಇದ್ದದ್ದು ಎನ್.ಆರ್.ಕಾಲೋನಿಯಲ್ಲಿ.  ಅವನೊಡನಿದ್ದ ಅವನ ಇನ್ನೊಬ್ಬ ಸ್ನೇಹಿತ (ಇಂಡಿಯನ್ ಆಯಿಲ್‍ನಲ್ಲಿ ಎಂಜಿನಿಯರ್) ವರ್ಗವಾಗಿ ಬೇರೆಯ ಊರಿಗೆ ಹೊರಟಿದ್ದ.    ಅಲ್ಲಿ ಸ್ವಲ್ಪ ದಿನಗಳಿದ್ದೆ. 

 

ಒಂದೆರಡು ತಿಂಗಳುಗಳಲ್ಲಿ ನನ್ನ ಕಾಲೇಜಿನ ಸಹಪಾಠಿ ಮತ್ತು ನಿಕಟ ಸ್ನೇಹಿತನಾಗಿದ್ದ ಮನೋಹರ ಶರ್ಮನಿಗೆ ಬಹಳ ಕಡಿಮೆ ಬಾಡಿಗೆಗೆ (ತಿಂಗಳಿಗೆ ರೂ. ೧೨೦/-) ಒಂದು ಮನೆ ಸಿಕ್ಕಿತ್ತು.  ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಅಷ್ಟು ಹಣ ಕೊಡಲು ಸಾಧ್ಯವಿರಲಿಲ್ಲ.  ನನಗೆ ಆ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಹೇಳಿದ.  ವಿಶ್ವೇಶ್ವರಪುರದ ಜೈನ್ ದೇವಸ್ಥಾನದ ಬೀದಿಯಲ್ಲಿ ಆ ಮನೆಗೆ ಹೋಗಿದ್ದೆ.    ಆಗಲೇ ಹೊಸ ಕುಕ್ಕರ್ ಮತ್ತು ಗ್ಯಾಸ್ ಕನೆಕ್ಷನ್ ತೆಗೆದುಕೊಂಡಿದ್ದೆ.   ರೇಷನ್ ಕಾರ್ಡ್ ಕೂಡಾ ಮಾಡಿಸಿದ್ದು ಆಗಲೇ.  ಒಂದು ರೀತಿಯಲ್ಲಿ ಸಂಸಾರ ಹೂಡಲು ಸಂಪೂರ್ಣವಾಗಿ ಸಜ್ಜಾಗಿದ್ದೆ.  ನಾನು ಮತ್ತು ನನ್ನ ಸ್ನೇಹಿತ ಪ್ರತಿದಿನವೂ ಬೆಳಗ್ಗೆ ಸಂಜೆ ಅಡುಗೆ ಮಾಡುತ್ತಿದ್ದೆವು. 

 

ಒಂದು ದಿನ ಊಟ ಮಾಡುತ್ತಿದ್ದಾಗ ಮೆದುಳಿಗೆ ಷಾಕ್ ತಗುಲಿದ ಹಾಗಾಯಿತು.  ಸಾವರಿಸಿಕೊಳ್ಳಲು ಎರಡು ನಿಮಿಷಗಳೇ ಬೇಕಾಯಿತು.  ಮುಂದೆ ಅನ್ನವನ್ನು ಬಾಯೊಳಗೆ ಇಡಲಾಗುತ್ತಿರಲಿಲ್ಲ.  ದವಡೆಯಲ್ಲಿ ಬಹಳ ನೋವು ಕಾಣಿಸಿಕೊಂಡಿತು.  ಹಾಗೆಯೇ ದವಡೆ ಬುರ್ರನೆ ಪೂರಿಯಂತೆ ಉಬ್ಬತೊಡಗಿತು.  ನನ್ನ ಸ್ನೇಹಿತ ಶರ್ಮನಿಗೆ ತಿಳಿಸಿದೆ.  ಊಟವನ್ನು ಅಷ್ಟಕ್ಕೇ ಬಿಟ್ಟು ತಕ್ಷಣ ಹತ್ತಿರದ ಹಲ್ಲಿನ ವೈದ್ಯರ ಹತ್ತಿರಕ್ಕೆ ಓಡಿದ್ದೆವು.  ವೈದ್ಯರು ಹೇಳಿದ್ದು, ಒಂದು ದವಡೆ ಹಲ್ಲು ಹುಳುಕಾಗಿದೆಯೆಂದೂ ತಕ್ಷಣ ಸಿಮೆಂಟ್ ತುಂಬಬೇಕೆಂದೂ. ತಕ್ಷಣವೇ ಅದಾಗಬೇಕೆಂದಿದ್ದರು.  ಸರಿ ಎಂದು ಅವರಿಂದಲೇ ಅಲ್ಲೇ ಸಿಮೆಂಟು ತುಂಬಿಸಿದೆ.  ಸ್ವಲ್ಪ ದಿನಗಳು ಏನೂ ತೊಂದರೆ ಇರಲಿಲ್ಲ.

 

ಅಂದೊಂದು ಭಾನುವಾರ ಬೂದುಗುಂಬಳಕಾಯಿ ಕಡಲೆಕಾಳು ಹಾಕಿ ಹುಳಿ ಮಾಡಿದ್ದೆವು.    ಮಧ್ಯಾಹ್ನ ಬಹಳ ಖುಷಿಯಾಗಿ ಊಟ ಮಾಡ್ತಿದ್ದಾಗ ಹಲ್ಲಿಗೆ ದಪ್ಪದಾದ ಕಲ್ಲು ಸಿಕ್ಕಿ ಕೊಂಡಂತಾಯ್ತು.   ಏನೂ ಅಂತ ನೋಡಿದರೆ, ಅದು ಹಲ್ಲಿಗೆ ತುಂಬಿದ್ದ ಸಿಮೆಂಟು.  ತಕ್ಷಣ ವೈದ್ಯರ ಬಳಿಗೆ ಮತ್ತೆ ಓಡಿದ್ದೆ.   ಆಗ ಅವರು ಸಿಮೆಂಟು ಸರಿಯಾಗಿ ಹೊಂದಿಕೆ ಆಗ್ತಿಲ್ಲ ಎಂದು ಸಿಲ್ವರ್ ಫಿಲ್ಲಿಂಗ್ ಮಾಡಿದ್ದರು. 

 

**************

 

೧೯೮೩ರ ಸೆಪ್ಟೆಂಬರ್ ಮಾಹೆ ೫ನೇ ತಾರೀಕಿನಂದು ನನ್ನ ತಾತ (ತಾಯಿಯ ತಂದೆ) ಕೂಡಾ ದೈವಾಧೀನರಾದದ್ದು.  ಅವರ ಬಗ್ಗೆ ಒಂದೆರಡು ಮಾತುಗಳು.  ನನ್ನ ತಾಯಿ ನನ್ನ ತಾತ ಅಜ್ಜಿಯರಿಗೆ ಮೊದಲನೆಯ ಮಗಳು.  ನನ್ನ ತಾತ ಆರೋಗ್ಯ ಇಲಾಖೆಯಲ್ಲಿ ಆರೋಗ್ಯಾಧಿಕಾರಿಯಾಗಿ ನಿವೃತ್ತರಾದವರು.  ನಾಟಕಗಳಲ್ಲಿ ಪಾತ್ರವಹಿಸಿ ಬಹಳ ಹೆಸರು ಮಾಡಿದ್ದರು.  ಟೈಗರ್ ವರದಾಚಾರ್ಯರ ಜೊತೆ ನಾಟಕ ಮಾಡಿದ್ದರಂತೆ.  ಅಯ್ಯೋ! ಅವರ ಹೆಸರೇ ಹೇಳಲಿಲ್ಲ ಅಲ್ವೇ.  ಸಿ.ಕೆ.ಸೂರ್ಯನಾರಾಯಣ ರಾವ್.  ಚಿಕ್ಕ ವಯಸ್ಸಿನಿಂದಲೂ ಬಹಳ ಕಷ್ಟಪಟ್ಟು ಮೇಲೆ ಬಂದವರು.  ಅವರು ನನ್ನ ತಾತ ಎಂದು ಹೇಳಿಕೊಳ್ಳಲು ಒಂದು ಬಗೆಯ ಹೆಮ್ಮೆ ಆಗುತ್ತದೆ.  ಮಲೇರಿಯಾಲಜಿಯಲ್ಲಿ ಉನ್ನತ ತರಬೇತಿಗಾಗಿ ಇಂಡೋನೇಷಿಯಾಗೆ ಹೋಗಿ ಬಂದಿದ್ದರು.  ಆಗ ಇಂಡೋನೇಷಿಯಾ ಜನ ಜೀವನದ ಬಗ್ಗೆ ಒಂದು ಸಣ್ಣ ಹೊತ್ತಿಗೆಯನ್ನು ಬರೆದು ಪ್ರಕಟಿಸಿದ್ದರು.  ಇದಷ್ಟೇ ಅಲ್ಲ ವೃತ್ತಿಯಲ್ಲಿ ಆರೋಗ್ಯ ಅಧಿಕಾರಿಯಾಗಿ ಉತ್ತಮ ಹೆಸರನ್ನು ಪಡೆದಿದ್ದವರು, ನಾಟಕ ರಂಗದ ಜೀವನದ ಒಳ ಹೊರಗನ್ನು ತಿಳಿಸುವ ಲೇಖನವನ್ನು ಧಾರಾವಾಹಿಯಾಗಿ ಸುಧಾ ವಾರಪತ್ರಿಕೆಯಲ್ಲಿ ಬರೆದು ಪ್ರಕಟಿಸಿದ್ದರು.  ದೂರ್ವಾಸ ಮುನಿಯ ಅಪರಾವತಾರವಾಗಿದ್ದ ಅವರನ್ನು ಕಂಡು ಎಂದಿಗೂ ದೂರವಿರುತ್ತಿದ್ದೆ.  ಕೆಲಸ ಸಿಕ್ಕ ಮೇಲೆಯೇ ನಾನು ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದು.  ನಾನು ಬಿ.ಕಾಂ. ಮೊದಲನೆಯ ದರ್ಜೆಯಲ್ಲಿ ಪಾಸಾಗಿದ್ದರೂ ಒಂದು ವರ್ಷದ ಕಾಲ ಸರಕಾರೀ ನೌಕರಿ ಸಿಕ್ಕದೇ ಒದ್ದಾಡಿತ್ತಿದ್ದು, ನಂತರ ಎ.ಜೀಸ್ ಆಫೀಸಿನಲ್ಲಿ ಕೆಲಸ ಸಿಕ್ಕಿದ ಹಿಂದೆಯೇ ರಿಸರ್ವ್ ಬ್ಯಾಂಕಿನಲ್ಲಿ ಮೆಡಿಕಲ್ ಎಕ್ಸಾಮಿನೇಷನ್ ಆದಾಗಲೇ, ಕಾರ್ಪೋರೇಷನ್ ಬ್ಯಾಂಕಿನಿಂದ ಕೆಲಸಕ್ಕೆ ಆರ್ಡರ್ ಬಂದು, ಆಗಲೇ ಕರ್ನಾಟಕ ಸರಕಾರದ ನೌಕರಿಯ ಆರ್ಡರ್ ಬಂದದ್ದು, ಕೇಳಿದ ಅವರು ಮೊದಲ ಬಾರಿಗೆ ಮನೆಯ ಅಂಗಳದ ಕಲ್ಲು ಹಾಸಿನ ಮೇಲೆ ಜೊತೆಗೆ ಕುಳ್ಳಿರಿಸಿಕೊಂಡು ಬಹಳ ಆಪ್ಯಾಯತೆಯಿಂದ ಮಾತನಾಡಿಸಿದ್ದು ಮರೆಯಲಾರದ ಘಟನೆ.   ಅವರಾಡಿದ ಮಾತುಗಳು ಈಗಲೂ ಕಿವಿಯಲ್ಲಿ ಗುಂಯ್‍ಗುಡುತ್ತಿವೆ.

 

ಇಷ್ಟು ದಿನಗಳು ನಿಮ್ಮೆಲ್ಲರನ್ನೂ ಬಹಳ ಸ್ಟ್ರಿಕ್ಟ್ ಆಗಿ ನೋಡಿದ್ದು ನಿನಗೆ ವ್ಯಥೆ ತಂದಿದೆಯೇನಯ್ಯಾ.  ಐ ಯಾಮ್ ಪ್ರೌಡ್ ಆಫ್ ಯು ಮೈ ಬಾಯ್.  ಕೇಳು ಇವತ್ತು ಹೇಳ್ತಿದ್ದೀನಿ, ನೀವೆಲ್ಲರೂ ನಿಮ್ಮ ನಿಮ್ಮ ಕಾಲ ಮೇಲೆ ನಿಲ್ಲಲಿ, ಜೀವನದ ಅರಿವಾಗಿ, ಇತರರಿಗೆ ಭಾರವಾಗದೇ ಇತರರ ಭಾರವನ್ನು ಹೊರುವಂತಹ ಶಕ್ತಿಯನ್ನೂ ಬುದ್ಧಿಯನ್ನೂ ಹೊಂದಲಿ ಅಂತ ಅಷ್ಟೇ ನಾನು ನಿಮ್ಮಗಳನ್ನು ಸ್ವಲ್ಪ ನಿಕೃಷ್ಟವಾಗಿ ನೋಡುತ್ತಿದ್ದೆ.  ನಿನಗೆ ಗೊತ್ತೇನಯ್ಯಾ, ನಾನೂ ವಾರಾನ್ನ ಮಾಡಿಯೇ ಬೆಳೆದವನು.  ಎಲ್ಲೋ ಮೂಲೆಯಲ್ಲಿ ಬೆಳೆದವನು ವಿಲಾಯತಿಗೆ ಹೋಗಿ ಬರುವುದು ಎಂದರೇನು ಸುಲಭದ ವಿಷಯವೇ.  ನನ್ನ ಹಾಗೆಯೇ ಜೀವನವನ್ನು ನೀನೂ ಅರಿಯುತ್ತಿರುವೆ.  ನಿನಗೆ ಒಳ್ಳೆಯದಾಗಲಿ.  ಇನ್ಮೇಲೆ ನೀನು ನನ್ನ ಸ್ನೇಹಿತನಿದ್ದ ಹಾಗೆ.  ಆಗಾಗ ಬರ್ತಿರಯ್ಯ‘.

 

ಏನೇ ಆಗಲಿ ಆ ತಾತನನ್ನು ಮರೆಯಲಾದೀತೇ?  ಇಂದು ಈ ಮಟ್ಟಕ್ಕೆ ಬರಲು ಮನದಲ್ಲಿ ಛಲ ಬಂದಿದ್ದರೆ ಅದು ಅಂದು ಅವರು ಹೇಳಿದ ಮಾತುಗಳೇ ಕಾರಣ.  ಅವರ ಆ ಮಾತುಗಳು ಆಪ್ಯಾಯತೆ ನನ್ನಲ್ಲಿ ಮಾನವೀಯತೆಯನ್ನು ಮೂಡಿಸಿತು.  ನನ್ನ ದುರಾದೃಷ್ಟ, ನಾನು ಅವರೊಂದಿಗೆ ಹೆಚ್ಚಿನ ಕಾಲ ಕಳೆಯಲಾಗಲಿಲ್ಲ.  ಅವರು ಸಾಯುವ ಮೊದಲು ಸ್ವಲ್ಪ ಕಾಲ ಆಸ್ಪತ್ರೆಯಲ್ಲಿ ಇದ್ದರು.  ಆಗ ಕೆಲವು ದಿನಗಳ ಕಾಲ ಅವರೊಂದಿಗಿರುವ ಅವಕಾಶ ಸಿಕ್ಕಿತ್ತು.  ಆಗಲೂ ಅವರು ಹೆಚ್ಚು ಮಾತನಾಡಲಿಲ್ಲ.  ಅವರ ಕರಾರುವಾಕ್ಕಾದ ಜೀವನಕ್ರಮ, ಮಿತ ಆಹಾರ ಸೇವನೆಗಳು ನನಗೆ ಪಾಠ ಕಲಿಸಿದವು.

 

೧೯೮೪ ರ ಅಕ್ಟೋಬರ್ ೩೧ನೇ ತಾರ್‍ಈಖು, ಸಿ.ಎ.ಐ.ಐ.ಬಿ ಪರೀಕ್ಷೆಯಿದ್ದಿತು.  ಮನೆಯ ಎದುರೇ ಇದ್ದ ನಾಷ್ಯನಲ್ ಕಾಲೇಜಿಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಿತ್ತು.  ನಾಲ್ಕೈದು ದಿನಗಳ ಹಿಂದೆಯಷ್ಟೇ ಹಲ್ಲಿಗೆ ಸಿಲ್ವರ್ ತುಂಬಿಸಿದ್ದ ಸಮಯ.  ಆಗ ನನಗೆ ಸ್ವಲ್ಪ ಜ್ವರವಿದ್ದಿತ್ತು.  ಅಂದು ಪರೀಕ್ಷೆ ಇದ್ದುದರಿಂದ ಹೋಗಲೇ ಬೇಕಿತ್ತು.  ಏನನ್ನೂ ತಿನ್ನಲು ಮನಸ್ಸಿರಲಿಲ್ಲ.  ಅಷ್ಟು ಹೊತ್ತಿಗೆ ಸ್ನೇಹಿತ ರಾಘವೇಂದ್ರ (ಕಾಲೇಜಿನಿಂದ ಸ್ನೇಹಿತನಾಗಿದ್ದು ಒಟ್ಟಿಗೇ ಬ್ಯಾಂಕು ಸೇರಿದವನು), ಅವರ ತಾಯಿ ಕಳುಹಿಸಿದರೆಂದು ರವೆ ಗಂಜಿಯನ್ನು ತಂದಿದ್ದ.  ಬೇರೆಯ ದಿನಗಳಲ್ಲಿ ಗಂಜಿಯನ್ನು ನೋಡಲೂ ಅಸಹ್ಯ ಪಡುತ್ತಿದ್ದವನು ಅಂದು ಚಪ್ಪರಿಸಿಕೊಂಡು ತಿಂದಿದ್ದೆ.  ಅವನೊಡನೆ ನಾನು ಪರೀಕ್ಷೆಗೆ ಹೊರಟೆ.  ಸರಿಯಾಗಿ ಓದಿರಲಿಲ್ಲ.  ಏನು ಬರೆಯುವುದು ಎಂದು ಯೋಚಿಸುತ್ತಿರುವಷ್ಟರಲ್ಲೇ ಅಂದಿನ ಪರೀಕ್ಷೆ ಮುಂದೆ ಹೋಗಿದೆಯೆಂದೂ ತಿಳಿದಿತ್ತು.  ಅಬ್ಬಾ! ಕೊನೆಗೂ ಓದಲು ಸಮಯ ಸಿಕ್ಕಿತು ಎಂದು ಸಂತಸ ಪಟ್ಟಿದ್ದೆ.  ಏಕೆ ಪರೀಕ್ಷೆ ಮುಂದೆ ಹೋಗಿದೆ ಎಂದು ತಿಳಿಯಲೂ ವ್ಯವಧಾನವಿರಲಿಲ್ಲ.

ಎಂತಹ ವಿಪರ್ಯಾಸ ನಾಯಕಿಯನ್ನು ಕಳೆದುಕೊಂಡು ಇಡೀ ದೇಶವೇ ಶೋಕದಲ್ಲಿ ಮುಳುಗಿದ್ದಾಗ ನಾನು ಪರೀಕ್ಷೆ ಮುಂದಕ್ಕೆ ಹೋಗಿರುವುದರ ಬಗ್ಗೆ ಸಂತೋಷ ಪಡ್ತಿದ್ದೆ.  ಮರುದಿನ ದಿನ ಪತ್ರಿಕೆಯನ್ನು ನೋಡಿದ ಮೇಲೆಯೇ ಇಂದಿರಾ ಗಾಂಧಿಯವರ ಕೊಲೆಯ ಬಗ್ಗೆ ತಿಳಿದದ್ದು.

 

**************

 

೧೯೮೪ರ ಡಿಸೆಂಬರ್ ವೇಳೆಗೆ ನನಗೆ ಎಲ್.ಎಫ್.ಸಿ. (ಲೀವ್ ಫೇರ್ ಕನ್ಸೆಷನ್) ತೆಗೆದುಕೊಳ್ಳುವ ಅವಕಾಶ ಸಿಕ್ಕಿತ್ತು.  ಅಂದರೆ ಎಲ್.ಎಫ್.ಸಿ ಯಲ್ಲಿ ಬ್ಯಾಂಕಿನ ಹಣದಲ್ಲಿ ರಜೆಯ ಮೇಲೆ ಬೇರೆ ಊರಿಗೆ ರೈಲಿನಲ್ಲಿ ಹವಾನಿಯಂತ್ರಿತ ಅಥವಾ ಮೊದಲ ದರ್ಜೆಯಲ್ಲಿ ಬೇರೆ ಊರಿಗೆ ಹೋಗಿ ಬರಬಹುದು.  ಮೊದಲ ಅವಕಾಶ ಸಿಕ್ಕಿದಾಗ ದೂರದೂರಿಗೆ ಹೋಗುವುದೆಂದರೆ, ನನಗೆ ಮೊದಲು ತೋಚಿದ್ದು ಮುಂಬೈಗೆ ಹೋಗೋಣ ಅಂತ.  ಏಕೆಂದರೆ ಅಲ್ಲಿ ಆಗ ನನ್ನಣ್ಣ ಕೆಲಸ ಮಾಡುತ್ತಿದ್ದ.  ಅಲ್ಲಿಯವರೆವಿಗೆ ನಾನು ಕರ್ನಾಟಕ ಬಿಟ್ಟು ಆಚೆ ಹೋಗಿದ್ದವನಲ್ಲ. 

 

ಮುಂಬೈಗೆ ಹೋಗಲು ಹವಾನಿಯಂತ್ರಿತ ತರಗತಿಯಲ್ಲಿ ಮುಂಗಡ ಟಿಕೆಟ್ ಮಾಡಿಸಿದೆ.   ಅಣ್ಣನಿಗಾಗಿ ಬೆಂಗಳೂರಿನಲ್ಲಿ ಸಿಗುವ ವಿಶೇಷ ತಿನಿಸುಗಳನ್ನು ಕೊಂಡಿದ್ದೆ.  ಆಗಿನ್ನೂ ಹೊಸದಾಗಿ ಉದ್ಯಾನ್ ಎಕ್ಸ್ಪ್ರೆಸ್ ದಿನವಹೀ ಬೆಂಗಳೂರಿನಿಂದ ರಾತ್ರಿ ೮ಕ್ಕೆ ಹೊರಟು ಮರುದಿನ ರಾತ್ರಿ ೮ಕ್ಕೆ ಮುಂಬೈ ತಲುಪುತ್ತಿತ್ತು.    ಅದೇ ಮೊದಲ ಬಾರಿಗೆ ಹವಾನಿಯಂತ್ರಿತ ಬೋಗಿಯೊಳಗೆ ಕಾಲಿಡುತ್ತಿದ್ದೆ.  ಅಲ್ಲಿ ಬರುವವರೆಲ್ಲರೂ ಆಗರ್ಭ ಶ್ರೀಮಂತರಿರಬೇಕೆಂದು ಎಣಿಸಿದ್ದೆ.  ಅವರೊಂದಿಗೆ ನಗೆಪಾಟಲಾಗಬಾರದೆಂದು ಪ್ರಯಾಣಕ್ಕಾಗಿಯೆ ಹೊಸ ಬಟ್ಟೆಯನ್ನು ಧರಿಸಿದ್ದೆ.   ನನ್ನಲ್ಲೂ ಅಂತಸ್ತಿದೆ ಎಂದು ತೋರ್ಪಡಿಸಿಕೊಳ್ಳುವ ಸಲುವಾಗಿ ಒಂದು ಒಳ್ಳೆಯ ಲೇಖನಿ ಮತ್ತು ಡೈರಿಯನ್ನು ಕೈನಲ್ಲಿ ಹಿಡಿದಿದ್ದೆ.  ಟ್ರೈನ್ ಬೆಂಗಳೂರು ಬಿಡುತ್ತಿದ್ದಂತೆಯೇ ಒಂದೇ ಸಮನೆ ಡೈರಿಯಲ್ಲಿ ಬರೆಯುತ್ತಿದ್ದೆ.  ಮಧ್ಯೆ ಮಧ್ಯೆ ಆಚೀಚೆ ನೋಡುತ್ತಿದ್ದೆ.  ನಂತರ ತಿಳಿದು ಬಂದ ವಿಷಯವೆಂದರೆ ಹೆಚ್ಚಿನ ಜನ ನನ್ನಂತೆಯೇ ಎಲ್.ಎಫ್.ಸಿ, ಎಲ್.ಟಿ.ಸಿ ತೆಗೆದುಕೊಂಡು ಬರ್ತಿದ್ದಾರೆ ಅಂತ.  ನಾನು ಡೈರಿಯಲ್ಲಿ ಬರೆಯುತ್ತಿದ್ದುದು ಏನೆಂದರೆ ಟ್ರೈನಿನಲ್ಲಿ ಹೋಗುವಾಗ ಬರುತ್ತಿದ್ದ ಸ್ಟೇಷನ್ನುಗಳ ಹೆಸರುಗಳನ್ನು.   ಟ್ರೈನ್ ನಿಲ್ಲುತ್ತಿದ್ದ ಪ್ರತಿಯೊಂದು ಸ್ಟೇಷನ್ನಿನಲ್ಲೂ ನಾನಿಳಿದು ಅಕ್ಕ ಪಕ್ಕದ ಬೋಗಿಗಳ ಕಡೆ ಹೋಗಿ ಬರ್ತಿದ್ದೆ.  ಮಾರನೆಯ ದಿನ ರಾತ್ರಿ ೭ಕ್ಕೆ ಸರಿಯಾಗಿ ಕಲ್ಯಾಣ ಸ್ಟೇಷನ್ ತಲುಪಿದ್ದೆ.  ಬಾಗಿಲಿನಿಂದ ಇಳಿಯುತ್ತಿರುವಂತೆಯೇ ನನ್ನಣ್ಣ ಎದುರಾಗಿದ್ದ. 

 

ಅಣ್ಣನೊಂದಿಗೆ ಅವನ ಕೊಠಡಿಗೆ ಹೋದಾಗ ಇಲ್ಲಿಯ ವಸತಿಯ ತೊಂದರೆ ಎಷ್ಟಿದೆ ಮತ್ತು ಬದುಕು ಎಷ್ಟು ದುಸ್ಸರವಾಗಿದೆ ಎಂದು ತಿಳಿಯಿತು.  ನನ್ನಣ್ಣ ಇದ್ದದ್ದು ಮುಂಬೈನ ಕೇಂದ್ರ ಪ್ರದೇಶದಿಂದ ೬೦ ಕೊಲೋಮೀಟರ್ ದೂರದ ಉಲ್ಹಾಸ ನಗರದಲ್ಲಿ.  ಅದೊಂದು ಚಾಲ್ ಅಂದರೆ ವಠಾರ.  ಒಂದು ಮನೆಯನ್ನು ಇನ್ನೊಂದು ಮನೆಯೊಂದಿಗೆ ಬೇರ್ಪಡಿಸಲು ಒಂದೇ ಗೋಡೆ.  ಆ ಮನೆಗಳಲ್ಲಿ ಮುಂಭಾಗದಲ್ಲಿ ಸಣ್ಣ ಕೊಠಡಿ – ಅಲ್ಲೇ ಒಂದು ಮೂಲೆಯಲ್ಲಿ ಅಡುಗೆ ಮಾಡುವ ಜಾಗ, ಕೊನೆಯಲ್ಲಿ ಒಂದು ಬಚ್ಚಲು.   ಶೌಚಕ್ರಿಯೆಗೆ ಹಿಂದುಗಡೆ ಇರುವ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸಬೇಕು.  ಬೆಳಗ್ಗೆ ಆರು ಘಂಟೆಗೆ ಅಲ್ಲಿ ದೊಡ್ಡ ಕ್ಯೂ ಇರುತ್ತದೆ.  ಅದಕ್ಕಾಗಿ ನನ್ನಣ್ಣ ಪ್ರತಿದಿನವೂ ೫ ಘಂಟೆಗೇ ಎದ್ದು ಶೌಚಕಾರ್ಯ ಮುಗಿಸಿ ಬರುತ್ತಿದ್ದ.   ಮರುದಿನದಿಂದ ಮುಂಬೈ ಸುತ್ತುವುದರ ಬಗ್ಗೆ, ಎಲ್ಲೆಲ್ಲಿ ಏನೇನು ನೋಡುವುದಿದೆ, ಹೇಗೆ ಹೋಗಬೇಕು, ಲೋಕಲ್ ಟ್ರೈನಿನಲ್ಲಿ ಹೇಗೆ ಹತ್ತಬೇಕು, ಜೇಬುಗಳ್ಳರಿಂದ ಹೇಗೆ ಹುಷಾರಾಗಿರಬೇಕು ಎಂದೆಲ್ಲಾ ಹೇಳಿದ್ದ.  ಮುಂಬೈನಲ್ಲಿ ದೊಡ್ಡ ಬಂಗಲೆಗಳು, ಐಷಾರಾಮೀ ಜೀವನ, ಕಾರುಗಳಲ್ಲಿ ಓಡಾಟ ಇತ್ಯಾದಿ ಬಗ್ಗೆ ಏನೇನೋ ಕನಸು ಕಂಡಿದ್ದೆ.  ಎಲ್ಲವೂ ಒಂದೇ ದಿನದಲ್ಲಿ ಠುಸ್ ಎಂದು ಹೋಯಿತು.  ೧೫ ದಿನಗಳು ಇರುವುದೆಂದು ಲೆಕ್ಕ ಹಾಕಿ ಬಂದಿದ್ದ ನಾನು ಮರುದಿನವೇ ಲೋಕಲ್ ಟ್ರೈನಿನಲ್ಲಿ ಓಡಾಡಲು ಪಾಸನ್ನು ಮಾಡಿಸಿದ್ದೆ.   

 

ಶಾಲೆಯಲ್ಲಿದ್ದಾಗ ಹಿಂದಿ ಪರೀಕ್ಷೆಯನ್ನು ಪಾಸು ಮಾಡಿದ್ದ ನಾನು, ಹಿಂದಿ ಚೆನ್ನಾಗಿ ಅರ್ಥ ಆಗುತ್ತದೆ, ಮಾತನಾಡಲೂ ಬರುತ್ತದೆ ಎಂದೆಣಿಸಿದ್ದೆ.  ಆದರಿಲ್ಲಿ ಮಾತನಾಡುವ ಹಿಂದಿಯೇ ಬೇರೆ.  ನನಗೆ ಎಷ್ಟೋ ಪದಗಳು ಅರ್ಥವೇ ಆಗ್ತಿರ್ಲಿಲ್ಲ. ಮರಾಠಿ ಹಿಂದಿ ಮಿಶ್ರಣವಾಗಿ ಸ್ವಲ್ಪ ಒಡ್ಡು ಒಡ್ಡಾಗಿ ಮಾತನಾಡುವ ಭಾಷೆ ಇಲ್ಲಿಯದ್ದಾಗಿದೆ.  ಪ್ರತಿದಿನ ಬೆಳಗ್ಗೆ ೮ ಘಂಟೆಗೆ ಉಲ್ಹಾಸನಗರ ಸ್ಟೇಷನ್ನಿನ ಮೊದಲನೆಯ ಪ್ಲಾಟ್‍ಫಾರಂನಲ್ಲಿ ಬರುವ ಅಂಬರನಾಥದ ಗಾಡಿಯನ್ನು ಹಿಡಿಯುತ್ತಿದ್ದೆವು.  ಅದರಲ್ಲಿ ಒಳಗೆ ನುಸುಳಲು ಸ್ವಲ್ಪ ಅವಕಾಶ ಸಿಗುತ್ತಿತ್ತು.  ಬದಲಾಪುರ ಅಥವಾ ಕರ್ಜತ್ ಗಾಡಿಗಳಲ್ಲಿ ಒಳಗೆ ಹೋಗಲಾಗುತ್ತಿರಲಿಲ್ಲ.  ಪ್ರತಿ ದಿನವೂ ಹೀಗೆಯೇ ಲೋಕಲ್ ಟ್ರೈನಿನಲ್ಲಿ ಹತ್ತಿ ಇಳಿದು ಮುಂಬೈ ದರ್ಶನವನ್ನು ಮಾಡಿದ್ದಾಗಿತ್ತು.  ವಾಪಸ್ಸು ಬರುವಾಗ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಬಂದು ಅಲ್ಲಿಂದ ನನ್ನೂರಾದ ತಳುಕಿಗೆ ಹೋಗಿದ್ದೆ.  ಅಲ್ಲೊಂದೆರಡು ದಿನಗಳಿದ್ದೆ.  ಇನ್ನೂ ೧೦ ದಿನಗಳ ರಜೆ ಇದ್ದುದರಿಂದ ಏನು ಮಾಡಲಿ, ಎಲ್ಲಿಗೆ ಹೋಗಲಿ ಅಂತ ಯೋಚಿಸ್ತಿದ್ದಾಗ, ನನ್ನ ತಂದೆ ತಿರುಪತಿಗೆ ಹೋಗಿ ಬಾ, ಎಂದಿದ್ದರು.  ಅದೇ ಮೊದಲ ಬಾರಿಗೆ ತಿರುಪತಿಗೆ ನಾನು ಹೋಗುತ್ತಿದ್ದುದು.  ನನ್ನೂರಿನಿಂದ ೧೫ ಕಿಲೋಮೀಟರ್ ದೂರದ ಚಳ್ಳಕೆರೆಯಿಂದ ಬೆಳಗ್ಗೆ ೭ ಘಂಟೆಗೆ ತಿರುಪತಿಗೆ ಹೋಗಲು ನೇರ ಬಸ್ಸು ಇದ್ದಿತ್ತು.  ಅದರಲ್ಲಿ ಹೊರಟು ಸಂಜೆ ೭ಕ್ಕೆ ತಿರುಪತಿಗೆ ಹೋಗಿ ಸೇರಿದ್ದೆ.  ಅದೇ ಮೊದಲ ಬಾರಿಗೆ ಹೋಗುತ್ತಿದ್ದುದರಿಂದ ಎಲ್ಲಿ ಹೋಗುವುದು, ಏನು ಮಾಡುವುದು ಎಂದು ಏನೂ ತಿಳಿದಿರಲಿಲ್ಲ.  ನೇರವಾಗಿ ಹತ್ತಿರದ ಪೋಲಿಸ್ ಸ್ಟೇಷನ್ನಿಗೆ ಹೋದೆ.  ತಿರುಮಲ ಬೇರೆ ತಿರುಪತಿ ಬೇರೆ ಎಂಬುದು ತಿಳಿದದ್ದೇ ಆಗ.  ಅಲ್ಲಿಯವರೆವಿಗೆ ಇವೆರಡರ ವ್ಯತ್ಯಾಸ ತಿಳಿದೇ ಇರಲಿಲ್ಲ.  ಅಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ತಕ್ಷಣವೇ ಬಸ್ಸನ್ನೇರಿ ತಿರುಮಲಕ್ಕೆ ಹೋಗಿದ್ದೆ.  ಅಲ್ಲಿ ರಾತ್ರಿ ಕಳೆಯಲು ರೂಮು ಮಾಡಲು ಹೋದಾಗ ರೂ ೧೦ ಕ್ಕೆ ಕಾಟೇಜ್ ಸಿಗುವುದೆಂದು ತಿಳಿಯಿತು.  ಹತ್ತಿರದಲ್ಲೇ ಇದ್ದ ಹೊಟೇಲ್ ಒಂದರಲ್ಲಿ ರಾತ್ರಿಯೂಟ ಮಾಡಿ ಕಾಟೇಜಿನಲ್ಲಿ ಮಲಗಿದೆ.  ಬೆಳಗ್ಗೆ ಬೇಗನೆ ದೇವರ ದರ್ಶನ ಮಾಡಬೇಕೆಂಬ ಕಾತರದಲ್ಲಿ ರಾತ್ರಿ ನಿದ್ರೆಯೇ ಬಂದಿರಲಿಲ್ಲ.  ನನಗೆ ಗಡಿಯಾರ ಕಟ್ಟುವ ಅಭ್ಯಾಸವಿಲ್ಲವಾಗಿ ಸಮಯ ಎಷ್ಟಾಗಿದೆ ಎಂದು ತಿಳಿಯುತ್ತಿರಲಿಲ್ಲ.  ಸಾಮಾನ್ಯವಾಗಿ ಹೋದಲ್ಲೆಲ್ಲಾ ಗಡಿಯಾರು ಇರುತ್ತಿತ್ತು.  ಮಲಗಿದ್ದವನಿಗೆ, ಹೊರಗಡೆ ಬೆಳಕು ಹರಿದಂತೆ ಅನ್ನಿಸಿತು.  ತಕ್ಷಣ ಎದ್ದು ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋಗೋಣ ಎಂದು ಸ್ನಾನದ ಮನೆಗೆ ಹೊರಟೆ.  ನಲ್ಲಿ ತಿರುಗಿಸಿ ಕೆಳಗೆ ಕುಳಿತೆ.  ಒಂದು ಕ್ಷಣ ಎಲ್ಲಿದ್ದೇನೆ ಎಂಬುದೇ ನೆನಪಿರಲಿಲ್ಲ.  ಮೈಯೆಲ್ಲಾ ಮರತಟ್ಟಿ ಹೋಗಿತ್ತು.  ಮಾಘ ಮಾಸದ ಛಳಿಗಾಲ.  ಬೆಳಗ್ಗೆ ೩ ಘಂಟೆ ಸಮಯದಲ್ಲಿ ನೀರು ಎಷ್ಟು ತಣ್ಣಗಿದ್ದೀತು – ನೀವೇ ಊಹಿಸಿ.  ನೀರು  ಮಂಜಿನ ಗಡ್ಡೆಯಾಗಿರಲಿಲ್ಲ ಅಷ್ಟೆ.  ಜನಸಂದಣಿ ಇಲ್ಲದ ಕಾರಣ ಮತ್ತು ಬೆಳಗಿನ ನಾಲ್ಕು ಘಂಟೆಯಾದ ಕಾರಣ ದೇವರ ದರ್ಶನ ಬಹಳ ಸುಲಭವಾಗಿ ಆಗಿತ್ತು.  ಪ್ರಸಾದ ವಿತರಣೆ ಇನ್ನೂ ಆರಂಭಿಸಿರಲಿಲ್ಲ.  ಹಾಗಾಗಿ ದೇಗುಲದ ಒಳಗೆಲ್ಲಾ ಸುತ್ತಾಡಿ ಬಂದೆ.  ಪ್ರಸಾದ ಕೊಡುವಾಗ ಹೆಚ್ಚಿಗೆ ಖಾರದ ಪೊಂಗಲ್ ಸಿಹಿ ಪೊಂಗಲ್ ಬೇಕೆಂದು ಎರಡು ರೂಪಾಯಿಗಳನ್ನು ಕೌಂಟರಿನಲ್ಲಿ ಕೊಡಲು, ದೊಡ್ಡ ದೊಡ್ಡ ಎಲೆಯಲ್ಲಿ ತುಂಬಿ ಕೊಟ್ಟರು.  ಅಷ್ಟೊಂದು ಹೇಗೆ ತಿನ್ನಲಿ.  ಅಂದಿನ ರಾತ್ರಿಯವರೆವಿಗೂ ಅದನ್ನೇ ತಿಂದಿದ್ದೆ.  ರಾತ್ರಿಯ ೯ ಘಂಟೆ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟೆ. 

 

ಬೆಳಗಿನ ಜಾವ ೫ಕ್ಕೆ ಬೆಂಗಳೂರು ತಲುಪಿದ್ದೆ.  ಎಲ್.ಎಫ್.ಸಿಗಾಗಿ ತೆಗೆದುಕೊಂಡಿದ್ದ ಇನ್ನೂ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಿತ್ತು.  ಅದನ್ನು ಖರ್ಚು ಮಾಡಲೆಂದೇ ಬಸ್ ಸ್ಟ್ಯಾಂಡಿನಿಂದ ನೇರವಾಗಿ ರೈಲ್ವೇ ನಿಲ್ದಾಣಕ್ಕೆ ಹೋಗಿ, ಫಸ್ಟ್ ಕ್ಲಾಸಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದೆ.  ಅಲ್ಲಿಯೂ ನಾನು ಕಂಪಾರ್ಟ್‍ಮೆಂಟಿನಲ್ಲಿ ಕುಳಿತುಕೊಳ್ಳದೇ ಬಾಗಿಲಿನಲ್ಲೇ ನಿಂತಿದ್ದೆ.  ಅದರಲ್ಲಿದ್ದ ಅಟೆಂಡೆಂಟ್‍ಗಳಿಗೆ ನನ್ನ ವರ್ತನೆ ನೋಡಿ ಆಶ್ಚರ್ಯವೆನಿಸಿತ್ತು.  ಯಾರೂ ಏನೂ ಕೇಳಲಿಲ್ಲ, ಮತ್ತು ನಾನೂ ಏನೂ ಹೇಳಲಿಲ್ಲ.  ಮೈಸೂರಿನ ರೈಲ್ವೇ ಸ್ಟೇಷನ್ ತಲುಪುತ್ತಲೇ ರಿಟರ್ನ್ ಟಿಕೆಟ್ ತೆಗೆದುಕೊಂಡು, ಚಾಮುಂಡಿ ಬೆಟ್ಟಕ್ಕೆ ಹೋಗಿಬಂದು ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದೆ.  ಎರಡು ದಿನಗಳಿಂದ ಸ್ನಾನವಿಲ್ಲದೇ ಅದು ಹೇಗೆ ಇದ್ದೆನೋ ಈಗಲೂ ನೆನೆಸಿಕೊಳ್ಳಲಾಗುವುದಿಲ್ಲ.