ವಿಭಾಗಗಳು
ಲೇಖನಗಳು

ಬ್ಯಾಂಕಿನಲಿ ರಜತೋತ್ಸವ – 2

 

ಜನವರಿ ೨೭ರಿಂದ ಎರಡು ವಾರಗಳ ಟ್ರೈನಿಂಗ್ ಅನ್ನು ಬೆಂಗಳೂರಿನ ಕಛೇರಿಯಲ್ಲೇ ಕೊಟ್ಟಿದ್ದರು.  ಅಲ್ಲಿಯವರೆವಿಗೆ ಟ್ರೈನಿಂಗ್‍ಗಾಗಿ ಚೆನ್ನೈ ಅಥವಾ ಮುಂಬೈಗಳಿಗೆ ಕಳುಹಿಸುತ್ತಿದರು.  ಇದೇ ಮೊದಲ ಬಾರಿಗೆ, ಕಛೇರಿಯ ಮೂರನೆಯ ಮಹಡಿಯಲ್ಲಿರುವ ಒಂದು ದೊಡ್ಡ ಕೊಠಡಿಯಲ್ಲಿ ೧೯೮೨ರ ಮೊದಲ ಬ್ಯಾಚ್‍ನ ೩೩ ಜನರಿಗೆ ಟ್ರೈನಿಂಗ್.  ಆಗ, ೨೦೦ ಜನರ ಸೇರಿಕೆಯಲ್ಲಿ ನಮ್ಮದೇ ಮೊದಲ ಬ್ಯಾಚ್ ಎಂಬ ಹೆಗ್ಗಳಿಕೆ ನಮಗೆ.   ಟ್ರೈನಿಂಗ್ ಕೊಡಲೆಂದೇ ಇಬ್ಬರು ಅಧ್ಯಾಪಕ ಆಫೀಸರುಗಳು ಮುಂಬೈನಿಂದ ಬಂದಿದ್ದರು.  ಒಬ್ಬರು ಶ್ರೀ ಎಂ.ಕೆ. ಪ್ರಭು ಮತ್ತು ಇನ್ನೊಬ್ಬರು ಕುಮಾರಿ ರಾಜೇಶ್ವರಿ. 

 

ಅಂದು ಬೆಳಗ್ಗೆ ೯ ಘಂಟೆಗೆ ಸರಿಯಾಗಿ ಬ್ಯಾಂಕಿನ ಒಳಗೆ ಠೀವಿಯಿಂದ ಹೋದೆ.  ಬಾಗಿಲು ದಾಟುವಾಗ ಸುತ್ತ ಮುತ್ತ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ – ನಾನೊಬ್ಬ ಮಹರಾಜನಂತೆ ಸಾರೋಟಿನಲ್ಲಿ ಬರುತ್ತಿದ್ದೇನೆ ಎನ್ನುವ ಎಲ್ಲಿಲ್ಲದ ಬಿಗುಮಾನ ಬಂದಿತ್ತು.   ಮೊದಲನೆಯ ದಿನ ನಮಗೆಲ್ಲ ಒಂದೊಂದು ನೋಟ್ ಪುಸ್ತಕ, ಪೆನ್ನು ಮತ್ತು ಒಂದೆರಡು ಹ್ಯಾಂಡ್‍ಔಟ್ ಕೊಟ್ಟಿದ್ದರು.  ಅಂದು ಮೊದಲ ಕ್ಲಾಸಿನಲ್ಲಿ ಹಿರಿಯ ಅಧಿಕಾರಿಗಳೊಬ್ಬರು ಬಂದು ಎಲ್ಲರನ್ನೂ ಪರಿಚಯ ಮಾಡಿಕೊಂಡು ಹೋಗಿದ್ದರು.  ಆಗ ತಿಳಿದು ಬಂದ ವಿಷಯವೆಂದರೆ ನಮ್ಮಲ್ಲಿ ಹೆಚ್ಚಿನವರುಗಳು ರ್‍ಯಾಂಕ್ ಪಡೆದಿದ್ದವರು ಮತ್ತು ಸ್ನಾತಕೋತ್ತರ ಪದವೀಧರರು.   ಎರಡು ಪೀರಿಯಡ್‍ಗಳಾದ ನಂತರ ಯೂನಿಯನ್ ನಾಯಕರುಗಳು ಬಂದು ತಮ್ಮ ಯೂನಿಯನ್ ಸೇರುವಂತೆ ಅರ್ಜಿಗಳನ್ನು ಕೊಟ್ಟು ಹೋಗಿದ್ದರು. 

ಮಧ್ಯಾಹ್ನ ೧ ಘಂಟೆಗೆ ಊಟಕ್ಕೆಂದು ಕ್ಯಾಂಟೀನಿಗೆ ಹೋಗಿದ್ದೆವು.  ಒಂದು ತಮಾಷೆಯ ವಿಷಯವೆಂದರೆ ಟ್ರೈನಿಂಗ್ ಮುಗಿಯುವವರೆವಿಗೆ ಎಲ್ಲಿಗೇ ಹೋಗಲಿ ಎಲ್ಲರೂ ಒಟ್ಟಿಗೇ ಹೋಗುತ್ತಿದ್ದೆವು.   ಅಂದು ಕ್ಯಾಂಟೀನಿನಲ್ಲಿ ಮೊದಲ ಊಟದ ರುಚಿ.  ಅದೇನು ಮಾಡಿದ್ದರೋ ಏನೋ, ನನಗಂತೂ ತುಂಬಾ ರುಚಿಯಾಗಿ ಕಂಡಿತ್ತು.  ಅದೇ ಮೊದಲ ದಿನ ಆಚೆ ಕಡೆ ಊಟ ಮಾಡಿದ್ದು.  ಅಂದು ಸಂಜೆ ಹಾಸ್ಟೆಲ್ಲಿಗೆ ಹೊರಡುವಾಗ (ಆಗಿನ್ನೂ ಹಾಸ್ಟೆಲ್‍ನಲ್ಲೇ ಇದ್ದೆ.  ಮೊದಲ ಸಂಬಳ ಬಂದ ನಂತರ ರೂಮ್ ಮಾಡಿದ್ದು), ಬೆಂಗಳೂರಿಗೆ ಮೊದಲು ಬಂದ, ಊರು ಕಂಡರಿಯದ ಕೆಲವು ಮಿತ್ರರುಗಳಿಗೆ ನಾನೇ ಲೀಡರ್ ಆಗಿ ಅವರವರ ನೆಂಟರಿಷ್ಟರ ಮನೆಗಳಿಗೆ ತಲುಪಿಸಿದ್ದೆ.  ಆಗ ನನಗಾದ, ಮುಂದೆ ಪರಮ ಆಪ್ತನಾದ ಸ್ನೇಹಿತನೆಂದರೆ ಧಾರವಾಡದಿಂದ ಬಂದಿದ್ದ ವಿಜಯ ನರೇಂದ್ರ.  ಇಂದಿಗೂ ಇವನು ನನಗೆ ಪರಮ ಆಪ್ತ ಸ್ನೇಹಿತ.  ವಿಜಯ್ ಅವರ ಚಿಕ್ಕಪ್ಪ ನರೇಂದ್ರ ಅವರು ಸಂಯುಕ್ತ ಕರ್ನಾಟಕದಲ್ಲಿ ಕಾರ್ಟೂನ್ ಬರೆಯುತ್ತಿದ್ದರು.  ಬಹಳ ಹೆಸರುವಾಸಿಯಾದ ಮನುಷ್ಯ.  ಮೊದಲ ದಿನ ವಿಜಯನನ್ನು ಅವರ ಮನೆಗೆ ಬಿಡುವ ಸಂದರ್ಭದಲ್ಲಿ, ಅವನ ಚಿಕ್ಕಪ್ಪ ಅವರ ಮನೆಗೆ ಹೋಗಿ ಅವರೊಡನೆ ಮಾತನಾಡಿ ಬಂದಿದ್ದೆ. 

 

ಎರಡನೆಯ ದಿನ ಬ್ಯಾಂಕಿಗೆ ಹೋಗುವಾಗ ಎಲ್ಲರಿಗೂ ಕಾಣುವಂತೆ ನೋಟ್‍ಬುಕ್ ಕೈಯಲ್ಲಿ ಹಿಡಿದಿದ್ದೆ.  ಯಾಕೆ ಅಂದ್ರೆ ಪುಸ್ತಕದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂತ ಅಚ್ಚಾಗಿತ್ತು.  ಎಲ್ಲರೂ ನೋಡಲಿ, ನೀವು ಅಲ್ಲಿ ಕೆಲಸ ಮಾಡ್ತಿದ್ದೀರಾ?  ಅಂತ ಕೇಳಲಿ ಎಂಬಾಸೆ.  ಗಾಂಧಿಬಜಾರಿನ ೩೦ನೇ ನಂಬರ್ ಬಸ್ ಸ್ಟಾಪಿಗೆ ಬಂದೆ.   ಈಗ ಆ ಬಸ್ ಇಲ್ಲ.  ೩೦ ನೇ ನಂಬರ್ ಬಸ್ಸು – ರೋಡ್ ಟ್ರೈನ್ ಆಗಿದ್ದಿತು.  ಗಾಂಧಿ ಬಜಾರಿನಿಂದ ಮೇಖ್ರಿ ಸರ್ಕಲ್‍ಗೆ ಹೋಗುತ್ತಿತ್ತು.  ನಮ್ಮ ಬ್ಯಾಂಕಿನ ಹತ್ತಿರದ ಮಾರ್ಥಾಸ್ ಆಸ್ಪತ್ರೆ ಸ್ಟಾಪಿಗೆ ೩೦ ಪೈಸೆ ದರವಿದ್ದಿತ್ತು.   ನಾನು ಬಸ್ ಸ್ಟಾಪ್ ತಲುಪುವ ವೇಳೆಗೆ ಬಸ್ ಹೊರಟಿತ್ತು.   ಓಡೋಡಿ ಬಂದು ಬಸ್ ಹತ್ತಲು ಹೋಗಿ, ಆಯತಪ್ಪಿ ಬಸ್ಸಿನ ಬಾಗಿಲು ಹಿಡಿಯಲು ಅಸಮರ್ಥನಾಗಿ ಕೆಳಗೆ ಬಿದ್ದಿದ್ದೆ.  ಮೈ ಕೈ ಎಲ್ಲಾ ತರಚಿ ಗಾಯವಾಗಿತ್ತು.  ಅಂದು ತೊಟ್ಟಿದ್ದ ಹೊಸ ಷರ್ಟು ಸ್ವಲ್ಪ ಹರಿದಿತ್ತು.  ಹಾಗೆಯೇ ಪ್ಯಾಂತು ಕೂಡಾ ಮೊಣಕಾಲಿನ ಹತ್ತಿರ ಹರಿದಿತ್ತು.  ಹಾಗೆಯೇ ಮುಂದಿನ ಬಸ್ಸಿನಲ್ಲಿ ಬ್ಯಾಂಕಿಗೆ ಹೋಗಿದ್ದೆ.  ಹಿಂದಿನ ಬಸ್ ತಪ್ಪಿದುದರಿಂದ ಕ್ಯಾಂಟೀನಿಗೆ ಹೋಗಲಾಗಿರಲಿಲ್ಲ.  ಯಥಾಪ್ರಕಾರ ಅಂದು ಬೆಳಗ್ಗೆ ಮತ್ತೆ ಉಪವಾಸ.  

 

ಟ್ರೈನಿಂಗಿನಲ್ಲಿ ಪ್ರತಿಯೊಂದು ವಿಭಾಗಗಳ ಕೆಲಸ ಕಾರ್ಯಗಳ ಬಗ್ಗೆ ಚೆನ್ನಾಗಿ ವಿವರಿಸಿಕೊಟ್ಟಿದ್ದರು.  ಕಾಲೇಜು ಹುಡುಗರಂತೆ ಅವರು ಹೇಳಿದುದೆಲ್ಲವನ್ನೂ (ಅರ್ಥ ಆಗದಿದ್ದರೂ ಕೂಡಾ) ನಾವು ಎಲ್ಲವನ್ನೂ ಚಾಚೂ ತಪ್ಪದಂತೆ ಬರೆದುಕೊಳ್ಳುತ್ತಿದ್ದೆವು.  ಆ ನೋಟ್ ಪುಸ್ತಕ ಈಗಲೂ ನನ್ನ ಬಳಿ ಇದೆ.  ಅದರ ಪುಟಗಳನ್ನು ತೆಗೆದು ನೋಡಿದರೆ ಆ ಹಿಂದಿನ ನೆನಪುಗಳಲ್ಲಿ ಮುಳುಗಿಹೋಗುವೆ.

 

ಸಹೋದ್ಯೋಗಿ ಗಣೇಶ ಐತಾಳ ಸಿ ಏ ಐ ಐ ಬಿ ಫಾರ್ಮ್ ಅನ್ನು ತಂದು, ಊಟದ ಸಮಯದಲ್ಲಿ ಎಲ್ಲರಿಗೂ ಕೊಟ್ಟು ತಕ್ಷಣ ತುಂಬಿಕೊಡುವಂತೆ ಹೇಳಿದ್ದ.  ಅವನು ಅಂದು ಮಾಡಿದ ಒಳ್ಳೆಯ ಕೆಲಸ, ಆ ತಕ್ಷಣ ಯಾರಿಗೂ ಗೊತ್ತಾಗದಿದ್ದರೂ ಈಗ ಎಲ್ಲರೂ ಸಂತೋಷ ಪಡುವಂತಾಗಿದೆ.  ಏಕೆ ಗೊತ್ತೇ?  ಆಗಿನ್ನೂ ಓದು ಮುಗಿಸಿ ಬಂದಿದ್ದ ನಮ್ಮಗಳಿಗೆ ಸಿ ಏ ಐ ಐ ಬಿ ಪರೀಕ್ಷೆ ಬರೆಯಲು ಕಷ್ಟ ಆಗಲಿಲ್ಲ.  ಆ ಪರೀಕ್ಷೆಯನ್ನು ಪಾಸು ಮಾಡಿದುದರಿಂದ ಎಕ್ಸ್‍ಟ್ರಾ ಇನ್‍ಕ್ರಿಮೆಂಟ್ ಬಂದಿತು ಮತ್ತು ಮುಂದೆ ಪ್ರಮೋಷನ್ ಪರೀಕ್ಷೆ ಬರೆಯಲೂ ಅನುಕೂಲವಾಯಿತು.  

 

ಗಣೇಶ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಓದಿದವನಾಗಿದ್ದು ಬಿ.ಕಾಂ ಪರೀಕ್ಷೆಯಲ್ಲಿ ೫ನೇ ರ್‍ಯಾಂಕ್ ಪಡೆದವನಾಗಿದ್ದ.   ಇಲ್ಲಿ ಸೇರುವ ಮೊದಲು ಕರ್ನಾಟಕ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದ.  ಇಲ್ಲಿಗೆ ಸೇರುವ ಹೊತ್ತಿಗಾಗಲೇ ಸಿ.ಏ.ಐ.ಐ.ಬಿ ಪರೀಕ್ಷೆಯ ಮೊದಲನೆಯ ಪಾರ್ಟ್ ಆಗಲೇ ಪಾಸು ಮಾಡಿದ್ದ.  ಹಾಗಾಗಿ ಈ ಪರೀಕ್ಷೆ ಮತ್ತು ಅದರಿಂದ ಆಗುವ ಒಳಿತಿನ ಬಗ್ಗೆ ಅವನಿಗಾಗಲೇ ತಿಳಿದಿತ್ತು.   ಈಗ ಗಣೇಶ ಐತಾಳ ನನ್ನೊಂದಿಗೇ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಮುಂಬೈನಲ್ಲಿ ಕೆಲಸ ಮಾಡುತ್ತಿರುವನು.  

 

ಇನ್ನೊಬ್ಬ ಸ್ನೇಹಿತ ಮುನಿಸ್ವಾಮಿ ಎಂ.ಬಿ.ಎ. ಮಾಡಿದವನಾಗಿದ್ದ.  ಸ್ವಲ್ಪ ಕಾಲ ನಮ್ಮೊಡನಿದ್ದು ನಂತರ ಕರ್ನಾಟಕ ಸರ್ಕಾರದ ಕೆಲಸಕ್ಕೆ ಸೇರಿದ್ದ.  ಹಾಗೆಯೇ ಜಯಶೀಲ ಸ್ವಲ್ಪ ಕಾಲದ ನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ  ಅಧಿಕಾರಿಯಾಗಿ ಸೇರಿದ್ದ.  ಅಂದು ನನ್ನೊಡನೆ ಬ್ಯಾಂಕು ಸೇರಿದ ಬಹಳಷ್ಟು ಜನ ಸ್ನೇಹಿತರು ಈಗ ಆಫೀಸರುಗಳಾಗಿದ್ದಾರೆ. 

 

ಟ್ರೈನಿಂಗಿನಲ್ಲಿ ಪ್ರತಿಯೊಂದು ವಿಭಾಗಗಳ ಕೆಲಸ ಕಾರ್ಯಗಳ ರೂಪುರೇಷೆಯನ್ನು ತಿಳಿಸಿಕೊಟ್ಟಿದ್ದರು.  ಹಾಗೆಯೇ ನಮಗೆ ಬಹಳ ಮುಖ್ಯವಾಗಿ ತಿಳಿಯಬೇಕಿದ್ದ ಸಂಬಳ, ಭತ್ಯೆ ಇನ್ನಿತರೇ ಸವಲತ್ತುಗಳ ವಿಷಯಗಳನ್ನೂ ತಿಳಿಸಿಕೊಟ್ಟಿದ್ದರು.  ಕಡೆಯ ದಿನ ಎಲ್ಲರೂ ಸೇರಿ ಒಂದು ಫೋಟೋವನ್ನು ಕೂಡಾ ತೆಗೆಸಿಕೊಂಡಿದ್ದೆವು. 

 

ಟ್ರೈನಿಂಗ್‍ನ ಕೊನೆಯ ದಿನದಂದು ಬೀಳ್ಕೊಡುವ ಸಮಾರಂಭವನ್ನು ಇಟ್ಟುಕೊಂಡಿದ್ದೆವು.  ಆಗ ಬೋರ್ಡ್ ಮೇಲೆ ಮ್ಯಾನೇಜರ್ ಆಗಿದ್ದ ಎಸ್ ಎನ್ ಬಗಾಯಿ ಅವರಿಗೆ ಸ್ವಾಗತವೆಂದು ಬರೆದಿದ್ದೆ.  ಬಗಾಯಿ ಅವರದ್ದು ಯಾವಾಗಲು ಮುಖ ಗಂಟಿಕ್ಕಿರುವ ಸ್ವರೂಪ.   ಅವರು ಬಂದ ಕೂಡಲೇ  ಯಾರಿದು ಬರೆದವರು ಎಂದು ಕೇಳಿದ್ದರು – ಒಂದು ನಿಮಿಷ ಯಾರಿಂದಲೂ ಉತ್ತರ ಬಾರದೇ ಮೌನ.  ಏನೋ ತಪ್ಪಾಗಿದೆ ಎಂದು ನಾನು ಹೆದರಿಬಿಟ್ಟಿದ್ದೆ.  ಚೆನ್ನಾಗಿ ಬರೆದಿದ್ದೀರಿ – ಯಾರು ಬರೆದದ್ದು ಎಂದು ಕೇಳಿದ ಮೇಲೆ ನನ್ನ ಪಕ್ಕದಲ್ಲಿದ್ದ ನರೇಂದ್ರ – ಇವನೇ ಸಾರ್, ಎಂದು ನನ್ನ ಕಡೆಗೆ ಬೆರಳು ತೋರಿದ್ದ.  ಬರವಣಿಗೆ ಚೆನ್ನಾಗಿದೆ ಎಂದು ಅವರು ನನ್ನನ್ನು ಪ್ರಶಂಸಿಸಿದ್ದರು.   ಹೆದರಿದ್ದ ನಾನು ಸ್ವಲ್ಪ ಬೆವತಿದ್ದೆ ಕೂಡ.  ಟ್ರೈನಿಂಗ್‍ನ ಕಡೆಯಲ್ಲಿ ತರಬೇತಿ ಕೊಟ್ಟವರು, ಅಂದರೆ ಶ್ರೀಯುತ ಪ್ರಭುಗಳು ಮತ್ತು ರಾಜೇಶ್ವರಿಯವರು ಎಲ್ಲರಿಗೂ ಒಳ್ಳೆಯದಾಗಲೆಂದು ಹರಸಿದರು.  ಆಗ ನಾವೆಲ್ಲರೂ ಬ್ಯಾಂಕಿನ ಬಗ್ಗೆ ಕೂಲಂಕಷವಾಗಿ ಬಹಳ ಕಡಿಮೆ ಸಮಯದಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು  ಸಲ್ಲಿಸಿದೆವು.  ನಮ್ಮಲ್ಲಿ ಒಬ್ಬರಂತೂ ಅವರಿಗೆ ಅಡ್ಡಬಿದ್ದು ಸಾಷ್ಟಾಂಗ ವಂದಿಸಿದರು.  

 

ಟ್ರೈನಿಂಗ್ ಪ್ರಾರಂಭವಾದ ಮೊದಲನೆಯ ದಿನದಿಂದಲೇ ದೂರದ ಊರುಗಳಿಂದ ಬಂದವರುಗಳು ವಾಸಕ್ಕಾಗಿ ಮನೆ ಅಥವಾ ಕೊಠಡಿಗಳನ್ನು ಹುಡುಕುತ್ತಿದ್ದರು.  ಬೆಂಗಳೂರಿನವರುಗಳಿಗೆ ಸ್ವಂತ ಮನೆ ಇದ್ದಿತ್ತು.  ನಾನೊಬ್ಬನೇ ಹಾಸ್ಟೆಲ್‍ನಲ್ಲಿದ್ದು,  ಕೆಲಸ ಸಿಕ್ಕಿದ್ದುದರಿಂದ ಅಲ್ಲಿಂದ ಹೊರ ಬರಬೇಕಾಗಿತ್ತು.   ಇದರ ಬಗ್ಗೆ ಒಂದೆರಡು ಮಾತುಗಳು. 

 

ನಾನು ಇದ್ದದ್ದು ಶಂಕರಮಠದ ವಿದ್ಯಾರ್ಥಿ ಗೃಹ.  ಬಿ.ಕಾಂ ಓದುವಾಗ ನಾನು ಅಲ್ಲಿಗೆ ಸೇರಿದ್ದೆ.  ಅಲ್ಲಿ ಎಲ್ಲರಿಗೂ ಸೇರಲು ಮುಕ್ತ ಅವಕಾಶವಿರಲಿಲ್ಲ.  ವೇದಾಭ್ಯಾಸ ಮಾಡುವವರಿಗೆ ಮಾತ್ರ ಇರಲು ಅವಕಾಶ.  ವಸತಿ ಪುಕ್ಕಟೆಯಾಗಿತ್ತು.  ಆದರೆ ಊಟ ತಿಂಡಿಗೆ ತಗಲುವ ವೆಚ್ಚವನ್ನು ನಾವೇ ಭರಿಸಬೇಕಿತ್ತು.   ಅದಕ್ಕೊಬ್ಬರು ವಾರ್ಡನ್ ಮತ್ತು ಅಲ್ಲೇ ವಾಸವಾಗಿದ್ದ ಕೇರ್ ಟೇಕರ್  ಇದ್ದರು.  ೩ ಕೊಠಡಿಗಳಲ್ಲಿ ಒಟ್ಟು ೯ ಜನ ಹುಡುಗರಿದ್ದು, ಹೆಚ್ಚಿನ ಒಂದು ರೂಮನ್ನು ಸಂಧ್ಯಾವಂದನೆಗೆಂದೂ, ಒಂದನ್ನು ಕೇರ್ ಟೇಕರಿಗೆಂದೂ, ಪ್ರವಚನಗಳಿಗಾಗಿ ಒಂದು ದೊಡ್ಡ ಹಾಲನ್ನೂ ಮತ್ತು ವೇದಾಭ್ಯಾಸಕ್ಕೆ ಒಂದು ಕೊಠಡಿಯನ್ನೂ ಪ್ರತ್ಯೇಕವಾಗಿರಿಸಿದ್ದರು.  ನಾನು ಬಿ.ಕಾಂ ಮುಗಿದ ಕೂಡಲೇ ಒಂದು ಖಾಸಗೀ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು.  ಆಗ ಹಾಸ್ಟಲ್ ಬಿಡುವ ಸಂದರ್ಭ ಬಂದಿತ್ತು.  ಆಗ ಐ.ಸಿ.ಡಬ್ಲ್ಯು.ಏ ಪರೀಕ್ಷೆಗಾಗಿ ಓದು ಪ್ರಾರಂಭಿಸಿದ್ದೆ.  ಹಾಸ್ಟಲ್‍ನ ಆಡಳಿತದಲ್ಲಿ ಸ್ವಲ್ಪ ತೊಂದರೆ ಬಂದಿದ್ದು, ನನ್ನನ್ನು ಆಗ ಅಸಿಸ್ಟೆಂಟ್ ವಾರ್ಡನ್ ಮಾಡಿದ್ದರು.  ಬ್ಯಾಂಕಿನಲ್ಲಿ ಕೆಲಸ ಸಿಕ್ಕ ಮೇಲೇ ನನಗೇ ಅಲ್ಲಿರಲು ಮನಸ್ಸಾಗಲಿಲ್ಲ.  ಪ್ರತ್ಯೇಕವಾಗಿ ಒಂದು ಕೊಠಡಿಯನ್ನು ಹುಡುಕಲು ಪ್ರಾರಂಭಿಸಿದೆ. 

 

ಬ್ಯಾಂಕಿನಲ್ಲಿ ನನ್ನೊಡನಿದ್ದ ಸ್ನೇಹಿತರುಗಳಿಗೂ ಕೊಠಡಿಗಳು ಬೇಕಿದ್ದು ಮತ್ತು ಅವರುಗಳು ಬೆಂಗಳೂರಿಗೆ ಹೊಸಬರಾಗಿದ್ದುದರಿಂದ ನಾನೇ ಊರಿನ ಗಲ್ಲಿ ಗಲ್ಲಿಗಳಲ್ಲಿ ಕೊಠಡಿ ಹುಡುಕಲು ಅವರಿಗೆ ಸಹಾಯಿಸುತ್ತಿದ್ದೆ.  ಟ್ರೈನಿಂಗ್ ಮುಗಿಯುವ ಮೊದಲೇ ನನ್ನ ಇನ್ನೊಬ್ಬ ಸ್ನೇಹಿತ ಲಕ್ಷ್ಮೀನಾರಾಯಣನಿಂದ ನನಗಾಗ ಮಲ್ಲೇಶ್ವರದ ೧೮ನೇ ಕ್ರಾಸಿನಲ್ಲಿದ್ದ ಗಣೇಶ ಭವನದಲ್ಲಿ ಒಂದು ಕೊಠಡಿ ದೊರಕಿತ್ತು.  ಅದಕ್ಕೆ ಬಾಡಿಗೆಯಾಗಿ ರೂ. ೮೦ ಕೊಡುತ್ತಿದ್ದೆ.  ಅಲ್ಲಿ ಅಡುಗೆ ಮಾಡಲು ಅವಕಾಶವಿಲ್ಲ ಎಂದು ಆಡಳಿತ ಮಂಡಳಿಯವರು ನಿರ್ದೇಶಿಸಿದ್ದರೂ ಅಲ್ಲಿನ ಇತರೇ ವಾಸಿಗಳು ಅಡುಗೆ ಮಾಡುತ್ತಿದ್ದರು.  ನಾನೂ ಅವರಂತೆಯೇ ಪ್ರತಿನಿತ್ಯವೂ ರಾತ್ರಿಯ ಹೊತ್ತು ಅಡುಗೆ ಮಾಡುತ್ತಿದ್ದೆ.  ಆ ಕೊಠಡಿಯಲ್ಲಿ ಒಂದು ಮೇಜು, ಖುರ್ಚಿ ಮತ್ತು ಮಂಚವಿತ್ತು.  ಸ್ನಾನ ಮಾಡಲು ಬಿಸಿನೀರಿನ ಸೌಲಭ್ಯವಿದ್ದಿತ್ತು. 

 

ಲಕ್ಷ್ಮೀನಾರಾಯಣನ ಬಗ್ಗೆ ಒಂದು ಮಾತು.  ಅವನು ನನಗಿಂತ ೧೦ ವರುಷಗಳಷ್ಟು ದೊಡ್ಡವನು.  ಇದಕ್ಕೆ ಮುಂಚೆ ಸೆಂಟ್ರಲ್ ಎಕ್ಸೈಸ್ ನಲ್ಲಿ ಕೆಲಸ ಮಾಡುತ್ತಿದ್ದನು.  ಕಾಲು ಸ್ವಲ್ಪ ಊನವಾಗಿದ್ದರೂ ಬಹಳ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡುತ್ತಿದ್ದನು.  ಬ್ಯಾಂಕ್ ಸೇರಿದ ಮೊದಲ ದಿನದಿಂದಲೇ ಬ್ಯಾಂಕಿನಲ್ಲಿ ಛಾಂಪಿಯನ್ ಆಗಿದ್ದನು.  ಹಾಗೆಯೇ ಇಂಟರ್ ಬ್ಯಾಂಕ್ ಟೂರ್ನಮೆಂಟಿನಲ್ಲಿ ಕೂಡಾ ಅವನು ಛಾಂಪಿಯನ್ ಆಗಿದ್ದನು.  ಈಗಲೂ ಅವನು ಹಿರಿಯರ ವರ್ಗದಲ್ಲಿ ಟೇಬಲ್ ಟೆನ್ನಿಸ್ ಪಂದ್ಯಗಳಲ್ಲಿ ಗೆದ್ದು ಪತ್ರಿಕೆಯಲ್ಲಿ ಸುದ್ದಿಯಾಗುತ್ತಿರುತ್ತಾನೆ.

 

ಮೊದಲ ದಿನದ ಕಾರ್ಯ ವೈಖರಿಯ ಬಗ್ಗೆ ಒಂದೆರಡು ಮಾತುಗಳನ್ನು ತಿಳಿಸಲಿಚ್ಛಿಸುವೆ. 

 

ಮೊದಲ ದಿನ ಅಂದರೆ ಜನವರಿ ೨೭ನೇ ತಾರೀಖು ಸಮಯಕ್ಕೆ ಸ್ವಲ್ಪ ಮುಂಚಿತವಾಗಿಯೇ ಬ್ಯಾಂಕಿಗೆ ಹೋಗಿದ್ದೆ.  ನಾವು ಒಟ್ಟು ೩೩ ಜನ ಉದ್ಯೋಗಿಗಳು.  ನಮ್ಮಲ್ಲಿ ಒಬ್ಬರಿಗೆ ದೃಷ್ಟಿ ದೋಷವಿದ್ದುದರಿಂದ ಕ್ಯಾಷ್ ಡಿಪಾರ್ಟ್‍ಮೆಂಟಿಗೆ ಅವರನ್ನು ಪೋಸ್ಟ್ ಮಾಡಿರಲಿಲ್ಲ.  ಇನ್ನುಳಿದ ೩೨ ಜನರು ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿದ್ದ ಎಫ್ ಸೆಕ್ಷನ್‍ಗೆ ಪೋಸ್ಟ್ ಮಾಡಿದ್ದರು.  ಆ ಸೆಕ್ಷನ್‍ನ ಅಧಿಕಾರಿ ಶ್ರೀ ಮೆಂಡೋಂಝಾ.  ಯಾವಾಗಲೂ ಗಂಟಿಕ್ಕಿರುವ ಮುಖದವರು.  ಅವರ ಮುಂದೆ ತಮಾಷೆ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ.  ಮೊದಲ ದಿನದಿಂದಲೇ ನಾವು ಎಲ್ಲಿ ಎಲ್ಲಿ ಕುಳಿತು ಕೆಲಸ ಮಾಡಬೇಕೆಂದು ನಿರಧರಿಸಿದ್ದರು. 

 

ಮೊದಲ ದಿನ ಹಳೆಯ ನೋಟುಗಳ ಪ್ಯಾಕೆಟ್ಟನ್ನು ಪರೀಕ್ಷೆಗಾಗಿ ಕೊಟ್ಟಿದ್ದರು.  ಹೇಗೆ ಪರೀಕ್ಷಿಸಬೇಕು, ಯಾವ ಯಾವ ನೋಟುಗಳನ್ನು ತಿರಸ್ಕರಿಸಬೇಕು ಇತ್ಯಾದಿಗಳನ್ನೂ, ಹರಿದ ನೋಟುಗಳನ್ನು ಹೇಗೆ ಅಂಟಿಸಬೇಕು ಎಂಬುದನ್ನೂ ಚೆನ್ನಾಗಿ ತಿಳಿಸಿಕೊಟ್ಟಿದ್ದರು.  ಅಂದು ಎಲ್ಲರಿಗೂ ಎಲ್ಲ ನೋಟುಗಳೂ ಸಂದೇಹ ತೋರುತ್ತಿದ್ದವು.  ಹೀಗಾಗಿ ಮೆಂಡೋಂಝಾ ಅವರಿಗೆ ತಲೆಕೆಡುವಂತಾಗಿತ್ತು.  ಮೊದಲಿಗೆ ನಾವು ಒಂದು ಪ್ಯಾಕೆಟ್ಟಿನಲ್ಲಿ ೧೦೦ ನೋಟುಗಳಿವೆಯೇ ಎಂದು ಎಣಿಸಬೇಕು.  ಎಲ್ಲೆಲ್ಲಿ ಓಡಿಯಾಡಿ ಬಂದ ನೋಟುಗಳೋ.  ಎಲ್ಲ ನೋಟುಗಳು ಒಂದೇ ಕುಟುಂಬದವರಂತೆ, ಪತಿ ಪತ್ನಿಯರಂತೆ  ಏಕ್ ದೂಜೇ ಕೆ ಲಿಯೇಯಂತಾಗಿದ್ದವು.   ಅಂದರೆ ಎಲ್ಲ ನೋಟುಗಳು ಒಂದಕ್ಕೊಂದು ಬೆಸೆದುಕೊಂಡಿದ್ದವು.  ಆ ಬೆಸುಗೆ ಬಿಡಿಸಿ ಎಣಿಸಿ, ಒಂದು ಪ್ಯಾಕೆಟ್ಟಿನಲ್ಲಿ ೧೦೦ ನೋಟುಗಳಿವೆ ಎಂದು ಖಾತ್ರಿ ಪಡಿಸಿಕೊಳ್ಳುವುದು ಬಹು ಕಷ್ಟವಾಗಿತ್ತು.   ನನಗೆ ಒಂದು ಪ್ಯಾಕೆಟ್ಟಿನಲ್ಲಿ ಒಮ್ಮೆ ೯೯ ಬಂದರೆ ಮರು ಎಣಿಕೆಯಲ್ಲಿ ೧೦೧ ಬರ್ತಿತ್ತು.  ಮತ್ತೆ ಮತ್ತೆ ಎಣಿಸಿ ಎಣಿಗಿ ಕೈ ನೋಯುತ್ತಿತ್ತು.  ಅದಲ್ಲದೇ ಕೈಯೆಲ್ಲಾ ಗಲೀಜಾಗಿತ್ತು.  ಅದಕ್ಕೆಂದೇ ಕೈ ತೊಳೆದುಕೊಳ್ಳಲು ಸಾಬೂನನ್ನು ಇಟ್ಟಿರುತ್ತಾರೆ.  ಇನ್ನು ಆ ನೋಟಿನ ಧೂಳಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. 

 

ಒಂದು ತಮಾಷೆಯ ವಿಷಯವೆಂದರೆ ಅಂದಿನಿಂದ ಸ್ವಲ್ಪ ಕಾಲ ಎಲ್ಲೇ ಪುಸ್ತಕಗಳು, ನೋಟುಗಳನ್ನು ಕಂಡರೂ ಅಭ್ಯಾಸವಾಗಲೆಂದು ಅವುಗಳನ್ನು ಎಣಿಸುತ್ತಿದ್ದೆ.   ಕೆಲವರು ಬಹಳ ಬೇಗ ವೇಗವಾಗಿ ಎಣಿಸಿ ಪರೀಕ್ಷಿಸುತ್ತಿದ್ದರು.  ಅವರೊಂದಿಗೆ ಪೈಪೋಟಿಯೂ ನಡೆಯುತ್ತಿತ್ತು.  ನಾನು ಯಾವಾಗಲೂ ಅವರೆಲ್ಲರಿಗಿಂದ ಹಿಂದೆ ಬೀಳುತ್ತಿದ್ದೆ.    ಅಂದು ಮೊದಲ ದಿನವಾಗಿದ್ದು ಅರ್ಧ ಕೆಲಸವನ್ನು ಮಾತ್ರ ಕೊಟ್ಟಿದ್ದರು.  ಆದರೂ ಬೆಳಗಿನ ಕೆಲಸ ಮುಗಿಸುವ ಹೊತ್ತಿಗೆ ಮಧ್ಯಾಹ್ನದ ೨ ಘಂಟೆಯಾಗಿತ್ತು. 

 

ಮತ್ತೆ ಇನ್ನೂ ಅರ್ಧ ಕೆಲಸ ಬಾಕಿ ಇದ್ದುದರಿಂದ ಅರ್ಧ ಘಂಟೆಯೊಳಗೆ ಊಟ ಮುಗಿಸಿ ಬರಬೇಕೆಂದು ನಮ್ಮ ಆಫೀಸರು ಹೇಳಿದ್ದರು. ಸಾಮನ್ಯವಾಗಿ ಮುಕ್ಕಾಲು ಘಂಟೆಯ ಸಮಯವನ್ನು ಊಟಕ್ಕಾಗಿ ಕೊಡಬೇಕಿತ್ತು.   ಅವರ ಮಾತಿಗೆ ಎದುರಾಡುವ ಧೈರ್ಯ ಯಾರಿಗೂ ಇರಲಿಲ್ಲ.  ಮೇಲಾಗಿ ಆಗಿನ್ನೂ ಬ್ಯಾಂಕಿನೊಳಗೆ ಕಾಲಿಡುತ್ತಿದ್ದೆವು.    ಅಷ್ಟು ಹೊತ್ತಿಗಾಗಲೇ ಬ್ಯಾಂಕಿನ ಕ್ಯಾಂಟೀನ್ ಮುಚ್ಚಿತ್ತು.   ಎದುರಿಗಿದ್ದ ಕಾಮತ್ ಹೊಟೆಲ್‍ಗೆ ಹೋಗಿ ಬೇಗ ಬೇಗ ಸಿಕ್ಕಿದ್ದನ್ನು ತಿಂದು ಬಂದಿದ್ದೆವು.  ಮಧ್ಯಾಹ್ನದ ಕೆಲಸವೂ ಹಾಗೆಯೇ ನಿಧಾನವಾಗಿ ಸಾಗಿತ್ತು.  ಅಂದಿನ ಕೆಲಸ ಮುಗಿಯ ಹೊತ್ತಿಗೆ ಸಂಜೆಯ ೭ ಘಂಟೆಯಾಗಿತ್ತು.  ಇದೊಂದು ಮರೆಯಲಾರದ ದಿನ. 

 

 

ಮುಂದಿನ ಭಾಗಕ್ಕೆ ನಿರೀಕ್ಷಿಸಿ …

 

 

ವಿಭಾಗಗಳು
ಲೇಖನಗಳು

ಬ್ಯಾಂಕಿನಲಿ ರಜತೋತ್ಸವ

ಬ್ಯಾಂಕಿನಲ್ಲಿ ರಜತೋತ್ಸವ

 

ಮೊದಲು ಶಾಲೆಗೆ ಹೋದ ನೆನಪು, ಕಾಲೇಜಿಗೆ ಹೋದ ನೆನಪು, ಕೆಲಸಕ್ಕೆ ಹೋದ ನೆನಪು, ವಾಸ್ತವ್ಯಕೆ ಹೊಸ ಊರು ಹೊಸ ಭಾಷಿಗರ, ನಡುವಿನ ಹೊಂದಾಣಿಕೆಯ ನೆನಪು, ಹೀಗೆ ಒಂದರ ಹಿಂದೊಂದರಂತೆ ಮೊದಲ ನೆನಪುಗಳ ಸರಮಾಲೆ ಸಾಗುತ್ತಲೇ ಇರುತ್ತದೆ.   ತಮಾಷೆಯೆಂದರೆ ಹೊಂದಿಕೊಂಡೆ ಎಂದುಕೊಳ್ಳುವ ಸಮಯಕ್ಕೆ ಸರಿಯಾಗಿ ಕಾಲವನ್ನು ಮತ್ತೆ ಹೊಸ ಸ್ಥಿತಿಯ ಬದಲಾವಣೆಗೆ ಸರಿಪಡಿಸಿಕೊಳ್ಳಬೇಕಾಗುವುದು. 

 

 bangalore.jpg

ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಸೇರಿ ೨೫ ವರ್ಷಗಳು ಕಳೆದುವು.  ೨೬ನೆಯ ವರ್ಷಕ್ಕೆ ಕಾಲಿಟ್ಟ ಸಮಯದಲ್ಲಿ, ಈ ವರ್ಷ ಪೂರ್ತಿ ರಜತೋತ್ಸವ ಆಚರಿಸುವ ಅಭಿಲಾಷೆ ನನಗಿದೆ.  ಅಂದರೆ ೨೫ ವರ್ಷಗಳ ಹಳೆಯ ನೆನಪುಗಳನ್ನು ಒಂದೆಡೆ ಬರೆದಿಡುವ ಆಸೆ ಆಗಿದೆ.  ಅದರ ಪ್ರಯತ್ನವೇ ಈ ಲೇಖನ.

 

ಬ್ಯಾಂಕು ಸೇರಿದ್ದು ೧೯೮೨ರ ಜನವರಿ ೨೭ರಂದು. ಇದಕ್ಕೆ ಮುಂಚೆ ನವಂಬರ್ ತಿಂಗಳಲ್ಲಿ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಆಡಿಟರ್ ಆಗಿ ಕೆಲಸಕ್ಕೆ ಸೇರಿದ್ದೆ.  ಐ.ಸಿ.ಡಬ್ಲ್ಯು.ಎ. ಪರೀಕ್ಷೆ ಇದ್ದುದರಿಂದ ಆಡಿಟ್‍ಗಾಗಿ ಹೋಗಿರಲಿಲ್ಲ. ಆಗಲೇ ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕಿನಿಂದ ಮೆಡಿಕಲ್ ಎಕ್ಸಾಮಿನೇಷನ್ನಿಗಾಗಿ ಪತ್ರ ಬಂದಿತ್ತು.  ಆಗ ಬ್ಯಾಂಕಿನ ವೈದ್ಯರ ಬಳಿ ಹೋಗಿದ್ದಾಗ ತಿಳಿದ ವಿಷಯವೆಂದರೆ ಸದ್ಯದಲ್ಲೇ ಕೆಲಸದ ಆರ್ಡರ್ ಬರಲಿದೆ – ಸೇರಲು ತಯಾರಿರಬೇಕು ಎಂದು.  ಆಡಿಟರ್ ಜನರಲ್ ಆಫೀಸಿನಲ್ಲಿ ಮೊದಲ ಸಂಬಳ ಬಂದದ್ದು ಡಿಸೆಂಬರ್ ೩೧ರಂದು.  ಆಗ ಸಂಬಳ ತೆಗೆದುಕೊಂಡರೆ ಮುಂದೆ ಹಿಂದಿರುಗಿಸಬೇಕು ಎಂಬುದು ತಿಳಿದಿರಲ್ಲಿಲ್ಲ.  (ಕೆಲಸದಲ್ಲಿ ಖಾಯಂ ಆಗುವವರೆವಿಗೆ ರಿಸೈನ್ ಮಾಡುವಂತ್ತಿದ್ದರೆ, ೩ ತಿಂಗಳ ಗಡುವು ನೀಡಬೇಕು ಇಲ್ಲದಿದ್ದರೆ ೩ ತಿಂಗಳ ಸಂಬಳವನ್ನು ಕಟ್ಟಬೇಕು). 

 

ಎಂದು ಕೆಲಸಕ್ಕೆ ಆರ್ಡರ್ ಬರಬಹುದು ಎಂಬುದರ ಬಗ್ಗೆ ಬ್ಯಾಂಕಿಗೆ ಹೋಗಿ ಕೇಳಲೂ ಹೊಳೆದಿರಲಿಲ್ಲ.  ೨೩ನೆಯ ತಾರೀಖು, ಶನಿವಾರ.  ಅಂದು ಬೆಳಗ್ಗೆ ೯ಕ್ಕೆ ಆಫೀಸಿಗೆ ಹೊರಟಿದ್ದೆ.  ಹೊರಡುವ ಹೊತ್ತಿಗೆ ನನ್ನ ಸ್ನೇಹಿತ ರಾಘವೇಂದ್ರ ಸಿಕ್ಕಿ, ಇನ್ನೊಬ್ಬ ಸ್ನೇಹಿತ ಪಾಂಡುರಂಗನಿಗೆ ಆರ್ಡರ್ ಬಂದಿದೆಯೆಂದೂ, ನಮ್ಮಿಬ್ಬರಿಗೂ ಒಂದೇ ದಿನ ಮೆಡಿಕಲ್ ಎಕ್ಸಾಮಿನೇಷನ್ ಆಗಿದ್ದುದರಿಂದ ನನಗೂ ಆರ್ಡರ್ ಬರಬಹುದೆಂದೂ ತಿಳಿಸಿದ.  ತಕ್ಷಣ ಹತ್ತಿರದಲ್ಲೇ ಇದ್ದ ಗವಿಪುರಂ ಗುಟ್ಟಹಳ್ಳಿ ಪೋಸ್ಟ್ ಆಫೀಸಿಗೆ ಹೋಗಿ, ನನಗೆ ಯಾವುದಾದರೂ ರಿಜಿಸ್ಟರ್ ಪೋಸ್ಟ್ ಬಂದಿದೆಯಾ ಎಂದು ಕೇಳಿದಾಗ, ನಮ್ಮ ಏರಿಯಾಗೆ ಬರುವ ಪೋಸ್ಟ್‌ಮನ್ ಬ್ಯಾಂಕಿನಿಂದ ಬಂದಿದ್ದ ಆರ್ಡರ್ ಕೊಟ್ಟಿದ್ದ.  ಅದರ ಪ್ರಕಾರ ೨೫ರಂದು ಬ್ಯಾಂಕಿಗೆ ಹೋಗಿ ಸಂಬಂಧಪಟ್ಟ ಕಾಗದಗಳಿಗೆ ಸಹಿ ಹಾಕಿದ ನಂತರ ೨೭ರಂದು ಟ್ರೈನಿಂಗ್ ಪ್ರಾರಂಭವೆಂದೂ ಅಂದು ಬೆಳಗ್ಗೆ ೯ ಘಂಟೆಗೇ ಬರಬೇಕೆಂದೂ ತಿಳಿಸಿದ್ದರು. ಅಂದು ಶನಿವಾರ.  ಮಾರನೆಯ ದಿನ ರಜೆಯ ದಿನ.  ನಂತರದ ಸೋಮವಾರ ಬ್ಯಾಂಕಿಗೆ ಹೋಗಿ ಕೆಲಸಕ್ಕೆ ಸೇರುವ ಮುಂಚಿನ ಪೂರ್ವಕ್ರಿಯೆಗಳೆಲ್ಲವನ್ನೂ ಮುಗಿಸಬೇಕಿತ್ತು.  ನೇರವಾಗಿ ಆಫೀಸಿಗೆ ಹೋಗಿ ಮೊದಲು ಮಾಡಿದ ಕೆಲಸವೆಂದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟದ್ದು.  ಮೊದಲ ಸಂಬಳವನ್ನು ವಾಪಸ್ಸು ಕಟ್ಟಿ ಮಿಕ್ಕ ಎಲ್ಲ ಕಡೆಗಳಿಂದ ಅಂದರೆ ಲೈಬ್ರರಿ, ರಿಕ್ರಿಯೇಷನ್ ಕ್ಲಬ್ ಇತ್ಯಾದಿಗಳಿಂದ ನೋ ಡ್ಯೂ ಸರ್ಟಿಫಿಕೇಟ್ ತೆಗೆದುಕೊಂಡು ಅಡ್ಮಿನಿಸ್ಟ್ರೇಷನ್ನಿನವರಿಗೆ ಕೊಟ್ಟದ್ದು.  ಮಧ್ಯಾಹ್ನ ಮೂರು ಘಂಟೆಗೆ ಎಲ್ಲ ಕೆಲಸಗಳೂ ಮುಗಿಯಿತೆನ್ನುವ ಹೊತ್ತಿಗೆ ಸೀನಿಯರ್ ಅಕೌಂಟ್ಸ್ ಆಫೀಸರ್ ನನ್ನನ್ನು ತಮ್ಮ ಕ್ಯಾಬಿನ್ನಿಗೆ ಕರೆಸಿದರು.  ನಿವೃತ್ತಿಗೆ ಹತ್ತಿರದ ವಯಸ್ಸಿನ ಗೌರವ ಮೂಡಿಸುವಂತಹ ವ್ಯಕ್ತಿತ್ವ ಅವರದ್ದು.  ಅವರು ಮೊದಲು ಕೇಳಿದ ಪ್ರಶ್ನೆ. 

ಯಾಕಪ್ಪಾ ಮರಿ ಕೆಲಸಕ್ಕೆ ಸೇರಿ ಇನ್ನೂ ಎರಡು ತಿಂಗಳಾಗಿಲ್ಲ,  ಆಗಲೇ ರಾಜೀನಾಮೆ ಕೊಡ್ತಿದ್ದೀಯೆ.  ಎಲ್ಲಾದರೂ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತಾ?’

ಇಲ್ಲ ಸಾರ್, ಹಾಗೇನಿಲ್ಲ.  ಮನೆ ಕಡೆ ಸ್ವಲ್ಪ ತಾಪತ್ರಯವಿದೆ, ಜಮೀನು ನೋಡಿಕೊಳ್ಳಬೇಕು – ಅಂದಿದ್ದೆ (ಹೀಗೇ ಹೇಳಲು ನನ್ನ ಹಿರಿಯ ಸ್ನೇಹಿತರು ಹೇಳಿದ್ದರು.  ಇಲ್ಲದಿದ್ದರೆ ಸುಲಭವಾಗಿ ರಿಲೀವ್ ಮಾಡುವುದಿಲ್ಲವೆಂದೂ – ಹೀಗೇ ಹೇಳಿದರೆ ಮಾತ್ರವೇ ಅಂದೇ ಕೆಲಸದಿಂದ ಮುಕ್ತಿ ಸಿಗುವುದು, ಎಂದು ತಿಳಿಸಿದ್ದರು.  ಅದಕ್ಕೇ ನಾನು ಹಾಗೆ ಹೇಳಿದ್ದು).

ಮುಖ ನೋಡಿ ನನ್ನನ್ನು ಪೂರ್ಣವಾಗಿ ಅಳೆದಿದ್ದ ಅವರು, ‘ಯಾಕೋ ಮರಿ ಸುಳ್ಳು ಹೇಳ್ತೀಯೆ?  ಬಿ.ಕಾಂ.ನಲ್ಲಿ ಫಸ್ಟ್ ಕ್ಲಾಸ್ ಬರುವುದು ಕಷ್ಟ.  ಅದರಲ್ಲೂ ಸರ್ಕಾರೀ ನೌಕರಿ ಸಿಗೋದು ಇನ್ನೂ ಕಷ್ಟ.  ಅದನ್ನು ಕಳೆದುಕೊಳ್ಳುವುದು

ಬಲು ಸುಲಭ.  ನನ್ನ ಹತ್ರ ನೀನೇನನ್ನೂ ಮರೆಮಾಚಬೇಡ.  ಇಲ್ಲಿಯದಕ್ಕಿಂತ ಒಳ್ಳೆಯ ಕೆಲಸ ಸಿಕ್ಕರೆ ಬಿಟ್ಟು ಹೋಗುವುದೇ ಒಳ್ಳೆಯದು.  ಈಗ ಬ್ಯಾಂಕಿನಲ್ಲಿ ಮೊದಲ ಸಂಬಳ ಎಷ್ಟು ಬರುವುದೋ ಅಷ್ಟನ್ನು ನಾನು ೩೦ ವರ್ಷಗಳ ಸರ್ವೀಸ್ ಮಾಡಿ ಪಡೆಯುತ್ತಿರುವೆ.  ನಮ್ಮಲ್ಲಿ ಬಡ್ತಿಯ ಅವಕಾಶವೂ ಬಹಳ ಕಡಿಮೆ.  ಸುಳ್ಳು ಹೇಳಬೇಡ.  ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದ್ದರೆ ಎಲ್ಲಿ ಅಂತ ಹೇಳು ಅಷ್ಟೆ.  ನಾನೇನೂ ನಿನ್ನ ಹಾದಿಗೆ ಅಡ್ಡ ಬರೋಲ್ಲ.  ಇನ್ನೂ ನಿನಗೆ ಒಳ್ಳೆಯದಾಗಲೆಂದು ಹಾರೈಸುವೆಎಂದಿದ್ದರು. 

ಮೃದು ಮಾತಿನಲ್ಲಿ ಅವರಾಡಿದ ಮಾತುಗಳನ್ನು ಕೇಳಿ ನನಗೆ ಅಳುವೇ ಬಂದಂತಾಗಿತ್ತು.  ನಮ್ಮ ಮನೆಯಲ್ಲೂ ಯಾರೂ ಹೀಗೆ ಹೇಳಿರಲಿಲ್ಲ.  ತಕ್ಷಣ ವಿಷಯವನ್ನೆಲ್ಲಾ ಅರುಹಿದೆ.  ಅವರು ತಕ್ಷಣ ಅಲ್ಲಿಯೇ ಇದ್ದ ರಿಲೀವಿಂಗ್ ಆರ್ಡರ್ ಗೆ ಸಹಿ ಹಾಕಿ, ಒಳ್ಳೆಯದಾಗಲೆಂದು ಹಾರೈಸಿದ್ದರು.  ನನಗೆ ಅದೇನನ್ನಿಸಿತೋ ಏನೋ, ಅವರಿಗೆ ಸಾಷ್ಟಾಂಗ ನಮಸ್ಕರಿಸಿದ್ದೆ.  ಆ ಸಮಯದಲ್ಲಿ ಅವರು ನನ್ನ ತಂದೆಯಂತೆಯೇ ಕಂಡಿದ್ದರು. 

 

ಮುಂದೆ ಸೋಮವಾರದ ದಿನ, ರಿಸರ್ವ್ ಬ್ಯಾಂಕಿಗೆ ಮೊದಲ ಹೆಜ್ಜೆ ಇಟ್ಟಿದ್ದೆ.  ಒಳಗೆ ಹೋಗಲು ಬಲು ಭಯ.  ರಿಸರ್ವ್ ಪದ ಕೇಳಿಯೇ ರೋಮಾಂಚನವಾಗಿತ್ತು. ಮೊದಲು ನಾನು ಕಂಡದ್ದು ಕ್ಯಾಷ್ ಕೌಂಟರ್ ಗಳನ್ನು. ಅಲ್ಲಿ ಎಲ್ಲ ಕಡೆಯೂ ಬಂದೂಕುಧಾರಿ ಪೊಲೀಸ್ ನಿಂತಿದ್ದರು.  ಸಾರ್ವಜನಿಕರ ದೊಡ್ಡ ದಂಡು ನೋಟುಗಳನ್ನು ಬದಲಿಸಲು, ಚಿಲ್ಲರೆ ಹಣವನ್ನು ತೆಗೆದುಕೊಳ್ಳಲು ಸರತಿಯಲ್ಲಿ ನಿಂತಿದ್ದರು.  ಇನ್ನು ಮೇಲೆ ನಾನು ಅಲ್ಲಿ ಕೆಲಸ ಮಾಡ್ತೀನಿ ಅಂದ್ರೆ ಎಷ್ಟು ಗರ್ವ ಬಂದಿರಬೇಕು.  ಹಾಗೆಯೇ ಅಲ್ಲಿಲ್ಲಿ ಓಡಾಡುತ್ತಿದ್ದ ಸೀನಿಯರ್ ಗಳ ಗುಂಪು, ನನ್ನನ್ನು ನೋಡಿ, ನೋಡ್ರೋ ಯಾವುದೋ ಬಕರಾ ಬಂದಿದೆ, ನಾಳೆಯಿಂದ ಸ್ವಲ್ಪ ದಿನ ಮಜಾ ತಗೋಬಹುದು, ಎಂದಾಗ ಸ್ವಲ್ಪ ಅಳುವೂ ಬಂದಿತ್ತು. 

ಅಡ್ಮಿನಿಸ್ಟ್ರೇಷನ್ ಸೆಕ್ಷನ್ನಿಗೆ ಹೋಗಿ,  ಪತ್ರಗಳಿಗೆಲ್ಲ ಸಹಿ ಹಾಕಿ, ನನ್ನಂತೆಯೇ ಬಂದಿದ್ದ ಇತರರೊಂದಿಗೆ, ಆಫೀಸರ್ ಹೇಳಿದಂತೆ ಪೋಸ್ಟ್ ಆಫೀಸಿನಲ್ಲಿ ಠೇವಣಿ ಹಣ ಜಮೆ ಮಾಡಲು ಹೋಗಿದ್ದೆವು.  ಆಗಲೇ ಪೋಸ್ಟ್ ಆಫೀಸು ಮುಚ್ಚುವ ವೇಳೆ ಆಗಿತ್ತು.  ಎಲ್ಲರಿಂದಲೂ ಹಣ ತೆಗೆದುಕೊಂಡು ಅಕೌಂಟ್ ತೆಗೆಯುವುದು ಕಷ್ಟವಾಗಿದ್ದರೂ, ಅಂದೇ ಆ ಕೆಲಸ ಮುಗಿಸಬೇಕೆಂದು ಬ್ಯಾಂಕಿನವರು ಹೇಳಿದ್ದರಿಂದ ಅಲ್ಲಿಯ ಆಫೀಸರನ್ನು ಅಡ್ಜಸ್ಟ್ ಮಾಡಿಕೊಳ್ಳುವಂತೆ ಕೇಳಿದ್ದೆವು.  ಅಂತೂ ಇಂತೂ ೩.೩೦ರ ವೇಳೆಗೆ ಅಲ್ಲಿಯ ಕೆಲಸ ಮುಗಿದಿತ್ತು.  ಈ ಮಧ್ಯೆ ಶ್ರೀಮತಿ ಧೀಮತಿ ಎನ್ನುವವರ ಹೆಸರನ್ನು ಶ್ರೀಮತಿ ಶ್ರೀಮತಿ ಎಂದು ನೋಂದಾಯಿಸಿಕೊಂಡಿದ್ದರು.  ಅದಕ್ಕೆ ಅವರ ಗಲಾಟೆ – ಪೋಸ್ಟ್ ಆಫೀಸಿನವರಿಗೆ ಅವರ ಹೆಸರು ಗೊತ್ತಾಗಲು ಸುಮಾರು ಸಮಯವೇ ತೆಗೆದುಕೊಂಡಿತ್ತು. 

 

ಈ ಕೆಲಸ ಮುಗಿದ ಕೂಡಲೇ, ಮತ್ತೆ ಬ್ಯಾಂಕಿಗೆ ಓಡಿ ಬಂದಿದ್ದೆವು.  ಪೋಸ್ಟ್ ಆಫೀಸಿನವರು ಕೊಟ್ಟಿದ್ದ ಪಾಸ್ ಬುಕ್ ಅನ್ನು ಬ್ಯಾಂಕಿನ ಸುಪರ್ದಿಯಲ್ಲಿಡಬೇಕಿತ್ತು.  ಮತ್ತು ಇನ್ನೂ ಹಲವಾರು ಫಾರಂ‍ಗಳನ್ನು ತುಂಬಿಸಬೇಕಿತ್ತು.  ಅದೆಲ್ಲಾ ಮುಗಿಯುವ ಹೊತ್ತಿಗೆ ಸಂಜೆಯ ೬.೩೦ ಆಗಿದ್ದಿತು.  ಬೆಳಗ್ಗೆಯಿಂದ ಏನನ್ನೂ ತಿನ್ನಲು ಅವಕಾಶ ಸಿಕ್ಕಿರಲಿಲ್ಲ. 

 

ಟ್ರೈನಿಂಗಿನ ಬಗೆಗಿನ ನೆನಪುಗಳು ಮತ್ತು ಹೆಚ್ಚಿನ ವಿಷಯಗಳನ್ನು ಮುಂದಿನ ಕಂತಿನಲ್ಲಿ ತಿಳಿಸುವೆ.

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ರಥ ಸಪ್ತಮಿ

ನಮಸ್ತೆ

ಶುಭೋದಯ – ಇಂದು ರಥ ಸಪ್ತಮಿ, ಮಾರ್ಗಶೀರ್ಷ ಶುಕ್ಲ ಪಕ್ಷದ ಏಳನೆಯ ದಿನ, ರಥ ಸಪ್ತಮಿ.

surya.jpg

ಈ ವ್ರತಾಚರಣೆಯ ಬಗ್ಗೆ ಒಂದೆರಡು ಮಾತುಗಳನ್ನು ಕಳೆದವರ್ಷ ತಿಳಿಸಿದ್ದೆ. ಅದು ಇಲ್ಲಿದೆ

ಮತ್ತೆ ಇಲ್ಲಿ ಕೆಳಗೆ ಅದರ ಒಕ್ಕಣಿಕೆಯನ್ನು ನೀಡುತ್ತಿರುವೆ.

ಓಂ ಭದ್ರಂ ಕರ್ಣೇಭಿಶೃಣುಯಾಮ ದೇವಾ:|

ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:|

ಸ್ಥಿರೈರಂಗೈಸ್ತುಷ್ಟುವಾಗ್ಂ‍ಸಸ್ತನೂಭಿ:|

ವ್ಯಶೇಮ ದೇವಹಿತಂ ಯದಾಯು:|

ಸ್ವಸ್ತಿ ನ ಇಂದ್ರೋ ವೃದ್ಧಶ್ರವಾ:|

ಸ್ವಸ್ತಿ ನ: ಪೂಷಾ ವಿಶ್ವವೇದಾ:|

ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿ:|

ಸ್ವಸ್ತಿನೋ ಬೃಹಸ್ಪತಿರ್ದಧಾತು|

ಓಂ ಶಾಂತಿ: ಶಾಂತಿ: ಶಾಂತಿ:||

ಇಂದು ರಥ ಸಪ್ತಮಿ. ಮಾರ್ಗಶೀರ್ಷ ಮಾಸ ಶುಕ್ಲಪಕ್ಷದ ಏಳನೆಯದಿನ. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ ರಥವನ್ನೇರಿ ಹೋಗುತ್ತಾನೆ. ಅಂದರೆ ಇಂದಿಗೆ ಛಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. ಇಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವುದು ಪದ್ಧತಿ.

surya1.jpg

ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.

ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು. ಹೀಗೆ ೧೦೮ ನಮಸ್ಕಾರಗಳನ್ನು ಮಾಡುವರು. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ. ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ. ೧೨ ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ. ಆ ಹನ್ನೆರಡು ಜನ ಋತ್ವಿಕರ ಅರುಣ ಪ್ರಶ್ನ್ಯ ರೀತ್ಯಾ ಒಂದು ನಮಸ್ಕಾರವನ್ನು ೧೨ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುವರು. ಆ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯಕ್ಕಿರಿಸಿ, ಅದನ್ನು ಪ್ರಸಾದವಾಗಿ ಋತ್ವಿಕರಿಗೆ ಕೊಡುವರು ಮತ್ತು ಇತರರೂ ಸೇವಿಸುವರು.

konark.jpg

ಒರಿಸ್ಸಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತ್ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು (ಚರ್ಮ ರೋಗಗಳ ನಿವಾರಣೆಗಾಗಿ ಜನರು ಇಲ್ಲಿಗೆ ಹೋಗುವರು), ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ ಇವುಗಳು ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳು.

ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು – ಸಂಜನಾ ಮತ್ತು ಛಾಯಾ. ಅವನ ಮಕ್ಕಳಲ್ಲಿ ಪ್ರಮುಖರೆಂದರೆ, ಮನು, ಯಮ, ಯಮುನಾ, ಕರ್ಣ, ಸುಗ್ರೀವ ಇತ್ಯಾದಿ. ಶ್ರೀ ರಾಮನು ಸೂರ್ಯನ ವಂಶಸ್ತನು.

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡು

ಈ ಲೇಖನವು ಇಲ್ಲಿ ಪ್ರಕಟವಾಗಿದೆ

(ವಿ.ಸೂ : ಚಿತ್ರಗಳನ್ನು ಒದಗಿಸಿದ ಕುಮಾರಿ ಯಾಮಿನಿ ಅವರಿಗೆ ಆಭಾರಿಯಾಗಿರುವೆ)

ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತಾಡು ಎಂಬುದೊಂದು ನಾಣ್ನುಡಿ.

images.jpg

ಉತ್ತರಾಯಣದಲ್ಲಿ ಪ್ರಾರಂಭವಾಗುವ ಈ ಹಬ್ಬದ ಸಮಯದಲ್ಲಿ ಶುಭಕಾರ್ಯಗಳನ್ನು ಮಾಡುವುದು ಶ್ರೇಯಸ್ಕರ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿಯೆಂದು ಕರೆವರು. ಹೀಗೆ ವರುಷದಲ್ಲಿ ಹನ್ನೆರಡು ಸಂಕ್ರಾಂತಿಗಳು ಬಂದರೂ ಮಕರ ಸಂಕ್ರಾಂತಿಯು ಅತ್ಯಂತ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯನು ದಕ್ಷಿಣ ದಿಕ್ಕಿನಿಂದ ಉತ್ತರದಿಕ್ಕಿಗೆ ಪ್ರಯಾಣ ಮಾಡುವುದರಿಂದ ಉತ್ತರಾಯಣ ಪುಣ್ಯಕಾಲವೆಂದು ಕರೆವರು. ಅಯನ ಎಂದರೆ ಮಾರ್ಗ. ಉತ್ತರಾಯಣ ಎಂದರೆ ಉತ್ತರದ ಮಾರ್ಗ. ಈ ಸಮಯದಲ್ಲಿ ಸೂರ್ಯನು ಉತ್ತರ ದಿಕ್ಕಿಗೆ ಪ್ರಯಾಣ ಮಾಡುವನು. ಹಾಗಾಗಿ ಈ ಕಾಲ ವಿಶೇಷವನ್ನು ಉತ್ತರಾಯಣವೆಂದು ಕರೆವರು. ಉತ್ತರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವೂ ಇದೆ. ಈ ರೀತಿಯಾಗಿ ಇದನ್ನು ಶ್ರೇಷ್ಠವಾದ ಮಾರ್ಗವೆಂದೂ ಅರ್ಥೈಸಬಹುದು. ಮಾಗಿಯ ಛಳಿ ಕಳೆಯುವ ಸಮಯಕ್ಕೆ ಸರಿಯಾಗಿ ಬೆಳೆ ಕೈಗೆ ಬರುವ ಸಮಯ ಬರುವುದು. ಹಳ್ಳಿಗಳಲ್ಲಿ ಅದನ್ನೇ ಸುಗ್ಗಿ ಹಬ್ಬವೆಂದು ಆಚರಿಸುವರು. ಉತ್ತಮ ಬೆಳೆಯಿಂದಾಗಿ ಜನಜೀವನ ಉತ್ತಮ ಮಟ್ಟಕ್ಕೇರುವುದು. ಹೀಗಾಗಿ ಅದನ್ನು ಸಂಕ್ರಾಂತಿ ಎಂದು ಕರೆಯುವರು. ಈ ಹಬ್ಬವನ್ನು ಮಕರ ಸಂಕ್ರಾಂತಿ, ಮಕರ ಸಂಕ್ರಮಣ, ಉತ್ತರಾಯಣ ಪುಣ್ಯಕಾಲವೆಂದೂ ಗುರುತಿಸುವರು. ಈ ದಿನದಂದು ಖಿಚಡಿಯನ್ನು ಮಾಡುವುದರಿಂದ ಖಿಚಡಿ ಸಂಕ್ರಾಂತಿಯೆಂದೂ ಕರೆಯುವರು. ಖಿಚಡಿ ಎಂಬುದು ತುಪ್ಪ, ಹೆಸರು ಬೇಳೆ, ಅಕ್ಕಿ, ಮೆಣಸು ಮತ್ತಿತರೇ ಸಂಬಾರ ಪದಾರ್ಥಗಳನ್ನು ಉಪಯೋಗಿಸಿ ಮಾಡುವ ಹುಗ್ಗಿ. ತಮಿಳುನಾಡಿನಲ್ಲಿ ಮನೆಮನೆಗಳಲ್ಲಿ ಹಾಲನ್ನು ಉಕ್ಕಿಸುವುದರಿಂದ ಪೊಂಗಲ್ ಎಂದು ಕರೆವರು. ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತರುಲಾಗುವುದರಿಂದ ಅವುಗಳನ್ನು ದಾನ ಮಾಡಿ, ನಂತರ ಸೇವಿಸುವರು. ಕರ್ನಾಟಕದಲ್ಲಿ ಎಳ್ಳು ಬೆಲ್ಲವನ್ನು ಸೇವಿಸಿದರೆ, ಮಹಾರಾಷ್ಟ್ರದಲ್ಲಿ ಎಳ್ಳಿನ ಉಂಡೆಯನ್ನು ದಾನ ಮಾಡಿ ಸೇವಿಸುವರು. ಅಲ್ಲಿ ಇದನ್ನು ತಿಲ್‌ಗೋಳ ಎಂದು ಕರೆವರು. ವಿಶೇಷವಾಗಿ ರಾಜಸ್ಥಾನ, ಗುಜರಾತ ಮತ್ತು ಮಹಾರಾಷ್ಟ್ರಗಳಲ್ಲಿ ಗಾಳಿಯ ಪಟವನ್ನು ಹಾರಿಬಿಡುವರು. ಈ ಸಮಯದಲ್ಲಿ ಗಂಗಾನದಿಯಲ್ಲಿ ಮಿಂದು ಸೂರ್ಯದೇವನನ್ನು ಪೂಜಿಸುವುದು ವಾಡಿಕೆಯಲ್ಲಿದೆ.

                             images3.jpg

ಈ ಹಬ್ಬವನ್ನು ಸಾಮಾನ್ಯವಾಗಿ ಆಂಗ್ಲ ಪಂಚಾಂಗದ ಜನವರಿ ತಿಂಗಳಿನ 14 ಅಥವಾ 15ನೆಯ ತಾರೀಖಿನಂದು ಆಚರಿಸುವರು. ಚಾಂದ್ರಮಾನ ಪಂಚಾಂಗ ರೀತ್ಯಾ ಒಂದು ವರ್ಷಕ್ಕೆ 354 ದಿನಗಳಾದರೆ, ಸೌರಮಾನ ಪಂಚಾಂಗದಂತೆ ಒಂದು ವರ್ಷಕ್ಕೆ 365 ¼ ದಿನಗಳಾಗಿರುವುವು. ಇದರಿಂದಾಗ 3ವರ್ಷಗಳಿಗೊಮ್ಮೆ ಅಧಿಕ ಮಾಸವನ್ನು ಚಾಂದ್ರಮಾನ ಪಂಚಾಂಗ ಕೊಡುವುದು.

                                                                         images2.jpg

ಈ ದಿನದಂದು ಶ್ರದ್ಧೆ, ಭಕ್ತಿಗಳಿಂದ ಮಾಡುವ ಸ್ನಾನ, ಧ್ಯಾನ, ದಾನ, ಹೋಮ, ಪೂಜೆ, ತರ್ಪಣ ಮತ್ತು ಶ್ರಾದ್ಧಗಳಿಗೆ ವಿಶೇಷ ಫಲವಿದೆಯೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಂದು ಗಂಗಾದಿ ಪುಣ್ಯ ನದಿಗಳಲ್ಲಿ ಸ್ನಾನ ಮಾಡುವುದರಿಂದ, ಅದು ಬರಿಯ ಮಲಾಪಕರ್ಷಣ ಸ್ನಾನವಲ್ಲದೇ (ಶರೀರದ ಕೊಳೆಯನ್ನು ತೊಳೆಯುವುದು), ಮಾನಸಿಕ ದೋಷಗಳನ್ನು ತೊಳೆದಂತಾಗುವುದೆಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ.

cagrn6zt.jpg

ಕರ್ನಾಟಕದಲ್ಲಿ ಬಿಳಿ ಎಳ್ಳು, ಕಡಲೆಕಾಯಿಬೀಜ, ಹುರಿಗಡಲೆ, ಕುಸರಿಕಾಳು, ಸಣ್ಣದಾಗಿ ಕತ್ತರಿಸಿದ ಕೊಬ್ಬರಿ, ಬೆಲ್ಲ ಮತ್ತು ಇತರೆ ವಸ್ತುಗಳನ್ನು ಮಿಶ್ರಣ ಮಾಡಿ ಎಳ್ಳು ಎಂದು ಕರೆವರು. ಅದರೊಂದಿಗೆ ಹಾಲು ಮತ್ತು ಸಕ್ಕರೆ ಪಾಕದಲ್ಲಿ ಅಚ್ಚಿನಲ್ಲಿ ವಿಧ ವಿಧವಾದ ಆಕಾರಗಳಲ್ಲಿ ಸಕ್ಕರೆ ಅಚ್ಚುಗಳನ್ನೂ ಮಾಡುವರು. ಇದರೊಂದಿಗೆ ಕತ್ತರಿಸಿದ ಕಬ್ಬು, ಬಾಳೆಹಣ್ಣು, ಎಲಚಿಹಣ್ಣು ಮತ್ತು ಯಥಾಶಕ್ತಿ ಉಡುಗೊರೆಯಾಗಿ ಬೆಳ್ಳಿ ಅಥವಾ ಸ್ಟೀಲಿನ ಹರಿವಾಣ ಅಥವಾ ಪಾತ್ರೆಗಳನ್ನು ಮನೆ ಮನೆಗಳಿಗೆ ಹೋಗಿ ಕೊಡುವರು. ಇದನ್ನು ಬೀರುವುದು ಎಂದು ಕರೆವರು. ಸಾಮಾನ್ಯವಾಗಿ ಮನೆಯ ಹೆಣ್ಣುಮಕ್ಕಳು ಎಳ್ಳು ಬೀರಿದರೆ, ಹೆಣ್ಣುಮಕ್ಕಳಿಲ್ಲದ ಮನೆಗಳಲ್ಲಿ ಗಂಡು ಮಕ್ಕಳನ್ನು ಎಳ್ಳು ಬೀರಲು ಕಳುಹಿಸುವುದೂ ವಾಡಿಕೆಯಲ್ಲಿದೆ. ಇದಲ್ಲದೇ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು 5 ವರ್ಷಗಳವರೆವಿಗೆ ನೆಂಟರಿಷ್ಟರಿಗೆ ಎಳ್ಳನ್ನು ಬೀರುವರು. ಇದರಲ್ಲಿನ ವಿಶೇಷತೆ ಎಂದರೆ, ಮೊದಲ ವರ್ಷ ೫ ಬಾಳೆಯಹಣ್ಣುಗಳನ್ನು ದಾನ ಮಾಡಿದರೆ, ಎರಡನೆಯ ವರ್ಷ 10, ಮೂರನೆಯ ವರ್ಷ 15, ನಾಲ್ಕನೆಯ ವರ್ಷ 20 ಮತ್ತು ಐದನೆಯ ವರ್ಷ 25 ಬಾಳೆಯಹಣ್ಣುಗಳನ್ನು ದಾನ ಮಾಡುವರು (ಬೀರುವರು). ಅಂದಿನ ಸಂಜೆ ಚಿಕ್ಕ ಮಕ್ಕಳಿಗೆ ಆರತಿಯನ್ನು ಎತ್ತಿ ಎಲಚಿಹಣ್ಣುಗಳನ್ನು ತಲೆಯ ಸುರಿಯುವುದೂ ಪದ್ಧತಿಯಲ್ಲಿದೆ. ಹಳ್ಳಿಗಳಲ್ಲಿ ಎತ್ತು ಹಸು ಕರುಗಳಿಗೆ ಸ್ನಾನ ಮಾಡಿಸಿ, ಬಣ್ಣಗಳಿಂದ ಅಲಂಕರಿಸಿ, ಪೂಜಿಸಿ ತೆಂಗಿನಕಾಯಿ, ಬೆಲ್ಲ, ಹುಲ್ಲು ಮತ್ತು ಧಾನ್ಯಗಳನ್ನು ತಿನ್ನಿಸುವರು. ಸಂಜೆಯ ವೇಳೆಯಲ್ಲಿ ಉರಿಯುತ್ತಿರುವ ಬೆಂಕಿಯ ಮೇಲೆ ಹಾರಿಸುವರು. ಇದನ್ನು ಕಿಚ್ಚು ಹಾಯಿಸುವುದು ಎಂದು ಕರೆವರು. ಇದರಿಂದ ಅವುಗಳಲ್ಲಿ ತುಂಬಿ ಭಯ ಭೀತಿಗಳು ಪರಿಹಾರವಾಗುವುದು ಎಂಬ ಪ್ರತೀತಿ ಇದೆ. ತಮಿಳುನಾಡಿನಲ್ಲಿ ಇದಕ್ಕೆಂದೇ ಒಂದು ಪ್ರತ್ಯೇಕ ದಿನವನ್ನು ಆಚರಿಸುವರು. ಅದಕ್ಕೆ ಮಾಟ್ಟು ಪೊಂಗಲ್ ಎಂದು ಕರೆವರು. ಅಲ್ಲಿ ಮೂರುದಿನಗಳ ಹಬ್ಬವನ್ನಾಗಿ ಆಚರಿಸುವರು. ಭೋಗಿ, ಪೊಂಗಲ್ ಮತ್ತು ಕನೂ ಹಬ್ಬಗಳೆಂದು ಆಚರಿಸುವರು. ಸಂಕ್ರಾಂತಿಯ ನಂತರದ ದಿನದಂದು ಕನೂಹಬ್ಬವನ್ನು ಆಚರಿಸುವರು. ಸಂಕ್ರಾಂತಿ ಹಬ್ಬದಂದು ಮಾಡಿದ ಅಡುಗೆಯ ಉಳಿದ ಭಾಗವನ್ನು (ತಂಗಳು). ಕೆಂಪು, ಹಳದಿ ಮುಂತಾದ ಬೇರೆ ಬೇರೆ ಬಣ್ಣದ ಅನ್ನದ ಜೊತೆ, ಹಣ್ಣುಗಳು, ಕಬ್ಬಿನ ಚೂರು ಸೇರಿಸಿ, ಮನೆಯ ಹೊರಗೆ ಎಲೆಗಳ ಮೇಲೆ ಇರಿಸಿ ಭೂತಗಳಿಗೆ ಸಮರ್ಪಿಸುವರು. ಬೆಳಗಿನ ಕಾಲದಲ್ಲಿ ಇದನ್ನು ಸಮರ್ಪಿಸಿ ನಂತರ ಸ್ನಾನ ಮಾಡುವರು.

                                               images1.jpg

ಕೇರಳದ ಮಕರ ವಿಳಕ್ಕು ಬಗ್ಗೆ ತಿಳಿಯದವರು ಯಾರಿದ್ದಾರೆ? ಪ್ರತಿ ವರ್ಷವೂ ಟೆಲಿವಿಷನ್‍ಗಳಲ್ಲಿ ದೂರದ ಬೆಟ್ಟದಲ್ಲಿ ಸಂಜೆಯ ನಿಖರವಾದ ಸಮಯದಲ್ಲಿ ದೀಪ ಬೆಳಗುವುದನ್ನು ತೋರಿಸುವರು. ಇದನ್ನು ಎಲ್ಲರೂ ನೋಡಿರಬೇಕು ಅಲ್ಲವೇ? ಇಡೀ ದೇಶವಲ್ಲದೇ ವಿದೇಶಗಳಿಂದ ಕೂಡಾ ಲಕ್ಷಾಂತರ ಜನಗಳು ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಶಬರಿಮಲೈಗೆ ಹೋಗುವರು. ಹಾಗೆ ಹೋಗುವವರಲ್ಲಿ ಬಹಳಷ್ಟು ಜನರು ವ್ರತವನ್ನು ಪಾಲಿಸುವರು. ಈ ಸಮಯದಲ್ಲಿ ಅವರಲ್ಲಿ ಸಂಯಮತೆ, ಭ್ರಾತೃತ್ವ, ಮಾನವೀಯತೆ ಇತ್ಯಾದಿ ಗುಣಗಳನ್ನು ಕಂಡುಬರುವುದು ಸಂತೋಷದಾಯಕ ಸಂಗತಿ. ವ್ರತದ ಪ್ರಕಾರ ಪ್ರತಿ ದಿನ ಬೆಳಗ್ಗೆ ತಣ್ಣೀರಿನಲ್ಲಿ ಮಿಂದು ದೇವರ ಪೂಜೆಯನ್ನು ಮುಗಿಸಿ, ಅಲ್ಲಲ್ಲಿ ಆಯೋಜಿಸುವ ಭಜನೆಗಳಲ್ಲಿ ಪಾಲ್ಗೊಳ್ಳುವರು. ಅಲ್ಲಿ ನಡೆಯುವ ಮಂಡಲ ಪೂಜೆಯಲ್ಲಿ ಭಾಗವಹಿಸುವರು. ಕಪ್ಪು ಬಟ್ಟೆಯನ್ನು ಧರಿಸಿ, ಬರಿಗಾಲಿನಲ್ಲಿ ನಡೆಯುವ, ಸದಾ ದೇವರ ಧ್ಯಾನವನ್ನು ಮಾಡುತ್ತಿರುವ ಜನಗಳನ್ನು ಕಂಡಿರುವೆವು. ವ್ರತಾಚರಣೆಗೆ ಮೊದಲು ಗುರುವಿನಿಂದ ದೀಕ್ಷೆಯನ್ನು ಪಡೆಯಬೇಕು. ವ್ರತ ಪಾಲಿಸುವವರು ಹೆಂಗಸರು ಮಾಡಿದ ಅಡುಗೆಯನ್ನು ಊಟ ಮಾಡಬಾರದು. ಯಾವ ದುಶ್ಚಟಗಳಿಗೂ ಮೊರೆ ಹೋಗಬಾರದು. ನಿಖರವಾದ ದಿನದಲ್ಲಿ ಗುಂಪು ಗುಂಪಾಗಿ ಶಬರಿಮಲೈಗೆ ಹೋಗುವರು. ಹೋಗುವಾಗ ತೆಂಗಿನಕಾಯಿ ಮತ್ತು ತುಪ್ಪವನ್ನು ದೇವರಿಗೆ ಅರ್ಪಿಸಲು ತೆಗೆದುಕೊಂಡು ಹೋಗುವರು. ಇದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಇರುಮುಡಿ ಎಂದು ಕರೆದು ತಲೆಯ ಮೇಲಿಟ್ಟುಕೊಂಡು ಹೋಗುವರು. ಅಲ್ಲಿ ಹರಿಹರ ಪುತ್ರ ಶ್ರೀ ಅಯ್ಯಪ್ಪನ ದರ್ಶನಕ್ಕಾಗಿ ದೇಗುಲದ ೧೮ ಮೆಟ್ಟಿಲುಗಳನ್ನು ಏರಿ ಹೋಗುವರು. ಈ ೧೮ ಮೆಟ್ಟಿಲುಗಳು ಪಂಚೇಂದ್ರಿಯಗಳು, ಅಷ್ಟ ಲಕ್ಷಣಗಳು (ಕಾಮ ಕ್ರೋಧ ಮದ ಮೋಹ ಇತ್ಯಾದಿ), ತ್ರಿಗುಣ (ಸತ್ವ, ತಮಸ್ಸು, ರಜಸ್ಸು), ವಿದ್ಯೆ ಮತ್ತು ಅವಿದ್ಯೆಗಳ ಸಂಕೇತ. ಇವೆಲ್ಲವನ್ನೂ ಮೆಟ್ಟಿ ಮೇಲೇರಿ ದೇವರ ದರ್ಶನವನ್ನು ಮಾಡಬೇಕು. ನಂತರ ಸಂಜೆಯ ಸಮಯದಲ್ಲಿ ಮಕರವಿಳಕ್ಕು ದೀಪ ದರ್ಶನವನ್ನು ಮಾಡುವರು. ಕಟ್ಟುನಿಟ್ಟಾಗಿ ೧೬ ವರ್ಷಗಳ ಕಾಲ ವ್ರತವನ್ನು ಮಾಡಿದ ನಂತರ ಗುರುವಿನ ಸ್ಥಾನವನ್ನು ಪಡೆಯುವರು. ಈ ರೀತಿ ವರ್ಷದಲ್ಲಿ ವ್ರತಾಚರಣೆಯನ್ನು ಮಾಡುವವನು ಜೀವನದ ಮರ್ಮವನ್ನು ಅರಿಯುವನು ಎಂಬುದರಲ್ಲಿ ಸಂದೇಹವಿಲ್ಲ.

                                                                                          images4.jpg

ಸಂಕ್ರಾಂತಿಯ ಹಬ್ಬದ ದಿವಸ ರಾತ್ರಿಯ ವೇಳೆಯಲ್ಲಿ ದೇವರ ಪೂಜೆಯ ನಂತರ ಜ್ಯೋತಿಷಿಗಳಿಂದ ಸಂಕ್ರಾಂತಿ ಮೂರ್ತಿಯ ಸ್ವರೂಪ ಮತ್ತು ಆ ವರ್ಷದ ಸಂಕ್ರಾಂತಿ ಫಲವನ್ನು ಓದಿಸಿ ತಿಳಿಯುವ ಪದ್ಧತಿಯೂ ಇದೆ. ಸಂಕ್ರಾಂತಿ ಪುರುಷನಿಗೆ ಮೂರು ತಲೆಗಳು, ಎರಡು ಮುಖಗಳು, ಐದು ಬಾಯಿಗಳು, ಮೂರು ಕಣ್ಣುಗಳು, ಜೋಲಾಡುವ ಕಿವಿ ಮತ್ತು ಹುಬ್ಬುಗಳು, ಕೆಂಪು ಹಲ್ಲು, ಉದ್ದವಾದ ಮೂಗು, ಎಂಟು ತೋಳುಗಳು, ಎರಡು ಕಾಲುಗಳು, ಕಪ್ಪುಬಣ್ಣದ ಅರ್ಧ ಗಂಡು ಅರ್ಧ ಹೆಣ್ಣಿನ ರೂಪ ಇರುವುದು. ಅದು ಬಂದಿರುವ ವಾರದ ಫಲ, ಪಕ್ಷದ ಫಲ, ತಿಥಿಯ ಫಲ, ನಕ್ಷತ್ರದ ಫಲ, ಯೋಗಕರಣಗಳ ಫಲ, ಅದರ ದೃಷ್ಟಿ ಮತ್ತು ಪ್ರಯಾಣದ ದಿಕ್ಕು, ಕಾಲ, ಅದರ ಸ್ನಾನ ತೀರ್ಥದ ಫಲ, ವಸ್ತ್ರಲೇಪನ, ಧರಿಸಿರುವ ಹೂ, ಅಲಂಕಾರ, ಆಹಾರ, ಏರಿರುವ ವಾಹನ, ಹೊಂದಿರುವ ಆಯುಧಗಳು, ಇತ್ಯಾದಿಗಳ ಫಲಗಳೇನೆಂಬುದನ್ನು ಜ್ಯೋತಿಷಿಗಳು ಅರ್ಥೈಸುತ್ತಾರೆ.

images5.jpg

                                                  images6.jpg

                                                                                                       images7.jpg

ಈ ಶುಭಸಂದರ್ಭಕ್ಕೆ ನನ್ನದೊಂದು ಪುಟ್ಟ ಕವನವನ್ನೂ ಇಲ್ಲಿ ಇರಿಸುತ್ತಿರುವೆ.

ನೇಸರನು ತನ್ನ ಪಥವ ಬದಲಿಸುತಿರಲು

ಮಾಗಿಯ ಛಳಿ ಮಾಯವಾಗುತಿರಲು

ಹೊಸ ಚೈತನ್ಯ ಲವಲವಿಕೆ ಮೂಡುತಿದೆ

ಹೊಸ ಬೆಳೆ ಹೊಸ ಕ್ರಾಂತಿ ಹರಡುತಿದೆ

caepf2rn.jpg

ಹಸನಾದ ದವಸವು ಒಲೆಯ ಮೇಲೇರುತಿದೆ

ಹುಗ್ಗಿ ಹಾಲುಗಳು ಉಕ್ಕಿ ಹರಿಯುತ್ತಿದೆ

ಪುಟ್ಟಕ್ಕ ಪುಟ್ಟಣ್ಣರ ಸಂಭ್ರಮ ಹೇಳುತಿದೆ

ಸಂಕ್ರಾಂತಿ ಹಬ್ಬವು ಮನೆಯೊಳಗೆ ಕಾಲಿಟ್ಟಿದೆ

cao5uiff.jpg

ಕೈಯಲಿ ಹಿಡಿದಿಹೆ ಪುಟ್ಟ ಬೆಳ್ಳಿಯ ಹರಿವಾಣ

ಎಳ್ಳು ಬೀರಲು ಹೊರಟಿಹಳ ಪುಟ್ಟಿಗಿಲ್ಲ ಕಡಿವಾಣ

ಹದವಾಗಿ ಮಿಶ್ರಿತ ಎಳ್ಳು ಬೆಲ್ಲ ಕುಸುರಿ ಕಾಳು

ಬಾಳೆಯಹಣ್ಣಿನೊಂದಿಗಿಹುದು ಕಬ್ಬಿನ ಹೋಳು

ಅಕ್ಕಾ ತಂಗೇರು ಬಂದು ಎಲಚಿ ಆರತಿಯ ಎತ್ತಿ

ಕಬ್ಬಿನ ಚೂರು, ಕಾಸು ಕೂಸಿನ ಮೇಲೆರೆಯಿರೇ

ಬಣ್ಣ ಬಣ್ಣದ ಜರತಾರಿ ಕುಪ್ಪಸ ತೊಟ್ಟ ತಂಗಿ

ಜರಿ ಅಂಚಿನ ಲಂಗದಿ ಕುಣಿವ ಚೈತನ್ಯದ ಭಂಗಿ

ಇನ್ನೊಂದು ಕವನ

cakub8d7.jpg

ಬಾರೆ ತಂಗಿ ಎಳ್ಳು ಬೆಲ್ಲ ಬೀರೋಣ ಬಾ

ಜರತಾರಿ ಲಂಗ ಜರತಾರಿ ಕುಪ್ಪಸ ತೊಟ್ಟು ಬಾ

ಬಣ್ಣದ ಅಂಗಿ ಚಡ್ಡಿ ತೊಟ್ಟು ನಾ ಬರುವೆ

ಅಮ್ಮ ಕೊಟ್ಟ ಎಳ್ಳು ಬೆಲ್ಲವ ಎಲ್ಲರ ಮನೆಗಳಿಗೆ ಬೀರೋಣ ಬಾ


ಬೆಳ್ಳಿಯ ಹರಿವಾಣದಲಿ ಕಸೂತಿಯ ಕರವಸ್ತ್ರ

ಬೆಳ್ಳಿಯ ಬಟ್ಟಲಲಿ ಎಳ್ಳು ಬೆಲ್ಲ ಸಮ್ಮಿಶ್ರ

ಜೊತೆಯಲಿ ಬೆಳ್ಳನೆಯ ಮೃದು ಸಕ್ಕರೆಯ ಅಚ್ಚು

ಅರಿಶಿನ ಕುಂಕುಮ ಬಾಳೆಹಣ್ಣು ಎಲಚಿಯ ಗುಚ್ಚು

ca5z8g3v.jpg

ಈ ಕಡೆ ಮನೆಯವರೀವರು ಪೊಂಗಲ್ ತಿಂಡಿ

ಆ ಕಡೆ ಮನೆಯವರೀವರು ತಿಲ್‍ಗೋಳ್ ಉಂಡಿ

ಅವರ ಮನೆಯ ಗಂಗೆ ಗೌರಿಗಳ ಪೂಜಿಸೋಣ

ಗೆಳೆಯರೊಡಗೂಡಿ ಗಾಳಿಪಟ ಹಾರಿಸೋಣ

ಕೊಬ್ಬರಿ ಕಡಲೆ ಬಾಯ್ತುಂಬ ತಿನ್ನೋಣ

ಕಬ್ಬನು ಸಿಗಿದು ರಸ ಹೀರೋಣ

ಸಂಜೆ ಬೆಂಕಿಯ ಕೊಂಡವ ಹಾಯೋಣ

ಹೊಸ ಧಾನ್ಯವ ಗಾಡಿಯ ಮೇಲೆ ಹೊತ್ತು ತರೋಣ

ಎಲ್ಲರಿಗೂ ಹಂಚೋಣ ನಮ್ಮನೆಯ ಎಳ್ಳು ಬೆಲ್ಲ

ಸ್ನೇಹ ಸಂಪಾದಿಸಿ ಒಂದಾಗಿ ಬಾಳುವ ನಾವೆಲ್ಲಾ

ಸಂಕ್ರಾಂತಿಯಿಂದ ಶುಭಕ್ರಾಂತಿಯ ತರೋಣ

ನಾಡ ಕಟ್ಟೋಣ, ಎಲ್ಲರ ಕೈ ಜೋಡಿಸೋಣ

 

carjxr7d.jpg

ಬಾರೆ ತಂಗಿ ಎಳ್ಳು ಬೆಲ್ಲ ಬೀರೋಣ ಬಾ

ಜರತಾರಿ ಲಂಗ ಜರತಾರಿ ಕುಪ್ಪಸ ತೊಟ್ಟು ಬಾ

ಬಣ್ಣದ ಅಂಗಿ ಚಡ್ಡಿ ತೊಟ್ಟು ನಾ ಬರುವೆ

ಅಮ್ಮ ಕೊಟ್ಟ ಎಳ್ಳು ಬೆಲ್ಲವ ಎಲ್ಲರ ಮನೆಗಳಿಗೆ ಬೀರೋಣ ಬಾ

ವಿಭಾಗಗಳು
ಲೇಖನಗಳು

ಗೋಕುಲಧಾಮದಲ್ಲಿ ರಾತ್ರಿಯ ಶಿಬಿರ

ಸ್ವಲ್ಪ ಕಾಲದ ಹಿಂದೆ ಬರೆದ ಲೇಖನವನ್ನು – ಈಗ ಇಲ್ಲಿರಿಸುತ್ತಿರುವೆ 

 

ಒಂದನೇಯ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆವಿಗೆ ಪ್ರಾಥಮಿಕ ಶಾಲೆ ಎಂದು ಹೆಸರಿಸುವರು. ಮಕ್ಕಳು ಮೊದಲು ಪ್ರಾಥಮಿಕ ಶಾಲೆಯ ಮೆಟ್ಟಿಲನ್ನು ಹತ್ತುವರು.  ಆಗ ಅವರು ಎಲ್ಲಕ್ಕೂ ಹಿರಿಯರನ್ನು ಅವಲಂಬಿಸುವರು.   ನಂತರ ಹೋಗುವುದೇ ಮಾಧ್ಯಮಿಕ ಶಾಲೆಗೆ.  ಪ್ರಾಥಮಿಕದಿಂದ ಮಾಧ್ಯಮಿಕಕ್ಕೆ ಹೋಗುವ ಸನ್ನಿವೇಶವೊಂದು ಆಯಾಮ, ಎಂದು ತಿಳಿಯಬಹುದು.  ಆಗ ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಸ್ವಾವಲಂಬನೆ ಬರುವುದು.  ಇಂತಹ ಸನ್ನಿವೇಶದಲ್ಲಿ ಮಕ್ಕಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮುಂಬೈನ ಗೋಕುಲಧಾಮ ಶಾಲೆಯವರು ಪ್ರತಿವರ್ಷವೂ ನಾಲ್ಕನೆಯ ತರಗತಿಗೆ ಮಕ್ಕಳಿಗೆ ಒಂದು ರಾತ್ರಿಯ ಶಿಬಿರವನ್ನು ( ನೈಟ್ ಕ್ಯಾಂಪ್ ) ಏರ್ಪಡಿಸುತ್ತಾರೆ.

 

ಈ ಬಾರಿಯ ಶಿಬಿರಕ್ಕೆ ನನ್ನ ಮಗನು ಹೋಗಿದ್ದ.  ಅದರ ಬಗ್ಗೆ ನನ್ನ ಒಂದೆರಡು ಮಾತುಗಳನ್ನು ನಿಮ್ಮ ಮುಂದಿಡುತ್ತಿರುವೆ.

 

ನಾಲ್ಕನೆ ಇಯತ್ತೆಯವರೆಗಿನ ಮಕ್ಕಳಿಗೆ ಮಧ್ಯಾಹ್ನದ ಶಾಲೆ.  ಮಾಧ್ಯಮಿಕ, ಪ್ರೌಢ ಶಾಲೆಗಳು ಬೆಳಗ್ಗೆ ೭ ಘಂಟೆಗೆ ಪ್ರಾರಂಭವಾಗುವುವು.  ಶುಕ್ರವಾರ ರಾತ್ರಿ ಶಿಬಿರ ಇದ್ದುದರಿಂದ ಅಂದು ಶಾಲೆಗೆ ರಜೆ ಘೋಷಿಸಿದ್ದರು.  ಈ ಮಕ್ಕಳಿಗೆ ಹೊದ್ದಿಕೆ ಮತ್ತು ಕುಡಿಯುವ ನೀರಿನ ಬಾಟಲು ಮಾತ್ರ ತರಬೇಕೆಂದು ತಿಳಿಸಿದ್ದರು.  ರಾತ್ರಿಯ ಉಡುಪಿನಲ್ಲಿ ಬರಬೇಕೆಂದೂ ತಿಳಿಸಿದ್ದರು.  ಅಂದಿನ ದಿನವೆಲ್ಲಾ ನನ್ನ ಮಗನಿಗೆ ಶಿಬಿರದ್ದೇ ಧ್ಯಾನ.  ಊಟ ತಿಂಡಿಯನ್ನೂ ಸರಿಯಾಗಿ ತಿಂದಿರಲಿಲ್ಲ. ಶಿಬಿರದ್ದೇ ಯೋಚನೆ.  ಅಲ್ಲಿ ಯಾರ್‍ಯಾರ ಜೊತೆ ಆಡಬೇಕು, ಯಾರು ಪಕ್ಕದಲ್ಲಿ ಮಲಗಬೇಕು, ಯಾರೊಂದಿಗೆ ದ್ವೇಷವಿದ್ದು ರಾತ್ರಿ ಹೊಡೆದಾಡಬಹುದು (ನಮ್ಮವನು ಸ್ವಲ್ಪ ಧಡೂತಿ ಹುಡುಗ), ಇವುಗಳದ್ದೇ ಆಲೋಚನೆ.

 

ಸಂಜೆ ೫.೩೦ಕ್ಕೆ ಅವರು ಶಾಲೆಗೆ ಹೋಗಬೇಕಿತ್ತು.  ನಮ್ಮ ಕ್ವಾರ್ಟರ್ಸಿನಿಂದ ಕಲ್ಲೆಸೆತದ ದೂರದಲ್ಲೇ ಶಾಲೆ.  ಇವನು ೪.೩೦ಕ್ಕೇ ಅವರಮ್ಮನಿಗೆ ಶಾಲೆಗೆ ಕರೆದೊಯ್ಯಿ ಎಂದು ದುಂಬಾಲು ಬಿದ್ದಿದ್ದ.  ಯಾವ ಮಕ್ಕಳೂ ಬಂದಿರುವುದಿಲ್ಲವೆಂದೂ ಈಗಲೇ ಒಳಗೆ ಬಿಡುವುದಿಲ್ಲವೆಂದು ಹೇಳಿದರೂ ಮಾತನ್ನು ಕೇಳಿರಲಿಲ್ಲ.  ಕಾಟ ತಡೆಯಲಾರದೇ ಕಡೆಗೆ ೫ ಘಂಟೆಗೆ ಅವನನ್ನು ಶಾಲೆಗೆ ಕರೆದೊಯ್ಯಲೇಬೇಕಾಯ್ತು.  ಒಳಗೆ ಬಿಡದ ಕಾರಣ ೧೫ ನಿಮಿಷಗಳ ಕಾಲ ಗೇಟಿನ ಮುಂಭಾಗದಲ್ಲೇ ನಿಲ್ಲಬೇಕಾಯ್ತು.  ಇವನಂತೆಯೇ ಇನ್ನೂ ಬಹಳ ಮಕ್ಕಳು ಬಂದಿದ್ದರು. 

 schoolcamp.jpg

ಅಂದು ಶಾಲೆಯಲ್ಲಿ ಮಕ್ಕಳನ್ನು ನೋಡುವುದೇ ಒಂದು ಚಂದ.  ಪ್ರತಿ ದಿನವೂ ಒಂದೇ ತರಹದ ಸಮವಸ್ತ್ರ ಧರಿಸಿರುತ್ತಿದ್ದ ಚಿಣ್ಣರು ಅಂದು ಬಣ್ಣ ಬಣ್ಣದ ತರಹಾವರಿ ಬಟ್ಟೆಗಳನ್ನು ಹಾಕಿ ಕೂಗಿ ಚೀರಾಡುತ್ತಿದ್ದರು. ಮಾಸ್ತರರು ಅಂದೇನೂ ನಿರ್ಬಂಧ ಹಾಕುವುದಿಲ್ಲವೆಂದು ತಿಳಿಸಿದ್ದರಿಂದಲೋ ಏನೋ ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕ ಅನುಭವ.  ಮನೆಗೆ ವಾಪಸ್ಸು ಬಂದ ನನ್ನ ಪತ್ನಿಗೆ ಅವನದ್ದೇ ಚಿಂತೆ.  ಅವನು ಏನಾದರೋ ತಿಂದನೋ ಇಲ್ಲವೋ, ಯಾರ ಜೊತೆ ಹೊಡೆದಾಡಿ ಮಾಸ್ತರರಿಂದ ಏಟು ತಿಂದಿರಬಹುದು, ಎಲ್ಲಿಯಾದರೂ ಬಿದ್ದು ಅಳುತ್ತಿದ್ದಾನೋ – ಹೀಗೆ ಹತ್ತು ಹಲವಾರು ಚಿಂತೆಗಳು ಅವಳಿಗೆ. 

 

ಸಂಜೆ ೭.೩೦ಕ್ಕೆ ನಾನು ಮನೆಗೆ ಬರುತ್ತಿದ್ದ ಹಾಗೆಯೇ ಶಾಲೆಗೆ ಹೋಗಿ ಅವನ ಯೋಗಕ್ಷೇಮ ವಿಚಾರಿಸುವ ಡ್ಯೂಟಿ ಬಿದ್ದಿತು.  ನಾನು ಶಾಲೆಯ ಗೇಟಿನ ಬಳಿಗೆ ಹೋಗಲು ಸೆಕ್ಯುರಿಟಿಯವರು ತಡೆದರು.  ಶಾಲೆಯ ಬದಿಯಲ್ಲಿ ದೊಡ್ಡದಾದ ಆಟದ ಮೈದಾನ.  ಅದರ ಹಿಂದೆ ಈಜುಕೊಳ.  ಮಕ್ಕಳೆಲ್ಲರೂ ಅಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಕೆಲವರು ಕ್ರಿಕೆಟ್ ಆಡುತ್ತಿದ್ದರೆ, ಇನ್ನೂ ಕೆಲವರು ಬುಗುರಿ ಆಡುತ್ತಿದ್ದಾರೆ (ನನ್ನ ಮಗನಿಗೆ ಬೇಬ್ಲೇಡ್ ಇಷ್ಟ).  ಮತ್ತೂ ಕೆಲವರು ಜೂಟಾಟ. ಆ ದೃಶ್ಯ ನೋಡುತ್ತಿದ್ದರೆ ನಾನೂ ಚಿಕ್ಕವನಾಗಿ ಅವರೊಂದಿಗೆ ಆಟವಾಡಬೇಕು ಎನ್ನಿಸುತ್ತಿತ್ತು. ಗೇಟಿನಿಂದಲೇ ನನ್ನ ಮಗನನ್ನು ಕರೆಯಲು ಪ್ರಯತ್ನಿಸಿದೆ.  ಸ್ಕೂಲಿನ ಎಲ್ಲ ಮಾಸ್ತರು ಮಾಸ್ತರಿಣಿಯರೂ ಅಲ್ಲಿ ಭದ್ರ ಕೋಟೆಯಂತೆ ನಿಂತಿದ್ದರು.  ಗೇಟಿನಿಂದಲೇ ನನ್ನ ಮಗನನ್ನು ಕರೆದೆ.  ನನ್ನ ಮಗನೊಬ್ಬನನ್ನು ಬಿಟ್ಟು ಮಿಕ್ಕವರೆಲ್ಲರೂ ನನ್ನೆಡೆಗೆ ನೋಡಿದರು.  ಮಗನ ಒಬ್ಬ ಸ್ನೇಹಿತ ನಾನು ಬಂದಿರುವುದರ ಬಗ್ಗೆ ಅವನಿಗೆ ತಿಳಿಸಿದ.  ಇವನು ನೋಡಲು ವ್ಯವಧಾನವೇ ಇಲ್ಲ.  ಅವನ ತುಂಟಾಟಗಳಿಗೆ ನಾನಿನ್ನೆಲ್ಲಿ ಕಡಿವಾಣ ಹಾಕುವೆನೋ ಎಂದು ನನ್ನನ್ನು ನಿರ್ಲಕ್ಷಿಸಿದ್ದ.  ಆದರೂ ಬಿಡದೇ ಅಲ್ಲಿಯೇ ಇದ್ದ ಒಬ್ಬ ಮಾಸ್ತರಿಣಿಗೆ ಮಗನಿಗೆ ಏನೋ ಹೇಳಬೇಕೆಂದು ತಿಳಿಸಿದಾಗ ಅವರು ಅವನನ್ನು ಗೇಟಿನ ಬಳಿಗೆ ಕಳುಹಿಸಿದ್ದರು.  ಬರುವಾಗಲೇ ದುರುಗುಟ್ಟಿಕೊಂಡು ಬಂದಿದ್ದ ಮಗರಾಯ.  ಊಟಕ್ಕೆ ಏನೇನು ಕೊಡ್ತಾರೆ ಅಂತ ಅಷ್ಟೇ ಕೇಳಿ ಅವನನ್ನು ವಾಪಸ್ಸು ಕಳುಹಿಸಿದ್ದೆ.  ಅವನನ್ನು ಮಾತನಾಡಿಸಲು ನನಗಿದ್ದ ಉದ್ದೇಶವಿಷ್ಟೇ, ಮರುದಿನ ಮನೆಗೆ ಬಂದ ನಂತರ ನನ್ನ ಪತ್ನಿಗೆ ಅವನು ಅಪ್ಪ ಬಂದಿದ್ರು, ಮಾತನಾಡಿಸಿದ್ರು ಅಂತ ಹೇಳಿದ್ರೆ ಸಾಕು.  ಅಂದು ರಾತ್ರಿಯೆಲ್ಲ ಮನೆಯಲ್ಲಿ ನನ್ನ ಪತ್ನಿ ಮತ್ತು ಮಗಳಿಗೆ ನಿದ್ರೆಯೇ ಇಲ್ಲ.  ನನ್ನ ಮಗನದ್ದೇ ಚಿಂತೆ.  ನಾನೊಬ್ಬನೇ ನಿಶ್ಚಿಂತೆಯಾಗಿ ನಿದ್ರಿಸಿದವನು.  ಹುಟ್ಟಿಸಿದಾತ ಕಾಪಾಡುವುದಿಲ್ಲವೇ ಎಂಬುದೇ ನನ್ನ ಪಾಲಿಸಿ.

 

 

ಸಂಜೆ ೫.೩೦ ರಿಂದ ೭ ರವರೆವಿಗೆ ಅವರಿಗೇ ಆಟ ಆಡಲು ಬಿಟ್ಟಿದ್ದರಂತೆ. ನಂತರ ಬಿಸ್ಕಿಟ್ ಮತ್ತು ಹಣ್ಣಿನ ರಸ ಕೊಟ್ಟು ಮೈದಾನದಲ್ಲಿ ಆಟ ಆಡಿಸಿ ಹಾಡುಗಳನ್ನು ಹಾಡಿಸಿದರಂತೆ.  ನಂತರ ಪುಷ್ಕಳವಾದ ಉತ್ತರ ಭಾರತೀಯ ಊಟ ಕೊಟ್ಟಿದ್ದಾರೆ.  ರಾತ್ರಿ ೯.೩೦ ಕ್ಕೆ ಮೈದಾನದ ಮಧ್ಯ ಭಾಗದಲ್ಲಿ ದೊಡ್ಡ ಬೆಂಕಿ ಹಾಕಿದ್ದಾರೆ – ಇದನ್ನು ಬಾನ್ ಫೈರ್ ಎನ್ನುವರಂತೆ.  ಕಾಮನ ದಹನ ಮಾಡಿದಂತೆ.  ಆ ನಂತರ ೧೦ ಘಂಟೆಗೆ ಶಾಲೆಯ ಹಿಂದಿನ ರಸ್ತೆಯ ಕಡೆಯಿಂದ ಒಂದು ದೊಡ್ಡ ಸುತ್ತು ಹೋಗಿ ಬರಲು ತಿಳಿಸಿದರಂತೆ.  ಮಾಸ್ತರರು, ಮಾಸ್ತರಿಣಿಯರು ಇವರ ಕಣ್ಣಿಗೆ ಕಾಣದಂತಿದ್ದು ರಾತ್ರಿಯಲ್ಲಿ ಹೆದರದೇ ಓಡಾಡಲು ಅಭ್ಯಾಸವಾಗುವಂತೆ ಮಾಡಿದ್ದಾರೆ.  ರಾತ್ರಿ ೧೧.೩೦ಕ್ಕೆ ಮಲಗಲು ಕಳುಹಿಸಿದ್ದಾರೆ. ಮಲಗಲು ಅನುಕೂಲವಾಗುವಂತೆ ತರಗತಿಗಳಲ್ಲಿ ಹಾಸುಗೆಗಳನ್ನು ಹಾಸಿ ಹೊದ್ದಿಕೆ ಸಿದ್ಧ ಪಡಿಸಿದ್ದರು.  ರಾತ್ರಿಯಲ್ಲಿ ಇವರು ಎದ್ದು ಗಲಾಟೆ ಮಾಡಿಯಾರೆಂದು ಮಾಸ್ತರು, ಮಾಸ್ತರಿಣಿಯರ ಕಾವಲು. ಮತ್ತೆ ಬೆಳಗ್ಗೆ ೫ಕ್ಕೆ ವಿಶಲ್ ಊದಿ ಎಲ್ಲರನ್ನೂ ಎಬ್ಬಿಸಿ ಬೆಳಗಿನ ಓಟದ ಅಭ್ಯಾಸ ಮಾಡಿಸಿದ್ದಾರೆ. 

ಆರು ಘಂಟೆಗೆ ಬಂದು ಮಕ್ಕಳನ್ನು ಕರೆದೊಯ್ಯಲು ತಿಳಿಸಿದ್ದರು.  ನಾನು ೫.೪೫ಕ್ಕೇ ಅಲ್ಲಿಗೆ ಹೋಗಿದ್ದೆ.  ನೋಡಿದರೆ ಮಕ್ಕಳೆಲ್ಲಾ ಆಗಲೇ ತಯಾರಾಗಿ ಶಾಲೆಯ ಅಂಗಳದಲ್ಲಿ ಕುಳಿತಿದ್ದಾರೆ.  ನನ್ನ ಮಗ ನನ್ನನ್ನು ನೋಡಿದಂತೆಯೇ ಏನೋ ವಿಜಯ ಸಾಧಿಸಿದವನ ಹಾಗೆ ನಗೆ ಬೀರಿದ.  ಮಾಸ್ತರರು ನನ್ನನ್ನು ನೋಡಿ ಅವನಿಗೆ ನನ್ನೊಡನೆ ಹೋಗಲು ತಿಳಿಸಿದರು. 

 

ನನ್ನ ಹತ್ತಿರ ಬರುತ್ತಿದ್ದ ಹಾಗೆ ನನ್ನ ಮಗ ಮೊದಲು ಹೇಳಿದ್ದು, ಇನ್ಮೇಲೆ ನನಗೆ ನಾನೇ ಸ್ಕೂಲಿಗೆ ಬರ್ತೀನಿ, ಯಾರೂ ನನ್ಜೊತೆ ಬರ್ಬೇಕಾಗಿಲ್ಲ, ನಾನೀಗ ದೊಡ್ಡವನಾಗಿದ್ದೀನಿ, ರಾತ್ರಿ ಕೂಡಾ ನಾನೊಬ್ನೇ ಎಲ್ಲೂ ಹೋಗಬಹುದು.  ಅಷ್ಟು ಧೈರ್ಯ ಬಂದಿದೆ. ಇಷ್ಟು ಹೇಳಿದ ಭೂಪ ಮನೆಗೆ ಬಂದು ಅವನಮ್ಮನ ಮುಖ ನೋಡಿದ ಕೂಡಲೇ ಅದೆಲ್ಲಿಯದೋ ದು:ಖ ಉಮ್ಮಳಿಸಿ ಬಂದು ಗೊಳೋ ಎಂದು ಅಳೋದೇ!  ಎಷ್ಟೇ ಆಗಲಿ, ಮಕ್ಕಳ ಮನಸ್ಸೇ ಹಾಗೆ.

 

ಇಂತಹ ತರಬೇತಿಗಳನ್ನೇ ಅಲ್ಲವೇ ಮಕ್ಕಳಿಗೆ ನಾವು ಕೊಡಬೇಕಿರುವುದು.  ಜೀವನದ ಪಾಠವ ಅನುಭವಸಿದ್ಧವಾಗಿ ತಿಳಿಸಿಕೊಟ್ಟರೆ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವ ಶಕ್ತಿ ಬಂದೀತು.

 

ಶಾಲೆಯವರ ಇಂತಹ ಕಾರ್ಯಗಳು ಪ್ರಶಂಸನೀಯವಲ್ಲದೇ ಮತ್ತಿನ್ನೇನು?  ಇಂತಹ ಶಾಲೆಗಳು ಇನ್ನೂ ಹೆಚ್ಚು ಹೆಚ್ಚು ಬರಬೇಕು.  ಈ ಶಾಲೆಯ ಇನ್ನೊಂದು ವೈಶಿಷ್ಟ್ಯತೆ ಎಂದರೆ ಈಜು, ಕರಾಟೆ, ಸಂಗೀತ, ಆಟಗಳು ಇತ್ಯಾದಿಗಳಲ್ಲಿ ಒಂದನ್ನು ಮಕ್ಕಳು ಅವಶ್ಯಕವಾಗಿ ಕಲಿಯಬೇಕು.  ನನ್ನ ಮಗನನ್ನು ಈಜುವಿಕೆಗೆ ಕಳುಹಿಸುತ್ತಿರುವೆ.  ನೀರಿನಲ್ಲಿ ಈಜಲು ಕಲಿತವನು ಜೀವನದಲ್ಲೂ ಈಜಬಹುದೆಂಬ ಅನಿಸಿಕೆಯಲ್ಲಿ.

ವಿಭಾಗಗಳು
ಲೇಖನಗಳು

ಸವಿ ನೆನಪುಗಳು ಬೇಕು …

ಸವಿ ನೆನಪುಗಳು ಬೇಕು

ಸವಿಯಲೀ ಬದುಕು

 

ಕವಿಯ ಈ ಮಾತುಗಳು ಎಲ್ಲರಿಗೂ ಹಿತವಾದುದು.

 

ಸಿಹಿ ಎಂದರೇನು? ಅದರ ಅನುಭವ ಆಗುವುದಾದರೂ ಹೇಗೆ?  ಸಿಹಿ ಎಲ್ಲರಿಗೂ ಒಂದೇ ತೆರನಾದ ರುಚಿಯನ್ನು ಇತ್ತೀತೇ?

ಆದರೆ ಕಹಿಯ ರುಚಿಯನ್ನು ಅರಿತ ನಂತರವೇ ಸಿಹಿಯ ರುಚಿಯನ್ನು ಅರಿತರೆ ಆಗ ಆಗುವ ಆನಂದವೇ ವಿಶೇಷ. 

 newyr_sunrise.jpg

ನಾನು ನೋಡಿದಂತೆ 1993ರಿಂದ ಈಚೆಗೆ ಮುಂಬಯಿಯಲ್ಲಿ ಪ್ರತಿ ವರ್ಷವೂ ಒಂದಲ್ಲ ಒಂದು ಅವಘಢಗಳು ಸಂಭವಿಸುತ್ತಲೇ ಇವೆ.   ೧೯೯೩ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಗೆಗಿನ ವಿಚಾರಣೆ 13-14 ವರ್ಷಗಳು ನಡೆದು, ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ.  ವಿಚಾರಣೆ ಹೇಗೇ ನಡೆದರೂ ಈ ಮಹಾನಗರಿಯಲ್ಲಿ, ಬಿದ್ದ ಪೆಟ್ಟಿನ ನೋವು ಬಹಳ ಬೇಗ ಮಾಸಿ ಹೋಗುವುದು ಒಂದು ವಿಶೇಷದ ಸಂಗತಿ.  ಕಳೆದ ವರ್ಷ ಒಂದು ದಿನದಲ್ಲಿ ಎಂದೂ ಕಂಡರಿಯದ, ಕೇಳರಿಯದ ಆದ ವಿಪರೀತ ಮಳೆ, ಅದರಿಂದಾಗಿ ಇಡೀ ಮಹಾನಗರಿಯೇ ತತ್ತರಿಸಿದ್ದು, ಅದರಿಂದಾದ ಅಸ್ತವ್ಯಸ್ತ ಜೀವನ,  ಮರಳಿ ಚಿಮ್ಮಿದ ಸಾಮಾನ್ಯಕರ ಜನಜೀವನವನ್ನು ಮತ್ತು ಅನತಿ ಕಾಲದಲ್ಲಿಯೇ ಅದನ್ನು ಮರೆತದ್ದು ಇನ್ನೊಂದು ವಿಶೇಷದ ಸಂಗತಿ.  ಇಂತಹ ಸ್ಥಿತಿಯನ್ನು ಎದುರಿಸಿ ಮುಂದಿನ ಒಂದು ವರ್ಷ ಏನೂ ಕೆಡುಕಾಗದಂತೆ ಇದ್ದರೆ ಸವಿಯನ್ನು ಮೆದ್ದಂತೆಯೇ ಅಲ್ವೇ?  ಅದೇ ನನ್ನ ಆಶಯ. 

 

ಇದೇ ರೀತಿಯಲ್ಲಿ, ಈ ವರ್ಷ ಅಂದರೆ, 2006ನೆಯ ಇಸವಿಯ ಜುಲಾಯಿ ಹನ್ನೊಂದರಂದು ಮುಂಬಯಿಯ ಲೋಕಲ್ ಟ್ರೈನುಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿಂದಾದ ಸಾವು ನೋವುಗಳನ್ನು ಅಷ್ಟು ಸುಲಭದಲ್ಲಿ ಮರೆಯಲಾದೀತೇ?  ಅದರಲ್ಲೂ ಆ ದೃಶ್ಯವನ್ನು ನನ್ನ ಕಣ್ಣುಗಳಿಂದಲೇ ನೋಡಿದ ಮೇಲೂ?  ವಿಶೇಷವೆಂದರೆ, ಆ ಗಾಯ ಮುಂಬಯಿಕರರ ಮನಸ್ಸುಗಳಿಂದ ಬಹುಬೇಗ ಮಾಗಿ ಮಾಯವಾಯಿತು.  ಇದಕ್ಕೆ ಕಾರಣ ನೊಂದವರಿಗೆ ಇತರರು ನೀಡಿದ ಸಾಂತ್ವನ ಮತ್ತು ಸಹಾಯ ಹಸ್ತ.    ಅದೂ ಅಲ್ಲದೇ ಈ ಘಾಸಿಯಿಂದ ನೊಂದವರಿಗೆ ಮತ್ತು ನೋಡುಗರಿಗೆ ಜೀವನವೆಂದರೇನು, ಜೀವನದಲ್ಲಿ ಸಹಬಾಳ್ವೆಯ ಮಹತ್ವವೇನು ಎಂಬುದರ ಅರಿಯುವಂತಾಯಿತು.  ಈಗೀಗ ಪ್ರತಿ ವರ್ಷವೂ ಒಂದಲ್ಲ ಒಂದು ಕಾರಣಗಳಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದೆ.  ಆದರೂ ಹಿಂದೆಯೇ ಮಾನವೀಯತೆಯ ಮೆರೆತದಿಂದ ಎಲ್ಲವನ್ನೂ ಮರೆಯುವಂತಾಗುತ್ತಿದೆ.  ಈ ಘಟನೆಯಾದ ಸ್ವಲ್ಪ ದಿನಗಳಲ್ಲಿಯೇ, ಈ ವರ್ಷವೂ ಕಳೆದ ವರ್ಷದಂತೆ ಮಳೆಯ ಆರ್ಭಟದಿಂದ ಒಂದು ದಿನ ಲೋಕಲ್ ಟ್ರೈನ್‌ಗಳು ಸಾಮಾನ್ಯದ ಸಂಚಾರ ಮಾಡಲಾಗದೇ ಜನಜೀವನ ಅಸ್ತವ್ಯಸ್ತವಾಗಿದ್ದಿತು.  ನಂತರ ಎಲ್ಲವೂ ಸಹತ ಸ್ಥಿತಿಗೆ ಬಂದಿತು.  ಇಂತಹ ಕಹಿಯ ರುಚಿಯನ್ನು ಉಂಡು ಬಹು ಬೇಗ ಮರೆಯುವುದು ಸಿಹಿಯನ್ನು ಮೆದ್ದಂತೆಯೇ ಅಲ್ಲವೇ?

 

2007ರಲ್ಲಿ ಇಂತಹ ಯಾವುದೂ ಅಹಿತಕರ ಘಟನೆಗಳು ನಡೆಯಲಿರಲೆಂದು ಆಶಿಸುವೆ.  ಹಾಗೆ ನಡೆದರೂ ಅದನ್ನು ಸಂಭಾಳಿಸುವ ಶಕ್ತಿಯನ್ನು ಆ ಸರ್ವಶಕ್ತನು ಕರುಣಿಸಲಿ, ಎಂದು ಬೇಡುವೆ.  ಹಾಗೆ ನಡೆಯದಿದ್ದಲ್ಲಿ, ಜನಜೀವನ ಇನ್ನೂ ಉತ್ತಮಕರವಾಗಿರುವುದರಲ್ಲಿ ಸಂಶಯವೇ ಇಲ್ಲ.  ಹೊಡೆದಾಟ, ದಳ್ಳುರಿ, ವೈಮನಸ್ಯ, ಜಾತಿ, ಮತ, ಧರ್ಮ, ವರ್ಣ ದ್ವೇಷಗಳಿಲ್ಲದ ಮತ್ತು ಕೋಮು ಸೌಹಾರ್ದಯುತ ಮಿಳಿತ ಜೀವನವನ್ನು ನಿರೀಕ್ಷಿಸುವೆ.  ಇಷ್ಟಲ್ಲದೇ ಜಗತ್ತಿನಲ್ಲಿರುವ ಎಲ್ಲ ಮಕ್ಕಳಿಗೂ (ಹೆಚ್ಚಿನದಾಗಿ ಹಿಂದುಳಿದ ದೇಶಗಳು),  ಮೂಲಭೂತ ಕಲಿಕೆ ದೊರೆಯುವ ಅವಕಾಶ ಸಿಗಲಿ.  ಇದರಿಂದಾಗಿ, ಎಲ್ಲರೂ ವಿದ್ಯಾವಂತರಾಗಿ, ಜಗತ್ತಿನ ಆಗು ಹೋಗುಗಳನ್ನು ತಿಳಿಯಬಲ್ಲರು.  ಜೀವನದಲ್ಲಿ ಎಲ್ಲಿ ಎಡವುತ್ತಿರುವೆವೆಂಬ ಅರಿವಾಗಿ  ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬಹುದು.  ವಿದ್ಯಾವಂತರಾಗಿ ಉತ್ತಮ ಉದ್ಯೋಗಿಗಳಾಗುವರು. ನಿರುದ್ಯೋಗ ಸಮಸ್ಯೆ ನಿರ್ಮೂಲನವಾಗುವುದರಿಂದ ಬಡತನ ನಿರ್ಮೂಲನವಾಗುವುದು.  ಬಾಳ್ವೆಯ ಮಟ್ಟ ಹಿರಿದಾಗುವುದು.  ಹೆಣ್ಣುಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗುವಂತಾದರೆ, ನಿಯೋಜಿತ ಕುಟುಂಬಗಳ ಫಲದ ಅನುಭವವಾಗಿ ಸಮಾಜ ಉತ್ತಮ್ಮ ಸ್ಥಿತಿಗೇರುವುದು.  ಇದರಿಂದ ದೇಶಗಳ ಉನ್ನತಿಯಾಗುವುದರಲ್ಲಿ ಸಂಶಯವಿಲ್ಲ. ಆರ್ಥಿಕ ಸ್ವಾವಲಂಬನೆ ದೊರೆಯುವುದು. ಎಲ್ಲ ದೇಶಗಳೂ ಒಂದೇ ಮಟ್ಟದಲ್ಲಿ ಇರುವಂತಾದರೆ, ದೇಶೀಯ ಮಟ್ಟದಲ್ಲಿ ವೈಮನಸ್ಯ ಕಡಿಮೆಯಾಗುವುದು.  ಎಲ್ಲ ದೇಶಗಳೂ ಒಂದಾಗುವ ಸಾಧ್ಯತೆ ಇರುವುದು.   ಹಿರಿಯರು ಕಂಡ ವಿಶ್ವವೆಲ್ಲ ಒಂದೇ, ಎಲ್ಲರೂ ವಿಶ್ವಮಾನವರುಎಂಬ ಕನಸು ನನಸಾಗುವುದು. ಈ ದಿಸೆಯಲ್ಲಿ ಒಂದು ಹೆಜ್ಜೆಯನ್ನಾದರೂ ಮುಂದೆ ಹಾಕಲು 2007ನೆಯ ಇಸವಿ ನಾಂದಿಯಾಗಲಿ ಎಂದು ಆಶಿಸುವೆನು.  ಈ ಶುಭಸಂದರ್ಭದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಒಂದು ಸಣ್ಣ ಕವನವನ್ನು ನಿಮ್ಮ ಮುಂದೆ ಇರಿಸಬಯಸುವೆನು. 

 

ಕಾಲ ಉರುಳಿ ಉರುಳಿ ಸಾಗುತಿದೆ

ತಡೆಯಲ್ಯಾರಿಂದಲೂ ಆಗದೇ?

ಆಗದು, ಏನೇ ಮಾಡಬಲ್ಲ, ಏನನೂ ತಡೆಯಬಲ್ಲ

ಹುಲುಮಾನವನಿಂದಂತೂ ಅದಾಗದು!

 

ಜಗಮೊಂಡನಂತೆ ನಿಂತಿಹೆನು ನಾನಿಲ್ಲೇ

ನನ್ನಲಾಗುತಿಹ ಬದಲಾವಣೆಯೇ ಹೇಗೆ ತಡೆಯಬಲ್ಲೆ

ಈಗಿಹುದು, ಕ್ಷಣದಲ್ಲಿಲ್ಲ

ಕಣ್ಮುಚ್ಚಿ ತೆರೆಯಲು ಏನೇನೋ ಬಂದಿವೆಯಲ್ಲ!

 

ಐದರಂತಾಗಿರಲಿಲ್ಲ ಆರು

ಆರರಂತಾಗುವುದಿಲ್ಲ ಏಳು

ಎಲ್ಲ ವರುಷಗಳಲ್ಲೂ ಏಳು ಬೀಳು

ಬರುವ ವರುಷದಲಿ ಹಾಗಾಗದಿರಲೆಂದು ಕೇಳು

 

ಬಲ್ಲವರು ನುಡಿದುದು

ಬದಲಾವಣೆಯೇ ಜಗದ ನಿಯಮ

ಮೋಡದಿ ಕಾಲೂರಿ ನಡೆಯುವುದೂ

ಇನ್ನೊಂದು ಆಯಾಮ

 

ಹರಿದು ಹಂಚಿ ಹೋಗಿಹುದು ಈ ದಿರಿಸು

ತೇಪೆ ಹಚ್ಚಿ ಒಟ್ಟು ಮಾಡಿದರೆ ನೋಡಲು ಸೊಗಸು

ಏರಲಿ ಮೈ ಮೇಲೆ ಹೊಸ ವರುಷದ ಹೊಸ ಬಟ್ಟೆ

ಹಳೆಯ ನೆನಪು ಮಾಸದಿರುವಂತೆ ಮೂಲೆಯಲಿರಲಿ ಹಳೆ ಬಟ್ಟೆ

 

ಹೊಸ ವರುಷದಾಗಮನದಿ ಮನಗಳಲಿ ಹರುಷ

ಇದೇ ಎಲ್ಲರ ನಿರೀಕ್ಷೆ

ಕಳೆದುದ ಮತ್ತೆ ನಿರೀಕ್ಷಿಸುವುದು ಬೇಡ

ಹರುಷಕಾಗಿ ಎದುರಿಸಬಲ್ಲೆವು ಎಲ್ಲ ತೆರದ ಪರೀಕ್ಷೆ

 

ಎಲ್ಲರಿಗೂ ಒಳ್ಳೆಯದಾಗಲಿ.

 new-year.jpg

 

ವಿಭಾಗಗಳು
ಲೇಖನಗಳು

ವಿಕೃತ ಮನಸ್ಸಿನವರು

ಈ ಲೇಖನ ಇಂದು ಇಲ್ಲಿ ಪ್ರಕಟವಾಗಿದೆ

ಸಂಪರ್ಕ ಕ್ರಾಂತಿ ಹೆಚ್ಚಾಗುತ್ತಿರುವಂತೆಯೇ, ಅಂತರ್ಜಾಲದಲ್ಲಿ ಜಾಲಾಡುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಚಾಟಿಂಗ್ ಎಂಬ ತಂತ್ರಜ್ಞಾನ ಜನರನ್ನು ಹತ್ತಿರವಾಗಿಸುತ್ತಿದ. ಮುಖತಃ ಸಂಪರ್ಕವಿಟ್ಟುಕೊಳ್ಳುವುದು ಕಡಿಮೆಯಾಗುತ್ತಿದೆ. ಹೀಗಾಗಿ ಆಚೆ ಬದಿಯಲ್ಲಿ ಸಂಪರ್ಕಿಸುತ್ತಿರುವುದು ಯಾರು ಎಂಬುದು ಮತ್ತು ಅವರ ನೈಜ ಸ್ವರೂಪವನ್ನು ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ (ಅಸಾಧ್ಯವೇನೂ ಅಲ್ಲ). ಜಾಲ ಸಂಪರ್ಕದಲ್ಲಿ ಮೊದ ಮೊದಲು ಕಟ್ಟುನಿಟ್ಟಾಗಿ ಮಡಿವಂತಿಕೆ ತೋರುವವರು, ಹಾಗೆಯೇ ಸಲುಗೆ ತೋರಿಸುವರು ಮತ್ತು ಮುಂದೆ ಇಲ್ಲ ಸಲ್ಲದ ಹರಟೆ, ಬೇರೆಯವರ ವೈಯಕ್ತಿಕ ವಿಷಯಗಳು, ಹುಚ್ಚು ಹುಚ್ಚಾದ ಮಾತುಕತೆಗಳ ಕಡೆಗೆ ತಿರುಗಿಸುವರು. ಒಬ್ಬರಿಗೊಬ್ಬರು ಬೈದಾಡಿ, ಜಗಳವಾಡಿ, ಮೂತಿ ತಿರುಗಿಸಿಕೊಂಡು ಹೋಗುವ ಮಟ್ಟಕ್ಕೆ ಹೋಗುವುದು. ಇಂತಹ ಕೆಲವು ಅನುಭವಗಳು ನನಗೂ ಆಗಿವೆ. ಅದಕ್ಕಾಗಿಯೇ ನಾನು ಚಾಟಿಂಗ್ ಮಾಡುವಾಗ ಬುರ್ಖಾ ಹಾಕಿರುತ್ತೇನೆ. ಬುರ್ಖಾ? ಅಲ್ಲ ಸ್ವಾಮಿ, ನನಗೆ ಜಗತ್ತು ಕಾಣಬೇಕು, ನನ್ನ ಮುಖ ಮಾತ್ರ ಯಾರಿಗೂ ಕಾಣಬಾರದೆಂದರೆ ಏನು ಮಾಡಬೇಕು, ಬೂಬಮ್ಮನವರ ತರಹ ಬುರ್ಖಾ ಹಾಕಿಕೊಳ್ಳಬೇಕು. ಚಾಟಿಂಗ್ ಅಥವಾ ಜಾಲ ಸಂಪರ್ಕದಲ್ಲಿ ಇಂತಹ ಸನ್ನಿವೇಶವನ್ನು ಇನ್‍ವಿಸಿಬಲ್ ಮೋಡ್ ಎಂದು ಕರೆಯುವರು.
net.jpg
ಹೀಗಿರುವಾಗಲೂ ಕೆಲವು ಛದ್ಮವೇಷಧಾರಿಗಳು ಕೆಣಕಲು ಬರುವರು. ಇಂತಹ ಒಂದು ಸನ್ನಿವೇಶವನ್ನು ಎದುರಿಸಿದ ನಾನು ಮತ್ತೆ ಚೇತರಿಸಿಕೊಂಡು ಬರಹಕ್ಕೆ ತೊಡಗಲು ಹತ್ತು ಹನ್ನೆರಡು ದಿನಗಳೇ ಬೇಕಾದುವು. ಎಲ್ಲರ ಮನವೂ ಬಹು ಸೂಕ್ಷ್ಮ. ದೇಹದಾರ್ಢ್ಯತೆ ಇದ್ದವರಿಗೂ ಕೂಡಾ ಮನಸ್ಸು ಸೂಕ್ಷ್ಮವಾಗಿರುವುದು. ಯಾವುದೋ ಒಂದು ಸಣ್ಣ ಅನುಭವದಿಂದ ಅವರು ಸಂಪೂರ್ಣವಾಗಿ ಜೀವನ ಶೈಲಿಯನ್ನೇ ಬದಲಿಸಬೇಕಾಗಬಹುದು. ದೈಹಿಕ ಬದಲಾವಣೆಯನ್ನೂ ಎದುರಿಸಬೇಕಾಗಬಹುದು. ಇದನ್ನು ದಿನ ನಿತ್ಯದ ಜೀವನದಲ್ಲಿ ನಾವೆಲ್ಲರೂ ಕಾಣುತ್ತಿರುವೆವು. ಹೀಗಿರುವಾಗ, ನಮ್ಮೊಂದಿಗೆ ಸಂವೇದಿಸುವ ಇತರರ ಮನವೂ ಸೂಕ್ಷ್ಮ ಎಂದು ತಿಳಿಯುವುದು ಅತ್ಯವಶ್ಯ. ನಮ್ಮ ತೀಟೆ ತೆವಲುಗಳನ್ನು ತೀರಿಸಿಕೊಳ್ಳಲು ಏನೋ ಮಾಡಲು ಹೋಗಿ, ಅವರಿಗೆ ನೋವುಂಟು ಮಾಡುವುದು ಸರಿಯಲ್ಲ ಎಂಬುದು ನನ್ನ ಭಾವನೆ. ಇತರರ ಮನಸ್ಸಿಗೆ ನೋವುಂಟು ಮಾಡುವುದೂ ಕೊಂದಂತೆ ಅಲ್ವೇ? ಭಕ್ತಿ ಭಂಡಾರಿ ಬಸವಣ್ಣನವರು ಹೇಳಿದ ಕೊಲಬೇಡ ಎಂಬುದು ಇಂತಹ ಕೃತ್ಯಕ್ಕೇ ಎಂದು ನಾನು ತಿಳಿಯುವೆ.

ಈ ಅಂತರ್ಜಾಲದಲ್ಲಿ ಕಾಲಿಟ್ಟ ಮೊದಲಿಗೆ ಬಿಳಿಯಾದುದೆಲ್ಲ ಹಾಲೆಂದು ತಿಳಿದಿದ್ದೆ. ಮುಕ್ತವಾಗಿ ಕೆಲವು ಮಿತ್ರರುಗಳೊಂದಿಗೆ ಚಾಟಿಸುತ್ತಿದ್ದೆ. ನನ್ನ ಮತ್ತು ಮಿತ್ರರ ನಡುವೆ ವಯೋ ಅಂತರ ಬಹಳವಾದರೂ, ಎಲ್ಲರ ಮನಸ್ಸಿನೊಳಗಿರುವ ಒಂದು ಕೋತಿಯಂತೆ ನನ್ನ ಮನಸ್ಸಿನಲ್ಲೂ ಇರುವ ಕೋತಿ ಬುದ್ಧಿ ಅವರಿಗೆ ಸರಿಯಾದಿ ಸಾಥಿ ನೀಡುತ್ತಿತ್ತು. ನನ್ನನ್ನು ಕಂಡರಿಯದ ಅವರುಗಳು, ನಾನೊಬ್ಬ ಬೇಕಾಬಿಟ್ಟಿ ಮನುಷ್ಯನೆಂದು ತಿಳಿದಿದ್ದರು ಎನಿಸುತ್ತದೆ. ಆದರೆ ಒಂದು ಸಣ್ಣ ಮಾತಿಗೂ ಅಧೋಮುಖನಾಗುವ ನನ್ನ ಬಗ್ಗೆ ಅವರಿಗರಿವಿರಲಿಲ್ಲ, ಎನಿಸುತ್ತದೆ. ಹೀಗೆಯೇ ಮಾತಿಗೆ ಮಾತು ಬೆಳೆಯುತ್ತಿದ್ದಾಗ, ಅವರ ವಯಸ್ಸಿಗನುಗುಣವಾಗಿ ನನ್ನ ಬಗ್ಗೆ ತುಚ್ಛವಾಗಿ ಒಂದು ಮಾತನಾಡಿದಾಗ ಮನ ಮುದುಡಿದ ನಾನು ಮತ್ತೆ ಅವರುಗಳೊಂದಿಗೆ ಸಂಪರ್ಕವನ್ನೇ ಬೆಳೆಸಲಿಲ್ಲ. ಆಗ ಈ ಬುರ್ಖಾ ಉಪಯೋಗಿಸುವುದರ ಬಗ್ಗೆ ತಿಳಿದೆ. ಅವರಿಂದ ದೂರವಾದೆ. ಅಂದಿನಿಂದ ಹತ್ತಿರವಾದವರೊಂದಿಗೆ ಮಾತ್ರ ಚಾಟಿಸುತ್ತಿರುವೆ. ಯಾರಿಂದಲೂ ತೊಂದರೆ ಆಗಿಲ್ಲ.
google1fb.gif
ಮೊನ್ನೆ ನಾನು ಇಂಟರ್‍ನೆಟ್ ಸಂಪರ್ಕ ಚಾಲನೆ ಮಾಡುತ್ತಿದ್ದಂತೆಯೇ, ಬುರ್ಖಾ ಹಾಕಿದ್ದರೂ ಒಬ್ಬ ಹೆಣ್ಣುಮಗಳು ನನ್ನೊಂದಿಗೆ ಚಾಟಿಸಲು ಹವಣಿಸಿದಳು. ನಾನು ಯಾರಿಗೂ ಕಾಣದಂತಿದ್ದರೂ ಅವಳಿಗೆ ಹೇಗೆ ತಿಳಿಯಿತು ಎಂಬ ಉತ್ಸುಕತೆಯಿಂದ, ಮತ್ತು ಹತ್ತಿರವಾದವರಿಗೆ ಮಾತ್ರ ನನ್ನ ಬುರ್ಖಾ ಗುಟ್ಟು ಗೊತ್ತಿದ್ದರಿಂದ, ಈಕೆಯೂ ನನ್ನ ಬಗ್ಗೆ ತಿಳಿದವಳು ಇರಬೇಕೆಂದು ಅಂದುಕೊಂಡೆ. ಚಾಟಿಸಲು ಅನುಮತಿ ನೀಡಿದೆ. ಮೊದಲಿಗೇ ಅವಳಿಗೆ ನನ್ನ ಬಗ್ಗೆ ತಿಳಿಸಿದೆ. ನನ್ನ ಚಿಂತನೆಯೆಲ್ಲವೂ ಅಧ್ಯಾತ್ಮದೆಡೆಗೆ ಮತ್ತು ಜೀವನದ ಕಟ್ಟ ಕಡೆಯ ಹಂತದೆಡೆಗೆ ನನ್ನ ಓಟ ಎಂದೂ ತಿಳಿಸಿದೆ. ನನ್ನ ಹೆಸರು ಹೇಗೆ ತಿಳಿಯಿತು ಎಂದದ್ದಕ್ಕೆ, ಯಾಹೂ ಎಂದರೆ ಎಲ್ಲವೂ ಸಿಗುವುದು ಎಂದಿದ್ದಳು. ಇದರ ಬಗ್ಗೆ ನನಗೆ ಏನೇನೂ ತಿಳಿದಿರಲಿಲ್ಲ. ಸ್ನೇಹ ಬೆಳೆಸಲು ವಯಸ್ಸಿನ ಅಂತರವೇನು ಎಂದು ಆಕೆ ಕೇಳಿದ್ದಕ್ಕೆ, ಸ್ನೇಹ ಏಕೆ ಬೇಕೆಂದು ನಾನು ಕೇಳಿದ್ದೆ. ಅದಕ್ಕವಳು ಉತ್ತರವಾಗಿ, ತಾನು ಶಾಪಿಂಗ್ ಮತ್ತು ಸಿನೆಮಾ ನೋಡಲು ಅನುಕೂಲಕರವಾಗಬೇಕೆಂದು ಸ್ನೇಹ ಬೇಕು ಎಂದು ತಿಳಿಸಿದ್ದಳು. ಇದಕ್ಕಾಗಿ ನನ್ನ ಕಿರಿಯ ಸ್ನೇಹಿತರು ಯಾರಾದರು ಇದ್ದರೂ ತಿಳಿಸಿ ಎಂದು ಹೇಳಿದ್ದಳು. ಹಾಗೆ ಸ್ನೇಹಿತರಾಗಿ ಬಂದವರು ಏನಾದರೂ ತೊಂದರೆ ಎಸಗುವ ಸಾಧ್ಯತೆ ಇಲ್ಲವಾ ಎಂದು ಕೇಳಿದ್ದಕ್ಕೆ, ಹೆಚ್ಚಿನದಾಗಿ ಇನ್ನೇನು ಮಾಡಬಲ್ಲರು, ಮುಟ್ಟಬಹುದಷ್ಟೆ, ಅದು ನನಗೆ ಪರವಾಗಿಲ್ಲ ಎಂದಿದ್ದಳು. ಇಷ್ಟರ ವೇಳೆಗೆ ನನಗೇನೋ ಸಂಶಯ ಬಂದು, ನೀನು ನಕಲೀ ಶ್ಯಾಮ ಇದ್ದ ಹಾಗಿದೆಯಲ್ಲ ಎಂದಿದ್ದೆ. ನಿಮಗೆ ಹೇಗೆ ತಿಳಿಯಿತು, ನೀವು ಹೇಳುವುದು ಸುಳ್ಳು ಎಂದುತ್ತರ ಬಂದಿತು. ತಕ್ಷಣ ನಾನು ದೂರ ಸರಿದೆ.

ಈ ವಿಷಯವನ್ನು ಯಾರೊಂದಿಗೆ ಹಂಚಿಕೊಳ್ಳುವುದೆಂದು ತಿಳಿಯಲಿಲ್ಲ. ಆಗ ನನಗೆ ನೆನಪಾದವನು, ನನ್ನ ಶಿಷ್ಯ ರಾಮಣ್ಣ (ಅವನನ್ನು ಹೆಸರಿಸುವುದು ಸರಿಯಲ್ಲ – ಇದೊಂದು ನಕಲಿ ಹೆಸರನ್ನು ನಮೂದಿಸಿರುವೆ). ಈ ರಾಮಣ್ಣ ಇದೇ ತರಹ ನನಗೆ ಪರಿಚಯವಾಗಿದ್ದ. ಏನೋ ತರಲೆ ಕೆಲಸ ಮಾಡಿದಾಗ, ನನ್ನ ಕೈಗೆ ಸಿಕ್ಕಿ ಛೀಮಾರಿ ಹಾಕಿಸಿಕೊಂಡಿದ್ದ. ಅದೊಂದು ದೊಡ್ಡ ಕಥೆ ಬಿಡಿ. ಮುಂದೊಮ್ಮೆ ಅದಕ್ಕಾಗಿಯೇ ಒಂದು ಪ್ರತ್ಯೇಕ ಪ್ರಬಂಧ ಬರೆಯುವೆ. ಅವನು ಪ್ರೇಮ ವಿವಾಹದ ಕಷ್ಟದಲ್ಲಿ ಸಿಲುಕಿದ್ದಾಗ ಸ್ವಲ್ಪ ಸಹಾಯಿಸಿದ್ದೆ. ಅಂದಿನಿಂದ ಅವನು ನನಗೆ ಪಟ್ಟ ಶಿಷ್ಯನಾಗಿದ್ದ. ಇಂತಹ ವಿಷಯಗಳನ್ನು ಕೆದಕಿ ನನಗೆ ಸಹಾಯಿಸಲು ಇವನೇ ಸರಿಯೆಂದು, ನಾನು ಚಾಟಿಸಿದ್ದ ಪುಟವನ್ನು ಅವನಿಗೆ ಕಳುಹಿಸಿದ್ದೆ. ಸ್ವಲ್ಪವೇ ಸಮಯದಲ್ಲಿ, ನನಗೆ ಅವನು ಉತ್ತರಿಸಿ, ‘ನೀವು ಚಾಟಿಸಿದುದು, ಹುಡುಗಿಯೊಂದಿಗಲ್ಲ, ಅವನೊಬ್ಬ ತುಡುಗ ಹುಡುಗ’ ಎಂದು ತಿಳಿಸಿದ್ದ. ಆತನ (ಉರುಫ್ ಆಕೆ) ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದ್ದುದರಿಂದ, ರಾಮಣ್ಣನ ಅಂಚೆಯ ಪ್ರತಿಯನ್ನು ಅವರಿಗೆ ಕಳುಹಿಸಿ ಏನನ್ನೂ ಹೇಳಲಿಲ್ಲ. ಆದರೆ ಅವರೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲು ಇಚ್ಛೆ ಆಗಲಿಲ್ಲ. ಏಕೆ ಗೊತ್ತೇ? ಎಲ್ಲರ ಮನದಲ್ಲೂ ಒಂದು ಕೋತಿ ಬುದ್ಧಿ ಇರುವಂತೆ ಅವರಲ್ಲೂ ಹೀಗಿರುವುದು ಸಹಜ. ಇನ್ನು ಮುಂದೆ ಅವರು ನನ್ನೊಂದಿಗೆ ಹೀಗೆ ನಡೆದುಕೊಳ್ಳಲಾರರು ಎಂದು ನನಗೆ ಖಚಿತವಾಗಿದೆ. ಹಾಗಾಗಿ ಸುಮ್ಮನಾದೆ.

ಈಗೀಗ ಗಂಡು ಹೆಣ್ಣುಗಳಿಗೆ ಸರಿ ಸಮ ಜೋಡಿ ಸಿಗುವುದು ಬಹಳ ಕಷ್ಟವಾಗಿದೆ, ಎಂದು ನನಗನ್ನಿಸುತ್ತಿದೆ. ಹೆಣ್ಣುಮಕ್ಕಳೂ ಹೆಚ್ಚಿನ ಓದು ಮಾಡುವುದರಿಂದ, ಜೀವನದ ಬಂಡಿಯನೆಳೆಯಲು ಸರಿ ಸಮ ಜೋಡಿಯಾಗಿ ಗಂಡುಗಳು ಸಿಗುವುದು ಕಷ್ಟ. ಹಾಗೆ ಸಿಗುವ ಗಂಡು ಅವರ ಸಮಕ್ಕಾದರೂ ಓದಿರಬೇಕು, ಅವರಂತೆ ಒಳ್ಳೆಯ ಕೆಲಸದಲ್ಲಿರಬೇಕು. ಒಂದೇ ಜಾತಿ, ಜಾತಕ, ನಕ್ಷತ್ರ, ಗೋತ್ರ ಇತ್ಯಾದಿಗಳನ್ನು ನೋಡಿ ಸರಿ ಜೋಡಿಗಳನ್ನು ಕೂಡಿಸುವುದು ಕಷ್ಟದ ಕೆಲಸ. ಒಮ್ಮೊಮ್ಮೆ ಗಂಡಿಗೂ ಹೆಣ್ಣಿಗೂ ಸರಿಯಾದ ಸಾಮ್ಯತೆ ಇರುವುದಿಲ್ಲ. ಹೀಗೆಯೇ ಮದುವೆಯ ವೇಳೆಗೆ ವಯಸ್ಸು ಮಿತಿ ಮೀರಿರುವ ಸಾಧ್ಯತೆಗಳಿವೆ. ಅಂತಹ ಸಂದರ್ಭಗಳಲ್ಲಿ, ಕೆಲವರು ತಮ್ಮ ತೆವಲನ್ನು ತೀರಿಸಿಕೊಳ್ಳಲು, ಇಂತಹ ವಿಕೃತ ಕೆಲಸಗಳನ್ನು ಮಾಡುವರು. ಅವರ ಮನಸ್ಸು ವಿಕೃತಗೊಂಡು, ಇತರರಿಗೆ ನೋವನುಂಟು ಮಾಡುವುದು ಸಹಜ. ಇದಕ್ಕೇನಾದರೂ ಮದ್ದು ನಿಮ್ಮಲ್ಲಿದೆಯೇ? ಇಂತಹ ಸಂದರ್ಭದಲ್ಲಿ ನೀವೂ ಸಿಲುಕಿದ್ದೀರಾ? ಸಿಲುಕಿದ್ದಿರಾ? ಸಿಲುಕಿಲ್ಲದಿದ್ದರೆ ಸಿಲುಕುವ ಸನ್ನಿವೇಶ ಬರಬಹುದು, ಸ್ವಲ್ಪ ಹುಷಾರಿನಲ್ಲಿರಿ.

ಹಾಂ ಹಾಂ ಹಾಂ! ಇದೂ ಒಂದು ವಿಷಯ ಎಂದು ಬರೆಯುವುದೇ? ಎಂಬ ಭಾವನೆ ನಿಮ್ಮೆಲ್ಲರ ಮನಗಳಲಿ ಮೂಡುವುದು ಸಹಜ. ನನ್ನ ಮನದಲಿ ಕೊರೆಯುತಿರುವ ಹುಳುವೊಂದನ್ನು ಹೊರಹಾಕಲಷ್ಟೇ ನಾ ಬರೆವುದು. ಇನ್ನು ನನ್ನ ಮನಸ್ಸು ನಿರಾಳವಾಗಿರಬಹುದು.

ವಿಭಾಗಗಳು
ಲೇಖನಗಳು

ಮುಂಬಯಿ ಲೋಕಲ್ ಪ್ರಯಾಣ

ಮುಂಬಯಿನಲ್ಲಿ ಎಲ್ಲ ಕಲಿಯಲೇಬೇಕಿರುವ ಇನ್ನೊಂದು ಪಾಠ ಅಂದ್ರೆ
ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ.


ನಾನು ಈ ಹಿಂದೊಮ್ಮೆ ಇದರ ಅನುಭವವನ್ನು ಕವನ ರೂಪದಲ್ಲಿ ನಿರೂಪಿಸಿದ್ದೆ. ಅದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಹೇಳಲು ಪ್ರಯತ್ನಿಸಿದ್ದೀನಿ. ಆ ಕವನವನ್ನೂ ಈ ಕೆಳಗೆ ಸೇರಿಸಿದ್ದೀನಿ.


ಈ ಹಿಂದೆಯೇ ಹೇಳಿರುವಂತೆ ಮುಂಬಯಿ ಒಂದು ದ್ವೀಪ. ಎಲ್ಲ ಕಡೆಯೂ ನೀರು ಸುತ್ತುವರಿದು ಭೂಮಿಯ ಭಾಗ ಬಹಳ ಕಡಿಮೆ. ಹಾಗಾಗಿ ವಸತಿಗಾಗಿ ಸಿಗುವ ಜಾಗ ಬಹಳ ಕಡಿಮೆ. ಅಲ್ಲದೇ ಇದು ದೇಶದ ವಾಣಿಜ್ಯ ರಾಜಧಾನಿಯಾಗಿ ಇಲ್ಲಿ ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಬರುವ ಜನಗಳು ಬಹಳ. ದಿನಂಪ್ರತಿ ಒಂದು ಕೋಟಿಗೂ ಮಿಕ್ಕ ಜನಗಳ ಸಂದಣಿ ಇದ್ದೇ ಇರುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಿಬರಲು ಲೋಕಲ್ ಟ್ರೈನ್ ಗಳನ್ನೇ ನಂಬುವುದು ಬಹಳವಾಗಿ ಇದು ಬಹಳ ಅವಶ್ಯವಾದ ಸಾರಿಗೆಯಾಗಿದೆ. ಒಂದು ಸಾವಿರ ಜನಗಳನ್ನು ಹೊತ್ತೊಯ್ಯಲು ಅವಕಾಶವಿರುವ ಒಂದು ಗಾಡಿಯು ೫೦೦೦ ದಿಂದ ೬೦೦೦ ಜನಗಳವರೆಗೂ ಹೊತ್ತೊಯ್ಯಬೇಕಾಗುವುದು. ಅದರಲ್ಲಿ ಅಷ್ಟು ಸಾಮರ್ಥ್ಯವಿದೆ. ಅದೂ ಬೆಳಗ್ಗೆ ೩.೪೫ ಕ್ಕೆ ಪ್ರಾರಂಭವಾಗುವ ಸೇವೆ ರಾತ್ರಿ ೨ ಘಂಟೆಗಳವರೆಗೂ ನಿರಂತರ ಸಾಗುತ್ತಲೇ ಇರುವುದು. ಜನದಟ್ಟಣೆಯ ಸಮಯವಾದ ಬೆಳಗ್ಗೆ ೬ರಿಂದ ರಾತ್ರಿ ೧೧ ರವರೆಗೆ ಮೂರು ನಿಮಿಷಗಳ ಅಂತರದಲ್ಲಿ ಒಂದೊಂದು ಗಾಡಿಗಳು ಒಂದರ ಹಿಂದೊಂದರಂತೆ ಅಡ್ಡಾಡುತ್ತಲೇ ಇರುವುವು.

mumbai-local-train.jpg

ಚರ್ಚ್ ಗೇಟ್ ನಿಂದ ಬೊರಿವಿಲಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಕಲ್ಯಾಣದವರೆವಿಗೆ ನಾಲ್ಕು ಹಳಿಗಳಿವೆ. ಎರಡೆರಡು ಫಾಸ್ಟ್ ಮತ್ತು ಸ್ಲೋ ಗಾಡಿಗಳಿಗೆ. ಅವುಗಳಲ್ಲಿ ಒಂದು ಹೋಗಲು ಮತ್ತೊಂದು ಬರಲು. ಹಾಗಾಗಿ ಗಾಡಿಗಳು ಒಂದಕ್ಕೊಂದು ಮಧ್ಯೆ ಬರುವ ಸಾಧ್ಯತೆ ಕಡಿಮೆ. ಫಾಸ್ಟ್ ನಿಂದ ಸ್ಲೋ ಟ್ರ್ಯಾಕ್ ಗೆ ಬದಲಿಸುವಾಗ ಮಾತ್ರ ಹಾಗೆ ಬರುವ ಸಾಧ್ಯತೆ ಇದೆ. ಮತ್ತೆ ಇಲ್ಲಿಯ ಸಿಗ್ನಲ್ ಪದ್ಧತಿಯಲ್ಲಿ ಹೆಚ್ಚಿನದಾಗಿ ಮಾನವ ಮಧ್ಯಸ್ಥಿಕೆ ಕಡಿಮೆ. ಎಲ್ಲವೂ ಆಟೊಮ್ಯಾಟಿಕ್. ಹೆಚ್ಚಿನ ಲೋಕಲ್ ಟ್ರೈನ್ ಗಳಲ್ಲಿ ೯ ಕೋಚ್ ಗಳಿವೆ. ಇಲ್ಲಿಯ ಜನಸಂದಣಿ ಪ್ರತಿ ದಿನವೂ ಹೆಚ್ಚುತ್ತಿದ್ದು ಈ ಗಾಡಿಗಳು ಜನಗಳನ್ನು ಹೊತ್ತೊಯ್ಯಲು ಬಹಳ ಕಡಿಮೆ ಎನಿಸಿವೆ. ಹಾಗಾಗಿ ಕೆಲವು ಗಾಡಿಗಳಿಗೆ ೯ ರಿಂದ ೧೨ ಕೋಚ್ ಗಳನ್ನು ಸೇರಿಸಿದ್ದಾರೆ. ಈ ಗಾಡಿಗಳನ್ನು ಮೂರು ಮೂರು ಕೋಚ್ ಗಳ ಯೂನಿಟ್ ಆಗಿ ವಿಂಗಡಿಸಿದ್ದಾರೆ. ಎ, ಬಿ, ಸಿ ಎಂದು. ಎ ನಲ್ಲಿ ಅರ್ಧ ಭಾಗ ಮೊದಲ ದರ್ಜೆ ಮತ್ತರ್ಧ ಎರಡನೇ ದರ್ಜೆ. ಬಿ ಕೋಚ್ ನ ಮೇಲ್ಭಾಗದಲ್ಲಿ ಪೆಂಟೋಗ್ರಾಫ್. ಸಿ ಯಲ್ಲಿ ಮೋಟಾರ್. ಹೀಗೆ ೯ ಕೋಚ್ ಗಾಡಿಗಳಲ್ಲಿ ಮೂರು ಮೋಟಾರ್ ಮತ್ತು ೧೨ ಕೋಚ್ಗಳಲ್ಲಿ ೪ ಮೋಟಾರ್ ಗಳು. ಪೆಂಟೋಗ್ರಾಫ್ ಅಂದ್ರೆ ಆರು ಮೂಲೆಯ ಕಬ್ಬಿಣದ ಕಡ್ಡಿ ಮೇಲ್ಗಡೆ ಹಾಯುವ ವಿದ್ಯುತ್ ತಂತಿಗೆ ತಗುಲಿಕೊಂಡಿರುತ್ತದೆ. ಇಲ್ಲಿ ಇದಕ್ಕಾಗಿಯೇ ವಿಶೇಷವಾಗಿ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಿದ್ದಾರೆ. ವಿದ್ಯುತ್ ಕಡಿತ ಆಗುವ ಸಾಧ್ಯತೆಗಳು ಬಹಳ ಕಡಿಮೆ.

211955-safe_local_travel-mumbai.jpg
ಇತ್ತೀಚೆಗೆ ಜನದಟ್ಟಣೆ ಜಾಸ್ತಿಯಾಗಿ ರೈಲ್ವೇ ಸಾರಿಗೆಯಲ್ಲಿ ಸುಧಾರಣೆ ತರಲು ಜಪಾನಿನ ತಂತ್ರಜ್ಞರನ್ನು ಕರೆಸಿದ್ದರು. ಇಲ್ಲಿಯ ಸಿಗ್ನಲಿಂಗ್ ವ್ಯವಸ್ಥೆಯನ್ನು ಪರೀಕ್ಷಿಸಿದ ಆ ತಂತ್ರಜ್ಞರು – ನಮಗೆ ಹೆಚ್ಚಿಗೇನೂ ಹೊಳೆಯುತ್ತಿಲ್ಲ, ಇದಕ್ಕಿಂತ ಇನ್ನೇನೂ ಹೆಚ್ಚು ಸುಧಾರಣೆ ಮಾಡಲಾಗುವುದಿಲ್ಲ, ಇನ್ನೂ ನಾವೇ ಇದರಿಂದ ಕಲಿಯಬೇಕಿದೆ ಎಂದರಂತೆ. ಈ ಸಿಗ್ನಲಿಂಗ್ ವ್ಯವಸ್ಥೆಯನ್ನು ತಂದವರು ಬ್ರಿಟಿಷರು. ನೋಡಿ ಇಷ್ಟು ವರ್ಷಗಳಾದರೂ ಎಂದೂ ಕೆಡದೇ ನಿರಂತರವಾಗಿ ಕೆಲಸ ಮಾಾಡುತ್ತಿದೆ.

ಇನ್ನು ಲೋಕಲ್ ಸ್ಟೇಷನ್ ಗಳ ಅಂತರ ೧ ಕಿಲೋಮೀಟರ್ ನಿಂದ ಹಿಡಿದು ೪-೫ ಕಿಲೋಮೀಟರ್ ಗಳವರೆಗಿವೆ. ಪ್ರತಿ ಸ್ಟೇಷನ್ ಗಳಲ್ಲೂ ಗಾಡಿ ೧೫ ರಿಂದ ೨೦ ಸೆಕೆಂಡ್ ಗಳಷ್ಟು ಕಾಲ ನಿಲ್ಲುವುದು. ಅಷ್ಟರೊಳಗೆ ಇಳಿಯುವವರು ಇಳಿದು ಹತ್ತುವವರು ಹತ್ತಬೇಕು. ಹತ್ತುವವರು ಬಾಗಿಲಿನ ಕೊನೆಗಳಲ್ಲೂ ಇಳಿಯುವವರು ಮಧ್ಯ ಭಾಗದಲ್ಲೂ ಇಳಿಯುವರು. ಮದುಕರು, ಮಕ್ಕಳು, ಹುಡುಗರು, ಇತ್ಯಾದಿಗಳೆಲ್ಲರೂ ಈ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇಂತಹ ಸ್ಥಿತಿಯನ್ನು ನಮ್ಮೂರುಗಳಲ್ಲಿ ಕಾಣಬಹುದೇ? ನಿಲ್ದಾಣ ಬಂದ ಮೇಲೆ ಜಾಗ ಬಿಟ್ಟು ಮೇಲೇಳುವವರು ಇಷ್ಟು ಅಲ್ಪಾವಧಿಯಲ್ಲಿ ಇಳಿಯುವರೇ?

local3.JPG

ಈ ಹಳಿಗಳ ಮೂಲಕ ಮುಂಬಯಿಯನ್ನು ಸೇರಿಸಿರುವುದು ನೋಡಿದರೆ ಮಾನವನ ದೇಹದಲ್ಲಿರುವ ನರ ನಾಡಿಗಳ ನೆನಪಾಗುವುದು. ಹಾಗೆಯೇ ರೈಲ್ವೇ ಸೇವೆ ನಿಂತು ಹೋದರೆ, ಇಡಿಯ ನಗರದ ಜನಜೀವನವು ನಿಂತು ಹೋಗುವುದು. ಹಾಗಾಗಿ ಇದನ್ನು ನಗರದ ನಾಡಿ ಎಂದು ಕರೆಯುವರು.

mumbai-local2.jpg

ಇನ್ನು ಈ ಲೋಕಲ್ ಟ್ರೈನ್ ಜನಗಳಿಗೆ ಜೀವನಾಧಾರ ಎಂಬುದೂ ಸತ್ಯದ ಮಾತು. ಒಬ್ಬ ಭಿಕ್ಷುಕ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗುವುದರೊಳಗೆ, ರೂ. ೩೦೦ ಸಂಪಾದಿಸಿರುತ್ತಾನೆ. ಮುಂಬಾ ಆಯಿ ಯಾರಿಗೇ ಆಗಲಿ ಜೀವನಕ್ಕೆ ಮಾತ್ರ ಮೋಸ ಮಾಡುವುದಿಲ್ಲ. ಅದಕ್ಕಾಗಿಯೇ ಇತರ ಸ್ಥಳಗಳಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಮಯದಲ್ಲಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಸ್ವಾರಸ್ಯವಾದ ವರದಿಯನ್ನು ಪ್ರಸ್ತುತಪಡಿಸಲಿಚ್ಛಿಸುವೆ. ಖಾರ್ ಬಡಾವಣೆಯ ಒಂದು ಮುಖ್ಯ ರಸ್ತೆಯ ಟ್ರ್‍ಆಫಿಕ್ ಸಿಗ್ನಲ್ ನಲ್ಲಿ ಒಬ್ಬ ಭಿಕ್ಷುಕ ಪ್ರತಿ ನಿತ್ಯ ಕಾಣಬರುವ. ಅಲ್ಲಿಯೇ ರಸ್ತೆಯ ಬದಿಯಲ್ಲಿ ಒಂದು ಗುಡಿಸಲು ಮಾಡಿಕೊಂಡು ವಾಸಮಾಡುತ್ತಿರುವ. ಅವನಿಗಿಬ್ಬರು ಮಕ್ಕಳು. ಅವರನ್ನೂ ಮತ್ತು ಅವನ ಹೆಂಡತಿಯನ್ನೂ ಈ ವೃತ್ತಿಗೆ ತೊಡಗಿಸಿದ್ದಾನೆ. ಈ ಪತ್ರಿಕೆಯವರು ಲೋಕಾರೂಢಿಯಾಗಿ ಅವನ ಸಂದರ್ಶನ ತೆಗೆದುಕೊಂಡಾಗ ತಿಳಿದುಬಂದ ವಿಷಯ – ಅವನಿಗೆ ದೂರದ ವಿರಾರ್ ನಲ್ಲಿ ಎರಡು ಫ್ಲಾಟ್ ಗಳು ಇದ್ದು ಅವುಗಳನ್ನು ಬಾಡಿಗೆಗೆ ಕೊಟ್ಟಿದ್ದಾನೆ. ತಿಂಗಳಿಗೆ ೨೦೦೦ ರೂಪಾಯಿ ಬಾಡಿಗೆ ಬರುತ್ತದೆ. ಸೊಲ್ಲಾಪುರದಲ್ಲಿ ಒಂದು ಸೈಟ್ ಖರೀದಿ ಮಾಡಿದ್ದಾನೆ. ಇಲ್ಲಿ ಭಿಕ್ಷೆಯಿಂದ ಅವನ ಸಂಸಾರದ ತಿಂಗಳ ವರಮಾನ ರೂ. ೬೦೦೦/- ದಿಂದ ೮೦೦೦/-. ಹೀಗಾಗಿ ಮಕ್ಕಳಿಗೆ ಶಾಲೆಗ ಕಳುಹಿಸಲಿಲ್ಲ, ಇದೇ ವೃತ್ತಿಗೆ ತೊಡಗಿಸಿದ್ದಾನೆ. ಅವನು ಹೇಳಿದ ಪ್ರಕಾರ ಇಂತಹ ಉಚ್ಚ ದರ್ಜೆಯ ಭಿಕ್ಷುಕರು ಮುಂಬಯಿಯಲ್ಲಿ ಇನ್ನೂ ಇದ್ದಾರೆ. ನೋಡಿ ಎಷ್ಟು ಸುಲಭದಲ್ಲಿ ಜೀವನದ ಹಾದಿ ರೂಪಿಸಿಕೊಂಡಿದ್ದಾರೆ.

beggar1.jpg

ಲೋಕಲ್ ಟ್ರೈನ್ ನಲ್ಲಿದ್ದವನು ಇಳಿದು ಎಲ್ಲಿಗೋ ಹೋಗಿಬಿಟ್ಟೆ. ಮತ್ತೆ ಬರ್ತಿದ್ದೀನಿ. ಈ ಟ್ರೈನ್ ಗಳಲ್ಲಿ ಮೊದಲ ದರ್ಜೆ ಮತ್ತು ಎರಡನೆ ದರ್ಜೆ ಎಂದು ಎರಡು ವಿಧವಿದೆ. ಅದಲ್ಲದೇ ಒಂದು ಬೋಗಿಯ ಸ್ವಲ್ಪ ಭಾಗವನ್ನು ಅಂಗವಿಕಲರಿಗಾಗಿ ಪ್ರತ್ಯೇಕವಾಗಿಟ್ಟಿದ್ದಾರೆ. ಮೊದಲ ದರ್ಜೆಯಲ್ಲಿ ಸೋಫಾದಂತಿರುವ ಸೀಟು. ಅದರಲ್ಲಿ ಮೂರು ಜನ ಕುಳಿತುಕೊಳ್ಳುವರು. ಎರಡನೆ ದರ್ಜೆಯಲ್ಲಿ ಮೂರು ಜನಗಳಿಗೆಂದು ಇರುವ ಮರದ ಸೀಟಿನಲ್ಲಿ ನಾಲ್ಕು ಜನಗಳು ಕಡ್ಡಾಯವಾಗಿ ಕುಳಿತುಕೊಳ್ಳುವರು. ಇನ್ನು ಅವರುಗಳದ್ದೇ ಗುಂಪಿದ್ದರೆ ಒಬ್ಬರ ತೊಡೆಯ ಮೇಲೆ ಇನ್ನೊಬ್ಬರು ಕುಳಿತುಕೊಳ್ಳುವರು. ಇನ್ನು ಗಾಡಿ ಬರುತ್ತಿದ್ದಂತೆಯೇ ಸೀಟು ಹಿಡಿಯಲಿಕ್ಕಾಗಿ ಹಾರುವುದನ್ನು ನೋಡಲು ಬಲು ಮಜ. ಅದರಲ್ಲೂ ಮುದುಕರು ಹುಡುಗರಲ್ಲೂ ಸ್ಪರ್ಧೆ. ಇದರ ಮಧ್ಯೆ ಜಗಳಗಳು ಸರ್ವೇ ಸಾಮಾನ್ಯ. ಬೆಲಗಿನ ಮತ್ತು ಸಂಜೆಯ ಸಮಯದಲ್ಲಿ ಸೀಟು ಹಿಡಿಯಲಿಕ್ಕಾಗಿ ಒಂದೆರಡು ಸ್ಟೇಷನ್ ಹಿಂದಕ್ಕೆ ಹೋಗಿ ಬರುವರು. ಇನ್ನು ಸೀಟು ಸಿಕ್ಕ ತಕ್ಷಣ ಮಾಡುವ ಮೊದಲ ಕೆಲಸವೆಂದರೆ ಕಣ್ಣು ಮುಚ್ಚಿಕೊಳ್ಳುವುದು. ನಿದ್ದೆಯೇನೂ ಮಾಡುವುದಿಲ್ಲ ಆದರೆ ನಿದ್ದೆಯ ನಾಟಕ ಮಾಡುವರು. ಇಂತಹವರಲ್ಲಿ ಮಧ್ಯ ವಯಸ್ಕರೇ ಹೆಚ್ಚು. ಕೆಲವು ವರ್ಷಗಳ ಹಿಂದೆ ಫೆವಿಕಾಲ್ ಗೋಂದಿನ ಮತ್ತು ಪೈಲ್ಸ್ ಕ್ಲಿನಿಕ್ ಗಳ ಅಡ್ವರ್ಟೈಸ್ ಮೆಂಟ್ ಗಳನ್ನು ತೋರಿಸಿ ಪುಂಡ ಹುಡುಗರುಗಳು ಅವರನ್ನು ಆಡಿಕೊಳ್ಳುವುದೂ ವಾಡಿಕೆಯಾಗಿತ್ತು. ಇಷ್ಟಾದರೂ ಅವರೇನು ಕಣ್ಣು ತೆರೆಯುತ್ತಿರಲಿಲ್ಲ. ಕಣ್ಣು ತೆರೆದರೆ ತಾನೇ ನಿಂತಿರುವ ಮುದುಕರು, ಮಕ್ಕಳು, ಗರ್ಭಿಣಿ ಹೆಂಗಸರು ಮುಂತಾದವರನ್ನು ನೋಡಬೇಕಾದೀತು, ಎದ್ದು ಸೀಟು ಕೊಡಬೇಕಾದೀತು. ಇನ್ನು ಕೆಲವರು ಪತ್ರಿಕೆಗಳನ್ನು ಓದುವರು, ಪದಬಂಧ ಬಿಡಿಸುವರು – ಪದಬಂಧಕ್ಕಾಗಿಯೇ ಕೆಲವು ಪತ್ರಿಕೆಗಳು ಇವೆ. ಕೆಲವರು ಗುಂಪು ಗುಂಪಾಗಿದ್ದರೆ ಇಸ್ಪೀಟು, ಭಜನೆ, ಸಿನೆಮಾ ಹಾಡುಗಳು ಇದರಲ್ಲಿ ಮಗ್ನರಾಗುವರು. ಕೆಲವು ಸಮಯದಲ್ಲಂತೂ ಪೂಜೆ, ಮಂಗಳಾರತಿ ಮಾಡಿ ಪ್ರಸಾದವನ್ನೂ ವಿತರಿಸುತ್ತಿದ್ದರು. ಈಗೀಗ ಭಜನೆ, ಇಸ್ಪೀಟುಗಳನ್ನು ನಿರ್ಬಂಧಿಸಿದ್ದಾರೆ. ಮಹಿಳೆಯರ ಕಂಪಾರ್ಟ್ ಮೆಂಟ್ ಗಳಲ್ಲಂತು ಕೈ ಹೊಲಿಗೆ, ಕಸೂತಿ, ಹೂ ಕಟ್ಟುವುದು, ಮನೆಗೆ ಹೋಗಿ ಅಡುಗೆ ಮಾಡಲು ಅನುಕೂಲವಾಗಲೆಂದು ತರಕಾರಿ ಕತ್ತರಿಸಿ ಇಟ್ಟುಕೊಳ್ಳುವುದನ್ನೂ ಕಾಣಬಹುದು. ಹೆಚ್ಚಿನ ಜನ ಸಮಯವನ್ನು ವ್ಯರ್ಥಮಾಡುವುದಿಲ್ಲ. ಸಂಜೆಯ ವೇಳೆ ಮನೆಗೆ ಮರಳುವಾಗ ಸುಸ್ತಾದ ಜನಗ ನಿಂತೇ ನಿದ್ದೆ ಮಾಡುವುದನ್ನೂ ಅಭ್ಯಾಸ ಮಾಡಿಕೊಂಡಿದ್ದಾರೆ. ನಾನಂತೂ ಇಂತಹ ದೃಶ್ಯವನ್ನು ಬೇರೆ ಯಾವುದೇ ಊರಿನಲ್ಲೂ ನೋಡಿರಲಿಲ್ಲ.

ಈ ಸೀಟುಗಳು ಎದುರು ಬದುರಾಗಿದ್ದು, ಮಧ್ಯೆ ಭಾಗದಲ್ಲಿ ಮೂರು ಜನಗಳು ನಿಂತುಕೊಳ್ಳುವರು. ಜನಸಂದಣಿ ಜಾಸ್ತಿಯಾಗಿದ್ದರೆ ನಾಲ್ಕು ಜನಗಳು ಕುಳಿತುಕೊಳ್ಳುವರು. ಇದಷ್ಟಲ್ಲದೇ ಸಿನೆಮಾಗಳಲ್ಲಿ ತೋರಿಸುವಂತೆ ಛಾವಣಿಯ ಮೇಲ್ಭಾಗದಲ್ಲೂ ಕುಳಿತುಕೊಳ್ಳುವರು. ಅವರ ಮೇಲೆ ವಿದ್ಯುತ್ ತಂತಿ ಹಾಯುತ್ತಿರುವುದು. ಅದೂ ಹೈ ವೋಲ್ಟೇಜ್ ವಿದ್ಯುತ್ – ಸ್ವಲ್ಪ ಆಯ ತಪ್ಪಿ ತಗುಲಿದರೂ ವ್ಯಕ್ತಿ ಅಲ್ಲಿಯೇ ಸಾಯುವನು. ಇಂತಹ ಸಾವುಗಳು ಸರ್ವೇ ಸಾಮಾನ್ಯ. ಆದರೂ ಜನಗಳು ಈ ಚಟವನ್ನು ಬಿಡುವುದೇ ಇಲ್ಲ. ಇನ್ನು ಟಿಕೆಟ್ ಅಥವಾ ಪಾಸ್ ಹೊಂದಿರುವ ಪ್ರಯಾಣಿಕರು ಎಷ್ಟು ಇರುವರೋ ಅಷ್ಟೇ ರಹಿತ ಪ್ರಯಾಣಿಕರು ಇರುತ್ತಾರೆ. ಒಂದು ಸುದ್ದಿ ಎಂದರೆ = ಇವರುಗಳದ್ದೇ ಒಂದು ಅಸೋಸಿಯೇಷನ್ ಇದೆಯಂತೆ. ಇವರು ಒಮ್ಮೆ ಸಿಕ್ಕಿಹಾಕಿಕೊಂಡು ದಂಡ ತೆತ್ತರೆ ಅದನ್ನು ಅಸೋಸಿಯೇಷನ್ ಮರುಪಾವತಿಸುವುದು. ಆದರೆ ಆ ವ್ಯಕ್ತಿ ತಿಂಗಳಿಗೆ ಎರಡು ಬಾರಿಗಿಂತ ಜಾಸ್ತಿ ಸಿಕ್ಕಿಹಾಕಿಕೊಳ್ಳಬಾರದು. ಅದಷ್ಟೇ ಅಲ್ಲ ಪ್ರತಿ ತಿಂಗಳೂ ಆ ಅಸೋಸಿಯೇಷನ್ ಗೆ ಚಂದಾ ಕಟ್ಟುತ್ತಿರಬೇಕು. ನೋಡಿದಿರಾ ಹೇಗಿದೆ ಪ್ಯಾರೆಲಲ್ ಎಕಾನಮಿ.
ಟ್ರೈನಿನಲ್ಲಿ ಭಿಕ್ಷೆ ಬೇಡಲೆಂದೇ ಚಿಕ್ಕ ಚಿಕ್ಕ ಮಕ್ಕಳನ್ನು ಬಿಟ್ಟು ದೂರದಲ್ಲಿ ನಿಂತು ಅವರುಗಳ ಚಲನವಲನ ಗಮನಿಸುತ್ತಿರುವ ಗೂಂಡಾಗಳು ಇರುವರು. ಇದರಲ್ಲಿ ಹೆಚ್ಚಿನ ಮಕ್ಕಳನ್ನು ಕದ್ದು ತಂದಿರುವರು. ಕೆಲವು ಸಮಯ ಅವರುಗಲಿಗೆ ಅಂಗವಿಕಲತೆ ಮಾಡಿರುವ ಸನ್ನಿವೇಶಗಳೂ ಇವೆ. ಹಾಗೇ ಹಾಡುಗಳು ಮತ್ತು ಭಜನೆ ಮಾಡಿ ಭಿಕ್ಷೆ ಎತ್ತುವ ಅಂಗವಿಕಲರೂ ಇರುವರು. ಕೆಲವರಂತೂ ಸುಶ್ರಾವ್ಯವಾಗಿ ಹಾಡುವರು.

beggar2.jpg

ಇದರ ಮಧ್ಯೆ ಹೆಚ್ಚಿನ ಜನಸಂದಣಿಯಿರುವಾಗ ಜೇಬು ಕತ್ತರಿಸುವುದು ಸರ್ವೇ ಸಾಮಾನ್ಯ. ಅವರದ್ದೇ ದೊಡ್ಡ ಗುಂಪಿದ್ದು, ಅಕ್ಕ ಪಕ್ಕದವರಿಗೆ ಚಾಕು ತೋರಿಸಿ ದೋಚುವ ಸನ್ನಿವೇಶಗಳಿಗೇನೂ ಕೊರತೆಯಿಲ್ಲ.

ಜನಸಂದಣಿಯ ಸಮಯದಲ್ಲಿ ತಮ್ಮ ಬೆವರನ್ನು ಇನ್ನೊಬ್ಬರ ಬಟ್ಟೆಗಳಿಗೆ ಒರೆಸುವುದೂ, ಜಗಳಗಳೂ ಇತರರಿಗೆ ಮೋಜಿನ ಸನ್ನಿವೇಶ. ಕೆಲವೊಂದು ಬಾರಿ ಪರಕಾಯ ಪ್ರವೇಶದ ಅನುಭವವೂ ಆದವರಿದ್ದಾರೆ.

ನಾನು ಇದರ ಬಗ್ಗೆ ಬರೆದ ಒಂದು ಕವನ ಹೀಗಿದೆ.

(ಇದು ನಾನು ದಿನವೂ ಬೆಳಗ್ಗೆ ಹಿಡಿಯುವ ೭.೨೨ರ ಚರ್ಚ್ಗೇಟ್ ಗೆ ಹೋಗುವ ಲೋಕ್ಲ್ ಟ್ರೈನ್ – ನನ್ನ ಅನುಭವ)

ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ
ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ

ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ
ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ
ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ
ಅದರ ಅನುಭವ ನಿಮಗೇನು ಗೊತ್ತು ಬಿಡಿ

ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು
‘ಆದ್ರೂ ಹೇಳುವರು ಯಾಕೋ ನವೆ ಹೋಗ್ತಾನೇ ಇಲ್ಲ’
ಮುಂಜಾವಿನ ಆ ಸಮಯದಲ್ಲೂ ಹರಿವುದು ಬೆವರು ಧಾರಾಕಾರ
ಇನ್ನೊಬ್ಬನ ವಸ್ತ್ರ ಅದನ ಒರೆಸಿದಾಗ ಹಾಹಾಕಾರ

211955-safe_local_travel-mumbai.jpg

ಅದೋ ಬಂತು ನೋಡು ನನ್ನ ಗಾಡಿ ನವ ಮಾಸ ತುಂಬಿದ ಗರ್ಭಿಣಿಯಂತೆ
ಒಳಗೆ ಹೋಗಲು ಆಗದೆ ಅಲ್ಲೇ ನಿಂತೆ ಬರಸಿಡಿದ ಮರಿಗಿಣಿಯಂತೆ
ಅದೇ ಹುಡುಗ ಹುಡುಗಿಯರು ಚೆಲ್ಲು ಚೆಲ್ಲಾಗಿ ನಗುತ ಬರಲು ಮುಂದೆ
ಅವರನು ನೋಡಲೆಂದೇ ಇಹರು ನನ್ನಂಥ ಮುದಿಯರ ಹಿಂಡೇ

ನಿಯತಕಾಲದಂತೆ ಡ್ಯೂಟಿಗೆ ಬರುವನು ಆ ಭಿಕ್ಷುಕ
ಅವನ ಹಿಂದೆಯೇ ಆ ಜಂಗುಳಿಯಲ್ಲೂ ಬೀದಿ ಮಾರಾಟಗಾರ (ಹಾಕರ್)
ಹೊಸಬರಿಗೆ ಇಲ್ಲಿಯಾಗುವುದು ಪರದಾಟ
ನಮಗೆಲ್ಲಾ ಇದು ದಿನನಿತ್ಯದ ವಿಹಾರದೂಟ

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಉತ್ಥಾನ ದ್ವಾದಶೀ

tulasi31.jpg

ದೀಪಾವಳಿ ಹಬ್ಬದ ಬಲಿ ಪಾಡ್ಯಮಿಯ ನಂತರ ಬರುವ ಇನ್ನೊಂದು ಹಬ್ಬ ಎಂದರೆ ಉತ್ಥಾನ ದ್ವಾದಶೀ. ಕಾರ್ತೀಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ಈ ಪವಿತ್ರದಿನವನ್ನು ಹಬ್ಬವನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿವ್ರತವೆಂದೂ ಕರೆಯುವರು.ಕಾರ್ತೀಕ ಶುದ್ಧ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು. ಹಾಗೆ ಎಬ್ಬಿಸುವಾಗ ವೇದೋಕ್ತ ಮಂತ್ರವಾದ

” ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್|
ಸಮೂಢಮಸ್ಯ ಪಾಗ್‍ಂಸುರೇ||” ಎಂದು ಹೇಳಬೇಕು.

ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಂನ್ಯಾಸಿಗಳು ದೇಶ ಸಂಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತವನ್ನು ಹಾಡುವರು. ಅದು ಹೀಗಿದೆ.

ಓಂ ಬ್ರಹ್ಮೇಂದ್ರ ರುದ್ರಾಗ್ನಿ ಕುಬೇರ ಸೂರ್ಯ ಸೋಮಾದಿಭಿರ್ವಂದಿತ ವಂದನೀಯ|
ಬುದ್ಯಸ್ವ ದೇವೇಶ ಜಗನ್ನಿವಾಸ ಮಂತ್ರಪ್ರಭಾವೇಣ ಸುಖೇನ ದೇವ||
ಇಯಂ ತು ದ್ವಾದಶೀ ದೇವ ಪ್ರಬೋಧಾರ್ಥಂ ವಿನಿರ್ಮಿತಾ|
ತ್ವಯೈವ ಸರ್ವಲೋಕಾನಾಂ ಹಿತಾರ್ಥಂ ಶೇಷಶಾಯಿನಾ||
ಉತ್ತಿಷ್ಥೋತ್ತಿಷ್ಠ ಗೋವಿಂದ ತ್ಯಜ ನಿದ್ರಾಂ ಜಗತ್ಪತೇ|
ತ್ವಯಿ ಸುಪ್ತೇ ಜಗನ್ನಾಥ ಜಗತ್ಸುಪ್ತಂ ಭವೇದಿದಂ||
ಉತ್ಥಿತೇ ಚೇಷ್ಟತೇ ಸರ್ವಂ ಉತ್ತಿಷ್ಠೋತ್ತಿಷ್ಠ ಮಾಧವ|
ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ|
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂಕುರು||
ಗತಾ ಮೇಘಾ ವಿಯಚ್ಚೈವ ನಿರ್ಮಲಂ ನಿರ್ಮಲಾ ದಿಶಃ|
ಶಾರದಾನಿ ಚ ಪುಷ್ಫಾಣಿ ಗೃಹಾಣ ಮಮ ಕೇಶವ||

tulasi2.jpg
ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯ ರಾತ್ರಿ ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ಪೂಜಿಸಿ, ಅಂದು ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು. ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಅರ್ಚಿಸಬೇಕು. ಕೆಲವು ಮನೆಗಳಲ್ಲಿ ತುಲಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ. ಶ್ರೀ ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ಶ್ರೀತುಲಸೀ ದೇವಿಗೆ ಶ್ರೀ ಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಲಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುವುದು. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಲಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಲಸೀ ವಿವಾಹವನ್ನು ಮಾಡುವರು.

ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಿದಂತೆ ನಾರಾಯಣನಿಗೆ ತುಲಸೀ ಮಾಲೆ ಅತ್ಯಂತ ಪ್ರೀತಿಪಾತ್ರವಾದುದು. ತುಲಸಿ ಒಬ್ಬ ಗೋಪಿಕೆಯಾಗಿಯೂ ಶ್ರೀಕೃಷ್ಣನ ಪ್ರೇಮಿಯಾಗಿದ್ದಳಂತೆ. ಆತನ ತುಲಾಭಾರದಲ್ಲಿ ಒಂದೆಸಳು ತುಲಸಿಯನ್ನು ಇಡಲು ಆ ಕಡೆಗೇ ತಕ್ಕಡಿ ವಾಲಿತ್ತೆಂದು ಕಥೆಯಿದೆ. ಭಕ್ತೆ ಮೀರಾಳನ್ನೂ ತುಲಸಿಯೆಂದು ಉದಹರಿಸಿರುವುದುಂಟು.

ತುಲಸಿಯಲ್ಲಿ ಎರಡು ವಿಧಗಳಿವೆ. ಒಂದು ಕೃಷ್ಣ (ಕಪ್ಪು ಬಣ್ಣ) ತುಲಸಿಯಾದರೆ ಮತ್ತೊಂದು ಶ್ರೀ ತುಲಸಿ (ಹಸುರು ಬಣ್ಣ). ತುಲಸಿಯನ್ನು ಜೇನುತುಪ್ಪ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಹಿಂದೂ ಸಂಪ್ರದಾಯದ ಮನೆಗಳ ಮುಂಭಾಗದಲ್ಲಿ ತುಲಸಿಗಿಡ ಇರುವುದು ಸಾಮಾನ್ಯದ ದೃಶ್ಯ. ಅದಕ್ಕೆಂದೇ ಒಂದು ಪ್ರತ್ಯೇಕ ಮಂಟಪದಂತಹ ಕಟ್ಟೆಯನ್ನು ಕಟ್ಟಿರುತ್ತಾರೆ. ಹಲವು ತುಲಸೀ ಗಿಡಗಳಿರುವ ಉದ್ಯಾನವನಕ್ಕೆ ತುಲಸೀವನವೆಂದೂ ಹೆಸರಿಸುವರು. ತುಲಸಿ ಇರುವ ಸ್ಥಳದಲ್ಲಿ ದೇವರಿರುವನೆಂದೂ ಪ್ರತೀತಿ. ಶೃಂಗೇರಿಯಲ್ಲಿ ತುಲಸೀವನ ಒಂದು ಪ್ರೇಕ್ಷಣೀಯ ಸ್ಥಳವೂ ಆಗಿದೆ. ಅಷ್ಟೇಕೆ ಅದುವೇಕನ್ನಡ ದಿನಪತ್ರಿಕೆಯಲ್ಲೂ ತುಲಸೀವನ ಪ್ರಸಿದ್ಧವಾದುದು.

tulasi.jpg

ಕೊಸರು :

ಮನೆಯ ಮುಂದೆ ತುಳಸಿಗೆ ಮಾತ್ರ ಕಟ್ಟೆ ಇರಬೇಕೆಂದಿಲ್ಲ. ಎಲ್ಲ ಗಿಡಗಳಿಗೂ ಕಟ್ಟೆಗಳನ್ನು ಕಟ್ಟುವರು. ಆದರೆ ಈಗೀಗ ಜಾಗ ಸಾಲದಿರುವುದರಿಂದ, ಕೇವಲ ಕೆಲವು ಗಿಡಗಳಿಗ ಕಟ್ಟೆ ಕಟ್ಟುವರು. ಹಾಗೆ ಕಟ್ಟೆ ಕಟ್ಟುವುದರಿಂದ ನೀರು ಅತ್ತಿತ್ತ ಹೋಗುವುದಿಲ್ಲ ಮತ್ತು ಗಿಡದಿಂದ ಉದುರುವ ಹಣ್ಣೆಲೆಗಳು ಗೊಬ್ಬರದಂತೆ ಅದರಲ್ಲಿಯೇ ಉಳಿದು ಗಿಡದ ಬೆಳವಣಿಗೆಗೆ ಅನುಕೂಲವಾಗುವುದು. ನಮ್ಮ ಊರಿನ ಮನೆಯಲ್ಲಿ ತೆಂಗಿನ ಗಿಡಕ್ಕೂ ಕಟ್ಟೆ ಕಟ್ಟಿದ್ದೀವಿ. ಆದರೆ ಮುಂದೆ ಅದರ ಬೇರು ಬಹಳ ಅಗಲವಾಗಿ ಮತ್ತು ಆಳವಾಗಿ ಬೆಳೆಯುವುದರಿಂದ ಕಟ್ಟೆ ಒಡೆಯುವ ಸಂಭವ ಹೆಚ್ಚು.

ವಿಷ್ಣುವನ್ನು ಎಚ್ಚರಿಸಲು ತ್ರಿಮೂರ್ತಿ ಪತ್ನಿಯರು ಮೂರು ಬೀಜಗಳನ್ನು ಎರಚಿದರು. ಮೊದಲನೆಯ ಬೀಜವನ್ನು ಧಾತ್ರಿ (ಸರಸ್ವತಿ) ಎರಚಿದರಿಂದ ಜನಿಸಿದವಳು ಧರಿತ್ರಿ. ರಮಾದೇವಿಯು ಎರಚಿದ ಬೀಜದಿಂದ ಜನಿಸಿದವಳು ಮಾಲತಿ ಮತ್ತು ಗೌರಿಯು ಎರಚಿದ ಬೀಜದಿಂದ ಜನಿಸಿದವಳು ತುಲಸೀ.

ಮನೆಯ ಮುಂದೆ ತುಲಸಿಯೊಡನೆ ಹೂವಿನ (ಮಾಲತೀ) ಗಿಡಗಳನ್ನು ಕಟ್ಟೆಕಟ್ಟಿ ನೆಡುವರು.

ವಿಭಾಗಗಳು
ಲೇಖನಗಳು

ಕನ್ನಡಕ್ಕೆ ಸ್ಥಾನಮಾನ

ಗು ತನ್ನ ಕಣ್ಣು ಬಿಟ್ಟು ಮೊದಲು ಕಾಣುವುದೇ ತನ್ನ ತಾಯಿಯ ಮುಖವನ್ನು. ಅವಳ ಬಾಯಿಂದ ಬರುವ ಮಾತುಗಳೇ ಮಾತೃ ಭಾಷೆ. ಮಗು ತನ್ನ ತಾಯಿಯ ತುಟಿಗಳ ಚಲನೆ ನೋಡಿಯೇ ಮಾತುಗಳನ್ನು ಕಲಿಯುವುದು. ಹಾಗಾಗಿ ಮಕ್ಕಳಿಗೆ ಭಾಷೆ ಕಲಿಸುವುದು ತಾಯಿಯೇ.

 

ಇಂದಿನ ಮಕ್ಕಳಿಗೆ ಶಾಲೆಗಳಲ್ಲಿ ಆಂಗ್ಲ ಭಾಷೆಯ ಮೂಲಕ ವಿದ್ಯೆ ನೀಡುವುದು ಮತ್ತು ವಿದ್ಯೆ ಕೊಡಿಸುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಮರೆಯುವಂತಾಗಿದೆ. ಇದು ತೀರಾ ಶೋಚನೀಯ. ಇದಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚಿನ ಓದಿಗೆ ಕನ್ನಡ ಭಾಷೆಯ ಮಾಧ್ಯಮದಲ್ಲಿ ಅನುಕೂಲವಿಲ್ಲವೆಂಬ ಅನುಮಾನ. ಇದರಲ್ಲಿ ಸತ್ಯವಿಲ್ಲ. ಇಷ್ಟೇ ಓದಿದರೂ ಯಾವುದೇ ಭಾಷೆಯಲ್ಲಿ ಓದಿದರೂ ಅದು ಮೊದಲು ಮನಸ್ಸಿನಲ್ಲಿ ಗ್ರಹಣವಾಗೋದು ಮಾತೃಭಾಷೆಯಲ್ಲೇ ನಂತರ ಅದು ವ್ಯಕ್ತಪಡಿಸಬೇಕಾದ ಭಾಷೆಗೆ ತರ್ಜುಮೆಗೊಳ್ಳುತ್ತದೆ. ಯಾವುದೇ ಪದಗಳಿಗಾಗಲೀ ಕನ್ನಡದಲ್ಲಿ ಸೂಕ್ತವಾದ ಪರ್ಯಾಯ ಸಿಗುತ್ತದೆ. ಈಗ ನೋಡಿ ಕನ್ನಡದಲ್ಲೇ ಐ ಏ ಎಸ್ ಮಾಡಿದ ಅಧಿಕಾರಿ ಇದ್ದಾರೆ. ಇವರನ್ನೇ ಮಾದರಿಯಾಗಿ ಇಟ್ಟುಕೊಂಡು ನಾವು ನಮ್ಮ ಮಕ್ಕಳಿಗೂ ಕನ್ನಡ ಕಲಿಕೆಗೆ ತೊಡಗಿಸಬೇಕು. ಕನ್ನಡವನ್ನು ನಮ್ಮ ಮಕ್ಕಳ್ಳಲ್ಲದೇ ಮತ್ತಿನ್ಯಾರು ಕಲಿಯಬೇಕು ಮತ್ತು ಕಲಿಯುತ್ತಾರೆ.

 

ಇದೇ ಸಮಯದಲ್ಲಿ ನಮ್ಮ ಕೇಂದ್ರ ಸರ್ಕಾರವು ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನನ್ನದೊಂದೆರಡು ಮಾತುಗಳು ಹೀಗಿವೆ.

 

೧೯೬೩ರಲ್ಲಿ ಭಾರತದ ಸಂವಿಧಾನ ರೀತ್ಯಾ ಹಿಂದಿ ಭಾಷೆಯನ್ನು ರಾಜ ಭಾಷೆ ಎಂದು ಘೋಷಿಸಿದರು. ಅದು ೧೯೬೫ರ ಜನವರಿ ೨೬ನೇ ತಾರೀಖಿನಿಂದ ಜಾರಿಗೆ ಬಂದಿತು. ಎಲ್ಲರಿಗೂ ನೆನಪಿರಬಹುದು. ಆಗ ಡೌನ್ ವಿತ್ ಹಿಂದಿ ಅನ್ನುವ ಆಂದೋಳನ ಬಹಳ ಬಿರುಸಾಗಿ ದಕ್ಷಿಣ ಭಾರತದಲ್ಲಿ ನಡೆಯಿತು. ಅದರ ಪ್ರಭಾವವೇ ತಮಿಳರು ಪ್ರಬಲವಾಗಲು ಕಾರಣ. ಕನ್ನಡಿಗರು ಸ್ವಲ್ಪ ನಿಧಾನಸ್ಥರು ಮತ್ತು ಸಂದರ್ಭಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುವವರಾಗಿ ಇವರ ಮೇಲೆ ಹಿಂದಿಯನ್ನು ಹೇರಲು ಬಲು ಸುಲಭ ಎಂಬುದು ಭಾರತ ಸರ್ಕಾರದ ನಿಲುವಾಯಿತು. ಅದರ ಫಲ ನಾವು ಈಗ ಅನುಭವಿಸುತ್ತಿದ್ದೇವೆ. ಅದರಲ್ಲೂ ಕೇಂದ್ರ ಸರ್ಕಾರ ಸ್ವಾಮ್ಯದ ಕಛೇರಿ, ಬ್ಯಾಂಕುಗಳು, ಫ್ಯಾಕ್ಟರಿಗಳು, ರೈಲ್ವೇ, ಮತ್ತಿತರೇ ಕೇಂದ್ರ ಸರ್ಕಾರದ ಹಿಡಿತದಲ್ಲಿ ಬರುವ ಸಂಸ್ಥಾನಗಳಲ್ಲಿ ಹಿಂದಿಯ ಹೇರಿಕೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ನಮ್ಮ ಹಿರಿಯರು ಆಗ ತಮಿಳರಂತೆ ಏನಾದರೂ ಕಾರ್ಯಕ್ರಮ ಕೈಗೊಂಡಿದ್ದರೆ, ಕನ್ನಡ ಭಾಷೆ ಅವನತಿ ಅಂಚಿಗೆ ಹೋಗುತ್ತಿರಲಿಲ್ಲ.

 

ಅಫಿಷಿಯಲ್ ಲಾಂಗುಯೇಜ್ ಯಾಕ್ಟ್, ೧೯೬೩ ಎಂಬುದನ್ನು ಜಾರಿಗೆ ತರಲಾಗಿದೆ.

 

ಇದರ ಬಗ್ಗೆ ಕೆಲವು ಅಂಕಿ ಅಂಶಗಳನ್ನು ಮೊದಲು ನೋಡೋಣ. ನೋಡಿ ಕನ್ನಡ ಭಾಷೆಯ ಬಗ್ಗೆ ಮಂಡಿಸಿದ ಒಂದು ಪ್ರಬಂಧ

 

ಇದಕ್ಕೆಂದೇ ಕೇಂದ್ರ ಸರ್ಕಾರ ಒಂದು ಇಲಾಖೆಯನ್ನು ತೆರೆದಿದೆ. ಎಷ್ಟು ಹಣ ವ್ಯಯ ಆಗ್ತಿರಬಹುದು. ಇದರ ಅಗತ್ಯವಿತ್ತೇ? ಕನ್ನಡವೂ ಹಿಂದಿಗೆ ಸಮ ಎನ್ನುವುದಕ್ಕೆ ಇಲ್ಲಿ ನೋಡಿ. ಹಾಗಿದ್ದರೆ ಕನ್ನಡಕ್ಕೂ ಅಷ್ಟೇ ಹಣವನ್ನು ಕೇಂದ್ರ ಸರ್ಕಾರ ವಿನಿಯೋಗಿಸಲಿ.

 

ನಾನು ಹೇಳೋದಿಷ್ಟೇ. ಹೇಗೆ ಉತ್ತರ ಭಾರತೀಯರು ಹಿಂದಿಯನ್ನಲ್ಲದೇ ಬೇರೆ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಮಾಡುತ್ತಿದ್ದಾರೋ ಹಾಗೆಯೇ ಕ್ಷೇತ್ರೀಯ ಭಾಷೆಗಳಿಗೂ ಪ್ರಾಮುಖ್ಯತೆಯನ್ನು ಕೊಟ್ಟು ಅವುಗಳನ್ನು ಉಳಿಸಲಿ, ಬೆಳೆಸಲಿ. ಹಿಂದಿಯೇತರ ಎಲ್ಲ ಭಾಷೆಗಳಲ್ಲೂ ಸಾಹಿತ್ಯ ಅಪರಿಮಿತವಾಗಿ ಬೆಳೆದಿದೆ. ನಮ್ಮ ಕನ್ನಡದ ಉಗಮದ ಬಗ್ಗೆ ನೋಡಿ ಇಲ್ಲಿ. ಇಷ್ಟು ಹಳೆಯದಾದ ಭಾಷೆ, ಇನ್ನೂ ಹತ್ತು ಹಲವಾರು ಭಾಷೆಗಳಿಗೆ ಜನ್ಮ ಕೊಟ್ಟಂಥ ಭಾಷೆ, ಸಾಹಿತ್ಯದಲ್ಲಿ ಅಪರಿಮಿತವಾಗಿ ಬೆಳೆದಿರುವಂತಹ ಭಾಷೆಯನ್ನು ಹಿಂದಿಗಿಂತ ಮೇಲೆ ತರೋದು ಬೇಡ, ಹಿಂದಿಯ ಸಮಾನಾಂತರಕ್ಕೆ ಇಟ್ಟರೂ ಸಾಕು. ಇದರ ಬಗ್ಗೆ ಇಲ್ಲೂ ಹೀಗೆ ಹೇಳಿದೆ ನೋಡಿ.

 

ನಮಗೆ ದೆಹಲಿಯೇ ರಾಷ್ಟ್ರದ ರಾಜಧಾನಿಯಾಗಿರಲಿ, ಬೆಂಗಳೂರು ಆಗೋದು ಬೇಡ. ಆದರೆ ಬೆಂಗಳೂರು ದೆಹಲಿ ಆಗೋದು ಬೇಡ. ಎಲ್ಲ ರಾಜ್ಯಗಳಂತೆ ಕರ್ನಾಟಕವೂ ಸೇರಿ ಭಾರತವಾಗಲಿ. ಇಡೀ ಭಾರತವೇ ಒಂದು ರಾಜ್ಯವಾಗಲು ಸಾಧ್ಯವಿಲ್ಲ. ರಾಷ್ಟ್ರಕ್ಕೆ ಏನೇ ಧಕ್ಕೆ ಬಂದರೂ ಸರಿಯೇ ಕನ್ನಡಿಗರೇ ಮೊದಲಿಗರಾಗಿ ರಾಷ್ಟ್ರ ಗೌರವ ಕಾಪಾಡುವೆವು. ನನ್ನ ಕಳಕಳಿಯ ಮನವಿಯಿಷ್ಟೇ, ಹಿಂದಿಯ ಹೇರಿಕೆ ನಮ್ಮ ಮೇಲೆ ಬೇಡ. ಇಂಗ್ಲೀಷ್ ಕೂಡಾ ನಮಗೆ ಬೇಡ. ಹಿಂದಿಯ ಬೆಳವಣಿಗೆಗೆ ಕೊಡುವ ಸೌಲಭ್ಯ ಸವಲತ್ತು ಕನ್ನಡಕ್ಕೂ ಕೊಡಿ. ಕನ್ನಡವೂ ಬೆಳೆಯಲಿ.

 

ಇದರ ಪ್ರಕಾರ ಮೊದಲು ೧೫ ವರ್ಷಗಳು ಇಂಗ್ಲೀಷ್ ಅನ್ನು ಹಿಂದಿಯ ಜೊತೆ ಜೊತೆಯಾಗಿ ಉಪಯೋಗಿಸಬಹುದು ಎಂದಿದ್ದರು. ಇದನ್ನು ಮಾಡಿದವರು ಯಾರು? ಇದರಲ್ಲಿ ಹಿಂದಿ ಭಾಷಿಗರೇ ಹೆಚ್ಚಾಗಿದ್ದರು. ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧವಾಗಿ ೧೯೬೮ರಲ್ಲಿ ಹೋರಾಟ ನಡೆದದ್ದರಿಂದ ಅಲ್ಲಿ ಹಿಂದಿಯ ಹೇರಿಕೆ ಮುಂದುವರೆಯಲಿಲ್ಲ. ಇದೇ ಕಾರಣದಿಂದ ರಾಜ್ಯದ ಹೆಸರನ್ನು ಮದರಾಸಿನಿಂದ ತಮಿಳುನಾಡು ಎಂದು ಬದಲಾಯಿಸಿದರು. ಪಂಜಾಬ ಪ್ರಾಂತ್ಯ ನಿರ್ಮಾಣವಾಗಲು ಈ ವಿಷಯವೂ ಒಂದು ಕಾರಣ. ಪಶ್ಚಿಮ ಬಂಗಾಳದಲ್ಲೂ ಹಿಂದಿ ಹೇರಿಕೆಗೆ ವಿರೋಧವಿದೆ. ನಮ್ಮ ಕನ್ನಡಿಗರಲ್ಲಿ ಹೆಚ್ಚಿನ ಸಹಿಷ್ಣುತೆ ಭಾವ ಇರುವುದರಿಂದ ನಮ್ಮ ಮೇಲೆ ಎಲ್ಲರೂ ಸವಾರಿ ಮಾಡುವ ಹಾಗೆ ಆಗಿದೆ.

 

ಕನ್ನಡದ ಬಗ್ಗೆ ಜಾಗೃತಿ ಮೂಡುತ್ತಿರುವ ಈ ಸುಸಮಯದಲ್ಲಿ ನಮ್ಮಿಂದ ಚುನಾಯಿತರಾದ ರಾಜಕಾರಣಿಗಳಲ್ಲಿ ಮನವಿ ಮಾಡಿಕೊಳ್ಳೋಣ. ಕನ್ನಡವನ್ನು ಉಳಿಸಿ, ಬೆಳೆಸಿ. ಕನ್ನಡಕ್ಕೆ ಮೊದಲ ಆದ್ಯತೆ ಸಿಗಲಿ.

 

ವಿದ್ಯಾಭ್ಯಾಸ ಕನ್ನಡದಲ್ಲೇ ಇಲ್ಲದಿರುವುದೊಂದು ಖೇದದ ವಿಷಯ. ಹೇಗೆ ಚೀನಾ, ಕೊರಿಯಾ, ಜಪಾನ್, ಜರ್ಮನಿ ಮತ್ತಿತರೇ ಮುಂದುವರೆದ ದೇಶಗಳಲ್ಲಿ ವಿದ್ಯಾಭ್ಯಾಸವು ಅವರದ್ದೇ ಭಾಷೆಯಲ್ಲಿ ಲಭ್ಯವಿದೆಯೋ ಹಾಗೇ ಕನ್ನಡದಲ್ಲೇ ಎಲ್ಲ ವಿಷಯಗಳ ವಿದ್ಯೆಯೂ ಕನ್ನಡದಲ್ಲೇ ಲಭ್ಯವಾಗುವಂತೆ ಮಾಡಬೇಕು. ನಮ್ಮಲ್ಲಿರುವ ಬುದ್ಧಿ ಜೀವಿಗಳು ಅವರವರ ಕ್ಷೇತ್ರಗಳಲ್ಲಿ ಇಂಗ್ಲೀಷ್ ಅಥವಾ ಬೇರೆ ಯಾವುದೇ ಭಾಷೆಯಲ್ಲಿರುವ ಪದಗಳನ್ನು ಕನ್ನಡೀಕರಿಸಿ ಪಾರಿಭಾಷಿಕ ನಿರ್ಮಿಸಲು ಮುಂದಾಗಲಿ. ಇದರಿಂದಾಗಿ ಮುಂದಿನ ಪೀಳಿಗೆಯ ವಿದ್ಯಾಭ್ಯಾಸದಲ್ಲಿ ಎಲ್ಲ ವಿಷಯಗಳೂ ಕನ್ನಡದಲ್ಲೇ ಲಭ್ಯವಾಗಲಿ. ಆಗ ಎಲ್ಲ ಮಕ್ಕಳೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬಹುದು. ಈ ನಿಟ್ಟಿನಲ್ಲಿ ರಾಷ್ಟ್ರಕ್ಕೆ ಕನ್ನಡಿಗರು ಮಾದರಿಯಾಗಲು ಪ್ರಯತ್ನಿಸೋಣ, ಎಂಬುದು ನನ್ನ ಚಿಂತನೆ.

 

ಇನ್ನೂ ನೋಡಿ ಕನ್ನಡದ ಸೊಗಡಿಗೆ ಮಾರು ಹೋಗಿ ಬಹಳ ಹಿಂದೆ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಬಂದ ರೆವರೆಂಡ್ ಫಾದರ್ ಕಿಟ್ಟೆಲ್ ಅವರು ಕನ್ನಡ ಕಲಿತು ಕನ್ನಡದಲ್ಲೇ ಪಾರಿಭಾಷಿಕ ರಚಿಸಿದರು. ಇವರು ಮೂಲತ: ಜರ್ಮನಿಯವರು. ಇನ್ನು ಕನ್ನಡದಲ್ಲೇ ಜಾಸ್ತಿ ಜ್ಞಾನಪೀಠ ಪ್ರಶಸ್ತಿ ಪಡೆದವರು ಇರುವುದು. ಹಾಗೆ ನೋಡಿದರೆ ಅವರಲ್ಲಿ ಬಹಳಷ್ಟು ಕವಿಗಳ ಮನೆ ಮಾತು ಕನ್ನಡವಲ್ಲವೇ ಅಲ್ಲ. ಇನ್ನೂ ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದ ತಳುಕಿನ ವೆಂಕಣ್ಣಯ್ಯನವರ ಮನೆ ಮಾತು ತೆಲುಗು. ಅವರು ಅವರ ಶಿಷ್ಯಂದಿರುಗಳಿಗೆ ಮನೆಯಲ್ಲಿ ಊಟ ಹಾಕಿ ಪಾಠ ಹೇಳಿಕೊಟ್ಟಂಥವರು. ಇಂತಹ ಮಹನೀಯರ ಸಾಲಿಗೇ ಸೇರುವ ಡಿ.ವಿ.ಗುಂಡಪ್ಪ, ದ.ರಾ.ಬೇಂದ್ರೆ, ಕನ್ನಡ ಕುಲ ಪುರೋಹಿತ ಎಂದೇ ಪ್ರಸಿದ್ಧರಾಗಿದ್ದ ಆಲೂರು ವೆಂಕಟರಾಯರು, ಇತ್ಯಾದಿ ಮಹಾಪುರುಷರ ಬಗ್ಗೆಯೂ ನಾವು ತಿಳಿದು ನಮ್ಮ ಮಕ್ಕಳಿಗೆ ಮತ್ತು ಇಂದಿನ ತರುಣ ಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ. ಇಂತಹ ಹತ್ತು ಹಲವಾರು ವಿಷಯಗಳಿಂದ ಅವರುಗಳು ಕನ್ನಡ ಭಾಷೆಯ ಹಿರಿಮೆ ತಿಳಿಯಬೇಕಾಗಿದೆ. ಇವರೆಲ್ಲ ಪ್ರಾತ:ಸ್ಮರಣೀಯರು. ಇಂದಿನ ಮಹಾಪುರುಷರುಗಳ ಸಾಲಿನಲ್ಲಿರುವ ನಡೆದಾಡುವ ದೇವರೆಂದೇ ಪ್ರಸಿದ್ಧವಾದ ಶಿವಕುಮಾರ ಸ್ವಾಮಿಜಿಗಳನ್ನೂ ಹೆಸರಿಸಬಹುದು. ಇವರುಗಳಿಂದಲೇ ಕನ್ನಡದ ಭಾಷೆಯ ಶ್ರೀಗಂಧ ವಿಶ್ವದಲ್ಲೆಲ್ಲಾ ಪಸರಿಸಿರುವುದು.

 

ಈಗೀಗ ಪರಭಾಷೀಯರ ದಾಳಿ ನಮ್ಮ ಕನ್ನಡನಾಡಿನಲ್ಲಿ ಬಹಳವಾಗಿದೆ. ಈಗಿನ ಕನ್ನಡ ನಾಡು ಇನ್ನೊಂದು ಹಾಳು ಹಂಪೆಯಾಗಲು ಅವಕಾಶ ಕೊಡೋದು ಬೇಡ. ಈ ದಿಸೆಯಲ್ಲಿ ಮೊದಲು ನಾವು ನಮ್ಮ ಬಗ್ಗೆ ತಿಳಿದುಕೊಳ್ಳೋಣ. ತಿಳಿದು ಕಲಿಯೋಣ. ಕಲಿತು ಕಲಿಸೋಣ. ಕಲಿಸಿ ಬೆಳೆಯೋಣ. ಬೆಳೆದು ನಾಡನ್ನೂ ಬೆಳೆಸಿ, ಸದೃಢಗೊಳಿಸೋಣ. ಇದು ನಮ್ಮ ಮೊದಲನೆಯ ಆದ್ಯತೆಯಾಗಲಿ.

 

ಹಾಗೆಂದು ಯಾವ ಭಾಷೆಗಳೂ ನಮಗೆ ವೈರಿಗಳಲ್ಲ. ಎಲ್ಲ ಭಾಷೆಗಳೂ ತಾಯಿಯಂದಿರ ಹಾಗೆ.

ಯಾವ ತಾಯಿಯೂ ಕೆಟ್ಟವಳಲ್ಲ. ಅವಳು ಮಾಡುವುದೆಲ್ಲ ತನ್ನ ಮಕ್ಕಳ ಹಿತಕ್ಕಾಗಿಯೇ. ಇತರ ಭಾಷೆಗಳನ್ನೂ ನಾವು ಕಲಿಯಬೇಕು. ಆದರೆ ನಮ್ಮ ಭಾಷೆಯನ್ನು ಮರೆಯುವಂತಾಗಬಾರದು. ಈಗೀಗ ಇಡೀ ಜಗತ್ತೇ ಚಿಕ್ಕದಾಗುತ್ತಿದೆ. ಯಾರು ಎಲ್ಲಿ ಬೇಕಾದರೂ ಜೀವನ ಮಾಡಬೇಕಾದ ಪ್ರಮೇಯ ಬರಬಹುದು. ಎಲ್ಲಿ ಉಳಿಯಬೇಕೋ ಅಲ್ಲಿಯ ಭಾಷೆ, ಜನಜೀವನಕ್ಕೆ ಹೊಂದಿಕೊಳ್ಳಬೇಕು. ಹೀಗೇ ಕನ್ನಡನಾಡಿಗೆ ಬರುವ ಪರಭಾಷಿಯರೂ ಕನ್ನಡವನ್ನು ಕಲಿಯಬೇಕು. ಇದಕ್ಕಾಗಿ ನಾವೆಲ್ಲರೂ ಕನ್ನಡ ಕಲಿಸೋಣ, ಎಲ್ಲರ ಪ್ರೀತಿ ಗಳಿಸೋಣ. ಕನ್ನಡದ ಸೊಗಡನ್ನು ಜಗತ್ತಿಗೇ ಸಾರೋಣ.