ವಿಭಾಗಗಳು
ಲೇಖನಗಳು

ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಎಂಬ ನಿಮ್ಮ ಗೆಳೆಯ

ಕೃಷ್ಣನ್, ಒಂದು ಪ್ರತಿಷ್ಟಿತ ಬ್ಯಾಂಕಿನಲ್ಲಿ ಉಳಿತಾಯ ಖಾತೆಯೊಂದನ್ನು ಹೊಂದಿದ್ದಾನೆ. ಆ ಬ್ಯಾಂಕಿನ ಕ್ರೆಡಿಟ್ ಕಾರ್ಡನ್ನೂ ಹೊಂದಿದ್ದಾನೆ. ಬ್ಯಾಂಕಿನ ಮೇಲೆ ಸಂಪೂರ್ಣ ವಿಶ್ವಾಸವಿರುವ ಅವನು ತನ್ನ ಖಾತೆಯಲ್ಲಿ ಎಷ್ಟು ಹಣ ಇದೆ, ಎಲ್ಲೆಲ್ಲಿ ಕ್ರೆಡಿಟ್ ಕಾರ್ಡನ್ನು ಉಪಯೋಗಿಸಿದ್ದೇನೆ, ಎಲ್ಲಿಂದ ತನ್ನ ಖಾತೆಗೆ ಹಣ ಬಂದು ಜಮೆ ಆಗಿದೆ, ಎಂಬುದರ ಬಗ್ಗೆ ಸ್ವಲ್ಪವೂ ಮಾಹಿತಿ ಇಟ್ಟುಕೊಂಡಿಲ್ಲ. ಒಂದು ದಿನ ಬ್ಯಾಂಕಿನಿಂದ ಕರೆ ಬಂತು. ’ಸರ್, ನಿಮ್ಮ ಖಾತೆಯಲ್ಲಿ ಹಣವಿಲ್ಲ, ತಕ್ಷಣ ತುಂಬಿಸಿ, ಇಲ್ಲದಿದ್ದರೆ ದಂಡ ವಿಧಿಸಬೇಕಾಗಬಹುದು’. ಈತನಿಗೆ ಬಹಳ ಆಶ್ಚರ್ಯವಾಯಿತು. ಅರೇ! ತನ್ನ ಖರ್ಚುಗಳಿಗಿಂತ ಜಮೆಯೇ ಹೆಚ್ಚಾಗಿರುವಾಗ, ತನ್ನ ಖಾತೆಯಲ್ಲಿ ಹಣ ಇಲ್ಲದಾಗುವುದು ಹೇಗೆ? ತಕ್ಷಣ ತನ್ನ ಖಾತೆಯಿರುವ ಬ್ಯಾಂಕಿಗೆ ಹೋದನು. ಅಲ್ಲಿಯ ಮ್ಯಾನೇಜರ್ ಅವರೊಂದಿಗೆ ವಿಚಾರಿಸಿದಾಗ, ಕ್ರೆಡಿಟ್ ಕಾರ್ಡ್‍ನಿಂದ ಒಂದು ಲಕ್ಷ ರೂಪಾಯಿಯ ಒಂದು ವ್ಯವಹಾರವಾಗಿದೆಯೆಂದೂ, ಅದರ ಬಗ್ಗೆ ಓಟಿಪಿ ತನ್ನ ಮೊಬೈಲ್‍ಗೆ ಕಳುಹಿಸಿದ್ದಾರೆಂದೂ ಮತ್ತು ಅದರ ಬಗ್ಗೆ ಏನೂ ಮನಸ್ತಾಪದ ಬಗ್ಗೆ ದೂರು ಬಂದಿಲ್ಲವೆಂದೂ ತಿಳಿಯಿತು. ಅರೇ! ತಾನು ತನ್ನ ಮೊಬೈಲ್ ಅನ್ನು ರಿಪೇರಿಗೆಂದು ನಾಲ್ಕು ದಿನಗಳ ಹಿಂದೆ ಅಂಗಡಿಗೆ ಕೊಟ್ಟಿರುವೆ. ಅದು ಹೇಗೆ ಓಟಿಪಿ ಬಗ್ಗೆ ಅಂಗಡಿಯವನು ತನಗೆ ತಿಳಿಸಿಲ್ಲ ಎಂದುಕೊಂಡು, ಮೊಬೈಲ್ ಅಂಗಡಿಗೆ ಹೋದನು. ಮೊಬೈಲ್ ಅಂಗಡಿ ಮಾಲೀಕ ಜಾಗದಲ್ಲಿರಲಿಲ್ಲ. ಅಲ್ಲಿದ್ದ ಒಬ್ಬ ಹುಡುಗ, ಸಾರ್ ಸಂಜೆಗೆ ಬರ್ತಾರೆ, ನಿಮ್ಮ ಮೊಬೈಲ್ ರೆಡಿಯಾಗಿದೆ ತೆಗೆದುಕೊಳ್ಳಿ ಅಂತ ಕೊಟ್ಟ. ಆಗ ಅಲ್ಲಿದ್ದ ಮೆಸೇಜುಗಳನ್ನು ನೋಡಿದಾಗ ಗೊತ್ತಾಯ್ತು, ಈ ಲಕ್ಷ ರೂಪಾಯಿಯ ವ್ಯವಹಾರದ ಬಗ್ಗೆ ಓಟಿಪಿ ಬಂದದ್ದು. ತಕ್ಷಣ ಬ್ಯಾಂಕ್ ಮ್ಯಾನೇಜರ್ ಅವರಿಗೆ ಫೋನಾಯಿಸಿ ವಿಷಯ ತಿಳಿಸಿದಾಗ, ಅವರು ನಮ್ಮಲ್ಲಿ ಲಿಖಿತ ದೂರು ಕೊಡಿ, ಹಾಗೆಯೇ ಸೈಬರ್ ಪೊಲೀಸರಿಗೂ ದೂರು ಕೊಡಿ ಎಂದು ತಿಳಿಸಿದರು. ಬ್ಯಾಂಕಿಗೆ ದೂರು ಕೊಟ್ಟು ಮ್ಯಾನೇಜರ್ ಜೊತೆ ಮಾತನಾಡುತ್ತಿದ್ದಾಗ ತಿಳಿದದ್ದೇನೆಂದರೆ, ಕ್ರೆಡಿಟ್ ಕಾರ್ಡಿನ ಎಲ್ಲ ವಿವರಗಳನ್ನೂ ಮೊಬೈಲ್‍ನಲ್ಲಿ ಶೇಖರಿಸಿಟ್ಟಿದ್ದೂ, ಮೊಬೈಲ್ ರಿಪೇರಿಗೆ ಕೊಟ್ಟಾಗ, ಆ ಅಂಗಡಿಯವನು ರಿಪೇರಿ ಮಾಡುವ ಸಮಯದಲ್ಲಿ ಇದೆಲವೂ ಅವನಿಗೆ ತಿಳಿದು, ಒಂದು ಲಕ್ಷ ರೂಪಾಯಿಗಳ ವ್ಯವಹಾರವನ್ನು ಮಾಡಿದ್ದ. ಹಾಗೆ ಮಾಡುವಾಗ, ಆ ಮೊಬೈಲಿಗೆ ಓಟಿಪಿ ಬಂದಿದ್ದು, ಅದನ್ನು ಉಪಯೋಗಿಸಿ ವ್ಯವಹಾರವನ್ನು ಕೊನೆ ಮಾಡಿದ್ದ. ಇದೊಂದು ಸತ್ಯ ಸಂಗತಿ. ಹೀಗೆ ಮಾಡುವುದು ಸರಿಯಲ್ಲ. ಸೈಬರ್ ಪೊಲೀಸರು ಇದರ ಬಗ್ಗೆ ತನಿಖೆ ನಡೆಸಿ ನ್ಯಾಯವನ್ನು ಒದಗಿಸುತ್ತಾರೆ. ಹಾಗೆಯೇ, ಬ್ಯಾಂಕಿನವರದ್ದೇನಾದರೂ ತಪ್ಪಿದ್ದಲ್ಲಿ, ಬ್ಯಾಂಕಿಂಗ್ ಒಂಬಡ್‍ಸ್‍ಮನ್ ಅವರಿಗೆ ದೂರು ಕೊಟ್ಟರೆ ಅವರು ನ್ಯಾಯ ಒದಗಿಸಿಕೊಡುತ್ತಾರೆ.

ಸಾಮಾನ್ಯವಾಗಿ ಎಲ್ಲರೂ ಬ್ಯಾಂಕುಗಳಲ್ಲಿ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ ಖಾತೆಯನ್ನು ತೆಗೆದಿರುತ್ತಾರೆ. ಅದು ಉಳಿತಾಯದ ಖಾತೆ ಇರಬಹುದು, ಡಿ-ಮ್ಯಾಟ್ ಖಾತೆ, ಪಿಪಿಎಫ್ ಖಾತೆ, ಕ್ರೆಡಿಟ್ ಕಾರ್ಡ್ ಅಥವಾ ಸಾಲದ ಖಾತೆ, ಇನ್ಯಾವುದೇ ತರಹದ ಖಾತೆಗಳು ಇರಬಹುದು. ಹಾಗೆ ಖಾತೆ ತೆರೆಯುವಾಗ ನೀವು ಬ್ಯಾಂಕಿನೊಂದಿಗೆ ಕರಾರು ಮಾಡಿಕೊಳ್ಳುತ್ತಿದ್ದೀರಿ. ಖಾತೆ ತೆರೆಯುವಾಗ ಅರ್ಜಿಯಲ್ಲಿ ಕೆಲವು ಕಡೆ ಸಹಿ ಮಾಡಬೇಕಾಗುವುದು. ಆಗ ಎಲ್ಲ ನಿಯಮಾವಳಿಗಳನ್ನೊಮ್ಮೆ ಓದಿ ಅರ್ಥ ಮಾಡಿಕೊಂಡು ಸಹಿ ಮಾಡಿದರೆ ಒಳಿತು. ಕೆಲವು ಸಲ ಸಾಲ ಕೊಡುವಾಗ ವಿಮೆ ತೆಗೆದುಕೊಳ್ಳುವಂತೆ ಹೇಳುವರು, ಅದು ತಪ್ಪು. ವಿಮೆ ತೆಗೆದುಕೊಂಡಾಗ ಅದರ ಪ್ರೀಮಿಯಂ ಭರಿಸಬೇಕಾಗುವುದು. ನಮಗೆ ಸಾಲವೇ ವಿನಃ, ವಿಮೆಯಲ್ಲ. ಏಕೆಂದರೆ ಮುಂದೆ ಆ ಬ್ಯಾಂಕಿನೊಂದಿಗಿನ ವ್ಯವಹಾರಗಳಿಗೆ ತಾವು ಬಾಧ್ಯರಾಗುವರು. ಏನೆಲ್ಲಾ ವ್ಯವಹಾರಗಳು, ಎಂತೆಲ್ಲಾ ಸಮಯದೊಳಗೆ ಮಾಡಿಕೊಡಬೇಕೆಂಬ ಬಗ್ಗೆ ನಿಯಮಾವಳಿಗಳನ್ನು ಬಿ.ಸಿ.ಎಸ್.ಬಿ.ಐ ಅಂದರೆ ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟ್ಯಾಂಡರ್ಡ್ ಬೋರ್ಡ್ ಆಫ್ ಇಂಡಿಯಾದವರು ಮಾಡಿದ್ದಾರೆ. ಹೌದು ಇದನ್ನೆಲ್ಲಾ ಜನ ಸಾಮಾನ್ಯರು ತಿಳಿದಿರಬೇಕಾಗಿಲ್ಲ. ಬ್ಯಾಂಕು ಮತ್ತು ಬ್ಯಾಂಕೇತರ ಸಿಬ್ಬಂದಿ ಇದನ್ನು ತಿಳಿದಿರಬೇಕು ಮತ್ತು ಅದರಂತೆ ಜನಗಳೊಂದಿಗೆ ವ್ಯವಹಾರ ಮಾಡಬೇಕು. ಅದಕ್ಕೆ ವಿರುದ್ಧವಾಗಿ ನಡೆದರೆ ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಅವರಲ್ಲಿಗೆ ದೂರು ನೀಡಬಹುದು.

ಯಾವುದೇ ಸೇವೆಗಳಿರಲಿ, ಪಾಸ್‍ಬುಕ್ ಎಂಟ್ರಿ ಮಾಡೋದು, ಡಿಡಿ ಪಡೆಯುವುದು, ಕ್ರೆಡಿಟ್ ಕಾರ್ಡ್ ಯಾ ಡೆಬಿಟ್ ಕಾರ್ಡ್ ಪಡೆಯುವುದು, ಅವುಗಳ ನಂತರದ ಸೇವೆಗಳು, ಸಾಲದ ಅರ್ಜಿಯನ್ನು ಪರಿಷ್ಕರಣೆ, ಸಾಲದ ಬಡ್ಡಿ, ಅಸಲು ಪಾವತಿ, ನಿಯಮಿತದ ಮುನ್ನವೇ ಸಾಲವನ್ನು ಮರುಪಾವತಿಸುವ ಬಗ್ಗೆ, ಹೆಚ್ಚಿನ ಬಡ್ಡಿ ಹೇರುವುದು, ಠೇವಣಿಗಳಿಗೆ ಸರಿಯಾದ ಬಡ್ಡಿ ನೀಡದಿರುವುದು, ಡಿಜಿಟಲ್ ವ್ಯವಹಾರಗಳು, ಪಿಂಚಣಿಯನ್ನು ಸರಿಯಾಗಿ ಪಾವತಿಸದಿರುವುದು, ಪಿಂಚಣಿ ಹೆಚ್ಚಾದಾಗ ಬಾಕಿಯನ್ನು ಖಾತೆಗೆ ಜಮಾ ಮಾಡದಿರುವುದು, ಕೇಂದ್ರ ಅಥವಾ ರಾಜ್ಯ ಸರಕಾರಗಳ ತೆರಿಗೆಗಳನ್ನು ಕಟ್ಟಿಸಿಕೊಳ್ಳದಿರುವುದು, ಇತ್ಯಾದಿ ಎಷ್ಟೋ ಸೇವೆಗಳ ಬಗ್ಗೆ ಜನ ಸಾಮಾನ್ಯರು ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಸಂಸ್ಥೆಗಳಿಂದ ತೊಂದರೆಗೆ ಒಳಗಾಗಬಹುದು. ಇದನ್ನು ಬಗೆಹರಿಸಲು, ಭಾರತೀಯ ರಿಜರ್ವ್ ಬ್ಯಾಂಕ್ 1995ರಲ್ಲಿ ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಯೋಜನೆಯನ್ನು ಜಾರಿಗೆ ತಂದಿತು. ಮತ್ತೆ 2006ರಲ್ಲಿ ಮತ್ತು ಈಗ ಚಾಲ್ತಿಯಲ್ಲಿರುವ 2017ರ ಪರಿಷ್ಕೃತ ಯೋಜನೆ ಜಾರಿಯಲ್ಲಿದೆ.

ಇದೊಂದು ಅರೆ ನ್ಯಾಯಾಂಗ ಸಂಸ್ಥೆ (ಕ್ವಾಸಿ ಜುಡಿಶಿಯಲ್ ಬಾಡಿ). ಈ ವ್ಯವಸ್ಥೆ, ಜನಸಾಮಾನ್ಯರಿಗೆ ಇರುವಂತಹದ್ದು. ದೊಡ್ಡ ಸಂಸ್ಥೆಗಳಿಗಲ್ಲ. ಪರಿಹಾರ ಕೋರುವ ಮಿತಿ 20 ಲಕ್ಷ ರೂಪಾಯಿಗಳಿಗೆ ಸೀಮಿತವಾಗಿರುವುದು. ಇದಕ್ಕೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಅತಿ ಕಡಿಮೆ ಸಮಯದಲ್ಲಿ ಪುಕ್ಕಟೆಯಾಗಿ ನ್ಯಾಯ ದೊರೆಯುವಂತಹದ್ದು. ವಕೀಲರ ಮೂಲಕ ದೂರುಗಳನ್ನು ಸ್ವೀಕರಿಸುವುದಿಲ್ಲ.
ದೂರುಗಳನ್ನು ದಾಖಲಿಸುವುದೂ ಬಹಳ ಸುಲಭ. ಆನ್‍ಲೈನ್‍ನಲ್ಲಿ, ಪೋಸ್ಟ್ ಮೂಲಕ ಅಥವಾ ಖುದ್ದಾಗಿ ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಕಛೇರಿಗೆ ಭೇಟಿ ನೀಡಿ ದೂರನ್ನು ದಾಖಲಿಸಬಹುದು. ಹಾಗೆ ದೂರನ್ನು ದಾಖಲಿಸಿದಾಗ ಒಂದು ಸಂಖ್ಯೆಯು ದೊರೆಯುವುದು. ಅದರ ಸಹಾಯದಿಂದ ತಮ್ಮ ದೂರು ಯಾವ ಸ್ಥಿತಿಯಲ್ಲಿದೆ ಎಂದು ಕಾಲ ಕಾಲಕ್ಕೆ ತಿಳಿದುಕೊಳ್ಳಬಹುದು. ಒಂದು ವರುಷಕ್ಕೂ ಹಳೆಯದಾದ ವ್ಯವಹಾರಗಳನ್ನು ತಿರಸ್ಕರಿಸಲಾಗುವುದು. ಒಮ್ಮೆ ಪರಿಷ್ಕರಿಸಿದ ದೂರನ್ನು ಮತ್ತೊಮ್ಮೆ ಸ್ವೀಕರಿಸುವುದಿಲ್ಲ. ನಿರಾಧಾರಿತ ದೂರುಗಳನ್ನೂ ಸ್ವೀಕರಿಸುವುದಿಲ್ಲ.

ಈ ಯೋಜನೆಯಂತೆ ಗ್ರಾಹಕರು ತಮ್ಮ ದೂರನ್ನು ಮೊದಲಿಗೆ ಯಾವ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೋ ಅವರಿಗೆ ಸಲ್ಲಿಸಬೇಕು. ಆ ದೂರನ್ನು ಸರಿಪಡಿಸಲು ಒಂದು ತಿಂಗಳ ಗಡುವು ಇರುತ್ತದೆ. ಒಂದು ತಿಂಗಳೊಳಗೆ ಉತ್ತರ ಬರದಿದ್ದರೆ, ಅಸರ್ಮಪಕ ಉತ್ತರ ನೀಡಿದ್ದರೆ ಅಥವಾ ದೂರನ್ನು ತಿರಸ್ಕರಿಸಿದರೆ, ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಅವರಿಗೆ ದೂರನ್ನು ನೀಡಬಹುದು. ಬ್ಯಾಂಕಿಗೆ ದೂರು ಕೊಟ್ಟು, ಒಂದು ತಿಂಗಳ ಮೊದಲೇ ಓಂಬಡ್‍ಸ್‍ಮನ್ನಿಗೆ ದೂರು ಕೊಟ್ಟರೆ, ಅದು ತಿರಸ್ಕೃತವಾಗುವುದು. ಇದರ ಬಗ್ಗೆ ಗಮನವಿರಲಿ. ತಿರುಸ್ಕೃತವಾದ ದೂರನ್ನು ಮತ್ತೆ ಕೊಟ್ಟರೂ, ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ದೂರನ್ನು ಕ್ಷೇತ್ರಗಳಲ್ಲೇ ದಾಖಲಿಸಬೇಕು. ಅಕಸ್ಮಾತ್ ಬೇರೆ ಕ್ಷೇತ್ರದ ಕಛೇರಿಯಲ್ಲಿ ದಾಖಲಿಸಿದರೂ, ಸರಿಯಾದ ಕ್ಷೇತ್ರಕ್ಕೆ ವರ್ಗಾಯಿತವಾಗುವುದು. ದೂರುಗಳಲ್ಲಿ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ದಾಖಲಿಸಬೇಕು. ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನಿಮ್ಮನ್ನು ಸುಲಭದಲ್ಲಿ ಸಂಪರ್ಕಿಸಲು ಅನುಕೂಲವಾಗುವುದು.

ಓಂಬಡ್‍ಸ್‍ಮನ್ ಕಛೇರಿಯ ತೀರ್ಪು ದೂರುದಾರರಿಗೆ ಸಮರ್ಪಕ ಅನಿಸದಿದ್ದರೆ, ಅದರ ವಿರುದ್ಧ ಭಾರತೀಯ ರಿಜರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಅವರಿಗೆ ಅಪೀಲು ಮಾಡಬಹುದು. ಅಲ್ಲಿಯೂ ಅವರಿಗೆ ಸಮಾಧಾನಕರ ಉತ್ತರ ಸಿಗದಿದ್ದರೆ, ಕನ್‍ಸ್ಯೂಮರ್ ಫೋರಂ ಅಥವಾ ಕೋರ್ಟುಗಳಿಗೆ ಹೋಗಬಹುದು. ಆದರೊಂದು ನೆನಪಿನಲ್ಲಿಟ್ಟುಕೊಳ್ಳಬೇಕು, ಅದೆಂದರೆ ಫೋರಂ ಅಥವಾ ಕೋರ್ಟುಗಳಲ್ಲಿ ಪುಕ್ಕಟೆಯಾಗಿ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಜನ ಸಾಮಾನ್ಯರಿಗೆ ಇದೊಂದು ಉತ್ತಮ ವೇದಿಕೆ.

ವಿಭಾಗಗಳು
ಹಾಸ್ಯ

ಪಾಪಣ್ಣಿಯ ಪುಂಡಾಟಿಕೆ

ಮೊಂಡ ಪ್ರಚಂಡ ಹೇಗಾದರೂ ಮಾಡಿ ಎಂಜಾಯ್ ಮಾಡಬೇಕೆಂದಿರುವ ಹುಡುಗನ ಕಥೆ. ಆಂಬೊಡೆ ಕಥೆ.

ಪಾಪಣ್ಣಿ ಹೆಸರಿಗೆ ತಕ್ಕಂತೆ ಚಿಕ್ಕ ಹುಡುಗನೇನಲ್ಲ. ೧೩-೧೪ರ ಹರೆಯದ ತಂದೆ ಕಳೆದುಕೊಂಡಿದ್ದ ಪ್ರಚಂಡ. ಅವನಮ್ಮನೇ ಅವನಿಗೆ ಅಪ್ಪ ಅಮ್ಮ. ಅದಕ್ಕಾಗಿಯೇ ಇರಬೇಕು ತಾಯಿಯನ್ನು ಅಪ್ಪಮ್ಮ ಎಂದು ಕರೆಯುತ್ತಿದ್ದ. ಅವರು ಕಡು ಬಡವರು. ಅವನ ಮನೆ ಇದ್ದದ್ದು ಪುಟ್ಟೇನಹಳ್ಳಿಯಲ್ಲಿ. ತಾಯಿ ಅವರಿವರ ಮನೆಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮಗನನ್ನು ಸಾಕುತ್ತಿದ್ದಳು. ಪಾಪಣ್ಣಿ ಕಾರ್ಪೊರೇಷನ್ ಶಾಲೆಯ ೭ನೇ ತರಗತಿಯಲ್ಲಿ ಓದುತ್ತಿದ್ದ. ಮುದ್ದಿನ ಮಗನಿಗೆ ಅಮ್ಮ ಪಡುತ್ತಿರುವ ಕಷ್ಟದ ಅರಿವಾಗಿರಲಿಲ್ಲ.

ಒಮ್ಮೆ ನಡೆದ ಪ್ರಸಂಗ. ಅಂದು ಭಾನುವಾರ. ಪಾಪಣ್ಣಿಗೆ ಏನಾದರೂ ವಿಶೇಷ ತಿನಿಸು ತಿನ್ನಬೇಕೆಂಬ ಹಂಬಲ. ಆದರೆ ಮನೆಯೊಳಗೇನೂ ಇಲ್ಲ ಎನ್ನುತ್ತಿದ್ದಾಳೆ ಅವನಮ್ಮ. ಹೇಗಾದರೂ ಮಾಡಿ ಸಾಮಾನು ತಂದುಕೊಟ್ಟು, ಏನು ಮಾಡಬೇಕೆಂದು ತಿಳಿಸು, ಮಾಡಿಕೊಡುವೆ, ಎಂದಿದ್ದಳು ಅಪ್ಪಮ್ಮ.

ಹೀಗೇ ಯೋಚಿಸುತ್ತಿದ್ದ ಪಾಪಣ್ಣಿಗೆ ಆಂಬೊಡೆ ತಿನ್ನಬೇಕೆಂಬ ಆಸೆಯಾಯಿತು. ಆದರೆ ತಕ್ಷಣಕ್ಕೆ ಅದರ ಹೆಸರು ಹೊಳೆದಿರಲಿಲ್ಲ. ಆಗವನು,
’ಅಮ್ಮ ಆ ದುಂಡನೆಯದನ್ನು ಮಾಡಮ್ಮ.
ಏನೋ ಅದು ರವೆ ಉಂಡೇನೇನೋ?
ಅಲ್ಲಮ್ಮ ಖಾರದ್ದು, ಚಕ್ರ ಇದ್ದ ಹಾಗೆ ರೌಂಡಾಗಿರತ್ತೆ.
ಚಕ್ಕುಲೀನೇನೋ, ಕೋಡುಬಳೇನಾ ಅಥವಾ ನಿಪ್ಪಟ್ಟೋ?
ಅದಲ್ಲಮ್ಮ ಅಂಗೈ ಮೇಲೆ ಒತ್ತಿ ಮಾಡ್ತಾರಲ್ಲ ಅದು.

ಅಯ್ಯೋ ನನ್ನ ಕರ್ಮ, ಉದ್ದಿನವಡೇನೇನೋ, ಅದು ಶ್ರಾದ್ಧದಲ್ಲಿ ಮಾತ್ರ ಮಾಡೋದು. ಹುಚ್ಚು ಮುಂಡೇದು ನಿಮ್ಮಪ್ಪನನ್ನು ನೆನಪಿಸಿಬಿಟ್ಟೆ. ಹೋಗು, ಅದು ಅವರ ಶ್ರಾದ್ಧದಲ್ಲಿ ಮಾತ್ರ ಮಾಡೋದು’.
ಅಷ್ಟು ಹೊತ್ತಿಗಾಗಲೇ ಅಪ್ಪಮ್ಮ ಸಹನೆ ಕಳೆದುಕೊಂಡಿದ್ದಳು. ಸತ್ತ ಪತಿಯ ನೆನಪಾಗಿ ತಡೆಯಲಾರದ ದು:ಖ ಒತ್ತರಿಕೊಂಡು ಬರುತ್ತಿತ್ತು.

’ಅಲ್ಲಮ್ಮ’ – ಹೀಗೆನ್ನುವಷ್ಟರಲ್ಲಿ ’ಫಟೀರ್’ ಎಂದು ಒಂದೇಟನ್ನು ಕೆನ್ನೆಗೆ ಕೊಟ್ಟಿದ್ದಳು, ಅಪ್ಪಮ್ಮ.
’ಮತ್ತೆ ಮತ್ತೆ ನನ್ನನ್ನು ಕಾಡಿಸಬೇಡ, ಹೋಗು ದೂರ’ ಎಂದಿದ್ದಳು.

ಮುಖ ಕೆಂಪಗೆ ಮಾಡಿಕೊಂಡ ಮಗನನ್ನು ಕಂಡು, ತಂದೆ ಕಳೆದುಕೊಂಡಿರುವ ತಬ್ಬಲ್ಲಿಯನ್ನು ತನ್ನನ್ನಲ್ಲದೇ ಬೇರಿನ್ನಾರನ್ನು ಕಾಡಿಸಿದಾನು ಎಂದುಕೊಂಡು, ತಿಳಿಹಾಸ್ಯ ವಾತಾವರಣ ಮೂಡಿಸಲು,

’ಏನೋ ನಿನ್ನ ಕೆನ್ನೆ ಆಂಬೊಡೆ ಊದಿಕೊಂಡ ಹಾಗೆ ಊದಿಕೊಂಡಿದೆ’ ಎಂದಳು.

ಹಾಂ! ಅದೇ ಕಣಮ್ಮ ನಾನು ಹೇಳ್ಬೇಕೂಂತಿದ್ದದ್ದು. ಆ ನೋವಿನಲ್ಲೂ ಅವನ ಮುಖದ ಮೇಲೆ ನಗೆ ಮೂಡಿತ್ತು.
ಅವನಮ್ಮ ಹೇಳಿದ್ದಳು, ’ಅಲ್ಲ ಕಣೋ, ಆಂಬೊಡೆ ಮಾಡೋಕ್ಕೆ, ಕಡಲೇಬೇಳೆ, ಒಣ ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಶುಂಠಿ – ಇವೆಲ್ಲಾ ಮನೇಲಿ ಇಲ್ವಲ್ಲೋ’.

ಅದಕ್ಕೆ ಉತ್ತರ ರೆಡಿಯಾಗಿಟ್ಕೊಂಡಿದ್ದ ನಮ್ಮ ಪಾಪಣ್ಣಿ.

’ನೀನೇನ್ಯೋಚ್ನೆ ಮಾಡ್ಬೇಡಮ್ಮ. ನಾನು ತಂದುಕೊಡ್ತೀನಿ ನೋಡ್ತಿರು’, ಎಂದು ಒಂದು ಟವೆಲ್ ಅನ್ನು ಹೆಗಲ ಮೇಲೇರಿಸಿ ಹೊರಟೇಬಿಟ್ಟ. ಅಲ್ಲ ಈ ಟವೆಲ್ ಏಕೆ ಅಂತೀರಾ? ಇನ್ನೂ ಮುಂದಕ್ಕೆ ನೋಡಿ – ನಮ್ಮ ಪಾಪಣ್ಣಿಯ ಕರಾಮತ್ತನ್ನು.

ಆಂಬೊಡೆ ಮಾಡಲು ಮನೆಗೆ ಕಡಲೆಕಾಯಿ ಎಣ್ಣೆ, ಕಡಲೆ ಬೇಳೆ, ಕೊತ್ತಂಬರಿಸೊಪ್ಪು, ಹಸಿಮೆಣಸಿನಕಾಯಿ ಮತ್ತು ಶುಂಠಿ ತಕ್ಷಣವೇ ಬೇಕೆಂದು ಅಮ್ಮ ಹೇಳಿದ್ದಳು. ಕೈನಲ್ಲಿ ಕಾಸಿಲ್ಲ. ಏನು ಮಾಡುವುದು? ಮನವಿದ್ದಲ್ಲಿ ಮಾರ್ಗ ಎಂದು ಮೊದಲು ಹತ್ತಿರವೇ ಇದ್ದ ಶೆಟ್ಟರ ಅಂಗಡಿಗೆ ಹೋದ, ನಮ್ಮ ಪಾಪಣ್ಣಿ.

’ರೀ ಶೇಟ್ರೇ, ಕಡಲೇಬೇಳೆ ರೇಟೆಷ್ಟು?’ ಅಂತ ಕೇಳಿದ.
ಇವನ ತರಲೆ ಬುದ್ಧಿ ಅರಿತಿದ್ದ ಶೆಟ್ರು, ’ಲೇ ಪಿಲ್ಲೋಡಾ ಎಷ್ಟು ಬೇಕು ಹೇಳು, ನಿನಗ್ಯಾಕೆ ರೇಟಿನ ವಿಚಾರ, ಕೈನಲ್ಲಿ ಎಷ್ಟಿದೆ ಡಬ್ಲು ತಿಳ್ಸು’ ಅಂದ್ರು.
ಅದಕ್ಕಿವನು, ’ನಮ್ಮಮ್ಮ ಹೇಳಿದ್ರು, ರೇಟು ಕೇಳ್ಕೊಂಡು ಬಾ ಅಂತ, ಹೋಗ್ಲಿ ಬಿಡಿ – ಹುಳು ಹಿಡಿದೇ ಇರೋ ಕಡಲೇಬೇಳೆ ಎಷ್ಟು ಥರ ಇವೆ, ಅವುಗಳದ್ದೆಲ್ಲಾ ಸ್ವಲ್ಪ ಸ್ವಲ್ಪ ಸ್ಯಾಂಪಲ್ ಕೊಡಿ’, ಅಂತ ಕೇಳಿ, ಅವರ ಮರುಪ್ರತಿಕ್ರಿಯೆಗೂ ಕಾಯದೇ ಅಲ್ಲೇ ಮೂಟೆಗಳಲ್ಲಿದ್ದ ೩-೪ ವಿಧದ ಕಡಲೆಬೇಳಗಳನ್ನು ಒಂದೊಂದು ಮುಷ್ಟಿಯಷ್ಟು ಬಾಚಿ, ಟವೆಲ್‍ನಲ್ಲಿ ಹಾಕಿಕೊಂಡು ಓಡಿ ಬಂದಿದ್ದ. ಹಿಂದೆಯೇ ಶೆಟ್ರು ’ ಹಿಡೀರ್ರೋ ಆ ಕಳ್ಳನ್ನ’ ಎಂದು ಕೂಗಿ, ಕೆಲಸದ ಹುಡುಗನನ್ನು ಹಿಡಿಯಲು ಕಳುಹಿಸಿದ್ರು. ಆದ್ರೆ ಆ ಕೆಲಸದ ಹುಡುಗ ಪಾಪಣ್ಣಿ ಸ್ನೇಹಿತ ಮತ್ತು ಶೆಟ್ರು ಈ ತಿಂಗಳು ಇನ್ನೂ ಸಂಬಳ ಕೊಟ್ಟಿಲ್ಲ ಅನ್ನೋ ಕೋಪಕ್ಕೆ ಅಲ್ಲೇ ಮೋರಿ ಪಕ್ಕ ಸ್ವಲ್ಪ ಹೊತ್ತು ಕುಳಿತಿದ್ದು, ಪಾಪಣ್ಣಿ ಸಿಗಲಿಲ್ಲ ಅಂತ ಹೇಳಿಕೊಂಡು ವಾಪಸ್ಸು ಬಂದಿದ್ದ.

ಪಾಪಣ್ಣಿ ಹೀಗೆಯೇ ಇನ್ನೆರಡು ಅಂಗಡಿಗಳಿಗೆ ಹೋಗಿ, ಅಂಗಡಿಯವರನ್ನು ಸ್ಯಾಂಪಲ್ ಕೊಡಿ ಅಂತ ಕೇಳಿ, ಒಟ್ಟು ಒಂದು ಕೇಜಿಯಷ್ಟು ಕಡಲೆಬೇಳೆಯನ್ನು ಒಟ್ಟು ಮಾಡಿ ತಂದಿದ್ದ.

ಜಯನಗರ ತರಕಾರಿ ಮಾರುಕಟ್ಟೆ ಬಹಳ ದೊಡ್ಡದಾಗಿದ್ದು, ಅಲ್ಲಿ ಯಾರಿಗೂ ತಿಳಿಯದಂತೆ ಹಸಿಮೆಣಸಿನಕಾಯಿ ಇತ್ಯಾದಿ ತರಬಹುದೆಂದು ಹೊರಟ. ಆದರೇನು ಮಾಡೋದು, ಅಲ್ಲಿಗೆ ಹೋಗಲು ಬಸ್ಸಿನಲ್ಲೇ ಹೋಗ್ಬೇಕು. ಇವನ ಹತ್ತಿರ ದುಡ್ಡಿಲ್ಲ. ಮಾರ್ಕೆಟ್ಟಿಗೆ ಹೊರಟಿದ್ದ ಬಸ್ಸನ್ನೇರಿ, ಕಂಡಕ್ಟರ್ ಹತ್ತಿರ ಬರುವವರೆವಿಗೂ ಕಾದಿದ್ದು, ನಂತರ ’ರೀ, ಮೆಜೆಸ್ಟಿಕ್ ಹೋಗತ್ತಾ?’ ಅಂತ ಕೇಳಿದ್ದ. ಇಲ್ಲ ನಾಲ್ಕನೇ ಬ್ಲಾಕ್‍ವರೆವಿಗೂ ಬಾ, ಈಗ ಮೊದಲು ಟಿಕೆಟ್ ತಗೋ ಅಂತ ಹೇಳಿದ್ದಕ್ಕೆ, ಇಲ್ಲ ನಾನು ಇಳೀತೀನಿ ಅಂತ ೧೫ನೇ ಕ್ರಾಸಿನಲ್ಲೇ ಇಳಿದಿದ್ದ. ಅಲ್ಲಿಗೆ ಬಂದ ಮೆಜೆಸ್ಟಿಕ್ ಬಸ್ಸಿಗೆ ಹತ್ತಿ ಮತ್ತೆ ಇದೇ ತರಹ ಕಂಡಕ್ಟರನನ್ನು, ’ಮಾರ್ಕೆಟ್ಟಿಗೆ ಹೋಗತ್ತಾ?’ ಅಂತ ಕೇಳಿ, ನಾಲ್ಕನೆಯ ಬ್ಲಾಕಿನ ಹತ್ತಿರ ಇಳಿದಿದ್ದ.

ಮಾರ್ಕೆಟ್ಟಿನ ಒಳಗೆ ಹೋಗಿ, ಅಲ್ಲಿ ಒಬ್ಬ ಮುದುಕಿಯ ಹತ್ತಿರ ಹಸಿಮೆಣಸಿನಕಾಯಿ ಎಷ್ಟು ಎಂದು ಕೇಳಿದ್ದ. ಅವಳು ೨ ರೂಪಾಯಿಗೆ ೧೦೦ ಗ್ರಾಂ ಎನ್ನಲು, ಕಡಿಮೆ ಇಲ್ವಾ ಎಂದು ಕೇಳಿದ್ದ. ಆಗ ಇನ್ನೊಬ್ಬರು ತರಕಾರಿ ವಿಚಾರಿಸಲು ಬಂದಾಗ, ಆ ಮುದುಕಿಯ ಕಣ್ಣಿಗೆ ಕಾಣದಂತೆ ಹಸಿಮೆಣಸಿಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪುಗಳನ್ನು ಎಗರಿಸಿ ಟವೆಲ್‍ನಲ್ಲಿ ಗಂಟು ಕಟ್ಟಿಕೊಂಡು ವಾಪಸ್ಸು ಮನೆಗೆ ಬಂದಿದ್ದ.

ಇಷ್ಟೆಲ್ಲಾ ತಂದು ಅವರಮ್ಮನಿಗೆ ಆಂಬೊಡೆ ಮಾಡು ಎಂದು ಪೀಡಿಸಲು, ಅವಳು ’ಇದೆಲ್ಲಾ ಸರಿ, ಆದ್ರೆ ಎಣ್ಣೇನೇ ಇಲ್ವಲ್ಲ, ಅದಕ್ಕೇನು ಮಾಡೋದು’, ಎಂದು ಕೇಳಿದ್ದಳು. ಅದಕ್ಕಿವನು, ಹೆಗಲ ಮೇಲೆ ಮತ್ತೆ ಅದೇ ಗಲೀಜು ಟವೆಲ್ ಏರಿಸಿಕೊಂಡು ಒಂದು ಸ್ಟೀಲ್ ಪಾತ್ರೆಯನ್ನೂ ಕೈನಲ್ಲಿ ಹಿಡಿದುಕೊಂಡು ಹತ್ತಿರದ ಮಲಯಾಳೀ ಅಂಗಡಿಗೆ ಹೊರಟೇಬಿಟ್ಟ.

ಪಕ್ಕದ ರಸ್ತೆಯಲ್ಲಿ ಒಂದು ಮಲಯಾಳೀ ದಿನಸಿ ಅಂಗಡಿ ಇತ್ತು. ಅಲ್ಲಿಗೆ ಹೋಗಿ, ’ಕಡಲೆಕಾಯಿ ಎಣ್ಣೆ ರೇಟೆಷ್ಟು?’ ಎಂದ. ಅಂಗಡಿಯವನಿಗೆ ಇವನ ಪರಿಚಯವಿರಲಿಲ್ಲ. ಒಂದು ತಿಂಗಳ ಹಿಂದೆಯಷ್ಟೇ ಆ ಅಂಗಡಿ ಪ್ರಾರಂಭವಾಗಿದ್ದದ್ದು. ಅಂಗಡಿಯ ಮುಂಭಾಗದಲ್ಲಿ ದಿನಸಿಗಳೆಲ್ಲದರ ಮೂಟೆಗಳನ್ನು ಬಿಚ್ಚಿಟ್ಟಿದ್ದರು. ಹಾಗೆಯೇ ಕಡಲೇಕಾಯಿ ಎಣ್ಣೆಯ ಒಂದು ದೊಡ್ಡ ಡ್ರಮ್ ಕೂಡಾ ಇಟ್ಟಿದ್ದರು. ನಮ್ಮ ಪಾಪಣ್ಣಿ ಆ ಡ್ರಮ್ಮಿನೊಳಕ್ಕೆ ಬಗ್ಗಿ ಎಣ್ಣೆಯನ್ನು ನೋಡುವ ನೆಪದಲ್ಲಿ ತನ್ನ ಟವೆಲ್ಲನ್ನು ಅದರೊಳಗೆ ಬೀಳಿಸಿದ. ನಂತರ,
’ಅಯ್ಯಯ್ಯೋ! ನನ್ನ ಟವೆಲ್ ಬಿದ್ದು ಹೋಯ್ತು. ಹೊಸ ಟವೆಲ್‍ಗೆ ಈ ಗತಿ ಬಂತಲ್ಲಪ್ಪ’ ಅಂತ ರಾಗವಾಗಿ ಅಳಲಾರಂಭಿಸಿದ. ಅಲ್ಲಿಯೇ ನಿಂತಿದ್ದ ಸಿದ್ದ (ಇವನನ್ನು ಚೆನ್ನಾಗಿ ಬಲ್ಲವನು), ’ಲೇಯ್! ಪಾಪಣ್ಣಿ ನಿನ್ ಆಟ ಎಲ್ಲ ಕಟ್ಟಿಟ್ಬಿಡು. ಆ ಗಬ್ಬು ನಾರ್ತಿರೋ ಟವೆಲ್‍ನ ಹೊಸ ಟವೆಲ್ ಅಂತಿಯೇನೋ ಲೇ’, ಎಂದ.
ಅದಕ್ಕೆ ಪಾಪಣ್ಣಿ ಇನ್ನೂ ರಾಗವಾಗಿ ಅಳುತ್ತಾ ಅಂಗಡಿಯ ಮಾಲಿಕನ ಕಡೆ ನೋಡ್ಕೊಂಡು, ’ ನನ್ನ ಟವೆಲ್, ನನಗೆ ಮೊದಲಿನ ತರಹ ಇರೋ ಹಾಗೆ ಕೊಟ್ಬಿಡಿ. ಇಲ್ಲಾಂದ್ರೆ ಹೊಸ ಟವೆಲ್ ಕೊಡಿಸಿ’ ಅಂದ. ಅದಕ್ಕೆ ಆ ಅಂಗಡಿಯವನು, ಇದ್ಯಾವ ಕರ್ಮ ಬಂದು ನನಗೆ ಅಂಟಿಕೊಳ್ತಪ್ಪ. ಈಗಿನ್ನೂ ಹೊಸದಾಗಿ ಅಂಗಡಿ ವ್ಯಾಪಾರ ಕುದುರ್ತಾ ಇದೆ. ಈ ಗಲಾಟೆ ದೊಡ್ಡದಾದ್ರೆ ತನ್ನ ವ್ಯಾಪಾರ ಹಾಳಾಗಿಹೋಗಬಹುದು, ಎಂದುಕೊಂಡು, ’ನೋಡಪ್ಪ, ಬಗ್ಗಿ ನೋಡಿದ್ದು ನೀನು, ಆ ಟವೆಲ್ ಡ್ರಮ್‍ನೊಳಗೆ ಬೀಳಿಸಿದ್ದು ನೀನು, ನಾವ್ಯಾಕೆ ಹೊಸ ಟವೆಲ್ ಕೊಡ್ಬೇಕು, ನೀನೇ ಅದನ್ನು ಎತ್ತಿಕೊಂಡು ಹೋಗು. ಬೇಕಿದ್ರೆ ಒಂದು ಬಾರ್ ಸೋಪ್ ಕೊಡ್ತೀನಿ, ಒಗೆದು ಸ್ವಚ್ಛ ಮಾಡ್ಕೋ’, ಎಂದಂದಿದ್ದ.

ಈ ಮಾತುಗಳಿಗೇ ಕಾಯ್ತಿದ್ದ ನಮ್ಮ ಪಾಪಣ್ಣಿ, ತನ್ನೊಡನೆ ತಂದಿದ್ದ ಸ್ಟೀಲ್ ಪಾತ್ರೆಯೊಳಗೆ ಆ ಟವೆಲ್ಲನ್ನು ಹಾಕಿಕೊಂಡು, ಅಂಗಡಿಯವನಿಂದ ಬಾರ್ ಸೋಪು ಕಸಿದುಕೊಂಡು ಒಂದೇ ಓಟಕ್ಕೆ ಮನೆಗೆ ಓಡಿದ್ದ. ಮನೆ ತಲುಪಿದ ಕೂಡಲೇ, ಆ ಟವೆಲ್ಲನ್ನು ಚೆನ್ನಾಗಿ ಹಿಂಡಿ, ಅದರಿಂದ ಬಂದ ಎಣ್ಣೆಯನ್ನು ಸೋಸಿಸಿ, ಅಮ್ಮನಿಗೆ ಕೊಟ್ಟು ಆಂಬೊಡೆ ಮಾಡಲು ಹೇಳಿದ್ದ.

ಆಮೇಲೆ ರುಚಿ ರುಚಿಯಾದ ಆಂಬೊಡೆ ಮಾಡಿಸಿಕೊಂಡು ತಿಂದು ಗಡದ್ದಾಗಿ ನಿದ್ರೆ ಮಾಡಿದ, ಎಂಬಲ್ಲಿಗೆ ಪಾಪಣ್ಣಿಯ ಆಂಬೊಡೆ ಕಥಾಪ್ರಸಂಗವು ಮುಕ್ತಾಯವಾಯಿತು.

ನೋಡಿದ್ರಾ ಹೇಗಿದೆ ಅಂತ, ನಮ್ಮ ಪುಂಡ ಪಾಪಣ್ಣಿಯ ಕರಾಮತ್ತು.

ವಿಭಾಗಗಳು
ಲೇಖನಗಳು

ಹಣದುಬ್ಬರಕ್ಕೆ ನೋಟು ಮುದ್ರಣ ಮದ್ದೇ?

40ವರ್ಷಗಳ ಹಿಂದೆ ರಾಮಣ್ಣನಿಗೆ 1000 ರೂಪಾಯಿ ಸಂಬಳ ಇದ್ದು, ಅದರಲ್ಲಿ 400 ರೂಪಾಯಿಯನ್ನು ಬಾಡಿಗೆ ಕೊಟ್ಟು, ತಿಂಗಳಿಗೆ ಬೇಕಾದ ವಸ್ತುಗಳನ್ನು ಖರೀದಿಸಿ, ದಿನನಿತ್ಯದ ಹಾಲು, ತರಕಾರಿ, ಬಸ್ ಛಾರ್ಜ್ ಎಲ್ಲ ಖರ್ಚು ಮಾಡಿಯೂ 200 ರೂಪಾಯಿ ಉಳಿಸುತ್ತಿದ್ದ. ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ಅರ್ಧದಷ್ಟಿತ್ತು. ಅದೇ ಈಗ ರಾಮಣ್ಣನಿಗೆ ಒಂದು ಲಕ್ಷ ರೂಪಾಯಿ ಸಂಬಳ ಬಂದರೂ ಆಗಿನ ನೆಮ್ಮದಿ ಜೀವನ ಈಗಿಲ್ಲ. ಅದೂ ಅಲ್ಲದೇ, ಸಮಾಜದಲ್ಲಿ ನೆರೆಹೊರೆಯವರಂತೆ ಬದುಕುವುದು ಅನಿವಾರ್ಯ. ತನಗಲ್ಲದಿದ್ದರೂ ಮನೆಯವರ ಒತ್ತಾಯದ ಮೇರೆಗೆ. 40 ವರ್ಷಗಳ ಯಾವ ವಸ್ತು ಐಷಾರಾಮಿ ಎನ್ನುವಂತಿತ್ತೋ, (ಉದಾಹರಣೆಗೆ, ಟಿವಿ, ಫ್ರಿಜ್, ಕಾರು, ಸ್ವಂತ ಮನೆ ಇತ್ಯಾದಿ) ಅವೆಲ್ಲವೂ ಈಗ ಅತ್ಯಾವಶ್ಯಕ ಎನ್ನುವಂತಾಗಿದೆ.
ಡೀಸೆಲ್ ಬೆಲೆ ಪೆಟ್ರೋಲ್‍ನಷ್ಟೇ ಆಗಿದೆ. ಆಗ ಇದ್ದ ಬೆಲೆ ಇಂದಿರುವ ಬೆಲೆಗೆ, ಊಹಿಸಲೂ ನಿಲುಕದು. ಅದೂ ಅಲ್ಲದೇ ಅಂದಿನ ಐಶಾರಾಮಿ ಎನ್ನುವ ವಸ್ತುಗಳು ಇಂದು ಅವಶ್ಯಕ ಎನ್ನುವಂತಾಗಿದೆ. ಅಂದು ಎಷ್ಟು ಜನಗಳ ಬಳಿಯಲ್ಲಿ ಕಾರು ಇತ್ತು ಈಗೆಷ್ಟು ಜನರಲ್ಲಿ ಇದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯೂ ಆಗಬೇಕು. ಇಲ್ಲದಿದ್ದರೆ ಆ ವಸ್ತುವಿನ ಬೆಲೆ ಹೆಚ್ಚಾಗುವುದು.

ಈಗೀಗ ಪೆಟ್ರೋಲ್ ಬೆಲೆ ಏರಿಕೆ, ಟೊಮೆಟೊ ಬೆಲೆ ಏರಿಕೆ, ಬಸ್ ದರ ಏರಿಕೆ, ಇತ್ಯಾದಿ ಬೆಲೆ ಏರಿಕೆ ಸುದ್ದಿಗಳು ಮಾಮೂಲಾಗಿದೆ. ಇದರ ಹಿಂದೆಯೇ, ವೇತನ ಏರಿಕೆ ಬಗ್ಗೆ ಕೂಗಾಟ, ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸುದ್ದಿಗಳೂ ಮಾಮೂಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆಯೂ ಕುಸಿಯುತ್ತಿದೆ. ಬೆಲೆ ಏರಿಕೆ ಏಕಾಗುತ್ತಿದೆ? ಬೆಲೆ ಏರಿಕೆ ನೀಗಿಸಲು, ರಿಸರ್ವ್ ಬ್ಯಾಂಕ್ ಹೆಚ್ಚು ಹೆಚ್ಚು ನೋಟುಗಳ ಮುದ್ರಣ ಯಾಕೆ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಪ್ರಶ್ನೆ. ಹೌದೋ ಅಲ್ವೋ!?

ಬೆಲೆ ಏರಿಕೆ ಏಕಾಗುತ್ತಿದೆ? ಬೇಡಿಕೆ ಜಾಸ್ತಿ ಆಗಿ, ಪೂರೈಕೆ ಸ್ಥಿತವಾಗಿದ್ದರೆ ಅಥವಾ ಕಡಿಮೆ ಆದರೆ, ಬೆಲೆ ಏರಿಕೆ ಆಗುವುದು. ಕೆಲವೊಮ್ಮೆ ಬೇಡಿಕೆ ಅಷ್ಟೇ ಇದ್ದರೂ, ಪೂರೈಕೆ ಸಮನಾಗಿದ್ದರೂ, ವಿದೇಶೀ ಮಾರುಕಟ್ಟೆಯ ದರಗಳು ಸಮನಾಗಿದ್ದರೂ, ಅದೆಷ್ಟೇ ದರ ಹೆಚ್ಚಿಸಿದರೂ, ಜನಗಳು ಕೊಂಡುಕೊಳ್ಳುವಂತಿದ್ದರೆ (ಉದಾಹರಣೆಗೆ ಸಿಗರೇಟ್, ಗುಟ್ಕಾ, ಮದ್ಯ ಇತ್ಯಾದಿ ಅವಶ್ಯಕವಲ್ಲದ ವಸ್ತುಗಳು) ಸರಕಾರದ ಬೊಕ್ಕಸ ತೂಗಿಸಲು, ಅದರ ಬೆಲೆಯನ್ನು ಏರಿಸುವುದು.

ಭಾರತೀಯ ರಿಸರ್ವ್ ಬ್ಯಾಂಕಿನ ತಾಳೆಪಟ್ಟಿ (ಬ್ಯಾಲೆನ್ಸ್ ಶೀಟ್) ನೋಡಿದರೆ, ದೇಶದ ಸ್ಥಿತಿಗತಿ ಗೊತ್ತಾಗುತ್ತದೆ. ದೇಶದ ಬಜೆಟ್ ಪ್ರಕಟಿಸುವ ಮುನ್ನಾ ದಿನ ಎಕಾನಮಿಕ್ ಸರ್ವೆ ಪ್ರಕಟವಾಗುತ್ತದೆ. ಅದರಲ್ಲಿ ಹಿಂದಿನ ವರ್ಷದ ಆರ್ಥಿಕ ಆಗುಹೋಗುಗಳ ಬಗ್ಗೆ ವಿಶ್ಲೇಷಿಸಿರುತ್ತಾರೆ. ನಂತರದ ದಿನ ಬಜೆಟ್‍ನಲ್ಲಿ ಬರುವ ವರ್ಷದ ಆರ್ಥಿಕ ಆಗುಹೋಗುಗಳ ಬಗ್ಗೆ ತಿಳಿಸುತ್ತಾರೆ. ರಿಸರ್ವ್ ಬ್ಯಾಂಕಿನ ತಾಳೆಪಟ್ಟಿಯ ಹೊಣೆಗಾರಿಕೆಯಾಗಿ (ಲಯಾಬಿಲಿಟೀಸ್) ಹೆಚ್ಚಿನ ಹಣ ಚಾಲ್ತಿಯಲ್ಲಿರುವ ನೋಟುಗಳಿದ್ದರೆ (ನೋಟ್ಸ್ ಇನ್ ಸರ್ಕುಲೇಶನ್), ಹೆಚ್ಚಿನದಾಗಿ ಸ್ವತ್ತುಗಳಾಗಿ ಸರಕಾರೀ ಸೆಕ್ಯುರಿಟೀಸ್/ ಬಾಂಡ್ ಮತ್ತು ವಿದೇಶೀ ಹೂಡಿಕೆಯಾಗಿರುತ್ತದೆ. ಹೂಡಿಕೆ ಜಾಸ್ತಿ ಮಾಡಿದರೆ, ನೋಟುಗಳನ್ನು ಹೆಚ್ಚಿನದಾಗಿ ಚಾಲ್ತಿಯಲ್ಲಿ ಬಿಡಬಹುದು. ಅದಕ್ಕೆ ತಕ್ಕ ಹಾಗೆ ಉತ್ಪಾದನೆ ಇಲ್ಲದಿದ್ದರೆ (ಕೃಷಿ, ಕೈಗಾರಿಕೆ ಇತ್ಯಾದಿ), ವಿದೇಶೀ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆ ಕಡಿಮೆ ಆಗಬಹುದು ಮತ್ತು ಹಣದುಬ್ಬರ ಹೆಚ್ಚಾಗುವುದು. ಇದು ದೇಶದ ಪ್ರಗತಿಗೆ ಒಳಿತಲ್ಲ. ರಿಸರ್ವ್ ಬ್ಯಾಂಕ್ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯತೆಯಲ್ಲಿದೆ. ಪ್ರತಿ ವರ್ಷದ ಹೆಚ್ಚುವರಿ ಆದಾಯವನ್ನು (ಲಾಭ ಎನ್ನುವಂತಿಲ್ಲ) ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಗುವುದು. ಹೆಚ್ಚು ಆದಾಯವನ್ನು ವರ್ಗಾಯಿಸುವುದು, ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬುದರ ಸಂಕೇತ.

1985ರಿಂದ 1991ರವರೆಗಿನ ನಮ್ಮ ದೇಶದ ಆರ್ಥಿಕ ನೀತಿ ಮತ್ತು ಗಲ್ಫ್ ಯುದ್ಧದ ಕಾರಣಗಳಿಂದ ನಮ್ಮ ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಆ ಸಮಯದಲ್ಲಿ ನಮ್ಮ ದೇಶದ ವಿದೇಶೀ ವಿನಿಮಯ ರಿಸರ್ವ್ (ಫಾರಿನ್ ಎಕ್ಸ್‍ಚೇಂಜ್ ರಿಸರ್ವ್) ಮೂರು ವಾರಗಳ ಆಮದಿಗೆ ಮಾತ್ರ ಸಾಕಾಗುವಂತಾಗಿತ್ತು. ಈ ಕಷ್ಟಕಾಲದಿಂದ ಹೊರಬರಲು ದೇಶದಲ್ಲಿದ್ದ ಸ್ವಲ್ಪ ಭಾಗವಾದ 47 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೇಂಡ್‍ನಲ್ಲಿ ಮತ್ತು 20 ಟನ್ ಚಿನ್ನವನ್ನು ಯೂನಿಯನ್ ಬ್ಯಾಂಕ್ ಆಫ್ ಸ್ವಿಟ್‍ಜರ್ಲೇಂಡ್ನಲ್ಲಿ ಅಡವಿಡಬೇಕಾಯಿತು. ಅದರ ಬದಲಿಗೆ 600 ಮಿಲಿಯನ್ ಡಾಲರನ್ನು ಐ.ಎಂ.ಎಫ್.ನಿಂದ ಸಾಲ ಪಡೆಯಿತು.

ಆದರೆ ಈಗ ಆ ಪರಿಸ್ಥಿತಿ ಇಲ್ಲ. ನಮ್ಮ ದೇಶದ ಹೆಚ್ಚಿನ ಹೂಡಿಕೆ ವಿದೇಶಿ ಬಾಂಡ್ ಮತ್ತು ಸೆಕ್ಯುರಿಟೀಸ್‍ಗಳಲ್ಲೇ ಇದೆ.

ಆದರೂ ಒಂದು ಸಮಾಧಾನದ ವಿಷಯವಿದೆ. ಈ ದೇಶದ ಎಲ್ಲ ಜನತೆಯೂ ಮನಸ್ಸು ಮಾಡಿದರೆ, ಯಾವ ದೇಶಕ್ಕೂ ಕಡಿಮೆ ಇಲ್ಲದಂತೆ ಉತ್ತುಂಗಕ್ಕೆ ಏರಬಲ್ಲದು. ಮೊದಲನೆಯದಾಗಿ, ಯುವ ಜನತೆಯ ಸಂಖ್ಯೆ ಎಲ್ಲ ದೇಶಗಳಿಗಿಂತಲೂ ಹೆಚ್ಚಾಗಿದೆ. ಯುವ ಶಕ್ತಿ ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಲ್ಲದು. ಎರಡನೆಯದಾಗಿ, ವಿದೇಶೀ ಮಾರುಕಟ್ಟೆಯಲ್ಲಿ ವಿನಿಮಯಕ್ಕಾಗಿ ರೂಪಾಯಿ ಬದಲಿಗೆ ಚಿನ್ನವನ್ನು ಬದಲಿಸುವಂತಾದರೆ ನಮ್ಮ ದೇಶ ಇತರ್ರ ಎಲ್ಲ ದೇಶಗಳಿಗಿಂತಲೂ ಮೇಲ್ಪಂಕ್ತಿಯಲ್ಲಿ ಇರಬಹುದು. ದೇಶದಲಿ ಮೀಸಲಿಟ್ಟಿರುವ ಚಿನ್ನ 642 ಟನ್ ಆದರೆ, ದೇಗುಲಗಳಲ್ಲಿ, ಮನೆ ಮನೆಗಳಲ್ಲಿ ಇರುವ ಚಿನ್ನ ಊಹೆಗೂ ಮೀರಿದ್ದು. ನಮ್ಮದು ಬಡ ದೇಶವಲ್ಲ, ಅತಿಯಾದ ಶ್ರೀಮಂತರೂ, ಅತಿಯಾದ ಬಡವರೂ ಇರುವ ದೇಶ. ದೇಶ ಆಳುವವರು ಮನಸ್ಸು ಮಾಡಿದರೆ, ಎಂದಿಗೂ ಭಾರತ ಒಂದನೇ ಶ್ರೇಣಿಯಲ್ಲಿ ನಿಲ್ಲಬಹುದು.

ವಿಭಾಗಗಳು
ಲೇಖನಗಳು

ಅತಿಯಾಸೆ ಗತಿ ಕೇಡು

ಅತಿಯಾಸೆ ಗತಿ ಕೇಡು

ನಮ್ಮ ಕಥಾ ನಾಯಕ ಭಾಸ್ಕರ ಮತ್ತು ಖಳ ನಾಯಕ ವಿಕ್ಟರ್ ರೇಗೊ. ಇದು 1980 ಮತ್ತು 1990 ದಶಕದಲ್ಲಿನ ಸಮಯ. ಇಬ್ಬರೂ ಶೇರ್ ಮಾರುಕಟ್ಟೆಯಲ್ಲಿ ಈಜಾಡುತ್ತಿದ್ದವರು. ರೇಗೊ ಇದರಲ್ಲಿ ಶೇರ್ (ಸಿಂಹ) ಆಗಿದ್ದರೆ, ಭಾಸ್ಕರ ಈಗಿನ್ನೂ ಕಣ್ಣು ಬಿಡುತ್ತಿರುವ ಕಬ್(ಮರಿ ಸಿಂಹ). ಇಬ್ಬರಿಗೂ ಬಹಳ ಬೇಗ ಶ್ರೀಮಂತರಾಗುವ ಬಯಕೆ. ಇವರಿಬ್ಬರೂ ಮುಂಬಯಿಯಲ್ಲಿ ಪ್ರತಿಷ್ಟಿತ ಬ್ಯಾಂಕಿನಲ್ಲಿ ಗುಮಾಸ್ತೆಗಳಾಗಿ ಕೆಲಸ ಮಾಡುತ್ತಿದ್ದರು.

ಮೊದಲೊಂದು ಸಣ್ಣ ಪೀಠಿಕೆ. ಸೆಕ್ಯುರಿಟೀಸ್ ಸ್ಕ್ಯಾಮ್ ಅರ್ಥಾತ್ ಹರ್ಷದ್ ಮೆಹ್ತಾ ಹೆಸರನ್ನು ಕೇಳದವರಿಲ್ಲ. ಅದರ ಬಗ್ಗೆ ಸಣ್ಣ ಮಾಹಿತಿ ಕೊಡುವೆ. ಮೋಸ ಮಾಡುವವರೆಲ್ಲರೂ ಜಾಣರಾಗಿರುತ್ತಾರೆ. ಆದರೆಲ್ಲೋ ಒಮ್ಮೆ ಎಡವಿಬಿಡುವರು. ಎಡವಿಬಿದ್ದರೆ ಮತ್ತೆ ಏಳಲಾಗದಂತೆ ಆಗುವುದು. ಹೆಚ್ಚಿನ ಬ್ಯಾಂಕುಗಳಿಗೆಲ್ಲಾ ಸರಕಾರೀ ಸೆಕ್ಯುರಿಟೀಸ್ ಮಾರುವ ಇಲ್ಲವೇ ಕೊಳ್ಳುವ ಕೆಲಸವನ್ನು ಆತ ಮಾಡಿಕೊಡುತ್ತಿದ್ದ ಅರ್ಥಾತ್ ಬ್ಯಾಂಕುಗಳಿಗೆ ದಲ್ಲಾಳಿ ಕೆಲಸ ಮಾಡುತ್ತಿದ್ದ. ಬ್ಯಾಂಕುಗಳು ತಮ್ಮಲ್ಲಿರುವ ಠೇವಣಿಗಳಿಗೆ ಅನುಗುಣವಾಗಿ ಎರಡು ವಾರಗಳಿಗೊಮ್ಮೆ ಶುಕ್ರವಾರದಂದು ಸರಕಾರೀ ಸೆಕ್ಯುರಿಟೀಸ್‍ಗಳಲ್ಲಿ ಹೂಡಿಕೆ ಮಾಡಬೇಕಿತ್ತು. ಯಾರಲ್ಲಿ ಹೆಚ್ಚಿನ ಸೆಕ್ಯುರಿಟೀಸ್ ಇದ್ದು ಯಾರಿಗೆ ಬೇಕಿದೆ ಎಂಬ ಮಾಹಿತಿಗಳನ್ನು ಕೆಲವೇ ಘಂಟೆಗಳಲ್ಲಿ ತಿಳಿದು ಮಾರುವ ಅಥವಾ ಕೊಳ್ಳುವ ಕೆಲಸವನ್ನು ಮಾಡುವುದು ಸ್ವಲ್ಪ ಕಷ್ಟದ ಕೆಲಸ. ಅದಕ್ಕಾಗಿ ದಲ್ಲಾಳಿಗಳ ಮೊರೆ ಹೋಗುತ್ತಿದ್ದರು. ಹರ್ಷದ್ ಮೆಹ್ತಾ ಬಹಳ ಚಾಣಾಕ್ಷ. ಹೆಚ್ಚಿನ ಬ್ಯಾಂಕುಗಳಿಗೆ ದಲ್ಲಾಳಿಯಾಗಿದ್ದ. ಇದರಿಂದಾಗಿ ಬ್ಯಾಂಕುಗಳೆಲ್ಲವುಗಳ ಕ್ಷಮತೆ ಇವನಿಗೆ ಗೊತ್ತಿತ್ತು. ಯಾವ ಯಾವ ಬ್ಯಾಂಕುಗಳಿಗೆ ಎಷ್ಟೆಷ್ಟು ಸೆಕ್ಯುರಿಟೀಸ್ ಬೇಕು, ಯಾರಿಂದ ಯಾರಿಗೆ ಮಾರಬಹುದು ಎಂಬುದನ್ನು ತಿಳಿದು, ಅವುಗಳಿಗೆ ಸಲಹೆ ಕೊಡುತ್ತಿದ್ದ. ಹೀಗೆ ಮಾಡುವಾಗ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಷ್ಟು ಹೆಚ್ಚಿನ ಹಣ ಇರುವುದೆಂದು ತಿಳಿದು, ತನ್ನ ಖಾತೆಗೆ ಹಾಕಿಕೊಳ್ಳುತ್ತಿದ್ದ ಅರ್ಥಾತ್ ಹೆಚ್ಚಿನ ಸೆಕ್ಯುರಿಟೀಸ್‍ಗಳನ್ನು ತನ್ನ ಖಾತೆಗೆ ಕೊಂಡುಕೊಳ್ಳುತ್ತಿದ್ದ. ಅದನ್ನೇ ಶೇರು ಮಾರುಕಟ್ಟೆಯಲ್ಲಿ ತೊಡಗಿಸಿ ತನಗೆ ಬೇಕಾದ, ತನಗೆ ಹತ್ತಿರವಾದ ಕಂಪನಿಗಳ ಶೇರುಗಳನ್ನು ಖರೀದಿಸಿ, ಆ ಶೇರುಗಳನ್ನು ದರವನ್ನು ಹೆಚ್ಚಿಸುತ್ತಿದ್ದ. ಆ ಕಂಪನಿಗಳು ನಷ್ಟವನ್ನೇ ಅನುಭವಿಸುತ್ತಿದ್ದರೂ ಶೇರು ಮಾರುಕಟ್ಟೆಯಲ್ಲಿ ಜೋರಿನ ದಂಧೆ ನಡೆಸುತ್ತಿದ್ದವು. ಈ ವಿಷಯ ಜನ ಸಾಮಾನ್ಯರಿಗೆ ಅರ್ಥ ಆಗುತ್ತಿರಲಿಲ್ಲ.

ಇನ್ನು ನಮ್ಮ ಕಥೆಯ ಕಡೆ ನೋಡೋಣ. ರೇಗೊಗೆ ಶೇರು ದಲ್ಲಾಳಿಗಳ ಪರಿಚಯವಿತ್ತು. ಮರುದಿನ ಯಾವ ಶೇರು ಎಷ್ಟು ಬೆಲೆಗೆ ಮಾರಾಟ ಆಗುವುದೆಂದು ಮೊದಲೇ ತಿಳಿದು ಮುನ್ನಾದಿನವೇ ಖರೀದಿಸಿಕೊಳ್ಳುತ್ತಿದ್ದ. ಹಣ ಕಡಿಮೆ ಆದರೆ, ತನ್ನ ಸ್ನೇಹಿತರುಗಳಿಂದ ಎರವಲು ಪಡೆಯುತ್ತಿದ್ದ. ತನ್ನ ಮನೆಯ ಕಡೆ ಅವನಿಗೆ ಗಮನವೇ ಇರುತ್ತಿರಲಿಲ್ಲ. ಸಂಬಳ ಬಂದ ತಕ್ಷಣ ಅದನ್ನು ಮನೆಗೂ ತೆಗೆದುಕೊಂಡು ಹೋಗದೇ, ಎಲ್ಲವನ್ನೂ ಶೇರುಗಳಿಗೆ ತೊಡಗಿಸುತ್ತಿದ್ದ. ಪತ್ನಿ ಮನೆಯ ಹತ್ತಿರವೇ ಒಂದು ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಳು. ಪತಿ ಬಹಳ ಬೇಗ ಶ್ರೀಮಂತನಾಗಲೆಂದು ಅವಳೂ ಅವನ ಕೃತ್ಯಕ್ಕೆ ಅಡ್ಡಿ ಬರುತ್ತಿರಲಿಲ್ಲ. ತನಗೆ ಬಂದ ಸಂಬಳದಿಂದಲೇ ಸಂಸಾರವನ್ನು ತೂಗಿಸುತ್ತಿದ್ದಳು.

ರೇಗೋ ಕೈನಲ್ಲಿ ಯಾವ ಕ್ಷಣದಲ್ಲಾದರೂ ಲಕ್ಷ ರೂಪಾಯಿ ಹೊಂದಿಸುವಂತಹ ಶಕ್ತಿ ಇತ್ತು. ಇದನ್ನು ಗಮನಿಸಿದ್ದ ಭಾಸ್ಕರನಿಗೂ ತಾನೂ ಅವನಂತಯೇ ಆಗಬೇಕೆಂಬ ಹಂಬಲ ಉಂಟಾಗಿತ್ತು. ಇತ್ತ ಹತ್ತು ರೂಪಾಯಿನ ಶೇರುಗಳು ಹತ್ತು ಸಾವಿರಕ್ಕಿಂತ ಹೆಚ್ಚು ಬೆಲೆಯಲ್ಲಿ ವ್ಯಾಪಾರವಾಗುತ್ತಿತ್ತು. ರೇಗೋಗೆ ಆಸೆ ಹೆಚ್ಚಾಗಿ ಎಲ್ಲರ ಕಡೆಯಿಂದಲೂ ಸಾಲ ಪಡೆದು ಶೇರುಗಳನ್ನು ಖರೀದಿಸುತ್ತಿದ್ದ. ಹಾಗೆಯೇ ಭಾಸ್ಕರನನ್ನೂ ತನ್ನ ಜೊತೆಗೆ ಸೇರುವಂತೆ ಪ್ರೇರೇಪಿಸಿದ್ದ. ಅತ್ತ ಭಾಸ್ಕರ ತನ್ನ ಊರಾದ ನಾಗರಕೋಯಿಲ್‍ನಲ್ಲಿದ್ದ ಮನೆ, ಜಮೀನುಗಳನ್ನು ಮಾರಿ ಬಂದ ಹಣವನ್ನು ಶೇರುಗಳಲ್ಲಿ ತೊಡಗಿಸಿದ್ದ.

1992ರಲ್ಲಿ ಸೆಕ್ಯುರಿಟೀಸ್ ಸ್ಕ್ಯಾಮ್ ಬೆಳಕಿಗೆ ಬಂದದ್ದೇ ತಡ, ಎಲ್ಲ ಶೇರುಗಳ ಬೆಲೆಗಳೂ ನೆಲ ಕಚ್ಚಿದ್ದವು. ಕಂಪನಿಗಳು ತಮ್ಮ ನಿಜ ರೂಪವನ್ನು ಶೇರುಗಳ ಬೆಲೆಯಲ್ಲಿ ತೋರಿಸಿದ್ದವು. ಮೆಹ್ತಾನ ಮೇಲೆ ವಿಚಾರಣೆ ಶುರು ಆಗಿತ್ತು. ತಲೆ ಎತ್ತಲಾಗದ ರೇಗೋ ಬ್ಯಾಂಕಿನ ಕೆಲಸಕ್ಕೆ ರಾಜೀನಾಮೆ ಇತ್ತು, ಬಂದ ಹಣದಲ್ಲಿ ಸಾಲವನ್ನು ಅರ್ಧ ಭಾಗ ತೀರಿಸಿ, ಇನ್ನರ್ಧ ಭಾಗ ತೀರಿಸಲೋಸುಗ ಮಾರವಾಡಿಯ ಹತ್ತಿರ ಕೆಲಸಕ್ಕೆ ಸೇರಿದ್ದ. ಅವನ ಪತ್ನಿಯ ಮೇಲೆ ವಿಪರೀತ ಸಾಲದ ಹೊರೆ. ಆಕೆಯೂ ತನ್ನ ಮನೆಯವರ ಕಡೆಯಿಂದ ಕಡವನ್ನು ಪಡೆದು, ದಿನ ದೂಡುವಂತೆ ಮಾಡಿಕೊಂಡಿದ್ದಳು. ಇತ್ತ ಭಾಸ್ಕರನು ತನ್ನ ಕೆಲಸಕ್ಕೆ ರಾಜೀನಾಮೆ ಇತ್ತರೂ ಬಂದ ಹಣದಲ್ಲಿ ಸಾಲ ತೀರಿಸಲಾಗದೇ, ಕುಟುಂಬದವರ ಹೀಗಳಿಕೆ ಮಾತುಗಳನ್ನು ಕೇಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದ.

ಓಹ್! ಇದೊಂದು ನಿಜವಾದ ಘಟನೆ. ಅದಕ್ಕೇ ಅಲ್ವೇ! ದೊಡ್ಡವರು ಹೇಳೋದು, ಹಾಸಿಗೆ ಇದ್ದಷ್ಟು ಕಾಲ ಚಾಚು ಅಂತ.

ವಿಭಾಗಗಳು
ಲೇಖನಗಳು

ಕರಾಳ ದಿನ

ಓದುಗರೇ, ನೋಡಿ ಒಂದು ಮಳೆ ಹೇಗೆ ಇಡೀ ನಗರವನ್ನು ಮತ್ತು ಅಲ್ಲಿರುವ ೧ ಕೋಟಿಗೂ ಮಿಕ್ಕ ಜನಗಳನ್ನು ನಿರ್ವಿಣ್ಣರನ್ನಾಗಿ ಮಾಡಿ ಹುಲುಮಾನವ ಎಂಬ ಮಾತನ್ನು ಹೇಗೆ ಸ್ಪಷ್ಟೀಕರಿಸಿತು ಅಂತ. ಒಂದೇ ಏಟಿಗೆ ನರಕದರ್ಶನ. ನಿಸರ್ಗ ತನ್ನ ವಿಶ್ವರೂಪವನ್ನು ತೋರಿಸಿದೆ. ನಾನು ನಿಮ್ಮ ಮುಂದೆ ಇಡುತ್ತಿರುವ ಸತ್ಯ – ನಾನು ಕಂಡದ್ದು, ಅನುಭವಿಸಿದ್ದು.

ಈ ಸಮಯಕ್ಕೆ ತಕ್ಕನಾದ ಒಂದು ಹಿಂದಿ ಹಾಡು – ರೋಜ್ ಶಾಮ್ ಆತೀ ಥಿ ಮಗರ್ ಓ ವೈಸಾ ನ ಥಿ.

ಆ ಕರಾಳ ದಿನ, ಜುಲೈ ೨೬, ೨೦೦೫ರಂದು ನನ್ನ ಮಗಳು ತನ್ನ ಅಂಧೇರಿಯ (ಮುಂಬಯಿ) ಕಾಲೇಜಿಗೆ ಹೋಗಿದ್ದಳು. ಅಂದು ಬೆಳಗ್ಗೆಯಿಂದಲೇ ವಿಪರೀತ ಮಳೆ. ಇಲ್ಲಿ ಮಳೆ ಇದ್ದರೂ ಎಲ್ಲ ಜನಗಳು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಯಾರಿಗೂ ಏನೂ ಅಷ್ಟಾಗಿ ತೊಂದರೆ ಎನಿಸದು. ಆದರೆ ಈ ಸಲ ಒಂದೇ ದಿನದ ೨೪ ಘಂಟೆಗಳಲ್ಲಿ ೯೪.೪ ಸೆಂ. ಮೀ. ಗಳಿಗೂ ಹೆಚ್ಚಿನ ಮಳೆಯಾಗಿದ್ದು ಹಿಂದಿನ ೧೦೦ ವರ್ಷಗಳಲ್ಲಿ ಇದೊಂದು ದಾಖಲೆ. ಇಡೀ ದೇಶದಲ್ಲೇ ಇಂತಹ ಭಾರೀ ಮಳೆ ಆಗಿರುವುದು ೪-೫ ಬಾರಿ ಮಾತ್ರವಂತೆ.
ಅಂದು ಮಾಮೂಲಿ ಮಳೆಗಾಲದ ದಿನಗಳಂತೆ ಮಧ್ಯಾಹ್ನ ೧ ಘಂಟೆಗೆ ಗೋರೆಗಾಂವಿನ ಮನೆಯಿಂದ ಅಂಧೇರಿಯ ಕಾಲೇಜಿಗೆ ಹೋದಳು. ೩ ಘಂಟೆಗೆ ಕಾಲೇಜಿನ ಪ್ರಾಂಗಣದಲ್ಲಿ ನೀರು ತುಂಬುತಿರಲು, ತಕ್ಷಣ ವಿದ್ಯಾರ್ಥಿಗಳಿಗೆ ಮನೆಗೆ ಹೋಗಲು ತಿಳಿಸಿದರು. ನನ್ನ ಮಗಳು ಮತ್ತು ಇನ್ನಿತರೇ ೨೦-೨೫ ಮಕ್ಕಳು ಕಾಲೇಜಿನ ಗೇಟಿನಿಂದ ಆಚೆಗೆ ಬರುವುದರಲ್ಲಿ ಮಳೆಯ ನೀರು ಮೇಲೇರುತ್ತಿತ್ತು. ಅಲ್ಲೇ ಎದುರಿಗಡೆ ಇರುವ ಅಪಾರ್ಟ್ ಮೆಂಟಿನ ಎರಡನೇ ಮಾಳಿಗೆಯಲ್ಲಿ ಇರುವ ಒಬ್ಬ ಮಹನೀಯರು ಇವರುಗಳನ್ನು ತಮ್ಮ ಮನೆಗೆ ಬರಲು ಕರೆದರು. ಇವರು ಎರಡನೇ ಮಾಳಿಗೆಗೆ ಏರುವುದರೊಳಗೆ ಮಳೆ ನೀರು ಮೊದಲನೆ ಮಾಳಿಗೆಯನ್ನು ಮುಟ್ಟಿತ್ತು. ಬಹುಪಾಲು ಮುಂಬಯಿಯಲ್ಲಿ ಹೀಗೇ ಆಗಿದ್ದು. ಆ ಸಮಯದಲ್ಲಿ ಹೆಚ್ಚಿನ ಮಳೆ ನೀರಿನೊಂದಿಗೆ ಸಮುದ್ರದ ಉಬ್ಬರವೂ ಕಾರಣವಾಗಿ ಮಳೆಯ ನೀರು ಸಮುದ್ರ ಸೇರುವ ಬದಲು ಬಿರುಸಿನಿಂದ ಸಮುದ್ರದ ಹಿನ್ನೀರಿನೊಂದಿಗೆ ಒಳಗೆ ನುಗ್ಗಿತ್ತು. ಆ ಮನೆಯವರು ಈ ಎಲ್ಲ ಮಕ್ಕಳನ್ನೂ ಮನೆಗೆ ಕರೆದು, ತಿನ್ನಲು ಮತ್ತು ಕುಡಿಯಲು ಇತ್ತು ಮಳೆಯ ನೀರು ಕಡಿಮೆಯಾಗುವವರೆಗೆ ಅಥವಾ ಇವರುಗಳ ಮನೆಯಿಂದ ಯಾರಾದರೂ ಕರೆದೊಯ್ಯಲು ಬರುವವರೆಗೂ ಅಲ್ಲೇ ಇರಲು ತಿಳಿಸಿ – ಇವರುಗಳ ಮನೆಗೆ ದೂರವಾಣಿ ಮಾಡಲು ಕೂಡ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲದೇ ಅಂದು ರಾತ್ರಿ ಅಲ್ಲೇ ಉಳಿಯಲು ಎಲ್ಲ ಅನುಕೂಲ ಮಾಡಿಕೊಟ್ಟರು. ಯಾವ ಜನ್ಮದ ಋಣಾನುಬಂಧಿಗಳೋ ಈ ಹಿತಚಿಂತಕರು. ಮುಂದಿನ ದಿನದ ಬೆಳಗ್ಗೆ ೮ ರ ಹೊತ್ತಿಗೆ ನೀರು ಕಡಿಮೆಯಾಗಿ, ಆ ಮಕ್ಕಳ ಮನೆಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಈ ಮಕ್ಕಳನ್ನು ಅವರವರ ಮನೆ ತಲುಪುವಂತೆ ಅನುಕೂಲ ಮಾಡಿಕೊಟ್ಟಿದ್ದರು.
ಇನ್ನು ಕೆಲವು ಮಕ್ಕಳು ತಾವೇ ತಾವಾಗಿ ಹತ್ತಿರದ ರೈಲ್ವೇ ಸ್ಟೇಷನ್ ಗೆಂದು ಆ ನೀರಿನಲ್ಲೇ ಹೊರಟರು. ಕುತ್ತಿಗೆಯ ಮಟ್ಟಕ್ಕೆ ಹರಿಯುತ್ತಿರುವ ಗಲೀಜು ನೀರಿನಲ್ಲೇ ಹೊರಟರು – ಹತ್ತಿರದ ರೈಲ್ವೇ ಸ್ಟೇಷನ್ ಗೆ. ಅಲ್ಲಿ ನೋಡಿದರೆ ಎಲ್ಲ ಗಾಡಿಗಳೂ ಅಲ್ಲಲ್ಲೇ ನಿಂತು ಬಿಟ್ಟಿವೆ. ಮಳೆಯ ನೀರು ಹಳಿಗಳನ್ನು ಮುಚ್ಚಿ ಪ್ಲಾಟ್ ಫಾರಂ ಮೇಲೆ ಬಂದಿದೆ. ಸರಿ ಅಲ್ಲೇ ಹೊರಟಿದ್ದ ಒಂದು ಬಸ್ಸನ್ನು ಏರಲು ಪ್ರಯತ್ನಿಸಿದರು. ವಿಪರೀತ ಜನಸಂದಣಿಯಿಂದಾಗಿ ಅವರ ಪ್ರಯತ್ನ ಸಫಲವಾಗಲಿಲ್ಲ. ಕೆಲವರ ನುಡಿಗಳಂತೆ ಬಸ್ಸಿನ ಮೇಲ್ಛಾವಣಿ ಹತ್ತಲು ಪ್ರಯತ್ನಿಸಿದರು. ಬಸ್ಸಿಗೂ ಹೊರೆ ತಾಳಲು ಒಂದು ಮಿತಿಯಿರುವುದಲ್ಲವೇ? ಇವರ ಪ್ರಯತ್ನದಿಂದಾಗಿ ಬಸ್ಸು ಹಿಂದಕ್ಕೆ ಮಗುಚಿಕೊಂಡು ನಿಂತ ನೀರಿಗಾಹುತಿಯಾಯಿತು. ಎಲ್ಲರೂ ನೀರಿನೊಳಗೆ. ಈಜಲು ಇದೇನು ಈಜುಗೊಳವೇ? ಅಲ್ಲಾದರೂ ಒಳ್ಳೆಯ ನೀರು ಇರುವುದು. ಇಲ್ಲಿ ಮಲಮೂತ್ರ ಗಲೀಜು ಮಿಶ್ರಿತ ನೀರು. ಸರಿ ಅಲ್ಲೇ ಇದ್ದ ಇತರರರು ಹಗ್ಗಗಳನ್ನು ಕಟ್ಟಿ ಒಬ್ಬೊಬ್ಬರನ್ನಾಗಿ ಮೇಲೆತ್ತಿದರು. ಈ ಮಧ್ಯೆ ಪುಟ್ಟ ಮಕ್ಕಳು ನೀರಿಗಾಹುತಿಯಾದರು. ಆ ಗೊಂದಲದ ವಾತಾವರಣದಲ್ಲಿ ಎಲ್ಲರಿಗೂ ತಮ್ಮ ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳುವುದೇ ಮುಖ್ಯವಾಗಿ ಬಡಪಾಯಿ ಮಕ್ಕಳನ್ನು ನೋಡುವವರೇ ಇಲ್ಲವಾಗಿತ್ತು. ಇದೇ ಸಮಯದಲ್ಲಿ ವಿದ್ಯುಚ್ಛಕ್ತಿ ಸರಬರಾಜುಗಾರರು ಟ್ರಾನ್ಸ್ ಫಾರಂಗಳಿಗೆ ನೀರು ನುಗ್ಗಿ ಶಾರ್ಟ್ ಆಗುವುದೆಂಬ ಭಯದಿಂದ ವಿದ್ಯುಚ್ಛಕ್ತಿ ಸರಬರಾಜು ನಿಲ್ಲಿಸಿದರು. ಎಲ್ಲೆಲ್ಲೂ ಗೊಂದಲದ ವಾತಾವರಣ. ಹಳಿಗಳ ಮೇಲೆ ನೀರು ಬಂದು ಮತ್ತು ಎರಡು ಸ್ಟೇಷನ್ ಗಳ ನಡುವೆ ಮಧ್ಯೆ ಮಧ್ಯೆ ಲೋಕಲ್ ಟ್ರೈನ್ ಸೇವೆಯನ್ನು ನಿಲ್ಲಿಸಿದರು. ರಸ್ತೆಗಳಲ್ಲಿ ೪-೬ ಅಡಿಗಳ ನೀರು ನಿಂತು ಬಸ್, ಟ್ಯಾಕ್ಸಿ, ಆಟೋರಿಕ್ಷಾ, ಮತ್ತಿತರೇ ವಾಹನಗಳ ಸಂಚಾರವೂ ಸ್ತಬ್ಧ. ಇನ್ನು ಕೆಲವು ಮಕ್ಕಳು ಟಾಫಿಕ್ ಜಾಮ್ ಆಗಿರುವ ರಸ್ತೆಗಳ ಮೂಲಕ ೪-೫ ಕಿಲೋಮೀಟರ್ ಗಳನ್ನು ನಡಿಗೆಯ ಮೂಲಕ ಕ್ರಮಿಸಿ ಮನೆಗಳನ್ನು ಸೇರಿದರು. ಇಂತಹ ಪ್ರಯತ್ನ ಮಾಡುವಾಗ ಕೆಲವು ಜಾಗಗಳಲ್ಲಿ ನೀರು ತುಂಬಿದ ಗುಂಡಿ, ಮೋರಿ, ಮ್ಯಾನ್ ಹೋಲ್ ಗಳು ಇರುವುದು ತಿಳಿಯದೇ ಅದರೊಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆಗಳೂ ಆದುವು.

ಇನ್ನು ನನ್ನ ವಿಷಯ:

ನನಗೆ ಮಧ್ಯಾಹ್ನ ೩ ಘಂಟೆಗೆ ಲೋಕಲ್ ಟ್ರೈನ್ ಸೇವೆ ನಿಂತಿದೆಯೆಂದೂ ತಿಳಿಯಿತು. ಸ್ವಲ್ಪ ಕೆಲಸ ಜಾಸ್ತಿ ಇದ್ದದ್ದರಿಂದ ಮತ್ತು ಹೇಗೂ ಗಾಡಿಯಿಲ್ಲದಿರುವುದರಿಂದ ತಕ್ಷಣ ನಾನು ಕಛೇರಿಯನ್ನು ಬಿಡಲಿಲ್ಲ. ೪ ಘಂಟೆಯ ವೇಳೆಗೆ ಮನೆಗೆ ಹೊರಡಲು ಚರ್ಚ್ಗೇಟ್ ರೈಲ್ವೇ ಸ್ಟೇಷನ್ ಗೆ ಬಂದೆ. ಅಲ್ಲಿ ನೋಡಿದರೆ, ಕಾಲಿಡಲೂ ಜಾಗವಿಲ್ಲ. ಎಲ್ಲೆಲ್ಲಿ ನೋಡಿದರೂ ಜನಗಳು. ನಾಲ್ಕೂ ಟ್ರ್ಯಾಕ್ ಗಳಲ್ಲಿ ಗಾಡಿಗಳು ನಿಂತಿವೆ. ಸಮಯ ಸಾರಣಿ ಸೂಚಕ ಖಾಲಿ ಪರದೆ ತೋರಿಸುತ್ತಿದೆ. ಆ ಗಾಡಿಗಳಲ್ಲಿ ಕುಳಿತಿರುವವರನ್ನು ವಿಚಾರಿಸಿದಾಗ ತಿಳಿದದ್ದು, ಆ ಗಾಡಿ ೩ ಘಂಟೆಗೆ ಹೊರಡಬೇಕಿದ್ದು ಆ ಸಮಯದಿಂದ ಅವರುಗಳು ಅಲ್ಲೇ ಕುಳಿತಿದ್ದಾರೆ. ಅದು ಯಾವಾಗ ಹೋಗುವುದೋ ಅಲ್ಲಿಯವರೆಗೂ ಅಲ್ಲೇ ಕುಳಿತಿರುತ್ತಾರೆ. ರೈಲ್ವೇಯವರಿಂದ ಏನೊಂದೂ ಸುದ್ದಿ ಇಲ್ಲ. ಗಾಡಿಗಳು ಎಲ್ಲಿಯವರೆಗೆ ಯಾವಾಗ ಹೊರಡುವುದು, ಯಾತಕ್ಕಾಗಿ ನಿಂತಿವೆ ಎಂಬುದರ ಬಗ್ಗೆ ಏನೊಂದೂ ಸೂಚನೆಗಳಿಲ್ಲ. ಸಂಜೆ ೬ ರವರೆಗೂ ನಾನೂ ಮತ್ತು ನನ್ನ ಸ್ನೇಹಿತರು ಕಾದಿದ್ದು, ಇನ್ನು ಕಾದು ಪ್ರಯೋಜನವಿಲ್ಲವೆಂದು ಟ್ಯಾಕ್ಸಿಯಲ್ಲಿ ಹೋಗೋಣವೆಂದು ರಸ್ತೆ ಬದಿಗೆ ಹೊರಟೆವು. ಯಾವೊಂದು ಟ್ಯಾಕ್ಸಿಯವರೂ ೫ ಕಿಲೊಮೀಟರ್ ಗಳಿಗಿಂತ ಜಾಸ್ತಿ ದೂರಗಳಿಗೆ ಬರಲು ತಯಾರೇ ಇಲ್ಲ. ನಮ್ಮ ಧ್ಯೇಯವೆಲ್ಲಾ ೩೬ ಕಿಲೋಮೀಟರ್ ದೂರದಲ್ಲಿರುವ ಗೋರೆಗಾಂವ್ ಸೇರುವುದು. ಆಗಲೇ ಕಂಡದ್ದು ಅಂಧೇರಿಗೆ ಹೊರಟಿದ್ದ ಒಂದು ಬಸ್ಸು. ಅದೂ ಪೂರ್ಣವಾಗಿ ತುಂಬಿತ್ತು. ಆದರೂ ಹೇಗೋ ಮಾಡಿ ಒಳ ನುಗ್ಗಿ ಟಿಕೆಟ್ ತೆಗೆದುಕೊಂಡದ್ದೂ ಆಯ್ತು. ನಂತರ ತಿಳಿದದ್ದು, ಆಮೆ ವೇಗದಲ್ಲಿ ವಾಹನಗಳು ತೆವಳುತ್ತಿವೆ ಅಂತ. ಚರ್ಚ್ ಗೇಟ್ ನಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಮರೀನ್ ಲೈನ್ಸ್ ತಲುಪಲು ೨ ಘಂಟೆಗಳು ತೆಗೆದುಕೊಂಡವು. ನಮ್ಮೊಂದಿಗಿದ್ದವರೊಬ್ಬರು ನಮ್ಮ ಬ್ಯಾಂಕಿನಲ್ಲಿ ಸುರಕ್ಷಾ ಅಧಿಕಾರಿ (ಕ್ಯಾಪ್ಟನ್ ಸಿರೋಲಾ) ಹೇಳಿದರು, ಸದ್ಯಕ್ಕೆ ನಾವು ಬ್ಯಾಂಕಿಗೆ ಹೋಗೋಣ. ಅಲ್ಲಿಯೇ ಉಳಿಯೋಣ ಅಂತ. ಸರಿ ಹೇಗಿದ್ದರು ಬ್ಯಾಂಕು ಖಾಲಿಯಾಗಿರುತ್ತದೆ, ಸುರಕ್ಷಿತವಾದ ತಾಣ, ಮತ್ತು ಜೊತೆಗೆ ಸುರಕ್ಷಾ ಅಧಿಕಾರಿ ಇರುವುದರಿಂದ ನಮಗೆ ಏನೂ ತೊಂದರೆ ಆಗುವುದಿಲ್ಲ ಅಂತ ಹೊರಟೆವು. ಬ್ಯಾಂಕಿಗೆ ಹೋದಾಗ ತಿಳಿದದ್ದು – ನಮ್ಮ ತರಹ ಎಲ್ಲರೂ ವಾಪಸ್ಸು ಬಂದು ಅಲ್ಲೇ ಸೇರಿದ್ದಾರೆ ಅಂತ. ಮೇಲಧಿಕಾರಿಗಳ ಆದೇಶದಂತೆ ಎಲ್ಲರೂ ಅಲ್ಲೇ ಉಳಿಯಲು ಅನುಕೂಲ ಮಾಡಿದ್ದರು. ರಾತ್ರಿ ಹತ್ತು ಘಂಟೆ ಹೊತ್ತಿಗೆ ಯಾರೋ ಹೇಳಿದರು – ಗೋರೆಗಾಂವಿನ ಕಡೆಗೆ ಒಂದು ಕಾರು ಹೊರಟಿದೆ, ಯಾರಾದರೂ ಹೋಗುವಂತಿದ್ದರೆ ಹೋಗಬಹುದು ಅಂತ. ಅದಾಗಲೇ ಟೆಲಿಫೋನ್ ಗಳೆಲ್ಲಾ ಕೆಲಸ ಮಾಡುತ್ತಿರಲಿಲ್ಲ. ಮನೆಯ ಕಡೆ ಯೋಚನೆ, ಕಾಲೇಜಿಗೆಂದು ಹೋಗಿ ಇನ್ನೂ ಮನೆ ಸೇರದಿದ್ದ ಮಗಳ ಯೋಚನೆಗಳಿಂದ ತಕ್ಷಣ ಮನೆಗೆ ಹೋಗುವುದೇ ಸೂಕ್ತ ಎಂದು ನಾನು ಆ ಕಾರಿನಲ್ಲಿ ಮನೆ ಕಡೆಗೆ ಹೊರಟೆ. ಮೊದಲ ೮ ಕಿಲೋಮೀಟರ್ ಗಳು ಆರಾಮಿನ ಪ್ರಯಾಣ. ಪ್ರಭಾದೇವಿಯಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಬಂದಾಗ ಟ್ರಾಫಿಕ್ ಪೂರ್ಣವಾಗಿ ಜಾಂ ಆಗಿದ್ದಿತು. ಅಲ್ಲಿಂದ ವಾಹನಗಳ ತೆವಳುವಿಕೆ. ಮುಂದಿನ ೭ ಕಿಲೋಮೀಟರ್ ಸವೆಸಿ ಬಾಂದ್ರಾ ತಲುಪಿದೆವು. ಆಗಿನ ವೇಳೆ ಬೆಳಗಿನ ೬ ಘಂಟೆ. ರಸ್ತೆಯ ಅಕ್ಕ ಪಕ್ಕದಲ್ಲಿ ಕಂಡದ್ದು ಕಾರು ಮತ್ತಿತರೇ ವಾಹನಗಳ ಮೇಲೆ ಸುಸ್ತಾಗಿ ಒರಗಿರುವ ಮರಗಳು. ಹಾದಿಯಲ್ಲಿ ಎಲ್ಲೆಲ್ಲೂ ಸಮಾಜ ಸೇವಕರುಗಳು ಸರಬರಾಜು ಮಾಡುತ್ತಿದ್ದ ಚಹಾ ಮತ್ತು ಬಿಸ್ಕತ್ತುಗಳು.
೧೫ ಕಿಲೋಮೀಟರ್ ಪ್ರಯಾಣಿಸಲು ನಾವು ತೆಗೆದುಕೊಂಡ ಸಮಯ ೮ ಘಂಟೆಗಳು. ಅಲ್ಲಿ ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇ ಯಲ್ಲಿ ಮುಂದಿನ ೨೦ ಕಿಲೋಮೀಟರ್ ಗಳವರೆಗೆ ಸಂಪೂರ್ಣವಾಗಿ ವಾಹನಗಳು ತುಂಬಿ ನಿಂತಿದ್ದು ಆ ರಸ್ತೆಯನ್ನು ಮುಚ್ಚಿದ್ದರು. ಅಲ್ಲಿ ಕೆಲವು ವಾಹನಗಳಲ್ಲಿ ಇಂಧನ ಮುಗಿದು ಅಲ್ಲಲ್ಲೇ ಬಿಟ್ಟು ಹೋಗಿದ್ದರು. ಈ ಕಡೆ ಇದ್ದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಲಿಂಕಿಂಗ್ ರಸ್ತೆಗಳಲ್ಲಿ ೫-೬ ಅಡಿ ಎತ್ತರಕ್ಕೆ ನೀರು ನಿಂತಿದ್ದು ರಸ್ತೆಗಳಲ್ಲಿ ವಾಹನಗಳು ಮುಳುಗಿಹೋಗಿ ಸಂಚಾರ ನಿಂತುಹೋಗಿತ್ತು. ನನ್ನೊಡನಿದ್ದವರು ಮತ್ತೆ ವಾಪಸ್ಸು ಬ್ಯಾಂಕಿಗೆ ಹೊರಡುವೆಂದರು. ನನ್ನ ಅನುಭವದ ಪ್ರಕಾರ ಮತ್ತೆ ವಾಪಸ್ಸು ಹೋಗುವುದು ಸೂಕ್ತವಿರಲಿಲ್ಲ. ನನ್ನ ಅನಿಸಿಕೆಯನ್ನು ಪರಿಗಣಿಸಲು ಇನ್ನಿತರರು ತಯಾರಿರಲಿಲ್ಲ. ನಾನೊಬ್ಬನೇ ಇಳಿದು ಹತ್ತಿರದ ಸ್ಟೇಷನ್ನಿಗೆ ಹೊರಟೆ. ಅಲ್ಲಿಯೂ ಗಾಡಿಗಳು ನಿಂತಿದ್ದವು. ಒಳಗೆ ಜನಗಳು ಕುಳಿತು, ನಿಂತು ನಿದ್ದೆ ಮಾಡುತ್ತಿದ್ದರು. ಪ್ಲಾಟ್ ಫಾರ್ಮಿನಲ್ಲೂ ಜನ ತುಂಬಿದ್ದರು. ಕೆಲವರು ಸ್ಟೇಷನ್ ಮಾಸ್ತರರೊಂದಿಗೆ ವಾಗ್ಯುದ್ಧದಲ್ಲಿ ತೊಡಗಿದ್ದರು. ಆಗ ತಿಳಿದುಬಂದದ್ದು ಈ ಗಾಡಿಗಳು ಹಿಂದಿನ ದಿನದ ಮಧ್ಯಾಹ್ನ ೨ ಘಂಟೆಯಿಂದ ಅಲ್ಲೇ ನಿಂತಿದ್ದವು. ಹಳಿಗಳಲ್ಲಿ ನೀರು ತುಂಬಿದೆ, ಸಿಗ್ನಲ್ ಕೆಲಸ ಮಾಡುತ್ತಿಲ್ಲ. ತುಂಬಾ ಜನಗಳು ಹಳಿಗಳ ಮೇಲೆ ನಡೆದು ಹೊರಟಿದ್ದರು. ಒಂದೆಡೆ ಎಡಬಿಡದೆ ಸುರಿಯುತ್ತಿರುವ ಮಳೆ. ಸರಿ ಛತ್ರಿ ಹಿಡಿದು ನಾನೂ ಹಳಿಯ ಮೇಲೆ ನಡೆದು ಹೊರಟೆ. ರಸ್ತೆಯಲ್ಲಿ ನಡೆಯಲು ಭಯ. ಎಲ್ಲೆಂದೆರಲ್ಲಿ ನೀರು ತುಂಬಿದ ಹೊಂಡಗಳು, ತೆರೆದಿರುವ ಮ್ಯಾನ್ ಹೋಲ್ ಗಳು. ಇತರರುಗಳು ಅಲ್ಲಿ ಇಲ್ಲಿ ಹೊಂಡ ಮತ್ತು ಮ್ಯಾನ್ ಹೋಲ್ ಗಳಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿಹೋದವರ ವಿಷಯಗಳನ್ನು ಹೇಳುತ್ತಿದ್ದರು. ಹಳಿಯ ಮೇಲೆ ಹೊರಟಾಗ ತಿಳಿದದ್ದು, ಪ್ರತಿ ಸ್ಟೇಷನ್ ಗಳಲ್ಲೂ (ಸರಿ ಸುಮಾರು ಒಂದು-ಎರಡು ಕಿಲೋಮೀಟರ್ ಗೆ ಒಂದು ಸ್ಟೇಷನ್ ಗಳಿವೆ), ಟ್ರೈನ್ ಗಳು ನಿಂತಿವೆ, ಅದರಲ್ಲಿ ಜನ ಸಂದಣಿ. ಹಾಗೇ ಅಲ್ಲಿಂದ ೧೪ ಕಿಲೋಮೀಟರ್ ದೂರದಲ್ಲಿರುವ ಗೋರೆಗಾಂವ್ ತಲುಪಲು ೩ ಘಂಟೆಗಳು ತೆಗೆದುಕೊಂಡೆ. ಹಳಿಗಳಲ್ಲಿರುವ ಕಲ್ಲುಗಳನ್ನು ತುಳಿದು ಶೂ ಕಿತ್ತು ಹೋಗುವ ಹಾಗಾಗಿತ್ತು. ಇದೇ ತರಹ ಹೆಂಗಸರು, ಮಕ್ಕಳು ಕೂಡಾ ನಡೆದಿದ್ದರು. ಈ ಮಧ್ಯೆ ಕಂಡ ದೃಶ್ಯ ಅಂದ್ರೆ ಎಳೆ ಕಂದಮ್ಮಗಳನ್ನು ಛತ್ರಿಯ ಕೆಳಗೆ ಹಿಡಿದು ಹೊರಟ ತಾಯಮ್ಮಗಳು. ಕೆಲವು ಚಿಂಟು ಚಿಲ್ಟಾರಿಗಳು ಅಪ್ಪ ಅಮ್ಮನ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದುದು. ಹಿಂದಿನ ರಾತ್ರಿಯಿಂದ ಇವರೆಲ್ಲರಿಗೂ ಆಹಾರವಿಲ್ಲ, ನಿದ್ರೆಯಿಲ್ಲ. ನೋಡಿದಿರಾ ಮಾನವನನ್ನು ಹೇಗೆ ಪರೀಕ್ಷಿಸುತ್ತಿದೆ ನಿಸರ್ಗ. ನಾಲೆಗಳನ್ನು ದಾಟುವಾಗ ಕಂಡದ್ದು ಎಲ್ಲಿಂದಲೋ ಕೊಚ್ಚಿ ಬಂದ ಲಾರಿ, ಟ್ಯಾಂಕರ್, ಸತ್ತು ಕೊಚ್ಚಿ ಬಂದ ಎಮ್ಮೆಗಳು, ಕೊಚ್ಚಿ ಬಂದ ಅಬ್ಬೇಪಾರಿ ಶವಗಳು. ಮನೆಗೆ ಬರಲು ಕಾಲುಗಳು ಬಾತು ಕೊಂಡಿದ್ದವು. ಕಾಲೆತ್ತಲು ನೋವಾಗುವುದು. ಎರಡು ದಿನ ಬ್ಯಾಂಕಿನ ಕಡೆ ಹೋಗಬಾರದೆಂದು ನಿರ್ಧರಿಸಿದೆ. ಅದಾಗಲೇ ಸುದ್ದಿ ಬಂದದ್ದು, ಸರಕಾರದವರೇ ಎರಡು ದಿನಗಳ ರಜೆ ಘೋಷಿಸಿದ್ದಾರೆ ಅಂತ. ಇಷ್ಟೆಲ್ಲಾ ಅನುಭವಿಸುವುದರೊಳಗೆ ಮನುಷ್ಯ ಮಾನಸಿಕ ಸಂತುಲ ಕಳೆದುಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಒಂದು ಒಳ್ಳೆಯ ಸುಧಾರಣೆ ಎಂದರೆ, ಎಲ್ಲೆಲ್ಲೂ ಜನಗಳು ಇನ್ನಿತರರ ದು:ಖ ದುಮ್ಮಾನಗಳನ್ನು ಕೇಳಿ ಅದಕ್ಕೆ ಸಮಯಕ್ಕೆ ತಕ್ಕ ತಮಗೆ ತಿಳಿದಂತಹ ವಿಚಾರಗಳನ್ನು ವಿನಿಮಯಿಸಿಕೊಂಡದ್ದು. ಇದೇ ಅಲ್ಲವೇ ಇನ್ನೂ ಹೆಚ್ಚಿನ ದಿನಗಳು ಬಾಳಲು ಉತ್ತೇಜನಕಾರಿ?

ಮಹಿಳೆಯರು ಕೆಲಸಕ್ಕೆ ಹೋಗುವಾಗ ತಮ್ಮ ಎಳೆ ಕಂದಮ್ಮಗಳನ್ನು ಜೊತೆಗೆ ಕರೆದೊಯ್ದು ಮಕ್ಕಳ ಮನೆಗಳಲ್ಲಿ (ಕ್ರೆಷ್) ಬಿಟ್ಟು ಸಂಜೆ ಬರುವಾಗ ತಮ್ಮ ಜೊತೆ ಕರೆತರುವುದು ವಾಡಿಕೆ. ಅಂತಹ ಇಬ್ಬರು ಮಹಿಳೆಯರನ್ನು ನಾನು ನೋಡಿದ್ದು. ಒಂದು ದಿನ-ರಾತ್ರಿ ಹೊಟ್ಟೆಗೆ ಅನ್ನವಿಲ್ಲದೇ ಕಣ್ಣಿಗೆ ನಿದ್ರೆ ಇಲ್ಲದಾಗ್ಯೂ ಆ ಮಗು ತನ್ನಮ್ಮನನ್ನು ನೊಡಿದಾಗಲೆಲ್ಲ ಬೊಚ್ಚು ಬಾಯಿ ತೋರಿಸಿ ನಕ್ಕು ಕೈ ಕಾಲುಗಳ ಬಡಿಯುವುದು. ಅಮ್ಮ ಅದನ್ನು ಮುದ್ದಾಡುವುದು – ಕರುಳು ಕಲಕುವು ದೃಶ್ಯ.

ಈ ಮಧ್ಯೆ ರಸ್ತೆಯಲ್ಲಿ ವಾಹನಗಳು ಇದ್ದಾಗ ಟ್ರಾಫಿಕ್ ಪೋಲಿಸರ ನಾಪತ್ತೆ ಸರ್ವೇ ಸಾಮಾನ್ಯ. ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ಬದಿಗೆ ಸರಿಸಲೂ ಯಾರೂ ಕಂಡು ಬರುತ್ತಿಲ್ಲ. ಹಾಗಾಗಿ ವಾಹನ ಚಾಲಕರು ಅಲ್ಲಲ್ಲೇ ವಾಹನಗಳನ್ನು ಬಿಟ್ಟು ನಡೆದು ಹೊರಟಿದ್ದರು. ಎಲ್ಲಿದೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್?

ಇನ್ನೂ ಸಾರ್ವಜನಿಕರೇ ಅಕ್ಕಪಕ್ಕದಲ್ಲಿದ್ದವರಿಗೆ ತಿನ್ನಲು ತಮ್ಮ ಬಳಿ ಇದ್ದದ್ದನ್ನು ಕೊಟ್ಟಿದ್ದು. ಕೈಲಾದವರು ಕೈಲಾಗದವರಿಗೆ ಸಹಾಯ ಹಸ್ತ ಚಾಚಿದರು.

ಟೆಲಿಫೋನ್, ಕೇಬಲ್, ಇಂಟರ್ ನೆಟ್ ಎಲ್ಲ ಸಂಪರ್ಕ ಸಾಧನಗಳೂ ಸ್ತಬ್ಧ. ಮೊಬೈಲ್ ಮಾತ್ರ ಕೆಲಸ ಮಾಡುತ್ತಿತ್ತು. ಏರ್ ಟೆಲ್ ನವರು ಲೋಕಲ್ ಕಾಲ್ ಗಳನ್ನು ಪುಕ್ಕಟೆ ಮಾಡಿದರು. ತರಕಾರಿ, ಹಾಲು, ವೃತ್ತಪತ್ರಿಕೆ ಮತ್ತಿತರೇ ದಿನಬಳಕೆಯ ಅನಿವಾರ್ಯ ವಸ್ತುಗಳು ಈ ದ್ವೀಪಕ್ಕೆ ಸರಬರಾಜಿಲ್ಲದೇ ಬಹಳ ತೊಂದರೆ, ಆಗಿತ್ತು.

ಹಾಗೇ ಇಲ್ಲಿ ಎಷ್ಟು ಜನ ಹೆಸರಿಗಾಗಿಯಲ್ಲದೇ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಅದೇ ಸರಕಾರದವರು ಏನೇನೂ ಮಾಡದೇ ಕೈಗೆ ಸಿಗದಂತೆ ಹೋಗಿದ್ದಾರೆ. ಆದರೆ ಇದೆಲ್ಲಾ ಪತ್ರಿಕೆಗಳಲ್ಲಿ ಸುದ್ದಿ ಅಲ್ಲವೇ ಅಲ್ಲ. ಮಂತ್ರಿಗಳು, ಅಧಿಕಾರಿಗಳು ಕೊಟ್ಟದ್ದೇ ಸುದ್ದಿ.

ಇಷ್ಟಾದರೂ ಈ ಮುಂಬಯಿನ ಜನ ಇದೊಂದು ಕೆಟ್ಟ ಕನಸು ಅಂದುಕೊಂಡು ಮತ್ತೆ ಮಾರನೆ ದಿನದಿಂದ ತಮ್ಮ ದೈನಂದಿನ ಕಾರ್ಯಗಳಿಗೆ ಹೋಗಲು ತಯಾರು. ಇಂತಹ ಅನುಭವ ಇನ್ಯಾವುದಾದ್ರೂ ಊರಲ್ಲಿ ಕಾಣಲು ಯಾ ಕೇಳಲು ಸಿಗುವುದೇ? ಅದಕ್ಕೇ ಅಲ್ವೇ ನಾನು ಹೇಳೋದು ಮುಂಬಯಿಯಲ್ಲಿ ಸಲ್ಲುವವರು ಎಲ್ಲಿಯೂ ಸಲ್ಲುವರು.

ಆಹಾರ ಮತ್ತು ನೀರಿನ ಪೊಟ್ಟಣಗಳನ್ನು ಹೆಲಿಕಾಪ್ಟರ್ ಮೂಲಕ ಕೆಳಕ್ಕೆ ಬೀಳಿಸಿದಾಗ ಕೆಲ ಜನಗಳು ಇದು ಸಹಾಯ ಅನ್ನುವುದೂ ಮರೆತು ಇನ್ನೂ ಹೆಲಿಕಾಪ್ಟರ್ ಅಲ್ಲಿರುವಾಗಲೇ ತಮ್ಮ ಜೀವದ ಕಡೆ ಲಕ್ಷ್ಯ ಕೊಡದೇ ಓಡಿ ಹೋಗಿ ಅವುಗಳನ್ನು ಹೆಕ್ಕಿ ಮಾರಾಟ ಮಾಡಲು ತೊಡಗಿದರು.

ನಿಸರ್ಗವೇ ದೇವರು. ಅದರ ಮುಂದೆ ಮೂರು ದಿನಗಳು ಹಾರಾಡಿ ಕುಣಿದಾಡಿ ಹೇಳ ಹೆಸರಿಲ್ಲದಂತೆ ಮಾಯವಾಗುವ ಮಾನವ ಎಂತಹ ಹುಲುಪ್ರಾಣಿ ಎನ್ನುವ ಸತ್ಯವನ್ನು ನಿಸರ್ಗದ ಒಂದು ಭಾಗವಾದ ವರುಣ ಅಂದ್ರೆ ಮಳೆ ಒಂದೇ ಏಟಿನಲ್ಲಿ ೧ ಕೋಟಿಗೂ ಮಿಗಿಲಾದ ಜನಗಳಿಗೆ ತಿಳಿಸಿದ್ದು. ಇನ್ನಾದರೂ ನಿಸರ್ಗಕ್ಕೆ ವಿರುದ್ಧವಾಗಿ ನಡೆಯಬಲ್ಲಲಾರೆವು ಎಂಬ ಸತ್ಯ ಅರಿತೆವೋ ಇಲ್ಲವೋ ಹೇಳಿ?

ವಿಭಾಗಗಳು
ಲೇಖನಗಳು

ಮ್ಯಾಥೆರಾನ್‍ನಲ್ಲೊಂದು ಮ್ಯಾರಥಾನ್ ಓಟ

ಬಹಳ ದಿನಗಳಿಂದ ಮುಂಬಯಿ ಯಾಂತ್ರಿಕ ಜೀವನ ಮರೆತು ಹೊರಗೆಲ್ಲೂ ಹೋಗಿಲ್ಲ, ಹೋಗಿ ಬರೋಣ ಎಂದು ಮಗಳ ದುಂಬಾಲಿಗೆ ನಾನು ಬಲಿ ಬೀಳಲೇ ಬೇಕಾಯ್ತು. ಬೆಳಗ್ಗೆ ಹೊರಟು ಸಂಜೆಯೊಳಗೆ ಮನೆಗೆ ವಾಪಸ್ಸಾಗುವಂತಹ, ಮನಸ್ಸು ನಿರ್ಮಲಗೊಳಿಸುವಂತಹ, ಮಕ್ಕಳಿಗೆ ಮುದಕೊಡುವಂತಹ ಸ್ಥಳ ಹತ್ತಿರದಲ್ಲಿ ಎಲ್ಲೂ ಇಲ್ಲವೆಂದೇ ಇಲ್ಲಿಯವರೆವಿಗೆ ತಿಳಿದಿದ್ದೆ. ಈ ವಿಷಯವನ್ನು ಗೆಳೆಯ ದೇಶಪಾಂಡೆಯ ಹತ್ತಿರ ಹೇಳಿಕೊಂಡಾಗ ಅವನು ಸೂಚಿಸಿದ ಸ್ಥಳ ಎಂದರೆ ಮ್ಯಾಥೆರಾನ್. ಮುಂಬಯಿಯಿಂದ ಸುಮಾರು ೧೦೦ ಕಿಲೋಮೀಟರುಗಳ ದೂರದಲ್ಲಿರುವ, ಕಾರು ಅಥವಾ ಲೋಕಲ್ ಟ್ರೈನ್‍ಗಳ ಮೂಲಕ ಸುಲಭವಾಗಿ ತಲುಪುವಂತಹ, ಹೆಚ್ಚಿನದಾಗಿ ಹಾಳಾಗಿರದ, ಹೆಚ್ಚಾಗಿ ಜನರು ಬಾರದೇ ಇರುವ ಸ್ಥಳವೆಂದರೆ ಇದೇ! ಮ್ಯಾಥೆರಾನ್ ಎಂಬುದು ಪಶ್ಚಿಮ ಘಟ್ಟದಲ್ಲಿ ೮೦೦ ಮೀಟರು ಎತ್ತರದಲ್ಲಿರುವ ಗುಡ್ಡ ಪ್ರದೇಶ. ಇನ್ನು ಮೇಲೆ ಇಲ್ಲಿಗೂ ಜನಗಳು ಲಗ್ಗೆ ಹಾಕಬಹುದು, ಇದೂ ಇತರೆಯ ಸ್ಥಳಗಳ ತರಹ ತನ್ನ ನೈಜತೆಯನ್ನು ಕಳೆದುಕೊಳ್ಳಬಹುದು, ಆ ದಿನಗಳೇನೂ ದೂರವಿಲ್ಲ ಎಂದೆನಿಸುತ್ತಿದೆ. ಲೋಕಲ್ ಟ್ರೈನಿನಲ್ಲಿ ಹೋದರೆ, ಸೆಂಟ್ರಲ್ ರೈಲ್ವೆಯಲ್ಲಿ ಬರುವ (ಪುಣೆ ಹಾದಿ) ನೇರಲ್ ಎಂಬ ಸ್ಟೇಷನ್ನಿನಲ್ಲಿ ಇಳಿಯಬೇಕು. ಮುಂಬಯಿಯ ಛತ್ರಪತಿ ಶಿವಾಜಿ ಟರ್ಮಿನಸ್‍ನಿಂದ ಇದು ೮೩ ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಂದ ನ್ಯಾರೋ ಗೇಜ್ ಟ್ರೈನಿನಲ್ಲಿ (ಪುಟಾಣಿ ರೈಲುಗಾಡಿ – ಟಾಯ್ ಟ್ರೈನ್) ೨೧ ಕಿಲೋಮೀಟರಿನಷ್ಟು ದೂರದ ಬೆಟ್ಟದ ಹಾದಿಯಲ್ಲಿ ಹೋದರೆ, ಮ್ಯಾಥೆರಾನ್ ತಲುಪಬಹುದು. ಆದರೆ ನೇರಲ್‍ನಿಂದ ಮ್ಯಾಥೆರಾನಿಗೆ ಟಾಯ್ ಟ್ರೈನ್ ಇರುವುದೇ ಬಹಳ ಕಡಿಮೆ – ಅದರ ಮುಖೇನ ಮ್ಯಾಥೆರಾನಿಗೆ ಹೋಗುವುದಾದರೆ, ಬೆಳಗ್ಗೆ ಹೊರಟು, ಅಲ್ಲೆಲ್ಲಾ ಸುತ್ತಾಡಿ, ಸಂಜೆಯೊಳಗೆ ವಾಪಸ್ಸಾಗುವುದು ದುಸ್ತರ. ಅಲ್ಲಿರುವ ಹಾಲಿಡೇ ಹೋಮ್ ಅಥವಾ ಹೊಟೆಲ್‍ನಲ್ಲಿ ಉಳಿಯುವಂತಿದ್ದರೆ ಸುತ್ತಾಡಿ ಬರಬಹುದು. ಇಲ್ಲದಿದ್ದರೆ, ಕಾರಿನಲ್ಲಿ ಹೋದರೆ ಎರಡು ಘಂಟೆಗಳಲ್ಲಿ ಮುಂಬಯಿಯಿಂದ ಮ್ಯಾಥೆರಾನ್ ತಲುಪಬಹುದು. ಮತ್ತೆ ಸಂಜೆ ಅಲ್ಲಿಂದ ಹೊರಟು ಮುಂಬಯಿಗೆ ವಾಪಸ್ಸಾಗಬಹುದು.

ಇದೊಂದು ಕಡಿದಾದ ಬೆಟ್ಟ ಪ್ರದೇಶ. ಚಾಲಕ ಕಾರನ್ನು ಮೇಲಕ್ಕೆ ಹತ್ತಿಸುತ್ತಿದ್ದಂತೆ ಮಧ್ಯೆ ಒಮ್ಮೆ ಕಾರು ನಿಂತು ಹೋಯಿತು. ಕೆಳಗೆ ನೋಡಿದ್ರೆ ಪ್ರಪಾತ. ಯಾವ ಸಮಯದಲ್ಲಾದರೂ ಪ್ರಪಾತದಲ್ಲಿ ಲೀನವಾಗಿ ಹೋಗಬಹುದು. ಕೆಳಕ್ಕೆ ಬಿದ್ದರೆ ಯಾರಿಗೂ ತಿಳಿಯುವುದೂ ಇಲ್ಲ. ನನ್ನ ಕಳವಳವನ್ನು ಚಾಲಕನಿಗೆ ತಿಳಿಸಿದಾಗ, ಅವನು ಸುಮ್ಮನೆ ನಕ್ಕುಬಿಟ್ಟ. ನಿಮಗಾದರೆ ಜೀವನದಲ್ಲಿ ಒಮ್ಮೆಯೋ ಎರಡು ಬಾರಿಯೋ ಇಂತಹ ಪರಿಸ್ಥಿತಿ. ಹೊಟ್ಟೆ ಪಾಡಿಗೆ ನಾವು ದಿನಂಪ್ರತಿ ಬರುತ್ತಿರಬೇಕಲ್ಲ, ನಮ್ಮ ಪಾಡೇನು ಸಾರ್? ಏನೂ ಆಗುವುದಿಲ್ಲ. ಎಲ್ಲಕ್ಕೂ ದೇವರಿದ್ದಾನೆ ಎಂದು ನನ್ನನ್ನು ಸಮಾಧಾನಿಸಿದ. ಆತನು ಮುಸಲ್ಮಾನ ಸಂಪ್ರದಾಯಸ್ಥನು. ಆದರೇನಂತೆ, ಅವನಲ್ಲಿ ಹರಿಯುವ ರಕ್ತ, ನನ್ನಲಿ ಹರಿಯುವ ರಕ್ತ ಎರಡೂ ಒಂದೇ ಅಲ್ವೇ? ಬಣ್ಣದಲ್ಲಿ ಏನಾದರೂ ವ್ಯತ್ಯಾಸವಿದೆಯೇ? ಅವನೂ ಮಾಡುವುದೆಲ್ಲವೂ ಹೊಟ್ಟೆಪಾಡಿಗಾಗಿ, ತನ್ನನ್ನು ನಂಬಿದವರನ್ನು ಬದುಕುಳಿಸುವುದಕ್ಕಾಗಿ. ಆತನಲಿರುವ ಆತ್ಮವೂ ಒಂದೇ ನನ್ನಲಿರುವ ಆತ್ಮವೂ ಒಂದೇ. ಆತನನ್ನು ನಂಬಿ, ನಮ್ಮ ಪ್ರಾಣವನ್ನು ಆತನಲ್ಲಿ ಒತ್ತೆಯಾಗಿಟ್ಟು ಮೇಲಕ್ಕೆ ಏರುತ್ತಿದ್ದೇವೆ. ನಂಬಿದವರನ್ನು ಕೈ ಬಿಡದೇ ರಕ್ಷಿಪನೇ ದೇವನು. ಬೆಳಗ್ಗೆ ೮ ಘಂಟೆ ಸುಮಾರಿಗೆ ಹೊರಟವರು, ೧೦ ಘಂಟೆಯ ಹೊತ್ತಿಗೆ ಗುಡ್ಡದ ಮೇಲೆ ತಲುಪಿದ್ದೆವು. ಕಾರು, ಟ್ಯಾಕ್ಸಿಗಳನ್ನು ನಿಲ್ಲಿಸಲೆಂದೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಮುಂದಕ್ಕೆ ಎಲ್ಲ ಕಡೆಗೂ ಕಾಲ್ನಡಿಗೆಯಲ್ಲಿ ಅಥವಾ ಬಾಡಿಗೆಗೆ ದೊರೆಯುವ ಕುದುರೆಗಳ ಮೇಲೆ ಸವಾರಿ ಮಾಡಿಕೊಂಡು ಹೋಗಬೇಕು. ಮುಂದಿರುವುದೆಲ್ಲವೂ ಕಾಡು, ಮಧ್ಯೆ ಮಧ್ಯೆ ಕಾಣಬರುವ ಹೊಟೆಲ್ಲುಗಳು, ಅಂಗಡಿಗಳು ಮತ್ತು ಗುಡ್ಡದ ಇಕ್ಕೆಲವನ್ನು ನೋಡಲೆಂದು ಇರುವ ಪಾಯಿಂಟುಗಳು.

ಅಲ್ಲಿ ನೋಡುವಂತಹ ಸ್ಥಳಗಳ ಹೆಸರುಗಳು ಇಂತಿವೆ:

ಸನ್‍ರೈಸ್ ಪಾಯಿಂಟ್
ಮೌಂಟ್ ಬ್ಯಾರಿ
ದಸ್ತೂರಿ ನಾಕಾ (ಟ್ಯಾಕ್ಸಿ ಸ್ಟ್ಯಾಂಡ್)
ಗರ್ಬೂಟ್ ಪಾಯಿಂಟ್
ಆರ್ಟಿಸ್ಟ್ ಪಾಯಿಂಟ್
ರೈಲ್ವೇ ಸ್ಟೇಷನ್ (ನ್ಯಾರೋ ಗೇಜ್)
ಖಂಡಾಲಾ ಪಾಯಿಂಟ್
ಅಲೆಕ್ಸಾಂಡರ್ ಪಾಯಿಂಟ್
ಚೌಕ್ ಪಾಯಿಂಟ್
ಒನ್ ಟ್ರೀ ಹಿಲ್
ಚಾರ್‍ಲೆಟ್ ಲೇಕ್
ಎಕೋ ಪಾಯಿಂಟ್
ಲೂಸಾ ಪಾಯಿಂಟ್
ಪೇಮಾಸ್ಟರ್ ಪಾರ್ಕ್
ಮಂಕಿ ಪಾಯಿಂಟ್
ಸನ್‍ಸೆಟ್ ಪಾಯಿಂಟ್
ಹಾರ್ಟ್ ಪಾಯಿಂಟ್
ಬಾಜಾರ್ – ಇವೆಲ್ಲವುಗಳನ್ನೂ ನೋಡಿದರೇ ಸವಿ. ಪದಗಳಲಿ ಸೆರೆಹಿಡಿಯಲು ಹೋದರೆ ಒಮ್ಮೊಮ್ಮೆ ಎಡವುವ ಸಂದರ್ಭವಿದೆ, ಅಲ್ಲದೇ ಆ ದೃಶ್ಯಗಳು ನೀಡುವ ಮುದ, ಕೌತುಕಗಳ ಗುಣ ಗೌಣವಾಗುವ ಸಾಧ್ಯತೆ ಇದೆ. ಆದರೂ ಒಂದೆರಡು ಮಾತುಗಳಲ್ಲಿ ಹೇಳಬೇಕೆಂದರೆ, ಬೈಗಿನ ದಿಗಂತದಲ್ಲಿ ತಂಪಾದ ಸೂರ್ಯೋದಯ ಅನುಭವಿಸಿದಂತೆಯೇ ಸಂಜೆಯ ಸೂರ್ಯಾಸ್ತವೂ ಅನುಭವ ಆಗುವುದು. ಕಲುಷಿತವಲ್ಲದ ಮನದ ವ್ಯಾಪಾರಿಗಳು ಮಾರುವ ಕಲುಷಿತವಲ್ಲದ ಸೊಗಸಾದ ತರಕಾರಿಗಳು ಮಾರುಕಟ್ಟೆಯಲ್ಲಿ ದೊರೆಯುವಂತೆ, ಸರೋವರದಲ್ಲಿ ತಿಳಿನೀರಿನ ಸೊಬಗನ್ನು ರುಚಿಸಬಹುದು. ಅಲ್ಲಿ ದೊರೆಯದ ಕೆಲವು ವಸ್ತುಗಳನ್ನು ಮುಂಬಯಿ ಮತ್ತು ಹತ್ತಿರದ ಊರುಗಳಿಂದ ತರಿಸಿಕೊಂಡು ಇನ್ನೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವರು. ಇಲ್ಲಿ ಕಡಿಮೆ ದರದಲ್ಲಿ ದೊರಕುವ ವಸ್ತುವೆಂದರೆ ಅಲ್ಲಿಯೇ ತಯಾರಿಸಿ ವಿದೇಶಗಳಿಗೆಲ್ಲಾ ರಫ್ತು ಮಾಡುವ ಕಡಲೆಕಾಯಿ ಮಿಠಾಯಿ ಅರ್ಥಾತ್ ಚಿಕ್ಕಿ ಮತ್ತು ತರಕಾರಿ. ಹಾಗೆಯೇ ಬ್ರಿಟಿಷರು ಎಷ್ಟರ ಮಟ್ಟಿಗೆ ನಮ್ಮ ನೆಲವನ್ನು ಸೂರೆಗೊಂಡರೆಂಬುದು, ಅಲ್ಲಿ ಅಬ್ಬೆಪಾರಿಯಾಗಿ ನಿಂತಿರುವ ಬೃಹತ್ ಕಟ್ಟಡಗಳೂ, ಮತ್ತೆ ಈಗ ಹೊಟೆಲ್ ಆಗಿ ಪರಿವರ್ತಿತ ಕಟ್ಟಡಗಳೂ ತಮ್ಮ ತಮ್ಮ ಕಥೆಗಳನ್ನು ಹೇಳುವುವು.

ಎಷ್ಟೇ ಆಗಲಿ ಹಳ್ಳಿಗಾಡಾದ್ದರಿಂದ ಅಲ್ಲಿ ಬಾಯಿಗೆ ಬಂದದ್ದೇ ಮಾತು (ಇದರ ಸೊಬಗನ್ನು ಚಿಕ್ಕಂದಿನಲ್ಲಿ ಅನುಭವಿಸಿ, ನಗರ ಜೀವನಕ್ಕೆ ಹೊಂದಿಕೊಂಡಂತಹ ನನಗೆ ಮತ್ತೆ ಮನವನ್ನು ಹಿಂದಕ್ಕೆ ತಳ್ಳಿಸಿತ್ತು) – ವರ್ತಕರು ಕೇಳಿದ್ದೇ ದರ – ಯಾಕಪ್ಪಾ ಹೀಗೆ ಎಂದು ಒಬ್ಬನಿಗೆ ಕೇಳಿದ್ದಕ್ಕೆ, ’ಏನ್ಮಾಡೋದು ಸಾರ್, ವರ್ಷದಲ್ಲಿ ಈಗೊಮ್ಮೆ ಒಂದು ತಿಂಗಳು ಮತ್ತು ಬೇಸಗೆಯಲ್ಲಿ ಒಂದೂವರೆ ತಿಂಗಳು ಮಾತ್ರ ಜನಗಳು ಇಲ್ಲಿಗೆ ಬರೋದು. ಅಷ್ಟರಲ್ಲಿ ನಾವು ವರ್ಷಕ್ಕೆ ನಮ್ಮ ಜೀವನಕ್ಕೇ ಆಗೋಷ್ಟು ಹಣ ಮಾಡಿಕೊಳ್ಳಬೇಕಲ್ವಾ? ಜೀವನಕ್ಕೆ ಇಲ್ಲಿ ತರಕಾರಿ, ಚಿಕ್ಕಿ ಬಿಟ್ಟರೆ ಮಿಕ್ಕ ಏನೂ ದೊರೆಯುವುದಿಲ್ಲ, ಎಲ್ಲವನ್ನೂ ಕೆಳಗಿನ ಊರಿನಿಂದ (ನೇರಲ ಅಥವಾ ಕರ್ಜತ್) ಯಾ ಮುಂಬಯಿಯಿಂದ ತರಿಸಬೇಕು. ಕೆಳಗಿನ ಊರು ಎಂದರೆ ೨೫ ಕಿಲೋಮೀಟರು ಹೋಗಬೇಕು.

ಕಾರನ್ನು ನಿಲ್ಲಿಸಿ ಮುಂದೆ ಒಳಹೋಗಲು ಟಿಕೆಟ್ ತೆಗೆದುಕೊಳ್ಳಬೇಕು. ೧೨ ವರ್ಷಗಳು ಮೇಲ್ಪಟ್ಟ ವಯಸ್ಸಿನವರಿಗೆ ರೂಪಾಯಿ ೨೫ ಮತ್ತು ಅದರ ಕೆಳ ವಯಸ್ಸಿನವರಿಗೆ ೧೦ ರೂಪಾಯಿ ದರವನ್ನು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯವರು ನಿಗದಿಪಡಿಸಿದ್ದಾರೆ. ಮೊದಲಿಗೇ ಮಹಾರಾಷ್ಟ್ರ ಪ್ರವಾಸೋದ್ಯಮದವರ ತಿಂಡಿ ತಿನಿಸುಗಳ ಮಾರಾಟದ ಹೊಟೆಲ್ ಇದೆ. ಮುಂಬಯಿಯಲ್ಲಿ ಸಿಗುವ ತಿನಿಸುಗಳೇ, ಅದೇ ದರದಲ್ಲಿಯೇ ಲಭ್ಯವಾಗುವವು. ಅಲ್ಲಿ ತಿಂಡಿಯನ್ನು ತಿಂದು ಮುಂದಕ್ಕೆ ಕಾಲ್ನಡಿಗೆಯಲ್ಲಿಯೇ ಹೊರಟೆವು. ಕಾಲ್ನಡಿಗೆಯಲ್ಲಿ ಹೋದರೆ ಎಲ್ಲ ಪ್ರದೇಶಗಳನ್ನೂ ಸಾವಕಾಶವಾಗಿ ನೋಡಬಹುದೆನ್ನುವುದೇ ನನ್ನ ಉದ್ದೇಶವಾಗಿತ್ತು. ಕಾಡಿನೊಳಗೆ ಕೆಮ್ಮಣ್ಣು ರಾಡಿಯಾಗಿರುವ ಕಾಲುದಾರಿ ಬಿಟ್ಟರೆ ಎಲ್ಲೆಲ್ಲೂ ಎತ್ತರೆತ್ತರದ ಮರಗಳು ಬೆಳೆದು ನಿಂತಿವೆ.

ತಂಪಾದ ವಾತಾವರಣ, ತಂಗಾಳಿ – ಉಸಿರೆಳೆದುಕೊಂಡಷ್ಟೂ ಮತ್ತೆ ಮತ್ತೆ ಉಸಿರೆಳೆದುಕೊಳ್ಳುವ ಹಂಬಲ – ಒಮ್ಮೆ ಉಸಿರೆಳೆದರೆ ಬಿಡುವ ಇಚ್ಛೆಯೇ ಇಲ್ಲ. ಅಷ್ಟೊಂದು ಆಹ್ಲಾದತೆ, ಸಿಹಿ ತುಂಬಿದೆ ಆ ಗಾಳಿಯಲ್ಲಿ. ದಿನಂಪ್ರತಿ ಕಲುಷಿತ ಗಾಳಿ ಕುಡಿದವರಿಗೆ ಸ್ವರ್ಗ ಸುಖವೆಂದರೇನೆಂಬುದರ ಪರಿಚಯವಾಗಿಸುವ ನೆಲೆ, ಮ್ಯಾಥೆರಾನ್!

ವಾಪಸ್ಸಾಗುವ ಸಮಯದಲ್ಲಿ ನನ್ನ ಮಗನಿಗೆ ಕುದುರೆಯೇರುವ ಬಯಕೆ ಆಯಿತು. ಮಾರುಕಟ್ಟೆಯಿಂದ ಕಾರು ನಿಲ್ಲಿಸಿರುವ ಜಾಗೆಗೆ ೨ ಕಿಲೋಮೀಟರಿನಷ್ಟು ದೂರವಿತ್ತು. ಅಲ್ಲಿಗೆ ಕರೆದೊಯ್ಯಲು ೫೦ ರೂಪಾಯಿಗಳ ದರವನ್ನು ನಿಗದಿಸಿದ್ದಾರೆ. ಜಾಸ್ತಿ ಆಯಿತೆಂದು ತಿರಸ್ಕರಿಸಿದರೆ, ಮಗನ ಆಸೆಯನ್ನು ಚಿವುಟಿದಂತಾಗುವುದು, ಹೋಗಲಿ ಎಂದು ಕೊಟ್ಟರೆ ಜೇಬಿನ ಭಾರ ಕಡಿಮೆ ಆಗುವುದೆಂಬ ಸಂದಿಗ್ಧದಲ್ಲಿದ್ದವನನ್ನು ಮಗನ ಮನವೇ ಗೆದ್ದಿತು. ಮಗನು ಪಟಕ್ಕನೆ ಕುದುರೆಯ ಮೇಲೆ ಹಾರಿದ. ಏರಿದ ಭಾರಕ್ಕೆ ಹೆದರಿದ ಕುದುರೆ ಮುಂದಿನ ಎರಡು ಕಾಲುಗಳನ್ನೆತ್ತಿ ತನ್ನ ನೋವನ್ನು ತನ್ನ ಒಡೆಯನಲ್ಲಿ ತೋಡಿಕೊಂಡಿತು. ಅದರ ಅಲುಗಾಟದಿಂದ ಹೆದರಿದ ನಮ್ಮ ಹುಡುಗ ದಬಕ್ಕನೆ ಕೆಳಗೆ ಬಿದ್ದು ಚಡ್ಡಿಯೆಲ್ಲವೂ ಕೆಮ್ಮಣ್ಣಿನ ಗುರುತನ್ನು ಮೆತ್ತಿಕೊಂಡಿತು. ಕುದುರೆಯ ಒಡೆಯ ಮಧ್ಯವಸ್ತಿಕೆಯಿಂದ ಪರಿಸ್ಥಿತಿಯು ಹತೋಟಿಗೆ ಬಂದು, ಹುಡುಗನ ಸವಾರಿ ಮುನ್ನಡೆಯಿತು. ಆದರೂ ಹೆದರಿದ ಹುಡುಗ, ತನ್ನನ್ನು ಹಿಡಿದುಕೊಂಡು ಹಿಂದೆ ಹಿಂದೆಯೇ ಬರಲು ಹೇಳಿದನು (ಕೇಳಿಕೊಳ್ಳಲಿಲ್ಲ). ಹೀಗೆ ಕುದುರೆಯ ಹಿಂದೆ ನನ್ನ ಓಟ ಮುಂದುವರೆಯಿತು. ಚೂಪಾಗಿ ಮೇಲೆದ್ದು ಕಾಣುವಂತಹ ಕಲ್ಲುಗಳೊಂದಿಗೆ ಕೆಂಪು ಮಣ್ಣುಗೂಡಿರುವ ರಸ್ತೆ. ಮರಳಿ ಬರುವ ವೇಳೆಗೆ ಅದರ ಮೇಲೆ ನಡೆದು ಪಾದಗಳೆಲ್ಲಾ ತೂತಾದುವೇನೋ ಎಂಬ ಅನಿಸಿಕೆ. ಎರಡು ದಿನಗಳಾದರೂ ಕಾಲು ನೋವು ಕಡಿಮೆಯಾದಂತೆ ತೋರುವುದೇ ಇಲ್ಲ. ಮತ್ತೆ ಮತ್ತೆ ಅದೇ ರಸ್ತೆಯಲ್ಲಿ ನಡೆದಂತೆ ಕನಸು ಕಂಡದ್ದು ನಿದ್ರೆಯಲ್ಲಿನ ಅನುಭವ. ವಾಪಸ್ಸಾಗುವ ವೇಳೆಯಲ್ಲಿ ಒಮ್ಮೆಯಂತೂ ಕಾಲಿನ ಮಾಂಸಖಂಡ ಹಿಡಿದು (ಜಡವಾಗಿ), ಕಾರಿನಲ್ಲಿ ಕುಳಿತುಕೊಳ್ಳಲಾಗದೇ, ಕಾರನ್ನು ನಿಲ್ಲಿಸಲು ಹೇಳಿ ಕೆಳಗಿಳಿದಿದ್ದೆ. ಕೆಳಗೆ ನಿಲ್ಲುವುದೂ ಅಸಾಧ್ಯವಾಗಿತ್ತು. ಹುಡುಗ ಕುದುರೆಯೇರುವವರೆವಿಗೆ ಸ್ವರ್ಗ ಅನುಭವಿಸಿದವರಿಗೆ, ನಂತರ ಮನೆಗೆ ಎಷ್ಟು ಬೇಗ ಸೇರುವೆವೋ ಎಂಬುವಂತಾಗಿತ್ತು.

ವಿಭಾಗಗಳು
ಲೇಖನಗಳು

ಹೂಡಿಕೆ – ಠೇವಣಿ

ಸಾಮಾನ್ಯವಾಗಿ ಎಲ್ಲರೂ ತಮ್ಮ ದೈನಂದಿನ ಜೀವನಕ್ಕಿಂತ ಹೆಚ್ಚು ಗಳಿಕೆಯಲ್ಲಿ ಹಾತೊರೆಯುತ್ತಾರೆ. ಬರುವ ಆದಾಯದಲ್ಲಿ ಖರ್ಚು ಕಳೆದು ಉಳಿದಿದ್ದನ್ನು ಠೇವಣಿ ಅಥವಾ ಇತರೆ ಹೂಡಿಕೆಯನ್ನು ಹೆಚ್ಚಿನ ಆದಾಯಕ್ಕಾಗಿ ಮಾಡುವರು. ಹೀಗೆ ಮಾಡುವವರು ಕೆಲವೊಮ್ಮೆ (ಅದೂ ಈಗೀಗ ಸಾಮಾನ್ಯವಾಗುತ್ತಿದೆ) ಹಣ ಕಳೆದುಕೊಳ್ಳುವರು. ಇದರ ಬಗ್ಗೆ ನನ್ನ ಅನಿಸಿಕೆಯನ್ನು ಬರಹ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿರುವೆ.

ಹೆಚ್ಚಿನ ಜನರು, ಎಲ್ಲಿ ಜಾಸ್ತಿ ಬಡ್ಡಿ ಬರುವುದೋ ಅದರಲ್ಲಿ ಠೇವಣಿ ಅಥವಾ ಹೂಡಿಕೆಯನ್ನು ಮಾಡುವುದು, ಸಾಮಾನ್ಯ. ಕೆಲವೊಮ್ಮೆ ಮೊದ ಮೊದಲಿಗೆ ಬಡ್ಡಿ ಸರಿಯಾಗಿ ಬಂದರೂ ಅಸಲನ್ನು ಕಳೆದುಕೊಳ್ಳುವ ನಿದರ್ಶನಗಳಿವೆ. ಅದು ಏಕೆಂದರೆ, ನಾವು ಎಲ್ಲಿ ಹಣವನ್ನು ಇಡುವೆವೋ, ಅಲ್ಲಿಯವರು ಹೆಚ್ಚಿನ ವರಮಾನಕ್ಕಾಗಿ ಇನ್ನೊಂದೆಡೆ ಸಾಲ ಕೊಡುವರು ಅಥವಾ ಹೂಡಿಕೆ ಮಾಡುವರು. ಹೀಗೆ ಮಾಡುವಾಗ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿರಬೇಕು. ಅವರೆಲ್ಲಿ ಹೂಡಿಕೆ ಮಾಡಿರುವರೋ, ಅದು ದೇಶದ ಹಿತಕ್ಕೆ ವಿರುದ್ಧವಾಗಿದೆಯೋ, ಕಾನೂನು ಬಾಹಿರವಾದದ್ದೋ, ಅದು ಮಾರುಕಟ್ಟೆಗೆ ವಿರುದ್ಧವಾಗಿದೆಯೋ, ಅದರ ಉತ್ಪನ್ನಗಳಿಗೆ ಬೇಡಿಕೆ ಇರುವುದೋ ಮತ್ತು ಹೆಚ್ಚುವುದೋ ಇಲ್ಲವೋ, ಆ ಸಂಸ್ಥೆಯ ವಹಿವಾಟು ಎಂತಹದ್ದು ಇತ್ಯಾದಿಗಳನ್ನು ತಿಳಿದುಕೊಂದರೆ, ನಮ್ಮ ಹಣ ಸುರಕ್ಷಿತವಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುವುದು. ನಾವು ಹಾಕಿರುವ ಹಣ ಬರಿಯ ಗಳಿಕೆಯನ್ನೇ ಅವಲಂಬಿಸಿರಬಾರದು, ಅದು ಸುರಕ್ಷಿತವೂ ಹಾಗೂ ನಮಗೆ ಬೇಕಿದ್ದ ಸಮಯಕ್ಕೆ ಸರಿಯಾಗಿ ಸಿಗುವಂತೆಯೂ ಇರಬೇಕು.

ಇನ್ನು ಬಡ್ಡಿಯ ದರದ ಬಗ್ಗೆ ಹೇಳುವುದಾದರೆ, ಸರಕಾರಿ ಮೂಲಗಳು ಅಥವಾ ಸಂಸ್ಥೆಗಳು (ಉದಾಹರಣೆಗೆ ಆರ್.ಬಿ.ಐ., ಎಸ್.ಬಿ.ಐ., ಇತರೆ) ಪ್ರಕಟಿಸುವ ಅಂಕಿ ಅಂಶಗಳ ಆಧಾರದ ಮೇಲೆ ಬಡ್ಡಿಯ ದರವನ್ನು ನಿಷ್ಕರ್ಷಣೆ ಆಗುವುದು. ಆ ಅಂಕಿ ಅಂಶಗಳು, ಕೃಷಿ ಉತ್ಪಾದನೆ, ಕೈಗಾರಿಕಾ ಕ್ಷೇತ್ರದ ಉತ್ಪಾದನೆ, ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಸರಕಾರದ ಜಿ.ಡಿ.ಪಿ. ಉತ್ಪಾದನೆ ಶೇಕಡ ೩ ರಿಂದ ೪ ಇದ್ದಾಗ ಬಡ್ಡಿಯ ದರವು ೨೦ ಯಾ ೨೪ ಇರಲಾಗುವುದಿಲ್ಲ. ಅದು ಕೂಡಾ ೪ಕ್ಕಿಂತ ಕಡಿಮೆಯೇ ಇರುತ್ತದೆ. ಉತ್ಪಾದನೆಯೇ ಇಲ್ಲದೇ ಹೇಗೆ ಹೆಚ್ಚಿನ ಬಡ್ಡಿಯನ್ನು ಕೊಡಲಾಗುವುದು.

ಕಷ್ಟಪಟ್ಟು ದುಡಿದ ಹಣ ಎಂದೂ ಪೋಲಾಗಬಾರದು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹೂಡಿಕೆ ಅಥವಾ ಠೇವಣಿ ಇಡುವುದು ಒಳಿತು.

ವಿಭಾಗಗಳು
ಕವನಗಳು

ಲೋಹ – ಮೋಹ

ಹಳದೀ ಲೋಹ
ಅದರ ಮೇಲೆ ಬೇಡ ಮೋಹ
ಎಷ್ಟು ಹೇಳಿದರೇನಂತೆ
ನನ್ನ ಮನ ಮಾತ ಕೇಳೀತೇ
ಮನದೊಂದು ಮಾತಾದರೇ
ಕರದೊಂದು ಕೃತಿ
ಕೂಡಿಸಿಡುವುದೇ ಕರ್ಮದ ಗತಿ
ಕಳೆದುಹೋಗುವುದೆಂಬ ಭೀತಿ
ಅದಕಾಗೇ ಪೆಠಾರಿಗಳ ಖರೀದಿ
ಮತ್ತದರಮೇಲೆ ಭಾರೀ ಬೀಗ
ಸೊಂಟದಲಿ ಅದರ ಕೀಲಿಕೈ
ಇನ್ಶೂರೆನ್ಸ್, ಲಾಕರ್‍ಗಳಿಗಾಗಿ ಪರದಾಟ

ಎಲ್ಲರಿಗೂ ಹೊಟ್ಟೆಪಾಡಿನದ್ದೇ ಚಿಂತೆ
ಇಂದಾದರೆ, ನಾಳೆಗೆ, ನಾಡದ್ದಕ್ಕೆ
ಮುಂದಿನ ಪೀಳಿಗೆಗೆ, ಅದರ ಮುಂದದ್ದಕ್ಕೆ
ಎಂಬುದರದ್ದೇ ಚಿಂತೆ

ಒಟ್ಟಿ ಒಟ್ಟಿ ಗುಡ್ಡೇ ಹಾಕುವುದು

ಎಲ್ಲ ಜೀವಿಗಳಿಗೂ ತೋರಿಸಿಹ
ಅನ್ನದ ಹಾದಿ
ಹೊಟ್ಟೆ ತುಂಬುವ ಪರಿ

ಕಳ್ಳನಾದರೇನು?
ನನ್ನಿಂದ ಭಿನ್ನನೇ?
ಅವನೇಕೆ ಮಾಡಿಯಾನು?

ದಾಸರ ದಾಸನಾಗಿ
ಇಂದು ನಾಳೆ ಎಂಬುದರ ಮರೆ
ಇದ್ದುದ ತಿಂದು
ಹೆಚ್ಚಾದುದ ಹಂಚು
ಅದ ನಿನ್ನದಲ್ಲವೆಂದು ತಿಳಿ
ಇಲ್ಲದುದಕೆ ಹಲುಬದಿರು
ಶ್ರೀಹರಿಯ ನೆನೆಯುತಿರು

ವಿಭಾಗಗಳು
ಕವನಗಳು

+1-1=0

ಇದೊಂದು ನಿಜವಾಗಿ ನಡೆದ ಘಟನೆ. ಜೀವನ ಅಂದ್ರೆ +೧ – ೧ = ೦ ಎಂಬುದನ್ನು ಈ ಘಟನೆ ಸಾಬೀತು ಪಡಿಸುತ್ತದೆ.

ಪೂರ್ಣವಾಗಿ ಓದಿದ ಮೇಲೆ ನೀವು ಈ ಸ್ಥಿತಿಯಲ್ಲಿದ್ದರೆ ( ಅಂತಹ ಪರಿಸ್ಥಿತಿ ಬರುವುದು ಬೇಡ ಎಂದು ನನ್ನ ಆಶಯ – ಆದರೆ ವಿಧಿಯ ಮುಂದೆ ನಾವೆಲ್ಲಿಯವರು ) ನಿಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿ.

೧೯೪೪ ರಲ್ಲಿ ಮದುವೆಯಾದ ವಿಶ್ವನಾಥರಾಯರ ಸಂಸಾರದಲಿ ೧೯೫೭ರವರೆವಿಗೆ ೫ ಗಂಡು ಮಕ್ಕಳ ಸರತಿ. ಅಂದು ಹೆಣ್ಣು ಮಗುವಿನ ಜನನದಿಂದ ಮನೆಯ ಬೆಳಕು ಬೆಳಗಿತ್ತು. ರಾಯರಿಗೆ ಮೊದಲಿನಿಂದಲೂ ಹೆಣ್ಣು ಮಕ್ಕಳೆಂದರೆ ಪಂಚ ಪ್ರಾಣ. ತನ್ನದೇ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ ಮೇಲೆ ಅವರನ್ನು ಹಿಡಿಯುವವಯಾರು? ಮಗು ಅತ್ತರೆ ಎಲ್ಲಿ ಉಸಿರು ಹಿಡಿಯಬಹುದೆಂದು ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡಂತೆ ಬಹಳ ಸೂಕ್ಷ್ಮದಿಂದ ಸಾಕುತ್ತಿದ್ದರು. ಮಗು ಶುಕ್ಲ ಪಕ್ಷದ ಚಂದ್ರಮನಂತೆ ಬಹಳ ಮುದ್ದಾಗಿ, ಚೆನ್ನಾಗಿ ಬೆಳೆಯುತ್ತಿತ್ತು.

ರಾಯರು ಸಂಜೆ ಕೆಲಸದಿಂದ ಬಂದೊಡನೆ ಮಗುವಿನೊಡನೆ ಆಡುವುದರಲ್ಲಿ ದಿನದ ಕಷ್ಟಗಳೆಲ್ಲವನ್ನೂ ಮರೆಯುತ್ತಿದ್ದರು. ಮಗಳು ಇಂದಿರೆ ಮನೆಯಲ್ಲಿರುವವರೆಲ್ಲರಿಗೂ ಚೈತನ್ಯದ ಚಿಲುಮೆಯಾಗಿದ್ದಳೆಂದರೆ ಅತಿಶಯೋಕ್ತಿಯಲ್ಲ. ತಾಯಿಯ ಕೈಗಂತೂ ಮಗು ಸಿಗುತ್ತಲೇ ಇರಲಿಲ್ಲ. ಅಣ್ಣಂದಿರು ಅವಳನ್ನು ಕೆಳಗೆ ಬಿಡದೇ ಒಬ್ಬರಲ್ಲದೇ ಒಬ್ಬರು ಸದಾ ಕಾಲವೂ ಅವಳನ್ನು ಎತ್ತಿಕೊಂಡೇ ಇರುತ್ತಿದ್ದರು. ಹೀಗೆ ಯಾರಾದರೂ ಎತ್ತಿಕೊಂಡಿರುವಾಗಲೇ ಮಗುವಿಗೆ ಅವರಮ್ಮ ಊಟ ಮಾಡಿಸುತ್ತಿದ್ದರು. ಸಂಜೆ ರಾಯರು ಮನೆಗೆ ಬಂದೊಡನೆ ಅವಳನ್ನು ಯಾರೂ ಮುಟ್ಟಗೊಡುತ್ತಿರಲಿಲ್ಲ. ಮಗುವಿಗೂ ಅಪ್ಪ ಎಂದರೆ ಬಲು ಪ್ರಾಣ. ಅವರ ಹೆಗಲ ಮೇಲೆಯೇ ನಿದ್ರೆ ಮಾಡಿಬಿಡುತ್ತಿದ್ದಳು. ನಿದ್ರೆಯಲ್ಲಿಯೂ ಅವಳಿಗೆ ಅಪ್ಪನ ವಾಸನೆ ಇರಬೇಕಿತ್ತೇನೋ ಅದಕ್ಕೇ ನಿದ್ರೆಯಲ್ಲಿರುವ ಮಗುವಿನ ಕೈನಲ್ಲಿ ಎಂದಿಗೂ ಅವರಪ್ಪನ ಒಂದು ಷರ್ಟಿನ ತುಂಡು ಇದ್ದೇ ಇರುತ್ತಿತ್ತು. ಅದಿಲ್ಲದಿದ್ದರೆ ಅರ್ಧ ನಿದ್ರೆಯಲ್ಲಿಯೇ ಮಗು ಎದ್ದು, ಗಲಾಟೆ ಮಾಡುತ್ತಿತ್ತು.

ಹೀಗೆಯೇ ಮಗು ಮೂರು ವರುಷ ಕಳೆಯುವವರೆವಿಗೆ ಏನೂ ತೊಂದರೆ ಇರಲಿಲ್ಲ. ಅಂದೊಂದು ದಿನ ( ೧೯೬೦ರ ಮೇ ೧ನೇ ತಾರೀಖು ) ಮಗುವಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತು. ಆಗ ರಾಯರ ಪತ್ನಿ ಗಂಗಮ್ಮ ತುಂಬಿದ ಬಸುರಿ. ಈ ಮಗುವಿನೆಡೆಗೆ ಸಾಕಷ್ಟು ಗಮನ ಕೊಡಲಾಗುತ್ತಿರಲಿಲ್ಲ. ಮನೆಯಲ್ಲಿರುವ ಗಂಡು ಮಕ್ಕಳಿಗೆ ಜ್ವರ ತಪ್ತ ಮಗುವಿಗೆ ಏನು ಮಾಡಬೇಕೆಂಬುದು ತಿಳಿಯದು. ರಾಯರು ಮನೆಗೆ ಬಂದ ಕೂಡಲೇ ಮಗುವಿಗೆ ಜ್ವರ ಬಂದಿರುವ ವಿಷಯ ತಿಳಿಸಿದರು. ಇವರಿದ್ದ ಹಳ್ಳಿ ಕೊಂಪೆಯಲ್ಲಿ ವೈದ್ಯರೇ ಇರಲಿಲ್ಲ. ಹತ್ತಿರದ ಜೋಗದ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿದ್ದ ಅಂತೋಣಿಯೇ ಈ ಊರಿನವರಿಗೆ ವೈದ್ಯನಂತೆ ತೋರುತ್ತಿದ್ದ. ರಾಯರು ಸಂಜೆ ಕೆಲಸದಿಂದ ಬಂದೊಡನೆ ಮಗುವಿಗೆ ಜ್ವರ ಬಂದಿರುವ ವಿಷಯ ತಿಳಿದು ನಿಂತಲ್ಲಿ ನಿಲಲಾರದೇ ಅಂತೋಣಿಯೆಡೆಗೆ ಓಡಿದರು. ಅವನ್ಯಾವುದೋ ಮಾತ್ರೆಯನ್ನು ಕೊಟ್ಟು ಜೇನುತುಪ್ಪದೊಡನೆ ಸೇರಿಸಿ ಮಗುವಿಗೆ ನೆಕ್ಕಿಸಿ ಎಂದು ಹೇಳಿದ. ಸರಿ ಹಾಗೇ ಮಾಡಿದರು. ಅಂತಹ ಸಮಯದಲ್ಲಿ ಯಾರು ಏನೇ ಸಲಹೆ ಕೊಟ್ಟರೂ ನಾವು ಸ್ವೀಕರಿಸುತ್ತೇವೆ. ನಮ್ಮ ಪರಿಸ್ಥಿತಿ ಹಾಗಿರತ್ತೆ. ಮಗುವಿನ ಜ್ವರ ಮಾತ್ರ ಕಡಿಮೆಯಾಗದೇ ಇನ್ನೂ ಹೆಚ್ಚುತ್ತಲೇ ಹೋಯಿತು. ರಾಯರು ಪಕ್ಕದಲ್ಲೇ ವಾಸವಿದ್ದ ಜೀಪಿನ ಪಿಡಬ್ಲ್ಯುಡಿ ಡ್ರೈವರ್ ರಾಮಣ್ಣನ ಮೊರೆ ಹೊಕ್ಕರು. ರಾಮಣ್ಣನ ಹೆಂಡತಿ ವಿಶಾಲಾಕ್ಷಮ್ಮ ಮಗುವಿಗೆ ವಿಷಮಸೀತ ಜ್ವರ ಬಂದಿರಬಹುದೆಂದೂ ತಕ್ಷಣ ಜೋಗದ ಆಸ್ಪತ್ರೆ ಕರೆದೊಯ್ಯಿರೆಂದೂ ತಿಳಿಸಿದರು. ರಾಮಣ್ಣನೊಂದಿಗೆ ಜೀಪಿನಲ್ಲಿ ರಾಯರು ಮಗುವನ್ನು ಕರೆದುಕೊಂಡು ಜೋಗಕ್ಕೆ ಹೊರಟರು. ಆಗ ಸಮಯ ರಾತ್ರಿಯ ೧೧ ಘಂಟೆ. ರಸ್ತೆಯೇ ಸರಿ ಇಲ್ಲದ ಆ ಊರಿನಿಂದ ಜೋಗ ಸುಮಾರು ೩ ತಾಸುಗಳ ಪ್ರಯಾಣ. ಸರಿರಾತ್ರಿಯ ೧ ಘಂಟೆಗೆ ಮಗು ’ಕಾಫಿ ಕೊಡಿಸಪ್ಪ’ ಎಂದು ಕೇಳಿತು. ಆ ಕಾಡಿನಲ್ಲಿ ಕಾಫಿ ಎಲ್ಲಿ ಸಿಗಬೇಕು. ರಾಯರು, ’ಆಗ್ಲಮ್ಮ, ಇನ್ನೇನು ಊರು ಬಂದೇ ಬಿಡ್ತು. ಕೊಡಿಸ್ತೀನಿ ಅಂದ್ರು’. ಅಷ್ಟೇ ಅದೇ ಕಡೆಯ ಮಾತಾಗಿತ್ತು. ಮಗು ತನ್ನ ಕತ್ತನ್ನು ಹೊರಳಿಸಿತು. ಮೈಯೆಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು. ಇದನ್ನು ಅಷ್ಟಾಗಿ ರಾಯರು ಗಮನಿಸಿಲಿಲ್ಲ. ಆದರೆ ಅಪ್ಪ ಮಗಳ ಸಂಭಾಷಣೆಯನ್ನು ಗಮನಿಸುತ್ತಿದ್ದ ರಾಮಣ್ಣನಿಗೆ ವಿಷಯ ತಕ್ಷಣ ತಿಳಿದುಹೋಯಿತು. ಜೀಪನ್ನು ವಾಪಸ್ಸು ಊರಿನೆಡೆಗೆ ಓಡಿಸಿದ್ದ. ವಿಷಯವನರಿತ ರಾಯರನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಮನೆಯವರಿಗೊಮ್ಮೆ ಶವವನ್ನು ತೋರಿಸಿ ನಂತರ ಅಂತ್ಯಕ್ರಿಯೆ ಮುಗಿಸಲು ನಿರ್ಧರಿಸಿ ಮನೆಗೆ ಹೊರಟರು.

ಇನ್ನೇನು ಮನೆಯ ಹೊಸ್ತಿಲು ದಾಟಬೇಕೆನ್ನುವಷ್ಟರಲ್ಲಿ, ಆಚೆ ಮನೆಯ ಮೃಣಾಲಿನಿಯವರು ಸಂತೋಷದಿಂದ ಮನೆಯ ಒಳಗಿನಿಂದ ಬರುತ್ತಿದ್ದವರು ರಾಯರನ್ನು ಕಂಡು ಒಳಗೆ ಗಂಡು ಮಗು ಹುಟ್ಟಿದೆ ಎಂದರು. ರಾಯರ ಬಾಯಿಯಿಂದ ಬಂದದ್ದು ಹ್ಹುಹ್! ಎನ್ನುವ ಉದ್ಗಾರ ಮಾತ್ರ. ಮನೆಯ ಲಕ್ಷ್ಮಿ ಆಚೆಗೆ ಹೋಗಿ ಇನ್ನೊಬ್ಬ ಕೃಷ್ಣ ಮನೆ ಒಳ ಸೇರಿದ್ದ.

ವಿಭಾಗಗಳು
ಕವನಗಳು

ಹುಡುಕಾಟ

ಸಾಧಿಸಲೇನು ಇಹುದು
ಇಂದು ಅಸಾಧ್ಯವಾದುದು ನಾಳೆ ಸಾಧ್ಯವು
ಮರುದಿನ ಸುಲಭಸಾಧ್ಯವು

ಹುಡುಕುವುದೆಲ್ಲ ಈ ಮುಂಚೆ ಇಲ್ಲಿಯೇ ಇಹುದಲ್ಲವೇ?
ಹೊಸದಾವುದದು ನಾವು ಹುಡುಕುವುದು

ಹುಡುಕುವವರೆಗೂ ಅದು ಹೊಸದು
ಮರುಕ್ಷಣ ಅರಿಯುವೆವು
ಇದು ಈ ಮುಂಚೆಯೇ ಇಲ್ಲಿ ಇತ್ತು ಅಂತ

ಹಾಗಿದ್ದಲ್ಲಿ ನಾವು ಹುಡುಕುವುದು
ಕತ್ತಲೆಯಲ್ಲಿ ತಡಕಾಡಿದಂತಲ್ಲವೇ?

ಇದಕೆ ಬೇಕೆ ಬುದ್ಧಿವಂತಿಕೆ
ಬೆಳಕು ಸಾಕಲ್ಲವೇ?

ತೆರೆಯಿರಿ ನಿಮ್ಮ ಮನದ ಕಣ್ಣುಗಳನು
ಎಲ್ಲ ಇಹುದು ಇಲ್ಲಿ